ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶ್ರವಣದೋಷವುಳ್ಳ ಸಹೋದರ ಸಹೋದರಿಯರನ್ನು ಆದರಿಸಿರಿ!

ಶ್ರವಣದೋಷವುಳ್ಳ ಸಹೋದರ ಸಹೋದರಿಯರನ್ನು ಆದರಿಸಿರಿ!

ಶ್ರವಣದೋಷವುಳ್ಳ ಸಹೋದರ ಸಹೋದರಿಯರನ್ನು ಆದರಿಸಿರಿ!

ಇಂದು ದೇವಜನರು ಆಧ್ಯಾತ್ಮಿಕ ಸಹೋದರ ಸಹೋದರಿಯರ ಒಂದು ದೊಡ್ಡ ಕುಟುಂಬವಾಗಿದ್ದಾರೆ. ಇದು ಪ್ರಾಚೀನಕಾಲದ ಸ್ತ್ರೀಪುರುಷರಿಂದ ಪರಂಪರಾಗತವಾಗಿ ಬಂದಿದೆ. ಇದರಲ್ಲಿ ಸಮುವೇಲ, ದಾವೀದ, ಸಂಸೋನ, ರಾಹಾಬ, ಮೋಶೆ, ಅಬ್ರಹಾಮ, ಸಾರ, ನೋಹ ಮತ್ತು ಹೇಬೆಲರು ಸೇರಿದ್ದಾರೆ. ಯೆಹೋವನ ನಿಷ್ಠಾವಂತ ಸೇವಕರಲ್ಲಿ ಶ್ರವಣದೋಷವುಳ್ಳ ಅನೇಕರಿದ್ದಾರೆ. ಉದಾಹರಣೆಗೆ, ಮಂಗೋಲಿಯದಲ್ಲಿ ಯೆಹೋವನ ಸಾಕ್ಷಿಗಳಾದವರಲ್ಲಿ ಮೊದಲಿಗರು ಶ್ರವಣದೋಷವಿದ್ದ ಒಂದು ದಂಪತಿಯಾಗಿದ್ದರು. ಮಾತ್ರವಲ್ಲದೆ, ರಷ್ಯಾದಲ್ಲಿನ ಶ್ರವಣದೋಷವುಳ್ಳ ನಮ್ಮ ಜೊತೆ ವಿಶ್ವಾಸಿಗಳು ತೋರಿಸಿದ ಸಮಗ್ರತೆಯಿಂದಾಗಿ ಮಾನವ ಹಕ್ಕುಗಳ ಯುರೋಪಿಯನ್‌ ಕೋರ್ಟ್‌ನಲ್ಲಿ ನಾವು ಒಂದು ಕಾನೂನುಬದ್ಧ ವಿಜಯವನ್ನು ಪಡೆಯಲು ಸಾಧ್ಯವಾಯಿತು.

ಆಧುನಿಕ ದಿನಗಳಲ್ಲಿ “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ವರ್ಗವು ಸನ್ನೆ ಭಾಷೆಯ ಪ್ರಕಾಶನಗಳನ್ನು ಒದಗಿಸಿದೆ ಹಾಗೂ ಸನ್ನೆ ಭಾಷೆಯಲ್ಲಿ ಸಭೆಗಳನ್ನು, ಸಮ್ಮೇಳನಗಳನ್ನು ಮತ್ತು ಅಧಿವೇಶನಗಳನ್ನು ಸಂಘಟಿಸಿದೆ. (ಮತ್ತಾ. 24:45) ಇವು ಶ್ರವಣದೋಷವುಳ್ಳವರಿಗೆ ಹೆಚ್ಚು ಪ್ರಯೋಜನವನ್ನು ತಂದಿವೆ. * ಆದರೆ ಈ ಒದಗಿಸುವಿಕೆಗಳಿಲ್ಲದೆ, ಅವರು ಸತ್ಯದೇವರ ಕುರಿತು ಕಲಿಯುವುದು ಹಾಗೂ ಸತ್ಯದಲ್ಲಿ ಪ್ರಗತಿಯನ್ನು ಮಾಡುವುದು ಹೇಗಿದ್ದಿರಬಹುದೆಂದು ನೀವು ಎಂದಾದರೂ ಯೋಚಿಸಿದ್ದೀರೊ? ನಿಮ್ಮ ಕ್ಷೇತ್ರದಲ್ಲಿರುವ ಶ್ರವಣದೋಷವುಳ್ಳವರಿಗೆ ಸಹಾಯಮಾಡಲು ನೀವೇನನ್ನು ಮಾಡಸಾಧ್ಯವಿದೆ ಎಂಬುದರ ಕುರಿತು ಆಲೋಚಿಸಿದ್ದೀರೊ?

ಆಧುನಿಕ ಸೌಲಭ್ಯಗಳು ಸಿಗುವುದಕ್ಕೆ ಮುಂಚೆ

ಶ್ರವಣದೋಷವುಳ್ಳ ನಮ್ಮ ವಯೋವೃದ್ಧ ಸಹೋದರ ಸಹೋದರಿಯರು ದೇವರ ಕುರಿತು ಹೇಗೆ ಕಲಿತರೆಂದು ಕೇಳುವುದಾದರೆ ಅವರೇನು ಹೇಳುವರು? ದೇವರಿಗೊಂದು ಹೆಸರಿದೆಯೆಂಬುದನ್ನು ಮೊಟ್ಟಮೊದಲು ತಿಳಿದುಕೊಂಡಾಗ ಅವರಿಗೆ ಹೇಗನಿಸಿತೆಂದು ಹೇಳಬಹುದು. ಆ ಒಂದೇ ಸತ್ಯವು ಹೇಗೆ ಅವರ ಜೀವನವನ್ನು ಬದಲಾಯಿಸಿತು ಹಾಗೂ ಆಳವಾದ ಬೈಬಲ್‌ ಸತ್ಯಗಳನ್ನು ಕಲಿಯಲು ಸಹಾಯಮಾಡಲಿಕ್ಕಾಗಿ ಸನ್ನೆ ಭಾಷೆಯ ವಿಡಿಯೋ ಕಾರ್ಯಕ್ರಮಗಳು ಹಾಗೂ ಡಿ.ವಿ.ಡಿ. ಸೌಲಭ್ಯಗಳು ಒದಗಿಸಲ್ಪಡುವ ಮುಂಚಿನ ಕಾಲಾವಧಿಯಲ್ಲಿ ಅದು ಅವರ ನಂಬಿಕೆಯನ್ನು ಹೇಗೆ ಕಾಪಾಡಿತು ಎಂದು ಅವರು ಹೇಳಬಹುದು. ಕ್ರೈಸ್ತ ಕೂಟಗಳು ಸನ್ನೆ ಭಾಷೆಯಲ್ಲಿ ನಡೆಸಲ್ಪಡದಿದ್ದ ಅಥವಾ ಅನುವಾದಿಸಲ್ಪಡದಿದ್ದ ಸಮಯದಲ್ಲಿ ಹೇಗಿತ್ತು ಎಂಬುದನ್ನು ಅವರು ವಿವರಿಸಬಹುದು. ಅಂಥ ಸಂದರ್ಭಗಳಲ್ಲಿ ಯಾರಾದರೊಬ್ಬರು ಅವರ ಪಕ್ಕದಲ್ಲಿ ಕುಳಿತುಕೊಂಡು ಕೂಟದಲ್ಲಿ ಹೇಳಲಾಗುತ್ತಿರುವ ವಿಷಯವನ್ನು ಅವರು ಅರ್ಥಮಾಡಿಕೊಳ್ಳಲಿಕ್ಕಾಗಿ ಅದನ್ನು ಹಾಳೆಯಲ್ಲಿ ಬರೆದು ತೋರಿಸುತ್ತಿದ್ದರು. ಶ್ರವಣದೋಷವುಳ್ಳ ಒಬ್ಬ ಸಹೋದರನು ಏಳು ವರ್ಷಗಳ ತನಕ ಇದೇ ವಿಧಾನದಿಂದ ಬೈಬಲ್‌ ಸತ್ಯಗಳನ್ನು ಕಲಿತನು. ಕೊನೆಗೆ ಕೂಟಗಳನ್ನು ಸನ್ನೆ ಭಾಷೆಗೆ ಅನುವಾದಿಸುವವರೊಬ್ಬರು ಅವನ ಸಭೆಗೆ ಬಂದರು.

ಕಿವಿಕೇಳಿಸುವ ಜನರಿಗೆ ಸುವಾರ್ತೆ ಸಾರುವುದು ಹೇಗಿತ್ತು ಎಂಬುದನ್ನು ಶ್ರವಣದೋಷವುಳ್ಳ ವೃದ್ಧ ಸಾಕ್ಷಿಗಳು ನೆನಪಿಸಿಕೊಳ್ಳುತ್ತಾರೆ. ಅವರು ಮನೆ ಮನೆ ಸಾಕ್ಷಿಕಾರ್ಯದ ಸರಳ ನಿರೂಪಣೆ ಬರೆದಿರುವ ಒಂದು ಚಿಕ್ಕ ಕಾರ್ಡನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಆಗಿನ ಹೊಸ ಕಾವಲಿನಬುರುಜು ಹಾಗೂ ಎಚ್ಚರ! ಪತ್ರಿಕೆಗಳನ್ನು ಹಿಡಿದುಕೊಳ್ಳುತ್ತಿದ್ದರು. ಶ್ರವಣದೋಷವುಳ್ಳವರಿಗೆ ಪೂರ್ಣವಾಗಿ ಅರ್ಥವಾಗದ ಮುದ್ರಿತ ಪ್ರಕಾಶನಗಳನ್ನು ಮಾತ್ರ ಉಪಯೋಗಿಸುತ್ತಾ ಶ್ರವಣದೋಷವುಳ್ಳ ಒಬ್ಬ ವ್ಯಕ್ತಿ ಈ ದೋಷವುಳ್ಳ ಮತ್ತೊಬ್ಬ ವ್ಯಕ್ತಿಗೆ ಬೈಬಲ್‌ ಅಧ್ಯಯನವನ್ನು ನಡೆಸುವುದು ತುಂಬ ಕಷ್ಟಕರವಾಗಿತ್ತು. ತಾವು ಹೇಳಿದ್ದು ಮನೆಯವನಿಗೆ ಅರ್ಥವಾಗದೇ ಹೋದ ಕಾರಣ ಆಧ್ಯಾತ್ಮಿಕ ಸತ್ಯಗಳ ಕುರಿತು ಹೆಚ್ಚನ್ನು ಮಾತಾಡಲು ಸಾಧ್ಯವಾಗದಿದ್ದಾಗ ತಮಗಾದ ಹತಾಶೆಯನ್ನು ವೃದ್ಧ ಪ್ರಚಾರಕರು ಪ್ರಾಯಶಃ ಜ್ಞಾಪಿಸಿಕೊಳ್ಳಬಹುದು. ಮಾತ್ರವಲ್ಲದೆ ಯೆಹೋವನಿಗಾಗಿ ಆಳವಾದ ಪ್ರೀತಿಯಿದ್ದರೂ ದೃಢನಿಶ್ಚಯದಿಂದ ಅದನ್ನು ಕ್ರಿಯೆಗಳ ಮೂಲಕ ತೋರಿಸಿಕೊಡಲು ಆಗದಿದ್ದಾಗ ಹೇಗನಿಸುತ್ತದೆಂಬುದೂ ಅವರಿಗೆ ತಿಳಿದಿದೆ. ಅವರಿಗೆ ಯಾಕೆ ದೃಢನಿಶ್ಚಯದಿಂದ ಕ್ರಿಯೆಗೈಯಲು ಆಗುತ್ತಿರಲಿಲ್ಲ? ಯಾಕೆಂದರೆ ಒಂದು ನಿರ್ದಿಷ್ಟ ವಿಷಯವನ್ನು ಅವರು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ ಎಂಬ ಖಾತ್ರಿ ಅವರಿಗಿರುತ್ತಿರಲಿಲ್ಲ.

ಈ ಎಲ್ಲ ಅಡೆತಡೆಗಳ ಹೊರತಾಗಿಯೂ ಶ್ರವಣದೋಷವುಳ್ಳ ನಮ್ಮ ಸಹೋದರ ಸಹೋದರಿಯರು ತಮ್ಮ ಸಮಗ್ರತೆಯನ್ನು ಬಿಡದೆ ಇದ್ದಾರೆ. (ಯೋಬ 2:3) ಅವರು ಯೆಹೋವನಿಗೋಸ್ಕರ ಹಂಬಲದಿಂದ ಕಾದಿದ್ದರು. (ಕೀರ್ತ. 37:7) ಯೆಹೋವನು ಈಗ ಅವರಲ್ಲಿ ಅನೇಕರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ವಿಧಗಳಲ್ಲಿ ಅವರನ್ನು ಆಶೀರ್ವದಿಸುತ್ತಿದ್ದಾನೆ.

ಹೆಂಡತಿ ಮಕ್ಕಳಿರುವ ಶ್ರವಣದೋಷವುಳ್ಳ ಒಬ್ಬ ಸಹೋದರನು ಮಾಡಿದ ಪ್ರಯತ್ನಗಳನ್ನು ಪರಿಗಣಿಸಿರಿ. ಸನ್ನೆ ಭಾಷೆಯ ವಿಡಿಯೋಗಳು ಲಭ್ಯವಾಗುವ ಮುಂಚಿನಿಂದಲೇ ಅವನು ಕುಟುಂಬ ಅಧ್ಯಯನವನ್ನು ನಡೆಸುವುದರಲ್ಲಿ ನಂಬಿಗಸ್ತಿಕೆಯಿಂದ ಮುಂದಾಳುತ್ವ ವಹಿಸುತ್ತಿದ್ದನು. ಆ ಸಹೋದರನ ಮಗನು ಆ ದಿನಗಳನ್ನು ಜ್ಞಾಪಿಸಿಕೊಳ್ಳುತ್ತಾ ಹೇಳುವುದು: “ಕೇವಲ ಮುದ್ರಿತ ಪ್ರಕಾಶನಗಳಿಂದ ನಮ್ಮ ತಂದೆಯು ನಮಗೆ ಎಲ್ಲ ವಿಷಯಗಳನ್ನು ಕಲಿಸಬೇಕಾಗಿದ್ದ ಕಾರಣ ಕುಟುಂಬ ಅಧ್ಯಯನವನ್ನು ನಡೆಸುವುದು ಅವರಿಗೆ ಯಾವಾಗಲೂ ಕಷ್ಟಕರವಾಗಿತ್ತು. ಅನೇಕಬಾರಿ ಅವರಿಗೆ ಮುದ್ರಿತ ಮಾಹಿತಿ ಸಂಪೂರ್ಣವಾಗಿ ಅರ್ಥವಾಗುತ್ತಿರಲಿಲ್ಲ. ನಾವು ಮಕ್ಕಳು ಸಹ ಅವರ ಸಮಸ್ಯೆಯನ್ನು ಹೆಚ್ಚಿಸುತ್ತಿದ್ದೆವು. ಅವರು ವಿಷಯಗಳನ್ನು ಸರಿಯಾಗಿ ವಿವರಿಸದೇ ಇದ್ದಾಗ, ‘ನೀವು ಹೇಳಿದ್ದು ಸರಿಯಲ್ಲ’ ಎಂದು ನಾವು ಕೂಡಲೆ ಹೇಳಿಬಿಡುತ್ತಿದ್ದೆವು. ಇದೆಲ್ಲದರ ಹೊರತಾಗಿಯೂ ಅವರು ಯಾವಾಗಲೂ ಕುಟುಂಬ ಅಧ್ಯಯನವನ್ನು ನಡೆಸುತ್ತಿದ್ದರು. ಇಂಗ್ಲಿಷನ್ನು ಅರ್ಥಮಾಡಿಕೊಳ್ಳುವುದರಲ್ಲಿ ಅವರಿಗಿದ್ದ ಇತಿಮಿತಿಗಳಿಂದ ಕೆಲವೊಮ್ಮೆ ಆಗುವ ಮುಜುಗರಕ್ಕಿಂತಲೂ ನಾವು ಯೆಹೋವನ ಕುರಿತು ಏನನ್ನಾದರೂ ಕಲಿಯುವುದು ಹೆಚ್ಚು ಪ್ರಾಮುಖ್ಯ ಎಂದು ತಂದೆ ನೆನಸುತ್ತಿದ್ದರು.”

ರಿಚರ್ಡ್‌ ಎಂಬ ಸಹೋದರನ ಉದಾಹರಣೆಯನ್ನೂ ಪರಿಗಣಿಸಿ. ಅಮೆರಿಕದ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ ವಾಸಿಸುವ ಇವರು 70ರ ವಯಸ್ಸಿನವರು. ಇವರಿಗೆ ಕಿವಿಕೇಳಿಸುವುದಿಲ್ಲ, ಕಣ್ಣೂ ಕಾಣುವುದಿಲ್ಲ. ಅವರು ಕ್ರೈಸ್ತ ಕೂಟಗಳಿಗೆ ತಪ್ಪದೇ ಹಾಜರಾಗುವವರು ಎಂಬ ಖ್ಯಾತಿಯನ್ನು ಹೊಂದಿದ್ದರು. ಕೂಟಗಳಿಗೆ ಹಾಜರಾಗಲು ಅವರು ಒಬ್ಬರೇ ಸುರಂಗ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಎಲ್ಲಿ ಇಳಿಯಬೇಕೆಂಬುದನ್ನು ನಿಲ್ದಾಣಗಳನ್ನು ಲೆಕ್ಕಿಸುವ ಮೂಲಕ ತಿಳಿದುಕೊಳ್ಳುತ್ತಾರೆ. ಒಮ್ಮೆ ಚಳಿಗಾಲದಲ್ಲಿ, ಬಿರುಗಾಳಿಯಿಂದ ಕೂಡಿದ ಹಿಮಪಾತ ಎಷ್ಟು ತೀವ್ರವಾಗಿತ್ತೆಂದರೆ ಆ ದಿನ ಕೂಟವನ್ನು ರದ್ದುಮಾಡಬೇಕಾಯಿತು. ಸಭೆಯಲ್ಲಿರುವ ಎಲ್ಲರಿಗೂ ಇದರ ಕುರಿತು ತಿಳಿಸಲಾಯಿತು, ಆದರೆ ಹೇಗೋ ಸಹೋದರ ರಿಚರ್ಡ್‌ಗೆ ಇದು ತಿಳಿಸಲ್ಪಡಲಿಲ್ಲ. ಇದು ಸಹೋದರರಿಗೆ ತಿಳಿದುಬಂದಾಗ ಮತ್ತು ಅವರು ಸಹೋದರ ರಿಚರ್ಡ್‌ಗಾಗಿ ಹುಡುಕತೊಡಗಿದಾಗ ಅವರು ರಾಜ್ಯ ಸಭಾಗೃಹದ ಹೊರಗೆ ನಿಂತಿರುವುದನ್ನು ಕಂಡರು. ಸಭಾಗೃಹವು ತೆರೆಯಲ್ಪಡುವುದಕ್ಕಾಗಿ ಅವರು ತಾಳ್ಮೆಯಿಂದ ಕಾಯುತ್ತಾ ನಿಂತಿದ್ದರು. ಬಿರುಗಾಳಿಯಲ್ಲಿ ಅವರು ಯಾಕೆ ಹೊರಗೆ ಬಂದರೆಂದು ಸಹೋದರರು ಕೇಳಿದಾಗ, “ನಾನು ಯೆಹೋವನನ್ನು ಪ್ರೀತಿಸುತ್ತೇನೆ” ಎಂದು ಅವರು ಉತ್ತರಕೊಟ್ಟರು.

ಅವರಿಗಾಗಿ ನೀವೇನು ಮಾಡಬಲ್ಲಿರಿ?

ನಿಮ್ಮ ಕ್ಷೇತ್ರದಲ್ಲಿ ಶ್ರವಣದೋಷವುಳ್ಳವರು ವಾಸಿಸುತ್ತಾರೊ? ಅವರೊಂದಿಗೆ ಸಂಭಾಷಿಸಲಿಕ್ಕಾಗಿ ಯಾವುದಾದರೊಂದು ಸನ್ನೆ ಭಾಷೆಯನ್ನು ನೀವು ಕಲಿಯಬಲ್ಲಿರೊ? ಶ್ರವಣದೋಷವುಳ್ಳವರು ತಮ್ಮ ಭಾಷೆಯನ್ನು ಇತರರಿಗೆ ಕಲಿಸುವಾಗ ಸಾಮಾನ್ಯವಾಗಿ ದಯಾಪರರೂ ತಾಳ್ಮೆಯುಳ್ಳವರೂ ಆಗಿರುತ್ತಾರೆ. ನೀವು ಅನೌಪಚಾರಿಕವಾಗಿ ಅಥವಾ ಶುಶ್ರೂಷೆಯಲ್ಲಿ ಶ್ರವಣದೋಷವುಳ್ಳ ಒಬ್ಬ ವ್ಯಕ್ತಿಯನ್ನು ಭೇಟಿಯಾಗುವುದಾದರೆ ಏನು ಮಾಡಬಲ್ಲಿರಿ? ಅವರೊಂದಿಗೆ ಸಂಭಾಷಿಸಲು ಪ್ರಯತ್ನಿಸಿರಿ. ಹಾವಭಾವಗಳು, ಟಿಪ್ಪಣಿಗಳು, ರೇಖಾಚಿತ್ರಗಳು, ವರ್ಣಚಿತ್ರಗಳು ಅಥವಾ ಇವುಗಳಲ್ಲಿ ಕೆಲವನ್ನು ಒಟ್ಟಿಗೆ ಉಪಯೋಗಿಸುತ್ತಾ ಸಂಭಾಷಿಸಲು ಪ್ರಯತ್ನಿಸಿ. ಒಂದುವೇಳೆ ಆ ವ್ಯಕ್ತಿಯು ಸತ್ಯದಲ್ಲಿ ಆಸಕ್ತಿಯಿಲ್ಲವೆಂದು ಸೂಚಿಸುವುದಾದರೂ ಶ್ರವಣದೋಷವುಳ್ಳ ಅಥವಾ ಸನ್ನೆ ಭಾಷೆ ಗೊತ್ತಿರುವ ಒಬ್ಬ ಸಾಕ್ಷಿಗೆ ಅವರೊಂದಿಗಾದ ನಿಮ್ಮ ಭೇಟಿಯ ಕುರಿತು ತಿಳಿಸಿರಿ. ನಮ್ಮ ಸಂದೇಶವನ್ನು ಶ್ರವಣದೋಷವುಳ್ಳ ಒಬ್ಬ ವ್ಯಕ್ತಿಗೆ ಸನ್ನೆ ಭಾಷೆ ಗೊತ್ತಿರುವವರು ಪ್ರಸ್ತುತಪಡಿಸುವಾಗ ಅದರ ಕಡೆಗೆ ಅವರು ಹೆಚ್ಚು ಒಲುಮೆಯನ್ನು ತೋರಿಸಬಹುದು.

ಬಹುಶಃ ನೀವು ಸನ್ನೆ ಭಾಷೆಯನ್ನು ಕಲಿಯುತ್ತಿದ್ದು ಸನ್ನೆ ಭಾಷೆಯ ಸಭೆಗೆ ಹಾಜರಾಗುತ್ತಿರಬಹುದು. ಸನ್ನೆ ಭಾಷೆಯನ್ನು ಉಪಯೋಗಿಸುವುದರಲ್ಲಿ ಹಾಗೂ ಅದನ್ನು ಅರ್ಥಮಾಡಿಕೊಳ್ಳುವುದರಲ್ಲಿ ನೀವು ಹೇಗೆ ನಿಪುಣರಾಗಬಲ್ಲಿರಿ? ನಿಮ್ಮ ಸಭೆಯಲ್ಲಿ ಕಿವಿಕೇಳಿಸುವ ಇತರ ಪ್ರಚಾರಕರಿರುವುದಾದರೂ ನೀವೇಕೆ ಅವರೊಂದಿಗೆ ಸನ್ನೆ ಭಾಷೆಯಲ್ಲೇ ಸಂಭಾಷಿಸಬಾರದು? ಹೀಗೆ ಮಾಡುವ ಮೂಲಕ ನೀವು ಸನ್ನೆ ಭಾಷೆಯಲ್ಲೇ ಯೋಚಿಸಲು ಆರಂಭಿಸುತ್ತೀರಿ. ಸನ್ನೆ ಭಾಷೆಯನ್ನು ಉಪಯೋಗಿಸುವುದಕ್ಕಿಂತ ಮಾತಾಡುವುದು ನಿಮಗೆ ಹೆಚ್ಚು ಸುಲಭವಾಗಿ ಇರಬಹುದಾದ್ದರಿಂದ ಕೆಲವೊಮ್ಮೆ ನಿಮಗೆ ಮಾತಾಡಲು ಮನಸ್ಸಾಗಬಹುದು. ಆದರೆ ಯಾವುದೇ ಭಾಷೆಯನ್ನು ಕಲಿಯುವಾಗ ಶ್ರಮಪಡಬೇಕಾಗಿರುವಂತೆಯೇ ಸನ್ನೆ ಭಾಷೆಯ ವಿಷಯದಲ್ಲೂ ನೀವು ಶ್ರಮವನ್ನು ತಾಳಿಕೊಳ್ಳುವ ಅಗತ್ಯವಿದೆ.

ಸನ್ನೆ ಭಾಷೆಯನ್ನು ಉಪಯೋಗಿಸಲು ಶೃದ್ಧಾಪೂರ್ವಕವಾಗಿ ಪ್ರಯತ್ನಿಸುವ ಮೂಲಕ ನಾವು ಶ್ರವಣದೋಷವುಳ್ಳ ನಮ್ಮ ಸಹೋದರ ಸಹೋದರಿಯರ ಕಡೆಗೆ ಪ್ರೀತಿ ಮತ್ತು ಗೌರವವನ್ನು ತೋರಿಸುತ್ತೇವೆ. ಪ್ರತಿದಿನ ಶಾಲೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಜನರು ಹೇಳಬಯಸುವುದನ್ನು ಅರ್ಥಮಾಡಿಕೊಳ್ಳಲಾರದೇ ಹೋದಾಗ ಶ್ರವಣದೋಷವುಳ್ಳವರಿಗೆ ಆಗುವ ಆಶಾಭಂಗದ ಅನಿಸಿಕೆಗಳನ್ನು ಸ್ವಲ್ಪ ಊಹಿಸಿನೋಡಿ. ಶ್ರವಣದೋಷವುಳ್ಳ ಒಬ್ಬ ಸಹೋದರನು ಹೇಳಿದ್ದು: “ಪ್ರತಿದಿನ ನನ್ನ ಸುತ್ತಮುತ್ತ ಜನರು ಮಾತಾಡುತ್ತಾರೆ. ಅನೇಕ ಬಾರಿ ಒಂಟಿತನದ ಹಾಗೂ ಜನರಿಂದ ಬೇರ್ಪಡಿಸಲ್ಪಟ್ಟ ಭಾವನೆ ನನ್ನ ಮನಸ್ಸಿನಲ್ಲಿ ತುಂಬಿಕೊಳ್ಳುತ್ತದೆ. ಇದರಿಂದ ನಾನು ಉದ್ರೇಕಗೊಳ್ಳುತ್ತೇನೆ, ಸಿಟ್ಟುಗೊಳ್ಳುವುದೂ ಉಂಟು. ಕೆಲವೊಮ್ಮೆ ನನಗೆ ಹೇಗನಿಸುತ್ತದೆಂದು ಮಾತಿನಲ್ಲಿ ವಿವರಿಸಲಿಕ್ಕಾಗುವುದಿಲ್ಲ.” ಶ್ರವಣದೋಷವುಳ್ಳ ನಮ್ಮ ಸಹೋದರ ಸಹೋದರಿಯರಿಗೆ ನಮ್ಮ ಕೂಟಗಳು ಹಿತಕರವಾದ ಸಂದರ್ಭಗಳಾಗಿರಬೇಕು. ಅಲ್ಲಿ ಅವರು ಆಧ್ಯಾತ್ಮಿಕ ಆಹಾರವನ್ನು ಪಡೆದು ಹಾರ್ದಿಕ ಸಂವಾದ ಹಾಗೂ ಸಹವಾಸದಲ್ಲಿ ಆನಂದಿಸುವಂತಿರಬೇಕು.—ಯೋಹಾ. 13:34, 35.

ಕಿವಿಕೇಳುವವರ ಕೂಟಗಳಿಗೆ ಹಾಜರಾಗುವ ಶ್ರವಣದೋಷವುಳ್ಳ ವ್ಯಕ್ತಿಗಳ ಅನೇಕ ಚಿಕ್ಕ ಗುಂಪುಗಳನ್ನೂ ನಾವು ಅಲಕ್ಷಿಸುವಂತಿಲ್ಲ. ಅಂಥವರಿಗಾಗಿ ಕೂಟಗಳನ್ನು ಸನ್ನೆ ಭಾಷೆಗೆ ಅನುವಾದಿಸಲಾಗುತ್ತದೆ. ಕೂಟದಲ್ಲಿ ಪ್ರಸ್ತುತಪಡಿಸುವ ವಿಷಯಗಳನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳಲು ಶ್ರವಣದೋಷವುಳ್ಳ ಈ ಸದಸ್ಯರು ರಾಜ್ಯ ಸಭಾಗೃಹದ ಮುಂದಿನ ಸಾಲುಗಳಲ್ಲಿ ಕುಳಿತುಕೊಳ್ಳುತ್ತಾರೆ. ಇದರಿಂದಾಗಿ ಅವರಿಗೆ ಅನುವಾದಕನನ್ನೂ ಭಾಷಣಕಾರನನ್ನೂ ಯಾವುದೇ ಅಡಚಣೆಯಿಲ್ಲದೆ ಒಂದೇ ದೃಷ್ಟಿರೇಖೆಯಲ್ಲಿ ನೋಡಲು ಸಾಧ್ಯವಾಗುತ್ತದೆ. ಇದು ಸಭೆಯ ಇತರ ಸದಸ್ಯರಿಗೆ ಸ್ವಲ್ಪ ಸಮಯದಲ್ಲೇ ಅಭ್ಯಾಸವಾಗಿಬಿಡುತ್ತದೆ ಮತ್ತು ಇದರಿಂದ ಅವರಿಗೇನೂ ಅಪಕರ್ಷಣೆಯಾಗುವುದಿಲ್ಲ ಎಂಬುದು ಅನುಭವದಿಂದ ತಿಳಿದುಬಂದಿದೆ. ಈ ಏರ್ಪಾಡುಗಳು ಸನ್ನೆ ಭಾಷೆಗೆ ಅನುವಾದಿಸಲ್ಪಡುವ ಸಮ್ಮೇಳನಗಳು ಹಾಗೂ ಅಧಿವೇಶನಗಳಿಗೂ ಅನ್ವಯಿಸುತ್ತವೆ. ವಿಷಯಗಳನ್ನು ಶ್ರವಣದೋಷವುಳ್ಳ ಒಬ್ಬ ವ್ಯಕ್ತಿ ವ್ಯಕ್ತಪಡಿಸುವ ರೀತಿಯಲ್ಲೇ ಅರ್ಥಪೂರ್ಣವಾಗಿ ಹಾಗೂ ಸ್ವಾಭಾವಿಕವಾಗಿ ಅನುವಾದಿಸಲು ಶ್ರಮಿಸುವ ಸಭಾ ಸದಸ್ಯರು ನಮ್ಮ ಹೃತ್ಪೂರ್ವಕ ಪ್ರಶಂಸೆಗೆ ಅರ್ಹರಾಗಿದ್ದಾರೆ.

ಪ್ರಾಯಶಃ ನೀವು ಒಂದು ಸನ್ನೆ ಭಾಷೆಯ ಗುಂಪನ್ನು ನೋಡಿಕೊಳ್ಳುತ್ತಿರುವ ಅಥವಾ ಶ್ರವಣದೋಷವುಳ್ಳವರ ಒಂದು ಚಿಕ್ಕ ಗುಂಪಿಗಾಗಿ ಕೂಟಗಳನ್ನು ಸನ್ನೆ ಭಾಷೆಗೆ ಅನುವಾದಿಸಲಾಗುವ ಸಭೆಗೆ ಸೇರಿರಬಹುದು. ಈ ದೋಷವುಳ್ಳ ಸಹೋದರರಿಗೆ ವೈಯಕ್ತಿಕ ಗಮನವನ್ನು ಕೊಡಲು ನೀವು ಏನು ಮಾಡಸಾಧ್ಯವಿದೆ? ಅವರನ್ನು ನಿಮ್ಮ ಮನೆಗೆ ಆಮಂತ್ರಿಸಿರಿ. ಸಾಧ್ಯವಿರುವಲ್ಲಿ ಕೆಲವು ಸನ್ನೆಗಳನ್ನು ಕಲಿಯಿರಿ. ಮಾತನಾಡಲು ಇರುವ ತೊಡಕಿನಿಂದಾಗಿ ಸಂಭಾಷಿಸುವುದನ್ನು ಬಿಟ್ಟುಬಿಡಬೇಡಿ. ಯಾವುದಾದರೊಂದು ವಿಧದಲ್ಲಿ ನೀವು ಅವರೊಂದಿಗೆ ಮಾತಾಡಬಲ್ಲಿರಿ ಮತ್ತು ಇಂಥ ಪ್ರೀತಿಯನ್ನು ತೋರಿಸುವುದಾದರೆ ನಿಮ್ಮ ಮನಪಟಲದಲ್ಲಿ ಸವಿನೆನಪುಗಳು ಉಳಿಯುವಂತಾಗುವುದು. (1 ಯೋಹಾ. 4:8) ಶ್ರವಣದೋಷವುಳ್ಳ ನಮ್ಮ ಸಹೋದರರಲ್ಲೂ ಅನೇಕ ಉತ್ತಮ ವಿಷಯಗಳಿವೆ. ಅವರು ಸಂಭಾಷಣಾಚತುರರೂ ತೀಕ್ಷ್ಣ ಒಳನೋಟವುಳ್ಳವರೂ ತುಂಬ ಹಾಸ್ಯಪ್ರಜ್ಞೆಯುಳ್ಳವರೂ ಆಗಿದ್ದಾರೆ. ಒಬ್ಬ ಸಹೋದರನ ತಂದೆತಾಯಿಗಳಿಬ್ಬರೂ ಶ್ರವಣದೋಷವುಳ್ಳವರು. ಅವನಂದದ್ದು: “ನನ್ನ ಇಡೀ ಜೀವನವನ್ನು ಶ್ರವಣದೋಷವುಳ್ಳವರೊಂದಿಗೇ ಕಳೆದಿದ್ದೇನೆ. ಅವರಿಗೆ ಹಿಂದಿರುಗಿಸಲಾರದಷ್ಟನ್ನು ಅವರು ನನಗೋಸ್ಕರ ಮಾಡಿದ್ದಾರೆ. ಶ್ರವಣದೋಷವುಳ್ಳ ನಮ್ಮ ಸಹೋದರ ಸಹೋದರಿಯರಿಂದ ನಾವು ಎಷ್ಟೋ ವಿಷಯಗಳನ್ನು ಕಲಿಯಸಾಧ್ಯವಿದೆ.”

ಶ್ರವಣದೋಷವುಳ್ಳವರೂ ಸೇರಿದಂತೆ ಯೆಹೋವನು ತನ್ನ ಎಲ್ಲ ನಂಬಿಗಸ್ತ ಆರಾಧಕರನ್ನು ಪ್ರೀತಿಸುತ್ತಾನೆ. ಅವರ ನಂಬಿಕೆ ಮತ್ತು ತಾಳ್ಮೆಯ ಮಾದರಿಯು ಯೆಹೋವನ ಸಂಘಟನೆಯ ವೈಭವಕ್ಕೆ ಖಂಡಿತ ಹೆಚ್ಚನ್ನು ಕೂಡಿಸುತ್ತದೆ. ಆದುದರಿಂದ ನಾವು ಶ್ರವಣದೋಷವುಳ್ಳ ನಮ್ಮ ಪ್ರೀತಿಯ ಸಹೋದರ ಸಹೋದರಿಯರನ್ನು ಆದರಿಸೋಣ!

[ಪಾದಟಿಪ್ಪಣಿ]

^ ಪ್ಯಾರ. 3 ಕಾವಲಿನಬುರುಜು ಪತ್ರಿಕೆಯ 2009, ಆಗಸ್ಟ್‌ 15ರ ಸಂಚಿಕೆಯಲ್ಲಿರುವ ‘ಯೆಹೋವನು ತನ್ನ ಮುಖವನ್ನು ಅವರ ಕಡೆಗೆ ಪ್ರಕಾಶಿಸುವಂತೆ ಮಾಡಿದ್ದಾನೆ’ ಎಂಬ ಲೇಖನವನ್ನು ನೋಡಿರಿ.

[ಪುಟ 31ರಲ್ಲಿರುವ ಚಿತ್ರ]

ರಾಜ್ಯ ಸಂದೇಶವು ಸನ್ನೆ ಭಾಷೆಯಲ್ಲಿ ಪ್ರಸ್ತುತವಾದಾಗ ಅದು ಶ್ರವಣದೋಷವುಳ್ಳವರಿಗೆ ಹೆಚ್ಚು ಆಕರ್ಷಣೀಯ

[ಪುಟ 32ರಲ್ಲಿರುವ ಚಿತ್ರಗಳು]

ಶ್ರವಣದೋಷವುಳ್ಳ ನಮ್ಮ ಸಹೋದರ ಸಹೋದರಿಯರಿಗೆ ನಮ್ಮ ಕೂಟಗಳು ಆಧ್ಯಾತ್ಮಿಕ ಉತ್ತೇಜನವನ್ನು ನೀಡುವಂಥ ಹಿತಕರವಾದ ಸಂದರ್ಭಗಳಾಗಿರಬೇಕು