“ಆಧ್ಯಾತ್ಮಿಕ ಬೆಳವಣಿಗೆಯು ಮಕ್ಕಳ ಹಕ್ಕು”
“ಆಧ್ಯಾತ್ಮಿಕ ಬೆಳವಣಿಗೆಯು ಮಕ್ಕಳ ಹಕ್ಕು”
ಡಿಸೆಂಬರ್ 9, 2008ರಂದು ಮಕ್ಕಳ ಹಕ್ಕುಗಳ ಪರವಾಗಿ ಸ್ವೀಡಿಷ್ ಅಕ್ಯಾಡಮಿಯು ಒಂದು ಅದ್ವಿತೀಯ ಸೆಮಿನಾರನ್ನು ಆಯೋಜಿಸಿತು. ಅದರ ಮುಖ್ಯ ವಿಷಯವು, “ಆಧ್ಯಾತ್ಮಿಕ ಬೆಳವಣಿಗೆಯು ಮಕ್ಕಳ ಹಕ್ಕು” ಎಂದಾಗಿತ್ತು. ಆ ಸೆಮಿನಾರಿನಲ್ಲಿ ಚರ್ಚ್ ಆಫ್ ಸ್ವೀಡನ್, ಕ್ರೈಸ್ತಪ್ರಪಂಚದ ಇತರ ಪಂಗಡಗಳು, ಇಸ್ಲಾಮ್ ಮತ್ತು ಮಾನವಾಸಕ್ತ ಚಟುವಟಿಕೆಯನ್ನು ಪ್ರತಿನಿಧಿಸುವ ಭಾಷಣಕಾರರಿಂದ ಅನೇಕ ಅಭಿಪ್ರಾಯಗಳು ನೀಡಲ್ಪಟ್ಟವು.
ಆ ಭಾಷಣಕಾರರಲ್ಲಿ ಒಬ್ಬರು ಪಾದ್ರಿಯಾಗಿದ್ದರು. ಅವರಂದದ್ದು: “ಮಕ್ಕಳ ಆಧ್ಯಾತ್ಮಿಕತೆಗೆ ಬೈಬಲಿನ ವೃತ್ತಾಂತಗಳು ಕೊಡುವ ಪ್ರಾಮುಖ್ಯತೆಯನ್ನು ಯಾರೂ ಸರಿಯಾಗಿ ಹಾಗೂ ತೃಪ್ತಿಕರವಾಗಿ ವರ್ಣಿಸುವುದು ಕಷ್ಟಕರ.” ಮಕ್ಕಳ ಆಧ್ಯಾತ್ಮಿಕ ಅಗತ್ಯಗಳನ್ನು ಬೈಬಲಿನ ವೃತ್ತಾಂತಗಳು ಹೇಗೆ ಪೂರೈಸುತ್ತವೆ?
“ಬೈಬಲಿನ ವಚನಗಳು ಮತ್ತು ವೃತ್ತಾಂತಗಳು ಮಕ್ಕಳ ಸ್ವಂತ ಪರ್ಯಾಲೋಚನೆ ಮತ್ತು ಮನನಕ್ಕೆ ಬೇಕಾದ ಮಾಹಿತಿಯನ್ನು ಒದಗಿಸುತ್ತವೆ” ಎಂದು ಆ ಪಾದ್ರಿ ಹೇಳಿದರು. ಅವರು “ಆದಾಮಹವ್ವ, ಕಾಯಿನ ಹೇಬೆಲ, ದಾವೀದ ಗೊಲ್ಯಾತ, ಯೇಸುವಿನ ಜನನ, ಸುಂಕ ವಸೂಲಿಗಾರ ಜಕ್ಕಾಯ ಮುಂತಾದ ಕಥೆಗಳನ್ನು, ಪೋಲಿಹೋದ ಮಗ, ಒಳ್ಳೇ ನೆರೆಯವನಾದ ಸಮಾರ್ಯದವನು ಮುಂತಾದ ಸಾಮ್ಯಗಳನ್ನು ಕೆಲವು ಮಾದರೀ ವೃತ್ತಾಂತಗಳಾಗಿ” ಪಟ್ಟಿಮಾಡಿದರು. ಇವು “ಯೋಚನಾಶಕ್ತಿಯುಳ್ಳ [ಮಗುವನ್ನು] ಮಾನವ ಜೀವಿತದಲ್ಲಿ ಬರುವ ಪ್ರಾಮುಖ್ಯ ವಿಷಯಗಳಾದ ವಿಶ್ವಾಸಘಾತ, ಕ್ಷಮಾಶೀಲತೆ, ದೋಷ ಪರಿಹಾರ, ದ್ವೇಷ, ಅವನತಿ, ಸಂಧಾನ, ಸಹೋದರ ಮತ್ತು ನಿಸ್ವಾರ್ಥ ಪ್ರೀತಿ ಮುಂತಾದ ವಿಷಯಗಳಲ್ಲಿ ಮಾರ್ಗದರ್ಶಿಸಬಲ್ಲ ಮಾದರಿಗಳಾಗಿ” ಉಲ್ಲೇಖಿಸಲ್ಪಟ್ಟವು. ಅವರು ಮತ್ತೂ ಹೇಳಿದ್ದು: “ಈ ವಚನಗಳು ಒಬ್ಬನ ಜೀವಿತದಲ್ಲಿ ಅನುಸರಿಸಸಾಧ್ಯವಿರುವ ಮಾದರಿಗಳನ್ನು ನೀಡಿ, ಕ್ರಿಯೆಗಳಾಗಿ ಮಾರ್ಪಟ್ಟು, ವ್ಯಾವಹಾರಿಕ ಅನುಭವಗಳಾಗಸಾಧ್ಯವಿದೆ.”
ಮಗುವನ್ನು ಬೈಬಲ್ ಓದುವಂತೆ ಉತ್ತೇಜಿಸುವುದು ನಿಜವಾಗಿಯೂ ಒಳ್ಳೇ ವಿಷಯವೇ. ಆದರೆ ಮಕ್ಕಳು ತಾವು ಬೈಬಲಿನಲ್ಲಿ ಓದಿದ ವಿಷಯದ ಕುರಿತು “ಸ್ವಂತ ಪರ್ಯಾಲೋಚನೆ ಮತ್ತು ಮನನ” ಮಾಡಿ ಸರಿಯಾದ ತೀರ್ಮಾನಕ್ಕೆ ಬರಲು ನಿಜವಾಗಿ ಶಕ್ತರೊ?
ವಯಸ್ಕರಿಗೆ ಸಹ ಬೈಬಲ್ ಭಾಗಗಳನ್ನು ವಿವರಿಸಿ ಹೇಳುವ ಅಗತ್ಯವಿರುತ್ತದೆ. ಉದಾಹರಣೆಗೆ, ‘ಸ್ವಂತ ಪರ್ಯಾಲೋಚನೆ ಮತ್ತು ಮನನದ’ ಮೂಲಕ ನಿಜ ಆಧ್ಯಾತ್ಮಿಕತೆಯನ್ನು ಪಡೆಯಲು ಅಶಕ್ತನಾದ ಒಬ್ಬ ವ್ಯಕ್ತಿಯ ಕುರಿತು ಬೈಬಲ್ ಹೇಳುತ್ತದೆ. ಅವನು ಇಥಿಯೋಪ್ಯದ ಒಬ್ಬ ಅಧಿಕಾರಿಯಾಗಿದ್ದನು. ಯೆಶಾಯನ ಪ್ರವಾದನೆಯನ್ನು ಅವನು ಓದುತ್ತಿದ್ದನು, ಆದರೆ ಅದರ ಅರ್ಥವನ್ನು ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ. ಆ ಪ್ರವಾದಿಯ ಸಂದೇಶವನ್ನು ಅರ್ಥಮಾಡಿಕೊಳ್ಳಲು ಬಯಸಿದ್ದರಿಂದ ಶಿಷ್ಯ ಫಿಲಿಪ್ಪನು ನೀಡಿದ ವಿವರಣೆಯನ್ನು ಅವನು ಸ್ವೀಕರಿಸಿದನು. (ಅ. ಕಾ. 8:26-40) ಅಂಥ ಅಗತ್ಯವಿದ್ದದ್ದು ಆ ಇಥಿಯೋಪ್ಯದವನಿಗೆ ಮಾತ್ರ ಅಲ್ಲ. ನಮಗೆಲ್ಲರಿಗೂ, ಅದರಲ್ಲೂ ಮುಖ್ಯವಾಗಿ ಮಕ್ಕಳಿಗೆ ಬೈಬಲಿನ ಭಾಗಗಳ ಅರ್ಥ ವಿವರಿಸಿ ಹೇಳುವ ಅಗತ್ಯವಿದೆ.
“ಮೂರ್ಖತನವು ಹುಡುಗನ ಮನಸ್ಸಿಗೆ ಸಹಜ” ಎಂದು ಬೈಬಲ್ ಎಚ್ಚರಿಸುತ್ತದೆ. (ಜ್ಞಾನೋ. 22:15) ಮಕ್ಕಳಿಗೆ ಮಾರ್ಗದರ್ಶನೆ, ನಿರ್ದೇಶನದ ಅಗತ್ಯವಿದೆ. ದೇವರ ವಾಕ್ಯದಲ್ಲಿ ಹಾಗೂ ಕ್ರೈಸ್ತ ಕೂಟಗಳಲ್ಲಿ ತಿಳಿಸಿದ ವಿಷಯಗಳಲ್ಲಿ ಆಧಾರಿತವಾದ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ತಮ್ಮ ಮಕ್ಕಳಿಗೆ ಕೊಡುವ ಜವಾಬ್ದಾರಿಕೆ ಹೆತ್ತವರದ್ದು. ಅಂಥ ತರಬೇತಿಯನ್ನು ಪಡೆಯುವ ಹಕ್ಕು ಮಕ್ಕಳಿಗಿದೆ. ಆಧ್ಯಾತ್ಮಿಕ ಬೆಳವಣಿಗೆಗಾಗಿ ಬೈಬಲಿನ ದೃಢ ಅಸ್ತಿವಾರವನ್ನು ಕಟ್ಟಲು ಅವರಿಗೆ ಚಿಕ್ಕಂದಿನಿಂದಲೇ ಸಹಾಯ ಬೇಕು. ಈ ಮೂಲಕ ಅವರು ‘ಸರಿ ಮತ್ತು ತಪ್ಪಿನ ಭೇದವನ್ನು ತಿಳಿಯಲಿಕ್ಕಾಗಿ ಉಪಯೋಗದ ಮೂಲಕ ತಮ್ಮ ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸಿದ ಪ್ರೌಢರಾಗುವರು.’—ಇಬ್ರಿ. 5:14.