ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಪ್ರಾರ್ಥನೆಗಳು ನಿಮ್ಮ ಕುರಿತು ಏನನ್ನು ತಿಳಿಯಪಡಿಸುತ್ತವೆ?

ನಿಮ್ಮ ಪ್ರಾರ್ಥನೆಗಳು ನಿಮ್ಮ ಕುರಿತು ಏನನ್ನು ತಿಳಿಯಪಡಿಸುತ್ತವೆ?

ನಿಮ್ಮ ಪ್ರಾರ್ಥನೆಗಳು ನಿಮ್ಮ ಕುರಿತು ಏನನ್ನು ತಿಳಿಯಪಡಿಸುತ್ತವೆ?

“ಪ್ರಾರ್ಥನೆಯನ್ನು ಕೇಳುವವನೇ, ನರರೆಲ್ಲರು ನಿನ್ನ ಬಳಿಗೆ ಬರುವರು.”—ಕೀರ್ತ. 65:2.

1, 2. ಯೆಹೋವನ ಸೇವಕರು ದೃಢಭರವಸೆಯಿಂದ ಆತನಿಗೆ ಪ್ರಾರ್ಥಿಸಬಲ್ಲರು ಏಕೆ?

ಯೆಹೋವನು ತನ್ನ ನಂಬಿಗಸ್ತ ಸೇವಕರ ಬಿನ್ನಹಗಳನ್ನು ಎಂದಿಗೂ ಅಲಕ್ಷ್ಯಮಾಡುವುದಿಲ್ಲ. ಆತನು ನಮಗೆ ಕಿವಿಗೊಡುತ್ತಾನೆ ಎಂಬ ಖಾತ್ರಿ ನಮಗಿರಬಲ್ಲದು. ಲಕ್ಷಾಂತರ ಮಂದಿ ಯೆಹೋವನ ಸಾಕ್ಷಿಗಳು ಒಂದೇ ಸಮಯದಲ್ಲಿ ದೇವರಿಗೆ ಪ್ರಾರ್ಥಿಸುವುದಾದರೂ ಅವರಲ್ಲಿ ಒಬ್ಬರಿಗೆ ಕೂಡ ‘ಲೈನ್‌ ಬಿಝಿ ಸೂಚನೆ’ ಸಿಗುವುದಿಲ್ಲ.

2 ದೇವರು ತನ್ನ ಬೇಡಿಕೆಗಳನ್ನು ಕೇಳಿದನು ಎಂಬ ದೃಢಭರವಸೆಯಿಂದ ಕೀರ್ತನೆಗಾರ ದಾವೀದನು, “ಪ್ರಾರ್ಥನೆಯನ್ನು ಕೇಳುವವನೇ, ನರರೆಲ್ಲರು ನಿನ್ನ ಬಳಿಗೆ ಬರುವರು” ಎಂದು ಹಾಡಿದನು. (ಕೀರ್ತ. 65:2) ದಾವೀದನು ಯೆಹೋವನ ನಿಷ್ಠಾವಂತ ಆರಾಧಕನಾಗಿದ್ದುದರಿಂದ ಅವನ ಪ್ರಾರ್ಥನೆಗಳಿಗೆ ಉತ್ತರ ಸಿಕ್ಕಿತು. ಆದುದರಿಂದ ನಾವು ನಮ್ಮನ್ನೇ ಹೀಗೆ ಕೇಳಿಕೊಳ್ಳುವುದು ಒಳ್ಳೇದು: ‘ನನ್ನ ಯಾಚನೆಗಳು ನಾನು ಯೆಹೋವನಲ್ಲಿ ಭರವಸೆ ಇಟ್ಟಿದ್ದೇನೆ ಮತ್ತು ಶುದ್ಧಾರಾಧನೆಯು ನನಗೆ ಅತಿ ಪ್ರಾಮುಖ್ಯವಾಗಿದೆ ಎಂಬುದನ್ನು ತೋರಿಸುತ್ತವೊ? ನನ್ನ ಪ್ರಾರ್ಥನೆಗಳು ನನ್ನ ಕುರಿತು ಏನನ್ನು ತಿಳಿಯಪಡಿಸುತ್ತವೆ?’

ದೀನತೆಯಿಂದ ಪ್ರಾರ್ಥಿಸಿರಿ

3, 4. (ಎ) ನಾವು ಯಾವ ಮನೋಭಾವದಿಂದ ಪ್ರಾರ್ಥಿಸಬೇಕು? (ಬಿ) ನಾವು ಗೈದ ಗಂಭೀರ ಪಾಪದಿಂದಾಗಿ ‘ಚಿಂತಾಲೋಚನೆಗಳು’ ನಮ್ಮನ್ನು ಕಾಡುತ್ತಿರುವುದಾದರೆ ನಾವೇನು ಮಾಡಬೇಕು?

3 ನಮ್ಮ ಪ್ರಾರ್ಥನೆಗಳಿಗೆ ಉತ್ತರ ಸಿಗಬೇಕಾದರೆ ನಾವು ದೀನತೆಯಿಂದ ಪ್ರಾರ್ಥಿಸಬೇಕು. (ಕೀರ್ತ. 138:6) ದಾವೀದನು ಯೆಹೋವನನ್ನು, “ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಶೋಧಿಸಿ ನನ್ನ [ಚಿಂತಾಲೋಚನೆಗಳನ್ನು] ಗೊತ್ತುಮಾಡು. ನಾನು ಕೇಡಿನ ಮಾರ್ಗದಲ್ಲಿರುತ್ತೇನೋ ಏನೋ ನೋಡಿ [ನಿತ್ಯವಾದ] ಮಾರ್ಗದಲ್ಲಿ ನನ್ನನ್ನು ನಡಿಸು” ಎಂದು ಹೇಳುವ ಮೂಲಕ ತನ್ನನ್ನು ಪರೀಕ್ಷಿಸುವಂತೆ ಕೇಳಿಕೊಂಡನು. ನಾವು ಸಹ ಹಾಗೆಯೇ ಕೇಳಿಕೊಳ್ಳಬೇಕು. (ಕೀರ್ತ. 139:23, 24) ನಾವು ಪ್ರಾರ್ಥಿಸುವುದು ಮಾತ್ರವಲ್ಲ ದೇವರು ನಮ್ಮನ್ನು ಪರೀಕ್ಷಿಸುವಂತೆ ಬಿಟ್ಟುಕೊಡಬೇಕು ಮತ್ತು ಆತನ ವಾಕ್ಯದಲ್ಲಿರುವ ಸಲಹೆಗೆ ಅಧೀನರಾಗಬೇಕು. ನಿತ್ಯಜೀವಕ್ಕೆ ನಡೆಸುವ ಮಾರ್ಗವನ್ನು ಬೆನ್ನಟ್ಟುವಂತೆ ನಮಗೆ ಸಹಾಯಮಾಡುವ ಮೂಲಕ ಯೆಹೋವನು ನಮ್ಮನ್ನು “ನಿತ್ಯವಾದ ಮಾರ್ಗದಲ್ಲಿ” ನಡೆಸಬಲ್ಲನು.

4 ಒಂದುವೇಳೆ ನಾವು ಗೈದ ಒಂದು ಗಂಭೀರ ಪಾಪದ ಕುರಿತ ‘ಚಿಂತಾಲೋಚನೆಗಳು’ ನಮ್ಮನ್ನು ಕಿತ್ತುತಿನ್ನುತ್ತಿರುವುದಾದರೆ ಆಗೇನು? (ಕೀರ್ತನೆ 32:1-5 ಓದಿ.) ದೋಷಿ ಮನಸ್ಸಾಕ್ಷಿಯನ್ನು ನಿಗ್ರಹಿಸಲು ಪ್ರಯತ್ನಿಸುವುದರಿಂದ ನಮ್ಮ ಶಕ್ತಿಗುಂದಬಹುದು. ಅದು ಬೇಸಗೆಯ ಸುಡು ಬಿಸಿಲಿನಲ್ಲಿ ಒಂದು ಮರವು ತೇವಾಂಶವನ್ನು ಕಳೆದುಕೊಳ್ಳುವಂತಿರುವುದು. ದಾವೀದನು ತಾನು ಮಾಡಿದ ಪಾಪದಿಂದಾಗಿ ಸಂತೋಷವನ್ನು ಕಳೆದುಕೊಂಡನು ಮತ್ತು ಇದರಿಂದ ಅವನು ಅಸ್ವಸ್ಥನೂ ಆಗಿದ್ದಿರಬಹುದು. ಆದರೆ ತನ್ನ ಪಾಪವನ್ನು ದೇವರಲ್ಲಿ ನಿವೇದಿಸಿಕೊಂಡಾಗ ಅವನಿಗೆಷ್ಟು ನೆಮ್ಮದಿ ಸಿಕ್ಕಿತು! ತನ್ನ “ದ್ರೋಹವು ಪರಿಹಾರವಾಗಿದೆ” ಮತ್ತು ಯೆಹೋವನು ತನ್ನನ್ನು ಕ್ಷಮಿಸಿದ್ದಾನೆ ಎಂಬ ಮನವರಿಕೆಯಾದಾಗ ದಾವೀದನಿಗೆ ಎಷ್ಟು ಸಂತೋಷವಾಗಿರಬೇಕು ಎಂಬುದನ್ನು ಊಹಿಸಿನೋಡಿ. ನಮ್ಮ ಪಾಪವನ್ನು ದೇವರಿಗೆ ನಿವೇದಿಸಿಕೊಳ್ಳುವುದು ನೆಮ್ಮದಿಯನ್ನು ತರಬಲ್ಲದು ಮತ್ತು ಕ್ರೈಸ್ತ ಹಿರಿಯರು ಕೊಡುವ ನೆರವು ತಪ್ಪಿತಸ್ಥನು ತನ್ನ ಆಧ್ಯಾತ್ಮಿಕ ಸ್ವಸ್ಥತೆಯನ್ನು ಮರಳಿ ಪಡೆಯಲು ಸಹ ಸಹಾಯಮಾಡುವುದು.—ಜ್ಞಾನೋ. 28:13; ಯಾಕೋ. 5:13-16.

ದೇವರಲ್ಲಿ ಯಾಚಿಸಿ ಆತನಿಗೆ ಕೃತಜ್ಞತೆ ಸಲ್ಲಿಸಿ

5. ಯೆಹೋವನಲ್ಲಿ ಯಾಚಿಸುವುದು ಅಂದರೆ ಏನು?

5 ಯಾವುದೋ ಕಾರಣಕ್ಕೆ ಚಿಂತೆಯು ನಮ್ಮನ್ನು ಹಿಡಿತದಲ್ಲಿ ಇಟ್ಟಿರುವುದಾದರೆ ನಾವು ಪೌಲನ ಸಲಹೆಯನ್ನು ಅನ್ವಯಿಸಿಕೊಳ್ಳಬೇಕು. ಅವನು ಹೇಳಿದ್ದು: “ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ; ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ.” (ಫಿಲಿ. 4:6) ‘ಯಾಚಿಸುವುದೆಂದರೆ’ “ದೀನಭಾವದಿಂದ ಮೊರೆಯಿಡುವುದು” ಎಂದಾಗಿದೆ. ಮುಖ್ಯವಾಗಿ ಅಪಾಯ ಅಥವಾ ಹಿಂಸೆಯನ್ನು ಎದುರಿಸುತ್ತಿರುವಾಗ ನಾವು ಯೆಹೋವನ ಸಹಾಯ ಮತ್ತು ಮಾರ್ಗದರ್ಶನೆಗಾಗಿ ಬೇಡಿಕೊಳ್ಳಬೇಕು.

6, 7. ಯಾವ ಕಾರಣಗಳಿಗಾಗಿ ನಮ್ಮ ಪ್ರಾರ್ಥನೆಗಳಲ್ಲಿ ಕೃತಜ್ಞತಾಸ್ತುತಿಯೂ ಒಳಗೂಡಿರಬೇಕು?

6 ಆದರೆ ನಮಗೆ ಏನಾದರೂ ಬೇಕಾಗಿರುವಾಗ ಮಾತ್ರ ನಾವು ಪ್ರಾರ್ಥಿಸುವುದಾದರೆ ಅದು ನಮ್ಮ ಹೇತುಗಳ ಕುರಿತು ಏನನ್ನು ತಿಳಿಯಪಡಿಸುವುದು? ಹಾಗೆ ಮಾಡುವ ಬದಲಿಗೆ ನಾವು ನಮ್ಮ ಬಿನ್ನಹಗಳನ್ನು ‘ಕೃತಜ್ಞತಾಸ್ತುತಿಯೊಂದಿಗೆ’ ದೇವರಿಗೆ ತಿಳಿಯಪಡಿಸಬೇಕು ಎಂದು ಪೌಲನು ಹೇಳಿದನು. ದಾವೀದನು ಹೇಳಿದಂತೆ ನಾವು ಸಹ, “ಯೆಹೋವಾ, ಮಹಿಮಪ್ರತಾಪ ವೈಭವಪರಾಕ್ರಮಪ್ರಭಾವಗಳು ನಿನ್ನವು; ಭೂಮ್ಯಾಕಾಶಗಳಲ್ಲಿರುವದೆಲ್ಲಾ ನಿನ್ನದೇ. ಯೆಹೋವನೇ, ರಾಜ್ಯವು ನಿನ್ನದು; ನೀನು ಮಹೋನ್ನತನಾಗಿ ಸರ್ವವನ್ನೂ ಆಳುವವನಾಗಿರುತ್ತೀ. . . . ನಮ್ಮ ದೇವರೇ, ನಾವು ನಿನಗೆ ಕೃತಜ್ಞತಾಸ್ತುತಿಮಾಡುತ್ತಾ ನಿನ್ನ ಪ್ರಭಾವವುಳ್ಳ ನಾಮವನ್ನು ಕೀರ್ತಿಸುತ್ತೇವೆ” ಎಂದು ಹೇಳಲು ಖಂಡಿತವಾಗಿಯೂ ಸಕಾರಣವಿದೆ.—1 ಪೂರ್ವ. 29:11-13.

7 ಯೇಸು ಆಹಾರಕ್ಕಾಗಿ ಮತ್ತು ಕರ್ತನ ಸಂಧ್ಯಾ ಭೋಜನದಲ್ಲಿ ಉಪಯೋಗಿಸಿದ ರೊಟ್ಟಿ ಹಾಗೂ ದ್ರಾಕ್ಷಾಮದ್ಯಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದನು. (ಮತ್ತಾ. 15:36; ಮಾರ್ಕ 14:22, 23) ನಾವು ಇಂಥ ವಿಷಯಗಳಿಗಾಗಿ ಧನ್ಯವಾದವನ್ನು ಅರ್ಪಿಸುವುದರೊಂದಿಗೆ ಯೆಹೋವನು “ಮಾನವರಿಗಾಗಿ ನಡಿಸಿದ ಅದ್ಭುತಗಳಿಗೋಸ್ಕರವೂ” ಆತನ ‘ನೀತಿವಿಧಿಗಳಿಗೋಸ್ಕರವೂ’ ಮತ್ತು ಈಗ ಬೈಬಲಿನಲ್ಲಿ ಲಭ್ಯವಿರುವ ಆತನ ವಾಕ್ಯ ಅಥವಾ ಸಂದೇಶಕ್ಕಾಗಿಯೂ ‘ಆತನನ್ನು ಕೊಂಡಾಡಬೇಕು’ ಅಥವಾ ಆತನಿಗೆ ಕೃತಜ್ಞತೆ ಸಲ್ಲಿಸಬೇಕು.—ಕೀರ್ತ. 107:15; 119:62, 105.

ಇತರರಿಗಾಗಿ ಪ್ರಾರ್ಥಿಸಿ

8, 9. ನಾವು ಜೊತೆ ಕ್ರೈಸ್ತರಿಗಾಗಿ ಏಕೆ ಪ್ರಾರ್ಥಿಸಬೇಕು?

8 ನಾವು ನಮಗಾಗಿ ಪ್ರಾರ್ಥಿಸುತ್ತೇವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ನಮ್ಮ ಪ್ರಾರ್ಥನೆಗಳಲ್ಲಿ ಇತರರನ್ನು ಸಹ ಒಳಗೂಡಿಸಬೇಕು—ಇದರಲ್ಲಿ ನಮಗೆ ವೈಯಕ್ತಿಕವಾಗಿ ಪರಿಚಯವಿಲ್ಲದ ಕ್ರೈಸ್ತರು ಸಹ ಸೇರಿರಬೇಕು. ಅಪೊಸ್ತಲ ಪೌಲನಿಗೆ ಕೊಲೊಸ್ಸೆಯಲ್ಲಿದ್ದ ಎಲ್ಲ ವಿಶ್ವಾಸಿಗಳ ಪರಿಚಯ ಇದ್ದಿರಲಿಕ್ಕಿಲ್ಲವಾದರೂ ಅವನು ಬರೆದದ್ದು: “ನಾವು ನಿಮಗಾಗಿ ಪ್ರಾರ್ಥನೆ ಮಾಡುವಾಗೆಲ್ಲ ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಏಕೆಂದರೆ ಕ್ರಿಸ್ತ ಯೇಸುವಿನಲ್ಲಿ ನಿಮಗಿರುವ ನಂಬಿಕೆ ಮತ್ತು ಪವಿತ್ರ ಜನರೆಲ್ಲರ ಕಡೆಗೆ ನಿಮಗಿರುವ ಪ್ರೀತಿಯ ಕುರಿತು ನಾವು ಕೇಳಿಸಿಕೊಂಡಿದ್ದೇವೆ.” (ಕೊಲೊ. 1:3, 4) ಪೌಲನು ಥೆಸಲೊನೀಕದಲ್ಲಿದ್ದ ಕ್ರೈಸ್ತರಿಗಾಗಿಯೂ ಪ್ರಾರ್ಥಿಸಿದನು. (2 ಥೆಸ. 1:11, 12) ಈ ರೀತಿಯ ಪ್ರಾರ್ಥನೆಗಳು ನಮ್ಮ ಕುರಿತು ಮತ್ತು ನಂಬಿಕೆಯಲ್ಲಿರುವ ನಮ್ಮ ಸಹೋದರ ಸಹೋದರಿಯರನ್ನು ನಾವು ಹೇಗೆ ವೀಕ್ಷಿಸುತ್ತೇವೆ ಎಂಬುದರ ಕುರಿತು ಹೆಚ್ಚನ್ನು ತಿಳಿಯಪಡಿಸುತ್ತವೆ.

9 ನಾವು ಅಭಿಷಿಕ್ತ ಕ್ರೈಸ್ತರಿಗಾಗಿ ಮತ್ತು ‘ಬೇರೆ ಕುರಿಗಳಾದ’ ಅವರ ಸಂಗಡಿಗರಿಗಾಗಿ ಸಲ್ಲಿಸುವ ಪ್ರಾರ್ಥನೆಗಳು ದೇವರ ಸಂಘಟನೆಗಾಗಿರುವ ನಮ್ಮ ಕಾಳಜಿಯ ಪುರಾವೆಯನ್ನು ನೀಡುತ್ತವೆ. (ಯೋಹಾ. 10:16) ಪೌಲನು ‘ಸುವಾರ್ತೆಯ ಪವಿತ್ರ ರಹಸ್ಯವನ್ನು ಪ್ರಕಟಪಡಿಸುವಂತೆ ವಾಕ್‌ಸಾಮರ್ಥ್ಯವು ತನಗೆ ಕೊಡಲ್ಪಡುವಂತೆ ಪ್ರಾರ್ಥಿಸಿರಿ’ ಎಂದು ಜೊತೆ ಆರಾಧಕರನ್ನು ಕೇಳಿಕೊಂಡನು. (ಎಫೆ. 6:17-20) ನಾವು ವೈಯಕ್ತಿಕವಾಗಿ ಇತರ ಕ್ರೈಸ್ತರಿಗಾಗಿ ಈ ರೀತಿಯಲ್ಲಿ ಪ್ರಾರ್ಥಿಸುತ್ತೇವೊ?

10. ಇತರರಿಗಾಗಿ ಪ್ರಾರ್ಥಿಸುವುದು ನಮ್ಮ ಮೇಲೆ ಯಾವ ಪರಿಣಾಮ ಬೀರಬಲ್ಲದು?

10 ಇತರರಿಗಾಗಿ ಪ್ರಾರ್ಥಿಸುವುದು ಅವರ ಕಡೆಗಿನ ನಮ್ಮ ಮನೋಭಾವವನ್ನು ಬದಲಾಯಿಸಬಹುದು. ನಮಗೆ ಒಬ್ಬರನ್ನು ಕಂಡರೆ ಅಷ್ಟು ಇಷ್ಟವಿಲ್ಲ ಎಂದು ನೆನಸೋಣ. ಆದರೂ ನಾವು ಅವರಿಗಾಗಿ ಪ್ರಾರ್ಥಿಸುವುದಾದರೆ ಆ ವ್ಯಕ್ತಿಯನ್ನು ನಾವು ಪ್ರೀತಿಸದೇ ಇರಲು ಸಾಧ್ಯವೊ? (1 ಯೋಹಾ. 4:20, 21) ಈ ರೀತಿಯ ಪ್ರಾರ್ಥನೆಗಳು ಭಕ್ತಿವೃದ್ಧಿಯನ್ನು ಉಂಟುಮಾಡುತ್ತವೆ ಮತ್ತು ನಮ್ಮ ಸಹೋದರರೊಂದಿಗಿನ ಐಕ್ಯತೆಯನ್ನು ಹೆಚ್ಚಿಸುತ್ತವೆ. ಮಾತ್ರವಲ್ಲದೆ ನಮ್ಮಲ್ಲಿ ಕ್ರಿಸ್ತಸದೃಶ ಪ್ರೀತಿಯಿದೆ ಎಂಬುದು ಸಹ ಇಂಥ ಪ್ರಾರ್ಥನೆಗಳಿಂದ ಗೊತ್ತಾಗುತ್ತದೆ. (ಯೋಹಾ. 13:34, 35) ಪ್ರೀತಿಯೆಂಬ ಈ ಗುಣವು ದೇವರಾತ್ಮದ ಫಲದ ಭಾಗವಾಗಿದೆ. ನಾವು ಪವಿತ್ರಾತ್ಮಕ್ಕಾಗಿ ವೈಯಕ್ತಿಕವಾಗಿ ಪ್ರಾರ್ಥಿಸುತ್ತಾ ಅದರ ಫಲವಾದ ಪ್ರೀತಿ, ಆನಂದ, ಶಾಂತಿ, ದೀರ್ಘ ಸಹನೆ, ದಯೆ, ಒಳ್ಳೇತನ, ನಂಬಿಕೆ, ಸೌಮ್ಯಭಾವ ಮತ್ತು ಸ್ವನಿಯಂತ್ರಣವನ್ನು ತೋರಿಸಲು ನಮಗೆ ಸಹಾಯಮಾಡುವಂತೆ ಯೆಹೋವನಲ್ಲಿ ಕೇಳಿಕೊಳ್ಳುತ್ತೇವೊ? (ಲೂಕ 11:13; ಗಲಾ. 5:22, 23) ನಾವು ಹೀಗೆ ಕೇಳಿಕೊಳ್ಳುವವರಾಗಿದ್ದರೆ ನಮ್ಮ ಮಾತುಗಳು ಮತ್ತು ಕ್ರಿಯೆಗಳು ನಾವು ಪವಿತ್ರಾತ್ಮವನ್ನು ಅನುಸರಿಸಿ ನಡೆಯುವವರೂ ಪವಿತ್ರಾತ್ಮದಿಂದ ಜೀವಿಸುವವರೂ ಆಗಿದ್ದೇವೆ ಎಂಬುದನ್ನು ತೋರಿಸುವವು.—ಗಲಾತ್ಯ 5:16, 25 ಓದಿ.

11. ಇತರರು ನಮಗಾಗಿ ಪ್ರಾರ್ಥಿಸುವಂತೆ ಕೇಳಿಕೊಳ್ಳುವುದು ಯೋಗ್ಯವಾಗಿದೆ ಎಂದು ನೀವು ಏಕೆ ನೆನಸುತ್ತೀರಿ?

11 ನಮ್ಮ ಮಕ್ಕಳು ಶಾಲಾ ಪರೀಕ್ಷೆಗಳ ಸಮಯದಲ್ಲಿ ಚೀಟಿಂಗ್‌ ಮಾಡುವ ಪ್ರಲೋಭನೆಗೆ ಒಳಗಾಗುತ್ತಿದ್ದಾರೆ ಎಂಬುದು ನಮಗೆ ತಿಳಿದುಬರುವಲ್ಲಿ ನಾವು ಅವರಿಗಾಗಿ ಪ್ರಾರ್ಥಿಸಬೇಕು ಮತ್ತು ಅವರು ಪ್ರಾಮಾಣಿಕರಾಗಿ ನಡೆದು ಯಾವುದೇ ತಪ್ಪನ್ನು ಮಾಡದಿರುವಂತೆ ಸಹಾಯಮಾಡಲಿಕ್ಕಾಗಿ ಅವರಿಗೆ ಶಾಸ್ತ್ರಾಧಾರಿತ ಸಲಹೆಯನ್ನು ಸಹ ಕೊಡಬೇಕು. ಪೌಲನು ಕೊರಿಂಥದಲ್ಲಿದ್ದ ಕ್ರೈಸ್ತರಿಗೆ, “ನೀವು ಯಾವುದೇ ತಪ್ಪನ್ನು ಮಾಡದಿರುವಂತೆ ನಾವು ದೇವರಿಗೆ ಪ್ರಾರ್ಥಿಸುತ್ತೇವೆ” ಎಂದು ಹೇಳಿದನು. (2 ಕೊರಿಂ. 13:7) ಈ ರೀತಿಯ ದೀನ ಪ್ರಾರ್ಥನೆಗಳನ್ನು ಯೆಹೋವನು ಒಪ್ಪುತ್ತಾನೆ ಮತ್ತು ಅವು ನಮ್ಮ ಕುರಿತು ಒಳ್ಳೇದನ್ನು ತಿಳಿಯಪಡಿಸುತ್ತವೆ. (ಜ್ಞಾನೋಕ್ತಿ 15:8 ಓದಿ.) ಇತರರು ನಮಗಾಗಿ ಪ್ರಾರ್ಥಿಸುವಂತೆ ನಾವು ಕೇಳಿಕೊಳ್ಳಬಲ್ಲೆವು. ಅಪೊಸ್ತಲ ಪೌಲನು ಸಹ ಇದನ್ನೇ ಮಾಡಿದನು. ಅವನು, “ನಮಗೋಸ್ಕರ ಪ್ರಾರ್ಥಿಸುತ್ತಾ ಇರಿ; ನಾವು ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳಲು ಬಯಸುವುದರಿಂದ ನಮಗೆ ಪ್ರಾಮಾಣಿಕವಾದ ಮನಸ್ಸಾಕ್ಷಿಯಿದೆ ಎಂದು ನಾವು ನಂಬುತ್ತೇವೆ” ಎಂದು ಬರೆದನು.—ಇಬ್ರಿ. 13:18.

ನಮ್ಮ ಪ್ರಾರ್ಥನೆಗಳು ನಮ್ಮ ಕುರಿತು ತಿಳಿಯಪಡಿಸುವ ಇತರ ವಿಷಯಗಳು

12. ನಮ್ಮ ಪ್ರಾರ್ಥನೆಗಳಲ್ಲಿ ಯಾವ ವಿಷಯಗಳು ಗಮನಾರ್ಹ ಅಂಶಗಳಾಗಿರಬೇಕು?

12 ನಾವು ಯೆಹೋವನ ಸಂತೋಷಭರಿತ ಹುರುಪುಳ್ಳ ಸಾಕ್ಷಿಗಳಾಗಿದ್ದೇವೆ ಎಂದು ನಮ್ಮ ಪ್ರಾರ್ಥನೆಗಳು ತೋರಿಸಿಕೊಡುತ್ತವೊ? ನಮ್ಮ ಯಾಚನೆಗಳು ದೇವರ ಚಿತ್ತಕ್ಕೆ ಅನುಗುಣವಾಗಿ ನಡೆಯುವುದರ ಮೇಲೆ, ರಾಜ್ಯ ಸಂದೇಶವನ್ನು ಸಾರುವುದರ ಮೇಲೆ, ಯೆಹೋವನ ಪರಮಾಧಿಕಾರದ ನಿರ್ದೋಷೀಕರಣದ ಮೇಲೆ ಮತ್ತು ಆತನ ನಾಮದ ಪವಿತ್ರೀಕರಣದ ಮೇಲೆ ಮುಖ್ಯವಾಗಿ ಕೇಂದ್ರೀಕರಿಸಿವೆಯೊ? ಯೇಸು ಕೊಟ್ಟ ಮಾದರಿ ಪ್ರಾರ್ಥನೆಯಲ್ಲಿ ಸೂಚಿಸಲ್ಪಟ್ಟಂತೆ ಈ ವಿಷಯಗಳು ನಮ್ಮ ಪ್ರಾರ್ಥನೆಗಳ ಗಮನಾರ್ಹ ಅಂಶಗಳಾಗಿರಬೇಕು. ಆ ಪ್ರಾರ್ಥನೆಯು ಈ ಮಾತುಗಳೊಂದಿಗೆ ಆರಂಭಿಸುತ್ತದೆ: “ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ.”—ಮತ್ತಾ. 6:9, 10.

13, 14. ನಮ್ಮ ಪ್ರಾರ್ಥನೆಗಳು ನಮ್ಮ ಕುರಿತು ಏನನ್ನು ತಿಳಿಯಪಡಿಸುತ್ತವೆ?

13 ದೇವರಿಗೆ ನಾವು ಸಲ್ಲಿಸುವ ಪ್ರಾರ್ಥನೆಗಳು ನಮ್ಮ ಹೇತುಗಳು, ಅಭಿರುಚಿಗಳು ಮತ್ತು ಅಪೇಕ್ಷೆಗಳನ್ನು ತಿಳಿಯಪಡಿಸುತ್ತವೆ. ನಾವು ಅಂತರಂಗದಲ್ಲಿ ಏನಾಗಿದ್ದೇವೆ ಎಂಬುದು ಯೆಹೋವನಿಗೆ ತಿಳಿದಿದೆ. ಜ್ಞಾನೋಕ್ತಿ 17:3ರಲ್ಲಿ “ಬೆಳ್ಳಿಬಂಗಾರಗಳನ್ನು ಪುಟಕುಲಿಮೆಗಳು ಶೋಧಿಸುವವು; ಹೃದಯಗಳನ್ನು ಶೋಧಿಸುವವನು ಯೆಹೋವನೇ” ಎಂದು ತಿಳಿಸಲಾಗಿದೆ. ದೇವರು ನಮ್ಮ ಹೃದಯದಲ್ಲಿ ಏನಿದೆಯೆಂದು ನೋಡುತ್ತಾನೆ. (1 ಸಮು. 16:7) ನಮಗೆ ನಮ್ಮ ಕೂಟಗಳು, ಶುಶ್ರೂಷೆ ಮತ್ತು ಆಧ್ಯಾತ್ಮಿಕ ಸಹೋದರ ಸಹೋದರಿಯರ ಬಗ್ಗೆ ಯಾವ ಅನಿಸಿಕೆಯಿದೆ ಎಂಬುದು ಆತನಿಗೆ ತಿಳಿದಿದೆ. ನಾವು ಕ್ರಿಸ್ತನ “ಸಹೋದರರ” ಕುರಿತು ಏನು ನೆನಸುತ್ತೇವೆ ಎಂಬುದನ್ನೂ ಯೆಹೋವನು ಬಲ್ಲವನಾಗಿದ್ದಾನೆ. (ಮತ್ತಾ. 25:40) ನಾವು ಯಾವುದಕ್ಕಾಗಿ ಪ್ರಾರ್ಥಿಸುತ್ತೇವೋ ಅದನ್ನು ನಿಜವಾಗಿಯೂ ಅಪೇಕ್ಷಿಸುತ್ತೇವೋ ಅಥವಾ ಬರಿಯ ಮಾತುಗಳನ್ನೇ ಪುನರುಚ್ಚರಿಸುತ್ತಿದ್ದೇವೋ ಎಂಬುದೂ ಆತನಿಗೆ ತಿಳಿದಿದೆ. ಯೇಸು ಹೇಳಿದ್ದು: “ನೀನು ಪ್ರಾರ್ಥನೆಮಾಡುವಾಗ ಅನ್ಯಜನರು ಮಾಡುವಂತೆ ಹೇಳಿದ್ದನ್ನೇ ಪುನಃ ಪುನಃ ಹೇಳಬೇಡ; ಏಕೆಂದರೆ ತಾವು ತುಂಬ ಮಾತುಗಳನ್ನು ಉಪಯೋಗಿಸುವುದಾದರೆ ತಮ್ಮ ಪ್ರಾರ್ಥನೆಗಳು ಕೇಳಲ್ಪಡುತ್ತವೆ ಎಂದು ಅವರು [ತಪ್ಪಾಗಿ] ನೆನಸುತ್ತಾರೆ.”—ಮತ್ತಾ. 6:7.

14 ಪ್ರಾರ್ಥನೆಯಲ್ಲಿ ನಾವು ಉಪಯೋಗಿಸುವಂಥ ಅಭಿವ್ಯಕ್ತಿಗಳು ನಾವು ದೇವರ ಮೇಲೆ ಎಷ್ಟು ಅವಲಂಬಿಸಿದ್ದೇವೆ ಎಂಬುದನ್ನು ಸಹ ತಿಳಿಯಪಡಿಸುತ್ತವೆ. ದಾವೀದನು ಹೇಳಿದ್ದು: “ನೀನು [ಯೆಹೋವನು] ನನಗೆ ಶರಣನೂ ಶತ್ರುಗಳಿಂದ ತಪ್ಪಿಸುವ ಭದ್ರವಾದ ಬುರುಜೂ ಆಗಿದ್ದೀ. ನನಗೆ ನಿರಂತರವೂ ನಿನ್ನ ಗುಡಾರದಲ್ಲಿ ಬಿಡಾರವಾಗಲಿ; ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವಂತೆ ಅನುಗ್ರಹಿಸು.” (ಕೀರ್ತ. 61:3, 4) ದೇವರು ಸಾಂಕೇತಿಕವಾಗಿ ‘ತನ್ನ ಗುಡಾರವನ್ನು ನಮ್ಮ ಮೇಲೆ ಹರಡುವಾಗ’ ನಾವು ಭದ್ರತೆಯನ್ನು ಮತ್ತು ಆತನ ಸಂರಕ್ಷಣಾತ್ಮಕ ಆರೈಕೆಯನ್ನು ಅನುಭವಿಸುತ್ತೇವೆ. (ಪ್ರಕ. 7:15) ನಾವು ನಂಬಿಕೆಯ ಯಾವುದೇ ಪರೀಕ್ಷೆಯನ್ನು ಎದುರಿಸುವಾಗ ಯೆಹೋವನು ‘ನಮಗೆ ಇದ್ದಾನೆ’ ಎಂಬ ದೃಢಭರವಸೆಯಿಂದ ಪ್ರಾರ್ಥನೆಯಲ್ಲಿ ಆತನನ್ನು ಸಮೀಪಿಸುವುದು ಎಷ್ಟು ಸಾಂತ್ವನದಾಯಕ!—ಕೀರ್ತನೆ 118:5-9 ಓದಿ.

15, 16. ಪ್ರಾರ್ಥನೆಯು ಸೇವಾ ಸುಯೋಗಗಳನ್ನು ಎಟಕಿಸಿಕೊಳ್ಳಲು ನಮಗಿರುವ ಬಯಕೆಯ ಕುರಿತು ಏನನ್ನು ಅರಿತುಕೊಳ್ಳಲು ಸಹಾಯಮಾಡಬಹುದು?

15 ನಮ್ಮ ಹೇತುಗಳ ಕುರಿತು ಪ್ರಾಮಾಣಿಕವಾಗಿ ಪ್ರಾರ್ಥಿಸುವುದು ಅವುಗಳ ಸತ್ಯಾಂಶವನ್ನು ತಿಳಿಯಲು ನಮಗೆ ಸಹಾಯಮಾಡಬಲ್ಲದು. ಉದಾಹರಣೆಗೆ, ದೇವಜನರ ಮಧ್ಯೆ ಮೇಲ್ವಿಚಾರಕ ಸ್ಥಾನದಲ್ಲಿ ಸೇವೆಮಾಡುವ ಕಟ್ಟಾಸಕ್ತಿ ನಮಗಿರಬಹುದು. ಇದು ಸಭೆಯಲ್ಲಿ ಉಪಯುಕ್ತರಾಗಿದ್ದು ರಾಜ್ಯಾಭಿರುಚಿಗಳನ್ನು ಪ್ರವರ್ಧಿಸುವುದರಲ್ಲಿ ನಮ್ಮಿಂದಾದಷ್ಟನ್ನು ಮಾಡಬೇಕೆಂಬ ದೀನ ಬಯಕೆಯಿಂದ ಬಂತೊ? ಅಥವಾ ನಾವು “ಪ್ರಥಮ ಸ್ಥಾನವನ್ನು” ಪಡೆದುಕೊಳ್ಳಲು ಆಶಿಸುತ್ತಿದ್ದೇವೋ ಇಲ್ಲವೆ ಇತರರ ‘ಮೇಲೆ ದಬ್ಬಾಳಿಕೆ ನಡೆಸಲೂ’ ಬಯಸುತ್ತಿದ್ದೇವೊ? ಯೆಹೋವನ ಜನರ ಮಧ್ಯೆ ಹಾಗಿರಬಾರದು. (3 ಯೋಹಾನ 9, 10; ಲೂಕ 22:24-27 ಓದಿ.) ನಮ್ಮಲ್ಲಿ ತಪ್ಪಾದ ಅಪೇಕ್ಷೆಗಳಿರುವಲ್ಲಿ, ಯೆಹೋವನಿಗೆ ನಾವು ಪ್ರಾಮಾಣಿಕತೆಯಿಂದ ಮಾಡುವ ಪ್ರಾರ್ಥನೆಯು ಅವನ್ನು ಬಯಲುಪಡಿಸಿ ಅವು ಆಳವಾಗಿ ಬೇರೂರುವುದಕ್ಕೆ ಮುಂಚೆಯೇ ನಮ್ಮನ್ನು ಬದಲಾಯಿಸಿಕೊಳ್ಳಲು ಸಹಾಯಮಾಡಬಲ್ಲದು.

16 ಕ್ರೈಸ್ತ ಪತ್ನಿಯರು ತಮ್ಮ ಗಂಡಂದಿರು ಶುಶ್ರೂಷಾ ಸೇವಕರಾಗಿ, ತರುವಾಯ ಮೇಲ್ವಿಚಾರಕರಾಗಿ ಅಥವಾ ಹಿರಿಯರಾಗಿ ಸೇವೆಸಲ್ಲಿಸಬೇಕೆಂದು ತುಂಬ ಬಯಸಬಹುದು. ಈ ಸಹೋದರಿಯರು ತಮ್ಮ ವೈಯಕ್ತಿಕ ಪ್ರಾರ್ಥನೆಗಳಲ್ಲಿ ವ್ಯಕ್ತಪಡಿಸುವ ಭಾವನೆಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯುತ್ತಾ ಆದರ್ಶಪ್ರಾಯರಾಗಿ ನಡೆದುಕೊಳ್ಳಲು ಶ್ರಮಿಸಬಹುದು. ಇದು ಪ್ರಾಮುಖ್ಯ, ಏಕೆಂದರೆ ಒಬ್ಬ ಪುರುಷನ ಪರಿವಾರದ ನಡೆನುಡಿಗಳು ಸಭೆ ಅವನನ್ನು ಒಳ್ಳೇದಾಗಿ ವೀಕ್ಷಿಸುತ್ತದೋ ಇಲ್ಲವೋ ಎಂಬುದರ ಮೇಲೆ ಪ್ರಭಾವ ಬೀರುತ್ತವೆ.

ಸಾರ್ವಜನಿಕ ಪ್ರಾರ್ಥನೆಯಲ್ಲಿ ಇತರರನ್ನು ಪ್ರತಿನಿಧಿಸುವುದು

17. ನಾವು ವೈಯಕ್ತಿಕವಾಗಿ ಪ್ರಾರ್ಥಿಸುವಾಗ ಏಕಾಂತದಲ್ಲಿರುವುದು ಏಕೆ ಒಳ್ಳೇದು?

17 ಯೇಸು ತನ್ನ ತಂದೆಯೊಂದಿಗೆ ವೈಯಕ್ತಿಕವಾಗಿ ಮಾತಾಡಲಿಕ್ಕಾಗಿ ಅನೇಕ ಬಾರಿ ಜನರ ಗುಂಪಿನಿಂದ ದೂರಹೋಗಿ ಪ್ರಾರ್ಥಿಸುತ್ತಿದ್ದನು. (ಮತ್ತಾ. 14:13; ಲೂಕ 5:16; 6:12) ನಮಗೆ ಕೂಡ ಇಂಥ ಏಕಾಂತತೆಯ ಆವಶ್ಯಕತೆಯಿದೆ. ಪ್ರಶಾಂತವಾದ ಸನ್ನಿವೇಶಗಳ ಮಧ್ಯೆ ಶಾಂತಮನಸ್ಸಿನ ಪ್ರಾರ್ಥನೆಗಳನ್ನು ಸಲ್ಲಿಸುವಾಗ ನಾವು ಯೆಹೋವನಿಗೆ ಇಷ್ಟವಾಗುವಂಥ ಮತ್ತು ನಮ್ಮ ಆಧ್ಯಾತ್ಮಿಕ ಹಿತಕ್ಷೇಮವನ್ನು ಕಾಪಾಡಿಕೊಳ್ಳಲು ಸಹಾಯಮಾಡುವಂಥ ನಿರ್ಣಯಗಳನ್ನು ಮಾಡಲು ಸಾಧ್ಯವಿರುವುದು. ಆದರೆ ಯೇಸು ಸಾರ್ವಜನಿಕವಾಗಿಯೂ ಪ್ರಾರ್ಥಿಸಿದನು ಮತ್ತು ಇದನ್ನು ಯೋಗ್ಯ ರೀತಿಯಲ್ಲಿ ಮಾಡುವುದು ಹೇಗೆ ಎಂಬುದನ್ನು ಪರಿಗಣಿಸುವುದು ಒಳ್ಳೇದು.

18. ಸಾರ್ವಜನಿಕ ಪ್ರಾರ್ಥನೆಯಲ್ಲಿ ಸಭೆಯನ್ನು ಪ್ರತಿನಿಧಿಸುವಾಗ ಸಹೋದರರು ಮನಸ್ಸಿನಲ್ಲಿಡಬೇಕಾದ ಕೆಲವು ಅಂಶಗಳು ಯಾವುವು?

18 ನಮ್ಮ ಕೂಟಗಳಲ್ಲಿ ನಿಷ್ಠಾವಂತ ಪುರುಷರು ಸಾರ್ವಜನಿಕ ಪ್ರಾರ್ಥನೆಯಲ್ಲಿ ಸಭೆಯನ್ನು ಪ್ರತಿನಿಧಿಸುತ್ತಾರೆ. (1 ತಿಮೊ. 2:8) ಜೊತೆ ವಿಶ್ವಾಸಿಗಳು ಇಂಥ ಪ್ರಾರ್ಥನೆಯ ಅಂತ್ಯದಲ್ಲಿ “ಆಮೆನ್‌” ಎಂದು ಹೇಳಲು ಸಾಧ್ಯವಿರಬೇಕು. ಆಮೆನ್‌ ಎಂಬುದರ ಅರ್ಥ “ಹಾಗೆಯೇ ಆಗಲಿ” ಎಂದಾಗಿದೆ. ಆದರೆ ಹೀಗೆ ಹೇಳಬೇಕಾದರೆ ಪ್ರಾರ್ಥನೆಯಲ್ಲಿ ಹೇಳಲ್ಪಟ್ಟ ವಿಷಯವನ್ನು ಅವರು ಸಮ್ಮತಿಸುವುದು ಅವಶ್ಯ. ಯೇಸು ಕೊಟ್ಟ ಮಾದರಿ ಪ್ರಾರ್ಥನೆಯಲ್ಲಿ ಆಘಾತಕರ ಅಥವಾ ಮನನೋಯಿಸುವ ಯಾವ ವಿಷಯವೂ ಇಲ್ಲ. (ಲೂಕ 11:2-4) ಮಾತ್ರವಲ್ಲದೆ ತನಗೆ ಕಿವಿಗೊಡುತ್ತಿದ್ದವರೆಲ್ಲರ ಪ್ರತಿಯೊಂದು ಅಗತ್ಯ ಅಥವಾ ಸಮಸ್ಯೆಯನ್ನು ಅವನು ಆ ಪ್ರಾರ್ಥನೆಯಲ್ಲಿ ಪಟ್ಟಿಮಾಡಲಿಲ್ಲ. ವೈಯಕ್ತಿಕ ಚಿಂತೆಗಳ ಬಗ್ಗೆ ಖಾಸಗಿ ಪ್ರಾರ್ಥನೆಯಲ್ಲಿ ಮಾತಾಡುವುದು ಒಳ್ಳೇದು, ಸಾರ್ವಜನಿಕ ಪ್ರಾರ್ಥನೆಯಲ್ಲಿ ಅಲ್ಲ. ಪ್ರಾರ್ಥನೆಯಲ್ಲಿ ಗುಂಪನ್ನು ಪ್ರತಿನಿಧಿಸುವಾಗ ಗೋಪ್ಯ ವಿಷಯಗಳನ್ನು ಸೇರಿಸಬಾರದು.

19. ಸಾರ್ವಜನಿಕ ಪ್ರಾರ್ಥನೆಯ ಸಮಯದಲ್ಲಿ ನಾವು ಹೇಗೆ ನಡೆದುಕೊಳ್ಳಬೇಕು?

19 ಸಾರ್ವಜನಿಕ ಪ್ರಾರ್ಥನೆಯಲ್ಲಿ ಬೇರೊಬ್ಬರು ನಮ್ಮನ್ನು ಪ್ರತಿನಿಧಿಸುವಾಗ ನಾವು ಪೂಜ್ಯಭಾವದೊಂದಿಗೆ ಕೂಡಿದ ‘ದೇವಭಯವನ್ನು’ ತೋರಿಸುವುದು ಅವಶ್ಯ. (1 ಪೇತ್ರ 2:17) ಕೆಲವು ವಿಷಯಗಳಿಗೆ ಯೋಗ್ಯವಾದ ಸಮಯ ಮತ್ತು ಸ್ಥಳ ಇರಬಹುದು, ಆದರೆ ಕ್ರೈಸ್ತ ಕೂಟದಲ್ಲಿ ಅವು ಯೋಗ್ಯವಾಗಿರಲಿಕ್ಕಿಲ್ಲ. (ಪ್ರಸಂ. 3:1) ಉದಾಹರಣೆಗೆ, ಸಾರ್ವಜನಿಕ ಪ್ರಾರ್ಥನೆಯ ಸಮಯದಲ್ಲಿ ಒಂದು ಗುಂಪಿನಲ್ಲಿರುವ ಎಲ್ಲರೂ ತೋಳಿನೊಳಗೆ ತೋಳು ಹಾಕಿ ತೆಕ್ಕೆಗಟ್ಟಿಕೊಳ್ಳುವಂತೆ ಅಥವಾ ಪರಸ್ಪರ ಕೈಹಿಡಿದುಕೊಳ್ಳುವಂತೆ ಯಾರಾದರೂ ಕೇಳಿಕೊಳ್ಳುತ್ತಾರೆ ಎಂದಿಟ್ಟುಕೊಳ್ಳೋಣ. ಇದು ಕೆಲವರಲ್ಲಿ ಮತ್ತು ನಮ್ಮ ನಂಬಿಕೆಗಳನ್ನು ಹೊಂದಿಲ್ಲದ ಸಂದರ್ಶಕರಲ್ಲಿ ಮುಜುಗರವನ್ನು ಉಂಟುಮಾಡಬಹುದು ಅಥವಾ ಅವರನ್ನು ಅಪಕರ್ಷಿಸಬಹುದು. ಕೆಲವು ಪತಿಪತ್ನಿಯರು ಗಮನಕ್ಕೆ ಬಾರದ ರೀತಿಯಲ್ಲಿ ಪರಸ್ಪರ ಕೈಗಳನ್ನು ಹಿಡಿದುಕೊಳ್ಳಬಹುದು, ಆದರೆ ಸಾರ್ವಜನಿಕ ಪ್ರಾರ್ಥನೆಯ ಸಮಯದಲ್ಲಿ ಅವರು ಪರಸ್ಪರ ತಬ್ಬಿಕೊಳ್ಳುವುದಾದರೆ ಇದನ್ನು ಅಪ್ಪಿತಪ್ಪಿ ನೋಡಿದವರು ಎಡವಬಹುದು. ಈ ದಂಪತಿಯು ಯೆಹೋವನಿಗೆ ಪೂಜ್ಯಭಾವವನ್ನು ತೋರಿಸುವುದರ ಬದಲಿಗೆ ತಮ್ಮ ಪ್ರಣಯಾತ್ಮಕ ಸಂಬಂಧದ ಕಡೆಗೆ ಗಮನಹರಿಸುತ್ತಿದ್ದಾರೆ ಎಂದು ಅವರು ನೆನಸಬಹುದು. ಆದುದರಿಂದ ಯೆಹೋವನ ಮೇಲಿನ ಆಳವಾದ ಗೌರವದೊಂದಿಗೆ “ಎಲ್ಲವನ್ನು ದೇವರ ಮಹಿಮೆಗಾಗಿ” ಮಾಡೋಣ ಮತ್ತು ಯಾರನ್ನೇ ಅಪಕರ್ಷಿಸುವ, ಎಡವಿಸುವ ಅಥವಾ ಯಾರಿಗೇ ಆಘಾತವನ್ನು ತರುವ ನಡತೆಯಿಂದ ದೂರವಿರೋಣ.—1 ಕೊರಿಂ. 10:31, 32; 2 ಕೊರಿಂ. 6:3.

ಯಾವುದಕ್ಕಾಗಿ ಪ್ರಾರ್ಥಿಸುವುದು?

20. ರೋಮನ್ನರಿಗೆ 8:26, 27ನ್ನು ನೀವು ಹೇಗೆ ವಿವರಿಸುವಿರಿ?

20 ಕೆಲವೊಮ್ಮೆ ನಮ್ಮ ಖಾಸಗಿ ಪ್ರಾರ್ಥನೆಗಳಲ್ಲಿ ಏನನ್ನು ಹೇಳುವುದು ಎಂಬುದು ನಮಗೆ ತಿಳಿಯದೇ ಇರಬಹುದು. ಪೌಲನು ಬರೆದದ್ದು: “ನಾವು ಪ್ರಾರ್ಥಿಸುವ ಅಗತ್ಯವಿರುವಾಗ, ಏನು ಪ್ರಾರ್ಥಿಸಬೇಕು ಎಂಬುದು ನಮಗೆ ತಿಳಿಯದೇ ಇರುವಾಗ, ಮಾತಿನಿಂದ ವ್ಯಕ್ತಪಡಿಸಲು ಸಾಧ್ಯವಿಲ್ಲದ ನರಳಾಟದೊಂದಿಗೆ ಪವಿತ್ರಾತ್ಮವು ತಾನೇ ನಮಗೋಸ್ಕರ ಬೇಡಿಕೊಳ್ಳುತ್ತದೆ. ಹಾಗಿದ್ದರೂ ಹೃದಯಗಳನ್ನು ಪರಿಶೋಧಿಸುವಾತನಿಗೆ [ದೇವರಿಗೆ] ಪವಿತ್ರಾತ್ಮವು ಏನನ್ನು ಬೇಡಿಕೊಳ್ಳುತ್ತಿದೆ ಎಂಬುದು ತಿಳಿದಿದೆ.” (ರೋಮ. 8:26, 27) ಅನೇಕ ಪ್ರಾರ್ಥನೆಗಳು ಶಾಸ್ತ್ರಗ್ರಂಥದಲ್ಲಿ ದಾಖಲಿಸಲ್ಪಡುವಂತೆ ಯೆಹೋವನು ಮಾಡಿದನು. ಆತನು ಈ ಪ್ರೇರಿತ ಬಿನ್ನಹಗಳನ್ನು ನಾವು ಮಾಡಬಯಸುವ ಬೇಡಿಕೆಗಳೋ ಎಂಬಂತೆ ಸ್ವೀಕರಿಸುತ್ತಾನೆ ಮತ್ತು ಈ ಕಾರಣದಿಂದ ಅವುಗಳನ್ನು ಪೂರೈಸುತ್ತಾನೆ. ದೇವರಿಗೆ ನಮ್ಮ ಕುರಿತು ತಿಳಿದಿದೆ ಮತ್ತು ಬೈಬಲ್‌ ಲೇಖಕರ ಮೂಲಕ ತನ್ನಾತ್ಮವು ನುಡಿಯುವಂತೆ ಮಾಡಿದ ವಿಷಯಗಳ ಅರ್ಥವು ತಿಳಿದಿದೆ. ಪವಿತ್ರಾತ್ಮವು ನಮಗಾಗಿ ‘ಬೇಡಿಕೊಳ್ಳುವಾಗ’ ಅಥವಾ ನಮಗಾಗಿ ಮಧ್ಯಸ್ತಿಕೆ ವಹಿಸುವಾಗ ಯೆಹೋವನು ನಮ್ಮ ಯಾಚನೆಗಳಿಗೆ ಉತ್ತರವನ್ನು ಕೊಡುತ್ತಾನೆ. ಆದರೆ ನಾವು ದೇವರ ವಾಕ್ಯದೊಂದಿಗೆ ಹೆಚ್ಚು ಪರಿಚಿತರಾಗುತ್ತಾ ಹೋಗುವಾಗ ನಾವು ಯಾವುದಕ್ಕಾಗಿ ಪ್ರಾರ್ಥಿಸಬೇಕು ಎಂಬುದು ನಮಗೆ ಹೆಚ್ಚು ಸುಲಭದಲ್ಲಿ ತಿಳಿದುಬರಬಹುದು.

21. ಮುಂದಿನ ಲೇಖನದಲ್ಲಿ ನಾವು ಏನನ್ನು ಪರಿಶೀಲಿಸಲಿದ್ದೇವೆ?

21 ನಾವು ಗಮನಿಸಿದಂತೆ, ನಮ್ಮ ಪ್ರಾರ್ಥನೆಗಳು ನಮ್ಮ ಕುರಿತು ಹೆಚ್ಚನ್ನು ತಿಳಿಯಪಡಿಸುತ್ತವೆ. ಉದಾಹರಣೆಗೆ, ನಾವು ಯೆಹೋವನಿಗೆ ಎಷ್ಟು ಸಮೀಪವಾಗಿದ್ದೇವೆ ಮತ್ತು ಆತನ ವಾಕ್ಯವನ್ನು ಎಷ್ಟು ಒಳ್ಳೇದಾಗಿ ತಿಳಿದುಕೊಂಡಿದ್ದೇವೆ ಎಂಬುದನ್ನು ತಿಳಿಯಪಡಿಸಬಹುದು. (ಯಾಕೋ. 4:8) ಮುಂದಿನ ಲೇಖನದಲ್ಲಿ, ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ಕೆಲವು ಪ್ರಾರ್ಥನೆಗಳು ಮತ್ತು ಪ್ರಾರ್ಥನಾಪೂರ್ವಕ ಅಭಿವ್ಯಕ್ತಿಗಳನ್ನು ನಾವು ಪರಿಗಣಿಸುವೆವು. ಶಾಸ್ತ್ರಗ್ರಂಥದ ಇಂಥ ಪರಿಶೀಲನೆಯು ದೇವರಿಗೆ ನಾವು ಮಾಡುವ ಪ್ರಾರ್ಥನೆಗಳ ಮೇಲೆ ಯಾವ ಪ್ರಭಾವವನ್ನು ಬೀರಬಲ್ಲದು?

ನಿಮ್ಮ ಉತ್ತರವೇನು?

• ನಾವು ಯಾವ ಮನೋಭಾವದಿಂದ ಯೆಹೋವನಿಗೆ ಪ್ರಾರ್ಥಿಸಬೇಕು?

• ನಾವು ಜೊತೆ ವಿಶ್ವಾಸಿಗಳಿಗಾಗಿ ಏಕೆ ಪ್ರಾರ್ಥಿಸಬೇಕು?

• ನಮ್ಮ ಪ್ರಾರ್ಥನೆಗಳು ನಮ್ಮ ಕುರಿತು ಮತ್ತು ನಮ್ಮ ಹೇತುಗಳ ಕುರಿತು ಏನನ್ನು ತಿಳಿಯಪಡಿಸಬಲ್ಲವು?

• ಸಾರ್ವಜನಿಕ ಪ್ರಾರ್ಥನೆಯ ಸಮಯದಲ್ಲಿ ನಾವು ಹೇಗೆ ನಡೆದುಕೊಳ್ಳಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 4ರಲ್ಲಿರುವ ಚಿತ್ರ]

ನೀವು ಯೆಹೋವನನ್ನು ಕ್ರಮವಾಗಿ ಸ್ತುತಿಸಿ ಆತನಿಗೆ ಕೃತಜ್ಞತೆ ಸಲ್ಲಿಸುತ್ತೀರೊ?

[ಪುಟ 6ರಲ್ಲಿರುವ ಚಿತ್ರ]

ಪ್ರಾರ್ಥನೆಯ ಸಮಯದಲ್ಲಿ ನಾವು ನಡೆದುಕೊಳ್ಳುವ ರೀತಿ ಯಾವಾಗಲೂ ಯೆಹೋವನನ್ನು ಘನಪಡಿಸುವಂತಿರಬೇಕು