ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಸೇವೆಯಲ್ಲಿ ಕಾರ್ಯನಿರತರೂ ಸಂತೋಷಿತರೂ ಆಗಿರಿ

ದೇವರ ಸೇವೆಯಲ್ಲಿ ಕಾರ್ಯನಿರತರೂ ಸಂತೋಷಿತರೂ ಆಗಿರಿ

ದೇವರ ಸೇವೆಯಲ್ಲಿ ಕಾರ್ಯನಿರತರೂ ಸಂತೋಷಿತರೂ ಆಗಿರಿ

ನೀವು ಸಂತೋಷದಿಂದಿರಬೇಕೆಂದು ಯೆಹೋವನು ಬಯಸುತ್ತಾನೆ. (ಕೀರ್ತ. 100:2) ಆತನ ಸೇವಕರಲ್ಲಿ ಒಬ್ಬರಾಗಿರುವ ನೀವು ಕಾರ್ಯನಿರತರೂ ಆಗಿರಬಹುದು. ನೀವು ನಿಮ್ಮ ಜೀವನವನ್ನು ದೇವರಿಗೆ ಸಮರ್ಪಿಸಿಕೊಂಡಾಗ ಇಷ್ಟೊಂದು ಕಾರ್ಯನಿರತರಾಗಿ ಇದ್ದಿರಲಿಕ್ಕಿಲ್ಲ. ಆದರೆ ಈಗ ನಿಮಗಿರುವ ಐಹಿಕ ಹಾಗೂ ಆಧ್ಯಾತ್ಮಿಕ ಜವಾಬ್ದಾರಿಗಳು ನಿಮ್ಮ ಮೇಲೆ ಒತ್ತಡವನ್ನು ಹೇರುತ್ತಿರಬಹುದು. ಮಾತ್ರವಲ್ಲ ನೀವು ಮಾಡಬೇಕೆಂದು ಯೋಚಿಸಿದ್ದೆಲ್ಲವನ್ನು ಮಾಡಲಾಗದಿದ್ದಾಗ ದೋಷಿಭಾವನೆಯೂ ನಿಮ್ಮನ್ನು ಕಾಡಬಹುದು. ಹಾಗಿರುವಲ್ಲಿ ನೀವು ಸರಿಯಾದ ಸಮತೋಲನವನ್ನಿಟ್ಟುಕೊಂಡು ‘ಯೆಹೋವನ ಆನಂದವನ್ನು’ ಹೇಗೆ ಕಾಪಾಡಿಕೊಳ್ಳಬಲ್ಲಿರಿ?—ನೆಹೆ. 8:10.

ನೀವು ಕಠಿನ ಕಾಲಗಳಲ್ಲಿ ಜೀವಿಸುತ್ತಿದ್ದು ಅನೇಕ ಒತ್ತಡಗಳ ಕೆಳಗಿರುವುದರಿಂದ ಸುವ್ಯವಸ್ಥಿತರಾಗಿರುವ ಅಗತ್ಯವಿದೆ. ಅಪೊಸ್ತಲ ಪೌಲನು ಕೊಟ್ಟ ಕೆಲವು ಪ್ರೇರಿತ ಸಲಹೆಗಳು ಈ ವಿಷಯಕ್ಕೆ ವಿಶೇಷವಾಗಿ ಅನ್ವಯಿಸುತ್ತವೆ. ಅವನು ಹೇಳಿದ್ದು: “ನೀವು ನಡೆದುಕೊಳ್ಳುವ ರೀತಿಯನ್ನು ಕಟ್ಟುನಿಟ್ಟಾಗಿ ನೋಡಿಕೊಳ್ಳಿರಿ. ಅವಿವೇಕಿಗಳಂತೆ ನಡೆದುಕೊಳ್ಳದೆ ವಿವೇಕಿಗಳಂತೆ ನಡೆದುಕೊಳ್ಳಿರಿ. ದಿನಗಳು ಕೆಟ್ಟವುಗಳಾಗಿರುವುದರಿಂದ ನಿಮಗೋಸ್ಕರ ಸುಸಮಯವನ್ನು ಖರೀದಿಸಿಕೊಳ್ಳಿರಿ.”—ಎಫೆ. 5:15, 16.

ಈ ವಿವೇಕಭರಿತ ಸಲಹೆಗೆ ಅನುಸಾರವಾಗಿ ವ್ಯಾವಹಾರಿಕ ಗುರಿಗಳನ್ನಿಡುವ ಮೂಲಕ ವೈಯಕ್ತಿಕ ಅಧ್ಯಯನ, ಕುಟುಂಬ ಆರೈಕೆ, ಕ್ಷೇತ್ರ ಸೇವೆ, ಐಹಿಕ ಉದ್ಯೋಗ ಮತ್ತು ಇತರ ಅವಶ್ಯಕ ಚಟುವಟಿಕೆಗಳನ್ನು ನೀವು ಹೇಗೆ ಸರಿದೂಗಿಸಬಲ್ಲಿರಿ?

ನೀವು ಯೆಹೋವನಿಗೆ ನಿಮ್ಮನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆದುಕೊಂಡಾಗ ನಿಮಗಾದ ಸಂತೋಷವನ್ನು ನೆನಪಿಸಿಕೊಳ್ಳಬಲ್ಲಿರೊ? ಯೆಹೋವನ ಕುರಿತು ಹಾಗೂ ಆತನ ಉದ್ದೇಶಗಳ ಕುರಿತು ನೀವು ಪಡೆದುಕೊಂಡ ಜ್ಞಾನದಿಂದ ನಿಮಗೆ ಸಂತೋಷ ಸಿಕ್ಕಿತು. ಈ ತಿಳಿವಳಿಕೆ ಮತ್ತು ಸಂತೋಷವನ್ನು ಪಡೆದುಕೊಳ್ಳಲಿಕ್ಕಾಗಿ ನೀವು ತಿಂಗಳುಗಟ್ಟಲೆ ಶ್ರದ್ಧಾಪೂರ್ವಕ ಅಧ್ಯಯನ ಮಾಡಿರಬಹುದು. ಆದರೆ ನಿಮ್ಮ ಪ್ರಯತ್ನ ಖಂಡಿತವಾಗಿ ಸಾರ್ಥಕವಾಗಿತ್ತು. ಏಕೆಂದರೆ ಆ ಅಧ್ಯಯನವು ನಿಮ್ಮ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ತಂದಿತು.

ನಿಮ್ಮ ಸಂತೋಷವನ್ನು ಕಾಪಾಡಿಕೊಳ್ಳಬೇಕಾದರೆ ನೀವು ಆಧ್ಯಾತ್ಮಿಕ ಆಹಾರವನ್ನು ಸೇವಿಸುತ್ತಾ ಇರಬೇಕು. ಆದರೆ ಬೈಬಲನ್ನು ಓದಿ ಅಧ್ಯಯನ ಮಾಡಲು ಸಮಯವನ್ನು ಕಂಡುಕೊಳ್ಳುವುದು ನಿಮಗೆ ಕಷ್ಟವಾಗುತ್ತಿರುವಲ್ಲಿ ನಿಮ್ಮ ಶೆಡ್ಯೂಲನ್ನು ಪರಿಶೀಲಿಸಿ ನೋಡಿ. ದಿನದಲ್ಲಿ ನೀವು ಮಾಡುವ ಕೆಲವೇ ನಿಮಿಷಗಳ ಅಧ್ಯಯನ ಮತ್ತು ಮನನ ಸಹ ನಿಮ್ಮನ್ನು ಯೆಹೋವನ ಹತ್ತಿರಕ್ಕೆ ತಂದು ನಿಮ್ಮ ಸಂತೋಷವನ್ನು ಇನ್ನಷ್ಟು ಹೆಚ್ಚಿಸುವುದು ಖಂಡಿತ.

ದೇವರ ಸೇವಕರಲ್ಲಿ ಅನೇಕರು ಹೆಚ್ಚು ಪ್ರಾಮುಖ್ಯವಲ್ಲದ ವಿಷಯಗಳಿಗೆ ಕೊಡುವ ಸಮಯದಲ್ಲಿ ಸ್ವಲ್ಪವನ್ನು ಹೆಚ್ಚು ಪ್ರಮುಖವಾದ ಚಟುವಟಿಕೆಗಳಿಗಾಗಿ ಖರೀದಿಸಿಕೊಳ್ಳುತ್ತಾರೆ. ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ‘ನಾನು ಲೌಕಿಕ ಪತ್ರಿಕೆ ಅಥವಾ ವಾರ್ತಾಪತ್ರಿಕೆಗಳನ್ನು ಓದಲು, ಟಿವಿ ನೋಡಲು, ಸಂಗೀತ ಆಲಿಸಲು ಅಥವಾ ಯಾವುದೇ ಹವ್ಯಾಸವನ್ನು ಬೆನ್ನಟ್ಟಲು ಎಷ್ಟು ಸಮಯವನ್ನು ವ್ಯಯಿಸುತ್ತೇನೆ?’ ಈ ಎಲ್ಲ ಚಟುವಟಿಕೆಗಳು ಸಮಪ್ರಮಾಣದಲ್ಲಿದ್ದಾಗ ಮಾತ್ರ ಸಂತೋಷ ಸಿಗುವುದು. (1 ತಿಮೊ. 4:8) ಆದರೆ ಸಮಯವನ್ನು ಸರಿಯಾಗಿ ಬಳಸುವುದೇ ನಿಮಗೆ ಸಮಸ್ಯೆಯಾಗಿರುವಲ್ಲಿ ನಿಮ್ಮ ಶೆಡ್ಯೂಲನ್ನು ಹೊಂದಿಸಿಕೊಳ್ಳಲು ಕ್ರಮ ಕೈಗೊಳ್ಳಿ.

ಪತಿಯೂ ಮೂರು ಮಕ್ಕಳ ತಂದೆಯೂ ಸಭಾ ಹಿರಿಯರೂ ಆಗಿರುವ ಆ್ಯಡಮ್‌ ಈ ವಿಷಯದಲ್ಲಿ ಯಾವುದು ಸಹಾಯಕರ ಎಂಬುದನ್ನು ವಿವರಿಸುತ್ತಾರೆ: “ನಾನು ಜೀವನವನ್ನು ಸರಳವಾಗಿಡಲು ಪ್ರಯಾಸಪಡುತ್ತೇನೆ. ಸಮಯ ಕಬಳಿಸುವ ಹವ್ಯಾಸಗಳನ್ನು ಹಾಗೂ ಹೆಚ್ಚು ಗಮನವನ್ನು ಅಗತ್ಯಪಡಿಸುವ ಭೋಗ್ಯವಸ್ತುಗಳನ್ನು ನಾನು ಇಟ್ಟುಕೊಳ್ಳುವುದಿಲ್ಲ. ವೈರಾಗ್ಯದ ಜೀವನವನ್ನು ನಡೆಸುತ್ತೇನೆಂಬುದು ಇದರ ಅರ್ಥವಲ್ಲ. ಸರಳ ವಿನೋದಾವಳಿ ನನಗಿಷ್ಟ, ಅಷ್ಟೆ.”

ನಿಮ್ಮ ನಿರ್ಣಯಗಳಿಗೆ ಸಿಗಬಹುದಾದ ಉತ್ತಮ ಫಲಿತಾಂಶಗಳ ಕುರಿತು ಯೋಚಿಸುವುದು ನಿಮ್ಮ ಸಂತೋಷವನ್ನು ನವೀಕರಿಸಿ ಸಕಾರಾತ್ಮಕ ನೋಟವನ್ನಿಡುವಂತೆ ಸಹಾಯಮಾಡಬಲ್ಲದು. ಉದಾಹರಣೆಗೆ, ಮೂರು ಮಕ್ಕಳಿರುವ ಮೊರ್‌ಯೂಶ್‌ ಎಂಬ ಸಭಾ ಹಿರಿಯರು ಹೇಳುವುದು: “ನಾನು ಬೈಬಲನ್ನು ಅಧ್ಯಯನ ಮಾಡಲಾರಂಭಿಸಿದಾಗ ಆಶಾವಾದಿಯಾದೆ. ಆಗಿಂದಾಗ್ಗೆ ನಾನಿನ್ನೂ ಕಷ್ಟಗಳನ್ನು ಎದುರಿಸುತ್ತೇನೆ ಮತ್ತು ಅವುಗಳಲ್ಲಿ ಹೆಚ್ಚಿನವು ಯೆಹೋವನಿಗೆ ಮಾತ್ರ ತಿಳಿದಿವೆ. ಆದರೆ ಆತನು ನೀಡುವ ಬೆಂಬಲಕ್ಕೆ ನಾನು ಆಭಾರಿಯಾಗಿದ್ದು ಭವಿಷ್ಯತ್ತನ್ನು ಸಂತೋಷದಿಂದ ಎದುರುನೋಡುತ್ತೇನೆ.”

ಮೊರ್‌ಯೂಶ್‌ರ ವಿಷಯದಲ್ಲಿ ಹೇಗೋ ಹಾಗೆಯೇ, ಸಕಾರಾತ್ಮಕ ಮನೋಭಾವವು ಚಿಂತೆಗಳನ್ನೆಲ್ಲ ತೆಗೆದುಬಿಡುವುದಿಲ್ಲ. ಆದರೆ ಚೇತರಿಸಿಕೊಳ್ಳಲು ಹಾಗೂ ಜೀವನದ ಸವಾಲುಗಳನ್ನು ಉತ್ತಮವಾಗಿ ನಿರ್ವಹಿಸಲು ಅದು ಸಹಾಯಮಾಡಬಲ್ಲದು. ನಾವು ಓದುವುದು: “ಬಾಧಿತರ ದಿನಗಳೆಲ್ಲವೂ ಕೆಟ್ಟವುಗಳೇ; ಆದರೆ ಸಂತೋಷ ಹೃದಯವುಳ್ಳವನಿಗೆ ನಿತ್ಯವೂ ಔತಣ.” (ಜ್ಞಾನೋ. 15:15, NIBV) ದೇವರು ಈಗಾಗಲೇ ನಿಮಗೆ ತೋರಿಸಿರುವ ಪ್ರೀತಿಯ ಕುರಿತೂ ಯೋಚಿಸಿರಿ. ಹೀಗೆ ಮಾಡುವುದು ಯೆಹೋವನ ಮೇಲಿನ ನಿಮ್ಮ ಪ್ರೀತಿಯನ್ನು ಗಾಢಗೊಳಿಸಿ ದೈವಿಕ ಸಂತೋಷವನ್ನು ಹೆಚ್ಚಿಸಬಲ್ಲದು.—ಮತ್ತಾ. 22:37.

ಜೀವನದಲ್ಲಿ ಯೆಹೋವನನ್ನು ಮತ್ತು ಆತನ ಅಭಿರುಚಿಗಳನ್ನು ಪ್ರಥಮವಾಗಿಡುವುದು ಕುಟುಂಬ ಸಂತೋಷವನ್ನು ಹೆಚ್ಚಿಸುತ್ತದೆ. ಕ್ರೈಸ್ತ ಗುಣಗಳನ್ನು ತೋರಿಸುವುದರಿಂದ ಕುಟುಂಬದಲ್ಲಿ ಕಲಹಗಳು ಕಡಿಮೆಯಾಗಿ ಹೆಚ್ಚು ಆಪ್ತವೂ ಹಿತಕರವೂ ಆದ ಸಂಬಂಧವು ನೆಲೆಸುವುದು. ಹೀಗೆ ನಿಮ್ಮ ಮನೆ ಇಡೀ ಕುಟುಂಬಕ್ಕೆ ನಿಜ ಶಾಂತಿ ಮತ್ತು ಐಕ್ಯತೆಯ ಬೀಡಾಗಿರುವುದು.—ಕೀರ್ತ. 133:1.

ಕುಟುಂಬವಾಗಿ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಒಳಗೂಡುವುದು ನಿಜ ಸಂತೋಷವನ್ನು ಹೆಚ್ಚಿಸುತ್ತದೆ. ಮೊರ್‌ಯೂಶ್‌ ವಿವರಿಸುವುದು: “ಕುಟುಂಬವಾಗಿ ನಾವು ಕಳೆಯುವ ಸಮಯ ನನಗೆ ತುಂಬ ಅಮೂಲ್ಯ. ಪತ್ನಿಯಿಂದ ನನಗೆ ತುಂಬ ಸಹಕಾರ ಸಿಗುತ್ತದೆ. ಸಾಧ್ಯವಾದಾಗೆಲ್ಲ ಅವಳು ನನ್ನೊಂದಿಗಿರುತ್ತಾಳೆ. ಕ್ಷೇತ್ರ ಸೇವೆಯಲ್ಲಿ ಅಥವಾ ಅಧಿವೇಶನಗಳಿಗೆ ಮುಂಚೆ ಕ್ರೀಡಾಂಗಣವನ್ನು ಶುಚಿಗೊಳಿಸುವಾಗ, ಸಾರ್ವಜನಿಕ ಭಾಷಣಗಳನ್ನು ಕೊಡಲು ನಾನು ಬೇರೆ ಸಭೆಗಳಿಗೆ ಹೋಗುವಾಗ ಅವಳು ನನ್ನ ಜೊತೆಯಲ್ಲಿರುತ್ತಾಳೆ. ಇದು ನನಗೆ ಉತ್ತೇಜನ ಕೊಡುತ್ತದೆ.”

ಕ್ರೈಸ್ತರು ತಮ್ಮ ಕುಟುಂಬಗಳ ಅಗತ್ಯಗಳನ್ನು ಪೂರೈಸಬೇಕೆಂದು ಬೈಬಲ್‌ ಆಜ್ಞಾಪಿಸುತ್ತದೆ. (1 ತಿಮೊ. 5:8) ಆದರೆ ಐಹಿಕ ಉದ್ಯೋಗವು ಹೆಚ್ಚು ಸಮಯ ಮತ್ತು ಶಕ್ತಿಯನ್ನು ಕಬಳಿಸುವುದಾದರೆ ಅದು ದೇವರ ಸೇವೆಯಲ್ಲಿನ ನಿಮ್ಮ ಆನಂದವನ್ನು ಕಸಿದುಕೊಳ್ಳಬಹುದು. ಈ ವಿಷಯದ ಕುರಿತು ಯೆಹೋವನಿಗೆ ಪ್ರಾರ್ಥಿಸಿರಿ. (ಕೀರ್ತ. 55:22) ಕೆಲವರು ದೇವರ ರಾಜ್ಯವನ್ನು ಪ್ರಥಮವಾಗಿಡಲಿಕ್ಕಾಗಿ ಬೇರೆ ಉದ್ಯೋಗವನ್ನು ಕಂಡುಕೊಳ್ಳುವ ನಿರ್ಣಯಕ್ಕೂ ಬಂದಿದ್ದಾರೆ. ಹೆಚ್ಚು ಸಮಯ ಮತ್ತು ಶಕ್ತಿಯನ್ನು ಕೇಳಿಕೊಳ್ಳುವ ಉದ್ಯೋಗದಿಂದ ಸಿಗುವ ಹಣಕಾಸಿನ ಲಾಭಕ್ಕೋಸ್ಕರ ಹೆಚ್ಚು ಪ್ರಾಮುಖ್ಯವಾಗಿರುವ ಆಧ್ಯಾತ್ಮಿಕ ವಿಷಯಗಳನ್ನು ಯಾವ ಕ್ರೈಸ್ತನೂ ಕಡೆಗಣಿಸಬಾರದು.—ಜ್ಞಾನೋ. 22:3.

ನೀವು ಮಾಡುತ್ತಿರುವ ಅಥವಾ ಮಾಡಲಿರುವ ಉದ್ಯೋಗದ ಸಾಧಕ ಬಾಧಕಗಳ ಟಿಪ್ಪಣಿ ಬರೆದುಕೊಳ್ಳುವುದು ಸಹಾಯಕಾರಿ ಎಂದು ನೀವು ಕಂಡುಕೊಳ್ಳಬಹುದು. ಒಳ್ಳೆಯ ಸಂಬಳ ಹಾಗೂ ತೃಪ್ತಿಕರ ಕೆಲಸವನ್ನು ನಾವು ಖಂಡಿತ ಇಷ್ಟಪಡುತ್ತೇವೆ. ಆದರೂ ನೀವು ಈಗ ಮಾಡುತ್ತಿರುವ ಉದ್ಯೋಗವು ನಿಮ್ಮ ಕುಟುಂಬದ ಆಧ್ಯಾತ್ಮಿಕ ಸುಕ್ಷೇಮಕ್ಕೆ ನೆರವಾಗುತ್ತದೊ? ಎಲ್ಲ ಅಂಶಗಳನ್ನೂ ವಾಸ್ತವಿಕವಾಗಿ ತೂಗಿನೋಡಿ ಯೆಹೋವನೊಂದಿಗಿನ ನಿಮ್ಮ ಸಂಬಂಧಕ್ಕೆ ಆದ್ಯತೆ ಕೊಡುವಂಥ ನಿರ್ಣಯಗಳನ್ನು ಮಾಡಿರಿ.

ನೀವು ಈಗ ಮಾಡುತ್ತಿರುವ ಕೆಲಸವು ಆಧ್ಯಾತ್ಮಿಕ ಪ್ರಗತಿಗೆ ಅನುಕೂಲವಿಲ್ಲದಿರುವಲ್ಲಿ ನಿಮ್ಮ ಸನ್ನಿವೇಶವನ್ನು ನೀವು ಬದಲಾಯಿಸುವ ಅಗತ್ಯವಿದೆ. ಅನೇಕ ಕ್ರೈಸ್ತರು ಆಧ್ಯಾತ್ಮಿಕ ವಿಷಯಗಳಿಗೆ ಸಮಯವನ್ನು ಕಂಡುಕೊಳ್ಳಲಿಕ್ಕಾಗಿ ದೊಡ್ಡ ಬದಲಾವಣೆಗಳನ್ನು ಮಾಡಿದ್ದಾರೆ. ಪೋಲೆಂಡ್‌ ದೇಶದ ಒಬ್ಬ ಸಹೋದರನು ಹೇಳಿದ್ದು: “ಒಮ್ಮೆ ನನಗೆ ನನ್ನ ಕೆಲಸವನ್ನು ಬಿಟ್ಟುಬಿಡುವುದರ ಹೊರತು ಬೇರೆ ದಾರಿಯೇ ಇರಲಿಲ್ಲ. ಏಕೆಂದರೆ ಆ ಕೆಲಸದಿಂದಾಗಿ ನಾನು ಅನೇಕ ಸಾರಿ ಬಿಸ್ನೆಸ್‌ ಟ್ರಿಪ್‌ಗಳಿಗಾಗಿ ಮನೆಯಿಂದ ದೂರ ಉಳಿಯುತ್ತಿದ್ದೆ. ಇದರಿಂದಾಗಿ ನನಗೆ ನನ್ನ ಆಧ್ಯಾತ್ಮಿಕ ವಿಷಯಕ್ಕಾಗಲಿ ಕುಟುಂಬದ ಅಗತ್ಯಗಳಿಗಾಗಲಿ ಸಾಕಷ್ಟು ಸಮಯವಿರುತ್ತಿರಲಿಲ್ಲ.” ಈಗಲಾದರೋ ಅವನು ತುಂಬ ಕಡಿಮೆ ಸಮಯ ಮತ್ತು ಶಕ್ತಿಯನ್ನು ಅಗತ್ಯಪಡಿಸುವ ಉದ್ಯೋಗದಿಂದ ತನ್ನ ಜೀವನಾವಶ್ಯಕತೆಗಳನ್ನು ಸಂಪಾದಿಸುತ್ತಿದ್ದಾನೆ.

ಇತರರಿಗೆ ನೆರವಾಗುವುದರಲ್ಲಿ ಸಂತೋಷವನ್ನು ಕಂಡುಕೊಳ್ಳಿ

“ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ” ಎಂದು ಯೇಸು ಹೇಳಿದನು. (ಅ. ಕಾ. 20:35) ಈ ರೀತಿಯಲ್ಲಿ ಕೊಡಲು ಕ್ರೈಸ್ತರಿಗೆ ಎಷ್ಟೋ ಸಂದರ್ಭಗಳಿವೆ. ಕೆಲವೊಮ್ಮೆ ಸ್ನೇಹಯುತ ನಸುನಗೆ, ಹಸ್ತಲಾಘವ ಅಥವಾ ದೇವಪ್ರಭುತ್ವಾತ್ಮಕ ನೇಮಕವನ್ನು ಶ್ರಮಪಟ್ಟು ನಿರ್ವಹಿಸಿದವರಿಗೆ ಯಥಾರ್ಥವಾಗಿ ಕೃತಜ್ಞತೆ ಹೇಳುವುದಷ್ಟೆ ಇಬ್ಬರಿಗೂ ಸಂತೋಷವನ್ನು ತರಬಹುದು.

ಅಪೊಸ್ತಲ ಪೌಲನು ಜೊತೆ ಕ್ರೈಸ್ತರನ್ನು ಉತ್ತೇಜಿಸಿದ್ದು: “ಮನಗುಂದಿದವರಿಗೆ ಸಾಂತ್ವನಗೊಳಿಸುವಂಥ ರೀತಿಯಲ್ಲಿ ಮಾತಾಡಿರಿ, ಬಲಹೀನರಿಗೆ ಆಧಾರವಾಗಿರಿ.” (1 ಥೆಸ. 5:14) ತಮ್ಮ ಸ್ವಂತ ಶಕ್ತಿಯಿಂದ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಮನಗುಂದಿದವರು ನೆನಸಬಹುದು. ಅಂಥವರಿಗೆ ನಿಮ್ಮ ಸಹಾಯಹಸ್ತವನ್ನು ಚಾಚಬಲ್ಲಿರೊ? ಒಬ್ಬ ಸಹೋದರನೋ ಸಹೋದರಿಯೋ ಯೆಹೋವನ ಸೇವೆಯಲ್ಲಿನ ಸಂತೋಷವನ್ನು ಕಳೆದುಕೊಳ್ಳುತ್ತಿರುವುದನ್ನು ನೀವು ನೋಡುವಲ್ಲಿ ಅವರನ್ನು ಉತ್ತೇಜಿಸಲು ಪ್ರಯತ್ನಿಸಿ. ಹಾಗೆ ಮಾಡುವುದರಿಂದ ನಿಮಗೂ ಉತ್ತೇಜನ ಸಿಗುವುದು. ಕೆಲವೊಂದು ಸಮಸ್ಯೆಗಳನ್ನು ಯಾವ ಮನುಷ್ಯನಿಂದಲೂ ಪರಿಹರಿಸಲು ಸಾಧ್ಯವಿಲ್ಲ. ಆದರೂ ನೀವು ಅವರೆಡೆಗೆ ಯಥಾರ್ಥ ಅನುಕಂಪವನ್ನು ತೋರಿಸಿ ಯೆಹೋವನ ಎಂದಿಗೂ ವಿಫಲವಾಗದ ಶಕ್ತಿಯ ಮೇಲೆ ಆತುಕೊಳ್ಳುವಂತೆ ಅವರನ್ನು ಪ್ರೋತ್ಸಾಹಿಸಬಹುದು. ಯೆಹೋವನ ಮೇಲೆ ಆತುಕೊಳ್ಳುವವರು ಎಂದಿಗೂ ಆಶಾಭಂಗಪಡರು.—ಕೀರ್ತ. 27:10; ಯೆಶಾ. 59:1.

ಇನ್ನೊಂದು ಪ್ರಾಯೋಗಿಕ ಹೆಜ್ಜೆಯು, ಯಾರು ತಮ್ಮ ಸಂತೋಷವನ್ನು ಕಳೆದುಕೊಳ್ಳುತ್ತಿರುವಂತೆ ತೋರುತ್ತಾರೋ ಅವರನ್ನು ನಮ್ಮೊಂದಿಗೆ ಶುಶ್ರೂಷೆಗೆ ಬರುವಂತೆ ಆಮಂತ್ರಿಸುವುದೇ ಆಗಿದೆ. ಯೇಸು ತನ್ನ 70 ಮಂದಿ ಶಿಷ್ಯರನ್ನು ಸಾರಲು ಕಳುಹಿಸಿದಾಗ ಅವರನ್ನು “ಇಬ್ಬಿಬ್ಬರನ್ನಾಗಿ” ಕಳುಹಿಸಿದನು. (ಲೂಕ 10:1) ಹೀಗೆ ಮಾಡುವ ಮೂಲಕ ಅವನು ಪರಸ್ಪರ ಉತ್ತೇಜನಕ್ಕೆ ಅವಕಾಶ ಮಾಡಿಕೊಟ್ಟನೆಂದು ನಿಮಗನಿಸುವುದಿಲ್ಲವೆ? ನೀವು ಸಹ ಇಂದು ಅದೇ ವಿಧಾನವನ್ನು ಉಪಯೋಗಿಸುತ್ತಾ ಕೆಲವರು ಸಂತೋಷವನ್ನು ಪುನಃ ಪಡೆದುಕೊಳ್ಳಲು ಸಹಾಯಮಾಡಬಲ್ಲಿರೊ?

ಜೀವನವು ಸಹಜವಾಗಿ ಅನೇಕ ಚಿಂತೆಗಳಿಂದ ಕೂಡಿರುತ್ತದೆ. ಆದರೂ ಪೌಲನು ನಮ್ಮನ್ನು ಉತ್ತೇಜಿಸುವುದು: “ಯಾವಾಗಲೂ ಕರ್ತನಲ್ಲಿ ಹರ್ಷಿಸಿರಿ. ಹರ್ಷಿಸಿರಿ ಎಂದು ಮತ್ತೊಮ್ಮೆ ಹೇಳುತ್ತೇನೆ.” (ಫಿಲಿ. 4:4) ನೀವು ದೇವರನ್ನು ಪ್ರೀತಿಸಿ ಆತನಿಗೆ ವಿಧೇಯರಾಗಿ ಆತನು ಕೊಟ್ಟಿರುವ ಕೆಲಸವನ್ನು ಹುರುಪಿನಿಂದ ಮಾಡುತ್ತಾ ಇರುವುದರಿಂದ ನಿಮ್ಮ ಜೀವನಕ್ಕೆ ಉದ್ದೇಶವಿದೆ. ಅದು ನಿಮಗೆ ಸಂತೋಷ ತರುತ್ತದೆ. ಅಷ್ಟೇ ಅಲ್ಲ, ಯೆಹೋವನು ನೀವು ಎದುರಿಸುವ ಒತ್ತಡ ಮತ್ತು ಸಮಸ್ಯೆಗಳನ್ನು ನಿಭಾಯಿಸಲೂ ನಿಮಗೆ ಸಹಾಯಮಾಡುತ್ತಾನೆ.—ರೋಮ. 2:6, 7.

ಯೆಹೋವನು ತರಲಿರುವ ಹೊಸ ಲೋಕಕ್ಕೆ ಎಷ್ಟು ಹತ್ತಿರದಲ್ಲಿದ್ದೇವೆ ಎಂಬುದನ್ನು ನಾವು ನಂಬಿಕೆಯ ಕಣ್ಣುಗಳಿಂದ ನೋಡುತ್ತೇವೆ. ಅಲ್ಲಿ ನಮಗೆ ಸಂತೋಷಿಸಲು ಎಷ್ಟೊಂದು ಆಶೀರ್ವಾದಗಳೂ ಸಕಾರಣಗಳೂ ಇರುವವು! (ಕೀರ್ತ. 37:34) ಯೆಹೋವನು ಈಗಲೂ ನಮ್ಮನ್ನು ಎಷ್ಟು ಆಶೀರ್ವದಿಸುತ್ತಿದ್ದಾನೆ ಎಂಬುದನ್ನು ನೋಡುವಾಗ ನಾವು ಹರ್ಷಭರಿತರಾಗಿ ಇರಬಲ್ಲೆವು. ಹೀಗೆ ನಾವು ‘ಯೆಹೋವನನ್ನು ಸಂತೋಷದಿಂದ ಸೇವಿಸಸಾಧ್ಯವಿದೆ.’—ಕೀರ್ತ. 100:2.

[ಪುಟ 8ರಲ್ಲಿರುವ ರೇಖಾಕೃತಿ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಸಂತೋಷವನ್ನು ಕಾಪಾಡಿಕೊಳ್ಳಬೇಕಾದರೆ ನೀವು ಸಮಯವನ್ನು ವ್ಯಯಿಸುವ ವಿಧವನ್ನು ಹೊಂದಿಸಿಕೊಳ್ಳುವ ಅಗತ್ಯವಿರಬಹುದು

ವಿನೋದಾವಳಿ ಮತ್ತು ಮನೋರಂಜನೆ

ಮನೆ ಮತ್ತು ಕುಟುಂಬ ಆರೈಕೆ

ಉದ್ಯೋಗ

ಕ್ರೈಸ್ತ ಕೂಟಗಳು

ವೈಯಕ್ತಿಕ ಅಧ್ಯಯನ

ಶುಶ್ರೂಷೆ

[ಪುಟ 10ರಲ್ಲಿರುವ ಚಿತ್ರಗಳು]

ಇತರರು ತಮ್ಮ ಸಂತೋಷವನ್ನು ಪುನಃ ಪಡೆದುಕೊಳ್ಳುವಂತೆ ನೀವು ಸಹಾಯಮಾಡಬಲ್ಲಿರೊ?