ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲ್‌ ಅಧ್ಯಯನದಿಂದ ಪ್ರಾರ್ಥನೆಗಳ ಗುಣಮಟ್ಟವನ್ನು ಉತ್ತಮಗೊಳಿಸಿ

ಬೈಬಲ್‌ ಅಧ್ಯಯನದಿಂದ ಪ್ರಾರ್ಥನೆಗಳ ಗುಣಮಟ್ಟವನ್ನು ಉತ್ತಮಗೊಳಿಸಿ

ಬೈಬಲ್‌ ಅಧ್ಯಯನದಿಂದ ಪ್ರಾರ್ಥನೆಗಳ ಗುಣಮಟ್ಟವನ್ನು ಉತ್ತಮಗೊಳಿಸಿ

‘ಸ್ವಾಮೀ, ಕೃಪೆಮಾಡು; ನಿನ್ನ ಸೇವಕನಾದ ನನ್ನ ಪ್ರಾರ್ಥನೆಗೆ ಕಿವಿಗೊಡು.’—ನೆಹೆ. 1:11.

1, 2. ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ಕೆಲವು ಪ್ರಾರ್ಥನೆಗಳನ್ನು ಪರಿಗಣಿಸುವುದು ಏಕೆ ಪ್ರಯೋಜನಕರ?

ಪ್ರಾರ್ಥನೆ ಮತ್ತು ಬೈಬಲ್‌ ಅಧ್ಯಯನ ಸತ್ಯಾರಾಧನೆಯ ಪ್ರಾಮುಖ್ಯ ಅಂಶಗಳಾಗಿವೆ. (1 ಥೆಸ. 5:17; 2 ತಿಮೊ. 3:16, 17) ಬೈಬಲ್‌ ಒಂದು ಪ್ರಾರ್ಥನೆಯ ಪುಸ್ತಕವಾಗಿಲ್ಲ ನಿಜ. ಆದರೂ ಕೀರ್ತನೆ ಪುಸ್ತಕದಲ್ಲಿ ಕಂಡುಬರುವ ಹಲವು ಪ್ರಾರ್ಥನೆಗಳು ಸೇರಿದಂತೆ ಇಡೀ ಬೈಬಲಿನಲ್ಲಿ ಅನೇಕಾನೇಕ ಪ್ರಾರ್ಥನೆಗಳು ಅಡಕವಾಗಿವೆ.

2 ಬೈಬಲನ್ನು ಓದಿ ಅಧ್ಯಯನ ಮಾಡುವಾಗ ನೀವು ಎದುರಿಸುವ ಸನ್ನಿವೇಶಗಳಿಗೆ ಸೂಕ್ತವಾಗಿರುವ ಅನೇಕ ಪ್ರಾರ್ಥನೆಗಳನ್ನು ಕಂಡುಕೊಳ್ಳುವುದು ಸಂಭಾವ್ಯ. ವಾಸ್ತವದಲ್ಲಿ ಶಾಸ್ತ್ರಗ್ರಂಥದಲ್ಲಿ ದಾಖಲಿಸಲ್ಪಟ್ಟಿರುವ ಪ್ರಾರ್ಥನಾಯುಕ್ತ ಯೋಚನೆಗಳನ್ನು ನಿಮ್ಮ ಪ್ರಾರ್ಥನೆಗಳಲ್ಲಿ ನೀವು ಸೇರಿಸುವಾಗ ಅವುಗಳ ಗುಣಮಟ್ಟ ಉತ್ತಮಗೊಳ್ಳುತ್ತದೆ. ಸಹಾಯಕ್ಕಾಗಿ ಮೊರೆಯಿಟ್ಟ ಯಾರ ಪ್ರಾರ್ಥನೆಗಳು ಕೇಳಲ್ಪಟ್ಟವೋ ಅವರಿಂದ ಮತ್ತು ಅವರ ಪ್ರಾರ್ಥನೆಗಳಲ್ಲಿ ಅಡಕವಾಗಿದ್ದ ವಿಷಯಗಳಿಂದ ನೀವು ಏನನ್ನು ಕಲಿಯಬಲ್ಲಿರಿ?

ದೇವರ ಮಾರ್ಗದರ್ಶನವನ್ನು ಹುಡುಕಿ ಹಿಂಬಾಲಿಸಿ

3, 4. ಅಬ್ರಹಾಮನ ಸೇವಕನ ಪ್ರಯಾಣದ ಉದ್ದೇಶವೇನಾಗಿತ್ತು, ಮತ್ತು ಯೆಹೋವನು ಅವನಿಗೆ ಕೊಟ್ಟ ಫಲಿತಾಂಶದಿಂದ ಏನನ್ನು ಕಲಿಯಸಾಧ್ಯವಿದೆ?

3 ಬೈಬಲ್‌ ಅಧ್ಯಯನದಲ್ಲಿ ನೀವು ಯಾವಾಗಲೂ ದೇವರ ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸಬೇಕು ಎಂಬುದನ್ನು ಕಲಿಯುತ್ತೀರಿ. ಮೂಲಪಿತನಾದ ಅಬ್ರಹಾಮನು ಇಸಾಕನಿಗೆ ಒಬ್ಬಾಕೆ ದೇವಭಯವುಳ್ಳ ಹೆಂಡತಿಯನ್ನು ಕಂಡುಕೊಂಡು ತರಲು ತನ್ನ ಹಿರೀ ಸೇವಕನನ್ನು—ಪ್ರಾಯಶಃ ಎಲೀಯೆಜರನನ್ನು—ಮೆಸಪಟೇಮ್ಯಕ್ಕೆ ಕಳುಹಿಸಿದಾಗ ಏನು ಸಂಭವಿಸಿತು ಎಂಬುದನ್ನು ಪರಿಗಣಿಸಿ. ಬಾವಿಯಿಂದ ಸ್ತ್ರೀಯರು ನೀರನ್ನು ಸೇದುತ್ತಿದ್ದಾಗ ಆ ಸೇವಕನು ಪ್ರಾರ್ಥಿಸಿದ್ದು: “ಯೆಹೋವನೇ, . . . ನಾನು ಯಾವ ಹುಡುಗಿಗೆ—ನೀನು ದಯವಿಟ್ಟು ನಿನ್ನ ಕೊಡವನ್ನು ಇಳಿಸಿ ನನಗೆ ಕುಡಿಯುವದಕ್ಕೆ ಕೊಡು ಎಂದು ಹೇಳುವಾಗ—ನೀನು ಕುಡಿಯಬಹುದು, ಮತ್ತು ನಿನ್ನ ಒಂಟೆಗಳಿಗೂ ನೀರುಕೊಡುತ್ತೇನೆ ಅನ್ನುವಳೋ, ಅವಳೇ ನಿನ್ನ ದಾಸನಾದ ಇಸಾಕನಿಗೆ ನೀನು ನೇಮಿಸಿರುವ ಕನ್ಯೆಯಾಗಲಿ. ನನ್ನ ದಣಿಯ ಮೇಲೆ ನಿನ್ನ ದಯವದೆ ಎಂದು ಇದರಿಂದ ನನಗೆ ಗೊತ್ತಾಗುವದು.”—ಆದಿ. 24:12-14.

4 ರೆಬೆಕ್ಕಳು ಅಬ್ರಹಾಮನ ಸೇವಕನ ಒಂಟೆಗಳಿಗೆ ನೀರುಕೊಟ್ಟಾಗ ಅವನ ಪ್ರಾರ್ಥನೆಗೆ ಉತ್ತರ ಸಿಕ್ಕಿತು. ಸ್ವಲ್ಪದರಲ್ಲೇ ಅವಳು ಅವನ ಜೊತೆಯಲ್ಲಿ ಕಾನಾನ್‌ ದೇಶಕ್ಕೆ ಹೋದಳು ಮತ್ತು ಇಸಾಕನ ಪ್ರೀತಿಯ ಹೆಂಡತಿಯಾದಳು. ವಾಸ್ತವದಲ್ಲಿ ದೇವರು ಅಬ್ರಹಾಮನ ಸೇವಕನಿಗೆ ಕೊಟ್ಟಂತೆ ನಿಮಗೆ ಒಂದು ವಿಶೇಷ ಸೂಚನೆಯನ್ನು ಕೊಡಬೇಕೆಂದು ಅಪೇಕ್ಷಿಸಲು ಸಾಧ್ಯವಿಲ್ಲ. ಆದರೂ ನೀವು ಪ್ರಾರ್ಥಿಸುವುದಾದರೆ ಮತ್ತು ದೇವರಾತ್ಮದಿಂದ ನಡೆಸಲ್ಪಡಲು ದೃಢನಿಶ್ಚಯವನ್ನು ಮಾಡುವುದಾದರೆ ನಿಮ್ಮ ಜೀವನದಲ್ಲಿ ಆತನು ನಿಮ್ಮನ್ನು ಮಾರ್ಗದರ್ಶಿಸುವನು.—ಗಲಾ. 5:18.

ಪ್ರಾರ್ಥನೆಯು ಚಿಂತೆಯನ್ನು ಕಡಿಮೆಮಾಡಲು ನೆರವಾಗುತ್ತದೆ

5, 6. ಯಾಕೋಬನು ಏಸಾವನನ್ನು ಸಂಧಿಸಲಿದ್ದಾಗ ಮಾಡಿದ ಪ್ರಾರ್ಥನೆಯಲ್ಲಿ ಯಾವುದು ಗಮನಾರ್ಹವಾಗಿದೆ?

5 ಪ್ರಾರ್ಥನೆಯು ಚಿಂತೆಯನ್ನು ತಗ್ಗಿಸಬಲ್ಲದು. ತನ್ನ ಅವಳಿ ಸಹೋದರ ಏಸಾವನಿಂದ ಅಪಾಯ ಉಂಟಾಗಬಹುದೆಂದು ಹೆದರಿದ್ದ ಯಾಕೋಬನು ಪ್ರಾರ್ಥಿಸಿದ್ದು: “ಯೆಹೋವನೇ . . . ನೀನು ನಿನ್ನ ದಾಸನಾದ ನನ್ನ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ನಿನ್ನ ವಾಗ್ದಾನವನ್ನು ನೆರವೇರಿಸಿದ್ದೀಯಲ್ಲಾ. ನಾನು ಅದಕ್ಕೆ ಕೇವಲ ಅಪಾತ್ರನಾಗಿದ್ದೇನೆ. . . . ನನ್ನ ಅಣ್ಣನಾದ ಏಸಾವನು ಬಂದು ನನ್ನನ್ನೂ ನನ್ನ ಮಕ್ಕಳನ್ನೂ ಅವರ ತಾಯಿಯನ್ನೂ ಕೊಲ್ಲುವನೋ ಏನೋ ಎಂದು ನನಗೆ ಭಯವದೆ. ಅವನ ಕೈಗೆ ಸಿಕ್ಕದಂತೆ ನಮ್ಮನ್ನು ಕಾಪಾಡಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. ನಿನಗೆ ಒಳ್ಳೇದನ್ನು ಮಾಡಿ ನಿನ್ನ ಸಂತತಿಯನ್ನು ಸಮುದ್ರದ ಉಸುಬಿನಂತೆ ಅಸಂಖ್ಯವಾಗಿ ಅಭಿವೃದ್ಧಿಮಾಡುವೆನೆಂದು ನೀನು ನನಗೆ ಹೇಳಿದಿಯಲ್ಲವೇ.”—ಆದಿ. 32:9-12.

6 ಯಾಕೋಬನು ಮುಂಜಾಗ್ರತೆಯ ಕ್ರಮಗಳನ್ನು ತೆಗೆದುಕೊಂಡನಾದರೂ ಅವನು ಮತ್ತು ಏಸಾವನು ರಾಜಿಮಾಡಿಕೊಂಡಾಗ ಯಾಕೋಬನ ಪ್ರಾರ್ಥನೆಗೆ ಉತ್ತರ ಸಿಕ್ಕಿತು. (ಆದಿ. 33:1-4) ಆ ಬಿನ್ನಹವನ್ನು ಜಾಗರೂಕತೆಯಿಂದ ಓದಿ. ಆಗ ಯಾಕೋಬನು ಬರೀ ಸಹಾಯಕ್ಕಾಗಿ ಬೇಡಿಕೊಳ್ಳಲಿಲ್ಲ ಎಂಬುದು ನಿಮಗೆ ತಿಳಿದುಬರುವುದು. ಅವನು ವಾಗ್ದತ್ತ ಸಂತತಿಯಲ್ಲಿ ನಂಬಿಕೆಯನ್ನು ಮತ್ತು ದೇವರ ಪ್ರೀತಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದನು. ಯಾವುದೋ ವಿಷಯದಲ್ಲಿ ಯಾಕೋಬನಂತೆ ‘ನಿಮ್ಮೊಳಗೆ ಭಯ’ ಇದೆಯೊ? (2 ಕೊರಿಂ. 7:5) ಇರುವಲ್ಲಿ, ಪ್ರಾರ್ಥನೆಗಳು ಚಿಂತೆಯನ್ನು ಕಡಿಮೆಮಾಡಬಲ್ಲವು ಎಂಬ ಮರುಜ್ಞಾಪನವನ್ನು ಯಾಕೋಬನ ಬಿನ್ನಹವು ನಿಮಗೆ ಕೊಡಬಲ್ಲದು. ಆದರೆ ನಿಮ್ಮ ಪ್ರಾರ್ಥನೆಗಳಲ್ಲಿ ಬಿನ್ನಹಗಳು ಮಾತ್ರವಲ್ಲದೆ ನಂಬಿಕೆಯ ಅಭಿವ್ಯಕ್ತಿಗಳೂ ಸೇರಿರಬೇಕು.

ವಿವೇಕಕ್ಕಾಗಿ ಪ್ರಾರ್ಥಿಸಿ

7. ಮೋಶೆ ಯೆಹೋವನ ಮಾರ್ಗಗಳ ಕುರಿತ ಜ್ಞಾನಕ್ಕಾಗಿ ಏಕೆ ಪ್ರಾರ್ಥಿಸಿದನು?

7 ಯೆಹೋವನನ್ನು ಮೆಚ್ಚಿಸಲು ನಿಮಗಿರುವ ಬಯಕೆಯು ವಿವೇಕಕ್ಕಾಗಿ ಪ್ರಾರ್ಥಿಸುವಂತೆ ನಿಮ್ಮನ್ನು ಪ್ರಚೋದಿಸಬೇಕು. ಮೋಶೆಯು ದೇವರ ಮಾರ್ಗಗಳ ಜ್ಞಾನಕ್ಕಾಗಿ ಪ್ರಾರ್ಥಿಸಿದನು. ಅವನು ಬೇಡಿಕೊಂಡದ್ದು: “ಈ ಜನರನ್ನು [ಈಜಿಪ್ಟಿನಿಂದ] ಆ ಸೀಮೆಗೆ ನಡಿಸಿಕೊಂಡುಹೋಗಬೇಕೆಂದು ನೀನು [ಯೆಹೋವನು] ನನಗೆ ಆಜ್ಞಾಪಿಸಿದಿಯಷ್ಟೆ; . . . ನನಗೆ ನಿನ್ನ ದಯೆ ದೊರಕಿದ್ದಾದರೆ . . . ನಿನ್ನ ಮಾರ್ಗವನ್ನು ನನಗೆ ತೋರಿಸು; ಆಗ ನಿನ್ನ ದಯೆ ನನಗೆ ದೊರೆಯಿತೆಂದು ನನಗೆ ತಿಳಿದಿರುವದು.” (ವಿಮೋ. 33:12, 13) ಇದಕ್ಕೆ ಪ್ರತಿಕ್ರಿಯಿಸುತ್ತಾ ದೇವರು ಮೋಶೆಗೆ ತನ್ನ ಮಾರ್ಗಗಳ ಕುರಿತು ಹೆಚ್ಚಿನ ಜ್ಞಾನವನ್ನು ಕೊಟ್ಟನು—ಯೆಹೋವನ ಜನರ ಮಧ್ಯೆ ಅವನು ನಾಯಕತ್ವ ವಹಿಸಬೇಕಿದ್ದರೆ ಈ ಜ್ಞಾನವು ಅವನಿಗೆ ಅವಶ್ಯವಾಗಿತ್ತು.

8. ಒಂದನೇ ಅರಸುಗಳು 3:7-14ರ ಕುರಿತು ಮನನಮಾಡುವುದರ ಮೂಲಕ ನೀವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಬಲ್ಲಿರಿ?

8 “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಸು” ಎಂದು ದಾವೀದನು ಸಹ ಪ್ರಾರ್ಥಿಸಿದನು. (ಕೀರ್ತ. 25:4) ದಾವೀದನ ಮಗ ಸೊಲೊಮೋನನು ಇಸ್ರಾಯೇಲಿನಲ್ಲಿ ರಾಜತ್ವದ ಕರ್ತವ್ಯಗಳನ್ನು ನಿರ್ವಹಿಸಲು ಬೇಕಾದ ವಿವೇಕವನ್ನು ಕೊಡುವಂತೆ ದೇವರಲ್ಲಿ ಬೇಡಿಕೊಂಡನು. ಸೊಲೊಮೋನನ ಪ್ರಾರ್ಥನೆ ಯೆಹೋವನಿಗೆ ಇಷ್ಟವಾಯಿತು. ಆತನು ಅವನಿಗೆ ಅವನು ಬೇಡಿಕೊಂಡದ್ದನ್ನು ಮಾತ್ರವಲ್ಲದೆ ಐಶ್ವರ್ಯವನ್ನೂ ಘನವನ್ನೂ ಕೊಟ್ಟನು. (1 ಅರಸುಗಳು 3:7-14 ಓದಿ.) ನಿಮ್ಮಿಂದ ನಿರ್ವಹಿಸಲು ಆಗುವುದಿಲ್ಲವೆಂದು ತೋರುವ ಸೇವಾ ಸುಯೋಗಗಳನ್ನು ನೀವು ಪಡೆದುಕೊಳ್ಳುವುದಾದರೆ ವಿವೇಕಕ್ಕಾಗಿ ಪ್ರಾರ್ಥಿಸಿ ಮತ್ತು ದೀನ ಮನೋಭಾವವನ್ನು ತೋರಿಸಿ. ಆಗ ನಿಮ್ಮ ಜವಾಬ್ದಾರಿಗಳನ್ನು ಯೋಗ್ಯವಾಗಿಯೂ ಪ್ರೀತಿಪೂರ್ವಕವಾಗಿಯೂ ನಿರ್ವಹಿಸಲು ಬೇಕಾದ ಜ್ಞಾನವನ್ನು ಪಡೆದುಕೊಳ್ಳುವಂತೆ ಮತ್ತು ವಿವೇಕವನ್ನು ತೋರಿಸುವಂತೆ ದೇವರು ನಿಮಗೆ ಸಹಾಯಮಾಡುವನು.

ಹೃದಯದಾಳದಿಂದ ಪ್ರಾರ್ಥಿಸಿ

9, 10. ದೇವಾಲಯದ ಪ್ರತಿಷ್ಠಾಪನೆಯ ಸಮಯ ಸೊಲೊಮೋನನು ಮಾಡಿದ ಪ್ರಾರ್ಥನೆಯಲ್ಲಿ ಮನಸ್ಸು ಅಥವಾ ಹೃದಯಕ್ಕೆ ಮಾಡಿದ ಉಲ್ಲೇಖಗಳಲ್ಲಿ ನಿಮಗೆ ಯಾವುದು ಗಮನಾರ್ಹವೆಂದು ತೋರುತ್ತದೆ?

9 ದೇವರು ನಮ್ಮ ಪ್ರಾರ್ಥನೆಯನ್ನು ಕೇಳಬೇಕಾದರೆ ಅದು ಹೃದಯದಾಳದಿಂದ ಬರಬೇಕು. ಸೊಲೊಮೋನನು ಮಾಡಿದ ಹೃತ್ಪೂರ್ವಕ ಪ್ರಾರ್ಥನೆಯು 1 ಅರಸುಗಳು 8ನೇ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿದೆ. ಕ್ರಿ.ಪೂ. 1026ರಲ್ಲಿ ಯೆರೂಸಲೇಮಿನಲ್ಲಿ ಯೆಹೋವನ ಆಲಯದ ಪ್ರತಿಷ್ಠಾಪನೆಗೆ ಕೂಡಿಬಂದಿದ್ದ ದೊಡ್ಡ ಜನಸಮೂಹದ ಮುಂದೆ ಅವನು ಪ್ರಾರ್ಥಿಸಿದನು. ಒಡಂಬಡಿಕೆಯ ಮಂಜೂಷವು ಅತಿ ಪವಿತ್ರ ಸ್ಥಳದಲ್ಲಿ ಇಡಲ್ಪಟ್ಟ ಬಳಿಕ ಯೆಹೋವನ ಮೇಘವು ದೇವಾಲಯವನ್ನು ತುಂಬಿಕೊಂಡಾಗ ಸೊಲೊಮೋನನು ದೇವರನ್ನು ಕೊಂಡಾಡಿದನು.

10 ನೀವು ಸೊಲೊಮೋನನ ಪ್ರಾರ್ಥನೆಯನ್ನು ಅಧ್ಯಯನ ಮಾಡಿರಿ ಮತ್ತು ಅದರಲ್ಲಿ ಮನಸ್ಸು ಅಥವಾ ಹೃದಯಕ್ಕೆ ಮಾಡಲ್ಪಟ್ಟಿರುವ ಉಲ್ಲೇಖಗಳನ್ನು ಗಮನಿಸಿ. ಯೆಹೋವನು ಮಾತ್ರ ಮನುಷ್ಯರ ಹೃದಯವನ್ನು ಬಲ್ಲವನಾಗಿದ್ದಾನೆ ಎಂಬುದನ್ನು ಸೊಲೊಮೋನನು ಮಾನ್ಯಮಾಡಿದನು. (1 ಅರ. 8:38, 39) ಒಬ್ಬ ಪಾಪಿಯು ‘ಪೂರ್ಣಮನಸ್ಸಿನಿಂದ ದೇವರ ಕಡೆಗೆ ತಿರುಗಿಕೊಳ್ಳುವುದಾದರೆ’ ಅವನಿಗೆ ಖಂಡಿತವಾಗಿಯೂ ನಿರೀಕ್ಷೆಯಿದೆ ಎಂಬುದನ್ನು ಅದೇ ಪ್ರಾರ್ಥನೆಯು ತೋರಿಸುತ್ತದೆ. ದೇವಜನರು ಒಂದುವೇಳೆ ಶತ್ರುಗಳ ಕೈಯಲ್ಲಿ ಸಿಕ್ಕಿಬೀಳುವುದಾದರೆ, ಅವರ ‘ಹೃದಯವು ಯೆಹೋವನ ಸಂಗಡ ಸಮರ್ಪಿಸಲ್ಪಟ್ಟಿದ್ದಾಗಿರುವಲ್ಲಿ’ (NIBV) ಅವರ ಮೊರೆಗಳು ಕೇಳಲ್ಪಡುವವು. (1 ಅರ. 8:48, 58, 61) ಹಾಗಾದರೆ ನಿಮ್ಮ ಪ್ರಾರ್ಥನೆಗಳು ಸಹ ಹೃದಯದಾಳದಿಂದ ಬರಬೇಕು.

ಕೀರ್ತನೆಗಳು ನಿಮ್ಮ ಪ್ರಾರ್ಥನೆಯ ಗುಣಮಟ್ಟವನ್ನು ಉತ್ತಮಗೊಳಿಸುವ ವಿಧ

11, 12. ಸ್ವಲ್ಪ ಸಮಯದ ವರೆಗೆ ದೇವರ ಆಲಯಕ್ಕೆ ಹೋಗಲು ಸಾಧ್ಯವಾಗದಿದ್ದ ಒಬ್ಬ ಲೇವಿಯನ ಪ್ರಾರ್ಥನೆಯಿಂದ ನೀವು ಏನನ್ನು ಕಲಿತಿರಿ?

11 ಕೀರ್ತನೆಗಳ ಪುಸ್ತಕವನ್ನು ಅಧ್ಯಯನ ಮಾಡುವುದು ನಿಮ್ಮ ಪ್ರಾರ್ಥನೆಗಳ ಗುಣಮಟ್ಟವನ್ನು ಉತ್ತಮಗೊಳಿಸಬಲ್ಲದು ಮತ್ತು ಅವುಗಳಿಗೆ ಉತ್ತರ ಸಿಗುವ ವರೆಗೆ ದೇವರನ್ನು ನಿರೀಕ್ಷಿಸುತ್ತಾ ಕಾಯಲು ಸಹಾಯಮಾಡಬಲ್ಲದು. ತನ್ನ ದೇಶದಿಂದ ಗಡೀಪಾರು ಮಾಡಲ್ಪಟ್ಟಿದ್ದ ಒಬ್ಬ ಲೇವಿಯನ ತಾಳ್ಮೆಯನ್ನು ಪರಿಗಣಿಸಿರಿ. ಸ್ವಲ್ಪ ಸಮಯದ ವರೆಗೆ ಅವನಿಗೆ ಯೆಹೋವನ ಆಲಯಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಆದರೂ ಅವನು ಹಾಡಿದ್ದು: “ನನ್ನ ಮನವೇ, ನೀನು ಕುಗ್ಗಿಹೋಗಿರುವದೇನು! ಹೀಗೆ ವ್ಯಥೆಪಡುವದೇಕೆ? ದೇವರನ್ನು ನಿರೀಕ್ಷಿಸು; ಆತನೇ ನನಗೆ ರಕ್ಷಕನೂ ದೇವರೂ ಆಗಿದ್ದಾನೆ. ನಾನು ಇನ್ನೂ ಆತನನ್ನು ಸ್ತುತಿಸುತ್ತಿರುವೆನು.”—ಕೀರ್ತ. 42:5, 11; 43:5.

12 ಈ ಲೇವಿಯನಿಂದ ನೀವು ಏನನ್ನು ಕಲಿಯಬಲ್ಲಿರಿ? ನೀತಿಯ ನಿಮಿತ್ತ ನೀವು ಸೆರೆಯಲ್ಲಿ ಹಾಕಲ್ಪಟ್ಟಿದ್ದೀರಿ ಎಂದು ನೆನಸಿ. ಸ್ವಲ್ಪ ಸಮಯದ ವರೆಗೆ ಜೊತೆ ವಿಶ್ವಾಸಿಗಳೊಂದಿಗೆ ಆರಾಧನೆಯ ಸ್ಥಳದಲ್ಲಿ ಕೂಡಿಬರಲು ನಿಮ್ಮಿಂದ ಆಗುವುದಿಲ್ಲ. ಆಗ ನೀವೇನು ಮಾಡಬೇಕು? ನಿಮ್ಮ ಪರವಾಗಿ ದೇವರು ಕ್ರಿಯೆಗೈಯುವ ವರೆಗೆ ತಾಳ್ಮೆಯಿಂದ ಆತನಿಗಾಗಿ ನಿರೀಕ್ಷಿಸುತ್ತಾ ಕಾಯಿರಿ. (ಕೀರ್ತ. 37:5) ದೇವರ ಸೇವೆಯಲ್ಲಿ ನೀವು ಈ ಮುಂಚೆ ಅನುಭವಿಸಿದ ಸಂತೋಷದ ಗಳಿಗೆಗಳನ್ನು ಜ್ಞಾಪಿಸಿಕೊಳ್ಳಿರಿ ಮತ್ತು ದೇವಜನರೊಂದಿಗಿನ ಸಕ್ರಿಯ ಸಹವಾಸವನ್ನು ನೀವು ಪುನಃ ಅನುಭವಿಸುವಂತೆ ಮಾಡುವ ವರೆಗೂ ‘ದೇವರನ್ನು ನಿರೀಕ್ಷಿಸುತ್ತಾ’ ಇರುವಾಗ ತಾಳ್ಮೆಯನ್ನು ಕೊಡುವಂತೆ ಪ್ರಾರ್ಥಿಸಿ.

ನಂಬಿಕೆಯಿಂದ ಪ್ರಾರ್ಥಿಸಿ

13. ಯಾಕೋಬ 1:5-8ಕ್ಕನುಸಾರ ನೀವು ನಂಬಿಕೆಯಿಂದ ಏಕೆ ಪ್ರಾರ್ಥಿಸಬೇಕು?

13 ನಿಮ್ಮ ಸನ್ನಿವೇಶಗಳು ಏನೇ ಆಗಿರಲಿ ಯಾವಾಗಲೂ ನಂಬಿಕೆಯಿಂದ ಪ್ರಾರ್ಥಿಸಿ. ನೀವು ಸಮಗ್ರತೆಯ ಪರೀಕ್ಷೆಯನ್ನು ಎದುರಿಸುತ್ತಿರುವಲ್ಲಿ ಶಿಷ್ಯ ಯಾಕೋಬನು ಕೊಟ್ಟ ಸಲಹೆಯನ್ನು ಅನುಸರಿಸಿ. ಯೆಹೋವನಿಗೆ ಪ್ರಾರ್ಥಿಸಿರಿ ಮತ್ತು ನೀವು ಎದುರಿಸುತ್ತಿರುವ ಪರೀಕ್ಷೆಯನ್ನು ನಿಭಾಯಿಸಲು ಬೇಕಾದ ವಿವೇಕವನ್ನು ಆತನು ಕೊಡುವನು ಎಂಬ ವಿಷಯದಲ್ಲಿ ಸಂದೇಹಪಡಬೇಡಿ. (ಯಾಕೋಬ 1:5-8 ಓದಿ.) ನಿಮಗೆ ಕಳವಳವನ್ನು ಉಂಟುಮಾಡಬಹುದಾದ ಯಾವುದೇ ಯೋಚನೆಯನ್ನು ದೇವರು ಬಲ್ಲವನಾಗಿದ್ದಾನೆ ಮತ್ತು ತನ್ನ ಪವಿತ್ರಾತ್ಮವನ್ನು ಕೊಡುವ ಮೂಲಕ ಆತನು ನಿಮ್ಮನ್ನು ಮಾರ್ಗದರ್ಶಿಸಿ ಸಂತೈಸಬಲ್ಲನು. ಆದುದರಿಂದ ನೀವು “ಸ್ವಲ್ಪವೂ ಸಂದೇಹಪಡದೆ” ಪೂರ್ಣ ನಂಬಿಕೆಯಿಂದ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ ಮತ್ತು ಆತನ ಪವಿತ್ರಾತ್ಮದ ಮಾರ್ಗದರ್ಶನವನ್ನೂ ಆತನ ವಾಕ್ಯದ ಸಲಹೆಯನ್ನೂ ಸ್ವೀಕರಿಸಿ.

14, 15. ಹನ್ನಳು ಪ್ರಾರ್ಥಿಸಿದ್ದು ಮಾತ್ರವಲ್ಲ ನಂಬಿಕೆಯಿಂದ ಕ್ರಿಯೆಗೈದಳು ಕೂಡ ಎಂದು ಏಕೆ ಹೇಳಸಾಧ್ಯವಿದೆ?

14 ಎಲ್ಕಾನ ಎಂಬ ಲೇವಿಯನ ಇಬ್ಬರು ಹೆಂಡತಿಯರಲ್ಲಿ ಹನ್ನಳು ಒಬ್ಬಳು. ಅವಳು ಪ್ರಾರ್ಥಿಸಿದ್ದು ಮಾತ್ರವಲ್ಲ ನಂಬಿಕೆಯಿಂದ ಕ್ರಿಯೆಗೈದಳು ಕೂಡ. ಎಲ್ಕಾನನ ಮತ್ತೊಬ್ಬ ಹೆಂಡತಿಯಾಗಿದ್ದ ಪೆನಿನ್ನಳಿಗೆ ತುಂಬ ಮಕ್ಕಳಿದ್ದರು. ಅವಳು ಮಕ್ಕಳಿಲ್ಲದ ಹನ್ನಳನ್ನು ಹಂಗಿಸುತ್ತಿದ್ದಳು. ದೇವದರ್ಶನ ಗುಡಾರಕ್ಕೆ ಬಂದ ಹನ್ನಳು, ತನಗೆ ಒಂದು ಗಂಡುಮಗು ಹುಟ್ಟುವುದಾದರೆ ಆ ಮಗುವನ್ನು ಯೆಹೋವನಿಗೆ ಕೊಡುವೆನೆಂದು ದೇವರಿಗೆ ಮಾತುಕೊಟ್ಟಳು. ಅವಳು ಪ್ರಾರ್ಥಿಸುತ್ತಿದ್ದಾಗ ಅವಳ ತುಟಿಗಳು ಮಾತ್ರ ಅಲ್ಲಾಡುತ್ತಿದ್ದುದರಿಂದ ಮಹಾ ಯಾಜಕ ಏಲಿ ಅವಳು ಮತ್ತಳಾಗಿದ್ದಾಳೆ ಎಂದು ನೆನಸಿದನು. ಅವಳು ಮತ್ತಳಾಗಿಲ್ಲ ಎಂಬುದು ತಿಳಿದುಬಂದಾಗ, “ಇಸ್ರಾಯೇಲ್‌ ದೇವರು ನಿನ್ನ ಪ್ರಾರ್ಥನೆಯನ್ನು ನೆರವೇರಿಸಲಿ” ಎಂದು ಹೇಳಿದನು. ತನಗೆ ನಿರ್ದಿಷ್ಟವಾಗಿ ಯಾವ ಫಲಿತಾಂಶ ಸಿಗಲಿದೆ ಎಂಬುದು ಹನ್ನಳಿಗೆ ತಿಳಿದಿರಲಿಲ್ಲವಾದರೂ ತನ್ನ ಪ್ರಾರ್ಥನೆಗೆ ಉತ್ತರ ಸಿಗುವುದು ಎಂಬ ನಂಬಿಕೆ ಇತ್ತು. ಆದುದರಿಂದ “ಆ ಮೇಲೆ ಆಕೆಯ ಮೋರೆಯಲ್ಲಿ ದುಃಖವು ಕಾಣಲಿಲ್ಲ.” ಅನಂತರ ಅವಳು ಮನಗುಂದಿದವಳಾಗಿ ತೋರಲಿಲ್ಲ.—1 ಸಮು. 1:9-18.

15 ತದನಂತರ ಹನ್ನಳಿಗೆ ಸಮುವೇಲನು ಹುಟ್ಟಿದನು. ಅವನು ಮೊಲೆಬಿಟ್ಟ ನಂತರ ದೇವದರ್ಶನ ಗುಡಾರದಲ್ಲಿ ಪವಿತ್ರ ಸೇವೆಯನ್ನು ಮಾಡುವಂತೆ ಹನ್ನಳು ಅವನನ್ನು ಯೆಹೋವನಿಗೆ ಸಮರ್ಪಿಸಿದಳು. (1 ಸಮು. 1:19-28) ಅವಳು ಆ ಸಂದರ್ಭದಲ್ಲಿ ಮಾಡಿದ ಪ್ರಾರ್ಥನೆಯ ಕುರಿತು ಮನನಮಾಡುವುದು ನಿಮ್ಮ ಪ್ರಾರ್ಥನೆಯ ಗುಣಮಟ್ಟವನ್ನು ಉತ್ತಮಗೊಳಿಸಬಲ್ಲದು. ಹನ್ನಳಂತೆ ಯೆಹೋವನು ನಿಮ್ಮ ಪ್ರಾರ್ಥನೆಗೆ ಉತ್ತರವನ್ನು ಕೊಡುವನು ಎಂಬ ನಂಬಿಕೆಯೊಂದಿಗೆ ಪ್ರಾರ್ಥಿಸಿ. ಆಗ, ಮನಗುಂದಿಸುವಂಥ ಒಂದು ಸಮಸ್ಯೆಯಿಂದಾಗಿ ನಿಮಗಾಗಿರುವ ದುಃಖವನ್ನು ಅದು ನೀಗಿಸಬಲ್ಲದು ಎಂಬುದನ್ನು ತಿಳಿದುಕೊಳ್ಳುವಿರಿ.—1 ಸಮು. 2:1-10.

16, 17. ನೆಹೆಮೀಯನು ಪ್ರಾರ್ಥಿಸಿದ್ದು ಮಾತ್ರವಲ್ಲದೆ ನಂಬಿಕೆಯಿಂದಲೂ ಕ್ರಿಯೆಗೈದದರಿಂದ ಏನಾಯಿತು?

16 ಕ್ರಿಸ್ತ ಪೂರ್ವ ಐದನೇ ಶತಮಾನದ ನೆಹೆಮೀಯನೆಂಬ ಉದಾತ್ತ ವ್ಯಕ್ತಿಯು ಸಹ ಪ್ರಾರ್ಥಿಸಿದ್ದು ಮಾತ್ರವಲ್ಲ ನಂಬಿಕೆಯಿಂದ ಕ್ರಿಯೆಗೈದನು ಕೂಡ. ಅವನು ಹೀಗೆ ಬೇಡಿಕೊಂಡನು: “ಸ್ವಾಮೀ, ಕೃಪೆಮಾಡು; ನಿನ್ನ ಸೇವಕನಾದ ನನ್ನ ಪ್ರಾರ್ಥನೆಗೂ ನಿನ್ನ ನಾಮಸ್ಮರಣೆಯಲ್ಲಿ ಆನಂದಿಸುವ ನಿನ್ನ ಭಕ್ತರ ಪ್ರಾರ್ಥನೆಗೂ ಕಿವಿಗೊಡು. ನಿನ್ನ ಸೇವಕನು ಈಹೊತ್ತು ಆ ಮನುಷ್ಯನ ದಯೆಗೆ ಪಾತ್ರನಾಗಿ ಕೃತಾರ್ಥನಾಗುವಂತೆ ಅನುಗ್ರಹಿಸಬೇಕು.” ಇಲ್ಲಿ ತಿಳಿಸಲ್ಪಟ್ಟಿರುವ ‘ಆ ಮನುಷ್ಯನು’ ಯಾರು? ಅವನು ಪರ್ಷಿಯದ ರಾಜ ಅರ್ತಷಸ್ತನು. ನೆಹೆಮೀಯನು ಅವನ ಪಾನಸೇವಕನಾಗಿದ್ದನು.—ನೆಹೆ. 1:11; 2:1.

17 ಬಾಬೆಲಿನ ಬಂದಿವಾಸದಿಂದ ಬಿಡಿಸಲ್ಪಟ್ಟ ಯೆಹೂದ್ಯರು “ಮಹಾಕಷ್ಟನಿಂದೆಗಳಿಗೆ ಒಳಗಾಗಿದ್ದಾರೆ; ಯೆರೂಸಲೇಮಿನ ಪೌಳಿಗೋಡೆಯು ಕೆಡವಲ್ಪಟ್ಟಿರುತ್ತದೆ” ಎಂಬುದನ್ನು ತಿಳಿದುಕೊಂಡಾಗ ನೆಹೆಮೀಯನು ಹಲವಾರು ದಿನಗಳ ವರೆಗೆ ನಂಬಿಕೆಯಿಂದ ಪ್ರಾರ್ಥಿಸಿದನು. (ನೆಹೆ. 1:3, 4) ನೆಹೆಮೀಯನು ಪೌಳಿಗೋಡೆಯನ್ನು ತಿರಿಗಿ ಕಟ್ಟಲು ಯೆರೂಸಲೇಮಿಗೆ ಹೋಗುವಂತೆ ರಾಜ ಅರ್ತಷಸ್ತನು ಅನುಮತಿಯನ್ನು ಕೊಟ್ಟಾಗ ನೆಹೆಮೀಯನ ಪ್ರಾರ್ಥನೆಗಳಿಗೆ ಅವನು ನಿರೀಕ್ಷಿಸಿದ್ದಕ್ಕಿಂತಲೂ ಉತ್ತಮವಾದ ಉತ್ತರವು ಸಿಕ್ಕಿತು. (ನೆಹೆ. 2:1-8) ಸ್ವಲ್ಪದರಲ್ಲೇ ಪೌಳಿಗೋಡೆಯನ್ನು ಕಟ್ಟಿ ಮುಗಿಸಲಾಯಿತು. ನೆಹೆಮೀಯನ ಪ್ರಾರ್ಥನೆಗಳು ಸತ್ಯಾರಾಧನೆಯ ಮೇಲೆ ಕೇಂದ್ರೀಕರಿಸಿದ್ದವು, ನಂಬಿಕೆಯಿಂದ ಅರ್ಪಿಸಲ್ಪಟ್ಟಿದ್ದವು, ಆದುದರಿಂದಲೇ ಉತ್ತರಿಸಲ್ಪಟ್ಟವು. ಇದು ನಿಮ್ಮ ಪ್ರಾರ್ಥನೆಗಳ ವಿಷಯದಲ್ಲೂ ಸತ್ಯವಾಗಿದೆಯೊ?

ಸ್ತುತಿ ಮತ್ತು ಕೃತಜ್ಞತೆ ಸಲ್ಲಿಸಲು ಮರೆಯದಿರಿ

18, 19. ಯಾವ ಕಾರಣಗಳಿಗಾಗಿ ಯೆಹೋವನ ಸೇವಕರು ಆತನಿಗೆ ಸ್ತುತಿ ಮತ್ತು ಕೃತಜ್ಞತೆಯನ್ನು ಸಲ್ಲಿಸಬೇಕು?

18 ಪ್ರಾರ್ಥನೆಯಲ್ಲಿ ಯೆಹೋವನಿಗೆ ಸ್ತುತಿ ಮತ್ತು ಕೃತಜ್ಞತೆ ಸಲ್ಲಿಸಲು ಮರೆಯದಿರಿ. ಹೀಗೆ ಮಾಡಲು ಎಷ್ಟೋ ಕಾರಣಗಳಿವೆ. ಉದಾಹರಣೆಗೆ, ಯೆಹೋವನ ರಾಜತ್ವವನ್ನು ಸ್ತುತಿಸಿ ಕೊಂಡಾಡಲು ದಾವೀದನು ಉತ್ಸುಕನಾಗಿದ್ದನು. (ಕೀರ್ತನೆ 145:10-13 ಓದಿ.) ಯೆಹೋವನ ರಾಜ್ಯವನ್ನು ಪ್ರಕಟಿಸುವ ನಿಮ್ಮ ಸುಯೋಗವನ್ನು ನೀವು ಗಣ್ಯಮಾಡುತ್ತೀರಿ ಎಂಬುದನ್ನು ನಿಮ್ಮ ಪ್ರಾರ್ಥನೆಗಳು ತೋರಿಸುತ್ತವೊ? ಕೀರ್ತನೆಗಾರರ ಮಾತುಗಳು ನೀವು ಸಹ ಕ್ರೈಸ್ತ ಕೂಟಗಳಿಗಾಗಿ, ಸಮ್ಮೇಳನಗಳಿಗಾಗಿ ಮತ್ತು ಅಧಿವೇಶನಗಳಿಗಾಗಿ ಕೃತಜ್ಞತೆಯನ್ನು ಹೃತ್ಪೂರ್ವಕ ಪ್ರಾರ್ಥನೆಯಲ್ಲಿ ವ್ಯಕ್ತಪಡಿಸುವಂತೆ ನಿಮಗೆ ಸಹಾಯಮಾಡಬಲ್ಲವು.—ಕೀರ್ತ. 27:4; 122:1.

19 ದೇವರೊಂದಿಗೆ ನೀವು ಹೊಂದಿರುವ ಅಮೂಲ್ಯವಾದ ಸಂಬಂಧಕ್ಕಾಗಿರುವ ಕೃತಜ್ಞತೆಯು ಹೃದಯದಾಳದಿಂದ ಪ್ರಾರ್ಥಿಸುವಂತೆ ನಿಮ್ಮನ್ನು ಪ್ರಚೋದಿಸಬಹುದು. ಅದರಲ್ಲಿ ಇಂಥ ವಿಷಯಗಳು ಸೇರಿರಬಹುದು: “ಕರ್ತನೇ, ಜನಾಂಗಗಳಲ್ಲಿ ನಿನ್ನನ್ನು ಸ್ತುತಿಸುವೆನು; ಸರ್ವದೇಶದವರೊಳಗೆ ನಿನ್ನನ್ನು ಕೊಂಡಾಡುವೆನು. ಯಾಕಂದರೆ ನಿನ್ನ ಕೃಪೆಯು ಆಕಾಶವನ್ನೂ ನಿನ್ನ ಸತ್ಯತೆಯು ಮುಗಿಲನ್ನೂ ನಿಲುಕುವಷ್ಟು ದೊಡ್ಡವಾಗಿವೆ. ದೇವರೇ, ಮೇಲಣ ಲೋಕಗಳಲ್ಲಿ ನಿನ್ನ ಪ್ರಭಾವವು ಮೆರೆಯಲಿ; ಭೂಮಂಡಲದ ಮೇಲೆಲ್ಲಾ ನಿನ್ನ ಮಹತ್ವವು ಹಬ್ಬಲಿ.” (ಕೀರ್ತ. 57:9-11) ಎಂಥ ಹೃದಯೋತ್ತೇಜಕ ಮಾತುಗಳಿವು! ಕೀರ್ತನೆಗಳಲ್ಲಿ ಕಂಡುಬರುವ ಇಂಥ ಮನಮುಟ್ಟುವ ಮಾತುಗಳು ನಿಮ್ಮ ಪ್ರಾರ್ಥನೆಗಳ ಮೇಲೆ ಪರಿಣಾಮ ಬೀರಿ ಅವುಗಳ ಗುಣಮಟ್ಟವನ್ನು ಉತ್ತಮಗೊಳಿಸಬಲ್ಲವು ಎಂಬುದನ್ನು ನೀವು ಒಪ್ಪುವುದಿಲ್ಲವೊ?

ಪೂಜ್ಯಭಾವದಿಂದ ದೇವರನ್ನು ಬೇಡಿಕೊಳ್ಳಿ

20. ಮರಿಯಳು ದೇವರಲ್ಲಿಟ್ಟಿದ್ದ ಪೂಜ್ಯಭಾವವನ್ನು ಹೇಗೆ ವ್ಯಕ್ತಪಡಿಸಿದಳು?

20 ದೇವರ ಕಡೆಗೆ ನಿಮಗಿರುವ ಪೂಜ್ಯಭಾವವು ನಿಮ್ಮ ಪ್ರಾರ್ಥನೆಗಳಲ್ಲಿ ತೋರಿಬರಬೇಕು. ಮರಿಯಳು ತಾನು ಮೆಸ್ಸೀಯನ ತಾಯಿಯಾಗಲಿದ್ದೇನೆ ಎಂಬುದನ್ನು ತಿಳಿದುಕೊಂಡ ಸ್ವಲ್ಪದರಲ್ಲೇ ವ್ಯಕ್ತಪಡಿಸಿದ ಪೂಜ್ಯಭಾವದ ಮಾತುಗಳು ದೇವದರ್ಶನ ಗುಡಾರದ ಸೇವೆಗಾಗಿ ಎಳೆಯ ಸಮುವೇಲನನ್ನು ಕೊಡುವಾಗ ಹನ್ನಳು ಹೇಳಿದ ಮಾತುಗಳನ್ನು ಹೋಲುತ್ತವೆ. ಮರಿಯಳಿಗೆ ದೇವರಲ್ಲಿದ್ದ ಪೂಜ್ಯಭಾವವು ಅವಳ ಈ ಮಾತುಗಳಲ್ಲಿ ವ್ಯಕ್ತವಾಗುತ್ತದೆ: “ನನ್ನ ಪ್ರಾಣವು ಯೆಹೋವನನ್ನು ಮಹಿಮೆಪಡಿಸುತ್ತದೆ ಮತ್ತು ನನ್ನ ಹೃದಯವು ನನ್ನ ರಕ್ಷಕನಾದ ದೇವರಲ್ಲಿ ಅತ್ಯಾನಂದಪಡದೆ ಇರಲಾರದು.” (ಲೂಕ 1:46, 47) ತದ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸುವುದರಿಂದ ನಿಮ್ಮ ಪ್ರಾರ್ಥನೆಗಳ ಗುಣಮಟ್ಟವನ್ನು ಉತ್ತಮಗೊಳಿಸಬಲ್ಲಿರೊ? ನಿಶ್ಚಯವಾಗಿಯೂ ದೇವಭಕ್ತೆ ಮರಿಯಳು ಮೆಸ್ಸೀಯ ಯೇಸುವಿನ ತಾಯಿಯಾಗಿ ಆಯ್ಕೆಯಾದದ್ದರಲ್ಲಿ ಆಶ್ಚರ್ಯವೇನಿಲ್ಲ!

21. ಯೇಸುವಿನ ಪ್ರಾರ್ಥನೆಗಳು ಹೇಗೆ ಪೂಜ್ಯಭಾವ ಮತ್ತು ನಂಬಿಕೆಯ ಪುರಾವೆಯನ್ನು ಕೊಟ್ಟವು?

21 ಯೇಸು ಪೂರ್ಣ ನಂಬಿಕೆಯಿಂದಲೂ ಪೂಜ್ಯಭಾವದಿಂದಲೂ ಪ್ರಾರ್ಥಿಸಿದನು. ಉದಾಹರಣೆಗೆ, ಲಾಜರನನ್ನು ಪುನರುತ್ಥಾನಗೊಳಿಸುವುದಕ್ಕೆ ಮುಂಚೆ “ಯೇಸು ಕಣ್ಣುಗಳನ್ನು ಆಕಾಶದ ಕಡೆಗೆತ್ತಿ, ‘ತಂದೆಯೇ, ನೀನು ನನ್ನ ಪ್ರಾರ್ಥನೆಯನ್ನು ಕೇಳಿದ್ದಕ್ಕೆ ನಿನಗೆ ಕೃತಜ್ಞತೆ ಸಲ್ಲಿಸುತ್ತೇನೆ. ನೀನು ಯಾವಾಗಲೂ ನನಗೆ ಕಿವಿಗೊಡುತ್ತೀ ಎಂಬುದು ನನಗೆ ತಿಳಿದಿತ್ತು’ . . . ಎಂದನು.” (ಯೋಹಾ. 11:41, 42) ನಿಮ್ಮ ಪ್ರಾರ್ಥನೆಗಳು ಇಂಥ ಪೂಜ್ಯಭಾವ ಮತ್ತು ನಂಬಿಕೆಯ ಪುರಾವೆಯನ್ನು ಕೊಡುತ್ತವೊ? ಯೇಸು ಕೊಟ್ಟ ಪೂಜ್ಯಭಾವದಿಂದ ಕೂಡಿದ ಮಾದರಿ ಪ್ರಾರ್ಥನೆಯನ್ನು ಅಧ್ಯಯನ ಮಾಡಿ. ಯೆಹೋವನ ನಾಮದ ಪವಿತ್ರೀಕರಣ, ದೇವರ ರಾಜ್ಯದ ಬರೋಣ ಮತ್ತು ಆತನ ಚಿತ್ತದ ನೆರವೇರಿಕೆಗಳೇ ಆ ಪ್ರಾರ್ಥನೆಯ ಪ್ರಾಮುಖ್ಯ ಅಂಶಗಳಾಗಿವೆ ಎಂಬುದನ್ನು ನೀವು ಕಂಡುಕೊಳ್ಳುವಿರಿ. (ಮತ್ತಾ. 6:9, 10) ನಿಮ್ಮ ಸ್ವಂತ ಪ್ರಾರ್ಥನೆಗಳ ಬಗ್ಗೆ ಯೋಚಿಸಿರಿ. ಅವು ದೇವರ ರಾಜ್ಯದಲ್ಲಿ, ಆತನ ಚಿತ್ತವನ್ನು ಮಾಡುವುದರಲ್ಲಿ ಮತ್ತು ಆತನ ಪವಿತ್ರ ನಾಮದ ಪವಿತ್ರೀಕರಣದಲ್ಲಿ ನಿಮಗೆ ತೀವ್ರಾಸಕ್ತಿಯಿದೆ ಎಂಬುದನ್ನು ತೋರಿಸುತ್ತವೊ? ತೋರಿಸಲೇಬೇಕು.

22. ಯೆಹೋವನು ಸುವಾರ್ತೆಯನ್ನು ಪ್ರಕಟಿಸಲು ಬೇಕಾದ ಧೈರ್ಯವನ್ನು ನಿಮಗೆ ಕೊಡುವನು ಎಂಬ ಖಾತ್ರಿ ನಿಮಗೆ ಏಕೆ ಇರಬಲ್ಲದು?

22 ಹಿಂಸೆ ಮತ್ತು ಇತರ ಪರೀಕ್ಷೆಗಳಿಂದಾಗಿ, ಯೆಹೋವನ ಸೇವೆಯನ್ನು ಧೈರ್ಯದಿಂದ ಮಾಡಲು ಸಹಾಯವನ್ನು ಕೊಡುವಂತೆ ನಾವು ಹೆಚ್ಚಾಗಿ ಪ್ರಾರ್ಥಿಸುತ್ತೇವೆ. ಪೇತ್ರ ಮತ್ತು ಯೋಹಾನರು ‘ಯೇಸುವಿನ ಹೆಸರಿನ ಆಧಾರದ ಮೇಲೆ ಬೋಧಿಸಬಾರದು’ ಎಂದು ಹಿರೀಸಭೆಯು ಆಜ್ಞಾಪಿಸಿದಾಗ ಆ ಅಪೊಸ್ತಲರು ಬೋಧಿಸುವುದನ್ನು ನಿಲ್ಲಿಸಲು ನಿರಾಕರಿಸಿದರು. (ಅ. ಕಾ. 4:18-20) ಅವರು ಬಿಡುಗಡೆ ಹೊಂದಿದ ಬಳಿಕ ನಡೆದ ಸಂಗತಿಯನ್ನು ಜೊತೆ ವಿಶ್ವಾಸಿಗಳಿಗೆ ತಿಳಿಸಿದರು. ಆಗ ಅಲ್ಲಿದ್ದವರೆಲ್ಲರೂ ದೇವರ ವಾಕ್ಯವನ್ನು ಧೈರ್ಯದಿಂದ ಮಾತಾಡಲು ಬೇಕಾದ ಸಹಾಯವನ್ನು ಕೊಡುವಂತೆ ದೇವರನ್ನು ಬೇಡಿಕೊಂಡರು. ಅವರ ಪ್ರಾರ್ಥನೆಯು ಉತ್ತರಿಸಲ್ಪಟ್ಟಾಗ ಅವರು ಎಷ್ಟು ಪುಳಕಗೊಂಡಿದ್ದಿರಬೇಕು! ಅವರು “ಪವಿತ್ರಾತ್ಮಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಮಾತಾಡುತ್ತಿದ್ದರು.” (ಅ. ಕಾರ್ಯಗಳು 4:24-31 ಓದಿ.) ಇದರ ಪರಿಣಾಮವಾಗಿ ಸಾವಿರಾರು ಮಂದಿ ಯೆಹೋವನ ಆರಾಧಕರಾದರು. ಪ್ರಾರ್ಥನೆಯು ಸುವಾರ್ತೆಯನ್ನು ಧೈರ್ಯದಿಂದ ಪ್ರಕಟಿಸಲು ನಿಮ್ಮನ್ನು ಸಹ ಬಲಪಡಿಸಬಲ್ಲದು.

ನಿಮ್ಮ ಪ್ರಾರ್ಥನೆಗಳ ಗುಣಮಟ್ಟವನ್ನು ಉತ್ತಮಗೊಳಿಸುತ್ತಾ ಇರಿ

23, 24. (ಎ) ಬೈಬಲ್‌ ಅಧ್ಯಯನವು ನಿಮ್ಮ ಪ್ರಾರ್ಥನೆಗಳ ಗುಣಮಟ್ಟವನ್ನು ಉತ್ತಮಗೊಳಿಸಬಲ್ಲದು ಎಂಬುದಕ್ಕೆ ಇತರ ಉದಾಹರಣೆಗಳನ್ನು ಕೊಡಿ. (ಬಿ) ನಿಮ್ಮ ಪ್ರಾರ್ಥನೆಗಳ ಗುಣಮಟ್ಟವನ್ನು ಉತ್ತಮಗೊಳಿಸಲು ನೀವೇನು ಮಾಡುವಿರಿ?

23 ಬೈಬಲ್‌ ವಾಚನ ಮತ್ತು ಅಧ್ಯಯನವು ನಿಮ್ಮ ಪ್ರಾರ್ಥನೆಗಳ ಗುಣಮಟ್ಟವನ್ನು ಉತ್ತಮಗೊಳಿಸಬಲ್ಲದು ಎಂಬುದನ್ನು ತೋರಿಸಲು ಇನ್ನು ಅನೇಕ ಉದಾಹರಣೆಗಳನ್ನು ಕೊಡಸಾಧ್ಯವಿದೆ. ಉದಾಹರಣೆಗೆ, ಯೋನನಂತೆ “ರಕ್ಷಣೆಯು ಯೆಹೋವನಿಂದಲೇ ಉಂಟಾಗುವದು” ಎಂದು ನೀವು ಪ್ರಾರ್ಥನೆಯಲ್ಲಿ ಒಪ್ಪಿಕೊಳ್ಳಬಲ್ಲಿರಿ. (ಯೋನ 2:1-10) ಒಂದುವೇಳೆ ನೀವು ಗೈದ ಗಂಭೀರ ಪಾಪದಿಂದಾಗಿ ವ್ಯಾಕುಲಕ್ಕೊಳಗಾಗಿ ಹಿರಿಯರ ಸಹಾಯವನ್ನು ಕೇಳಿಕೊಂಡಿರಬಹುದು. ಹಾಗಿರುವಲ್ಲಿ ದಾವೀದನು ತನ್ನ ಪ್ರಾರ್ಥನೆಯಲ್ಲಿ ವ್ಯಕ್ತಪಡಿಸಿದ ಭಾವನೆಗಳನ್ನು ನೀವೂ ನಿಮ್ಮ ಪ್ರಾರ್ಥನೆಯಲ್ಲಿ ವ್ಯಕ್ತಪಡಿಸಿರಿ. ಅದು ನಿಮಗೆ ಪಶ್ಚಾತ್ತಾಪವನ್ನು ತೋರಿಸಲು ಸಹಾಯಮಾಡಬಹುದು. (ಕೀರ್ತ. 51:1-12) ಕೆಲವು ಪ್ರಾರ್ಥನೆಗಳಲ್ಲಿ, ಯೆರೆಮೀಯನು ಮಾಡಿದಂತೆ ನೀವು ಯೆಹೋವನನ್ನು ಸ್ತುತಿಸಸಾಧ್ಯವಿದೆ. (ಯೆರೆ. 32:16-19) ನೀವು ಒಬ್ಬ ವಿವಾಹ ಸಂಗಾತಿಗಾಗಿ ಹುಡುಕುತ್ತಿರುವಲ್ಲಿ ಎಜ್ರ 9ನೇ ಅಧ್ಯಾಯದಲ್ಲಿ ಕಂಡುಬರುವ ಪ್ರಾರ್ಥನೆಯನ್ನು ಅಧ್ಯಯನ ಮಾಡಿರಿ. ಅದರೊಂದಿಗೆ ನಿಮ್ಮ ವೈಯಕ್ತಿಕ ಬಿನ್ನಹವನ್ನು ಸೇರಿಸಿರಿ. ಅದು, ‘ಕರ್ತನಲ್ಲಿರುವವರನ್ನು ಮಾತ್ರ’ ವಿವಾಹವಾಗುವ ಮೂಲಕ ದೇವರಿಗೆ ವಿಧೇಯರಾಗಬೇಕು ಎಂಬ ನಿಮ್ಮ ದೃಢತೀರ್ಮಾನವನ್ನು ಬಲಪಡಿಸಬಲ್ಲದು.—1 ಕೊರಿಂ. 7:39; ಎಜ್ರ 9:6, 10-15.

24 ಬೈಬಲನ್ನು ಓದುತ್ತಾ, ಅಧ್ಯಯನ ಮಾಡುತ್ತಾ, ನಿಮ್ಮ ವೈಯಕ್ತಿಕ ಪ್ರಾರ್ಥನೆಗಳಲ್ಲಿ ಸೇರಿಸಬಹುದಾದ ಅಂಶಗಳಿಗಾಗಿ ಹುಡುಕುತ್ತಾ ಇರಿ. ಆಗ ಕೃತಜ್ಞತೆ ಮತ್ತು ಸ್ತುತಿಯು ಒಳಗೊಂಡ ನಿಮ್ಮ ಯಾಚನೆ ಮತ್ತು ಪ್ರಾರ್ಥನೆಗಳಲ್ಲಿ ನೀವು ಬೈಬಲಿನ ವಿಚಾರಗಳನ್ನೂ ಸೇರಿಸಬಲ್ಲಿರಿ. ಬೈಬಲ್‌ ಅಧ್ಯಯನದ ಮೂಲಕ ನಿಮ್ಮ ಪ್ರಾರ್ಥನೆಗಳ ಗುಣಮಟ್ಟವನ್ನು ಉತ್ತಮಗೊಳಿಸುವಾಗ ನೀವು ಖಂಡಿತ ಯೆಹೋವ ದೇವರಿಗೆ ಹೆಚ್ಚು ಸಮೀಪವಾಗಬಲ್ಲಿರಿ.

ನಿಮ್ಮ ಉತ್ತರವೇನು?

• ನಾವು ಏಕೆ ದೇವರ ಮಾರ್ಗದರ್ಶನವನ್ನು ಹುಡುಕಿ ಹಿಂಬಾಲಿಸಬೇಕು?

• ವಿವೇಕಕ್ಕಾಗಿ ಪ್ರಾರ್ಥಿಸುವಂತೆ ನಮ್ಮನ್ನು ಯಾವುದು ಪ್ರಚೋದಿಸಬೇಕು?

• ಕೀರ್ತನೆಗಳ ಪುಸ್ತಕವು ಹೇಗೆ ನಮ್ಮ ಪ್ರಾರ್ಥನೆಗಳ ಗುಣಮಟ್ಟವನ್ನು ಉತ್ತಮಗೊಳಿಸಬಲ್ಲದು?

• ನಾವು ನಂಬಿಕೆ ಮತ್ತು ಪೂಜ್ಯಭಾವದಿಂದ ಏಕೆ ಪ್ರಾರ್ಥಿಸಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 8ರಲ್ಲಿರುವ ಚಿತ್ರ]

ಅಬ್ರಹಾಮನ ಸೇವಕನು ದೇವರ ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸಿದನು. ನೀವು ಪ್ರಾರ್ಥಿಸುತ್ತೀರೊ?

[ಪುಟ 10ರಲ್ಲಿರುವ ಚಿತ್ರ]

ಕುಟುಂಬ ಆರಾಧನೆಯು ನಿಮ್ಮ ಪ್ರಾರ್ಥನೆಗಳ ಗುಣಮಟ್ಟವನ್ನು ಉತ್ತಮಗೊಳಿಸಬಲ್ಲದು