ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಶುಶ್ರೂಷಕರಾಗಿ ಸಭ್ಯವರ್ತನೆ ತೋರಿಸುವುದು

ದೇವರ ಶುಶ್ರೂಷಕರಾಗಿ ಸಭ್ಯವರ್ತನೆ ತೋರಿಸುವುದು

ದೇವರ ಶುಶ್ರೂಷಕರಾಗಿ ಸಭ್ಯವರ್ತನೆ ತೋರಿಸುವುದು

“ದೇವರನ್ನು ಅನುಕರಿಸುವವರಾಗಿರಿ.”—ಎಫೆ. 5:1.

1, 2. (ಎ) ಸಭ್ಯವರ್ತನೆ ಏಕೆ ಪ್ರಾಮುಖ್ಯ? (ಬಿ) ಈ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?

ಸಭ್ಯ ನಡವಳಿಕೆಯ ಕುರಿತು ಲೇಖಕಿ ಸ್ಯೂ ಫಾಕ್ಸ್‌ ಬರೆಯುವುದು: “ನಾವು ಯಾವಾಗಲೂ ಸಭ್ಯವರ್ತನೆಯನ್ನು ತೋರಿಸಬೇಕು. ಸಭ್ಯವರ್ತನೆಯು ಎಲ್ಲಾ ಕಡೆ ಯಾವಾಗಲೂ ಕಾರ್ಯಸಾಧಕ.” ಜನರು ವಿನಯಶೀಲ ನಡವಳಿಕೆಯನ್ನು ರೂಢಿಮಾಡಿಕೊಳ್ಳುವಾಗ ಸಮಸ್ಯೆಗಳುಂಟಾಗುವುದು ಕಡಿಮೆ, ಇದ್ದರೂ ಮಾಯವಾಗುತ್ತವೆ. ಆದರೆ ಅಸಭ್ಯ ನಡತೆಯಿಂದಲೋ ವಿರುದ್ಧ ಪರಿಣಾಮ. ಇತರರೊಂದಿಗೆ ಒರಟಾಗಿ ವರ್ತಿಸುವುದು ಜಗಳ, ಕೋಪ ಮತ್ತು ಬೇಸರಕ್ಕೆ ನಡಿಸುತ್ತದೆ.

2 ನಿಜ ಕ್ರೈಸ್ತ ಸಭೆಯಲ್ಲಿ ಸಭ್ಯವರ್ತನೆಯು ಸಮೃದ್ಧವಾಗಿ ತೋರಿಬರುತ್ತದೆ. ಆದರೂ ಲೋಕದಲ್ಲಿ ಇಂದು ಸರ್ವಸಾಮಾನ್ಯವಾಗಿರುವ ದುರ್ವರ್ತನೆಗಳನ್ನು ಅನುಸರಿಸುವ ವಿಷಯದಲ್ಲಿ ನಾವು ಎಚ್ಚರದಿಂದಿರಬೇಕು. ಸಭ್ಯತೆಯ ವಿಷಯದಲ್ಲಿ ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸುವುದರಿಂದ ಈ ವಿಷಯದಲ್ಲಿ ಹೇಗೆ ನಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಜನರನ್ನು ಸತ್ಯಾರಾಧನೆಗೆ ಆಕರ್ಷಿಸಬಹುದೆಂದು ನಾವೀಗ ನೋಡೋಣ. ಸಭ್ಯವರ್ತನೆಯನ್ನು ತೋರಿಸುವುದರಲ್ಲಿ ಏನೆಲ್ಲಾ ಒಳಗೂಡಿದೆ ಎಂದು ತಿಳಿದುಕೊಳ್ಳಲು ಯೆಹೋವ ದೇವರ ಮತ್ತು ಆತನ ಕುಮಾರನ ಮಾದರಿಗಳನ್ನು ಪರಿಗಣಿಸಿರಿ.

ಯೆಹೋವ ಮತ್ತು ಆತನ ಕುಮಾರ —ಸಭ್ಯವರ್ತನೆಯಲ್ಲಿ ಆದರ್ಶಮಾದರಿ

3. ಯೆಹೋವ ದೇವರು ಸಭ್ಯತೆಯಲ್ಲಿ ಯಾವ ಮಾದರಿಯನ್ನು ಇಟ್ಟಿದ್ದಾನೆ?

3 ಸಭ್ಯತೆಯಲ್ಲಿ ಯೆಹೋವ ದೇವರು ಪರಿಪೂರ್ಣ ಮಾದರಿ ಇಟ್ಟಿದ್ದಾನೆ. ವಿಶ್ವದ ಪರಮಾಧಿಕಾರಿಯಾಗಿರುವ ಉನ್ನತ ಸ್ಥಾನದಲ್ಲಿದ್ದರೂ ಆತನು ಮಾನವರನ್ನು ಮಹಾದಯೆಯಿಂದಲೂ ಗೌರವದಿಂದಲೂ ಉಪಚರಿಸುತ್ತಾನೆ. ಅಬ್ರಹಾಮ ಮೋಶೆಯರೊಂದಿಗೆ ಮಾತಾಡಿದಾಗ ಯೆಹೋವನು ಅನೇಕಸಲ “ದಯವಿಟ್ಟು” ಎಂದು ಭಾಷಾಂತರವಾದ ಹೀಬ್ರು ಮೂಲಪದವನ್ನು ಉಪಯೋಗಿಸಿದನು. ಇದನ್ನು ಇಂಗ್ಲಿಷ್‌ ಭಾಷೆಯ ನೂತನ ಲೋಕ ಭಾಷಾಂತರದಲ್ಲಿ ಕಂಡುಕೊಳ್ಳಸಾಧ್ಯವಿದೆ. (ಆದಿ. 13:14; ವಿಮೋ. 4:6) ತನ್ನ ಸೇವಕರು ತಪ್ಪುಮಾಡುವಾಗ ಯೆಹೋವನು ‘ಕನಿಕರ, ದಯೆ, ದೀರ್ಘಶಾಂತಿ, ಬಹಳ ಪ್ರೀತಿ ಮತ್ತು ನಂಬಿಕೆಯನ್ನು’ ತೋರಿಸುತ್ತಾನೆ. (ಕೀರ್ತ. 86:15) ಇತರರು ತಾವು ಅಪೇಕ್ಷಿಸಿದ್ದನ್ನು ಮಾಡದಿರುವಾಗ ಕೋಪದಿಂದ ಸಿಡಿದೇಳುವ ಕೆಲವು ಮನುಷ್ಯರಂತೆ ಯೆಹೋವನು ಕೋಪಿಸುವುದಿಲ್ಲ.

4. ಇತರರು ನಮ್ಮೊಂದಿಗೆ ಮಾತನಾಡುವಾಗ ನಾವು ಯೆಹೋವನನ್ನು ಹೇಗೆ ಅನುಕರಿಸಬಹುದು?

4 ದೇವರು ಮಾನವರಿಗೆ ಕಿವಿಗೊಡುವ ರೀತಿಯಿಂದಲೂ ನಾವು ಸಭ್ಯವರ್ತನೆಯ ಕುರಿತು ಪಾಠ ಕಲಿಯಸಾಧ್ಯವಿದೆ. ಸೋದೋಮಿನ ಜನರ ಕುರಿತು ಅಬ್ರಹಾಮನು ಪ್ರಶ್ನೆಗಳನ್ನು ಕೇಳಿದಾಗ ಯೆಹೋವನು ತಾಳ್ಮೆಯಿಂದ ಪ್ರತಿಯೊಂದು ಪ್ರಶ್ನೆಗೂ ಉತ್ತರಕೊಟ್ಟನು. (ಆದಿ. 18:23-32) ಅಬ್ರಹಾಮನ ಚಿಂತೆಯನ್ನು ಆತನು ಸಮಯವ್ಯರ್ಥವೆಂದು ಪರಿಗಣಿಸಲಿಲ್ಲ. ಯೆಹೋವನು ತನ್ನ ಸೇವಕರ ಪ್ರಾರ್ಥನೆಗಳಿಗೆ ಮತ್ತು ಪಶ್ಚಾತ್ತಾಪಪಟ್ಟ ಪಾಪಿಗಳ ಮೊರೆಗಳಿಗೆ ಕಿವಿಗೊಡುತ್ತಾನೆ. (ಕೀರ್ತನೆ 51:11, 17 ಓದಿ.) ಇತರರು ನಮ್ಮೊಂದಿಗೆ ಮಾತನಾಡುವಾಗ ಅವರಿಗೆ ಕಿವಿಗೊಡುವ ಮೂಲಕ ನಾವು ಯೆಹೋವನನ್ನು ಅನುಕರಿಸಬೇಕಲ್ಲವೆ?

5. ಯೇಸುವಿನ ಸಭ್ಯ ನಡವಳಿಕೆಯನ್ನು ಅನುಕರಿಸುವುದು ಇತರರೊಂದಿಗಿನ ನಮ್ಮ ಸಂಬಂಧವನ್ನು ಹೇಗೆ ಉತ್ತಮಗೊಳಿಸಬಲ್ಲದು?

5 ತನ್ನ ತಂದೆಯಿಂದ ಯೇಸು ಕ್ರಿಸ್ತನು ಕಲಿತ ಅನೇಕ ವಿಷಯಗಳಲ್ಲಿ ಸಭ್ಯತೆ ಒಂದು. ಅವನ ಶುಶ್ರೂಷೆಯು ಕೆಲವೊಮ್ಮೆ ಅವನ ಸಮಯ ಮತ್ತು ಶಕ್ತಿಯನ್ನು ತುಂಬಾ ಹೀರಿಕೊಳ್ಳುತ್ತಿದ್ದರೂ ಅವನು ಯಾವಾಗಲೂ ತಾಳ್ಮೆ ಮತ್ತು ದಯೆಯನ್ನು ತೋರಿಸಿದನು. ಕುಷ್ಟರೋಗಿಗಳಿಗೆ, ಕುರುಡ ಭಿಕ್ಷುಕರಿಗೆ, ಕೊರತೆಯುಳ್ಳವರಿಗೆ ಯೇಸು ಸಹಾಯ ನೀಡಲು ಸಿದ್ಧನಾಗಿದ್ದನು, ಮನಸ್ಸುಳ್ಳವನೂ ಆಗಿದ್ದನು. ಅವರು ಬರುತ್ತಿರುವುದು ಅವನಿಗೆ ಗೊತ್ತಿರದಿದ್ದರೂ ಅವನು ಅವರನ್ನು ನಿರ್ಲಕ್ಷದಿಂದ ನೋಡಲಿಲ್ಲ. ಕಂಗಾಲಾದ ವ್ಯಕ್ತಿಗೆ ಸಹಾಯ ನೀಡಲಿಕ್ಕಾಗಿ ಅವನು ಆಗಾಗ್ಗೆ ತಾನು ಮಾಡುತ್ತಿದ್ದ ಕೆಲಸವನ್ನೂ ನಿಲ್ಲಿಸುತ್ತಿದ್ದನು. ತನ್ನಲ್ಲಿ ನಂಬಿಕೆಯಿಟ್ಟವರ ಕಡೆಗೆ ಯೇಸು ಅಸಾಧಾರಣ ಪರಿಗಣನೆಯನ್ನು ತೋರಿಸಿದನು. (ಮಾರ್ಕ 5:30-34; ಲೂಕ 18:35-41) ಕ್ರೈಸ್ತರಾದ ನಾವು ಜನರಿಗೆ ದಯೆತೋರಿಸುವ ಮತ್ತು ಸಹಾಯ ನೀಡುವ ಮೂಲಕ ಯೇಸುವಿನ ಮಾದರಿಯನ್ನು ಅನುಸರಿಸುತ್ತೇವೆ. ಅಂಥ ನಡವಳಿಕೆಯು ನಮ್ಮ ಸಂಬಂಧಿಕರಿಂದ, ನೆರೆಯವರಿಂದ ಮತ್ತು ಇತರರಿಂದ ಖಂಡಿತ ಗಮನಿಸಲ್ಪಡುತ್ತದೆ. ಅದಲ್ಲದೆ ಅದು ಯೆಹೋವನಿಗೆ ಮಹಿಮೆಯನ್ನು ಮತ್ತು ನಮಗೆ ಸಂತೋಷವನ್ನು ತರುತ್ತದೆ.

6. ಹೃತ್ಪೂರ್ವಕತೆ ಮತ್ತು ಸ್ನೇಹಪರತೆಯ ಯಾವ ಮಾದರಿಯನ್ನು ಯೇಸು ಇಟ್ಟನು?

6 ಯೇಸು ಜನರನ್ನು ಹೆಸರುಹೇಳಿ ಕರೆಯುವ ಮೂಲಕವೂ ಅವರಿಗೆ ಗೌರವವನ್ನು ತೋರಿಸಿದನು. ಈ ರೀತಿಯಲ್ಲಿ ಯೆಹೂದಿ ಧಾರ್ಮಿಕ ಮುಖಂಡರು ಜನರಿಗೆ ಗೌರವವನ್ನು ತೋರಿಸಿದರೊ? ಇಲ್ಲ. ಧರ್ಮಶಾಸ್ತ್ರವನ್ನು ಅರಿಯದ ಜನರನ್ನು ಅವರು “ಶಾಪಗ್ರಸ್ತರು” ಎಂದು ಕರೆದರು ಮತ್ತು ಆ ರೀತಿಯಲ್ಲಿ ಉಪಚರಿಸಿದರು ಸಹ. (ಯೋಹಾ. 7:49) ದೇವಕುಮಾರನಾದರೋ ಹಾಗೆ ಮಾಡಲಿಲ್ಲ. ಅವನು ತಮ್ಮ ಹೆಸರುಹೇಳಿ ಕರೆದದ್ದನ್ನು ಮಾರ್ಥ, ಮರಿಯ, ಜಕ್ಕಾಯ ಮತ್ತು ಇತರ ಅನೇಕರು ಕಿವಿಯಾರೆ ಕೇಳಿದರು. (ಲೂಕ 10:41, 42; 19:5) ಜನರನ್ನು ನಾವು ಹೇಗೆ ಸಂಬೋಧಿಸುತ್ತೇವೆಂಬುದನ್ನು ನಮ್ಮ ಸಂಸ್ಕೃತಿ ಹಾಗೂ ಪರಿಸ್ಥಿತಿಗಳು ನಿಯಂತ್ರಿಸಬಹುದಾದರೂ ಯೆಹೋವನ ಸೇವಕರು ಮಾತ್ರ ಎಲ್ಲರ ಕಡೆಗೆ ಸ್ನೇಹಪರತೆಯನ್ನು ಬೆಳೆಸಿಕೊಳ್ಳುತ್ತಾರೆ. * ತಮ್ಮ ಜೊತೆ ವಿಶ್ವಾಸಿಗಳಿಗೆ ಮತ್ತು ಇತರರಿಗೆ ಸಲ್ಲತಕ್ಕ ಗೌರವವನ್ನು ನಿರ್ಬಂಧಿಸುವ ವರ್ಗಭೇದಕ್ಕೆ ಅವರು ಎಡೆಗೊಡುವುದಿಲ್ಲ.—ಯಾಕೋಬ 2:1-4 ಓದಿ.

7. ಎಲ್ಲೆಲ್ಲಿಯೂ ಇರುವ ಜೊತೆಮಾನವರಿಗೆ ಸಭ್ಯತೆಯನ್ನು ತೋರಿಸಲು ಬೈಬಲ್‌ ಮೂಲತತ್ತ್ವಗಳು ನಮಗೆ ಹೇಗೆ ಸಹಾಯ ಮಾಡುತ್ತವೆ?

7 ದೇವರು ಮತ್ತು ಆತನ ಪುತ್ರನು ಎಲ್ಲಾ ಜನಾಂಗಗಳ ಜನರನ್ನು ಮತ್ತು ಕುಲೀಯ ಗುಂಪುಗಳನ್ನು ಉಪಚರಿಸುವ ಸೌಜನ್ಯಭರಿತ ರೀತಿಯು ಅಂಥ ಜನರಿಗೆ ಗೌರವವನ್ನು ಕೊಡುತ್ತದೆ ಮತ್ತು ಪ್ರಾಮಾಣಿಕ ಜನರನ್ನು ಸತ್ಯಕ್ಕೆ ಆಕರ್ಷಿಸುತ್ತದೆ. ಆದರೆ ಸಭ್ಯವರ್ತನೆಯಲ್ಲಿ ಏನು ಕೂಡಿರುತ್ತದೋ ಅದು ಸ್ಥಳದಿಂದ ಸ್ಥಳಕ್ಕೆ ಬೇರೆಯಾಗಿದೆ. ಆದ್ದರಿಂದ ಸಭ್ಯವರ್ತನೆಯ ವಿಷಯದಲ್ಲಿ ಒಂದು ಕಟ್ಟುನಿಟ್ಟಾದ ನಿಯಮವನ್ನು ನಾವು ಪಾಲಿಸುವುದಿಲ್ಲ. ಬದಲಾಗಿ ಎಲ್ಲೆಲ್ಲಿಯೂ ಇರುವ ಜೊತೆಮಾನವರನ್ನು ಗೌರವಿಸುವುದರಲ್ಲಿ ಹೊಂದಾಣಿಕೆಯನ್ನು ಮಾಡಲು ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸುತ್ತೇವೆ. ಜನರನ್ನು ಸಭ್ಯತೆಯಿಂದ ಉಪಚರಿಸುವುದು ಕ್ರೈಸ್ತ ಶುಶ್ರೂಷೆಯಲ್ಲಿ ಹೆಚ್ಚು ಫಲಫಲಿಸುವಂತೆ ನಮ್ಮನ್ನು ಹೇಗೆ ನಡಿಸಬಲ್ಲದೆಂದು ನಾವೀಗ ಪರೀಕ್ಷಿಸೋಣ.

ಜನರನ್ನು ವಂದಿಸುವುದು ಮತ್ತು ಅವರೊಂದಿಗೆ ಮಾತನಾಡುವುದು

8, 9. (ಎ) ಯಾವ ಹವ್ಯಾಸವು ಕೆಟ್ಟವರ್ತನೆಯಾಗಿ ತೋರಿಬರಬಹುದು? (ಬಿ) ಮತ್ತಾಯ 5:47ರ ಯೇಸುವಿನ ಮಾತುಗಳು ನಾವು ಜನರನ್ನು ಉಪಚರಿಸುವ ವಿಧದ ಮೇಲೆ ಪರಿಣಾಮ ಬೀರುವಂತೆ ನಾವೇಕೆ ಬಿಡಬೇಕು?

8 ಇಂದು ಅನೇಕ ಸ್ಥಳಗಳಲ್ಲಿರುವ ತ್ವರಿತಗತಿಯ ಜೀವನದಲ್ಲಿ ಇಬ್ಬರು ವ್ಯಕ್ತಿಗಳು ಒಬ್ಬರನ್ನೊಬ್ಬರು ದಾಟಿಹೋಗುವಾಗ “ಹಲೋ” ಅಥವಾ “ಹೇಗಿದ್ದೀರಿ” ಎಂದು ಹೇಳಲೂ ತಪ್ಪುತ್ತಿರುವುದು ಸಾಮಾನ್ಯ. ಜನನಿಬಿಡ ಕಾಲ್ದಾರಿಯಲ್ಲಿ ನಡೆಯುವಾಗ ಪ್ರತಿಯೊಬ್ಬನೊಂದಿಗೆ ಮಾತನಾಡುವುದು ಅಸಾಧ್ಯವೆಂಬುದೇನೋ ನಿಜ. ಆದರೂ ಬೇರೆ ಅನೇಕ ಸಂದರ್ಭಗಳಲ್ಲಿ ಇತರರನ್ನು ವಂದಿಸಲು ಸಮಯ ತಕ್ಕೊಳ್ಳುವುದು ತಕ್ಕದ್ದೂ ಅಪೇಕ್ಷಣೀಯವೂ ಆಗಿದೆ. ಜನರನ್ನು ಸಾಮಾನ್ಯವಾಗಿ ನೀವು ವಂದಿಸುತ್ತೀರೊ? ಅಥವಾ ಗಂಟು ಮೋರೆಮಾಡಿ ನಡಿಯುತ್ತಾ ಚಕಾರವೆತ್ತದೆ ಹೋಗಿಬಿಡುತ್ತೀರೊ? ಕೆಲವೊಮ್ಮೆ ನಿಜವಾಗಿ ಕೆಟ್ಟವರ್ತನೆಯಾಗಿರುವ ಒಂದು ಹವ್ಯಾಸವನ್ನು ಯಾವ ಕೆಟ್ಟ ಹೇತೂ ಇಲ್ಲದೆ ವ್ಯಕ್ತಿಯೊಬ್ಬನು ಬೆಳೆಸಿಕೊಳ್ಳಬಹುದು.

9 “ನೀವು ನಿಮ್ಮ ಸಹೋದರರನ್ನು ಮಾತ್ರ ವಂದಿಸುವುದಾದರೆ ಯಾವ ಅಸಾಮಾನ್ಯ ಕಾರ್ಯವನ್ನು ಮಾಡಿದಂತಾಯಿತು? ಅನ್ಯಜನರು ಸಹ ಇದನ್ನೇ ಮಾಡುತ್ತಾರಲ್ಲವೆ?” ಎಂದು ಯೇಸು ಹೇಳಿದಾಗ ನಮಗೊಂದು ವಿಷಯವನ್ನು ನೆನಪಿಸಿದ್ದಾನೆ. (ಮತ್ತಾ. 5:47) ಈ ವಿಷಯದಲ್ಲಿ ಸಲಹೆಗಾರ ಡಾನಲ್ಡ್‌ ವೈಸ್‌ ಬರೆದದ್ದು: “ಇತರರು ತಮ್ಮ ಗುರುತಿಲ್ಲವೋ ಎಂಬಂತೆ ವರ್ತಿಸುವಾಗ ಜನರಿಗೆ ಕೋಪಬರುತ್ತದೆ. ಯಾರನ್ನಾದರೂ ಲಕ್ಷಿಸದೆ ಇರಲು ಯಾವ ನಿಜ ಕಾರಣವೂ ಇಲ್ಲ. ಇದಕ್ಕಿರುವ ಪರಿಹಾರ ಒಂದೇ: ಜನರನ್ನು ವಂದಿಸಿ, ಅವರೊಂದಿಗೆ ಮಾತನಾಡಿ ಅಷ್ಟೇ.” ಇತರರನ್ನು ಸಂಧಿಸುವಾಗ ನಿರಾಸಕ್ತಿ ಅಥವಾ ಸ್ನೇಹರಾಹಿತ್ಯವನ್ನು ನಾವು ತೋರಿಸದಿದ್ದಲ್ಲಿ ನಮಗೆ ಒಳ್ಳೇ ಫಲಿತಾಂಶ ಲಭಿಸುವುದು ನಿಶ್ಚಯ.

10. ಸಭ್ಯವರ್ತನೆ ಫಲದಾಯಕ ಶುಶ್ರೂಷೆಯನ್ನು ಮಾಡಲು ನಮಗೆ ಹೇಗೆ ನೆರವಾಗಸಾಧ್ಯವಿದೆ? (“ನಗುಮೊಗದಿಂದ ಸಂಭಾಷಣೆ ಆರಂಭಿಸಿ” ಎಂಬ ಚೌಕವನ್ನು ನೋಡಿ.)

10 ಉತ್ತರ ಅಮೆರಿಕದ ಒಂದು ದೊಡ್ಡ ಪಟ್ಟಣದಲ್ಲಿ ವಾಸಿಸುವ ಕ್ರೈಸ್ತ ದಂಪತಿ ಟಾಮ್‌ ಮತ್ತು ಕ್ಯಾರಲ್‌ ಅನ್ನು ತೆಗೆದುಕೊಳ್ಳಿ. ಅವರು ನೆರೆಯವರೊಂದಿಗೆ ಹಿತಕರ ಸಂಭಾಷಣೆ ಮಾಡುವುದನ್ನು ತಮ್ಮ ಶುಶ್ರೂಷೆಯ ಒಂದು ಭಾಗವಾಗಿ ಮಾಡಿರುತ್ತಾರೆ. ಅವರು ಅದನ್ನು ಹೇಗೆ ಮಾಡುತ್ತಾರೆ? ಯಾಕೋಬ 3:18ಕ್ಕೆ ಸೂಚಿಸುತ್ತಾ ಟಾಮ್‌ ಹೇಳುವುದು: “ನಾವು ಜನರೊಂದಿಗೆ ಸ್ನೇಹಪರರೂ ಶಾಂತಿಕರ್ತರೂ ಆಗಿರಲು ಪ್ರಯತ್ನಿಸುತ್ತೇವೆ. ಮನೆಯ ಹೊರಗಿರುವ ಮತ್ತು ಹಿತ್ತಲಲ್ಲಿ ಕೆಲಸಮಾಡುವ ಜನರನ್ನು ನೋಡಿ ನಾವು ಬಳಿಸಾರುತ್ತೇವೆ. ನಸುನಗುತ್ತಾ ಅವರನ್ನು ವಂದಿಸುತ್ತೇವೆ. ಅವರಿಗೆ ಆಸಕ್ತಿ ಹುಟ್ಟಿಸುವ ವಿಷಯಗಳ ಕುರಿತು ಮಾತನಾಡುತ್ತೇವೆ. ಅಂದರೆ ಅವರ ಮಕ್ಕಳು, ಸಾಕುನಾಯಿ, ಅವರ ಮನೆ ಮತ್ತು ಕೆಲಸದ ಕುರಿತು ಮಾತನಾಡುತ್ತೇವೆ. ಸಮಯಾನಂತರ ಅವರು ನಮ್ಮನ್ನು ತಮ್ಮ ಮಿತ್ರರಾಗಿ ವೀಕ್ಷಿಸುತ್ತಾರೆ.” ಕ್ಯಾರಲ್‌ ಹೇಳುವುದು: “ತದನಂತರದ ಭೇಟಿಯಲ್ಲಿ ನಾವು ನಮ್ಮ ಹೆಸರನ್ನು ಅವರಿಗೆ ತಿಳಿಸುತ್ತೇವೆ ಮತ್ತು ಅವರ ಹೆಸರನ್ನು ಕೇಳುತ್ತೇವೆ. ನಾವು ಆ ನೆರೆಹೊರೆಯಲ್ಲಿ ಏನು ಮಾಡುತ್ತಿದ್ದೇವೆಂದು ತಿಳಿಸುವಾಗ ನಮ್ಮ ಸಂಭಾಷಣೆಯನ್ನು ಚುಟುಕಾಗಿರಿಸುತ್ತೇವೆ. ಕೊನೆಗೆ ನಾವು ಅವರಿಗೆ ಸಾಕ್ಷಿಕೊಡಲು ಸಾಧ್ಯವಾಗುತ್ತದೆ.” ಟಾಮ್‌ ಮತ್ತು ಕ್ಯಾರಲ್‌ ಹೀಗೆ ತಮ್ಮ ನೆರೆಯವರಲ್ಲಿ ಅನೇಕರ ಭರವಸೆಯನ್ನು ಗೆದ್ದಿದ್ದಾರೆ. ಅವರಲ್ಲಿ ಹಲವಾರು ಮಂದಿ ಬೈಬಲಾಧಾರಿತ ಪ್ರಕಾಶನಗಳನ್ನು ಸ್ವೀಕರಿಸಿದ್ದಾರೆ ಮತ್ತು ಕೆಲವರು ಸತ್ಯವನ್ನು ಕಲಿಯುವುದರಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸಿದ್ದಾರೆ.

ಕಷ್ಟಕರ ಸನ್ನಿವೇಶಗಳಲ್ಲಿ ಸಭ್ಯತೆಯನ್ನು ತೋರಿಸುವುದು

11, 12. ಸುವಾರ್ತೆಯನ್ನು ಸಾರುವಾಗ ನಾವು ದುರುಪಚಾರವನ್ನೇಕೆ ನಿರೀಕ್ಷಿಸಬೇಕು, ಮತ್ತು ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು?

11 ನಾವು ಸುವಾರ್ತೆಯನ್ನು ಸಾರುವಾಗ ಕೆಲವೊಮ್ಮೆ ಅಸಭ್ಯ ಉಪಚಾರವನ್ನು ಎದುರಿಸುತ್ತೇವೆ. ನಾವಿದನ್ನು ನಿರೀಕ್ಷಿಸುತ್ತೇವೆ ಏಕೆಂದರೆ ಕ್ರಿಸ್ತ ಯೇಸು ತನ್ನ ಶಿಷ್ಯರಿಗೆ ಮೊದಲೇ ಎಚ್ಚರಿಸಿದ್ದು: “ಅವರು ನನ್ನನ್ನು ಹಿಂಸೆಪಡಿಸಿರುವಲ್ಲಿ ನಿಮ್ಮನ್ನೂ ಹಿಂಸೆಪಡಿಸುವರು.” (ಯೋಹಾ. 15:20) ಜನರು ಹೀನೈಸಿ ಮಾತಾಡುವಾಗ ಅದೇ ರೀತಿ ಹೀನೈಸಿ ಉತ್ತರಕೊಡುವುದರಿಂದ ಒಳ್ಳೇ ಫಲಿತಾಂಶ ದೊರೆಯದು. ಹಾಗಾದರೆ ನಮ್ಮ ಪ್ರತಿಕ್ರಿಯೆ ಹೇಗಿರಬೇಕು? ಅಪೊಸ್ತಲ ಪೇತ್ರನು ಬರೆದದ್ದು: “ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪವಿತ್ರೀಕರಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಕಾರಣವನ್ನು ಕೇಳುವ ಪ್ರತಿಯೊಬ್ಬರ ಮುಂದೆ ಉತ್ತರ ಹೇಳುವುದಕ್ಕೆ ಯಾವಾಗಲೂ ಸಿದ್ಧರಾಗಿರಿ; ಆದರೆ ಇದನ್ನು ಸೌಮ್ಯಭಾವದಿಂದಲೂ ಆಳವಾದ ಗೌರವದಿಂದಲೂ ಮಾಡಿರಿ.” (1 ಪೇತ್ರ 3:15) ಸಭ್ಯತೆಯನ್ನು ತೋರಿಸುವುದು ಅಂದರೆ ಸೌಮ್ಯತೆಯಿಂದಲೂ ಗೌರವದಿಂದಲೂ ಮಾತಾಡುವ ಮೂಲಕ ನಮ್ಮನ್ನು ನಿಂದಿಸುವವರ ಮನೋಭಾವವನ್ನು ನಾವು ಮೆದುಗೊಳಿಸಬಹುದು.—ತೀತ 2:7, 8.

12 ಜನರ ಒರಟು ಅಥವಾ ಚುಚ್ಚು ಮಾತುಗಳಿಗೆ ದೇವರು ಮೆಚ್ಚುವಂಥ ರೀತಿಯಲ್ಲಿ ಪ್ರತಿಕ್ರಿಯಿಸಲು ನಾವು ತಯಾರಿಸಬಲ್ಲೆವೊ? ಹೌದು ತಯಾರಿಸಬಲ್ಲೆವು. ಪೌಲನು ಉತ್ತೇಜಿಸಿದ್ದು: “ನಿಮ್ಮ ಮಾತು ಯಾವಾಗಲೂ ಸೌಜನ್ಯವುಳ್ಳದ್ದಾಗಿಯೂ ಉಪ್ಪಿನಿಂದ ಹದಗೊಳಿಸಲ್ಪಟ್ಟದ್ದಾಗಿಯೂ ಇರಲಿ; ಹೀಗೆ ನೀವು ಪ್ರತಿಯೊಬ್ಬರಿಗೆ ಹೇಗೆ ಉತ್ತರಕೊಡಬೇಕು ಎಂಬುದನ್ನು ತಿಳಿದುಕೊಳ್ಳುವಿರಿ.” (ಕೊಲೊ. 4:6) ಮನೆಮಂದಿಯೊಂದಿಗೆ, ಸಹಪಾಠಿಗಳೊಂದಿಗೆ, ಸಹೋದ್ಯೋಗಿಗಳೊಂದಿಗೆ, ಸಭೆಯವರೊಂದಿಗೆ ಮತ್ತು ನೆರೆಹೊರೆಯಲ್ಲಿರುವ ಜನರೊಂದಿಗೆ ಸಭ್ಯತೆಯಿಂದ ವರ್ತಿಸುವ ಹವ್ಯಾಸ ಮಾಡುವುದಾದರೆ ಪರಿಹಾಸ್ಯ ಮತ್ತು ನಿಂದೆಯನ್ನು ಕ್ರೈಸ್ತನಿಗೆ ತಕ್ಕದಾದ ರೀತಿಯಲ್ಲಿ ಎದುರಿಸಲು ನಾವು ಚೆನ್ನಾಗಿ ತಯಾರಿರುತ್ತೇವೆ.—ರೋಮನ್ನರಿಗೆ 12:17-21 ಓದಿ.

13. ಸಭ್ಯತೆಯನ್ನು ತೋರಿಸುವುದು ಹೇಗೆ ವಿರೋಧಕರ ಮನೋಭಾವವನ್ನು ಮೆದುಗೊಳಿಸಬಹುದು ಎಂಬುದಕ್ಕೆ ಒಂದು ಉದಾಹರಣೆ ಕೊಡಿ.

13 ಕಷ್ಟಕರ ಸನ್ನಿವೇಶಗಳಲ್ಲಿ ಸಭ್ಯವರ್ತನೆಯನ್ನು ತೋರಿಸುವುದು ಒಳ್ಳೆಯ ಫಲಿತಾಂಶಗಳನ್ನು ತರುತ್ತದೆ. ಉದಾಹರಣೆಗೆ, ಜಪಾನಿನಲ್ಲಿ ಸಾಕ್ಷಿಯೊಬ್ಬನು ಸಾರುವಾಗ ಒಬ್ಬ ಮನೆಯವನಿಂದ ಮತ್ತು ಅವನ ಅತಿಥಿಯಿಂದ ಪರಿಹಾಸ್ಯಕ್ಕೆ ಗುರಿಯಾದನು. ಸಭ್ಯ ಮನೋಭಾವ ತೋರಿಸುತ್ತಾ ಸಾಕ್ಷಿಯು ಅಲ್ಲಿಂದ ಹೊರಟುಹೋದನು. ಅದೇ ಟೆರಿಟೊರಿಯಲ್ಲಿ ಅವನು ಸಾರುವುದನ್ನು ಮುಂದುವರಿಸಿದಾಗ ಸ್ವಲ್ಪ ದೂರದಲ್ಲಿ ಆ ಅತಿಥಿಯು ತನ್ನನ್ನು ನೋಡುತ್ತಾ ನಿಂತಿರುವುದನ್ನು ಗಮನಿಸಿದನು. ಸಹೋದರನು ಅವನನ್ನು ಸಮೀಪಿಸಿದಾಗ ಆ ಮನುಷ್ಯನು ಹೇಳಿದ್ದು: “ನಡೆದದ್ದರ ಬಗ್ಗೆ ನನಗೆ ವಿಷಾದವಿದೆ. ನಿಮಗೆ ನಿರ್ದಯೆಯ ಮಾತುಗಳನ್ನಾಡಿದರೂ ನೀವು ಸ್ವಲ್ಪವೂ ಸಿಟ್ಟುತೋರಿಸಲಿಲ್ಲ, ಮುಖದಲ್ಲಿ ಮಂದಹಾಸವಿತ್ತು. ನಿಮ್ಮಂಥ ಮನೋಭಾವ ತೋರಿಸಲು ನಾನೇನು ಮಾಡಬೇಕು?” ಈ ವ್ಯಕ್ತಿ ತನ್ನ ಉದ್ಯೋಗವನ್ನು ಕಳಕೊಂಡಿದ್ದನು ಮತ್ತು ಅವನ ತಾಯಿ ಸ್ವಲ್ಪ ಸಮಯದ ಮುಂಚೆ ತೀರಿಕೊಂಡಿದ್ದಳು. ಆದಕಾರಣ ಅವನು ಸಂತೋಷದಿಂದಿರುವ ಎಲ್ಲಾ ನಿರೀಕ್ಷೆಯನ್ನು ಕಳಕೊಂಡಿದ್ದನು. ಆಗ ಸಾಕ್ಷಿಯು ಅವನಿಗೆ ಒಂದು ಬೈಬಲ್‌ ಅಧ್ಯಯನ ಆರಂಭಿಸುವಂತೆ ಪ್ರಸ್ತಾಪಿಸಿದನು. ಅದನ್ನು ಆ ವ್ಯಕ್ತಿ ಸ್ವೀಕರಿಸಿದನು. ಸ್ವಲ್ಪದರಲ್ಲೇ ಅವನು ವಾರಕ್ಕೆ ಎರಡಾವರ್ತಿ ಅಧ್ಯಯನ ಮಾಡತೊಡಗಿದನು.

ಸಭ್ಯವರ್ತನೆಯನ್ನು ವಿಕಸಿಸುವ ಉತ್ತಮ ವಿಧಾನ

14, 15. ಬೈಬಲ್‌ ಕಾಲದ ಯೆಹೋವನ ಸೇವಕರು ತಮ್ಮ ಮಕ್ಕಳನ್ನು ಹೇಗೆ ತರಬೇತುಗೊಳಿಸಿದರು?

14 ಮನೆಯಲ್ಲಿ ತಮ್ಮ ಮಕ್ಕಳು ಸಭ್ಯತೆಯ ಮೂಲತತ್ತ್ವಗಳನ್ನು ಕಲಿತುಕೊಳ್ಳುವಂತೆ ಬೈಬಲ್‌ ಕಾಲದ ದೇವಭಕ್ತ ಹೆತ್ತವರು ಖಚಿತಮಾಡಿಕೊಂಡಿದ್ದರು. ಆದಿಕಾಂಡ 22:7ರಲ್ಲಿ ಅಬ್ರಹಾಮ ಮತ್ತು ಅವನ ಪುತ್ರ ಇಸಾಕ ಪರಸ್ಪರ ಹೇಗೆ ಸಭ್ಯತೆಯಿಂದ ಮಾತಾಡಿಕೊಂಡರು ಎಂಬುದನ್ನು ಗಮನಿಸಿ. ಯೋಸೇಫನಿಗೆ ಸಹ ಅವನ ಹೆತ್ತವರಿಂದ ಉತ್ತಮ ತರಬೇತಿ ದೊರೆತಿತ್ತೆಂಬುದು ವ್ಯಕ್ತ. ಸೆರೆಮನೆಯಲ್ಲಿದ್ದಾಗ ಅವನು ತನ್ನ ಜೊತೆ ಸೆರೆವಾಸಿಗಳೊಂದಿಗೆ ಸಹ ಸಭ್ಯತೆಯಿಂದ ನಡೆದುಕೊಂಡನು. (ಆದಿ. 40:8) ಫರೋಹನಿಗೆ ಅವನು ನುಡಿದ ಮಾತುಗಳು ಉನ್ನತ ಅಧಿಕಾರಿಯೊಂದಿಗೆ ಮಾತನಾಡುವ ಯೋಗ್ಯ ವಿಧಾನವನ್ನು ಅವನು ಕಲಿತಿದ್ದನೆಂದು ತೋರಿಸುತ್ತವೆ.—ಆದಿ. 41:16, 33, 34.

15 ಇಸ್ರಾಯೇಲ್ಯರಿಗೆ ಕೊಡಲ್ಪಟ್ಟಿದ್ದ ದಶಾಜ್ಞೆಗಳಲ್ಲಿ ಈ ಆಜ್ಞೆಯೂ ಸೇರಿತ್ತು: “ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು; ಸನ್ಮಾನಿಸಿದರೆ ನಿನ್ನ ದೇವರಾದ ಯೆಹೋವನು ನಿನಗೆ ಅನುಗ್ರಹಿಸುವ ದೇಶದಲ್ಲಿ ನೀನು ಬಹುಕಾಲ ಇರುವಿ.” (ವಿಮೋ. 20:12) ಮಕ್ಕಳು ತಮ್ಮ ಹೆತ್ತವರನ್ನು ಸನ್ಮಾನಿಸುವ ಒಂದು ವಿಧಾನವು ಮನೆಯಲ್ಲಿ ಸಭ್ಯವರ್ತನೆಯನ್ನು ತೋರಿಸುವ ಮೂಲಕವೇ. ಯೆಪ್ತಾಹನ ಮಗಳು ಒಂದು ಅತಿ ಸಂಕಟಕರ ಸನ್ನಿವೇಶದಲ್ಲಿ ತನ್ನ ತಂದೆಯ ಹರಕೆಗೆ ಅನುಗುಣವಾಗಿ ನಡೆದುದರ ಮೂಲಕ ತಂದೆಗೆ ಬಹುಸನ್ಮಾನವನ್ನು ತೋರಿಸಿದಳು.—ನ್ಯಾಯ. 11:35-40.

16-18. (ಎ) ಮಕ್ಕಳಿಗೆ ಸಭ್ಯವರ್ತನೆಯನ್ನು ಕಲಿಸಲು ಏನು ಮಾಡಸಾಧ್ಯವಿದೆ? (ಬಿ) ಮಕ್ಕಳಿಗೆ ಸಭ್ಯವರ್ತನೆಯನ್ನು ಕಲಿಸುವುದರ ಕೆಲವು ಪ್ರಯೋಜನಗಳು ಯಾವುವು?

16 ನಮ್ಮ ಮಕ್ಕಳಿಗೆ ಸಭ್ಯ ನಡತೆಯುಳ್ಳವರಾಗುವಂತೆ ತರಬೇತಿ ನೀಡುವುದು ಅತಿ ಪ್ರಾಮುಖ್ಯ. ಮಕ್ಕಳು ವಯಸ್ಕರಾದ ಮೇಲೆ ಎಲ್ಲರೊಂದಿಗೆ ಒಳ್ಳೇದಾಗಿ ಹೊಂದಿಕೊಂಡು ಹೋಗಲು ಸಂದರ್ಶಕರನ್ನು ವಂದಿಸುವ, ಟೆಲಿಫೋನ್‌ ಕರೆಯನ್ನು ಉತ್ತರಿಸುವ ಹಾಗೂ ಇತರರೊಂದಿಗೆ ಊಟಮಾಡುವ ಯೋಗ್ಯ ರೀತಿಯನ್ನು ಕಲಿಯುವ ಆವಶ್ಯಕತೆಯಿದೆ. ಯಾರಾದರು ಬರುವಾಗ ಅವರಿಗಾಗಿ ಬಾಗಿಲನ್ನು ಏಕೆ ತೆರೆದು ಹಿಡಿಯಬೇಕು, ವೃದ್ಧರಿಗೂ ಅಸ್ವಸ್ಥರಿಗೂ ಏಕೆ ದಯೆತೋರಿಸಬೇಕು, ಹೆಚ್ಚು ಸಾಮಾನುಗಳನ್ನು ಹೊತ್ತುಕೊಂಡು ಬರುತ್ತಿರುವವರಿಗೆ ಏಕೆ ನೆರವಾಗಬೇಕು ಎಂಬುದನ್ನು ಮಕ್ಕಳು ತಿಳಿಯಲು ಸಹಾಯಮಾಡುವ ಅಗತ್ಯವಿದೆ. “ದಯವಿಟ್ಟು,” “ಧನ್ಯವಾದ,” “ಸಹಾಯ ಬೇಕಾ?,” “ಕ್ಷಮಿಸಿ” ಎಂದು ಪ್ರಾಮಾಣಿಕವಾಗಿ ಹೇಳುವ ಮಹತ್ವವನ್ನೂ ಅವರು ತಿಳುಕೊಳ್ಳುವ ಅಗತ್ಯವಿದೆ.

17 ಮಕ್ಕಳು ಸಭ್ಯ ನಡತೆಯುಳ್ಳವರಾಗುವಂತೆ ತರಬೇತು ನೀಡುವುದು ಕಷ್ಟಕರವಾಗಿರುವ ಅಗತ್ಯವಿಲ್ಲ. ಉತ್ತಮ ವಿಧಾನವು ಒಳ್ಳೆಯ ಮಾದರಿಯನ್ನಿಡುವ ಮೂಲಕವೇ. ಕರ್ಟ್‌ ಎಂಬ ಇಪ್ಪತ್ತೈದು ವರ್ಷದ ಯುವಕನು ತಾನು ಮತ್ತು ತನ್ನ ಮೂವರು ಸಹೋದರರು ಸಭ್ಯತೆಯನ್ನು ಕಲಿತ ವಿಧಾನವನ್ನು ಹೀಗೆ ತಿಳಿಸುತ್ತಾನೆ: “ನನ್ನ ಅಪ್ಪ ಮತ್ತು ಅಮ್ಮ ಒಬ್ಬರಿಗೊಬ್ಬರು ದಯೆಯಿಂದ ಮಾತಾಡುವುದನ್ನು ಕೇಳಿಸಿಕೊಂಡೆವು ಮತ್ತು ಇತರರನ್ನು ತಾಳ್ಮೆ ಹಾಗೂ ಪರಿಗಣನೆಯಿಂದ ಉಪಚರಿಸುವುದನ್ನೂ ನೋಡಿದೆವು. ರಾಜ್ಯ ಸಭಾಗೃಹದಲ್ಲಿ ಅಪ್ಪ ನನ್ನನ್ನು ಕೂಟದ ಮುಂಚೆ ಮತ್ತು ನಂತರ ವೃದ್ಧ ಸಹೋದರ ಸಹೋದರಿಯರೊಂದಿಗೆ ಮಾತಾಡಲು ತನ್ನೊಂದಿಗೆ ಒಯ್ಯುತ್ತಿದ್ದರು. ಅಪ್ಪನ ವಂದನೆಯ ಮಾತುಗಳನ್ನು ನಾನು ಕೇಳಿಸಿಕೊಂಡಾಗ ವೃದ್ಧರ ಕಡೆಗೆ ಅವರಿಗೆ ಎಷ್ಟು ಗೌರವವಿತ್ತೆಂದು ನಾನು ನೋಡಿದೆ.” ಕರ್ಟ್‌ ಮತ್ತೂ ಹೇಳುವುದು: “ಸಮಯಾನಂತರ ಅವರ ಸಭ್ಯವರ್ತನೆಯನ್ನು ಅನುಕರಿಸುವುದು ನನಗೆ ಸಹಜವಾಗಿ ಬಂತು. ಜನರನ್ನು ಸಭ್ಯತೆಯಿಂದ ಉಪಚರಿಸುವುದು ತಾನಾಗಿ ಬರುತ್ತದೆ. ಅದು ನೀವು ವರ್ತಿಸ ಬೇಕಾದ ವಿಧವಲ್ಲ, ನೀವು ವರ್ತಿಸ ಬಯಸುವ ವಿಧವಾಗಿದೆ.”

18 ಹೆತ್ತವರು ತಮ್ಮ ಮಕ್ಕಳಿಗೆ ಸಭ್ಯವರ್ತನೆಯನ್ನು ಕಲಿಸಿದಲ್ಲಿ ಏನು ಸಂಭವಿಸಸಾಧ್ಯ? ಮಕ್ಕಳು ಸ್ನೇಹಿತರನ್ನು ಮಾಡಿಕೊಳ್ಳಲು ಶಕ್ತರಾಗುವರು ಮತ್ತು ಇತರರೊಂದಿಗೆ ಶಾಂತಿಶೀಲರಾಗಿ ವರ್ತಿಸುವರು. ದೊಡ್ಡವರಾದ ಮೇಲೆ ಅವರು ತಮ್ಮ ಮಾಲಿಕರೊಂದಿಗೆ ಮತ್ತು ಸಹೋದ್ಯೋಗಿಗಳೊಂದಿಗೆ ಕೆಲಸಮಾಡಲು ಸುಸನ್ನದ್ಧರಾಗಿರುವರು. ಅದಲ್ಲದೆ ಸಭ್ಯರೂ ಸದ್ವರ್ತನೆಯವರೂ ನೀತಿನಿಷ್ಠರೂ ಆದ ಮಕ್ಕಳು ತಮ್ಮ ಹೆತ್ತವರಿಗೆ ಸಂತೋಷವನ್ನೂ ಸಂತೃಪ್ತಿಯನ್ನೂ ತರುವರು.—ಜ್ಞಾನೋಕ್ತಿ 23:24, 25 ಓದಿ.

ಸಭ್ಯವರ್ತನೆಯು ಲೋಕದ ಜನರಿಂದ ನಮ್ಮನ್ನು ಭಿನ್ನರಾಗಿ ಮಾಡುತ್ತದೆ

19, 20. ನಮ್ಮ ಸೌಜನ್ಯವುಳ್ಳ ದೇವರನ್ನು ಹಾಗೂ ಆತನ ಪುತ್ರನನ್ನು ಅನುಕರಿಸಲು ನಾವು ಏಕೆ ದೃಢನಿಶ್ಚಯದಿಂದಿರಬೇಕು?

19 “ಪ್ರಿಯ ಮಕ್ಕಳಂತೆ ದೇವರನ್ನು ಅನುಕರಿಸುವವರಾಗಿರಿ” ಎಂದು ಪೌಲನು ಬರೆದನು. (ಎಫೆ. 5:1) ಯೆಹೋವ ದೇವರನ್ನು ಹಾಗೂ ಆತನ ಮಗನನ್ನು ಅನುಕರಿಸುವುದರಲ್ಲಿ ಬೈಬಲ್‌ ಮೂಲತತ್ತ್ವಗಳನ್ನು ಅನುಸರಿಸುವುದೂ ಸೇರಿದೆ. ಈ ಲೇಖನದಲ್ಲಿ ನಾವು ಅದನ್ನೇ ಚರ್ಚಿಸಿದೆವು. ಹಾಗೆ ಮಾಡುವ ಮೂಲಕ ಉನ್ನತ ಪದವಿಯಲ್ಲಿರುವ ಯಾರಾದರೊಬ್ಬರ ಮನವೊಲಿಸಲಿಕ್ಕಾಗಿ ಅಥವಾ ಐಹಿಕ ಲಾಭವನ್ನು ಗಳಿಸಲಿಕ್ಕಾಗಿ ಸಭ್ಯತೆಯ ಬರೇ ನಟನೆಯನ್ನು ತೋರಿಸುವುದರಿಂದ ದೂರವಿರುವೆವು.—ಯೂದ 16.

20 ಸೈತಾನನು ತನ್ನ ಕೆಟ್ಟ ಆಳಿಕೆಯ ಈ ಕಡೇ ದಿನಗಳಲ್ಲಿ ಯೆಹೋವನು ಸ್ಥಾಪಿಸಿರುವ ಗೌರವಯುತ ನಡವಳಿಕೆಯ ಮಟ್ಟಗಳನ್ನು ಅಳಿಸಿಹಾಕಲು ಪಟ್ಟುಹಿಡಿದಿದ್ದಾನೆ. ಆದರೆ ಸತ್ಯ ಕ್ರೈಸ್ತರ ಸಭ್ಯವರ್ತನೆಯನ್ನು ಅಳಿಸಿಹಾಕಲು ಪಿಶಾಚನಿಂದ ಖಂಡಿತವಾಗಿಯೂ ಸಾಧ್ಯವಿಲ್ಲ. ನಾವು ಪ್ರತಿಯೊಬ್ಬರು ನಮ್ಮ ಸೌಜನ್ಯವುಳ್ಳ ದೇವರ ಮತ್ತು ಆತನ ಪುತ್ರನ ಆದರ್ಶಮಾದರಿಗಳನ್ನು ಅನುಸರಿಸಲು ದೃಢನಿಶ್ಚಯ ಮಾಡೋಣ. ಆಗ ನಮ್ಮ ಮಾತು ಮತ್ತು ನಡತೆಯು ದುರ್ವರ್ತನೆಗಳನ್ನು ಆಯ್ದುಕೊಂಡಿರುವ ಜನರಿಗಿಂತ ಯಾವಾಗಲೂ ಭಿನ್ನವಾಗಿರುವುದು. ಹೀಗೆ ನಮ್ಮ ಸಭ್ಯವರ್ತನೆಯ ದೇವರಾದ ಯೆಹೋವನ ಹೆಸರಿಗೆ ನಾವು ಸ್ತುತಿಸ್ತೋತ್ರಗಳನ್ನು ತರುವವರಾಗುವೆವು ಮಾತ್ರವಲ್ಲ ಪ್ರಾಮಾಣಿಕ ಜನರನ್ನು ಆತನ ಸತ್ಯಾರಾಧನೆಗೆ ಆಕರ್ಷಿಸುವೆವು.

[ಪಾದಟಿಪ್ಪಣಿ]

^ ಪ್ಯಾರ. 6 ಕೆಲವು ಸಂಸ್ಕೃತಿಗಳಲ್ಲಿ ವಯಸ್ಸಿನಲ್ಲಿ ತಮಗಿಂತ ದೊಡ್ಡವರನ್ನು ಹೆಸರುಹೇಳಿ ಕರೆಯುವುದು ಅಸಭ್ಯ ವರ್ತನೆಯಾಗಿ ಪರಿಗಣಿಸಲ್ಪಡುತ್ತದೆ. ಹಾಗೆ ಕರೆಯುವಂತೆ ದೊಡ್ಡ ವಯಸ್ಸಿನ ಆ ವ್ಯಕ್ತಿ ಹೇಳಿದಲ್ಲಿ ಮಾತ್ರ ಕರೆಯಬಹುದು. ಇಂಥ ಪದ್ಧತಿಗಳನ್ನು ಗೌರವಿಸುವುದು ಕ್ರೈಸ್ತರಿಗೆ ಹಿತಕರ.

ನಿಮಗೆ ಜ್ಞಾಪಕವಿದೆಯೊ?

• ಸಭ್ಯವರ್ತನೆ ತೋರಿಸುವುದರ ಕುರಿತು ನಾವು ಯೆಹೋವನಿಂದ ಮತ್ತು ಆತನ ಪುತ್ರನಿಂದ ಏನನ್ನು ಕಲಿಯುತ್ತೇವೆ?

• ಜನರನ್ನು ಹೃತ್ಪೂರ್ವಕವಾಗಿ ವಂದಿಸುವುದು ಕ್ರೈಸ್ತರಾದ ನಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಮೂಡಿಸುತ್ತದೆ ಏಕೆ?

• ಸಭ್ಯತೆಯುಳ್ಳವರಾಗಿರುವುದು ಫಲಭರಿತ ಶುಶ್ರೂಷೆಗೆ ಹೇಗೆ ನಡೆಸಬಲ್ಲದು?

• ತಮ್ಮ ಮಕ್ಕಳಿಗೆ ಸಭ್ಯವರ್ತನೆಯನ್ನು ಕಲಿಸುವುದರಲ್ಲಿ ಹೆತ್ತವರು ಯಾವ ಪಾತ್ರವನ್ನು ವಹಿಸುತ್ತಾರೆ?

[ಅಧ್ಯಯನ ಪ್ರಶ್ನೆಗಳು]

[ಪುಟ 26ರಲ್ಲಿರುವ ಚೌಕ]

ನಗುಮೊಗದಿಂದ ಸಂಭಾಷಣೆ ಆರಂಭಿಸಿ

ಅಪರಿಚಿತರೊಂದಿಗೆ ಸಂಭಾಷಣೆಯನ್ನು ಆರಂಭಿಸಲು ಅನೇಕರು ಹಿಂಜರಿಯುತ್ತಾರೆ. ಆದರೆ ಯೆಹೋವನ ಸಾಕ್ಷಿಗಳು ಯೆಹೋವನನ್ನು ಮತ್ತು ನೆರೆಯವರನ್ನು ಪ್ರೀತಿಸುತ್ತಾರೆ. ಆದ್ದರಿಂದ ಇತರರೊಂದಿಗೆ ಬೈಬಲ್‌ ಸತ್ಯಗಳನ್ನು ಹಂಚಿಕೊಳ್ಳುವ ಉದ್ದೇಶದಿಂದ ಸಂಭಾಷಿಸುವ ರೀತಿಯನ್ನು ಕಲಿಯಲು ಶ್ರದ್ಧಾಪೂರ್ವಕ ಪ್ರಯತ್ನವನ್ನು ಮಾಡುತ್ತಾರೆ. ಈ ವಿಷಯದಲ್ಲಿ ಪ್ರಗತಿಯನ್ನು ಮಾಡಲು ನಿಮಗೆ ಯಾವುದು ಸಹಾಯಮಾಡಬಲ್ಲದು?

ಒಂದು ಮುಖ್ಯ ಮೂಲತತ್ತ್ವವನ್ನು ಫಿಲಿಪ್ಪಿ 2:4ರಲ್ಲಿ ಕೊಡಲಾಗಿದೆ. ಅಲ್ಲಿ ನಾವು ಓದುವುದು: “ನಿಮ್ಮ ಸ್ವಂತ ವಿಷಯಗಳಲ್ಲಿ ವೈಯಕ್ತಿಕ ಆಸಕ್ತಿಯನ್ನು ವಹಿಸುತ್ತಾ ಅದರ ಮೇಲೆಯೇ ದೃಷ್ಟಿಯನ್ನಿಟ್ಟಿರುವ ಬದಲಿಗೆ ಇತರರ ವಿಷಯಗಳಲ್ಲಿಯೂ ವೈಯಕ್ತಿಕ ಆಸಕ್ತಿಯನ್ನು ತೋರಿಸುವವರಾಗಿರಿ.” ಈ ಮಾತುಗಳ ವಿಷಯದಲ್ಲಿ ಹೀಗೆ ಯೋಚಿಸಿರಿ: ಒಬ್ಬ ವ್ಯಕ್ತಿಯನ್ನು ನೀವು ಈ ಮುಂಚೆ ಎಂದೂ ಭೇಟಿಯಾಗಿರದೇ ಇದ್ದಲ್ಲಿ ಅವನು ನಿಮ್ಮನ್ನು ಅಪರಿಚಿತನಂತೆ ಕಾಣುತ್ತಾನೆ. ಅವನಿಗೆ ಸಂಕೋಚವಾಗದಂತೆ ನೀವೇನು ಮಾಡಬಲ್ಲಿರಿ? ನಸುನಗುತ್ತಾ ಸ್ನೇಹಪರತೆಯಿಂದ ವಂದಿಸುವುದು ಸಹಾಯಕರ. ಆದರೆ ಇನ್ನೂ ಹೆಚ್ಚನ್ನು ಪರಿಗಣಿಸಲಿಕ್ಕಿದೆ.

ನೀವು ವ್ಯಕ್ತಿಯೊಬ್ಬನೊಂದಿಗೆ ಸಂಭಾಷಿಸಲು ಪ್ರಯತ್ನಿಸುವಾಗ ಅವನ ಯೋಚನಾಧಾಟಿಗೆ ಅಡ್ಡಿಮಾಡಿರಬಹುದು. ಅವನು ಯೋಚಿಸುತ್ತಿರುವ ವಿಷಯಕ್ಕೆ ಪರಿಗಣನೆ ತೋರಿಸದೆ ನಿಮ್ಮ ಮನಸ್ಸಿನಲ್ಲಿರುವ ವಿಷಯವನ್ನೇ ಚರ್ಚಿಸಲು ಪ್ರಯತ್ನಿಸುವುದಾದರೆ ಅವನು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲಿಕ್ಕಿಲ್ಲ. ಆದುದರಿಂದ ಆ ವ್ಯಕ್ತಿಯು ಏನನ್ನು ಯೋಚಿಸುತ್ತಿದ್ದಿರಬಹುದೆಂದು ಅರ್ಥಮಾಡಿಕೊಳ್ಳಲು ನೀವು ಶಕ್ತರಾಗುವಲ್ಲಿ, ಅವನೊಂದಿಗೆ ಸಂಭಾಷಣೆಯನ್ನು ಆರಂಭಿಸಲು ಆ ವಿಷಯವನ್ನೇ ಏಕೆ ಉಪಯೋಗಿಸಬಾರದು? ಯೇಸು ಸಹ ಒಬ್ಬ ಸ್ತ್ರೀಯನ್ನು ಸಮಾರ್ಯದ ಬಾವಿಯ ಬಳಿಯಲ್ಲಿ ಭೇಟಿಮಾಡಿದಾಗ ಇದನ್ನೇ ಮಾಡಿದನು. (ಯೋಹಾ. 4:7-26) ಆಕೆಯ ಮನಸ್ಸು ನೀರನ್ನು ಒಯ್ಯುವುದರ ಮೇಲಿತ್ತು. ಈ ವಿಷಯವನ್ನೇ ಮೂಲವಾಗಿರಿಸಿ ಯೇಸು ಆಕೆಯೊಂದಿಗೆ ಸಂಭಾಷಿಸಲು ಆರಂಭಿಸಿದನು, ಮತ್ತು ಸ್ವಲ್ಪದರಲ್ಲೇ ಅದನ್ನು ಒಂದು ಉತ್ಸಾಹಭರಿತ ಆಧ್ಯಾತ್ಮಿಕ ಚರ್ಚೆಯಾಗಿ ಮಾರ್ಪಡಿಸಿದನು.

[ಪುಟ 26ರಲ್ಲಿರುವ ಚಿತ್ರಗಳು]

ಜನರೊಂದಿಗೆ ಸ್ನೇಹಪರತೆಯು ಅವರಿಗೆ ಒಳ್ಳೆಯ ಸಾಕ್ಷಿಯನ್ನು ಕೊಡಲು ದಾರಿ ತೆರೆಯಬಲ್ಲದು

[ಪುಟ 28ರಲ್ಲಿರುವ ಚಿತ್ರ]

ಸಭ್ಯವರ್ತನೆಯು ಯಾವಾಗಲೂ ತಕ್ಕದ್ದಾಗಿದೆ