ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೈತಾನನ ಆಳ್ವಿಕೆಗೆ ಸೋಲು ಖಂಡಿತ!

ಸೈತಾನನ ಆಳ್ವಿಕೆಗೆ ಸೋಲು ಖಂಡಿತ!

ಸೈತಾನನ ಆಳ್ವಿಕೆಗೆ ಸೋಲು ಖಂಡಿತ!

“ದುಷ್ಟನಿಗೆ ಮೇಲಾಗದು.”—ಪ್ರಸಂ. 8:13.

1. ದುಷ್ಟರಿಗೆ ಬರಲಿರುವ ತೀರ್ಪು ಏಕೆ ಸಾಂತ್ವನದ ಸುದ್ದಿಯಾಗಿದೆ?

ಇಂದೋ ಮುಂದೋ ದುಷ್ಟರಿಗೆ ಅವರ ದುಷ್ಕೃತ್ಯಗಳಿಗಾಗಿ ತಕ್ಕ ಶಾಸ್ತಿಯು ದೊರೆಯಲೇ ಬೇಕು. ತಾವು ಗೈದ ಕೃತ್ಯಗಳಿಗಾಗಿ ಅವರು ಲೆಕ್ಕ ಒಪ್ಪಿಸಲೇ ಬೇಕು. (ಜ್ಞಾನೋ. 5:22; ಪ್ರಸಂ. 8:12, 13) ಅದು ನಿಜವಾಗಿ ಸಾಂತ್ವನದ ಸುದ್ದಿ, ವಿಶೇಷವಾಗಿ ನೀತಿಯನ್ನು ಪ್ರೀತಿಸುವವರಿಗೆ ಹಾಗೂ ದುಷ್ಟರ ಕೈಯಿಂದ ಅನ್ಯಾಯ ಮತ್ತು ದುರುಪಚಾರವನ್ನು ಅನುಭವಿಸಿದವರಿಗೆ. ದಂಡನೆಗೆ ಒಳಗಾಗಲಿರುವ ದುಷ್ಟರಲ್ಲಿ ಮುಖ್ಯಸ್ಥನು ದುಷ್ಟತನದ ತಂದೆಯಾದ ಪಿಶಾಚ ಸೈತಾನನೇ.—ಯೋಹಾ. 8:44.

2. ಏದೆನಿನಲ್ಲಿ ಎಬ್ಬಿಸಲಾದ ವಿವಾದವನ್ನು ಬಗೆಹರಿಸಲು ಏಕೆ ಸಮಯ ಬೇಕಾಗಿತ್ತು?

2 ಹಿಂದೆ ಏದೆನ್‌ ತೋಟದಲ್ಲಿ ಸೈತಾನನು ಸ್ವಪ್ರತಿಷ್ಠೆಯ ಭಾವನೆಗಳಿಂದ ಮತ್ತನಾಗಿ ಮಾನವರು ಯೆಹೋವನ ಆಳ್ವಿಕೆಯನ್ನು ತಿರಸ್ಕರಿಸಲು ಕಾರಣಭೂತನಾದನು. ಫಲಿತಾಂಶವಾಗಿ ನಮ್ಮ ಪ್ರಥಮ ಹೆತ್ತವರು ಯೆಹೋವನ ನ್ಯಾಯಬದ್ಧ ಅಧಿಕಾರವನ್ನು ಎದುರಿಸಲು ಸೈತಾನನೊಂದಿಗೆ ಜತೆಗೂಡಿ ದೇವರ ದೃಷ್ಟಿಯಲ್ಲಿ ಪಾಪಿಗಳಾದರು. (ರೋಮ. 5:12-14) ಅವರ ಈ ಅಗೌರವದ ಹಾಗೂ ದಂಗೆಕೋರ ಮಾರ್ಗವು ಯಾವ ಫಲಿತಾಂಶ ತರಲಿತ್ತು ಎಂದು ಯೆಹೋವನಿಗೆ ತಿಳಿದಿತ್ತು ನಿಶ್ಚಯ. ಆದರೂ ಆ ಅನಿವಾರ್ಯ ಫಲಿತಾಂಶವು ಬುದ್ಧಿಜೀವಿಗಳೆಲ್ಲರಿಗೆ ತಿಳಿದುಬರುವಂತೆ ಮಾಡುವ ಅಗತ್ಯವಿತ್ತು. ಆದಕಾರಣ ವಿವಾದವನ್ನು ಬಗೆಹರಿಸಲು ಹಾಗೂ ದಂಗೆಕೋರರ ಕೃತ್ಯ ಪೂರ್ತಿ ತಪ್ಪಾಗಿತ್ತೆಂದು ಮನಗಾಣಿಸಲು ಸಮಯ ಬೇಕಾಗಿತ್ತು.

3. ಮಾನವ ಸರಕಾರಗಳ ಕಡೆಗೆ ನಮ್ಮ ನಿಲುವೇನು?

3 ಮನುಷ್ಯರು ದೇವರ ಅಧಿಕಾರವನ್ನು ತಿರಸ್ಕರಿಸಿದ ಕಾರಣ ಅವರಿಗೆ ತಮ್ಮದೇ ಆದ ಸರಕಾರಗಳನ್ನು ಸ್ಥಾಪಿಸಿಕೊಳ್ಳಬೇಕಾಯಿತು. ರೋಮ್‌ನಲ್ಲಿದ್ದ ತನ್ನ ಜೊತೆ ವಿಶ್ವಾಸಿಗಳಿಗೆ ಬರೆಯುತ್ತಾ ಅಪೊಸ್ತಲ ಪೌಲನು ಅಂಥ ಮಾನವ ಸರಕಾರಗಳನ್ನು ‘ಮೇಲಧಿಕಾರಿಗಳು’ ಎಂದು ಕರೆದನು. ಪೌಲನ ದಿನಗಳಲ್ಲಿದ್ದ ಮೇಲಧಿಕಾರಿಗಳು ಮುಖ್ಯವಾಗಿ ಕ್ರಿ.ಶ. 54-68ರಲ್ಲಿ ಆಳಿಕೆ ನಡಿಸಿದ್ದ ಸಾಮ್ರಾಟ ನೀರೋ ಕೈಕೆಳಗಿನ ರೋಮ್‌ ಸರಕಾರದ ಅಧಿಕಾರಿಗಳು. ಅಂಥ ಮೇಲಧಿಕಾರಿಗಳು ತಮ್ಮ “ಸಾಪೇಕ್ಷ ಸ್ಥಾನಗಳಲ್ಲಿ ದೇವರಿಂದ ಇರಿಸಲ್ಪಟ್ಟಿದ್ದಾರೆ.” (ರೋಮನ್ನರಿಗೆ 13:1, 2 ಓದಿ.) ದೇವರ ಆಳ್ವಿಕೆಗಿಂತ ಮಾನವ ಆಳ್ವಿಕೆಯೇ ಶ್ರೇಷ್ಠವೆಂದು ಪೌಲನು ಇಲ್ಲಿ ಪ್ರತಿಪಾದಿಸುತ್ತಿದ್ದನೆಂದು ಇದರ ಅರ್ಥವೋ? ಅಲ್ಲವೇ ಅಲ್ಲ. ಬದಲಾಗಿ ಎಷ್ಟರ ತನಕ ಮಾನವ ಆಳಿಕೆಯು ಇರುವಂತೆ ದೇವರು ಅನುಮತಿಸುತ್ತಾನೋ ಅಷ್ಟರ ತನಕ ಕ್ರೈಸ್ತರು ಆ “ದೇವರ ಏರ್ಪಾಡಿಗೆ” ಗೌರವ ತೋರಿಸಿ ಅಂಥ ಅಧಿಕಾರಿಗಳನ್ನು ಅಂಗೀಕರಿಸಬೇಕೆಂದು ಪೌಲನು ಸೂಚಿಸುತ್ತಿದ್ದನು ಅಷ್ಟೇ.

ಆಪತ್ತಿಗೆ ನಡಿಸುವ ಹಾದಿ

4. ಮಾನವನ ಆಳ್ವಿಕೆಯು ಏಕೆ ವೈಫಲ್ಯವನ್ನಪ್ಪಲಿದೆ ಎಂಬುದನ್ನು ವಿವರಿಸಿ.

4 ಆದರೂ ಸೈತಾನನಿಂದ ಪ್ರಭಾವಿತ ಮಾನವ ಆಳ್ವಿಕೆಗೆ ವೈಫಲ್ಯ ನಿಶ್ಚಯ. ಏಕೆ? ಏಕೆಂದರೆ ಮುಖ್ಯವಾಗಿ ಅದಕ್ಕೆ ದೈವಿಕ ವಿವೇಕದ ತಳಪಾಯವಿಲ್ಲ. ಪರಿಪೂರ್ಣ ವಿವೇಕದ ಮೂಲನು ಯೆಹೋವನು ಮಾತ್ರ. ಹೀಗೆ ಯಶಸ್ವಿಕರ ಆಳ್ವಿಕೆಯ ನಿಯೋಜನೆಗೆ ಆತನೊಬ್ಬನೇ ಭರವಸಾರ್ಹ ಮಾರ್ಗದರ್ಶಕ. (ಯೆರೆ. 8:9; ರೋಮ. 16:27) ಹೆಚ್ಚಾಗಿ ಪರೀಕ್ಷೆ-ಪ್ರಯೋಗದಿಂದ ಕಲಿಯುತ್ತಿರುವ ಮಾನವರಂತೆ ಆತನಿಲ್ಲ. ಕಾರ್ಯಸಾಧಕವಾದ ಅತ್ಯುತ್ತಮ ವಿಧಾನವು ಯಾವುದೆಂದು ಯೆಹೋವನಿಗೆ ಯಾವಾಗಲೂ ತಿಳಿದಿದೆ. ಆತನ ಮಾರ್ಗದರ್ಶನೆಯನ್ನು ಪಾಲಿಸದ ಯಾವುದೇ ಆಳ್ವಿಕೆಯು ವಿಫಲಗೊಂಡೇ ತೀರಲಿದೆ. ಒಂದು ದುಷ್ಟ ಹೇತು ದಂಗೆಯಲ್ಲಿ ಒಳಗೂಡಿತ್ತು ನಿಜ. ಆದರೆ ಮಾನವ ಆಳ್ವಿಕೆ ಆರಂಭದಿಂದಲೇ ವೈಫಲ್ಯವನ್ನಪ್ಪಲಿತ್ತು ಎಂಬುದಕ್ಕೆ ಏಕಮಾತ್ರ ಕಾರಣ ದೇವರ ಮಾರ್ಗದರ್ಶನೆಯನ್ನು ಪಾಲಿಸದೆ ಇದ್ದದ್ದೇ ಆಗಿದೆ.

5, 6. ಯೆಹೋವನಿಗೆ ವಿರುದ್ಧವಾದ ಮಾರ್ಗವನ್ನು ಕೈಗೊಳ್ಳಲು ಸೈತಾನನನ್ನು ಯಾವುದು ನಡಿಸಿದ್ದಿರಬೇಕು?

5 ವಿಫಲಗೊಂಡೇ ತೀರುವ ಒಂದು ಸಾಹಸಕ್ಕೆ ವಿವೇಚನಾಶೀಲ ವ್ಯಕ್ತಿ ಸಾಮಾನ್ಯವಾಗಿ ಕೈಹಾಕುವುದಿಲ್ಲ. ತನ್ನ ಸಾಹಸ ಕೃತ್ಯವನ್ನು ಬಿಡದೆ ಮುಂದುವರಿಸಲು ಅವನು ಪಟ್ಟುಹಿಡಿಯುವುದಾದರೆ ತನ್ನ ತಪ್ಪನ್ನು ಬಲವಂತವಾಗಿ ಮನಗಾಣುವಂತೆ ಮಾಡಲ್ಪಡುವನು. ಸರ್ವಶಕ್ತನಾದ ನಿರ್ಮಾಣಿಕನ ವಿರುದ್ಧವಾಗಿ ನಿಲ್ಲುವುದು ಎಷ್ಟು ನಿಷ್ಫಲವೆಂಬುದನ್ನು ಇತಿಹಾಸವು ಮತ್ತೆ ಮತ್ತೆ ರುಜುಪಡಿಸಿರುತ್ತದೆ. (ಜ್ಞಾನೋಕ್ತಿ 21:30 ಓದಿ.) ಸೈತಾನನಾದರೋ ಸ್ವಪ್ರತಿಷ್ಠೆ ಮತ್ತು ದರ್ಪದಿಂದ ಅಂಧನಾಗಿ ಯೆಹೋವನಿಗೆ ಬೆನ್ನುಹಾಕಿದನು. ಹೀಗೆ ಕೇವಲ ಆಪತ್ಕಾರಕವಾಗಿ ಅಂತ್ಯಗೊಳ್ಳಸಾಧ್ಯವಿದ್ದ ಕೆಟ್ಟ ಹಾದಿಯನ್ನು ಸೈತಾನನು ಬುದ್ಧಿಪೂರ್ವಕವಾಗಿ ಆಯ್ದುಕೊಂಡನು.

6 ಸೈತಾನನ ಇಂಥ ದುರಹಂಕಾರ ಪ್ರವೃತ್ತಿಯು ತದನಂತರ ಬಂದ ಬಾಬೆಲಿನ ಒಬ್ಬ ಅರಸನಿಂದಲೂ ತೋರಿಸಲ್ಪಟ್ಟಿತು. ಅವನ ಬಡಿವಾರದ ಮಾತುಗಳು ಹೀಗೆ ದಾಖಲೆಯಾಗಿವೆ: “ನಾನು ಆಕಾಶಕ್ಕೆ ಹತ್ತಿ ಉತ್ತರದಿಕ್ಕಿನ ಕಟ್ಟಕಡೆಯಿರುವ ಸುರಗಣ ಪರ್ವತದಲ್ಲಿ ನನ್ನ ಸಿಂಹಾಸನವನ್ನು ದೇವರ ನಕ್ಷತ್ರಗಳಿಗಿಂತ ಮೇಲೆ ಏರಿಸಿ ಆಸೀನನಾಗುವೆನು; ಉನ್ನತ ಮೇಘಮಂಡಲದ ಮೇಲೆ ಏರಿ ಉನ್ನತೋನ್ನತನಿಗೆ ಸರಿಸಮಾನನಾಗುವೆನು.” (ಯೆಶಾ. 14:13-15) ಆ ಅರಸನ ಮೂರ್ಖತನದ ಸಾಹಸವು ಸೋತುಹೋಗಿ ಬಾಬೆಲಿನ ರಾಜವಂಶವು ಅವಮಾನಕರ ಅಂತ್ಯವನ್ನು ಅನುಭವಿಸಿತು. ತದ್ರೀತಿಯಲ್ಲಿ ಸೈತಾನನೂ ಅವನ ಲೋಕವೂ ಶೀಘ್ರವೇ ಸೋತು ಸೊನ್ನೆಯಾಗುವುದು.

ಏಕೆ ಅನುಮತಿಸಲ್ಪಟ್ಟಿತು?

7, 8. ಯೆಹೋವನು ದುಷ್ಟತನವನ್ನು ತಾತ್ಕಾಲಿಕವಾಗಿ ಅನುಮತಿಸಿರುವುದರಿಂದ ದೊರೆತಿರುವ ಕೆಲವು ಪ್ರಯೋಜನಗಳಾವುವು?

7 ಜನರು ಸೈತಾನನ ಪಕ್ಷವಹಿಸದಂತೆ ಹಾಗೂ ಖಂಡಿತವಾಗಿ ಸೋಲನ್ನಪ್ಪಲಿದ್ದ ಬದಲಿ ಆಳ್ವಿಕೆಯ ಯೋಜನೆಯನ್ನು ಅನುಸರಿಸದಂತೆ ಯೆಹೋವನು ಆರಂಭದಲ್ಲೇ ಏಕೆ ತಡೆಯಲಿಲ್ಲ ಎಂದು ಕೆಲವರು ಯೋಚಿಸಿಯಾರು. ದೇವರು ಸರ್ವಶಕ್ತನಾಗಿರಲಾಗಿ ನಿಶ್ಚಯವಾಗಿಯೂ ಅದನ್ನು ತಡೆಯಬಹುದಿತ್ತಲ್ಲಾ. (ವಿಮೋ. 6:3) ಹೌದು. ಆದರೂ ದೇವರು ತನ್ನನ್ನೇ ತಡೆದುಹಿಡಿದನು. ಮನುಷ್ಯನ ದಂಗೆಯಲ್ಲಿ ತಾತ್ಕಾಲಿಕವಾಗಿ ಹಸ್ತಕ್ಷೇಪ ಮಾಡದಿರುವುದು ಮುಂದಕ್ಕೆ ಫಲಕಾರಿ ಎಂದು ಆತನ ಪರಿಪೂರ್ಣ ವಿವೇಕವು ನಿರ್ದೇಶಿಸಿತು. ಕಟ್ಟಕಡೆಗೆ ಯೆಹೋವನೇ ನೀತಿಪರನೂ ಪ್ರೀತಿಪರನೂ ಆದ ಅರಸನಾಗಿ ರುಜುವಾಗಲಿರುವನು ಮತ್ತು ನಂಬಿಗಸ್ತ ಮಾನವರು ದೇವರ ನಿರ್ಣಯದಿಂದ ಪ್ರಯೋಜನವನ್ನು ಹೊಂದಲಿರುವರು.

8 ಮನುಷ್ಯರು ಸೈತಾನನ ಸ್ನೇಹಸಂಧಾನಗಳನ್ನು ತಿರಸ್ಕರಿಸಿದ್ದಲ್ಲಿ ಹಾಗೂ ದೇವರ ಆಳ್ವಿಕೆಯನ್ನು ತೊರೆದು ಸ್ವತಂತ್ರವೃತ್ತಿಯಿಂದ ಜೀವಿಸಲು ನಿರಾಕರಿಸಿದ್ದಲ್ಲಿ ಎಷ್ಟೊಂದು ದುರವಸ್ಥೆಯನ್ನು ಮಾನವಕುಲವು ತಪ್ಪಿಸಿಕೊಳ್ಳುತ್ತಿತ್ತು! ಆದರೂ ಮನುಷ್ಯರು ತಮ್ಮನ್ನು ತಾತ್ಕಾಲಿಕವಾಗಿ ಆಳಿಕೊಳ್ಳುವಂತೆ ಬಿಡಲು ಯೆಹೋವನು ಮಾಡಿದ ತೀರ್ಮಾನದಲ್ಲಿ ಪ್ರಯೋಜನಗಳು ನಿಜವಾಗಿ ಇದ್ದವು. ದೇವರಿಗೆ ಕಿವಿಗೊಟ್ಟು ಆತನಲ್ಲಿ ಭರವಸೆಯಿಡುವುದರಲ್ಲಿ ಇರುವ ವಿವೇಕವನ್ನು ಪ್ರಾಮಾಣಿಕ ಜನರಲ್ಲಿ ಅದು ಆಳವಾಗಿ ಅಚ್ಚೊತ್ತಿದೆ. ಶತಮಾನಗಳಿಂದ ಮಾನವರು ವಿವಿಧ ರೀತಿಯ ಸರಕಾರಗಳನ್ನು ತಂದು ಪ್ರಯೋಗ ನಡಿಸಿದ್ದಾರೆ. ಆದರೆ ಅವುಗಳಲ್ಲಿ ಒಂದೇ ಒಂದಾದರೂ ಆದರ್ಶ ಸರಕಾರವಾಗಿ ರುಜುವಾಗಿಲ್ಲ. ಆ ನಿಜತ್ವವು ಯೆಹೋವನ ಆಳ್ವಿಕೆಯೊಂದೇ ನಿಜವಾಗಿ ಪರಮೋತ್ತಮವೆಂಬ ದೇವರ ಆರಾಧಕರ ಭರವಸೆಯನ್ನು ಇನ್ನಷ್ಟು ಬಲಗೊಳಿಸಿದೆ. ಸೈತಾನನ ದುಷ್ಟ ಆಳ್ವಿಕೆಗೆ ದೇವರು ಅನುಮತಿ ಕೊಟ್ಟಿರುವ ಕಾರಣ ದೇವರ ನಂಬಿಗಸ್ತ ಆರಾಧಕರೂ ಸೇರಿದಂತೆ ಇಡೀ ಮಾನವಕುಲವೇ ಕಷ್ಟಸಂಕಟಗಳಿಗೆ ಒಳಗಾಗಿದೆ ಎಂಬದು ಒಪ್ಪತಕ್ಕದ್ದೇ. ಆದರೂ ದುಷ್ಟತನಕ್ಕೆ ಕೊಡಲಾದ ತಾತ್ಕಾಲಿಕ ಅನುಮತಿಯು ಈ ನಂಬಿಗಸ್ತ ಆರಾಧಕರಿಗೆ ಪ್ರಯೋಜನಗಳನ್ನು ಸಹ ತಂದಿರುತ್ತದೆ.

ಯೆಹೋವನ ಮಹಿಮೆಗೆ ನೆರವಾದ ದಂಗೆ

9, 10. ಸೈತಾನನ ಆಳ್ವಿಕೆಯು ಹೇಗೆ ಯೆಹೋವನಿಗೆ ಮಹಿಮೆಯನ್ನು ತರುವಂತಾಗಿದೆ ಎಂಬುದನ್ನು ವಿವರಿಸಿ.

9 ಸೈತಾನನಿಂದ ಪ್ರಭಾವಿತರಾಗಿ ತಮ್ಮನ್ನು ತಾವೇ ಆಳಿಕೊಳ್ಳಲು ಮಾನವರನ್ನು ಬಿಟ್ಟುಕೊಟ್ಟದ್ದು ಯೆಹೋವನ ಆಳ್ವಿಕೆಯನ್ನು ಯಾವ ರೀತಿಯಲ್ಲೂ ಅಪಖ್ಯಾತಿಗೆ ಗುರಿಮಾಡಿರುವುದಿಲ್ಲ. ಬದಲಾಗಿ ಖ್ಯಾತಿಯನ್ನೇ ತಂದಿದೆ! ಮನುಷ್ಯರು ತಮ್ಮನ್ನು ತಾವೇ ಆಳಿಕೊಳ್ಳಲಾರರು ಎಂದು ಯೆರೆಮೀಯನು ಪ್ರೇರಿತನಾಗಿ ನುಡಿದ ಮಾತುಗಳು ಸತ್ಯವಾಗಿವೆ ಎಂಬುದನ್ನು ಇತಿಹಾಸವು ರುಜುಪಡಿಸುತ್ತದೆ. (ಯೆರೆಮೀಯ 10:23 ಓದಿ.) ಅದಲ್ಲದೆ ಸೈತಾನನ ದಂಗೆಯು ಯೆಹೋವನಿಗೆ ತನ್ನ ಅತ್ಯುತ್ತಮ ಗುಣಗಳನ್ನು ಇನ್ನಷ್ಟು ಎದ್ದುಕಾಣುವ ರೀತಿಯಲ್ಲಿ ತೋರ್ಪಡಿಸುವ ಸುಸಂದರ್ಭವನ್ನು ಕೊಟ್ಟಿರುತ್ತದೆ. ಅದು ಹೇಗೆ?

10 ಸೈತಾನನ ಆಳ್ವಿಕೆಯ ಆಪತ್ಕಾರಕ ಪರಿಣಾಮವನ್ನು ನಾವು ನೋಡಲು ಸಾಧ್ಯವಿರುವುದರಿಂದ ಯೆಹೋವನ ಪರಿಪೂರ್ಣ ಗುಣಗಳನ್ನು ನಾವು ಹೆಚ್ಚು ಸ್ಪಷ್ಟವಾಗಿ ನೋಡಲು ಸಾಧ್ಯ. ಇಲ್ಲವಾದರೆ ಆ ಗುಣಗಳು ಇಷ್ಟು ವಿಶದವಾಗಿ ನಮಗೆ ತಿಳಿದುಬರುತ್ತಿರಲಿಲ್ಲ. ಈ ರೀತಿಯಲ್ಲಿ ಯೆಹೋವನು ಆತನನ್ನು ಪ್ರೀತಿಸುವವರ ದೃಷ್ಟಿಯಲ್ಲಿ ಮಹಿಮೆಗೊಳಿಸಲ್ಪಟ್ಟಿದ್ದಾನೆ. ಹೌದು, ಇದು ವಿಚಿತ್ರವೆಂದು ತೋರುವುದಾದರೂ ಸೈತಾನನ ಆಳ್ವಿಕೆಯು ವಾಸ್ತವದಲ್ಲಿ ದೇವರಿಗೆ ಮಹಿಮೆ ತರುವುದರಲ್ಲಿ ನೆರವಾಗಿದೆ. ಯೆಹೋವನ ಪರಮಾಧಿಕಾರಕ್ಕೆ ಒಡ್ಡಲ್ಪಟ್ಟ ಈ ಸವಾಲನ್ನು ಆತನು ಎಷ್ಟು ಉತ್ಕೃಷ್ಟವಾಗಿ ನಿರ್ವಹಿಸಿದ್ದಾನೆ ಎಂಬುದನ್ನು ಸಹ ಇದು ಎತ್ತಿತೋರಿಸಿದೆ. ಈ ಸತ್ಯವನ್ನು ದೃಷ್ಟಾಂತಿಸಲು, ಯೆಹೋವನ ಕೆಲವು ಗುಣಗಳನ್ನು ಸಂಕ್ಷಿಪ್ತವಾಗಿ ಪರಿಗಣಿಸೋಣ ಮತ್ತು ಸೈತಾನನ ದುಷ್ಟ ಆಳ್ವಿಕೆಯು ಹೇಗೆ ಯೆಹೋವನು ಈ ಗುಣಗಳನ್ನು ಹೆಚ್ಚಿನ ವಿಧಗಳಲ್ಲಿ ತೋರಿಸುವಂತೆ ಮಾಡಿದೆ ಎಂಬುದನ್ನು ನೋಡೋಣ.

11. ಯೆಹೋವನ ಪ್ರೀತಿ ಹೇಗೆ ತೋರಿಸಲ್ಪಟ್ಟಿದೆ?

11ಪ್ರೀತಿ. “ದೇವರು ಪ್ರೀತಿಯಾಗಿದ್ದಾನೆ” ಎಂದು ಶಾಸ್ತ್ರಗ್ರಂಥ ತಿಳಿಸುತ್ತದೆ. (1 ಯೋಹಾ. 4:8) ಮೊತ್ತಮೊದಲಾಗಿ, ಮಾನವರನ್ನು ಸೃಷ್ಟಿಸಿದ್ದೇ ದೇವರ ಪ್ರೀತಿಯ ಅಭಿವ್ಯಕ್ತಿ. ಮಾತ್ರವಲ್ಲದೆ ನಾವು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಲ್ಪಟ್ಟಿರುವುದು ದೇವರ ಪ್ರೀತಿಗೆ ಸಾಕ್ಷ್ಯ. ಮಾನವನ ಸಂತೋಷಕ್ಕೆ ಬೇಕಾಗಿರುವ ಎಲ್ಲವನ್ನೂ ಹೊಂದಿರುವ ಒಂದು ಸುಂದರ ಮನೆಯನ್ನು ಯೆಹೋವನು ಕೊಟ್ಟದ್ದೂ ಪ್ರೀತಿಯಿಂದಲೇ. (ಆದಿ. 1:29-31; 2:8, 9; ಕೀರ್ತ. 139:14-16) ಆದರೆ ಮಾನವ ಕುಟುಂಬದಲ್ಲಿ ದುಷ್ಟತನವು ಆರಂಭಿಸಿದ ಬಳಿಕ ಯೆಹೋವನು ತನ್ನ ಪ್ರೀತಿಯನ್ನು ಹೊಸ ವಿಧಗಳಲ್ಲಿ ತೋರಿಸಿದನು. ಹೇಗೆ? ಅಪೊಸ್ತಲ ಯೋಹಾನನು ಯೇಸುವಿನ ಮಾತುಗಳನ್ನು ಉಲ್ಲೇಖಿಸುತ್ತಾ ಹೇಳುವುದು: “ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು.” (ಯೋಹಾ. 3:16) ಪಾಪಿಗಳ ವಿಮೋಚನೆಗಾಗಿ ತನ್ನ ಏಕೈಕಜಾತ ಪುತ್ರನನ್ನು ಭೂಮಿಗೆ ಕಳುಹಿಸಿಕೊಡುವುದಕ್ಕಿಂತ ಹೆಚ್ಚು ಎದ್ದುಕಾಣುವ ವಿಧದಲ್ಲಿ ದೇವರು ಮಾನವಕುಲಕ್ಕೆ ತನ್ನ ಪ್ರೀತಿಯನ್ನು ತೋರಿಸಲು ಸಾಧ್ಯವಿತ್ತೊ? ಇಲ್ಲ. (ಯೋಹಾ. 15:13) ಪ್ರೀತಿಯ ಈ ಮಹಾನ್‌ ತೋರಿಸುವಿಕೆಯು ಮಾನವರಿಗೆ ಒಂದು ನಿದರ್ಶನವಾಗಿಯೂ ಇತ್ತು. ತಮ್ಮ ದೈನಂದಿನ ಜೀವನದಲ್ಲಿ ದೇವರ ಸ್ವತ್ಯಾಗ ಪ್ರೀತಿಯನ್ನು ಅನುಕರಿಸಲು ಇದು ಅವರಿಗೆ ಅವಕಾಶವನ್ನು ಒದಗಿಸಿತು. ಯೇಸು ಸಹ ಇದನ್ನೇ ಮಾಡಿದನು.—ಯೋಹಾ. 17:25, 26.

12. ಯೆಹೋವನ ಶಕ್ತಿಯು ಯಾವ ವಿಧದಲ್ಲಿ ತೋರಿಸಲ್ಪಟ್ಟಿದೆ?

12ಶಕ್ತಿ. ‘ಸರ್ವಶಕ್ತನಾದ ದೇವರಿಗೆ’ ಮಾತ್ರ ಜೀವವನ್ನು ಸೃಷ್ಟಿಸುವ ಶಕ್ತಿಯಿದೆ. (ಪ್ರಕ. 11:17; ಕೀರ್ತ. 36:9) ಜನನದ ಸಮಯದಲ್ಲಿ ಮನುಷ್ಯನು ಬರಿ ಖಾಲಿ ಕಾಗದದ ಹಾಳೆಯೋ ಎಂಬಂತಿದ್ದಾನೆ. ಸತ್ತಾಗಲಾದರೋ ತನ್ನ ವೈಯಕ್ತಿಕತೆ ಮತ್ತು ವ್ಯಕ್ತಿತ್ವವನ್ನು ರೂಪಿಸಿದ ತೀರ್ಮಾನಗಳಿಂದ, ಕೃತ್ಯಗಳಿಂದ ಮತ್ತು ಜೀವಮಾನದ ಅನುಭವಗಳಿಂದ ಆ ಖಾಲಿ ಹಾಳೆಯನ್ನು ತುಂಬಿಸಿರುತ್ತಾನೆ. ಆ ಎಲ್ಲ ಮಾಹಿತಿಯನ್ನು ಯೆಹೋವನು ತನ್ನ ಸ್ಮರಣೆಯಲ್ಲಿ ಪೋಣಿಸಿ ಇಡಸಾಧ್ಯವಿದೆ. ತಕ್ಕ ಸಮಯದಲ್ಲಿ ಯೆಹೋವನು ಆ ವ್ಯಕ್ತಿಯನ್ನು ಅವನದೇ ಆದ ಜೀವವಿನ್ಯಾಸ ಸಹಿತ ಪುನಃ ಜೀವಂತಗೊಳಿಸಬಲ್ಲನು. (ಯೋಹಾ. 5:28, 29) ಹೀಗೆ ಮರಣವು ಆತನ ಮೂಲ ಉದ್ದೇಶವಾಗಿರದಿದ್ದರೂ ಮೃತರನ್ನು ಸಹ ಜೀವಂತಗೊಳಿಸುವ ಶಕ್ತಿಯು ತನಗಿದೆ ಎಂದು ತೋರಿಸುವ ಸದವಕಾಶವನ್ನು ಇದು ಯೆಹೋವನಿಗೆ ಕೊಟ್ಟಿದೆ. ನಿಶ್ಚಯವಾಗಿಯೂ ಯೆಹೋವನು ‘ಸರ್ವಶಕ್ತ ದೇವರೇ.’

13. ಯೇಸುವಿನ ಯಜ್ಞಾರ್ಪಣೆಯು ಯೆಹೋವನ ಪರಿಪೂರ್ಣ ನ್ಯಾಯದ ತೋರಿಸುವಿಕೆ ಹೇಗೆ?

13ನ್ಯಾಯ. ಯೆಹೋವನು ಸುಳ್ಳಾಡುವುದಿಲ್ಲ; ಅನ್ಯಾಯದಿಂದ ಕೆಲಸ ನಡೆಸುವುದೂ ಇಲ್ಲ. (ಧರ್ಮೋ. 32:4; ತೀತ 1:2) ಆತನು ಯಾವಾಗಲೂ ಸತ್ಯ ಮತ್ತು ನ್ಯಾಯದ ಉತ್ಕೃಷ್ಟ ಮಟ್ಟಗಳನ್ನು ಎತ್ತಿಹಿಡಿಯುತ್ತಾನೆ. ಇದು ತನ್ನ ಮೇಲೆ ಹಿತಕರವಲ್ಲದ ಪರಿಣಾಮವನ್ನು ತರುತ್ತದೆಂದು ತೋರಿಬಂದಾಗಲೂ ಕೂಡ. (ರೋಮ. 8:32) ತನ್ನ ಪ್ರಿಯ ಮಗನು ಅಪನಂಬಿಗಸ್ತ ದೇವದೂಷಕನೋ ಎಂಬಂತೆ ಯಾತನಾ ಕಂಬದಲ್ಲಿ ಮರಣಪಡುವುದನ್ನು ನೋಡುವುದು ಯೆಹೋವನಿಗೆ ಎಷ್ಟು ವೇದನೆಯನ್ನು ತಂದಿರಬೇಕು! ಆದರೂ ಅಪರಿಪೂರ್ಣ ಮನುಷ್ಯರ ಮೇಲಣ ಪ್ರೀತಿಯಿಂದಾಗಿ ಯೆಹೋವನು ಆ ವೇದನಾಮಯ ಘಟನೆಯು ಸಂಭವಿಸುವಂತೆ ಅನುಮತಿಸಿದನು. ಈ ಮೂಲಕ ತನ್ನ ಸ್ವಂತ ಪರಿಪೂರ್ಣ ನ್ಯಾಯದ ಮಟ್ಟವನ್ನು ಎತ್ತಿಹಿಡಿದನು. (ರೋಮನ್ನರಿಗೆ 5:18-21 ಓದಿ.) ನ್ಯಾಯದ ಪರಮಬಿಂದು ತಾನೆಂದು ತೋರಿಸಿಕೊಡುವ ಸುಸಂದರ್ಭವನ್ನು ಅನ್ಯಾಯದಿಂದ ತುಂಬಿಹೋಗಿರುವ ಲೋಕವು ಆತನಿಗಿತ್ತಿತು.

14, 15. ಯೆಹೋವನ ಅತ್ಯುತ್ಕೃಷ್ಟ ವಿವೇಕ ಮತ್ತು ತಾಳ್ಮೆಯು ತೋರಿಸಲ್ಪಟ್ಟಿರುವ ಕೆಲವು ವಿಧಗಳು ಯಾವುವು?

14ವಿವೇಕ. ಆದಾಮಹವ್ವರು ಪಾಪಮಾಡಿದ ಬಳಿಕ ಕೂಡಲೆ ಯೆಹೋವನು ಅವರ ದಂಗೆಯು ಉಂಟುಮಾಡಿದ ಸಕಲ ಕೆಟ್ಟ ಪರಿಣಾಮಗಳನ್ನು ತಾನು ತೆಗೆದುಹಾಕುವ ವಿಧವನ್ನು ಪ್ರಕಟಿಸಿದನು. (ಆದಿ. 3:15) ಅಂಥ ತಕ್ಷಣದ ಕ್ರಿಯೆಯು ಹಾಗೂ ತನ್ನ ಸೇವಕರಿಗೆ ಈ ಉದ್ದೇಶದ ವಿವರಗಳನ್ನು ಪ್ರಗತಿಪರವಾಗಿ ಪ್ರಕಟಿಸುವುದು ಯೆಹೋವನ ವಿವೇಕದ ಅಗಾಧತೆಯನ್ನು ತೋರಿಸಿತು. (ರೋಮ. 11:33) ವಿಷಯವನ್ನು ಯಶಸ್ವಿಕರವಾಗಿ ನಿರ್ವಹಿಸುವ ದೇವರ ಸಾಮರ್ಥ್ಯಕ್ಕೆ ಯಾವುದೂ ಅಡ್ಡಿಮಾಡಲಾರದು. ಅನೈತಿಕತೆ, ಯುದ್ಧ, ಅನ್ಯಾಯ, ಅವಿಧೇಯತೆ, ನಿಷ್ಕಾರುಣ್ಯ, ಪಕ್ಷಭೇದ ಮತ್ತು ಕಪಟತನವು ತುಂಬಿರುವ ಲೋಕದಲ್ಲಿ ನಿಜ ವಿವೇಕವೆಂದರೇನು ಎಂಬದನ್ನು ತನ್ನ ಸೃಷ್ಟಿಜೀವಿಗಳಿಗೆ ಪ್ರಕಟಪಡಿಸಲು ಯೆಹೋವನಿಗೆ ಸಾಕಷ್ಟು ಅವಕಾಶ ದೊರಕಿತು. ಶಿಷ್ಯ ಯಾಕೋಬನು ಅಂದದ್ದು: “ಮೇಲಣಿಂದ ಬರುವ ವಿವೇಕವು ಮೊದಲು ಶುದ್ಧವಾದದ್ದು, ತರುವಾಯ ಶಾಂತಿಶೀಲವಾದದ್ದು, ನ್ಯಾಯಸಮ್ಮತವಾದದ್ದು, ವಿಧೇಯತೆ ತೋರಿಸಲು ಸಿದ್ಧವಾದದ್ದು, ಕರುಣೆ ಮತ್ತು ಒಳ್ಳೇ ಫಲಗಳಿಂದ ತುಂಬಿರುವಂಥದ್ದು ಆಗಿದೆ; ಅದು ಪಕ್ಷಭೇದಗಳನ್ನು ಮಾಡುವುದಿಲ್ಲ, ಅದರಲ್ಲಿ ಕಪಟವೂ ಇಲ್ಲ.”—ಯಾಕೋ. 3:17.

15ತಾಳ್ಮೆ ಮತ್ತು ದೀರ್ಘ ಸಹನೆ. ಮಾನವ ಅಪರಿಪೂರ್ಣತೆ, ಪಾಪ ಮತ್ತು ಕುಂದುಕೊರತೆಗಳೊಂದಿಗೆ ವ್ಯವಹರಿಸುವ ಅವಶ್ಯಕತೆ ಇಲ್ಲದಿರುತ್ತಿದ್ದರೆ ಯೆಹೋವನ ತಾಳ್ಮೆ ಮತ್ತು ದೀರ್ಘ ಸಹನೆಯೆಂಬ ಗುಣಗಳು ಅಷ್ಟು ಹೆಚ್ಚು ಪ್ರಮುಖತೆಗೆ ಬರುತ್ತಿರಲಿಲ್ಲ ಖಂಡಿತ. ಸಾವಿರಾರು ವರ್ಷಗಳಿಂದ ಯೆಹೋವನು ಅದನ್ನು ಮಾಡುತ್ತಿರುವ ವಿಷಯವು ಈ ವಿಸ್ಮಯಕರ ಗುಣಗಳು ಆತನಲ್ಲಿ ಪರಿಪೂರ್ಣ ಮಟ್ಟದಲ್ಲಿವೆ ಎಂಬದನ್ನು ತೋರಿಸುತ್ತದೆ ಮತ್ತು ಅದಕ್ಕಾಗಿ ನಾವು ಅತಿ ಕೃತಜ್ಞರಾಗಿರಬೇಕು. “ನಮ್ಮ ಕರ್ತನ ತಾಳ್ಮೆಯನ್ನು ರಕ್ಷಣೆಯಾಗಿ ಎಣಿಸಿಕೊಳ್ಳಿರಿ” ಎಂದು ಅಪೊಸ್ತಲ ಪೇತ್ರನು ಹೇಳಿರುವುದು ಯಥಾ ಯೋಗ್ಯವೇ.—2 ಪೇತ್ರ 3:9, 15.

16. ಕ್ಷಮಿಸಲು ಯೆಹೋವನು ಸಿದ್ಧನಾಗಿರುವ ವಿಷಯವು ನಮಗೆ ಮಹಾ ಸಂತೋಷಕ್ಕೆ ಕಾರಣವೇಕೆ?

16ಕ್ಷಮಿಸಲು ಸಿದ್ಧ. ನಾವೆಲ್ಲರೂ ಪಾಪಿಗಳು ಮತ್ತು ನಾವೆಲ್ಲರೂ ಅನೇಕ ಬಾರಿ ಎಡವುತ್ತೇವೆ. (ಯಾಕೋ. 3:2; 1 ಯೋಹಾ. 1:8, 9) ಯೆಹೋವನು “ಮಹಾಕೃಪೆಯಿಂದ” ಕ್ಷಮಿಸಲು ಸಿದ್ಧನಾಗಿರುವುದಕ್ಕೆ ನಾವೆಷ್ಟು ಆಭಾರಿಗಳಾಗಿರಬೇಕು! (ಯೆಶಾ. 55:7) ಈ ನಿಜತ್ವವನ್ನೂ ಪರಿಗಣಿಸಿರಿ: ಅಪರಿಪೂರ್ಣ ಪಾಪಿಗಳಾಗಿ ಜನಿಸಿದವರಾದ ನಾವು ದೇವರು ನಮ್ಮ ತಪ್ಪುಗಳನ್ನು ಕ್ಷಮಿಸುವಾಗ ಅಪಾರ ಸಂತೋಷವನ್ನು ಅನುಭವಿಸಲು ಸಾಧ್ಯವಾಗುತ್ತದೆ. (ಕೀರ್ತ. 51:5, 9, 17) ಯೆಹೋವನ ಆ ಹೃತ್ಪೂರ್ವಕವಾದ ಗುಣವನ್ನು ವೈಯಕ್ತಿಕವಾಗಿ ಅನುಭವಿಸುವುದು ಆತನಲ್ಲಿ ನಮಗಿರುವ ಪ್ರೀತಿಯನ್ನು ಬಲಪಡಿಸುತ್ತದೆ ಮತ್ತು ಇತರರೊಂದಿಗೆ ವ್ಯವಹರಿಸುವಾಗ ಆತನ ಮಾದರಿಯನ್ನು ಅನುಸರಿಸುವಂತೆ ಉತ್ತೇಜಿಸುತ್ತದೆ.—ಕೊಲೊಸ್ಸೆ 3:13 ಓದಿ.

ರೋಗಗ್ರಸ್ತ ಲೋಕ

17, 18. ಸೈತಾನನ ಆಳ್ವಿಕೆಯು ಯಾವ ರೀತಿಯಲ್ಲಿ ವೈಫಲ್ಯಗೊಂಡಿದೆ?

17 ಸೈತಾನನ ಇಡೀ ಲೋಕ ವ್ಯವಸ್ಥೆ, ಅಂದರೆ ಅವನ ಆಳ್ವಿಕೆಯ ಉತ್ಪನ್ನವು ಶತಮಾನಗಳಿಂದ ಪದೇ ಪದೇ ಮತ್ತು ಎಡೆಬಿಡದೆ ಸೋಲಿಗೆ ತುತ್ತಾಗಿದೆ. 1991ರಲ್ಲಿ ದಿ ಯೂರೋಪಿಯನ್‌ ಎಂಬ ವಾರ್ತಾಪತ್ರ ಗಮನಿಸಿದ್ದು: “ಲೋಕ ರೋಗಗ್ರಸ್ತವಾಗಿದೆಯೇ? ಹೌದು, ಖಂಡಿತ. ಆದರೆ . . . ಈ ರೋಗಕ್ಕೆ ಜನರೇ ಕಾರಣ ಹೊರತು ದೇವರಲ್ಲ.” ಅದೆಷ್ಟು ಸತ್ಯ! ಸೈತಾನನಿಂದ ಪ್ರಭಾವಿತರಾಗಿ ನಮ್ಮ ಮೊದಲನೇ ಹೆತ್ತವರು ಯೆಹೋವನ ಆಳ್ವಿಕೆಯ ಬದಲು ಮಾನವ ಆಳ್ವಿಕೆಯನ್ನು ಆಯ್ದುಕೊಂಡರು. ಆ ಮೂಲಕ ವೈಫಲ್ಯದಲ್ಲೇ ಕೊನೆಗೊಳ್ಳುವ ಒಂದು ಆಳ್ವಿಕೆಯನ್ನು ಅವರು ಆರಂಭಿಸಿದರು. ಲೋಕದಲ್ಲೆಲ್ಲಾ ಜನರಿಂದ ಅನುಭವಿಸಲ್ಪಡುವ ನೋವು ಮತ್ತು ದುರವಸ್ಥೆಯು ಮಾನವ ಆಳ್ವಿಕೆಯು ಮಾರಕ ರೋಗದಿಂದ ಪೀಡಿತವಾಗಿದೆ ಎಂಬುದಕ್ಕೆ ಪ್ರತ್ಯಕ್ಷ ಲಕ್ಷಣ.

18 ಸೈತಾನನ ಆಳ್ವಿಕೆಯು ಸ್ವಾರ್ಥತೆಗೆ ಇಂಬುಕೊಡುತ್ತದೆ. ಆದರೆ ದೇವರ ಆಳ್ವಿಕೆಯ ತಳಪಾಯವಾದ ಪ್ರೀತಿಯನ್ನು ಸ್ವಾರ್ಥತೆಯು ಎಂದೂ ಸೋಲಿಸಲಾರದು. ಸೈತಾನನ ಆಳ್ವಿಕೆಯು ಸ್ಥಿರತೆ, ಸಂತೋಷ ಅಥವಾ ಭದ್ರತೆಯನ್ನು ಕೊಡಲು ತಪ್ಪಿಹೋಗಿದೆ. ಇದರಿಂದ ಯೆಹೋವನ ಆಳ್ವಿಕೆ ಮಾತ್ರವೇ ಯೋಗ್ಯವಾದದ್ದೆಂದು ಸಾಬೀತಾಗಿದೆ! ಆದರೆ ಇದಕ್ಕೆ ಆಧುನಿಕ ರುಜುವಾತು ಇದೆಯೊ? ಹೌದು, ಮುಂದಿನ ಲೇಖನದಲ್ಲಿ ನಾವದನ್ನು ನೋಡುವೆವು.

ಕೆಳಗಿನ ವಚನಗಳಿಂದ ಆಳ್ವಿಕೆಯ ಬಗ್ಗೆ ನಾವೇನು ಕಲಿತೆವು . . .

ರೋಮನ್ನರಿಗೆ 13:1, 2

ಜ್ಞಾನೋಕ್ತಿ 21:30

ಯೆರೆಮೀಯ 10:23

ಕೊಲೊಸ್ಸೆ 3:13

[ಅಧ್ಯಯನ ಪ್ರಶ್ನೆಗಳು]

[ಪುಟ 25ರಲ್ಲಿರುವ ಚಿತ್ರಗಳು]

ಸೈತಾನನ ಆಳ್ವಿಕೆಯು ಮಾನವಕುಲಕ್ಕೆ ಎಂದೂ ಪ್ರಯೋಜನವನ್ನು ತಂದಿಲ್ಲ

[ಕೃಪೆ]

U.S. Army photo

WHO photo by P. Almasy

[ಪುಟ 26ರಲ್ಲಿರುವ ಚಿತ್ರ]

ಯೆಹೋವನಿಗೆ ಮೃತರನ್ನು ಸಹ ಜೀವಂತಗೊಳಿಸುವ ಶಕ್ತಿಯಿದೆ

[ಪುಟ 27ರಲ್ಲಿರುವ ಚಿತ್ರ]

ಯೆಹೋವನ ಪ್ರೀತಿ ಮತ್ತು ನ್ಯಾಯವು ಆತನ ಮಗನ ಯಜ್ಞಾರ್ಪಣೆಯಲ್ಲಿ ತೋರಿಸಲ್ಪಟ್ಟಿತು