ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಧರ್ಮ ಆಯ್ಕೆ ನನ್ನದೋ ನನ್ನ ಹೆತ್ತವರದ್ದೋ?

ಧರ್ಮ ಆಯ್ಕೆ ನನ್ನದೋ ನನ್ನ ಹೆತ್ತವರದ್ದೋ?

ಧರ್ಮ ಆಯ್ಕೆ ನನ್ನದೋ ನನ್ನ ಹೆತ್ತವರದ್ದೋ?

“ಈ ಧರ್ಮದಲ್ಲಿ ಹುಟ್ಟಿದ್ದೇನೆ, ಇದರಲ್ಲೇ ಸಾಯುವೆ!” ಹೀಗೆಂದು, ಪೋಲೆಂಡ್‌ನಲ್ಲಿ ಅನೇಕ ಜನರು ಯೆಹೋವನ ಸಾಕ್ಷಿಗಳಿಗೆ ಹೇಳುತ್ತಾರೆ. ಧರ್ಮವು ಹೆತ್ತವರಿಂದ ಮಕ್ಕಳಿಗೆ ದಾಟಿಸಲ್ಪಡುತ್ತದೆಂಬುದು ಅಂಥ ಜನರ ಅಭಿಪ್ರಾಯ. ಧರ್ಮದ ಬಗ್ಗೆ ನಿಮ್ಮ ಕ್ಷೇತ್ರದಲ್ಲೂ ಇಂಥದ್ದೇ ಅಭಿಪ್ರಾಯವಿದೆಯೋ? ಸಾಮಾನ್ಯವಾಗಿ ಅಂಥ ದೃಷ್ಟಿಕೋನದಿಂದ ಏನು ಫಲಿಸುತ್ತದೆ? ಧರ್ಮ ಎಂಬುದು ಔಪಚಾರಿಕತೆಯಾಗಿಬಿಡುತ್ತದೆ ಮತ್ತು ಕೇವಲ ಕುಟುಂಬದ ಒಂದು ಸಂಪ್ರದಾಯವಾಗಿಬಿಡುತ್ತದೆ. ತಮ್ಮ ತಂದೆತಾಯಿ ಅಥವಾ ಅಜ್ಜಅಜ್ಜಿಯಂದಿರಿಂದ ಅದ್ಭುತಕರವಾದ ಆಧ್ಯಾತ್ಮಿಕ ಪರಂಪರೆಯನ್ನು ಪಡೆದಿರುವ ಯೆಹೋವನ ಸಾಕ್ಷಿಗಳಿಗೂ ಹೀಗಾಗಬಲ್ಲದೋ?

ತಿಮೊಥೆಯನಿಗೆ ಹೀಗಾಗಲಿಲ್ಲ. ದೇವಭಕ್ತೆಯರಾಗಿದ್ದ ಅವನ ತಾಯಿ ಮತ್ತು ಅಜ್ಜಿ, ಸತ್ಯದೇವರನ್ನು ನಂಬಲು ಹಾಗೂ ಪ್ರೀತಿಸಲು ಅವನಿಗೆ ಮಾರ್ಗದರ್ಶನ ಕೊಟ್ಟಿದ್ದರು. ಹೀಗೆ, ಅವನು “ಶೈಶವದಿಂದಲೇ” ಪವಿತ್ರ ಬರಹಗಳನ್ನು ತಿಳಿದುಕೊಂಡಿದ್ದನು. ಆದರೆ ಕಾಲಾನಂತರ ತನ್ನ ತಾಯಿ ಹಾಗೂ ಅಜ್ಜಿಯ ಜೊತೆಯಲ್ಲಿ ತಿಮೊಥೆಯನು ಸಹ ಕ್ರೈಸ್ತತ್ವವೇ ಸತ್ಯ ಎಂಬುದನ್ನು ಮನಗಂಡನು. ಅವನು ಶಾಸ್ತ್ರವಚನಗಳಿಂದ ಯೇಸು ಕ್ರಿಸ್ತನ ಕುರಿತು ಏನನ್ನು ಕೇಳಿಸಿಕೊಂಡಿದ್ದನೋ ಅದನ್ನು ‘ನಂಬುವಂತೆ ಒಡಂಬಡಿಸಲ್ಪಟ್ಟನು.’ (2 ತಿಮೊ. 1:5; 3:14, 15) ಅದೇ ರೀತಿಯಲ್ಲಿ, ಇಂದು ಕ್ರೈಸ್ತ ಹೆತ್ತವರು ತಮ್ಮ ಮಕ್ಕಳು ಯೆಹೋವನ ಸೇವಕರಾಗುವಂತೆ ತಮ್ಮ ಕೈಲಾದ ಎಲ್ಲಾ ಸಹಾಯ ಮಾಡುವುದಾದರೂ, ಯೆಹೋವನ ಸೇವಕರಾಗುವ ಬಯಕೆಯನ್ನು ಸ್ವತಃ ಮಕ್ಕಳೇ ಬೆಳೆಸಿಕೊಳ್ಳಬೇಕು.—ಮಾರ್ಕ 8:34.

ಒಬ್ಬ ವ್ಯಕ್ತಿ ಯೆಹೋವನನ್ನು ಪ್ರೀತಿಯಿಂದ ಸೇವಿಸಬೇಕಾದರೆ ಮತ್ತು ಯಾವುದೇ ಪರಿಸ್ಥಿತಿಯಲ್ಲಿ ಸಮಗ್ರತೆ ಕಾಪಾಡಿಕೊಳ್ಳಬೇಕಾದರೆ, ಸ್ವತಃ ಅವನಿಗೆ ಮನವರಿಕೆಯಾಗುವಂಥ ತರ್ಕದ ಮೂಲಕ ನಂಬುವಂತೆ ಅವನನ್ನು ಒಡಂಬಡಿಸಬೇಕು. ಆಗ ಮಾತ್ರ ಅವನ ನಂಬಿಕೆ ದೃಢವಾದದ್ದೂ ಸ್ಥಿರವಾಗಿ ಬೇರೂರಿದ್ದೂ ಆಗಿರುವುದು.—ಎಫೆ. 3:17; ಕೊಲೊ. 2:6, 7.

ಮಕ್ಕಳ ಪಾತ್ರ

“ಯೆಹೋವನ ಸಾಕ್ಷಿಗಳ ಬಳಿಯೇ ಸತ್ಯ ಧರ್ಮವಿದೆಯೆಂದು ನನಗೆ ಗೊತ್ತಿತ್ತಾದರೂ, ಅವರ ಜೀವನರೀತಿಯನ್ನು ಅನುಸರಿಸಲು ನನಗೆ ತುಂಬ ಕಷ್ಟವಾಗುತ್ತಿತ್ತು” ಎಂದು ಯೆಹೋವನ ಸಾಕ್ಷಿಗಳ ಒಂದು ಕುಟುಂಬದಲ್ಲಿ ಬೆಳೆದ ಆಲ್ಬರ್ಟ್‌ * ವಿವರಿಸುತ್ತಾನೆ. ನೀವೊಬ್ಬ ಯುವ ವ್ಯಕ್ತಿಯಾಗಿರುವಲ್ಲಿ ನಿಮಗೂ ಅದೇ ಅಭಿಪ್ರಾಯವಿರಬಹುದು. ಹೀಗಿದ್ದಲ್ಲಿ, ನಾವು ನಡೆಸಬೇಕಾದ ಜೀವನರೀತಿಯ ಬಗ್ಗೆ ದೇವರೇನು ಅಪೇಕ್ಷಿಸುತ್ತಾನೋ ಅದರಲ್ಲಿ ಏನು ಒಳಗೂಡಿದೆ ಎಂಬುದನ್ನು ಗ್ರಹಿಸಲು ಪ್ರಯತ್ನಮಾಡಬಾರದೇಕೆ? ಆಗ ನೀವು ಆತನ ಚಿತ್ತವನ್ನು ಮಾಡುವುದರಲ್ಲಿ ಸಂತೋಷವನ್ನು ಕಂಡುಕೊಳ್ಳುವಿರಿ. (ಕೀರ್ತ. 40:8) “ನಾನು ಪ್ರಾರ್ಥನೆ ಮಾಡಲಾರಂಭಿಸಿದಾಗ ಮೊದಮೊದಲು ನನಗೆ ಕಷ್ಟವೆನಿಸಿತು. ಪ್ರಾರ್ಥನೆ ಮಾಡಲು ನಾನು ನನ್ನನ್ನೇ ಬಲವಂತಪಡಿಸಬೇಕಾಗುತ್ತಿತ್ತು. ಆದರೆ, ಸರಿಯಾದದ್ದನ್ನು ಮಾಡಲು ನಾನು ಪ್ರಯತ್ನಿಸಿದರೆ ದೇವರ ದೃಷ್ಟಿಯಲ್ಲಿ ಅಮೂಲ್ಯನಾಗಬಲ್ಲೆನೆಂದು ಸ್ವಲ್ಪ ಸಮಯದ ಬಳಿಕ ನನಗೆ ಅರಿವಾಯಿತು. ಇದು, ಅಗತ್ಯವಾದ ಬದಲಾವಣೆಗಳನ್ನು ಮಾಡಲು ಬೇಕಾದ ಬಲವನ್ನು ನನಗೆ ಕೊಟ್ಟಿತು” ಎಂದು ಆಲ್ಬರ್ಟ್‌ ಹೇಳುತ್ತಾನೆ. ಯೆಹೋವನೊಂದಿಗೆ ವೈಯಕ್ತಿಕ ಸಂಬಂಧವನ್ನು ಬೆಸೆಯುವ ಮೂಲಕ, ಆತನು ನಮ್ಮಿಂದ ಏನನ್ನು ಕೇಳಿಕೊಳ್ಳುತ್ತಾನೋ ಅದನ್ನು ಮಾಡುವ ಅಪೇಕ್ಷೆಯನ್ನು ನೀವು ಬೆಳೆಸಿಕೊಳ್ಳಬಹುದು.—ಕೀರ್ತ. 25:14; ಯಾಕೋ. 4:8.

ನೀವು ಆಡಿರುವ ಒಂದು ಆಟದ ಬಗ್ಗೆ ಯೋಚಿಸಿ. ಬಹುಶಃ ಅದು ಕ್ರಿಕೆಟ್‌ ಆಗಿರಬಹುದು. ಆದರೆ ಆ ಆಟದ ನಿಯಮಗಳನ್ನು ತಿಳಿಯದೆ ಅಥವಾ ಚೆನ್ನಾಗಿ ಆಡಲು ಬರದೆ ಅದನ್ನು ಆಡಲು ಹೋಗುವಲ್ಲಿ ನಿಮಗೆ ಬೇಜಾರಾಗಬಹುದು. ಆದರೆ ನೀವು ನಿಯಮಗಳನ್ನು ಕಲಿತು ಆ ಆಟದಲ್ಲಿ ನಿಪುಣರಾದರೆ, ಒಂದೋ ಅದನ್ನು ಆಡಲು ಕಾಯುತ್ತಾ ಇರುವಿರಿ ಅಥವಾ ಅದಕ್ಕಾಗಿ ಅವಕಾಶಗಳನ್ನು ಮಾಡಿಕೊಳ್ಳುವಿರಿ, ಅಲ್ಲವೇ? ಕ್ರೈಸ್ತ ಚಟುವಟಿಕೆಗಳ ಸಂಬಂಧದಲ್ಲೂ ಇದು ಸತ್ಯ. ಹೀಗಿರುವುದರಿಂದ ಕ್ರೈಸ್ತ ಕೂಟಗಳಿಗಾಗಿ ತಯಾರಿಮಾಡಲು ಆರಂಭಿಸಿರಿ ಮತ್ತು ಅವುಗಳಲ್ಲಿ ಪೂರ್ತಿಯಾಗಿ ಭಾಗವಹಿಸಿ. ನಿಮ್ಮ ವಯಸ್ಸು ಚಿಕ್ಕದಾಗಿದ್ದರೂ, ನಿಮ್ಮ ಮಾದರಿಯಿಂದ ಇತರರು ಉತ್ತೇಜನ ಪಡೆಯಬಹುದು!—ಇಬ್ರಿ. 10:24, 25.

ಈ ಸಂಗತಿಗಳು, ಬೇರೆಯವರಿಗೆ ನಿಮ್ಮ ಧಾರ್ಮಿಕ ನಂಬಿಕೆಗಳ ಬಗ್ಗೆ ತಿಳಿಸುವಾಗಲೂ ಅನ್ವಯವಾಗುತ್ತವೆ. ಅದನ್ನು ಪ್ರೀತಿಯಿಂದ ಮಾಡಬೇಕೇ ಹೊರತು ಬೇರೆಯವರು ಒತ್ತಾಯ ಮಾಡುತ್ತಾರೆಂಬ ಕಾರಣದಿಂದಲ್ಲ. ನಿಮ್ಮನ್ನೇ ಕೇಳಿಕೊಳ್ಳಿ: ‘ನಾನು ಬೇರೆಯವರಿಗೆ ಯೆಹೋವನ ಬಗ್ಗೆ ಏಕೆ ಹೇಳುತ್ತೇನೆ? ಯಾವ ಕಾರಣಗಳಿಗಾಗಿ ನಾನಾತನನ್ನು ಪ್ರೀತಿಸುತ್ತೇನೆ?’ ಯೆಹೋವನು ಒಬ್ಬ ಪ್ರೀತಿಯ ತಂದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಆತನು ಯೆರೆಮೀಯನ ಮುಖಾಂತರ ಹೀಗಂದನು: “ನೀವು ನನ್ನನ್ನು ಹುಡುಕುವಿರಿ, ಮನಃಪೂರ್ವಕವಾಗಿ ಹುಡುಕಿದಾಗ ನನ್ನನ್ನು ಕಂಡುಕೊಳ್ಳುವಿರಿ.” (ಯೆರೆ. 29:13, 14) ಇದಕ್ಕಾಗಿ ನೀವೇನು ಮಾಡಬೇಕಾದೀತು? “ನಾನು ನನ್ನ ಯೋಚನಾಧಾಟಿಯನ್ನೇ ಬದಲಾಯಿಸಬೇಕಾಯಿತು. ಚಿಕ್ಕಂದಿನಿಂದಲೇ ನಾನು ಕೂಟಗಳಿಗೆ ಮತ್ತು ಸೇವೆಗೆ ಹೋಗಲಾರಂಭಿಸಿದ್ದೆ. ಆದರೆ ಈ ಚಟುವಟಿಕೆಗಳು ಬಹುಮಟ್ಟಿಗೆ ಯಾಂತ್ರಿಕವಾಗಿಬಿಟ್ಟಿದ್ದವು. ನಾನು ನಿಜವಾಗಿ ಸತ್ಯದಲ್ಲಿ ತಲ್ಲೀನನಾದದ್ದು, ನಾನು ಹೆಚ್ಚು ಉತ್ತಮವಾಗಿ ಯೆಹೋವನ ಪರಿಚಯಮಾಡಿಕೊಂಡು ಆತನೊಂದಿಗೆ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಂಡಾಗಲೇ” ಎಂದು ಯಾಕುಪ್‌ ಹೇಳುತ್ತಾನೆ.

ಉತ್ತಮ, ಭಕ್ತಿವರ್ಧಕ ಸಹವಾಸವು ನೀವು ಶುಶ್ರೂಷೆಯಲ್ಲಿ ಎಷ್ಟು ಆನಂದಿಸುತ್ತೀರಿ ಎಂಬುದರ ಮೇಲೆ ಬಹಳಷ್ಟು ಪ್ರಭಾವಬೀರುತ್ತದೆ. ದೇವಪ್ರೇರಿತ ಜ್ಞಾನೋಕ್ತಿಯು ಹೀಗನ್ನುತ್ತದೆ: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.” (ಜ್ಞಾನೋ. 13:20) ಆದುದರಿಂದಲೇ, ಆಧ್ಯಾತ್ಮಿಕ ಗುರಿಗಳನ್ನಿಟ್ಟಿರುವ ಮತ್ತು ಯೆಹೋವನ ಸೇವೆಯಲ್ಲಿ ಸಂತೋಷಪಡುವ ವ್ಯಕ್ತಿಗಳನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಿ. ಜೋಲಾ ಎಂಬಾಕೆ ಹೇಳುವುದು: “ಆಧ್ಯಾತ್ಮಿಕ ಮನಸ್ಸಿನ ಅನೇಕ ಯುವ ಜನರ ಸಹವಾಸ ನನಗೆ ಪ್ರೋತ್ಸಾಹ ಕೊಟ್ಟಿತು. ನಾನು ತುಂಬ ಸಂತೋಷದಿಂದ ಶುಶ್ರೂಷೆಯಲ್ಲಿ ಕ್ರಮವಾಗಿ ಭಾಗವಹಿಸಲು ಆರಂಭಿಸಿದೆ.”

ಹೆತ್ತವರ ಪಾತ್ರ

“ಯೆಹೋವನ ಕುರಿತು ಕಲಿಸಿದ್ದಕ್ಕಾಗಿ ನಾನು ನನ್ನ ಹೆತ್ತವರಿಗೆ ತುಂಬ ಆಭಾರಿ” ಅನ್ನುತ್ತಾಳೆ ಜೋಲಾ. ಹೌದು, ಮಕ್ಕಳು ಮಾಡುವ ಆಯ್ಕೆಯ ಮೇಲೆ ಹೆತ್ತವರು ಮಹತ್ತರ ಪ್ರಭಾವಬೀರಬಲ್ಲರು. ಅಪೊಸ್ತಲ ಪೌಲನು ಬರೆದದ್ದು: “ತಂದೆಗಳೇ, . . . [ನಿಮ್ಮ ಮಕ್ಕಳನ್ನು] ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ ಬೆಳೆಸುತ್ತಾ ಬನ್ನಿರಿ.” (ಎಫೆ. 6:4) ಈ ದೇವಪ್ರೇರಿತ ಸಲಹೆ ಸ್ಪಷ್ಟವಾಗಿ ತೋರಿಸುವಂತೆ, ತಮ್ಮ ಸ್ವಂತ ಮಾರ್ಗಗಳನ್ನಲ್ಲ ಬದಲಾಗಿ ಯೆಹೋವನ ಮಾರ್ಗಗಳನ್ನು ಮಕ್ಕಳಿಗೆ ಕಲಿಸುವುದೇ ಹೆತ್ತವರ ಪಾತ್ರ ಆಗಿದೆ. ಮಕ್ಕಳು ಯೆಹೋವನ ಉದ್ದೇಶಗಳಿಗನುಸಾರ ಜೀವಿಸಬೇಕೆಂಬ ಬಯಕೆ ಹೆತ್ತವರಾದ ನಿಮಗಿರಬಹುದು. ಆದರೆ ಅದನ್ನು ಸಾಧಿಸಬೇಕೆಂಬ ವಿಚಾರವನ್ನು ಮಕ್ಕಳ ತಲೆಯಲ್ಲಿ ತುರುಕಿಸುವ ಬದಲು, ಅದನ್ನು ಸ್ವತಃ ಅವರೇ ತಮ್ಮ ಜೀವನದ ಗುರಿಯನ್ನಾಗಿ ಮಾಡಲು ನೆರವು ನೀಡುವಲ್ಲಿ ಎಷ್ಟು ಉತ್ತಮ!

ನಿಮ್ಮ ಮಕ್ಕಳಲ್ಲಿ ಯೆಹೋವನ ಮಾತುಗಳನ್ನು ಅಚ್ಚೊತ್ತಿಸಿರಿ ಮತ್ತು ‘ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಅವುಗಳ ವಿಷಯದಲ್ಲಿ ಮಾತಾಡಿರಿ.’ (ಧರ್ಮೋ. 6:6, 7) “ವಿಭಿನ್ನ ಪ್ರಕಾರದ ಪೂರ್ಣ ಸಮಯದ ಶುಶ್ರೂಷೆಯ ಬಗ್ಗೆ ಅವರೊಂದಿಗೆ ತುಂಬ ಮಾತಾಡುತ್ತಿದ್ದೆವು” ಎಂದು ಮೂರು ಗಂಡುಮಕ್ಕಳ ಹೆತ್ತವರಾದ ಇವಾ ಮತ್ತು ರಿಶರ್ಡ್‌ ಮರುಜ್ಞಾಪಿಸುತ್ತಾರೆ. ಇದರ ಫಲಿತಾಂಶ? “ಚಿಕ್ಕ ಪ್ರಾಯದಲ್ಲೇ ಅವರು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ದಾಖಲಾದರು, ಪ್ರಚಾರಕರಾದರು ಮತ್ತು ಕಟ್ಟಕಡೆಗೆ ದೀಕ್ಷಾಸ್ನಾನ ತೆಗೆದುಕೊಳ್ಳುವ ನಿರ್ಣಯವನ್ನು ಸ್ವತಃ ಮಾಡಿದರು. ಕಾಲಾನಂತರ ಅವರೆಲ್ಲರೂ ಪೂರ್ಣ ಸಮಯದ ಶುಶ್ರೂಷೆಯಲ್ಲಿ ತೊಡಗಿದರು.”

ಹೆತ್ತವರ ಒಳ್ಳೇ ಮಾದರಿಯೂ ಅತ್ಯಾವಶ್ಯಕ. ರಿಶರ್ಡ್‌ ಹೇಳುವುದು: “ಹೆತ್ತವರಾದ ನಾವು ಇಬ್ಬಗೆಯ ಜೀವನ ನಡೆಸಬಾರದು, ಅಂದರೆ ಮನೆಯಲ್ಲಿ ಒಂದು ರೀತಿ ಮತ್ತು ಸಭೆಯಲ್ಲಿ ಇನ್ನೊಂದು ರೀತಿ ನಡೆದುಕೊಳ್ಳಬಾರದು ಎಂಬ ದೃಢನಿರ್ಣಯ ಮಾಡಿದ್ದೆವು.” ಹೀಗಿರುವುದರಿಂದ ನಿಮ್ಮನ್ನೇ ಕೇಳಿಕೊಳ್ಳಿ: ‘ನನ್ನ ಜೀವನರೀತಿಯಲ್ಲಿ ನನ್ನ ಮಕ್ಕಳು ಏನನ್ನು ಕಂಡುಕೊಳ್ಳುತ್ತಾರೆ? ಯೆಹೋವನಿಗಾಗಿ ನಿಜವಾದ ಪ್ರೀತಿ ಅವರಿಗೆ ಕಾಣಸಿಗುತ್ತದೋ? ಈ ಪ್ರೀತಿಯನ್ನು ಅವರು ನನ್ನ ಪ್ರಾರ್ಥನೆಗಳು ಹಾಗೂ ವೈಯಕ್ತಿಕ ಅಧ್ಯಯನದ ರೂಢಿಯಲ್ಲಿ ಗಮನಿಸಬಲ್ಲರೋ? ಕ್ಷೇತ್ರ ಸೇವೆ, ಮನೋರಂಜನೆ ಮತ್ತು ಭೌತಿಕ ವಸ್ತುಗಳ ಕಡೆಗಿನ ನನ್ನ ಮನೋಭಾವ ಹಾಗೂ ಸಭೆಯ ಇತರ ಸದಸ್ಯರ ಕುರಿತಾಗಿ ನಾನು ಮಾತಾಡುವ ಸಂಗತಿಗಳಲ್ಲಿ ಅವರಿದನ್ನು ನೋಡಬಲ್ಲರೋ?’ (ಲೂಕ 6:40) ಮಕ್ಕಳು ನಿಮ್ಮ ದೈನಂದಿನ ಜೀವನವನ್ನು ಗಮನಿಸುತ್ತಿರುವರು ಮತ್ತು ನೀವು ಹೇಳುವುದಕ್ಕೂ ಮಾಡುವುದಕ್ಕೂ ಏನಾದರೂ ವ್ಯತ್ಯಾಸವಿರುವಲ್ಲಿ ಅದನ್ನು ಕಂಡುಹಿಡಿಯುವರು.

ಮಕ್ಕಳನ್ನು ಬೆಳೆಸುವುದರಲ್ಲಿ ಶಿಸ್ತಿಗೆ ಮಹತ್ತ್ವದ ಪಾತ್ರವಿದೆ. ಆದರೆ, “ಒಬ್ಬ ಹುಡುಗನನ್ನು, ಅವನಿಗೆ ಯಾವ ಮಾರ್ಗವು ತಕ್ಕದಾಗಿದೆಯೋ ಅದಕ್ಕನುಸಾರ ತರಬೇತುಮಾಡಿ” ಎಂದು ದೇವರ ಪ್ರೇರಿತ ವಾಕ್ಯವು ನಮಗನ್ನುತ್ತದೆ. (ಜ್ಞಾನೋ. 22:6, NW) ಇವಾ ಮತ್ತು ರಿಶರ್ಡ್‌ ಹೇಳುವುದು: “ನಮ್ಮ ಪುತ್ರರಲ್ಲಿ ಪ್ರತಿಯೊಬ್ಬರೊಂದಿಗೆ ಪ್ರತ್ಯೇಕ ಬೈಬಲ್‌ ಅಧ್ಯಯನ ಮಾಡುತ್ತಿದ್ದೆವು.” ತಮ್ಮ ಮಕ್ಕಳಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಅಧ್ಯಯನ ಅಗತ್ಯವೋ ಎಂಬುದನ್ನು ಹೆತ್ತವರೇ ನಿರ್ಣಯಿಸಬೇಕು. ಆದರೆ ಏನೇ ಇರಲಿ, ಮಕ್ಕಳಲ್ಲಿ ಪ್ರತಿಯೊಬ್ಬರನ್ನು ಪ್ರತ್ಯೇಕ ವ್ಯಕ್ತಿಯಾಗಿ ಉಪಚರಿಸಬೇಕು. ಇದನ್ನು ಮಾಡಲು ಹೆತ್ತವರು ಹೊಂದಿಕೊಳ್ಳುವವರೂ ನ್ಯಾಯಸಮ್ಮತರೂ ಆಗಿರಬೇಕು. ಉದಾಹರಣೆಗೆ, ನಿಮ್ಮ ಮಕ್ಕಳಿಗೆ ಇಂಥಿಂಥ ಸಂಗೀತ ಕೆಟ್ಟದ್ದೆಂದು ನೇರವಾಗಿ ಹೇಳುವ ಬದಲು, ಒಳಗೂಡಿರುವ ಬೈಬಲ್‌ ಮೂಲತತ್ತ್ವಗಳೆಡೆಗೆ ಗಮನಹರಿಸುತ್ತಾ ವಿವೇಕಯುತ ನಿರ್ಣಯಗಳನ್ನು ಸ್ವತಃ ಮಾಡುವುದು ಹೇಗೆಂದು ತೋರಿಸಬಾರದೇಕೆ?

ನಿಮ್ಮ ಮಕ್ಕಳು ನಿಮ್ಮ ಇಚ್ಛೆಗಳಿಗೆ ತಕ್ಕಂತೆ ನಡೆಯುತ್ತಿರುವಂತೆ ತೋರಬಹುದು. ನೀವು ಅವರಿಂದ ಏನು ನಿರೀಕ್ಷಿಸುತ್ತೀರೆಂದು ಅವರಿಗೆ ಚೆನ್ನಾಗಿ ತಿಳಿದಿರುವುದರಿಂದ ನಿಮ್ಮನ್ನು ಖುಷಿಪಡಿಸಲು ಅವರು ಹಾಗೆ ಮಾಡುತ್ತಿರಬಹುದು. ಆದರೆ ನೀವು ಅವರ ಹೃದಯವನ್ನು ಮುಟ್ಟಬೇಕು. ನೆನಪಿಡಿ, “ಮನುಷ್ಯನ ಹೃದಯಸಂಕಲ್ಪವು ಆಳವಾದ [ಬಾವಿಯ] ನೀರು. ಆದರೆ ವಿವೇಕಿಯು ಅದನ್ನು ಸೇದಬಲ್ಲನು.” (ಜ್ಞಾನೋ. 20:5) ವಿವೇಚಿಸುವವರಾಗಿದ್ದು, ನಿಮ್ಮ ಮಕ್ಕಳ ಹೃದಯದಲ್ಲಿ ಸುಳಿದಾಡುತ್ತಿರುವ ಯಾವುದೇ ಸಮಸ್ಯೆಯ ಸೂಚನೆಗಳನ್ನು ಗುರುತಿಸಲು ಎಚ್ಚರವಾಗಿರಿ ಮತ್ತು ಆ ಕೂಡಲೇ ಕ್ರಮಗೈಯಿರಿ. ನಿಮ್ಮ ಕಳಕಳಿಯನ್ನು ತೋರಿಸಿರಿ ಆದರೆ ಅವರ ಮೇಲೆ ಯಾವುದೇ ಆರೋಪಗಳನ್ನು ಹಾಕದಿರಿ. ಸೂಕ್ತ ಪ್ರಶ್ನೆಗಳನ್ನು ಕೇಳಿ ಆದರೆ ವಿಚಾರಣೆ ಮಾಡುವವರೋಪಾದಿ ಪ್ರಶ್ನೆಗಳ ಸುರಿಮಳೆಗೈಯದಂತೆ ಜಾಗ್ರತೆ ವಹಿಸಿ. ನಿಮ್ಮ ಯಥಾರ್ಥ ಕಳಕಳಿಯು ಅವರ ಹೃದಯವನ್ನು ತಲುಪುವಾಗ ನೀವು ಅವರಿಗೆ ನೆರವು ನೀಡಲು ಶಕ್ತರಾಗುವಿರಿ.

ಸಭೆಯ ಪಾತ್ರ

ದೇವರ ಸೇವಕರಲ್ಲಿ ಒಬ್ಬರಾಗಿರುವ ನೀವು, ಆಧ್ಯಾತ್ಮಿಕ ಪರಂಪರೆಯನ್ನು ಗಣ್ಯಮಾಡುವಂತೆ ನಿಮ್ಮ ಸಭೆಯಲ್ಲಿರುವ ಯುವ ಜನರಿಗೆ ಸಹಾಯಮಾಡಬಲ್ಲಿರೋ? ಮಕ್ಕಳ ತರಬೇತಿಗಾಗಿ ಹೆತ್ತವರು ಜವಾಬ್ದಾರರಾಗಿದ್ದರೂ, ಸಭೆಯ ಇತರ ಸದಸ್ಯರು ವಿಶೇಷವಾಗಿ ಹಿರಿಯರು ಅವರ ಪ್ರಯತ್ನಗಳನ್ನು ಬೆಂಬಲಿಸಬಲ್ಲರು. ವಿಶೇಷವಾಗಿ, ಹೆತ್ತವರಲ್ಲೊಬ್ಬರು ಯೆಹೋವನ ಸಾಕ್ಷಿಯಾಗಿಲ್ಲದಿರುವಾಗ ಅಂಥ ಕುಟುಂಬಗಳ ಮಕ್ಕಳಿಗೆ ಸಹಾಯ ಮಾಡುವುದು ಮಹತ್ತ್ವದ್ದು.

ಯೆಹೋವನನ್ನು ಪ್ರೀತಿಸುವಂತೆ ಎಳೆಯರಿಗೆ ಸಹಾಯ ಮಾಡಲು ಮತ್ತು ಅವರ ಅಗತ್ಯ ನಮಗಿದೆ ಹಾಗೂ ಅವರನ್ನು ಗಣ್ಯಮಾಡುತ್ತೇವೆ ಎಂಬ ಭಾವನೆಯನ್ನು ಅವರಲ್ಲಿ ಮೂಡಿಸಲು ಹಿರಿಯರು ಏನು ಮಾಡಬಲ್ಲರು? ಪೋಲೆಂಡ್‌ನ ಸಭೆಯೊಂದರಲ್ಲಿ ಮೇಲ್ವಿಚಾರಕರಾಗಿ ಸೇವೆಸಲ್ಲಿಸುತ್ತಿರುವ ಮಾರ್ಯುಷ್‌ ಎಂಬವರು ಹೇಳುವುದು: “ಹಿರಿಯರು ಯುವ ಜನರೊಟ್ಟಿಗೆ ಮಾತಾಡಬೇಕು, ಮಾತಾಡಬೇಕು, ಮಾತಾಡಬೇಕು. ಸಮಸ್ಯೆಗಳೇಳುವಾಗ ಮಾತ್ರವಲ್ಲ ಬೇರೆ ಸಂದರ್ಭಗಳಲ್ಲೂ ಅಂದರೆ ಶುಶ್ರೂಷೆಯಲ್ಲಿ, ಕೂಟಗಳ ನಂತರ, ಇಲ್ಲವೆ ಅವರೊಂದಿಗೆ ಒಂದು ಕಪ್‌ ಚಹಾ ಕುಡಿಯುತ್ತಾ ಮಾತಾಡಬೇಕು.” ಯುವ ಜನರಿಗೆ ಸಭೆಯ ಕುರಿತು ಹೇಗನಿಸುತ್ತದೆಂದು ಏಕೆ ಕೇಳಿ ತಿಳಿದುಕೊಳ್ಳಬಾರದು? ಇಂಥ ಮುಕ್ತ ಸಂವಾದವು ಎಳೆಯರನ್ನು ಸಭೆಗೆ ಹತ್ತಿರತರುತ್ತದೆ ಮತ್ತು ಅವರೂ ಅದರ ಭಾಗವಾಗಿದ್ದಾರೆಂಬ ಭಾವನೆಯನ್ನು ಅವರಲ್ಲಿ ಮೂಡಿಸುತ್ತದೆ.

ನೀವೊಬ್ಬ ಹಿರಿಯರಾಗಿರುವಲ್ಲಿ, ನಿಮ್ಮ ಸಭೆಯಲ್ಲಿರುವ ಯುವ ಜನರ ಪರಿಚಯ ಮಾಡಿಕೊಳ್ಳುತ್ತಿದ್ದೀರೋ? ಈ ಹಿಂದೆ ತಿಳಿಸಲಾಗಿರುವ ಆಲ್ಬರ್ಟ್‌ ಎಂಬವನು ಈಗ ಹಿರಿಯನಾಗಿದ್ದರೂ, ತನ್ನ ತರುಣಾವಸ್ಥೆಯಲ್ಲಿ ಹಲವಾರು ಕಷ್ಟಗಳನ್ನು ಅನುಭವಿಸಿದನು. ಅವನು ಹೇಳುವುದು: “ಯುವ ಪ್ರಾಯದವನಾಗಿದ್ದ ನನಗೆ ಒಂದು ವೈಯಕ್ತಿಕ ಪರಿಪಾಲನಾ ಭೇಟಿಯ ಅಗತ್ಯವಿತ್ತು.” ಹಿರಿಯರು ಯುವಜನರ ಆಧ್ಯಾತ್ಮಿಕ ಕ್ಷೇಮಕ್ಕಾಗಿ ಪ್ರಾರ್ಥಿಸುವ ಮೂಲಕವೂ ಅವರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸಬಹುದು.—2 ತಿಮೊ. 1:3.

ಯುವ ಜನರು ಸಭಾ ಚಟುವಟಿಕೆಗಳಲ್ಲಿ ಒಳಗೂಡುವುದು ಒಳ್ಳೇದು. ಇಲ್ಲದಿದ್ದಲ್ಲಿ ಅವರು ಲೌಕಿಕ ಗುರಿಗಳನ್ನು ಬೆನ್ನಟ್ಟುವುದರ ಮೇಲೆ ಗಮನ ನೆಡುವರು. ವಯಸ್ಸಿನಲ್ಲಿ ದೊಡ್ಡವರಾದ ನೀವು ಅವರೊಂದಿಗೆ ಶುಶ್ರೂಷೆಯಲ್ಲಿ ಭಾಗವಹಿಸಿ ಅವರ ಸ್ನೇಹವನ್ನು ಸಂಪಾದಿಸಿಕೊಳ್ಳಬಲ್ಲಿರೋ? ಯುವ ಜನರೊಂದಿಗೆ ವಿರಾಮದ ಸಮಯ ಕಳೆಯಿರಿ. ಇದು ಭರವಸೆ ಹಾಗೂ ಸ್ನೇಹಮಯಿ ವಾತಾವರಣವನ್ನು ಹುಟ್ಟಿಸುತ್ತದೆ. ಜೋಲಾ ಮರುಜ್ಞಾಪಿಸಿಕೊಳ್ಳುವುದು: “ಪಯನೀಯರ್‌ ಸಹೋದರಿಯೊಬ್ಬಳು ನನ್ನಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸಿದಳು. ನಾನು ಪ್ರಥಮ ಬಾರಿ ಮನಸಾರೆ ಬಯಸಿ ಶುಶ್ರೂಷೆಗೆ ಹೋದದ್ದು ಆಕೆಯೊಂದಿಗೇ.”

ನಿಮ್ಮ ವೈಯಕ್ತಿಕ ಆಯ್ಕೆ

ಯುವ ಜನರೇ ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ನನ್ನ ಗುರಿಗಳೇನು? ನನಗಿನ್ನೂ ದೀಕ್ಷಾಸ್ನಾನವಾಗಿರದಿದ್ದರೆ, ಅದನ್ನು ನನ್ನ ಗುರಿಯಾಗಿಟ್ಟಿದ್ದೇನೋ?’ ದೀಕ್ಷಾಸ್ನಾನ ಪಡೆಯಬೇಕೆಂಬ ನಿರ್ಣಯವು, ಕುಟುಂಬದ ಸಂಪ್ರದಾಯವನ್ನು ಪಾಲಿಸಬೇಕೆಂಬ ಹಂಗಿನ ಭಾವನೆಯಿಂದಲ್ಲ ಬದಲಾಗಿ ಯೆಹೋವನ ಕಡೆಗಿನ ಪ್ರೀತಿತುಂಬಿದ ಹೃದಯದಿಂದ ಹೊರಹೊಮ್ಮಬೇಕು.

ಹೌದು, ಯೆಹೋವನೇ ನಿಮ್ಮ ನಿಜ ಸ್ನೇಹಿತನಾಗಿರಲಿ ಮತ್ತು ಸತ್ಯವೇ ನಿಮ್ಮ ಸಂಪತ್ತಾಗಿರಲಿ. ಪ್ರವಾದಿ ಯೆಶಾಯನ ಮೂಲಕ ಯೆಹೋವನು ಘೋಷಿಸಿದ್ದು: “ನೀನಂತೂ ಹೆದರಬೇಡ, ಏಕೆಂದರೆ ನಾನೇ ನಿನ್ನ ದೇವರು.” ಎಷ್ಟರ ವರೆಗೆ ನೀವು ಯೆಹೋವನ ಸ್ನೇಹಿತರಾಗಿರುವಿರೋ ಅಷ್ಟರ ವರೆಗೆ ಆತನು ನಿಮ್ಮೊಂದಿಗಿರುವನು. ಆತನು ಖಂಡಿತವಾಗಿಯೂ ನಿಮ್ಮನ್ನು ಬಲಪಡಿಸುವನು ಮತ್ತು ‘ಆತನ ನೀತಿಯ ಬಲಗೈಯಿಂದ ನಿಮ್ಮನ್ನು ಎತ್ತಿಹಿಡಿಯುವನು.’—ಯೆಶಾ. 41:10, NIBV.

[ಪಾದಟಿಪ್ಪಣಿ]

^ ಪ್ಯಾರ. 6 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

[ಪುಟ 4ರಲ್ಲಿರುವ ಚಿತ್ರ]

ನಿಮ್ಮ ಮಗುವಿನ ಹೃದಯದಲ್ಲಿ ಏನಿದೆ ಎಂಬುದನ್ನು ಗ್ರಹಿಸಲು ಪ್ರಯತ್ನಿಸಿ

[ಪುಟ 6ರಲ್ಲಿರುವ ಚಿತ್ರ]

ದೀಕ್ಷಾಸ್ನಾನ ಪಡೆಯಬೇಕೆಂಬ ನಿರ್ಣಯವು ಯೆಹೋವನ ಕಡೆಗಿನ ಪ್ರೀತಿತುಂಬಿದ ಹೃದಯದಿಂದ ಹೊರಹೊಮ್ಮಬೇಕು