ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನ ಜೀವನವನ್ನು ರೂಪಿಸಿದ ಮೂರು ಅಧಿವೇಶನಗಳು

ನನ್ನ ಜೀವನವನ್ನು ರೂಪಿಸಿದ ಮೂರು ಅಧಿವೇಶನಗಳು

ನನ್ನ ಜೀವನವನ್ನು ರೂಪಿಸಿದ ಮೂರು ಅಧಿವೇಶನಗಳು

ಜಾರ್ಜ್‌ ವಾರನ್‌ಚಕ್‌ ಅವರು ಹೇಳಿದಂತೆ

ನಮ್ಮ ಅಧಿವೇಶನವೊಂದರಲ್ಲಿ ಕೇಳಿದ ಒಂದು ವಿಷಯವು ನಿಮ್ಮ ಮನಮುಟ್ಟಿ, ಬದುಕಿನಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡುವಂತೆ ನಿಮಗೆ ಸ್ಫೂರ್ತಿ ಕೊಟ್ಟದ್ದುಂಟೋ? ನನಗೆ ಹೀಗಾಯಿತು. ನಾನೀಗ ಹಿನ್ನೋಟ ಬೀರುವಾಗ, ನನ್ನ ಜೀವನವನ್ನು ರೂಪಿಸಲು ವಿಶೇಷವಾಗಿ ಮೂರು ಅಧಿವೇಶನಗಳು ಸಹಾಯ ಮಾಡಿದವೆಂದು ನನಗನಿಸುತ್ತದೆ. ಮೊದಲನೆಯ ಅಧಿವೇಶನವು, ನನ್ನ ಪುಕ್ಕಲುತನವನ್ನು ಕಡಿಮೆಮಾಡಿತು; ಎರಡನೆಯದ್ದು, ಹೆಚ್ಚು ಸಂತೃಪ್ತನಾಗುವಂತೆ ಮಾಡಿತು; ಮೂರನೆಯದ್ದು, ನಾನು ಹೆಚ್ಚನ್ನು ಕೊಡುವಂತೆ ಸಹಾಯ ಮಾಡಿತು. ಆದರೆ ಈ ಬದಲಾವಣೆಗಳ ಕುರಿತು ಹೇಳುವ ಮುಂಚೆ, ಆ ಅಧಿವೇಶನಗಳ ಮುಂಚಿನ ವರ್ಷಗಳಲ್ಲಿ ಅಂದರೆ ನನ್ನ ಬಾಲ್ಯದಲ್ಲಿ ನಡೆದ ಕೆಲವು ಘಟನೆಗಳನ್ನು ನಿಮಗೆ ತಿಳಿಸುತ್ತೇನೆ.

ನಾನು ಹುಟ್ಟಿದ್ದು 1928ರಲ್ಲಿ. ಮೂರು ಮಂದಿ ಮಕ್ಕಳಲ್ಲಿ ನಾನು ಕೊನೆಯವನು. ನಾನು ಹಾಗೂ ನನ್ನ ಅಕ್ಕಂದಿರಾದ ಮಾರ್ಜಿ ಮತ್ತು ಆಲ್ಗಾ, ಯು.ಎಸ್‌.ಎ. ನ್ಯೂ ಜೆರ್ಸಿಯ ಸೌತ್‌ ಬೌಂಡ್‌ ಬ್ರೂಕ್‌ ಎಂಬಲ್ಲಿ ಬೆಳೆದೆವು. ಆ ಕಾಲದಲ್ಲಿ ಆ ಪಟ್ಟಣದಲ್ಲಿ ಸುಮಾರು 2,000 ನಿವಾಸಿಗಳಿದ್ದರು. ನಾವು ಬಡವರಾಗಿದ್ದರೂ ನಮ್ಮ ತಾಯಿ ಕೊಡುಗೈ ದಾನಿಯಾಗಿದ್ದರು. ಒಂದು ವಿಶೇಷ ಊಟವನ್ನು ತಯಾರಿಸುವಷ್ಟು ಹಣ ಅವರ ಬಳಿ ಇದ್ದರೆ ಸಾಕು, ಅದನ್ನು ತಯಾರಿಸಿ ನೆರೆಯವರಿಗೂ ಹಂಚುತ್ತಿದ್ದರು. ನಾನು ಒಂಬತ್ತು ವರ್ಷದವನಾಗಿದ್ದಾಗ, ಹಂಗೇರಿಯನ್‌ ಭಾಷೆಯಾಡುತ್ತಿದ್ದ ಸಾಕ್ಷಿಯೊಬ್ಬರು ನನ್ನ ತಾಯಿಯನ್ನು ಭೇಟಿಮಾಡಿದರು. ಅದು ನನ್ನ ತಾಯಿಯ ಮಾತೃಭಾಷೆಯಾಗಿದ್ದರಿಂದ, ಅವರು ಆ ಬೈಬಲ್‌ ಸಂದೇಶಕ್ಕೆ ಕಿವಿಗೊಟ್ಟರು. ತದನಂತರ, 20ರ ಹರೆಯದ ಬರ್ತಾ ಎಂಬ ಸಹೋದರಿಯೊಬ್ಬರು ಬೈಬಲ್‌ ಅಧ್ಯಯನವನ್ನು ಮುಂದುವರಿಸಿ ನನ್ನ ತಾಯಿ ಯೆಹೋವನ ಸೇವಕಳಾಗುವಂತೆ ಸಹಾಯ ಮಾಡಿದರು.

ನಾನು ತಾಯಂತಿರದೇ, ಆತ್ಮವಿಶ್ವಾಸವಿಲ್ಲದ ಪುಕ್ಕಲು ಸ್ವಭಾವದವನಾಗಿದ್ದೆ. ಅದಕ್ಕೆ ಕೂಡಿಸುತ್ತಾ, ತಾಯಿ ನನ್ನನ್ನು ಯಾವಾಗಲೂ ಹೀನೈಸುತ್ತಿದ್ದರು. ಒಮ್ಮೆ ನಾನು ಅಳುತ್ತಾ ಅವರಿಗೆ, “ನೀವು ಯಾವಾಗಲೂ ನನ್ನನ್ನು ಟೀಕಿಸುವುದೇಕೆ?” ಎಂದು ಕೇಳಿದೆ. ನನ್ನನ್ನು ಪ್ರೀತಿಸುವುದಾದರೂ ಅತಿಯಾಗಿ ಮುದ್ದುಮಾಡಿ ನನ್ನನ್ನು ಹಾಳುಮಾಡಲು ಬಯಸುವುದಿಲ್ಲವೆಂದು ಅವರು ಹೇಳಿದರು. ತಾಯಿಯ ಇರಾದೆ ಒಳ್ಳೇದಿದ್ದರೂ, ಶ್ಲಾಘನೆಯ ಮಾತುಗಳಿಲ್ಲದೆ ಬೆಳೆಯುತ್ತಿದ್ದ ನನ್ನಲ್ಲಿ ಕೀಳರಿಮೆ ಹುಟ್ಟಿಕೊಂಡಿತು.

ನೆರೆಯ ಹೆಂಗಸೊಬ್ಬಳು ನನ್ನೊಟ್ಟಿಗೆ ದಯೆಯಿಂದ ಮಾತಾಡುತ್ತಿದ್ದಳು. ಒಂದು ದಿನ ಆಕೆ, ತನ್ನ ಪುತ್ರರೊಂದಿಗೆ ಚರ್ಚಿನ ಸಂಡೇ ಸ್ಕೂಲಿಗೆ ಹೋಗುವಂತೆ ನನಗೆ ಹೇಳಿದಳು. ಅಲ್ಲಿಗೆ ಹೋಗುವುದರಿಂದ ಯೆಹೋವನು ಅಪ್ರಸನ್ನಗೊಳ್ಳುತ್ತಾನೆಂದು ನನಗೆ ಗೊತ್ತಿದ್ದರೂ, ಆ ದಯಾಪರ ನೆರೆಯವಳಾಕೆಯ ಮನನೋಯಿಸಲು ನಾನು ಹೆದರುತ್ತಿದ್ದೆ. ಹೀಗಿರುವುದರಿಂದ ನನಗೆ ನನ್ನ ಬಗ್ಗೆಯೇ ನಾಚಿಕೆಯೆನಿಸಿದರೂ ಹಲವಾರು ತಿಂಗಳುಗಳ ವರೆಗೆ ಚರ್ಚಿಗೆ ಹೋದೆ. ಅದೇ ರೀತಿಯಲ್ಲಿ ಶಾಲೆಯಲ್ಲೂ, ಮನುಷ್ಯರ ಭಯದಿಂದಾಗಿ ಮನಸ್ಸಾಕ್ಷಿಗೆ ವಿರುದ್ಧವಾದ ಕೆಲಸಗಳನ್ನು ಮಾಡಿದೆ. ದಬಾಯಿಸುವ ಸ್ವಭಾವದವರಾಗಿದ್ದ ಶಾಲಾ ಪ್ರಾಂಶುಪಾಲರು, ಎಲ್ಲ ಮಕ್ಕಳು ಧ್ವಜವಂದನೆ ಮಾಡುವಂತೆ ನೋಡಿಕೊಳ್ಳಲು ಶಿಕ್ಷಕರಿಗೆ ಹೇಳುತ್ತಿದ್ದರು. ಆದ್ದರಿಂದ ನಾನು ಸಹ ಧ್ವಜವಂದನೆ ಮಾಡುತ್ತಿದ್ದೆ. ಇದು ಸುಮಾರು ಒಂದು ವರ್ಷದ ವರೆಗೆ ನಡೆಯಿತು, ಆದರೆ ನಂತರ ಒಂದು ಬದಲಾವಣೆಯಾಯಿತು.

ಧೈರ್ಯಶಾಲಿಯಾಗಿರಲು ಕಲಿತೆ

1939ರಲ್ಲಿ ನಮ್ಮ ಮನೆಯಲ್ಲಿ ಪುಸ್ತಕ ಅಧ್ಯಯನಕ್ಕಾಗಿ ಒಂದು ಗುಂಪು ಸೇರಲಾರಂಭಿಸಿತು. ಒಬ್ಬ ಯುವ ಪಯನೀಯರ್‌ ಸಹೋದರರಾದ ಬೆನ್‌ ಮಿಸ್‌ಕಾಲ್ಸ್‌ಕೀ ಅದನ್ನು ನಡೆಸುತ್ತಿದ್ದರು. ನಾವು ಅವರನ್ನು ‘ಬಿಗ್‌ ಬೆನ್‌’ ಎಂದು ಕರೆಯುತ್ತಿದ್ದೆವು. ಅದಕ್ಕೊಂದು ಒಳ್ಳೇ ಕಾರಣವೂ ಇತ್ತು. ನನಗವರು, ನಮ್ಮ ಮನೆಯ ಮುಂಬಾಗಿಲಿನಷ್ಟು ಎತ್ತರವೂ ಅಗಲವೂ ಆಗಿ ತೋರುತ್ತಿದ್ದರು. ದೇಹ ಅಜಾನುಬಾಹುವಾಗಿದ್ದರೂ ಅವರ ಹೃದಯ ಕೋಮಲವಾಗಿತ್ತು. ಅವರ ಮುಗುಳ್ನಗೆ ನನ್ನನ್ನು ಹಾಯಾಗಿಸುತ್ತಿತ್ತು. ಹೀಗಿರುವುದರಿಂದ ಬೆನ್‌ರವರು, ತಮ್ಮೊಂದಿಗೆ ಸೇವೆಗೆ ಬರುವಂತೆ ನನ್ನನ್ನು ಕೇಳಿದಾಗ ಸಂತೋಷದಿಂದ ಒಪ್ಪಿಕೊಳ್ಳುತ್ತಿದ್ದೆ. ನಾವು ಗೆಳೆಯರಾದೆವು. ನನಗೆ ಬೇಜಾರಾಗುತ್ತಿದ್ದಾಗಲೆಲ್ಲ ಅವರು, ಒಬ್ಬ ಅಣ್ಣ ತನ್ನ ತಮ್ಮನೊಂದಿಗೆ ಮಾತಾಡುವಂತೆ ಕಾಳಜಿಪೂರ್ವಕ ರೀತಿಯಲ್ಲಿ ಮಾತಾಡುತ್ತಿದ್ದರು. ಇದು ನನಗೆ ತುಂಬ ಸಹಾಯಮಾಡಿತು. ನಾನವರನ್ನು ತುಂಬ ಪ್ರೀತಿಸಲಾರಂಭಿಸಿದೆ.

1941ರಲ್ಲಿ ಮಿಸೌರಿ ಸೆಂಟ್‌ ಲೂಯಿಯಲ್ಲಿ ನಡೆಯಲಿದ್ದ ಅಧಿವೇಶನಕ್ಕೆ ತಮ್ಮ ಕಾರ್‌ನಲ್ಲಿ ಬರುವಂತೆ ಬೆನ್‌ ಅವರು ನಮ್ಮ ಕುಟುಂಬಕ್ಕೆ ಹೇಳಿದರು. ನನ್ನ ಸಂಭ್ರಮವನ್ನು ಊಹಿಸಬಲ್ಲಿರಾ? ಈತನಕ ನಾನು ಮನೆಯಿಂದ ಕೇವಲ 80 ಕಿ.ಮೀ. ದೂರ ಪ್ರಯಾಣ ಮಾಡಿದ್ದೆ. ಈಗಲಾದರೋ ನಾನು 1,500 ಕಿ.ಮೀ.ಗಿಂತಲೂ ಹೆಚ್ಚು ದೂರದ ಪ್ರದೇಶಕ್ಕೆ ಹೋಗಲಿದ್ದೆ! ಆದರೆ ಸೆಂಟ್‌ ಲೂಯಿ ನಗರದಲ್ಲಿ ಸಮಸ್ಯೆಗಳೆದ್ದವು. ಸಾಕ್ಷಿಗಳು ತಮ್ಮ ಮನೆಗಳಲ್ಲಿ ತಂಗುವಂತೆ ಜನರು ಮಾಡಿದ್ದ ಎಲ್ಲಾ ಏರ್ಪಾಡುಗಳನ್ನು ರದ್ದುಗೊಳಿಸಲು ಅಲ್ಲಿನ ಪಾದ್ರಿಗಳು ಅಪ್ಪಣೆಕೊಟ್ಟಿದ್ದರು. ಅನೇಕರು ರದ್ದುಮಾಡಿದರು. ನಾವು ಯಾರ ಮನೆಯಲ್ಲಿ ತಂಗಲಿದ್ದೆವೋ ಆ ಕುಟುಂಬಕ್ಕೂ ಬೆದರಿಕೆಯೊಡ್ಡಲಾಗಿತ್ತು. ಹಾಗಿದ್ದರೂ ಅವರು ನಮ್ಮನ್ನು ಬರಮಾಡಿಕೊಂಡರು. ವಸತಿಸೌಕರ್ಯ ಕೊಡುವುದಾಗಿ ತಾವು ಕೊಟ್ಟ ಮಾತನ್ನು ಮುರಿಯುವುದಿಲ್ಲವೆಂದು ನಮ್ಮ ಆತಿಥೇಯರು ಹೇಳಿದರು. ಅವರ ಧೈರ್ಯ ನೋಡಿ ನಾನು ಪ್ರಭಾವಿತನಾದೆ.

ನನ್ನ ಅಕ್ಕಂದಿರು ಅದೇ ಅಧಿವೇಶನದಲ್ಲಿ ದೀಕ್ಷಾಸ್ನಾನ ಪಡೆದರು. ಬ್ರೂಕ್ಲಿನ್‌ ಬೆತೆಲಿನಿಂದ ಬಂದಿದ್ದ ಸಹೋದರ ರದರ್‌ಫರ್ಡ್‌ ಅದೇ ದಿನ ಒಂದು ಮನಕಲಕುವ ಭಾಷಣ ಕೊಟ್ಟರು. ಆ ಭಾಷಣದಲ್ಲಿ ಅವರು, ದೇವರ ಚಿತ್ತವನ್ನು ಮಾಡಲಿಚ್ಛಿಸುವ ಎಲ್ಲ ಮಕ್ಕಳಿಗೆ ಎದ್ದು ನಿಲ್ಲುವಂತೆ ಕೇಳಿಕೊಂಡರು. ಸುಮಾರು 15,000 ಮಕ್ಕಳು ಎದ್ದುನಿಂತರು! ನಾನೂ ಎದ್ದುನಿಂತೆ. ಸಾರುವ ಕೆಲಸದಲ್ಲಿ ತಮ್ಮಿಂದಾದದ್ದೆಲ್ಲವನ್ನೂ ಮಾಡಲು ಬಯಸುವವರು “ಹೌದು” ಎಂದು ಜೋರಾಗಿ ಹೇಳುವಂತೆ ಕೇಳಿಕೊಂಡರು. ಇತರ ಮಕ್ಕಳೊಂದಿಗೆ ನಾನು ಸಹ “ಹೌದು” ಎಂದು ಗಟ್ಟಿಯಾಗಿ ಹೇಳಿದೆ. ಅದರ ಬಳಿಕ ಇಡೀ ಸಭಾಂಗಣದಲ್ಲಿ ಭಾರೀ ಚಪ್ಪಾಳೆಯ ಘೋಷ ಮೊಳಗಿತು. ಇದು ನನ್ನಲ್ಲಿ ಹುಮ್ಮಸ್ಸನ್ನು ತುಂಬಿಸಿತು.

ಅಧಿವೇಶನದ ಬಳಿಕ, ವೆಸ್ಟ್‌ ವರ್ಜಿನಿಯಾದಲ್ಲಿದ್ದ ಸಹೋದರರೊಬ್ಬರನ್ನು ನಾವು ಭೇಟಿಮಾಡಲು ಹೋದೆವು. ಒಮ್ಮೆ ಅವರು ಸೇವೆಗೆ ಹೋಗಿದ್ದಾಗ ಕೋಪೋದ್ರಿಕ್ತಗೊಂಡಿದ್ದ ಜನರ ಗುಂಪೊಂದು ಅವರನ್ನು ಹೊಡೆದು, ಮೈಮೇಲೆಲ್ಲ ಡಾಂಬರು ಸುರಿದು, ಹಕ್ಕಿ ಗರಿಗಳನ್ನು ಅಂಟಿಸಿದ್ದರೆಂದು ಅವರು ತಿಳಿಸಿದರು. ನಾನು ಉಸಿರುಕಟ್ಟಿ ಒಂದೇ ಸಮನೆ ಅವರ ಮಾತುಗಳನ್ನು ಕೇಳುತ್ತಲಿದ್ದೆ. “ಆದರೆ ನಾನು ಸಾರುವುದನ್ನು ನಿಲ್ಲಿಸಲಾರೆ” ಎಂದು ಆ ಸಹೋದರರು ಹೇಳಿದರು. ಆ ಸಹೋದರನ ಮನೆಯಿಂದ ಹಿಂದೆ ಬರುವಾಗ ನನಗೆ ದಾವೀದನಂತೆ ಅನಿಸಿತು. ಗೋಲ್ಯಾತನಂತಿದ್ದ ನನ್ನ ಶಾಲಾ ಪ್ರಾಂಶುಪಾಲರನ್ನು ಎದುರಿಸಲು ನಾನೀಗ ಸಿದ್ಧನಿದ್ದೆ.

ಅಧಿವೇಶನದ ನಂತರ ನಾನು ಪುನಃ ಶಾಲೆಗೆ ಹೋದಾಗ ಪ್ರಾಂಶುಪಾಲರ ಬಳಿ ಹೋದೆ. ಅವರು ನನ್ನನ್ನು ಕೆಕ್ಕರಿಸಿ ನೋಡಿದರು. ನಾನು ಮನಸ್ಸಲ್ಲೇ ಯೆಹೋವನ ಬಳಿ ಸಹಾಯಕ್ಕಾಗಿ ಬೇಡಿ, ನಂತರ ಪ್ರಾಂಶುಪಾಲರ ಮುಂದೆ ನಿಂತು, “ನಾನು ಯೆಹೋವನ ಸಾಕ್ಷಿಗಳ ಅಧಿವೇಶನಕ್ಕೆ ಹೋಗಿದ್ದೆ. ಇನ್ನು ಮುಂದೆ ನಾನು ಧ್ವಜವಂದನೆ ಮಾಡುವುದಿಲ್ಲ!” ಎಂದು ಕೂಡಲೇ ಹೇಳಿಬಿಟ್ಟೆ. ತುಂಬ ಹೊತ್ತಿನ ವರೆಗೆ ಅವರ ಬಾಯಿಂದ ಮಾತೇ ಹೊರಬರಲಿಲ್ಲ. ನಂತರ ಅವರು ನಿಧಾನವಾಗಿ ಕುರ್ಚಿಯಿಂದೆದ್ದು ನನ್ನತ್ತ ಬಂದರು. ಅವರ ಮುಖ ಕೋಪದಿಂದ ಕೆಂಡದಂತಾಗಿತ್ತು. “ನೀನು ಧ್ವಜವಂದನೆ ಮಾಡಲೇಬೇಕು, ಇಲ್ಲದಿದ್ದಲ್ಲಿ ಶಾಲೆಯಿಂದ ಹೊರನಡಿ!” ಎಂದು ಕಿರುಚಿದರು. ಈ ಸಲವಂತೂ ನಾನು ರಾಜಿಮಾಡಿಕೊಳ್ಳಲಿಲ್ಲ. ಇದರಿಂದಾಗಿ ನನಗೆ ಒಳಗಿಂದೊಳಗೇ, ಹಿಂದೆಂದೂ ಅನುಭವಿಸಿರದಷ್ಟು ಸಂತೋಷವಾಯಿತು.

ಶಾಲೆಯಲ್ಲಿ ಏನು ನಡೆಯಿತೆಂಬುದನ್ನು ಬೆನ್‌ರವರಿಗೆ ತಿಳಿಸಲು ನಾನು ತುದಿಗಾಲಲ್ಲಿ ನಿಂತಿದ್ದೆ. ರಾಜ್ಯ ಸಭಾಗೃಹದಲ್ಲಿ ಅವರು ನನ್ನ ಕಣ್ಣಿಗೆಬಿದ್ದ ಕೂಡಲೇ, “ನನ್ನನ್ನು ಶಾಲೆಯಿಂದ ಹೊರಹಾಕಿದ್ದಾರೆ! ನಾನು ಧ್ವಜವಂದನೆ ಮಾಡಲಿಲ್ಲ!” ಎಂದು ಕೂಗಿ ಹೇಳಿದೆ. ಬೆನ್‌ರವರು ನನ್ನನ್ನು ತೋಳಿನಿಂದ ಬಳಸಿ ನಸುನಗುತ್ತಾ, “ಖಂಡಿತವಾಗಿಯೂ ಯೆಹೋವನು ನಿನ್ನನ್ನು ಪ್ರೀತಿಸುತ್ತಾನೆ” ಎಂದು ಹೇಳಿದರು. (ಧರ್ಮೋ. 31:6) ಆ ಮಾತುಗಳು ನನಗೆಷ್ಟು ಸ್ಫೂರ್ತಿ ಕೊಟ್ಟವು! 1942ರ ಜೂನ್‌ 15ರಂದು ನಾನು ದೀಕ್ಷಾಸ್ನಾನ ತೆಗೆದುಕೊಂಡೆ.

ಸಂತೃಪ್ತನಾಗಿರಲು ಕಲಿತೆ

IIನೇ ಲೋಕ ಯುದ್ಧದ ಬಳಿಕ, ದೇಶದ ಆರ್ಥಿಕ ಸ್ಥಿತಿಯಲ್ಲಿ ತಟ್ಟನೇ ಅಭಿವೃದ್ಧಿಯಾಯಿತು. ದೇಶದಾದ್ಯಂತ ಪ್ರಾಪಂಚಿಕತೆಯ ಅಲೆಯೆದ್ದಿತು. ಒಳ್ಳೇ ಸಂಬಳ ತರುವ ಉದ್ಯೋಗ ನನಗಿತ್ತು. ಹೀಗಿರುವುದರಿಂದ ನಾನು ಈ ಹಿಂದೆ ಯಾವುದರ ಬಗ್ಗೆ ಬರೀ ಕನಸು ಕಾಣುತ್ತಿದ್ದೆನೋ ಅದೆಲ್ಲವನ್ನೂ ಈಗ ಖರೀದಿಸಲು ಶಕ್ತನಾಗಿದ್ದೆ. ನನ್ನ ಕೆಲವು ಗೆಳೆಯರು ಮೋಟಾರ್‌ಬೈಕುಗಳನ್ನು ಕೊಂಡರು; ಇನ್ನಿತರರು ತಮ್ಮ ಮನೆಗಳನ್ನು ನವೀಕರಿಸಿದರು. ನಾನೊಂದು ಹೊಚ್ಚ ಹೊಸ ಕಾರನ್ನು ಖರೀದಿಸಿದೆ. ಭೌತಿಕ ಸುಖಸೌಕರ್ಯಗಳಿಗಾಗಿದ್ದ ನನ್ನ ದಾಹದಿಂದಾಗಿ ಸ್ವಲ್ಪ ಸಮಯದಲ್ಲೇ, ರಾಜ್ಯಾಭಿರುಚಿಗಳು ನನ್ನ ಜೀವನದಲ್ಲಿ ಮೂಲೆಗೆ ಸೇರಿದವು. ನಾನು ತಪ್ಪಾದ ದಿಶೆಯಲ್ಲಿ ಸಾಗುತ್ತಿದ್ದೆನೆಂದು ನನಗೆ ಗೊತ್ತಿತ್ತು. ಆದರೆ ಸಂತೋಷಕರವಾಗಿ, 1950ರಲ್ಲಿ ನ್ಯೂ ಯಾರ್ಕ್‌ ಸಿಟಿಯಲ್ಲಿ ನಡೆದ ಒಂದು ಅಧಿವೇಶನವು ನನ್ನನ್ನು ಪುನಃ ಸರಿ ದಾರಿಗೆ ತಂದಿತು.

ಆ ಅಧಿವೇಶನದಲ್ಲಿ, ಪ್ರತಿ ಭಾಷಣಕರ್ತನೂ ಸಾರುವ ಕೆಲಸದಲ್ಲಿ ಮುಂದೆ ಸಾಗುವಂತೆ ಸಭಿಕರನ್ನು ಉತ್ತೇಜಿಸಿದನು. “ಅಗತ್ಯಕ್ಕೆ ತಕ್ಕಷ್ಟು ವಸ್ತುಗಳನ್ನು ಮಾತ್ರ ಇಟ್ಟುಕೊಂಡು, ಓಟದಲ್ಲಿ ಓಡಿ” ಎಂದು ಒಬ್ಬ ಭಾಷಣಕರ್ತನು ಪ್ರೇರೇಪಿಸಿದನು. ಅವರ ಮಾತು ನೇರವಾಗಿ ನನಗೇ ಹೇಳಿದಂತಿತ್ತು. ಒಂದು ಗಿಲ್ಯಡ್‌ ತರಗತಿಯ ಪದವಿಪ್ರದಾನ ಕಾರ್ಯಕ್ರಮವನ್ನೂ ನಾನು ನೋಡಿದೆ. ಇದು, ‘ನನ್ನ ವಯಸ್ಸಿನ ಈ ಸಾಕ್ಷಿಗಳು ಬೇರೆ ದೇಶಗಳಿಗೆ ಹೋಗಿ ಸೇವೆಮಾಡಲಿಕ್ಕಾಗಿ ಭೌತಿಕ ಸುಖಸೌಕರ್ಯಗಳನ್ನು ತ್ಯಾಗಮಾಡುತ್ತಿರುವಲ್ಲಿ, ಕಡಿಮೆಪಕ್ಷ ನಾನು ಇಲ್ಲಿ ಸ್ವದೇಶದಲ್ಲಿದ್ದುಕೊಂಡು ಅದನ್ನು ಮಾಡಬೇಕು’ ಎಂದು ಯೋಚಿಸುವಂತೆ ಮಾಡಿತು. ಆ ಅಧಿವೇಶನ ಕೊನೆಗೊಳ್ಳುವಷ್ಟರಲ್ಲಿ, ನಾನು ಪಯನೀಯರನಾಗಲು ಮನಸ್ಸುಮಾಡಿಬಿಟ್ಟಿದ್ದೆ.

ಈ ನಡುವೆ, ನನ್ನ ಸಭೆಯಲ್ಲಿ ಹುರುಪಿನ ಸಹೋದರಿಯಾಗಿದ್ದ ಎವ್ಲಿನ್‌ ಮೊಂಡಾಕ್‌ಳನ್ನು ಇಷ್ಟಪಡಲಾರಂಭಿಸಿದೆ. ಆರು ಮಂದಿ ಮಕ್ಕಳನ್ನು ಬೆಳೆಸಿದ್ದ ಆಕೆಯ ತಾಯಿ ಒಬ್ಬ ದಿಟ್ಟ ಮಹಿಳೆಯಾಗಿದ್ದರು. ಒಂದು ದೊಡ್ಡ ರೋಮನ್‌ ಕ್ಯಾಥೊಲಿಕ್‌ ಚರ್ಚಿನ ಮುಂದೆ ಬೀದಿಸಾಕ್ಷಿ ಕಾರ್ಯ ಮಾಡುವುದನ್ನು ಅವರು ತುಂಬ ಇಷ್ಟಪಡುತ್ತಿದ್ದರು. ಕ್ರೋಧಿತನಾಗುತ್ತಿದ್ದ ಪಾದ್ರಿ ಅವರಿಗೆ ಅಲ್ಲಿಂದ ಹೊರಡಲು ಎಷ್ಟೇ ಸಲ ಹೇಳಿದರೂ ಅವರು ಅಲ್ಲಿಂದ ಅಲ್ಲಾಡುತ್ತಿರಲಿಲ್ಲ. ಎವ್ಲಿನ್‌ಳಿಗೂ ತನ್ನ ತಾಯಿಯಂತೆ ಮನುಷ್ಯರ ಭಯವಿರಲಿಲ್ಲ.—ಜ್ಞಾನೋ. 29:25.

1951ರಲ್ಲಿ ನಾನು ಎವ್ಲಿನ್‌ಳನ್ನು ಮದುವೆಯಾದೆ. ನಾವು ನಮ್ಮ ಉದ್ಯೋಗಗಳನ್ನು ಬಿಟ್ಟು ಪಯನೀಯರ್‌ ಸೇವೆ ಆರಂಭಿಸಿದೆವು. ಸರ್ಕಿಟ್‌ ಮೇಲ್ವಿಚಾರಕರೊಬ್ಬರು ಅಮಾಗನ್‌ಸೆಟ್‌ ಎಂಬಲ್ಲಿಗೆ ಸ್ಥಳಾಂತರಿಸಲು ನಮ್ಮನ್ನು ಉತ್ತೇಜಿಸಿದರು. ಇದು, ನ್ಯೂ ಯಾರ್ಕ್‌ ಸಿಟಿಯಿಂದ ಸುಮಾರು 160 ಕಿ.ಮೀ. ದೂರದಲ್ಲಿ ಆಟ್ಲಾಂಟಿಕ್‌ ಸಾಗರದ ತೀರದಲ್ಲಿದ್ದ ಹಳ್ಳಿಯಾಗಿತ್ತು. ನಮಗಾಗಿ ಅಲ್ಲಿ ಯಾವುದೇ ವಸತಿ ಸೌಕರ್ಯ ಲಭ್ಯವಿಲ್ಲವೆಂದು ಅಲ್ಲಿನ ಸಭೆಯಿಂದ ಸುದ್ದಿ ಸಿಕ್ಕಿದಾಗ, ನಾವು ಒಂದು ಟ್ರೇಲರ್‌ಗಾಗಿ ಹುಡುಕಲಾರಂಭಿಸಿದೆವು. ಆದರೆ ನಮ್ಮ ಬಳಿ ಇದ್ದ ಹಣಕ್ಕೆ ಯಾವುದೇ ಟ್ರೇಲರ್‌ ಸಿಗಲಿಲ್ಲ. ಆಮೇಲೆ, ಕೆಟ್ಟುಹೋಗಿದ್ದ ಒಂದು ಟ್ರೇಲರ್‌ ಮೇಲೆ ನಮ್ಮ ಕಣ್ಣುಬಿತ್ತು. ಅದರ ಮಾಲೀಕನು, ಅದಕ್ಕಾಗಿ 900 ಡಾಲರು ಕೇಳಿದನು. ನಮ್ಮ ಮದುವೆಗೆ ಉಡುಗೊರೆಯಾಗಿ ಸಿಕ್ಕಿದ್ದ ಹಣ ಸರಿಯಾಗಿ ಅಷ್ಟೇ ಇತ್ತು! ಈ ಹಣದಿಂದ ಆ ಟ್ರೇಲರನ್ನು ಖರೀದಿಸಿ, ರಿಪೇರಿಮಾಡಿ, ನಮ್ಮ ಹೊಸ ಟೆರಿಟೊರಿಗೆ ಕೊಂಡೊಯ್ದೆವು. ನಾವಲ್ಲಿ ತಲಪಿದಾಗ ನಮ್ಮ ಬಳಿ ಬಿಡಿಗಾಸೂ ಇರಲಿಲ್ಲ. ಪಯನೀಯರರಾಗಿ ಹೇಗೆ ಜೀವಿಸುವುದೋ ಎಂಬ ಯೋಚನೆ ನಮ್ಮನ್ನು ಕಾಡಲಾರಂಭಿಸಿತು.

ಎವ್ಲಿನ್‌ ಮನೆಗಳನ್ನು ಶುಚಿಮಾಡುವ ಕೆಲಸಮಾಡಿದಳು. ನಾನು ಒಂದು ಇಟಾಲಿಯನ್‌ ರೆಸ್ಟೊರೆಂಟ್‌ ಅನ್ನು ರಾತ್ರಿಹೊತ್ತಿನಲ್ಲಿ ಸ್ವಚ್ಛಗೊಳಿಸುವ ಕೆಲಸಮಾಡುತ್ತಿದ್ದೆ. “ದಿನಾಲೂ ಮಿಕ್ಕ ಊಟವನ್ನು ನಿನ್ನ ಹೆಂಡತಿಗೋಸ್ಕರ ಮನೆಗೆ ತೆಗೆದುಕೊಂಡು ಹೋಗು” ಎಂದು ರೆಸ್ಟೊರೆಂಟ್‌ ಮಾಲೀಕರು ಹೇಳಿದರು. ಆದುದರಿಂದ, ನಾನು ಬೆಳಗ್ಗಿನ ಜಾವ ಎರಡು ಗಂಟೆಗೆ ಮನೆ ತಲಪಿದ ಬಳಿಕ, ನಮ್ಮ ಟ್ರೇಲರ್‌ ತುಂಬ ಪಿಜ್ಜಾ ಮತ್ತು ಪಾಸ್ಟಾದ ಪರಿಮಳ ಘಮಘಮಿಸುತ್ತಿತ್ತು. ಅಂಥ ಊಟವನ್ನು ನಾವು ಬಿಸಿಮಾಡಿ ತಿನ್ನಬೇಕಾಗುತ್ತಿದ್ದರೂ ಅದು, ವಿಶೇಷವಾಗಿ ಚಳಿಗಾಲದಲ್ಲಿ ಆ ಶೀತಲ ಟ್ರೇಲರ್‌ನೊಳಗೆ ಗಡಗಡನೆ ನಡುಗುತ್ತಿದ್ದ ನಮಗೆ ನಿಜವಾಗಿಯೂ ದೊಡ್ಡ ಔತಣದಂತಿತ್ತು. ಅಷ್ಟುಮಾತ್ರವಲ್ಲದೆ ಸಭೆಯ ಸಹೋದರರು ಆಗಾಗ್ಗೆ ಟ್ರೇಲರ್‌ನ ಮೆಟ್ಟಲುಗಳ ಮೇಲೆ ನಮಗೋಸ್ಕರ ಒಂದು ದೊಡ್ಡ ಮೀನನ್ನು ಇಟ್ಟುಹೋಗುತ್ತಿದ್ದರು. ಅಮಾಗನ್‌ಸೆಟ್‌ನಲ್ಲಿ ಆ ಪ್ರಿಯ ಸಹೋದರರೊಂದಿಗೆ ನಾವು ಸೇವೆ ಮಾಡಿದ ವರ್ಷಗಳಲ್ಲಿ, ಅಗತ್ಯಕ್ಕೆ ಬೇಕಾದಷ್ಟೇ ವಸ್ತುಗಳಿಂದ ಸಂತೃಪ್ತರಾಗಿರುವಾಗ ಜೀವನ ಸಂತೋಷಭರಿತವಾಗಿರುತ್ತದೆಂದು ನಾವು ಕಲಿತೆವು. ಅವು ಹರ್ಷದಾಯಕ ವರ್ಷಗಳಾಗಿದ್ದವು.

ನಮ್ಮನ್ನೇ ಇನ್ನಷ್ಟು ಹೆಚ್ಚಾಗಿ ನೀಡಿಕೊಳ್ಳಲು ಪ್ರಚೋದನೆ

1953ರ ಜುಲೈ ತಿಂಗಳಲ್ಲಿ, ನ್ಯೂ ಯಾರ್ಕ್‌ ಸಿಟಿಯಲ್ಲಿ ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಹಾಜರಾಗಲು ವಿದೇಶಗಳಿಂದ ಬಂದ ನೂರಾರು ಮಿಷನೆರಿಗಳನ್ನು ನಾವು ಸ್ವಾಗತಿಸಿದೆವು. ಅವರು ಸೊಗಸಾದ ಅನುಭವಗಳನ್ನು ತಿಳಿಸಿದರು. ಅವರಲ್ಲಿದ್ದ ಉತ್ಸಾಹಸಂಭ್ರಮ ಎಲ್ಲರಲ್ಲೂ ವ್ಯಾಪಿಸಿತು. ಅಷ್ಟುಮಾತ್ರವಲ್ಲ, ಅನೇಕ ದೇಶಗಳಿಗೆ ರಾಜ್ಯ ಸಂದೇಶವು ಇನ್ನೂ ತಲಪಿಲ್ಲವೆಂದು ಅಧಿವೇಶನದಲ್ಲಿ ಭಾಷಣಕರ್ತರೊಬ್ಬರು ಒತ್ತಿಹೇಳಿದಾಗ, ನಾವೇನು ಮಾಡಬೇಕೆಂಬುದನ್ನು ಗ್ರಹಿಸಿದೆವು. ನಮ್ಮ ಶುಶ್ರೂಷೆಯನ್ನು ಹೆಚ್ಚಿಸುವ ಮೂಲಕ, ನಾವು ನಮ್ಮನ್ನು ಇನ್ನಷ್ಟು ಹೆಚ್ಚು ನೀಡಿಕೊಳ್ಳಬೇಕಾಗಿತ್ತು. ಆ ಅಧಿವೇಶನದಲ್ಲೇ ನಾವು ಮಿಷನೆರಿ ತರಬೇತಿಗಾಗಿ ಅರ್ಜಿಹಾಕಿದೆವು. ಅದೇ ವರ್ಷದಲ್ಲಿ ನಮ್ಮನ್ನು ಗಿಲ್ಯಡ್‌ ಶಾಲೆಯ 23ನೇ ತರಗತಿಗೆ ಆಮಂತ್ರಿಸಲಾಯಿತು. ಅದು 1954ರ ಫೆಬ್ರವರಿ ತಿಂಗಳಲ್ಲಿ ಆರಂಭವಾಯಿತು. ಅದಕ್ಕೆ ಹಾಜರಾಗುವುದು ಎಂಥ ಸುಯೋಗ!

ನಮ್ಮನ್ನು ಬ್ರಸಿಲ್‌ ದೇಶಕ್ಕೆ ನೇಮಿಸಲಾಗಿದೆಯೆಂದು ತಿಳಿದುಬಂದಾಗ ಪುಳಕಿತರಾದೆವು. ಅಲ್ಲಿ ತಲಪಲು ಉಗಿ ಹಡಗಿನಲ್ಲಿ 14 ದಿನಗಳ ಯಾನಕ್ಕಾಗಿ ಹೊರಡುವ ಮುಂಚೆ, ಬೆತೆಲ್‌ನಲ್ಲಿ ಜವಾಬ್ದಾರಿಯುತ ಸಹೋದರರೊಬ್ಬರು, “ನಿಮ್ಮೊಟ್ಟಿಗೆ ಒಂಬತ್ತು ಮಂದಿ ಅವಿವಾಹಿತ ಮಿಷನೆರಿ ಸಹೋದರಿಯರು ಬ್ರಸಿಲ್‌ಗೆ ಪ್ರಯಾಣಿಸಲಿದ್ದಾರೆ. ಅವರನ್ನು ಹುಷಾರಾಗಿ ನೋಡಿಕೊಳ್ಳಿ!” ಎಂದು ನನಗೆ ಹೇಳಿದರು. ನನ್ನ ಹಿಂದೆ ಸಾಲಾಗಿ ಹತ್ತು ಮಂದಿ ಯುವತಿಯರು ಹಡಗನ್ನೇರಿದಾಗ ನಾವಿಕರ ಮುಖದಲ್ಲಿ ಮೂಡಿದ ತುಂಟನಗೆಯನ್ನು ಊಹಿಸಿಕೊಳ್ಳಬಲ್ಲಿರೋ? ಆ ಸಹೋದರಿಯರಿಗಾದರೋ ಸನ್ನಿವೇಶವನ್ನು ನಿಭಾಯಿಸಲು ಸ್ವಲ್ಪವೂ ಕಷ್ಟವೆನಿಸಲಿಲ್ಲ. ನಾನು ಮಾತ್ರ, ಎಲ್ಲರೂ ಸುರಕ್ಷಿತರಾಗಿ ಬ್ರಸಿಲ್‌ ನೆಲದ ಮೇಲೆ ಕಾಲಿರಿಸಿದಾಗಲೇ ನೆಮ್ಮದಿಯ ನಿಟ್ಟುಸಿರುಬಿಟ್ಟೆ!

ಪೋರ್ಚುಗೀಸ್‌ ಭಾಷೆಯನ್ನು ಕಲಿತ ಬಳಿಕ ನನ್ನನ್ನು, ಬ್ರಸಿಲ್‌ ದೇಶದ ದಕ್ಷಿಣಕ್ಕಿರುವ ರೀಯೊ ಗ್ರಾಂಡ್‌ ಡೊ ಸುಲ್‌ ಎಂಬ ರಾಜ್ಯದಲ್ಲಿ ಸರ್ಕಿಟ್‌ ಕೆಲಸಕ್ಕಾಗಿ ನೇಮಿಸಲಾಯಿತು. ನನ್ನ ಮುಂಚೆ ಇದ್ದಂಥ ಸರ್ಕಿಟ್‌ ಮೇಲ್ವಿಚಾರಕನು ಅವಿವಾಹಿತನಾಗಿದ್ದನು. ಅವನು ನನಗೂ ನನ್ನ ಹೆಂಡತಿಗೂ ಹೇಳಿದ್ದು: “ಇದೊಂದು ಗುಡ್ಡಗಾಡು ಪ್ರದೇಶ. ಆದ್ದರಿಂದ ಒಂದು ದಂಪತಿಯನ್ನು ಇಲ್ಲಿಗೆ ಕಳುಹಿಸಿರುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು.” ಸಭೆಗಳು ವಿಸ್ತಾರವಾದ ಗ್ರಾಮೀಣ ಪ್ರದೇಶದಲ್ಲಿ ಚದರಿಕೊಂಡಿದ್ದವು. ಕೆಲವೊಂದನ್ನು ತಲಪಲಿಕ್ಕಾಗಿ ಲಾರಿಗಳಲ್ಲೇ ಪ್ರಯಾಣಿಸಬೇಕಾಗುತ್ತಿತ್ತು. ಲಾರಿ ಚಾಲಕನಿಗೆ ಊಟ ಖರೀದಿಸಿ ಕೊಡಲು ಒಪ್ಪಿದರೆ ಮಾತ್ರ ಅವನು ಲಾರಿ ಹತ್ತಲು ಬಿಡುತ್ತಿದ್ದನು. ಕುದುರೆಸವಾರರಂತೆ ನಾವು ಸರಕಿನ ಮೇಲೆ ಕಾಲುಗಳನ್ನು ಹರವಿ, ಸರಕಿನ ಸುತ್ತ ಕಟ್ಟಲಾಗಿದ್ದ ತೊಗಲಪಟ್ಟಿಗಳನ್ನು ಎರಡೂ ಕೈಗಳಿಂದ ಹಿಡಿದುಕೊಂಡು ಪ್ರಯಾಣಿಸುತ್ತಿದ್ದೆವು. ಲಾರಿ ರಸ್ತೆಗಳ ತಿರುವುಗಳಲ್ಲಿ ಥಟ್ಟನೆ ತಿರುಗುತ್ತಿದ್ದಾಗ ನಾವು ಬೀಳದಂತೆ ಆ ಪಟ್ಟಿಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಿದ್ದೆವು. ಅಂಥ ಸಂದರ್ಭಗಳಲ್ಲಿ ಸರಕು ಎಷ್ಟು ವಾಲುತ್ತಿತ್ತೆಂದರೆ ಅದರಿಂದಾಗಿ ನಮಗೆ ಆಳವಾದ ಕಣಿವೆಗಳ ತಳವೂ ಕಾಣಸಿಗುತ್ತಿತ್ತು! ಆದರೆ ನಮ್ಮ ಆಗಮನಕ್ಕಾಗಿ ಕಾತರದಿಂದ ಕಾದುಕೊಂಡಿರುತ್ತಿದ್ದ ಸಹೋದರರ ನಗುಮುಖಗಳನ್ನು ನೋಡುವಾಗ, ನಾವು ದಿನಪೂರ್ತಿ ಮಾಡುತ್ತಿದ್ದ ಅಂಥ ಪ್ರಯಾಣಗಳು ಸಾರ್ಥಕವೆನಿಸುತ್ತಿದ್ದವು.

ನಾವು ಸಹೋದರರ ಮನೆಗಳಲ್ಲೇ ತಂಗುತ್ತಿದ್ದೆವು. ಅವರು ತುಂಬ ಬಡವರಾಗಿದ್ದರೂ, ಉದಾರವಾಗಿ ಕೊಡುವುದರಿಂದ ಅದು ಅವರನ್ನು ತಡೆಯುತ್ತಿರಲಿಲ್ಲ. ದೂರದ ಪ್ರದೇಶವೊಂದರಲ್ಲಿ, ಎಲ್ಲ ಸಹೋದರರು ಮಾಂಸವನ್ನು ಪ್ಯಾಕಿಂಗ್‌ ಮಾಡುವ ಕಾರ್ಖಾನೆಯೊಂದರಲ್ಲಿ ಕೆಲಸಮಾಡುತ್ತಿದ್ದರು. ಅವರ ಸಂಬಳ ಎಷ್ಟು ಕಡಿಮೆಯಿತ್ತೆಂದರೆ, ಅದು ಅವರ ಒಂದು ಹೊತ್ತಿನ ಊಟಕ್ಕಷ್ಟೇ ಸಾಲುತ್ತಿತ್ತು. ಅವರು ಕೆಲಸಮಾಡದಿದ್ದಲ್ಲಿ ಆ ದಿನ ಸಂಬಳ ಸಿಗುತ್ತಿರಲಿಲ್ಲ. ಆದರೂ ನಮ್ಮ ಸರ್ಕಿಟ್‌ ಸಂದರ್ಶನಗಳ ಸಮಯದಲ್ಲಿ ಸಭಾ ಚಟುವಟಿಕೆಗಳನ್ನು ಬೆಂಬಲಿಸಲಿಕ್ಕಾಗಿ ಅವರು ಎರಡು ದಿನ ರಜೆ ತೆಗೆದುಕೊಳ್ಳುತ್ತಿದ್ದರು. ಅವರು ಯೆಹೋವನಲ್ಲಿ ಭರವಸೆಯಿಟ್ಟರು. ದೇವರ ರಾಜ್ಯಕ್ಕೋಸ್ಕರ ತ್ಯಾಗಗಳನ್ನು ಮಾಡುವುದರ ಬಗ್ಗೆ ಆ ದೀನಭಾವದ ಸಹೋದರರು ಕಲಿಸಿದ ಪಾಠಗಳನ್ನು ನಾವೆಂದಿಗೂ ಮರೆಯೆವು. ಅವರೊಟ್ಟಿಗೆ ತಂಗಿದ್ದರಿಂದ, ಯಾವ ಶಾಲೆಯಲ್ಲೂ ಸಿಗದಂಥ ಶಿಕ್ಷಣವನ್ನು ಪಡೆದೆವು. ಆ ಎಲ್ಲ ಸಹೋದರರನ್ನು ನಾನೀಗ ನೆನಸಿಕೊಳ್ಳುವಾಗಲೂ ಆನಂದದಿಂದ ನನ್ನ ಕಣ್ಣಾಲಿಗಳು ತುಂಬಿಬರುತ್ತವೆ.

ಕಾಯಿಲೆಬಿದಿದ್ದ ನನ್ನ ತಾಯಿಯ ಆರೈಕೆಮಾಡಲಿಕ್ಕಾಗಿ ನಾವು 1976ರಲ್ಲಿ ಯುನೈಟೆಡ್‌ ಸ್ಟೇಟ್ಸ್‌ಗೆ ಹಿಂದೆ ಬಂದೆವು. ಬ್ರಸಿಲ್‌ ದೇಶವನ್ನು ಬಿಟ್ಟುಬರಲು ನಮಗೆ ತುಂಬ ದುಃಖವಾದರೂ, ಆ ದೇಶದ ರಾಜ್ಯಾಭಿರುಚಿಗಳ ಗಮನಾರ್ಹ ಬೆಳವಣಿಗೆಯನ್ನು ಕಣ್ಣಾರೆ ನೋಡಲು ಸಾಧ್ಯವಾದದ್ದಕ್ಕಾಗಿ ಆಭಾರಿಗಳಾಗಿದ್ದೇವೆ. ನಮಗೆ ಅಲ್ಲಿಂದ ಪತ್ರಗಳು ಬಂದಾಗಲೆಲ್ಲ, ನಮ್ಮ ಜೀವನದ ಆ ಅದ್ಭುತ ಸಮಯದ ಮಧುರ ನೆನಪುಗಳು ಮರುಕಳಿಸುತ್ತವೆ.

ಪ್ರಿಯ ಮಿತ್ರರೊಂದಿಗಿನ ಪುನರ್ಮಿಲನಗಳು

ನಾವು ತಾಯಿಯ ಆರೈಕೆಮಾಡುತ್ತಿದ್ದ ಸಮಯದಲ್ಲಿ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಿ ಜೊತೆಗೆ ಪಯನೀಯರ್‌ ಸೇವೆಯನ್ನೂ ಮಾಡಿದೆವು. ನನ್ನ ತಾಯಿ 1980ರಲ್ಲಿ ಯೆಹೋವನಿಗೆ ನಂಬಿಗಸ್ತರಾಗಿ ಮೃತಪಟ್ಟರು. ಬಳಿಕ ನನ್ನನ್ನು ಯುನೈಟೆಡ್‌ ಸ್ಟೇಟ್ಸ್‌ನಲ್ಲೇ ಸರ್ಕಿಟ್‌ ಕೆಲಸಕ್ಕಾಗಿ ಆಮಂತ್ರಿಸಲಾಯಿತು. 1990ರಲ್ಲಿ ನಾನು ಮತ್ತು ನನ್ನ ಹೆಂಡತಿ, ಕನೆಕ್ಟಿಕಟ್‌ನಲ್ಲಿರುವ ಒಂದು ಸಭೆಯನ್ನು ಸಂದರ್ಶಿಸುತ್ತಿದ್ದಾಗ, ಒಬ್ಬ ವಿಶೇಷ ವ್ಯಕ್ತಿಯನ್ನು ಭೇಟಿಯಾದೆವು. ಅಲ್ಲಿನ ಹಿರಿಯರಲ್ಲೊಬ್ಬರು ಸಹೋದರ ಬೆನ್‌ ಆಗಿದ್ದರು. ಹೌದು, ಸುಮಾರು 50 ವರ್ಷಗಳ ಹಿಂದೆ ನಾನು ಯೆಹೋವನ ಪರವಾಗಿ ನಿಲುವನ್ನು ತೆಗೆದುಕೊಳ್ಳುವಂತೆ ಸಹಾಯ ಮಾಡಿದ ಅದೇ ಸಹೋದರ ಬೆನ್‌! ನಾವು ಸಂತೋಷದಿಂದ ಪರಸ್ಪರ ತಬ್ಬಿಕೊಂಡೆವು.

1996ರಂದಿನಿಂದ ನಾನು ಮತ್ತು ಎವ್ಲಿನ್‌, ನ್ಯೂ ಜೆರ್ಸಿಯಲ್ಲಿನ ಎಲಿಸಬೇತ್‌ ಪಟ್ಟಣದಲ್ಲಿರುವ ಪೋರ್ಚುಗೀಸ್‌ ಸಭೆಯೊಂದರಲ್ಲಿ ಅಶಕ್ತ ವಿಶೇಷ ಪಯನೀಯರರಾಗಿ ಸೇವೆಸಲ್ಲಿಸುತ್ತಿದ್ದೇವೆ. ನನಗೆ ಆರೋಗ್ಯದ ಸಮಸ್ಯೆಗಳಿವೆ, ಆದರೆ ನನ್ನ ಮುದ್ದಿನ ಮಡದಿಯ ಸಹಾಯದಿಂದ ಸಾಧ್ಯವಾದಷ್ಟು ಮಟ್ಟಿಗೆ ಶುಶ್ರೂಷೆಯಲ್ಲಿ ಪಾಲ್ಗೊಳ್ಳುತ್ತೇನೆ. ಎವ್ಲಿನ್‌ ನೆರೆಯವರಾದ ಒಬ್ಬ ದುರ್ಬಲ ವೃದ್ಧೆಗೆ ಸಹಾಯ ಮಾಡುತ್ತಿರುತ್ತಾಳೆ. ಅವರ ಹೆಸರು ಬರ್ತಾ. ಹೌದು, 70ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ನನ್ನ ತಾಯಿ ಯೆಹೋವನ ಸೇವಕಳಾಗುವಂತೆ ಸಹಾಯಮಾಡಿದ ಅದೇ ಸಹೋದರಿ ಬರ್ತಾ! ನನ್ನ ಕುಟುಂಬವು ಸತ್ಯವನ್ನು ಕಲಿಯುವಂತೆ ಅವರು ಮಾಡಿದ ಸಹಾಯಕ್ಕೆ ನಮ್ಮ ಗಣ್ಯತೆಯನ್ನು ವ್ಯಕ್ತಪಡಿಸಲು ಅವಕಾಶ ಸಿಕ್ಕಿರುವುದಕ್ಕಾಗಿ ನಾವು ಸಂತೋಷಪಡುತ್ತೇವೆ.

ಸತ್ಯಾರಾಧನೆಗಾಗಿ ನಿಲುವನ್ನು ತೆಗೆದುಕೊಳ್ಳಲು, ಜೀವನವನ್ನು ಸರಳೀಕರಿಸಲು ಮತ್ತು ಶುಶ್ರೂಷೆಯನ್ನು ಹೆಚ್ಚಿಸಲು ಆ ಅಧಿವೇಶನಗಳು ನನ್ನನ್ನು ಪ್ರಚೋದಿಸಿದ್ದಕ್ಕಾಗಿ ನಾನು ಕೃತಜ್ಞನು. ಹೌದು, ಆ ಅಧಿವೇಶನಗಳು ನನ್ನ ಜೀವನವನ್ನೇ ರೂಪಿಸಿದವು.

[ಪುಟ 23ರಲ್ಲಿರುವ ಚಿತ್ರ]

ಎವ್ಲಿನ್‌ಳ ತಾಯಿ (ಎಡಕ್ಕೆ) ಮತ್ತು ನನ್ನ ತಾಯಿ

[ಪುಟ 23ರಲ್ಲಿರುವ ಚಿತ್ರ]

ನನ್ನ ಗೆಳೆಯ ಬೆನ್‌

[ಪುಟ 24ರಲ್ಲಿರುವ ಚಿತ್ರ]

ಬ್ರಸಿಲ್‌ ತಲಪಿದಾಗ

[ಪುಟ 25ರಲ್ಲಿರುವ ಚಿತ್ರ]

ಈಗ ಎವ್ಲಿನ್‌ಳೊಂದಿಗೆ