ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಅಭಿವೃದ್ಧಿಯು ಪ್ರಕಟವಾಗಲಿ

ನಿಮ್ಮ ಅಭಿವೃದ್ಧಿಯು ಪ್ರಕಟವಾಗಲಿ

ನಿಮ್ಮ ಅಭಿವೃದ್ಧಿಯು ಪ್ರಕಟವಾಗಲಿ

“ಈ ಸಂಗತಿಗಳ ಕುರಿತು ಪರ್ಯಾಲೋಚಿಸು; ಅವುಗಳಲ್ಲಿ ಮಗ್ನನಾಗಿರು. ಹೀಗಾದರೆ ನಿನ್ನ ಅಭಿವೃದ್ಧಿಯು ಎಲ್ಲರಿಗೆ ಪ್ರಕಟವಾಗುವುದು.”—1 ತಿಮೊ. 4:15.

1, 2. ತಿಮೊಥೆಯನ ಬಾಲ್ಯದ ಕುರಿತು ಮತ್ತು ಅವನು 20 ವರ್ಷದವನಾದಾಗ ಸಂಭವಿಸಿದ ಬದಲಾವಣೆಯ ಕುರಿತು ನಮಗೇನು ತಿಳಿದಿದೆ?

ತಿಮೊಥೆಯನು ಹುಡುಗನಾಗಿದ್ದಾಗ ಗಲಾತ್ಯ (ಈಗ ಟರ್ಕಿ) ಎಂಬ ರೋಮನ್‌ ಪ್ರಾಂತ್ಯದಲ್ಲಿ ವಾಸಿಸಿದನು. ಯೇಸುವಿನ ಮರಣಾನಂತರದ ದಶಕಗಳಲ್ಲಿ ಅಲ್ಲಿ ಅನೇಕ ಕ್ರೈಸ್ತ ಸಭೆಗಳು ಸ್ಥಾಪಿಸಲ್ಪಟ್ಟವು. ಇಂಥ ಒಂದು ಸಮಯದಲ್ಲಿ ಎಳೆಯ ತಿಮೊಥೆಯ, ಅವನ ತಾಯಿ ಮತ್ತು ಅವನ ಅಜ್ಜಿ ಕ್ರೈಸ್ತತ್ವವನ್ನು ಸ್ವೀಕರಿಸಿದರು ಹಾಗೂ ಆ ಸಭೆಗಳಲ್ಲೊಂದರಲ್ಲಿ ಕ್ರಿಯಾಶೀಲರಾದರು. (2 ತಿಮೊ. 1:5; 3:14, 15) ತಿಮೊಥೆಯನು ಯುವ ಕ್ರೈಸ್ತನಾಗಿ ಆ ಚಿರಪರಿಚಿತ ನೆರೆಹೊರೆಯಲ್ಲಿ ಜೀವನವನ್ನು ನಿಜವಾಗಿ ಆನಂದಿಸಿದನು. ಆದರೆ ಒಮ್ಮೆಲೆ ವಿಷಯಗಳು ಬದಲಾಗತೊಡಗಿದವು.

2 ಅದೆಲ್ಲವು ಆರಂಭವಾದದ್ದು ಅಪೊಸ್ತಲ ಪೌಲನು ಆ ಕ್ಷೇತ್ರವನ್ನು ಎರಡನೇ ಸಲ ಸಂದರ್ಶಿಸಿದಾಗ. ಆ ಸಮಯದಲ್ಲಿ ತಿಮೊಥೆಯನು 18ರಿಂದ 21ರ ವಯಸ್ಸಿನವನಾಗಿ ಇದ್ದಿರಬಹುದು. ಪೌಲನು ಪ್ರಾಯಶಃ ಲುಸ್ತ್ರವನ್ನು ಸಂದರ್ಶಿಸಿದ ಸಮಯದಲ್ಲಿ ತಿಮೊಥೆಯನು ಸ್ಥಳಿಕ ಸಭೆಗಳಲ್ಲಿರುವ ‘ಸಹೋದರರಿಂದ ಒಳ್ಳೇ ಸಾಕ್ಷಿಯನ್ನು’ ಪಡೆಯುತ್ತಿದ್ದದ್ದನ್ನು ಗಮನಿಸಿದನು. (ಅ. ಕಾ. 16:2) ಯುವ ತಿಮೊಥೆಯನು ತನ್ನ ವಯಸ್ಸಿಗೂ ಮಿಗಿಲಾದ ಪ್ರೌಢತೆಯನ್ನು ತೋರಿಸಿದ್ದಿರಬೇಕು. ತದನಂತರ ಪವಿತ್ರಾತ್ಮದ ಮಾರ್ಗದರ್ಶನದಿಂದ ಪೌಲನು ಮತ್ತು ಸ್ಥಳಿಕ ಹಿರಿಯರ ಮಂಡಲಿಯು ತಿಮೊಥೆಯನ ಮೇಲೆ ಹಸ್ತಗಳನ್ನಿಟ್ಟು ಸಭೆಯಲ್ಲಿ ಅವನನ್ನು ಒಂದು ವಿಶೇಷ ಕಾರ್ಯಕ್ಕಾಗಿ ಪ್ರತ್ಯೇಕಿಸಿದರು.—1 ತಿಮೊ. 4:14; 2 ತಿಮೊ. 1:6.

3. ತಿಮೊಥೆಯನಿಗೆ ಯಾವ ಅಸಾಮಾನ್ಯ ಸೇವಾ ಸುಯೋಗ ದೊರೆಯಿತು?

3 ತಿಮೊಥೆಯನಿಗೆ ಒಂದು ಅಸಾಮಾನ್ಯ ಆಮಂತ್ರಣವು ದೊರಕಿತು. ಅದೇನೆಂದರೆ ಅಪೊಸ್ತಲ ಪೌಲನ ಸಂಚರಣ ಸಂಗಡಿಗನಾಗುವುದೇ. (ಅ. ಕಾ. 16:3) ಇದರಿಂದಾಗಿ ತಿಮೊಥೆಯನು ಎಷ್ಟು ಆಶ್ಚರ್ಯಚಕಿತನೂ ಪುಳಕಿತನೂ ಆಗಿದ್ದಿರಬೇಕು! ಮುಂದಿನ ಅನೇಕ ವರ್ಷಗಳಲ್ಲಿ ತಿಮೊಥೆಯನು ಪೌಲನೊಂದಿಗೆ ಮತ್ತು ಕೆಲವೊಮ್ಮೆ ಇತರರೊಂದಿಗೆ ಪ್ರಯಾಣ ಬೆಳೆಸುತ್ತಾ ಅಪೊಸ್ತಲರ ಮತ್ತು ಹಿರೀಪುರುಷರ ಪರವಾಗಿ ಅನೇಕ ನಿಯೋಗಗಳನ್ನು ನಡೆಸಲಿಕ್ಕಿದ್ದನು. ಪೌಲ ಮತ್ತು ತಿಮೊಥೆಯರ ಸಂಚಾರ ಸೇವೆಯು ಸಭೆಯ ಸಹೋದರರ ಆಧ್ಯಾತ್ಮಿಕ ಭಕ್ತಿವೃದ್ಧಿಗಾಗಿ ಬಹಳವಾಗಿ ನೆರವಾಯಿತು. (ಅ. ಕಾರ್ಯಗಳು 16:4, 5 ಓದಿ.) ಹೀಗೆ ತಿಮೊಥೆಯನ ಆಧ್ಯಾತ್ಮಿಕ ಅಭಿವೃದ್ಧಿಯು ಬಹುಮಂದಿ ಕ್ರೈಸ್ತರಿಗೆ ಪ್ರಸಿದ್ಧವಾಯಿತು. ಸುಮಾರು ಹತ್ತು ವರ್ಷ ತಿಮೊಥೆಯನೊಂದಿಗೆ ಕೆಲಸಮಾಡಿದ ನಂತರ ಅಪೊಸ್ತಲ ಪೌಲನು ಫಿಲಿಪ್ಪಿಯವರಿಗೆ ಬರೆದದ್ದು: “[ತಿಮೊಥೆಯನ] ಹಾಗೆ ನಿಮಗೆ ಸಂಬಂಧಿಸಿದ ವಿಷಯಗಳ ಕುರಿತು ಯಥಾರ್ಥವಾಗಿ ಚಿಂತಿಸುವ ಮನೋಭಾವವನ್ನು ತೋರಿಸುವವರು ನನ್ನ ಬಳಿ ಬೇರೆ ಯಾರೂ ಇಲ್ಲ. . . . ತಿಮೊಥೆಯನು ತನ್ನ ಕುರಿತು ಕೊಟ್ಟ ರುಜುವಾತು ನಿಮಗೆ ಗೊತ್ತುಂಟು; ಮಗನು ತಂದೆಯೊಂದಿಗೆ ಹೇಗೋ ಹಾಗೆಯೇ ಅವನು ಸುವಾರ್ತೆಯ ಅಭಿವೃದ್ಧಿಗಾಗಿ ನನ್ನೊಂದಿಗೆ ಕಷ್ಟಪಟ್ಟು ಕೆಲಸಮಾಡಿದನು.”—ಫಿಲಿ. 2:20-22.

4. (ಎ) ಯಾವ ಗಂಭೀರ ಜವಾಬ್ದಾರಿಯು ತಿಮೊಥೆಯನಿಗೆ ವಹಿಸಲ್ಪಟ್ಟಿತು? (ಬಿ) 1 ತಿಮೊಥೆಯ 4:15ರಲ್ಲಿರುವ ಪೌಲನ ಮಾತುಗಳ ಕುರಿತು ಯಾವ ಪ್ರಶ್ನೆಗಳನ್ನು ಕೇಳಬಹುದು?

4 ಪೌಲನು ಫಿಲಿಪ್ಪಿಯವರಿಗೆ ಪತ್ರ ಬರೆದ ಸರಿಸುಮಾರಿಗೆ ಅವನು ತಿಮೊಥೆಯನಿಗೆ ಒಂದು ಗಂಭೀರ ಜವಾಬ್ದಾರಿಯನ್ನು ವಹಿಸಿದನು. ಅದೇನೆಂದರೆ ಹಿರಿಯರನ್ನು ಮತ್ತು ಶುಶ್ರೂಷಾ ಸೇವಕರನ್ನು ನೇಮಿಸುವುದೇ. (1 ತಿಮೊ. 3:1; 5:22) ಅಷ್ಟರೊಳಗೆ ತಿಮೊಥೆಯನು ನಂಬಲರ್ಹನೂ ಭರವಸಾರ್ಹನೂ ಆಗಿದ್ದ ಕ್ರೈಸ್ತ ಮೇಲ್ವಿಚಾರಕನಾಗಿದ್ದನು. ಆದರೂ ಅದೇ ಪತ್ರದಲ್ಲಿ, ತಿಮೊಥೆಯನು ‘ತನ್ನ ಅಭಿವೃದ್ಧಿಯು ಎಲ್ಲರಿಗೆ ಪ್ರಕಟವಾಗುವಂತೆ’ ಮಾಡಬೇಕು ಎಂದು ಪೌಲನು ಬುದ್ಧಿವಾದವನ್ನಿತ್ತನು. (1 ತಿಮೊ. 4:15) ತಿಮೊಥೆಯನು ಆ ಮೊದಲೇ ತನ್ನ ಅಭಿವೃದ್ಧಿಯನ್ನು ಅಸಾಧಾರಣ ರೀತಿಯಲ್ಲಿ ತೋರಿಸಿರಲಿಲ್ಲವೇ? ತೋರಿಸಿದ್ದನು. ಹೀಗಿರಲಾಗಿ ಆ ಮಾತುಗಳನ್ನು ಪೌಲನು ಹೇಳಿದ್ದು ಯಾವ ಅರ್ಥದಲ್ಲಿ ಮತ್ತು ಅವನ ಸಲಹೆಯಿಂದ ನಾವು ಹೇಗೆ ಪ್ರಯೋಜನವನ್ನು ಪಡೆಯಬಲ್ಲೆವು?

ಆಧ್ಯಾತ್ಮಿಕ ಗುಣಗಳು ಪ್ರಕಟವಾಗುವ ವಿಧ

5, 6. ಎಫೆಸ ಸಭೆಯ ಆಧ್ಯಾತ್ಮಿಕ ಶುದ್ಧತೆಯು ಹೇಗೆ ಅಪಾಯಕ್ಕೊಳಗಾಗಿತ್ತು, ಮತ್ತು ತಿಮೊಥೆಯನು ಆ ಅಪಾಯವನ್ನು ಹೇಗೆ ಹೋಗಲಾಡಿಸ ಸಾಧ್ಯವಿತ್ತು?

5ಒಂದನೇ ತಿಮೊಥೆಯ 4:15ರ ಪೂರ್ವಾಪರವನ್ನು ನಾವೀಗ ಪರೀಕ್ಷಿಸೋಣ. (1 ತಿಮೊಥೆಯ 4:11-16 ಓದಿ.) ಆ ಮಾತುಗಳನ್ನು ಬರೆಯುವುದಕ್ಕೆ ಮುಂಚಿತವಾಗಿ ಪೌಲನು ಮಕೆದೋನ್ಯಕ್ಕೆ ಪ್ರಯಾಣ ಬೆಳೆಸಿದ್ದನು. ಆದರೆ ತಿಮೊಥೆಯನಿಗೆ ಎಫೆಸದಲ್ಲೇ ಉಳಿಯುವಂತೆ ಕೇಳಿಕೊಂಡಿದ್ದನು. ಏಕೆ? ಏಕೆಂದರೆ ಆ ಪಟ್ಟಣದ ಕೆಲವರು ಸುಳ್ಳು ಬೋಧನೆಗಳನ್ನು ಹಬ್ಬಿಸುವ ಮೂಲಕ ಸಭೆಯಲ್ಲಿ ಪಕ್ಷಭೇದವನ್ನು ಹುಟ್ಟಿಸುತ್ತಿದ್ದರು. ತಿಮೊಥೆಯನು ಆ ಸಭೆಯ ಆಧ್ಯಾತ್ಮಿಕ ಶುದ್ಧತೆಯನ್ನು ಕಾಪಾಡಬೇಕಿತ್ತು. ಅವನು ಇದನ್ನು ಹೇಗೆ ಮಾಡಲಿಕ್ಕಿದ್ದನು? ಅಂಶಿಕವಾಗಿ, ಇತರರು ಅನುಕರಿಸಸಾಧ್ಯವಿರುವ ಒಳ್ಳೆಯ ಮಾದರಿಯನ್ನು ಇಡುವ ಮೂಲಕವೇ.

6 ಪೌಲನು ತಿಮೊಥೆಯನಿಗೆ ಬರೆದದ್ದು: “ಮಾತಿನಲ್ಲಿಯೂ ನಡತೆಯಲ್ಲಿಯೂ ಪ್ರೀತಿಯಲ್ಲಿಯೂ ನಂಬಿಕೆಯಲ್ಲಿಯೂ ನೈತಿಕ ಶುದ್ಧತೆಯಲ್ಲಿಯೂ ನಂಬಿಗಸ್ತರಿಗೆ ಮಾದರಿಯಾಗಿರು.” ಪೌಲನು ಮತ್ತೂ ಹೇಳಿದ್ದು: “ಈ ಸಂಗತಿಗಳ ಕುರಿತು ಪರ್ಯಾಲೋಚಿಸು; ಅವುಗಳಲ್ಲಿ ಮಗ್ನನಾಗಿರು. ಹೀಗಾದರೆ ನಿನ್ನ ಅಭಿವೃದ್ಧಿಯು ಎಲ್ಲರಿಗೆ ಪ್ರಕಟವಾಗುವುದು.” (1 ತಿಮೊ. 4:12, 15) ಈ ಅಭಿವೃದ್ಧಿಯು ತಿಮೊಥೆಯನ ಆಧ್ಯಾತ್ಮಿಕ ಗುಣಗಳ ಸಂಬಂಧದಲ್ಲಿತ್ತೇ ಹೊರತು ಯಾವುದೇ ಅಧಿಕಾರ ಸ್ಥಾನದ ಸಂಬಂಧದಲ್ಲಿ ಅಲ್ಲ. ಈ ವಿಧದ ಅಭಿವೃದ್ಧಿಯೇ ತನ್ನಲ್ಲಿ ಪ್ರಕಟವಾಗುವಂತೆ ಪ್ರತಿಯೊಬ್ಬ ಕ್ರೈಸ್ತನು ಬಯಸಬೇಕು.

7. ಸಭೆಯಲ್ಲಿರುವ ಎಲ್ಲರಿಂದ ಏನನ್ನು ನಿರೀಕ್ಷಿಸಲಾಗುತ್ತದೆ?

7 ತಿಮೊಥೆಯನ ದಿನಗಳಂತೆ ಇಂದು ಸಹ ಸಭೆಯಲ್ಲಿ ಹಲವಾರು ಜವಾಬ್ದಾರಿಯುತ ಸ್ಥಾನಗಳಿವೆ. ಕೆಲವರು ಹಿರಿಯರಾಗಿ ಅಥವಾ ಶುಶ್ರೂಷಾ ಸೇವಕರಾಗಿ ಸೇವೆಮಾಡುತ್ತಾರೆ. ಇತರರು ಪಯನೀಯರ್‌ ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ. ಇನ್ನಿತರರು ಸಂಚರಣ ಕೆಲಸದಲ್ಲಿ, ಬೆತೆಲ್‌ ಸೇವೆಯಲ್ಲಿ ಅಥವಾ ಮಿಷನೆರಿ ಕ್ಷೇತ್ರದಲ್ಲಿ ನೇಮಕಗಳನ್ನು ಪಡೆದುಕೊಂಡಿದ್ದಾರೆ. ಹಿರಿಯರು ಸಮ್ಮೇಳನ, ಅಧಿವೇಶನಗಳಂಥ ವಿವಿಧ ಬೋಧನಾ ಕಾರ್ಯಕ್ರಮಗಳಲ್ಲಿ ಕಲಿಸುತ್ತಾರೆ. ಆದರೂ ಕ್ರೈಸ್ತರೆಲ್ಲರೂ—ಪುರುಷರಾಗಲಿ, ಸ್ತ್ರೀಯರಾಗಲಿ, ಯುವ ಜನರಾಗಲಿ ತಮ್ಮ ಆಧ್ಯಾತ್ಮಿಕ ಅಭಿವೃದ್ಧಿಯನ್ನು ಪ್ರಕಟವಾಗುವಂತೆ ಮಾಡುವ ಸಾಧ್ಯತೆಯುಳ್ಳವರಾಗಿದ್ದಾರೆ. (ಮತ್ತಾ. 5:16) ತಿಮೊಥೆಯನ ವಿಷಯದಲ್ಲಿ ಹೇಗೋ ಹಾಗೆ ವಿಶೇಷ ಜವಾಬ್ದಾರಿಯುತ ಸ್ಥಾನಗಳಲ್ಲಿರುವವರಿಂದ ಸಹ ಅವರು ತಮ್ಮ ಆಧ್ಯಾತ್ಮಿಕ ಗುಣಗಳನ್ನು ಎಲ್ಲರಿಗೂ ಪ್ರಕಟವಾಗುವಂತೆ ಮಾಡಬೇಕೆಂದು ನಿರೀಕ್ಷಿಸಲಾಗುತ್ತದೆ.

ಮಾತಿನಲ್ಲಿ ಮಾದರಿಯಾಗಿರಿ

8. ನಮ್ಮ ಮಾತು ನಮ್ಮ ಆರಾಧನೆಯ ಮೇಲೆ ಯಾವ ಪರಿಣಾಮ ಬೀರುತ್ತದೆ?

8 ತಿಮೊಥೆಯನು ಮಾದರಿಯನ್ನು ಇಡಬೇಕಾಗಿದ್ದ ಒಂದು ಕ್ಷೇತ್ರವು ಯಾವುದೆಂದರೆ ಮಾತಿನಲ್ಲಿಯೇ. ಮಾತಾಡುವುದರಲ್ಲಿ ನಾವು ನಮ್ಮ ಅಭಿವೃದ್ಧಿಯನ್ನು ಹೇಗೆ ಪ್ರಕಟಿಸಬಲ್ಲೆವು? ನಮ್ಮ ಮಾತು ನಾವು ಎಂಥ ವ್ಯಕ್ತಿಗಳೆಂಬುದನ್ನು ತೋರಿಸಿಕೊಡುತ್ತದೆ. ಯೇಸು ಸರಿಯಾಗಿ ಗಮನಿಸಿದ್ದು: “ಹೃದಯದಲ್ಲಿ ತುಂಬಿರುವುದನ್ನೇ ಬಾಯಿ ಮಾತಾಡುತ್ತದೆ.” (ಮತ್ತಾ. 12:34) ನಮ್ಮ ಮಾತು ನಮ್ಮ ಆರಾಧನೆಯ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದನ್ನು ಯೇಸುವಿನ ಮಲತಮ್ಮನಾದ ಯಾಕೋಬನು ಸಹ ಮನಗಂಡನು. ಅವನು ಬರೆದದ್ದು: “ಔಪಚಾರಿಕವಾದ ಆರಾಧಕನೆಂದೆಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆ ತನ್ನ ಸ್ವಂತ ಹೃದಯವನ್ನು ಮೋಸಗೊಳಿಸಿಕೊಳ್ಳುತ್ತಾ ಇರುವುದಾದರೆ ಅಂಥವನ ಆರಾಧನಾ ರೀತಿಯು ವ್ಯರ್ಥವಾದದ್ದಾಗಿದೆ.”—ಯಾಕೋ. 1:26.

9. ಯಾವ ರೀತಿಯಲ್ಲಿ ನಮ್ಮ ಮಾತು ಮಾದರಿಯಾಗಿರತಕ್ಕದ್ದು?

9 ನಮ್ಮ ಮಾತುಗಳು ನಾವು ಆಧ್ಯಾತ್ಮಿಕವಾಗಿ ಎಷ್ಟು ಪ್ರಗತಿಮಾಡಿದ್ದೇವೆ ಎಂಬುದನ್ನು ಸಭೆಯಲ್ಲಿರುವ ಇತರರಿಗೆ ಪ್ರಕಟಪಡಿಸಬಲ್ಲವು. ಇದಕ್ಕನುಸಾರ ಅಗೌರವಯುತ, ನಕಾರಾತ್ಮಕ, ಟೀಕಾತ್ಮಕ ಅಥವಾ ಮನೋವೇದಕ ಮಾತುಗಳನ್ನಾಡುವ ಬದಲಿಗೆ ಪ್ರೌಢ ಕ್ರೈಸ್ತರು ಸಾಂತ್ವನ, ಸಮಾಧಾನ ಮತ್ತು ಪ್ರೋತ್ಸಾಹಿಸುವ ಮಾತುಗಳನ್ನಾಡಿ ಭಕ್ತಿವೃದ್ಧಿಮಾಡಲು ಪ್ರಯಾಸಪಡಬೇಕು. (ಜ್ಞಾನೋ. 12:18; ಎಫೆ. 4:29; 1 ತಿಮೊ. 6:3-5, 20) ದೇವರ ಶ್ರೇಷ್ಠ ನೈತಿಕ ಮಟ್ಟಗಳ ಪರವಾಗಿ ಮತ್ತು ಅವುಗಳಿಗನುಸಾರ ಜೀವಿಸುವ ನಮ್ಮ ಅಪೇಕ್ಷೆಯ ಕುರಿತು ಮಾತಾಡಲು ನಮಗಿರುವ ಸಿದ್ಧಮನಸ್ಸು ದೇವರ ಕಡೆಗಿರುವ ನಮ್ಮ ಭಕ್ತಿಯನ್ನು ಪ್ರಕಟಗೊಳಿಸುತ್ತದೆ. (ರೋಮ. 1:15, 16) ನಾವು ನಮ್ಮ ವಾಕ್‌ ಶಕ್ತಿಯನ್ನು ಹೇಗೆ ಉಪಯೋಗಿಸುತ್ತೇವೆ ಎಂಬುದನ್ನು ಸಹೃದಯದ ಜನರು ನಿಶ್ಚಯವಾಗಿ ಅವಲೋಕಿಸುವರು ಮತ್ತು ನಮ್ಮ ಮಾದರಿಯನ್ನು ಅನುಸರಿಸಲೂಬಹುದು.—ಫಿಲಿ. 4:8, 9.

ನಡತೆ ಮತ್ತು ನೈತಿಕ ಶುದ್ಧತೆಯಲ್ಲಿ ಮಾದರಿ

10. ನಮ್ಮ ಆಧ್ಯಾತ್ಮಿಕ ಅಭಿವೃದ್ಧಿಗೆ ಕಪಟರಹಿತ ನಂಬಿಕೆಯು ಏಕೆ ಪ್ರಾಮುಖ್ಯ?

10 ಒಬ್ಬ ಕ್ರೈಸ್ತನು ಒಳ್ಳೆಯ ಮಾದರಿಯಾಗಿರಬೇಕಾದರೆ ಅವನಲ್ಲಿ ಕೇವಲ ಭಕ್ತಿವೃದ್ಧಿಯ ಮಾತುಗಳಿಗಿಂತ ಹೆಚ್ಚಿನದ್ದು ಅಗತ್ಯವಾಗಿದೆ. ಸರಿಯಾದದ್ದನ್ನು ಕೇವಲ ಮಾತಾಡಿ ಅದಕ್ಕನುಸಾರ ನಡೆಯದೇ ಇರುವುದು ಕಪಟತನ. ಫರಿಸಾಯರ ಕಪಟತನ ಮತ್ತು ಅವರ ನಡತೆಯ ಹಾನಿಕರ ಪರಿಣಾಮವನ್ನು ಪೌಲನು ಚೆನ್ನಾಗಿ ಬಲ್ಲವನಾಗಿದ್ದನು. ಅಂಥ ಅಪ್ರಾಮಾಣಿಕತೆ ಮತ್ತು ನಟನೆಯ ಕುರಿತು ಒಂದಕ್ಕಿಂತ ಹೆಚ್ಚು ಬಾರಿ ತಿಮೊಥೆಯನಿಗೆ ಅವನು ಎಚ್ಚರಿಕೆಯನ್ನು ಕೊಟ್ಟಿದ್ದನು. (1 ತಿಮೊ. 1:5; 4:1, 2) ಆದರೆ ತಿಮೊಥೆಯನು ಕಪಟಿಯಾಗಿರಲಿಲ್ಲ. ತಿಮೊಥೆಯನಿಗೆ ಬರೆದ ಎರಡನೆಯ ಪತ್ರದಲ್ಲಿ, “ನಿನ್ನಲ್ಲಿರುವ ನಿಷ್ಕಪಟವಾದ ನಂಬಿಕೆಯು ನನ್ನ ನೆನಪಿಗೆ ಬರುತ್ತದೆ” ಎಂದು ಪೌಲನು ಬರೆದಿದ್ದನು. (2 ತಿಮೊ. 1:5) ಆದರೂ ತಿಮೊಥೆಯನು ಕ್ರೈಸ್ತನೋಪಾದಿ ತನ್ನ ನಿಷ್ಕಪಟತೆಯನ್ನು ಇತರರಿಗೆ ಪ್ರಕಟವಾಗುವಂತೆ ಮಾಡುವ ಅಗತ್ಯವಿತ್ತು. ಅವನು ತನ್ನ ನಡತೆಯಲ್ಲಿ ಮಾದರಿಯನ್ನಿಡಬೇಕಿತ್ತು.

11. ಐಶ್ವರ್ಯದ ಕುರಿತು ಪೌಲನು ತಿಮೊಥೆಯನಿಗೆ ಏನು ಬರೆದನು?

11 ತಿಮೊಥೆಯನಿಗೆ ಬರೆದ ಎರಡು ಪತ್ರಗಳಲ್ಲಿ ಪೌಲನು ನಡತೆಯ ಹಲವಾರು ಕ್ಷೇತ್ರಗಳ ಕುರಿತು ಬುದ್ಧಿವಾದವನ್ನು ಕೊಟ್ಟನು. ಉದಾಹರಣೆಗೆ, ತಿಮೊಥೆಯನು ಐಶ್ವರ್ಯವನ್ನು ಬೆನ್ನಟ್ಟುವುದರಿಂದ ದೂರವಿರಬೇಕಿತ್ತು. ಪೌಲನು ಬರೆದದ್ದು: “ಹಣದ ಪ್ರೇಮವು ಎಲ್ಲ ರೀತಿಯ ಹಾನಿಕರವಾದ ವಿಷಯಗಳಿಗೆ ಮೂಲವಾಗಿದೆ ಮತ್ತು ಕೆಲವರು ಈ ಪ್ರೇಮವನ್ನು ಬೆನ್ನಟ್ಟುತ್ತಾ ನಂಬಿಕೆಯಿಂದ ದಾರಿತಪ್ಪಿದವರಾಗಿ ಅನೇಕ ವೇದನೆಗಳಿಂದ ತಮ್ಮನ್ನು ಎಲ್ಲ ಕಡೆಗಳಲ್ಲಿ ತಿವಿಸಿಕೊಂಡಿದ್ದಾರೆ.” (1 ತಿಮೊ. 6:10) ಐಶ್ವರ್ಯ ಪ್ರೇಮವು ಆಧ್ಯಾತ್ಮಿಕತೆಯ ಕೊರತೆಯ ಸೂಚನೆಯಾಗಿದೆ. ಬದಲಿಗೆ “ಅನ್ನವಸ್ತ್ರಗಳಿದ್ದರೆ ಸಾಕು” ಎಂಬ ಸರಳ ಜೀವನದಲ್ಲಿ ಸಂತೃಪ್ತಿಯನ್ನು ಪಡೆಯುವ ಕ್ರೈಸ್ತರು ತಮ್ಮ ಆಧ್ಯಾತ್ಮಿಕ ಅಭಿವೃದ್ಧಿಯು ಪ್ರಕಟವಾಗುವಂತೆ ಮಾಡುತ್ತಾರೆ.—1 ತಿಮೊ. 6:6-8; ಫಿಲಿ. 4:11-13.

12. ನಮ್ಮ ವೈಯಕ್ತಿಕ ಜೀವನದಲ್ಲಿ ನಮ್ಮ ಅಭಿವೃದ್ಧಿಯು ಪ್ರಕಟವಾಗುವಂತೆ ನಾವು ಹೇಗೆ ಮಾಡಬಲ್ಲೆವು?

12 ಕ್ರೈಸ್ತ ಸ್ತ್ರೀಯರು ‘ಸಭ್ಯತೆ ಮತ್ತು ಸ್ವಸ್ಥಬುದ್ಧಿಯುಳ್ಳವರಾಗಿದ್ದು ಮರ್ಯಾದೆಗೆ ತಕ್ಕ ಉಡುಪಿನಿಂದ ತಮ್ಮನ್ನು ಅಲಂಕರಿಸಿಕೊಳ್ಳುವುದು’ ಎಷ್ಟು ಪ್ರಾಮುಖ್ಯವೆಂದು ಪೌಲನು ತಿಮೊಥೆಯನಿಗೆ ತಿಳಿಸಿದನು. (1 ತಿಮೊ. 2:9) ತಮ್ಮ ಉಡುಪು ಮತ್ತು ಹೊರತೋರಿಕೆಗೆ ಸಂಬಂಧಪಟ್ಟ ವಿಷಯಗಳನ್ನು ಆರಿಸಿಕೊಳ್ಳುವುದರಲ್ಲಿ ಮತ್ತು ತಮ್ಮ ವೈಯಕ್ತಿಕ ಜೀವನದ ಇತರ ಕ್ಷೇತ್ರಗಳಲ್ಲಿ ಸಭ್ಯತೆ ಮತ್ತು ಸ್ವಸ್ಥಬುದ್ಧಿಯನ್ನು ತೋರಿಸುವಂಥ ಸ್ತ್ರೀಯರು ಅತ್ಯುತ್ತಮ ಮಾದರಿಯನ್ನಿಡುತ್ತಾರೆ. (1 ತಿಮೊ. 3:11) ಈ ಮೂಲತತ್ತ್ವ ಕ್ರೈಸ್ತ ಪುರುಷರಿಗೂ ಅನ್ವಯಿಸುತ್ತದೆ. ಮೇಲ್ವಿಚಾರಕರು ‘ಮಿತಸ್ವಭಾವದವರೂ ಸ್ವಸ್ಥಬುದ್ಧಿಯುಳ್ಳವರೂ ವ್ಯವಸ್ಥಿತರೂ’ ಆಗಿರಬೇಕೆಂದು ಪೌಲನು ಉತ್ತೇಜಿಸಿದನು. (1 ತಿಮೊ. 3:2) ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಾವು ಈ ಗುಣಗಳನ್ನು ಪ್ರದರ್ಶಿಸುವಾಗ ನಮ್ಮ ಅಭಿವೃದ್ಧಿಯು ಎಲ್ಲರಿಗೂ ಪ್ರಕಟವಾಗುವುದು.

13. ತಿಮೊಥೆಯನಂತೆ ನಾವು ನೈತಿಕ ಶುದ್ಧತೆಯಲ್ಲಿ ಹೇಗೆ ಮಾದರಿಗಳಾಗಿರಬಲ್ಲೆವು?

13 ನೈತಿಕ ಶುದ್ಧತೆಯಲ್ಲೂ ತಿಮೊಥೆಯನು ಆದರ್ಶ ಮಾದರಿಯಾಗಿರಬೇಕಿತ್ತು. ಈ ಶಬ್ದವನ್ನು ಉಪಯೋಗಿಸುವುದರಲ್ಲಿ ಪೌಲನು ಅತಿ ನಿಶ್ಚಿತ ರೂಪದ ನಡವಳಿಕೆಗೆ ಸೂಚಿಸುತ್ತಿದ್ದನು, ಅದೇನೆಂದರೆ ಲೈಂಗಿಕ ನೈತಿಕತೆ. ವಿಶೇಷವಾಗಿ ಸ್ತ್ರೀಯರೊಂದಿಗಿನ ತನ್ನ ವ್ಯವಹಾರದಲ್ಲಿ ತಿಮೊಥೆಯನ ನಡತೆಯು ನಿಂದಾರಹಿತವಾಗಿರಬೇಕಿತ್ತು. ಅವನು “ವೃದ್ಧ ಸ್ತ್ರೀಯರನ್ನು ತಾಯಂದಿರಂತೆಯೂ ಯೌವನಸ್ಥೆಯರನ್ನು ಸಹೋದರಿಯರಂತೆಯೂ ಪರಿಗಣಿಸಿ ಪೂರ್ಣ ನೈತಿಕ ಶುದ್ಧಭಾವದಿಂದ” ಉಪಚರಿಸಬೇಕಿತ್ತು. (1 ತಿಮೊ. 4:12; 5:2) ಗುಪ್ತವೆಂದು ತೋರಬಹುದಾದ ಅನೈತಿಕ ಕೃತ್ಯಗಳು ಸಹ ದೇವರಿಗೆ ತಿಳಿದಿವೆ ಮತ್ತು ಕಟ್ಟಕಡೆಗೆ ಜೊತೆ ಮಾನವರಿಗೆ ತಿಳಿದುಬರುವುದು ನಿಶ್ಚಯ. ಅದೇ ರೀತಿ ಕ್ರೈಸ್ತನೊಬ್ಬನ ಸತ್ಕಾರ್ಯಗಳು ಸಹ ಗುಪ್ತವಾಗಿರದೆ ಇತರರಿಗೆ ತಿಳಿದುಬರುವುದು. (1 ತಿಮೊ. 5:24, 25) ಹೀಗೆ ಸಭೆಯಲ್ಲಿರುವ ಎಲ್ಲರಿಗೂ ನಡತೆಯಲ್ಲಿ ಮತ್ತು ನೈತಿಕ ಶುದ್ಧತೆಯಲ್ಲಿ ತಮ್ಮ ಅಭಿವೃದ್ಧಿಯನ್ನು ಪ್ರಕಟವಾಗುವಂತೆ ಮಾಡುವ ಅವಕಾಶವಿದೆ.

ಪ್ರೀತಿ ಮತ್ತು ನಂಬಿಕೆ ಅವಶ್ಯಕ

14. ನಮ್ಮಲ್ಲಿ ಪ್ರೀತಿಯಿರುವ ಅಗತ್ಯವನ್ನು ದೇವರ ವಾಕ್ಯವು ಹೇಗೆ ಒತ್ತಿಹೇಳುತ್ತದೆ?

14 ನಿಜ ಕ್ರೈಸ್ತತ್ವದ ಒಂದು ಪ್ರಧಾನ ಅಂಶ ಪ್ರೀತಿ. “ನಿಮ್ಮ ಮಧ್ಯೆ ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು” ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು. (ಯೋಹಾ. 13:35) ಅಂಥ ಪ್ರೀತಿಯನ್ನು ನಾವು ತೋರಿಸುವುದು ಹೇಗೆ? ದೇವರ ವಾಕ್ಯವು “ಪ್ರೀತಿಯಲ್ಲಿ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ” ಮತ್ತು “ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ ಕೋಮಲ ಸಹಾನುಭೂತಿಯುಳ್ಳವರಾಗಿಯೂ . . . ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿಯೂ” ಅತಿಥಿಸತ್ಕಾರ ತೋರಿಸುವವರಾಗಿಯೂ ಇರುವಂತೆ ನಮಗೆ ಮನವಿಮಾಡುತ್ತದೆ. (ಎಫೆ. 4:2, 32; ಇಬ್ರಿ. 13:1, 2) “ಸಹೋದರ ಪ್ರೀತಿಯಲ್ಲಿ ಒಬ್ಬರಿಗೊಬ್ಬರು ಕೋಮಲ ಮಮತೆಯುಳ್ಳವರಾಗಿರಿ” ಎಂದು ಅಪೊಸ್ತಲ ಪೌಲನು ಬರೆದನು.—ರೋಮ. 12:10.

15. ಎಲ್ಲರೂ, ವಿಶೇಷವಾಗಿ ಕ್ರೈಸ್ತ ಮೇಲ್ವಿಚಾರಕರು ಪ್ರೀತಿ ತೋರಿಸುವುದು ಏಕೆ ಪ್ರಾಮುಖ್ಯ?

15 ತಿಮೊಥೆಯನು ತನ್ನ ಜೊತೆ ಕ್ರೈಸ್ತರನ್ನು ಕಠಿನವಾಗಿ ಇಲ್ಲವೆ ನಿರ್ದಯವಾಗಿ ಉಪಚರಿಸಿದ್ದಲ್ಲಿ ಅವನು ಬೋಧಕನೂ ಮೇಲ್ವಿಚಾರಕನೂ ಆಗಿ ಮಾಡಿದ ಸತ್ಕಾರ್ಯಗಳು ನಿಷ್ಫಲವಾಗಿ ಹೋಗುವ ಸಾಧ್ಯತೆಯಿತ್ತು. (1 ಕೊರಿಂಥ 13:1-3 ಓದಿ.) ಇನ್ನೊಂದು ಕಡೆ, ಸಹೋದರರಿಗಾಗಿ ತಿಮೊಥೆಯನ ನಿಜ ಮಮತೆಯ ಮಾತುಗಳು ಮತ್ತು ತನ್ನ ಸಹೋದರರ ಪರವಾಗಿ ಮಾಡಿದ ಅತಿಥಿಸತ್ಕಾರ ಹಾಗೂ ಸತ್ಕಾರ್ಯಗಳು ಅವನ ಆಧ್ಯಾತ್ಮಿಕ ಅಭಿವೃದ್ಧಿಯನ್ನು ನಿಶ್ಚಯವಾಗಿ ಎತ್ತಿಹೇಳಿತು. ಆದುದರಿಂದ ಅಪೊಸ್ತಲ ಪೌಲನು ತಿಮೊಥೆಯನಿಗೆ ಬರೆದ ತನ್ನ ಪತ್ರದಲ್ಲಿ ಪ್ರೀತಿಯನ್ನು ವಿಶೇಷವಾಗಿ ತಿಳಿಸಿದ್ದನು. ಯಾಕೆಂದರೆ ತಿಮೊಥೆಯನು ಆ ಗುಣದಲ್ಲಿ ಆದರ್ಶ ಮಾದರಿಯಾಗಿರಬೇಕಿತ್ತು.

16. ತಿಮೊಥೆಯನು ದೃಢನಂಬಿಕೆಯನ್ನು ತೋರಿಸುವ ಅಗತ್ಯವಿತ್ತು ಏಕೆ?

16 ತಿಮೊಥೆಯನು ಎಫೆಸದಲ್ಲಿದ್ದಾಗ ಅವನ ನಂಬಿಕೆಯು ಪರೀಕ್ಷೆಗೆ ಗುರಿಯಾಯಿತು. ಅಲ್ಲಿ ಕೆಲವರು ಕ್ರೈಸ್ತ ಸತ್ಯಕ್ಕೆ ಹೊಂದಿಕೆಯಲ್ಲಿಲ್ಲದ ಸಿದ್ಧಾಂತಗಳನ್ನು ಹಬ್ಬಿಸುತ್ತಿದ್ದರು. ಇತರರು ಸಭೆಯ ಆಧ್ಯಾತ್ಮಿಕತೆಗೆ ಏನೂ ಪ್ರಯೋಜನವಾಗದ ‘ಸುಳ್ಳು ಕಥೆಗಳನ್ನು’ ಅಥವಾ ಸಂಶೋಧನೆಯ ವಿಚಾರಗಳನ್ನು ಹಬ್ಬಿಸುತ್ತಿದ್ದರು. (1 ತಿಮೊಥೆಯ 1:3, 4 ಓದಿ.) ಇಂಥ ವ್ಯಕ್ತಿಗಳು ‘ಅಹಂಕಾರದಿಂದ ಉಬ್ಬಿಕೊಂಡವರಾಗಿದ್ದು ಏನನ್ನೂ ಅರ್ಥಮಾಡಿಕೊಳ್ಳದೆ, ಪದಗಳ ಕುರಿತು ಪ್ರಶ್ನೆಗಳನ್ನು ಹಾಕುತ್ತಾ ವಾಗ್ವಾದಗಳನ್ನು ಮಾಡುತ್ತಾ ಮಾನಸಿಕವಾಗಿ ರೋಗಹಿಡಿದವರಾಗಿದ್ದಾರೆ’ ಎಂದು ಪೌಲನು ವರ್ಣಿಸಿದನು. (1 ತಿಮೊ. 6:3, 4) ಸಭೆಯೊಳಗೆ ನುಸುಳಿಕೊಳ್ಳುತ್ತಿದ್ದ ಇಂಥ ಹಾನಿಕರವಾದ ವಿಚಾರಗಳಲ್ಲಿ ಏನಿದೆಯೆಂದು ನೋಡುವ ಅಪಾಯಕ್ಕೆ ತಿಮೊಥೆಯನು ಕೈಹಾಕಬಹುದಿತ್ತೊ? ಖಂಡಿತ ಇಲ್ಲ. ಯಾಕೆಂದರೆ ಪೌಲನು ತಿಮೊಥೆಯನಿಗೆ “ನಂಬಿಕೆಯ ಉತ್ತಮ ಹೋರಾಟವನ್ನು ಮಾಡು” ಮತ್ತು “ಪವಿತ್ರವಾದದ್ದನ್ನು ಹೊಲೆಮಾಡುವ ವ್ಯರ್ಥಮಾತುಗಳಿಂದಲೂ ‘ಜ್ಞಾನ’ ಎಂಬುದಾಗಿ ಸುಳ್ಳಾಗಿ ಕರೆಯಲ್ಪಡುವ ವಿರೋಧೋಕ್ತಿಗಳಿಂದಲೂ” ದೂರವಾಗಿರು ಎಂದು ಉತ್ತೇಜಿಸಿದನು. (1 ತಿಮೊ. 6:12, 20, 21) ಪೌಲನ ಈ ವಿವೇಕಯುತ ಸಲಹೆಯನ್ನು ತಿಮೊಥೆಯನು ಪಾಲಿಸಿದನು ಎಂಬುದಕ್ಕೆ ಸಾಕ್ಷ್ಯವಿದೆ.—1 ಕೊರಿಂ. 10:12.

17. ಇಂದು ನಮ್ಮ ನಂಬಿಕೆಯು ಹೇಗೆ ಪರೀಕ್ಷೆಗೆ ಒಳಗಾಗಬಹುದು?

17 “ಮುಂದಣ ಸಮಯಗಳಲ್ಲಿ ಕೆಲವರು ಮೋಸಕರವಾದ ಪ್ರೇರಿತ ಮಾತುಗಳಿಗೂ ದೆವ್ವಗಳ ಬೋಧನೆಗಳಿಗೂ ಗಮನಕೊಟ್ಟು ನಂಬಿಕೆಯಿಂದ ಬಿದ್ದುಹೋಗುವರೆಂದು” ತಿಮೊಥೆಯನಿಗೆ ತಿಳಿಸಲ್ಪಟ್ಟದ್ದು ಆಸಕ್ತಿಕರ. (1 ತಿಮೊ. 4:1) ಜವಾಬ್ದಾರಿಯುತ ಸ್ಥಾನಗಳಲ್ಲಿರುವವರ ಸಮೇತ ಸಭೆಯಲ್ಲಿರುವ ಎಲ್ಲರು ತಿಮೊಥೆಯನಂತೆ ದೃಢವೂ ನಿಶ್ಚಲವೂ ಆದ ನಂಬಿಕೆಯನ್ನು ತೋರಿಸುವ ಅಗತ್ಯವಿದೆ. ಧರ್ಮಭ್ರಷ್ಟತೆಯ ವಿರುದ್ಧ ದೃಢ ನಿಲುವು ಮತ್ತು ನಿರ್ಣಾಯಕ ಕ್ರಿಯೆ ಕೈಗೊಳ್ಳುವ ಮೂಲಕ ನಾವು ನಮ್ಮ ಅಭಿವೃದ್ಧಿಯನ್ನು ಪ್ರಕಟವಾಗುವಂತೆ ಮಾಡಬಲ್ಲೆವು ಮತ್ತು ನಂಬಿಕೆಯಲ್ಲಿ ಮಾದರಿಯಾಗಿರಬಲ್ಲೆವು.

ನಿಮ್ಮ ಅಭಿವೃದ್ಧಿಯು ಪ್ರಕಟವಾಗುವಂತೆ ಪ್ರಯಾಸಪಡಿ

18, 19. (ಎ) ನಿಮ್ಮ ಅಭಿವೃದ್ಧಿಯು ಎಲ್ಲರಿಗೂ ಪ್ರಕಟವಾಗುವಂತೆ ಹೇಗೆ ಮಾಡಬಲ್ಲಿರಿ? (ಬಿ) ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಿದ್ದೇವೆ?

18 ಒಬ್ಬ ನಿಜ ಕ್ರೈಸ್ತನ ಆಧ್ಯಾತ್ಮಿಕ ಅಭಿವೃದ್ಧಿಯು ಅವನ ಬಾಹ್ಯರೂಪ, ಸಹಜ ಸಾಮರ್ಥ್ಯ ಅಥವಾ ಪ್ರಖ್ಯಾತಿಗೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟ. ಸಭೆಯಲ್ಲಿ ಅವನು ಮಾಡಿರುವ ವರ್ಷಗಳ ಸೇವೆಯಿಂದ ಕೂಡ ಅದು ತೋರಿಬರದಿರಬಹುದು. ಬದಲಾಗಿ ನಿಜ ಆಧ್ಯಾತ್ಮಿಕ ಅಭಿವೃದ್ಧಿಯು ಯೆಹೋವನಿಗೆ ನಮ್ಮ ಯೋಚನೆ, ನಡೆ ಮತ್ತು ನುಡಿಗಳಲ್ಲಿ ವಿಧೇಯರಾಗಿರುವ ಮೂಲಕ ತೋರಿಬರುತ್ತದೆ. (ರೋಮ. 16:19) ಒಬ್ಬರನ್ನೊಬ್ಬರು ಪ್ರೀತಿಸುವ ಮತ್ತು ದೃಢನಂಬಿಕೆಯನ್ನು ಬೆಳೆಸಿಕೊಳ್ಳುವ ಆಜ್ಞೆಯನ್ನು ನಾವು ಪಾಲಿಸಬೇಕು. ಆದುದರಿಂದ ಪೌಲನು ತಿಮೊಥೆಯನಿಗೆ ಬರೆದ ಮಾತುಗಳನ್ನು ಪರ್ಯಾಲೋಚಿಸೋಣ ಮತ್ತು ಅವುಗಳಲ್ಲಿ ಮಗ್ನರಾಗಿರೋಣ. ಹೀಗಾದರೆ ನಮ್ಮ ಅಭಿವೃದ್ಧಿಯು ಎಲ್ಲರಿಗೂ ಪ್ರಕಟವಾಗುವುದು.

19 ನಮ್ಮ ಆಧ್ಯಾತ್ಮಿಕ ಅಭಿವೃದ್ಧಿ ಮತ್ತು ಕ್ರೈಸ್ತ ಪ್ರೀತಿಯಲ್ಲಿ ತೋರಿಬರುವ ಇನ್ನೊಂದು ಗುಣ ದೇವರ ಪವಿತ್ರಾತ್ಮದ ಫಲದ ಭಾಗವಾಗಿರುವ ಆನಂದ. (ಗಲಾ. 5:22, 23) ಸಂಕಷ್ಟಗಳ ಸಮಯದಲ್ಲಿ ನಾವು ಆನಂದವನ್ನು ಹೇಗೆ ಬೆಳೆಸಿಕೊಂಡು ಕಾಪಾಡಿಕೊಳ್ಳಬಲ್ಲೆವು ಎಂಬುದನ್ನು ಮುಂದಿನ ಲೇಖನವು ಚರ್ಚಿಸುವುದು.

ನಿಮ್ಮ ಉತ್ತರವೇನು?

• ನಮ್ಮ ಮಾತಿನಿಂದ ಇತರರು ನಮ್ಮ ಕುರಿತು ಏನನ್ನು ತಿಳಿಯಬಲ್ಲರು?

• ನಮ್ಮ ನಡತೆ ಮತ್ತು ನೈತಿಕ ಶುದ್ಧತೆಯಲ್ಲಿ ನಮ್ಮ ಅಭಿವೃದ್ಧಿಯು ಹೇಗೆ ಪ್ರಕಟವಾಗುವಂತೆ ಮಾಡುತ್ತೇವೆ?

• ಕ್ರೈಸ್ತರು ಪ್ರೀತಿ ಮತ್ತು ನಂಬಿಕೆಯಲ್ಲಿ ಮಾದರಿಗಳಾಗಿರಬೇಕು ಏಕೆ?

[ಅಧ್ಯಯನ ಪ್ರಶ್ನೆಗಳು]

[ಪುಟ 11ರಲ್ಲಿರುವ ಚಿತ್ರ]

ಯುವ ತಿಮೊಥೆಯನು ತನ್ನ ವಯಸ್ಸಿಗೂ ಮಿಗಿಲಾದ ಪ್ರೌಢತೆಯನ್ನು ತೋರಿಸಿದನು

[ಪುಟ 13ರಲ್ಲಿರುವ ಚಿತ್ರಗಳು]

ನಿಮ್ಮ ಅಭಿವೃದ್ಧಿಯು ಇತರರಿಗೆ ಪ್ರಕಟವಾಗಿದೆಯೊ?