ಸವಾಲುಗಳನ್ನು ಎದುರಿಸಲು ನಿಮ್ಮ ಮಕ್ಕಳಿಗೆ ಸಹಾಯಮಾಡಿ
ಸವಾಲುಗಳನ್ನು ಎದುರಿಸಲು ನಿಮ್ಮ ಮಕ್ಕಳಿಗೆ ಸಹಾಯಮಾಡಿ
ನಮ್ಮ ಯುವ ಜನರು ತೀವ್ರ ಒತ್ತಡದ ಕೆಳಗಿದ್ದಾರೆ. ಸೈತಾನನ ದುಷ್ಟ ಲೋಕದ ಮನೋಭಾವವು ಅವರನ್ನು ಪ್ರಭಾವಿಸಲು ಪ್ರಯತ್ನಿಸುತ್ತದೆ ಮತ್ತು ಅವರು ‘ಯೌವನ ಸಹಜವಾದ ಇಚ್ಛೆಗಳೊಂದಿಗೂ’ ಹೋರಾಡಬೇಕಾಗಿದೆ. (2 ತಿಮೊ. 2:22; 1 ಯೋಹಾ. 5:19) ಅಷ್ಟೇ ಅಲ್ಲ, ಅವರು ‘ತಮ್ಮ [ಮಹಾನ್] ಸೃಷ್ಟಿಕರ್ತನನ್ನು ಸ್ಮರಿಸಲು’ ಪ್ರಯತ್ನಿಸುತ್ತಾರಾದ್ದರಿಂದ ಅವರ ನಂಬಿಕೆಯನ್ನು ವಿರೋಧಿಸುವವರಿಂದ ಅಪಹಾಸ್ಯವನ್ನು, ಕಿರುಕುಳವನ್ನು ಸಹ ತಾಳಿಕೊಳ್ಳಬೇಕಾಗುತ್ತದೆ. (ಪ್ರಸಂ. 12:1) ತಾನು ಚಿಕ್ಕವನಾಗಿದ್ದ ಸಮಯವನ್ನು ನೆನಪಿಸಿಕೊಳ್ಳುತ್ತಾ ವಿನ್ಸಂಟ್ ಎಂಬ ಸಹೋದರನು ಹೇಳುವುದು: “ನಾನು ಸಾಕ್ಷಿಯಾಗಿದ್ದ ಕಾರಣ ಒಬ್ಬನು ನನಗೆ ಯಾವಾಗಲೂ ಕಿರುಕುಳ ಕೊಡುತ್ತಿದ್ದ, ನನ್ನನ್ನು ಪೀಡಿಸುತ್ತಿದ್ದ ಅಥವಾ ಕಾಲ್ಕೆರೆದು ಜಗಳಕ್ಕೆ ಬರುತ್ತಿದ್ದ. ಕೆಲವೊಮ್ಮೆ ಇದು ಎಷ್ಟು ವಿಪರೀತಕ್ಕೆ ಹೋಗುತ್ತಿತ್ತೆಂದರೆ ನನಗೆ ಶಾಲೆಗೆ ಹೋಗಲು ಮನಸ್ಸೇ ಆಗುತ್ತಿರಲಿಲ್ಲ.” *
ಲೋಕದಿಂದ ಬರುವ ಒತ್ತಡಕ್ಕೆ ಕೂಡಿಸಿ, ಇತರ ಮಕ್ಕಳಂತೆ ಇರಬೇಕೆಂಬ ಆಸೆಯೊಂದಿಗೂ ನಮ್ಮ ಮಕ್ಕಳು ಹೋರಾಡಬೇಕಾಗಬಹುದು. “ಇತರರಿಗಿಂತ ಭಿನ್ನರಾಗಿರುವುದು ಸುಲಭದ ವಿಷಯವಲ್ಲ” ಎಂದು 16 ವಯಸ್ಸಿನ ಕ್ಯಾತ್ಲೀನ್ ಎಂಬ ಸಹೋದರಿ
ಹೇಳುತ್ತಾಳೆ. ಆ್ಯಲನ್ ಎಂಬ ಯುವ ಸಹೋದರನು ಒಪ್ಪಿಕೊಳ್ಳುವುದು: “ನನ್ನ ಸಹಪಾಠಿಗಳು ಯಾವಾಗಲೂ ನನ್ನನ್ನು ವಾರಾಂತ್ಯಗಳಲ್ಲಿ ಸುತ್ತಾಡಲು ಕರೆಯುತ್ತಿದ್ದಾಗ ನನಗೆ ಹೋಗಲು ತುಂಬ ಮನಸ್ಸಾಗುತ್ತಿತ್ತು.” ಶಾಲಾ ಕ್ರೀಡೆಗಳಲ್ಲಿ ಭಾಗವಹಿಸಲು ಸಹ ಯುವ ಜನರು ಹೆಚ್ಚಾಗಿ ಬಯಸುತ್ತಾರೆ. ಇದು ಅವರನ್ನು ಸುಲಭವಾಗಿ ಕೆಟ್ಟ ಸಹವಾಸಕ್ಕೆ ನಡೆಸಬಲ್ಲದು. ಟಾನ್ಯಾ ಎಂಬ ಯುವ ಸಹೋದರಿ ಹೇಳುವುದು: “ನನಗೆ ಸ್ಪೋರ್ಟ್ಸ್ ಅಂದರೆ ಪಂಚಪ್ರಾಣ. ಶಾಲಾ ಕೋಚ್‌ಗಳು ನನ್ನನ್ನು ತಂಡಕ್ಕೆ ಸೇರಿಸಲು ಯಾವಾಗಲೂ ಪ್ರಯತ್ನಿಸುತ್ತಿದ್ದರು. ಅದಕ್ಕೆ ಬೇಡ ಎನ್ನುವುದು ತುಂಬ ಕಷ್ಟಕರವಾಗಿತ್ತು.”ನಿಮ್ಮ ಮಕ್ಕಳ ಅನೇಕ ಸವಾಲುಗಳನ್ನು ಎದುರಿಸಲು ನೀವು ಅವರಿಗೆ ಹೇಗೆ ಸಹಾಯಮಾಡಸಾಧ್ಯವಿದೆ? ಹೆತ್ತವರು ತಮ್ಮ ಮಕ್ಕಳಿಗೆ ಮಾರ್ಗದರ್ಶನವನ್ನು ಕೊಡುವಂತೆ ಯೆಹೋವನು ಆಜ್ಞಾಪಿಸಿದನು. (ಜ್ಞಾನೋ. 22:6; ಎಫೆ. 6:4) ತಮ್ಮ ಮಕ್ಕಳ ಹೃದಯದಲ್ಲಿ ಯೆಹೋವನಿಗೆ ವಿಧೇಯರಾಗುವ ಇಚ್ಛೆಯನ್ನು ಬೆಳೆಸುವುದು ದೇವಭೀರು ಹೆತ್ತವರ ಗುರಿಯಾಗಿದೆ. (ಜ್ಞಾನೋ. 6:20-23) ಹಾಗೆ ಮಾಡುವಾಗ ಹೆತ್ತವರು ನೋಡದಿರುವಾಗಲೂ ಮಕ್ಕಳು ಲೋಕದ ಒತ್ತಡವನ್ನು ಎದುರಿಸುವಂತೆ ಪ್ರಚೋದಿಸಲ್ಪಡುವರು.
ಹೆತ್ತವರಿಗೆ ಜೀವನಾವಶ್ಯಕತೆಗಳಿಗಾಗಿ ದುಡಿಯುವ, ಕುಟುಂಬವನ್ನು ಪರಾಮರಿಸುವ ಹಾಗೂ ಸಭಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದೇ ಮುಂತಾದ ಎಲ್ಲ ವಿಷಯಗಳನ್ನು ಒಟ್ಟಿಗೆ ಮಾಡುವುದು ಸವಾಲಾಗಿದೆ. ಕೆಲವರು ಇದನ್ನು ಒಂಟಿ ಹೆತ್ತವರಾಗಿ ಅಥವಾ ಅವಿಶ್ವಾಸಿ ಸಂಗಾತಿಯಿಂದ ವಿರೋಧ ಎದುರಿಸುತ್ತಿರುವಾಗಲೂ ಮಾಡಬೇಕಾಗುತ್ತದೆ. ಹೀಗಿದ್ದರೂ ತಮ್ಮ ಮಕ್ಕಳಿಗೆ ಸಹಾಯಮಾಡಲು ಹೆತ್ತವರು ಸಮಯವನ್ನು ಬದಿಗಿಡುವಂತೆ ಯೆಹೋವನು ಅಪೇಕ್ಷಿಸುತ್ತಾನೆ. ಆದುದರಿಂದ ನಿಮ್ಮ ಮಕ್ಕಳು ದಿನೇದಿನೇ ಎದುರಿಸುವ ಸಮಾನಸ್ಥರ ಒತ್ತಡ, ಪ್ರಲೋಭನೆಗಳು ಮತ್ತು ಕಿರುಕುಳಗಳಿಂದ ತಮ್ಮನ್ನು ರಕ್ಷಿಸಿಕೊಳ್ಳ ಸಾಧ್ಯವಾಗುವಂತೆ ನೀವು ಹೇಗೆ ಸಹಾಯಮಾಡಬಲ್ಲಿರಿ?
ಯೆಹೋವನೊಂದಿಗೆ ವೈಯಕ್ತಿಕ ಸಂಬಂಧ
ಮೊದಲಾಗಿ ನಮ್ಮ ಯುವ ಜನರು ಯೆಹೋವನನ್ನು ಒಬ್ಬ ನೈಜ ವ್ಯಕ್ತಿಯಾಗಿ ತಿಳಿದುಕೊಳ್ಳಬೇಕು. ‘ಅದೃಶ್ಯನಾಗಿರುವಾತನನ್ನು ನೋಡಲು’ ಅವರಿಗೆ ಸಹಾಯದ ಅಗತ್ಯವಿದೆ. (ಇಬ್ರಿ. 11:27) ಈ ಮೊದಲು ತಿಳಿಸಿದ ವಿನ್ಸಂಟ್, ಯೆಹೋವನೊಂದಿಗೆ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳಲು ಅವರ ಹೆತ್ತವರು ಹೇಗೆ ಸಹಾಯಮಾಡಿದರೆಂಬುದನ್ನು ನೆನಪಿಸಿಕೊಳ್ಳುತ್ತಾರೆ. ಅವರನ್ನುವುದು: “ಪ್ರಾರ್ಥನೆ ಎಷ್ಟು ಪ್ರಾಮುಖ್ಯ ಎಂಬುದನ್ನು ಅವರು ನನಗೆ ಕಲಿಸಿದರು. ತೀರ ಚಿಕ್ಕಂದಿನಿಂದಲೇ ನಾನು ಪ್ರತಿ ರಾತ್ರಿ ಮಲಗುವ ಮುಂಚೆ ಯೆಹೋವನಿಗೆ ಪ್ರಾರ್ಥಿಸುತ್ತಿದ್ದದ್ದು ನನಗೆ ನೆನಪಿದೆ. ಯೆಹೋವನು ನನಗೆ ನೈಜನಾಗಿದ್ದನು.” ನಿಮ್ಮ ಮಕ್ಕಳೊಂದಿಗೆ ನೀವು ಪ್ರಾರ್ಥಿಸುತ್ತೀರೊ? ಮಕ್ಕಳು ತಮ್ಮ ವೈಯಕ್ತಿಕ ಪ್ರಾರ್ಥನೆಗಳಲ್ಲಿ ಯೆಹೋವನಿಗೆ ಏನು ಹೇಳುತ್ತಾರೆಂಬುದನ್ನು ನೀವೇಕೆ ಆಲಿಸಬಾರದು? ಅವರು ಪ್ರಾರ್ಥಿಸುವಾಗೆಲ್ಲಾ ಹೇಳಿದ್ದನ್ನೇ ಹೇಳುತ್ತಿರುತ್ತಾರೊ? ಅಥವಾ ಯೆಹೋವನ ಬಗ್ಗೆ ತಮ್ಮ ನಿಜವಾದ ಭಾವನೆಗಳನ್ನು ಅವರು ತಮ್ಮ ಪ್ರಾರ್ಥನೆಗಳಲ್ಲಿ ವ್ಯಕ್ತಪಡಿಸುತ್ತಾರೊ? ಅವರ ಪ್ರಾರ್ಥನೆಗಳನ್ನು ಆಲಿಸುವ ಮೂಲಕ ಅವರ ಆಧ್ಯಾತ್ಮಿಕ ಪ್ರಗತಿಯನ್ನು ನೀವು ತಿಳಿಯಸಾಧ್ಯವಿದೆ.
ಯುವ ಜನರು ಯೆಹೋವನ ಹತ್ತಿರಕ್ಕೆ ಬರುವ ಇನ್ನೊಂದು ಮುಖ್ಯ ವಿಧವು ದೇವರ ವಾಕ್ಯವನ್ನು ವೈಯಕ್ತಿಕವಾಗಿ ಓದುವುದೇ ಆಗಿದೆ. ಈ ಮೊದಲು ತಿಳಿಸಿದ ಕ್ಯಾತ್ಲೀನ್ ಹೇಳುವುದು: “ಚಿಕ್ಕಂದಿನಲ್ಲೇ ಇಡೀ ಬೈಬಲನ್ನು ಓದಿದ್ದು ನನಗೆ ಸಹಾಯವಾಯಿತು. ಜನರು ನನ್ನನ್ನು ವಿರೋಧಿಸಿದರೂ ಯೆಹೋವನ ಬೆಂಬಲ ನನಗೆ ಸದಾ ಇದೆ ಎಂಬ ಭರವಸೆಯನ್ನು ಇದು ಕೊಟ್ಟಿತು.” ನಿಮ್ಮ ಮಕ್ಕಳಿಗೆ ಸ್ವಂತ ಬೈಬಲ್ ವಾಚನ ಶೆಡ್ಯೂಲ್ ಇದೆಯೊ?—ಕೀರ್ತ. 1:1-3; 77:12.
ಹೆತ್ತವರ ಮಾರ್ಗದರ್ಶನಕ್ಕೆ ಮಕ್ಕಳು ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆಂಬುದು ನಿಜ. ಮಾತ್ರವಲ್ಲ ಅವರ ಆಧ್ಯಾತ್ಮಿಕ ಪ್ರಗತಿಯು ಅವರ ವಯಸ್ಸಿನ ಮೇಲೂ ಆಧರಿಸಿರಬಹುದು. ಆದರೆ ಯಾವುದೇ ಮಾರ್ಗದರ್ಶನೆಯಿಲ್ಲದೆ ಮಕ್ಕಳು ಯೆಹೋವನನ್ನು ಒಬ್ಬ ನೈಜ ವ್ಯಕ್ತಿಯಾಗಿ ತಿಳಿದುಕೊಳ್ಳುವುದು ಕಷ್ಟ. ಆದುದರಿಂದ ಹೆತ್ತವರು ದೇವರ ವಾಕ್ಯವನ್ನು ತಮ್ಮ ಮಕ್ಕಳಲ್ಲಿ ಬೇರೂರಿಸಬೇಕು. ಹೀಗೆ ಮಕ್ಕಳು ಎಲ್ಲೇ ಇರಲಿ ಯೆಹೋವನು ಮಾತುಗಳು ಅವರಿಗೆ ಕೇಳಿಸುತ್ತದೋ ಎಂಬಂತಿರುವುದು. (ಧರ್ಮೋ. 6:6-9) ಯೆಹೋವನಿಗೆ ತಮ್ಮ ಬಗ್ಗೆ ವೈಯಕ್ತಿಕ ಕಾಳಜಿಯಿದೆ ಎಂಬ ನಂಬಿಕೆ ಮಕ್ಕಳಲ್ಲಿರಬೇಕು.
ಸಂವಾದವನ್ನು ಅರ್ಥವತ್ತಾಗಿ ಮಾಡುವ ವಿಧ
ನಿಮ್ಮ ಮಕ್ಕಳಿಗೆ ಸಹಾಯಮಾಡುವ ಮತ್ತೊಂದು ಮುಖ್ಯ ವಿಧ ಸಂವಾದ. ಒಳ್ಳೇ ಸಂವಾದದಲ್ಲಿ ಮಕ್ಕಳೊಂದಿಗೆ ಕೇವಲ ಮಾತಾಡುವುದಕ್ಕಿಂತ ಹೆಚ್ಚಿನದ್ದು ಒಳಗೂಡಿದೆ. ಇದರಲ್ಲಿ ಪ್ರಶ್ನೆಗಳನ್ನು ಕೇಳುವುದು ಮತ್ತು ಮಕ್ಕಳು ಉತ್ತರಿಸುವಾಗ ತಾಳ್ಮೆಯಿಂದ ಆಲಿಸುವುದು ಸೇರಿದೆ. ನೀವು ಬಯಸುವ ಉತ್ತರವನ್ನು ಅವರು ಕೊಡದಿದ್ದಾಗಲೂ ಕಿವಿಗೊಟ್ಟು ಕೇಳುವುದು ಒಳ್ಳೇದು. ಇಬ್ಬರು ಗಂಡುಮಕ್ಕಳ ತಾಯಿ ಆ್ಯನ್ ಹೇಳುವುದು: “ನನ್ನ ಮಕ್ಕಳು ಏನನ್ನು ಯೋಚಿಸುತ್ತಾರೆ, ಜೀವನದಲ್ಲಿ ಏನನ್ನು ಎದುರಿಸುತ್ತಿದ್ದಾರೆ ಎಂಬುದು ನನಗೆ ತಿಳಿಯುವ ವರೆಗೆ ನಾನು ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತೇನೆ.” ನಿಮ್ಮ ಮಕ್ಕಳು ಮಾತಾಡುವಾಗ ನೀವು ಕಿವಿಗೊಡುತ್ತೀರಿ ಎಂಬ ಭರವಸೆ ಅವರಿಗಿದೆಯೊ? ಈ ಮೊದಲು ಉಲ್ಲೇಖಿಸಲ್ಪಟ್ಟ ಟಾನ್ಯ ಹೇಳುವುದು: “ನಾನು ಮಾತಾಡುವಾಗ ನನ್ನ ಹೆತ್ತವರು ಗಮನಕೊಟ್ಟು ಕೇಳುತ್ತಿದ್ದರು. ಮಾತಾಡಿದ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳುತ್ತಿದ್ದರು. ನನ್ನ ಸಹಪಾಠಿಗಳ ಹೆಸರು ಸಹ ಅವರಿಗೆ ಗೊತ್ತಿತ್ತು. ಆ ಸಹಪಾಠಿಗಳ
ಕುರಿತು ಮತ್ತು ನಾವು ಈ ಮುಂಚೆ ಮಾತಾಡಿದ್ದ ಬೇರೆ ವಿಷಯಗಳ ಕುರಿತು ಅವರು ಕೇಳುತ್ತಿದ್ದರು.” ಕಿವಿಗೊಡುವುದು ಮತ್ತು ಮಾತನಾಡಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳ್ಳೇ ಸಂವಾದಕ್ಕೆ ಅತ್ಯಗತ್ಯ.ಅರ್ಥವತ್ತಾದ ಸಂವಾದಕ್ಕೆ ಊಟದ ಸಮಯ ಒಳ್ಳೇ ಅವಕಾಶವನ್ನು ಕೊಡುತ್ತದೆ ಎಂದು ಅನೇಕ ಕುಟುಂಬಗಳು ಕಂಡುಕೊಂಡಿವೆ. ವಿನ್ಸಂಟ್ ಹೇಳುವುದು: “ಒಟ್ಟಿಗೆ ಊಟಮಾಡುವುದು ನಮ್ಮ ಕುಟುಂಬದಲ್ಲಿ ಪ್ರಾಮುಖ್ಯವಾಗಿತ್ತು. ಸಾಧ್ಯವಿರುವಾಗೆಲ್ಲ ನಾವು ಒಟ್ಟಾಗಿ ಕೂಡಿ ಊಟಮಾಡಲು ಬರಬೇಕಿತ್ತು. ಊಟಮಾಡುವಾಗ ಟಿ.ವಿ. ನೋಡುವುದಕ್ಕೆ, ರೇಡಿಯೊ ಕೇಳುವುದಕ್ಕೆ ಅಥವಾ ಓದುವುದಕ್ಕೆ ಅನುಮತಿಯಿರಲಿಲ್ಲ. ಇಂಥ ಸಮಯದಲ್ಲಿ ನಾವು ಗಂಭೀರವಾದ ವಿಷಯಗಳನ್ನು ಮಾತಾಡುತ್ತಿರಲಿಲ್ಲ. ಇದರಿಂದ ಸನ್ನಿವೇಶ ಹಾಯಾಗಿರುತ್ತಿತ್ತು. ಶಾಲೆಯಲ್ಲಿ ನಾನು ಎದುರಿಸಿದ ಗೊಂದಲ, ಒತ್ತಡಗಳನ್ನು ನಿಭಾಯಿಸಲು ಇದು ಸಹಾಯಮಾಡಿತು.” ಅವರು ಮತ್ತೂ ಹೇಳುವುದು: “ಊಟದ ಸಮಯದಲ್ಲಿ ಹೆತ್ತವರೊಂದಿಗೆ ಮಾತಾಡುವ ರೂಢಿ ನನಗಿದ್ದ ಕಾರಣ ಹೆಚ್ಚು ಗಂಭೀರ ವಿಷಯಗಳಲ್ಲಿ ಅವರ ಸಹಾಯ ಬೇಕಾದಾಗ ಯಾವುದೇ ಮುಜುಗರವಿಲ್ಲದೆ ಅವರೊಂದಿಗೆ ಮಾತಾಡಲು ಸಹ ಸಾಧ್ಯವಾಯಿತು.”
ನಿಮ್ಮನ್ನು ಕೇಳಿಕೊಳ್ಳಿ: ‘ಪ್ರತಿ ವಾರ ನಾವು ಎಷ್ಟು ಬಾರಿ ಕುಟುಂಬವಾಗಿ ಒಟ್ಟಿಗೆ ಊಟಮಾಡುತ್ತೇವೆ?’ ಈ ವಿಷಯದಲ್ಲಿ ನೀವು ಹೊಂದಾಣಿಕೆಗಳನ್ನು ಮಾಡುವುದು ನಿಮ್ಮ ಮಕ್ಕಳೊಂದಿಗಿನ ಸಂವಾದವನ್ನು ಹೆಚ್ಚಿಸಲು ಮತ್ತು ಅದನ್ನು ಉತ್ತಮಗೊಳಿಸಲು ನಿಮಗೆ ಅವಕಾಶ ಕೊಡುವುದೊ?
ಪ್ರ್ಯಾಕ್ಟಿಸ್ ಸೆಷನ್ ಏಕೆ ಅಷ್ಟೊಂದು ಪ್ರಾಮುಖ್ಯ?
ಪ್ರತಿ ವಾರ ಕುಟುಂಬ ಆರಾಧನೆಯನ್ನು ಮಾಡುವುದು ಸಹ ಅರ್ಥವತ್ತಾದ ಸಂವಾದವನ್ನು ಉತ್ತೇಜಿಸುತ್ತದೆ ಮತ್ತು ಮಕ್ಕಳು ತಮ್ಮ ಸಮಸ್ಯೆಗಳನ್ನು ನಿಭಾಯಿಸಲು ಸಹಾಯಮಾಡುತ್ತದೆ. ಈ ಮೊದಲು ತಿಳಿಸಿದ ಆ್ಯಲನ್ ಹೇಳುವುದು: “ನಮ್ಮ ಹೆತ್ತವರು ನಮ್ಮ ಮನಸ್ಸಿನಲ್ಲಿರುವುದನ್ನು ಹೊರತರಲು ಕುಟುಂಬ ಅಧ್ಯಯನವನ್ನು ಉಪಯೋಗಿಸುತ್ತಿದ್ದರು. ನಾವು ಎದುರಿಸುವ ಸನ್ನಿವೇಶಗಳಿಗೆ ತಕ್ಕದಾದ ವಿಷಯಗಳನ್ನು ಅವರು ಚರ್ಚಿಸುತ್ತಿದ್ದರು.” ಆ್ಯಲನ್‌ರ ತಾಯಿ ಹೇಳುವುದು: “ಅಧ್ಯಯನದ ಸ್ವಲ್ಪ ಸಮಯವನ್ನು ನಾವು ಪ್ರ್ಯಾಕ್ಟಿಸ್ ಸೆಷನ್‌ಗಳಿಗಾಗಿ ಉಪಯೋಗಿಸುತ್ತಿದ್ದೆವು. ಇವು ನಮ್ಮ ಮಕ್ಕಳು ತಮ್ಮ ನಂಬಿಕೆಯನ್ನು ಸಮರ್ಥಿಸಲು ಮತ್ತು ಅದನ್ನು ರುಜುಪಡಿಸಲು ಕಲಿಯುವಂತೆ ಸಹಾಯಮಾಡಿತು. ಅವರು ಎದುರಿಸುವ ಸವಾಲುಗಳನ್ನು ಸರಿಯಾಗಿ ನಿಭಾಯಿಸಲು ಬೇಕಾದ ಧೈರ್ಯವನ್ನು ಇದು ಅವರಿಗೆ ಕೊಟ್ಟಿತು.”
ಮಕ್ಕಳು ಸಮವಯಸ್ಕರ ಒತ್ತಡವನ್ನು ಎದುರಿಸುವಾಗ ಅದನ್ನು ಕೇವಲ ನಿರಾಕರಿಸಿ ಅಲ್ಲಿಂದ ಹೊರಟುಹೋಗುವುದಕ್ಕಿಂತ ಆಗಾಗ್ಗೆ ಹೆಚ್ಚಿನದ್ದನ್ನು ಮಾಡುವ ಅಗತ್ಯವಿದೆ ನಿಶ್ಚಯ. ಯಾವುದೇ ವಿಷಯವನ್ನು ಏಕೆ ಮಾಡುತ್ತೀ ಮತ್ತು ಏಕೆ ಮಾಡುವುದಿಲ್ಲ ಎಂಬಂಥ ಪ್ರಶ್ನೆಗಳಿಗೆ ಉತ್ತರಕೊಡಲು ಅವರು
ಸಮರ್ಥರಾಗಿರಬೇಕು. ಮಾತ್ರವಲ್ಲ ನಂಬಿಕೆಗಾಗಿ ಅಪಹಾಸ್ಯಕ್ಕೆ ಗುರಿಯಾದಾಗ ಏನು ಮಾಡಬೇಕೆಂಬುದೂ ಅವರಿಗೆ ಪೂರ್ಣವಾಗಿ ತಿಳಿದಿರಬೇಕು. ಒಂದುವೇಳೆ ತಮ್ಮ ನಂಬಿಕೆಗಳನ್ನು ಸಮರ್ಥಿಸಲು ಆಗದಿದ್ದಲ್ಲಿ ಸತ್ಯಾರಾಧನೆಗಾಗಿ ದೃಢವಾದ ನಿಲುವನ್ನು ತೆಗೆದುಕೊಳ್ಳುವುದು ಅವರಿಗೆ ಕಷ್ಟಕರ. ಆದುದರಿಂದ ಪ್ರ್ಯಾಕ್ಟಿಸ್ ಸೆಷನ್‌ಗಳು ಆ ಭರವಸೆಯನ್ನು ಕಟ್ಟಲು ಸಹಾಯಮಾಡಬಲ್ಲವು.ಕುಟುಂಬ ಆರಾಧನೆಯ ಸಂಜೆಯಲ್ಲಿ ಅಭಿನಯಿಸಬಹುದಾದ ಕೆಲವು ಸನ್ನಿವೇಶಗಳನ್ನು ಪುಟ 18ರಲ್ಲಿ ಕೊಡಲಾಗಿದೆ. ನಿಮ್ಮ ಮಕ್ಕಳು ಕೊಡುವ ಉತ್ತರಗಳಿಗೆ ಪ್ರಶ್ನೆ-ಮರುಪ್ರಶ್ನೆಗಳನ್ನು ಹಾಕುವ ಮೂಲಕ ಈ ಸೆಷನ್‌ಗಳನ್ನು ನೈಜವಾದದ್ದಾಗಿ ಮಾಡಿರಿ. ಅಂಥ ಪ್ರ್ಯಾಕ್ಟಿಸ್ ಸೆಷನ್‌ಗಳೊಂದಿಗೆ ಬೈಬಲ್ ಉದಾಹರಣೆಗಳಿಂದ ಕಲಿಯಬಹುದಾದ ಕೆಲವೊಂದು ಪ್ರಾಯೋಗಿಕ ಪಾಠಗಳನ್ನೂ ಪರಿಗಣಿಸಿರಿ. ಮನೆಯಲ್ಲಿ ನೀಡುವ ಇಂಥ ತರಬೇತಿ ಶಾಲೆಯಲ್ಲಿ ಮತ್ತು ಬೇರೆ ಕಡೆಗಳಲ್ಲಿ ಬರುವ ಸವಾಲುಗಳನ್ನು ಎದುರಿಸಲು ನಿಮ್ಮ ಮಕ್ಕಳನ್ನು ಖಂಡಿತ ಸಜ್ಜುಗೊಳಿಸುವುದು.
ಮನೆ—ಸುಭದ್ರ ನಿವಾಸವೊ?
ನಿಮ್ಮ ಮನೆಯು, ಮಕ್ಕಳು ಪ್ರತಿ ದಿನ ಶಾಲೆ ಮುಗಿಸಿ ಓಡೋಡಿ ಬರಲು ಆಸೆಪಡುವಂಥ ಸ್ಥಳವಾಗಿದೆಯೊ? ಅದು ಸುಭದ್ರ ನಿವಾಸವಾಗಿರುವುದಾದರೆ ನಿಮ್ಮ ಮಕ್ಕಳ ದಿನನಿತ್ಯದ ಸವಾಲುಗಳನ್ನು ಎದುರಿಸಲು ಅದು ಸಹಾಯಮಾಡುವುದು. ಈಗ ಬೆತೆಲ್ ಕುಟುಂಬದಲ್ಲಿರುವ ಒಬ್ಬ ಸಹೋದರಿ ಹೇಳುವುದು: “ನಮ್ಮ ಮನೆ ಒಂದು ಸುಭದ್ರ ನಿವಾಸವಾಗಿದ್ದದ್ದೇ ನಾನು ಚಿಕ್ಕವಳಿದ್ದಾಗ ನನಗೆ ಹೆಚ್ಚು ಸಹಾಯಮಾಡಿದ ವಿಷಯ. ಶಾಲೆಯಲ್ಲಿ ಪರಿಸ್ಥಿತಿ ಎಷ್ಟೇ ಕೆಟ್ಟದಾಗಿದ್ದಿರಲಿ ಮನೆಗೆ ಬಂದ ಮೇಲೆ ಎಲ್ಲವೂ ಸರಿಯಾಗುತ್ತದೆ ಎಂದು ನನಗೆ ಗೊತ್ತಿತ್ತು.” ನಿಮ್ಮ ಮನೆಯಲ್ಲಿ ಯಾವ ರೀತಿಯ ವಾತಾವರಣವಿದೆ? ಅಲ್ಲಿ “ಕೋಪದ ಕೆರಳುವಿಕೆಗಳು, ಕಲಹ, [ಮತ್ತು] ಬೇಧಗಳು” ಯಾವಾಗಲೂ ಇರುತ್ತವೊ ಅಥವಾ ಅದು “ಪ್ರೀತಿ, ಆನಂದ, [ಮತ್ತು] ಶಾಂತಿ”ಗೆ ಖ್ಯಾತವಾಗಿದೆಯೊ? (ಗಲಾ. 5:19-23) ನಿಮ್ಮ ಮನೆಯಲ್ಲಿ ಶಾಂತಿ ಇಲ್ಲದಿರುವುದಾದರೆ ಅದು ನಿಮ್ಮ ಮಕ್ಕಳಿಗೆ ಸುಭದ್ರ ನಿವಾಸವಾಗುವಂತೆ ಯಾವ ಬದಲಾವಣೆಗಳನ್ನು ಮಾಡುವುದು ಅವಶ್ಯ ಎಂಬುದನ್ನು ಕಂಡುಹಿಡಿಯಲು ನೀವು ಶ್ರಮಿಸುತ್ತೀರೊ?
ಸವಾಲುಗಳನ್ನು ಎದುರಿಸಲು ನಿಮ್ಮ ಮಕ್ಕಳಿಗೆ ಸಹಾಯಮಾಡುವ ಇನ್ನೊಂದು ವಿಧವು ಅವರಿಗೆ ಭಕ್ತಿವೃದ್ಧಿಮಾಡುವ ಸಹವಾಸವನ್ನು ಒದಗಿಸಲು ಮೊದಲ ಹೆಜ್ಜೆ ತೆಗೆದುಕೊಳ್ಳುವುದೇ ಆಗಿದೆ. ಉದಾಹರಣೆಗೆ, ನಿಮ್ಮ ಕುಟುಂಬದ ವಿನೋದಾವಳಿಗಳಲ್ಲಿ ಸಭೆಯ ಕೆಲವು ಆಧ್ಯಾತ್ಮಿಕ ಮನಸ್ಸಿನ ಸಹೋದರ ಸಹೋದರಿಯರನ್ನು ಒಳಗೂಡಿಸಬಲ್ಲಿರೊ? ಅಥವಾ ನಿಮ್ಮ ಮನೆಯಲ್ಲಿ ಸಂಚರಣ ಮೇಲ್ವಿಚಾರಕರಿಗಾಗಿ ಇಲ್ಲವೆ ಪೂರ್ಣ ಸಮಯದ ಸೇವೆಯಲ್ಲಿರುವ ಇತರರಿಗಾಗಿ ಚಿಕ್ಕ ಊಟವನ್ನು ಏರ್ಪಡಿಸಬಲ್ಲಿರೊ? ನಿಮ್ಮ ಮಕ್ಕಳು ಪತ್ರ, ಇ-ಮೇಲ್ ಅಥವಾ ಫೋನಿನ ಮೂಲಕವಾದರೂ ಸ್ನೇಹವನ್ನು ಬೆಳೆಸಸಾಧ್ಯವಿರುವ ಯಾರಾದರೂ ಮಿಷನೆರಿಗಳ ಅಥವಾ ಬೆತೆಲಿಗರ ಪರಿಚಯ ನಿಮಗಿದೆಯೊ? ಇಂಥ ಸ್ನೇಹಸಂಬಂಧವು ನೇರವಾದ ಮಾರ್ಗದಲ್ಲಿ ಹೆಜ್ಜೆಯಿಡುತ್ತಾ ಆಧ್ಯಾತ್ಮಿಕ ಗುರಿಗಳನ್ನಿಡುವಂತೆ ನಿಮ್ಮ ಮಕ್ಕಳಿಗೆ ಸಹಾಯಮಾಡುವುದು. ಯುವ ತಿಮೊಥೆಯನ ಮೇಲೆ ಅಪೊಸ್ತಲ ಪೌಲನು ಬೀರಿದ ಒಳ್ಳೇ ಪ್ರಭಾವದ ಕುರಿತು ಯೋಚಿಸಿರಿ. (2 ತಿಮೊ. 1:13; 3:10) ಪೌಲನೊಂದಿಗಿನ ಆಪ್ತ ಸಹವಾಸವು ಆಧ್ಯಾತ್ಮಿಕ ಗುರಿಗಳ ಮೇಲೆ ತನ್ನ ಮನಸ್ಸನ್ನು ಕೇಂದ್ರೀಕರಿಸುವಂತೆ ತಿಮೊಥೆಯನಿಗೆ ಸಹಾಯಮಾಡಿತು.—1 ಕೊರಿಂ. 4:17.
ನಿಮ್ಮ ಮಕ್ಕಳನ್ನು ಪ್ರಶಂಸಿಸಿ
ಸೈತಾನನ ಲೋಕದಿಂದ ಬರುವ ಒತ್ತಡಗಳ ಮಧ್ಯೆಯೂ ಯುವ ಜನರು ಸರಿಯಾದದ್ದನ್ನು ಮಾಡುವಾಗ ಯೆಹೋವನಿಗೆ ಸಂತೋಷವಾಗುತ್ತದೆ. (ಕೀರ್ತ. 147:11; ಜ್ಞಾನೋ. 27:11) ನಮ್ಮ ಯುವ ಜನರು ವಿವೇಕದ ಮಾರ್ಗವನ್ನು ಆರಿಸಿಕೊಳ್ಳುವಾಗ ನೀವು ಸಹ ಹರ್ಷಿಸುತ್ತೀರೆಂಬುದು ನಿಸ್ಸಂದೇಹ. (ಜ್ಞಾನೋ. 10:1) ನಿಮ್ಮ ಮಕ್ಕಳ ಬಗ್ಗೆ ನಿಮಗಿರುವ ಭಾವನೆಗಳನ್ನು ತಿಳಿಸಿರಿ ಮತ್ತು ಪ್ರೀತಿಪೂರ್ವಕ ಪ್ರಶಂಸೆಯನ್ನು ಧಾರಾಳವಾಗಿ ಕೊಡಿರಿ. ಹೆತ್ತವರಿಗೆ ಯೆಹೋವ ದೇವರು ಉತ್ತಮ ಮಾದರಿ. ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲಿ, “ನೀನು ಪ್ರಿಯನಾಗಿರುವ ನನ್ನ ಮಗನು; ನಾನು ನಿನ್ನನ್ನು ಮೆಚ್ಚಿದ್ದೇನೆ” ಎಂದು ಯೆಹೋವನು ಹೇಳಿದನು. (ಮಾರ್ಕ 1:11) ಮುಂದೆ ಎದುರಿಸಲಿಕ್ಕಿದ್ದ ಅನೇಕ ಸವಾಲುಗಳನ್ನು ನಿಭಾಯಿಸಲು ತನ್ನ ತಂದೆಯ ಈ ಆಶ್ವಾಸನೆ ಯೇಸುವಿಗೆ ಎಷ್ಟು ಬಲವನ್ನು ಕೊಟ್ಟಿದ್ದಿರಬೇಕು! ತದ್ರೀತಿಯಲ್ಲಿ ನೀವು ನಿಮ್ಮ ಮಕ್ಕಳನ್ನು ಪ್ರೀತಿಸುತ್ತೀರಿ ಎಂಬುದು ಅವರಿಗೆ ತಿಳಿಯಲಿ ಮತ್ತು ಅವರು ಸಾಧಿಸುತ್ತಿರುವುದನ್ನು ಮಾನ್ಯಮಾಡಿರಿ.
ನೀವು ನಿಮ್ಮ ಮಕ್ಕಳನ್ನು ಒತ್ತಡಗಳು, ಕಿರುಕುಳ ಮತ್ತು ಅಪಹಾಸ್ಯದಿಂದ ಸಂಪೂರ್ಣವಾಗಿ ಕಾಪಾಡಲು ಸಾಧ್ಯವಿಲ್ಲ ಎಂಬುದು ಒಪ್ಪತಕ್ಕದ್ದೇ. ಆದರೂ ಅವರಿಗೆ ಸಹಾಯಮಾಡಲು ನೀವು ಹೆಚ್ಚನ್ನು ಮಾಡಬಲ್ಲಿರಿ. ಯಾವ ವಿಧಗಳಲ್ಲಿ? ಯೆಹೋವನೊಂದಿಗೆ ವೈಯಕ್ತಿಕ ಸಂಬಂಧ ಬೆಳೆಸಿಕೊಳ್ಳುವಂತೆ ಅವರಿಗೆ ಸಹಾಯಮಾಡಿ. ಅರ್ಥವತ್ತಾದ ಸಂಭಾಷಣೆಗಳನ್ನು ಉತ್ತೇಜಿಸುವ ವಾತಾವರಣವನ್ನು ಉಂಟುಮಾಡಿರಿ. ಕುಟುಂಬ ಆರಾಧನೆಯ ಸಂಜೆ ಪ್ರಾಯೋಗಿಕವಾಗಿರಲಿ ಮತ್ತು ನಿಮ್ಮ ಮನೆಯನ್ನು ಸುಭದ್ರ ನಿವಾಸವನ್ನಾಗಿ ಮಾಡಿ. ಹೀಗೆ ಮಾಡುವುದರಿಂದ ಸವಾಲುಗಳನ್ನು ಎದುರಿಸಲು ನಿಮ್ಮ ಮಕ್ಕಳು ಖಂಡಿತ ಸಜ್ಜಿತರಾಗುವರು.
[ಪಾದಟಿಪ್ಪಣಿ]
^ ಪ್ಯಾರ. 2 ಈ ಲೇಖನದಲ್ಲಿ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.
[ಪುಟ 18ರಲ್ಲಿರುವ ಚೌಕ/ಚಿತ್ರ]
ಪ್ರ್ಯಾಕ್ಟಿಸ್ ಸೆಷನ್ ಸಹಾಯಕಾರಿ
ನಮ್ಮ ಯುವ ಜನರು ಎದುರಿಸುವ ಕೆಲವು ಸನ್ನಿವೇಶಗಳನ್ನು ಈ ಕೆಳಗೆ ಕೊಡಲಾಗಿದೆ. ನಿಮ್ಮ ಕುಟುಂಬ ಆರಾಧನೆಯ ಸಂಜೆಯಲ್ಲಿ ಇವುಗಳಲ್ಲಿ ಕೆಲವನ್ನು ಏಕೆ ಪ್ರ್ಯಾಕ್ಟಿಸ್ ಮಾಡಬಾರದು?
▸ ಶಾಲೆಯ ಕ್ರೀಡಾ ತಂಡಕ್ಕೆ ಸೇರಿಕೊಳ್ಳುವಂತೆ ಕೋಚ್ ನಿಮ್ಮ ಮಗಳನ್ನು ಕೇಳುತ್ತಾನೆ.
▸ ಶಾಲೆಯಿಂದ ಮನೆಗೆ ಬರುತ್ತಿರುವಾಗ ಹುಡುಗರು ನಿಮ್ಮ ಮಗನಿಗೆ ಸಿಗರೇಟ್ ಸೇದುವಂತೆ ಹೇಳುತ್ತಾರೆ.
▸ ಇನ್ನೊಮ್ಮೆ ಸಾರಲು ಹೋದರೆ ಹೊಡೆಯುತ್ತೇವೆಂದು ಹುಡುಗರು ನಿಮ್ಮ ಮಗನನ್ನು ಬೆದರಿಸುತ್ತಾರೆ.
▸ ನಿಮ್ಮ ಮಗಳು ಮನೆ-ಮನೆಯ ಸೇವೆಯನ್ನು ಮಾಡುತ್ತಿರುವಾಗ ಅವಳ ಸಹಪಾಠಿಯೇ ಬಾಗಿಲನ್ನು ತೆರೆಯುತ್ತಾಳೆ.
▸ ಧ್ವಜವಂದನೆ ಏಕೆ ಮಾಡುವುದಿಲ್ಲ ಎಂದು ನಿಮ್ಮ ಮಗಳಿಗೆ ಇಡೀ ತರಗತಿಯ ಮುಂದೆ ಕೇಳಲಾಗುತ್ತದೆ.
▸ ಸಾಕ್ಷಿಯಾಗಿರುವ ಕಾರಣ ನಿಮ್ಮ ಮಗನನ್ನು ಒಬ್ಬ ಹುಡುಗನು ಯಾವಾಗಲೂ ಅಪಹಾಸ್ಯ ಮಾಡುತ್ತಿರುತ್ತಾನೆ.
[ಪುಟ 17ರಲ್ಲಿರುವ ಚಿತ್ರ]
ನಿಮ್ಮ ಮಕ್ಕಳಿಗೆ ಸ್ವಂತ ಬೈಬಲ್ ವಾಚನ ಶೆಡ್ಯೂಲ್ ಇದೆಯೊ?
[ಪುಟ 19ರಲ್ಲಿರುವ ಚಿತ್ರ]
ನಿಮ್ಮ ವಿನೋದಾವಳಿಗಳಲ್ಲಿ ಆಧ್ಯಾತ್ಮಿಕ ಮನಸ್ಸಿನ ಸಹೋದರರನ್ನು ಒಳಗೂಡಿಸುತ್ತೀರೊ?