ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕುಟುಂಬ ಆರಾಧನೆ— ಪಾರಾಗುವಿಕೆಗೆ ಪ್ರಾಮುಖ್ಯ!

ಕುಟುಂಬ ಆರಾಧನೆ— ಪಾರಾಗುವಿಕೆಗೆ ಪ್ರಾಮುಖ್ಯ!

ಕುಟುಂಬ ಆರಾಧನೆ— ಪಾರಾಗುವಿಕೆಗೆ ಪ್ರಾಮುಖ್ಯ!

“ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ” ಎಷ್ಟು ಭಯಪ್ರೇರಕ ಆಗಿರುವುದೆಂದು ಸ್ವಲ್ಪ ಊಹಿಸಿಕೊಳ್ಳಿ! (ಪ್ರಕ. 16:14) ಕಣ್ಣಿಗೆ ಕಟ್ಟುವಂಥ ರೀತಿಯ ಚಿತ್ರಣಗಳನ್ನು ಬಳಸುತ್ತಾ ಪ್ರವಾದಿ ಮೀಕ ಬರೆದದ್ದು: “ಬೆಂಕಿಗೆ ಕರಗಿದ ಮೇಣದಂತೆಯೂ ಜರಿಯಲ್ಲಿ ಹೊಯ್ದ ನೀರಿನ ಹಾಗೂ ಪರ್ವತಗಳು . . . ಕರಗಿ ಹರಿಯುತ್ತವೆ, ತಗ್ಗುಗಳು ಸೀಳಿಹೋಗುತ್ತವೆ.” (ಮೀಕ 1:4) ಯೆಹೋವನನ್ನು ಸೇವಿಸದವರು ಅನುಭವಿಸಬೇಕಾದ ವಿಪತ್ಕಾರಕ ಫಲಿತಾಂಶ ಏನಾಗಿರುವುದು? ದೇವರ ವಾಕ್ಯ ಅನ್ನುವುದು: “ಆ ದಿನದಲ್ಲಿ ಯೆಹೋವನಿಂದ ಹತರಾದವರು ಲೋಕದ ಒಂದು ಕಡೆಯಿಂದ ಇನ್ನೊಂದು ಕಡೆಯ ವರೆಗೂ ಬಿದ್ದಿರುವರು.”—ಯೆರೆ. 25:33.

ಇಂಥ ಎಚ್ಚರಿಕೆಗಳನ್ನು ಮನಸ್ಸಿನಲ್ಲಿಟ್ಟವರಾಗಿ ಕುಟುಂಬದ ಶಿರಸ್ಸುಗಳು, ಒಂಟಿ ಹೆತ್ತವರಾಗಿರುವವರು ಸಹ, ನಿರ್ಣಯಗಳನ್ನು ಸ್ವತಃ ತೆಗೆದುಕೊಳ್ಳುವಷ್ಟು ದೊಡ್ಡವರಾದ ತಮ್ಮ ಮಕ್ಕಳ ಬಗ್ಗೆ, ‘ಅವರು ಅರ್ಮಗೆದ್ದೋನನ್ನು ಪಾರಾಗುವರೋ?’ ಎಂದು ಕೇಳಿಕೊಳ್ಳುವುದು ಉತ್ತಮ. ಅವರು ಆಧ್ಯಾತ್ಮಿಕವಾಗಿ ಜೀವದಿಂದಿದ್ದರೆ ಹಾಗೂ ಅವರ ಪ್ರಾಯಕ್ಕೆ ತಕ್ಕಷ್ಟು ಬಲಿಷ್ಠರಾಗಿದ್ದರೆ ಖಂಡಿತ ಪಾರಾಗುವರೆಂದು ಬೈಬಲ್‌ ಆಶ್ವಾಸನೆ ಕೊಡುತ್ತದೆ.—ಮತ್ತಾ. 24:21.

ಕುಟುಂಬ ಆರಾಧನೆಗಾಗಿ ಸಮಯ ನಿಗದಿಪಡಿಸುವುದರ ಮಹತ್ತ್ವ

ಮಕ್ಕಳನ್ನು “ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ” ಬೆಳೆಸಲು ನಿಮ್ಮಿಂದಾದದ್ದೆಲ್ಲವನ್ನೂ ಮಾಡಿರಿ. (ಎಫೆ. 6:4) ಮಕ್ಕಳೊಂದಿಗೆ ಬೈಬಲ್‌ ಅಧ್ಯಯನ ಮಾಡುವುದರ ಮಹತ್ತ್ವವನ್ನು ಎಷ್ಟು ಒತ್ತಿಹೇಳಿದರೂ ಸಾಲದು. ನಮ್ಮ ಎಳೆಯರು ಫಿಲಿಪ್ಪಿಯಲ್ಲಿದ್ದ ಕ್ರೈಸ್ತರಂತೆ ಇರಬೇಕೆಂಬುದು ನಮ್ಮ ಅಪೇಕ್ಷೆ. ಅಲ್ಲಿನ ಕ್ರೈಸ್ತರು ಯೆಹೋವನಿಗೆ ತೋರಿಸಿದ್ದ ಸಿದ್ಧಮನಸ್ಸಿನ ವಿಧೇಯತೆಗಾಗಿ ಅವರನ್ನು ಶ್ಲಾಘಿಸುತ್ತಾ ಪೌಲನು ಬರೆದದ್ದು: “ನನ್ನ ಪ್ರಿಯರೇ, ನೀವು ಯಾವಾಗಲೂ ವಿಧೇಯರಾಗಿದ್ದಂತೆಯೇ ಈಗಲೂ ವಿಧೇಯರಾಗಿ ನಾನು ಉಪಸ್ಥಿತನಿರುವಾಗ ಮಾತ್ರವಲ್ಲದೆ ನಾನು ದೂರವಿರುವಾಗಲೂ ಇನ್ನೂ ಹೆಚ್ಚು ಮನಸಾರೆ ನಿಮ್ಮ ಸ್ವಂತ ರಕ್ಷಣೆಯನ್ನು ಭಯದಿಂದಲೂ ನಡುಕದಿಂದಲೂ ಸಾಧಿಸಿಕೊಳ್ಳುತ್ತಾ ಇರಿ.”—ಫಿಲಿ. 2:12.

ನಿಮ್ಮ ಮಕ್ಕಳು ನೀವು ಅವರೊಂದಿಗೆ ಇಲ್ಲದಿರುವಾಗಲೂ ಯೆಹೋವನ ನಿಯಮಗಳನ್ನು ಪಾಲಿಸುತ್ತಾರೋ? ಶಾಲೆಯಲ್ಲಿರುವಾಗ ಏನು ಮಾಡುತ್ತಾರೆ? ನೀವು ಅವರೊಂದಿಗೆ ಇಲ್ಲದಿರುವಾಗಲೂ ಅವರು ಯೆಹೋವನ ನಿಯಮಗಳನ್ನು ಪಾಲಿಸುವಂತೆ ಮಾಡಲು, ಆ ನಿಯಮಗಳು ಎಷ್ಟು ವಿವೇಕಯುತವೆಂಬುದನ್ನು ನಿಮ್ಮ ಮಕ್ಕಳಿಗೆ ಹೇಗೆ ಮನದಟ್ಟುಮಾಡಬಲ್ಲಿರಿ?

ಈ ದಿಸೆಯಲ್ಲಿ ನಿಮ್ಮ ಮಗುವಿನ ನಂಬಿಕೆಯನ್ನು ಕಟ್ಟುವುದರಲ್ಲಿ ಕುಟುಂಬ ಆರಾಧನೆಯ ಭೂಮಿಕೆಯು ಬಹುಮುಖ್ಯವಾದದ್ದು. ಹೀಗಿರುವುದರಿಂದ, ನಿಮ್ಮ ಕುಟುಂಬ ಬೈಬಲ್‌ ಅಧ್ಯಯನವನ್ನು ಸಫಲಗೊಳಿಸುವಂಥ ಮೂರು ಮುಖ್ಯ ಅಂಶಗಳನ್ನು ಚರ್ಚಿಸೋಣ.

ಕ್ರಮವಾಗಿ ನಡೆಸಿರಿ

“ಒಂದಾನೊಂದು ದಿನ” ಎಂದು ಯೋಬ 1:6ರಲ್ಲಿ ತಿಳಿಸಲಾಗಿರುವ ಪದಗಳು ಬೈಬಲ್‌ನ ಮೂಲಭಾಷೆಯಲ್ಲಿ ದೇವರು ತನ್ನ ದೂತರನ್ನು ನೇಮಿತ ಸಮಯಗಳಲ್ಲಿ ತನ್ನ ಸನ್ನಿಧಿಗೆ ಆಮಂತ್ರಿಸುತ್ತಿದ್ದದ್ದನ್ನು ಸೂಚಿಸುತ್ತವೆ. ನಿಮ್ಮ ಮಕ್ಕಳೊಂದಿಗೂ ಇದನ್ನು ಮಾಡಿರಿ. ನಿಮ್ಮ ಕುಟುಂಬ ಆರಾಧನೆಯ ಸಂಜೆಗಾಗಿ ಒಂದು ನಿರ್ದಿಷ್ಟ ದಿನ ಮತ್ತು ಸಮಯವನ್ನು ನಿಗದಿಪಡಿಸಿ ಅದಕ್ಕೆ ಯಾವಾಗಲೂ ಅಂಟಿಕೊಳ್ಳಿರಿ. ಒಂದುವೇಳೆ ನಿಗದಿಪಡಿಸಿದ ದಿನದಂದು ಅನಿರೀಕ್ಷಿತ ಸನ್ನಿವೇಶಗಳೇಳುವಲ್ಲಿ ಅದನ್ನು ಬೇರಾವ ದಿನ ಮಾಡಬೇಕೆಂಬುದನ್ನೂ ಮೊದಲೇ ನಿಗದಿಪಡಿಸಿ.

ತಿಂಗಳುಗಳು ದಾಟುತ್ತಾ ಹೋದಂತೆ, ‘ಆದರೆ ಆಯಿತು, ಹೋದರೆ ಹೋಯಿತು’ ಎನ್ನುವ ಮನೋಭಾವವು ನುಸುಳದಂತೆ ನೋಡಿಕೊಳ್ಳಿ. ನಿಮ್ಮ ಮಕ್ಕಳೇ ನಿಮಗಿರುವ ಅತೀ ಪ್ರಮುಖ ಬೈಬಲ್‌ ವಿದ್ಯಾರ್ಥಿಗಳು ಎಂಬುದನ್ನು ಮರೆಯದಿರಿ. ಸೈತಾನನಾದರೊ ಅವರನ್ನೇ ತನ್ನ ಬೇಟೆಯಾಗಿ ಮಾಡಲಿಚ್ಛಿಸುವನು. (1 ಪೇತ್ರ 5:8) ನೀವು ಈ ಅಮೂಲ್ಯವಾದ ಕುಟುಂಬ ಆರಾಧನೆಯ ಸಂಜೆಯನ್ನು, ಟಿವಿ ನೋಡುವುದರಲ್ಲೋ ಬೇರಾವುದೋ ಅನಗತ್ಯ ಚಟುವಟಿಕೆಯಲ್ಲೋ ಕಳೆಯುವಲ್ಲಿ ಸೈತಾನನಿಗೆ ವಿಜಯ ದಕ್ಕುವುದು.—ಎಫೆ. 5:15, 16; 6:12; ಫಿಲಿ. 1:10.

ಪ್ರಾಯೋಗಿಕವಾದದ್ದಾಗಿರಲಿ

ಕುಟುಂಬ ಆರಾಧನೆಯ ಸಂಜೆಯು ಬರೀ ಮಾಹಿತಿಯನ್ನು ತಲೆಯಲ್ಲಿ ತುರುಕಿಸುವ ಸಮಯವಾಗಿರಬಾರದು. ಅದನ್ನು ಪ್ರಾಯೋಗಿಕವನ್ನಾಗಿ ಮಾಡಿ. ಹೇಗೆ? ಬರಲಿರುವ ದಿನಗಳಲ್ಲಿ ಇಲ್ಲವೆ ವಾರಗಳಲ್ಲಿ ನಿಮ್ಮ ಮಗನೋ ಮಗಳೋ ಎದುರಿಸಲಿರುವ ಸನ್ನಿವೇಶಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಕೆಲವೊಮ್ಮೆ ಆಯ್ಕೆಮಾಡಿ. ದೃಷ್ಟಾಂತಕ್ಕಾಗಿ, ಶುಶ್ರೂಷೆಗಾಗಿರುವ ಪ್ರ್ಯಾಕ್ಟಿಸ್‌ ಸೆಷನ್‌ಗಳನ್ನು ಸೇರಿಸಬಹುದಲ್ಲವೇ? ಎಳೆಯರು, ತಾವು ಚೆನ್ನಾಗಿ ಮಾಡಬಲ್ಲ ಯಾವುದೇ ಕೆಲಸವನ್ನು ಮಾಡಲು ಇಷ್ಟಪಡುತ್ತಾರೆ. ಆದುದರಿಂದ ನೀವು ನಿರೂಪಣೆಗಳನ್ನು ಪ್ರ್ಯಾಕ್ಟಿಸ್‌ ಮಾಡುವಲ್ಲಿ ಮತ್ತು ಜನರ ಆಕ್ಷೇಪಣೆಗಳನ್ನು ನಿರ್ವಹಿಸುವುದು ಹೇಗೆಂಬುದನ್ನು ತೋರಿಸಿ ಕೊಡುವಲ್ಲಿ, ಮಕ್ಕಳು ಹೆಚ್ಚು ಆತ್ಮವಿಶ್ವಾಸದಿಂದ ರಾಜ್ಯ ಸಾರುವಿಕೆಯ ವಿಭಿನ್ನ ರೂಪಗಳಲ್ಲಿ ಪಾಲ್ಗೊಳ್ಳುವರು.—2 ತಿಮೊ. 2:15.

ನಿಮ್ಮ ಮಕ್ಕಳಿಗೆ ಸಮಾನಸ್ಥರ ಒತ್ತಡವನ್ನು ನಿಭಾಯಿಸಲು ಸಹಾಯಮಾಡುವಂಥ ಪ್ರ್ಯಾಕ್ಟಿಸ್‌ ಸೆಷನ್‌ಗಳನ್ನೂ ಏರ್ಪಡಿಸಬಲ್ಲಿರಿ. ನಿಮ್ಮ ಮಕ್ಕಳು ಸಿಗರೇಟ್‌ ಸೇದಲು, ಡೇಟಿಂಗ್‌ ಮಾಡಲು, ಡ್ರಗ್ಸ್‌ ಸೇವಿಸಲು ಮತ್ತು ಶಿಕ್ಷಕರ ವಿರುದ್ಧ ಬಂಡಾಯವೇಳಲು ಸಮಾನಸ್ಥರ ಒತ್ತಡವನ್ನು ಎದುರಿಸುತ್ತಿರಬಹುದು. ಆದುದರಿಂದ ಅವರೊಂದಿಗೆ ಡಿಸೆಂಬರ್‌ 2000ದ ನಮ್ಮ ರಾಜ್ಯದ ಸೇವೆಯ 8ನೇ ಪುಟದಲ್ಲಿರುವ, “ಸಮವಯಸ್ಸಿನವರ ಒತ್ತಡ ಹಾಗೂ ಸಾರುವ ಸುಯೋಗ” ಎಂಬ ಲೇಖನ ಹಾಗೂ 1994 ಮೇ 15ರ ಕಾವಲಿನಬುರುಜುವಿನ ಪುಟ 13ರಲ್ಲಿರುವ ಸಂಬಂಧಪಟ್ಟ ಅಂಶಗಳನ್ನು ಚರ್ಚಿಸಿ, ಪ್ರ್ಯಾಕ್ಟಿಸ್‌ ಮಾಡಬಹುದು. ಆಗಿಂದಾಗ್ಗೆ ನಿಮ್ಮ ಕುಟುಂಬ ಆರಾಧನೆಯ ಸಂಜೆಯಂದು ಇಂಥ ರಿಹರ್ಸಲ್‌ಗಳನ್ನು ಮಾಡಬಾರದೇಕೆ?

ಆಧ್ಯಾತ್ಮಿಕ ಗುರಿಗಳನ್ನಿಡುವುದರ ಪ್ರಯೋಜನಗಳನ್ನು ಒತ್ತಿಹೇಳಲು, ಕುಟುಂಬ ಆರಾಧನೆಯು ಹೆತ್ತವರಿಗೆ ಅವಕಾಶ ಕೊಡುತ್ತದೆ. ಈ ಸಂಬಂಧದಲ್ಲಿ, “ಯುವ ಜನರೇ—ನಿಮ್ಮ ಜೀವಿತವನ್ನು ಹೇಗೆ ಉಪಯೋಗಿಸುವಿರಿ?” ಎಂಬ ಟ್ರ್ಯಾಕ್ಟ್‌ನಲ್ಲಿ ಉತ್ಕೃಷ್ಟ ಮಾಹಿತಿಯಿದೆ. ಈ ಟ್ರ್ಯಾಕ್ಟನ್ನು ಚರ್ಚಿಸುವಾಗ, ಯೆಹೋವನ ಸೇವೆಮಾಡುವುದರ ಮೇಲೆ ಕೇಂದ್ರಿತವಾದ ಜೀವನವೇ ಅತ್ಯುತ್ತಮ ಮಾರ್ಗಕ್ರಮವೆಂಬುದನ್ನು ಗ್ರಹಿಸುವಂತೆ ನಿಮ್ಮ ಮಕ್ಕಳಿಗೆ ಸಹಾಯಮಾಡಿ. ನಿಮ್ಮ ಮಕ್ಕಳಲ್ಲಿ ಪಯನೀಯರ್‌ ಸೇವೆ ಮಾಡುವ, ಬೆತೆಲ್‌ನಲ್ಲಿ ಸೇವೆ ಮಾಡುವ, ಶುಶ್ರೂಷಾ ಸೇವಾ ಶಾಲೆಗೆ ಹಾಜರಾಗುವ ಇಲ್ಲವೆ ಬೇರಾವುದೇ ರೀತಿಯ ಪೂರ್ಣ ಸಮಯದ ಸೇವೆ ಮಾಡುವ ಬಯಕೆಯನ್ನು ಬಿತ್ತು, ಅದನ್ನು ಪೋಷಿಸಿರಿ.

ಆದರೆ ಎಚ್ಚರಿಕೆ ವಹಿಸಬೇಕಾದ ಒಂದು ಸಂಗತಿಯಿದೆ. ಅದೇನೆಂದರೆ, ಕೆಲವು ಮಂದಿ ಹೆತ್ತವರು ತಮ್ಮ ಮಕ್ಕಳ ಒಳ್ಳೇದನ್ನು ಬಯಸುತ್ತಾ ಅವರು ಮುಂದೆ ಏನಾಗಬೇಕು ಎಂಬುದರ ಮೇಲೆ ಎಷ್ಟು ಗಮನ ಕೇಂದ್ರೀಕರಿಸುತ್ತಾರೆಂದರೆ, ಮಕ್ಕಳು ಈಗ ಮಾಡುತ್ತಿರುವ ಒಳ್ಳೇ ಕೆಲಸಗಳು ಅವರ ಕಣ್ಣಿಗೆ ಬೀಳುವುದಿಲ್ಲ. ಬೆತೆಲ್‌ ಸೇವೆ ಮತ್ತು ಮಿಷನೆರಿ ಸೇವೆಯಂಥ ಉತ್ತಮ ಗುರಿಗಳನ್ನಿಡಲು ನಿಮ್ಮ ಮಕ್ಕಳನ್ನು ಉತ್ತೇಜಿಸುವುದು ಒಳ್ಳೇದೇ. ಆದರೆ ನಿಮ್ಮ ನಿರೀಕ್ಷಣೆಗಳಿಂದ ಮಕ್ಕಳನ್ನು ಕೆಣಕುತ್ತಾ ಅವರ ಮನಗುಂದಿಸಬೇಡಿ. (ಕೊಲೊ. 3:21) ನಿಮ್ಮ ಮಗನಾಗಲಿ ಮಗಳಾಗಲಿ ಅವನ ಅಥವಾ ಅವಳ ಸ್ವಂತ ಹೃದಯದಿಂದ ಯೆಹೋವನನ್ನು ಪ್ರೀತಿಸಬೇಕೇ ಹೊರತು ನಿಮ್ಮ ಹೃದಯದಿಂದಲ್ಲ ಎಂಬುದನ್ನು ಸದಾ ನೆನಪಿಡಿ. (ಮತ್ತಾ. 22:37) ಹೀಗಿರುವುದರಿಂದ, ನಿಮ್ಮ ಮಗನೋ ಮಗಳೋ ಈಗಾಗಲೇ ಚೆನ್ನಾಗಿ ನಿರ್ವಹಿಸುತ್ತಿರುವ ವಿಷಯಗಳಿಗಾಗಿ ಪ್ರಶಂಸಿಸಿರಿ, ಮತ್ತು ಅವರೇನು ಮಾಡುತ್ತಿಲ್ಲವೋ ಅದರ ಮೇಲೆಯೇ ಗಮನ ಕೇಂದ್ರೀಕರಿಸುವ ಪ್ರವೃತ್ತಿಯನ್ನು ಹತ್ತಿಕ್ಕಿರಿ. ಯೆಹೋವನು ಏನೇನು ಮಾಡಿದ್ದಾನೋ ಅದೆಲ್ಲದಕ್ಕಾಗಿ ಅವರಲ್ಲಿ ಗಣ್ಯತೆಯನ್ನು ಬೆಳೆಸಿ. ನಂತರ ನಿಮ್ಮ ಮಗನ/ಮಗಳ ಹೃದಯ ಯೆಹೋವನ ಒಳ್ಳೇತನಕ್ಕೆ ಪ್ರತಿಕ್ರಿಯಿಸುವಂತೆ ಬಿಡಿ.

ಆನಂದದಾಯಕವಾಗಿರಲಿ

ಕುಟುಂಬ ಆರಾಧನೆಯ ಸಂಜೆಯನ್ನು ಯಶಸ್ವಿಗೊಳಿಸುವ ಮೂರನೇ ಮುಖ್ಯ ಅಂಶವು ಅದನ್ನು ಆನಂದದಾಯಕವನ್ನಾಗಿ ಮಾಡುವುದೇ ಆಗಿದೆ. ನೀವಿದನ್ನು ಹೇಗೆ ಮಾಡಬಹುದು? ಕೆಲವೊಂದು ಸಂದರ್ಭಗಳಲ್ಲಿ ನೀವು ಆಡಿಯೋ ಡ್ರಾಮವೊಂದನ್ನು ಕೇಳಬಹುದು ಇಲ್ಲವೆ ಯೆಹೋವನ ಸಾಕ್ಷಿಗಳು ತಯಾರಿಸಿರುವ ವಿಡಿಯೋಗಳಲ್ಲಿ ಯಾವುದಾದರೊಂದನ್ನು ನೋಡಬಹುದು. ತದನಂತರ ಅದರ ಬಗ್ಗೆ ಚರ್ಚಿಸಬಹುದು. ಇಲ್ಲವೆ, ಬೈಬಲಿನ ಒಂದು ಭಾಗವನ್ನು ಜೊತೆಯಾಗಿ ಓದಬಹುದು. ಹಾಗೆ ಮಾಡುವಾಗ ಅದರಲ್ಲಿನ ಒಂದೊಂದು ಪಾತ್ರವನ್ನು ಒಬ್ಬೊಬ್ಬ ಸದಸ್ಯನಿಗೆ ನೇಮಿಸಬಹುದು.

ಕಾವಲಿನಬುರುಜು ಪತ್ರಿಕೆಯಲ್ಲಿರುವ ಲೇಖನಗಳು ಕುಟುಂಬ ಚರ್ಚೆಗಾಗಿ ಅತ್ಯುತ್ಕೃಷ್ಟ ಮಾಹಿತಿಯನ್ನು ಒದಗಿಸುತ್ತವೆ. ಉದಾಹರಣೆಗೆ, ಕಾವಲಿನಬುರುಜುವಿನ ಸಾರ್ವಜನಿಕ ಆವೃತ್ತಿಯಲ್ಲಿ “ನಮ್ಮ ಯುವಜನರಿಗಾಗಿ” ಎಂಬ ಅಧ್ಯಯನ ಯೋಜನೆಯಿದೆ. ಅಲ್ಲದೇ, “ನಿಮ್ಮ ಮಕ್ಕಳಿಗೆ ಕಲಿಸಿರಿ” ಎಂಬ ಲೇಖನವು ಆ ಆವೃತ್ತಿಯಲ್ಲಿ ಎಳೆಯರಿಗಾಗಿ ಬರುತ್ತದೆ.

ಎಚ್ಚರ! ಪತ್ರಿಕೆಯಲ್ಲಿ ಬರುವ “ಯುವ ಜನರು ಪ್ರಶ್ನಿಸುವುದು” ಎಂಬ ಲೇಖನಗಳು ಮತ್ತು ಯುವ ಜನರ ಪ್ರಶ್ನೆಗಳು ಸಂಪುಟ 1 ಸಹ, ಯೌವನಸ್ಥರ ಹೆತ್ತವರಿಗೆ ವಿಶೇಷ ಆಸಕ್ತಿಯದ್ದಾಗಿರುವವು. ಆ ಪುಸ್ತಕವನ್ನು ಬಳಸುವಾಗ, ಪ್ರತಿ ಅಧ್ಯಾಯದ ಕೊನೆಯಲ್ಲಿರುವ “ಚರ್ಚೆಗಾಗಿ ಪ್ರಶ್ನೆಗಳು” ಎಂಬ ಚೌಕವನ್ನು ಅಲಕ್ಷಿಸಬೇಡಿ. ಆ ಚೌಕದಲ್ಲಿರುವ ಪ್ರಶ್ನೆಗಳನ್ನು ಬರೀ ಪುನರ್ವಿಮರ್ಶೆಗಾಗಿ ಅಲ್ಲ ಬದಲಾಗಿ ಕುಟುಂಬ ಚರ್ಚೆಗಾಗಿ ಹೊರಮೇರೆಯಾಗಿಯೂ ಬಳಸಬಹುದು.

ಆದರೆ ಕುಟುಂಬ ಅಧ್ಯಯನದ ಸಮಯವು, ಮಕ್ಕಳ ವಿಚಾರಣೆ ನಡೆಸುವ ಸಮಯವಾಗದಂತೆ ಜಾಗ್ರತೆವಹಿಸಿ. ಉದಾಹರಣೆಗೆ, ಒಂದು ದಾಖಲನ್ನು ಬರೆದಿಡಲು ಮಕ್ಕಳನ್ನು ಉತ್ತೇಜಿಸುವಂತೆ ಹೆತ್ತವರಿಗೆ ಸಲಹೆಕೊಡಲಾಗಿದೆ. ಕುಟುಂಬವಾಗಿ ಚರ್ಚಿಸಿರುವಂಥ ವಿಷಯಗಳ ಬಗ್ಗೆ ತಮ್ಮ ವೈಯಕ್ತಿಕ ಅಭಿಪ್ರಾಯಗಳು ಮತ್ತು ಭಾವನೆಗಳನ್ನು ಹಾಗೂ ಅದನ್ನು ತಮ್ಮ ಜೀವನದಲ್ಲಿ ಹೇಗೆ ಅನ್ವಯಿಸಬಹುದೆಂಬುದನ್ನು ಮಕ್ಕಳು ಆ ದಾಖಲೆಯಲ್ಲಿ ಬರೆದಿಡಬಹುದು. ಆದರೆ ನಿಮ್ಮ ಮಗನೋ ಮಗಳೋ ಆ ದಾಖಲೆಯಲ್ಲಿ ಏನು ಬರೆದಿಟ್ಟಿದ್ದಾರೆಂಬುದನ್ನು ಗಟ್ಟಿಯಾಗಿ ಎಲ್ಲರ ಮುಂದೆ ಓದಿ ಹೇಳುವಂತೆ ಒತ್ತಾಯಿಸಬೇಡಿ. ಹಾಗೆ ಮಾಡುವಲ್ಲಿ, ಅವರು ಮುಚ್ಚುಮರೆಯಿಲ್ಲದೆ ತಮ್ಮ ಅನಿಸಿಕೆಗಳನ್ನು ಬರೆಯುವುದನ್ನು ನಿಲ್ಲಿಸಿಬಿಡಬಹುದು. ಈ ವಿಷಯದಲ್ಲಿ ನಿಮ್ಮ ಮಕ್ಕಳಿಗಿರುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬೇಡಿ.

ನಿಮ್ಮ ಕುಟುಂಬ ಆರಾಧನೆಯನ್ನು ಕ್ರಮವಾಗಿ ನಡೆಸುವಲ್ಲಿ, ಪ್ರಾಯೋಗಿಕ ಮತ್ತು ಆನಂದದಾಯಕವನ್ನಾಗಿ ಮಾಡುವಲ್ಲಿ ಯೆಹೋವನು ನಿಮ್ಮ ಪ್ರಯತ್ನಗಳನ್ನು ಹೇರಳವಾಗಿ ಆಶೀರ್ವದಿಸುವನು. ಕುಟುಂಬಕ್ಕಾಗಿರುವ ಈ ವಿಶೇಷ ಸಮಯವು ನಿಮ್ಮ ಈ ಪ್ರಿಯರು ಆಧ್ಯಾತ್ಮಿಕವಾಗಿ ಜೀವಂತವಾಗಿಯೂ ಬಲಿಷ್ಠರಾಗಿಯೂ ಇರುವಂತೆ ಸಹಾಯ ಮಾಡುವುದು.

[ಪುಟ 31ರಲ್ಲಿರುವ ಚೌಕ]

ಸೃಜನಶೀಲರಾಗಿರಿ

“ನಮ್ಮ ಎಳೆಯ ಪುತ್ರಿಯರೊಂದಿಗೆ ಅಧ್ಯಯನ ಮಾಡುತ್ತಿದ್ದಾಗ ನಾನು ಮತ್ತು ನನ್ನ ಗಂಡ, ಅವರೊಟ್ಟಿಗೆ ಒಂದು ಸಭಾ ಕೂಟದ ವಿಷಯವಸ್ತುವನ್ನು ಚರ್ಚಿಸುತ್ತಿದ್ದೆವು ಮತ್ತು ನಂತರ ಆ ವಿಷಯವನ್ನು ಸಾರಾಂಶಿಸುವ ಒಂದು ಚಿತ್ರಬಿಡಿಸುವಂತೆ ಹೇಳುತ್ತಿದ್ದೆವು. ಕೆಲವೊಮ್ಮೆ ನಾವು ಬೈಬಲ್‌ ದೃಶ್ಯಗಳನ್ನು ಅಭಿನಯಿಸುತ್ತಿದ್ದೆವು ಇಲ್ಲವೆ ಕ್ಷೇತ್ರ ಸೇವಾ ನಿರೂಪಣೆಗಳ ಪ್ರ್ಯಾಕ್ಟಿಸ್‌ ಸೆಷನ್‌ಗಳನ್ನು ಮಾಡುತ್ತಿದ್ದೆವು. ನಾವು ಅಧ್ಯಯನವನ್ನು ಅವರ ವಯಸ್ಸಿಗೆ ತಕ್ಕಂತೆ, ಆಸಕ್ತಿಕರ, ಸಕಾರಾತ್ಮಕ ಹಾಗೂ ಆನಂದದಾಯಕವನ್ನಾಗಿ ಮಾಡುತ್ತಿದ್ದೆವು.” —ಜೆ.ಎಮ್‌., ಯುನೈಟೆಡ್‌ ಸ್ಟೇಟ್ಸ್‌.

“ಬೈಬಲ್‌ ವಿದ್ಯಾರ್ಥಿಯೊಬ್ಬಳ ಮಗನಿಗೆ, ಬೈಬಲ್‌ ಸಮಯಗಳಲ್ಲಿ ಸುರುಳಿಯನ್ನು ಹೇಗೆ ಬಳಸುತ್ತಿದ್ದರು ಎಂಬುದನ್ನು ಅರ್ಥಮಾಡಿಸಲಿಕ್ಕಾಗಿ, ನಾವು ಕಂಪ್ಯೂಟರ್‌ನಲ್ಲಿ ಯೆಶಾಯ ಪುಸ್ತಕದಿಂದ ಅಧ್ಯಾಯ ಹಾಗೂ ವಚನದ ಸಂಖ್ಯೆಗಳನ್ನು ಅಳಿಸಿ, ಆ ಇಡೀ ಪುಸ್ತಕವನ್ನು ಮುದ್ರಿಸಿದೆವು. ನಂತರ ಆ ಪುಟಗಳನ್ನು ಒಂದಕ್ಕೊಂದು ಜೋಡಿಸಿ, ಎರಡೂ ತುದಿಗಳಲ್ಲಿ ನಳಿಕೆಗಳನ್ನು ಸಿಕ್ಕಿಸಿದೆವು. ಬಳಿಕ ಆ ಹುಡುಗನು, ಯೇಸು ನಜರೇತಿನ ಸಭಾಮಂದಿರದಲ್ಲಿ ಮಾಡಿದ್ದನ್ನೇ ಮಾಡಲು ಪ್ರಯತ್ನಿಸಿದನು. ಲೂಕ 4:16-21ರಲ್ಲಿರುವ ವೃತ್ತಾಂತವು, ಯೇಸು “ಆ [ಯೆಶಾಯನ] ಸುರುಳಿಯನ್ನು ತೆರೆದು,” ತಾನು ಓದಲು ಬಯಸುತ್ತಿದ್ದ ‘ಸ್ಥಳವನ್ನು ಕಂಡುಹಿಡಿದನು’ ಎಂದು ತಿಳಿಸುತ್ತದೆ. (ಯೆಶಾ. 61:1, 2) ಈ ಹುಡುಗನು ಸಹ ಅದನ್ನೇ ಮಾಡಲು ಪ್ರಯತ್ನಿಸಿದನು. ಆದರೆ ಆ ಉದ್ದವಾದ ಸುರುಳಿಯಲ್ಲಿ ಅಧ್ಯಾಯ ಹಾಗೂ ವಚನದ ಸಂಖ್ಯೆಗಳಿಲ್ಲದ್ದರಿಂದ ಅವನಿಗೆ ಯೆಶಾಯ 61ನೇ ಅಧ್ಯಾಯ ಕಂಡುಹಿಡಿಯಲು ಕಷ್ಟವಾಯಿತು. ಸುರುಳಿಗಳನ್ನು ತೆರೆಯುವ ವಿಷಯದಲ್ಲಿ ಯೇಸುವಿಗಿದ್ದ ಕೌಶಲದಿಂದ ಪ್ರಭಾವಿತನಾಗಿ ಆ ಹುಡುಗನು, ‘ಅಬ್ಬಾ! ಯೇಸು ನಿಜಕ್ಕೂ ಮಹಾನ್‌ ವ್ಯಕ್ತಿ’ ಎಂದು ಉದ್ಗರಿಸಿದನು.”—ವೈ.ಟಿ., ಜಪಾನ್‌.

[ಪುಟ 30ರಲ್ಲಿರುವ ಚಿತ್ರ]

ಪ್ರ್ಯಾಕ್ಟಿಸ್‌ ಸೆಷನ್‌ಗಳು ನಿಮ್ಮ ಮಕ್ಕಳಿಗೆ ಸಮಾನಸ್ಥರ ಒತ್ತಡವನ್ನು ನಿಭಾಯಿಸಲು ಸಹಾಯಮಾಡುವವು

[ಪುಟ 31ರಲ್ಲಿರುವ ಚಿತ್ರ]

ಕುಟುಂಬ ಆರಾಧನೆಯ ಸಂಜೆಯನ್ನು ಆನಂದದಾಯಕವನ್ನಾಗಿ ಮಾಡಿ