ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನ ಬದುಕಿಗೊಂದು ಅರ್ಥ ಸಿಕ್ಕಿತು

ನನ್ನ ಬದುಕಿಗೊಂದು ಅರ್ಥ ಸಿಕ್ಕಿತು

ನನ್ನ ಬದುಕಿಗೊಂದು ಅರ್ಥ ಸಿಕ್ಕಿತು

ಗಾಸ್ಪಾರ್‌ ಮಾರ್ಟಿನಿಸ್‌ ಅವರು ಹೇಳಿದಂತೆ

ಕೆಲವೊಂದು ವಿಧಗಳಲ್ಲಿ ನನ್ನ ಕಥೆಯು, ನಗರಕ್ಕೆ ಬಂದು ಶ್ರೀಮಂತನಾದ ಒಬ್ಬ ಹಳ್ಳಿ ಹುಡುಗನ ಕಥೆಯಂತಿದೆ. ಆದರೆ ನನ್ನ ಕಥೆಯನ್ನು ಓದುತ್ತಾ ಹೋದಂತೆ, ನಾನು ಕೂಡಿಸಿದ ಸಂಪತ್ತು ನಾನೇನನ್ನು ನಿರೀಕ್ಷಿಸಿದ್ದೆನೋ ಅದಾಗಿರಲಿಲ್ಲ ಎಂಬುದು ನಿಮಗೆ ಗೊತ್ತಾಗುವುದು.

ನಾನು ಉತ್ತರ ಸ್ಪೇನ್‌ನ ರಿಯೋಜಾ ಪ್ರಾಂತದಲ್ಲಿ 1930ರ ದಶಕದಲ್ಲಿ ಬೆಳೆದೆ. ಅದೊಂದು ಬರಡಾದ ಗ್ರಾಮೀಣ ಪ್ರದೇಶವಾಗಿತ್ತು. ಹತ್ತು ವರ್ಷಕ್ಕೇ ನಾನು ಶಾಲೆ ಬಿಡಬೇಕಾಯಿತು. ಆದರೂ ಅಷ್ಟರಲ್ಲೇ ಓದುಬರಹ ಕಲಿತಿದ್ದೆ. ನನ್ನ ಆರು ಮಂದಿ ಸಹೋದರ ಸಹೋದರಿಯರೊಂದಿಗೆ ಹೊಲಗಳಲ್ಲಿ ಕುರಿಗಳನ್ನು ಮೇಯಿಸುವುದರಲ್ಲಿ ಅಥವಾ ನಮಗಿದ್ದ ಚಿಕ್ಕ ಭೂಮಿಯಲ್ಲಿ ಸಾಗುವಳಿ ಮಾಡುವುದರಲ್ಲಿ ದಿನಗಳು ಉರುಳುತ್ತಿದ್ದವು.

ಬಡತನದಿಂದಾಗಿ ನಮಗೆ ಹಣ ಮತ್ತು ಸ್ವತ್ತುಗಳೇ ಸರ್ವಸ್ವ ಎಂದೆನಿಸಿತು. ಸ್ಥಿತಿವಂತರನ್ನು ನೋಡುವಾಗ ನಮಗೆ ಅಸೂಯೆಯಾಗುತ್ತಿತ್ತು. ಆದರೂ “ತನ್ನ ಆಡಳಿತದ ಪ್ರಾಂತದಲ್ಲೇ ಹೆಚ್ಚು ಧಾರ್ಮಿಕವಾದ ಗ್ರಾಮ” ನಮ್ಮದೆಂದು ಒಮ್ಮೆ ಬಿಷಪ್‌ ಹೇಳಿದರು. ಸಮಯಾನಂತರ ಇದೇ ಗ್ರಾಮದ ಅನೇಕರು ಕ್ಯಾಥೊಲಿಕ್‌ ಚರ್ಚ್‌ನ್ನು ತೊರೆಯುವರೆಂದು ಅವರು ಎಣಿಸಿಯೇ ಇರಲಿಕ್ಕಿಲ್ಲ.

ಉತ್ತಮ ಜೀವನದ ಹುಡುಕಾಟದಲ್ಲಿ

ನಮ್ಮದೇ ಗ್ರಾಮದ ಮರ್ಸಾಥಾಸ್‌ ಎಂಬ ಹುಡುಗಿಯನ್ನು ನಾನು ಮದುವೆಯಾದೆ. ಸ್ವಲ್ಪ ಸಮಯದೊಳಗೆ ನಮಗೊಬ್ಬ ಮಗ ಹುಟ್ಟಿದ. 1957ರಲ್ಲಿ ನಾವು ಸಮೀಪದ ಲೊಗ್ರೊನೊ ಎಂಬ ನಗರಕ್ಕೆ ಸ್ಥಳಾಂತರಿಸಿದೆವು. ಸಮಯಾನಂತರ ನನ್ನ ಇಡೀ ಕುಟುಂಬವೂ ಅಲ್ಲಿಗೆ ಬಂತು. ಯಾವುದೇ ಒಂದು ಕೆಲಸಕ್ಕಾಗಿ ಬೇಕಾಗಿರುವ ವಿಶೇಷ ತರಬೇತಿ ನನಗಿಲ್ಲದ್ದರಿಂದ ಒಳ್ಳೇ ಸಂಬಳವಿರುವ ಕೆಲಸ ಸಿಗುವುದು ತುಂಬ ಕಷ್ಟ ಎಂಬುದು ನನಗೆ ಬೇಗನೆ ಗೊತ್ತಾಯಿತು. ಮಾರ್ಗದರ್ಶನವನ್ನು ಯಾರ ಬಳಿ ಕೇಳುವುದೆಂಬ ಗೊಂದಲ ನನಗಿತ್ತು. ಏನನ್ನು ಹುಡುಕಬೇಕೆಂದು ನನಗೆ ಗೊತ್ತಿಲ್ಲದಿದ್ದರೂ ನಾನು ಸ್ಥಳೀಯ ಗ್ರಂಥಾಲಯದಲ್ಲಿ ಹುಡುಕಲಾರಂಭಿಸಿದೆ.

ತದನಂತರ, ಅಂಚೆಯ ಮೂಲಕ ಬೈಬಲ್‌ ಅಧ್ಯಯನದ ಕೋರ್ಸನ್ನು ನೀಡುತ್ತಿದ್ದ ಒಂದು ರೇಡಿಯೋ ಕಾರ್ಯಕ್ರಮದ ಬಗ್ಗೆ ಕೇಳಿಸಿಕೊಂಡೆ. ಆ ಕೋರ್ಸನ್ನು ಮುಗಿಸಿದ ಬಳಿಕ, ಇವ್ಯಾಂಜೆಲಿಕಲ್‌ ಪ್ರಾಟೆಸ್ಟೆಂಟರಲ್ಲಿ ಕೆಲವರು ನನ್ನನ್ನು ಭೇಟಿಮಾಡಿದರು. ಅವರ ಆರಾಧನಾ ಕೇಂದ್ರಗಳಿಗೆ ಒಂದೆರಡು ಬಾರಿ ಹೋದಾಗ, ಆ ಗುಂಪಿನ ಗಣ್ಯ ಸದಸ್ಯರ ನಡುವೆಯೇ ಪೈಪೋಟಿಯಿರುವುದನ್ನು ಗಮನಿಸಿದೆ. ಎಲ್ಲಾ ಧರ್ಮಗಳೂ ಒಂದೇ ಎಂದು ತೀರ್ಮಾನಿಸುತ್ತಾ ನಾನಲ್ಲಿಗೆ ಪುನಃ ಹೋಗಲಿಲ್ಲ.

ಕಣ್ಣುಗಳಲ್ಲಿದ್ದ ಪರೆ ಕೆಳಗೆಬಿತ್ತು

1964ರಲ್ಲಿ ಔಕಾನ್ಯೋ ಎಂಬ ಯುವ ವ್ಯಕ್ತಿ ನಮ್ಮ ಮನೆಗೆ ಭೇಟಿ ನೀಡಿದ. ಅವನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದ. ನಾನು ಹಿಂದೆಂದೂ ಈ ಧರ್ಮದ ಬಗ್ಗೆ ಕೇಳಿಸಿಕೊಂಡಿರಲಿಲ್ಲ. ಆದರೆ ಬೈಬಲಿನ ಕುರಿತು ಮಾತಾಡಲು ನನಗೆ ತುಂಬ ಮನಸ್ಸಿತ್ತು. ನನ್ನ ಬೈಬಲ್‌ ಜ್ಞಾನ ತುಂಬ ಉತ್ತಮವಾಗಿದೆಯೆಂದು ನಾನೆಣಿಸುತ್ತಿದ್ದೆ. ಅಂಚೆಯ ಮೂಲಕ ನಡೆಸಿದ ಕೋರ್ಸ್‌ನಲ್ಲಿ ಕಲಿತ ಕೆಲವೊಂದು ಬೈಬಲ್‌ ವಚನಗಳನ್ನು ತೋರಿಸುತ್ತಾ ಅವನೊಂದಿಗೆ ಮಾತಾಡಿದೆ. ಪ್ರಾಟೆಸ್ಟೆಂಟರ ಕೆಲವೊಂದು ಬೋಧನೆಗಳನ್ನು ನಾನು ಸಮರ್ಥಿಸಲು ಪ್ರಯತ್ನಿಸಿದರೂ, ನಿಜ ಹೇಳಬೇಕೆಂದರೆ ನನಗೇ ಅವುಗಳಲ್ಲಿ ನಂಬಿಕೆಯಿರಲಿಲ್ಲ.

ಎರಡು ಬಾರಿ ನಡೆದ ದೀರ್ಘ ಮಾತುಕತೆಗಳ ಬಳಿಕ, ಔಕಾನ್ಯೋ ದೇವರ ವಾಕ್ಯವನ್ನು ಒಬ್ಬ ಪರಿಣತನಂತೆ ಬಳಸುತ್ತಾನೆಂದು ನಾನು ಒಪ್ಪಿಕೊಳ್ಳಲೇಬೇಕಾಯಿತು. ಅವನಿಗೆ ನನಗಿಂತಲೂ ಕಡಿಮೆ ಶಾಲಾ ಶಿಕ್ಷಣವಿದ್ದರೂ ಅವನು ವಚನಗಳನ್ನು ತೆರೆದು ಅದರ ಅನ್ವಯವನ್ನು ವಿವರಿಸುತ್ತಿದ್ದ ವಿಧ ನನ್ನನ್ನು ಬೆರಗುಗೊಳಿಸಿತು. ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಮತ್ತು ಬೇಗನೆ ದೇವರ ರಾಜ್ಯವು ಭೂಮಿಯನ್ನು ಪರದೈಸಾಗಿ ಪರಿವರ್ತಿಸಲಿದೆ ಎಂಬುದನ್ನು ಔಕಾನ್ಯೋ ಬೈಬಲಿನಿಂದ ತೋರಿಸಿದ. ಇದು ನನ್ನ ಕುತೂಹಲವನ್ನು ಕೆರಳಿಸಿತು.—ಕೀರ್ತ. 37:11, 29; ಯೆಶಾ. 9:6, 7; ಮತ್ತಾ. 6:9, 10.

ನಾನು ಸಂತೋಷದಿಂದ ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡೆ. ನಾನು ಕಲಿತದ್ದರಲ್ಲಿ ಹೆಚ್ಚಿನದ್ದು ನನಗೆ ಹೊಸದಾಗಿತ್ತು ಮತ್ತು ಅದು ನನ್ನ ಹೃದಯವನ್ನು ಸ್ಪರ್ಶಿಸಿತು. ನನ್ನ ಮುಂದೆ ಒಂದು ಹೊಸ ಪ್ರತೀಕ್ಷೆಯಿತ್ತು ಮತ್ತು ಅದಕ್ಕಾಗಿ ಜೀವಿಸುವುದು ಸಾರ್ಥಕವಾಗಿತ್ತು. ಅಷ್ಟಕ್ಕೆ ನನ್ನ ಹುಡುಕಾಟ ಕೊನೆಗೊಂಡಿತು. ಸಾಮಾಜಿಕವಾಗಿ ಉತ್ತಮ ಸ್ಥಾನಮಾನವನ್ನು ಗಿಟ್ಟಿಸಿಕೊಳ್ಳುವ ನನ್ನ ಪ್ರಯತ್ನಗಳು ಈಗ ಅಸಂಬದ್ಧವೆನಿಸಿದವು ಮತ್ತು ಉತ್ತಮ ಕೆಲಸವನ್ನು ಕಂಡುಕೊಳ್ಳುವ ಸಮಸ್ಯೆಯೊಂದಿಗಿನ ನನ್ನ ಹೋರಾಟ ಅಷ್ಟೇನೂ ಪ್ರಾಮುಖ್ಯವೆಂದು ನನಗನಿಸಲಿಲ್ಲ. ಏಕೆಂದರೆ, ಭವಿಷ್ಯದಲ್ಲಿ ದೇವರು ಅನಾರೋಗ್ಯ ಮತ್ತು ಮರಣವನ್ನೇ ತೆಗೆದುಹಾಕುವಲ್ಲಿ ಇನ್ನುಳಿದ ಸಮಸ್ಯೆಗಳನ್ನೂ ತೆಗೆದುಹಾಕುವನಲ್ಲವೇ?—ಯೆಶಾ. 33:24; 35:5, 6; ಪ್ರಕ. 21:4.

ಆ ಕೂಡಲೆ, ನಾನು ಕಲಿಯುತ್ತಿದ್ದ ವಿಷಯಗಳನ್ನು ಸಂಬಂಧಿಕರಿಗೆ ಹೇಳಲಾರಂಭಿಸಿದೆ. ನಂಬಿಗಸ್ತ ಮಾನವರು ಸದಾಕಾಲ ಜೀವಿಸಬಹುದಾದ ಭೂಪರದೈಸನ್ನು ತರುವುದಾಗಿ ದೇವರು ಮಾತುಕೊಟ್ಟಿದ್ದಾನೆಂದು ನಾನವರಿಗೆ ಉತ್ಸಾಹದಿಂದ ವಿವರಿಸಿದೆ.

ನನ್ನ ಕುಟುಂಬ ಬೈಬಲ್‌ ಸತ್ಯವನ್ನು ಸ್ವೀಕರಿಸುತ್ತದೆ

ಸ್ವಲ್ಪದರಲ್ಲೇ, ನಮ್ಮಲ್ಲಿ ಸುಮಾರು ಹನ್ನೆರಡು ಮಂದಿ ಬೈಬಲ್‌ ವಾಗ್ದಾನಗಳನ್ನು ಚರ್ಚಿಸಲಿಕ್ಕಾಗಿ ನಮ್ಮ ಚಿಕ್ಕಪ್ಪನ ಮನೆಯಲ್ಲಿ ಪ್ರತಿ ಭಾನುವಾರ ಮಧ್ಯಾಹ್ನ ಒಟ್ಟುಸೇರಲು ನಿರ್ಣಯಿಸಿದೆವು. ಇಂಥ ಚರ್ಚೆಗಳಿಗಾಗಿ ನಾವು ಪ್ರತಿವಾರ ಎರಡರಿಂದ ಮೂರು ತಾಸುಗಳನ್ನು ವಿನಿಯೋಗಿಸುತ್ತಿದ್ದೆವು. ನನ್ನ ಸಂಬಂಧಿಗಳಲ್ಲಿ ಬಹಳಷ್ಟು ಮಂದಿಗೆ ಬೈಬಲ್‌ನಲ್ಲಿ ಆಸಕ್ತಿಯಿರುವುದನ್ನು ಗಮನಿಸಿದ ಔಕಾನ್ಯೋ ಪ್ರತಿ ಕುಟುಂಬಕ್ಕೂ ವೈಯಕ್ತಿಕ ಗಮನ ಕೊಡಲು ಏರ್ಪಾಡುಗಳನ್ನು ಮಾಡಿದ.

ಡುರಾಂಗೋ ಎಂಬಲ್ಲೂ ನನ್ನ ಸಂಬಂಧಿಗಳಿದ್ದರು. ಅದು ಸುಮಾರು 120 ಕಿ.ಮೀ. ದೂರದಲ್ಲಿದ್ದು, ಅಲ್ಲಿ ಸಾಕ್ಷಿಗಳ್ಯಾರೂ ವಾಸಿಸುತ್ತಿರಲಿಲ್ಲ. ಆದ್ದರಿಂದ ನನ್ನ ಈ ಹೊಸ ನಂಬಿಕೆಯ ಬಗ್ಗೆ ಅವರಿಗೆ ವಿವರಿಸಲಿಕ್ಕಾಗಿ ಮೂರು ತಿಂಗಳುಗಳ ಬಳಿಕ, ಕೆಲವೊಂದು ದಿನಗಳ ರಜೆ ತೆಗೆದುಕೊಂಡು ಅವರನ್ನು ಭೇಟಿಮಾಡಲು ಹೋದೆ. ಆ ಸಂದರ್ಭದಲ್ಲಿ, ಪ್ರತಿ ಸಂಜೆಯಂದು ನಮ್ಮಲ್ಲಿ ಸುಮಾರು ಹತ್ತು ಮಂದಿ ಒಟ್ಟುಸೇರುತ್ತಿದ್ದೆವು ಮತ್ತು ನಾನು ಮುಂಜಾನೆಯ ತನಕ ಅವರೊಂದಿಗೆ ಮಾತಾಡುತ್ತಿದ್ದೆ. ಅವರೆಲ್ಲರೂ ಸಂತೋಷದಿಂದ ಕೇಳುತ್ತಿದ್ದರು. ನನ್ನ ಸಂಕ್ಷಿಪ್ತ ಭೇಟಿಯ ಅವಧಿ ಕೊನೆಗೊಂಡಾಗ ನಾನವರಿಗೆ ಕೆಲವು ಬೈಬಲ್‌ ಪ್ರತಿಗಳನ್ನು ಮತ್ತು ಬೈಬಲ್‌ ಸಾಹಿತ್ಯಗಳನ್ನು ಕೊಟ್ಟುಬಂದೆ. ತದನಂತರ ನಾನವರೊಂದಿಗೆ ಸಂಪರ್ಕವನ್ನಿಟ್ಟುಕೊಂಡಿದ್ದೆ.

ಸುವಾರ್ತೆಯನ್ನು ಹಿಂದೆಂದೂ ಸಾರಿರದ ಡುರಾಂಗೋಗೆ ಸಾಕ್ಷಿಗಳು ಆಗಮಿಸಿದಾಗ, ಈಗಾಗಲೇ 18 ಮಂದಿ ಬೈಬಲ್‌ ಅಧ್ಯಯನಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಪ್ರತಿ ಕುಟುಂಬಕ್ಕೂ ಒಂದು ಬೈಬಲ್‌ ಅಧ್ಯಯನವನ್ನು ಸಾಕ್ಷಿಗಳು ಸಂತೋಷದಿಂದ ಏರ್ಪಡಿಸಿದರು.

ಅಷ್ಟರ ವರೆಗೆ ಮರ್ಸಾಥಾಸ್‌ ಸತ್ಯವನ್ನು ಕಲಿಯಲು ಬಯಸಿರಲಿಲ್ಲ. ಆಕೆಗೆ ಬೈಬಲ್‌ ಬೋಧನೆಗಳು ಇಷ್ಟವಿರಲಿಲ್ಲ ಎಂದೇನಿಲ್ಲ. ಆಕೆಗೆ ಮನುಷ್ಯರ ಭಯವಿತ್ತು ಅಷ್ಟೇ. ಆ ಸಮಯದಲ್ಲಿ ಯೆಹೋವನ ಸಾಕ್ಷಿಗಳ ಕೆಲಸವನ್ನು ಸ್ಪೇನ್‌ನಲ್ಲಿ ನಿಷೇಧಿಸಲಾಗಿತ್ತು. ಆದ್ದರಿಂದ ಅಧಿಕಾರಿಗಳು ನಮ್ಮ ಮಕ್ಕಳನ್ನು ಶಾಲೆಯಿಂದ ಹೊರಹಾಕುವರು ಮತ್ತು ಸಮಾಜವು ನಮ್ಮನ್ನು ತಿರಸ್ಕರಿಸುವುದೆಂದು ಆಕೆ ನೆನಸುತ್ತಿದ್ದಳು. ಆದರೆ ಯಾವಾಗ ಇಡೀ ಕುಟುಂಬವು ಸತ್ಯವನ್ನು ಸ್ವೀಕರಿಸಿತೋ ಆಗ ಆಕೆ ಕೂಡ ಅಧ್ಯಯನಕ್ಕೆ ಒಪ್ಪಿಕೊಂಡಳು.

ಎರಡು ವರ್ಷಗಳೊಳಗೆ ನನ್ನ ಕುಟುಂಬದ 40 ಮಂದಿ ಸದಸ್ಯರು ಸಾಕ್ಷಿಗಳಾದರು ಮತ್ತು ದೇವರನ್ನು ಸೇವಿಸಲು ತಾವು ಮಾಡಿಕೊಂಡ ಸಮರ್ಪಣೆಯನ್ನು ದೀಕ್ಷಾಸ್ನಾನದ ಮೂಲಕ ತೋರಿಸಿದರು. ಹೌದು, ಜೀವನದಲ್ಲಿ ನನಗಿದ್ದ ಗುರಿ ಮತ್ತು ಉದ್ದೇಶ ಈಗ ನನ್ನ ಕುಟುಂಬದವರಿಗೂ ಇತ್ತು. ಜೀವನದಲ್ಲಿ ನಿಜವಾಗಿ ಸಾರ್ಥಕವಾದದ್ದೇನನ್ನೋ ಸಾಧಿಸಿದ್ದೇನೆಂಬ ಅನಿಸಿಕೆ ನನಗಾಯಿತು. ಹೇರಳವಾದ ಆಧ್ಯಾತ್ಮಿಕ ಸಂಪತ್ತಿನಿಂದ ನಾವು ಆಶೀರ್ವದಿಸಲ್ಪಟ್ಟೆವು.

ಪ್ರಾಯಸಂದಂತೆ ಜೀವನ ಹೆಚ್ಚು ಸಂಪನ್ನವಾಯಿತು

ಮುಂದಿನ 20 ವರ್ಷಗಳ ತನಕ ನಾನು ನಮ್ಮ ಎರಡು ಮಕ್ಕಳನ್ನು ಬೆಳೆಸುವುದರ ಕಡೆಗೆ ಮತ್ತು ಸ್ಥಳಿಕ ಸಭೆಗೆ ಸಹಾಯ ಮಾಡುವುದರ ಕಡೆಗೆ ಹೆಚ್ಚು ಗಮನಹರಿಸಿದೆ. ನಾನು ಮತ್ತು ಮರ್ಸಾಥಾಸ್‌ ಲೊಗ್ರೊನೊ ನಗರಕ್ಕೆ ಸ್ಥಳಾಂತರಿಸಿದಾಗ, ಅಲ್ಲಿ ಸುಮಾರು 1,00,000 ಜನಸಂಖ್ಯೆಯಿದ್ದು ಕೇವಲ 20 ಮಂದಿ ಸಾಕ್ಷಿಗಳಿದ್ದರು. ಸ್ವಲ್ಪ ಸಮಯದಲ್ಲೇ ಸಭೆಯಲ್ಲಿ ನನಗೆ ಹಲವಾರು ಜವಾಬ್ದಾರಿಗಳು ದೊರೆತವು.

ಅನಂತರ ನಾನು 56 ವರ್ಷದವನಾಗಿದ್ದಾಗ, ನಾನು ಕೆಲಸಮಾಡುತ್ತಿದ್ದ ಕಾರ್ಖಾನೆ ಅನಿರೀಕ್ಷಿತವಾಗಿ ಮುಚ್ಚಿಕೊಂಡಿತು. ನಾನು ನಿರುದ್ಯೋಗಿಯಾದೆ. ಬದಲಾದ ನನ್ನ ಪರಿಸ್ಥಿತಿಯನ್ನು ಸದುಪಯೋಗಿಸಿಕೊಳ್ಳುತ್ತಾ ನಾನು ಪಯನೀಯರನಾದೆ. ಏಕೆಂದರೆ, ಪೂರ್ಣಸಮಯದ ಶುಶ್ರೂಷಕನಾಗುವ ಬಯಕೆ ನನಗೆ ಮೊದಲಿನಿಂದಲೂ ಇತ್ತು. ನನಗೆ ಸ್ವಲ್ಪವೇ ಪಿಂಚಣಿ ಸಿಗುತ್ತಿದ್ದರಿಂದ ಜೀವನ ಸಾಗಿಸುವುದು ಕಷ್ಟವಾಗಿತ್ತು. ಅಂಶಕಾಲಿಕ ಕೆಲಸವನ್ನು ಮಾಡುವ ಮೂಲಕ ಮರ್ಸಾಥಾಸ್‌ ಸಹಾಯ ಮಾಡಿದಳು. ನಾವು ಕುಟುಂಬವನ್ನು ಪರಾಮರಿಸಲು ಶಕ್ತರಾದೆವು ಮತ್ತು ನಮಗೆಂದೂ ಅವಶ್ಯ ವಸ್ತುಗಳ ಕೊರತೆಯಾಗಲಿಲ್ಲ. ನಾನೀಗಲೂ ಪಯನೀಯರನಾಗಿದ್ದೇನೆ ಮತ್ತು ಆಕೆ ಸಾರುವ ಕೆಲಸವನ್ನು ತುಂಬಾ ಆನಂದಿಸುತ್ತಾ, ಆಗಾಗ್ಗೆ ಆಕ್ಸಿಲಿಯರಿ ಪಯನೀಯರ್‌ ಸೇವೆಮಾಡುತ್ತಾಳೆ.

ಮರ್ಸಾಥಾಸ್‌ ಕೆಲವು ವರ್ಷಗಳ ಮುಂಚೆ, ಮೆರ್ಶಾ ಎಂಬಾಕೆಗೆ ನಮ್ಮ ಪತ್ರಿಕೆಗಳನ್ನು ಕ್ರಮವಾಗಿ ಕೊಡುತ್ತಿದ್ದಳು. ಮೆರ್ಶಾ ಚಿಕ್ಕವಳಿದ್ದಾಗ ಬೈಬಲನ್ನು ಅಧ್ಯಯನ ಮಾಡಿದ್ದಳು. ಆಕೆ ನಮ್ಮ ಪ್ರಕಾಶನಗಳನ್ನು ಆಸಕ್ತಿಯಿಂದ ಓದುತ್ತಿದ್ದಳು ಮತ್ತು ಆಕೆಗೆ ಬೈಬಲ್‌ ಸತ್ಯದ ಬಗ್ಗೆ ಇನ್ನೂ ಗಣ್ಯತೆಯಿರುವುದನ್ನು ಮರ್ಸಾಥಾಸ್‌ ಗಮನಿಸಿದಳು. ಕೊನೆಗೆ ಮೆರ್ಶಾ ಬೈಬಲ್‌ ಅಧ್ಯಯನವನ್ನು ಸ್ವೀಕರಿಸಿ ಉತ್ತಮ ಪ್ರಗತಿ ಮಾಡಲಾರಂಭಿಸಿದಳು. ಆದರೆ ಅವಳ ಗಂಡನಾದ ಬಿತಾಂಟ ತುಂಬಾ ಕುಡಿಯುತ್ತಿದ್ದರಿಂದ ಅವನನ್ನು ಖಾಯಂ ಆಗಿ ಯಾರೂ ಕೆಲಸಕ್ಕಿಟ್ಟುಕೊಳ್ಳುತ್ತಿರಲಿಲ್ಲ. ಫಲಿತಾಂಶವಾಗಿ ಅವನು ಆಕೆಗೆ ಹಣ ಕೊಡುತ್ತಿರಲಿಲ್ಲ. ಮದ್ಯದ ದುರುಪಯೋಗದಿಂದಾಗಿ ಅವರ ವಿವಾಹವು ಮುರಿದುಬೀಳುವ ಸ್ಥಿತಿಯಲ್ಲಿತ್ತು.

ಬಿತಾಂಟನನ್ನು ಒಮ್ಮೆ ನನ್ನೊಂದಿಗೆ ಮಾತನಾಡಿಸುವಂತೆ ನನ್ನ ಪತ್ನಿ, ಮೆರ್ಶಾಗೆ ಹೇಳಿದಳು ಮತ್ತು ಕೊನೆಯಲ್ಲಿ ಆತ ಒಪ್ಪಿಕೊಂಡನು. ಹಲವು ಭೇಟಿಗಳ ನಂತರ ಆತ ಬೈಬಲ್‌ ಅಧ್ಯಯನವನ್ನು ಸ್ವೀಕರಿಸಿದನು. ಬಿತಾಂಟನು ಬದಲಾಗತೊಡಗಿದನು. ಮೊದಲು, ಕೆಲವು ದಿನಗಳ ತನಕ ಕುಡಿಯುವುದನ್ನು ನಿಲ್ಲಿಸಿದನು. ತದನಂತರ ಒಂದು ವಾರ ಇಲ್ಲವೇ ಅದಕ್ಕಿಂತ ಹೆಚ್ಚು ದಿನಗಳ ತನಕ ಕುಡಿಯುವುದನ್ನು ಬಿಟ್ಟನು. ಕ್ರಮೇಣ ಮದ್ಯಪಾನ ಮಾಡುವುದನ್ನು ಪೂರ್ತಿ ನಿಲ್ಲಿಸಿದನು. ಅವನ ತೋರಿಕೆಯಲ್ಲೂ ಸುಧಾರಣೆಯಾಗತೊಡಗಿತು. ಅವನ ಕುಟುಂಬ ಮತ್ತೆ ಒಂದಾಯಿತು. ಪತ್ನಿ ಮತ್ತು ಮಗಳ ಸಮೇತ ಅವನ ಇಡೀ ಕುಟುಂಬವು, ಈಗ ಅವರೆಲ್ಲಿ ನೆಲೆಸಿದ್ದಾರೋ ಆ ಕೆನರಿ ದ್ವೀಪದಲ್ಲಿರುವ ಚಿಕ್ಕ ಸಭೆಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ.

ನನ್ನ ಅರ್ಥಭರಿತ ಜೀವನದೆಡೆಗಿನ ಹಿನ್ನೋಟ

ಬಹಳ ವರ್ಷಗಳ ಮುಂಚೆಯೇ ಬೈಬಲ್‌ ಸತ್ಯಗಳನ್ನು ಕಲಿತ ನಮ್ಮ ಸಂಬಂಧಿಕರಲ್ಲಿ ಕೆಲವರು ಮೃತಪಟ್ಟಿದ್ದಾರೆ. ಆದರೆ ಈಗಲೂ ನಮ್ಮ ಬಂಧುಬಳಗದವರ ಸಂಖ್ಯೆ ಹೆಚ್ಚಾಗುತ್ತಿದೆ. ಯೆಹೋವನು ನಮ್ಮನ್ನು ಸಮೃದ್ಧವಾಗಿ ಆಶೀರ್ವದಿಸಿದ್ದಾನೆ. (ಜ್ಞಾನೋ. 10:22) 40 ವರ್ಷಗಳ ಮುಂಚೆ ತಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ಬೈಬಲನ್ನು ಅಧ್ಯಯನ ಮಾಡಲು ಆರಂಭಿಸಿದವರಲ್ಲಿ ಹೆಚ್ಚಿನವರು ಈಗಲೂ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವೆಸಲ್ಲಿಸುತ್ತಿರುವುದನ್ನು ನೋಡುವುದು ಎಷ್ಟು ಸಂತಸದಾಯಕ!

ಈಗ ನನ್ನ ರಕ್ತ ಸಂಬಂಧಿಗಳಲ್ಲಿ ಬಹಳಷ್ಟು ಮಂದಿ ಸಾಕ್ಷಿಗಳಾಗಿದ್ದಾರೆ. ಅವರಲ್ಲಿ ಅನೇಕರು ಹಿರಿಯರಾಗಿ, ಶುಶ್ರೂಷಾ ಸೇವಕರಾಗಿ ಮತ್ತು ಪಯನೀಯರರಾಗಿ ಸೇವೆಸಲ್ಲಿಸುತ್ತಿದ್ದಾರೆ. ನನ್ನ ಹಿರಿಯ ಮಗ ಮತ್ತು ಅವನ ಪತ್ನಿ, ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸ್‌ನಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ನಾನು ಸಾಕ್ಷಿಯಾದಾಗ ಸ್ಪೇನ್‌ನಲ್ಲಿ ಸುಮಾರು 3,000 ಮಂದಿ ಸಾಕ್ಷಿಗಳಿದ್ದರು. ಈಗ 1,00,000ಕ್ಕಿಂತ ಹೆಚ್ಚು ಮಂದಿಯಿದ್ದಾರೆ. ನಾನು ಪೂರ್ಣಸಮಯದ ಶುಶ್ರೂಷೆಯನ್ನು ಬಹಳಷ್ಟು ಆನಂದಿಸುತ್ತೇನೆ. ಆತನ ಸೇವೆಯಲ್ಲಿ ಅದ್ಭುತವಾದ ಜೀವನವನ್ನು ಕಳೆಯುವ ಅವಕಾಶ ಕೊಟ್ಟದ್ದಕ್ಕಾಗಿ ನಾನು ದೇವರಿಗೆ ತುಂಬ ಆಭಾರಿ. ನನ್ನ ಶಾಲಾ ಶಿಕ್ಷಣ ಕಡಿಮೆಯಾಗಿದ್ದರೂ ಆಗಾಗ್ಗೆ ನಾನು ಬದಲಿ ಸರ್ಕಿಟ್‌ ಮೇಲ್ವಿಚಾರಕನಾಗಿ ಸೇವೆಸಲ್ಲಿಸಲು ಶಕ್ತನಾಗಿದ್ದೇನೆ.

ನಾನೆಲ್ಲಿ ಹುಟ್ಟಿಬೆಳೆದೆನೋ ಆ ಗ್ರಾಮ ಪೂರ್ತಿ ನಿರ್ಜನವಾಗಿದೆಯೆಂದು ಕೆಲವು ವರ್ಷಗಳ ಹಿಂದೆ ನನಗೆ ತಿಳಿದುಬಂತು. ಬಡತನದಿಂದಾಗಿ ಜನರು ತಮ್ಮ ಗದ್ದೆಗಳನ್ನು ಮತ್ತು ಮನೆಗಳನ್ನು ಬಿಟ್ಟು ಉತ್ತಮ ಜೀವನವನ್ನು ಅರಸುತ್ತಾ ಬೇರೆಡೆಗೆ ಹೋಗಬೇಕಾಯಿತು. ಸಂತೋಷಕರ ಸಂಗತಿಯೇನೆಂದರೆ, ನನ್ನನ್ನೂ ಸೇರಿಸುತ್ತಾ ಅವರಲ್ಲಿ ಅನೇಕರು ಆಧ್ಯಾತ್ಮಿಕ ನಿಕ್ಷೇಪಗಳನ್ನು ಕಂಡುಕೊಂಡರು. ಜೀವನಕ್ಕೆ ಒಂದು ಅರ್ಥವಿದೆ ಮತ್ತು ಯೆಹೋವನ ಸೇವೆಮಾಡುವುದರಿಂದ ನಮ್ಮ ಕಲ್ಪನೆಗೂ ಮೀರಿದ ಆನಂದ ಸಿಗುತ್ತದೆಂದು ನಾವು ಕಲಿತೆವು.

[ಪುಟ 32ರಲ್ಲಿರುವ ಚಿತ್ರ]

ಸಹೋದರ ಮಾರ್ಟಿನಿಸ್‌ರವರ ಕುಟುಂಬ ಸದಸ್ಯರ ಪೈಕಿ ಸತ್ಯದಲ್ಲಿರುವವರು