ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಒಬ್ಬಾಕೆ ಸಹೋದರಿಯು ಕ್ರೈಸ್ತ ಕೂಟಗಳಲ್ಲಿ, ಸಮ್ಮೇಳನಗಳಲ್ಲಿ ಅಥವಾ ಅಧಿವೇಶನಗಳಲ್ಲಿ ಬೈಬಲಾಧಾರಿತ ಭಾಷಣಗಳನ್ನು ಸನ್ನೆ ಭಾಷೆಗೆ ಅನುವಾದಿಸುವಾಗ ತಲೆಗೆ ಮುಸುಕನ್ನು ಹಾಕಿಕೊಳ್ಳುವುದು ಸೂಕ್ತವೊ?

ಸಾಮಾನ್ಯವಾಗಿ ಯಾವ ವಿಷಯಗಳನ್ನು ನೋಡಿಕೊಳ್ಳುವುದು ಒಬ್ಬ ಗಂಡನ ಅಥವಾ ಸಭೆಯಲ್ಲಿನ ಒಬ್ಬ ಸಹೋದರನ ಜವಾಬ್ದಾರಿಯಾಗಿದೆಯೋ ಅದನ್ನು ಒಬ್ಬಾಕೆ ಕ್ರೈಸ್ತ ಸ್ತ್ರೀ ನಿರ್ವಹಿಸುವಾಗ ತಲೆಗೆ ಮುಸುಕನ್ನು ಹಾಕಿಕೊಳ್ಳುವುದು ಅವಶ್ಯ. ಇದು ಅಪೊಸ್ತಲ ಪೌಲನು ಹೇಳಿದ ಮೂಲತತ್ತ್ವಕ್ಕೆ ಹೊಂದಿಕೆಯಲ್ಲಿದೆ. ಏನೆಂದರೆ “ತನ್ನ ತಲೆಯ ಮೇಲೆ ಮುಸುಕನ್ನು ಹಾಕಿಕೊಳ್ಳದೆ ಪ್ರಾರ್ಥನೆಮಾಡುವ ಅಥವಾ ಪ್ರವಾದಿಸುವ ಪ್ರತಿ ಸ್ತ್ರೀಯು ತನ್ನ ತಲೆಯನ್ನು ಅವಮಾನಪಡಿಸುತ್ತಾಳೆ,” ಏಕೆಂದರೆ “ಸ್ತ್ರೀಗೆ ಪುರುಷನು ತಲೆ” ಆಗಿದ್ದಾನೆ. (1 ಕೊರಿಂ. 11:3-10) ಅಂಥ ಸಂದರ್ಭಗಳಲ್ಲಿ ಒಬ್ಬಾಕೆ ಸಹೋದರಿಯು ಸರಳವಾದ ಹಾಗೂ ತಕ್ಕದಾದ ಮುಸುಕನ್ನು ಹಾಕಿಕೊಳ್ಳುವುದು ಕ್ರೈಸ್ತ ಸಭೆಯಲ್ಲಿನ ದೇವಪ್ರಭುತ್ವಾತ್ಮಕ ಏರ್ಪಾಡಿಗೆ ಅವಳು ತೋರಿಸುವ ಅಧೀನತೆಯ ಸೂಚನೆಯಾಗಿದೆ.—1 ತಿಮೊ. 2:11, 12. *

ಆದರೆ ಒಬ್ಬ ಸಹೋದರನು ನೀಡುತ್ತಿರುವ ಭಾಷಣವನ್ನು ಒಬ್ಬಾಕೆ ಸಹೋದರಿಯು ಸನ್ನೆ ಭಾಷೆಗೆ ಅನುವಾದಿಸುತ್ತಿರುವಲ್ಲಿ ಆಗೇನು? ಆ ಸಹೋದರಿಯು ಕೇವಲ ಮಾಹಿತಿಯನ್ನು ಭಾಷಣಕಾರನಿಂದ ಸಭಿಕರಿಗೆ ದಾಟಿಸುವ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಾಳೆಂಬುದು ನಿಜ. ಅಂದರೆ ಅಲ್ಲಿ ಕೊಡಲಾಗುವ ಬೋಧನೆಯು ಅವಳ ಸ್ವಂತದ್ದಲ್ಲ, ಅವಳು ಅನುವಾದಿಸುತ್ತಿರುವ ಆ ಸಹೋದರನದ್ದಾಗಿದೆ. ಆದರೆ ಸನ್ನೆ ಭಾಷೆಯ ಅನುವಾದವು ಆಡಲ್ಪಡುವ ಭಾಷೆಗಳ ಅನುವಾದಕ್ಕಿಂತ ತುಂಬ ಭಿನ್ನವಾಗಿದೆ. ಆಡಲ್ಪಡುವ ಭಾಷೆಗಳಲ್ಲಿ ಸಭಿಕರು ಅನುವಾದಕನಿಗೆ ಕಿವಿಗೊಡುತ್ತಾ ತಮ್ಮ ಗಮನವನ್ನು ಭಾಷಣಕಾರನ ಮೇಲೆ ಕೇಂದ್ರೀಕರಿಸಬಹುದು. ಮಾತ್ರವಲ್ಲದೆ ಸನ್ನೆ ಭಾಷೆಯ ಅನುವಾದಕ್ಕೆ ವ್ಯತಿರಿಕ್ತವಾಗಿ, ಆಡಲ್ಪಡುವ ಭಾಷೆಗಳ ಅನುವಾದವನ್ನು ಮಾಡುವ ಸಹೋದರಿಯರು ಹೆಚ್ಚು ಗಮನ ಸೆಳೆಯುವಂಥ ಸ್ಥಳದಲ್ಲಿರುವುದಿಲ್ಲ. ಅನುವಾದಿಸುತ್ತಿರುವಾಗ ಅವರು ಕುಳಿತುಕೊಂಡಿರುವ ಸಾಧ್ಯತೆಯೂ ಇದೆ ಅಥವಾ ನಿಂತುಕೊಂಡಿರುವುದಾದರೆ ಅವರು ಸಭಿಕರ ಕಡೆಗೆ ತಿರುಗಿರದೆ ಭಾಷಣಕಾರನ ಕಡೆಗೆ ನೋಡುತ್ತಿರಬಹುದು. ಆದುದರಿಂದ ಆಡಲ್ಪಡುವ ಭಾಷೆಗೆ ಅನುವಾದಿಸುತ್ತಿರುವ ಸಹೋದರಿಯು ತಲೆಗೆ ಮುಸುಕನ್ನು ಹಾಕಿಕೊಳ್ಳುವ ಅಗತ್ಯವಿಲ್ಲ.

ಇದಕ್ಕೆ ಕೂಡಿಸಿ, ಭಾಷಣಗಳನ್ನು ಸನ್ನೆ ಭಾಷೆಗೆ ಅನುವಾದಿಸುತ್ತಿರುವಾಗ ಉಪಯೋಗಿಸುವ ತಂತ್ರಜ್ಞಾನದಲ್ಲಿ ಆಗಿರುವ ಪ್ರಗತಿಯಿಂದಾಗಿ ಅನೇಕವೇಳೆ ಅನುವಾದಿಸುವವರ ಪಾತ್ರವೇ ದೊಡ್ಡದಾಗಿ ತೋರಬಹುದು. ಸಾಮಾನ್ಯವಾಗಿ, ಅನುವಾದಿಸುತ್ತಿರುವವರನ್ನು ದೊಡ್ಡ ಪರದೆಯ ಮೇಲೆ ತೋರಿಸಲಾಗುತ್ತದೆ, ಆದರೆ ಭಾಷಣಕಾರನನ್ನು ಸಭಿಕರು ನೋಡಲೂ ಸಾಧ್ಯವಿರಲಿಕ್ಕಿಲ್ಲ. ಆದುದರಿಂದ ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸನ್ನೆ ಭಾಷೆಗೆ ಅನುವಾದಿಸುತ್ತಿರುವ ಸಹೋದರಿಯು ತಾನು ಅನುವಾದಕಿಯಾಗಿ ದ್ವಿತೀಯ ಪಾತ್ರವನ್ನು ವಹಿಸುತ್ತೇನೆ ಎಂಬುದನ್ನು ತಲೆಗೆ ಮುಸುಕನ್ನು ಹಾಕಿಕೊಳ್ಳುವುದರ ಮೂಲಕ ತೋರಿಸಿಕೊಡುವುದು ಸೂಕ್ತವಾಗಿರುತ್ತದೆ.

ಈ ಪರಿಷ್ಕೃತ ನಿರ್ದೇಶನವು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಭಾಗಗಳು, ಪ್ರತ್ಯಕ್ಷಾಭಿನಯಗಳು ಮತ್ತು ಸಭಾ ಬೈಬಲ್‌ ಅಧ್ಯಯನ, ಸೇವಾ ಕೂಟ ಹಾಗೂ ಕಾವಲಿನಬುರುಜು ಅಧ್ಯಯನದಲ್ಲಿ ಕೊಡಲಾಗುವ ಹೇಳಿಕೆಗಳನ್ನು ಸನ್ನೆ ಭಾಷೆಗೆ ಅನುವಾದಿಸುವುದಕ್ಕೆ ಹೇಗೆ ಅನ್ವಯಿಸುತ್ತದೆ? ಇಂಥ ಸಂದರ್ಭಗಳಲ್ಲಿ ಸಹ ಸನ್ನೆ ಭಾಷೆಗೆ ಅನುವಾದಿಸುವ ಸಹೋದರಿಯು ತಲೆಗೆ ಮುಸುಕನ್ನು ಹಾಕಿಕೊಳ್ಳಬೇಕೊ? ಅನುವಾದಿಸುವ ಸಹೋದರಿ ಕೂಟವನ್ನು ನಡೆಸುತ್ತಿಲ್ಲ ಎಂಬುದನ್ನು ಸಭಿಕರೆಲ್ಲರೂ ಅರ್ಥಮಾಡಿಕೊಳ್ಳಸಾಧ್ಯವಿರುವುದರಿಂದ ಕೆಲವು ಸಂದರ್ಭಗಳಲ್ಲಿ ಅವಳು ತಲೆಗೆ ಮುಸುಕನ್ನು ಹಾಕಿಕೊಳ್ಳುವ ಅಗತ್ಯವಿಲ್ಲವೆಂದು ತೋರಬಹುದು. ಉದಾಹರಣೆಗೆ ಸಭಿಕರ ಹೇಳಿಕೆಗಳನ್ನು, ಸಹೋದರಿಯರು ನೀಡುವ ಭಾಷಣಗಳನ್ನು ಹಾಗೂ ಪ್ರತ್ಯಕ್ಷಾಭಿನಯಗಳನ್ನು ಅನುವಾದಿಸುವುದಕ್ಕೆ ಇದು ಅನ್ವಯಿಸುತ್ತದೆ. ಆದರೆ ಇವು ನೀಡಲ್ಪಡುವ ಕೂಟಗಳಲ್ಲಿ ಸಹೋದರರ ಭಾಷಣಗಳನ್ನು, ಕಾವಲಿನಬುರುಜು ಅಧ್ಯಯನ ಅಥವಾ ಸಭಾ ಬೈಬಲ್‌ ಅಧ್ಯಯನದ ಚಾಲಕನ ಹೇಳಿಕೆಗಳನ್ನು ಅನುವಾದಿಸುವಾಗ ಅಥವಾ ಗೀತೆಗಳನ್ನು ಸನ್ನೆ ಭಾಷೆಯಲ್ಲಿ ಹಾಡುವುದನ್ನು ನಿರ್ದೇಶಿಸುವಾಗ ಅವಳು ತಲೆಗೆ ಮುಸುಕನ್ನು ಹಾಕಿಕೊಳ್ಳಬೇಕು. ಕೂಟವು ನಡೆಸಲ್ಪಡುವಾಗ ಒಬ್ಬಾಕೆ ಸಹೋದರಿಯು ಸಹೋದರರ, ಸಹೋದರಿಯರ, ಮಕ್ಕಳ ಹಾಗೂ ಸಭಾ ಹಿರಿಯರ ಭಾಷಣಗಳನ್ನು ಅನುವಾದಿಸಲಿಕ್ಕಿರಬಹುದು. ಆದುದರಿಂದ ಅನುವಾದಿಸುವ ಸಹೋದರಿಯು ಕೂಟದಾದ್ಯಂತ ತಲೆಗೆ ಮುಸುಕನ್ನು ಹಾಕಿಕೊಂಡಿರುವುದು ಹೆಚ್ಚು ಪ್ರಾಯೋಗಿಕವಾಗಿರಬಹುದು.

[ಪಾದಟಿಪ್ಪಣಿ]

^ ಪ್ಯಾರ. 3 ಕ್ರೈಸ್ತ ಸ್ತ್ರೀಯರು ತಲೆಗೆ ಮುಸುಕನ್ನು ಹಾಕಿಕೊಳ್ಳುವುದರ ಕುರಿತಾದ ಸವಿವರವಾದ ಚರ್ಚೆಗಾಗಿ “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಎಂಬ ಪುಸ್ತಕದ 239ರಿಂದ 242ನೇ ಪುಟಗಳನ್ನು ನೋಡಿರಿ.