ಎಂದಿಗೂ ವಿಫಲವಾಗದ ಪ್ರೀತಿಯನ್ನು ಬೆಳೆಸಿಕೊಳ್ಳಿರಿ
ಎಂದಿಗೂ ವಿಫಲವಾಗದ ಪ್ರೀತಿಯನ್ನು ಬೆಳೆಸಿಕೊಳ್ಳಿರಿ
‘ಪ್ರೀತಿಯು ಎಲ್ಲವನ್ನೂ ತಾಳಿಕೊಳ್ಳುತ್ತದೆ. ಪ್ರೀತಿಯು ಎಂದಿಗೂ ವಿಫಲವಾಗುವುದಿಲ್ಲ.’ —1 ಕೊರಿಂ. 13:7, 8.
1. (ಎ) ಪ್ರೀತಿಯನ್ನು ಹೆಚ್ಚಾಗಿ ಹೇಗೆ ಪ್ರಸ್ತುತಪಡಿಸಲಾಗುತ್ತದೆ? (ಬಿ) ಅನೇಕರು ಯಾರ ಮೇಲೆ ಅಥವಾ ಯಾವುದರ ಮೇಲೆ ತಮ್ಮ ಪ್ರೀತಿಯನ್ನು ಕೇಂದ್ರೀಕರಿಸುತ್ತಾರೆ?
ಪ್ರೀತಿ ಪ್ರೇಮದ ಕುರಿತ ಮಾತು ಎಲ್ಲೆಡೆಯೂ ಹಬ್ಬಿಕೊಂಡಿದೆ. ಈ ಗುಣವನ್ನು ಪ್ರೇಮ ಗೀತೆಗಳಲ್ಲಿ ಹಾಡಿಹೊಗಳಲಾಗುತ್ತದೆ. ಪ್ರೀತಿ ಮಾನವನಿಗಿರುವ ಮೂಲಭೂತ ಅಗತ್ಯ. ಆದರೆ ಪುಸ್ತಕಗಳಲ್ಲಿ ಮತ್ತು ಚಲನಚಿತ್ರಗಳಲ್ಲಿ ಇದು ಹೆಚ್ಚಾಗಿ ಕಾಲ್ಪನಿಕ ಪ್ರೇಮ ಕಥೆಗಳಾಗಿ ರಚಿಸಲ್ಪಟ್ಟಿದೆ. ಇಂಥ ಪುಸ್ತಕಗಳು ಮತ್ತು ಚಲನಚಿತ್ರಗಳು ಯಥೇಚ್ಛವಾಗಿ ಮಾರಾಟವಾಗುತ್ತವೆ. ಆದರೆ ದೇವರ ಮತ್ತು ನೆರೆಯವರ ಮೇಲಣ ಪ್ರೀತಿಯಾದರೋ ತುಂಬ ಕಡಿಮೆಯಾಗಿದೆ. ಈ ಕಡೇ ದಿವಸಗಳ ಕುರಿತು ಬೈಬಲ್ ಏನನ್ನು ಮುಂತಿಳಿಸಿತ್ತೋ ಅದನ್ನೇ ಇಂದು ನಾವು ನೋಡುತ್ತಿದ್ದೇವೆ. ಅದೇನೆಂದರೆ ಜನರು “ಸ್ವಪ್ರೇಮಿಗಳೂ ಹಣಪ್ರೇಮಿಗಳೂ . . . ದೇವರನ್ನು ಪ್ರೀತಿಸುವ ಬದಲು ಭೋಗವನ್ನು ಪ್ರೀತಿಸುವವರೂ” ಆಗಿದ್ದಾರೆ.—2 ತಿಮೊ. 3:1-5.
2. ದಾರಿತಪ್ಪಿಸುವ ಪ್ರೀತಿಯ ಕುರಿತು ಬೈಬಲ್ ಯಾವ ಎಚ್ಚರಿಕೆಯನ್ನು ಕೊಡುತ್ತದೆ?
2 ಮಾನವರಲ್ಲಿ ಪ್ರೀತಿ ತೋರಿಸುವ ಸಾಮರ್ಥ್ಯ ಇದೆ. ಆದರೆ ದಾರಿತಪ್ಪಿಸುವ ಪ್ರೀತಿಯ ಕುರಿತು ದೇವರ ವಾಕ್ಯವು ಎಚ್ಚರಿಕೆ ನೀಡುತ್ತದೆ. ಇಂಥ ಪ್ರೀತಿ ಒಬ್ಬನ ಹೃದಯದಲ್ಲಿ ಬೇರೂರುವಾಗ ಏನಾಗುತ್ತದೆ ಎಂಬುದನ್ನು ಸಹ ಬೈಬಲ್ ವಿವರಿಸುತ್ತದೆ. (1 ತಿಮೊ. 6:9, 10) ಅಪೊಸ್ತಲ ಪೌಲನು ದೇಮನ ಕುರಿತು ಏನು ಬರೆದನೆಂಬುದು ನಿಮಗೆ ಜ್ಞಾಪಕವಿದೆಯೊ? ಅವನು ಪೌಲನೊಂದಿಗೆ ಸಹವಾಸ ಮಾಡುತ್ತಿದ್ದರೂ ಲೋಕದಲ್ಲಿರುವ ವಿಷಯವನ್ನು ಪ್ರೀತಿಸಲಾರಂಭಿಸಿ ಅದರ ಹಿಂದೆ ಹೋದನು. (2 ತಿಮೊ. 4:10) ಅಪೊಸ್ತಲ ಯೋಹಾನನು ಸಹ ಇದೇ ಅಪಾಯದ ಕುರಿತು ಕ್ರೈಸ್ತರನ್ನು ಎಚ್ಚರಿಸಿದನು. (1 ಯೋಹಾನ 2:15, 16 ಓದಿ.) ನಾವು ಲೋಕವನ್ನು ಮತ್ತು ಅದರಲ್ಲಿರುವ ಅಲ್ಪಕಾಲಿಕ ವಿಷಯಗಳನ್ನೂ ವಿಧಾನಗಳನ್ನೂ ಪ್ರೀತಿಸುವುದಾದರೆ ದೇವರ ಮೇಲಣ ಮತ್ತು ಆತನಿಂದ ಉಂಟಾಗುವ ವಿಷಯಗಳ ಮೇಲಣ ಪ್ರೀತಿ ನಮ್ಮಲ್ಲಿಲ್ಲ.
3. ನಾವು ಯಾವ ಪಂಥಾಹ್ವಾನವನ್ನು ಎದುರಿಸುತ್ತೇವೆ, ಮತ್ತು ಇದು ಯಾವ ಪ್ರಶ್ನೆಗಳನ್ನು ಎಬ್ಬಿಸುತ್ತದೆ?
3 ನಾವು ಈ ಲೋಕದಲ್ಲಿ ಜೀವಿಸುತ್ತಿರುವುದಾದರೂ ಈ ಲೋಕದ ಭಾಗವಾಗಿಲ್ಲ. ಆದುದರಿಂದ ಪ್ರೀತಿಯ ವಿಷಯದಲ್ಲಿ ಈ ಲೋಕಕ್ಕಿರುವ ತಿರುಚಲ್ಪಟ್ಟ ದೃಷ್ಟಿಕೋನದಿಂದ ದೂರವಿರುವ ಪಂಥಾಹ್ವಾನವನ್ನು ನಾವು ಎದುರಿಸುತ್ತೇವೆ. ದಾರಿತಪ್ಪಿಸುವ ಅಥವಾ ವಿಕೃತ ಪ್ರೀತಿಯ ಪಾಶಕ್ಕೆ ನಾವು ಸಿಕ್ಕಿಬೀಳದಂತೆ ಜಾಗ್ರತೆ ವಹಿಸುವುದು ಪ್ರಾಮುಖ್ಯ. ಹಾಗಾದರೆ ನಾವು ಯಾರ ಮೇಲೆ ತತ್ತ್ವಾಧಾರಿತ ಪ್ರೀತಿಯನ್ನು ಬೆಳೆಸಿಕೊಂಡು ಅದನ್ನು ಕ್ರಿಯೆಗಳ ಮೂಲಕ ತೋರಿಸಬೇಕು? ಎಲ್ಲವನ್ನೂ ತಾಳಿಕೊಳ್ಳುವ ಮತ್ತು ಎಂದಿಗೂ ವಿಫಲವಾಗದ ಪ್ರೀತಿಯನ್ನು ಬೆಳೆಸಿಕೊಳ್ಳಲು ಯಾವ ಒದಗಿಸುವಿಕೆಗಳು ನಮಗೆ ಸಹಾಯಮಾಡುತ್ತವೆ? ಇಂಥ ಮಾರ್ಗಕ್ರಮವು ಇಂದು ನಮಗೆ ಯಾವ ಪ್ರಯೋಜನ ತರುತ್ತದೆ ಮತ್ತು ನಮ್ಮ ಭವಿಷ್ಯತ್ತಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ನಮಗೆ ದೇವರ ದೃಷ್ಟಿಕೋನದಿಂದ ಉತ್ತರಗಳು ಬೇಕಾಗಿವೆ. ಆಗ ನಾವು ಅದಕ್ಕನುಸಾರ ಮಾರ್ಗದರ್ಶಿಸಲ್ಪಡುವೆವು.
ಯೆಹೋವನ ಮೇಲೆ ಪ್ರೀತಿಯನ್ನು ಬೆಳೆಸಿಕೊಳ್ಳುವುದು
4. ದೇವರ ಮೇಲಿರುವ ನಮ್ಮ ಪ್ರೀತಿ ಹೇಗೆ ಬೆಳೆಯುತ್ತದೆ?
4 ಬೆಳೆಸು ಎಂಬುದು ಯಾವುದೋ ಒಂದು ವಸ್ತುವಿನ ಬೆಳವಣಿಗೆಗಾಗಿ ಸಿದ್ಧತೆಯನ್ನು ಮಾಡಿ ಅದು ಬೇಗ ಬೆಳೆಯುವಂತೆ ಮಾಡುವುದು ಎಂಬರ್ಥವನ್ನು ಕೊಡಬಲ್ಲದು. ನೆಲವನ್ನು ಸಿದ್ಧಪಡಿಸಿ ಬೀಜವನ್ನು ಬಿತ್ತಲು ಕಷ್ಟಪಟ್ಟು ಕೆಲಸಮಾಡುವ ಒಬ್ಬ ರೈತನನ್ನು ಚಿತ್ರಿಸಿಕೊಳ್ಳಿ. ಬೀಜಗಳು ಬೆಳೆಯಬೇಕೆಂಬುದೇ ಅವನ ಆಶೆ. (ಇಬ್ರಿ. 6:7) ತದ್ರೀತಿಯಲ್ಲಿ ದೇವರ ಮೇಲಿರುವ ನಮ್ಮ ಪ್ರೀತಿ ಸಹ ಬೆಳೆಯಬೇಕು. ಇದು ಬೆಳೆಯಬೇಕಾದರೆ ಏನು ಆವಶ್ಯಕ? ರಾಜ್ಯ ಸತ್ಯದ ಬೀಜವು ಬಿತ್ತಲ್ಪಟ್ಟ ನಮ್ಮ ಹೃದಯದ ಒಳ್ಳೇ ನೆಲದಂಥ ಸ್ಥಿತಿಯನ್ನು ನಾವು ಉತ್ತಮವಾಗಿ ಕಾಪಾಡಿಕೊಳ್ಳಬೇಕು. ಇದನ್ನು ನಾವು ದೇವರ ವಾಕ್ಯದ ಶ್ರದ್ಧಾಪೂರ್ವಕ ಅಧ್ಯಯನದ ಮೂಲಕ ಮಾಡಬಲ್ಲೆವು. ಹೀಗೆ ದೇವರ ಕುರಿತಾದ ಜ್ಞಾನವು ನಮ್ಮಲ್ಲಿ ಹೆಚ್ಚಾಗುವುದು. (ಕೊಲೊ. 1:10) ಕ್ರಮವಾಗಿ ಸಭಾ ಕೂಟಗಳಿಗೆ ಹಾಜರಾಗಿ ಅವುಗಳಲ್ಲಿ ಪಾಲ್ಗೊಳ್ಳುವುದು ಸಹ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಹಾಯಮಾಡುವುದು. ನಾವು ಆಳವಾದ ಜ್ಞಾನವನ್ನು ಪಡೆದುಕೊಳ್ಳಲಿಕ್ಕಾಗಿ ವೈಯಕ್ತಿಕವಾಗಿ ಸತತ ಪ್ರಯತ್ನವನ್ನು ಮಾಡುತ್ತಿದ್ದೇವೊ?—ಜ್ಞಾನೋ. 2:1-7.
5. (ಎ) ನಾವು ಯೆಹೋವನ ಪ್ರಾಮುಖ್ಯ ಗುಣಗಳ ಕುರಿತು ಹೇಗೆ ಕಲಿಯಬಲ್ಲೆವು? (ಬಿ) ದೇವರ ನ್ಯಾಯ, ವಿವೇಕ ಮತ್ತು ಶಕ್ತಿಯ ಕುರಿತು ನೀವು ಏನು ಹೇಳಬಲ್ಲಿರಿ?
5 ಯೆಹೋವನು ತನ್ನ ವಾಕ್ಯದ ಮೂಲಕ ತನ್ನ ವ್ಯಕ್ತಿತ್ವವನ್ನು ಪ್ರಕಟಪಡಿಸುತ್ತಾನೆ. ಶಾಸ್ತ್ರಗ್ರಂಥವನ್ನು ಅಧ್ಯಯನ ಮಾಡುವ ಮೂಲಕ ಮತ್ತು ಯೆಹೋವನ ಕುರಿತು ಪ್ರಗತಿಪರವಾಗಿ ಜ್ಞಾನವನ್ನು ಪಡೆದುಕೊಳ್ಳುವ ಮೂಲಕ ನಾವು ಆತನ ಗುಣಗಳಾದ ನ್ಯಾಯ, ಶಕ್ತಿ, ವಿವೇಕ ಮತ್ತು ಪ್ರೀತಿಗಾಗಿ ಗಣ್ಯತೆಯನ್ನು ಹೆಚ್ಚಿಸಿಕೊಳ್ಳಬಲ್ಲೆವು. ಇವುಗಳಲ್ಲಿ ಪ್ರೀತಿಯೇ ಅತ್ಯುತ್ಕೃಷ್ಟ. ಯೆಹೋವನು ನಡಿಸುವದೆಲ್ಲಾ ನ್ಯಾಯ ಮತ್ತು ಆತನ ನಿಯಮವೂ ಲೋಪವಿಲ್ಲದ್ದು. (ಧರ್ಮೋ. 32:4; ಕೀರ್ತ. 19:7) ನಾವು ಯೆಹೋವನ ಎಲ್ಲ ಸೃಷ್ಟಿಕಾರ್ಯಗಳನ್ನು ನೋಡಿ ಆತನಲ್ಲಿರುವ ಉತ್ಕೃಷ್ಟ ವಿವೇಕದಿಂದಾಗಿ ಭಯಚಕಿತರಾಗಬಲ್ಲೆವು. (ಕೀರ್ತ. 104:24) ಯೆಹೋವನು ಅಪರಿಮಿತ ಬಲ ಮತ್ತು ಶಕ್ತಿಯ ಮೂಲನೂ ಆಗಿದ್ದಾನೆ ಎಂಬುದಕ್ಕೆ ವಿಶ್ವವು ಸಹ ರುಜುವಾತನ್ನು ನೀಡುತ್ತದೆ.—ಯೆಶಾ. 40:26.
6. ನಮ್ಮ ಕಡೆಗೆ ದೇವರ ಪ್ರೀತಿ ಹೇಗೆ ವ್ಯಕ್ತಪಡಿಸಲ್ಪಟ್ಟಿತು, ಮತ್ತು ಇದು ನಿಮ್ಮ ಮೇಲೆ ಹೇಗೆ ಪ್ರಭಾವ ಬೀರಿದೆ?
6 ದೇವರ ಪ್ರಧಾನ ಗುಣವಾದ ಪ್ರೀತಿಯ ಕುರಿತು ಏನು ಹೇಳಬಲ್ಲೆವು? ಇದು ಉದಾರಭಾವದ್ದೂ ನಮ್ಮೆಲ್ಲರ ಮೇಲೆ ಪ್ರಭಾವ ಬೀರುವಂಥದ್ದೂ ಆಗಿದೆ. ಮಾನವಕುಲದ ರಕ್ಷಣೆಗಾಗಿ ವಿಮೋಚನಾ ಮೌಲ್ಯ ಯಜ್ಞವನ್ನು ಒದಗಿಸುವ ಮೂಲಕ ಆತನು ಈ ಪ್ರೀತಿಯನ್ನು ತೋರಿಸಿದನು. (ರೋಮನ್ನರಿಗೆ 5:8 ಓದಿ.) ಈ ಏರ್ಪಾಡು ಇಡೀ ಮಾನವಕುಲಕ್ಕೆ ಲಭ್ಯವಿದೆ. ಆದರೆ ದೇವರ ಪ್ರೀತಿಗೆ ಸ್ಪಂದಿಸಿ ಆತನ ಪುತ್ರನಲ್ಲಿ ನಂಬಿಕೆಯಿಡುವವರು ಮಾತ್ರ ಇದರಿಂದ ಪ್ರಯೋಜನ ಪಡೆಯಬಲ್ಲರು. (ಯೋಹಾ. 3:16, 36) ದೇವರು ನಮ್ಮ ಪಾಪಗಳಿಗಾಗಿ ಯೇಸುವನ್ನು ಪಾಪನಿವಾರಣಾರ್ಥಕ ಯಜ್ಞವಾಗಿ ಅರ್ಪಿಸಿದ ವಿಷಯವು ದೇವರ ಕಡೆಗೆ ನಮ್ಮ ಪ್ರೀತಿ ಉಕ್ಕುವಂತೆ ಮಾಡಬೇಕು.
7, 8. (ಎ) ದೇವರ ಮೇಲಣ ಪ್ರೀತಿಯನ್ನು ತೋರಿಸಲು ನಮ್ಮಿಂದ ಏನು ಅಪೇಕ್ಷಿಸಲ್ಪಡುತ್ತದೆ? (ಬಿ) ಯಾವುದರ ಹೊರತಾಗಿಯೂ ದೇವಜನರು ಆತನ ಆಜ್ಞೆಗಳನ್ನು ಕೈಕೊಂಡು ನಡೆಯುತ್ತಾರೆ?
7 ದೇವರು ನಮಗೋಸ್ಕರ ಮಾಡಿರುವ ಎಲ್ಲ ವಿಷಯಗಳಿಗೆ ಪ್ರತಿಕ್ರಿಯಿಸುತ್ತಾ ದೇವರ ಮೇಲಣ ಪ್ರೀತಿಯನ್ನು ಹೇಗೆ ತೋರಿಸಬಲ್ಲೆವು? ದೇವರ ಪ್ರೇರಿತ ಮಾತುಗಳೇ ಉತ್ತರ ಕೊಡುತ್ತವೆ: “ದೇವರ ಮೇಲಣ ಪ್ರೀತಿ ಏನೆಂದರೆ ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ; ಆದರೂ ಆತನ ಆಜ್ಞೆಗಳು ಭಾರವಾದವುಗಳಲ್ಲ.” (1 ಯೋಹಾ. 5:3) ಹೌದು, ಯೆಹೋವ ದೇವರ ಮೇಲಣ ಪ್ರೀತಿ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವಂತೆ ನಮ್ಮನ್ನು ಪ್ರಚೋದಿಸುತ್ತದೆ. ನಾವು ಆತನ ನಾಮ ಮತ್ತು ರಾಜ್ಯದ ಕುರಿತು ಸಾಕ್ಷಿಕೊಡಲು ಇದು ಒಂದು ಕಾರಣವಾಗಿದೆ. ಇತರರಿಗೆ ಪ್ರಯೋಜನ ತರುವ ಈ ಸಾಕ್ಷಿಕಾರ್ಯವನ್ನು ತುಂಬುಹೃದಯದಿಂದ ಮಾಡುವುದು ನಾವು ದೇವರ ಆಜ್ಞೆಗಳನ್ನು ಶುದ್ಧವಾದ ಹೇತುವಿನಿಂದ ಕೈಕೊಂಡು ನಡೆಯುತ್ತೇವೆ ಎಂಬುದಕ್ಕೆ ಸಾಕ್ಷ್ಯವಾಗಿದೆ.—ಮತ್ತಾ. 12:34.
8 ಭೂಸುತ್ತಲೂ ಇರುವ ನಮ್ಮ ಸಹೋದರರು ಜನರ ನಿರಾಸಕ್ತಿ ಮತ್ತು ರಾಜ್ಯ ಸಂದೇಶದ ನೇರ ತಿರಸ್ಕಾರದ ಹೊರತೂ ದೇವರ ಆಜ್ಞೆಗಳನ್ನು ಕೈಕೊಂಡು ನಡೆಯುವುದರಲ್ಲಿ ಪಟ್ಟುಹಿಡಿಯುತ್ತಾರೆ. ಅವರು ತಮ್ಮ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸುವುದನ್ನು ಯಾವುದೂ ತಡೆಗಟ್ಟುವಂತೆ ಬಿಡುವುದಿಲ್ಲ. (2 ತಿಮೊ. 4:5) ತದ್ರೀತಿಯಲ್ಲಿ ನಾವು ಸಹ ದೇವರ ಕುರಿತ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಲು ಮತ್ತು ಆತನ ಇತರ ಎಲ್ಲ ಆಜ್ಞೆಗಳನ್ನು ಕೈಕೊಂಡು ನಡೆಯಲು ಪ್ರಚೋದಿಸಲ್ಪಡುತ್ತೇವೆ.
ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ನಾವೇಕೆ ಪ್ರೀತಿಸುತ್ತೇವೆ?
9. ಕ್ರಿಸ್ತನು ಏನನ್ನು ತಾಳಿಕೊಂಡನು, ಮತ್ತು ಅವನನ್ನು ಯಾವುದು ಪ್ರಚೋದಿಸಿತು?
9 ದೇವರನ್ನು ಪ್ರೀತಿಸುವುದಲ್ಲದೆ ಆತನ ಪುತ್ರನಿಗಾಗಿಯೂ ನಾವೇಕೆ ಪ್ರೀತಿಯನ್ನು ಬೆಳೆಸಿಕೊಳ್ಳುತ್ತೇವೆ ಎಂಬುದಕ್ಕೆ ಅನೇಕ ಕಾರಣಗಳಿವೆ. ನಾವು ಯೇಸುವನ್ನು ಎಂದೂ ನೋಡಿಲ್ಲವಾದರೂ ಅವನ ಕುರಿತು ಹೆಚ್ಚನ್ನು ಕಲಿಯುತ್ತಾ ಹೋಗುವಾಗ ಅವನ ಮೇಲಣ ನಮ್ಮ ಪ್ರೀತಿ ಆಳವಾಗುತ್ತದೆ. (1 ಪೇತ್ರ 1:8) ಯೇಸು ತಾಳಿಕೊಂಡ ಕೆಲವು ವಿಷಯಗಳು ಯಾವುವು? ಅವನು ತನ್ನ ತಂದೆಯ ಚಿತ್ತವನ್ನು ಮಾಡುತ್ತಿರುವಾಗ ಯಾವುದೇ ಕಾರಣವಿಲ್ಲದೆ ದ್ವೇಷಿಸಲ್ಪಟ್ಟನು, ಹಿಂಸಿಸಲ್ಪಟ್ಟನು, ಸುಳ್ಳಪವಾದ ಹೊರಿಸಲ್ಪಟ್ಟನು ಮತ್ತು ದೂಷಿಸಲ್ಪಟ್ಟನು. ಅವನು ಬೇರೆ ಅವಮಾನವನ್ನು ಸಹ ತಾಳಿಕೊಂಡನು. (ಯೋಹಾನ 15:25 ಓದಿ.) ತನ್ನ ಸ್ವರ್ಗೀಯ ತಂದೆಯ ಮೇಲಿದ್ದ ಪ್ರೀತಿಯಿಂದಾಗಿ ಯೇಸು ಈ ಪರೀಕ್ಷೆಗಳನ್ನು ತಾಳಿಕೊಂಡನು. ಮಾತ್ರವಲ್ಲದೆ ಪ್ರೀತಿಯಿಂದ ಪ್ರಚೋದಿಸಲ್ಪಟ್ಟ ಅವನ ಯಜ್ಞಾರ್ಪಿತ ಮರಣವು ಅನೇಕರಿಗೆ ವಿಮೋಚನಾ ಮೌಲ್ಯವನ್ನು ಕೊಟ್ಟಿತು.—ಮತ್ತಾ. 20:28.
10, 11. ಕ್ರಿಸ್ತನು ನಮಗೋಸ್ಕರ ಏನು ಮಾಡಿದನೋ ಅದನ್ನು ನೋಡುವಾಗ ನಾವು ಯಾವ ಗುರಿಯನ್ನು ಇಡುತ್ತೇವೆ?
10 ಯೇಸುವಿನ ಜೀವನಕ್ರಮವು ನಮ್ಮಲ್ಲಿ ಪ್ರತಿಕ್ರಿಯೆಯನ್ನು ಮೂಡಿಸುತ್ತದೆ. ಕ್ರಿಸ್ತನು ನಮಗೋಸ್ಕರ ಏನು ಮಾಡಿದ್ದಾನೆ ಎಂಬುದರ ಕುರಿತು ಆಲೋಚಿಸುವಾಗ ಅವನ ಮೇಲಣ ನಮ್ಮ ಪ್ರೀತಿ ಆಳವಾಗುತ್ತದೆ. ನಾವು ಅವನ ಹಿಂಬಾಲಕರಾಗಿರುವುದರಿಂದ ಕ್ರಿಸ್ತಸದೃಶ ಪ್ರೀತಿಯನ್ನು ಬೆಳೆಸಿಕೊಳ್ಳುವ ಮತ್ತು ಅದನ್ನು ತೋರಿಸುವ ಗುರಿಯನ್ನು ಇಡಬೇಕು. ಹೀಗೆ ರಾಜ್ಯದ ಕುರಿತು ಸಾಕ್ಷಿಕೊಡುವ ಮತ್ತು ಶಿಷ್ಯರನ್ನಾಗಿ ಮಾಡುವ ಅವನ ಆಜ್ಞೆಯನ್ನು ಕೈಕೊಂಡು ನಡೆಯುವುದನ್ನು ಮುಂದುವರಿಸುವೆವು.—ಮತ್ತಾ. 28:19, 20.
11 ಇಡೀ ಮಾನವಕುಲಕ್ಕಾಗಿ ಕ್ರಿಸ್ತನು ತೋರಿಸಿದ ಪ್ರೀತಿಗೆ ಸ್ಪಂದಿಸುವಾಗ ಅಂತ್ಯ ಬರುವ ಮುಂಚೆ ನಮ್ಮ ನೇಮಕವನ್ನು ಪೂರೈಸುವಂತೆ ಪ್ರೀತಿಯು ನಮ್ಮನ್ನು ಒತ್ತಾಯಪಡಿಸುತ್ತದೆ. (2 ಕೊರಿಂಥ 5:14, 15 ಓದಿ.) ದೇವರು ಮಾನವಕುಲಕ್ಕಾಗಿ ಉದ್ದೇಶಿಸಿದ್ದನ್ನು ಕ್ರಿಸ್ತನು ಪೂರೈಸಿದ್ದರಲ್ಲಿ ಅವನ ಪ್ರೀತಿ ಮುಖ್ಯ ಪಾತ್ರ ವಹಿಸಿತು. ಮಾತ್ರವಲ್ಲದೆ ನಾವು ನಿಕಟವಾಗಿ ಅನುಸರಿಸುವಂತೆ ಕ್ರಿಸ್ತನು ಬಿಟ್ಟುಹೋಗಿರುವ ಮಾದರಿಯು ಆ ದೈವಿಕ ಉದ್ದೇಶದಲ್ಲಿ ಪಾಲ್ಗೊಳ್ಳುವಂತೆ ನಮ್ಮಲ್ಲಿ ಪ್ರತಿಯೊಬ್ಬರನ್ನು ಸಾಧ್ಯಗೊಳಿಸುತ್ತದೆ. ಇದು ನಮ್ಮಿಂದ ಸಾಧ್ಯವಾದಷ್ಟು ಪೂರ್ಣವಾಗಿ ದೇವರ ಮೇಲಣ ಪ್ರೀತಿಯನ್ನು ಯಶಸ್ವಿಕರವಾಗಿ ಬೆಳೆಸಿಕೊಳ್ಳುವುದನ್ನು ಅವಶ್ಯಪಡಿಸುತ್ತದೆ. (ಮತ್ತಾ. 22:37) ಯೇಸುವಿನ ಬೋಧನೆಯನ್ನು ಕೈಕೊಂಡು ನಡೆಯುವ ಮೂಲಕ ಮತ್ತು ಅವನ ಆಜ್ಞೆಗಳನ್ನು ಪಾಲಿಸುವ ಮೂಲಕ ನಾವು ಅವನನ್ನು ಪ್ರೀತಿಸುತ್ತೇವೆ ಎಂದು ತೋರಿಸುತ್ತೇವೆ. ಹಾಗೂ ಸ್ವತಃ ಯೇಸುವೇ ಮಾಡಿದಂತೆ, ಯಾವುದೇ ಸನ್ನಿವೇಶದಲ್ಲಿ ದೇವರ ಪರಮಾಧಿಕಾರವನ್ನು ಎತ್ತಿಹಿಡಿಯಲು ದೃಢಮನಸ್ಕರಾಗಿದ್ದೇವೆ ಎಂದು ತೋರಿಸುವೆವು.—ಯೋಹಾ. 14:23, 24; 15:10.
ಪ್ರೀತಿಯ ಉತ್ಕೃಷ್ಟ ಮಾರ್ಗವನ್ನು ಬೆನ್ನಟ್ಟುವುದು
12. “ಉತ್ಕೃಷ್ಟವಾದ ಮಾರ್ಗ” ಎಂಬ ಅಭಿವ್ಯಕ್ತಿಯಿಂದ ಪೌಲನು ಏನನ್ನು ಸೂಚಿಸಿದನು?
12 ಅಪೊಸ್ತಲ ಪೌಲನು ಕ್ರಿಸ್ತನನ್ನು ಅನುಕರಿಸುವವನಾಗಿದ್ದನು. ಅವನು ಕ್ರಿಸ್ತನ ಹೆಜ್ಜೆಗಳನ್ನು ನಿಕಟವಾಗಿ ಹಿಂಬಾಲಿಸುತ್ತಿದ್ದುದರಿಂದ ತನ್ನ ಸಹೋದರರು ತನ್ನನ್ನು ಅನುಕರಿಸುವವರಾಗುವಂತೆ ಪ್ರೋತ್ಸಾಹಿಸುವ ವಾಕ್ ಸರಳತೆ ಅವನಿಗಿತ್ತು. (1 ಕೊರಿಂ. 11:1) ಪ್ರಥಮ ಶತಮಾನದಲ್ಲಿದ್ದ ಪವಿತ್ರಾತ್ಮದ ಕೆಲವು ವರಗಳಾದ ರೋಗವಾಸಿ ಮತ್ತು ಭಾಷಾವರಗಳನ್ನು ಪಡೆದುಕೊಳ್ಳಲು ಹುರುಪಿನಿಂದ ಪ್ರಯತ್ನಿಸುತ್ತಾ ಇರಬೇಕೆಂದು ಕೊರಿಂಥದ ಕ್ರೈಸ್ತರಿಗೆ ಉತ್ತೇಜಿಸಿದನಾದರೂ ಅವುಗಳಿಗಿಂತಲೂ ಉತ್ತಮವಾದದ್ದೇನನ್ನೋ ಬೆನ್ನಟ್ಟಸಾಧ್ಯವಿದೆ ಎಂದು ಪೌಲನು ಅವರಿಗೆ ತೋರಿಸಿದನು. 1 ಕೊರಿಂಥ 12:31ರಲ್ಲಿ ಅವನು ವಿವರಿಸಿದ್ದು: “ಆದರೆ ಇನ್ನೂ ಉತ್ಕೃಷ್ಟವಾದ ಮಾರ್ಗವನ್ನು ನಾನು ನಿಮಗೆ ತೋರಿಸುತ್ತೇನೆ.” ಈ ವಚನದ ಪೂರ್ವಾಪರದಲ್ಲಿ ಕೊಡಲ್ಪಟ್ಟಿರುವ ವಚನಗಳು ಅದು ಪ್ರೀತಿಯ ಉತ್ಕೃಷ್ಟ ಮಾರ್ಗವೇ ಎಂದು ತೋರಿಸುತ್ತವೆ. ಅದು ಯಾವ ಅರ್ಥದಲ್ಲಿ ಉತ್ಕೃಷ್ಟವಾಗಿತ್ತು? ಪೌಲನು ಅದರ ಅರ್ಥವನ್ನು ದೃಷ್ಟಾಂತಿಸಿ ತೋರಿಸಿದನು. (1 ಕೊರಿಂಥ 13:1-3 ಓದಿ.) ಒಂದುವೇಳೆ ಅವನಲ್ಲಿ ಕೆಲವು ಅಸಾಧಾರಣವಾದ ಸಾಮರ್ಥ್ಯಗಳಿದ್ದು ದೊಡ್ಡ ದೊಡ್ಡ ವಿಷಯಗಳನ್ನು ಸಾಧಿಸಿದ್ದರೂ ಅವನಲ್ಲಿ ಪ್ರೀತಿ ಇಲ್ಲದಿದ್ದಲ್ಲಿ ಅವನಿಂದ ಏನು ಪ್ರಯೋಜನವಿತ್ತು? ಏನೂ ಇರಲಿಲ್ಲ! ದೇವರಾತ್ಮದಿಂದ ಪ್ರೇರಿತನಾಗಿ ಅವನು ಈ ಮುಖ್ಯ ಅಂಶವನ್ನು ಒತ್ತಿಹೇಳಿದನು. ಇದನ್ನು ನಮಗೆ ತಿಳಿಸುವ ಮೂಲಕ ಅವನು ನಮ್ಮ ಮೇಲೆ ಎಷ್ಟು ದೊಡ್ಡ ಪ್ರಭಾವವನ್ನು ಬೀರಿದ್ದಾನೆ!
13. (ಎ) ಇಸವಿ 2010ರ ವಾರ್ಷಿಕವಚನ ಯಾವುದು? (ಬಿ) ಯಾವ ಅರ್ಥದಲ್ಲಿ ಪ್ರೀತಿ ಎಂದಿಗೂ ವಿಫಲವಾಗುವುದಿಲ್ಲ?
13 ಮುಂದೆ ಪೌಲನು ಪ್ರೀತಿ ನಿಜವಾಗಿ ಏನಾಗಿದೆ ಮತ್ತು ಏನಾಗಿಲ್ಲ ಎಂಬುದನ್ನು ವಿವರಿಸುತ್ತಾನೆ. (1 ಕೊರಿಂಥ 13:4-8 ಓದಿ.) ಈಗ ಸ್ವಲ್ಪ ಸಮಯ ತೆಗೆದುಕೊಂಡು ಪ್ರೀತಿ ಅವಶ್ಯಪಡಿಸುವುದನ್ನು ನೀವು ಹೇಗೆ ಪೂರೈಸುತ್ತಿದ್ದೀರಿ ಎಂಬುದನ್ನು ಪರಿಶೀಲಿಸಿ. ಮುಖ್ಯವಾಗಿ 7ನೇ ವಚನದ ಕೊನೆಯ ಪದಗುಚ್ಛ ಮತ್ತು 8ನೇ ವಚನದ ಮೊದಲ ವಾಕ್ಯದ ಮೇಲೆ ಗಮನವನ್ನು ಕೇಂದ್ರೀಕರಿಸಿ. ಅಲ್ಲಿ ಹೀಗೆ ಕೊಡಲ್ಪಟ್ಟಿದೆ: ‘ಪ್ರೀತಿಯು ಎಲ್ಲವನ್ನೂ ತಾಳಿಕೊಳ್ಳುತ್ತದೆ. ಪ್ರೀತಿಯು ಎಂದಿಗೂ ವಿಫಲವಾಗುವುದಿಲ್ಲ.’ ಇದು 2010ರಲ್ಲಿ ನಮ್ಮ ವಾರ್ಷಿಕವಚನ ಆಗಿರುವುದು. 8ನೇ ವಚನದಲ್ಲಿ ಪೌಲನು, ಪ್ರವಾದನಾ ಮತ್ತು ಭಾಷಾ ವರಗಳನ್ನೊಳಗೊಂಡ ಪವಿತ್ರಾತ್ಮದ ವರಗಳು ಇಲ್ಲವಾಗುವವು ಎಂದು ಹೇಳಿದನು ಎಂಬುದನ್ನು ಗಮನಿಸಿ. ಇವು ಕ್ರೈಸ್ತ ಸಭೆಯ ಶೈಶವಾವಸ್ಥೆಯಲ್ಲಿ ಉಪಯೋಗಿಸಲ್ಪಟ್ಟವು. ಆದರೆ ಅವುಗಳಿಗೆ ಅಂತ್ಯ ಇತ್ತು. ಪ್ರೀತಿಯಾದರೋ ಸದಾಕಾಲ ಇರುವುದು. ಯೆಹೋವನು ಪ್ರೀತಿಯ ಸತ್ವಸಾರವಾಗಿದ್ದಾನೆ ಮತ್ತು ಆತನು ನಿತ್ಯಕ್ಕೂ ಇರುವನು. ಆದುದರಿಂದ ಪ್ರೀತಿ ಎಂದಿಗೂ ವಿಫಲವಾಗುವುದಿಲ್ಲ, ಅದಕ್ಕೆ ಅಂತ್ಯವೇ ಇಲ್ಲ. ಅದು ನಮ್ಮ ನಿತ್ಯನಾದ ದೇವರ ಒಂದು ಗುಣವಾಗಿ ಸದಾಕಾಲಕ್ಕೂ ಅಸ್ತಿತ್ವದಲ್ಲಿರುವುದು.—1 ಯೋಹಾ. 4:8.
ಪ್ರೀತಿಯು ಎಲ್ಲವನ್ನೂ ತಾಳಿಕೊಳ್ಳುತ್ತದೆ
14, 15. (ಎ) ಪರೀಕ್ಷೆಗಳನ್ನು ತಾಳಿಕೊಳ್ಳಲು ಪ್ರೀತಿ ಹೇಗೆ ಸಹಾಯಮಾಡಬಲ್ಲದು? (ಬಿ) ಒಬ್ಬ ಯುವ ಸಹೋದರನು ಏಕೆ ರಾಜಿಮಾಡಿಕೊಳ್ಳಲಿಲ್ಲ?
14 ಕ್ರೈಸ್ತರು ಯಾವುದೇ ಪರೀಕ್ಷೆ, ಕಷ್ಟದ ಸನ್ನಿವೇಶ ಮತ್ತು ಸಮಸ್ಯೆಯನ್ನು ಎದುರಿಸುವುದಾದರೂ ಅದನ್ನು ತಾಳಿಕೊಳ್ಳಲು ಅವರಿಗೆ ಯಾವುದು ಸಹಾಯಮಾಡುತ್ತದೆ? ಮೂಲತಃ ಮೂಲತತ್ತ್ವದ ಮೇಲಾಧಾರಿತ ಪ್ರೀತಿಯೇ ಸಹಾಯಮಾಡುತ್ತದೆ. ಇಂಥ ಪ್ರೀತಿ ಕೇವಲ ಪ್ರಾಪಂಚಿಕ ವಸ್ತುಗಳನ್ನು ಬಿಟ್ಟುಕೊಡುವುದಕ್ಕಿಂತಲೂ ಹೆಚ್ಚಿನದ್ದನ್ನು ಒಳಗೊಂಡಿದೆ. ಇದು ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವಷ್ಟರ ಮಟ್ಟಿಗೆ, ಬೇಕಾದರೆ ಕ್ರಿಸ್ತನಿಗೋಸ್ಕರ ನಮ್ಮ ಜೀವವನ್ನೇ ಕೊಡಲು ಸಿದ್ಧರಾಗಿರುವ ಮಟ್ಟಿಗೂ ಹೋಗುತ್ತದೆ. (ಲೂಕ 9:24, 25) ಎರಡನೇ ಲೋಕ ಯುದ್ಧದ ಸಮಯದಲ್ಲಿ ಮತ್ತು ಅದರ ತರುವಾಯ ಸೆರೆಶಿಬಿರಗಳಲ್ಲಿ, ಶ್ರಮಶಿಬಿರಗಳಲ್ಲಿ ಮತ್ತು ಸೆರೆಮನೆಗಳಲ್ಲಿ ಕಷ್ಟವನ್ನು ಅನುಭವಿಸಿದ ಸಾಕ್ಷಿಗಳ ನಂಬಿಗಸ್ತ ಮಾರ್ಗಕ್ರಮದ ಕುರಿತು ಯೋಚಿಸಿ ನೋಡಿ.
15 ಒಬ್ಬ ಯುವ ಜರ್ಮನ್ ಸಾಕ್ಷಿಯಾದ ವಿಲ್ಹೆಲ್ಮ್ನ ಉದಾಹರಣೆಯು ಇದನ್ನು ಒಳ್ಳೇದಾಗಿ ದೃಷ್ಟಾಂತಿಸುತ್ತದೆ. ನಾಝಿಗಳ ಗುಂಡುಹಾರಿಸುವ ದಳದಿಂದ ಕೊಲ್ಲಲ್ಪಡಲಿಕ್ಕಿದ್ದಾಗಲೂ ಅವನು ನಿಷ್ಠನಾಗಿ ಉಳಿದನು, ರಾಜಿಮಾಡಿಕೊಳ್ಳಲಿಲ್ಲ. ತನ್ನ ಕುಟುಂಬಕ್ಕೆ ಕಳುಹಿಸಿದ ಕೊನೆಯ ಪತ್ರದಲ್ಲಿ ಅವನು ಬರೆದದ್ದು: “ನಮ್ಮ ನಾಯಕನಾದ ಯೇಸು ಕ್ರಿಸ್ತನು ಆಜ್ಞಾಪಿಸಿದಂತೆ ನಾವು ಎಲ್ಲಕ್ಕಿಂತಲೂ ಮಿಗಿಲಾಗಿ ದೇವರನ್ನು ಪ್ರೀತಿಸಬೇಕು. ನಾವು ಆತನ ಪಕ್ಷವಹಿಸಿ ನಿಲ್ಲುವುದಾದರೆ ಖಂಡಿತ ನಮಗೆ ಬಹುಮಾನವನ್ನು ಕೊಡುವನು.” ತದನಂತರ ಕಾವಲಿನಬುರುಜು ಪತ್ರಿಕೆಯ ಒಂದು ಲೇಖನದಲ್ಲಿ ಅವನ ಕುಟುಂಬದವರೊಬ್ಬರು ಬರೆದದ್ದು: “ಕಷ್ಟಸಂಕಟಗಳು ತುಂಬಿದ್ದ ಆ ಸಮಯದಲ್ಲಿ ಒಂದು ಕುಟುಂಬವಾಗಿ ದೇವರ ಮೇಲಣ ನಮ್ಮ ಪ್ರೀತಿಗೆ ಮೊದಲ ಸ್ಥಾನವಿರುವಂತೆ ನಾವು ಯಾವಾಗಲೂ ನೋಡಿಕೊಂಡೆವು.” ಅರ್ಮೇನಿಯ, ಎರಿಟ್ರೀಅ, ದಕ್ಷಿಣ ಕೊರಿಯ ಮತ್ತು ಇತರ ದೇಶಗಳಲ್ಲಿ ಈಗ ಸೆರೆವಾಸವನ್ನು ಅನುಭವಿಸುತ್ತಿರುವ ಅನೇಕ ಸಹೋದರರು ಸಹ ಇದೇ ಮನೋಭಾವವನ್ನು ತೋರಿಸುತ್ತಿದ್ದಾರೆ. ಈ ಸಹೋದರರು ಯೆಹೋವನಿಗಾಗಿರುವ ಪ್ರೀತಿಯಲ್ಲಿ ಅಚಲರಾಗಿ ನಿಂತಿದ್ದಾರೆ.
16. ಮಲಾವಿಯಲ್ಲಿರುವ ನಮ್ಮ ಸಹೋದರರು ಏನನ್ನು ತಾಳಿಕೊಂಡರು?
16 ಅನೇಕ ಸ್ಥಳಗಳಲ್ಲಿ ಬೇರೆ ರೀತಿಯ ಕಷ್ಟಸಂಕಟಗಳು ನಮ್ಮ ಸಹೋದರರ ನಂಬಿಕೆ ಮತ್ತು ತಾಳ್ಮೆಯನ್ನು ಪರೀಕ್ಷಿಸುತ್ತವೆ. ಮಲಾವಿಯಲ್ಲಿರುವ ಯೆಹೋವನ ಸಾಕ್ಷಿಗಳು 26 ವರ್ಷ ಸರಕಾರದ ನಿಷೇಧಗಳನ್ನು, ತೀವ್ರ ಹಿಂಸೆ ಮತ್ತು ಅನೇಕ ದುಷ್ಕೃತ್ಯಗಳನ್ನು ತಾಳಿಕೊಂಡರು. ಅವರ ತಾಳ್ಮೆಗೆ ಪ್ರತಿಫಲ ದೊರೆಯಿತು. ಹಿಂಸೆ ಆರಂಭವಾದಾಗ ಆ ದೇಶದಲ್ಲಿ ಸುಮಾರು 18,000 ಸಾಕ್ಷಿಗಳು ಇದ್ದರು. ಮೂವತ್ತು ವರ್ಷಗಳ ಬಳಿಕ ಅವರ ಸಂಖ್ಯೆ ಇಮ್ಮಡಿಗಿಂತಲೂ ಹೆಚ್ಚಾಗಿ 38,393ಕ್ಕೆ ಏರಿತ್ತು. ಇತರ ದೇಶಗಳಲ್ಲೂ ತದ್ರೀತಿಯ ಫಲಿತಾಂಶಗಳು ಸಿಕ್ಕಿವೆ.
17. ವಿಭಜಿತ ಕುಟುಂಗಳಲ್ಲಿರುವ ಕೆಲವರು ಏನನ್ನು ಎದುರಿಸುತ್ತಾರೆ, ಮತ್ತು ಇಂಥ ದುರುಪಚಾರವನ್ನು ಅವರಿಂದ ತಾಳಿಕೊಳ್ಳಲು ಹೇಗೆ ಸಾಧ್ಯವಾಗುತ್ತದೆ?
ಮತ್ತಾ. 10:35, 36) ಹದಿವಯಸ್ಕರು ಅವಿಶ್ವಾಸಿ ಹೆತ್ತವರಿಂದ ಬಂದ ವಿರೋಧವನ್ನೂ ತಾಳಿಕೊಂಡಿದ್ದಾರೆ. ಕೆಲವರನ್ನು ಮನೆಯಿಂದ ಹೊರಹಾಕಲಾಯಿತು ಕೂಡ. ಆದರೆ ದಯಾಪರ ಸಾಕ್ಷಿಗಳು ಅವರನ್ನು ತಮ್ಮ ಮನೆಗಳಲ್ಲಿ ಸೇರಿಸಿಕೊಂಡರು. ಇತರ ಮಕ್ಕಳು ಹೆತ್ತವರಿಂದ ತೊರೆಯಲ್ಪಟ್ಟರು. ಇಂಥ ದುರುಪಚಾರವನ್ನು ತಾಳಿಕೊಳ್ಳಲು ಅವರಿಗೆ ಯಾವುದು ಸಹಾಯಮಾಡಿತು? ಸಹೋದರತ್ವದ ಮೇಲಣ ಪ್ರೀತಿ ಮಾತ್ರವೇ ಅಲ್ಲ, ಅದಕ್ಕಿಂತಲೂ ಹೆಚ್ಚಾಗಿ ಯೆಹೋವ ಮತ್ತು ಆತನ ಪುತ್ರನ ಮೇಲಣ ನಿಜ ಪ್ರೀತಿ ಅವರಿಗೆ ಸಹಾಯಮಾಡಿತು.—1 ಪೇತ್ರ 1:22; 1 ಯೋಹಾ. 4:21.
17 ದೇವಜನರ ಮೇಲೆ ಮಾಡಲ್ಪಡುವ ನೇರವಾದ ಆಕ್ರಮಣಗಳು ಕಷ್ಟ ತರುತ್ತವೆ ನಿಜ. ಆದರೆ ಸ್ವಂತ ಕುಟುಂಬದವರಿಂದ ಕ್ರೈಸ್ತನೊಬ್ಬನ ಮೇಲೆ ವಿರೋಧ ಬರುವಾಗ ಅದು ಇನ್ನಷ್ಟು ಕಷ್ಟಕರ. ಮನೆಮಂದಿಯಿಂದ ಅಥವಾ ಹತ್ತಿರದ ಸಂಬಂಧಿಗಳಿಂದ ಒತ್ತಡ ಬರಬಹುದು. ಇದು ಸಂಭವಿಸುವುದೆಂದು ಯೇಸು ಮುಂತಿಳಿಸಲಿಲ್ಲವೆ? ಹೌದು ಮುಂತಿಳಿಸಿದನು ಮತ್ತು ಅನೇಕರು ಅವನು ಹೇಳಿದ ಮಾತುಗಳ ಸತ್ಯತೆಯನ್ನು ಅನುಭವಿಸಿದ್ದಾರೆ. (18. ಎಲ್ಲವನ್ನೂ ತಾಳಿಕೊಳ್ಳುವ ಪ್ರೀತಿ ವಿವಾಹಿತ ಕ್ರೈಸ್ತರಿಗೆ ಹೇಗೆ ಸಹಾಯಮಾಡುತ್ತದೆ?
18 ಎಲ್ಲವನ್ನೂ ತಾಳಿಕೊಳ್ಳುವ ಪ್ರೀತಿಯನ್ನು ಅವಶ್ಯಪಡಿಸುವ ಇತರ ಅನೇಕ ಸನ್ನಿವೇಶಗಳನ್ನು ನಾವು ಜೀವನದಲ್ಲಿ ಎದುರಿಸುತ್ತೇವೆ. ವಿವಾಹ ಬಂಧದಲ್ಲಿ ಪ್ರೀತಿಯು ಯೇಸುವಿನ ಮಾತುಗಳನ್ನು ಗೌರವಿಸುವಂತೆ ವಿವಾಹಿತ ದಂಪತಿಗಳಿಗೆ ಸಹಾಯಮಾಡುತ್ತದೆ. ಅವನಂದದ್ದು: “ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ.” (ಮತ್ತಾ. 19:6) ವಿವಾಹಿತ ಕ್ರೈಸ್ತರು ‘ಶರೀರದಲ್ಲಿ ಸಂಕಟವನ್ನು’ ಅನುಭವಿಸುವಾಗ ಯೆಹೋವನು ತಮ್ಮ ವಿವಾಹದಲ್ಲಿ ಮುಖ್ಯ ಪಾತ್ರ ವಹಿಸುತ್ತಾನೆ ಎಂಬುದನ್ನು ಜ್ಞಾಪಿಸಿಕೊಳ್ಳಬೇಕು. (1 ಕೊರಿಂ. 7:28) ಆತನ ವಾಕ್ಯವು ‘ಪ್ರೀತಿಯು ಎಲ್ಲವನ್ನೂ ತಾಳಿಕೊಳ್ಳುತ್ತದೆ’ ಎಂದು ಹೇಳುತ್ತದೆ. ಈ ಗುಣವನ್ನು ಧರಿಸಿಕೊಂಡಿರುವ ಗಂಡ ಹೆಂಡತಿ ಪರಸ್ಪರ ತುಂಬ ಆಪ್ತರಾಗಿರಲು ಮತ್ತು ತಮ್ಮ ವಿವಾಹವನ್ನು ಹಾನಿಯಿಂದ ಕಾಪಾಡಲು ಶಕ್ತಿ ಸಿಗುತ್ತದೆ.—ಕೊಲೊ. 3:14.
19. ನೈಸರ್ಗಿಕ ವಿಪತ್ತುಗಳು ಸಂಭವಿಸಿದಾಗ ದೇವಜನರು ಏನು ಮಾಡುತ್ತಾರೆ?
19 ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಸಹ ಎಲ್ಲವನ್ನೂ ತಾಳಿಕೊಳ್ಳುವಂತೆ ಪ್ರೀತಿ ನಮಗೆ ಸಹಾಯಮಾಡುತ್ತದೆ. ದಕ್ಷಿಣ ಪೆರೂವಿನಲ್ಲಿ ಒಂದು ಭೂಕಂಪ ಸಂಭವಿಸಿದಾಗ ಮತ್ತು ಕತ್ರೀನಾ ಚಂಡಮಾರುತ ಅಮೆರಿಕದ ಕರಾವಳಿ ಪ್ರದೇಶವನ್ನು ಛಿದ್ರಗೊಳಿಸಿದಾಗ ಇದು ತೋರಿಬಂತು. ಆ ವಿಪತ್ತುಗಳಲ್ಲಿ ನಮ್ಮ ಸಹೋದರರಲ್ಲಿ ಅನೇಕರು ತಮ್ಮ ಮನೆಗಳನ್ನು ಅಥವಾ ಐಹಿಕ ಸ್ವತ್ತುಗಳನ್ನು ಕಳೆದುಕೊಂಡರು. ಲೋಕವ್ಯಾಪಕವಾಗಿರುವ ಸಭೆಯು ಪರಿಹಾರ ಸಾಮಗ್ರಿಯನ್ನು ಒದಗಿಸುವಂತೆ ಪ್ರೀತಿಯು ಪ್ರಚೋದಿಸಿತು. ಮಾತ್ರವಲ್ಲದೆ ಸ್ವಯಂ ಸೇವಕರು ಬಂದು ಮನೆಗಳನ್ನು ಪುನಃ ಕಟ್ಟಲು ಮತ್ತು ರಾಜ್ಯ ಸಭಾಗೃಹಗಳನ್ನು ದುರಸ್ತುಗೊಳಿಸಲು ಸಹಾಯಮಾಡಿದರು. ನಮ್ಮ ಸಹೋದರರು ಎಲ್ಲ ಸಮಯಗಳಲ್ಲಿ ಮತ್ತು ಯಾವುದೇ ಸನ್ನಿವೇಶದಲ್ಲಿ ಒಬ್ಬರಿಗೊಬ್ಬರು ಪ್ರೀತಿ ಮತ್ತು ಕಾಳಜಿ ತೋರಿಸುತ್ತಾರೆ ಎಂಬುದನ್ನು ಇಂಥ ಕ್ರಿಯೆಗಳು ರುಜುಪಡಿಸುತ್ತವೆ.—ಯೋಹಾ. 13:34, 35; 1 ಪೇತ್ರ 2:17.
ಪ್ರೀತಿಯು ಎಂದಿಗೂ ವಿಫಲವಾಗುವುದಿಲ್ಲ
20, 21. (ಎ) ಪ್ರೀತಿಯು ಏಕೆ ಅತ್ಯಂತ ಪ್ರತಿಫಲದಾಯಕ? (ಬಿ) ನೀವು ಪ್ರೀತಿಯ ಮಾರ್ಗವನ್ನು ಬೆನ್ನಟ್ಟಲು ಏಕೆ ದೃಢಚಿತ್ತರಾಗಿದ್ದೀರಿ?
20 ಇಂದು ಯೆಹೋವನ ಜನರ ಮಧ್ಯೆ ಪ್ರೀತಿಯ ಉತ್ಕೃಷ್ಟ ಮಾರ್ಗವನ್ನು ಬೆನ್ನಟ್ಟುವುದು ಎಷ್ಟು ವಿವೇಕಯುತ ಎಂಬುದನ್ನು ನಾವು ನೋಡುತ್ತೇವೆ. ಇದು ನಿಜಕ್ಕೂ ಯಾವುದೇ ಸನ್ನಿವೇಶದಲ್ಲಿ ಅತ್ಯಂತ ಪ್ರತಿಫಲದಾಯಕ. ಅಪೊಸ್ತಲ ಪೌಲನು ಆ ಸತ್ಯಾಂಶವನ್ನು ಹೇಗೆ ಒತ್ತಿಹೇಳಿದನು ಎಂಬುದನ್ನು ಗಮನಿಸಿ. ಪವಿತ್ರಾತ್ಮದ ವರಗಳು ಇಲ್ಲವಾಗುವವು ಮತ್ತು ಕ್ರೈಸ್ತ ಸಭೆಯು ಅದರ ಶೈಶವಾವಸ್ಥೆಯಿಂದ ಬೆಳೆದು ಪ್ರೌಢತೆಯನ್ನು ಪಡೆಯುವುದು ಎಂದು ಮೊದಲು ಸೂಚಿಸಿದನು. ಆ ಬಳಿಕ ಅವನು, “ಹೀಗಿರುವುದರಿಂದ ನಂಬಿಕೆ, ನಿರೀಕ್ಷೆ, ಪ್ರೀತಿ ಈ ಮೂರೇ ಉಳಿಯುತ್ತವೆ; ಆದರೆ ಇವುಗಳಲ್ಲಿ ಅತಿ ದೊಡ್ಡದು ಪ್ರೀತಿಯೇ” ಎಂದು ಸಮಾಪ್ತಿಗೊಳಿಸಿದನು.—1 ಕೊರಿಂ. 13:13.
21 ಕಾಲಕ್ರಮೇಣ, ನಂಬಿರುವಂಥ ವಿಷಯಗಳು ನೈಜವಾಗಿ ನೆರವೇರಿದ ಬಳಿಕ ಮುಂದಕ್ಕೆ ಅವುಗಳಲ್ಲಿ ನಾವು ನಂಬಿಕೆ ಇಡುವ ಆವಶ್ಯಕತೆ ಇರುವುದಿಲ್ಲ. ನಾವು ಕಾತರದಿಂದ ನಿರೀಕ್ಷೆಯಿಟ್ಟ ವಾಗ್ದಾನಗಳು ನೆರವೇರಿ ಎಲ್ಲವೂ ಹೊಸದು ಮಾಡಲ್ಪಟ್ಟ ಬಳಿಕ ಮುಂದಕ್ಕೆ ಅವುಗಳಿಗಾಗಿ ನಿರೀಕ್ಷಿಸುವ ಆವಶ್ಯಕತೆ ಇರುವುದಿಲ್ಲ. ಆದರೆ ಪ್ರೀತಿಯ ಕುರಿತಾಗಿ ಏನು? ಅದು ಎಂದಿಗೂ ವಿಫಲವಾಗುವುದಿಲ್ಲ ಅಥವಾ ಅದಕ್ಕೆ ಅಂತ್ಯವೇ ಇಲ್ಲ. ಅದು ಎಂದೆಂದಿಗೂ ಇರುವುದು. ನಾವು ನಿತ್ಯಜೀವವನ್ನು ಅನುಭವಿಸುವಾಗ ದೇವರ ಪ್ರೀತಿಯ ಹೆಚ್ಚಿನ ವೈಶಿಷ್ಟ್ಯಗಳನ್ನು ನೋಡಿ ಅರ್ಥಮಾಡಿಕೊಳ್ಳುವೆವು ಎಂಬುದು ಖಂಡಿತ. ಎಂದಿಗೂ ವಿಫಲವಾಗದ ಪ್ರೀತಿಯ ಉತ್ಕೃಷ್ಟ ಮಾರ್ಗವನ್ನು ಬೆನ್ನಟ್ಟುವುದರಲ್ಲಿ ದೇವರ ಚಿತ್ತವನ್ನು ಮಾಡುವ ಮೂಲಕ ನೀವು ಎಂದೆಂದಿಗೂ ಇರುವಂತಾಗಲಿ.—1 ಯೋಹಾ. 2:17.
ನಿಮ್ಮ ಉತ್ತರವೇನು?
• ದಾರಿತಪ್ಪಿಸುವ ಪ್ರೀತಿಯ ವಿಷಯದಲ್ಲಿ ನಾವೇಕೆ ಎಚ್ಚರ ವಹಿಸಬೇಕು?
• ಪ್ರೀತಿ ಏನನ್ನು ತಾಳಿಕೊಳ್ಳುವಂತೆ ನಮಗೆ ಸಹಾಯಮಾಡುತ್ತದೆ?
• ಯಾವ ಅರ್ಥದಲ್ಲಿ ಪ್ರೀತಿ ಎಂದಿಗೂ ವಿಫಲವಾಗುವುದಿಲ್ಲ?
[ಅಧ್ಯಯನ ಪ್ರಶ್ನೆಗಳು]
[ಪುಟ 27ರಲ್ಲಿರುವ ಸಂಕ್ಷಿಪ್ತ ವಿವರಣೆ]
2010ರ ವಾರ್ಷಿಕವಚನ: ‘ಪ್ರೀತಿ ಎಲ್ಲವನ್ನೂ ತಾಳಿಕೊಳ್ಳುತ್ತದೆ. ಪ್ರೀತಿ ಎಂದಿಗೂ ವಿಫಲವಾಗುವುದಿಲ್ಲ.’—1 ಕೊರಿಂ. 13:7, 8.
[ಪುಟ 25ರಲ್ಲಿರುವ ಚಿತ್ರ]
ದೇವರ ಮೇಲಣ ಪ್ರೀತಿ ಸಾಕ್ಷಿಕೊಡುವಂತೆ ಪ್ರಚೋದಿಸುತ್ತದೆ
[ಪುಟ 26ರಲ್ಲಿರುವ ಚಿತ್ರ]
ಮಲಾವಿಯಲ್ಲಿರುವ ನಮ್ಮ ಸಹೋದರ ಸಹೋದರಿಯರು ಪರೀಕ್ಷೆಗಳನ್ನು ತಾಳಿಕೊಳ್ಳುವಂತೆ ವಿಫಲವಾಗದ ಪ್ರೀತಿ ಸಹಾಯಮಾಡಿತು