ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಆಳ್ವಿಕೆಯ ನಿರ್ದೋಷೀಕರಣ!

ಯೆಹೋವನ ಆಳ್ವಿಕೆಯ ನಿರ್ದೋಷೀಕರಣ!

ಯೆಹೋವನ ಆಳ್ವಿಕೆಯ ನಿರ್ದೋಷೀಕರಣ!

‘ಪರಾತ್ಪರನು ಮನುಷ್ಯರ ರಾಜ್ಯದಲ್ಲಿ ರಾಜನಾಗಿದ್ದಾನೆ.’—ದಾನಿ. 4:17.

1, 2. ಮಾನವ ಆಳ್ವಿಕೆ ಏಕೆ ವಿಫಲಗೊಂಡಿದೆ ಎಂಬುದಕ್ಕಿರುವ ಕೆಲವು ಕಾರಣಗಳು ಯಾವುವು?

ಮಾನವ ಆಳ್ವಿಕೆಯು ವಿಫಲಗೊಂಡಿದೆ! ಆ ಕುರಿತು ಸಂಶಯವೇ ಇಲ್ಲ. ಆ ವಿಫಲತೆಗೆ ಮುಖ್ಯ ಕಾರಣವು ಯಶಸ್ವಿಕರವಾಗಿ ಆಳಲು ಮಾನವರಿಗಿರುವ ವಿವೇಕದ ಕೊರತೆಯೇ. ಎಷ್ಟೋ ಅಧಿಪತಿಗಳು ತಮ್ಮನ್ನು ‘ಸ್ವಪ್ರೇಮಿಗಳೂ ಹಣಪ್ರೇಮಿಗಳೂ ಸ್ವಪ್ರತಿಷ್ಠೆಯುಳ್ಳವರೂ ಅಹಂಕಾರಿಗಳೂ ನಿಷ್ಠೆಯಿಲ್ಲದವರೂ ಯಾವುದೇ ಒಪ್ಪಂದಕ್ಕೆ ಸಿದ್ಧರಿಲ್ಲದವರೂ ಮಿಥ್ಯಾಪವಾದಿಗಳೂ ಸ್ವನಿಯಂತ್ರಣವಿಲ್ಲದವರೂ ಉಗ್ರರೂ ಒಳ್ಳೇತನವನ್ನು ಪ್ರೀತಿಸದವರೂ ದ್ರೋಹಿಗಳೂ ಹೆಮ್ಮೆಯಿಂದ ಉಬ್ಬಿಕೊಂಡವರೂ’ ಆಗಿ ತೋರಿಸಿರುವುದರಿಂದ ಮನುಷ್ಯನ ಆಳ್ವಿಕೆಯ ಅಪಯಶಸ್ಸು ಇಂದು ವಿಶೇಷವಾಗಿ ಪ್ರತ್ಯಕ್ಷ.—2 ತಿಮೊ. 3:2-4.

2 ಬಹಳ ಹಿಂದೆಯೇ ನಮ್ಮ ಪ್ರಥಮ ಹೆತ್ತವರು ದೇವರ ಆಳ್ವಿಕೆ ತಮಗೆ ಬೇಡ ಎಂದು ತಿರಸ್ಕರಿಸಿದ್ದರು. ಹಾಗೆ ಮಾಡಿರುವ ಮೂಲಕ ತಮಗೆ ಸ್ವಾತಂತ್ರ್ಯ ಸಿಗುತ್ತದೆ ಎಂದು ಅವರು ನೆನಸಿದ್ದಿರಬಹುದು. ಆದರೆ ವಾಸ್ತವದಲ್ಲಿ ಅವರು ತಮ್ಮನ್ನು ಸೈತಾನನ ಆಳ್ವಿಕೆಗೆ ಅಧೀನಪಡಿಸಿಕೊಳ್ಳುತ್ತಿದ್ದರು. ಆರು ಸಾವಿರ ವರ್ಷಗಳಿಂದ, ‘ಈ ಲೋಕದ ಅಧಿಪತಿಯಾದ’ ಸೈತಾನನ ಪ್ರಬಲ ಪ್ರಭಾವಕ್ಕೆ ಒಳಗಾಗಿರುವ ಮಾನವ ದುರಾಡಳಿತವು ಮಾನವ ಇತಿಹಾಸದ ಈ ಹೀನ ಸ್ಥಿತಿಗೆ ನಮ್ಮನ್ನು ತಂದಿರುತ್ತದೆ. (ಯೋಹಾ. 12:31) ಮಾನವಕುಲದ ಇಂದಿನ ಸ್ಥಿತಿಗತಿಯ ಬಗ್ಗೆ ಹೇಳಿಕೆಯನ್ನು ನೀಡುತ್ತಾ, “ಒಂದು ಪರಿಪೂರ್ಣ ಪ್ರಪಂಚಕ್ಕಾಗಿ ಮಾಡುವ ಹುಡುಕಾಟ” ಹುರುಳಿಲ್ಲದ್ದು ಎಂದು ಇಪ್ಪತ್ತನೇ ಶತಮಾನದ ಆಕ್ಸ್‌ಫರ್ಡ್‌ ಚರಿತ್ರೆ (ಇಂಗ್ಲಿಷ್‌) ಎಂಬ ಪುಸ್ತಕ ಹೇಳುತ್ತದೆ. “ಅದನ್ನು ಕಂಡುಕೊಳ್ಳುವುದು ಅಸಾಧ್ಯ ಮಾತ್ರವಲ್ಲ ಅದನ್ನು ಸ್ಥಾಪಿಸಲು ಮಾಡುವ ಪ್ರಯತ್ನವು ಸಹ ಆಪತ್ತಿಗೆ, ಸರ್ವಾಧಿಕಾರ ಪ್ರಭುತ್ವಕ್ಕೆ ಹಾಗೂ ಭೀಕರ ಯುದ್ಧಕ್ಕೆ ನಡಿಸುವುದು” ಎಂದು ಅದು ವಿವರಿಸುತ್ತದೆ. ಮಾನವ ಆಳ್ವಿಕೆಯು ಸೋತು ಸುಣ್ಣವಾಗಿದೆ ಎಂಬುದಕ್ಕೆ ಎಂಥ ಮುಚ್ಚುಮರೆಯಿಲ್ಲದ ಅಂಗೀಕಾರ!

3. ಆದಾಮಹವ್ವರು ಪಾಪಮಾಡದೆ ಇರುತ್ತಿದ್ದರೆ ದೇವರ ಆಳ್ವಿಕೆಯ ರಚನಾಕ್ರಮ ಹೇಗಿರುತ್ತಿತ್ತು ಎಂಬದರ ಬಗ್ಗೆ ನಾವೇನು ಹೇಳಬಲ್ಲೆವು?

3 ಹೀಗಿರಲಾಗಿ ನಮ್ಮ ಪ್ರಥಮ ಹೆತ್ತವರು ಏಕೈಕ ಕಾರ್ಯಸಾಧಕ ಆಡಳಿತವಾದ ದೇವರ ಆಳ್ವಿಕೆಯನ್ನು ತಿರಸ್ಕರಿಸಿದ್ದು ಎಷ್ಟು ಶೋಚನೀಯ! ಆದಾಮಹವ್ವರು ಒಂದುವೇಳೆ ದೇವರಿಗೆ ನಂಬಿಗಸ್ತರಾಗಿ ಉಳಿದಿದ್ದರೆ ಭೂಮಿಯ ಮೇಲಣ ಯೆಹೋವನ ಆಳ್ವಿಕೆಯ ರಚನಾಕ್ರಮ ಹೇಗಿರುತ್ತಿತ್ತು ಎಂಬುದು ನಮಗೆ ನಿಖರವಾಗಿ ತಿಳಿದಿಲ್ಲ ನಿಜ. ಆದರೂ ಮಾನವರೆಲ್ಲರಿಂದ ಸ್ವೀಕರಿಸಲ್ಪಡುವ ದೈವಿಕ ಆಡಳಿತವು ಪ್ರೀತಿ ಮತ್ತು ನಿಷ್ಪಕ್ಷಪಾತದಿಂದಲೇ ನಡಿಸಲ್ಪಡುತ್ತಿತ್ತು ಎಂಬ ಖಾಚಿತ್ಯ ನಮಗಿರಬಲ್ಲದು. (ಅ. ಕಾ. 10:34; 1 ಯೋಹಾ. 4:8) ದೇವರ ಎಣೆಯಿಲ್ಲದ ವಿವೇಕದ ನೋಟದಲ್ಲಿ ನಮಗೆ ಈ ಖಾತ್ರಿಯೂ ಇರಬಲ್ಲದು, ಏನೆಂದರೆ ಮಾನವಕುಲವು ದೇವರಾಳಿಕೆಯ ಕೆಳಗೆ ಒಂದುವೇಳೆ ಉಳಿದಿದ್ದಲ್ಲಿ ಮನುಷ್ಯನಾಳಿಕೆಯ ಪ್ರತಿಪಾದಕರಿಂದ ಮಾಡಲಾದ ಸಕಲ ತಪ್ಪು ದೋಷಗಳು ತಡೆಗಟ್ಟಲ್ಪಡುತ್ತಿದ್ದವು. ದೇವಪ್ರಭುತ್ವ ಅಂದರೆ ದೇವರ ಆಳಿಕೆಯು ‘ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುವುದರಲ್ಲಿ’ ಸಾಫಲ್ಯವನ್ನು ಪಡೆಯುತ್ತಿತ್ತು. (ಕೀರ್ತ. 145:16) ಚುಟುಕಾಗಿ ಹೇಳುವುದಾದರೆ ಅದು ಯಾವ ಕುಂದೂ ಇಲ್ಲದ ಪರಿಪೂರ್ಣ ಆಳ್ವಿಕೆಯಾಗಿ ಇರುತ್ತಿತ್ತು. (ಧರ್ಮೋ. 32:4) ಅಂಥ ಆಳ್ವಿಕೆಯನ್ನು ಮನುಷ್ಯರು ತಿರಸ್ಕರಿಸಿದ್ದು ಎಷ್ಟು ದುರಂತಮಯ!

4. ಸೈತಾನನಿಗೆ ಎಷ್ಟರ ಮಟ್ಟಿಗೆ ಆಡಳಿತ ನಡೆಸುವ ಅನುಮತಿಯಿದೆ?

4 ಮನುಷ್ಯರು ತಮ್ಮನ್ನು ತಾವೇ ಆಳಿಕೊಳ್ಳುವಂತೆ ಯೆಹೋವನು ಅನುಮತಿಸಿದ್ದನಾದರೂ ತನ್ನ ಸೃಷ್ಟಿಜೀವಿಗಳ ಮೇಲೆ ಆಳ್ವಿಕೆ ನಡಿಸುವ ತನ್ನ ನ್ಯಾಯಬದ್ಧ ಹಕ್ಕನ್ನು ಆತನು ಎಂದೂ ಬಿಟ್ಟುಕೊಟ್ಟಿರಲಿಲ್ಲ ಎಂದು ನೆನಪಿಡುವುದು ಒಳ್ಳೇದು. ಕಟ್ಟಕಡೆಗೆ, ‘ಪರಾತ್ಪರನು ಮನುಷ್ಯರ ರಾಜ್ಯದಲ್ಲಿ ರಾಜನಾಗಿದ್ದಾನೆ’ ಎಂಬುದನ್ನು ಒಪ್ಪಿಕೊಳ್ಳಲು ಬಾಬೆಲಿನ ಆ ಬಲಾಢ್ಯ ಅರಸನು ಕೂಡ ಒತ್ತಾಯಿಸಲ್ಪಟ್ಟನಲ್ಲಾ. (ದಾನಿ. 4:17) ಕೊನೆಯಲ್ಲಿ ದೇವರ ಚಿತ್ತವು ನೆರವೇರುವಂತೆ ಆತನ ರಾಜ್ಯವು ಮಾಡುವುದು. (ಮತ್ತಾ. 6:10) ಯೆಹೋವನು ಸೈತಾನನನ್ನು “ಈ ವಿಷಯಗಳ ವ್ಯವಸ್ಥೆಯ ದೇವನು” ಆಗಿ ಕಾರ್ಯನಡಿಸಲು ತಾತ್ಕಾಲಿಕವಾಗಿ ಅನುಮತಿಸಿದ್ದಾನೆ ನಿಜ. ಆ ವಿರೋಧಕನಿಂದ ಎಬ್ಬಿಸಲ್ಪಟ್ಟ ವಿವಾದಗಳಿಗೆ ಮನಗಾಣಿಸುವ ಉತ್ತರವನ್ನು ಕೊಡಲಿಕ್ಕಾಗಿಯೇ ದೇವರು ಅದನ್ನು ಮಾಡಿದ್ದನು. (2 ಕೊರಿಂ. 4:4; 1 ಯೋಹಾ. 5:19) ಆದರೂ ಯೆಹೋವನ ಅನುಮತಿಯ ಆಚೆ ಅತಿಕ್ರಮಿಸಿ ಹೋಗಲು ಸೈತಾನನೆಂದೂ ಶಕ್ತನಾಗಿರುವುದಿಲ್ಲ. (2 ಪೂರ್ವ. 20:6; ಯೋಬ 1:11, 12; 2:3-6 ಹೋಲಿಸಿ.) ಮಾತ್ರವಲ್ಲದೆ ದೇವರ ಮಹಾ ವಿರೋಧಿಯಿಂದ ಆಳಲ್ಪಡುವ ಲೋಕದಲ್ಲಿದ್ದರೂ ಕೂಡ ದೇವರಿಗೆ ತಮ್ಮನ್ನು ಅಧೀನರಾಗಿರಲು ಆರಿಸಿಕೊಂಡ ಕೆಲವು ವ್ಯಕ್ತಿಗಳು ಯಾವಾಗಲೂ ಭೂಮಿಯಲ್ಲಿದ್ದರು.

ಇಸ್ರಾಯೇಲ್ಯರ ಮೇಲೆ ದೇವರ ಆಳ್ವಿಕೆ

5. ಇಸ್ರಾಯೇಲ್ಯರು ದೇವರಿಗೆ ತಮ್ಮನ್ನು ಬದ್ಧಪಡಿಸುತ್ತಾ ಏನು ಹೇಳಿದರು?

5 ಹೇಬೆಲನ ಕಾಲದಿಂದ ಹಿಡಿದು ಇಸ್ರಾಯೇಲ್‌ ಜನಾಂಗದ ರಚನೆಯ ಸಮಯದ ತನಕ ಹಲವಾರು ನಂಬಿಗಸ್ತ ವ್ಯಕ್ತಿಗಳು ಯೆಹೋವನನ್ನು ಆರಾಧಿಸಿ ಆತನ ಆಜ್ಞೆಗಳಿಗೆ ವಿಧೇಯರಾಗಿದ್ದರು. (ಇಬ್ರಿ. 11:4-22) ಮೋಶೆಯ ದಿನಗಳಲ್ಲಿ ಯೆಹೋವನು ಮೂಲಪಿತೃ ಯಾಕೋಬನ ಸಂತತಿಯವರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡನು ಮತ್ತು ಇವರೇ ಇಸ್ರಾಯೇಲ್‌ ಜನಾಂಗವಾಗಿ ಪರಿಣಮಿಸಿದರು. ಈ ಇಸ್ರಾಯೇಲ್ಯರು ಕ್ರಿ.ಪೂ. 1513ರಲ್ಲಿ ತಮ್ಮನ್ನು ಮತ್ತು ತಮ್ಮ ಸಂತತಿಯನ್ನು ಯೆಹೋವನ ಆಳ್ವಿಕೆಗೆ ಬದ್ಧಪಡಿಸುತ್ತಾ “ಯೆಹೋವನು ಹೇಳಿದಂತೆಯೇ ಮಾಡುವೆವು” ಎಂದು ಮಾತುಕೊಟ್ಟರು.—ವಿಮೋ. 19:8.

6, 7. ಇಸ್ರಾಯೇಲ್‌ ಮೇಲಣ ದೇವರ ಆಳ್ವಿಕೆ ಹೇಗಿತ್ತು?

6 ಇಸ್ರಾಯೇಲ್ಯರನ್ನು ತನ್ನ ಜನರಾಗಿ ಆರಿಸಿಕೊಳ್ಳುವುದರಲ್ಲಿ ಯೆಹೋವನಿಗೆ ಒಂದು ಉದ್ದೇಶವಿತ್ತು. (ಧರ್ಮೋಪದೇಶಕಾಂಡ 7:7, 8 ಓದಿ.) ಈ ಆಯ್ಕೆಯಲ್ಲಿ ಇಸ್ರಾಯೇಲ್ಯರ ಹಿತಾಸಕ್ತಿಗಿಂತ ಹೆಚ್ಚಿನದ್ದು ಒಳಗೂಡಿತ್ತು. ಅದರಲ್ಲಿ ದೇವರ ನಾಮ ಮತ್ತು ಆತನ ಪರಮಾಧಿಕಾರವು ಸಹ ಒಳಗೂಡಿತ್ತು ಮತ್ತು ಇವು ಹೆಚ್ಚು ಮಹತ್ವಾರ್ಥ ಉಳ್ಳವುಗಳಾಗಿದ್ದವು. ಯೆಹೋವನೊಬ್ಬನೇ ಸತ್ಯ ದೇವರು ಎಂಬ ನಿಜತ್ವಕ್ಕೆ ಇಸ್ರಾಯೇಲ್‌ ಸಾಕ್ಷಿಯಾಗಿ ಇರಬೇಕಿತ್ತು. (ಯೆಶಾ. 43:10; 44:6-8) ಆದ್ದರಿಂದ ಯೆಹೋವನು ಆ ಜನಾಂಗಕ್ಕೆ ಹೇಳಿದ್ದು: “ನೀವು ಕೇವಲ ನಿಮ್ಮ ದೇವರಾದ ಯೆಹೋವನ [ಪರಿಶುದ್ಧ] ಜನರೇ; ಆತನು ಭೂಲೋಕದಲ್ಲಿರುವ ಸಮಸ್ತಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯಜನರಾಗುವದಕ್ಕೆ ಆದುಕೊಂಡಿದ್ದಾನಲ್ಲಾ.”—ಧರ್ಮೋ. 14:2.

7 ಇಸ್ರಾಯೇಲ್ಯರು ಅಪರಿಪೂರ್ಣರಾಗಿದ್ದರು ಎಂಬ ವಿಷಯವನ್ನು ಸಹ ದೇವರ ಆಳ್ವಿಕೆಯು ಪರಿಗಣನೆಗೆ ತೆಗೆದುಕೊಂಡಿತು. ಅದೇ ಸಮಯದಲ್ಲಿ ಆತನ ನಿಯಮಗಳು ಪರಿಪೂರ್ಣವಾಗಿದ್ದು ಅವನ್ನು ಕೊಟ್ಟಾತನ ಗುಣಗಳನ್ನು ಪ್ರತಿಬಿಂಬಿಸಿದವು. ಮೋಶೆಯ ಮೂಲಕ ಕೊಡಲ್ಪಟ್ಟ ಯೆಹೋವನ ಆಜ್ಞೆಗಳು ದೇವರ ಪಾವಿತ್ರ್ಯ, ನ್ಯಾಯದ ಕಡೆಗಿನ ಪ್ರೀತಿ, ಕ್ಷಮಾಶೀಲತೆ ಮತ್ತು ತಾಳ್ಮೆಯನ್ನು ಸ್ಪಷ್ಟವಾಗಿ ಎತ್ತಿಹೇಳಿದವು. ತದನಂತರ ಯೆಹೋಶುವನ ಮತ್ತು ಅವನ ಸಂತತಿಯ ದಿನಗಳಲ್ಲಿ ಇಸ್ರಾಯೇಲ್‌ ಜನಾಂಗವು ಯೆಹೋವನ ಆಜ್ಞೆಗಳಿಗೆ ವಿಧೇಯತೆ ತೋರಿಸಿ ಶಾಂತಿ ಹಾಗೂ ಆಧ್ಯಾತ್ಮಿಕ ಆಶೀರ್ವಾದಗಳನ್ನು ಅನುಭವಿಸಿತು. (ಯೆಹೋ. 24:21, 22, 31) ಇಸ್ರಾಯೇಲಿನ ಇತಿಹಾಸದ ಆ ಸಮಯಾವಧಿಯು ಯೆಹೋವನ ಆಳ್ವಿಕೆಯ ಯಶಸ್ಸನ್ನು ತೋರಿಸಿಕೊಟ್ಟಿತು.

ಮಾನವ ಆಳ್ವಿಕೆಯ ದುಷ್ಪರಿಣಾಮಗಳು

8, 9. ಯಾವ ಅವಿವೇಕದ ಬೇಡಿಕೆಯನ್ನು ಇಸ್ರಾಯೇಲ್ಯರು ಮಾಡಿದರು, ಮತ್ತು ಪರಿಣಾಮವೇನಾಗಿತ್ತು?

8 ಆದರೆ ಕಾಲಾನಂತರ ಇಸ್ರಾಯೇಲ್ಯರು ಆಗಾಗ ದೇವರ ಆಳ್ವಿಕೆಯನ್ನು ತಿರಸ್ಕರಿಸಿ ಆತನ ಸಂರಕ್ಷಣೆಯನ್ನು ಕಳೆದುಕೊಂಡರು. ಕೊನೆಗೆ ಪ್ರವಾದಿ ಸಮುವೇಲನ ಮೂಲಕ ಅವರು ಕಣ್ಣಿಗೆ ಕಾಣುವ ದೃಶ್ಯ ಮಾನವ ರಾಜನಿಗಾಗಿ ಕೇಳಿಕೊಂಡರು. ಅವರ ಬೇಡಿಕೆಯನ್ನು ಈಡೇರಿಸುವಂತೆ ಯೆಹೋವನು ಸಮುವೇಲನಿಗೆ ಹೇಳಿದನು. ಆದರೂ ಆತನು ಕೂಡಿಸಿ ಹೇಳಿದ್ದು: “ಅವರು ನಿನ್ನನ್ನಲ್ಲ, ನನ್ನನ್ನು ತಿರಸ್ಕರಿಸಿದ್ದಾರೆ. ನನ್ನ ಆಳಿಕೆಗೆ ಬೇಡವೆನ್ನುತ್ತಾರೆ.” (1 ಸಮು. 8:7) ಕಣ್ಣಿಗೆ ಕಾಣುವ ದೃಶ್ಯ ರಾಜನನ್ನು ಇಸ್ರಾಯೇಲು ಹೊಂದುವಂತೆ ಯೆಹೋವನು ಅನುಮತಿಸಿದನಾದರೂ ಮಾನವ ರಾಜನಿಂದ ಆಳಲ್ಪಡುವುದು ದುಷ್ಪರಿಣಾಮಗಳನ್ನು ತರುತ್ತದೆ ಎಂದೂ ಎಚ್ಚರಿಸಿದನು.—1 ಸಮುವೇಲ 8:9-18 ಓದಿ.

9 ಯೆಹೋವನ ಎಚ್ಚರಿಕೆಯ ಸತ್ಯತೆಯನ್ನು ಇತಿಹಾಸವು ತೋರಿಸಿಕೊಟ್ಟಿತು. ಒಬ್ಬ ಮಾನವ ರಾಜನಿಂದ ಆಳಲ್ಪಡುವುದು, ಇಸ್ರಾಯೇಲಿಗೆ ಗಂಭೀರವಾದ ಸಮಸ್ಯೆಗಳನ್ನು ತಂದಿತು. ಅಂಥ ಒಬ್ಬ ರಾಜನು ಅಪನಂಬಿಗಸ್ತನಾದಾಗಲಂತೂ ಇನ್ನೂ ಹೆಚ್ಚು ತೊಂದರೆ ಉಂಟಾಯಿತು. ಇಸ್ರಾಯೇಲಿಗೆ ಸಂಭವಿಸಿದ ಈ ವಿಷಯವನ್ನು ಪರಿಗಣಿಸುವಾಗ, ಯೆಹೋವನನ್ನು ತಿಳಿದಿಲ್ಲದ ಮಾನವರ ಸರಕಾರವು ಎಂದಿಗೂ ಶಾಶ್ವತವಾದ ಒಳ್ಳೇ ಫಲಿತಾಂಶಗಳನ್ನು ತರಲಾರದು ಎಂಬುದೇನೂ ಆಶ್ಚರ್ಯವಲ್ಲ. ಶಾಂತಿ ಮತ್ತು ಭದ್ರತೆಯನ್ನು ಸ್ಥಾಪಿಸಲಿಕ್ಕಾಗಿ ತಮ್ಮ ಪ್ರಯತ್ನಗಳನ್ನು ಆಶೀರ್ವದಿಸುವಂತೆ ಕೆಲವು ರಾಜಕಾರಣಿಗಳು ದೇವರನ್ನು ಬೇಡುತ್ತಾರೆ ಎಂಬುದು ನಿಜ. ಆದರೆ ತನ್ನ ಆಳ್ವಿಕೆಗೆ ಅಧೀನಪಡಿಸಿಕೊಳ್ಳದ ವ್ಯಕ್ತಿಗಳನ್ನು ದೇವರು ಹೇಗೆ ತಾನೇ ಆಶೀರ್ವದಿಸಿಯಾನು?—ಕೀರ್ತ. 2:10-12.

ದೇವರ ಆಳ್ವಿಕೆಯ ಕೆಳಗೆ ಹೊಸ ಜನಾಂಗ

10. ಇಸ್ರಾಯೇಲನ್ನು ತಿರಸ್ಕರಿಸಿ ಅದರ ಸ್ಥಾನದಲ್ಲಿ ದೇವರು ಮತ್ತೊಂದು ಜನಾಂಗವನ್ನು ಆರಿಸಿಕೊಂಡದ್ದೇಕೆ?

10 ಕಾಲಕ್ರಮೇಣ ಇಸ್ರಾಯೇಲ್‌ ಜನಾಂಗಕ್ಕೆ ಯೆಹೋವನ ನಂಬಿಗಸ್ತ ಸೇವೆಯನ್ನು ಮಾಡಲು ಇಷ್ಟವಿಲ್ಲದೇ ಹೋಯಿತು. ಅಂತಿಮವಾಗಿ ಅವರು ದೇವರ ನೇಮಿತ ಮೆಸ್ಸೀಯನನ್ನು ತಿರಸ್ಕರಿಸಿದರು. ಆದುದರಿಂದ ಯೆಹೋವನು ಅವರನ್ನು ತಿರಸ್ಕರಿಸಿ ಅವರ ಸ್ಥಾನದಲ್ಲಿ ಒಂದು ಹೊಸ ಜನಾಂಗವನ್ನು ಇರಿಸಲು ಉದ್ದೇಶಿಸಿದನು. ಇದರ ಪರಿಣಾಮವಾಗಿ, ಕ್ರಿ.ಶ. 33ರಲ್ಲಿ ಯೆಹೋವನ ಅಭಿಷಿಕ್ತ ಆರಾಧಕರ ಕ್ರೈಸ್ತ ಸಭೆಯ ಜನನವಾಯಿತು. ಕಾರ್ಯತಃ ಆ ಸಭೆ ಯೆಹೋವನ ರಾಜ್ಯಾಧಿಕಾರದ ಕೆಳಗಿನ ಹೊಸ ಜನಾಂಗವಾಯಿತು. ಪೌಲನು ಅದನ್ನು ‘ದೇವರ ಇಸ್ರಾಯೇಲ್‌’ ಎಂದು ಕರೆದನು.—ಗಲಾ. 6:16.

11, 12. ಮುಂದಾಳುತ್ವದ ವಿಷಯದಲ್ಲಿ ಇಸ್ರಾಯೇಲ್‌ ಮತ್ತು ‘ದೇವರ ಇಸ್ರಾಯೇಲ್‌ನ’ ಮಧ್ಯೆ ಯಾವ ಹೋಲಿಕೆಗಳಿವೆ?

11 ಪ್ರಾಚೀನ ಇಸ್ರಾಯೇಲ್‌ ಜನಾಂಗ ಮತ್ತು ‘ದೇವರ ಇಸ್ರಾಯೇಲ್‌’ ಮಧ್ಯೆ ವ್ಯತ್ಯಾಸಗಳಿವೆ ಹಾಗೂ ಹೋಲಿಕೆಗಳೂ ಇವೆ. ಪ್ರಾಚೀನ ಇಸ್ರಾಯೇಲಿಗೆ ವೈದೃಶ್ಯವಾಗಿ ಕ್ರೈಸ್ತ ಸಭೆಯ ಮೇಲೆ ಒಬ್ಬ ಮಾನವ ರಾಜನಿಲ್ಲ. ಮಾತ್ರವಲ್ಲದೆ ಪಾಪಿಗಳಿಗಾಗಿ ಅದು ಪ್ರಾಣಿ ಯಜ್ಞಗಳನ್ನೂ ಸಮರ್ಪಿಸಬೇಕಾಗಿಲ್ಲ. ಇಸ್ರಾಯೇಲ್‌ ಜನಾಂಗ ಮತ್ತು ಕ್ರೈಸ್ತ ಸಭೆಯ ಮಧ್ಯೆಯಿರುವ ಒಂದು ಹೋಲಿಕೆ ಏನೆಂದರೆ ಹಿರಿಯರ ಏರ್ಪಾಡೇ. (ವಿಮೋ. 19:3-8) ಇಂಥ ಕ್ರೈಸ್ತ ಹಿರಿಯರು ಮಂದೆಯ ಮೇಲೆ ಆಳ್ವಿಕೆ ನಡೆಸುವುದಿಲ್ಲ. ಬದಲಿಗೆ ಅವರು ಸಭೆಯನ್ನು ಪರಿಪಾಲಿಸುತ್ತಾರೆ ಮತ್ತು ಕ್ರೈಸ್ತ ಚಟುವಟಿಕೆಗಳಲ್ಲಿ ಬಿಚ್ಚುಗೈಯಿಂದ ಮುಂದಾಳುತ್ವ ವಹಿಸುತ್ತಾರೆ. ಅವರು ಸಭೆಯಲ್ಲಿರುವ ಎಲ್ಲರಿಗೆ ಮಾನಮರ್ಯಾದೆಯನ್ನು ಕೊಡುವ ಮೂಲಕ ಪ್ರತಿಯೊಬ್ಬರೊಂದಿಗೂ ಪ್ರೀತಿಯಿಂದ ವರ್ತಿಸುತ್ತಾರೆ.—2 ಕೊರಿಂ. 1:24; 1 ಪೇತ್ರ 5:2, 3.

12 ಇಸ್ರಾಯೇಲಿನೊಂದಿಗೆ ದೇವರು ವ್ಯವಹರಿಸಿದ ರೀತಿಯ ಕುರಿತು ಮನನಮಾಡುವಾಗ ‘ದೇವರ ಇಸ್ರಾಯೇಲ್‌ನ’ ಸದಸ್ಯರು ಮತ್ತು ‘ಬೇರೆ ಕುರಿಗಳಾಗಿರುವ’ ಅವರ ಸಂಗಡಿಗರು ಯೆಹೋವನಿಗಾಗಿ ಮತ್ತು ಆತನ ಆಳ್ವಿಕೆಗಾಗಿ ಹೆಚ್ಚಿನ ಗಣ್ಯತೆ ಬೆಳೆಸಿಕೊಳ್ಳುತ್ತಾರೆ. (ಯೋಹಾ. 10:16) ಉದಾಹರಣೆಗೆ, ಇಸ್ರಾಯೇಲಿನ ಮಾನವ ಅರಸರು ತಮ್ಮ ಪ್ರಜೆಗಳ ಮೇಲೆ ಒಂದೇ ಒಳ್ಳೇ ರೀತಿಯಲ್ಲಿ ಇಲ್ಲವೆ ಕೆಟ್ಟ ರೀತಿಯಲ್ಲಿ ತುಂಬ ಪ್ರಭಾವ ಬೀರಿದರು ಎಂದು ಇತಿಹಾಸ ತೋರಿಸುತ್ತದೆ. ಕ್ರೈಸ್ತರ ಮಧ್ಯೆ ಮುಂದಾಳುತ್ವ ವಹಿಸುತ್ತಿರುವವರಿಗೆ ಇದರಲ್ಲಿ ಪ್ರಮುಖ ಪಾಠವಿದೆ: ಅವರು ಆ ಪ್ರಾಚೀನ ರಾಜರಂತೆ ಆಳುವವರಲ್ಲದಿದ್ದರೂ ನಂಬಿಕೆಯ ವಿಷಯದಲ್ಲಿ ಯಾವಾಗಲೂ ಒಳ್ಳೇ ಮಾದರಿಯನ್ನಿಡಬೇಕು.—ಇಬ್ರಿ. 13:7.

ಇಂದು ಯೆಹೋವನು ಆಳುವ ವಿಧ

13. ಇಸವಿ 1914ರಲ್ಲಿ ಯಾವ ಮುಖ್ಯ ಮೈಲಿಗಲ್ಲನ್ನು ತಲಪಲಾಯಿತು?

13 ಮಾನವಕುಲದ ಮೇಲಿನ ಮನುಷ್ಯನ ಆಳ್ವಿಕೆ ಕೊನೆಗೊಳ್ಳಲಿಕ್ಕಿದೆ ಎಂದು ಕ್ರೈಸ್ತರು ಇಂದು ಲೋಕಕ್ಕೆ ಘೋಷಿಸುತ್ತಿದ್ದಾರೆ. 1914ರಲ್ಲಿ ಯೆಹೋವನು ತನ್ನ ನೇಮಿತ ರಾಜನಾದ ಯೇಸು ಕ್ರಿಸ್ತನ ಕೆಳಗೆ ತನ್ನ ರಾಜ್ಯವನ್ನು ಸ್ವರ್ಗದಲ್ಲಿ ಸ್ಥಾಪಿಸಿದನು. ಆ ಸಮಯದಲ್ಲಿ ಆತನು ಯೇಸುವಿಗೆ “ಜಯಿಸುತ್ತಾ ತನ್ನ ವಿಜಯವನ್ನು ಪೂರ್ಣಗೊಳಿಸಲು” ಅಧಿಕಾರ ಕೊಟ್ಟನು. (ಪ್ರಕ. 6:2) ಸಿಂಹಾಸನವನ್ನೇರಿದ ಹೊಸ ರಾಜನಿಗೆ, “ನಿನ್ನ ವೈರಿಗಳ ಮಧ್ಯದಲ್ಲಿ ದೊರೆತನಮಾಡು” ಎಂದು ಹೇಳಲಾಯಿತು. (ಕೀರ್ತ. 110:2) ಆದರೆ ದುಃಖಕರವಾಗಿ ಜನಾಂಗಗಳು ಯೆಹೋವನ ಆಳ್ವಿಕೆಗೆ ಮಣಿಯುವುದನ್ನು ಸತತವಾಗಿ ನಿರಾಕರಿಸಿವೆ. ‘ಯೆಹೋವನಿಲ್ಲವೋ’ ಎಂಬಂತೆ ವರ್ತಿಸುವುದನ್ನು ಅವರು ಮುಂದುವರಿಸಿದ್ದಾರೆ.—ಕೀರ್ತ. 14:1, NW.

14, 15. (ಎ) ಇಂದು ದೇವರ ರಾಜ್ಯವು ನಮ್ಮ ಮೇಲೆ ಯಾವ ವಿಧದಲ್ಲಿ ಆಳುತ್ತಿದೆ, ಮತ್ತು ಈ ಕಾರಣದಿಂದ ನಾವು ನಮಗೆ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು? (ಬಿ) ದೇವರ ಆಳ್ವಿಕೆಯ ಶ್ರೇಷ್ಠತೆ ಈಗಲೇ ಹೇಗೆ ತೋರಿಬರುತ್ತಿದೆ?

14 ‘ದೇವರ ಇಸ್ರಾಯೇಲ್‌ನ’ ಕೆಲವು ಅಭಿಷಿಕ್ತ ಸದಸ್ಯರು ಇನ್ನೂ ಭೂಮಿಯಲ್ಲಿದ್ದಾರೆ. ಯೇಸುವಿನ ಸಹೋದರರಾದ ಇವರು “ಕ್ರಿಸ್ತನ ಬದಲಿಯಾಗಿ ರಾಯಭಾರಿಗಳಾಗಿ” ಕಾರ್ಯವೆಸಗುತ್ತಾ ಬಂದಿದ್ದಾರೆ. (2 ಕೊರಿಂ. 5:20) ಇವರು ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಾಗಿ ನೇಮಿಸಲ್ಪಟ್ಟಿದ್ದಾರೆ. ಇವರು ಅಭಿಷಿಕ್ತರನ್ನು ಮತ್ತು ಭೂಮಿಯಲ್ಲಿ ಸದಾ ಜೀವಿಸುವ ನಿರೀಕ್ಷೆಯಿರುವ ಲಕ್ಷಾಂತರ ಮಂದಿಯನ್ನು ಪರಾಮರಿಸುತ್ತಾರೆ ಮತ್ತು ಆಧ್ಯಾತ್ಮಿಕ ಆಹಾರವನ್ನು ಒದಗಿಸುತ್ತಾರೆ. ಭೂನಿರೀಕ್ಷೆಯುಳ್ಳ ಕ್ರೈಸ್ತರ ಗುಂಪು ದಿನೇ ದಿನೇ ಹೆಚ್ಚಾಗುತ್ತಿದೆ. (ಮತ್ತಾ. 24:45-47; ಪ್ರಕ. 7:9-15) ಇಂದು ಸತ್ಯಾರಾಧಕರು ಅನುಭವಿಸುತ್ತಿರುವ ಆಧ್ಯಾತ್ಮಿಕ ಸಮೃದ್ಧಿಯನ್ನು ನೋಡುವಾಗ ಯೆಹೋವನು ಈ ಏರ್ಪಾಡನ್ನು ಆಶೀರ್ವದಿಸುತ್ತಿದ್ದಾನೆ ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ.

15 ನಮ್ಮಲ್ಲಿ ಪ್ರತಿಯೊಬ್ಬರು ಹೀಗೆ ಕೇಳಿಕೊಳ್ಳುವುದು ಒಳ್ಳೇದು: ‘ಕ್ರೈಸ್ತ ಸಭೆಯಲ್ಲಿ ನಾನು ವಹಿಸಿಕೊಳ್ಳಬೇಕಾದ ಜವಾಬ್ದಾರಿಗಳನ್ನು ನಾನು ಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೇನೊ? ನಾನು ಯೆಹೋವನ ಆಳ್ವಿಕೆಯನ್ನು ಯೋಗ್ಯವಾಗಿ ಬೆಂಬಲಿಸುತ್ತಿದ್ದೇನೊ? ಈಗ ಆಳುತ್ತಿರುವ ಯೆಹೋವನ ರಾಜ್ಯದ ಪ್ರಜೆಯಾಗಿರಲು ನಾನು ಹೆಮ್ಮೆಪಡುತ್ತೇನೊ? ಸಾಧ್ಯವಿರುವಷ್ಟರ ಮಟ್ಟಿಗೆ ನಾನು ದೇವರ ರಾಜ್ಯದ ಕುರಿತು ಇತರರಿಗೆ ತಿಳಿಸುತ್ತಾ ಇರುವ ದೃಢತೀರ್ಮಾನವನ್ನು ಮಾಡಿದ್ದೇನೊ?’ ಒಂದು ಗುಂಪಾಗಿ ನಾವು ಆಡಳಿತ ಮಂಡಲಿ ಕೊಡುವ ನಿರ್ದೇಶನಕ್ಕೆ ಸಿದ್ಧಮನಸ್ಸಿನಿಂದ ಅಧೀನರಾಗುತ್ತೇವೆ ಮತ್ತು ಸಭೆಗಳಲ್ಲಿರುವ ನೇಮಿತ ಹಿರಿಯರೊಂದಿಗೆ ಸಹಕರಿಸುತ್ತೇವೆ. ಈ ವಿಧಗಳಲ್ಲಿ ನಾವು ದೇವರ ಆಳ್ವಿಕೆಯನ್ನು ಸ್ವೀಕರಿಸಿದ್ದೇವೆ ಎಂಬುದನ್ನು ತೋರಿಸಿಕೊಡುತ್ತೇವೆ. (ಇಬ್ರಿಯ 13:17 ಓದಿ.) ಸಿದ್ಧಮನಸ್ಸಿನಿಂದ ಅದಕ್ಕೆ ಅಧೀನತೆ ತೋರಿಸುವುದು ಲೋಕವ್ಯಾಪಕ ಐಕ್ಯತೆಯನ್ನು ಸಾಧ್ಯಗೊಳಿಸುತ್ತದೆ. ಈ ವಿಭಜಿತ ಲೋಕದಲ್ಲಿ ಇಂಥ ಐಕ್ಯತೆ ವಿರಳವೇ ಸರಿ. ಇದು ಶಾಂತಿ ಮತ್ತು ನೀತಿಯನ್ನು ಸಹ ಉತ್ಪಾದಿಸುತ್ತದೆ ಹಾಗೂ ಯೆಹೋವನ ಆಳ್ವಿಕೆ ಮಾತ್ರವೇ ಅತ್ಯುತ್ತಮವಾದದ್ದೆಂದು ತೋರಿಸುವ ಮೂಲಕ ಯೆಹೋವನಿಗೆ ಮಹಿಮೆ ತರುತ್ತದೆ.

ಯೆಹೋವನ ಆಳ್ವಿಕೆಗೆ ಜಯ

16. ಇಂದು ಪ್ರತಿಯೊಬ್ಬರು ಮಾಡಬೇಕಾಗಿರುವ ತೀರ್ಮಾನ ಯಾವುದು?

16 ಏದೆನಿನಲ್ಲಿ ಎಬ್ಬಿಸಲಾದ ವಿವಾದಗಳು ಇತ್ಯರ್ಥಗೊಳ್ಳಲಿಕ್ಕಿರುವ ಸಮಯ ಧಾವಿಸುತ್ತಾ ಬರುತ್ತಿದೆ. ಆದುದರಿಂದ ಜನರು ಒಂದು ತೀರ್ಮಾನವನ್ನು ಮಾಡಲಿಕ್ಕಿರುವ ಸಮಯ ಇದೇ ಆಗಿದೆ. ಅದೇನೆಂದರೆ, ಪ್ರತಿಯೊಬ್ಬನು ಯೆಹೋವನ ಆಳ್ವಿಕೆಯನ್ನು ಸ್ವೀಕರಿಸುವನೋ ಅಥವಾ ಮಾನವ ಆಳ್ವಿಕೆಗೆ ಅಂಟಿಕೊಂಡಿರುವನೋ ಎಂದು ತೀರ್ಮಾನಿಸಬೇಕಾಗಿದೆ. ಸರಿಯಾದ ತೀರ್ಮಾನವನ್ನು ಮಾಡುವಂತೆ ನಮ್ರ ವ್ಯಕ್ತಿಗಳಿಗೆ ಸಹಾಯಮಾಡುವ ಸುಯೋಗ ನಮ್ಮದಾಗಿದೆ. ಶೀಘ್ರದಲ್ಲೇ ಅರ್ಮಗೆದೋನಿನಲ್ಲಿ ಯೆಹೋವನ ಆಳ್ವಿಕೆಯು ಸೈತಾನನ ಪ್ರಭಾವದ ಕೆಳಗಿರುವ ಮಾನವಾಧರಿತ ಸರಕಾರಗಳನ್ನು ಇನ್ನಿಲ್ಲದಂತೆ ಮಾಡುವುದು. (ದಾನಿ. 2:44; ಪ್ರಕ. 16:16) ಮಾನವ ಆಳ್ವಿಕೆ ಅಂತ್ಯಗೊಂಡು ದೇವರ ರಾಜ್ಯವು ಇಡೀ ಲೋಕದ ಮೇಲೆ ಆಧಿಪತ್ಯ ನಡಿಸುವುದು. ಆಗ ಯೆಹೋವನ ಆಳ್ವಿಕೆಯು ಅದರ ಪೂರ್ಣಾರ್ಥದಲ್ಲಿ ನಿರ್ದೋಷೀಕರಿಸಲ್ಪಟ್ಟಿರುವುದು.—ಪ್ರಕಟನೆ 21:3-5 ಓದಿ.

17. ಆಳ್ವಿಕೆಯ ವಿಷಯದಲ್ಲಿ ಒಳ್ಳೇ ತೀರ್ಮಾನವನ್ನು ಮಾಡಲು ನಮ್ರ ವ್ಯಕ್ತಿಗಳಿಗೆ ಯಾವ ವಾಸ್ತವಾಂಶಗಳು ಸಹಾಯಮಾಡಬಲ್ಲವು?

17 ಯೆಹೋವನ ಪರವಾಗಿ ದೃಢತೀರ್ಮಾನವನ್ನು ಇನ್ನೂ ಮಾಡಿರದವರು ದೇವರ ಆಳ್ವಿಕೆಯು ಮಾನವಕುಲಕ್ಕೆ ತರಲಿರುವ ಪ್ರಯೋಜನಗಳನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಬೇಕು. ಮಾನವ ಆಳ್ವಿಕೆಗೆ ಪಾತಕ ಕೃತ್ಯಗಳನ್ನು ತಡೆಯಲು ಸಾಧ್ಯವಾಗಿಲ್ಲ. ಭಯೋತ್ಪಾದನೆಯನ್ನು ತಡೆಯುವುದಂತೂ ದೂರದ ಮಾತು ಬಿಡಿ. ದೇವರ ಆಳ್ವಿಕೆಯು ದುಷ್ಟರೆಲ್ಲರನ್ನು ಭೂದೃಶ್ಯದಿಂದಲೇ ಇಲ್ಲವಾಗಿಸುವುದು. (ಕೀರ್ತ. 37:1, 2, 9) ಮಾನವ ಆಳ್ವಿಕೆ ಎಡೆಬಿಡದ ಯುದ್ಧಗಳಿಗೆ ನಡೆಸಿದೆ. ಆದರೆ ದೇವರ ಆಳ್ವಿಕೆಯು ‘ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಡುವುದು.’ (ಕೀರ್ತ. 46:9) ಅಷ್ಟೇ ಅಲ್ಲ, ದೇವರ ಆಳ್ವಿಕೆ ಮಾನವರ ಮತ್ತು ಪ್ರಾಣಿಗಳ ಮಧ್ಯೆಯೂ ಶಾಂತಿಯನ್ನು ಪುನಃಸ್ಥಾಪಿಸುವುದು! (ಯೆಶಾ. 11:6-9) ಮಾನವ ಆಳ್ವಿಕೆಯ ಕೆಳಗೆ ಬಡತನ ಮತ್ತು ಹಸಿವೆ ಇದ್ದೇ ಇರುತ್ತವೆ. ಆದರೆ ದೇವರ ಆಳ್ವಿಕೆ ಅವನ್ನು ತೆಗೆದುಹಾಕುವುದು. (ಯೆಶಾ. 65:21) ಸದುದ್ದೇಶಗಳಿದ್ದ ಮಾನವ ಅರಸರಿಂದಲೂ ರೋಗ ಮತ್ತು ಮರಣವನ್ನು ತೆಗೆದುಹಾಕಲು ಸಾಧ್ಯವಾಗಲಿಲ್ಲ. ಆದರೆ ದೇವರ ಆಳ್ವಿಕೆಯ ಕೆಳಗೆ ವೃದ್ಧರೂ ರೋಗಗ್ರಸ್ತರೂ ಎಳೆಯತನವನ್ನು ಪುನಃ ಪಡೆದುಕೊಂಡು ಹರ್ಷಿಸುವರು. (ಯೋಬ 33:25; ಯೆಶಾ. 35:5, 6) ವಾಸ್ತವದಲ್ಲಿ ಭೂಮಿ ಪರದೈಸಾಗುವುದು. ಅದರಲ್ಲಿ ಮೃತರು ಸಹ ಪುನರುತ್ಥಾನಗೊಳಿಸಲ್ಪಡುವರು.—ಲೂಕ 23:43; ಅ. ಕಾ. 24:15.

18. ದೇವರ ಆಳ್ವಿಕೆಯೊಂದೇ ಅತ್ಯುತ್ಕೃಷ್ಟವೆಂದು ನಂಬುತ್ತೇವೆಂಬುದನ್ನು ನಾವು ಹೇಗೆ ತೋರಿಸಬಲ್ಲೆವು?

18 ತಮ್ಮ ಸೃಷ್ಟಿಕರ್ತನಿಂದ ವಿಮುಖರಾಗುವಂತೆ ನಮ್ಮ ಪ್ರಥಮ ಹೆತ್ತವರನ್ನು ಸೈತಾನನು ಪ್ರಭಾವಿಸಿದಾಗ ಉಂಟಾದ ಎಲ್ಲ ಹಾನಿಯನ್ನು ದೇವರ ಆಳ್ವಿಕೆಯು ಪರಿಹರಿಸುವುದು. ಸೈತಾನನು ಸುಮಾರು 6,000 ವರ್ಷಗಳಿಂದಲೂ ಕೇಡನ್ನು ಮಾಡುತ್ತಾ ಬಂದಿದ್ದಾನೆ ಎಂಬುದನ್ನು ಗಮನಿಸಿರಿ. ಆದರೆ ದೇವರು ಕ್ರಿಸ್ತನ ಮೂಲಕವಾಗಿ ಆ ಎಲ್ಲ ಹಾನಿಯನ್ನು 1,000 ವರ್ಷದೊಳಗೇ ಪರಿಹರಿಸಿಬಿಡುವನು! ದೇವರ ಆಳ್ವಿಕೆಯ ಸರ್ವೋತ್ಕೃಷ್ಟತೆಗೆ ಎಂಥ ಮುಕುಟಪ್ರಾಯ ರುಜುವಾತಿದು! ದೇವರ ಸಾಕ್ಷಿಗಳೋಪಾದಿ ನಾವು ಆತನನ್ನು ನಮ್ಮ ಅರಸನಾಗಿ ಸ್ವೀಕರಿಸುತ್ತೇವೆ. ಆದ್ದರಿಂದ ಪ್ರತಿನಿತ್ಯವೂ, ಹೌದು ಪ್ರತಿ ಗಳಿಗೆಯೂ ನಾವು ಯೆಹೋವನ ಸೇವಕರಾಗಿದ್ದೇವೆ, ಆತನ ರಾಜ್ಯದ ಪ್ರಜೆಗಳಾಗಿದ್ದೇವೆ ಮತ್ತು ಆತನ ಸಾಕ್ಷಿಗಳಾಗಿರಲು ಹೆಮ್ಮೆಪಡುತ್ತೇವೆ ಎಂಬುದನ್ನು ತೋರಿಸೋಣ. ಮಾತ್ರವಲ್ಲ ಪ್ರತಿಯೊಂದು ಸಂದರ್ಭವನ್ನು ಉಪಯೋಗಿಸುತ್ತಾ ಯೆಹೋವನ ಆಳ್ವಿಕೆಯೊಂದೇ ಅತ್ಯುತ್ಕೃಷ್ಟ ಎಂಬುದನ್ನು ನಮಗೆ ಕಿವಿಗೊಡುವ ಪ್ರತಿಯೊಬ್ಬರಿಗೆ ನಾವು ತಿಳಿಯಪಡಿಸೋಣ.

ದೇವರ ಆಳ್ವಿಕೆಯ ವಿಷಯದಲ್ಲಿ ಈ ವಚನಗಳಿಂದ ಏನನ್ನು ಕಲಿತೆವು . . .

ಧರ್ಮೋಪದೇಶಕಾಂಡ 7:7, 8

1 ಸಮುವೇಲ 8:9-18

ಇಬ್ರಿಯ 13:17

ಪ್ರಕಟನೆ 21:3-5

[ಅಧ್ಯಯನ ಪ್ರಶ್ನೆಗಳು]

[ಪುಟ 29ರಲ್ಲಿರುವ ಚಿತ್ರಗಳು]

ಯೆಹೋವನು ಯಾವಾಗಲೂ ತನ್ನ ಆಳ್ವಿಕೆಯನ್ನು ನಡೆಸುತ್ತಾ ಇದ್ದಾನೆ

[ಪುಟ 31ರಲ್ಲಿರುವ ಚಿತ್ರ]

ಯೆಹೋವನ ಆಳ್ವಿಕೆಗೆ ಸಿದ್ಧಮನಸ್ಸಿನ ಅಧೀನತೆ ಲೋಕವ್ಯಾಪಕ ಐಕ್ಯತೆಯನ್ನು ತರುತ್ತದೆ