ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ‘ಅಸ್ತಿವಾರದ ಮೇಲೆ ಬೇರೂರಿ ಸ್ಥಿರವಾಗಿ ನೆಲೆಗೊಂಡಿದ್ದೀರೋ?’

ನೀವು ‘ಅಸ್ತಿವಾರದ ಮೇಲೆ ಬೇರೂರಿ ಸ್ಥಿರವಾಗಿ ನೆಲೆಗೊಂಡಿದ್ದೀರೋ?’

ನೀವು ‘ಅಸ್ತಿವಾರದ ಮೇಲೆ ಬೇರೂರಿ ಸ್ಥಿರವಾಗಿ ನೆಲೆಗೊಂಡಿದ್ದೀರೋ?’

ಒಂದು ದೊಡ್ಡ ಮರ ಬಿರುಸಾದ ಗಾಳಿಯ ರಭಸದಿಂದಾಗಿ ಓಲಾಡುತ್ತಿರುವುದನ್ನು ನೀವೆಂದಾದರೋ ನೋಡಿದ್ದೀರೋ? ಇಂಥ ಅತೀವ ಒತ್ತಡಕ್ಕೆ ಒಳಗಾದರೂ ಮರ ನೆಲಕ್ಕುರುಳುವುದಿಲ್ಲ. ಏಕೆ? ಅದರ ಗಟ್ಟಿಯಾದ ಬೇರುಗಳು ಮಣ್ಣಿನಲ್ಲಿ ದೃಢವಾಗಿ ನೆಲೆಗೊಂಡಿರುವುದರಿಂದಲೇ. ನಾವೂ ಆ ಮರದಂತಿರಬಲ್ಲೆವು. ಒಂದುವೇಳೆ ನಾವು ‘ಅಸ್ತಿವಾರದ ಮೇಲೆ ಬೇರೂರಿ ಸ್ಥಿರವಾಗಿ ನೆಲೆಗೊಂಡರೆ’ ನಮ್ಮ ಜೀವನದಲ್ಲಿ ಬಿರುಗಾಳಿಯಂಥ ಕಷ್ಟಗಳು ಬರುವಾಗ ನಾವು ಸಹ ತಾಳಿಕೊಳ್ಳಲು ಶಕ್ತರಾಗುವೆವು. (ಎಫೆ. 3:14-17) ಆದರೆ ಆ ಅಸ್ತಿವಾರ ಯಾವುದು?

“ಕ್ರಿಸ್ತ ಯೇಸು ತಾನೇ” ಕ್ರೈಸ್ತ ಸಭೆಯ “ಅಸ್ತಿವಾರದ ಮೂಲೆಗಲ್ಲಾಗಿದ್ದಾನೆ” ಎಂದು ದೇವರ ವಾಕ್ಯವು ತಿಳಿಸುತ್ತದೆ. (ಎಫೆ. 2:20; 1 ಕೊರಿಂ. 3:11) ‘ಯೇಸುವಿನೊಂದಿಗೆ ಐಕ್ಯದಲ್ಲಿ ನಡೆಯುತ್ತಾ ಇರುವಂತೆ ಮತ್ತು ಅವನಲ್ಲಿ ಬೇರೂರಿದವರಾಗಿದ್ದು ಕಟ್ಟಲ್ಪಡುತ್ತಾ ನಂಬಿಕೆಯಲ್ಲಿ ಸ್ಥಿರೀಕರಿಸಲ್ಪಡುವಂತೆ’ ಕ್ರೈಸ್ತರಾದ ನಮ್ಮನ್ನು ಉತ್ತೇಜಿಸಲಾಗಿದೆ. ಹೀಗೆ ಮಾಡುವಲ್ಲಿ, ಮನುಷ್ಯರ “ನಿರರ್ಥಕವಾದ ಮೋಸಕರ ಮಾತುಗಳ” ಮೇಲಾಧರಿತವಾದ ‘ಒಡಂಬಡಿಸುವಂಥ ವಾಗ್ವಾದಗಳ’ ರೂಪದಲ್ಲಿ ಬರುವ ದಾಳಿಗಳನ್ನೂ ಸೇರಿಸಿ ನಮ್ಮ ನಂಬಿಕೆಯ ಮೇಲೆ ಬರುವ ಎಲ್ಲ ದಾಳಿಗಳನ್ನು ಎದುರಿಸಲು ಶಕ್ತರಾಗುವೆವು.—ಕೊಲೊ. 2:4-8.

“ಅಗಲ ಉದ್ದ ಎತ್ತರ ಮತ್ತು ಆಳ”

ಆದರೆ ನಾವು ‘ಬೇರೂರಿದವರೂ ನಂಬಿಕೆಯಲ್ಲಿ ಸ್ಥಿರೀಕರಿಸಲ್ಪಟ್ಟವರೂ’ ಆಗುವುದು ಹೇಗೆ? ಸಾಂಕೇತಿಕಾರ್ಥದಲ್ಲಿ ನಮ್ಮ ಬೇರುಗಳನ್ನು ಆಳಕ್ಕಿಳಿಸುವಂಥ ಒಂದು ಪ್ರಮುಖ ವಿಧಾನವು, ದೇವರ ಪ್ರೇರಿತ ವಾಕ್ಯದ ಶ್ರದ್ಧಾಪೂರ್ವಕ ಅಧ್ಯಯನ ಮಾಡುವುದೇ ಆಗಿದೆ. “ಎಲ್ಲ ಪವಿತ್ರ ಜನರೊಂದಿಗೆ” ನಾವು ಸತ್ಯದ “ಅಗಲ ಉದ್ದ ಎತ್ತರ ಮತ್ತು ಆಳವು ಎಷ್ಟೆಂಬುದನ್ನು ಕೂಲಂಕಷವಾಗಿ ಗ್ರಹಿಸ”ಬೇಕೆಂಬುದು ಯೆಹೋವನ ಅಪೇಕ್ಷೆ. (ಎಫೆ. 3:18) ಹೀಗಿರಲಾಗಿ, ಯಾವ ಕ್ರೈಸ್ತನೂ ಮೇಲುಮೇಲಿನ ತಿಳುವಳಿಕೆ ಪಡೆದು, ಅಂದರೆ ದೇವರ ವಾಕ್ಯದಲ್ಲಿರುವ “ಪ್ರಾಥಮಿಕ ವಿಷಯಗಳ” ಜ್ಞಾನ ಪಡೆದು ಅಷ್ಟರಲ್ಲೇ ತೃಪ್ತನಾಗಿರಬಾರದು. (ಇಬ್ರಿ. 5:12; 6:1) ಅದಕ್ಕೆ ವ್ಯತಿರಿಕ್ತವಾಗಿ, ನಮ್ಮಲ್ಲಿ ಪ್ರತಿಯೊಬ್ಬರು ಬೈಬಲ್‌ ಸತ್ಯಗಳ ಗಹನವಾದ ತಿಳುವಳಿಕೆಯನ್ನು ಪಡೆಯಲು ಕಾತರರಾಗಿರಬೇಕು.—ಜ್ಞಾನೋ. 2:1-5.

ಇದರರ್ಥ, ಸತ್ಯದಲ್ಲಿ ‘ಬೇರೂರಿ ಸ್ಥಿರವಾಗಿ ನೆಲೆಗೊಳ್ಳಲು’ ಜ್ಞಾನದ ದೊಡ್ಡ ಭಂಡಾರ ನಮ್ಮಲ್ಲಿದ್ದರೆ ಸಾಕು ಎಂದಲ್ಲ. ಹಾಗೆ, ಬೈಬಲ್‌ನಲ್ಲಿ ಏನೇನು ಇದೆಯೆಂದು ಸೈತಾನನಿಗೂ ಗೊತ್ತಿದೆ. ಹೀಗಿರಲಾಗಿ, ಜ್ಞಾನಕ್ಕಿಂತಲೂ ಹೆಚ್ಚಿನದ್ದೇನೋ ಅಗತ್ಯ. ನಾವು ‘ಜ್ಞಾನಕ್ಕಿಂತ ಮಿಗಿಲಾದ ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಂಡಿರಬೇಕು.’ (ಎಫೆ. 3:19) ನಾವು ಯೆಹೋವನನ್ನೂ ಸತ್ಯವನ್ನೂ ಪ್ರೀತಿಸುವ ಕಾರಣದಿಂದ ಅಧ್ಯಯನ ಮಾಡುವಾಗ ದೇವರ ವಾಕ್ಯದ ಕುರಿತ ನಮ್ಮ ನಿಷ್ಕೃಷ್ಟ ಜ್ಞಾನ ಹೆಚ್ಚುವುದು ಮತ್ತು ಇದರಿಂದಾಗಿ ನಮ್ಮ ನಂಬಿಕೆ ಹೆಚ್ಚು ಬಲವಾಗುವುದು.—ಕೊಲೊ. 2:2.

ನಿಮ್ಮ ತಿಳಿವಳಿಕೆಯನ್ನು ಪರೀಕ್ಷಿಸಿ

ಬೈಬಲ್‌ನಲ್ಲಿರುವ ಪ್ರಮುಖ ಸತ್ಯಗಳಲ್ಲಿ ಕೆಲವೊಂದರ ಬಗ್ಗೆ ನಿಮಗೆಷ್ಟು ತಿಳಿದಿದೆಯೆಂದು ಈಗಲೇ ಏಕೆ ಪರೀಕ್ಷಿಸಿ ನೋಡಬಾರದು? ಇದು, ಹೆಚ್ಚು ಶ್ರದ್ಧೆಯಿಂದ ವೈಯಕ್ತಿಕ ಬೈಬಲ್‌ ಅಧ್ಯಯನ ಮಾಡಲು ನಿಮ್ಮನ್ನು ಹುರಿದುಂಬಿಸಬಹುದು. ಉದಾಹರಣೆಗೆ, ಅಪೊಸ್ತಲ ಪೌಲನು ಎಫೆಸದವರಿಗೆ ಬರೆದ ಪತ್ರದ ಆರಂಭದ ವಚನಗಳನ್ನು ಓದಿರಿ. (“ಎಫೆಸದವರಿಗೆ” ಎಂಬ ಚೌಕ ನೋಡಿ.) ಈ ವಚನಗಳನ್ನು ಓದಿ, ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಆ ಚೌಕದಲ್ಲಿನ ವಚನಭಾಗದಲ್ಲಿ ಓರೆಅಕ್ಷರಗಳಲ್ಲಿರುವ ಪದಪುಂಜಗಳ ಅರ್ಥ ನನಗೆ ಗೊತ್ತಿದೆಯೋ?’ ಅವುಗಳನ್ನೇ ಈಗ ಒಂದೊಂದಾಗಿ ಪರಿಗಣಿಸೋಣ.

“ಲೋಕಾದಿಗಿಂತ ಮುಂಚೆ” ಪೂರ್ವನಿಶ್ಚಯಮಾಡಲಾಯಿತು

ಪೌಲನು ಜೊತೆ ವಿಶ್ವಾಸಿಗಳಿಗೆ ಬರೆದದ್ದು: “[ದೇವರು] ಯೇಸು ಕ್ರಿಸ್ತನ ಮೂಲಕ ನಮ್ಮನ್ನು ತನಗೋಸ್ಕರ ಪುತ್ರರಾಗಿ ದತ್ತುತೆಗೆದುಕೊಳ್ಳಲು ಪೂರ್ವನಿಶ್ಚಯಮಾಡಿದನು.” ಹೌದು, ಕೆಲವು ಮಾನವರನ್ನು ತನ್ನ ಸ್ವಂತ ಪರಿಪೂರ್ಣ ಸ್ವರ್ಗೀಯ ಕುಟುಂಬದೊಳಕ್ಕೆ ದತ್ತುತೆಗೆದುಕೊಳ್ಳಲು ಯೆಹೋವನು ನಿರ್ಧರಿಸಿದನು. ದೇವರ ಈ ದತ್ತು ಪುತ್ರರು, ಕ್ರಿಸ್ತನೊಂದಿಗೆ ರಾಜರಾಗಿಯೂ ಯಾಜಕರಾಗಿಯೂ ಆಳಲಿದ್ದರು. (ರೋಮ. 8:19-23; ಪ್ರಕ. 5:9, 10) ಆರಂಭದಲ್ಲಿ ಸೈತಾನನು ಯೆಹೋವನ ಪರಮಾಧಿಕಾರದ ವಿರುದ್ಧ ಎತ್ತಿದ ಸವಾಲಿನಲ್ಲಿ, ದೇವರು ಮಾಡಿದ ಮಾನವ ಸೃಷ್ಟಿಯು ದೋಷಪೂರಿತವೆಂದು ಸೂಚ್ಯವಾಗಿ ಹೇಳಿದನು. ಹೀಗಿರುವುದರಿಂದ ಯೆಹೋವನು ಆ ಮಾನವ ಕುಟುಂಬದಿಂದಲೇ ಸದಸ್ಯರನ್ನು ಆಯ್ಕೆಮಾಡಿ, ಕಟ್ಟಕಡೆಗೆ ಇಡೀ ವಿಶ್ವದಿಂದ ಎಲ್ಲ ಕೆಟ್ಟತನವನ್ನು ಮತ್ತು ಕೆಡುಕಿನ ಮೂಲನಾದ ಪಿಶಾಚನಾದ ಸೈತಾನನನ್ನು ತೆಗೆದುಹಾಕುವುದರಲ್ಲಿ ಅವರಿಗೂ ಪಾತ್ರವನ್ನು ಕೊಟ್ಟಿರುವುದು ಎಷ್ಟು ಸೂಕ್ತ! ಆದರೆ ಯೆಹೋವನು ತಾನು ದತ್ತುತೆಗೆದುಕೊಳ್ಳಬೇಕೆಂದಿರುವ ಪುತ್ರರಲ್ಲಿ ವೈಯಕ್ತಿಕವಾಗಿ ಯಾರ್ಯಾರು ಇರುವರು ಎಂಬುದನ್ನು ಪೂರ್ವನಿಶ್ಚಯಮಾಡಿಟ್ಟಿಲ್ಲ. ಬದಲಿಗೆ, ಮಾನವರ ಒಂದು ಗುಂಪು ಇಲ್ಲವೇ ವರ್ಗ ಕ್ರಿಸ್ತನೊಂದಿಗೆ ಆಳಲಿರುವುದೆಂದು ನಿಶ್ಚಯಿಸಿಟ್ಟಿದ್ದಾನೆ.—ಪ್ರಕ. 14:3, 4.

ಪೌಲನು ಜೊತೆ ಕ್ರೈಸ್ತರಿಗೆ, ಅವರನ್ನು ಒಂದು ಗುಂಪಾಗಿ “ಲೋಕಾದಿಗಿಂತ ಮುಂಚೆ” ಆಯ್ಕೆಮಾಡಲಾಗಿತ್ತೆಂದು ಬರೆದಾಗ ಅವನು ಯಾವ ‘ಲೋಕಕ್ಕೆ’ ಸೂಚಿಸುತ್ತಿದ್ದನು? ದೇವರು ಭೂಮಿಯನ್ನಾಗಲಿ ಮಾನವಕುಲವನ್ನಾಗಲಿ ಸೃಷ್ಟಿಸುವುದಕ್ಕೆ ಮುಂಚಿನ ಸಮಯಕ್ಕೆ ಅವನು ಸೂಚಿಸುತ್ತಿರಲಿಲ್ಲ. ಒಂದುವೇಳೆ ದೇವರು ಆ ಸಮಯದಲ್ಲಿ ಪೂರ್ವನಿಶ್ಚಯ ಮಾಡಿರುತ್ತಿದ್ದಲ್ಲಿ ಅದು ನ್ಯಾಯವಾಗಿರುತ್ತಿರಲಿಲ್ಲ. ಆದಾಮ ಹವ್ವರ ಸೃಷ್ಟಿಯ ಮುಂಚೆಯೇ ಅವರು ತಪ್ಪಿಬೀಳಲಿದ್ದಾರೆಂದು ದೇವರೇ ಪೂರ್ವನಿರ್ಧರಿಸಿದ್ದಲ್ಲಿ ಅವರು ತಪ್ಪುಮಾಡಿದಾಗ ಅವರನ್ನು ಹೊಣೆಗಾರರನ್ನಾಗಿ ಮಾಡಸಾಧ್ಯವಿರಲಿಲ್ಲ, ಅಲ್ಲವೇ? ಹಾಗಾದರೆ, ದೇವರ ಪರಮಾಧಿಕಾರದ ವಿರುದ್ಧದ ದಂಗೆಯಲ್ಲಿ ಆದಾಮ ಹವ್ವರು ಸೈತಾನನೊಂದಿಗೆ ಜೊತೆಗೂಡಿದಾಗ ಉಂಟಾದ ಸನ್ನಿವೇಶವನ್ನು ಸರಿಪಡಿಸುವುದು ಹೇಗೆಂದು ದೇವರು ನಿರ್ಧರಿಸಿದ್ದು ಯಾವಾಗ? ನಮ್ಮ ಪ್ರಥಮ ಹೆತ್ತವರು ದಂಗೆಯೆದ್ದ ಬಳಿಕ, ಆದರೆ ಅಪರಿಪೂರ್ಣರಾದರೂ ವಿಮೋಚಿಸಸಾಧ್ಯವಿದ್ದ ಮಾನವಕುಲವೆಂಬ ಲೋಕ ಅಸ್ತಿತ್ವಕ್ಕೆ ಬರುವ ಮುಂಚೆಯೇ.

“ದೇವರ ಅಪಾತ್ರ ದಯೆಯ ಔದಾರ್ಯದಿಂದ”

ಎಫೆಸದವರಿಗೆ ಬರೆದ ಪತ್ರದ ಆರಂಭದ ವಚನಗಳಲ್ಲಿ ಪರಿಗಣಿಸಲಾಗಿರುವ ಏರ್ಪಾಡುಗಳು, “ದೇವರ ಅಪಾತ್ರ ದಯೆಯ ಔದಾರ್ಯದಿಂದ” ಉಂಟಾದವೆಂದು ಪೌಲನು ಹೇಳಿದ್ದೇಕೆ? ಪಾಪಕ್ಕೆ ಬಿದ್ದಿದ್ದ ಮಾನವಕುಲವನ್ನು ವಿಮೋಚಿಸುವ ಯಾವ ಹಂಗೂ ಯೆಹೋವನಿಗೆ ಇರಲಿಲ್ಲವೆಂದು ಒತ್ತಿಹೇಳಲಿಕ್ಕಾಗಿಯೇ.

ಸ್ವಭಾವತಃ ನಮ್ಮಲ್ಲಿ ಯಾರಿಗೂ ವಿಮೋಚನೆಯನ್ನು ಪಡೆಯುವ ಅರ್ಹತೆಯಿಲ್ಲ. ಆದರೆ ಮಾನವಕುಲದ ಮೇಲಿನ ಗಾಢ ಪ್ರೀತಿಯಿಂದ ಪ್ರಚೋದಿತನಾಗಿ ಯೆಹೋವನು ನಮ್ಮನ್ನು ರಕ್ಷಿಸಲು ವಿಶೇಷ ಏರ್ಪಾಡುಗಳನ್ನು ಮಾಡಿದನು. ನಮ್ಮ ಅಪರಿಪೂರ್ಣತೆ ಹಾಗೂ ಪಾಪವನ್ನು ಪರಿಗಣಿಸುವಾಗ, ನಮ್ಮ ವಿಮೋಚನೆಯು ಪೌಲನು ಹೇಳಿದಂತೆ ಅಪಾತ್ರವಾದ ದಯೆಯಿಂದ ಸಾಧ್ಯವಾಗಿದೆ ಎಂಬುದು ನಿಶ್ಚಯ.

ದೇವರ ಉದ್ದೇಶದ ಪವಿತ್ರ ರಹಸ್ಯ

ಸೈತಾನನು ಮಾಡಿರುವ ಹಾನಿಯನ್ನು ಹೇಗೆ ಸರಿಪಡಿಸುವೆನೆಂದು ದೇವರು ಆರಂಭದಲ್ಲಿ ಪ್ರಕಟಪಡಿಸಲಿಲ್ಲ. ಅದೊಂದು “ಪವಿತ್ರ ರಹಸ್ಯ” ಆಗಿತ್ತು. (ಎಫೆ. 3:4, 5) ಆದರೆ ಕಾಲಾನಂತರ ಕ್ರೈಸ್ತ ಸಭೆಯ ಸ್ಥಾಪನೆಯಾದಾಗ ಯೆಹೋವನು, ಮಾನವಕುಲ ಹಾಗೂ ಭೂಮಿಯ ಕಡೆಗಿನ ತನ್ನ ಮೂಲ ಉದ್ದೇಶವನ್ನು ಹೇಗೆ ಪೂರೈಸಲಿದ್ದೇನೆ ಎಂಬುದರ ಕುರಿತ ವಿವರಗಳನ್ನು ಕೊಟ್ಟನು. “ನೇಮಿತ ಕಾಲದ ಪರಿಮಿತಿಯು ಪೂರ್ಣಗೊಂಡಾಗ” ದೇವರು “ಒಂದು ಆಡಳಿತ” ಅಂದರೆ ವಿಷಯಗಳನ್ನು ನಿರ್ವಹಿಸುವಂಥ ಒಂದು ವ್ಯವಸ್ಥೆಯನ್ನು ಜಾರಿಗೆತರುವನೆಂದು ಪೌಲನು ವಿವರಿಸಿದನು. ಇದು, ಬುದ್ಧಿಶಕ್ತಿಯುಳ್ಳ ಎಲ್ಲ ಜೀವಿಗಳನ್ನು ಒಂದುಗೂಡಿಸಲಿತ್ತು.

ಈ ಒಂದುಗೂಡಿಸುವಿಕೆಯ ಪ್ರಥಮ ಘಟ್ಟವು, ಸಾ.ಶ. 33ರ ಪಂಚಾಶತ್ತಮದಂದು ಆರಂಭವಾಯಿತು. ಆಗ ಯೆಹೋವನು, ಸ್ವರ್ಗದಲ್ಲಿ ಕ್ರಿಸ್ತನೊಟ್ಟಿಗೆ ಆಳುವವರನ್ನು ಒಟ್ಟುಗೂಡಿಸಲು ಆರಂಭಿಸಿದನು. (ಅ. ಕಾ. 1:13-15; 2:1-4) ಎರಡನೇ ಘಟ್ಟವು, ಕ್ರಿಸ್ತನ ಮೆಸ್ಸೀಯ ರಾಜ್ಯದಡಿ ಭೂಪರದೈಸಿನಲ್ಲಿ ಜೀವಿಸಲಿರುವವರ ಒಟ್ಟುಗೂಡಿಸುವಿಕೆ ಆಗಿರುವುದು. (ಪ್ರಕ. 7:14-17; 21:1-5) “ಆಡಳಿತ” ಎಂಬ ಪದವು ಮೆಸ್ಸೀಯ ರಾಜ್ಯಕ್ಕೆ ಸೂಚಿಸುವುದಿಲ್ಲ ಏಕೆಂದರೆ ಆ ರಾಜ್ಯದ ಸ್ಥಾಪನೆಯಾದದ್ದು 1914ರಲ್ಲಿ. ಅದಕ್ಕೆ ಬದಲು ಆ ಪದವು, ವಿಶ್ವ ಐಕ್ಯವನ್ನು ಪುನಸ್ಸ್ಥಾಪಿಸುವ ತನ್ನ ಉದ್ದೇಶವನ್ನು ಪೂರೈಸಲಿಕ್ಕಾಗಿ ದೇವರು ವಿಷಯಗಳನ್ನು ನಿರ್ವಹಿಸುವ ಇಲ್ಲವೇ ನಿಭಾಯಿಸುವ ವಿಧಾನಕ್ಕೆ ಸೂಚಿಸುತ್ತದೆ.

“ತಿಳಿವಳಿಕೆಯ ಸಾಮರ್ಥ್ಯದಲ್ಲಿ ಪೂರ್ಣ ಬೆಳೆದವರೂ ಆಗಿರಿ”

ಉತ್ತಮವಾದ ವೈಯಕ್ತಿಕ ಅಧ್ಯಯನ ರೂಢಿಗಳು ಸತ್ಯದ “ಅಗಲ ಉದ್ದ ಎತ್ತರ ಮತ್ತು ಆಳ”ವನ್ನು ಪೂರ್ಣವಾಗಿ ಗ್ರಹಿಸಲು ನಿಶ್ಚಯವಾಗಿಯೂ ನಿಮಗೆ ಸಹಾಯ ಮಾಡುವುವು. ಆದರೆ ಇಂದಿನ ಧಾವಂತದ ಜೀವನಶೈಲಿಯಿಂದಾಗಿ, ನಿಮಗಿರುವ ಅಂಥ ರೂಢಿಗಳನ್ನು ಕಡಿಮೆಗೊಳಿಸಲು ಇಲ್ಲವೇ ನಿಲ್ಲಿಸಲು ಸೈತಾನನಿಗೆ ಸುಲಭವಾಗುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ. ಅವನಿದನ್ನು ಮಾಡುವಂತೆ ಬಿಡಬೇಡಿ. ದೇವರು ನಿಮಗೆ ಕೊಟ್ಟಿರುವ “ಬುದ್ಧಿಸಾಮರ್ಥ್ಯವನ್ನು” ನೀವು ‘ತಿಳಿವಳಿಕೆಯ ಸಾಮರ್ಥ್ಯದಲ್ಲಿ ಪೂರ್ಣ ಬೆಳೆಯಲಿಕ್ಕಾಗಿ’ ಬಳಸಿರಿ. (1 ಯೋಹಾ. 5:20; 1 ಕೊರಿಂ. 14:20) ನೀವೇನು ನಂಬುತ್ತೀರೋ ಅದನ್ನು ಯಾಕೆ ನಂಬುತ್ತೀರೆಂಬುದನ್ನು ಅರ್ಥಮಾಡಿಕೊಳ್ಳಿರಿ ಮತ್ತು “ನಿಮ್ಮಲ್ಲಿರುವ ನಿರೀಕ್ಷೆಗೆ ಕಾರಣವನ್ನು” ಕೊಡಲು ಯಾವಾಗಲೂ ಸಿದ್ಧರಿರಿ.—1 ಪೇತ್ರ 3:15.

ಹೀಗೆ ಊಹಿಸಿಕೊಳ್ಳಿ: ಪೌಲನ ಪತ್ರವು ಪ್ರಥಮ ಬಾರಿ ಎಫೆಸದಲ್ಲಿ ಓದಲ್ಪಟ್ಟಾಗ ನೀವಲ್ಲಿದ್ದಿರಿ. ಅವನ ಆ ಮಾತುಗಳು ನೀವು “ದೇವಕುಮಾರನ ಕುರಿತಾದ ನಿಷ್ಕೃಷ್ಟ ಜ್ಞಾನದಲ್ಲಿ” ಬೆಳೆಯುವಂತೆ ನಿಮ್ಮನ್ನು ಪ್ರಚೋದಿಸುತ್ತಿರಲಿಲ್ಲವೇ? (ಎಫೆ. 4:13, 14) ಖಂಡಿತವಾಗಿಯೂ! ಹೀಗಿರುವುದರಿಂದ, ಪೌಲನ ಆ ಪ್ರೇರಿತ ಮಾತುಗಳು ಇಂದು ಸಹ ನಿಮ್ಮನ್ನು ಅದೇ ರೀತಿಯಲ್ಲಿ ಪ್ರಚೋದಿಸಲಿ. ಯೆಹೋವನಿಗಾಗಿ ಗಾಢ ಪ್ರೀತಿ ಮತ್ತು ಆತನ ವಾಕ್ಯದ ನಿಷ್ಕೃಷ್ಟ ಜ್ಞಾನವಿರುವಲ್ಲಿ ಅದು ನಿಮಗೆ ಕ್ರಿಸ್ತನೆಂಬ “ಅಸ್ತಿವಾರದ ಮೇಲೆ ಬೇರೂರಿ ಸ್ಥಿರವಾಗಿ ನೆಲೆ”ಗೊಳ್ಳಲು ಸಹಾಯಮಾಡುವುದು. ಹೀಗೆ, ಈ ದುಷ್ಟ ಲೋಕದ ಸಂಪೂರ್ಣ ಅಂತ್ಯ ಬರುವ ಮುಂಚೆ ಸೈತಾನನು ನಿಮ್ಮ ವಿರುದ್ಧ ಬಡಿದೆಬ್ಬಿಸುವ ಯಾವುದೇ ಬಿರುಗಾಳಿಯನ್ನು ಎದುರಿಸಿ ನಿಲ್ಲಲು ಶಕ್ತರಾಗುವಿರಿ.—ಕೀರ್ತ. 1:1-3; ಯೆರೆ. 17:7, 8.

[ಪುಟ 27ರಲ್ಲಿರುವ ಚೌ/ಚಿತ್ರ]

“ಎಫೆಸದವರಿಗೆ”

“ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ; ಆತನು ನಮ್ಮನ್ನು ಎಲ್ಲ ರೀತಿಯ ಆಧ್ಯಾತ್ಮಿಕ ಆಶೀರ್ವಾದಗಳೊಂದಿಗೆ ಸ್ವರ್ಗೀಯ ಸ್ಥಳಗಳಲ್ಲಿ ಕ್ರಿಸ್ತನೊಂದಿಗೆ ಐಕ್ಯದಲ್ಲಿ ಆಶೀರ್ವದಿಸಿದ್ದಾನೆ. ಹೇಗೆಂದರೆ ನಾವು ಆತನ ಮುಂದೆ ಪ್ರೀತಿಯಲ್ಲಿ ನಡೆದು ಪರಿಶುದ್ಧರೂ ದೋಷವಿಲ್ಲದವರೂ ಆಗಿರುವಂತೆ ಆತನು ನಮ್ಮನ್ನು ಲೋಕಾದಿಗಿಂತ ಮುಂಚೆಯೇ ಕ್ರಿಸ್ತನೊಂದಿಗೆ ಐಕ್ಯದಲ್ಲಿ ಆರಿಸಿಕೊಂಡನು. ಆತನು ತನ್ನ ಚಿತ್ತದ ಸುಸಂತೋಷಕ್ಕನುಸಾರವಾಗಿ ಯೇಸು ಕ್ರಿಸ್ತನ ಮೂಲಕ ನಮ್ಮನ್ನು ತನಗೋಸ್ಕರ ಪುತ್ರರಾಗಿ ದತ್ತುತೆಗೆದುಕೊಳ್ಳಲು ಪೂರ್ವನಿಶ್ಚಯಮಾಡಿದನು. ತನ್ನ ಮಹಿಮಾಭರಿತ ಅಪಾತ್ರ ದಯೆಯು ಸ್ತುತಿಸಲ್ಪಡುವಂತೆ ಇದನ್ನು ಮಾಡಿದನು ಮತ್ತು ಈ ಅಪಾತ್ರ ದಯೆಯನ್ನು ತನ್ನ ಪ್ರಿಯನ ಮೂಲಕ ಕುರುಣೆಯಿಂದ ನಮಗೆ ಕೊಟ್ಟನು. ಅವನ ಮೂಲಕ ಅಂದರೆ ಆ ಒಬ್ಬನ ರಕ್ತದ ಮೂಲಕ ದೊರೆತ ವಿಮೋಚನಾ ಮೌಲ್ಯದ ಮುಖಾಂತರ ನಮಗೆ ಬಿಡುಗಡೆಯಾಯಿತು; ಹೌದು, ದೇವರ ಅಪಾತ್ರ ದಯೆಯ ಔದಾರ್ಯದಿಂದ ನಮ್ಮ ಅಪರಾಧಗಳು ಕ್ಷಮಿಸಲ್ಪಟ್ಟವು. ಸಕಲ ವಿವೇಕ ಮತ್ತು ಬುದ್ಧಿಶಕ್ತಿಯೊಂದಿಗೆ ಆತನು ನಮಗೆ ಈ ಅಪಾತ್ರ ದಯೆಯನ್ನು ಹೇರಳವಾಗಿ ನೀಡಿದ್ದಾನೆ; ಹೇಗೆಂದರೆ ಆತನು ನಮಗೆ ತನ್ನ ಚಿತ್ತದ ಪವಿತ್ರ ರಹಸ್ಯವನ್ನು ತಿಳಿಯಪಡಿಸಿದನು. ಇದು ಆತನು ತನ್ನಲ್ಲಿ ಉದ್ದೇಶಿಸಿದ ತನ್ನ ಸುಸಂತೋಷಕ್ಕನುಸಾರವಾದದ್ದು. ಅದೇನೆಂದರೆ ನೇಮಿತ ಕಾಲದ ಪರಿಮಿತಿಯು ಪೂರ್ಣಗೊಂಡಾಗ, ಒಂದು ಆಡಳಿತದ ಮೂಲಕ ಸ್ವರ್ಗದಲ್ಲಿರುವ ವಿಷಯಗಳನ್ನೂ ಭೂಮಿಯಲ್ಲಿರುವ ವಿಷಯಗಳನ್ನೂ ಹೀಗೆ ಸಮಸ್ತವನ್ನು ಕ್ರಿಸ್ತನಲ್ಲಿ ಪುನಃ ಒಂದುಗೂಡಿಸುವುದೇ.”—ಎಫೆ. 1:3-10.