ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಯೆಹೋವನು ತನ್ನ ಮುಖವನ್ನು ಅವರ ಕಡೆಗೆ ಪ್ರಕಾಶಿಸುವಂತೆ ಮಾಡಿದ್ದಾನೆ’

‘ಯೆಹೋವನು ತನ್ನ ಮುಖವನ್ನು ಅವರ ಕಡೆಗೆ ಪ್ರಕಾಶಿಸುವಂತೆ ಮಾಡಿದ್ದಾನೆ’

‘ಯೆಹೋವನು ತನ್ನ ಮುಖವನ್ನು ಅವರ ಕಡೆಗೆ ಪ್ರಕಾಶಿಸುವಂತೆ ಮಾಡಿದ್ದಾನೆ’

ಮಾನವ ಮುಖದಲ್ಲಿ 30ಕ್ಕಿಂತಲೂ ಹೆಚ್ಚು ಸ್ನಾಯುಗಳಿವೆ. ನೀವು ಬರೀ ಒಂದು ಮುಗುಳ್ನಗೆ ಬೀರಲು ಇವುಗಳಲ್ಲಿ 14 ಸ್ನಾಯುಗಳು ಒಟ್ಟಿಗೆ ಕೆಲಸಮಾಡಬೇಕು! ಈ ಸ್ನಾಯುಗಳೇ ಇಲ್ಲದಿರುತ್ತಿದ್ದಲ್ಲಿ ನಿಮ್ಮ ಸಂಭಾಷಣೆಗಳು ಹೇಗಿರುತ್ತಿದ್ದವೆಂದು ಸ್ವಲ್ಪ ಊಹಿಸಿಕೊಳ್ಳಿ. ಅವುಗಳಲ್ಲಿ ಕಳೆಯಿರುತ್ತಿತ್ತೋ? ಖಂಡಿತ ಇಲ್ಲ. ಕಿವುಡರಿಗಾದರೋ, ಮುಖದಲ್ಲಿನ ಸ್ನಾಯುಗಳು ಸಂಭಾಷಣೆಗಳಿಗೆ ಕಳೆಕೊಡುವುದಕ್ಕಿಂತ ಹೆಚ್ಚನ್ನು ಮಾಡುತ್ತವೆ. ಹಾವಭಾವಗಳೊಂದಿಗೆ ಸೇರಿದಾಗ ಅವು ಯೋಚನೆಗಳನ್ನೂ ಅಭಿಪ್ರಾಯಗಳನ್ನೂ ರವಾನಿಸುವ ಪ್ರಮುಖ ಮಾಧ್ಯಮವಾಗುತ್ತವೆ. ಸನ್ನೆ ಭಾಷೆಯಲ್ಲಿ ಜಟಿಲವಾದ ವಿಚಾರಗಳನ್ನೂ ಸೂಕ್ಷ್ಮವಾದ ಅರ್ಥಗಳನ್ನೂ ವ್ಯಕ್ತಪಡಿಸಲಾಗುವ ರೀತಿಯನ್ನು ನೋಡಿ ಅನೇಕರು ಬೆಕ್ಕಸಬೆರಗಾಗುತ್ತಾರೆ.

ಇತ್ತೀಚಿನ ಸಮಯಗಳಲ್ಲಿ, ಜಗತ್ತಿನಾದ್ಯಂತ ಕಿವುಡರು ಯಾವುದೇ ಮಾನವ ಮುಖದಲ್ಲಿ ತೋರಿಬರುವುದಕ್ಕಿಂತಲೂ ಹೆಚ್ಚಿನ ಅಭಿವ್ಯಕ್ತಿ ಹಾಗೂ ಕಳೆಯನ್ನು ತೋರಿಸುವ ಮುಖವನ್ನು, ಅಂದರೆ ‘ಯೆಹೋವನ ಮುಖವನ್ನು’ ಸಾಂಕೇತಿಕಾರ್ಥದಲ್ಲಿ ನೋಡಲಾರಂಭಿಸಿದ್ದಾರೆ. (ಪ್ರಲಾ. 2:19) ಇದೇನೂ ಹಠಾತ್ತನೇ ಸಂಭವಿಸಿಲ್ಲ. ಬಹು ಹಿಂದಿನಿಂದಲೂ ಯೆಹೋವನು ಕಿವುಡರಿಗಾಗಿ ಅಪಾರ ಪ್ರೀತಿಯನ್ನು ತೋರಿಸುತ್ತಿದ್ದಾನೆ. ಪ್ರಾಚೀನ ಇಸ್ರಾಯೇಲ್‌ ಜನಾಂಗದಷ್ಟು ಹಿಂದಿನ ಕಾಲದಲ್ಲೂ ಇದನ್ನಾತನು ತೋರಿಸಿದ್ದನು. (ಯಾಜ. 19:14) ಆಧುನಿಕ ಸಮಯಗಳಲ್ಲೂ ಆತನು ಕಿವುಡರಿಗೆ ತೋರಿಸಿರುವ ಪ್ರೀತಿ ಅತಿ ಸ್ಪಷ್ಟವಾಗಿ ತೋರಿಬರುತ್ತಿದೆ. “ಎಲ್ಲ ರೀತಿಯ ಜನರು ರಕ್ಷಣೆಯನ್ನು ಹೊಂದಬೇಕು ಮತ್ತು ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು ಎಂಬುದು ಆತನ [ದೇವರ] ಚಿತ್ತವಾಗಿದೆ.” (1 ತಿಮೊ. 2:4) ದೇವರ ಕುರಿತು ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವ ಮೂಲಕ, ಕಿವುಡರಲ್ಲಿ ಅನೇಕರು ಆತನ ಮುಖವನ್ನು ಕಾರ್ಯತಃ ನೋಡಲಾರಂಭಿಸಿದ್ದಾರೆ. ಆದರೆ ಕಿವಿಕೇಳಿಸದ ಇವರು ಆ ಜ್ಞಾನವನ್ನು ಹೇಗೆ ಪಡೆದುಕೊಂಡಿದ್ದಾರೆ? ಈ ಪ್ರಶ್ನೆಯನ್ನು ಉತ್ತರಿಸುವ ಮುಂಚೆ, ಕಿವುಡರಿಗೆ ಸನ್ನೆ ಭಾಷೆ ಏಕೆ ಮಹತ್ತ್ವದ್ದೆಂಬುದನ್ನು ನೋಡೋಣ.

ಅವರು ಕಣ್ಣುಗಳಿಂದ ‘ಕೇಳುತ್ತಾರೆ’

ಕಿವುಡರ ಬಗ್ಗೆ ಮತ್ತು ಸನ್ನೆ ಭಾಷೆಯ ಬಗ್ಗೆ ಅನೇಕ ತಪ್ಪುಕಲ್ಪನೆಗಳಿವೆ. ಅವುಗಳಲ್ಲಿ ಕೆಲವೊಂದನ್ನು ಈಗ ಹೋಗಲಾಡಿಸೋಣ. ಕಿವುಡರು ವಾಹನಚಲಾಯಿಸಬಲ್ಲರು. ತುಟಿ ಓದಲು ಅವರಿಗೆ ತುಂಬ ಕಷ್ಟವಾಗುತ್ತದೆ. ಸನ್ನೆ ಭಾಷೆಗೂ ಬ್ರೆಯ್ಲ್‌ ಲಿಪಿಗೂ ಏನೇನೂ ಸಂಬಂಧವಿಲ್ಲ. ಅದು ಬರೀ ಮೂಕಾಭಿನಯವೂ ಅಲ್ಲ. ಜಗತ್ತಿನಾದ್ಯಂತ ಎಲ್ಲ ಕಿವುಡರಿಗೆ ಅರ್ಥವಾಗುವಂಥ ಒಂದು ಸಾರ್ವತ್ರಿಕ ಸನ್ನೆ ಭಾಷೆಯೆಂಬುದು ಇಲ್ಲ. ಅಷ್ಟುಮಾತ್ರವಲ್ಲದೆ, ಒಂದು ನಿರ್ದಿಷ್ಟ ಪ್ರದೇಶದ ಕಿವುಡರು ಅದೇ ದೇಶದ ಇನ್ನೊಂದು ಪ್ರದೇಶದಲ್ಲಿರುವ ಕಿವುಡರಿಗಿಂತ ಸ್ವಲ್ಪ ಭಿನ್ನ ಶೈಲಿಯಲ್ಲಿ ಸನ್ನೆಮಾಡುತ್ತಾರೆ.

ಕಿವುಡರು ಓದಬಲ್ಲರೋ? ಕಿವುಡರಲ್ಲಿ ಕೆಲವರು ಚೆನ್ನಾಗಿ ಓದುತ್ತಾರಾದರೂ, ಅಧಿಕಾಂಶ ಮಂದಿ ಓದಲು ತುಂಬ ಕಷ್ಟಪಡುತ್ತಾರೆ. ಏಕೆ? ಏಕೆಂದರೆ ಪುಟದಲ್ಲಿ ಏನು ಮುದ್ರಿಸಲ್ಪಡುತ್ತದೋ ಅದು ಜನರು ಮಾತಾಡುವ ಭಾಷೆಯಿಂದ ಬಂದದ್ದಾಗಿರುತ್ತದೆ. ಕೇಳುವ ಸಾಮರ್ಥ್ಯವುಳ್ಳ ಒಂದು ಮಗು ಹೇಗೆ ಭಾಷೆಯನ್ನು ಕಲಿಯುತ್ತದೆಂಬುದನ್ನು ಪರಿಗಣಿಸಿರಿ. ಮಗು ಹುಟ್ಟಿದ ಕ್ಷಣದಿಂದ, ಸುತ್ತಲಿನ ಜನರು ಆಡುವ ಸ್ಥಳಿಕ ಭಾಷೆ ಅದರ ಕಿವಿಗೆ ಬೀಳುತ್ತಿರುತ್ತದೆ. ಹೀಗೆ ಅದು ಸಹ ಸ್ವಲ್ಪ ಸಮಯದಲ್ಲೇ ಪದಗಳನ್ನು ಪೋಣಿಸಿ, ವಾಕ್ಯಗಳನ್ನು ರಚಿಸಲು ಶಕ್ತವಾಗುತ್ತದೆ. ಆಡಲಾಗಿರುವ ಭಾಷೆಯನ್ನು ಕೇವಲ ಕೇಳಿಸಿಕೊಳ್ಳುವುದರಿಂದ ಇದನ್ನು ಸ್ವಾಭಾವಿಕವಾಗಿ ಮಾಡಲು ಸಾಧ್ಯವಾಗುತ್ತದೆ. ಈ ಕಾರಣದಿಂದ, ಕೇಳುವ ಸಾಮರ್ಥ್ಯವುಳ್ಳ ಮಕ್ಕಳು ಓದಲಾರಂಭಿಸುವಾಗ, ಪುಸ್ತಕದಲ್ಲಿರುವ ಕಪ್ಪು ಅಕ್ಷರಗಳು ತಮಗೆ ಈಗಾಗಲೇ ತಿಳಿದಿರುವ ಧ್ವನಿಗಳಿಗೂ ಪದಗಳಿಗೂ ಸರಿಹೊಂದುತ್ತವೆ ಎಂಬದನ್ನು ಕಲಿಯುತ್ತಾರೆ.

ಇದನ್ನು ಊಹಿಸಿಕೊಳ್ಳಿ: ನೀವು ವಿದೇಶದಲ್ಲಿ, ಧ್ವನಿನಿರೋಧಕವಾಗಿರುವ ಗಾಜಿನ ಕೋಣೆಯಲ್ಲಿದ್ದೀರಿ. ಆ ದೇಶದ ಸ್ಥಳಿಕ ಭಾಷೆಯನ್ನು ನೀವೆಂದೂ ಕೇಳಿಸಿಕೊಂಡಿಲ್ಲ. ಪ್ರತಿ ದಿನ ಸ್ಥಳೀಯರು ಬಂದು ಗಾಜಿನಾಚೆ ನಿಂತು ನಿಮ್ಮೊಟ್ಟಿಗೆ ಮಾತಾಡಲು ಪ್ರಯತ್ನಿಸುತ್ತಿದ್ದಾರೆ. ಅವರೇನು ಮಾತಾಡಿದರೂ ನಿಮಗೆ ಕೇಳಿಸುತ್ತಿಲ್ಲ. ಅವರ ತುಟಿಗಳು ಚಲಿಸುತ್ತಿರುವುದನ್ನು ನೀವು ಬರೀ ನೋಡಬಹುದಷ್ಟೇ. ತಮ್ಮ ಮಾತು ನಿಮಗೆ ಅರ್ಥವಾಗುತ್ತಿಲ್ಲ ಎಂಬುದನ್ನು ಗ್ರಹಿಸಿ, ಅವರು ಅದೇ ಪದಗಳನ್ನು ಒಂದು ಕಾಗದದ ಮೇಲೆ ಬರೆದು, ಅದನ್ನು ಗಾಜಿನಾಚೆಯಿಂದ ನಿಮಗೆ ತೋರಿಸುತ್ತಾರೆ. ನಿಮಗದು ಅರ್ಥವಾಗಬಹುದೆಂಬುದು ಅವರ ಎಣಿಕೆ. ಆದರೆ ನಿಮಗೆಷ್ಟು ಚೆನ್ನಾಗಿ ಅರ್ಥವಾಗಬಹುದೆಂದು ಎಣಿಸುತ್ತೀರಿ? ಈ ಸನ್ನಿವೇಶದಲ್ಲಿ ನಿಮಗೆ ಸಂವಾದ ಮಾಡುವುದು ಬಹುಮಟ್ಟಿಗೆ ಅಸಾಧ್ಯವಾಗಿರಬಹುದು. ಏಕೆ? ಏಕೆಂದರೆ ಏನನ್ನು ಬರೆಯಲಾಗಿದೆಯೋ ಅದು, ನೀವು ಹಿಂದೆಂದೂ ಕೇಳಿಸಿಕೊಂಡಿರದಂಥ ಭಾಷೆಯ ಬರಹರೂಪವಾಗಿದೆ. ಹೆಚ್ಚಿನ ಕಿವುಡರ ಸನ್ನಿವೇಶವೂ ಇದೇ.

ಸನ್ನೆ ಭಾಷೆಯು ಕಿವುಡರಿಗಾಗಿ ಹೇಳಿಮಾಡಿಸಿದಂಥ ಸಂವಾದ-ವಾಹಕವಾಗಿದೆ. ಇದರಲ್ಲಿ, ಒಬ್ಬ ವ್ಯಕ್ತಿಯು ತನ್ನ ದೇಹದ ನಿರ್ದಿಷ್ಟ ಅಂಗಗಳನ್ನು ಬಳಸಿ ಸನ್ನೆಮಾಡುತ್ತಾ ವಿಚಾರಗಳನ್ನು ವ್ಯಕ್ತಪಡಿಸುತ್ತಾನೆ. ಅವನು ಆ ಅಂಗಗಳನ್ನು ಚಲಿಸುವ ರೀತಿ ಹಾಗೂ ಅವನ ಮುಖಭಾವಗಳು ಸನ್ನೆ ಭಾಷೆಯ ವ್ಯಾಕರಣಾ ನಿಯಮಗಳನ್ನು ಪಾಲಿಸುತ್ತವೆ. ಇದರಿಂದ ಉಂಟಾಗುವ ದೃಗ್ಗೋಚರ ಭಾಷೆಯು, ಕಿವುಡರ ಕಣ್ಣುಗಳಿಗೆ ಮಾಹಿತಿಯನ್ನು ದಾಟಿಸುತ್ತದೆ.

ವಾಸ್ತವವಾಗಿ ಸನ್ನೆ ಭಾಷೆಯಲ್ಲಿ ಕಿವುಡ ವ್ಯಕ್ತಿಯೊಬ್ಬನು ತನ್ನ ಕೈಗಳು, ದೇಹ ಮತ್ತು ಮುಖದಿಂದ ಮಾಡುವ ಪ್ರತಿಯೊಂದು ಚಲನೆಗೆ ಅರ್ಥವಿರುತ್ತದೆ. ಮುಖಭಾವಗಳನ್ನು ಇತರರ ಮುಂದೆ ಕೇವಲ ಪ್ರದರ್ಶನಮಾಡಲಿಕ್ಕಾಗಿ ತೋರಿಸಲಾಗುವುದಿಲ್ಲ. ಅವು ಸನ್ನೆ ಭಾಷೆಯ ವ್ಯಾಕರಣದ ಅವಿಭಾಜ್ಯ ಅಂಗವಾಗಿವೆ. ಉದಾಹರಣೆಗೆ, ಸನ್ನೆ ಮಾಡುತ್ತಾ ಒಂದು ಪ್ರಶ್ನೆ ಕೇಳುವಾಗ ಹುಬ್ಬುಗಳನ್ನೇರಿಸಿದರೆ ಅದು, ಒಂದೇ ಆ ಪ್ರಶ್ನೆಗೆ ಉತ್ತರವನ್ನು ನಿರೀಕ್ಷಿಸಲಾಗುವುದಿಲ್ಲವೆಂದು, ಇಲ್ಲವೇ ಹೌದು ಅಥವಾ ಇಲ್ಲ ಎಂಬ ಉತ್ತರ ಕೊಡಬೇಕೆಂದು ಸೂಚಿಸುತ್ತದೆ. ಹುಬ್ಬುಗಳನ್ನು ಕೆಳಗಿಳಿಸುವುದು, ಯಾರು, ಏನು, ಎಲ್ಲಿ, ಯಾವಾಗ, ಏಕೆ, ಇಲ್ಲವೇ ಹೇಗೆ ಎಂಬ ಪ್ರಶ್ನೆಗಳನ್ನು ಸೂಚಿಸಬಹುದು. ಬಾಯಿಯ ಮೂಲಕ ಮಾಡಲಾಗುವ ನಿರ್ದಿಷ್ಟ ಸನ್ನೆಗಳು ಒಂದು ವಸ್ತುವಿನ ಗಾತ್ರ ಇಲ್ಲವೇ ಒಂದು ಕ್ರಿಯೆಯ ತೀವ್ರತೆಯನ್ನು ಸೂಚಿಸಬಹುದು. ಒಬ್ಬ ಕಿವುಡನು ತನ್ನ ತಲೆಯಾಡಿಸುವ, ಹೆಗಲನ್ನು ಎತ್ತುವ, ಕೆನ್ನೆಗಳನ್ನಾಡಿಸುವ ಮತ್ತು ಕಣ್ಣು ಮಿಟುಕಿಸುವ ವಿಧ, ಅವನು ವ್ಯಕ್ತಪಡಿಸುತ್ತಿರುವ ವಿಚಾರದ ನವಿರಾದ ಅರ್ಥಗಳನ್ನು ತಿಳಿಸುತ್ತದೆ.

ಈ ಎಲ್ಲ ದೈಹಿಕ ಚಲನೆಗಳು ನೋಡುವವರ ಕಣ್ಣಿಗೆ ಭಾಷೆಯ ರಸದೌತಣದಂತಿವೆ. ವೈವಿಧ್ಯತೆಯಿಂದ ಕೂಡಿದ ಈ ಸಂವಹನ ವಿಧಾನದ ಮೂಲಕ, ಸನ್ನೆ ಭಾಷೆ ತಿಳಿದಿರುವ ಕಿವುಡರು ಯಾವುದೇ ವಿಚಾರವನ್ನು, ಅಂದರೆ ಕಾವ್ಯಾತ್ಮಕ, ತಾಂತ್ರಿಕ, ಪ್ರಣಯಾತ್ಮಕ, ಹಾಸ್ಯಮಯ, ಗೋಚರ ಇಲ್ಲವೇ ಅಗೋಚರ ವಿಚಾರವನ್ನು ವ್ಯಕ್ತಪಡಿಸಲು ಶಕ್ತರಾಗಿರುತ್ತಾರೆ.

ಸನ್ನೆ ಭಾಷೆಯ ಪ್ರಕಾಶನಗಳ ಪರಿಣಾಮ

ಯೆಹೋವನ ಕುರಿತ ಜ್ಞಾನವನ್ನು ಸನ್ನೆ ಭಾಷೆಯಲ್ಲಿ ದೃಶ್ಯ ವಿಧಾನದ ಮೂಲಕ ವ್ಯಕ್ತಪಡಿಸಲಾಗುವಾಗ ಕಿವುಡ ವ್ಯಕ್ತಿಯು ಆ ಸಂದೇಶವನ್ನು ಕಾರ್ಯತಃ ಕೇಳಲು ಮತ್ತು ಆ ಸಂದೇಶದ ಮೂಲನಲ್ಲಿ ‘ನಂಬಿಕೆ’ ಇಡಲು ಶಕ್ತನಾಗುತ್ತಾನೆ. ಹೀಗಿರುವುದರಿಂದ ಯೆಹೋವನ ಸಾಕ್ಷಿಗಳು ಜಗತ್ತಿನಾದ್ಯಂತ ಕಿವುಡ ಜನರಿಗೆ ಸಾರಲು ಮತ್ತು ಅವರಿಗೆ ಪ್ರಯೋಜನವಾಗುವ ರೀತಿಯಲ್ಲಿ ಮಾಹಿತಿಯನ್ನು ಸಾದರಪಡಿಸಲು ಶ್ರದ್ಧಾಪೂರ್ವಕ ಪ್ರಯತ್ನಮಾಡಿದ್ದಾರೆ. (ರೋಮ. 10:14) ಸದ್ಯಕ್ಕೆ ಲೋಕದಾದ್ಯಂತ ಸನ್ನೆ ಭಾಷೆಯ 58 ಭಾಷಾಂತರ ತಂಡಗಳಿವೆ. ಈಗ 40 ಸನ್ನೆ ಭಾಷೆಗಳ ಪ್ರಕಾಶನಗಳು ಡಿ.ವಿ.ಡಿ.ಯಲ್ಲಿ ಲಭ್ಯವಿವೆ. ಈ ಎಲ್ಲ ಕೆಲಸವು ಸಾರ್ಥಕವಾಗಿದೆಯೋ?

ಜೆರೆಮಿ ಎಂಬವನ ತಂದೆತಾಯಿ ಇಬ್ಬರೂ ಕಿವುಡರು. ಅವನನ್ನುವುದು: “ನನ್ನ ತಂದೆ ಕಾವಲಿನಬುರುಜುವಿನ ಒಂದು ಲೇಖನದ ಕೆಲವೇ ಪ್ಯಾರಗಳನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ಬೆಡ್‌ರೂಮ್‌ನಲ್ಲಿ ಕುಳಿತು ಹಲವಾರು ತಾಸುಗಳ ತನಕ ಅಧ್ಯಯನದಲ್ಲಿ ಮಗ್ನರಾಗಿದ್ದದ್ದು ನನಗಿನ್ನೂ ನೆನಪಿದೆ. ತಟ್ಟನೆ ಅವರು ಕೋಣೆಯಿಂದ ಓಡಿಬಂದು, ತುಂಬ ಸಂಭ್ರಮದಿಂದ ‘ನನಗರ್ಥವಾಯಿತು, ನನಗರ್ಥವಾಯಿತು’ ಎಂದು ಸನ್ನೆಮಾಡಿ ಹೇಳಿದರು. ಆಮೇಲೆ ಅವರು ಆ ಮಾಹಿತಿಯ ಅರ್ಥವೇನೆಂದು ನನಗೆ ಸನ್ನೆಮಾಡುತ್ತಲೇ ವಿವರಿಸಲಾರಂಭಿಸಿದರು. ನನಗಾಗ ಬರೀ 12 ವರ್ಷ. ನಾನು ಆ ಪ್ಯಾರಗ್ರಾಫ್‌ಗಳ ಮೇಲೆ ಕೂಡಲೇ ಕಣ್ಣೋಡಿಸಿ, ಅವರಿಗೆ ಸನ್ನೆಮಾಡುತ್ತಾ ಹೀಗಂದೆ: ‘ಅಪ್ಪ, ಅದು ಹಾಗಲ್ಲ ಅಂತ ನನಗನಿಸುತ್ತದೆ. ಅದರರ್ಥ . . .’ ಆದರೆ, ಅಷ್ಟಕ್ಕೆ ನಿಲ್ಲಿಸುವಂತೆ ನನಗೆ ಸನ್ನೆಮಾಡಿ, ಆ ಲಿಖಿತ ಮಾಹಿತಿಯ ಅರ್ಥವನ್ನು ಸ್ವತಃ ಗ್ರಹಿಸಲು ಅವರು ಪುನಃ ತಮ್ಮ ಕೋಣೆ ಸೇರಿಕೊಂಡರು. ಆಗ ಅವರ ಮುಖದಲ್ಲಿ ತೋರಿಬಂದ ನಿರಾಶೆಯನ್ನು ಮತ್ತು ಅವರು ವಾಪಸ್‌ ಬೆಡ್‌ರೂಮ್‌ಗೆ ಹೋದಾಗ ಅವರ ಬಗ್ಗೆ ನನ್ನಲ್ಲಿ ಮೂಡಿದ ಮೆಚ್ಚುಗೆಯ ಭಾವನೆಯನ್ನು ಎಂದಿಗೂ ಮರೆಯಲಾರೆ. ಆದರೆ ಈಗ ಸನ್ನೆ ಭಾಷೆಯ ಸಾಹಿತ್ಯಗಳ ಡಿ.ವಿ.ಡಿ. ಲಭ್ಯವಿರುವುದರಿಂದ ಅವರು ಮಾಹಿತಿಯನ್ನು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳುತ್ತಾರೆ. ಅವರು ಯೆಹೋವನ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವಾಗ ಅವರ ಮುಖ ಸಂತೋಷದಿಂದ ಬೆಳಗುವುದನ್ನು ಪ್ರತಿಬಾರಿ ನೋಡಲು ಕಾಯುತ್ತಾ ಇರುತ್ತೇನೆ.”

ಚಿಲಿ ದೇಶದಲ್ಲಿರುವ ಹೆಸೆನ್ಯಾ ಎಂಬ ಹೆಸರಿನ ಕಿವುಡ ಯುವತಿಯೊಟ್ಟಿಗೆ ಮಾತಾಡಿದ ಕ್ರೈಸ್ತ ದಂಪತಿಯ ಅನುಭವವನ್ನೂ ಪರಿಗಣಿಸಿರಿ. ಆಕೆಗೆ ಚಿಲಿ ದೇಶದ ಸನ್ನೆ ಭಾಷೆಯ ಡಿ.ವಿ.ಡಿ.ಯಲ್ಲಿ ಬೈಬಲ್‌ ಕಥೆಗಳ ನನ್ನ ಪುಸ್ತಕವನ್ನು ತೋರಿಸಲು ಆ ದಂಪತಿ ಆಕೆಯ ತಾಯಿಯ ಅನುಮತಿ ಪಡೆದರು. ಬಳಿಕ ಅವರು ವರದಿಸಿದ್ದು: “ಹೆಸೆನ್ಯಾ ಆ ಕಥೆಯನ್ನು ನೋಡಿದಾಗ, ಮೊದಲು ನಗಲಾರಂಭಿಸಿ ಅನಂತರ ಅತ್ತುಬಿಟ್ಟಳು. ಕಾರಣವೇನೆಂದು ತಾಯಿ ಕೇಳಿದಾಗ, ತಾನು ನೋಡುತ್ತಿರುವ ವಿಷಯಗಳು ತನಗೆ ತುಂಬ ಇಷ್ಟವಾಗುತ್ತಿವೆಯೆಂದು ಆಕೆ ಉತ್ತರಿಸಿದಳು. ಡಿ.ವಿ.ಡಿ.ಯಲ್ಲಿರುವುದೆಲ್ಲವೂ ಆಕೆಗೆ ಅರ್ಥವಾಗುತ್ತಿದೆಯೆಂದು ತಾಯಿಗೆ ಆಗ ಗೊತ್ತಾಯಿತು.”

ವೆನಿಸ್ವೇಲದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದ ಒಬ್ಬ ಕಿವುಡ ಮಹಿಳೆಗೆ ಈಗಾಗಲೇ ಒಂದು ಹೆಣ್ಣುಮಗುವಿದ್ದು, ಆಕೆ ಪುನಃ ಗರ್ಭಿಣಿಯಾಗಿದ್ದಳು. ಹಣದ ಮುಗ್ಗಟ್ಟಿನಿಂದಾಗಿ ತಮ್ಮಿಂದ ಇನ್ನೊಂದು ಮಗುವನ್ನು ಸಾಕಲಾಗುವುದಿಲ್ಲ ಎಂದು ಆಕೆಗೂ ಆಕೆಯ ಗಂಡನಿಗೂ ಅನಿಸಿತು. ಆದ್ದರಿಂದ ಗರ್ಭಪಾತ ಮಾಡಿಸುವುದರ ಬಗ್ಗೆ ಯೋಚಿಸುತ್ತಿದ್ದರು. ಇದ್ಯಾವುದರ ಬಗ್ಗೆಯೂ ತಿಳಿಯದ ಯೆಹೋವನ ಸಾಕ್ಷಿಗಳು ಅವರ ಮನೆಗೆ ಬಂದು, ವೆನಿಸ್ವೇಲದ ಸನ್ನೆ ಭಾಷೆಯಲ್ಲಿ ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ವಿಡಿಯೋದಲ್ಲಿನ 12ನೇ ಪಾಠವನ್ನು ತೋರಿಸಿದರು. ಆ ಪಾಠದಲ್ಲಿ ಗರ್ಭಪಾತ ಹಾಗೂ ಕೊಲೆಯ ಬಗ್ಗೆ ದೇವರ ನೋಟವೇನೆಂದು ವಿವರಿಸಲಾಗಿದೆ. ಸಾಕ್ಷಿಗಳು ಆ ಪಾಠವನ್ನು ತನ್ನೊಟ್ಟಿಗೆ ಅಧ್ಯಯನಮಾಡಿದ್ದಕ್ಕಾಗಿ ಸಮಯಾನಂತರ ಆ ಸ್ತ್ರೀ ಅವರಿಗೆ ಕೃತಜ್ಞತೆ ಸೂಚಿಸಿದಳು. ಆ ಅಧ್ಯಯನದಿಂದಾಗಿಯೇ ಗರ್ಭಪಾತ ಮಾಡಿಸಿಕೊಳ್ಳುವ ತಮ್ಮ ನಿರ್ಣಯವನ್ನು ಕೈಬಿಟ್ಟದ್ದಾಗಿ ಆಕೆ ಹೇಳಿದಳು. ಹೀಗೆ, ಡಿ.ವಿ.ಡಿ.ಯಲ್ಲಿದ್ದ ಸನ್ನೆ ಭಾಷೆ ಪ್ರಕಾಶನದ ಸಹಾಯದಿಂದ ಒಂದು ಜೀವ ಉಳಿಯಿತು!

ಕಿವುಡ ಸಾಕ್ಷಿಯಾಗಿರುವ ಲಾರೆನ್‌ ಎಂಬಾಕೆ ವಿವರಿಸುವುದು: “ಬೈಬಲನ್ನು ಕಲಿಯುವುದು ಒಂದು ದೊಡ್ಡ ಚಿತ್ರಬಂಧವನ್ನು ಜೋಡಿಸುವ ಹಾಗಿತ್ತು. ಇಡೀ ಚಿತ್ರದ ಬಗ್ಗೆ ನನಗಿದ್ದ ತಿಳುವಳಿಕೆಯಲ್ಲಿ ಅಲ್ಲಲ್ಲಿ ತೆರಪುಗಳಿದ್ದವು. ಆದರೆ ಬೈಬಲ್‌ ಸತ್ಯಗಳು ಸನ್ನೆ ಭಾಷೆಯಲ್ಲಿ ಹೆಚ್ಚೆಚ್ಚು ಲಭ್ಯವಾಗತೊಡಗಿದಾಗ ಆ ತೆರಪುಗಳು ಮುಚ್ಚಿಹೋದವು.” ಜಾರ್ಜ್‌ ಎಂಬವರು ಕಿವುಡರಾಗಿದ್ದು, 38 ವರ್ಷಗಳಿಂದ ಸಾಕ್ಷಿಯಾಗಿದ್ದಾರೆ. ಅವರನ್ನುವುದು: “ಒಂದು ವಿಷಯವನ್ನು ಸ್ವತಃ ಅರ್ಥಮಾಡಿಕೊಳ್ಳಲು ನಾವು ಸಮರ್ಥರಾದರೆ, ಅದರಿಂದ ಸ್ವಲ್ಪ ಮಟ್ಟಿಗಿನ ಸ್ವಗೌರವ ಹಾಗೂ ಆತ್ಮವಿಶ್ವಾಸ ಸಿಗುತ್ತದೆಂಬ ವಿಷಯದಲ್ಲಿ ಸಂಶಯವೇ ಇಲ್ಲ. ನನ್ನ ಸ್ವಂತ ಆಧ್ಯಾತ್ಮಿಕ ಬೆಳವಣಿಗೆಯ ಮೇಲೆ ಸನ್ನೆ ಭಾಷೆಯ ಡಿ.ವಿ.ಡಿ.ಗಳು ಅತಿ ಹೆಚ್ಚು ಪ್ರಭಾವಬೀರಿವೆ ಎಂದು ನನಗನಿಸುತ್ತದೆ.”

“ನನ್ನ ಭಾಷೆಯಲ್ಲೂ ಕೂಟಗಳು!”

ಯೆಹೋವನ ಸಾಕ್ಷಿಗಳು ಸನ್ನೆ ಭಾಷೆಯ ಪ್ರಕಾಶನಗಳನ್ನು ಮಾತ್ರವಲ್ಲದೆ ಸಭೆಗಳನ್ನೂ ಏರ್ಪಡಿಸಿದ್ದಾರೆ. ಇಂಥ ಸಭೆಗಳಲ್ಲಿ ಎಲ್ಲ ಕೂಟಗಳು ಸನ್ನೆ ಭಾಷೆಯಲ್ಲೇ ನಡೆಯುತ್ತವೆ. ಸದ್ಯಕ್ಕೆ ಜಗತ್ತಿನಾದ್ಯಂತ ಸನ್ನೆ ಭಾಷೆಯ 1,100ಕ್ಕಿಂತಲೂ ಹೆಚ್ಚು ಸಭೆಗಳಿವೆ. ಕಿವುಡರಾಗಿರುವ ಜನರನ್ನು ಅವರ ಭಾಷೆಯಲ್ಲೇ ಸಂಬೋಧಿಸಲಾಗುತ್ತಿದೆ ಮತ್ತು ಬೈಬಲ್‌ ಸತ್ಯಗಳನ್ನು ಅವರು ಯೋಚಿಸುವಂಥ ರೀತಿಯಲ್ಲೇ, ಅಂದರೆ ಅವರ ಭಾಷೆಯಲ್ಲೇ ಪ್ರಸ್ತುತಪಡಿಸಲಾಗುತ್ತಿದೆ. ಅವರ ಸಂಸ್ಕೃತಿ ಹಾಗೂ ಜೀವನಾನುಭವಕ್ಕೆ ಗೌರವ ತೋರಿಸುವಂಥ ವಿಧದಲ್ಲೂ ಅವುಗಳನ್ನು ಪ್ರಸ್ತುತಪಡಿಸಲಾಗುತ್ತಿದೆ.

ಸನ್ನೆ ಭಾಷೆಯ ಸಭೆಗಳಿಂದ ಏನಾದರೂ ಪ್ರಯೋಜನವಾಗಿದೆಯೇ? 1955ರಲ್ಲಿ ದೀಕ್ಷಾಸ್ನಾನಹೊಂದಿ ಯೆಹೋವನ ಸಾಕ್ಷಿಯಾದ ಸಿರಿಲ್‌ ಎಂಬವರ ಅನುಭವ ತೆಗೆದುಕೊಳ್ಳಿ. ಅವರು ಅನೇಕ ವರ್ಷಗಳಿಂದ ತಮ್ಮಿಂದಾದಷ್ಟು ಮಟ್ಟಿಗೆ ಮುದ್ರಿತ ಪ್ರಕಾಶನಗಳನ್ನು ಅಧ್ಯಯನಮಾಡಿ, ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗುತ್ತಿದ್ದರು. ಕೂಟದ ಭಾಗಗಳನ್ನು ಸನ್ನೆಮಾಡಿ ತೋರಿಸುವವರು ಕೆಲವೊಮ್ಮೆ ಇರುತ್ತಿದ್ದರು, ಕೆಲವೊಮ್ಮೆ ಇರುತ್ತಿರಲಿಲ್ಲ. ಅವರು ಇಲ್ಲದಿದ್ದ ಸಮಯಗಳಲ್ಲಿ, ವೇದಿಕೆಯ ಮೇಲೆ ಹೇಳಲಾಗುತ್ತಿದ್ದ ವಿಷಯಗಳನ್ನು ಬರೆದು ತೋರಿಸುವ ಮೂಲಕ ಪ್ರೀತಿಯಿಂದ ಸಹಾಯಮಾಡುತ್ತಿದ್ದ ಸಾಕ್ಷಿಗಳ ಮೇಲೆ ಸಿರಿಲ್‌ ಅವಲಂಬಿಸುತ್ತಿದ್ದರು. ಆದರೆ 1989ರಲ್ಲಿ, ಅಂದರೆ ಅವರು ಸಾಕ್ಷಿಯಾಗಿ 34 ವರ್ಷಗಳು ಕಳೆದ ನಂತರ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಸನ್ನೆ ಭಾಷೆಯ ಪ್ರಪ್ರಥಮ ಸಭೆಯನ್ನು ನ್ಯೂಯಾರ್ಕ್‌ ನಗರದಲ್ಲಿ ಸ್ಥಾಪಿಸಲಾಯಿತು. ಆ ಸಭೆಯ ಸದಸ್ಯರಾದಾಗ ಸಿರಿಲ್‌ರವರಿಗೆ ಹೇಗನಿಸಿತು? “ನನ್ನ ಭಾಷೆಯಲ್ಲೂ ಕೂಟಗಳು ಆರಂಭವಾದದ್ದರಿಂದ, ಒಂದು ಕಾಡಿನಿಂದ ಹೊರಬಂದ, ಕತ್ತಲೆಯ ಸುರಂಗದಿಂದ ಬೆಳಕಿಗೆ ಬಂದ ಅನಿಸಿಕೆ ನನಗಾಯಿತು.”

ಯೆಹೋವನ ಸಾಕ್ಷಿಗಳ ಸನ್ನೆ ಭಾಷೆಯ ಸಭೆಗಳಲ್ಲಿ ಕಿವುಡರು ದೇವರ ಕುರಿತು ಕಲಿಯಲು ಮತ್ತು ಆತನನ್ನು ಆರಾಧಿಸಲು ಕ್ರಮವಾಗಿ ಸೇರಿಬರಬಹುದು. ಈ ಸ್ಥಳಗಳಲ್ಲಿ ದೇವಜನರು ಪರಸ್ಪರ ಸಂಬಂಧಗಳನ್ನು ಬೆಸೆಯಬಲ್ಲರು ಮತ್ತು ಉತ್ತೇಜನ ಹೊಂದಬಲ್ಲರು. ಭಾಷಾಸಂಬಂಧವಾಗಿ ಮತ್ತು ಸಾಮಾಜಿಕವಾಗಿ ಕಿವುಡರನ್ನು ಬೇರ್ಪಡಿಸಲಾಗುತ್ತಿರುವ ಈ ಲೋಕದಲ್ಲಿ ಇಂಥ ಸಭೆಗಳು ಸಂವಾದ ಹಾಗೂ ಸಹವಾಸದ ನೆಲೆಗಳಾಗಿವೆ. ಈ ನೆಲೆಗಳಲ್ಲಿ ಕಿವುಡರು ಕಲಿತು, ಅಭಿವೃದ್ಧಿಹೊಂದಿ ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡಬಲ್ಲರು. ಕಿವುಡ ಸಾಕ್ಷಿಗಳಲ್ಲಿ ಅನೇಕರು ಪೂರ್ಣ ಸಮಯದ ಶುಶ್ರೂಷಕರಾಗಿ ಸೇವೆಸಲ್ಲಿಸಲು ಶಕ್ತರಾಗಿದ್ದಾರೆ. ಇನ್ನೂ ಕೆಲವರು ಯೆಹೋವನ ಕುರಿತು ಕಲಿಯುವಂತೆ ಕಿವುಡರಿಗೆ ಸಹಾಯಮಾಡಲು ಬೇರೆ ದೇಶಗಳಿಗೆ ಸ್ಥಳಾಂತರಿಸಿದ್ದಾರೆ. ಕಿವುಡರಾಗಿರುವ ಕ್ರೈಸ್ತ ಪುರುಷರು ಪರಿಣಾಮಕಾರಿ ಬೋಧಕರಾಗಲು, ಸಂಘಟಕರಾಗಲು ಮತ್ತು ಕುರುಬರಾಗಲು ಕಲಿಯುತ್ತಾರೆ. ಆಗ ಅವರಲ್ಲಿ ಅನೇಕರು ಸಭೆಯಲ್ಲಿನ ಜವಾಬ್ದಾರಿಗಳನ್ನು ನಿರ್ವಹಿಸಲು ಅರ್ಹರಾಗುತ್ತಾರೆ.

ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಸನ್ನೆ ಭಾಷೆಯ 100ಕ್ಕಿಂತಲೂ ಹೆಚ್ಚು ಸಭೆಗಳು ಮತ್ತು ಸುಮಾರು 80 ಗುಂಪುಗಳಿವೆ. ಬ್ರಸಿಲ್‌ನಲ್ಲಿ ಸನ್ನೆ ಭಾಷೆಯ ಸರಿಸುಮಾರು 300 ಸಭೆಗಳು ಹಾಗೂ 400ಕ್ಕಿಂತಲೂ ಹೆಚ್ಚು ಗುಂಪುಗಳಿವೆ. ಮೆಕ್ಸಿಕೊದಲ್ಲಿ ಸನ್ನೆ ಭಾಷೆಯ ಸುಮಾರು 300 ಸಭೆಗಳಿವೆ. ರಷ್ಯಾದಲ್ಲಿ ಸನ್ನೆ ಭಾಷೆಯ 30ಕ್ಕಿಂತಲೂ ಹೆಚ್ಚು ಸಭೆಗಳು ಮತ್ತು 113 ಗುಂಪುಗಳಿವೆ. ಇವು, ಲೋಕದಾದ್ಯಂತ ನಡೆಯುತ್ತಿರುವ ಬೆಳವಣಿಗೆಗೆ ಕೆಲವೇ ಉದಾಹರಣೆಗಳು.

ಯೆಹೋವನ ಸಾಕ್ಷಿಗಳು ಸನ್ನೆ ಭಾಷೆಯಲ್ಲಿ ಸಮ್ಮೇಳನ ಹಾಗೂ ಅಧಿವೇಶನಗಳನ್ನೂ ನಡೆಸುತ್ತಾರೆ. ಕಳೆದ ವರ್ಷ, ವಿಭಿನ್ನ ಸನ್ನೆ ಭಾಷೆಗಳಲ್ಲಿ 120ಕ್ಕಿಂತಲೂ ಹೆಚ್ಚು ಅಧಿವೇಶನಗಳನ್ನು ಲೋಕದಾದ್ಯಂತ ನಡೆಸಲಾಯಿತು. ಈ ಸಂದರ್ಭಗಳು ಕಿವುಡ ಸಾಕ್ಷಿಗಳಿಗೆ, ಅವರು ಒಂದು ಲೋಕವ್ಯಾಪಕ ಕ್ರೈಸ್ತ ಸಹೋದರತ್ವದ ಭಾಗವಾಗಿದ್ದು, ಸಮಯೋಚಿತ ಆಧ್ಯಾತ್ಮಿಕ ಆಹಾರದಿಂದ ಪ್ರಯೋಜನಪಡೆಯುತ್ತಿದ್ದಾರೆಂದು ಗ್ರಹಿಸಲು ಸಹಾಯಮಾಡುತ್ತವೆ.

ಲಿಯೊನಾರ್ಡ್‌ ಎಂಬವರು ಕಿವುಡರಾಗಿದ್ದು, 25ಕ್ಕಿಂತಲೂ ಹೆಚ್ಚು ವರ್ಷಗಳಿಂದ ಯೆಹೋವನ ಸಾಕ್ಷಿಯಾಗಿದ್ದಾರೆ. ಅವರನ್ನುವುದು: “ಯೆಹೋವನೇ ಸತ್ಯ ದೇವರೆಂದು ನನಗೆ ಮೊದಲಿನಿಂದಲೂ ತಿಳಿದಿತ್ತು. ಹಾಗಿದ್ದರೂ, ಆತನೇಕೆ ಕಷ್ಟಸಂಕಟಕ್ಕೆ ಅನುಮತಿಕೊಟ್ಟಿದ್ದಾನೆ ಎಂಬುದು ನನಗೆಂದೂ ಸ್ಪಷ್ಟವಾಗಿ ಅರ್ಥವಾಗಿರಲಿಲ್ಲ. ಇದರಿಂದಾಗಿ ನಾನು ಕೆಲವೊಮ್ಮೆ ಆತನ ಮೇಲೆ ಕೋಪಿಸಿಕೊಳ್ಳುತ್ತಿದ್ದೆ. ಆದರೆ ಸನ್ನೆ ಭಾಷೆಯ ಜಿಲ್ಲಾ ಅಧಿವೇಶನದ ಒಂದು ನಿರ್ದಿಷ್ಟ ಭಾಷಣದಿಂದ, ಒಳಗೂಡಿದ್ದ ವಿವಾದಾಂಶಗಳು ನನಗೆ ಕೊನೆಗೂ ಅರ್ಥವಾದವು. ಭಾಷಣ ಮುಗಿದ ನಂತರ ನನ್ನ ಹೆಂಡತಿ ನನ್ನನ್ನು ತನ್ನ ಮೊಣಕೈಯಿಂದ ಮೃದುವಾಗಿ ತಿವಿದು, ‘ಈಗ ನಿಮಗೆ ತೃಪ್ತಿ ಆಯಿತಾ?’ ಎಂದು ಕೇಳಿದಾಗ ನಾನು ಹೌದು ಎಂದು ಯಥಾರ್ಥವಾಗಿ ಹೇಳಸಾಧ್ಯವಿತ್ತು. ಈ 25 ವರ್ಷಗಳ ಕಾಲ ನಾನು ಯೆಹೋವನನ್ನು ಬಿಟ್ಟುಬಿಡದೇ ಇದ್ದದ್ದಕ್ಕೆ ಕೃತಜ್ಞನು. ನಾನು ಆತನನ್ನು ಯಾವಾಗಲೂ ಪ್ರೀತಿಸುತ್ತಿದ್ದೆನಾದರೂ ಆತನನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಅಶಕ್ತನಾಗಿದ್ದೆ. ಆದರೆ ಇವತ್ತು ಆತನನ್ನು ಅರ್ಥಮಾಡಿಕೊಂಡಿದ್ದೇನೆ.”

ಹೃದಯದಾಳದಿಂದ ಕೃತಜ್ಞರು

ಕಿವುಡರು ಯೆಹೋವನ ಕುರಿತು ಕಲಿತಾಗ ಆತನ ಮುಖದ ಮೇಲೆ ಯಾವ “ಅಭಿವ್ಯಕ್ತಿಗಳನ್ನು” ಕಾಣುತ್ತಾರೆ? ಪ್ರೀತಿ, ಕರುಣೆ, ನ್ಯಾಯ, ನಿಷ್ಠೆ, ಪ್ರೀತಿಪೂರ್ವಕ ದಯೆ ಹಾಗೂ ಇನ್ನಿತರ ಗುಣಗಳನ್ನೇ.

ಕಿವುಡ ಸಾಕ್ಷಿಗಳ ಅಂತಾರಾಷ್ಟ್ರೀಯ ಸಮುದಾಯವು ಯೆಹೋವನ ಮುಖವನ್ನು ನೋಡುತ್ತಿದೆ ಮತ್ತು ಮುಂದೆ ಇನ್ನೂ ಹೆಚ್ಚು ಸ್ಪಷ್ಟವಾಗಿ ನೋಡುವುದು. ಕಿವುಡರಿಗಾಗಿರುವ ಹೃದಯದಾಳದ ಪ್ರೀತಿಯಿಂದ ‘ಯೆಹೋವನು ತನ್ನ ಮುಖವನ್ನು ಅವರ ಕಡೆಗೆ ಪ್ರಕಾಶಿಸುವಂತೆ ಮಾಡಿದ್ದಾನೆ.’ (ಅರ. 6:25, NIBV) ಯೆಹೋವನನ್ನು ತಿಳಿದುಕೊಂಡಿರುವುದಕ್ಕಾಗಿ ಇಂಥ ಕಿವುಡರು ಎಷ್ಟು ಆಭಾರಿಗಳು!

[ಪುಟ 24, 25ರಲ್ಲಿರುವ ಚಿತ್ರಗಳು]

ಜಗತ್ತಿನಾದ್ಯಂತ ಸನ್ನೆ ಭಾಷೆಯ 1,100ಕ್ಕಿಂತಲೂ ಹೆಚ್ಚು ಸಭೆಗಳಿವೆ

[ಪುಟ 26ರಲ್ಲಿರುವ ಚಿತ್ರಗಳು]

ಕಿವುಡರ ಕಡೆಗೆ ಯೆಹೋವನ ಮುಖವು ಉಜ್ವಲವಾಗಿ ಪ್ರಕಾಶಿಸಿದೆ