ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನದ ಪ್ರತಿದಿನವನ್ನು ದೇವರ ಮಹಿಮೆಗಾಗಿ ಬಳಸಿರಿ

ಜೀವನದ ಪ್ರತಿದಿನವನ್ನು ದೇವರ ಮಹಿಮೆಗಾಗಿ ಬಳಸಿರಿ

ಜೀವನದ ಪ್ರತಿದಿನವನ್ನು ದೇವರ ಮಹಿಮೆಗಾಗಿ ಬಳಸಿರಿ

“ಹೊತ್ತಾರೆ ನಿನ್ನ ಕೃಪೆಯು ನನಗೆ ಪ್ರಕಟವಾಗಲಿ; . . . ನಾನು ನಡೆಯತಕ್ಕ ಮಾರ್ಗವನ್ನು ತಿಳಿಸು” ಎಂದು ಕೀರ್ತನೆಗಾರ ದಾವೀದನು ಯೆಹೋವನಿಗೆ ಪ್ರಾರ್ಥಿಸಿದನು. (ಕೀರ್ತ. 143:8) ಬೆಳಗ್ಗೆ ಎದ್ದು ಒಂದು ಹೊಸ ದಿನವನ್ನು ಕಾಣುವಂತೆ ಮಾಡಿದ್ದಕ್ಕಾಗಿ ಯೆಹೋವನಿಗೆ ಧನ್ಯವಾದ ಹೇಳಿದ ನಂತರ ನೀವು ದಾವೀದನಂತೆ ಸರಿಯಾದ ನಿರ್ಣಯಗಳನ್ನು ಮಾಡಲು ಹಾಗೂ ಅತ್ಯುತ್ತಮ ಮಾರ್ಗಕ್ರಮವನ್ನು ಕೈಗೊಳ್ಳಲು ಮಾರ್ಗದರ್ಶಿಸುವಂತೆ ಯೆಹೋವನನ್ನು ಕೇಳಿಕೊಳ್ಳುತ್ತೀರೊ? ಕೇಳುತ್ತೀರೆಂಬುದರಲ್ಲಿ ಸಂದೇಹವಿಲ್ಲ.

ಯೆಹೋವನ ಸಮರ್ಪಿತ ಸೇವಕರಾದ ನಾವು ‘ತಿಂದರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನು ದೇವರ ಮಹಿಮೆಗಾಗಿ ಮಾಡಲು’ ಶ್ರಮಪಡುತ್ತೇವೆ. (1 ಕೊರಿಂ. 10:31) ನಮ್ಮ ದಿನನಿತ್ಯದ ಜೀವನ ರೀತಿಯು ಯೆಹೋವನಿಗೆ ಒಂದೇ ಗೌರವವನ್ನು ಇಲ್ಲವೇ ಅಗೌರವವನ್ನು ತರುವುದೆಂಬುದನ್ನು ನಾವು ತಿಳಿದಿರುತ್ತೇವೆ. ಅಷ್ಟೇ ಅಲ್ಲ, ಸೈತಾನನು ಕ್ರಿಸ್ತನ ಸಹೋದರರನ್ನು, ವಾಸ್ತವದಲ್ಲಿ ಭೂಮಿಯಲ್ಲಿರುವ ದೇವರ ಎಲ್ಲ ಸೇವಕರನ್ನು “ಹಗಲೂರಾತ್ರಿ” ಆಪಾದಿಸುತ್ತಿದ್ದಾನೆ ಎಂದು ದೇವರ ವಾಕ್ಯವು ಹೇಳುವುದನ್ನೂ ನಾವು ನೆನಪಿನಲ್ಲಿಡುತ್ತೇವೆ. (ಪ್ರಕ. 12:10) ಆದುದರಿಂದ ಸೈತಾನನ ಸುಳ್ಳು ಆಪಾದನೆಗಳಿಗೆ ಉತ್ತರ ಕೊಡಲು ಹಾಗೂ ನಮ್ಮ ಸ್ವರ್ಗೀಯ ತಂದೆಗೆ ಪವಿತ್ರ ಸೇವೆಯನ್ನು “ಹಗಲೂರಾತ್ರಿ” ಸಲ್ಲಿಸುವ ಮೂಲಕ ಯೆಹೋವನ ಹೃದಯವನ್ನು ಸಂತೋಷಪಡಿಸಲು ನಾವು ದೃಢತೀರ್ಮಾನ ಮಾಡಿದ್ದೇವೆ.—ಪ್ರಕ. 7:15; ಜ್ಞಾನೋ. 27:11.

ನಮ್ಮ ಜೀವನದ ಪ್ರತಿದಿನವನ್ನು ದೇವರ ಮಹಿಮೆಗಾಗಿ ಬಳಸುವ ಎರಡು ಪ್ರಮುಖ ವಿಧಗಳನ್ನು ನಾವೀಗ ಚುಟುಕಾಗಿ ಪರಿಗಣಿಸೋಣ. ಮೊದಲನೆಯದು, ಸರಿಯಾದ ಆದ್ಯತೆಗಳನ್ನಿಡುವುದು ಮತ್ತು ಎರಡನೆಯದು ಇತರರ ಕಡೆಗೆ ಪರಿಗಣನೆಯನ್ನು ತೋರಿಸುವುದು.

ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು

ಯೆಹೋವನಿಗೆ ನಮ್ಮನ್ನು ಸಮರ್ಪಿಸಿಕೊಳ್ಳುವ ಮೂಲಕ ಆತನ ಸೇವೆಮಾಡುವ ಹೃತ್ಪೂರ್ವಕ ಇಚ್ಛೆ ನಮಗಿದೆಯೆಂದು ನಾವು ತೋರಿಸಿಕೊಟ್ಟಿದ್ದೇವೆ. “ಪ್ರತಿದಿನವೂ”—ಹೌದು ನಿತ್ಯಕ್ಕೂ ಆತನ ಮಾರ್ಗಗಳಲ್ಲಿ ನಡೆಯುವೆವೆಂದು ನಾವು ಯೆಹೋವನಿಗೆ ಮಾತುಕೊಟ್ಟಿದ್ದೇವೆ. (ಕೀರ್ತ. 61:5, 8) ಹಾಗಾದರೆ ನಾವು ಕೊಟ್ಟ ಆ ಮಾತನ್ನು ಉಳಿಸಿಕೊಳ್ಳುವುದು ಹೇಗೆ? ಯೆಹೋವನ ಮೇಲಿರುವ ನಮ್ಮ ಪೂರ್ಣಹೃದಯದ ಪ್ರೀತಿಯನ್ನು ನಾವು ಪ್ರತಿದಿನವೂ ಹೇಗೆ ತೋರಿಸಿಕೊಡುತ್ತೇವೆ?

ನಾವು ಪೂರೈಸಬೇಕೆಂದು ಯೆಹೋವನು ಅಪೇಕ್ಷಿಸುವ ಜವಾಬ್ದಾರಿಗಳನ್ನು ದೇವರ ವಾಕ್ಯವು ಸ್ಪಷ್ಟವಾಗಿ ತಿಳಿಸುತ್ತದೆ. (ಧರ್ಮೋ. 10:12, 13) “ದೇವದತ್ತ ಜವಾಬ್ದಾರಿಗಳು” ಎಂಬ ಪುಟ 22ರಲ್ಲಿರುವ ಚೌಕದಲ್ಲಿ ಇಂಥ ಹಲವಾರು ಜವಾಬ್ದಾರಿಗಳನ್ನು ಪಟ್ಟಿಮಾಡಲಾಗಿದೆ. ಇವೆಲ್ಲವು ದೇವರು ಕೊಟ್ಟ ಜವಾಬ್ದಾರಿಗಳು, ಆದುದರಿಂದ ಪ್ರಮುಖವಾಗಿವೆ. ಹಾಗಾದರೆ ಒಂದೇ ಸಮಯದಲ್ಲಿ ಎರಡು ಅಥವಾ ಹೆಚ್ಚು ಜವಾಬ್ದಾರಿಗಳಿಗೆ ಗಮನ ಕೊಡಬೇಕಾಗಿ ಬಂದಾಗ ಯಾವುದಕ್ಕೆ ಆದ್ಯತೆ ಕೊಡಬೇಕೆಂದು ನಾವು ಹೇಗೆ ನಿರ್ಧರಿಸಬಲ್ಲೆವು?

ಪವಿತ್ರ ಸೇವೆಗೆ ನಾವು ಆದ್ಯತೆ ನೀಡುತ್ತೇವೆ. ಇದರಲ್ಲಿ ಬೈಬಲ್‌ ಅಧ್ಯಯನ, ಪ್ರಾರ್ಥನೆ, ಕ್ರೈಸ್ತ ಕೂಟಗಳು ಮತ್ತು ಶುಶ್ರೂಷೆಯು ಸೇರಿದೆ. (ಮತ್ತಾ. 6:33; ಯೋಹಾ. 4:34; 1 ಪೇತ್ರ 2:9) ಆದರೂ ದಿನವಿಡೀ ಆಧ್ಯಾತ್ಮಿಕ ಚಟುವಟಿಕೆಗಳಲ್ಲೇ ತೊಡಗಿರಲು ಸಾಧ್ಯವಿಲ್ಲ. ಉದ್ಯೋಗ, ಶಾಲೆ, ಹಲವಾರು ಮನೆಗೆಲಸಗಳನ್ನು ಮಾಡಲಿಕ್ಕಿರುತ್ತದೆ. ಹಾಗಿದ್ದರೂ ಕೂಟಗಳಿಗೆ ಹಾಜರಾಗುವುದೇ ಮುಂತಾದ ಪವಿತ್ರ ಸೇವೆಗೆ ಸಂಬಂಧಪಟ್ಟ ವಿಷಯಗಳಿಗೆ ಅಡ್ಡಿತರದ ರೀತಿಯಲ್ಲಿ ನಮ್ಮ ಐಹಿಕ ಕೆಲಸ ಮತ್ತು ಇತರ ಚಟುವಟಿಕೆಗಳನ್ನು ಸಂಘಟಿಸಲು ನಾವು ಕೈಲಾದುದೆಲ್ಲವನ್ನು ಮಾಡುತ್ತೇವೆ. ಉದಾಹರಣೆಗೆ, ನಾವು ರಜೆಯಲ್ಲಿ ಹೋಗುವಾಗ ಸರ್ಕಿಟ್‌ ಮೇಲ್ವಿಚಾರಕರ ಭೇಟಿ, ವಿಶೇಷ ಸಮ್ಮೇಳನ ದಿನ, ಸರ್ಕಿಟ್‌ ಸಮ್ಮೇಳನ ಅಥವಾ ಜಿಲ್ಲಾ ಅಧಿವೇಶನವನ್ನು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುತ್ತೇವೆ. ಕೆಲವೊಮ್ಮೆ ನಮ್ಮ ಜವಾಬ್ದಾರಿಗಳಲ್ಲಿ ಕೆಲವನ್ನು ಒಟ್ಟಿಗೆ ಮಾಡಲು ಶಕ್ತರಾಗಬಹುದು. ಉದಾಹರಣೆಗೆ, ಕುಟುಂಬವಾಗಿ ರಾಜ್ಯ ಸಭಾಗೃಹವನ್ನು ಶುಚಿಮಾಡಲು ಯೋಜಿಸಬಹುದು ಅಥವಾ ಕೆಲಸದ ಸ್ಥಳದಲ್ಲಿ ಇಲ್ಲವೆ ಶಾಲೆಯಲ್ಲಿ ಊಟದ ವಿರಾಮದ ವೇಳೆಯನ್ನು ಸಹೋದ್ಯೋಗಿಗಳಿಗೆ ಅಥವಾ ಸಹಪಾಠಿಗಳಿಗೆ ಸಾಕ್ಷಿಕೊಡಲು ಬಳಸಬಹುದು. ಉದ್ಯೋಗವನ್ನು ಕಂಡುಕೊಳ್ಳುವುದು, ಶಿಕ್ಷಣವನ್ನು ಮತ್ತು ಸ್ನೇಹಿತರನ್ನು ಆರಿಸಿಕೊಳ್ಳುವುದರ ಬಗ್ಗೆ ನಮಗೆ ನಿರ್ಣಯ ಮಾಡಲಿಕ್ಕಿದೆ ನಿಶ್ಚಯ. ಅಂಥ ನಿರ್ಣಯಗಳನ್ನು ಮಾಡುವಾಗ ನಮ್ಮ ಪ್ರೀತಿಯ ತಂದೆಯಾಗಿರುವ ಯೆಹೋವನನ್ನು ಆರಾಧಿಸುವ ನಮ್ಮ ಅತ್ಯಂತ ಮುಖ್ಯ ಆದ್ಯತೆಯು ಅವುಗಳನ್ನು ಪ್ರಭಾವಿಸುವಂತೆ ಬಿಡಬೇಕು.—ಪ್ರಸಂ. 12:13.

ಇತರರಿಗೆ ಪರಿಗಣನೆ ತೋರಿಸಿ

ನಾವು ಇತರರ ಕಡೆಗೆ ಪರಿಗಣನೆ ತೋರಿಸಬೇಕು ಮತ್ತು ಅವರಿಗೆ ಉಪಕಾರವನ್ನು ಮಾಡಬೇಕೆಂದು ಯೆಹೋವನು ಬಯಸುತ್ತಾನೆ. ಸೈತಾನನಾದರೋ ಸ್ವಾರ್ಥತೆಯನ್ನು ಪ್ರವರ್ಧಿಸುತ್ತಾನೆ. “ಸ್ವಪ್ರೇಮಿಗಳೂ” “ಭೋಗವನ್ನು ಪ್ರೀತಿಸುವವರೂ” ‘ಶರೀರಭಾವಕ್ಕೆ ಅನುಸಾರವಾಗಿ ಬಿತ್ತುತ್ತಿರುವವರೂ’ ಆಗಿರುವ ಜನರು ಸೈತಾನನ ಲೋಕದಲ್ಲಿ ತುಂಬಿರುತ್ತಾರೆ. (2 ತಿಮೊ. 3:1-5; ಗಲಾ. 6:8) ತಮ್ಮ ಕ್ರಿಯೆಗಳು ಇತರರ ಮೇಲೆ ತರುವ ಪರಿಣಾಮದ ಕುರಿತು ಅನೇಕರು ಕಿಂಚಿತ್ತೂ ಯೋಚಿಸುವುದಿಲ್ಲ. ಎಲ್ಲೆಲ್ಲಿಯೂ “ಶರೀರಭಾವದ ಕಾರ್ಯಗಳು” ಪ್ರತ್ಯಕ್ಷವಾಗಿ ತೋರಿಬರುತ್ತಿವೆ.—ಗಲಾ. 5:19-21.

ಯೆಹೋವನ ಪವಿತ್ರಾತ್ಮದಿಂದ ಪ್ರೇರಿಸಲ್ಪಟ್ಟವರ ಮನೋಭಾವವಾದರೋ ಎಷ್ಟು ಭಿನ್ನವಾಗಿದೆ! ಅವರು ಇತರರೊಂದಿಗೆ ವ್ಯವಹರಿಸುವಾಗ ಪ್ರೀತಿ, ದಯೆ ಮತ್ತು ಒಳ್ಳೇತನವನ್ನು ತೋರಿಸುತ್ತಾರೆ. (ಗಲಾ. 5:22) ನಮ್ಮ ಅಗತ್ಯಗಳಿಗಿಂತ ಇತರರ ಅಗತ್ಯಗಳ ಕಡೆಗೆ ಹೆಚ್ಚಿನ ಆಸಕ್ತಿಯನ್ನು ತೋರಿಸುವಂತೆ ದೇವರ ವಾಕ್ಯವು ಹೇಳುತ್ತದೆ. ಆದುದರಿಂದ ನಾವು ಪರಸ್ಪರ ಸಕ್ರಿಯ ಆಸಕ್ತಿ ತೋರಿಸುತ್ತೇವೆ. ಆದರೂ ಅವರ ವೈಯಕ್ತಿಕ ವಿಷಯದಲ್ಲಿ ತಲೆಹಾಕದಂತೆ ಜಾಗ್ರತೆ ವಹಿಸುತ್ತೇವೆ. (1 ಕೊರಿಂ. 10:24, 33; ಫಿಲಿ. 2:3, 4; 1 ಪೇತ್ರ 4:15) ನಮ್ಮ ಜೊತೆ ವಿಶ್ವಾಸಿಗಳಿಗೆ ನಾವು ವಿಶೇಷ ಪರಿಗಣನೆ ತೋರಿಸುತ್ತೇವೆ. ಆದರೂ ಅವಿಶ್ವಾಸಿಗಳಿಗೂ ಸಹಾಯಮಾಡಲು ನಾವು ಶ್ರಮಿಸುತ್ತೇವೆ. (ಗಲಾ. 6:10) ನೀವು ಭೇಟಿಯಾಗುವ ಯಾವನಿಗಾದರೂ ದಯೆ ತೋರಿಸುವ ಸಂದರ್ಭಕ್ಕಾಗಿ ಇಂದು ನೀವು ಹುಡುಕಬಲ್ಲಿರೊ?—“ಪರಿಗಣನೆ ತೋರಿಸಿ . . . “ ಎಂಬ ಪುಟ 23ರಲ್ಲಿರುವ ಚೌಕ ನೋಡಿರಿ.

ಪರಿಗಣನೆ ತೋರಿಸುವುದಕ್ಕೆ ಒಂದು ವಿಶೇಷ ಸಮಯ ಅಥವಾ ನಿರ್ದಿಷ್ಟ ಸನ್ನಿವೇಶ ಬೇಕೆಂದಿಲ್ಲ. (ಗಲಾ. 6:2; ಎಫೆ. 5:2; 1 ಥೆಸ. 4:9, 10) ಬದಲಾಗಿ ಪ್ರತಿದಿನವೂ ಇತರರ ಸನ್ನಿವೇಶಗಳನ್ನು ತಿಳಿದಿರಲು ಪ್ರಯತ್ನಿಸುತ್ತಾ ಅವರ ಅಗತ್ಯಗಳಿಗೆ ಪ್ರತಿಕ್ರಿಯೆ ತೋರಿಸಲು ನಾವು ಸಿದ್ಧರಾಗಿರುತ್ತೇವೆ. ನಮಗೆ ಅನಾನುಕೂಲವಾಗಿರುವ ಸಮಯದಲ್ಲೂ ಇದನ್ನು ಮಾಡುತ್ತೇವೆ. ನಮ್ಮಲ್ಲಿ ಸಮಯ, ಭೌತಿಕ ಸ್ವತ್ತು, ಅನುಭವ ಮತ್ತು ವಿವೇಕ ಯಾವುದೇ ಇರಲಿ ಅವನ್ನು ಉದಾರತೆಯಿಂದ ಬಳಸಲು ನಾವು ಬಯಸಬೇಕು. ನಾವು ಇತರರ ಕಡೆಗೆ ಉದಾರತೆಯನ್ನು ತೋರಿಸುವಾಗ ಯೆಹೋವನೂ ನಮಗೆ ಔದಾರ್ಯ ತೋರಿಸುವನೆಂಬ ಆಶ್ವಾಸನೆ ನಮಗಿದೆ.—ಜ್ಞಾನೋ. 11:25; ಲೂಕ 6:38.

“ಹಗಲೂರಾತ್ರಿ” ಪವಿತ್ರ ಸೇವೆ

ಯೆಹೋವನಿಗೆ “ಹಗಲೂರಾತ್ರಿ” ಪವಿತ್ರ ಸೇವೆಯನ್ನು ಸಲ್ಲಿಸುವುದು ನಿಜವಾಗಿಯೂ ಶಕ್ಯವೊ? ಹೌದು. ನಮ್ಮ ಆರಾಧನೆಯ ಎಲ್ಲ ಅಂಶಗಳಲ್ಲಿ ಕ್ರಮಬದ್ಧರಾಗಿರುವ ಮತ್ತು ಶ್ರದ್ಧೆಯಿಂದಿರುವ ಮೂಲಕ ನಾವದನ್ನು ಮಾಡಸಾಧ್ಯವಿದೆ. (ಅ. ಕಾ. 20:31) ದೇವರ ವಾಕ್ಯವನ್ನು ಪ್ರತಿದಿನ ಓದಿ ಧ್ಯಾನಿಸುವ ಮೂಲಕ, ಎಡೆಬಿಡದೆ ಪ್ರಾರ್ಥಿಸುವ ಮತ್ತು ಎಲ್ಲ ಕೂಟಗಳಿಗೆ ಹಾಜರಾಗಲು ಶ್ರಮಿಸುವ ಮೂಲಕ ಮತ್ತು ಸಾಕ್ಷಿಕೊಡುವ ಪ್ರತಿಯೊಂದು ಸಂದರ್ಭವನ್ನು ಸದುಪಯೋಗಿಸುವ ಮೂಲಕ ನಾವು ನಮ್ಮ ಜೀವನದಲ್ಲಿ ಪವಿತ್ರ ಸೇವೆಯನ್ನು ಕೇಂದ್ರಬಿಂದುವಾಗಿಡಬಲ್ಲೆವು.—ಕೀರ್ತ. 1:2; ಲೂಕ 2:37; ಅ. ಕಾ. 4:20; 1 ಥೆಸ. 3:10; 5:17.

ನಾವು ವೈಯಕ್ತಿಕವಾಗಿ ಅಂಥ ಪವಿತ್ರ ಸೇವೆಯನ್ನು ಯೆಹೋವನಿಗೆ ಸಲ್ಲಿಸುತ್ತಿದ್ದೇವೊ? ಹಾಗಿದ್ದರೆ ಆತನನ್ನು ಮೆಚ್ಚಿಸುವ ಮತ್ತು ಸೈತಾನನ ಆರೋಪಗಳಿಗೆ ಉತ್ತರವನ್ನು ಒದಗಿಸುವ ನಮ್ಮ ಅಪೇಕ್ಷೆಯು ನಮ್ಮ ದಿನನಿತ್ಯದ ಜೀವನದ ಎಲ್ಲ ಅಂಶಗಳಲ್ಲಿ ತೋರಿಬರುವುದು. ನಾವು ಮಾಡುವ ಎಲ್ಲ ವಿಷಯಗಳಲ್ಲಿ ಮತ್ತು ನಾವಿರುವ ಯಾವುದೇ ಸನ್ನಿವೇಶದಲ್ಲಿ ಯೆಹೋವನಿಗೆ ಮಹಿಮೆಯನ್ನು ಕೊಡಲು ಶ್ರಮಿಸುವೆವು. ಆತನ ಮೂಲತತ್ತ್ವಗಳು ನಮ್ಮ ನಡೆನುಡಿಗಳನ್ನು ನಿರ್ದೇಶಿಸುವಂತೆಯೂ ನಾವು ಮಾಡುವ ನಿರ್ಣಯಗಳನ್ನು ಮಾರ್ಗದರ್ಶಿಸುವಂತೆಯೂ ನಾವು ಬಿಡುತ್ತೇವೆ. ಆತನಲ್ಲಿ ನಾವು ಪೂರ್ಣ ಭರವಸೆಯನ್ನಿಡುವ ಮೂಲಕ ಮತ್ತು ನಮಗಿರುವ ಶಕ್ತಿಯನ್ನು ಆತನ ಸೇವೆಯಲ್ಲಿ ಉಪಯೋಗಿಸುವ ಮೂಲಕ ಆತನ ಪ್ರೀತಿಯ ಪರಾಮರಿಕೆ ಮತ್ತು ಬೆಂಬಲಕ್ಕಾಗಿ ನಮ್ಮ ಗಣ್ಯತೆಯನ್ನು ತೋರಿಸುತ್ತೇವೆ. ನಮ್ಮ ಅಪರಿಪೂರ್ಣತೆಯ ಕಾರಣ ಆತನ ನೀತಿಯ ಮಟ್ಟಗಳಿಗೆ ಹೊಂದಿಕೆಯಲ್ಲಿರಲು ತಪ್ಪುವಾಗ ದೊರೆಯುವ ಸಲಹೆ ಮತ್ತು ಶಿಸ್ತನ್ನು ನಾವು ಸಂತೋಷದಿಂದ ಸ್ವೀಕರಿಸುತ್ತೇವೆ.—ಕೀರ್ತ. 32:5; 119:97; ಜ್ಞಾನೋ. 3:25, 26; ಕೊಲೊ. 3:17; ಇಬ್ರಿ. 6:11, 12.

ಆದ್ದರಿಂದ ಪ್ರತಿದಿನವೂ ದೇವರ ಮಹಿಮೆಗಾಗಿ ಜೀವಿಸುವುದನ್ನು ನಾವು ಮುಂದುವರಿಸೋಣ. ಹಾಗೆ ಮಾಡುವ ಮೂಲಕ ನಮ್ಮ ಪ್ರಾಣಗಳಿಗೆ ಚೈತನ್ಯ ಸಿಗುವುದು ಮತ್ತು ನಮ್ಮ ಸ್ವರ್ಗೀಯ ತಂದೆಯ ಪ್ರೀತಿಯ ಪರಾಮರಿಕೆಯಲ್ಲಿ ನಾವು ಸದಾ ಆನಂದಿಸುವೆವು.—ಮತ್ತಾ. 11:29; ಪ್ರಕ. 7:16, 17.

[ಪುಟ 22ರಲ್ಲಿರುವ ಚೌಕ/ಚಿತ್ರಗಳು]

ದೇವದತ್ತ ಜವಾಬ್ದಾರಿಗಳು

• ಪದೇ ಪದೇ ಪ್ರಾರ್ಥನೆ ಮಾಡಿರಿ.—ರೋಮ. 12:12.

• ವೈಯಕ್ತಿಕ ಅನ್ವಯ ಮಾಡುತ್ತಾ ಬೈಬಲನ್ನು ಓದಿ, ಅಧ್ಯಯನ ಮಾಡಿರಿ.—ಕೀರ್ತ. 1:2; 1 ತಿಮೊ. 4:15.

• ಸಭೆಯಲ್ಲಿ ಯೆಹೋವನನ್ನು ಆರಾಧಿಸಿರಿ.—ಕೀರ್ತ. 35:18; ಇಬ್ರಿ. 10:24, 25.

• ಮನೆಮಂದಿಗೆ ಭೌತಿಕವಾಗಿ, ಆಧ್ಯಾತ್ಮಿಕವಾಗಿ ಹಾಗೂ ಭಾವನಾತ್ಮಕವಾಗಿ ಒದಗಿಸಿರಿ.—1 ತಿಮೊ. 5:8.

• ರಾಜ್ಯದ ಸುವಾರ್ತೆಯನ್ನು ಸಾರಿರಿ ಮತ್ತು ಶಿಷ್ಯರನ್ನಾಗಿ ಮಾಡಿರಿ.—ಮತ್ತಾ. 24:14; 28:19, 20.

• ಶಾರೀರಿಕ, ಆಧ್ಯಾತ್ಮಿಕ, ಭಾವನಾತ್ಮಕ ಸ್ವಾಸ್ಥ್ಯದ ಕಾಳಜಿವಹಿಸಿರಿ; ಅದರಲ್ಲಿ ಹಿತಕರವಾದ ವಿನೋದಾವಳಿಗಳನ್ನು ಏರ್ಪಡಿಸುವುದೂ ಸೇರಿದೆ.—ಮಾರ್ಕ 6:31; 2 ಕೊರಿಂ. 7:1; 1 ತಿಮೊ. 4:8, 16.

• ಸಭಾ ಜವಾಬ್ದಾರಿಗಳನ್ನು ನಿರ್ವಹಿಸಿರಿ.—ಅ. ಕಾ. 20:28; 1 ತಿಮೊ. 3:1.

• ಮನೆ ಮತ್ತು ರಾಜ್ಯ ಸಭಾಗೃಹವನ್ನು ಅಚ್ಚುಕಟ್ಟಾಗಿಡಿ.—1 ಕೊರಿಂ. 10:32.

[ಪುಟ 23ರಲ್ಲಿರುವ ಚೌಕ/ಚಿತ್ರ]

ಪರಿಗಣನೆ ತೋರಿಸಿ . . .

• ವಯೋವೃದ್ಧ ಸಹೋದರ ಅಥವಾ ಸಹೋದರಿಗೆ.—ಯಾಜ. 19:32.

• ಶಾರೀರಿಕ ಅಥವಾ ಭಾವನಾತ್ಮಕ ಅಸ್ವಸ್ಥತೆಯಿಂದ ಬಳಲುವವರಿಗೆ.—ಜ್ಞಾನೋ. 14:21.

• ನೀವು ಒದಗಿಸಬಲ್ಲ ಒಂದು ವಿಷಯದ ತುರ್ತು ಅಗತ್ಯವಿರುವ ಸಭೆಯ ಸದಸ್ಯನೊಬ್ಬನಿಗೆ.—ರೋಮ. 12:13.

• ನಿಮ್ಮ ಪರಿವಾರದಲ್ಲಿರುವ ಒಬ್ಬರಿಗೆ.—1 ತಿಮೊ. 5:4, 8.

• ಸಂಗಾತಿಯನ್ನು ಮರಣದಲ್ಲಿ ಕಳಕೊಂಡಿರುವ ಒಬ್ಬ ಜೊತೆ ವಿಶ್ವಾಸಿಗೆ.—1 ತಿಮೊ. 5:9.

• ನಿಮ್ಮ ಸಭೆಯಲ್ಲಿ ಪ್ರಯಾಸಪಟ್ಟು ದುಡಿಯುವ ಹಿರಿಯರೊಬ್ಬರಿಗೆ.—1 ಥೆಸ. 5:12, 13; 1 ತಿಮೊ. 5:17.