ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಬಿಡುಗಡೆಗಾಗಿ ಯೆಹೋವನು ಮಾಡಿರುವುದೆಲ್ಲವನ್ನು ಮಾನ್ಯಮಾಡುತ್ತೀರೋ?

ನಿಮ್ಮ ಬಿಡುಗಡೆಗಾಗಿ ಯೆಹೋವನು ಮಾಡಿರುವುದೆಲ್ಲವನ್ನು ಮಾನ್ಯಮಾಡುತ್ತೀರೋ?

ನಿಮ್ಮ ಬಿಡುಗಡೆಗಾಗಿ ಯೆಹೋವನು ಮಾಡಿರುವುದೆಲ್ಲವನ್ನು ಮಾನ್ಯಮಾಡುತ್ತೀರೋ?

“ಇಸ್ರಾಯೇಲ್ಯರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ, ಏಕೆಂದರೆ ಆತನು ತನ್ನ ಜನರ ಕಡೆಗೆ ಗಮನವನ್ನು ತಿರುಗಿಸಿ ಅವರಿಗೆ ಬಿಡುಗಡೆಯನ್ನು ಉಂಟುಮಾಡಿದ್ದಾನೆ.”—ಲೂಕ 1:68.

1, 2. ನಮ್ಮ ಈಗಿನ ಸ್ಥಿತಿಯ ಗಂಭೀರತೆಯನ್ನು ಹೇಗೆ ದೃಷ್ಟಾಂತಿಸಬಹುದು, ಮತ್ತು ಯಾವ ಪ್ರಶ್ನೆಗಳನ್ನು ನಾವು ಚರ್ಚಿಸಲಿದ್ದೇವೆ?

ಅಸ್ವಸ್ಥತೆಯಿಂದಾಗಿ ನೀವು ಆಸ್ಪತ್ರೆಯಲ್ಲಿದ್ದೀರೆಂದು ಭಾವಿಸಿ. ನಿಮ್ಮ ವಾರ್ಡ್‌ನಲ್ಲಿರುವ ಎಲ್ಲಾ ರೋಗಿಗಳಿಗೂ ನಿಮಗಿರುವಂಥದ್ದೇ ರೋಗವಿದೆ. ಅದಕ್ಕೆ ಈ ತನಕ ಯಾವುದೇ ಮದ್ದಿಲ್ಲ. ಆದ್ದರಿಂದ ಮರಣ ಖಚಿತ. ಆದರೆ ಒಬ್ಬ ವೈದ್ಯನು ಅದಕ್ಕೆ ಮದ್ದು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾನೆಂದು ನಿಮಗೆ ಗೊತ್ತಾದಾಗ ನಿಮ್ಮಲ್ಲಿ ಆಶಾಕಿರಣ ಮೂಡುತ್ತದೆ. ಆ ವೈದ್ಯನ ಸಂಶೋಧನೆ ಎಲ್ಲಿಯವರೆಗೆ ಮುಟ್ಟಿದೆ ಎಂಬ ಸುದ್ದಿಗಾಗಿ ನೀವು ಕಾಯುತ್ತಿರುತ್ತೀರಿ. ಕೊನೆಗೂ ಒಂದು ದಿನ ಆ ರೋಗಕ್ಕೆ ಮದ್ದು ಸಿಕ್ಕೇ ಬಿಡುತ್ತದೆ! ಆ ವೈದ್ಯನು ಮದ್ದನ್ನು ಕಂಡುಹಿಡಿಯಲು ಮಹಾ ತ್ಯಾಗಗಳನ್ನು ಮಾಡಿದ್ದಾನೆ. ನಿಮ್ಮ ಪ್ರತಿಕ್ರಿಯೆ ಹೇಗಿರುವುದು? ನಿಮ್ಮನ್ನೂ ನಿಮ್ಮಂತಿರುವ ಇತರರನ್ನೂ ಸಾವಿನಂಚಿನಿಂದ ಪಾರುಮಾಡಿದ ಆ ವ್ಯಕ್ತಿಯ ಕಡೆಗಿನ ಗೌರವ ಹಾಗೂ ಗಣ್ಯತೆಯಿಂದ ನಿಮ್ಮ ಹೃದಯ ತುಂಬಿತುಳುಕುವುದಂತೂ ಖಂಡಿತ.

2 ಈ ಸನ್ನಿವೇಶವನ್ನು ಅತಿಶಯಿಸಿ ಹೇಳಲಾಗಿರುವಂತೆ ತೋರಬಹುದು. ಆದರೆ ವಾಸ್ತವದಲ್ಲಿ ಇಂಥದ್ದೇ ಸನ್ನಿವೇಶದಲ್ಲಿ ನಾವೆಲ್ಲರೂ ಇದ್ದೇವೆ. ನಮ್ಮಲ್ಲಿ ಪ್ರತಿಯೊಬ್ಬರೂ ಇಲ್ಲಿ ವರ್ಣಿಸಲಾದಂಥ ಸ್ಥಿತಿಗಿಂತ ಎಷ್ಟೋ ಹೆಚ್ಚು ಗಂಭೀರವಾದ ಸ್ಥಿತಿಯಲ್ಲಿದ್ದೇವೆ. ಹೀಗಿರುವುದರಿಂದ, ನಮಗೊಬ್ಬ ರಕ್ಷಕನ ತೀವ್ರ ಅಗತ್ಯವಿದೆ. (ರೋಮನ್ನರಿಗೆ 7:24 ಓದಿ.) ಈ ಬಿಡುಗಡೆಯನ್ನು ಸಾಧ್ಯಗೊಳಿಸಲು ಯೆಹೋವನು ಮತ್ತು ಅವನ ಮಗನು ಮಹತ್ತರ ತ್ಯಾಗಗಳನ್ನು ಮಾಡಿದ್ದಾರೆ. ನಾವೀಗ ನಾಲ್ಕು ಪ್ರಧಾನ ಪ್ರಶ್ನೆಗಳನ್ನು ಪರಿಗಣಿಸೋಣ. ನಮಗೆ ಬಿಡುಗಡೆ ಏಕೆ ಅಗತ್ಯ? ನಮ್ಮ ಬಿಡುಗಡೆಗಾಗಿ ಯೇಸು ಯಾವ ತ್ಯಾಗ ಮಾಡಬೇಕಾಯಿತು? ಯೆಹೋವನು ಯಾವ ತ್ಯಾಗ ಮಾಡಬೇಕಾಯಿತು? ಮತ್ತು ದೈವಿಕ ಬಿಡುಗಡೆಯನ್ನು ನಾವು ಮಾನ್ಯಮಾಡುತ್ತೇವೆಂದು ಹೇಗೆ ತೋರಿಸಬಲ್ಲೆವು?

ಬಿಡುಗಡೆ ನಮಗೇಕೆ ಅಗತ್ಯ?

3. ಪಾಪವು ಹೇಗೆ ಸಾಂಕ್ರಾಮಿಕ ರೋಗಕ್ಕೆ ಹೋಲುತ್ತದೆ?

3 ಇತ್ತೀಚಿನ ಒಂದು ವರದಿಗನುಸಾರ, 1918ರಲ್ಲಿ ಬಂದ ಸ್ಪ್ಯಾನಿಷ್‌ ಇನ್‌ಫ್ಲುಯೆಂಜಾ ಎಂಬ ಜ್ವರವು ಮಾನವ ಇತಿಹಾಸದಲ್ಲೇ ಅತ್ಯಂತ ಘೋರ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿತ್ತು. ಅದು ಲಕ್ಷಗಟ್ಟಲೆ ಜನರನ್ನು ಬಲಿತೆಗೆದುಕೊಂಡಿತು. ಇತರ ರೋಗಗಳು ಇನ್ನೂ ಹೆಚ್ಚು ಮಾರಕವಾಗಿವೆ. ಅವುಗಳಿಂದ ಕೆಲವೇ ಜನರು ಸೋಂಕಿತರಾದರೂ, ಅವರಲ್ಲಿ ಸತ್ತವರ ಸಂಖ್ಯೆ ಜಾಸ್ತಿಯಿರುತ್ತದೆ. * ನಾವೀಗ ಪಾಪವನ್ನು ಸಾಂಕ್ರಾಮಿಕ ರೋಗದೊಂದಿಗೆ ಹೋಲಿಸೋಣ. ರೋಮನ್ನರಿಗೆ 5:12ರಲ್ಲಿರುವ ಈ ಮಾತುಗಳನ್ನು ನೆನಪಿಗೆ ತನ್ನಿ: “ಒಬ್ಬ ಮನುಷ್ಯನಿಂದ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿದಂತೆಯೇ, ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು.” ಪಾಪದ ಸೋಂಕಿನ ಪ್ರಮಾಣವು 100 ಪ್ರತಿಶತ. ಏಕೆಂದರೆ ಎಲ್ಲ ಅಪರಿಪೂರ್ಣ ಮಾನವರು ಪಾಪಮಾಡುತ್ತಾರೆ. (ರೋಮನ್ನರಿಗೆ 3:23 ಓದಿ.) ಅದರಿಂದ ಎಷ್ಟು ಮಂದಿ ಸಾಯುತ್ತಾರೆ? ಪಾಪವು ‘ಎಲ್ಲರಿಗೆ’ ಮರಣವನ್ನು ತರುತ್ತದೆಂದು ಪೌಲನು ಬರೆದನು.

4. ನಮ್ಮ ಜೀವನಾಯುಷ್ಯದ ಕುರಿತು ಯೆಹೋವನ ದೃಷ್ಟಿಕೋನವೇನು, ಮತ್ತು ಇಂದು ಅನೇಕರ ದೃಷ್ಟಿಕೋನ ಹೇಗೆ ಭಿನ್ನವಾಗಿದೆ?

4 ಇಂದು ಅನೇಕರು ಪಾಪ ಮತ್ತು ಮರಣವನ್ನು ಸಾಮಾನ್ಯ ಸಂಗತಿಯೆಂಬಂತೆ ವೀಕ್ಷಿಸುತ್ತಾರೆ. ಅವರು ಅಕಾಲಿಕ ಮರಣದ ಬಗ್ಗೆ ಸ್ವಲ್ಪ ಚಿಂತಿಸುತ್ತಾರಾದರೂ ವೃದ್ಧಾಪ್ಯದಿಂದ ಬರುವ ಮರಣವನ್ನು ಸ್ವಾಭಾವಿಕ ಎಂದೆಣಿಸುತ್ತಾರೆ. ಅವರು ಈ ವಿಷಯದಲ್ಲಿ ಸೃಷ್ಟಿಕರ್ತನ ದೃಷ್ಟಿಕೋನವನ್ನು ತುಂಬ ಸುಲಭವಾಗಿ ಮರೆತುಬಿಡುತ್ತಾರೆ. ವಾಸ್ತವದಲ್ಲಿ ಯಾವುದೇ ಮಾನವನು ಯೆಹೋವನ ದೃಷ್ಟಿಯಲ್ಲಿ, ಪೂರ್ತಿ “ಒಂದು ದಿನ” ಕೂಡ ಜೀವಿಸಿಲ್ಲ. ನಮ್ಮ ಜೀವನಾಯುಷ್ಯವು ಆತನು ಉದ್ದೇಶಿಸಿದ್ದಕ್ಕಿಂತ ತೀರಾ ಕಡಿಮೆ. (2 ಪೇತ್ರ 3:8) ಆದ್ದರಿಂದಲೇ, ನಮ್ಮ ಬದುಕು ಹುಲ್ಲು ಹಾಗೂ ಉಸಿರಿನಂತೆ ಕ್ಷಣಿಕವಾದದ್ದೆಂದು ದೇವರ ವಾಕ್ಯ ಹೇಳುತ್ತದೆ. (ಕೀರ್ತ. 39:5; 1 ಪೇತ್ರ 1:24) ಈ ದೃಷ್ಟಿಕೋನವನ್ನು ನಾವು ಮನಸ್ಸಿನಲ್ಲಿಡುವ ಅಗತ್ಯವಿದೆ. ಏಕೆ? ನಮಗೆ ತಗಲಿರುವ “ರೋಗದ” ತೀಕ್ಷ್ಣತೆಯನ್ನು ನಾವು ಅರ್ಥಮಾಡಿಕೊಳ್ಳುವಲ್ಲಿ ಅದಕ್ಕಿರುವ “ಮದ್ದು” ಅಂದರೆ ನಮ್ಮ ಬಿಡುಗಡೆಯ ಮೌಲ್ಯವನ್ನು ಹೆಚ್ಚು ಮಾನ್ಯಮಾಡಬಲ್ಲೆವು.

5. ಪಾಪದಿಂದಾಗಿ ನಮಗೆ ಯಾವ ಹಾನಿಯಾಗಿದೆ?

5 ಪಾಪ ಮತ್ತು ಅದರ ಪರಿಣಾಮಗಳ ತೀಕ್ಷ್ಣತೆಯನ್ನು ಗ್ರಹಿಸಿಕೊಳ್ಳಬೇಕಾದರೆ ಮೊದಲು ಅದು ನಮಗೇನು ಹಾನಿಮಾಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಮೊದಮೊದಲು ಅದನ್ನು ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟವೇ. ಏಕೆಂದರೆ ನಾವು ಅದರಿಂದಾಗಿ ಏನನ್ನು ಕಳೆದುಕೊಂಡಿದ್ದೇವೋ ಅದನ್ನು ಹಿಂದೆಂದೂ ಅನುಭವಿಸಿಯೇ ಇಲ್ಲ. ಆದಾಮ ಹವ್ವರು ಆರಂಭದಲ್ಲಿ ಪರಿಪೂರ್ಣ ಮಾನವ ಜೀವನವನ್ನು ಆನಂದಿಸಿದರು. ಪರಿಪೂರ್ಣ ದೇಹ ಮತ್ತು ಮನಸ್ಸನ್ನು ಹೊಂದಿದ್ದ ಅವರು ತಮ್ಮ ಯೋಚನೆಗಳು, ಭಾವನೆಗಳು ಮತ್ತು ಕ್ರಿಯೆಗಳನ್ನು ನಿಯಂತ್ರಿಸಲು ಶಕ್ತರಾಗಿದ್ದರು. ಹೀಗೆ ಅವರು ಯೆಹೋವ ದೇವರ ಸೇವಕರೋಪಾದಿ ಅತ್ಯದ್ಭುತ ಗುಣಗಳನ್ನು ಬೆಳೆಸಿಕೊಳ್ಳುತ್ತಾ ಇರಸಾಧ್ಯವಿತ್ತು. ಅದಕ್ಕೆ ಬದಲಾಗಿ ಅವರು ಪರಿಪೂರ್ಣ ಮಾನವ ಜೀವವೆಂಬ ಈ ಅಮೂಲ್ಯ ಕೊಡುಗೆಯನ್ನು ಎಸೆದುಬಿಟ್ಟರು. ಆದಾಮ ಹವ್ವರು ಯೆಹೋವನ ವಿರುದ್ಧ ಪಾಪ ಮಾಡಿದ್ದರಿಂದಾಗಿ ಅವರು ಮಾತ್ರವಲ್ಲ ಅವರ ಸಂತತಿಯವರು ಕೂಡ ಯೆಹೋವನು ಅವರಿಗಾಗಿ ಉದ್ದೇಶಿಸಿದಂಥ ರೀತಿಯ ಜೀವನವನ್ನು ಕಳೆದುಕೊಂಡರು. (ಆದಿ. 3:16-19) ಅದೇ ಸಮಯದಲ್ಲಿ, ಅವರು ನಾವೀಗ ಚರ್ಚಿಸುತ್ತಿರುವ ಆ ಭಯಂಕರ “ರೋಗವನ್ನು” ಸ್ವತಃ ತಮ್ಮ ಮೇಲೆ ಮಾತ್ರವಲ್ಲ ನಮ್ಮ ಮೇಲೂ ಬರಮಾಡಿದರು. ನ್ಯಾಯವಾಗಿಯೇ ಯೆಹೋವನು ಅವರನ್ನು ಶಿಕ್ಷಿಸಿದನು. ನಮಗಾದರೋ ಆತನು ಬಿಡುಗಡೆಯ ನಿರೀಕ್ಷೆಯನ್ನು ಕೊಡುತ್ತಾನೆ.—ಕೀರ್ತ. 103:10.

ನಮ್ಮ ಬಿಡುಗಡೆಗಾಗಿ ಯೇಸು ಯಾವ ತ್ಯಾಗ ಮಾಡಿದನು?

6, 7. (ಎ) ನಮ್ಮ ಬಿಡುಗಡೆಗಾಗಿ ಮಹಾ ತ್ಯಾಗ ಮಾಡಬೇಕಾಗುವುದೆಂದು ಯೆಹೋವನು ಆರಂಭದಲ್ಲೇ ತೋರಿಸಿದ್ದು ಹೇಗೆ? (ಬಿ) ಹೇಬೆಲನು ಹಾಗೂ ಧರ್ಮಶಾಸ್ತ್ರ ಸಿಗುವ ಮುಂಚೆ ಜೀವಿಸಿದ್ದ ಇತರ ಪೂರ್ವಿಕರು ಅರ್ಪಿಸಿದ ಯಜ್ಞಗಳಿಂದ ನಾವೇನನ್ನು ಕಲಿಯಬಲ್ಲೆವು?

6 ಆದಾಮ ಹವ್ವರ ಸಂತತಿಯನ್ನು ಬಿಡುಗಡೆ ಮಾಡಲು ಮಹಾ ತ್ಯಾಗವನ್ನು ಮಾಡಬೇಕಾಗುವುದೆಂದು ಯೆಹೋವನಿಗೆ ತಿಳಿದಿತ್ತು. ಆದಿಕಾಂಡ 3:15ರಲ್ಲಿ ದಾಖಲಾಗಿರುವ ಪ್ರವಾದನೆಯಿಂದ ಆ ಬಿಡುಗಡೆಯನ್ನು ಒದಗಿಸುವುದರಲ್ಲಿ ಏನು ಒಳಗೂಡಿರಲಿತ್ತೆಂಬುದು ತಿಳಿದುಬರುತ್ತದೆ. ಯೆಹೋವನು ‘ಸಂತತಿ’ ಅಂದರೆ ಒಬ್ಬ ರಕ್ಷಕನನ್ನು ಒದಗಿಸಲಿದ್ದನು. ಅವನೊಂದು ದಿನ ಸೈತಾನನನ್ನು ನಾಶಗೊಳಿಸಲಿದ್ದನು. ಆದರೆ ಅದಕ್ಕೂ ಮುಂಚೆ ಆ ರಕ್ಷಕನೇ ಬಹಳ ಕಷ್ಟಗಳನ್ನು ಅನುಭವಿಸಲಿದ್ದನು. ಹೀಗೆ ಸಾಂಕೇತಿಕ ಅರ್ಥದಲ್ಲಿ ಅವನ ಹಿಮ್ಮಡಿಗೆ ಗಾಯವಾಗಲಿತ್ತು. ಒಬ್ಬ ವ್ಯಕ್ತಿಗೆ ಹಿಮ್ಮಡಿಯಲ್ಲಿ ಗಾಯವಾಗುವಲ್ಲಿ ಅದು ನೋವನ್ನುಂಟುಮಾಡುತ್ತದೆ ಮಾತ್ರವಲ್ಲ ಅವನ ಕೆಲಸ ಕಾರ್ಯಗಳನ್ನು ಸೀಮಿತಗೊಳಿಸುತ್ತದೆ ಎಂಬುದು ನಮಗೆ ತಿಳಿದಿದೆ. ಆದರೆ ಈ ಪ್ರವಾದನೆಯಲ್ಲಿ ಅದರ ಅರ್ಥವೇನು? ಯೆಹೋವನಿಂದ ಆಯ್ಕೆಯಾದವನು ಏನನ್ನು ತಾಳಿಕೊಳ್ಳಬೇಕಿತ್ತು?

7 ಮಾನವಕುಲವನ್ನು ಪಾಪದಿಂದ ರಕ್ಷಿಸಲಿಕ್ಕಾಗಿ, ಆ ರಕ್ಷಕನು ದೋಷ ಪರಿಹಾರವನ್ನು ಒಪ್ಪಿಸಬೇಕಿತ್ತು. ಇದು ಪಾಪದ ಪರಿಣಾಮಗಳನ್ನು ತೊಡೆದುಹಾಕಿ ಮಾನವರು ದೇವರೊಂದಿಗೆ ಸಮಾಧಾನದ ಸಂಬಂಧಕ್ಕೆ ಬರುವ ಮಾರ್ಗವಾಗಿರಲಿತ್ತು. ಅದರಲ್ಲಿ ಏನು ಒಳಗೂಡಿರಲಿತ್ತು? ಒಂದು ಯಜ್ಞವನ್ನು ಅರ್ಪಿಸಬೇಕಾಗುವುದೆಂದು ಆದಿಯಿಂದಲೇ ಸೂಚನೆಗಳಿದ್ದವು. ಪ್ರಥಮ ನಂಬಿಗಸ್ತ ಮಾನವನಾದ ಹೇಬೆಲನು ಯೆಹೋವನಿಗೆ ಪ್ರಾಣಿ ಯಜ್ಞಗಳನ್ನು ಅರ್ಪಿಸಿದನು ಮತ್ತು ಅವನಿಗೆ ದೈವಿಕ ಸಮ್ಮತಿ ದೊರಕಿತು. ತದನಂತರ ನೋಹ, ಅಬ್ರಹಾಮ, ಯಾಕೋಬ ಮತ್ತು ಯೋಬರೆಂಬ ದೇವಭೀರು ಪೂರ್ವಿಕರು ತದ್ರೀತಿಯ ಯಜ್ಞಗಳನ್ನು ಅರ್ಪಿಸಿದರು ಮತ್ತು ಅವುಗಳಿಂದ ದೇವರಿಗೆ ಸಂತೋಷವಾಯಿತು. (ಆದಿ. 4:4; 8:20, 21; 22:13; 31:54; ಯೋಬ 1:5) ಮೋಶೆಯ ಧರ್ಮಶಾಸ್ತ್ರವು ಯಜ್ಞಗಳ ವಿಷಯದಲ್ಲಿ ಜನರಿಗೆ ಹೆಚ್ಚಿನ ಅರಿವನ್ನು ಕೊಟ್ಟಿತು.

8. ವಾರ್ಷಿಕ ದೋಷಪರಿಹಾರಕ ದಿನದಂದು ಮಹಾ ಯಾಜಕನು ಏನು ಮಾಡುತ್ತಿದ್ದನು?

8 ಧರ್ಮಶಾಸ್ತ್ರವು ಅವಶ್ಯಪಡಿಸಿದ ಯಜ್ಞಗಳಲ್ಲಿ ವರ್ಷಕ್ಕೊಮ್ಮೆ ದೋಷಪರಿಹಾರಕ ದಿನದಂದು ಅರ್ಪಿಸಲಾಗುತ್ತಿದ್ದ ಯಜ್ಞಗಳು ಅತೀ ಪ್ರಾಮುಖ್ಯವಾಗಿದ್ದವು. ಆ ದಿನದಂದು ಮಹಾ ಯಾಜಕನು ಸಾಂಕೇತಿಕಾರ್ಥವುಳ್ಳ ಅನೇಕ ಕ್ರಮವಿಧಾನಗಳನ್ನು ಪೂರೈಸುತ್ತಿದ್ದನು. ಅವನು ಮೊದಲು ಯಾಜಕ ವರ್ಗಕ್ಕಾಗಿ ಮತ್ತು ತದನಂತರ ಯಾಜಕರಲ್ಲದ ಕುಲಗಳವರ ಪಾಪ ಪರಿಹಾರಕ್ಕಾಗಿ ಯೆಹೋವನಿಗೆ ಯಜ್ಞಗಳನ್ನು ಅರ್ಪಿಸುತ್ತಿದ್ದನು. ಅವನು ಅಂದು ದೇವಗುಡಾರ ಅಥವಾ ದೇವಾಲಯದ ಅತಿ ಪವಿತ್ರ ಸ್ಥಳವನ್ನು ಪ್ರವೇಶಿಸುತ್ತಿದ್ದನು. ಅದರೊಳಕ್ಕೆ ಅವನು ಕೇವಲ ವರ್ಷಕ್ಕೊಮ್ಮೆ ಪ್ರವೇಶಿಸಬಹುದಿತ್ತು. ಅಲ್ಲಿ ಹೋಗಿ ಅವನು, ಯಜ್ಞಗಳ ರಕ್ತವನ್ನು ಒಡಂಬಡಿಕೆಯ ಮಂಜೂಷದ ಮುಂದೆ ಚಿಮಿಕಿಸುತ್ತಿದ್ದನು. ಆ ಪವಿತ್ರ ಪೆಟ್ಟಿಗೆಯ ಮೇಲೆ, ಯೆಹೋವನ ಇರುವಿಕೆಯನ್ನು ಪ್ರತಿನಿಧಿಸುವ ಬೆಳ್ಳಗಿನ ಪ್ರಕಾಶಮಾನವಾದ ಮೇಘ ಕೆಲವೊಮ್ಮೆ ಕಾಣಿಸುತ್ತಿತ್ತು.—ವಿಮೋ. 25:22; ಯಾಜ. 16:1-30.

9. (ಎ) ದೋಷಪರಿಹಾರಕ ದಿನದಂದು ಮಹಾ ಯಾಜಕನು ಯಾರನ್ನು ಚಿತ್ರಿಸುತ್ತಿದ್ದನು, ಮತ್ತು ಅವನು ಅರ್ಪಿಸಿದ ಯಜ್ಞಗಳು ಏನನ್ನು ಪ್ರತಿನಿಧಿಸುತ್ತವೆ? (ಬಿ) ಅತಿ ಪವಿತ್ರ ಸ್ಥಳಕ್ಕೆ ಮಹಾ ಯಾಜಕನ ಪ್ರವೇಶವು ಏನನ್ನು ಮುನ್‌ಚಿತ್ರಿಸಿತು?

9 ಅಪೊಸ್ತಲ ಪೌಲನು ದೇವರಿಂದ ಪ್ರೇರಿತನಾಗಿ ಈ ಸಾಂಕೇತಿಕ ಕ್ರಮವಿಧಾನಗಳ ಅರ್ಥವನ್ನು ಪ್ರಕಟಪಡಿಸಿದನು. ಮಹಾ ಯಾಜಕನು ಮೆಸ್ಸೀಯನಾದ ಯೇಸು ಕ್ರಿಸ್ತನನ್ನು ಚಿತ್ರಿಸುತ್ತಾನೆ ಮತ್ತು ಯಜ್ಞಗಳ ಅರ್ಪಣೆ ಕ್ರಿಸ್ತನ ಯಜ್ಞಾರ್ಪಿತ ಮರಣವನ್ನು ಪ್ರತಿನಿಧಿಸಿತು ಎಂದವನು ತೋರಿಸಿದನು. (ಇಬ್ರಿ. 9:11-14) ಈ ಪರಿಪೂರ್ಣ ಯಜ್ಞವು, ಯಾಜಕ ವರ್ಗವಾಗಿರುವ 1,44,000 ಮಂದಿ ಕ್ರಿಸ್ತನ ಆತ್ಮಾಭಿಷಿಕ್ತ ಸಹೋದರರಿಗೆ ಮತ್ತು ‘ಬೇರೆ ಕುರಿಗಳಿಗೆ’ ಹೀಗೆ ಎರಡು ವರ್ಗಗಳ ಜನರಿಗೆ ನಿಜವಾದ ದೋಷಪರಿಹಾರವನ್ನು ಒದಗಿಸಲಿತ್ತು. (ಯೋಹಾ. 10:16) ಮಹಾ ಯಾಜಕನು ಅತಿ ಪವಿತ್ರ ಸ್ಥಳವನ್ನು ಪ್ರವೇಶಿಸುತ್ತಿದ್ದದ್ದು, ಯೇಸು ತನ್ನ ಯಜ್ಞದ ವಿಮೋಚನಾ ಮೌಲ್ಯವನ್ನು ಯೆಹೋವ ದೇವರ ಮುಂದೆ ಒಪ್ಪಿಸಲಿಕ್ಕಾಗಿ ಸ್ವರ್ಗಕ್ಕೆ ಪ್ರವೇಶಿಸುವುದನ್ನು ಮುನ್‌ಚಿತ್ರಿಸಿತು.—ಇಬ್ರಿ. 9:24, 25.

10. ಮೆಸ್ಸೀಯನು ಏನನ್ನು ಅನುಭವಿಸಲಿದ್ದಾನೆಂದು ಬೈಬಲ್‌ ಪ್ರವಾದನೆ ತೋರಿಸಿತು?

10 ಸ್ಪಷ್ಟವಾಗಿಯೇ, ಆದಾಮ ಹವ್ವರ ಸಂತತಿಯನ್ನು ಬಿಡುಗಡೆ ಮಾಡಲು ಮಹಾ ತ್ಯಾಗವು ಅಗತ್ಯವಾಗಿತ್ತು. ಮೆಸ್ಸೀಯನು ತನ್ನ ಜೀವವನ್ನೇ ತ್ಯಾಗ ಮಾಡಬೇಕಿತ್ತು! ಹೀಬ್ರು ಶಾಸ್ತ್ರವಚನಗಳ ಪ್ರವಾದಿಗಳು ಈ ಸತ್ಯದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದರು. ಉದಾಹರಣೆಗೆ, ‘ಅಭಿಷಿಕ್ತನಾದ ಪ್ರಭುವು ಅಪರಾಧವನ್ನು ನಿವಾರಿಸಲಿಕ್ಕೋಸ್ಕರ ಛೇದಿಸಲ್ಪಡುವನು’ ಇಲ್ಲವೇ ವಧಿಸಲ್ಪಡುವನು ಎಂದು ಪ್ರವಾದಿ ದಾನಿಯೇಲನು ನೇರವಾಗಿ ತಿಳಿಸಿದನು. (ದಾನಿ. 9:24-26) ಮೆಸ್ಸೀಯನು ಅಪರಿಪೂರ್ಣ ಮಾನವರ ಪಾಪಗಳನ್ನು ಹೊರುವಾಗ ಅವನನ್ನು ತಿರಸ್ಕರಿಸಲಾಗುವುದು, ಹಿಂಸಿಸಲಾಗುವುದು ಮತ್ತು ಗಾಯಗೊಳಿಸಲಾಗುವುದು ಅಂದರೆ ಕೊಲ್ಲಲಾಗುವುದು ಎಂದು ಯೆಶಾಯನು ಮುಂತಿಳಿಸಿದನು.—ಯೆಶಾ. 53:4, 5, 7.

11. ಯೆಹೋವನ ಮಗನು ನಮ್ಮ ಬಿಡುಗಡೆಗಾಗಿ ಸ್ವತಃ ತನ್ನನ್ನೇ ತ್ಯಾಗ ಮಾಡಲು ಯಾವ ವಿಧಗಳಲ್ಲಿ ಸಿದ್ಧಮನಸ್ಸನ್ನು ತೋರಿಸಿದನು?

11 ದೇವರ ಏಕೈಕಜಾತ ಪುತ್ರನಿಗೆ ನಮ್ಮ ಬಿಡುಗಡೆಗಾಗಿ ತಾನೆಷ್ಟು ತ್ಯಾಗ ಮಾಡಬೇಕೆಂಬುದು ಭೂಮಿಗೆ ಬರುವ ಮುಂಚೆಯೇ ಗೊತ್ತಿತ್ತು. ಅವನು ಬಹಳ ಕಷ್ಟಗಳನ್ನನುಭವಿಸಿ ನಂತರ ಕೊಲ್ಲಲ್ಪಡಲಿದ್ದನು. ಈ ಸತ್ಯಾಂಶಗಳನ್ನು ತಂದೆ ಅವನಿಗೆ ಕಲಿಸುತ್ತಿದ್ದಾಗ ಅವನು ಹಿಂದೆ ಸರಿದನೋ ಇಲ್ಲವೇ ದಂಗೆಯೆದ್ದನೋ? ಇಲ್ಲ, ಬದಲಾಗಿ ಅವನು ತಂದೆಯ ನಿರ್ದೇಶನಗಳಿಗೆ ಸಿದ್ಧಮನಸ್ಸಿನಿಂದ ಅಧೀನನಾದನು. (ಯೆಶಾ. 50:4-6) ಅದೇ ರೀತಿಯಲ್ಲಿ ಭೂಮಿಯ ಮೇಲಿದ್ದಾಗಲೂ ಯೇಸು ವಿಧೇಯತೆಯಿಂದ ತನ್ನ ತಂದೆಯ ಚಿತ್ತವನ್ನು ಮಾಡಿದನು. ಏಕೆ? ಇದಕ್ಕೆ ಒಂದು ಉತ್ತರ, “ನಾನು ತಂದೆಯನ್ನು ಪ್ರೀತಿಸುತ್ತೇನೆ” ಎಂಬ ಅವನ ಮಾತುಗಳಲ್ಲಿದೆ. ಇನ್ನೊಂದು ಉತ್ತರ, “ಒಬ್ಬನು ತನ್ನ ಸ್ನೇಹಿತರಿಗೋಸ್ಕರ ತನ್ನ ಪ್ರಾಣವನ್ನೇ ಒಪ್ಪಿಸಿಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾರಲ್ಲಿಯೂ ಇಲ್ಲ” ಎಂಬ ಅವನ ಮಾತುಗಳಲ್ಲಿದೆ. (ಯೋಹಾ. 14:31; 15:13) ಹೀಗೆ ನಮ್ಮ ಬಿಡುಗಡೆಯಲ್ಲಿ ಯೆಹೋವನ ಮಗನ ಪ್ರೀತಿಯು ಮಹತ್ತ್ವದ ಪಾತ್ರವಹಿಸುತ್ತದೆ. ಅವನು ತನ್ನ ಪರಿಪೂರ್ಣ ಮಾನವ ಜೀವವನ್ನು ತ್ಯಾಗ ಮಾಡಬೇಕಾಗಿ ಬಂದರೂ ನಮ್ಮ ಬಿಡುಗಡೆಗಾಗಿ ಅದನ್ನು ಸಂತೋಷದಿಂದ ಮಾಡಿದನು.

ನಮ್ಮ ಬಿಡುಗಡೆಗಾಗಿ ಯೆಹೋವನು ಯಾವ ತ್ಯಾಗ ಮಾಡಿದನು?

12. ವಿಮೋಚನಾ ಮೌಲ್ಯದ ಯಜ್ಞವು ಯಾರ ಚಿತ್ತದ ಅಭಿವ್ಯಕ್ತಿಯಾಗಿದೆ, ಮತ್ತು ಆತನದನ್ನು ಏಕೆ ಒದಗಿಸಿದನು?

12 ವಿಮೋಚನಾ ಮೌಲ್ಯದ ಯಜ್ಞವನ್ನು ಅರ್ಪಿಸಬೇಕೆಂದಾಗಲಿ, ಅದನ್ನು ಹೇಗೆ ಅರ್ಪಿಸಬೇಕೆಂದಾಗಲಿ ನಿರ್ಧರಿಸಿದ್ದು ಯೇಸುವಲ್ಲ. ಬದಲಾಗಿ, ಬಿಡುಗಡೆಯ ಈ ಮಾಧ್ಯಮವು ಯೆಹೋವನ ಚಿತ್ತದ ಮುಖ್ಯ ಅಂಶವಾಗಿತ್ತು. ದೇವಾಲಯದಲ್ಲಿ ಯಜ್ಞಗಳನ್ನು ಅರ್ಪಿಸಲು ಬಳಸಲಾಗುತ್ತಿದ್ದ ಯಜ್ಞವೇದಿಯು ಯೆಹೋವನ ಚಿತ್ತವನ್ನು ಪ್ರತಿನಿಧಿಸುತ್ತದೆಂದು ಅಪೊಸ್ತಲ ಪೌಲನು ಸೂಚಿಸಿದನು. (ಇಬ್ರಿ. 10:10) ಆದ್ದರಿಂದ ಕ್ರಿಸ್ತನ ಯಜ್ಞದ ಮೂಲಕ ನಮಗೆ ಸಿಗುವ ಬಿಡುಗಡೆಗಾಗಿ ನಾವು ಪ್ರಥಮವಾಗಿ ಮತ್ತು ಪ್ರಧಾನವಾಗಿ ಯೆಹೋವನಿಗೆ ಋಣಿಗಳಾಗಿರಬೇಕು. (ಲೂಕ 1:68) ಇದು ಆತನ ಪರಿಪೂರ್ಣ ಚಿತ್ತದ ಮತ್ತು ಮಾನವರ ಕಡೆಗೆ ಆತನಿಗಿರುವ ಉತ್ಕೃಷ್ಟ ಪ್ರೀತಿಯ ಅಭಿವ್ಯಕ್ತಿಯಾಗಿದೆ.—ಯೋಹಾನ 3:16 ಓದಿ.

13, 14. ಯೆಹೋವನು ನಮಗೋಸ್ಕರ ಏನು ಮಾಡಿದ್ದಾನೋ ಅದನ್ನು ಮಾನ್ಯಮಾಡಲು ಅಬ್ರಹಾಮನ ಮಾದರಿ ಹೇಗೆ ಸಹಾಯ ಮಾಡುತ್ತದೆ?

13 ಯೆಹೋವನು ನಮ್ಮ ಕಡೆಗೆ ತನಗಿರುವ ಪ್ರೀತಿಯನ್ನು ಈ ವಿಧದಲ್ಲಿ ತೋರಿಸಲು ಯಾವ ತ್ಯಾಗ ಮಾಡಬೇಕಾಯಿತು? ಅದು ನಮ್ಮ ಗ್ರಹಿಕೆಗೆ ಮೀರಿದ್ದಾಗಿದೆ. ಹಾಗಿದ್ದರೂ, ಇದನ್ನು ಸಾಕಷ್ಟು ಮಟ್ಟಿಗೆ ಅರ್ಥಮಾಡಿಕೊಳ್ಳಲು ಸಹಾಯ ಮಾಡುವಂಥ ವೃತ್ತಾಂತವೊಂದು ಬೈಬಲ್‌ನಲ್ಲಿದೆ. ಯೆಹೋವನು ನಂಬಿಗಸ್ತ ವ್ಯಕ್ತಿಯಾಗಿದ್ದ ಅಬ್ರಹಾಮನಿಗೆ ಅತ್ಯಂತ ಕಷ್ಟದ ಸಂಗತಿಯನ್ನು ಅಂದರೆ ತನ್ನ ಮಗನಾದ ಇಸಾಕನನ್ನು ಯಜ್ಞವಾಗಿ ಅರ್ಪಿಸುವಂತೆ ಹೇಳಿದನು. ಅಬ್ರಹಾಮನು ಪ್ರೀತಿಭರಿತ ತಂದೆಯಾಗಿದ್ದನು. ಈ ಕಾರಣದಿಂದಲೇ, ಯೆಹೋವನು ಅವನೊಂದಿಗೆ ಮಾತಾಡುವಾಗ ಇಸಾಕನಿಗೆ ಸೂಚಿಸುತ್ತಾ, ‘ನಿನಗೆ ಪ್ರಿಯನಾಗಿರುವ ಒಬ್ಬನೇ ಮಗನು’ ಎಂದು ಹೇಳಿದನು. (ಆದಿ. 22:2) ಆದರೂ ಅಬ್ರಹಾಮನಿಗೆ, ಯೆಹೋವನ ಚಿತ್ತವನ್ನು ಮಾಡುವುದು ಇಸಾಕನ ಮೇಲಣ ತನ್ನ ಪ್ರೀತಿಗಿಂತ ಹೆಚ್ಚು ಪ್ರಮುಖವಾಗಿತ್ತು. ಅವನು ಮುಂದುವರಿದು ಯೆಹೋವನಿಗೆ ವಿಧೇಯನಾದನು. ಹಾಗಿದ್ದರೂ ಯೆಹೋವನು, ಮುಂದೊಂದು ದಿನ ಸ್ವತಃ ತಾನು ಮಾಡಲಿದ್ದ ಸಂಗತಿಯನ್ನು ಅಬ್ರಹಾಮನು ಮಾಡುವಂತೆ ಬಿಡಲಿಲ್ಲ. ಅಬ್ರಹಾಮನು ಮಗನನ್ನು ಇನ್ನೇನು ಯಜ್ಞವಾಗಿ ಅರ್ಪಿಸಲಿದ್ದಾಗ ಅವನನ್ನು ತಡೆಯಲು ದೇವರು ಒಬ್ಬ ದೂತನನ್ನು ಕಳುಹಿಸಿದನು. ಈ ಕಠಿನ ಪರೀಕ್ಷೆಯ ಸಮಯದಲ್ಲೂ ದೇವರಿಗೆ ವಿಧೇಯನಾಗಲು ಅಬ್ರಹಾಮನು ದೃಢನಿಶ್ಚಿತನಾಗಿದ್ದನು. ಎಷ್ಟರ ಮಟ್ಟಿಗೆಂದರೆ, ಈ ಯುವ ಪುರುಷನನ್ನು ತಾನು ಪುನಃ ಕಾಣುವುದು ಪುನರುತ್ಥಾನದಲ್ಲೇ ಎಂಬ ನಿಶ್ಚಿತತೆ ಅವನಿಗಿತ್ತು. ದೇವರು ಅಂಥ ಪುನರುತ್ಥಾನವನ್ನು ನಡೆಸುವನು ಎಂಬುದರಲ್ಲೂ ಅವನಿಗೆ ಪೂರ್ಣ ನಂಬಿಕೆಯಿತ್ತು. ವಾಸ್ತವದಲ್ಲಿ, ಅಬ್ರಹಾಮನು ತನ್ನ ಮಗನನ್ನು “ದೃಷ್ಟಾಂತರೂಪದ” ಪುನರುತ್ಥಾನದ ಮೂಲಕ ಪುನಃ ಪಡೆದನೆಂದು ಪೌಲನು ಹೇಳಿದನು.—ಇಬ್ರಿ. 11:19.

14 ಅಬ್ರಹಾಮನು ತನ್ನ ಮಗನನ್ನು ಅರ್ಪಿಸಲು ಸಿದ್ಧತೆಗಳನ್ನು ನಡೆಸುತ್ತಿದ್ದಾಗ ಅವನಿಗಾಗುತ್ತಿದ್ದ ಸಂಕಟವನ್ನು ನೀವು ಊಹಿಸಿಕೊಳ್ಳಬಲ್ಲಿರೋ? ಅಬ್ರಹಾಮನಲ್ಲಿ ಉಂಟಾದ ಈ ಭಾವನೆಯು ಒಂದರ್ಥದಲ್ಲಿ, ಯೆಹೋವನು ಯಾರನ್ನು “ಪ್ರಿಯನಾಗಿರುವ ನನ್ನ ಮಗನು” ಎಂದು ಕರೆದನೋ ಅವನನ್ನು ತ್ಯಾಗ ಮಾಡುವಾಗ ಆತನಲ್ಲಿ ಉಂಟಾದ ಭಾವನೆಯನ್ನು ದೃಷ್ಟಾಂತಿಸಲು ಸಹಾಯ ಮಾಡುತ್ತದೆ. (ಮತ್ತಾ. 3:17) ಯೆಹೋವನಿಗಾದರೋ ಅಬ್ರಹಾಮನಿಗಿಂತ ಹೆಚ್ಚು ಸಂಕಟ ಆಗಿರಬೇಕೆಂಬುದನ್ನು ನೆನಪಿಸಿಕೊಳ್ಳಿ. ಆತನೂ ಆತನ ಮಗನೂ ಅಗಣಿತ ವರ್ಷಗಳಿಂದ ಪರಸ್ಪರರ ಸಹವಾಸದಲ್ಲಿ ಆನಂದಿಸಿದ್ದರು. ಮಗನು ತಂದೆಯ ಪ್ರಿಯ ‘ಕುಶಲ ಶಿಲ್ಪಿ’ ಮತ್ತು ವಕ್ತಾರನಾದ “ವಾಕ್ಯ” ಆಗಿದ್ದುಕೊಂಡು ತಂದೆಯೊಂದಿಗೆ ಆನಂದದಿಂದ ಕೆಲಸ ಮಾಡಿದ್ದನು. (ಜ್ಞಾನೋ. 8:22, 30, 31; ಯೋಹಾ. 1:1) ತನ್ನ ಈ ಮಗನೇ ಚಿತ್ರಹಿಂಸೆ ಹಾಗೂ ಅಪಹಾಸ್ಯಕ್ಕೀಡಾಗಿ ತದನಂತರ ದುಷ್ಕರ್ಮಿಯೋಪಾದಿ ಕೊಲ್ಲಲ್ಪಟ್ಟಾಗ ಯೆಹೋವನಿಗೆ ಹೇಗನಿಸಿರಬೇಕೆಂಬುದು ನಮ್ಮ ಗ್ರಹಿಕೆಗೂ ನಿಲುಕದು. ನಮ್ಮ ಬಿಡುಗಡೆಗಾಗಿ ಯೆಹೋವನು ಮಹತ್ತಾದ ತ್ಯಾಗ ಮಾಡಬೇಕಾಯಿತು. ಹೀಗಿರುವುದರಿಂದ, ಆ ಬಿಡುಗಡೆಯನ್ನು ನಾವು ಮಾನ್ಯಮಾಡುತ್ತೇವೆಂದು ಹೇಗೆ ತೋರಿಸಬಹುದು?

ಬಿಡುಗಡೆಯನ್ನು ಮಾನ್ಯಮಾಡುತ್ತೀರೆಂದು ಹೇಗೆ ತೋರಿಸಬಲ್ಲಿರಿ?

15. ದೋಷಪರಿಹಾರದ ಮಹಾ ಕೃತ್ಯವನ್ನು ಯೇಸು ಹೇಗೆ ಪೂರೈಸಿದನು, ಮತ್ತು ಅದು ಏನನ್ನು ಸಾಧ್ಯಮಾಡಿತು?

15 ಯೇಸು ದೋಷಪರಿಹಾರದ ಆ ಮಹಾ ಕೃತ್ಯವನ್ನು ಪೂರೈಸಿದ್ದು, ಪುನರುತ್ಥಾನಗೊಂಡು ಸ್ವರ್ಗಕ್ಕೆ ಹೋದ ಬಳಿಕವೇ. ಅಲ್ಲಿ ಅವನು ತನ್ನ ಪ್ರಿಯ ತಂದೆಯೊಂದಿಗೆ ಪುನಃ ಜೊತೆಗೂಡಿದಾಗ ತನ್ನ ಯಜ್ಞದ ಮೌಲ್ಯವನ್ನು ಆತನಿಗೆ ಒಪ್ಪಿಸಿದನು. ಮಹಾ ಆಶೀರ್ವಾದಗಳು ಹಿಂಬಾಲಿಸಿ ಬಂದವು. ಮೊದಲು ಕ್ರಿಸ್ತನ ಸಹೋದರರ ಪಾಪಗಳಿಗೆ ಮತ್ತು ತದನಂತರ “ಇಡೀ ಲೋಕದ” ಪಾಪಗಳಿಗೆ ಪೂರ್ಣ ಕ್ಷಮಾಪಣೆ ಲಭ್ಯವಾಯಿತು. ಆ ಯಜ್ಞದಿಂದಾಗಿ, ಇಂದು ಯಾರು ಮನಃಪೂರ್ವಕವಾಗಿ ಪಶ್ಚಾತ್ತಾಪಪಡುತ್ತಾರೋ ಮತ್ತು ಕ್ರಿಸ್ತನ ನಿಜ ಹಿಂಬಾಲಕರಾಗುತ್ತಾರೋ ಅವರೆಲ್ಲರೂ ಯೆಹೋವ ದೇವರ ಮುಂದೆ ಶುದ್ಧ ನಿಲುವನ್ನು ಹೊಂದಸಾಧ್ಯವಿದೆ. (1 ಯೋಹಾ. 2:2) ಇದು ನಿಮಗೆ ಹೇಗೆ ಅನ್ವಯವಾಗುತ್ತದೆ?

16. ಯೆಹೋವನು ನಮಗಾಗಿ ಸಾಧ್ಯಮಾಡಿರುವ ಬಿಡುಗಡೆಯನ್ನು ನಾವೇಕೆ ಮಾನ್ಯಮಾಡಬೇಕೆಂಬುದನ್ನು ಹೇಗೆ ದೃಷ್ಟಾಂತಿಸಬಹುದು?

16 ಆರಂಭದಲ್ಲಿ ಕೊಟ್ಟ ದೃಷ್ಟಾಂತಕ್ಕೆ ಈಗ ಹಿಂದಿರುಗೋಣ. ರೋಗಕ್ಕೆ ಮದ್ದನ್ನು ಕಂಡುಹಿಡಿದ ವೈದ್ಯನು ನಿಮ್ಮ ವಾರ್ಡ್‌ನಲ್ಲಿರುವ ರೋಗಿಗಳ ಬಳಿಗೆ ಬಂದು, ಈ ಮದ್ದನ್ನು ತೆಗೆದುಕೊಂಡು ನಿಗದಿತ ಆಹಾರ ಪಥ್ಯ ಹಾಗೂ ವ್ಯಾಯಾಮದ ಕ್ರಮವನ್ನು ಚಾಚೂತಪ್ಪದೇ ಪಾಲಿಸುವ ರೋಗಿ ಗುಣಮುಖನಾಗುವನು ಎಂದು ಹೇಳುತ್ತಾನೆ. ಒಂದು ವೇಳೆ ನಿಮ್ಮ ವಾರ್ಡ್‌ನಲ್ಲಿರುವ ಹೆಚ್ಚಿನ ರೋಗಿಗಳು ಇದೆಲ್ಲವನ್ನು ಪಾಲಿಸುವುದು ತುಂಬ ಕಷ್ಟ ಎಂದು ಹೇಳುತ್ತಾ ವೈದ್ಯರ ನಿರ್ದೇಶನಗಳನ್ನು ತಳ್ಳಿಹಾಕುವಲ್ಲಿ ಆಗೇನು? ನೀವೂ ಹಾಗೆ ಮಾಡುವಿರೋ? ಆ ಮದ್ದು ನಿಜವಾಗಿ ಕೆಲಸಮಾಡುತ್ತದೆ ಎಂಬುದಕ್ಕೆ ನಿಮ್ಮ ಬಳಿ ಬಲವಾದ ಸಾಕ್ಷ್ಯಗಳಿದ್ದರೂ ಹಾಗೆ ಮಾಡುವಿರೋ? ಖಂಡಿತ ಇಲ್ಲ! ಅದರ ಬದಲು ನೀವು ಆ ಮದ್ದಿಗಾಗಿ ವೈದ್ಯರಿಗೆ ಧನ್ಯವಾದ ಹೇಳಿ, ಅವರ ಸಲಹೆಗಳನ್ನು ಜಾಗರೂಕತೆಯಿಂದ ಪಾಲಿಸುವಿರಿ. ಅಷ್ಟೇ ಅಲ್ಲ, ನಿಮ್ಮ ಆಯ್ಕೆಯ ಬಗ್ಗೆ ಇತರರಿಗೂ ಹೇಳುವಿರಿ. ಅಂತೆಯೇ, ಯೆಹೋವನು ತನ್ನ ಮಗನ ವಿಮೋಚನಾ ಮೌಲ್ಯದ ಯಜ್ಞದ ಮೂಲಕ ಸಾಧ್ಯಮಾಡಿರುವ ಬಿಡುಗಡೆಯನ್ನು ನಾವೆಷ್ಟು ಮಾನ್ಯಮಾಡುತ್ತೇವೆಂಬುದನ್ನು ತೋರಿಸಲು ನಮ್ಮಲ್ಲಿ ಪ್ರತಿಯೊಬ್ಬರೂ ಉತ್ಸುಕರಾಗಿರಬೇಕು.—ರೋಮನ್ನರಿಗೆ 6:17, 18 ಓದಿ.

17. ನಿಮ್ಮನ್ನು ಬಿಡುಗಡೆಗೊಳಿಸಲು ಯೆಹೋವನೇನು ಮಾಡಿದ್ದಾನೋ ಅದಕ್ಕೆ ನೀವು ಯಾವ ವಿಧಗಳಲ್ಲಿ ಮಾನ್ಯತೆ ತೋರಿಸಬಲ್ಲಿರಿ?

17 ಪಾಪ ಮತ್ತು ಮರಣದಿಂದ ನಮ್ಮನ್ನು ಬಿಡುಗಡೆಗೊಳಿಸಲು ಯೆಹೋವನೂ ಆತನ ಮಗನೂ ಏನೆಲ್ಲಾ ಮಾಡಿದ್ದಾರೋ ಅದನ್ನು ನಾವು ಒಂದುವೇಳೆ ಮಾನ್ಯಮಾಡುತ್ತಿರುವಲ್ಲಿ ಖಂಡಿತ ಅದನ್ನು ತೋರ್ಪಡಿಸುವೆವು. (1 ಯೋಹಾ. 5:3) ನಮಗಿರುವ ಪಾಪಮಾಡುವ ಪ್ರವೃತ್ತಿಯ ವಿರುದ್ಧ ಹೋರಾಡುವೆವು. ಉದ್ದೇಶಪೂರ್ವಕ ಪಾಪಮಾಡುವ ರೂಢಿಯನ್ನೆಂದೂ ಬೆಳೆಸಿಕೊಳ್ಳೆವು ಮತ್ತು ಅಂಥ ಪಾಪಮಾಡುವವರು ಹೆಚ್ಚಾಗಿ ನಡೆಸುವ ಇಬ್ಬಗೆಯ ಕಪಟ ಜೀವನವನ್ನು ನಡೆಸೆವು. ಅಂಥ ಜೀವನಕ್ರಮವು, ನಾವು ವಿಮೋಚನಾ ಮೌಲ್ಯದ ಯಜ್ಞವನ್ನು ಅಮೂಲ್ಯವೆಂದೆಣಿಸುವುದಿಲ್ಲ ಅಥವಾ ಮಾನ್ಯಮಾಡುವುದಿಲ್ಲ ಎಂದು ಹೇಳುವುದಕ್ಕೆ ಸಮಾನ. ಅದಕ್ಕೆ ಬದಲಾಗಿ, ದೇವರ ದೃಷ್ಟಿಯಲ್ಲಿ ಶುದ್ಧರಾಗಿರಲು ಶ್ರಮಿಸುವ ಮೂಲಕ ನಮ್ಮ ಮಾನ್ಯತೆಯನ್ನು ತೋರಿಸುವೆವು. (2 ಪೇತ್ರ 3:14) ಇತರರೂ ಯೆಹೋವನೊಂದಿಗೆ ಶುದ್ಧ ನಿಲುವನ್ನು ಹೊಂದುವಂತೆ ಮತ್ತು ನಿತ್ಯ ಭವಿಷ್ಯತ್ತಿನ ನಿರೀಕ್ಷೆಯನ್ನು ಪಡೆಯುವಂತೆ ನಮ್ಮ ಬಿಡುಗಡೆಯ ಅದ್ಭುತ ನಿರೀಕ್ಷೆಯನ್ನು ಅವರೊಂದಿಗೆ ಹಂಚಿಕೊಳ್ಳುವ ಮೂಲಕವೂ ನಮ್ಮ ಮಾನ್ಯತೆಯನ್ನು ತೋರಿಸುತ್ತೇವೆ. (1 ತಿಮೊ. 4:16) ಯೆಹೋವನನ್ನು ಮತ್ತು ಆತನ ಮಗನನ್ನು ಸ್ತುತಿಸುವುದರಲ್ಲಿ ನಮ್ಮೆಲ್ಲಾ ಶಕ್ತಿ ಹಾಗೂ ಸಮಯವನ್ನು ವಿನಿಯೋಗಿಸೋಣ. ಖಂಡಿತವಾಗಿಯೂ ಅವರದಕ್ಕೆ ಅರ್ಹರು! (ಮಾರ್ಕ 12:28-30) ಸ್ವಲ್ಪ ಯೋಚಿಸಿ: ಪಾಪದಿಂದ ಪೂರ್ತಿ ಮುಕ್ತರಾಗುವ ಸಮಯವನ್ನು ನಾವು ಎದುರುನೋಡಬಹುದು. ಆಗ, ದೇವರು ಹೇಗೆ ಉದ್ದೇಶಿಸಿದ್ದನೋ ಹಾಗೆಯೇ ಅಂದರೆ ಪರಿಪೂರ್ಣರಾಗಿ ನಿತ್ಯವೂ ಜೀವಿಸಬಲ್ಲೆವು. ಇದೆಲ್ಲವೂ, ನಮ್ಮನ್ನು ಬಿಡುಗಡೆ ಮಾಡಲು ಯೆಹೋವನು ಏನೆಲ್ಲಾ ಮಾಡಿದ್ದಾನೋ ಅದರಿಂದಲೇ ಸಾಧ್ಯ!—ರೋಮ. 8:21.

[ಪಾದಟಿಪ್ಪಣಿ]

^ ಪ್ಯಾರ. 3 ಸ್ಪ್ಯಾನಿಷ್‌ ಇನ್‌ಫ್ಲುಯೆಂಜಾ ಜ್ವರವು ಆಗ ಲೋಕದ ಜನಸಂಖ್ಯೆಯ ಸುಮಾರು 20-50% ಜನರನ್ನು ಬಾಧಿಸಿತು ಎಂದು ಅಂದಾಜುಮಾಡಲಾಗಿದೆ. ಆ ರೋಗಾಣು ಸೋಂಕಿತರಾದವರಲ್ಲಿ 1-10% ಜನರು ಸಾವನ್ನಪ್ಪಿದರು. ಇದಕ್ಕೆ ಹೋಲಿಸಿದರೆ ಈಬೋಲ ವೈರಸ್‌ನ ಸೋಂಕು ಹರಡುವುದು ತೀರ ಅಪರೂಪ. ಆದರೆ ಹರಡಿದಾಗಲಂತೂ ಅದರಿಂದ ಸೋಂಕಿತರಾದವರಲ್ಲಿ ಬಹುಮಟ್ಟಿಗೆ 90% ಜನರು ಜೀವ ಕಳೆದುಕೊಂಡ ಕೆಲವು ಸಂದರ್ಭಗಳೂ ಇವೆ.

ನಿಮ್ಮ ಉತ್ತರವೇನು?

• ನಿಮಗೆ ತುರ್ತಾಗಿ ಬಿಡುಗಡೆಯ ಅಗತ್ಯವಿದೆಯೇಕೆ?

• ಯೇಸುವಿನ ಸ್ವತ್ಯಾಗದ ಕೃತ್ಯವು ನಿಮ್ಮ ಮೇಲೆ ಯಾವ ಪ್ರಭಾವಬೀರುತ್ತದೆ?

• ವಿಮೋಚನಾ ಮೌಲ್ಯದ ಯಜ್ಞವೆಂಬ ಯೆಹೋವನ ಕೊಡುಗೆಯ ಬಗ್ಗೆ ನಿಮಗೆ ಹೇಗನಿಸುತ್ತದೆ?

• ನಿಮ್ಮ ಬಿಡುಗಡೆಗಾಗಿ ಯೆಹೋವನು ಮಾಡಿರುವ ಒದಗಿಸುವಿಕೆಗೆ ಪ್ರತಿಯಾಗಿ ನೀವೇನು ಮಾಡಲು ಪ್ರಚೋದಿಸಲ್ಪಟ್ಟಿದ್ದೀರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 27ರಲ್ಲಿರುವ ಚಿತ್ರ]

ದೋಷಪರಿಹಾರಕ ದಿನದಂದು ಇಸ್ರಾಯೇಲಿನ ಮಹಾ ಯಾಜಕನು ಮೆಸ್ಸೀಯನನ್ನು ಮುನ್‌ಚಿತ್ರಿಸುತ್ತಿದ್ದನು

[ಪುಟ 28ರಲ್ಲಿರುವ ಚಿತ್ರ]

ಅಬ್ರಹಾಮನು ತನ್ನ ಮಗನನ್ನು ಅರ್ಪಿಸಲು ಸಿದ್ಧನಿದ್ದದ್ದು ಯೆಹೋವನ ಹೆಚ್ಚು ಶ್ರೇಷ್ಠವಾದ ತ್ಯಾಗದ ಬಗ್ಗೆ ಬಹಳಷ್ಟನ್ನು ಕಲಿಸುತ್ತದೆ