ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರಿಸ್ತನ ಪ್ರೀತಿ ನಾವೂ ಇತರರನ್ನು ಪ್ರೀತಿಸುವಂತೆ ಪ್ರೇರಿಸುತ್ತದೆ

ಕ್ರಿಸ್ತನ ಪ್ರೀತಿ ನಾವೂ ಇತರರನ್ನು ಪ್ರೀತಿಸುವಂತೆ ಪ್ರೇರಿಸುತ್ತದೆ

ಕ್ರಿಸ್ತನ ಪ್ರೀತಿ ನಾವೂ ಇತರರನ್ನು ಪ್ರೀತಿಸುವಂತೆ ಪ್ರೇರಿಸುತ್ತದೆ

“ಲೋಕದಲ್ಲಿದ್ದ ತನ್ನ ಸ್ವಂತದವರನ್ನು ಪ್ರೀತಿಸಿದ ಅವನು [ಯೇಸು] ಕೊನೆಯ ವರೆಗೂ ಅವರನ್ನು ಪ್ರೀತಿಸಿದನು.”—ಯೋಹಾ. 13:1.

1, 2. (ಎ) ಯೇಸುವಿನ ಪ್ರೀತಿ ಯಾವ ರೀತಿಯಲ್ಲಿ ಎದ್ದುಕಾಣುವಂಥದ್ದಾಗಿದೆ? (ಬಿ) ಈ ಲೇಖನದಲ್ಲಿ ಪ್ರೀತಿಯ ಯಾವ ಮುಖಗಳನ್ನು ನಾವು ಚರ್ಚಿಸಲಿದ್ದೇವೆ?

ಯೇಸು ಪ್ರೀತಿಯ ಸಂಬಂಧದಲ್ಲಿ ಪರಿಪೂರ್ಣ ಮಾದರಿಯನ್ನಿಟ್ಟನು. ಅವನ ಮಾತು, ನಡತೆ, ಬೋಧನಾರೀತಿ ಮತ್ತು ಯಜ್ಞಾರ್ಪಿತ ಮರಣ ಹೀಗೆ ಎಲ್ಲವೂ ಅವನ ಪ್ರೀತಿಯನ್ನು ತೋರಿಸಿತು. ತನ್ನ ಭೂಜೀವಿತದ ಕೊನೆ ತನಕವೂ ಯೇಸು ತಾನು ಭೇಟಿಯಾದ ಜನರಿಗೆ, ಅದರಲ್ಲೂ ವಿಶೇಷವಾಗಿ ತನ್ನ ಶಿಷ್ಯರ ಕಡೆಗೆ ಪ್ರೀತಿ ತೋರಿಸಿದನು.

2 ಪ್ರೀತಿಯ ವಿಷಯದಲ್ಲಿ ಯೇಸುವಿನ ಅಸಾಧಾರಣ ಮಾದರಿ ಅವನ ಶಿಷ್ಯರು ಸಹ ಪಾಲಿಸಬೇಕಾದ ಒಂದು ಉತ್ಕೃಷ್ಟ ಮಟ್ಟವನ್ನಿಡುತ್ತದೆ. ಆ ಮಾದರಿಯು ನಾವು ಅಂಥದ್ದೇ ಪ್ರೀತಿಯನ್ನು, ನಮ್ಮ ಆಧ್ಯಾತ್ಮಿಕ ಸಹೋದರ ಸಹೋದರಿಯರ ಕಡೆಗೆ ಮತ್ತು ಇತರರೆಲ್ಲರ ಕಡೆಗೂ ತೋರಿಸುವಂತೆ ಪ್ರಚೋದಿಸುತ್ತದೆ. ಈ ಲೇಖನದಲ್ಲಿ, ತಪ್ಪುಗಳನ್ನು ಮಾಡಿದವರ ಕಡೆಗೆ ಅದು ಕೂಡ ಗಂಭೀರ ತಪ್ಪುಗಳನ್ನು ಮಾಡಿದವರ ಕಡೆಗೆ ಪ್ರೀತಿ ತೋರಿಸುವ ವಿಷಯದಲ್ಲಿ ಸಭಾ ಹಿರಿಯರು ಯೇಸುವಿನಿಂದ ಏನನ್ನು ಕಲಿಯಬಲ್ಲರು ಎಂಬುದನ್ನು ಪರಿಗಣಿಸಲಿದ್ದೇವೆ. ಆರ್ಥಿಕ ಕಷ್ಟಗಳು, ವಿಪತ್ತುಗಳು ಮತ್ತು ಅನಾರೋಗ್ಯದ ಸಮಸ್ಯೆಗಳೇಳುವಾಗ ಕ್ರೈಸ್ತರು ಸಕಾರಾತ್ಮಕ ಕ್ರಿಯೆಗೈಯುವಂತೆ ಯೇಸುವಿನ ಪ್ರೀತಿ ಹೇಗೆ ಪ್ರೇರಿಸುತ್ತದೆಂಬುದನ್ನೂ ನಾವು ಚರ್ಚಿಸಲಿದ್ದೇವೆ.

3. ಪೇತ್ರನಲ್ಲಿ ಗುರುತರವಾದ ಕುಂದುಕೊರತೆಗಳಿದ್ದರೂ ಯೇಸು ಅವನನ್ನು ಹೇಗೆ ಉಪಚರಿಸಿದನು?

3 ಯೇಸು ಸಾಯುವುದಕ್ಕೆ ಮುಂಚಿನ ರಾತ್ರಿಯಂದು ಅವನ ಸ್ವಂತ ಅಪೊಸ್ತಲನಾದ ಪೇತ್ರನು ಮೂರು ಬಾರಿ ಅವನನ್ನು ಅಲ್ಲಗಳೆದನು. (ಮಾರ್ಕ 14:66-72) ಆದಾಗ್ಯೂ, ಯೇಸು ಮುಂತಿಳಿಸಿದಂತೆ ಪೇತ್ರನು ತನ್ನ ತಪ್ಪಿಗಾಗಿ ಪಶ್ಚಾತ್ತಾಪಪಟ್ಟಾಗ ಯೇಸು ಅವನನ್ನು ಕ್ಷಮಿಸಿದನು. ಅವನಿಗೆ ಭಾರೀ ಜವಾಬ್ದಾರಿಗಳನ್ನು ಸಹ ವಹಿಸಿಕೊಟ್ಟನು. (ಲೂಕ 22:32; ಅ. ಕಾ. 2:14; 8:14-17; 10:44, 45) ಗುರುತರವಾದ ಕುಂದುಕೊರತೆಗಳಿದ್ದವರ ಕಡೆಗಿನ ಯೇಸುವಿನ ಮನೋಭಾವದಿಂದ ನಾವೇನು ಕಲಿಯಬಲ್ಲೆವು?

ತಪ್ಪಿತಸ್ಥರ ಕಡೆಗೆ ಕ್ರಿಸ್ತನ ಮನೋಭಾವ ತೋರಿಸಿ

4. ವಿಶೇಷವಾಗಿ ಯಾವ ಸನ್ನಿವೇಶದಲ್ಲಿ ಕ್ರಿಸ್ತನ ಮನೋಭಾವವನ್ನು ತೋರಿಸಬೇಕಾಗುತ್ತದೆ?

4 ನಮ್ಮ ಕುಟುಂಬದವರಾಗಲಿ ಸಭೆಯವರಾಗಲಿ ಗುರುತರವಾದ ತಪ್ಪುಗೈಯುವಾಗ ನಮಗೆ ಅಪಾರ ದುಃಖವಾಗುವುದು ಸಹಜ. ಆದರೆ ಇದು, ನಾವು ಕ್ರಿಸ್ತನ ಮನೋಭಾವವನ್ನು ತೋರಿಸಬೇಕಾಗುವ ಅನೇಕ ಸನ್ನಿವೇಶಗಳಲ್ಲಿ ಒಂದಾಗಿದೆ. ದುಃಖಕರವಾಗಿ, ಸೈತಾನನ ವ್ಯವಸ್ಥೆಯ ಕಡೇ ದಿವಸಗಳು ಅದರ ಪರಮಾವಧಿ ತಲಪುತ್ತಿರುವಾಗ, ಲೋಕದ ಆತ್ಮದಿಂದಾಗಿ ನೈತಿಕತೆಯು ಹಿಂದೆಂದಿಗಿಂತಲೂ ಹೆಚ್ಚು ಅವನತಿಗಿಳಿಯುತ್ತಾ ಇದೆ. ಲೋಕದ ಕೆಟ್ಟದಾದ ಇಲ್ಲವೇ ಉಡಾಫೆಯ ನೈತಿಕ ಮನೋಭಾವಗಳು ಆಬಾಲವೃದ್ಧರೆನ್ನದೆ ಎಲ್ಲರನ್ನೂ ಪ್ರಭಾವಿಸಿ ಇಕ್ಕಟ್ಟಾದ ದಾರಿಯಲ್ಲಿ ನಡೆಯಬೇಕೆಂಬ ಅವರ ದೃಢನಿರ್ಣಯವನ್ನು ಒಳಗಿಂದೊಳಗೆ ಶಿಥಿಲಗೊಳಿಸಬಲ್ಲವು. ಪ್ರಥಮ ಶತಮಾನದಲ್ಲಿ ಕೆಲವರು ಕ್ರೈಸ್ತ ಸಭೆಯಿಂದ ಬಹಿಷ್ಕರಿಸಲ್ಪಟ್ಟರು ಮತ್ತು ಇನ್ನು ಕೆಲವರು ಖಂಡಿಸಲ್ಪಟ್ಟರು. ಇಂದು ಕೂಡ ಹಾಗೆ ಮಾಡಲಾಗುತ್ತದೆ. (1 ಕೊರಿಂ. 5:11-13; 1 ತಿಮೊ. 5:20) ಆದರೂ, ಇಂಥ ವಿಚಾರಗಳನ್ನು ನಿರ್ವಹಿಸುವ ಹಿರಿಯರು ಕ್ರಿಸ್ತಸದೃಶ ಪ್ರೀತಿಯನ್ನು ತೋರಿಸುವಾಗ ಅದು ತಪ್ಪಿತಸ್ಥರ ಮೇಲೆ ಮಹತ್ತರವಾದ ಪ್ರಭಾವಬೀರುತ್ತದೆ.

5. ತಪ್ಪಿತಸ್ಥರ ಕಡೆಗೆ ಕ್ರಿಸ್ತನು ತೋರಿಸಿದ ಮನೋಭಾವವನ್ನು ಹಿರಿಯರು ಹೇಗೆ ಅನುಕರಿಸಬೇಕು?

5 ಯೇಸುವಿನಂತೆ ಹಿರಿಯರು ಎಲ್ಲ ಸಮಯದಲ್ಲೂ ಯೆಹೋವನ ನೀತಿಯ ಮಟ್ಟಗಳನ್ನು ಎತ್ತಿಹಿಡಿಯಬೇಕು. ಹೀಗೆ ಮಾಡುವ ಮೂಲಕ ಅವರು ಯೆಹೋವನ ಸೌಮ್ಯಭಾವ, ದಯೆ ಹಾಗೂ ಪ್ರೀತಿಯನ್ನು ಪ್ರತಿಫಲಿಸುತ್ತಾರೆ. ಯಥಾರ್ಥವಾಗಿ ಪಶ್ಚಾತ್ತಾಪಪಟ್ಟಿರುವ ವ್ಯಕ್ತಿಯೊಬ್ಬನು, ತನ್ನ ತಪ್ಪಿನಿಂದಾಗಿ ‘ಮುರಿದ ಮನಸ್ಸುಳ್ಳವನೂ ಕುಗ್ಗಿಹೋದವನೂ’ ಆಗಿರುವಾಗ, ಅವನನ್ನು ‘ಶಾಂತಭಾವದಿಂದ ತಿದ್ದಿ ಸರಿಮಾಡಲು’ ಹಿರಿಯರಿಗೆ ಕಷ್ಟವೆನಿಸದು. (ಕೀರ್ತ. 34:18; ಗಲಾ. 6:1) ಆದರೆ ಅವನು ಉದ್ಧಟನೂ, ಸ್ವಲ್ಪವೂ ಪಶ್ಚಾತ್ತಾಪಪಡದ ವ್ಯಕ್ತಿಯೂ ಆಗಿರುವಲ್ಲಿ ಹಿರಿಯರು ಅವನೊಂದಿಗೆ ಹೇಗೆ ವ್ಯವಹರಿಸಬೇಕು?

6. ತಪ್ಪಿತಸ್ಥರೊಂದಿಗೆ ವ್ಯವಹರಿಸುವಾಗ ಹಿರಿಯರು ಯಾವುದರಿಂದ ದೂರವಿರಬೇಕು, ಮತ್ತು ಏಕೆ?

6 ತಪ್ಪಿತಸ್ಥನೊಬ್ಬನು ಶಾಸ್ತ್ರಾಧಾರಿತ ಸಲಹೆಯನ್ನು ತಳ್ಳಿಹಾಕುವಲ್ಲಿ ಇಲ್ಲವೇ ತನ್ನ ತಪ್ಪಿನ ಆರೋಪವನ್ನು ಬೇರೆಯವರ ಮೇಲೆ ಹಾಕುವಲ್ಲಿ, ಹಿರಿಯರಿಗೂ ಇತರರಿಗೂ ಸಿಟ್ಟು ಬರಬಹುದು. ಆ ವ್ಯಕ್ತಿ ಈಗಾಗಲೇ ಮಾಡಿರುವ ಹಾನಿ ಅವರಿಗೆ ತಿಳಿದಿರುವುದರಿಂದ ಅವನ ಕ್ರಿಯೆಗಳು ಹಾಗೂ ಮನೋಭಾವದ ಕುರಿತು ತಮ್ಮ ಅನಿಸಿಕೆಗಳನ್ನು ಒದರಿಬಿಡಲು ಅವರಿಗೆ ತುಂಬ ಮನಸ್ಸಾಗಬಹುದು. ಆದರೆ ಕೋಪವು ಹಾನಿಕರ ಮತ್ತು ಅದು ‘ಕ್ರಿಸ್ತನ ಮನಸ್ಸನ್ನು’ ಪ್ರತಿಫಲಿಸುವುದಿಲ್ಲ. (1 ಕೊರಿಂ. 2:16; ಯಾಕೋಬ 1:19, 20 ಓದಿ.) ಯೇಸು ತನ್ನ ದಿನದಲ್ಲಿ ಕೆಲವರಿಗೆ ಖಡಾಖಂಡಿತ ಮಾತುಗಳಲ್ಲಿ ಎಚ್ಚರಿಕೆ ನೀಡಿದ್ದೇನೋ ನಿಜ, ಆದರೆ ಅವನು ಒಮ್ಮೆಯೂ ದ್ವೇಷಭರಿತ ಇಲ್ಲವೇ ಚುಚ್ಚುವಂಥ ಮಾತುಗಳನ್ನಾಡಲಿಲ್ಲ. (1 ಪೇತ್ರ 2:23) ಅದಕ್ಕೆ ಬದಲು, ತಪ್ಪಿತಸ್ಥರು ಪಶ್ಚಾತ್ತಾಪಪಟ್ಟು ಯೆಹೋವನ ಅನುಗ್ರಹಕ್ಕೆ ಪುನಃ ಪಾತ್ರರಾಗುವಂತೆ ಮಾರ್ಗವನ್ನು ತೆರೆದಿಟ್ಟನು. ಯೇಸು ಈ ಲೋಕಕ್ಕೆ ಬಂದ ಒಂದು ಮುಖ್ಯ ಕಾರಣ ‘ಪಾಪಿಗಳನ್ನು ರಕ್ಷಿಸುವುದೇ’ ಆಗಿತ್ತು.—1 ತಿಮೊ. 1:15.

7, 8. ನ್ಯಾಯನಿರ್ಣಾಯಕ ವಿಷಯಗಳನ್ನು ನಿರ್ವಹಿಸುವಾಗ ಹಿರಿಯರನ್ನು ಯಾವುದು ಮಾರ್ಗದರ್ಶಿಸಬೇಕು?

7 ಈ ಸಂಬಂಧದಲ್ಲಿ ಯೇಸುವಿನ ಮಾದರಿಯು, ಸಭೆಯಿಂದ ಶಿಸ್ತಿಗೊಳಗಾದವರ ಕಡೆಗಿನ ನಮ್ಮ ಮನೋಭಾವವನ್ನು ಹೇಗೆ ಪ್ರಭಾವಿಸಬೇಕು? ಇದನ್ನು ನೆನಪಿನಲ್ಲಿಡಿ: ಸಭೆಯಲ್ಲಿ ನ್ಯಾಯನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳುವ ಶಾಸ್ತ್ರಾಧಾರಿತ ಏರ್ಪಾಡು ಹಿಂಡನ್ನು ಸಂರಕ್ಷಿಸುತ್ತದೆ ಮತ್ತು ಶಿಸ್ತಿಗೊಳಗಾದ ತಪ್ಪಿತಸ್ಥನನ್ನು ಪಶ್ಚಾತ್ತಾಪಕ್ಕೆ ನಡೆಸುವ ಸಾಧ್ಯತೆಯಿದೆ. (2 ಕೊರಿಂ. 2:6-8) ಕೆಲವರು ಪಶ್ಚಾತ್ತಾಪಪಡದ ಕಾರಣ ಅವರನ್ನು ಬಹಿಷ್ಕರಿಸಲೇಬೇಕಾಗುತ್ತದೆ. ಇದು ದುಃಖದ ಸಂಗತಿಯಾದರೂ, ಅವರಲ್ಲಿ ಹೆಚ್ಚಿನವರು ಸಮಯಾನಂತರ ಯೆಹೋವನಿಗೂ ಆತನ ಸಭೆಗೂ ಮರಳಿಬರುವುದನ್ನು ನೋಡುವುದು ಪ್ರೋತ್ಸಾಹದಾಯಕ. ಹಿರಿಯರು ಕ್ರಿಸ್ತಸದೃಶ ಮನೋಭಾವವನ್ನು ತೋರಿಸುವಾಗ, ಆ ವ್ಯಕ್ತಿ ಪಶ್ಚಾತ್ತಾಪಪಟ್ಟು, ಕಟ್ಟಕಡೆಗೆ ಹಿಂದಿರುಗಿ ಬರುವಂತೆ ದಾರಿಯನ್ನು ಸುಗಮಗೊಳಿಸುತ್ತಾರೆ. ಭವಿಷ್ಯದಲ್ಲಿ, ಈ ಮಾಜಿ ತಪ್ಪಿತಸ್ಥರಲ್ಲಿ ಕೆಲವರಿಗೆ ತಮಗೆ ಕೊಡಲಾಗಿದ್ದ ಎಲ್ಲ ಶಾಸ್ತ್ರಾಧಾರಿತ ಸಲಹೆ ನೆನಪಿರಲಿಕ್ಕಿಲ್ಲ. ಆದರೆ ಹಿರಿಯರು ತಮಗೆ ಮಾನಕೊಟ್ಟರು ಮತ್ತು ಪ್ರೀತಿಯಿಂದ ಉಪಚರಿಸಿದರು ಎಂಬುದಂತೂ ಅವರಿಗೆ ಖಂಡಿತ ನೆನಪಿರುವುದು.

8 ಹೀಗಿರುವುದರಿಂದ ಹಿರಿಯರು “ಪವಿತ್ರಾತ್ಮದಿಂದ ಉಂಟಾಗುವ ಫಲ”ವನ್ನು, ಅದರಲ್ಲೂ ಮುಖ್ಯವಾಗಿ ಕ್ರಿಸ್ತಸದೃಶ ಪ್ರೀತಿಯನ್ನು ತೋರಿಸಬೇಕು ಮತ್ತು ಅದನ್ನು ಕಷ್ಟಕರ ಪರಿಸ್ಥಿತಿಗಳಲ್ಲೂ ತೋರಿಸಬೇಕು. (ಗಲಾ. 5:22, 23) ಹಿರಿಯರು ತಪ್ಪಿತಸ್ಥರನ್ನು ಬಹಿಷ್ಕರಿಸಲು ಅವಸರಿಸದೆ, ಅವರು ಯೆಹೋವನ ಬಳಿ ಮರಳುವುದನ್ನೇ ತಾವು ಬಯಸುತ್ತೇವೆಂದು ತೋರಿಸಿಕೊಡತಕ್ಕದ್ದು. ಹೀಗೆ, ಅನೇಕರು ಈಗಾಗಲೇ ಮಾಡಿರುವಂತೆ ಒಬ್ಬ ಪಾಪಿಯು ಸಮಯಾನಂತರ ಪಶ್ಚಾತ್ತಾಪಪಡುವಾಗ, ಯೆಹೋವನಿಗೆ ಹಾಗೂ ತಾನು ಸಭೆಗೆ ಮರಳುವಂತೆ ಸಹಾಯಮಾಡಿದ ‘ಮನುಷ್ಯರಲ್ಲಿ ದಾನಗಳಿಗೆ’ ಬಹಳ ಆಭಾರಿಯಾಗಿರುವನು.—ಎಫೆ. 4:8, 11, 12.

ಅಂತ್ಯಕಾಲದಲ್ಲಿ ಕ್ರಿಸ್ತಸದೃಶ ಪ್ರೀತಿ ತೋರಿಸುವುದು

9. ಯೇಸು ತನ್ನ ಶಿಷ್ಯರಿಗಾಗಿ ಕ್ರಿಯೆಯಲ್ಲಿ ಪ್ರೀತಿ ತೋರಿಸಿದ್ದರ ಒಂದು ಉದಾಹರಣೆ ಕೊಡಿ.

9 ಯೇಸು ಕ್ರಿಯೆಯಲ್ಲಿ ತೋರಿಸಿದ ಪ್ರೀತಿಯ ಒಂದು ಗಮನಾರ್ಹ ಉದಾಹರಣೆಯನ್ನು ಲೂಕನು ದಾಖಲಿಸುತ್ತಾನೆ. ಕಾಲಾನಂತರ ರೋಮನ್‌ ಸೈನಿಕರು ದಂಡನೆಗೊಳಗಾಗಿದ್ದ ಯೆರೂಸಲೇಮ್‌ ಪಟ್ಟಣಕ್ಕೆ ಮುತ್ತಿಗೆ ಹಾಕಿ, ಅಲ್ಲಿಂದ ಯಾರೂ ತಪ್ಪಿಸಿಕೊಂಡು ಹೋಗದಂತೆ ಮಾಡುವರೆಂದು ಯೇಸುವಿಗೆ ತಿಳಿದಿತ್ತು. ಆದುದರಿಂದ ಅವನು ಪ್ರೀತಿಯಿಂದ ತನ್ನ ಶಿಷ್ಯರನ್ನು ಎಚ್ಚರಿಸಿದ್ದು: “ಇದಲ್ಲದೆ ಯೆರೂಸಲೇಮ್‌ಪಟ್ಟಣವು ಶಿಬಿರ ಹೂಡಿರುವ ಸೈನ್ಯಗಳಿಂದ ಸುತ್ತುವರಿಯಲ್ಪಟ್ಟಿರುವುದನ್ನು ನೀವು ನೋಡುವಾಗ ಅದರ ಹಾಳುಗೆಡಹುವಿಕೆ ಸಮೀಪಿಸಿದೆ ಎಂದು ತಿಳಿದುಕೊಳ್ಳಿರಿ.” ಆ ಶಿಷ್ಯರು ಏನು ಮಾಡಬೇಕಿತ್ತು? ಯೇಸು ಅವರಿಗೆ ಮುಂಚಿತವಾಗಿಯೇ ಸ್ಪಷ್ಟ, ನಿರ್ದಿಷ್ಟ ಸೂಚನೆಗಳನ್ನು ಕೊಡುತ್ತಾ ಅಂದದ್ದು: “ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗತೊಡಗಲಿ, ಯೆರೂಸಲೇಮ್‌ಪಟ್ಟಣದೊಳಗಿರುವವರು ಅಲ್ಲಿಂದ ಹೊರಟುಹೋಗಲಿ ಮತ್ತು ಹಳ್ಳಿ ಪ್ರದೇಶಗಳಲ್ಲಿರುವವರು ಅದರೊಳಗೆ ಪ್ರವೇಶಿಸದಿರಲಿ; ಏಕೆಂದರೆ ಬರೆದಿರುವುದೆಲ್ಲವೂ ನೆರವೇರುವಂತೆ ಇವು ನ್ಯಾಯತೀರ್ಪನ್ನು ವಿಧಿಸಿಕೊಡುವ ದಿನಗಳಾಗಿವೆ.” (ಲೂಕ 21:20-22) ಸಾ.ಶ. 66ರಲ್ಲಿ ರೋಮನ್‌ ಸೈನ್ಯಗಳು ಯೆರೂಸಲೇಮನ್ನು ಸುತ್ತುವರಿದಾಗ ವಿಧೇಯ ವ್ಯಕ್ತಿಗಳು ಈ ಸೂಚನೆಗಳಿಗನುಸಾರ ಕ್ರಿಯೆಗೈದರು.

10, 11. ಯೆರೂಸಲೇಮಿನಿಂದ ಆದಿ ಕ್ರೈಸ್ತರ ಪಲಾಯನವನ್ನು ಪರಿಗಣಿಸುವುದು, ನಾವು “ಮಹಾ ಸಂಕಟ”ಕ್ಕಾಗಿ ತಯಾರಾಗಲು ಹೇಗೆ ಸಹಾಯಮಾಡುವುದು?

10 ಕ್ರಿಸ್ತನು ತಮ್ಮ ಕಡೆಗೆ ತೋರಿಸಿದ ಪ್ರೀತಿಯನ್ನೇ ಕ್ರೈಸ್ತರು ಯೆರೂಸಲೇಮಿನಿಂದ ಪಲಾಯನಗೈಯುತ್ತಿದ್ದಾಗ ಪರಸ್ಪರರ ಕಡೆಗೆ ತೋರಿಸಬೇಕಿತ್ತು. ತಮ್ಮ ಬಳಿ ಏನಿತ್ತೋ ಅದನ್ನು ಅವರು ಪರಸ್ಪರ ಹಂಚಿಕೊಳ್ಳಬೇಕಿತ್ತು. ಆದರೆ ಯೇಸುವಿನ ಈ ಪ್ರವಾದನೆಗೆ ಆ ಪುರಾತನ ಪಟ್ಟಣದ ನಾಶನದ ನಂತರವೂ ಒಂದು ಮಹತ್ತಾದ ನೆರವೇರಿಕೆಯಿತ್ತು. ಅವನು ಮುಂತಿಳಿಸಿದ್ದು: “ಆಗ ಮಹಾ ಸಂಕಟವು ಇರುವುದು; ಲೋಕದ ಆರಂಭದಿಂದ ಇಂದಿನ ವರೆಗೆ ಅಂಥ ಸಂಕಟವು ಸಂಭವಿಸಿಲ್ಲ; ಇನ್ನು ಮುಂದೆಯೂ ಸಂಭವಿಸುವುದಿಲ್ಲ.” (ಮತ್ತಾ. 24:17, 18, 21) ಮುಂದಿರುವ ಆ ‘ಮಹಾ ಸಂಕಟದ’ ಮುಂಚೆ ಮತ್ತು ಅದು ನಡೆಯುತ್ತಿರುವಾಗ ನಾವು ಸಹ ಕಷ್ಟಗಳನ್ನೂ ಅಗತ್ಯ ವಸ್ತುಗಳ ಅಭಾವವನ್ನೂ ಅನುಭವಿಸಬೇಕಾದೀತು. ಕ್ರಿಸ್ತನ ಮನೋಭಾವ ನಮಗಿದ್ದರೆ ಅದೆಲ್ಲವನ್ನೂ ತಾಳಿಕೊಳ್ಳಲು ನಮಗೆ ಸಹಾಯವಾಗುವುದು.

11 ಆ ಸಮಯದಲ್ಲಿ ನಾವು ನಿಸ್ವಾರ್ಥ ಪ್ರೀತಿಯನ್ನು ತೋರಿಸುವುದರಲ್ಲಿ ಯೇಸುವಿನ ಮಾದರಿಯನ್ನು ಅನುಸರಿಸಬೇಕಾಗುವುದು. ಈ ಸಂಬಂಧದಲ್ಲಿ ಪೌಲನು ಸಲಹೆಕೊಟ್ಟದ್ದು: “ನಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಭಕ್ತಿವೃದ್ಧಿಗಾಗಿ ಒಳ್ಳೇದನ್ನೇ ಮಾಡುತ್ತಾ ಅವನನ್ನು ಮೆಚ್ಚಿಸಲಿ. ಕ್ರಿಸ್ತನು ಸಹ ತನ್ನನ್ನು ತಾನೇ ಮೆಚ್ಚಿಸಿಕೊಳ್ಳಲಿಲ್ಲ; . . . ತಾಳ್ಮೆಯನ್ನೂ ಸಾಂತ್ವನವನ್ನೂ ಒದಗಿಸುವ ದೇವರು ಕ್ರಿಸ್ತ ಯೇಸುವಿನಲ್ಲಿದ್ದ ಅದೇ ಮನೋಭಾವವನ್ನು ನಿಮಗೂ ದಯಪಾಲಿಸಲಿ.”—ರೋಮ. 15:2, 3, 5.

12. ನಾವೀಗ ಯಾವ ರೀತಿಯ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು, ಮತ್ತು ಏಕೆ?

12 ಯೇಸುವಿನ ಪ್ರೀತಿಯನ್ನು ಸ್ವತಃ ಅನುಭವಿಸಿದ ಪೇತ್ರನು, ಕ್ರೈಸ್ತರಿಗೆ “ನಿಷ್ಕಪಟವಾದ ಸಹೋದರ ಮಮತೆಯನ್ನು” ಬೆಳೆಸಿಕೊಳ್ಳಲು ಮತ್ತು “ಸತ್ಯಕ್ಕೆ ವಿಧೇಯ”ರಾಗಿರಲು ಉತ್ತೇಜಿಸಿದನು. ಅವರು ‘ಹೃದಯದಾಳದಿಂದ ಒಬ್ಬರನ್ನೊಬ್ಬರು ಪ್ರೀತಿಸಬೇಕಿತ್ತು.’ (1 ಪೇತ್ರ 1:22) ಇಂದು, ನಮಗೆ ಅಂಥ ಕ್ರಿಸ್ತಸದೃಶ ಗುಣಗಳನ್ನು ವಿಕಸಿಸಿಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ. ಈಗಾಗಲೇ ದೇವಜನರೆಲ್ಲರ ಮೇಲೆ ಒತ್ತಡಗಳು ತೀವ್ರವಾಗುತ್ತಿವೆ. ಅಲ್ಲದೆ, ಇತ್ತೀಚೆಗೆ ಲೋಕದ ಆರ್ಥಿಕ ವ್ಯವಸ್ಥೆಯಲ್ಲಾಗಿರುವ ಕೋಲಾಹಲವು ಚೆನ್ನಾಗಿ ತೋರಿಸಿಕೊಡುತ್ತಿರುವಂತೆ ಯಾವ ವ್ಯಕ್ತಿಯೂ ಈ ಹಳೇ ಲೋಕದ ಯಾವುದೇ ಘಟಕದಲ್ಲಿ ತನ್ನ ಭರವಸೆಯನ್ನಿಡಬಾರದು. (1 ಯೋಹಾನ 2:15-17 ಓದಿ.) ಅದರ ಬದಲು, ಈ ವ್ಯವಸ್ಥೆಯ ಅಂತ್ಯವು ಹೆಚ್ಚೆಚ್ಚು ಹತ್ತಿರಬರುತ್ತಿರುವಾಗ ನಾವು ಯೆಹೋವನಿಗೂ ಪರಸ್ಪರರಿಗೂ ಇನ್ನಷ್ಟು ಹತ್ತಿರವಾಗುತ್ತಾ, ಸಭೆಯೊಳಗೇ ಆಪ್ತವಾದ ಸ್ನೇಹಬಂಧಗಳನ್ನು ರಚಿಸಿಕೊಳ್ಳಬೇಕು. ಪೌಲನು ಸಲಹೆಕೊಟ್ಟದ್ದು: “ಸಹೋದರ ಪ್ರೀತಿಯಲ್ಲಿ ಒಬ್ಬರಿಗೊಬ್ಬರು ಕೋಮಲ ಮಮತೆಯುಳ್ಳವರಾಗಿರಿ. ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.” (ರೋಮ. 12:10) ಪೇತ್ರನು ಅದೇ ಅಂಶಕ್ಕೆ ಇನ್ನಷ್ಟು ಒತ್ತುಕೊಡುತ್ತಾ ಹೇಳಿದ್ದು: “ಎಲ್ಲಕ್ಕಿಂತಲೂ ಮಿಗಿಲಾಗಿ ಒಬ್ಬರಿಗೊಬ್ಬರು ಗಾಢವಾದ ಪ್ರೀತಿಯುಳ್ಳವರಾಗಿರಿ; ಏಕೆಂದರೆ ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.”—1 ಪೇತ್ರ 4:8.

13-15. ವಿಪತ್ತುಗಳು ಸಂಭವಿಸಿದಾಗ ಕೆಲವು ಸಹೋದರರು ಕ್ರಿಸ್ತಸದೃಶ ಪ್ರೀತಿಯನ್ನು ಹೇಗೆ ತೋರಿಸಿದ್ದಾರೆ?

13 ಲೋಕದಾದ್ಯಂತ, ಯೆಹೋವನ ಸಾಕ್ಷಿಗಳು ಕ್ರಿಸ್ತಸದೃಶ ಪ್ರೀತಿಯನ್ನು ಕ್ರಿಯೆಯಲ್ಲಿ ತೋರಿಸುವುದಕ್ಕಾಗಿ ಪ್ರಖ್ಯಾತರು. ಉದಾಹರಣೆಗೆ, 2005ರಲ್ಲಿ ಯುನೈಟೆಡ್‌ ಸ್ಟೇಟ್ಸ್‌ನ ದಕ್ಷಿಣಭಾಗದ ಹೆಚ್ಚಿನ ಪ್ರದೇಶಗಳು ಬಿರುಗಾಳಿಗಳು ಮತ್ತು ಚಂಡಮಾರುತಗಳ ಹಾವಳಿಗೆ ತುತ್ತಾದಾಗ ಸಾಕ್ಷಿಗಳು ಸಹಾಯದ ಕರೆಗೆ ಓಗೊಟ್ಟರು. ಯೇಸುವಿನ ಮಾದರಿಯಿಂದ ಪ್ರಚೋದಿತರಾಗಿ 20,000ಕ್ಕಿಂತಲೂ ಹೆಚ್ಚು ಮಂದಿ, ಕಷ್ಟದಲ್ಲಿದ್ದ ತಮ್ಮ ಸಹೋದರರಿಗೆ ನೆರವುನೀಡಲು ಮುಂದೆಬಂದರು. ಇವರಲ್ಲಿ ಹೆಚ್ಚಿನವರು ತಮ್ಮ ಸೌಕರ್ಯಭರಿತ ಮನೆಗಳನ್ನೂ ಭದ್ರವಾದ ನೌಕರಿಗಳನ್ನೂ ಬಿಟ್ಟುಬಂದಿದ್ದರು.

14 ಒಂದು ಪ್ರದೇಶದಲ್ಲಿ, ಬಿರುಗಾಳಿಯಿಂದಾಗಿ ಸಮುದ್ರದ ನೀರು ಸುಮಾರು 80 ಕಿ.ಮೀ. ಒಳನಾಡಿಗೆ ನುಗ್ಗಿ, 30 ಅಡಿಯಷ್ಟು ಎತ್ತರದ ನೀರಿನ ಗೋಡೆಯನ್ನು ನಿರ್ಮಿಸಿತು. ನೀರು ಇಳಿದಾಗ, ಅಲ್ಲಿದ್ದ ಮೂರನೇ ಒಂದು ಪಾಲು ಮನೆಗಳೂ ಇತರ ಕಟ್ಟಡಗಳೂ ಸಂಪೂರ್ಣವಾಗಿ ಹಾಳಾಗಿಹೋಗಿದ್ದವು. ಹಲವಾರು ರಾಷ್ಟ್ರಗಳಿಂದ ಆ ಪ್ರದೇಶಕ್ಕೆ ಬಂದ ಸಾಕ್ಷಿ ಸ್ವಯಂಸೇವಕರು ಕೌಶಲಗಳು, ಸಲಕರಣೆಗಳು ಹಾಗೂ ಕಟ್ಟಡ ಸಾಮಗ್ರಿಗಳನ್ನು ತಮ್ಮೊಂದಿಗೆ ತಂದರು. ಅಗತ್ಯವಿದ್ದ ಯಾವುದೇ ಕೆಲಸವನ್ನು ಮಾಡಲು ಅವರು ಸಿದ್ಧರಿದ್ದರು. ವಿಧವೆಯರಾಗಿದ್ದ ಇಬ್ಬರು ಅಕ್ಕತಂಗಿಯರು, ತಮ್ಮ ಸ್ವತ್ತುಗಳನ್ನೆಲ್ಲ ಒಂದು ಚಿಕ್ಕ ಟ್ರಕ್‌ನಲ್ಲಿ ತುಂಬಿಸಿ, 3,000 ಕಿ.ಮೀ.ಗಿಂತಲೂ ದೂರದ ಈ ಪ್ರದೇಶಕ್ಕೆ ನೆರವು ನೀಡಲು ಬಂದರು. ಅವರಲ್ಲೊಬ್ಬರು ಈಗಲೂ ಆ ಕ್ಷೇತ್ರದಲ್ಲಿದ್ದು ಸ್ಥಳಿಕ ಪರಿಹಾರ ಸಮಿತಿಗೆ ಸಹಾಯ ಮಾಡುತ್ತಿದ್ದಾರೆ ಹಾಗೂ ರೆಗ್ಯುಲರ್‌ ಪಯನೀಯರರಾಗಿ ಸೇವೆಸಲ್ಲಿಸುತ್ತಿದ್ದಾರೆ.

15 ಆ ಪ್ರದೇಶದಲ್ಲಿ ಸಾಕ್ಷಿಗಳ ಹಾಗೂ ಇತರರ 5,600ಕ್ಕಿಂತಲೂ ಹೆಚ್ಚು ಮನೆಗಳನ್ನು ಒಂದೇ ಪುನಃ ಕಟ್ಟಲಾಗಿದೆ ಇಲ್ಲವೇ ರಿಪೇರಿಮಾಡಲಾಗಿದೆ. ಪ್ರೀತಿಯ ಈ ಸುರಿಮಳೆಗರೆದಾಗ ಸ್ಥಳಿಕ ಸಾಕ್ಷಿಗಳಿಗೆ ಹೇಗನಿಸಿತು? ಒಬ್ಬ ಸಹೋದರಿಯ ಮನೆ ಪೂರ್ತಿ ನೆಲಸಮವಾಗಿತ್ತು. ಆದುದರಿಂದ ಅವರು ಒಂದು ಪುಟ್ಟ ಮೋಟಾರುಮನೆಯಲ್ಲಿ (ಟ್ರೇಲರ್‌) ವಾಸಹೂಡಿದ್ದರು. ಅದರ ಛಾವಣಿ ಸಹ ಸೋರುತ್ತಿತ್ತು ಮತ್ತು ಸ್ಟೋವು ಮುರಿದುಹೋಗಿತ್ತು. ಸಹೋದರರು ಆಕೆಗಾಗಿ ಒಂದು ಪುಟ್ಟ ಆದರೆ ವಾಸಯೋಗ್ಯ ಮನೆಯನ್ನು ಕಟ್ಟಿಕೊಟ್ಟರು. ಅಚ್ಚುಕಟ್ಟಾದ ತನ್ನ ಹೊಸ ಮನೆಯ ಮುಂದೆ ನಿಂತಿದ್ದ ಆಕೆ ಯೆಹೋವ ಹಾಗೂ ಸಹೋದರರ ಕಡೆಗಿನ ಕೃತಜ್ಞತೆಯಿಂದ ಅತ್ತೇಬಿಟ್ಟಳು. ಇನ್ನೂ ಹಲವಾರು ವಿದ್ಯಮಾನಗಳಲ್ಲಿ, ಮನೆಗಳನ್ನು ಕಳೆದುಕೊಂಡಿದ್ದ ಸ್ಥಳಿಕ ಸಾಕ್ಷಿಗಳು ಅವರ ಮನೆಗಳನ್ನು ಪುನಃ ಕಟ್ಟಲಾದ ನಂತರವೂ ತಾತ್ಕಾಲಿಕ ವಸತಿಗಳಲ್ಲೇ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಉಳಿದುಕೊಂಡರು. ಏಕೆ? ಪರಿಹಾರ ಕಾರ್ಯದಲ್ಲಿ ಒಳಗೂಡಿದ್ದ ಸ್ವಯಂಸೇವಕರಿಗೆ ತಮ್ಮ ಹೊಸ ಮನೆಗಳನ್ನು ಲಭ್ಯಗೊಳಿಸಲಿಕ್ಕಾಗಿಯೇ. ಕ್ರಿಸ್ತನ ಮನೋಭಾವವನ್ನು ತೋರಿಸುವ ವಿಷಯದಲ್ಲಿ ಎಂಥ ಒಂದು ಮಾದರಿಯಲ್ಲವೇ?

ಅಸ್ವಸ್ಥರ ಕಡೆಗೆ ಕ್ರಿಸ್ತನ ಮನೋಭಾವ ತೋರಿಸುವುದು

16, 17. ಅಸ್ವಸ್ಥರ ಕಡೆಗೆ ನಾವು ಕ್ರಿಸ್ತನ ಮನೋಭಾವವನ್ನು ಯಾವ ವಿಧಗಳಲ್ಲಿ ತೋರಿಸಬಲ್ಲೆವು?

16 ನಮ್ಮಲ್ಲಿ ಅತಿ ದೊಡ್ಡ ನೈಸರ್ಗಿಕ ವಿಪತ್ತಿಗೆ ತುತ್ತಾದವರು ತೀರ ಕೊಂಚ ಮಂದಿಯೇ. ಆದರೆ ಬಹುಮಟ್ಟಿಗೆ ಎಲ್ಲರೂ, ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತೇವೆ. ಅದು ಸ್ವತಃ ನಮಗೆ ಅಥವಾ ಕುಟುಂಬದ ಸದಸ್ಯರಿಗೆ ಬಂದಿರಬಹುದು. ಅಸ್ವಸ್ಥರ ಕಡೆಗೆ ಯೇಸುವಿಗಿದ್ದ ಮನೋಭಾವವು ನಮಗೆ ಮಾದರಿಯಾಗಿದೆ. ಅವನಿಗಿದ್ದ ಪ್ರೀತಿಯು ಅವರಿಗಾಗಿ ಕನಿಕರಪಡುವಂತೆ ಮಾಡಿತು. ಜನರು ಅಸ್ವಸ್ಥರನ್ನು ಅವನ ಬಳಿ ತಂದಾಗ “ಅಸ್ವಸ್ಥರಾಗಿದ್ದ ಎಲ್ಲರನ್ನೂ ವಾಸಿಮಾಡಿದನು.”—ಮತ್ತಾ. 8:16; 14:14.

17 ಇಂದು ಕ್ರೈಸ್ತರಿಗೆ ಯೇಸುವಿನಂತೆ ವಾಸಿಮಾಡುವ ಅದ್ಭುತ ಶಕ್ತಿಯಿಲ್ಲದಿದ್ದರೂ, ಅಸ್ವಸ್ಥರ ಕಡೆಗೆ ಅವನಿಗಿದ್ದ ಕರುಣಾಮಯಿ ಮನೋಭಾವ ಅವರಿಗಿದೆ. ಯೇಸುವಿನ ಈ ಮನೋಭಾವವನ್ನು ಹೇಗೆ ತೋರಿಸಲಾಗುತ್ತಿದೆ? ಇದರ ಒಂದು ಪುರಾವೆ, ಹಿರಿಯರು ಸಭೆಯಲ್ಲಿರುವ ಅಸ್ವಸ್ಥರಿಗೆ ನೆರವುನೀಡಲು ಏರ್ಪಾಡುಗಳನ್ನು ಮಾಡಿ, ಅದು ಹೇಗೆ ಸಾಗುತ್ತಿದೆಯೆಂದು ನಿಗಾವಹಿಸುವಾಗ ಕಾಣಸಿಗುತ್ತದೆ. ಹೀಗೆ ಮಾಡುವ ಮೂಲಕ ಹಿರಿಯರು ಮತ್ತಾಯ 25:39, 40 (ಓದಿ.)ರಲ್ಲಿರುವ ಮಾರ್ಗಕ್ರಮವನ್ನು ತತ್ತ್ವತಃ ಪಾಲಿಸುತ್ತಾರೆ. *

18. ಸಹೋದರಿಯರಿಬ್ಬರು ಒಬ್ಬ ಸಹೋದರಿಗೆ ಹೇಗೆ ನಿಜವಾದ ಪ್ರೀತಿಯನ್ನು ತೋರಿಸಿದರು, ಮತ್ತು ಪರಿಣಾಮಗಳೇನು?

18 ಇತರರಿಗೆ ಒಳ್ಳೇದನ್ನು ಮಾಡಲು ಒಬ್ಬನು ಹಿರಿಯನೇ ಆಗಿರಬೇಕೆಂದೇನಿಲ್ಲ. ಈ ವಿದ್ಯಮಾನವನ್ನು ಪರಿಗಣಿಸಿರಿ. 44 ವರ್ಷ ಪ್ರಾಯದ ಶಾರ್ಲಿನ್‌ಗೆ ಕ್ಯಾನ್ಸರ್‌ ರೋಗವಿತ್ತು ಮತ್ತು ಅವರು 10 ದಿನ ಮಾತ್ರ ಬದುಕುವರೆಂದು ಹೇಳಲಾಯಿತು. ಅವರಿಗೆ ಸಹಾಯದ ಅಗತ್ಯವಿರುವುದನ್ನು ಮತ್ತು ಕಣ್ಣಲ್ಲಿ ಕಣ್ಣಿಟ್ಟು ಅವರ ಆರೈಕೆಮಾಡುತ್ತಿದ್ದ ಗಂಡನ ಮೇಲಿದ್ದ ಶಾರೀರಿಕ ಹಾಗೂ ಭಾವನಾತ್ಮಕ ಒತ್ತಡವನ್ನು ಇಬ್ಬರು ಆಧ್ಯಾತ್ಮಿಕ ಸಹೋದರಿಯರಾದ ಶಾರನ್‌ ಮತ್ತು ನಿಕೊಲೆಟ್‌ ಗಮನಿಸಿದರು. ಆದುದರಿಂದ, ಶಾರ್ಲಿನ್‌ರ ಅಂತಿಮ ದಿನಗಳಲ್ಲಿ ಅವರ ಆರೈಕೆಮಾಡಲು ದಿನದ 24 ತಾಸೂ ಅವರೊಂದಿಗಿರಲು ಈ ಸಹೋದರಿಯರು ತಮ್ಮನ್ನು ನೀಡಿಕೊಂಡರು. ಆ 10 ದಿನಗಳು ಆರು ವಾರಗಳಾದವು. ಆದರೂ ಈ ಇಬ್ಬರು ಸಹೋದರಿಯರು ಕೊನೆ ವರೆಗೂ ಪ್ರೀತಿ ತೋರಿಸಿದರು. “ಒಬ್ಬ ವ್ಯಕ್ತಿ ತನಗಿರುವ ರೋಗದಿಂದ ಚೇತರಿಸಿಕೊಳ್ಳುವುದಿಲ್ಲ ಎಂದು ಗೊತ್ತಿರುವಾಗ ತುಂಬ ಸಂಕಟವಾಗುತ್ತದೆ. ಆದರೆ ಯೆಹೋವನು ನಮ್ಮನ್ನು ಬಲಪಡಿಸಿದನು. ಈ ಅನುಭವದಿಂದಾಗಿ ನಾವು ಆತನಿಗೆ ಹಾಗೂ ಪರಸ್ಪರರಿಗೆ ಹೆಚ್ಚು ಆಪ್ತರಾದೆವು” ಎಂದು ಶಾರನ್‌ ಹೇಳಿದರು. ಶಾರ್ಲಿನ್‌ರ ಗಂಡ ಹೇಳಿದ್ದು: “ಈ ಇಬ್ಬರು ಪ್ರಿಯ ಸಹೋದರಿಯರು ಕೊಟ್ಟ ದಯಾಪರ ಹಾಗೂ ಪ್ರಾಯೋಗಿಕ ನೆರವನ್ನು ನಾನೆಂದೂ ಮರೆಯಲಾರೆ. ಅವರು ಒಳ್ಳೇ ಮನಸ್ಸು ಹಾಗೂ ಸಕಾರಾತ್ಮಕ ಮನೋಭಾವದಿಂದ ಮಾಡಿದ ಈ ಸಹಾಯದಿಂದಾಗಿ, ನಂಬಿಗಸ್ತಳಾಗಿದ್ದ ನನ್ನ ಶಾರ್ಲಿನ್‌ಗೆ ಈ ಕೊನೆ ಪರೀಕ್ಷೆಯನ್ನು ನಿಭಾಯಿಸಲು ಸುಲಭವಾಯಿತು. ಅವರ ಸಹಾಯವು, ನನಗೂ ಅತ್ಯಗತ್ಯವಾಗಿದ್ದ ಶಾರೀರಿಕ ಹಾಗೂ ಭಾವನಾತ್ಮಕ ಉಪಶಮನವನ್ನು ಕೊಟ್ಟಿತು. ನಾನು ಅವರಿಗೆ ಚಿರಋಣಿ. ಅವರ ಸ್ವತ್ಯಾಗವು, ಯೆಹೋವನಲ್ಲಿ ನನಗಿದ್ದ ನಂಬಿಕೆಯನ್ನೂ ನಮ್ಮ ಸಹೋದರರ ಇಡೀ ಬಳಗಕ್ಕಾಗಿರುವ ನನ್ನ ಪ್ರೀತಿಯನ್ನೂ ಬಲಪಡಿಸಿತು.”

19, 20. (ಎ) ಕ್ರಿಸ್ತನ ಮನೋಭಾವದ ಯಾವ ಐದು ಅಂಶಗಳನ್ನು ನಾವು ಪರಿಗಣಿಸಿದ್ದೇವೆ? (ಬಿ) ನಿಮ್ಮ ದೃಢಸಂಕಲ್ಪವೇನು?

19 ಮೂರು ಲೇಖನಗಳ ಈ ಸರಣಿಯಲ್ಲಿ, ಯೇಸುವಿನ ಮನೋಭಾವದ ಐದು ಅಂಶಗಳನ್ನು ಪರಿಗಣಿಸಿದೆವು. ಅಷ್ಟೇ ಅಲ್ಲ, ನಾವು ಅವನಂತೆ ಹೇಗೆ ಯೋಚಿಸಬಲ್ಲೆವು ಹಾಗೂ ನಡೆದುಕೊಳ್ಳಬಲ್ಲೆವು ಎಂಬುದನ್ನೂ ನೋಡಿದೆವು. ಯೇಸುವಿನಂತೆ ನಾವು, ‘ಸೌಮ್ಯಭಾವದವರೂ ದೀನಹೃದಯದವರೂ’ ಆಗಿರೋಣ. (ಮತ್ತಾ. 11:29) ನಾವು ಇತರರನ್ನು ದಯೆಯಿಂದ ಉಪಚರಿಸಲು ಸಹ ಪ್ರಯತ್ನಿಸೋಣ. ಅವರ ಕುಂದುಕೊರತೆಗಳು ಹಾಗೂ ಬಲಹೀನತೆಗಳು ತೋರಿಬರುವಾಗಲೂ ಇದನ್ನು ಮಾಡೋಣ. ಯೆಹೋವನ ಎಲ್ಲ ಆವಶ್ಯಕತೆಗಳನ್ನು ಧೈರ್ಯದಿಂದ ಪಾಲಿಸೋಣ ಮತ್ತು ಇದನ್ನು ಕಷ್ಟಪರೀಕ್ಷೆಗಳ ಸಮಯದಲ್ಲೂ ಮಾಡೋಣ.

20 ಸ್ವತಃ ಕ್ರಿಸ್ತನು ಮಾಡಿದಂತೆ ನಮ್ಮೆಲ್ಲ ಸಹೋದರರಿಗೂ ಕ್ರಿಸ್ತನು ತೋರಿಸಿದ ಪ್ರೀತಿಯನ್ನು “ಕೊನೆಯ ವರೆಗೂ” ತೋರಿಸೋಣ. ಇಂಥ ಪ್ರೀತಿಯು ನಮ್ಮನ್ನು ಯೇಸುವಿನ ನಿಜ ಹಿಂಬಾಲಕರಾಗಿ ಗುರುತಿಸುತ್ತದೆ. (ಯೋಹಾ. 13:1, 34, 35) ಹೌದು, “ನಿಮ್ಮ ಸಹೋದರ ಪ್ರೀತಿಯು ಮುಂದುವರಿಯಲಿ.” (ಇಬ್ರಿ. 13:1) ನಿಮ್ಮನ್ನೇ ತಡೆದುಹಿಡಿಯಬೇಡಿ! ಯೆಹೋವನನ್ನು ಸ್ತುತಿಸಲು ಮತ್ತು ಇತರರಿಗೆ ಸಹಾಯಮಾಡಲು ನಿಮ್ಮ ಜೀವನವನ್ನು ಬಳಸಿರಿ. ನಿಮ್ಮ ಮನಃಪೂರ್ವಕ ಪ್ರಯತ್ನಗಳನ್ನು ಯೆಹೋವನು ಖಂಡಿತ ಹರಸುವನು.

[ಪಾದಟಿಪ್ಪಣಿ]

^ ಪ್ಯಾರ. 17 ಇಸವಿ 1987, ಜುಲೈ 1ರ ಕಾವಲಿನಬುರುಜು ಸಂಚಿಕೆಯಲ್ಲಿರುವ “‘ಬೆಂಕಿ ಕಾಯಿಸಿಕೊಳ್ಳಿ, ಹೊಟ್ಟೆ ತುಂಬಿಸಿಕೊಳ್ಳಿ’ ಎಂಬ ಬರೀ ಮಾತಿಗಿಂತ ಹೆಚ್ಚನ್ನು ಮಾಡಿರಿ” ಲೇಖನ ನೋಡಿ.

ನೀವು ವಿವರಿಸಬಲ್ಲಿರೋ?

• ಹಿರಿಯರು ತಪ್ಪಿತಸ್ಥರ ಕಡೆಗೆ ಕ್ರಿಸ್ತನ ಮನೋಭಾವವನ್ನು ಹೇಗೆ ಪ್ರದರ್ಶಿಸಬಲ್ಲರು?

• ವಿಶೇಷವಾಗಿ ಈ ಅಂತ್ಯಕಾಲದಲ್ಲಿ ಕ್ರಿಸ್ತನ ಪ್ರೀತಿಯನ್ನು ಅನುಕರಿಸುವುದು ಪ್ರಾಮುಖ್ಯವೇಕೆ?

• ಅಸ್ವಸ್ಥರ ಕಡೆಗೆ ಕ್ರಿಸ್ತನಿಗಿದ್ದ ಮನೋಭಾವವನ್ನು ನಾವು ಹೇಗೆ ಪ್ರತಿಫಲಿಸಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

[ಪುಟ 17ರಲ್ಲಿರುವ ಚಿತ್ರ]

ತಪ್ಪಿತಸ್ಥರು ಯೆಹೋವನ ಬಳಿ ಮರಳಬೇಕೆಂದು ಹಿರಿಯರು ಬಯಸುತ್ತಾರೆ

[ಪುಟ 18ರಲ್ಲಿರುವ ಚಿತ್ರ]

ಕ್ರೈಸ್ತರು ಯೆರೂಸಲೇಮನ್ನು ಬಿಟ್ಟುಹೋಗುವಾಗ ಕ್ರಿಸ್ತನ ಮನೋಭಾವವನ್ನು ಹೇಗೆ ಪ್ರತಿಫಲಿಸಿದರು?

[ಪುಟ 19ರಲ್ಲಿರುವ ಚಿತ್ರ]

ಯೆಹೋವನ ಸಾಕ್ಷಿಗಳು ಕ್ರಿಸ್ತಸದೃಶ ಪ್ರೀತಿಯನ್ನು ಕ್ರಿಯೆಯಲ್ಲಿ ತೋರಿಸುವುದಕ್ಕಾಗಿ ಪ್ರಖ್ಯಾತರು