ಅತ್ಯುತ್ತಮ ಜೀವನ ಮಾರ್ಗಕ್ಕೆ ಸ್ವಾಗತ!
ಅತ್ಯುತ್ತಮ ಜೀವನ ಮಾರ್ಗಕ್ಕೆ ಸ್ವಾಗತ!
“ನಾವು ಜೀವಿಸಿದರೂ ಸತ್ತರೂ ಯೆಹೋವನವರೇ.”—ರೋಮ. 14:8.
1. ಅತ್ಯುತ್ತಮ ಜೀವನ ಮಾರ್ಗದ ಕುರಿತು ಯೇಸು ಏನು ಕಲಿಸಿದನು?
ನಾವು ಅತ್ಯುತ್ತಮ ಜೀವನ ಮಾರ್ಗವನ್ನು ಆನಂದಿಸಬೇಕೆಂದು ಯೆಹೋವನು ಬಯಸುತ್ತಾನೆ. ಜನರು ಬೇರೆ ಬೇರೆ ರೀತಿಯಲ್ಲಿ ಜೀವಿಸಬಹುದು, ಆದರೆ ಅತ್ಯುತ್ತಮ ಜೀವನ ಮಾರ್ಗ ಕೇವಲ ಒಂದು ಮಾತ್ರ. ನಾವು ದೇವರ ವಾಕ್ಯಕ್ಕೆ ಹೊಂದಿಕೆಯಲ್ಲಿ ಜೀವಿಸುತ್ತಾ ಆತನ ಕುಮಾರನಾದ ಯೇಸು ಕ್ರಿಸ್ತನಿಂದ ಕಲಿಯುವುದಕ್ಕಿಂತ ಹೆಚ್ಚು ಉತ್ತಮ ವಿಷಯವನ್ನು ನಮ್ಮ ಜೀವನದಲ್ಲಿ ಮಾಡಲಸಾಧ್ಯ. ದೇವರನ್ನು ಪವಿತ್ರಾತ್ಮದಿಂದಲೂ ಸತ್ಯದಿಂದಲೂ ಆರಾಧಿಸಬೇಕೆಂದು ಯೇಸು ತನ್ನ ಹಿಂಬಾಲಕರಿಗೆ ಕಲಿಸಿದನು ಮತ್ತು ಶಿಷ್ಯರನ್ನಾಗಿ ಮಾಡುವಂತೆ ಅವರಿಗೆ ಆಜ್ಞೆ ಕೊಟ್ಟನು. (ಮತ್ತಾ. 28:19, 20; ಯೋಹಾ. 4:24) ಯೇಸು ಕೊಟ್ಟ ನಿರ್ದೇಶನಗಳಿಗೆ ಹೊಂದಿಕೆಯಲ್ಲಿ ಜೀವಿಸುವುದರಿಂದ ನಾವು ಯೆಹೋವನನ್ನು ಸಂತೋಷಪಡಿಸಿ, ಆತನ ಆಶೀರ್ವಾದಕ್ಕೆ ಪಾತ್ರರಾಗುತ್ತೇವೆ.
2. ಪ್ರಥಮ ಶತಮಾನದಲ್ಲಿ ಅನೇಕರು ರಾಜ್ಯ ಸಂದೇಶಕ್ಕೆ ಹೇಗೆ ಪ್ರತಿಕ್ರಿಯಿಸಿದರು, ಮತ್ತು “ಆ ಮಾರ್ಗಕ್ಕೆ” ಸೇರಿರುವುದರ ಅರ್ಥವೇನಾಗಿತ್ತು?
2 ‘ನಿತ್ಯಜೀವಕ್ಕಾಗಿ ಯೋಗ್ಯವಾದ ಮನೋಭಾವವಿರುವ’ ವ್ಯಕ್ತಿಗಳು ವಿಶ್ವಾಸಿಗಳಾಗಿ ದೀಕ್ಷಾಸ್ನಾನ ಪಡೆದುಕೊಳ್ಳುವಾಗ ನಾವು ಅವರಿಗೆ “ಅತ್ಯುತ್ತಮ ಜೀವನ ಮಾರ್ಗಕ್ಕೆ ಸ್ವಾಗತ!” ಎಂದು ಹೇಳಲು ಸಕಾರಣಗಳಿವೆ. (ಅ. ಕಾ. 13:48) ಕ್ರಿ.ಶ. ಪ್ರಥಮ ಶತಮಾನದಲ್ಲಿ ವಿವಿಧ ಜನಾಂಗಗಳಿಂದ ಬಂದ ಸಾವಿರಾರು ಮಂದಿ ಸತ್ಯವನ್ನು ಸ್ವೀಕರಿಸಿ ದೀಕ್ಷಾಸ್ನಾನ ಪಡೆದುಕೊಳ್ಳುವ ಮೂಲಕ ದೇವರಲ್ಲಿ ತಮಗಿದ್ದ ಭಕ್ತಿಯ ಬಹಿರಂಗ ಪುರಾವೆಯನ್ನು ಕೊಟ್ಟರು. (ಅ. ಕಾ. 2:41) ಆ ಆದಿ ಶಿಷ್ಯರನ್ನು “ಆ ಮಾರ್ಗಕ್ಕೆ” ಸೇರಿದವರೆಂದು ಕರೆಯಲಾಯಿತು. (ಅ. ಕಾ. 9:2; 19:23) ಅವರನ್ನು ಹಾಗೆ ಕರೆದದ್ದು ಸೂಕ್ತವಾಗಿತ್ತು. ಏಕೆಂದರೆ ಕ್ರಿಸ್ತನ ಹಿಂಬಾಲಕರಾದವರು ಯೇಸು ಕ್ರಿಸ್ತನಲ್ಲಿನ ನಂಬಿಕೆ ಮತ್ತು ಅವನ ಮಾದರಿಯನ್ನು ಅನುಕರಿಸುವುದರ ಮೇಲೆ ಕೇಂದ್ರಿತವಾದ ಜೀವನಶೈಲಿಯನ್ನು ಪಾಲಿಸಿದರು.—1 ಪೇತ್ರ 2:21.
3. ಯೆಹೋವನ ಜನರು ಏಕೆ ದೀಕ್ಷಾಸ್ನಾನ ಪಡೆದುಕೊಳ್ಳುತ್ತಾರೆ, ಮತ್ತು ಕಳೆದ ಹತ್ತು ವರ್ಷಗಳಲ್ಲಿ ಎಷ್ಟು ಮಂದಿ ನಿಮಜ್ಜನ ಹೊಂದಿದ್ದಾರೆ?
3 ಶಿಷ್ಯರನ್ನಾಗಿ ಮಾಡುವ ಕೆಲಸವು ಈ ಅಂತ್ಯದ ದಿನಗಳಲ್ಲಿ ತ್ವರಿತಗೊಂಡಿದೆ. ಇದನ್ನು ಈಗ 230ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಮಾಡಲಾಗುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ 27,00,000ಕ್ಕಿಂತಲೂ ಹೆಚ್ಚು ಜನರು ಯೆಹೋವನಿಗೆ ಸಮರ್ಪಿಸಿಕೊಂಡು ಅದರ ಸಂಕೇತವಾಗಿ ದೀಕ್ಷಾಸ್ನಾನ ಪಡೆದುಕೊಳ್ಳುವ ನಿರ್ಣಯವನ್ನು ಮಾಡಿದ್ದಾರೆ. ಅಂದರೆ, ಪ್ರತಿ ವಾರಕ್ಕೆ ಸರಾಸರಿ 5,000 ಮಂದಿ ದೀಕ್ಷಾಸ್ನಾನ ಪಡೆದುಕೊಂಡಿದ್ದಾರೆ! ದೀಕ್ಷಾಸ್ನಾನ ಪಡೆದುಕೊಳ್ಳುವ ನಿರ್ಧಾರವನ್ನು ಅವರು ದೇವರ ಮೇಲಣ ಪ್ರೀತಿ, ಶಾಸ್ತ್ರಗ್ರಂಥದ ಕುರಿತ ಜ್ಞಾನ ಮತ್ತು ಅದು ಬೋಧಿಸುವ ವಿಷಯಗಳಲ್ಲಿನ ನಂಬಿಕೆಯ ಮೇಲಾಧರಿಸಿ ಮಾಡುತ್ತಾರೆ. ದೀಕ್ಷಾಸ್ನಾನ ನಮ್ಮ ಜೀವನದಲ್ಲಿ ಒಂದು ಮೈಲಿಗಲ್ಲಾಗಿದೆ. ಏಕೆಂದರೆ ಅದು ಯೆಹೋವನೊಂದಿಗೆ ನಮ್ಮ ಆಪ್ತ ಸಂಬಂಧದ ಮೊದಲ ಹೆಜ್ಜೆಯಂತಿದೆ. ಮಾತ್ರವಲ್ಲದೆ ಅದು, ತನ್ನ ಮಾರ್ಗದಲ್ಲಿ ನಡೆಯಲು ಆತನು ತನ್ನ ಪುರಾತನ ಕಾಲದ ಸೇವಕರಿಗೆ ಸಹಾಯಮಾಡಿದಂತೆ ನಮಗೂ ನಂಬಿಗಸ್ತರಾಗಿ ಸೇವೆಮಾಡಲು ಸಹಾಯಮಾಡುವನೆಂಬ ದೃಢವಿಶ್ವಾಸದ ಪ್ರದರ್ಶನವೂ ಆಗಿದೆ.—ಯೆಶಾ. 30:21.
ಯಾಕೆ ದೀಕ್ಷಾಸ್ನಾನ ಪಡೆದುಕೊಳ್ಳಬೇಕು?
4, 5. ದೀಕ್ಷಾಸ್ನಾನ ಪಡೆದುಕೊಳ್ಳುವುದರಿಂದ ಸಿಗುವ ಕೆಲವು ಆಶೀರ್ವಾದಗಳು ಮತ್ತು ಪ್ರಯೋಜನಗಳನ್ನು ತಿಳಿಸಿರಿ.
4 ನೀವು ಪ್ರಾಯಶಃ ದೇವರ ಕುರಿತು ಜ್ಞಾನ ಪಡೆದುಕೊಂಡು ಜೀವನದಲ್ಲಿ ಬದಲಾವಣೆಗಳನ್ನು ಮಾಡಿ ಈಗ ಒಬ್ಬ ಅಸ್ನಾತ ಪ್ರಚಾರಕರಾಗಿದ್ದೀರಿ. ಇಂಥ ಪ್ರಗತಿ ಪ್ರಶಂಸಾರ್ಹ. ಆದರೆ ನೀವು ಪ್ರಾರ್ಥನೆಯಲ್ಲಿ ದೇವರಿಗೆ ಸಮರ್ಪಣೆಯನ್ನು ಮಾಡಿಕೊಂಡು ಈಗ ದೀಕ್ಷಾಸ್ನಾನ ಪಡೆದುಕೊಳ್ಳಲು ಯೋಚಿಸುತ್ತಿದ್ದೀರೊ? ನೀವು ಮಾಡಿದ ಬೈಬಲ್ ಅಧ್ಯಯನದಿಂದ ನಿಮ್ಮ ಜೀವನವು ಯೆಹೋವನನ್ನು ಸ್ತುತಿಸುವುದರ ಮೇಲೆ ಕೇಂದ್ರಿತವಾಗಿರಬೇಕೇ ಹೊರತು ಸ್ವತಃ ನಿಮ್ಮನ್ನು ಮೆಚ್ಚಿಸಿಕೊಳ್ಳುವುದರ ಮೇಲಲ್ಲ ಅಥವಾ ಐಹಿಕ ಸಿರಿಸಂಪತ್ತನ್ನು ಗಳಿಸುವುದರ ಮೇಲಲ್ಲ ಎಂಬುದನ್ನು ನೀವು ಖಂಡಿತ ಕಲಿತಿರಬೇಕು. (ಕೀರ್ತನೆ 148:11-13 ಓದಿ; ಲೂಕ 12:15) ಹಾಗಿರುವಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳುವುದರಿಂದ ಸಿಗುವ ಕೆಲವು ಆಶೀರ್ವಾದಗಳು ಮತ್ತು ಪ್ರಯೋಜನಗಳು ಯಾವುವು?
5 ಒಬ್ಬ ಸಮರ್ಪಿತ ಕ್ರೈಸ್ತನಾಗಿ ನಿಮ್ಮ ಜೀವನಕ್ಕೆ ಅತ್ಯುತ್ಕೃಷ್ಟ ಉದ್ದೇಶವಿರುವುದು. ನೀವು ದೇವರ ಚಿತ್ತವನ್ನು ಮಾಡುತ್ತಿರುವುದರಿಂದ ನಿಮಗೆ ಸಂತೋಷ ಸಿಗುವುದು. (ರೋಮ. 12:1, 2) ಯೆಹೋವನ ಪವಿತ್ರಾತ್ಮವು ನಿಮ್ಮಲ್ಲಿ ಶಾಂತಿ ನಂಬಿಕೆಯಂಥ ದೈವಿಕ ಗುಣಗಳನ್ನು ಫಲಿಸುವುದು. (ಗಲಾ. 5:22, 23) ದೇವರು ನಿಮ್ಮ ಪ್ರಾರ್ಥನೆಗಳಿಗೆ ಕಿವಿಗೊಟ್ಟು ಆತನ ವಾಕ್ಯಕ್ಕನುಸಾರ ಜೀವನವನ್ನು ನಡೆಸಲು ನೀವು ಮಾಡುವ ಪ್ರಯತ್ನಗಳನ್ನು ಆಶೀರ್ವದಿಸುವನು. ನಿಮ್ಮ ಶುಶ್ರೂಷೆ ಆನಂದ ತರುವುದು. ದೇವರು ಅಂಗೀಕರಿಸುವಂಥ ರೀತಿಯಲ್ಲಿ ಜೀವಿಸುವುದು ನಿಮ್ಮ ನಿತ್ಯಜೀವದ ನಿರೀಕ್ಷೆಯನ್ನು ಬಲಪಡಿಸುವುದು. ಮಾತ್ರವಲ್ಲದೆ ಸಮರ್ಪಣೆ ಮಾಡಿಕೊಂಡು ದೀಕ್ಷಾಸ್ನಾನ ಪಡೆದುಕೊಳ್ಳುವುದು ನೀವು ನಿಜಕ್ಕೂ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಲು ಬಯಸುತ್ತೀರಿ ಎಂಬುದನ್ನು ತೋರಿಸಿಕೊಡುವುದು.—ಯೆಶಾ. 43:10-12.
6. ನಮ್ಮ ದೀಕ್ಷಾಸ್ನಾನ ಏನನ್ನು ಬಹಿರಂಗವಾಗಿ ತೋರಿಸಿಕೊಡುತ್ತದೆ?
6 ದೇವರಿಗೆ ನಮ್ಮನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆದುಕೊಳ್ಳುವ ಮೂಲಕ ನಾವು ಯೆಹೋವನವರೇ ಎಂದು ಬಹಿರಂಗವಾಗಿ ತೋರಿಸಿಕೊಡುತ್ತೇವೆ. ಅಪೊಸ್ತಲ ಪೌಲನು ಬರೆದದ್ದು: “ವಾಸ್ತವದಲ್ಲಿ, ನಮ್ಮಲ್ಲಿ ಯಾವನೂ ತನಗೋಸ್ಕರ ಜೀವಿಸುವುದೂ ಇಲ್ಲ, ತನಗೋಸ್ಕರ ಸಾಯುವುದೂ ಇಲ್ಲ; ನಾವು ಜೀವಿಸಿದರೆ ಯೆಹೋವನಿಗಾಗಿ ಜೀವಿಸುತ್ತೇವೆ, ಸತ್ತರೆ ಯೆಹೋವನಿಗಾಗಿ ಸಾಯುತ್ತೇವೆ. ಆದುದರಿಂದ ನಾವು ಜೀವಿಸಿದರೂ ಸತ್ತರೂ ಯೆಹೋವನವರೇ.” (ರೋಮ. 14:7, 8) ಇಚ್ಛಾಸ್ವಾತಂತ್ರ್ಯವನ್ನು ಕೊಡುವ ಮೂಲಕ ದೇವರು ನಮ್ಮನ್ನು ಘನಪಡಿಸಿದ್ದಾನೆ. ನಾವು ದೇವರನ್ನು ಪ್ರೀತಿಸುವುದರಿಂದ ಈ ಜೀವನ ಮಾರ್ಗವನ್ನು ಬೆನ್ನಟ್ಟಲು ದೃಢತೀರ್ಮಾನವನ್ನು ಮಾಡುವಾಗ ಆತನ ಹೃದಯವನ್ನು ಸಂತೋಷಪಡಿಸುತ್ತೇವೆ. (ಜ್ಞಾನೋ. 27:11) ನಮ್ಮ ದೀಕ್ಷಾಸ್ನಾನವು ದೇವರಿಗೆ ನಾವು ಮಾಡಿಕೊಂಡಿರುವ ಸಮರ್ಪಣೆಯ ಸಂಕೇತವೂ ಯೆಹೋವನು ನಮ್ಮ ಅಧಿಪತಿಯಾಗಿದ್ದಾನೆ ಎಂಬುದರ ಬಹಿರಂಗ ಪ್ರಕಟನೆಯೂ ಆಗಿದೆ. ವಿಶ್ವ ಪರಮಾಧಿಕಾರದ ವಿವಾದದಲ್ಲಿ ನಾವು ಆತನ ಪಕ್ಷವಹಿಸಿದ್ದೇವೆ ಎಂಬುದನ್ನು ಅದು ತೋರಿಸುತ್ತದೆ. (ಅ. ಕಾ. 5:29, 32) ಪ್ರತಿಯಾಗಿ ಯೆಹೋವನು ನಮ್ಮ ಪರವಹಿಸುತ್ತಾನೆ. (ಕೀರ್ತನೆ 118:6 ಓದಿ.) ಮಾತ್ರವಲ್ಲದೆ ದೀಕ್ಷಾಸ್ನಾನವು ಇಂದು ಮತ್ತು ಮುಂದೆ ಬೇರೆ ಅನೇಕ ಆಧ್ಯಾತ್ಮಿಕ ಆಶೀರ್ವಾದಗಳನ್ನು ಪಡೆದುಕೊಳ್ಳುವಂತೆ ನಮಗೆ ಮಾರ್ಗವನ್ನೂ ತೆರೆಯುತ್ತದೆ.
ಪ್ರೀತಿಯುಳ್ಳ ಸಹೋದರತ್ವದ ಆಶೀರ್ವಾದ
7-9. (ಎ) ಎಲ್ಲವನ್ನೂ ಬಿಟ್ಟು ತನ್ನನ್ನು ಹಿಂಬಾಲಿಸಿದವರಿಗೆ ಯೇಸು ಯಾವ ಆಶ್ವಾಸನೆ ಕೊಟ್ಟನು? (ಬಿ) ಮಾರ್ಕ 10:29, 30ರಲ್ಲಿ ಯೇಸು ಕೊಟ್ಟಿರುವ ವಚನವು ಹೇಗೆ ನೆರವೇರಿಕೆ ಹೊಂದುತ್ತಾ ಇದೆ?
7 ಅಪೊಸ್ತಲ ಪೇತ್ರನು ಯೇಸುವಿಗೆ ಹೇಳಿದ್ದು: “ಇಗೋ, ನಾವು ಎಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ; ನಮಗೆ ಏನು ದೊರಕುವುದು?” (ಮತ್ತಾ. 19:27) ತನಗೆ ಮತ್ತು ಯೇಸುವಿನ ಇತರ ಶಿಷ್ಯರಿಗೆ ಭವಿಷ್ಯತ್ತಿನಲ್ಲಿ ಏನು ಸಿಗಲಿದೆ ಎಂಬುದನ್ನು ಪೇತ್ರನು ತಿಳಿಯಲು ಬಯಸಿದನು. ರಾಜ್ಯ ಸಾರುವ ಕೆಲಸದಲ್ಲಿ ತಮ್ಮನ್ನು ಪೂರ್ಣವಾಗಿ ನಿರತರಾಗಿಸಿಕೊಳ್ಳಲು ಅವರು ದೊಡ್ಡ ತ್ಯಾಗಗಳನ್ನು ಮಾಡಿದ್ದರು. (ಮತ್ತಾ. 4:18-22) ಅವರಿಗೆ ಯೇಸು ಯಾವ ಆಶ್ವಾಸನೆ ಕೊಟ್ಟನು?
8 ಮಾರ್ಕನು ದಾಖಲಿಸಿದ ಸಮಾನ ವೃತ್ತಾಂತದಲ್ಲಿ, ತನ್ನ ಶಿಷ್ಯರು ಒಂದು ಆಧ್ಯಾತ್ಮಿಕ ಸಹೋದರತ್ವದ ಭಾಗವಾಗಿರುವರು ಎಂದು ಯೇಸು ಸೂಚಿಸಿದನು. ಅವನು ಹೇಳಿದ್ದು: “ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ಮನೆಗಳನ್ನಾಗಲಿ ಅಣ್ಣತಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಾಯಿಯನ್ನಾಗಲಿ ತಂದೆಯನ್ನಾಗಲಿ ಮಕ್ಕಳನ್ನಾಗಲಿ ಹೊಲವನ್ನಾಗಲಿ ಬಿಟ್ಟುಬಂದ ಯಾವನಿಗೂ ಈಗಿನ ಕಾಲದಲ್ಲಿ ಹಿಂಸೆಗಳ ಸಹಿತವಾಗಿ ಮನೆಗಳೂ ಅಣ್ಣತಮ್ಮಂದಿರೂ ಅಕ್ಕತಂಗಿಯರೂ ತಾಯಂದಿರೂ ಮಕ್ಕಳೂ ಹೊಲಗಳೂ ನೂರರಷ್ಟು ಸಿಗುತ್ತವೆ ಮತ್ತು ಬರಲಿರುವ ವಿಷಯಗಳ ವ್ಯವಸ್ಥೆಯಲ್ಲಿ ನಿತ್ಯಜೀವವು ದೊರೆಯುವುದು.” (ಮಾರ್ಕ 10:29, 30) ಯೇಸು ವಚನವಿತ್ತ ಪ್ರಕಾರವೇ ಪ್ರಥಮ ಶತಮಾನದ ಕ್ರೈಸ್ತರಾದ ಲುದ್ಯ, ಅಕ್ವಿಲ, ಪ್ರಿಸ್ಕಿಲ್ಲ ಹಾಗೂ ಗಾಯರೇ ಮೊದಲಾದವರು ತಮ್ಮ ಜೊತೆ ವಿಶ್ವಾಸಿಗಳಿಗೆ ‘ಮನೆಗಳನ್ನು’ ಒದಗಿಸಿ ಅವರಿಗೆ “ಅಣ್ಣತಮ್ಮಂದಿರೂ ಅಕ್ಕತಂಗಿಯರೂ ತಾಯಂದಿರೂ” ಆದರು.—ಅ. ಕಾ. 16:14, 15; 18:2-4; 3 ಯೋಹಾ. 1, 5-8.
9 ಯೇಸು ಹೇಳಿದ ಮಾತುಗಳು ಇಂದು ಹೆಚ್ಚಿನ ಪ್ರಮಾಣದಲ್ಲಿ ನೆರವೇರುತ್ತಿವೆ. ಮಿಷನೆರಿಗಳು, ಬೆತೆಲ್ ಕುಟುಂಬದ ಸದಸ್ಯರು, ಅಂತಾರಾಷ್ಟ್ರೀಯ ಸೇವಕರು ಮತ್ತು ಇತರರು ಸೇರಿದಂತೆ ಅನೇಕರನ್ನು ಒಳಗೊಂಡ ಅವನ ಹಿಂಬಾಲಕರು ಬಿಟ್ಟುಬರುವ ‘ಹೊಲಗಳು’ ಅವರ ವಸತಿ ಮತ್ತು ಕೆಲಸಕ್ಕೆ ಸೂಚಿಸುತ್ತವೆ. ಬೇರೆ ದೇಶಗಳಲ್ಲಿ ರಾಜ್ಯದ ಹಿತಾಸಕ್ತಿಗಳನ್ನು ಹೆಚ್ಚಿಸಲಿಕ್ಕಾಗಿ ಅವನ್ನು ಅವರು ಸಿದ್ಧಮನಸ್ಸಿನಿಂದ ಬಿಟ್ಟುಬಂದಿದ್ದಾರೆ. ಅನೇಕ ಸಹೋದರ ಸಹೋದರಿಯರು ಸರಳ ಜೀವನ ನಡೆಸುವುದಕ್ಕಾಗಿ ತಮ್ಮ ಮನೆಗಳನ್ನು ಬಿಟ್ಟುಕೊಟ್ಟಿದ್ದಾರೆ. ಯೆಹೋವನು ಅವರನ್ನು ಹೇಗೆ ಪರಾಮರಿಸಿದ್ದಾನೆ ಮತ್ತು ಆತನಿಗೆ ಅವರು ಸಲ್ಲಿಸುವ ಸೇವೆ ಅವರಿಗೆ ಹೇಗೆ ಸಂತೋಷವನ್ನು ತಂದಿದೆ ಎಂಬ ಅನುಭವಗಳನ್ನು ಕೇಳುವುದು ನಮಗೆ ಆನಂದವನ್ನು ತರುತ್ತದೆ. (ಅ. ಕಾ. 20:35) ಮಾತ್ರವಲ್ಲದೆ ದೀಕ್ಷಾಸ್ನಾನ ಪಡೆದುಕೊಂಡಿರುವ ಯೆಹೋವನ ಸೇವಕರೆಲ್ಲರೂ ಭೂವ್ಯಾಪಕವಾದ ಕ್ರೈಸ್ತ ಸಹೋದರತ್ವದ ಭಾಗವಾಗಿ ‘ಮೊದಲು ರಾಜ್ಯವನ್ನೂ [ದೇವರ] ನೀತಿಯನ್ನೂ ಹುಡುಕುವುದರಿಂದ’ ಸಿಗುವ ಆಶೀರ್ವಾದದಲ್ಲಿ ಆನಂದಿಸಬಲ್ಲರು.—ಮತ್ತಾ. 6:33.
‘ಪರಾತ್ಪರನ ಮರೆಯಲ್ಲಿ’ ಸುರಕ್ಷಿತರು
10, 11. “ಪರಾತ್ಪರನ ಮರೆ” ಏನಾಗಿದೆ, ಮತ್ತು ನಾವು ಅದರೊಳಗೆ ಹೇಗೆ ಪ್ರವೇಶ ಪಡೆಯಬಲ್ಲೆವು?
10 ಸಮರ್ಪಣೆ ಮತ್ತು ದೀಕ್ಷಾಸ್ನಾನದಿಂದ ಮತ್ತೊಂದು ದೊಡ್ಡ ಆಶೀರ್ವಾದ ಸಿಗುತ್ತದೆ. ನಾವು ‘ಪರಾತ್ಪರನ ಮರೆಯಲ್ಲಿ’ ನಿವಾಸಿಸುವ ಸುಯೋಗ ಪಡೆಯುತ್ತೇವೆ. (ಕೀರ್ತನೆ 91:1 ಓದಿ.) ಇದು ಸುರಕ್ಷೆ ಮತ್ತು ಸುಭದ್ರತೆಯ ಸಾಂಕೇತಿಕ ಸ್ಥಳವಾಗಿದ್ದು ಆಧ್ಯಾತ್ಮಿಕ ಹಾನಿಯಿಂದ ತಪ್ಪಿಸುವ ಸ್ಥಿತಿ ಅಥವಾ ಸನ್ನಿವೇಶಕ್ಕೆ ಸೂಚಿಸುತ್ತದೆ. ಅದು ‘ಮರೆಯಾಗಿದೆ’ ಕೂಡ. ಏಕೆಂದರೆ ಆಧ್ಯಾತ್ಮಿಕವಾಗಿ ಅಂಧರಾಗಿದ್ದು ದೇವರಲ್ಲಿ ಭರವಸೆಯಿಡದ ವ್ಯಕ್ತಿಗಳಿಗೆ ಅದು ಅಜ್ಞಾತವಾಗಿದೆ. ನಮ್ಮ ಸಮರ್ಪಣೆಗನುಸಾರ ಜೀವಿಸುವುದರಿಂದ ಮತ್ತು ಯೆಹೋವನಲ್ಲಿ ಪೂರ್ಣ ಭರವಸೆಯನ್ನು ತೋರಿಸುವುದರಿಂದ ನಾವು ಆತನಿಗೆ, “ನೀನೇ ನನ್ನ ಶರಣನು ನನ್ನ ದುರ್ಗವು ನಾನು ಭರವಸವಿಟ್ಟಿರುವ ನನ್ನ ದೇವರು” ಎಂದು ಹೇಳುವಂತಿರುವುದು. (ಕೀರ್ತ. 91:2) ಯೆಹೋವ ದೇವರು ನಮ್ಮ ಸುಭದ್ರ ವಾಸಸ್ಥಾನವಾಗುತ್ತಾನೆ. (ಕೀರ್ತ. 91:9) ನಮಗೆ ಇದಕ್ಕಿಂತ ಹೆಚ್ಚೇನು ಬೇಕು?
11 ಯೆಹೋವನ ‘ಮರೆಗೆ’ ಪ್ರವೇಶವನ್ನು ಪಡೆಯುವುದು, ಆತನೊಂದಿಗೆ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಂಡ ಸುಯೋಗದಿಂದ ಆಶೀರ್ವದಿಸಲ್ಪಟ್ಟಿದ್ದೇವೆ ಎಂಬುದನ್ನು ಸಹ ತೋರಿಸುತ್ತದೆ. ಈ ಸಂಬಂಧ ಸಮರ್ಪಣೆ ಮತ್ತು ದೀಕ್ಷಾಸ್ನಾನದೊಂದಿಗೆ ಆರಂಭಿಸುತ್ತದೆ. ಅನಂತರ ನಾವು ಬೈಬಲ್ ಅಧ್ಯಯನ, ಹೃತ್ಪೂರ್ವಕ ಪ್ರಾರ್ಥನೆ ಮತ್ತು ಪೂರ್ಣ ವಿಧೇಯತೆಯ ಮೂಲಕ ದೇವರಿಗೆ ಸಮೀಪವಾಗುವುದರಿಂದ ಆತನೊಂದಿಗಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತೇವೆ. (ಯಾಕೋ. 4:8) ಯೇಸುವಿಗೆ ಯೆಹೋವನಲ್ಲಿದ್ದಷ್ಟು ಆಪ್ತ ಸಂಬಂಧ ಬೇರೆ ಯಾರಲ್ಲಿಯೂ ಎಂದೂ ಇರಲಿಲ್ಲ. ಸೃಷ್ಟಿಕರ್ತನಲ್ಲಿನ ಅವನ ಭರವಸೆ ಎಂದೂ ಕುಂದಲಿಲ್ಲ. (ಯೋಹಾ. 8:29) ಆದುದರಿಂದ ಯೆಹೋವನ ವಿಷಯದಲ್ಲಾಗಲಿ, ನಮ್ಮ ಸಮರ್ಪಣೆಯ ಪ್ರತಿಜ್ಞೆಯನ್ನು ಪೂರೈಸಲಿಕ್ಕೆ ಸಹಾಯಮಾಡಲು ಆತನಿಗಿರುವ ಇಚ್ಛೆ ಮತ್ತು ಸಾಮರ್ಥ್ಯದ ವಿಷಯದಲ್ಲಾಗಲಿ ನಾವೆಂದೂ ಸಂಶಯಪಡದೇ ಇರೋಣ. (ಪ್ರಸಂ. 5:4) ತನ್ನ ಜನರಿಗಾಗಿ ಯೆಹೋವನು ಮಾಡಿರುವ ಆಧ್ಯಾತ್ಮಿಕ ಒದಗಿಸುವಿಕೆಗಳು ಆತನು ನಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಾನೆ ಮತ್ತು ಆತನ ಸೇವೆಯಲ್ಲಿ ನಾವು ಸಫಲತೆ ಪಡೆಯಬೇಕೆಂದು ಬಯಸುತ್ತಾನೆ ಎಂಬುದರ ನಿರಾಕರಿಸಲಾಗದ ಸಾಕ್ಷ್ಯವಾಗಿವೆ.
ನಮ್ಮ ಆಧ್ಯಾತ್ಮಿಕ ಪರದೈಸನ್ನು ಮಾನ್ಯಮಾಡುವುದು
12, 13. (ಎ) ಆಧ್ಯಾತ್ಮಿಕ ಪರದೈಸ್ ಅಂದರೆ ಏನು? (ಬಿ) ನಾವು ಹೊಸಬರಿಗೆ ಹೇಗೆ ಸಹಾಯಮಾಡಸಾಧ್ಯವಿದೆ?
12 ಸಮರ್ಪಣೆ ಮತ್ತು ದೀಕ್ಷಾಸ್ನಾನವು ಆಶೀರ್ವದಿತ ಆಧ್ಯಾತ್ಮಿಕ ಪರದೈಸಿನಲ್ಲಿ ವಾಸಿಸುವ ಮಾರ್ಗವನ್ನೂ ತೆರೆಯುತ್ತದೆ. ಇದು ಜೊತೆ ವಿಶ್ವಾಸಿಗಳೊಂದಿಗೆ ಆನಂದಿಸುವ ಅದ್ವಿತೀಯ ಆಧ್ಯಾತ್ಮಿಕ ಪರಿಸರವಾಗಿದೆ. ಇವರು ಯೆಹೋವ ದೇವರೊಂದಿಗೆ ಮತ್ತು ಒಬ್ಬರು ಇನ್ನೊಬ್ಬರೊಂದಿಗೆ ‘ಸಮಾಧಾನದಿಂದಿದ್ದಾರೆ.’ (ಕೀರ್ತ. 29:11, NIBV; ಯೆಶಾ. 54:13, NIBV) ಈ ಲೋಕದಲ್ಲಿರುವ ಯಾವ ವಿಷಯವನ್ನೂ ನಮ್ಮ ಆಧ್ಯಾತ್ಮಿಕ ಪರದೈಸಿನೊಂದಿಗೆ ಹೋಲಿಸಲು ಸಾಧ್ಯವಿಲ್ಲ. ಇದು ವಿಶೇಷವಾಗಿ ಅಂತಾರಾಷ್ಟ್ರೀಯ ಅಧಿವೇಶನಗಳಲ್ಲಿ ಸುವ್ಯಕ್ತ. ಅಲ್ಲಿ ಅನೇಕ ದೇಶ, ಭಾಷೆ ಮತ್ತು ಜನಾಂಗೀಯ ಗುಂಪುಗಳಿಂದ ಬಂದ ನಮ್ಮ ಸಹೋದರ ಸಹೋದರಿಯರು ಸಮಾಧಾನ, ಐಕ್ಯ ಮತ್ತು ಸಹೋದರ ಪ್ರೀತಿಯ ಬೆಸುಗೆಯ ಪರಿಸರಕ್ಕೆ ತರಲ್ಪಡುತ್ತಾರೆ.
13 ನಾವು ಆನಂದಿಸುವ ಆಧ್ಯಾತ್ಮಿಕ ಪರದೈಸಿನಲ್ಲಿ ಇಂದು ಲೋಕದಲ್ಲಿರುವ ವಿಷಾದಕರ ಪರಿಸ್ಥಿತಿಗಳಿಗೆ ನೇರ ವಿರುದ್ಧವಾದ ಸನ್ನಿವೇಶವಿದೆ. (ಯೆಶಾಯ 65:13, 14 ಓದಿ.) ರಾಜ್ಯ ಸಂದೇಶವನ್ನು ಘೋಷಿಸುವ ಮೂಲಕ ಇತರರು ಆಧ್ಯಾತ್ಮಿಕ ಪರದೈಸನ್ನು ಪ್ರವೇಶಿಸುವಂತೆ ಆಮಂತ್ರಿಸುವ ಸದವಕಾಶವನ್ನು ನಾವು ಹೊಂದಿದ್ದೇವೆ. ಇತ್ತೀಚೆಗೆ ಸಭೆಯೊಂದಿಗೆ ಸಹವಸಿಸುವ ಮತ್ತು ಶುಶ್ರೂಷೆಯ ತರಬೇತಿಯಿಂದ ಪ್ರಯೋಜನ ಹೊಂದುವ ವ್ಯಕ್ತಿಗಳಿಗೆ ಸಹಾಯಮಾಡುವುದು ಸಹ ಒಂದು ಆಶೀರ್ವಾದ. ಹಿರಿಯರ ಮಾರ್ಗದರ್ಶನೆಯ ಮೇರೆಗೆ ಕೆಲವು ಹೊಸಬರಿಗೆ ಸಹಾಯಮಾಡುವ ಸುಯೋಗ ಕೂಡ ನಮಗೆ ಸಿಗಬಹುದು. ಅಪೊಲ್ಲೋಸನಿಗೆ “ದೇವರ ಮಾರ್ಗವನ್ನು . . . ಇನ್ನೂ ಸರಿಯಾದ ರೀತಿಯಲ್ಲಿ ವಿವರಿಸಿದ” ಅಕ್ವಿಲ ಮತ್ತು ಪ್ರಿಸ್ಕಿಲ್ಲ ಇದನ್ನೇ ಮಾಡಿದರು.—ಅ. ಕಾ. 18:24-26.
ಯೇಸುವಿನಿಂದ ಕಲಿಯುತ್ತಾ ಇರಿ
14, 15. ಯೇಸುವಿನಿಂದ ಕಲಿಯುತ್ತಾ ಇರಲು ನಮಗೆ ಯಾವ ಸಕಾರಣಗಳಿವೆ?
14 ಯೇಸುವಿನಿಂದ ಕಲಿಯುತ್ತಾ ಇರಲು ನಮಗೆ ಸಕಾರಣಗಳಿವೆ. ಯೇಸು ಭೂಮಿಗೆ ಬರುವ ಮುಂಚೆ ತನ್ನ ತಂದೆಯೊಂದಿಗೆ ಕೆಲಸಮಾಡುತ್ತಾ ಅಗಣಿತ ಯುಗಗಳನ್ನು ಕಳೆದನು. (ಜ್ಞಾನೋ. 8:22, 30) ದೇವರ ಸೇವೆಮಾಡುತ್ತಾ ಸತ್ಯಕ್ಕೆ ಸಾಕ್ಷಿಹೇಳುವುದರ ಮೇಲೆ ಕೇಂದ್ರಿತವಾಗಿರುವ ಜೀವನ ಮಾರ್ಗವೇ ಅತ್ಯುತ್ತಮವಾದದ್ದು ಎಂಬುದು ಅವನಿಗೆ ತಿಳಿದಿತ್ತು. (ಯೋಹಾ. 18:37) ಬೇರೆ ಯಾವುದೇ ರೀತಿಯ ಜೀವನ ಮಾರ್ಗವು ಸ್ವಾರ್ಥಪರವಾದದ್ದೂ ದೂರದೃಷ್ಟಿಯಿಲ್ಲದ್ದೂ ಆಗಿರುವುದೆಂಬುದು ಯೇಸುವಿಗೆ ಸ್ಪಷ್ಟವಾಗಿತ್ತು. ಅವನು ತೀವ್ರವಾದ ಪರೀಕ್ಷೆಗೆ ಒಳಗಾಗಿ ಕೊಲ್ಲಲ್ಪಡುವನು ಎಂಬುದು ಗೊತ್ತಿತ್ತು. (ಮತ್ತಾ. 20:18, 19; ಇಬ್ರಿ. 4:15) ನಮಗೆ ಅತ್ಯುತ್ತಮ ಮಾದರಿಯನ್ನಿಡುತ್ತಾ ಸಮಗ್ರತಾ ಪಾಲಕರಾಗಿರುವುದು ಹೇಗೆ ಎಂಬುದನ್ನು ಅವನು ಕಲಿಸಿಕೊಟ್ಟನು.
15 ಯೇಸು ದೀಕ್ಷಾಸ್ನಾನ ಪಡೆದುಕೊಂಡ ಸ್ವಲ್ಪದರಲ್ಲೇ ಸೈತಾನನು ಅವನ ಮೇಲೆ ಪ್ರಲೋಭನೆಗಳನ್ನು ತಂದು ಅತ್ಯುತ್ತಮ ಜೀವನ ಮಾರ್ಗವನ್ನು ತೊರೆದುಬಿಡುವಂತೆ ಮಾಡಲು ಪ್ರಯತ್ನಿಸಿದನು. ಆದರೆ ಅವನ ಪ್ರಯತ್ನಗಳು ಮಣ್ಣುಮುಕ್ಕಿದವು. (ಮತ್ತಾ. 4:1-11) ಸೈತಾನನು ಏನೇ ಉಪದ್ರವ ಕೊಡಲಿ ನಾವು ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಬಲ್ಲೆವು ಎಂಬುದನ್ನು ಇದು ಕಲಿಸುತ್ತದೆ. ಯಾರು ದೀಕ್ಷಾಸ್ನಾನ ತೆಗೆದುಕೊಳ್ಳಲಿಕ್ಕಿದ್ದಾರೋ ಮತ್ತು ಹೊಸದಾಗಿ ದೀಕ್ಷಾಸ್ನಾನ ಪಡೆದುಕೊಂಡಿದ್ದಾರೋ ಅವರ ಮೇಲೆ ಅವನು ಕಣ್ಣಿಟ್ಟಿರುವುದು ಸಂಭಾವ್ಯ. (1 ಪೇತ್ರ 5:8) ಸದುದ್ದೇಶವುಳ್ಳ, ಆದರೆ ತಪ್ಪಭಿಪ್ರಾಯ ಹೊಂದಿರುವ ಕುಟುಂಬ ಸದಸ್ಯರಿಂದ ವಿರೋಧ ಬರಬಹುದು. ಆದರೂ ಇಂಥ ಪರೀಕ್ಷೆಗಳು, ನಾವು ಪ್ರಶ್ನೆಗಳಿಗೆ ಉತ್ತರ ಕೊಡುವಾಗ ಮತ್ತು ಸಾಕ್ಷಿಕೊಡುವಾಗ ಗೌರವ ಮತ್ತು ಸಮಯೋಚಿತ ಜಾಣ್ಮೆಯಂಥ ಉತ್ತಮವಾದ ಕ್ರೈಸ್ತ ಗುಣಗಳನ್ನು ತೋರಿಸಲು ಅವಕಾಶವನ್ನು ಕೊಡುತ್ತವೆ. (1 ಪೇತ್ರ 3:15) ಹೀಗೆ ಈ ಅನುಭವಗಳು ನಮಗೆ ಕಿವಿಗೊಡುವವರ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಲ್ಲವು.—1 ತಿಮೊ. 4:16.
ಅತ್ಯುತ್ತಮ ಜೀವನ ಮಾರ್ಗದಲ್ಲಿಯೇ ಸಾಗಿರಿ!
16, 17. (ಎ) ಧರ್ಮೋಪದೇಶಕಾಂಡ 30:19, 20ರಲ್ಲಿ ಜೀವನದ ಯಾವ ಮೂರು ಮೂಲಭೂತ ಆವಶ್ಯಕತೆಗಳು ಕೊಡಲ್ಪಟ್ಟಿವೆ? (ಬಿ) ಮೋಶೆ ಬರೆದದ್ದನ್ನು ಯೇಸು, ಯೋಹಾನ ಮತ್ತು ಪೌಲರು ಹೇಗೆ ಬೆಂಬಲಿಸಿದರು?
16 ಯೇಸು ಭೂಮಿಗೆ ಬರುವುದಕ್ಕಿಂತ 1,500 ವರ್ಷಗಳ ಹಿಂದೆ ಮೋಶೆ ಇಸ್ರಾಯೇಲ್ಯರಿಗೆ ಆಗ ಸಾಧ್ಯವಿದ್ದ ಅತ್ಯುತ್ತಮ ಜೀವನ ಮಾರ್ಗವನ್ನು ಆರಿಸಿಕೊಳ್ಳುವಂತೆ ಪ್ರೋತ್ಸಾಹಿಸಿದನು. ಅವನು ಹೇಳಿದ್ದು: “ನಾನು ಜೀವಮರಣಗಳನ್ನೂ ಆಶೀರ್ವಾದಶಾಪಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; ಇದಕ್ಕೆ ಭೂಮ್ಯಾಕಾಶಗಳು ಸಾಕ್ಷಿಗಳಾಗಿರಲಿ. ಆದದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ; ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನ ಮಾತಿಗೆ [ಕಿವಿಗೊಡಿರಿ], ಆತನನ್ನು ಹೊಂದಿಕೊಂಡೇ ಇರ್ರಿ.” (ಧರ್ಮೋ. 30:19, 20) ಇಸ್ರಾಯೇಲ್ಯರು ದೇವರಿಗೆ ಅಪನಂಬಿಗಸ್ತರಾಗಿ ಕಂಡುಬಂದರು. ಆದರೆ ಮೋಶೆಯಿಂದ ಉಲ್ಲೇಖಿಸಲಾದ ಜೀವನದ ಮೂರು ಮೂಲಭೂತ ಆವಶ್ಯಕತೆಗಳು ಬದಲಾಗಲಿಲ್ಲ. ಅವು ಯೇಸುವಿನಿಂದ ಮತ್ತು ಇತರರಿಂದ ಪುನಃ ತಿಳಿಸಲ್ಪಟ್ಟವು.
17 ಮೊದಲನೆಯದಾಗಿ, ನಾವು ‘ನಮ್ಮ ದೇವರಾದ ಯೆಹೋವನನ್ನು ಪ್ರೀತಿಸಬೇಕು.’ ನಾವು ಆತನ ನೀತಿಯ ಮಾರ್ಗಗಳಿಗೆ ಅನುಸಾರವಾಗಿ ನಡೆಯುವ ಮೂಲಕ ದೇವರನ್ನು ಪ್ರೀತಿಸುತ್ತೇವೆ ಎಂಬುದನ್ನು ತೋರಿಸುತ್ತೇವೆ. (ಮತ್ತಾ. 22:37) ಎರಡನೆಯದಾಗಿ, ದೇವರ ವಾಕ್ಯವನ್ನು ಅಧ್ಯಯನಮಾಡುವ ಮತ್ತು ಆತನ ಆಜ್ಞೆಗಳಿಗೆ ವಿಧೇಯರಾಗುವ ಮೂಲಕ ನಾವು ‘ಯೆಹೋವನ ಮಾತಿಗೆ ಕಿವಿಗೊಡಬೇಕು.’ (1 ಯೋಹಾ. 5:3) ಬೈಬಲನ್ನು ಚರ್ಚಿಸಲಾಗುವ ಕ್ರೈಸ್ತ ಕೂಟಗಳಿಗೆ ನಾವು ಕ್ರಮವಾಗಿ ಹಾಜರಾಗುವುದನ್ನು ಇದು ಅವಶ್ಯಪಡಿಸುತ್ತದೆ. (ಇಬ್ರಿ. 10:23-25) ಮೂರನೆಯದಾಗಿ, ನಾವು ‘ಯೆಹೋವನನ್ನು ಹೊಂದಿಕೊಂಡೇ ಇರಬೇಕು.’ ನಾವು ಯಾವುದೇ ಸನ್ನಿವೇಶವನ್ನು ಎದುರಿಸಬೇಕಾಗಿ ಬಂದರೂ ಯಾವಾಗಲೂ ದೇವರಲ್ಲಿ ನಂಬಿಕೆಯನ್ನು ಪ್ರದರ್ಶಿಸೋಣ ಮತ್ತು ಆತನ ಕುಮಾರನನ್ನು ಹಿಂಬಾಲಿಸೋಣ.—2 ಕೊರಿಂ. 4:16-18.
18. (ಎ) ಹಿಂದೆ 1914ರಲ್ಲಿ ಕಾವಲಿನ ಬುರುಜು ಸತ್ಯವನ್ನು ಹೇಗೆ ವರ್ಣಿಸಿತು? (ಬಿ) ಇಂದು ಸತ್ಯದ ಬೆಳಕಿನ ಕುರಿತು ನಮಗೆ ಹೇಗನಿಸಬೇಕು?
18 ಬೈಬಲ್ ಸತ್ಯಕ್ಕೆ ಹೊಂದಿಕೆಯಲ್ಲಿ ಜೀವಿಸುವುದು ಎಂಥ ಆಶೀರ್ವಾದ! 1914ರ ಕಾವಲಿನ ಬುರುಜು ಪತ್ರಿಕೆಯಲ್ಲಿ ಈ ಗಮನಾರ್ಹ ಹೇಳಿಕೆಯನ್ನು ಪ್ರಕಟಿಸಲಾಯಿತು: “ನಾವು ಆಶೀರ್ವದಿತ, ಸಂತೋಷಿತ ಜನರಲ್ಲವೇ? ನಮ್ಮ ದೇವರು ನಂಬಿಗಸ್ತನಲ್ಲವೇ? ಇದಕ್ಕಿಂತ ಉತ್ತಮವಾದದ್ದು ಬೇರೆ ಯಾರಿಗಾದರೂ ತಿಳಿದಿದ್ದರೆ ಅವರು ಅದನ್ನೇ ನಂಬಲಿ. ಇದಕ್ಕಿಂತ ಉತ್ತಮವಾದ ಯಾವುದನ್ನಾದರೂ ನಿಮ್ಮಲ್ಲಿ ಯಾರಾದರೂ ಕಂಡುಕೊಂಡರೆ ನಮಗೆ ಕೂಡ ತಿಳಿಸುವಿರಿ ಎಂದು ನಂಬುತ್ತೇವೆ. ದೇವರ ವಾಕ್ಯದಲ್ಲಿ ನಾವು ಕಂಡುಕೊಂಡಿರುವುದಕ್ಕಿಂತ ಉತ್ತಮವಾದ ಅಥವಾ ಅದರಲ್ಲಿರುವ ಅರ್ಧದಷ್ಟು ಒಳ್ಳೇದಾದ ಬೇರೆ ಯಾವುದರ ಬಗ್ಗೆಯೂ ನಮಗೆ ತಿಳಿದಿಲ್ಲ. . . . ಸತ್ಯ ದೇವರ ಕುರಿತಾದ ಸ್ಪಷ್ಟ ಜ್ಞಾನವು ನಮ್ಮ ಹೃದಯದಲ್ಲಿ ಮತ್ತು ಜೀವನದಲ್ಲಿ ತಂದಿರುವ ಶಾಂತಿ, ಸಂತೋಷ ಮತ್ತು ಆಶೀರ್ವಾದವನ್ನು ಯಾವ ನಾಲಿಗೆಯಾಗಲಿ ಲೇಖನಿಯಾಗಲಿ ತಿಳಿಸಲಾರದು. ದೇವರ ವಿವೇಕ, ನ್ಯಾಯ, ಶಕ್ತಿ ಮತ್ತು ಪ್ರೀತಿಯ ಕುರಿತ ಸತ್ಯಕಥೆ ನಮ್ಮ ಮನಸ್ಸು ಮತ್ತು ಹೃದಯದ ಹಂಬಲಿಕೆಗಳನ್ನು ಪೂರ್ಣವಾಗಿ ತೃಪ್ತಿಗೊಳಿಸುತ್ತದೆ. ನಮಗೆ ಇದಕ್ಕಿಂತ ಹೆಚ್ಚೇನು ಬೇಕಾಗಿಲ್ಲ. ಈ ಅದ್ಭುತಕರ ಸತ್ಯಕಥೆಯನ್ನು ಇನ್ನಷ್ಟು ಸ್ಪಷ್ಟವಾಗಿ ನಮ್ಮ ಮನಸ್ಸಿಗೆ ತರುವುದಕ್ಕಿಂತ ನಾವು ಹೆಚ್ಚು ಆಶಿಸುವ ವಿಷಯವು ಬೇರೊಂದಿಲ್ಲ.” (1914, ಡಿಸೆಂಬರ್ 15ರ ಕಾವಲಿನ ಬುರುಜು ಪತ್ರಿಕೆಯ ಪುಟ 377-378) ಆಧ್ಯಾತ್ಮಿಕ ಬೆಳಕು ಮತ್ತು ಸತ್ಯಕ್ಕಾಗಿರುವ ನಮ್ಮ ಗಣ್ಯತೆಯು ಬದಲಾಗಿಲ್ಲ. ವಾಸ್ತವದಲ್ಲಿ ಈಗ ನಾವು ‘ಯೆಹೋವನ ಜ್ಞಾನಪ್ರಕಾಶದಲ್ಲಿ ನಡೆಯುತ್ತೇವೆ’ ಎಂದು ಸಂತೋಷಪಡಲು ಇನ್ನೂ ಹೆಚ್ಚಿನ ಕಾರಣವಿದೆ.—ಯೆಶಾ. 2:5; ಕೀರ್ತ. 43:3; ಜ್ಞಾನೋ. 4:18.
19. ದೀಕ್ಷಾಸ್ನಾನಕ್ಕೆ ಅರ್ಹರಾಗುವವರು ತಡಮಾಡದೆ ಆ ಹೆಜ್ಜೆಯನ್ನು ತೆಗೆದುಕೊಳ್ಳಬೇಕು ಏಕೆ?
19 ನೀವು ‘ಯೆಹೋವನ ಜ್ಞಾನಪ್ರಕಾಶದಲ್ಲಿ ನಡೆಯಲು’ ಬಯಸುವುದಾದರೂ ಇನ್ನೂ ಸಮರ್ಪಿತ ಸ್ನಾತ ಕ್ರೈಸ್ತರಾಗಿಲ್ಲವಾದರೆ ತಡಮಾಡಬೇಡಿ. ದೀಕ್ಷಾಸ್ನಾನಕ್ಕೆ ಬೇಕಾಗಿರುವ ಬೈಬಲಿನ ಆವಶ್ಯಕತೆಗಳನ್ನು ಪೂರೈಸಲು ನಿಮ್ಮಿಂದಾದದ್ದೆಲ್ಲವನ್ನು ಮಾಡಿ. ದೇವರು ಮತ್ತು ಕ್ರಿಸ್ತನು ನಮಗೋಸ್ಕರ ಮಾಡಿರುವ ವಿಷಯಗಳಿಗಾಗಿ ಗಣ್ಯತೆಯನ್ನು ತೋರಿಸುವ ಅದ್ವಿತೀಯ ವಿಧಾನವೇ ದೀಕ್ಷಾಸ್ನಾನ. ನಿಮ್ಮಲ್ಲಿರುವ ಅತಿ ಬೆಲೆಬಾಳುವ ದೈಹಿಕ ಸ್ವತ್ತಾಗಿರುವ ನಿಮ್ಮ ಜೀವವನ್ನು ಯೆಹೋವನಿಗೆ ಕೊಡಿರಿ. ದೇವರ ಕುಮಾರನನ್ನು ಹಿಂಬಾಲಿಸುವ ಮೂಲಕ ಆತನ ಚಿತ್ತವನ್ನು ಮಾಡಲು ಬಯಸುತ್ತೀರಿ ಎಂಬುದನ್ನು ತೋರಿಸಿ. (2 ಕೊರಿಂ. 5:14, 15) ಇದೇ ಅತ್ಯುತ್ತಮ ಜೀವನ ಮಾರ್ಗ ಎಂಬುದು ಸತ್ಯವೇ ಸರಿ!
ನಿಮ್ಮ ಉತ್ತರವೇನು?
• ನಮ್ಮ ದೀಕ್ಷಾಸ್ನಾನ ಯಾವುದರ ಸಂಕೇತ?
• ದೇವರಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆದುಕೊಳ್ಳುವುದರಿಂದ ಯಾವ ಆಶೀರ್ವಾದಗಳು ಸಿಗುತ್ತವೆ?
• ಯೇಸುವಿನಿಂದ ಕಲಿಯುವುದು ಏಕೆ ಅಷ್ಟು ಪ್ರಾಮುಖ್ಯ?
• ಅತ್ಯುತ್ತಮ ಜೀವನ ಮಾರ್ಗದಲ್ಲಿ ಸಾಗಲು ನಮಗೆ ಯಾವುದು ಸಹಾಯಮಾಡಬಲ್ಲದು?
[ಅಧ್ಯಯನ ಪ್ರಶ್ನೆಗಳು]
[ಪುಟ 25ರಲ್ಲಿರುವ ಚಿತ್ರ]
ನಿಮ್ಮ ದೀಕ್ಷಾಸ್ನಾನವು ನೀವು ಅತ್ಯುತ್ತಮ ಜೀವನ ಮಾರ್ಗವನ್ನು ಆರಿಸಿಕೊಂಡಿದ್ದೀರೆಂದು ತೋರಿಸುತ್ತದೆ
[ಪುಟ 26ರಲ್ಲಿರುವ ಚಿತ್ರಗಳು]
‘ಪರಾತ್ಪರನ ಮರೆಯಲ್ಲಿ’ ನೀವು ಸುರಕ್ಷಿತವಾಗಿದ್ದೀರೊ?