ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಭೆಯಲ್ಲಿ ನಿಮಗಿರುವ ಪಾತ್ರವನ್ನು ಅಮೂಲ್ಯವೆಂದೆಣಿಸಿ

ಸಭೆಯಲ್ಲಿ ನಿಮಗಿರುವ ಪಾತ್ರವನ್ನು ಅಮೂಲ್ಯವೆಂದೆಣಿಸಿ

ಸಭೆಯಲ್ಲಿ ನಿಮಗಿರುವ ಪಾತ್ರವನ್ನು ಅಮೂಲ್ಯವೆಂದೆಣಿಸಿ

“ದೇವರು ಆ ಅಂಗಗಳಲ್ಲಿ ಪ್ರತಿಯೊಂದನ್ನು ತನಗೆ ಇಷ್ಟಬಂದ ರೀತಿಯಲ್ಲಿ ದೇಹದಲ್ಲಿ ಇಟ್ಟಿದ್ದಾನೆ.” —1 ಕೊರಿಂ. 12:18.

1, 2. (ಎ) ಸಭೆಯಲ್ಲಿರುವ ಪ್ರತಿಯೊಬ್ಬರೂ ಸ್ವತಃ ಮಾನ್ಯಮಾಡಬಲ್ಲ ಪಾತ್ರವನ್ನು ಹೊಂದಿರಸಾಧ್ಯವಿದೆ ಎಂಬುದನ್ನು ಯಾವುದು ತೋರಿಸುತ್ತದೆ? (ಬಿ) ಈ ಲೇಖನದಲ್ಲಿ ಯಾವ ಪ್ರಶ್ನೆಗಳನ್ನು ಪರಿಗಣಿಸಲಾಗುವುದು?

ಪ್ರಾಚೀನ ಇಸ್ರಾಯೇಲಿನ ಕಾಲದಿಂದಲೂ ಯೆಹೋವನು ಸಭೆಯ ಏರ್ಪಾಡಿನ ಮೂಲಕ ತನ್ನ ಜನರನ್ನು ಆಧ್ಯಾತ್ಮಿಕವಾಗಿ ಪೋಷಿಸುತ್ತಾ ಮಾರ್ಗದರ್ಶಿಸುತ್ತಾ ಬಂದಿದ್ದಾನೆ. ಉದಾಹರಣೆಗೆ, ಇಸ್ರಾಯೇಲ್ಯರು ಆಯಿ ಪಟ್ಟಣವನ್ನು ಸೋಲಿಸಿದ ನಂತರ ಯೆಹೋಶುವನು “ಧರ್ಮಶಾಸ್ತ್ರದ ಎಲ್ಲಾ ಆಶೀರ್ವಾದಶಾಪವಾಕ್ಯಗಳನ್ನು ಆ ಗ್ರಂಥದಲ್ಲಿ ಇದ್ದ ಹಾಗೆಯೇ . . . ಸರ್ವಸಮೂಹದ ಮುಂದೆ ಓದಿದನು.”—ಯೆಹೋ. 8:34, 35.

2 ಕ್ರಿಸ್ತ ಶಕ ಪ್ರಥಮ ಶತಮಾನದಲ್ಲಿ, ಅಪೊಸ್ತಲ ಪೌಲನು ಕ್ರೈಸ್ತ ಹಿರಿಯನಾಗಿದ್ದ ತಿಮೊಥೆಯನಿಗೆ ಕ್ರೈಸ್ತ ಸಭೆಯು ‘ದೇವರ ಮನೆವಾರ್ತೆಯೂ’ “ಸತ್ಯಕ್ಕೆ ಸ್ತಂಭವೂ ಆಧಾರವೂ” ಆಗಿತ್ತು ಎಂದು ಹೇಳಿದನು. (1 ತಿಮೊ. 3:15) ದೇವರ ಇಂದಿನ “ಮನೆವಾರ್ತೆ” ಸತ್ಯ ಕ್ರೈಸ್ತರ ಲೋಕವ್ಯಾಪಕ ಸಹೋದರತ್ವವಾಗಿದೆ. ಪೌಲನು ಕೊರಿಂಥದವರಿಗೆ ಬರೆದ ಮೊದಲ ಪ್ರೇರಿತ ಪತ್ರದ 12ನೇ ಅಧ್ಯಾಯದಲ್ಲಿ ಸಭೆಯನ್ನು ಮಾನವ ದೇಹಕ್ಕೆ ಹೋಲಿಸುತ್ತಾನೆ. ದೇಹದಲ್ಲಿ ಪ್ರತಿಯೊಂದು ಅಂಗವು ಬೇರೆ ಬೇರೆ ಕ್ರಿಯೆಯನ್ನು ನಿರ್ವಹಿಸುವುದಾದರೂ ಅದರಲ್ಲಿ ಪ್ರತಿಯೊಂದು ಅಂಗವೂ ಅವಶ್ಯಕ ಎಂದು ಅವನು ಹೇಳುತ್ತಾನೆ. ಪೌಲನು ಬರೆದದ್ದು: “ದೇವರು ಆ ಅಂಗಗಳಲ್ಲಿ ಪ್ರತಿಯೊಂದನ್ನು ತನಗೆ ಇಷ್ಟಬಂದ ರೀತಿಯಲ್ಲಿ ದೇಹದಲ್ಲಿ ಇಟ್ಟಿದ್ದಾನೆ.” ಅವನು ಮತ್ತೂ ಹೇಳಿದ್ದು: “ನಾವು ದೇಹದಲ್ಲಿ ಕಡಮೆ ಮಾನವುಳ್ಳವುಗಳೆಂದು ನೆನಸುವ ಭಾಗಗಳಿಗೆ ಬಹಳಷ್ಟು ಮಾನವನ್ನು ಕೊಡುತ್ತೇವೆ.” (1 ಕೊರಿಂ. 12:18, 23) ಆದುದರಿಂದ ದೇವರ ಮನೆವಾರ್ತೆಯಲ್ಲಿರುವ ಒಬ್ಬ ಪ್ರಾಮಾಣಿಕ ವ್ಯಕ್ತಿಯ ಪಾತ್ರವು ಇನ್ನೊಬ್ಬ ನಂಬಿಗಸ್ತ ಕ್ರೈಸ್ತನ ಪಾತ್ರಕ್ಕಿಂತ ಉತ್ತಮವೂ ಅಲ್ಲ ಹೀನವೂ ಅಲ್ಲ. ಅದು ಕೇವಲ ಭಿನ್ನವಾಗಿದೆ ಅಷ್ಟೆ. ಹಾಗಾದರೆ ದೇವರ ಏರ್ಪಾಡಿನಲ್ಲಿ ನಮಗಿರುವ ಪಾತ್ರವನ್ನು ಅರಿತುಕೊಂಡು ಅದನ್ನು ಹೇಗೆ ಅಮೂಲ್ಯವೆಂದೆಣಿಸಬಲ್ಲೆವು ಅಥವಾ ಮಾನ್ಯಮಾಡಬಲ್ಲೆವು? ನಾವು ವಹಿಸುವಂಥ ಪಾತ್ರದ ಮೇಲೆ ಯಾವುದು ಪರಿಣಾಮ ಬೀರಬಲ್ಲದು? ನಾವು ಹೇಗೆ ‘ನಮ್ಮ ಅಭಿವೃದ್ಧಿಯನ್ನು ಎಲ್ಲರಿಗೆ ಪ್ರಕಟಮಾಡಸಾಧ್ಯವಿದೆ?’—1 ತಿಮೊ. 4:15.

ನಮ್ಮ ಪಾತ್ರವನ್ನು ಮಾನ್ಯಮಾಡುವುದು—ಹೇಗೆ?

3. ಸಭೆಯಲ್ಲಿ ನಮಗಿರುವ ಪಾತ್ರವನ್ನು ಅರಿತುಕೊಂಡು ಅದನ್ನು ಅಮೂಲ್ಯವೆಂದೆಣಿಸುತ್ತೇವೆ ಎಂಬುದನ್ನು ತೋರಿಸುವ ಒಂದು ವಿಧ ಯಾವುದು?

3 ಸಭೆಯಲ್ಲಿ ನಮಗಿರುವ ಪಾತ್ರವನ್ನು ಅರಿತುಕೊಂಡು ಅದನ್ನು ಅಮೂಲ್ಯವೆಂದೆಣಿಸುತ್ತೇವೆ ಎಂಬುದನ್ನು ರುಜುಪಡಿಸುವ ಒಂದು ವಿಧವು “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ಮತ್ತು ಅದನ್ನು ಪ್ರತಿನಿಧಿಸುವ ಆಡಳಿತ ಮಂಡಲಿಯೊಂದಿಗೆ ಸಂಪೂರ್ಣವಾಗಿ ಸಹಕರಿಸುವುದೇ ಆಗಿದೆ. (ಮತ್ತಾಯ 24:45-47 ಓದಿ.) ಆಳು ವರ್ಗದಿಂದ ನಮಗೆ ಸಿಗುವ ಮಾರ್ಗದರ್ಶನಕ್ಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ. ಉದಾಹರಣೆಗೆ, ಈ ಎಲ್ಲ ವರ್ಷಗಳಲ್ಲಿ ಉಡುಪು ಮತ್ತು ಹೊರತೋರಿಕೆ, ಮನೋರಂಜನೆ ಮತ್ತು ಇಂಟರ್‌ನೆಟ್‌ನ ಅಪಪ್ರಯೋಗದ ಬಗ್ಗೆ ನಮಗೆ ಸ್ಪಷ್ಟ ಮಾರ್ಗದರ್ಶನ ಸಿಕ್ಕಿದೆ. ನಾವು ಆಧ್ಯಾತ್ಮಿಕವಾಗಿ ಸುರಕ್ಷಿತವಾಗಿರಲು ಈ ಉತ್ತಮ ಸಲಹೆಯನ್ನು ಜಾಗ್ರತೆಯಿಂದ ಪಾಲಿಸುತ್ತೇವೊ? ಕುಟುಂಬ ಆರಾಧನೆಯನ್ನು ಕ್ರಮವಾಗಿ ಮಾಡುವಂತೆ ಕೊಡಲಾದ ಪ್ರೋತ್ಸಾಹನೆಯ ಕುರಿತೇನು? ಆ ಸಲಹೆಯನ್ನು ಮನಸ್ಸಿಗೆ ತೆಗೆದುಕೊಂಡು ಕುಟುಂಬ ಆರಾಧನೆಗಾಗಿ ಒಂದು ಸಾಯಂಕಾಲವನ್ನು ಬದಿಗಿಟ್ಟಿದ್ದೇವೊ? ನಾವು ಅವಿವಾಹಿತರಾಗಿರುವಲ್ಲಿ, ಬೈಬಲನ್ನು ವೈಯಕ್ತಿಕವಾಗಿ ಅಧ್ಯಯನ ಮಾಡಲು ಸಮಯವನ್ನು ಕೊಡುತ್ತಿದ್ದೇವೊ? ಆಳು ವರ್ಗದ ನಿರ್ದೇಶನವನ್ನು ಪಾಲಿಸುವುದಾದರೆ ಯೆಹೋವನು ನಮ್ಮನ್ನು ವೈಯಕ್ತಿಕವಾಗಿ ಮತ್ತು ಕುಟುಂಬವಾಗಿ ಆಶೀರ್ವದಿಸುವನು ಎಂಬುದು ನಿಶ್ಚಯ.

4. ವೈಯಕ್ತಿಕ ಆಯ್ಕೆಗಳನ್ನು ಮಾಡುವಾಗ ನಾವು ಯಾವುದನ್ನು ಪರಿಗಣಿಸಬೇಕು?

4 ಮನೋರಂಜನೆ, ಉಡುಪು, ಹೊರತೋರಿಕೆಯಂಥ ವಿಷಯಗಳು ಪ್ರತಿಯೊಬ್ಬರಿಗೆ ಸಂಬಂಧಿಸಿದ ವೈಯಕ್ತಿಕ ವಿಚಾರಗಳಾಗಿವೆ ಎಂದು ಕೆಲವರು ತರ್ಕಿಸಬಹುದು. ಆದರೆ ಸಭೆಯಲ್ಲಿ ತನಗಿರುವ ಪಾತ್ರವನ್ನು ಮಾನ್ಯಮಾಡುವ ಒಬ್ಬ ಸಮರ್ಪಿತ ಕ್ರೈಸ್ತನು ನಿರ್ಣಯಗಳನ್ನು ಮಾಡುವಾಗ ತನ್ನ ವೈಯಕ್ತಿಕ ಆದ್ಯತೆಗಳನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳಬಾರದು. ದೇವರ ವಾಕ್ಯವಾದ ಬೈಬಲಿನಲ್ಲಿ ಕೊಡಲಾಗಿರುವ ಯೆಹೋವನ ದೃಷ್ಟಿಕೋನವನ್ನು ಮುಖ್ಯವಾಗಿ ಪರಿಗಣಿಸಬೇಕು. ಅದರಲ್ಲಿರುವ ಸಂದೇಶವು ‘ನಮ್ಮ ಕಾಲಿಗೆ ದೀಪವೂ ನಮ್ಮ ದಾರಿಗೆ ಬೆಳಕೂ ಆಗಿರಬೇಕು.’ (ಕೀರ್ತ. 119:105) ವೈಯಕ್ತಿಕ ವಿಚಾರಗಳಲ್ಲಿ ನಾವು ಮಾಡುವಂಥ ಆಯ್ಕೆಗಳು ನಮ್ಮ ಶುಶ್ರೂಷೆಯ ಮೇಲೆ ಮತ್ತು ಸಭೆಯ ಒಳಗೂ ಹೊರಗೂ ಇರುವ ಜನರ ಮೇಲೆ ಯಾವ ಪರಿಣಾಮವನ್ನು ಬೀರುತ್ತವೆ ಎಂಬುದನ್ನು ಸಹ ಪರಿಗಣಿಸುವುದು ವಿವೇಕಯುತ.—2 ಕೊರಿಂಥ 6:3, 4 ಓದಿ.

5. ಸ್ವೇಚ್ಛಾ ಮನೋಭಾವವನ್ನು ಬೆಳೆಸಿಕೊಳ್ಳದಂತೆ ನಾವೇಕೆ ಜಾಗ್ರತೆ ವಹಿಸಬೇಕು?

5 “ಅವಿಧೇಯತೆಯ ಪುತ್ರರಲ್ಲಿ ಈಗ ಕಾರ್ಯನಡೆಸುತ್ತಿರುವ ಮಾನಸಿಕ ಪ್ರವೃತ್ತಿ” ನಾವು ಉಸಿರಾಡುವ ಗಾಳಿಯಂತೆ ವ್ಯಾಪಕವಾಗಿ ಹಬ್ಬಿಕೊಂಡಿದೆ. (ಎಫೆ. 2:2) ನಮ್ಮಲ್ಲಿ ಈ ಮಾನಸಿಕ ಪ್ರವೃತ್ತಿ ಇರುವುದಾದರೆ ನಮಗೆ ಯೆಹೋವನ ಸಂಘಟನೆಯಿಂದ ಬರುವ ಮಾರ್ಗದರ್ಶನವು ಬೇಕಾಗಿಲ್ಲ ಎಂದು ಅನಿಸಿಬಿಡಬಹುದು. ‘ಅಪೊಸ್ತಲ ಯೋಹಾನನಿಂದ ಏನನ್ನೂ ಗೌರವಭಾವದಿಂದ ಅಂಗೀಕರಿಸದ’ ದಿಯೊತ್ರೇಫನಂತೆ ನಾವಿರಲು ಖಂಡಿತ ಬಯಸುವುದಿಲ್ಲ. (3 ಯೋಹಾ. 9, 10) ನಾವು ಸ್ವೇಚ್ಛಾ ಮನೋಭಾವವನ್ನು ಬೆಳೆಸಿಕೊಳ್ಳದಂತೆ ಜಾಗ್ರತೆ ವಹಿಸಬೇಕು. ಯೆಹೋವನು ಇಂದು ಉಪಯೋಗಿಸುತ್ತಿರುವ ಸಂಪರ್ಕ ಮಾಧ್ಯಮವನ್ನು ಮಾತಿನಲ್ಲಾಗಲಿ ಕ್ರಿಯೆಯಲ್ಲಾಗಲಿ ಅಗೌರವಿಸದೆ ಇರೋಣ. (ಅರ. 16:1-3) ಆಳು ವರ್ಗದೊಂದಿಗೆ ಸಹಕರಿಸುವ ನಮ್ಮ ಸುಯೋಗವನ್ನು ನಾವು ಮಾನ್ಯಮಾಡಬೇಕು. ಮಾತ್ರವಲ್ಲದೆ ನಮ್ಮ ಸ್ಥಳಿಕ ಸಭೆಯಲ್ಲಿ ಮುಂದಾಳುತ್ವ ವಹಿಸುವವರಿಗೆ ವಿಧೇಯತೆ ಮತ್ತು ಅಧೀನತೆಯನ್ನು ತೋರಿಸಲು ಶ್ರಮಿಸಬೇಕು.—ಇಬ್ರಿಯ 13:7, 17 ಓದಿ.

6. ನಾವು ನಮ್ಮ ವೈಯಕ್ತಿಕ ಸನ್ನಿವೇಶಗಳನ್ನು ಏಕೆ ಪರಿಶೀಲಿಸಬೇಕು?

6 ಸಭೆಯಲ್ಲಿ ನಮಗಿರುವ ಪಾತ್ರವನ್ನು ನಾವು ಮಾನ್ಯಮಾಡುತ್ತೇವೆ ಎಂಬುದನ್ನು ತೋರಿಸುವ ಇನ್ನೊಂದು ವಿಧವು ನಮ್ಮ ವೈಯಕ್ತಿಕ ಸನ್ನಿವೇಶಗಳನ್ನು ನಿಕಟವಾಗಿ ಪರಿಶೀಲಿಸಿ ‘ನಮ್ಮ ಶುಶ್ರೂಷೆಯನ್ನು ಮಹಿಮೆಪಡಿಸಲು’ ಮತ್ತು ಯೆಹೋವನಿಗೆ ಮಹಿಮೆಯನ್ನು ತರಲು ನಮ್ಮ ಕೈಲಾದದ್ದೆಲ್ಲವನ್ನು ಮಾಡುವುದೇ ಆಗಿದೆ. (ರೋಮ. 11:13) ಕೆಲವರು ರೆಗ್ಯುಲರ್‌ ಪಯನೀಯರ್‌ ಸೇವೆ ಮಾಡುತ್ತಿದ್ದಾರೆ. ಇತರರು ಲೋಕವ್ಯಾಪಕವಾಗಿ ಮಿಷನೆರಿಗಳು, ಸಂಚರಣ ಮೇಲ್ವಿಚಾರಕರು ಮತ್ತು ಬೆತೆಲ್‌ ಕುಟುಂಬಗಳ ಸದಸ್ಯರಾಗಿ ವಿಶೇಷ ರೀತಿಯ ಪೂರ್ಣ ಸಮಯದ ಸೇವೆಯನ್ನು ಮಾಡುತ್ತಿದ್ದಾರೆ. ಅನೇಕ ಸಹೋದರ ಸಹೋದರಿಯರು ರಾಜ್ಯ ಸಭಾಗೃಹ ನಿರ್ಮಾಣಕಾರ್ಯಕ್ಕೆ ನೆರವು ನೀಡುತ್ತಾರೆ. ಯೆಹೋವನ ಜನರಲ್ಲಿ ಬಹುತೇಕ ಮಂದಿ ತಮ್ಮ ಕುಟುಂಬಗಳ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಲು ಮತ್ತು ಪ್ರತಿ ವಾರ ಶುಶ್ರೂಷೆಯಲ್ಲಿ ಪೂರ್ಣವಾಗಿ ಪಾಲ್ಗೊಳ್ಳಲು ತಮ್ಮಿಂದಾದುದೆಲ್ಲವನ್ನು ಮಾಡುತ್ತಿದ್ದಾರೆ. (ಕೊಲೊಸ್ಸೆ 3:23, 24 ಓದಿ.) ನಾವು ದೇವರ ಸೇವೆಯಲ್ಲಿ ನಮ್ಮನ್ನೇ ಇಷ್ಟಪೂರ್ವಕವಾಗಿ ಕೊಟ್ಟುಕೊಳ್ಳುವಾಗ ಮತ್ತು ಪೂರ್ಣಪ್ರಾಣದಿಂದ ಆತನ ಸೇವೆಯಲ್ಲಿ ಸಾಧ್ಯವಾದದ್ದೆಲ್ಲವನ್ನು ಮಾಡುವಾಗ ನಮಗೆ ಯಾವಾಗಲೂ ಆತನ ಏರ್ಪಾಡಿನಲ್ಲಿ ಒಂದು ಪಾತ್ರವಿರುತ್ತದೆ ಎಂಬ ಖಾತ್ರಿಯಿರಬಲ್ಲದು.

ಸಭೆಯಲ್ಲಿ ನಮಗಿರುವ ಪಾತ್ರದ ಮೇಲೆ ಪರಿಣಾಮ ಬೀರುವ ಅಂಶಗಳು

7. ನಮ್ಮ ಸನ್ನಿವೇಶಗಳು ಸಭೆಯಲ್ಲಿ ನಮಗಿರುವ ಪಾತ್ರದ ಮೇಲೆ ಹೇಗೆ ಪರಿಣಾಮ ಬೀರಬಲ್ಲವು ಎಂಬುದನ್ನು ವಿವರಿಸಿ.

7 ನಾವು ನಮ್ಮ ಸನ್ನಿವೇಶಗಳನ್ನು ಪರಿಶೀಲಿಸುವುದು ಪ್ರಾಮುಖ್ಯ. ಏಕೆಂದರೆ ಸಭೆಯಲ್ಲಿ ನಮ್ಮಿಂದ ಏನು ಮಾಡಸಾಧ್ಯವಿದೆ ಎಂಬುದು ಸ್ವಲ್ಪಮಟ್ಟಿಗೆ ನಮ್ಮ ಸನ್ನಿವೇಶಗಳ ಮೇಲೆ ಹೊಂದಿಕೊಂಡಿದೆ. ಉದಾಹರಣೆಗೆ, ಸಭೆಯಲ್ಲಿ ಸಹೋದರರು ವಹಿಸಬಹುದಾದ ಪಾತ್ರವು ಕೆಲವು ವಿಧಗಳಲ್ಲಿ ಸಹೋದರಿಯರು ವಹಿಸುವ ಪಾತ್ರಕ್ಕಿಂತ ಭಿನ್ನವಾಗಿದೆ. ಯೆಹೋವನ ಸೇವೆಯಲ್ಲಿ ನಮ್ಮಿಂದ ಏನನ್ನು ಮಾಡಸಾಧ್ಯವಿದೆ ಎಂಬುದರ ಮೇಲೆ ನಮ್ಮ ವಯಸ್ಸು, ಆರೋಗ್ಯ ಮತ್ತು ಇತರ ಅಂಶಗಳು ಸಹ ಪ್ರಭಾವ ಬೀರುತ್ತವೆ. “ಯುವಕರಿಗೆ ಬಲವು ಭೂಷಣ, ಮುದುಕರಿಗೆ ನರೆಯು ಒಡವೆ” ಎಂದು ಜ್ಞಾನೋಕ್ತಿ 20:29 ಹೇಳುತ್ತದೆ. ಸಭೆಯಲ್ಲಿರುವ ಯೌವನಸ್ಥರು ತಮ್ಮ ತಾರುಣ್ಯದ ಶಕ್ತಿಯಿಂದ ದೈಹಿಕವಾಗಿ ಹೆಚ್ಚನ್ನು ಮಾಡಸಾಧ್ಯವಿದೆ. ಆದರೆ ವಯೋವೃದ್ಧರು ತಮ್ಮ ವಿವೇಕ ಮತ್ತು ಅನುಭವದಿಂದ ಸಭೆಗೆ ಹೆಚ್ಚು ಪ್ರಯೋಜನವನ್ನು ತರುತ್ತಾರೆ. ಮಾತ್ರವಲ್ಲದೆ ಯೆಹೋವನ ಸಂಘಟನೆಯಲ್ಲಿ ನಮ್ಮಿಂದ ಮಾಡಸಾಧ್ಯವಿರುವ ಯಾವುದೇ ವಿಷಯವು ದೇವರ ಅಪಾತ್ರ ದಯೆಯ ಮೇಲೆ ಹೊಂದಿಕೊಂಡಿದೆ ಎಂಬುದನ್ನು ಸಹ ನಾವು ಮನಸ್ಸಿನಲ್ಲಿಡಬೇಕು.—ಅ. ಕಾ. 14:26; ರೋಮ. 12:6-8.

8. ಸಭೆಯಲ್ಲಿ ನಮ್ಮಿಂದ ಏನು ಮಾಡಸಾಧ್ಯವಿದೆ ಎಂಬುದರ ಮೇಲೆ ಇಚ್ಛೆ ಯಾವ ಪರಿಣಾಮ ಬೀರುತ್ತದೆ?

8 ನಾವು ಸಭೆಯಲ್ಲಿ ಯಾವ ಪಾತ್ರವನ್ನು ವಹಿಸಲಿದ್ದೇವೆ ಎಂಬುದನ್ನು ನಿರ್ಧರಿಸುವ ಮತ್ತೊಂದು ಅಂಶವನ್ನು ಒಡಹುಟ್ಟಿದ ಇಬ್ಬರು ಯುವ ಸಹೋದರಿಯರ ದೃಷ್ಟಾಂತವು ಎತ್ತಿತೋರಿಸುತ್ತದೆ. ಇಬ್ಬರೂ ಹೈಸ್ಕೂಲ್‌ ಶಿಕ್ಷಣವನ್ನು ಮುಗಿಸುತ್ತಾರೆ. ಇಬ್ಬರಿಗೂ ಒಂದೇ ರೀತಿಯ ಸನ್ನಿವೇಶಗಳಿವೆ. ಹೈಸ್ಕೂಲ್‌ ಶಿಕ್ಷಣ ಮುಗಿಸಿದ ಬಳಿಕ ರೆಗ್ಯುಲರ್‌ ಪಯನೀಯರ್‌ ಸೇವೆ ಮಾಡುವಂತೆ ಅವರ ಹೆತ್ತವರು ಅವರಿಬ್ಬರನ್ನೂ ತುಂಬ ಪ್ರೋತ್ಸಾಹಿಸಿದ್ದಾರೆ. ಹೈಸ್ಕೂಲ್‌ ಶಿಕ್ಷಣ ಮುಗಿಸಿದ ಬಳಿಕ ಅವರಲ್ಲಿ ಒಬ್ಬಳು ಪಯನೀಯರ್‌ ಸೇವೆಯನ್ನು ಆರಂಭಿಸುತ್ತಾಳೆ, ಆದರೆ ಇನ್ನೊಬ್ಬಳು ಪೂರ್ಣ ಸಮಯದ ಐಹಿಕ ಕೆಲಸವನ್ನು ಆರಂಭಿಸುತ್ತಾಳೆ. ಅವರು ಬೇರೆ ಬೇರೆ ನಿರ್ಣಯವನ್ನು ಮಾಡಿದ್ದೇಕೆ? ಅವರ ಸ್ವಇಚ್ಛೆಯಿಂದಲೇ. ಕೊನೆಯಲ್ಲಿ ಅವರಲ್ಲಿ ಪ್ರತಿಯೊಬ್ಬರು ತಾವು ಬಯಸಿದ್ದನ್ನೇ ಮಾಡಿದರು. ಇದು ನಮ್ಮಲ್ಲಿ ಹೆಚ್ಚಿನವರ ವಿಷಯದಲ್ಲೂ ಸತ್ಯವಾಗಿದೆಯಲ್ಲವೆ? ನಾವು ದೇವರ ಸೇವೆಯಲ್ಲಿ ಏನನ್ನು ಮಾಡಲು ಬಯಸುತ್ತೇವೆ ಎಂಬುದರ ಕುರಿತು ಗಂಭೀರವಾಗಿ ಆಲೋಚಿಸಬೇಕಾಗಿದೆ. ಒಂದುವೇಳೆ ನಮ್ಮ ಸನ್ನಿವೇಶಗಳಲ್ಲಿ ಸ್ವಲ್ಪ ಹೊಂದಾಣಿಕೆಗಳನ್ನು ಮಾಡಬೇಕಾಗಿದ್ದರೂ ಅವನ್ನು ಮಾಡುವ ಮೂಲಕ ನಾವು ದೇವರ ಸೇವೆಯಲ್ಲಿ ಹೊಂದಿರುವ ಪಾಲನ್ನು ಹೆಚ್ಚಿಸಸಾಧ್ಯವಿದೆಯೊ?—2 ಕೊರಿಂ. 9:7.

9, 10. ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡುವ ಪ್ರಚೋದನೆಯು ನಮ್ಮಲ್ಲಿಲ್ಲವಾದರೆ ನಾವು ಏನು ಮಾಡಬೇಕು?

9 ಒಂದುವೇಳೆ ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡುವ ಪ್ರಚೋದನೆಯು ನಮ್ಮಲ್ಲಿಲ್ಲದೆ ಸಭೆಯಲ್ಲಿ ಏನೋ ಅಲ್ಪಸ್ವಲ್ಪವನ್ನು ಮಾಡಿಕೊಂಡು ಹೋಗುವ ಪ್ರವೃತ್ತಿ ಇರುವುದಾದರೆ ಆಗೇನು? ಫಿಲಿಪ್ಪಿಯದವರಿಗೆ ಬರೆದ ತನ್ನ ಪತ್ರದಲ್ಲಿ ಪೌಲನು ಹೇಳಿದ್ದು: “ತನ್ನ ಸುಸಂತೋಷದಿಂದ ನೀವು ಉದ್ದೇಶಿಸಿ ಕ್ರಿಯೆಗೈಯುವಂತೆ ನಿಮ್ಮಲ್ಲಿ ಕಾರ್ಯನಡಿಸುವಾತನು ದೇವರೇ ಆಗಿದ್ದಾನೆ.” ಹೌದು, ಯೆಹೋವನು ನಮ್ಮಲ್ಲಿ ಕಾರ್ಯನಡಿಸುತ್ತಾ ನಮ್ಮ ಇಚ್ಛೆ ಅಥವಾ ಬಯಕೆಗಳನ್ನು ಪ್ರಭಾವಿಸಬಲ್ಲನು.—ಫಿಲಿ. 2:13; 4:13.

10 ಹಾಗಾದರೆ ಯೆಹೋವನ ಚಿತ್ತವನ್ನು ಮಾಡುವ ಇಚ್ಛೆಯನ್ನು ನಮಗೆ ಕೊಡುವಂತೆ ನಾವು ಆತನನ್ನು ಕೇಳಿಕೊಳ್ಳಬೇಕಲ್ಲವೆ? ಹೌದು. ಪ್ರಾಚೀನ ಇಸ್ರಾಯೇಲಿನ ರಾಜ ದಾವೀದನು ಅದನ್ನೇ ಮಾಡಿದನು. “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಸು; ನೀನು ಒಪ್ಪುವ ದಾರಿಯನ್ನು ತೋರಿಸು. ನಿನ್ನ ಸತ್ಯಾನುಸಾರವಾಗಿ ನನ್ನನ್ನು ನಡಿಸುತ್ತಾ ಉಪದೇಶಿಸು; ನೀನೇ ನನ್ನನ್ನು ರಕ್ಷಿಸುವ ದೇವರು; ಹಗಲೆಲ್ಲಾ ನಿನ್ನನ್ನೇ ನಿರೀಕ್ಷಿಸುವವನಾಗಿದ್ದೇನೆ” ಎಂದವನು ಪ್ರಾರ್ಥಿಸಿದನು. (ಕೀರ್ತ. 25:4, 5) ಆತನಿಗೆ ಮೆಚ್ಚಿಕೆಯಾದದ್ದನ್ನೇ ಮಾಡುವ ಇಚ್ಛೆಯನ್ನು ನಮ್ಮಲ್ಲಿ ಹುಟ್ಟಿಸುವಂತೆ ನಾವು ಸಹ ಯೆಹೋವನಿಗೆ ಪ್ರಾರ್ಥಿಸಬಲ್ಲೆವು. ಯೆಹೋವ ದೇವರ ಮತ್ತು ಆತನ ಕುಮಾರನ ಅಭಿರುಚಿಗಳನ್ನು ನೆರವೇರಿಸುವುದರಲ್ಲಿ ನಾವು ಮಾಡುತ್ತಿರುವ ವಿಷಯಗಳು ಅವರಿಗೆ ಸಂತೋಷವನ್ನು ತರುತ್ತವೆ ಎಂಬುದರ ಕುರಿತು ಆಲೋಚಿಸುವಾಗ ನಮ್ಮ ಹೃದಯದಲ್ಲಿ ಅವರಿಗಾಗಿ ಗಣ್ಯತೆಯು ತುಂಬಿಕೊಳ್ಳುತ್ತದೆ. (ಮತ್ತಾ. 26:6-10; ಲೂಕ 21:1-4) ಈ ಕೃತಜ್ಞತಾಭಾವವು ಆಧ್ಯಾತ್ಮಿಕ ಅಭಿವೃದ್ಧಿಯನ್ನು ಮಾಡುವ ಇಚ್ಛೆಯನ್ನು ನಮ್ಮಲ್ಲಿ ಹುಟ್ಟಿಸಲು ಯೆಹೋವನನ್ನು ಬೇಡಿಕೊಳ್ಳುವಂತೆ ಪ್ರಚೋದಿಸಬಲ್ಲದು. ನಾವು ಬೆಳೆಸಿಕೊಳ್ಳಬೇಕಾದ ಮನೋಭಾವದ ಒಂದು ಉದಾಹರಣೆಯನ್ನು ಪ್ರವಾದಿ ಯೆಶಾಯನು ಒದಗಿಸಿದ್ದಾನೆ. “ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು” ಎಂಬ ಯೆಹೋವನ ಸ್ವರವು ಕೇಳಿಸಿದಾಗ ಪ್ರವಾದಿಯು, “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದು ಪ್ರತಿಕ್ರಿಯಿಸಿದನು.—ಯೆಶಾ. 6:8.

ಅಭಿವೃದ್ಧಿಯನ್ನು ಮಾಡಿ—ಹೇಗೆ?

11. (ಎ) ಸಂಘಟನೆಯಲ್ಲಿ ಸಹೋದರರು ಜವಾಬ್ದಾರಿಗಳನ್ನು ಎಟಕಿಸಿಕೊಳ್ಳುವ ಅಗತ್ಯವಿದೆ ಏಕೆ? (ಬಿ) ಒಬ್ಬ ಸಹೋದರನು ಹೇಗೆ ಸೇವಾ ಸುಯೋಗಗಳನ್ನು ಎಟಕಿಸಿಕೊಳ್ಳಬಲ್ಲನು?

11 ಲೋಕವ್ಯಾಪಕವಾಗಿ 2008ರ ಸೇವಾ ವರ್ಷದಲ್ಲಿ 2,89,678 ಮಂದಿ ದೀಕ್ಷಾಸ್ನಾನ ಪಡೆದುಕೊಂಡರು. ಮುಂದಾಳುತ್ವ ವಹಿಸಲು ಹೆಚ್ಚಿನ ಸಹೋದರರ ಅಗತ್ಯವಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ಅಗತ್ಯವನ್ನು ಪೂರೈಸಲು ಒಬ್ಬ ಸಹೋದರನು ಏನು ಮಾಡಬಲ್ಲನು? ಸರಳವಾಗಿ ಹೇಳಬೇಕಾದರೆ, ಬೈಬಲಿನಲ್ಲಿ ಶುಶ್ರೂಷಾ ಸೇವಕರಿಗಾಗಿ ಮತ್ತು ಹಿರಿಯರಿಗಾಗಿ ಇಡಲ್ಪಟ್ಟಿರುವ ಅರ್ಹತೆಗಳನ್ನು ಮುಟ್ಟಲು ಅವನು ಶ್ರಮಿಸಬೇಕು. (1 ತಿಮೊ. 3:1-10, 12, 13; ತೀತ 1:5-9) ಒಬ್ಬ ಸಹೋದರನು ಬೈಬಲಿನಲ್ಲಿ ಕೊಡಲ್ಪಟ್ಟಿರುವ ಇಂಥ ಆವಶ್ಯಕತೆಗಳನ್ನು ಮುಟ್ಟಲು ಹೇಗೆ ಶ್ರಮಿಸಸಾಧ್ಯವಿದೆ? ಶುಶ್ರೂಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ, ತನ್ನ ಸಭಾ ನೇಮಕಗಳನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುವ ಮೂಲಕ, ಕ್ರೈಸ್ತ ಕೂಟಗಳಲ್ಲಿ ಅವನು ಕೊಡುವ ಹೇಳಿಕೆಗಳ ಗುಣಮಟ್ಟವನ್ನು ಉತ್ತಮಗೊಳಿಸಲು ಪ್ರಯಾಸಪಡುವ ಮೂಲಕ ಮತ್ತು ಜೊತೆ ವಿಶ್ವಾಸಿಗಳಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸುವ ಮೂಲಕ ಮಾಡಸಾಧ್ಯವಿದೆ. ಹೀಗೆ ಅವನು ಸಭೆಯಲ್ಲಿ ಹೊಂದಿರುವ ಪಾತ್ರವನ್ನು ಅಮೂಲ್ಯವೆಂದೆಣಿಸುತ್ತಾನೆಂದು ತೋರಿಸುತ್ತಾನೆ.

12. ಯೌವನಸ್ಥರು ಸತ್ಯಕ್ಕಾಗಿ ತಮ್ಮ ಹುರುಪನ್ನು ಹೇಗೆ ತೋರಿಸಬಲ್ಲರು?

12 ಯುವ ಸಹೋದರರು, ಅದರಲ್ಲೂ ಮುಖ್ಯವಾಗಿ ಹದಿವಯಸ್ಕರು ಸಭೆಯಲ್ಲಿ ಅಭಿವೃದ್ಧಿಮಾಡಲು ಏನು ಮಾಡಬಲ್ಲರು? ಅವರು ಬೈಬಲಿನ ಜ್ಞಾನವನ್ನು ಪಡೆದುಕೊಳ್ಳುವ ಮೂಲಕ “ವಿವೇಕ ಮತ್ತು ಆಧ್ಯಾತ್ಮಿಕ ಗ್ರಹಿಕೆಯನ್ನು” ಹೆಚ್ಚಿಸಿಕೊಳ್ಳಲು ಪ್ರಯತ್ನಮಾಡಬಲ್ಲರು. (ಕೊಲೊ. 1:9) ದೇವರ ವಾಕ್ಯದ ಶ್ರದ್ಧೆಯುಳ್ಳ ವಿದ್ಯಾರ್ಥಿಗಳಾಗಿರುವುದು ಮತ್ತು ಕ್ರೈಸ್ತ ಕೂಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಈ ವಿಷಯದಲ್ಲಿ ಖಂಡಿತ ಹೆಚ್ಚಿನ ನೆರವನ್ನು ನೀಡುವುದು. ಯುವ ಪುರುಷರು ಪೂರ್ಣ ಸಮಯದ ಸೇವೆಯ ವಿವಿಧ ವೈಶಿಷ್ಟ್ಯಗಳ “ಚಟುವಟಿಕೆಗೆ ನಡೆಸುವಂಥ ಮಹಾ ದ್ವಾರ”ವನ್ನು ಪ್ರವೇಶಿಸಲು ಅರ್ಹರಾಗುವಂತೆ ಪ್ರಯತ್ನಿಸಬೇಕು. ಈ ಮೂಲಕವೂ ಅವರು ಹೆಚ್ಚಿನ ಸೇವಾ ಸುಯೋಗಗಳನ್ನು ಎಟಕಿಸಿಕೊಳ್ಳಬಲ್ಲರು. (1 ಕೊರಿಂ. 16:9) ಯೆಹೋವನ ಸೇವೆಯನ್ನು ತಮ್ಮ ಜೀವನವೃತ್ತಿಯಾಗಿ ಮಾಡಿಕೊಳ್ಳುವವರು ನಿಜವಾಗಿಯೂ ಸಂತೃಪ್ತಿಕರ ಬದುಕನ್ನು ಅನುಭವಿಸುತ್ತಾರೆ ಮತ್ತು ಇದರಿಂದ ಅವರಿಗೆ ಸಮೃದ್ಧವಾದ ಆಶೀರ್ವಾದಗಳು ಸಿಗುವವು.—ಪ್ರಸಂಗಿ 12:1 ಓದಿ.

13, 14. ಸಹೋದರಿಯರು ಸಭೆಯಲ್ಲಿ ಹೊಂದಿರುವ ಪಾತ್ರವನ್ನು ಮಾನ್ಯಮಾಡುತ್ತಾರೆ ಎಂಬುದನ್ನು ಯಾವ ವಿಧಗಳಲ್ಲಿ ತೋರಿಸಬಲ್ಲರು?

13 ಸಹೋದರಿಯರು ಸಹ ಕೀರ್ತನೆ 68:11ರ ನೆರವೇರಿಕೆಯಲ್ಲಿ ವೈಯಕ್ತಿಕವಾಗಿ ಪಾಲ್ಗೊಳ್ಳುವ ಸುಯೋಗವನ್ನು ಅಮೂಲ್ಯವೆಂದೆಣಿಸುತ್ತಾರೆ ಎಂಬುದನ್ನು ತೋರಿಸಸಾಧ್ಯವಿದೆ. ಅಲ್ಲಿ ನಾವು ಓದುವುದು: “[ಯೆಹೋವನು] ನುಡಿದನು; ಶುಭವಾರ್ತೆಯನ್ನು ಪ್ರಸಿದ್ಧಪಡಿಸುವ ಸ್ತ್ರೀಸಮೂಹವು ಎಷ್ಟೋ ದೊಡ್ಡದು.” ಸಹೋದರಿಯರು ಸಭೆಯಲ್ಲಿ ತಮಗಿರುವ ಪಾತ್ರಕ್ಕಾಗಿ ಗಣ್ಯತೆಯನ್ನು ವ್ಯಕ್ತಪಡಿಸಬಲ್ಲ ಗಮನಾರ್ಹ ವಿಧಗಳಲ್ಲಿ ಒಂದು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಪಾಲ್ಗೊಳ್ಳುವುದೇ ಆಗಿದೆ. (ಮತ್ತಾ. 28:19, 20) ಆದುದರಿಂದ ಶುಶ್ರೂಷೆಯಲ್ಲಿ ಪೂರ್ಣವಾಗಿ ಭಾಗವಹಿಸುವ ಮೂಲಕ ಮತ್ತು ಆ ಕೆಲಸಕ್ಕಾಗಿ ಸಿದ್ಧಮನಸ್ಸಿನಿಂದ ತ್ಯಾಗಗಳನ್ನು ಮಾಡುವ ಮೂಲಕ ಸಹೋದರಿಯರು ಸಭೆಯಲ್ಲಿ ಹೊಂದಿರುವ ಪಾತ್ರವನ್ನು ಗಣ್ಯಮಾಡುತ್ತಾರೆ ಎಂಬುದನ್ನು ರುಜುಪಡಿಸುತ್ತಾರೆ.

14 ತೀತನಿಗೆ ಬರೆಯುತ್ತಾ ಪೌಲನು ಹೇಳಿದ್ದು: “ವೃದ್ಧೆಯರು ಪೂಜ್ಯಭಾವದ ನಡವಳಿಕೆಯವರಾಗಿರಲಿ; . . . ಒಳ್ಳೇದನ್ನು ಬೋಧಿಸುವವರಾಗಿರಲಿ. ಹೀಗೆ ಅವರು, ದೇವರ ವಾಕ್ಯವು ದೂಷಣೆಗೆ ಗುರಿಯಾಗದಂತೆ ಯುವ ಸ್ತ್ರೀಯರು ತಮ್ಮ ಗಂಡಂದಿರನ್ನು ಪ್ರೀತಿಸುವವರೂ ತಮ್ಮ ಮಕ್ಕಳನ್ನು ಪ್ರೀತಿಸುವವರೂ ಸ್ವಸ್ಥಮನಸ್ಸುಳ್ಳವರೂ ನೈತಿಕ ಶುದ್ಧತೆಯುಳ್ಳವರೂ ಮನೆಯಲ್ಲಿ ಕೆಲಸಮಾಡುವವರೂ ಒಳ್ಳೆಯವರೂ ತಮ್ಮ ಗಂಡಂದಿರಿಗೆ ತಮ್ಮನ್ನು ಅಧೀನಪಡಿಸಿಕೊಳ್ಳುವವರೂ ಆಗಿರುವಂತೆ ಅವರಿಗೆ ಪ್ರಜ್ಞೆಹುಟ್ಟಿಸಲಿ.” (ತೀತ 2:3-5) ನಿಜವಾಗಿಯೂ ಪ್ರೌಢ ಸಹೋದರಿಯರು ಸಭೆಯ ಮೇಲೆ ಒಳ್ಳೆಯ ಪರಿಣಾಮ ಬೀರಬಲ್ಲರು. ಮುಂದಾಳುತ್ವ ವಹಿಸುವ ಸಹೋದರರಿಗೆ ಗೌರವವನ್ನು ಕೊಡುವ ಮೂಲಕ ಮತ್ತು ಉಡುಪು, ಹೊರತೋರಿಕೆ, ಮನೋರಂಜನೆಯಂಥ ವಿಷಯಗಳಲ್ಲಿ ವಿವೇಕಯುತ ನಿರ್ಣಯಗಳನ್ನು ಮಾಡುವ ಮೂಲಕ ಅವರು ಇತರರಿಗೆ ಒಳ್ಳೆಯ ಮಾದರಿಯನ್ನಿಡುತ್ತಾರೆ ಮತ್ತು ಸಭೆಯಲ್ಲಿ ತಾವು ವಹಿಸುವ ಪಾತ್ರಕ್ಕೆ ತುಂಬ ಗೌರವವನ್ನು ತೋರಿಸುತ್ತಾರೆ.

15. ಒಂಟಿತನವನ್ನು ನಿಭಾಯಿಸಲು ಒಬ್ಬಾಕೆ ಅವಿವಾಹಿತ ಸಹೋದರಿ ಏನು ಮಾಡಸಾಧ್ಯವಿದೆ?

15 ಕೆಲವೊಮ್ಮೆ ಒಬ್ಬ ಅವಿವಾಹಿತ ಸಹೋದರಿಗೆ ಸಭೆಯಲ್ಲಿ ತನಗಿರುವ ಪಾತ್ರವನ್ನು ಅರಿತುಕೊಳ್ಳಲು ಕಷ್ಟವಾಗಬಹುದು. ಇದನ್ನು ಅನುಭವಿಸಿದ ಒಬ್ಬಾಕೆ ಸಹೋದರಿ ಹೇಳಿದ್ದು: “ಅವಿವಾಹಿತ ಜೀವನವು ಕೆಲವೊಮ್ಮೆ ಒಂಟಿತನದ ಭಾವನೆಯನ್ನು ಕೊಡಸಾಧ್ಯವಿದೆ.” ಈ ಸನ್ನಿವೇಶವನ್ನು ಅವಳು ಹೇಗೆ ನಿಭಾಯಿಸುತ್ತಾಳೆ ಎಂದು ಕೇಳಿದಾಗ, “ಪ್ರಾರ್ಥನೆ ಮತ್ತು ಅಧ್ಯಯನವು ನನಗಿರುವ ಪಾತ್ರವೇನೆಂದು ಪುನಃ ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತವೆ. ಯೆಹೋವನು ನನ್ನನ್ನು ಹೇಗೆ ವೀಕ್ಷಿಸುತ್ತಾನೆ ಎಂಬುದರ ಕುರಿತು ನಾನು ಅಧ್ಯಯನ ಮಾಡುತ್ತೇನೆ. ಅನಂತರ ಸಭೆಯಲ್ಲಿರುವ ಇತರರಿಗೆ ಸಹಾಯಮಾಡಲು ಹೆಚ್ಚಿನ ಪ್ರಯತ್ನವನ್ನು ಹಾಕುತ್ತೇನೆ. ಇದು ನನ್ನ ಕುರಿತಾಗಿಯೇ ಚಿಂತಿಸುತ್ತಿರುವುದನ್ನು ನಿಲ್ಲಿಸಲು ಸಹಾಯಮಾಡುತ್ತದೆ” ಎಂದವಳು ಹೇಳಿದಳು. ಕೀರ್ತನೆ 32:8ಕ್ಕನುಸಾರ ಯೆಹೋವನು ದಾವೀದನಿಗೆ ಹೇಳಿದ್ದು: “ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವೆನು.” ಹೌದು, ಯೆಹೋವನು ತನ್ನ ಎಲ್ಲ ಸೇವಕರಲ್ಲಿ ವೈಯಕ್ತಿಕ ಆಸಕ್ತಿ ವಹಿಸುತ್ತಾನೆ ಮತ್ತು ಸಭೆಯಲ್ಲಿ ಎಲ್ಲರೂ ಅವರವರ ಪಾತ್ರವನ್ನು ಕಂಡುಕೊಳ್ಳುವಂತೆ ಸಹಾಯಮಾಡುವನು. ಇದರಲ್ಲಿ ಅವಿವಾಹಿತ ಸಹೋದರಿಯರೂ ಒಳಗೂಡಿದ್ದಾರೆ.

ನಿಮ್ಮ ಪಾತ್ರವನ್ನು ಒಳ್ಳೇದಾಗಿ ನಿರ್ವಹಿಸುತ್ತಾ ಇರಿ!

16, 17. (ಎ) ತನ್ನ ಸಂಘಟನೆಯ ಭಾಗವಾಗಿರುವಂತೆ ಯೆಹೋವನು ಕೊಡುವ ಆಮಂತ್ರಣವನ್ನು ಸ್ವೀಕರಿಸುವುದು ನಾವು ಮಾಡಬಲ್ಲ ಅತ್ಯುತ್ತಮ ನಿರ್ಣಯವಾಗಿದೆ ಏಕೆ? (ಬಿ) ಯೆಹೋವನ ಸಂಘಟನೆಯಲ್ಲಿ ನಮಗಿರುವ ಪಾತ್ರವನ್ನು ನಾವು ಹೇಗೆ ನಿರ್ವಹಿಸುತ್ತಾ ಇರಬಲ್ಲೆವು?

16 ತನ್ನ ಎಲ್ಲ ಸೇವಕರು ತನ್ನೊಂದಿಗೆ ಸುಸಂಬಂಧಕ್ಕೆ ಬರುವಂತೆ ಯೆಹೋವನು ಪ್ರೀತಿಯಿಂದ ಸೆಳೆದಿದ್ದಾನೆ. ಯೇಸು ಹೇಳಿದ್ದು: “ನನ್ನನ್ನು ಕಳುಹಿಸಿದ ತಂದೆಯು ಸೆಳೆದ ಹೊರತು ಯಾರೊಬ್ಬನೂ ನನ್ನ ಬಳಿಗೆ ಬರಲಾರನು.” (ಯೋಹಾ. 6:44) ಲೋಕದಲ್ಲಿರುವ ಕೋಟ್ಯಾನುಕೋಟಿ ಜನರಲ್ಲಿ ನಮಗೆ ತನ್ನ ಸಭೆಯ ಭಾಗವಾಗಿರುವಂತೆ ಯೆಹೋವನು ಇಂದು ವೈಯಕ್ತಿಕ ಆಮಂತ್ರಣವನ್ನು ಕೊಟ್ಟಿದ್ದಾನೆ. ಈ ಆಮಂತ್ರಣವನ್ನು ಸ್ವೀಕರಿಸಿದ್ದು ನಾವು ಮಾಡಿರುವವುಗಳಲ್ಲೇ ಅತಿ ಉತ್ತಮ ನಿರ್ಣಯವಾಗಿದೆ. ಇದು ನಮ್ಮ ಜೀವನಕ್ಕೆ ಉದ್ದೇಶವನ್ನು ಕೊಟ್ಟಿದೆ ಮತ್ತು ಜೀವಿಸುವುದನ್ನು ಸಾರ್ಥಕವಾಗಿ ಮಾಡಿದೆ. ಸಭೆಯಲ್ಲಿ ನಮಗೆ ಒಂದು ಪಾತ್ರವಿದೆ ಎಂಬುದನ್ನು ತಿಳಿದುಕೊಳ್ಳುವುದರಿಂದ ನಮಗಾಗುವ ಆನಂದ ಮತ್ತು ಸಂತೃಪ್ತಿ ಅದೆಷ್ಟು ಅಪಾರ!

17 “ಯೆಹೋವನೇ, ನಿನ್ನ ನಿವಾಸವು ನನಗೆ ಎಷ್ಟೋ ಪ್ರಿಯ” ಎಂದು ಕೀರ್ತನೆಗಾರನು ಹೇಳಿದನು. “ನನ್ನ ಪಾದವು ಸಮಭೂಮಿಯಲ್ಲಿ ನಿಂತಿದೆ; ಕೂಡಿದ ಸಭೆಗಳಲ್ಲಿ ಯೆಹೋವನನ್ನು ಕೊಂಡಾಡುವೆನು” ಎಂದು ಸಹ ಅವನು ಹಾಡಿದನು. (ಕೀರ್ತ. 26:8, 12) ಸತ್ಯ ದೇವರು ತನ್ನ ಸಂಘಟನೆಯಲ್ಲಿ ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದು ಪಾತ್ರವನ್ನು ಕೊಟ್ಟಿದ್ದಾನೆ. ದೇವಪ್ರಭುತ್ವಾತ್ಮಕ ಮಾರ್ಗದರ್ಶನವನ್ನು ಪಾಲಿಸುತ್ತಾ ಇರುವ ಮೂಲಕ ಮತ್ತು ದೇವರ ಸೇವೆಯಲ್ಲಿ ಕಾರ್ಯನಿರತರಾಗಿ ಉಳಿಯುವ ಮೂಲಕ ನಾವು ಯೆಹೋವನ ಏರ್ಪಾಡಿನಲ್ಲಿ ನಮಗಿರುವ ಅಮೂಲ್ಯ ಪಾತ್ರವನ್ನು ನಿರ್ವಹಿಸುತ್ತಾ ಇರಬಲ್ಲೆವು.

ನಿಮಗೆ ಜ್ಞಾಪಕವಿದೆಯೊ?

• ಕ್ರೈಸ್ತರೆಲ್ಲರಿಗೂ ಸಭೆಯಲ್ಲಿ ಒಂದು ಪಾತ್ರವಿದೆ ಎಂಬ ತೀರ್ಮಾನಕ್ಕೆ ಬರುವುದು ಏಕೆ ತರ್ಕಸಮ್ಮತ?

• ದೇವರ ಸಂಘಟನೆಯಲ್ಲಿ ನಮಗಿರುವ ಪಾತ್ರವನ್ನು ಮಾನ್ಯಮಾಡುತ್ತೇವೆ ಎಂಬುದನ್ನು ನಾವು ಹೇಗೆ ತೋರಿಸುತ್ತೇವೆ?

• ಸಭೆಯಲ್ಲಿ ನಮಗಿರುವ ಪಾತ್ರದ ಮೇಲೆ ಯಾವ ಅಂಶಗಳು ಪರಿಣಾಮ ಬೀರಬಲ್ಲವು?

• ಕ್ರೈಸ್ತ ಯೌವನಸ್ಥರು ಮತ್ತು ವಯಸ್ಕರು ದೇವರ ಏರ್ಪಾಡಿನಲ್ಲಿ ತಮಗಿರುವ ಪಾತ್ರವನ್ನು ಅಮೂಲ್ಯವೆಂದೆಣಿಸುತ್ತಾರೆ ಎಂಬುದನ್ನು ಹೇಗೆ ತೋರಿಸಬಲ್ಲರು?

[ಅಧ್ಯಯನ ಪ್ರಶ್ನೆಗಳು]

[ಪುಟ 16ರಲ್ಲಿರುವ ಚಿತ್ರಗಳು]

ಸಹೋದರರು ಸಭೆಯಲ್ಲಿ ಸುಯೋಗಗಳನ್ನು ಹೇಗೆ ಎಟಕಿಸಿಕೊಳ್ಳಬಲ್ಲರು?

[ಪುಟ 17ರಲ್ಲಿರುವ ಚಿತ್ರ]

ಸಹೋದರಿಯರು ಸಭೆಯಲ್ಲಿ ತಮಗಿರುವ ಪಾತ್ರವನ್ನು ಅಮೂಲ್ಯವೆಂದೆಣಿಸುತ್ತಾರೆ ಎಂಬುದನ್ನು ಹೇಗೆ ತೋರಿಸಬಲ್ಲರು?