ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮರೆಯಲ್ಲಿದ್ದ ನಿಕ್ಷೇಪ ಕಣ್ಣಿಗೆಬಿತ್ತು!

ಮರೆಯಲ್ಲಿದ್ದ ನಿಕ್ಷೇಪ ಕಣ್ಣಿಗೆಬಿತ್ತು!

ಮರೆಯಲ್ಲಿದ್ದ ನಿಕ್ಷೇಪ ಕಣ್ಣಿಗೆಬಿತ್ತು!

ನಿಕ್ಷೇಪ ಸಿಗುವುದೆಂದು ನೀವು ಊಹಿಸಿರದಂಥ ಒಂದು ಸ್ಥಳದಲ್ಲಿ ನಿಮಗದು ಸಿಕ್ಕಿದೆಯೇ? 2005 ಮಾರ್ಚ್‌ 27ರಂದು ಎಸ್ಟೋನಿಯಾದಲ್ಲಿನ ಇವೋ ಲಾಡ್‌ ಎಂಬ ಒಬ್ಬ ಯೆಹೋವನ ಸಾಕ್ಷಿಗೆ ಹೀಗಾಯಿತು. ಅವನು ಆಲ್ಮಾ ವಾರ್ಡ್ಯಾ ಎಂಬ ಒಬ್ಬ ವೃದ್ಧ ಸಾಕ್ಷಿಗೆ ಅವರ ಹಳೆಯ ಷೆಡ್ಡನ್ನು ನೆಲಸಮ ಮಾಡಲು ನೆರವು ನೀಡುತ್ತಿದ್ದನು. ಅವರು ಹೊರಗಿನ ಗೋಡೆಯನ್ನು ಬೀಳಿಸುತ್ತಿದ್ದಂತೆಯೇ, ಆಧಾರಸ್ತಂಭವನ್ನು ಒಂದು ಕಡೆಯಿಂದ ಫಲಕದಿಂದ ಮುಚ್ಚಲಾಗಿರುವುದನ್ನು ಗಮನಿಸಿದರು. ಆ ಫಲಕವನ್ನು ತೆಗೆಯುತ್ತಲೇ, ಸುಮಾರು 4 ಇಂಚು ಅಗಲ, 50 ಇಂಚು ಉದ್ದ ಮತ್ತು 4 ಇಂಚು ಒಳಕ್ಕೆ ಆ ಸ್ತಂಭ ಕೊರೆಯಲಾಗಿರುವುದನ್ನು ಮತ್ತು ಅದಕ್ಕೆ ಸರಿಹೊಂದುವ ಮರದ ತುಂಡಿನಿಂದ ಮುಚ್ಚಲಾಗಿರುವುದನ್ನು ಪತ್ತೆಮಾಡಿದರು. (1) ಅದರೊಳಕ್ಕೆ ನಿಕ್ಷೇಪಗಳನ್ನು ಬಚ್ಚಿಡಲಾಗಿತ್ತು! ಯಾವ ನಿಕ್ಷೇಪಗಳು? ಅವುಗಳನ್ನು ಅಲ್ಲಿ ಬಚ್ಚಿಟ್ಟದ್ದು ಯಾರು?

ದಪ್ಪನೆಯ ಕಾಗದದಿಂದ ನೀಟಾಗಿ ಸುತ್ತಿಡಲಾಗಿದ್ದ ಅನೇಕ ಪೊಟ್ಟಣಗಳನ್ನು ಆ ಸ್ತಂಭದೊಳಗಿಂದ ತೆಗೆಯಲಾಯಿತು. (2) ಆ ಪೊಟ್ಟಣಗಳಲ್ಲಿ ಯೆಹೋವನ ಸಾಕ್ಷಿಗಳ ಪ್ರಕಾಶನಗಳಿದ್ದವು, ಅದರಲ್ಲೂ ಹೆಚ್ಚಾಗಿ ಕಾವಲಿನಬುರುಜುವಿನ ಅಧ್ಯಯನ ಲೇಖನಗಳಿದ್ದವು. ಕೆಲವೊಂದಂತೂ ಇಸವಿ 1947ರಷ್ಟು ಹಿಂದಿನ ಕಾಲದ್ದಾಗಿದ್ದವು. (3) ಅವುಗಳನ್ನು ನಾಜೂಕಾಗಿ ಎಸ್ಟೋನ್ಯನ್‌ ಭಾಷೆಯಲ್ಲಿ ಕೈಯಿಂದ ಬರೆಯಲಾಗಿತ್ತು. ಕೆಲವೊಂದು ಪೊಟ್ಟಣಗಳಿಂದ, ಅವುಗಳನ್ನು ಬಚ್ಚಿಟ್ಟವರ ಸುಳಿವು ಸಿಕ್ಕಿತು. ಅವು ಆಲ್ಮಾರ ಗಂಡನಾದ ವಿಲೆಮ್‌ ವಾರ್ಡ್ಯಾರ ವಿಚಾರಣೆಯ ಕುರಿತ ದಾಖಲೆಗಳಾಗಿದ್ದವು. ಅವರು ಎಷ್ಟು ವರ್ಷಗಳನ್ನು ಸೆರೆಮನೆಯಲ್ಲಿ ಕಳೆದಿದ್ದರು ಎಂಬ ಮಾಹಿತಿಯೂ ಅದರಲ್ಲಿತ್ತು. ಆದರೆ ಅವರನ್ನು ಸೆರೆಮನೆಗೆ ಹಾಕಲಾಗಿದ್ದಾದರೂ ಏತಕ್ಕೆ?

ವಿಲೆಮ್‌ ವಾರ್ಡ್ಯಾರವರು, ಎಸ್ಟೋನಿಯಾದಲ್ಲಿನ (ಈ ಹಿಂದೆ ಸೋವಿಯತ್‌ ಒಕ್ಕೂಟದ ಭಾಗವಾಗಿದ್ದ ದೇಶ) ಯೆಹೋವನ ಸಾಕ್ಷಿಗಳ ಟಾರ್ಟು ಸಭೆಯಲ್ಲಿ ಮತ್ತು ಕಾಲಾನಂತರ ಒಟೆಪಾ ಸಭೆಯಲ್ಲಿ ಒಬ್ಬ ಜವಾಬ್ದಾರಿಯುತ ಸೇವಕರಾಗಿದ್ದರು. ಅವರು ಬಹುಶಃ ಎರಡನೇ ಲೋಕಯುದ್ದಕ್ಕೆ ಮೊದಲೇ ಬೈಬಲ್‌ ಸತ್ಯವನ್ನು ಕಲಿತಿರಬೇಕು. ಕೆಲವು ವರ್ಷಗಳ ನಂತರ, 1948ರ ಡಿಸೆಂಬರ್‌ 24ರಂದು ಕಮ್ಯೂನಿಸ್ಟ್‌ ಸರ್ಕಾರ ಸಹೋದರ ವಾರ್ಡ್ಯಾರನ್ನು ಅವರ ಧಾರ್ಮಿಕ ಚಟುವಟಿಕೆಗಳಿಗಾಗಿ ಬಂಧಿಸಿತು. ಜೊತೆ ಸಾಕ್ಷಿಗಳ ಹೆಸರುಗಳನ್ನು ಹೇಳಲು ಬಲವಂತ ಮಾಡುತ್ತಾ ಬೇಹುಗಾರ ಪೊಲೀಸರು ಅವರನ್ನು ವಿಚಾರಣೆ ಮಾಡಿದರು ಹಾಗೂ ಅವರೊಟ್ಟಿಗೆ ಕೆಟ್ಟದಾಗಿ ನಡೆದುಕೊಂಡರು. ಕೋರ್ಟಿನಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳುವ ಅವಕಾಶ ಕೊಡದೇ ಅವರಿಗೆ ರಷ್ಯಾದ ಸೆರೆಶಿಬಿರಗಳಲ್ಲಿ ಸುಮಾರು ಹತ್ತು ವರ್ಷಗಳ ಸೆರೆವಾಸವನ್ನು ವಿಧಿಸಲಾಯಿತು.

1990 ಮಾರ್ಚ್‌ 6ರಂದು ಕೊನೆಯುಸಿರೆಳೆಯುವ ತನಕ ವಿಲೆಮ್‌ ವಾರ್ಡ್ಯಾರವರು ಯೆಹೋವನಿಗೆ ನಂಬಿಗಸ್ತರಾಗಿದ್ದರು. ಪ್ರಕಾಶನಗಳ ಈ ಸರಬರಾಜಿನ ಕುರಿತು ಅವರ ಹೆಂಡತಿಗೆ ಗೊತ್ತೇ ಇರಲಿಲ್ಲ. ಒಂದುವೇಳೆ ವಿಚಾರಣೆ ಮಾಡುವಲ್ಲಿ ಆಕೆಗೇನೂ ಹಾನಿಯಾಗಬಾರದು ಎಂಬ ಉದ್ದೇಶದಿಂದ ಸಹೋದರ ವಿಲೆಮ್‌ ಆಕೆಗೇನೂ ಹೇಳಿರಲಿಕ್ಕಿಲ್ಲ. ಆದರೆ ಅವರು ಪ್ರಕಾಶನಗಳನ್ನು ಏಕೆ ಬಚ್ಚಿಡಬೇಕಿತ್ತು? ಸೋವಿಯತ್‌ ಸ್ಟೇಟ್‌ ಸೆಕ್ಯೂರಿಟಿ ಕಮಿಟಿಯಾದ ಕೆಜಿಬಿಯ ಸದಸ್ಯರು ಕೆಲವೊಮ್ಮೆ ಧಾರ್ಮಿಕ ಸಾಹಿತ್ಯಗಳನ್ನು ಹುಡುಕಲು ಯೆಹೋವನ ಸಾಕ್ಷಿಗಳ ಮನೆಗಳಿಗೆ ಹಠಾತ್ತನೆ ನುಗ್ಗುತ್ತಿದ್ದರು. ಒಂದು ವೇಳೆ ಕೆಜಿಬಿಯ ಸದಸ್ಯರು ಎಲ್ಲ ಸಾಹಿತ್ಯಗಳನ್ನು ವಶಕ್ಕೆ ತೆಗೆದುಕೊಂಡು ಹೋದರೂ ಜೊತೆ ಸಹೋದರರಿಗಾಗಿ ಆಧ್ಯಾತ್ಮಿಕ ಆಹಾರದ ಸರಬರಾಜು ಲಭ್ಯವಿರುವಂತೆ ಸಹೋದರ ವಾರ್ಡ್ಯಾರವರು ಅವುಗಳನ್ನು ಬಚ್ಚಿಟ್ಟಿರಬಹುದು. ಸಾಹಿತ್ಯಗಳನ್ನು ಬಚ್ಚಿಟ್ಟಿದ್ದ ಇತರ ಕೆಲವು ಕುಳಿಗಳನ್ನು ಈ ಮುಂಚೆಯೇ 1990ರ ಬೇಸಿಗೆಕಾಲದಲ್ಲಿ ಪತ್ತೆಹಚ್ಚಲಾಗಿತ್ತು. ಅಂಥದ್ದರಲ್ಲಿ ಒಂದನ್ನು ದಕ್ಷಿಣ ಎಸ್ಟೋನಿಯಾದ ಟಾರ್ಟುವಿನಲ್ಲಿ ಕಂಡುಹಿಡಿಯಲಾಗಿತ್ತು. ಅದನ್ನು ಸಹ ವಿಲೆಮ್‌ ವಾರ್ಡ್ಯಾರೇ ಬಚ್ಚಿಟ್ಟಿದ್ದರು.

ಈ ಸಾಹಿತ್ಯಗಳನ್ನು ನಾವು ನಿಕ್ಷೇಪಗಳೆಂದು ಏಕೆ ಕರೆಯುತ್ತೇವೆ? ಏಕೆಂದರೆ, ಬಹಳ ಪರಿಶ್ರಮದಿಂದ ಕೈಯಲ್ಲಿ ಬರೆದು ಜಾಗರೂಕತೆಯಿಂದ ಬಚ್ಚಿಡಲ್ಪಟ್ಟಿದ್ದ ಈ ಸಾಹಿತ್ಯಗಳ ಪ್ರತಿಗಳು ಆ ಸಮಯದಲ್ಲಿ ಲಭ್ಯವಿದ್ದ ಆಧ್ಯಾತ್ಮಿಕ ಆಹಾರವನ್ನು ಸಾಕ್ಷಿಗಳು ಎಷ್ಟು ಗಣ್ಯಮಾಡುತ್ತಿದ್ದರು ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ. (ಮತ್ತಾ. 24:45) ನಿಮ್ಮ ಕ್ಷೇತ್ರದಲ್ಲಿ ಈಗ ಸಿಗುತ್ತಿರುವ ಆಧ್ಯಾತ್ಮಿಕ ಅಹಾರಕ್ಕೆ ನೀವು ಗಣ್ಯತೆ ತೋರಿಸುತ್ತೀರೋ? ಇದರಲ್ಲಿ, ಎಸ್ಟೋನ್ಯನ್‌ ಹಾಗೂ ಇತರ 170ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಪ್ರಕಟವಾಗುತ್ತಿರುವ ಕಾವಲಿನಬುರುಜು ಸಹ ಒಂದಾಗಿದೆ.