ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಕೆದೋನ್ಯಕ್ಕೆ ಬಂದು ಸಹಾಯಮಾಡುವಿರೊ?

ಮಕೆದೋನ್ಯಕ್ಕೆ ಬಂದು ಸಹಾಯಮಾಡುವಿರೊ?

ಮಕೆದೋನ್ಯಕ್ಕೆ ಬಂದು ಸಹಾಯಮಾಡುವಿರೊ?

ಏಷ್ಯಾ ಮೈನರಿನ ರೇವು ಪಟ್ಟಣವಾದ ತ್ರೋವದಲ್ಲಿ ಅಪೊಸ್ತಲ ಪೌಲನು ಒಂದು ದರ್ಶನ ಕಂಡನು. ಅದರಲ್ಲಿ, ಮಕೆದೋನ್ಯದ ಒಬ್ಬ ಮನುಷ್ಯನು “ಮಕೆದೋನ್ಯಕ್ಕೆ ಬಂದು ನಮಗೆ ಸಹಾಯಮಾಡು” ಎಂದು ಅವನನ್ನು ಬೇಡಿಕೊಂಡನು. ಪೌಲನು ಆ ದರ್ಶನವನ್ನು ಕಂಡ ಕೂಡಲೇ ಅವನೂ ಅವನ ಸಂಗಡಿಗರೂ “ಮಕೆದೋನ್ಯದ ಜನರಿಗೆ ಸುವಾರ್ತೆಯನ್ನು ಸಾರಲಿಕ್ಕಾಗಿ ದೇವರು [ತಮ್ಮನ್ನು] ಕರೆದಿದ್ದಾನೆಂಬ ತೀರ್ಮಾನಕ್ಕೆ” ಬಂದರು. ಅವರು ಅಲ್ಲಿಗೆ ಹೋದಮೇಲೆ ಸಿಕ್ಕಿದ ಫಲಿತಾಂಶ? ಮಕೆದೋನ್ಯದ ಪ್ರಧಾನ ಪಟ್ಟಣವಾದ ಫಿಲಿಪ್ಪಿಯದಲ್ಲಿ ಲುದ್ಯಳು ಮತ್ತು ಅವಳ ಮನೆಯವರು ನಂಬುವವರಾದರು. ಮಕೆದೋನ್ಯದ ಆ ರೋಮನ್‌ ಪ್ರಾಂತದ ಇತರರೂ ವಿಶ್ವಾಸಿಗಳಾದರು.—ಅ. ಕಾ. 16:9-15.

ತದ್ರೀತಿಯ ಹುರುಪಿನ ಮನೋಭಾವವು ಇಂದು ಯೆಹೋವನ ಸಾಕ್ಷಿಗಳ ನಡುವೆ ತೋರಿಬರುತ್ತದೆ. ಅನೇಕರು ರಾಜ್ಯ ಘೋಷಕರ ಹೆಚ್ಚಿನ ಅಗತ್ಯವಿರುವ ಕ್ಷೇತ್ರಗಳಿಗೆ ತಮ್ಮ ಸ್ವಂತ ಖರ್ಚಿನಿಂದ ಹಾಗೂ ಸಿದ್ಧಮನಸ್ಸಿನಿಂದ ಸ್ಥಳಾಂತರಿಸಿದ್ದಾರೆ. ಉದಾಹರಣೆಗೆ, ಲೀಸ ಎಂಬವಳು ತನ್ನ ಜೀವಿತದಲ್ಲಿ ಶುಶ್ರೂಷೆಗೆ ಹೆಚ್ಚು ಆದ್ಯತೆ ಕೊಡಲು ಬಯಸಿದಳು. ಅವಳು ಕೆನಡದಿಂದ ಕೆನ್ಯಕ್ಕೆ ಸ್ಥಳಾಂತರಿಸಿದಳು. ಕೆನಡದವರೇ ಆಗಿದ್ದ ಟ್ರೆವರ್‌ ಮತ್ತು ಎಮಿಲೀ ತಮ್ಮ ಶುಶ್ರೂಷೆಯನ್ನು ವಿಸ್ತರಿಸುವ ಗುರಿಯನ್ನಿಟ್ಟು ಮಲಾವಿ ದೇಶಕ್ಕೆ ಹೋದರು. ಇಂಗ್ಲೆಂಡಿನ ಪೌಲ್‌ ಮತ್ತು ಮ್ಯಾಗೀ ಉದ್ಯೋಗ ನಿವೃತ್ತಿ ಪಡೆದಾಗ ಯೆಹೋವನ ಸೇವೆಯನ್ನು ಹೆಚ್ಚಿಸುವ ಸುವರ್ಣ ಅವಕಾಶವಾಗಿ ಅದನ್ನು ಬಳಸುತ್ತಾ ಪೂರ್ವ ಆಫ್ರಿಕಕ್ಕೆ ಪ್ರಯಾಣಬೆಳೆಸಿದರು. ನಿಮಗೆ ಸ್ವತ್ಯಾಗದ ಮನೋಭಾವವಿದೆಯೊ? ಈ ರೀತಿ ಬೇರೆ ದೇಶಕ್ಕೆ ಹೋಗಿ ಸೇವೆಮಾಡುವುದನ್ನು ನೀವು ಯೋಜಿಸಬಲ್ಲಿರೊ? ಹಾಗಿರುವಲ್ಲಿ, ಬೈಬಲಿನ ಯಾವ ಮೂಲತತ್ತ್ವಗಳು ಮತ್ತು ವ್ಯಾವಹಾರಿಕ ಸಲಹೆಗಳು ಯಶಸ್ಸನ್ನು ಪಡೆಯಲು ನಿಮಗೆ ಸಹಾಯಮಾಡಬಲ್ಲವು?

ನಿಮ್ಮನ್ನು ಪರಿಶೀಲಿಸಿಕೊಳ್ಳಿ

ನೀವು ಪರಿಗಣಿಸಬೇಕಾದ ಒಂದು ವಿಷಯವೇನಂದರೆ ನಿಮ್ಮ ಹೇತುಗಳೇ. ಯೇಸು ತಿಳಿಸಿದ ಅತಿ ದೊಡ್ಡ ಆಜ್ಞೆಯು “ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು” ಎಂಬುದೇ. ಹೀಗೆ ಬೇರೆ ದೇಶಕ್ಕೆ ಹೋಗಿ ಸೇವೆಮಾಡಲಿಕ್ಕಿರುವ ಕಾರಣಗಳು ದೇವರ ಮೇಲಣ ಪ್ರೀತಿ ಮತ್ತು ಶಿಷ್ಯರನ್ನಾಗಿ ಮಾಡುವ ಆಜ್ಞೆಯನ್ನು ನೆರವೇರಿಸುವ ಅಪೇಕ್ಷೆಯೇ ಆಗಿರಬೇಕು. ಯೇಸು ಮುಂದರಿಸುತ್ತಾ ಅಂದದ್ದು: “ಇದರಂತಿರುವ ಎರಡನೆಯ ಆಜ್ಞೆಯು, ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬುದೇ.” ನೆರೆಯವರ ಮೇಲಣ ನಮ್ಮ ಪ್ರೀತಿಯು ಅವರಿಗೆ ನೆರವಾಗುವ ನಮ್ಮ ಪ್ರಾಮಾಣಿಕ ಅಪೇಕ್ಷೆಯಿಂದ ತೋರಿಬರುತ್ತದೆ. (ಮತ್ತಾ. 22:36-39; 28:19, 20) ಪರದೇಶಕ್ಕೆ ಹೋಗಿ ಸೇವೆಮಾಡುವುದರಲ್ಲಿ ಸಾಮಾನ್ಯವಾಗಿ ಹೆಚ್ಚಿನ ಕೆಲಸ ಮತ್ತು ಸ್ವತ್ಯಾಗದ ಮನೋಭಾವ ಕೂಡಿರುತ್ತದೆ. ಅದು ಕೇವಲ ಬೆಟ್ಟಗಾಡಿನ ಸಂಚಾರ ವಿಹಾರದಂತಿಲ್ಲ. ನೀವು ಅದನ್ನು ಮಾಡಲು ಪ್ರೀತಿಯಿಂದ ಪ್ರಚೋದಿತರಾಗಿರಬೇಕು. ಈಗ ನಮೀಬಿಯದಲ್ಲಿ ಸೇವೆಮಾಡುತ್ತಿರುವ ನೆದರ್ಲೆಂಡ್ಸ್‌ನ ರೆಮ್ಕೋ ಮತ್ತು ಸೂಸೆನ್‌ ಅದನ್ನು ಸಾರಾಂಶವಾಗಿ ತಿಳಿಸುವುದು: “ನಾವು ಇಲ್ಲೇ ಉಳಿದು ಸೇವೆಮಾಡುವಂತೆ ಪ್ರಚೋದಿಸಿರುವುದು ಪ್ರೀತಿಯೇ.”

ನಮೀಬಿಯದಲ್ಲಿ ಸರ್ಕಿಟ್‌ ಮೇಲ್ವಿಚಾರಕರಾಗಿರುವ ವಿಲೀ ಎಂಬವರು ಗಮನಿಸಿದ್ದು: “ವಿದೇಶೀ ಕ್ಷೇತ್ರಗಳಲ್ಲಿ ಸೇವೆಮಾಡಲು ಬಂದು ಇಲ್ಲಿಯೇ ಉಳಿದವರು ತಮ್ಮನ್ನು ಸ್ಥಳಿಕ ಸಹೋದರರು ನೋಡಿಕೊಳ್ಳುತ್ತಾರೆ ಎಂಬ ನಿರೀಕ್ಷೆಯಿಂದ ಬರಲಿಲ್ಲ. ಅವರು ಸ್ಥಳಿಕ ಸಹೋದರರೊಂದಿಗೆ ಕೂಡಿ ಸೇವೆಮಾಡುತ್ತಾ ಅವರಿಗೆ ಸಾರುವ ಕೆಲಸದಲ್ಲಿ ನೆರವಾಗುವ ಅಪೇಕ್ಷೆಯಿಂದಲೇ ಬಂದರು.”

ನಿಮ್ಮ ಹೇತುಗಳನ್ನು ಪರಿಶೀಲಿಸಿಕೊಂಡ ಬಳಿಕ ನಿಮ್ಮನ್ನು ಹೀಗೆ ಕೇಳಿಕೊಳ್ಳಿರಿ: ‘ವಿದೇಶೀ ಕ್ಷೇತ್ರದಲ್ಲಿ ಉಪಯುಕ್ತವಾಗಿರಬಲ್ಲ ಯಾವ ಅನುಭವ ನನಗಿದೆ? ನಾನು ಪರಿಣಾಮಕಾರಿಯಾದ ಶುಶ್ರೂಷಕನೊ? ಯಾವ ಭಾಷೆಗಳು ನನಗೆ ಗೊತ್ತಿವೆ? ಹೊಸ ಭಾಷೆಯೊಂದನ್ನು ಕಲಿಯಲು ನಾನು ಸಿದ್ಧನೊ?’ ಇದನ್ನು ನಿಮ್ಮ ಕುಟುಂಬ ಹಾಗೂ ಮಕ್ಕಳೊಂದಿಗೂ ಗಂಭೀರವಾಗಿ ಚರ್ಚಿಸಿರಿ. ನಿಮ್ಮ ಸಭೆಯ ಹಿರಿಯರೊಂದಿಗೆ ಮಾತಾಡಿ ನೋಡಿರಿ. ಮಾತ್ರವಲ್ಲದೆ ನಿಶ್ಚಯವಾಗಿ ಅದನ್ನು ಪ್ರಾರ್ಥನೆಯಲ್ಲಿ ಯೆಹೋವನ ಮುಂದೆ ತನ್ನಿರಿ. ಅಂಥ ಪ್ರಾಮಾಣಿಕ ಸ್ವಪರೀಕ್ಷೆಯು ನಿಮಗೆ ನಿಜವಾಗಿ ವಿದೇಶೀ ಕ್ಷೇತ್ರದಲ್ಲಿ ಸೇವೆಮಾಡುವ ಸಾಮರ್ಥ್ಯ ಮತ್ತು ದೃಢಸಂಕಲ್ಪ ಇದೆಯೊ ಇಲ್ಲವೊ ಎಂಬುದನ್ನು ಕಾಣಲು ನೆರವಾಗಬೇಕು.—“ನಿಮ್ಮನ್ನೇ ತಿಳಿದುಕೊಳ್ಳಿ” ಎಂಬ ಚೌಕ ನೋಡಿ.

ಎಲ್ಲಿ ಸೇವೆಮಾಡುವಿರಿ?

ಪೌಲನನ್ನು ದರ್ಶನದಲ್ಲಿ ಮಕೆದೋನ್ಯಕ್ಕೆ ಬರುವಂತೆ ಕರೆಯಲಾಯಿತು. ಆದರೆ ಇಂದು ಯೆಹೋವನು ನಮ್ಮನ್ನು ಮಾರ್ಗದರ್ಶಿಸುವುದಕ್ಕೆ ಅಲೌಕಿಕ ಮೂಲಗಳನ್ನು ಉಪಯೋಗಿಸುವುದಿಲ್ಲ. ಆದರೂ ಈ ಪತ್ರಿಕೆಯ ಮತ್ತು ಇತರ ಪ್ರಕಾಶನಗಳ ಮೂಲಕ ದೇವಜನರು ಹೆಚ್ಚು ಅಗತ್ಯವಿರುವ ಕ್ಷೇತ್ರಗಳು ಯಾವ್ಯಾವುವೆಂದು ತಿಳಿದುಕೊಳ್ಳುತ್ತಾರೆ. ಆದುದರಿಂದ ಅಂಥ ಸ್ಥಳಗಳು ಯಾವ್ಯಾವುವೆಂದು ಪಟ್ಟಿಮಾಡಲಾರಂಭಿಸಿ. ಒಂದು ಹೊಸ ಭಾಷೆಯನ್ನು ಕಲಿಯಲು ನೀವು ಸಿದ್ಧರಿರದಿದ್ದಲ್ಲಿ ಅಥವಾ ಪರದೇಶದಲ್ಲಿ ಖಾಯಂ ಆಗಿ ಉಳಿಯಲು ನೀವು ಇಚ್ಛಿಸದಿದ್ದಲ್ಲಿ, ಯಾವ ದೇಶದ ಮುಖ್ಯ ಭಾಷೆಯು ನಿಮಗೆ ತಿಳಿದಿದೆಯೋ ಅಲ್ಲಿಗೆ ಹೋಗಿ ಸೇವೆಮಾಡುವ ಕುರಿತು ಪರಿಗಣಿಸಿರಿ. ತದನಂತರ ಬೇಕಾದ ವೀಸಾ ಆವಶ್ಯಕತೆ, ಸಾರಿಗೆ ಸೌಕರ್ಯ, ಭದ್ರತೆ, ಜೀವನೋಪಾಯದ ಖರ್ಚುವೆಚ್ಚ ಮತ್ತು ಹವಾಮಾನ ಮುಂತಾದವುಗಳ ಕಡೆಗೆ ಗಮನಕೊಡಿ. ತದ್ರೀತಿಯಲ್ಲಿ ಬೇರೆ ದೇಶಕ್ಕೆ ಹೋಗಿ ಸೇವೆಮಾಡುತ್ತಿರುವವರೊಂದಿಗೆ ಮಾತಾಡುವ ಮೂಲಕ ಸಹಾಯಕರ ಸಲಹೆಗಳು ನಿಮಗೆ ದೊರೆಯಬಹುದು. ಆದರೆ ಅದನ್ನು ಪ್ರಾರ್ಥನಾಪೂರ್ವಕವಾಗಿ ಮಾಡಿರಿ. ಪೌಲ ಮತ್ತು ಅವನ ಸಂಗಡಿಗರು ‘ಏಷ್ಯಾ ಪ್ರಾಂತದಲ್ಲಿ ವಾಕ್ಯವನ್ನು ಸಾರುವುದನ್ನು ಪವಿತ್ರಾತ್ಮವು ನಿಷೇಧಿಸಿತ್ತು ಎಂಬುದನ್ನು’ ಜ್ಞಾಪಿಸಿಕೊಳ್ಳಿ. ಅವರು ಬಿಥೂನ್ಯಕ್ಕೆ ಹೋಗಲು ಪ್ರಯತ್ನಿಸಿದರೂ “ಯೇಸು ಪವಿತ್ರಾತ್ಮದ ಮೂಲಕ ಅವರನ್ನು ಅನುಮತಿಸಲಿಲ್ಲ.” ಅಂತೆಯೇ ನಿಮ್ಮ ಸಹಾಯ ನಿಜವಾಗಿ ಎಲ್ಲಿ ಬೇಕು ಎಂಬುದನ್ನು ಸರಿಯಾಗಿ ನಿರ್ಧರಿಸಲು ನಿಮಗೆ ಸ್ವಲ್ಪ ಸಮಯ ಬೇಕಾದೀತು.—ಅ. ಕಾ. 16:6-10.

ಇಷ್ಟರೊಳಗೆ ನೀವು ಕೆಲವು ವ್ಯಾವಹಾರಿಕ ಆಯ್ಕೆಗಳನ್ನು ಗುರುತಿಸಿದ್ದಿರಬಹುದು. ಒಂದು ವಿದೇಶೀ ಕ್ಷೇತ್ರದಲ್ಲಿ ಸೇವೆಮಾಡುವುದಕ್ಕೆ ನೀವು ಯೋಚಿಸುತ್ತಿರುವಲ್ಲಿ ನೀವು ಹೋಗಲಿಚ್ಛಿಸುವ ದೇಶಗಳ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸ್‌ಗಳಿಗೆ ಪತ್ರಬರೆಯಿರಿ. ನಿಮ್ಮ ಸಭೆಯಲ್ಲಿ ನೀವು ಮಾಡುತ್ತಿದ್ದ ಹಾಗೂ ಮಾಡುತ್ತಿರುವ ವಿವಿಧ ಸೇವೆಗಳು ಅಥವಾ ಯಾವುದೇ ನೇಮಿತ ಸ್ಥಾನದಲ್ಲಿ ನೀವಿದ್ದರೆ ಅದನ್ನೂ ತಿಳಿಯಪಡಿಸಿರಿ. ಹಾಗೂ ನೀವು ಹೋಗಲಿರುವ ದೇಶದಲ್ಲಿ ಜೀವನೋಪಾಯದ ಖರ್ಚುವೆಚ್ಚಗಳು, ನಿಮಗೆ ದೊರೆಯಬಲ್ಲ ವಸತಿಸೌಕರ್ಯಗಳು, ಆರೋಗ್ಯಾರೈಕೆ ಸೌಲಭ್ಯಗಳು ಮತ್ತು ಉದ್ಯೋಗಗಳೇ ಕುರಿತ ಪ್ರಶ್ನೆಗಳನ್ನು ನೀವು ಕೇಳಬಹುದು. ಆಮೇಲೆ ನಿಮ್ಮ ಪತ್ರವನ್ನು ಅಥವಾ ಪತ್ರಗಳನ್ನು ನಿಮ್ಮ ಸಭಾ ಸೇವಾ ಕಮಿಟಿಗೆ ಕೊಡಿ. ಅವರು ತಮ್ಮ ಶಿಫಾರಸ್ಸು ಪತ್ರದೊಂದಿಗೆ ನಿಮ್ಮ ಪತ್ರವನ್ನು ಅಥವಾ ಪತ್ರಗಳನ್ನು ನೇರವಾಗಿ ಆ ದೇಶಗಳ ಬ್ರಾಂಚ್‌ ಆಫೀಸ್‌ಗಳಿಗೆ ಕಳುಹಿಸುವರು. ಅಲ್ಲಿಂದ ಬರುವ ಉತ್ತರಗಳು ನೀವು ಎಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸಮಾಡಬಲ್ಲಿರಿ ಎಂಬುದನ್ನು ನಿರ್ಣಯಿಸಲು ನಿಮಗೆ ನೆರವಾಗಬಲ್ಲವು.

ಹಿಂದೆ ತಿಳಿಸಿದ ವಿಲೀ ಎಂಬವರು ಗಮನಿಸಿದ್ದು: “ಬೇರೆ ದೇಶಕ್ಕೆ ಹೋಗಿ ತಮ್ಮ ಸೇವೆಯನ್ನು ಯಶಸ್ವಿಕರವಾಗಿ ಮಾಡುತ್ತಿರುವವರು ಮೊದಲಾಗಿ ಆ ದೇಶವನ್ನು ಸಂದರ್ಶಿಸಿದರು. ಹೆಚ್ಚು ಕಷ್ಟವಿಲ್ಲದೆ ನೆಮ್ಮದಿಯಿಂದಿರಬಲ್ಲ ಸ್ಥಳವನ್ನು ಕಂಡುಕೊಂಡರು. ಒಬ್ಬ ದಂಪತಿ ಒಂಟಿಯಾದ ದೂರದ ಪ್ರದೇಶದಲ್ಲಿ ಜೀವಿಸುವುದು ತಮಗೆ ಕಷ್ಟಕರವಾಗಿರುವುದೆಂದು ಮನಗಂಡರು. ಆದ್ದರಿಂದ ಸೇವೆಯ ಅಗತ್ಯತೆ ಇದ್ದ ಹಾಗೂ ತಮ್ಮನ್ನು ಸಂತೋಷದಿಂದ ಜೀವಿಸಸಾಧ್ಯಮಾಡುವ ಜೀವನ ಮಟ್ಟವೂ ಇದ್ದ ಒಂದು ಚಿಕ್ಕ ಪಟ್ಟಣದಲ್ಲಿ ಉಳುಕೊಂಡರು.”

ಹೊಸ ಸವಾಲುಗಳನ್ನು ಎದುರಿಸುವುದು

ಮನೆಬಿಟ್ಟು ಹೋಗಿ ಒಂದು ಪೂರಾ ಹೊಸತಾದ ಪರಿಸರದಲ್ಲಿ ಜೀವಿಸುವುದು ನಿಮಗೆ ಕೆಲವು ಸವಾಲುಗಳನ್ನು ಒಡ್ಡುತ್ತದೆ ನಿಶ್ಚಯ. “ಒಂಟಿತನ ಅತಿ ಕಷ್ಟಕರ ಅನುಭವ” ಎನ್ನುತ್ತಾಳೆ ಹಿಂದೆ ತಿಳಿಸಿದ ಲೀಸ. ಅವಳಿಗೆ ಸಹಾಯಮಾಡಿದ್ದು ಯಾವುದು? ತನ್ನ ಹೊಸ ಮನೆಯಲ್ಲಿ ಸ್ಥಳಿಕ ಸಭೆಗೆ ಹತ್ತಿರವಾಗಿ ಜೀವಿಸಿದ್ದೇ. ಸಭೆಯ ಪ್ರತಿಯೊಬ್ಬರ ಹೆಸರುಗಳನ್ನು ತಿಳಿದುಕೊಳ್ಳುವ ಗುರಿಯನ್ನು ಅವಳು ಇಟ್ಟಳು. ಇದನ್ನು ಪೂರೈಸಲಿಕ್ಕಾಗಿ ಅವಳು ಕೂಟಗಳಿಗೆ ಬೇಗ ಬಂದಳು ಮತ್ತು ಕೂಟದ ನಂತರ ಕೂಡಲೆ ಮನೆಗೆ ಹೋಗದೆ ಸಹೋದರ ಸಹೋದರಿಯರೊಂದಿಗೆ ಮಾತನಾಡಲು ಸಮಯ ತಕ್ಕೊಂಡಳು. ಲೀಸ ಶುಶ್ರೂಷೆಯಲ್ಲಿ ಇತರರೊಂದಿಗೆ ಸೇವೆಮಾಡಿದಳು, ಅನೇಕರನ್ನು ತನ್ನ ಮನೆಗೆ ಆಮಂತ್ರಿಸಿದಳು, ಹೊಸ ಸ್ನೇಹಿತರನ್ನು ಮಾಡಿಕೊಂಡಳು. “ತ್ಯಾಗಗಳನ್ನು ಮಾಡಿದ್ದಕ್ಕಾಗಿ ನಾನು ವಿಷಾಧಿಸುವುದಿಲ್ಲ. ಯೆಹೋವನು ನನ್ನನ್ನು ನಿಜವಾಗಿ ಆಶೀರ್ವದಿಸಿದ್ದಾನೆ” ಎಂದು ಆಕೆ ಹೇಳುತ್ತಾಳೆ.

ಮೂವತ್ತು ವರ್ಷ ಸಂಸಾರ ನಡಿಸಿ ಮಕ್ಕಳೆಲ್ಲರು ದೊಡ್ಡವರಾದ ಮೇಲೆ ಪೌಲ್‌ ಮತ್ತು ಮ್ಯಾಗೀ ಬೇರೆ ಸ್ಥಳವೊಂದಕ್ಕೆ ಸ್ಥಳಾಂತರಿಸಿದರು. ಪೌಲ್‌ ಹೇಳುವುದು: “ಮನೆಮಾರುಗಳನ್ನು ಬಿಟ್ಟುಹೊರಡುವುದು ನಿರೀಕ್ಷಿಸಿದ್ದಕ್ಕಿಂತಲೂ ಸುಲಭವಾಗಿತ್ತು. ಆದರೆ ನಮ್ಮ ಕುಟುಂಬವನ್ನು ಬಿಟ್ಟುಹೊರಡುವುದು ನಿಜವಾಗಿ ದೊಡ್ಡ ಸವಾಲು. ನೆನಸಿದ್ದಕ್ಕಿಂತ ಅತ್ಯಂತ ಕಷ್ಟಕರ. ವಿಮಾನದಲ್ಲಿ ಪ್ರಯಾಣಿಸುವಾಗ ನಾವು ಎಲ್ಲರನ್ನು ನೆನಸಿಕೊಂಡು ತುಂಬ ಅತ್ತುಬಿಟ್ಟೆವು. ‘ನಮ್ಮಿಂದ ಒಂದು ವಿಷಯವನ್ನು ಮಾಡಲು ಸಾಧ್ಯವೇ ಇಲ್ಲ’ ಎಂದು ಸುಲಭವಾಗಿ ಹೇಳಿಬಿಡಬಲ್ಲೆವು. ಆದರೆ ನಾವು ಯೆಹೋವನ ಮೇಲೆ ಆತುಕೊಂಡೆವು. ಹೊಸ ಹೊಸ ಮಿತ್ರರನ್ನು ಮಾಡಿಕೊಳ್ಳುವುದು ನಮಗೆ ಮುಂದೆ ಸಾಗುವಂತೆ ಇನ್ನೂ ಹೆಚ್ಚಿನ ದೃಢಸಂಕಲ್ಪವನ್ನು ಕೊಡುತ್ತದೆ.”

ಗ್ರೆಗ್‌ ಮತ್ತು ಕ್ರಿಸ್ಟಲ್‌ ಕೆನಡದಿಂದ ನಮೀಬಿಯಕ್ಕೆ ಸ್ಥಳಾಂತರಿಸಲು ಆರಿಸಿಕೊಂಡರು. ಏಕೆಂದರೆ ಅವರಿಗೆ ಆ ದೇಶದ ಅಧಿಕೃತ ಭಾಷೆಯಾದ ಇಂಗ್ಲಿಷ್‌ ಚೆನ್ನಾಗಿ ತಿಳಿದಿತ್ತು. ತದನಂತರವಾದರೋ ಸ್ಥಳಿಕ ಭಾಷೆಯೊಂದನ್ನು ಕಲಿಯುವುದು ಉಪಯುಕ್ತವೆಂದು ಅವರಿಗೆ ಕಂಡುಬಂತು. “ಕೆಲವೊಮ್ಮೆ ನಮಗೆ ನಿರಾಶೆಯಾಯಿತು. ಆದರೆ ಸ್ಥಳಿಕ ಭಾಷೆಯನ್ನು ಕಲಿತ ನಂತರವೇ ಸ್ಥಳಿಕ ಸಂಸ್ಕೃತಿ ಪದ್ಧತಿಗಳನ್ನು ನಾವು ಸರಿಯಾಗಿ ಅರ್ಥಮಾಡಿಕೊಂಡೆವು. ಸ್ಥಳಿಕ ಸಹೋದರರೊಂದಿಗೆ ಆಪ್ತ ಸಹವಾಸವೂ ನಮ್ಮ ಹೊಸ ಪರಿಸರಕ್ಕೆ ಹೊಂದಿಕೊಳ್ಳುವಂತೆ ಸಹಾಯಮಾಡಿತು.”

ಅಂಥ ನಮ್ರ ಮತ್ತು ಸಿದ್ಧ ಮನೋಭಾವವು ಸ್ಥಳಿಕ ಸಹೋದರರ ಮೇಲೆ ಸಹ ಧನಾತ್ಮಕ ಪರಿಣಾಮವನ್ನು ಬೀರಬಲ್ಲದು. ಜೆನಿ ಎಂಬವಳು ತಾನು ಬೆಳೆದು ದೊಡ್ಡವಳಾಗಿದ್ದ ಐರ್ಲಂಡ್‌ಗೆ ಸ್ಥಳಾಂತರಿಸಿದ್ದ ಕುಟುಂಬಗಳನ್ನು ಅಕ್ಕರೆಯಿಂದ ನೆನಪಿಸಿಕೊಳ್ಳುತ್ತಾಳೆ. “ಅವರು ಅತಿಥಿಸತ್ಕಾರಕ್ಕೆ ಖ್ಯಾತರಾಗಿದ್ದರು. ಅವರು ನಿಜವಾಗಿ ಸೇವೆಮಾಡಲು ಬಂದಿದ್ದರೇ ಹೊರತು ಸೇವೆಮಾಡಿಸಿಕೊಳ್ಳಲಿಕ್ಕಾಗಿ ಅಲ್ಲ. ಅವರೆಷ್ಟು ಹುರುಪಿನವರೂ ಸಂತೋಷಿತರೂ ಆಗಿದ್ದರೆಂದರೆ ನಾನೂ ಅವರಂತೆ ಅಗತ್ಯವಿದ್ದ ಬೇರೆ ಕಡೆ ಹೋಗಿ ಸೇವೆಮಾಡಬೇಕಾಗಿತ್ತು” ಎಂದಳವಳು. ಜೆನಿ ಈಗ ತನ್ನ ಗಂಡನೊಂದಿಗೆ ಗ್ಯಾಂಬಿಯದಲ್ಲಿ ಮಿಷನೆರಿಯಾಗಿ ಸೇವೆಮಾಡುತ್ತಿದ್ದಾಳೆ.

ಯೆಹೋವನ ಆಶೀರ್ವಾದ “ಭಾಗ್ಯದಾಯಕ”

ಮಕೆದೋನ್ಯದಲ್ಲಿ ಪೌಲನಿಗಾದ ಅನುಭವವು ಅದೆಷ್ಟು ಬಲವರ್ಧಕವಾಗಿತ್ತು! ಸುಮಾರು ಹತ್ತು ವರ್ಷಗಳ ಬಳಿಕ ಅವನು ಫಿಲಿಪ್ಪಿಯದಲ್ಲಿರುವ ಸಹೋದರರಿಗೆ ಬರೆದದ್ದು: “ಪ್ರತಿಬಾರಿ ನಾನು ನಿಮ್ಮನ್ನು ನೆನಸಿಕೊಳ್ಳುವಾಗೆಲ್ಲ ನನ್ನ ದೇವರಿಗೆ ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.”—ಫಿಲಿ. 1:3.

ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ಗೆ ಆಮಂತ್ರಿತರಾಗುವ ಮುಂಚೆ ಮಲಾವಿಯಲ್ಲಿ ಸೇವೆಮಾಡಿದ್ದ ಟ್ರೆವರ್‌ ಮತ್ತು ಎಮಿಲೀಗೂ ಅಂತೆಯೇ ಅನಿಸುತ್ತದೆ. “ಕೆಲವೊಮ್ಮೆ ನಾವು ಮಾಡಿದ್ದು ಸರಿಯೊ ಅಲ್ಲವೊ ಎಂದು ನಮಗನಿಸಿತ್ತು. ಆದರೆ ನಾವು ಸಂತೋಷದಿಂದಿದ್ದೆವು. ಪರಸ್ಪರ ಆಪ್ತತೆಯಿಂದಲೂ ಇದ್ದೆವು ಮಾತ್ರವಲ್ಲ ಯೆಹೋವನ ಆಶೀರ್ವಾದವು ನಮ್ಮ ಮೇಲಿತ್ತು.” ಈ ಮುಂಚೆ ತಿಳಿಸಿದ್ದ ಗ್ರೆಗ್‌ ಮತ್ತು ಕ್ರಿಸ್ಟಲ್‌ ಹೇಳುವುದು: “ನಾವು ಮಾಡತಕ್ಕದಾಗಿದ್ದ ಇದಕ್ಕಿಂತ ಉತ್ತಮ ಕೆಲಸ ಬೇರೊಂದಿರಲಿಲ್ಲ.”

ಪ್ರತಿಯೊಬ್ಬರಿಗೂ ಈ ವಿದೇಶೀ ಕ್ಷೇತ್ರದ ಸೇವೆಯನ್ನು ಮಾಡಲು ಸಾಧ್ಯವಿಲ್ಲವೆಂಬುದು ಒಪ್ಪತಕ್ಕದ್ದೇ. ಕೆಲವರು ತಮ್ಮ ಸ್ವಂತ ದೇಶದಲ್ಲಿ ಎಲ್ಲಿ ಹೆಚ್ಚಿನ ಅಗತ್ಯವಿದೆಯೋ ಅಂಥ ಬೇರೆ ಬೇರೆ ಸ್ಥಳಗಳಿಗೆ ಹೋಗಿ ಒಳ್ಳೇ ಸೇವೆಮಾಡಬಹುದು. ಇತರರಾದರೋ ತಮ್ಮ ಮನೆಗೆ ಹತ್ತಿರದ ಇತರ ಸಭೆಗಳಲ್ಲಿ ಸೇವೆಮಾಡುವ ಗುರಿಗಳನ್ನು ಇಡಬಲ್ಲರು. ಪ್ರಾಮುಖ್ಯ ಸಂಗತಿ ಏನಂದರೆ ಯೆಹೋವನ ಸೇವೆಯಲ್ಲಿ ಸಾಧ್ಯವಾದುದೆಲ್ಲವನ್ನು ಮಾಡುವುದೇ. (ಕೊಲೊ. 3:23) ಹೀಗೆ ದೇವರ ಪ್ರೇರಿತ ಮಾತುಗಳು ನಿಮ್ಮ ವಿಷಯದಲ್ಲೂ ಸತ್ಯವಾಗಿರುವವು. ಏನಂದರೆ “ಯೆಹೋವನ ಆಶೀರ್ವಾದವು ಭಾಗ್ಯದಾಯಕವು; ಅದು ವ್ಯಸನವನ್ನು ಸೇರಿಸದು.”—ಜ್ಞಾನೋ. 10:22.

[ಪುಟ 5ರಲ್ಲಿರುವ ಚೌಕ/ಚಿತ್ರ]

ನಿಮ್ಮನ್ನೇ ತಿಳಿದುಕೊಳ್ಳಿ

ಪರದೇಶದ ಕ್ಷೇತ್ರವೊಂದರಲ್ಲಿ ನೀವು ಸೇವೆಮಾಡಬಹುದೊ ಎಂದು ನಿಮ್ಮನ್ನೇ ಪರಿಶೀಲಿಸಿಕೊಳ್ಳಲು ಕೆಳಗೆ ಕೊಡಲಾದ ಪ್ರಶ್ನೆಗಳನ್ನು ಪರಿಗಣಿಸಿರಿ ಮತ್ತು ಅಂಥ ಕೆಲಸವನ್ನು ಮಾಡಬಲ್ಲಿರೊ ಇಲ್ಲವೊ ಎಂದು ಪ್ರಾಮಾಣಿತೆಯಿಂದ, ಪ್ರಾರ್ಥನಾಪೂರ್ವಕವಾಗಿ ಮತ್ತು ವ್ಯಾವಹಾರಿಕತೆಯಿಂದ ತೂಗಿನೋಡಿರಿ. ಕಾವಲಿನಬುರುಜುವಿನ ಹಿಂದಿನ ಸಂಚಿಕೆಗಳಲ್ಲಿರುವ ಮಾಹಿತಿಯು ಇದನ್ನು ಮಾಡಲು ನಿಮಗೆ ಸಹಾಯಮಾಡಬಲ್ಲದು.

• ನಾನು ಆಧ್ಯಾತ್ಮಿಕ ವ್ಯಕ್ತಿಯೊ?—“ಸಂತೋಷದ ಕಡೆಗೆ ತೆಗೆದುಕೊಳ್ಳಬೇಕಾದ ಹೆಜ್ಜೆಗಳು” (ಅಕ್ಟೋಬರ್‌ 15, 1997, ಪುಟ 6)

• ನಾನು ಪರಿಣಾಮಕಾರಿ ಶುಶ್ರೂಷಕನೊ?—“ಪಯನೀಯರ್‌ ಸೇವೆಯಲ್ಲಿ ಸಫಲಗೊಳ್ಳುವುದು ಹೇಗೆ?” (ಮೇ 15, 1989, ಪುಟ 21 [ಇಂಗ್ಲಿಷ್‌])

• ನಾನು ನನ್ನ ಕುಟುಂಬ, ಮಿತ್ರರನ್ನು ಬಿಟ್ಟು ದೂರ ವಾಸಿಸಬಲ್ಲೆನೊ?—“ದೇವರ ಸೇವೆಯಲ್ಲಿ ಮನೆಗೀಳನ್ನು ನಿಭಾಯಿಸುವುದು” (ಮೇ 15, 1994, ಪುಟ 28)

• ಹೊಸ ಭಾಷೆಯೊಂದನ್ನು ನಾನು ಕಲಿಯಶಕ್ತನೊ?—“ವಿದೇಶೀ ಭಾಷೆಯ ಸಭೆಯೊಂದಿಗೆ ಸೇವೆಮಾಡುವುದು” (ಮಾರ್ಚ್‌ 15, 2006, ಪುಟ 17)

• ಸ್ಥಳಾಂತರ ಮಾಡಿದ್ದಲ್ಲಿ ನನ್ನ ಖರ್ಚುವೆಚ್ಚವನ್ನು ನಾನು ನಿಭಾಯಿಸಬಲ್ಲೆನೊ?—“ವಿದೇಶಿ ಕ್ಷೇತ್ರದಲ್ಲಿ ನೀವು ಸೇವೆಮಾಡಬಲ್ಲಿರೊ?” (ಅಕ್ಟೋಬರ್‌ 15, 1999, ಪುಟ 23)

[ಪುಟ 6ರಲ್ಲಿರುವ ಚಿತ್ರ]

ನಮ್ರ ಮತ್ತು ಸಿದ್ಧ ಮನೋಭಾವವು ಸ್ಥಳಿಕ ಸಹೋದರರ ಮೇಲೆ ಧನಾತ್ಮಕ ಪರಿಣಾಮವನ್ನು ಬೀರಬಲ್ಲದು

[ಪುಟ 7ರಲ್ಲಿರುವ ಚಿತ್ರ]

ಇತರರ ಸೇವೆಮಾಡಲು ಬರುವವರೇ ಯಶಸ್ಸನ್ನು ಪಡೆಯುತ್ತಾರೆ