ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನೀವು ನನ್ನ ಸ್ನೇಹಿತರು”

“ನೀವು ನನ್ನ ಸ್ನೇಹಿತರು”

“ನೀವು ನನ್ನ ಸ್ನೇಹಿತರು”

“ನಾನು ಆಜ್ಞಾಪಿಸುತ್ತಿರುವುದನ್ನು ನೀವು ಮಾಡುವುದಾದರೆ ನೀವು ನನ್ನ ಸ್ನೇಹಿತರು.” —ಯೋಹಾ. 15:14.

1, 2. (ಎ) ಯೇಸುವಿನ ಸ್ನೇಹಿತರು ಯಾವ ಹಿನ್ನೆಲೆಗಳವರಾಗಿದ್ದರು? (ಬಿ) ನಾವು ಯೇಸುವಿನ ಸ್ನೇಹಿತರಾಗಿರುವುದು ಬಹುಮುಖ್ಯ ಏಕೆ?

ಮೇಲಂತಸ್ತಿನ ಕೋಣೆಯಲ್ಲಿ ಯೇಸುವಿನೊಟ್ಟಿಗೆ ಕೂತುಕೊಂಡಿದ್ದ ಪುರುಷರು ಭಿನ್ನಭಿನ್ನ ಹಿನ್ನೆಲೆಗಳವರಾಗಿದ್ದರು. ಅಣ್ಣತಮ್ಮಂದಿರಾದ ಪೇತ್ರ ಅಂದ್ರೆಯರು ಬೆಸ್ತರಾಗಿದ್ದರು. ಮತ್ತಾಯನು ಮುಂಚೆ, ಯೆಹೂದ್ಯರು ತುಚ್ಛವೆಂದೆಣಿಸುತ್ತಿದ್ದ ಕಸುಬಿನವನಾಗಿದ್ದನು ಅಂದರೆ ಸುಂಕದವನಾಗಿದ್ದನು. ಇನ್ನೂ ಕೆಲವರು, ಉದಾಹರಣೆಗೆ ಯಾಕೋಬ ಹಾಗೂ ಯೋಹಾನರಿಗೆ ಯೇಸು ಬಾಲ್ಯದಿಂದಲೇ ಪರಿಚಿತನು. ಇತರರಿಗೆ, ಅಂದರೆ ನತಾನಯೇಲನಂಥವರಿಗೆ ಕೆಲವೇ ವರ್ಷಗಳಿಂದ ಅವನ ಪರಿಚಯವಿದ್ದಿರಬಹುದು. (ಯೋಹಾ. 1:43-50) ಏನಿದ್ದರೂ, ಯೆರೂಸಲೇಮಿನ ಆ ಐತಿಹಾಸಿಕ ಪಸ್ಕಹಬ್ಬದ ರಾತ್ರಿಯಂದು ಹಾಜರಿದ್ದ ಎಲ್ಲರಿಗೂ ಯೇಸುವೇ ವಾಗ್ದತ್ತ ಮೆಸ್ಸೀಯ, ಜೀವವುಳ್ಳ ದೇವರ ಮಗನೆಂದು ಪೂರ್ತಿ ಮನದಟ್ಟಾಗಿತ್ತು. (ಯೋಹಾ. 6:68, 69) ಹೀಗಿರುವಾಗ ಯೇಸು ಅವರಿಗೆ, “ನಾನು ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ, ಏಕೆಂದರೆ ತಂದೆಯಿಂದ ನಾನು ಕೇಳಿಸಿಕೊಂಡಿರುವ ಎಲ್ಲ ವಿಷಯಗಳನ್ನು ನಿಮಗೆ ತಿಳಿಯಪಡಿಸಿದ್ದೇನೆ” ಎಂದು ಹೇಳಿದಾಗ ಅವರಿಗೆ ನಿಜವಾಗಿ ಅವನ ಪ್ರೀತಿಗೆ ಪಾತ್ರರಾದ ಅನಿಸಿಕೆಯಾಗಿರಬೇಕು.—ಯೋಹಾ. 15:15.

2 ಯೇಸು ತನ್ನ ನಂಬಿಗಸ್ತ ಅಪೊಸ್ತಲರಿಗೆ ನುಡಿದ ಆ ಮಾತುಗಳು ಇಂದು ಅಭಿಷಿಕ್ತ ಕ್ರೈಸ್ತರೆಲ್ಲರಿಗೆ ಮತ್ತು ವಿಶಾಲಾರ್ಥದಲ್ಲಿ ಅವರ ಸಂಗಡಿಗರಾದ ‘ಬೇರೆ ಕುರಿಗಳಿಗೂ’ ಅನ್ವಯಿಸುತ್ತವೆ. (ಯೋಹಾ. 10:16) ನಮ್ಮ ಹಿನ್ನೆಲೆ ಏನೇ ಆಗಿರಲಿ, ಯೇಸುವಿನ ಸ್ನೇಹಿತರಾಗುವ ಸುಯೋಗ ನಮಗಿದೆ. ಅವನೊಂದಿಗಿನ ನಮ್ಮ ಸ್ನೇಹವು ಬಹುಮುಖ್ಯವಾದದ್ದು ಏಕೆಂದರೆ ನಾವು ಅವನ ಸ್ನೇಹಿತರಾಗುವುದರಿಂದ ಯೆಹೋವನ ಸ್ನೇಹಿತರೂ ಆಗುತ್ತೇವೆ. ವಾಸ್ತವದಲ್ಲಿ ನಾವು ಮೊದಲು ಕ್ರಿಸ್ತನೊಂದಿಗೆ ಆಪ್ತರಾಗದಿರುವಲ್ಲಿ ಯೆಹೋವನೊಂದಿಗೆ ಆಪ್ತರಾಗುವುದು ಅಸಾಧ್ಯ. (ಯೋಹಾನ 14:6, 21 ಓದಿ.) ಹಾಗಾದರೆ ನಾವು ಯೇಸುವಿನ ಸ್ನೇಹಿತರಾಗಲು ಮತ್ತು ಹಾಗೆ ಉಳಿಯಲು ಏನು ಮಾಡಬೇಕು? ಈ ಪ್ರಾಮುಖ್ಯ ವಿಷಯವನ್ನು ಚರ್ಚಿಸುವ ಮೊದಲು, ಒಬ್ಬ ಸ್ನೇಹಿತನಾಗಿ ಯೇಸು ಇಟ್ಟ ಮಾದರಿಯನ್ನು ಪರಿಶೀಲಿಸೋಣ ಮತ್ತು ಅವನ ಸ್ನೇಹಕ್ಕೆ ಶಿಷ್ಯರು ಸ್ಪಂದಿಸಿದ ರೀತಿಯಿಂದ ಏನು ಕಲಿಯಬಲ್ಲೆವೆಂದು ನೋಡೋಣ.

ಒಳ್ಳೇ ಸ್ನೇಹಿತನಾಗಿ ಯೇಸುವಿಟ್ಟ ಮಾದರಿ

3. ಯೇಸು ಯಾವುದಕ್ಕಾಗಿ ಪ್ರಸಿದ್ಧನಾಗಿದ್ದನು?

3 “ಧನವಂತನಿಗೆ ಬಹು ಜನ ಮಿತ್ರರು” ಎಂದು ವಿವೇಕಿ ರಾಜ ಸೊಲೊಮೋನನು ಬರೆದನು. (ಜ್ಞಾನೋ. 14:20) ಈ ಮಾತುಗಳು, ಅಪರಿಪೂರ್ಣ ಮಾನವರಿಗಿರುವ ಒಂದು ಸ್ವಭಾವವನ್ನು ಚುಟುಕಾಗಿ ತಿಳಿಸುತ್ತವೆ. ಅದೇನೆಂದರೆ, ತಾವೇನು ಕೊಡಬಹುದು ಎನ್ನುವುದಕ್ಕಿಂತ ತಮಗೇನು ಸಿಗುವುದು ಎಂಬ ಸಂಗತಿಯ ಮೇಲಾಧರಿಸಿ ಸ್ನೇಹಬಂಧಗಳನ್ನು ರಚಿಸುವುದೇ. ಆದರೆ ಯೇಸುವಿಗೆ ಅಂಥ ದೌರ್ಬಲ್ಯವಿರಲಿಲ್ಲ. ಅವನು ವ್ಯಕ್ತಿಯೊಬ್ಬನ ಆರ್ಥಿಕ ಇಲ್ಲವೇ ಸಾಮಾಜಿಕ ಅಂತಸ್ತಿಗೆ ಬೆಲೆಕೊಡುತ್ತಿರಲಿಲ್ಲ. ಒಮ್ಮೆ ಒಬ್ಬ ಧನಿಕ ಯುವ ವ್ಯಕ್ತಿಯ ಮೇಲೆ ಪ್ರೀತಿ ಉಂಟಾಗಿ ಅವನನ್ನು ತನ್ನ ಹಿಂಬಾಲಕನಾಗುವಂತೆ ಯೇಸು ಆಮಂತ್ರಿಸಿದ್ದೇನೋ ನಿಜ. ಆದರೆ, ಅವನ ಬಳಿ ಇರುವುದನ್ನೆಲ್ಲ ಮಾರಿ ಬಡವರಿಗೆ ಕೊಡುವಂತೆ ಯೇಸು ಅವನಿಗೆ ಹೇಳಿದನು. (ಮಾರ್ಕ 10:17-22; ಲೂಕ 18:18, 23) ಯೇಸು ದೊಡ್ಡದೊಡ್ಡ, ಐಶ್ವರ್ಯವಂತ ಜನರ ಸ್ನೇಹಿತನಾಗಿ ಅಲ್ಲ ಬದಲಾಗಿ ದೈನ್ಯಭಾವದ ಹಾಗೂ ತಿರಸ್ಕೃತ ಜನರ ಸ್ನೇಹಿತನಾಗಿ ಪ್ರಸಿದ್ಧನಾಗಿದ್ದನು.—ಮತ್ತಾ. 11:19.

4. ಯೇಸುವಿನ ಸ್ನೇಹಿತರಲ್ಲಿ ಕುಂದುಕೊರತೆಗಳಿದ್ದವೆಂದು ಏಕೆ ಹೇಳಬಹುದು?

4 ಯೇಸುವಿನ ಸ್ನೇಹಿತರಲ್ಲಿ ಕುಂದುಕೊರತೆಗಳಿದ್ದವು ನಿಶ್ಚಯ. ಉದಾಹರಣೆಗೆ, ಪೇತ್ರನು ಕೆಲ ಸಂದರ್ಭಗಳಲ್ಲಿ ವಿಷಯಗಳನ್ನು ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಲು ತಪ್ಪಿಬಿದ್ದನು. (ಮತ್ತಾ. 16:21-23) ಯಾಕೋಬ ಯೋಹಾನರು, ರಾಜ್ಯದಲ್ಲಿ ಪ್ರಮುಖ ಸ್ಥಾನಗಳನ್ನು ಕೊಡುವಂತೆ ಯೇಸುವಿನ ಬಳಿ ಕೇಳಿದಾಗ ಅವರಲ್ಲಿದ್ದ ಮಹತ್ತ್ವಾಕಾಂಕ್ಷೆ ಬಯಲಾಯಿತು. ಅವರ ಆ ಕೃತ್ಯದಿಂದ ಉಳಿದ ಅಪೊಸ್ತಲರು ಕುಪಿತರಾದರು ಮತ್ತು ಯಾರು ಶ್ರೇಷ್ಠರೆಂಬ ವಿಷಯದಲ್ಲಿ ಯಾವಾಗಲೂ ವಾಗ್ವಾದ ನಡೆಸುತ್ತಿದ್ದರು. ಹಾಗಿದ್ದರೂ, ಯೇಸು ತನ್ನ ಸ್ನೇಹಿತರ ವಿಚಾರಧಾಟಿಯನ್ನು ತಾಳ್ಮೆಯಿಂದ ತಿದ್ದಲು ಪ್ರಯತ್ನಿಸಿದನು ಮತ್ತು ಅವರ ವಿಷಯದಲ್ಲಿ ಬೇಗನೆ ಸಿಟ್ಟುಗೊಳ್ಳುತ್ತಿರಲಿಲ್ಲ.—ಮತ್ತಾ. 20:20-28.

5, 6. (ಎ) ಯೇಸು ಹೆಚ್ಚಿನ ಅಪೊಸ್ತಲರೊಂದಿಗೆ ಸ್ನೇಹಿತನಾಗಿ ಉಳಿದದ್ದೇಕೆ? (ಬಿ) ಯೇಸು ಯೂದನೊಂದಿಗಿನ ಸ್ನೇಹವನ್ನು ಕಡಿದುಹಾಕಿದ್ದೇಕೆ?

5 ಯೇಸು ಈ ಅಪರಿಪೂರ್ಣ ಪುರುಷರ ಸ್ನೇಹಿತನಾಗಿ ಉಳಿದದ್ದರ ಅರ್ಥ, ಅವನು ತುಂಬ ಸಲಿಗೆತೋರಿಸಿದನು ಇಲ್ಲವೇ ಅವರ ತಪ್ಪುಗಳೆಡೆಗೆ ಕಣ್ಣುಮುಚ್ಚಿಕೊಂಡಿದ್ದನು ಎಂದಲ್ಲ. ಬದಲಾಗಿ ಅವನು ಅವರ ಒಳ್ಳೇ ಇರಾದೆಗಳು ಹಾಗೂ ಉತ್ತಮ ಗುಣಗಳ ಮೇಲೆ ಗಮನ ಕೇಂದ್ರೀಕರಿಸಿದ್ದನು. ಉದಾಹರಣೆಗೆ ಯೇಸು ಕಡುಸಂಕಟವನ್ನು ಅನುಭವಿಸುತ್ತಿದ್ದ ಸಮಯದಲ್ಲಿ ಅವನನ್ನು ಬೆಂಬಲಿಸುವ ಬದಲು ಪೇತ್ರ, ಯಾಕೋಬ, ಯೋಹಾನರು ನಿದ್ದೆಹೋದರು. ಇದನ್ನು ನೋಡಿ, ಯೇಸುವಿಗೆ ಸಹಜವಾಗಿಯೇ ನಿರಾಶೆಯಾಯಿತು. ಹಾಗಿದ್ದರೂ, ಅವರ ಇರಾದೆ ಒಳ್ಳೇದಾಗಿತ್ತೆಂಬುದನ್ನು ಗ್ರಹಿಸುತ್ತಾ ಅವನು, “ಹೃದಯವು ಸಿದ್ಧವಾಗಿದೆ ನಿಜ, ಆದರೆ ದೇಹಕ್ಕೆ ಬಲ ಸಾಲದು” ಎಂದು ಹೇಳಿದನು.—ಮತ್ತಾ. 26:41.

6 ಇದಕ್ಕೆ ತದ್ವಿರುದ್ಧವಾಗಿ, ಇಸ್ಕರಿಯೋತ ಯೂದನೊಂದಿಗಿನ ತನ್ನ ಸ್ನೇಹವನ್ನು ಯೇಸು ಕಡಿದುಹಾಕಿದನು. ಒಂದು ಕಾಲದಲ್ಲಿ ಆಪ್ತ ಒಡನಾಡಿಯಾಗಿದ್ದ ಯೂದನು ತನ್ನ ಹೃದಯವು ಭ್ರಷ್ಟಗೊಳ್ಳುವಂತೆ ಬಿಟ್ಟು ಸ್ನೇಹದ ಸೋಗನ್ನು ಹಾಕಿಕೊಂಡಿದ್ದಾನೆಂಬುದು ಯೇಸುವಿಗೆ ಗೊತ್ತಾಯಿತು. ಯೂದನು ಈ ಲೋಕದ ಸ್ನೇಹಿತನಾಗಿ ಪರಿಣಮಿಸಿದ್ದರಿಂದ ತನ್ನನ್ನು ದೇವರಿಗೆ ವೈರಿಯನ್ನಾಗಿ ಮಾಡಿಕೊಂಡನು. (ಯಾಕೋ. 4:4) ಹೀಗಿರುವುದರಿಂದ, ಯೇಸು ಯೂದನನ್ನು ಕಳುಹಿಸಿಬಿಟ್ಟ ಬಳಿಕವೇ, ಉಳಿದ 11 ಮಂದಿ ನಂಬಿಗಸ್ತ ಅಪೊಸ್ತಲರೊಂದಿಗಿನ ತನ್ನ ಸ್ನೇಹವನ್ನು ಘೋಷಿಸಿದನು.—ಯೋಹಾ. 13:21-35.

7, 8. ಯೇಸು ತನ್ನ ಸ್ನೇಹಿತರ ಮೇಲಿನ ಪ್ರೀತಿಯನ್ನು ಹೇಗೆ ತೋರಿಸಿದನು?

7 ಯೇಸು ತನ್ನ ನಿಷ್ಠಾವಂತ ಮಿತ್ರರ ತಪ್ಪುಗಳ ಮೇಲೆ ಕೇಂದ್ರೀಕರಿಸದೆ ಅವರಿಗೆ ಒಳ್ಳೇದನ್ನೇ ಮಾಡಿದನು. ದೃಷ್ಟಾಂತಕ್ಕಾಗಿ, ಅವರಿಗೆ ಸಂಕಟಗಳೆದುರಾಗುವಾಗ ಅವರನ್ನು ಸಂರಕ್ಷಿಸುವಂತೆ ಅವನು ತನ್ನ ತಂದೆಯ ಬಳಿ ಬೇಡಿಕೊಂಡನು. (ಯೋಹಾನ 17:11 ಓದಿ.) ಅವರ ಶಾರೀರಿಕ ಬಲಹೀನತೆಗಳಿಗೂ ಯೇಸು ಪರಿಗಣನೆ ತೋರಿಸಿದನು. (ಮಾರ್ಕ 6:30-32) ತನಗೇನು ಅನಿಸುತ್ತದೆ ಎಂಬುದನ್ನು ಹೇಳುವುದರಲ್ಲಿ ಮಾತ್ರವಲ್ಲ, ಅವರಿಗೆ ಹೇಗನಿಸುತ್ತದೆ ಮತ್ತು ಅವರೇನು ಯೋಚಿಸುತ್ತಿದ್ದಾರೆ ಎಂಬುದನ್ನು ಕೇಳಿ ತಿಳಿದುಕೊಳ್ಳುವುದರಲ್ಲೂ ಅವನು ಆಸಕ್ತನಾಗಿದ್ದನು.—ಮತ್ತಾ. 16:13-16; 17:24-26.

8 ಯೇಸು ತನ್ನ ಸ್ನೇಹಿತರಿಗೋಸ್ಕರ ಜೀವಿಸಿದನು ಮತ್ತು ಅವರಿಗೋಸ್ಕರವೇ ಸತ್ತನು. ತನ್ನ ತಂದೆಯ ನ್ಯಾಯದ ಮಟ್ಟವನ್ನು ಪೂರೈಸಬೇಕಾದರೆ ಕಾನೂನಿನ ಆವಶ್ಯಕತೆಗನುಸಾರ ಯೇಸು ಜೀವ ಕೊಡಬೇಕಿತ್ತು ಮತ್ತು ಇದು ಅವನಿಗೆ ತಿಳಿದಿತ್ತು. (ಮತ್ತಾ. 26:27, 28; ಇಬ್ರಿ. 9:22, 28) ಆದರೆ ಯೇಸು ತನ್ನ ಜೀವ ಕೊಟ್ಟದ್ದು, ತನ್ನ ಪ್ರೀತಿಯನ್ನು ತೋರಿಸಲಿಕ್ಕಾಗಿಯೇ. ಅವನಂದದ್ದು: “ಒಬ್ಬನು ತನ್ನ ಸ್ನೇಹಿತರಿಗೋಸ್ಕರ ತನ್ನ ಪ್ರಾಣವನ್ನೇ ಒಪ್ಪಿಸಿಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾರಲ್ಲಿಯೂ ಇಲ್ಲ.”—ಯೋಹಾ. 15:13.

ಯೇಸುವಿನ ಸ್ನೇಹಕ್ಕೆ ಶಿಷ್ಯರು ಹೇಗೆ ಸ್ಪಂದಿಸಿದರು?

9, 10. ಜನರು ಯೇಸುವಿನ ಧಾರಾಳತೆಗೆ ಹೇಗೆ ಪ್ರತಿಕ್ರಿಯಿಸಿದರು?

9 ಯೇಸು ತನ್ನ ಸಮಯ, ಪ್ರೀತಿ ಹಾಗೂ ಸಂಪನ್ಮೂಲಗಳನ್ನು ಧಾರಾಳವಾಗಿ ಕೊಟ್ಟನು. ಆದುದರಿಂದ ಜನರು ಅವನೆಡೆಗೆ ಆಕರ್ಷಿತರಾದರು ಮತ್ತು ಅವನಿಗೆ ಕೊಡಲು ಸಂತೋಷಿಸುತ್ತಿದ್ದರು. (ಲೂಕ 8:1-3) ಹೀಗಿರುವುದರಿಂದ ತನ್ನ ಸ್ವಂತ ಅನುಭವದಿಂದ ಅವನು ಹೀಗನ್ನಸಾಧ್ಯವಿತ್ತು: “ಕೊಡುವುದನ್ನು ರೂಢಿಮಾಡಿಕೊಳ್ಳಿರಿ, ಆಗ ಜನರು ನಿಮಗೆ ಕೊಡುವರು. ಅವರು ಒಳ್ಳೆಯ ಅಳತೆಯಲ್ಲಿ ಅಳೆದು, ಒತ್ತಿ, ಅಲ್ಲಾಡಿಸಿ, ತುಂಬಿತುಳುಕುತ್ತಿರುವಾಗ ಅದನ್ನು ನಿಮ್ಮ ಮಡಿಲಿಗೆ ಹಾಕುವರು. ಏಕೆಂದರೆ ನೀವು ಅಳೆಯುತ್ತಿರುವ ಅಳತೆಯಿಂದಲೇ ಅವರು ನಿಮಗೆ ಅಳೆದುಕೊಡುವರು.”—ಲೂಕ 6:38.

10 ಕೆಲವರಂತೂ ತಮಗೆ ಯೇಸುವಿನಿಂದ ಸಿಗುವ ಲಾಭಕ್ಕಾಗಿ ಮಾತ್ರ ಅವನೊಂದಿಗೆ ಸಹವಾಸಮಾಡಲು ಪ್ರಯತ್ನಿಸುತ್ತಿದ್ದರು. ಆದರೆ ಈ ನಕಲಿ ಸ್ನೇಹಿತರು, ಯೇಸು ಹೇಳಿದ ಒಂದು ಸಂಗತಿಯನ್ನು ಅಪಾರ್ಥಮಾಡಿಕೊಂಡು ಅವನನ್ನು ಬಿಟ್ಟುಹೋದರು. ಯೇಸು ಹೇಳಿದ ಮಾತುಗಳು ಅರ್ಥವಾಗದಿದ್ದಾಗ ಅವನಲ್ಲಿ ಭರವಸೆಯಿಡುವ ಬದಲು, ಅವುಗಳನ್ನು ತಪ್ಪಾಗಿ ಅರ್ಥಮಾಡಿಕೊಂಡು ಅವನಿಗೆ ಬೆನ್ನುಹಾಕಿದರು. ಇದಕ್ಕೆ ವ್ಯತಿರಿಕ್ತವಾಗಿ ಯೇಸುವಿನ ಅಪೊಸ್ತಲರು ನಿಷ್ಠರಾಗಿದ್ದರು. ಯೇಸುವಿನೊಂದಿಗಿನ ಅವರ ಸ್ನೇಹವು ಅನೇಕವೇಳೆ ಪರೀಕ್ಷೆಗೊಳಗಾಯಿತು. ಆದರೆ ಕಷ್ಟವಾಗಲಿ ಸುಖವಾಗಲಿ ಎಲ್ಲ ಸಮಯವೂ ಅವನನ್ನು ಬೆಂಬಲಿಸಲು ಅವರು ತಮ್ಮ ಕೈಲಾದದ್ದನ್ನು ಮಾಡಿದರು. (ಯೋಹಾನ 6:26, 56, 60, 66-68 ಓದಿ.) ಮಾನವನೋಪಾದಿ ಭೂಮಿಯ ಮೇಲೆ ಕಳೆದ ಕೊನೆ ರಾತ್ರಿಯಂದು ಯೇಸು ತನ್ನ ಸ್ನೇಹಿತರಿಗಾಗಿ ಗಣ್ಯತೆ ವ್ಯಕ್ತಪಡಿಸುತ್ತಾ, “ನೀವು ನನ್ನ ಕಷ್ಟಗಳಲ್ಲಿ ನನ್ನೊಂದಿಗೆ ಯಾವಾಗಲೂ ಇದ್ದವರು” ಎಂದು ಹೇಳಿದನು.—ಲೂಕ 22:28.

11, 12. ಯೇಸು ಶಿಷ್ಯರಿಗೆ ಹೇಗೆ ಪುನರಾಶ್ವಾಸನೆ ಕೊಟ್ಟನು, ಮತ್ತು ಅವರ ಪ್ರತಿಕ್ರಿಯೆ ಏನಾಗಿತ್ತು?

11 ಯೇಸು ತನ್ನ ಶಿಷ್ಯರನ್ನು ಅವರ ನಿಷ್ಠೆಗಾಗಿ ಶ್ಲಾಘಿಸಿದ ಸ್ವಲ್ಪ ಹೊತ್ತಿನಲ್ಲೇ ಅವರು ಅವನನ್ನು ಬಿಟ್ಟು ಓಡಿಹೋದರು. ಮನುಷ್ಯ ಭಯವು, ಕ್ರಿಸ್ತನಿಗಾಗಿ ಅವರಿಗಿದ್ದ ಪ್ರೀತಿಯನ್ನು ಹುದುಗಿಸಿಬಿಡುವಂತೆ ಬಿಟ್ಟುಕೊಟ್ಟರು. ಆದರೆ ಯೇಸು ಪುನಃ ಅವರನ್ನು ಕ್ಷಮಿಸಿದನು. ತನ್ನ ಮರಣ ಹಾಗೂ ಪುನರುತ್ಥಾನದ ಬಳಿಕ ಅವರ ಮುಂದೆ ಪ್ರತ್ಯಕ್ಷನಾಗಿ, ತನ್ನ ಸ್ನೇಹದ ಬಗ್ಗೆ ಪುನಃ ಅವರಿಗೆ ಆಶ್ವಾಸನೆ ಕೊಟ್ಟನು. ಅಷ್ಟುಮಾತ್ರವಲ್ಲದೆ ಅವನು ಅವರಿಗೊಂದು ಪವಿತ್ರ ನೇಮಕವನ್ನೂ ಕೊಟ್ಟನು. ಅದು, “ಎಲ್ಲ ಜನಾಂಗಗಳ ಜನರನ್ನು” ಶಿಷ್ಯರನ್ನಾಗಿ ಮಾಡುವುದು ಮತ್ತು “ಭೂಮಿಯ ಕಟ್ಟಕಡೆಯ ವರೆಗೂ” ಅವನಿಗೆ ಸಾಕ್ಷಿಗಳಾಗಿರುವುದಾಗಿತ್ತು. (ಮತ್ತಾ. 28:19; ಅ. ಕಾ. 1:8) ಇದಕ್ಕೆ ಅವನ ಶಿಷ್ಯರು ಹೇಗೆ ಪ್ರತಿಕ್ರಿಯಿಸಿದರು?

12 ಶಿಷ್ಯರು ರಾಜ್ಯ ಸಂದೇಶವನ್ನು ಹಬ್ಬಿಸಲು ತಮ್ಮ ಜೀವ ಸವೆಸಿದರು. ಯೆಹೋವನ ಪವಿತ್ರಾತ್ಮದ ಬೆಂಬಲದಿಂದಾಗಿ ಅವರು ಸ್ವಲ್ಪ ಸಮಯದಲ್ಲೇ ಯೆರೂಸಲೇಮನ್ನು ತಮ್ಮ ಬೋಧನೆಯಿಂದ ತುಂಬಿಸಿದರು. (ಅ. ಕಾ. 5:27-29) ಮರಣದ ಬೆದರಿಕೆ ಸಹ, ಶಿಷ್ಯರನ್ನಾಗಿ ಮಾಡುವ ಯೇಸುವಿನ ಆಜ್ಞೆಗೆ ವಿಧೇಯರಾಗುವುದರಿಂದ ಅವರನ್ನು ತಡೆಯಲಶಕ್ತವಾಗಿತ್ತು. ಯೇಸುವಿನಿಂದ ಆ ಅಪ್ಪಣೆ ಪಡೆದ ಕೆಲವೇ ದಶಕಗಳೊಳಗೆ, ಸುವಾರ್ತೆಯು ‘ಆಕಾಶದ ಕೆಳಗಿರುವ ಸರ್ವ ಸೃಷ್ಟಿಗೆ ಸಾರಲ್ಪಟ್ಟಿದೆ’ ಎಂದು ಅಪೊಸ್ತಲ ಪೌಲನು ಬರೆಯಶಕ್ತನಾಗಿದ್ದನು. (ಕೊಲೊ. 1:23) ಯೇಸುವಿನೊಂದಿಗಿನ ತಮ್ಮ ಸ್ನೇಹಬಂಧಕ್ಕೆ ಅವರೆಷ್ಟು ಬೆಲೆಕೊಟ್ಟರೆಂಬುದನ್ನು ಈ ಶಿಷ್ಯರು ಖಂಡಿತವಾಗಿಯೂ ರುಜುಪಡಿಸಿದರು.

13. ಯೇಸುವಿನ ಬೋಧನೆಗಳು ಯಾವ ವಿಧಗಳಲ್ಲಿ ತಮ್ಮನ್ನು ಪ್ರಭಾವಿಸುವಂತೆ ಶಿಷ್ಯರು ಬಿಟ್ಟರು?

13 ಶಿಷ್ಯರಾಗಿ ಪರಿಣಮಿಸಿದವರು ಯೇಸುವಿನ ಬೋಧನೆಗಳು ತಮ್ಮ ವೈಯಕ್ತಿಕ ಜೀವನವನ್ನೂ ಪ್ರಭಾವಿಸುವಂತೆ ಬಿಟ್ಟರು. ಇದಕ್ಕಾಗಿ ಅನೇಕರು ತಮ್ಮ ನಡತೆ ಹಾಗೂ ವ್ಯಕ್ತಿತ್ವದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಬೇಕಾಯಿತು. ಹೊಸ ಶಿಷ್ಯರಲ್ಲಿ ಕೆಲವರು ಹಿಂದೆ ಸಲಿಂಗಕಾಮಿಗಳು, ವ್ಯಭಿಚಾರಿಗಳು, ಕುಡುಕರು ಇಲ್ಲವೇ ಕಳ್ಳರಾಗಿದ್ದರು. (1 ಕೊರಿಂ. 6:9-11) ಇನ್ನಿತರರು, ಬೇರೆ ಕುಲಗಳ ಜನರೆಡೆಗೆ ತಮಗಿದ್ದ ಮನೋಭಾವವನ್ನು ಬದಲಾಯಿಸಬೇಕಾಯಿತು. (ಅ. ಕಾ. 10:25-28) ಹಾಗಿದ್ದರೂ ಅವರು ಯೇಸುವಿಗೆ ವಿಧೇಯರಾದರು. ತಮ್ಮ ಹಳೇ ವ್ಯಕ್ತಿತ್ವವನ್ನು ತೆಗೆದುಹಾಕಿ ಹೊಸ ವ್ಯಕ್ತಿತ್ವವನ್ನು ಧರಿಸಿದರು. (ಎಫೆ. 4:20-24) ಅವರು ಯೇಸುವಿನ ಯೋಚನಾರೀತಿ ಹಾಗೂ ನಡತೆಯನ್ನು ಅರ್ಥಮಾಡಿಕೊಂಡು ಅನುಕರಿಸುವ ಮೂಲಕ “ಕ್ರಿಸ್ತನ ಮನಸ್ಸನ್ನು” ಚೆನ್ನಾಗಿ ಅರಿತುಕೊಂಡರು.—1 ಕೊರಿಂ. 2:16.

ಇಂದು ಕ್ರಿಸ್ತನೊಂದಿಗೆ ಸ್ನೇಹ

14. ‘ವಿಷಯಗಳ ವ್ಯವಸ್ಥೆಯ ಸಮಾಪ್ತಿಯ’ ಸಮಯದಲ್ಲಿ ಏನು ಮಾಡುವೆನೆಂದು ಯೇಸು ಮಾತುಕೊಟ್ಟನು?

14 ಆ ಪ್ರಥಮ ಶತಮಾನದ ಕ್ರೈಸ್ತರಲ್ಲಿ ಅನೇಕರಿಗೆ ಯೇಸುವಿನ ವೈಯಕ್ತಿಕ ಪರಿಚಯವಿತ್ತು ಇಲ್ಲವೇ ಅವನ ಪುನರುತ್ಥಾನದ ಬಳಿಕ ಅವನನ್ನು ನೋಡಿದ್ದರು. ನಮಗಂತೂ ಆ ಸುಯೋಗ ಸಿಗಲಿಲ್ಲ. ಹೀಗಿರುವಾಗ, ನಾವು ಕ್ರಿಸ್ತನ ಸ್ನೇಹಿತರಾಗುವುದು ಹೇಗೆ? ಒಂದು ವಿಧ, ಈಗಲೂ ಭೂಮಿಯ ಮೇಲೆ ಜೀವಿಸುತ್ತಿರುವ ಯೇಸುವಿನ ಆತ್ಮಾಭಿಷಿಕ್ತ ಸಹೋದರರಿಂದ ರಚಿತವಾಗಿರುವ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ಕೊಡುವ ನಿರ್ದೇಶನವನ್ನು ಪಾಲಿಸುವುದಾಗಿದೆ. ಯೇಸು, ಈ ಆಳನ್ನು ‘ವಿಷಯಗಳ ವ್ಯವಸ್ಥೆಯ ಸಮಾಪ್ತಿಯ’ ಸಮಯದಲ್ಲಿ ‘ತನ್ನ ಎಲ್ಲ ಆಸ್ತಿಯ ಮೇಲೆ’ ನೇಮಿಸುವುದಾಗಿ ಮಾತುಕೊಟ್ಟಿದ್ದಾನೆ. (ಮತ್ತಾ. 24:3, 45-47) ಇಂದು, ಕ್ರಿಸ್ತನ ಸ್ನೇಹಿತರಾಗಲು ಪ್ರಯತ್ನಿಸುವವರಲ್ಲಿ ಅಧಿಕಾಂಶ ಮಂದಿ ಈ ಆಳು ವರ್ಗಕ್ಕೆ ಸೇರಿದವರಲ್ಲ. ನಂಬಿಗಸ್ತ ಆಳು ವರ್ಗದಿಂದ ಬರುವ ನಿರ್ದೇಶನಕ್ಕೆ ಅವರು ತೋರಿಸುವ ಪ್ರತಿಕ್ರಿಯೆಯು, ಕ್ರಿಸ್ತನೊಂದಿಗಿನ ಅವರ ಸ್ನೇಹವನ್ನು ಹೇಗೆ ಪ್ರಭಾವಿಸುತ್ತದೆ?

15. ಒಬ್ಬ ವ್ಯಕ್ತಿ ಕುರಿಯೋ ಆಡೋ ಎಂಬುದನ್ನು ಯಾವ ಅಂಶ ನಿರ್ಧರಿಸುತ್ತದೆ?

15ಮತ್ತಾಯ 25:31-40 ಓದಿ. ನಂಬಿಗಸ್ತ ಆಳು ವರ್ಗದ ಸದಸ್ಯರನ್ನು ಯೇಸು ತನ್ನ ಸಹೋದರರೆಂದು ಕರೆದನು. ನಾವಾತನ ಸಹೋದರರನ್ನು ಹೇಗೆ ಉಪಚರಿಸುತ್ತೇವೋ ಅದನ್ನಾತನು ಸ್ವತಃ ತನಗೆ ಮಾಡಿದ ಉಪಚಾರದಂತೆ ಭಾವಿಸುವುದಾಗಿ, ಕುರಿ ಮತ್ತು ಆಡುಗಳ ಕುರಿತ ದೃಷ್ಟಾಂತದಲ್ಲಿ ಯೇಸು ಸ್ಪಷ್ಟವಾಗಿ ತಿಳಿಸಿದನು. ವಾಸ್ತವದಲ್ಲಿ ಒಬ್ಬ ವ್ಯಕ್ತಿ ‘ತನ್ನ ಸಹೋದರರಲ್ಲಿ ಅಲ್ಪನಾದವನೊಬ್ಬನನ್ನು’ ಸಹ ಹೇಗೆ ಉಪಚರಿಸುತ್ತಾನೋ ಅದು ಅವನು ಕುರಿಯೋ ಆಡೋ ಎಂಬದನ್ನು ನಿರ್ಧರಿಸುವ ಅಂಶವಾಗಿರುವುದೆಂದು ಯೇಸು ಹೇಳಿದನು. ಹೀಗಿರುವುದರಿಂದ, ಭೂನಿರೀಕ್ಷೆಯುಳ್ಳವರು ತಾವು ಕ್ರಿಸ್ತನ ಸ್ನೇಹಿತರಾಗಿರಲು ಇಚ್ಛಿಸುತ್ತೇವೆಂದು ತೋರಿಸಿಕೊಡುವ ಪ್ರಧಾನ ವಿಧವು, ನಂಬಿಗಸ್ತ ಆಳು ವರ್ಗವನ್ನು ಬೆಂಬಲಿಸುವುದೇ ಆಗಿದೆ.

16, 17. ಕ್ರಿಸ್ತನ ಸಹೋದರರ ಕಡೆಗಿನ ನಮ್ಮ ಸ್ನೇಹವನ್ನು ನಾವು ಹೇಗೆ ತೋರಿಸಬಹುದು?

16 ನೀವು ದೇವರ ರಾಜ್ಯದಡಿ ಭೂಮಿಯ ಮೇಲೆ ಜೀವಿಸಲು ನಿರೀಕ್ಷಿಸುತ್ತಿರುವಲ್ಲಿ, ಕ್ರಿಸ್ತನ ಸಹೋದರರ ಕಡೆಗಿನ ಸ್ನೇಹವನ್ನು ಹೇಗೆ ತೋರಿಸಬಲ್ಲಿರಿ? ಈಗ ಕೇವಲ ಮೂರು ವಿಧಾನಗಳನ್ನು ಪರಿಗಣಿಸೋಣ. ಮೊದಲನೆಯದ್ದು, ಸಾರುವ ಕೆಲಸದಲ್ಲಿ ಮನಃಪೂರ್ವಕವಾಗಿ ಪಾಲ್ಗೊಳ್ಳುವುದಾಗಿದೆ. ಕ್ರಿಸ್ತನು ತನ್ನ ಸಹೋದರರಿಗೆ ಲೋಕದಾದ್ಯಂತ ಸುವಾರ್ತೆ ಸಾರುವಂತೆ ಆಜ್ಞಾಪಿಸಿದನು. (ಮತ್ತಾ. 24:14) ಆದರೆ ಇಂದು ಭೂಮಿ ಮೇಲೆ ಉಳಿದಿರುವ ಕ್ರಿಸ್ತನ ಸಹೋದರರಿಗೆ ತಮ್ಮ ಸಂಗಡಿಗರಾದ ಬೇರೆ ಕುರಿಗಳ ನೆರವಿಲ್ಲದಿರುತ್ತಿದ್ದಲ್ಲಿ ಆ ಜವಾಬ್ದಾರಿಯನ್ನು ಪೂರೈಸಲು ತೀರ ಕಷ್ಟವಾಗುತ್ತಿತ್ತು. ಬೇರೆ ಕುರಿ ವರ್ಗದ ಸದಸ್ಯರು ಸಾರುವ ಕೆಲಸದಲ್ಲಿ ಪಾಲ್ಗೊಳ್ಳುವಾಗಲೆಲ್ಲ, ಕ್ರಿಸ್ತನ ಸಹೋದರರಿಗೆ ಅವರ ಪವಿತ್ರ ನೇಮಕವನ್ನು ಪೂರೈಸಲು ಸಹಾಯ ಮಾಡುತ್ತಿದ್ದಾರೆ. ಅವರ ಸ್ನೇಹದ ಈ ಕೃತ್ಯವನ್ನು ಕ್ರಿಸ್ತನು ಗಾಢವಾಗಿ ಗಣ್ಯಮಾಡುತ್ತಾನೆ ಮತ್ತು ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ವರ್ಗ ಸಹ ಗಾಢವಾಗಿ ಗಣ್ಯಮಾಡುತ್ತದೆ.

17 ಎರಡನೆಯದಾಗಿ, ಸಾರುವ ಕೆಲಸವನ್ನು ಆರ್ಥಿಕವಾಗಿ ಬೆಂಬಲಿಸುವ ಮೂಲಕ ಬೇರೆ ಕುರಿ ವರ್ಗದವರು ಕ್ರಿಸ್ತನ ಸಹೋದರರಿಗೆ ಸಹಾಯಮಾಡಬಲ್ಲರು. ಯೇಸು ತನ್ನ ಹಿಂಬಾಲಕರಿಗೆ, “ಅನೀತಿಯ ಐಶ್ವರ್ಯದ ಮೂಲಕ” ಸ್ನೇಹಿತರನ್ನು ಮಾಡಿಕೊಳ್ಳುವಂತೆ ಉತ್ತೇಜಿಸಿದನು. (ಲೂಕ 16:9) ಇದರರ್ಥ ನಾವು ಯೇಸುವಿನ ಇಲ್ಲವೇ ಯೆಹೋವನ ಸ್ನೇಹವನ್ನು ಹಣಕೊಟ್ಟು ಖರೀದಿಸಬಹುದೆಂದಲ್ಲ. ಬದಲಾಗಿ, ನಮ್ಮ ಭೌತಿಕ ಸ್ವತ್ತುಗಳನ್ನು ರಾಜ್ಯಾಭಿರುಚಿಗಳ ಪ್ರವರ್ಧನೆಗಾಗಿ ಬಳಸುವ ಮೂಲಕ ನಮ್ಮ ಸ್ನೇಹ ಮತ್ತು ಪ್ರೀತಿಯನ್ನು ಬರೀ ಬಾಯಿಮಾತಿನಿಂದಲ್ಲ, “ಕಾರ್ಯದಲ್ಲಿಯೂ ಸತ್ಯದಲ್ಲಿಯೂ” ತೋರಿಸಬಲ್ಲೆವು. (1 ಯೋಹಾ. 3:16-18) ನಾವು ಸಾರುವ ಕೆಲಸದಲ್ಲಿ ತೊಡಗುವಾಗ, ನಮ್ಮ ಆರಾಧನಾ ಸ್ಥಳಗಳ ನಿರ್ಮಾಣ ಹಾಗೂ ದುರಸ್ತಿಗಾಗಿ ಹಣ ದಾನಮಾಡುವಾಗ ಮತ್ತು ಲೋಕವ್ಯಾಪಕ ಸಾರುವ ಕೆಲಸಕ್ಕಾಗಿ ಕಾಣಿಕೆಗಳನ್ನು ಕೊಡುವಾಗ ಅಂಥ ಆರ್ಥಿಕ ಬೆಂಬಲವನ್ನು ನೀಡುತ್ತೇವೆ. ನಮ್ಮ ಕಾಣಿಕೆ ಚಿಕ್ಕದಾಗಿರಲಿ ದೊಡ್ಡದಾಗಿರಲಿ, ಸಂತೋಷದಿಂದ ಕೊಟ್ಟದ್ದನ್ನು ಯೆಹೋವನು ಹಾಗೂ ಯೇಸು ನಿಶ್ಚಯವಾಗಿಯೂ ಗಣ್ಯಮಾಡುತ್ತಾರೆ.—2 ಕೊರಿಂ. 9:7.

18. ಸಭಾ ಹಿರಿಯರು ಕೊಡುವ ಬೈಬಲಾಧಾರಿತ ನಿರ್ದೇಶನವನ್ನು ನಾವೇಕೆ ಪಾಲಿಸಬೇಕು?

18 ಮೂರನೆಯದಾಗಿ, ಸಭಾ ಹಿರಿಯರು ಕೊಡುವ ನಿರ್ದೇಶನವನ್ನು ಪಾಲಿಸುವ ಮೂಲಕ ನಾವು ಕ್ರಿಸ್ತನ ಸ್ನೇಹಿತರಾಗಿದ್ದೇವೆಂದು ತೋರಿಸಬಲ್ಲೆವು. ಈ ಪುರುಷರು ಕ್ರಿಸ್ತನ ನಿರ್ದೇಶನದ ಮೇರೆಗೆ ಪವಿತ್ರಾತ್ಮದಿಂದ ನೇಮಿತರಾಗಿದ್ದಾರೆ. (ಎಫೆ. 5:23) “ನಿಮ್ಮ ಮಧ್ಯೆ ಮುಂದಾಳುತ್ವ ವಹಿಸುತ್ತಿರುವವರಿಗೆ ವಿಧೇಯರಾಗಿರಿ ಮತ್ತು ಅವರಿಗೆ ಅಧೀನರಾಗಿರಿ” ಎಂದು ಅಪೊಸ್ತಲ ಪೌಲನು ಬರೆದನು. (ಇಬ್ರಿ. 13:17) ಸ್ಥಳಿಕ ಹಿರಿಯರು ಕೊಡುವ ಬೈಬಲಾಧರಿತ ನಿರ್ದೇಶನವನ್ನು ಪಾಲಿಸಲು ನಮಗೆ ಕೆಲವೊಮ್ಮೆ ಕಷ್ಟವಾಗಬಹುದು. ನಮಗೆ ಅವರ ಕುಂದುಕೊರತೆಗಳು ಗೊತ್ತಿರುವುದರಿಂದ ಅವರು ಯಾವುದೇ ಸಲಹೆ ಕೊಟ್ಟರೂ ನಾವದನ್ನು ಸರಿಯಾದ ದೃಷ್ಟಿಕೋನದಿಂದ ಸ್ವೀಕರಿಸದೇ ಇರಬಹುದು. ಆದರೆ ಸಭೆಯ ಶಿರಸ್ಸಾದ ಕ್ರಿಸ್ತನು ಈ ಅಪರಿಪೂರ್ಣ ಮಾನವರನ್ನೇ ಸಂತೋಷದಿಂದ ಬಳಸುತ್ತಾನೆ. ಹೀಗಿರಲಾಗಿ, ಇಂಥವರ ಅಧಿಕಾರಕ್ಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೋ ಅದು ಕ್ರಿಸ್ತನೊಂದಿಗಿನ ನಮ್ಮ ಸ್ನೇಹವನ್ನು ನೇರವಾಗಿ ಪ್ರಭಾವಿಸುತ್ತದೆ. ನಮ್ಮ ಹಿರಿಯರ ಕುಂದುಕೊರತೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಅವರು ಕೊಡುವ ನಿರ್ದೇಶನವನ್ನು ಸಂತೋಷದಿಂದ ಪಾಲಿಸುವಲ್ಲಿ, ಕ್ರಿಸ್ತನ ಮೇಲೆ ನಮಗೆ ಪ್ರೀತಿಯಿದೆಯೆಂದು ಸಾಬೀತುಪಡಿಸಬಲ್ಲೆವು.

ಒಳ್ಳೇ ಸ್ನೇಹಿತರನ್ನು ನಾವೆಲ್ಲಿ ಕಂಡುಕೊಳ್ಳಬಲ್ಲೆವು?

19, 20. ಸಭೆಯೊಳಗೆ ನಮಗೇನು ಸಿಗಬಲ್ಲದು, ಮತ್ತು ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸುವೆವು?

19 ಯೇಸು ನಮಗೆ ಸಭೆಯೊಳಗೆ ಪ್ರೀತಿಭರಿತ ಕುರುಬರ ಮೇಲ್ವಿಚಾರಣೆಯನ್ನು ಒದಗಿಸುವ ಮೂಲಕ ಮಾತ್ರವಲ್ಲ, ಆಧ್ಯಾತ್ಮಿಕ ತಾಯಂದಿರು ಮತ್ತು ಸಹೋದರ, ಸಹೋದರಿಯರನ್ನು ಕೊಡುವ ಮೂಲಕವೂ ಪರಾಮರಿಸುತ್ತಿದ್ದಾನೆ. (ಮಾರ್ಕ 10:29, 30 ಓದಿ.) ನೀವು ಯೆಹೋವನ ಸಂಘಟನೆಯೊಂದಿಗೆ ಸಹವಾಸ ಮಾಡಲಾರಂಭಿಸಿದಾಗ ನಿಮ್ಮ ಸಂಬಂಧಿಕರ ಪ್ರತಿಕ್ರಿಯೆ ಹೇಗಿತ್ತು? ಪ್ರಾಯಶಃ ಅವರು, ದೇವರಿಗೂ ಕ್ರಿಸ್ತನಿಗೂ ಹತ್ತಿರ ಬರುವ ನಿಮ್ಮ ಪ್ರಯತ್ನಗಳನ್ನು ಬೆಂಬಲಿಸಿರಬಹುದು. ಆದರೆ ಕೆಲವೊಮ್ಮೆ “ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವುದು ನಿಶ್ಚಯ” ಎಂದು ಯೇಸು ಎಚ್ಚರಿಸಿದನು. (ಮತ್ತಾ. 10:36) ಹೀಗಿರುವುದರಿಂದ ಸಭೆಯೊಳಗೆ ನಮಗೆ, ಸ್ವಂತ ಸಹೋದರನಿಗಿಂತಲೂ ಹೆಚ್ಚು ಆಪ್ತವಾಗಿ ಅಂಟಿಕೊಳ್ಳುವವರು ಸಿಗಬಲ್ಲರೆಂಬ ಅರಿವು ಎಷ್ಟು ಸಾಂತ್ವನದಾಯಕ!—ಜ್ಞಾನೋ. 18:24.

20 ಪೌಲನು ರೋಮ್‌ನಲ್ಲಿದ್ದ ಸಭೆಗೆ ಬರೆದ ಪತ್ರದ ಕೊನೆಯಲ್ಲಿರುವ ವೈಯಕ್ತಿಕ ಅಭಿವಂದನೆಗಳು, ಅವನಿಗೆ ಅನೇಕರೊಂದಿಗೆ ಗಾಢ ಸ್ನೇಹವಿತ್ತು ಎಂಬುದನ್ನು ತೋರಿಸುತ್ತವೆ. (ರೋಮ. 16:8-16) ಅಪೊಸ್ತಲ ಯೋಹಾನನು ತನ್ನ ಮೂರನೇ ಪತ್ರವನ್ನು, “ಸ್ನೇಹಿತರಲ್ಲಿ ಪ್ರತಿಯೊಬ್ಬರಿಗೂ ಹೆಸರುಹೆಸರಾಗಿ ನನ್ನ ವಂದನೆಗಳನ್ನು ತಿಳಿಸು” ಎಂಬ ಮಾತುಗಳೊಂದಿಗೆ ಕೊನೆಗೊಳಿಸಿದನು. (3 ಯೋಹಾ. 14) ಅವನು ಸಹ ಹಲವರೊಂದಿಗೆ ಬಾಳುವಂಥ ಸ್ನೇಹಬಂಧಗಳನ್ನು ಬೆಸೆದಿದ್ದನೆಂಬುದು ಸ್ಪಷ್ಟ. ನಮ್ಮ ಆಧ್ಯಾತ್ಮಿಕ ಸಹೋದರ ಸಹೋದರಿಯರೊಂದಿಗೆ ಹಿತಕರ ಸ್ನೇಹಬಂಧಗಳನ್ನು ಬೆಸೆದು ಉಳಿಸಿಕೊಳ್ಳುವ ಮೂಲಕ ನಾವು ಯೇಸು ಹಾಗೂ ಆದಿ ಶಿಷ್ಯರ ಮಾದರಿಗಳನ್ನು ಹೇಗೆ ಅನುಕರಿಸಬಲ್ಲೆವು? ನಮ್ಮ ಮುಂದಿನ ಲೇಖನವು ಇದಕ್ಕೆ ಉತ್ತರ ಕೊಡುವುದು.

ನಿಮ್ಮ ಉತ್ತರವೇನು?

• ಒಳ್ಳೇ ಸ್ನೇಹಿತನಾಗಿ ಯೇಸು ಯಾವ ಮಾದರಿಯಿಟ್ಟನು?

• ಶಿಷ್ಯರು ಯೇಸುವಿನ ಸ್ನೇಹಕ್ಕೆ ಹೇಗೆ ಸ್ಪಂದಿಸಿದರು?

• ನಾವು ಕ್ರಿಸ್ತನ ಸ್ನೇಹಿತರೆಂದು ಹೇಗೆ ತೋರಿಸಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

[ಪುಟ 14ರಲ್ಲಿರುವ ಚಿತ್ರ]

ತನ್ನ ಸ್ನೇಹಿತರಿಗೆ ಹೇಗನಿಸುತ್ತದೆ ಮತ್ತು ಅವರೇನು ಯೋಚಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಯೇಸು ಆಸಕ್ತನಾಗಿದ್ದನು

[ಪುಟ 16ರಲ್ಲಿರುವ ಚಿತ್ರಗಳು]

ನಾವು ಕ್ರಿಸ್ತನ ಸ್ನೇಹಿತರಾಗಿರಲು ಇಚ್ಛಿಸುತ್ತೇವೆಂದು ಹೇಗೆ ತೋರಿಸಬಲ್ಲೆವು?