ನೀವು ಯೆಹೋವನನ್ನು ನಿಮ್ಮ ತಂದೆಯಾಗಿ ವೀಕ್ಷಿಸುತ್ತೀರೊ?
ನೀವು ಯೆಹೋವನನ್ನು ನಿಮ್ಮ ತಂದೆಯಾಗಿ ವೀಕ್ಷಿಸುತ್ತೀರೊ?
‘ಕರ್ತನೇ, ನಮಗೆ ಪ್ರಾರ್ಥನೆಮಾಡುವುದನ್ನು ಕಲಿಸು’ ಎಂದು ಶಿಷ್ಯರಲ್ಲಿ ಒಬ್ಬನು ವಿನಂತಿಸಿಕೊಂಡಾಗ ಯೇಸು ಉತ್ತರಿಸಿದ್ದು: ‘ನೀವು ಪ್ರಾರ್ಥನೆಮಾಡುವಾಗ “ತಂದೆಯೇ, ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ” ಎಂದು ಹೇಳಿರಿ.’ (ಲೂಕ 11:1-4) ಯೇಸುವು ಯೆಹೋವನನ್ನು “ಸರ್ವಶಕ್ತ,” “[ಮಹಾನ್] ಬೋಧಕ,” ‘ನಿರ್ಮಾಣಿಕ,’ “ಮಹಾವೃದ್ಧ,” “ನಿತ್ಯತೆಯ ಅರಸ” ಎಂಬಂಥ ಭಾವಪ್ರಚೋದಕ ಬಿರುದುಗಳಿಂದ ಸಂಬೋಧಿಸಬಹುದಿತ್ತು. (ಆದಿ. 49:25; ಯೆಶಾ. 30:20; 40:28; ದಾನಿ. 7:9; 1 ತಿಮೊ. 1:17) ಅದಕ್ಕೆ ಬದಲಾಗಿ ಅವನು ಯೆಹೋವನನ್ನು “ತಂದೆ” ಎಂದು ಕರೆದನು. ಏಕೆ? ಏಕೆಂದರೆ ಒಂದು ಚಿಕ್ಕ ಮಗುವು ತನ್ನ ಪ್ರೀತಿಯ ತಂದೆಯ ಬಳಿಸಾರುವ ರೀತಿಯಲ್ಲಿ ವಿಶ್ವದಲ್ಲೇ ಅತಿ ದೊಡ್ಡ ವ್ಯಕ್ತಿಯನ್ನು ನಾವು ಸಮೀಪಿಸಬೇಕೆಂದು ಯೇಸು ಪ್ರಾಯಶಃ ಬಯಸುತ್ತಾನೆ.
ಕೆಲವರಿಗಾದರೋ ದೇವರನ್ನು ತಂದೆಯಾಗಿ ನೆನಸುವುದು ಕಷ್ಟ. ಅನಿತಾ * ಎಂಬ ಕ್ರೈಸ್ತಳು ಒಪ್ಪಿಕೊಳ್ಳುವುದು: “ದೀಕ್ಷಾಸ್ನಾನ ಪಡೆದುಕೊಂಡು ಅನೇಕ ವರ್ಷಗಳ ವರೆಗೆ ನನಗೆ ಯೆಹೋವನೊಂದಿಗೆ ಆಪ್ತತೆಯನ್ನು ಬೆಳೆಸಿಕೊಳ್ಳುವುದು ಮತ್ತು ತಂದೆ ಎಂಬ ಭಾವನೆಯೊಂದಿಗೆ ಆತನಿಗೆ ಪ್ರಾರ್ಥಿಸುವುದು ಕಷ್ಟಕರವಾಗಿತ್ತು.” ತನ್ನ ಈ ಹೋರಾಟಕ್ಕೆ ಒಂದು ಕಾರಣವನ್ನು ಕೊಡುತ್ತಾ ಅವಳಂದದ್ದು: “ನನ್ನ ಸ್ವಂತ ತಂದೆ ನನಗೆ ಒಮ್ಮೆಯಾದರೂ ಪ್ರೀತಿ ತೋರಿಸಿದ ಸಮಯ ನನಗೆ ನೆನಪಿಲ್ಲ.”
ಮಕ್ಕಳು ಸಹಜವಾಗಿ ತಮ್ಮ ತಂದೆಯಿಂದ ಬಯಸುವ “ಸ್ವಾಭಾವಿಕ ಮಮತೆ” ಈ ಕಠಿನಕರ ಕಡೇ ದಿವಸಗಳಲ್ಲಿ ತುಂಬ ಕಡಿಮೆ. (2 ತಿಮೊ. 3:1, 3) ಆದುದರಿಂದ ಅನಿತಾಗೆ ಆದಂಥ ಅನಿಸಿಕೆ ಅನೇಕರಿಗೆ ಆಗುವುದು ಅಸಾಮಾನ್ಯವೇನಲ್ಲ. ಆದರೆ ನಾವು ಸಾಂತ್ವನ ಪಡೆದುಕೊಳ್ಳಸಾಧ್ಯವಿದೆ. ಏಕೆಂದರೆ ಯೆಹೋವನನ್ನು ನಮ್ಮ ಪ್ರೀತಿಯ ತಂದೆಯಾಗಿ ವೀಕ್ಷಿಸಲು ನಮಗೆ ಸಕಾರಣಗಳಿವೆ.
ಪ್ರೀತಿಯ ದಾತನಾದ ಯೆಹೋವನು
ನಾವು ಯೆಹೋವನನ್ನು ನಮ್ಮ ತಂದೆಯಾಗಿ ವೀಕ್ಷಿಸಬೇಕಾದರೆ ಆತನ ಉತ್ತಮ ಪರಿಚಯವನ್ನು ಮಾಡಿಕೊಳ್ಳಬೇಕು. ಯೇಸು ಹೇಳಿದ್ದು: “ತಂದೆಯ ಹೊರತು ಮಗನನ್ನು ಯಾವನೂ ಪೂರ್ಣವಾಗಿ ತಿಳಿದಿರುವುದಿಲ್ಲ; ಅಂತೆಯೇ ಮಗನ ಹೊರತು ಮತ್ತು ಮಗನು ಯಾರಿಗೆ ಆತನನ್ನು ತಿಳಿಯಪಡಿಸಲು ಇಷ್ಟಪಡುತ್ತಾನೊ ಅವನ ಹೊರತು ಯಾರೂ ಆತನನ್ನು ತಿಳಿದಿರುವುದಿಲ್ಲ.” (ಮತ್ತಾ. 11:27) ತಂದೆಯೋಪಾದಿ ಯೆಹೋವನು ಯಾವ ರೀತಿಯ ವ್ಯಕ್ತಿಯೆಂಬುದನ್ನು ತಿಳಿಯುವ ಅತ್ಯುತ್ತಮ ವಿಧವು ಆತನ ಕುರಿತು ಯೇಸು ತಿಳಿಯಪಡಿಸಿದ್ದನ್ನು ಪರ್ಯಾಲೋಚಿಸುವುದೇ ಆಗಿದೆ. ಯೇಸು ತನ್ನ ತಂದೆಯ ಕುರಿತು ಏನನ್ನು ತಿಳಿಯಪಡಿಸಿದನು?
ಯೆಹೋವನು ತನ್ನ ಜೀವದ ಮೂಲನೆಂಬುದನ್ನು ಒಪ್ಪಿಕೊಳ್ಳುತ್ತಾ ಯೇಸು ಹೇಳಿದ್ದು: ‘ತಂದೆಯ ನಿಮಿತ್ತವಾಗಿ ನಾನು ಜೀವಿಸುತ್ತೇನೆ.’ (ಯೋಹಾ. 6:57) ನಾವು ಅಸ್ತಿತ್ವದಲ್ಲಿರುವುದಕ್ಕೂ ಆ ತಂದೆಯೇ ಕಾರಣ. (ಕೀರ್ತ. 36:9; ಅ. ಕಾ. 17:28) ಇತರರಿಗೆ ಜೀವವನ್ನು ಕೊಡುವಂತೆ ಯೆಹೋವನನ್ನು ಪ್ರಚೋದಿಸಿದ್ದು ಯಾವುದು? ಪ್ರೀತಿಯೇ ಅಲ್ಲವೆ? ಅಂಥ ಉಡುಗೊರೆಯನ್ನು ಕೊಟ್ಟದ್ದಕ್ಕಾಗಿ ನಾವು ಸಹ ನಮ್ಮ ಸ್ವರ್ಗೀಯ ತಂದೆಯನ್ನು ಪ್ರತಿಯಾಗಿ ಪ್ರೀತಿಸಬೇಕು.
ಮಾನವಕುಲಕ್ಕಾಗಿ ಯೇಸುವಿನ ವಿಮೋಚನಾ ಮೌಲ್ಯ ಯಜ್ಞದ ಏರ್ಪಾಡನ್ನು ಮಾಡಿದ್ದು ದೇವರ ಪ್ರೀತಿಯ ಮಹತ್ತಮ ಪ್ರದರ್ಶನ. ಪ್ರೀತಿಯ ಈ ಏರ್ಪಾಡು ಪಾಪಿಗಳಾದ ಮಾನವರು ಆತನ ಪ್ರಿಯ ಕುಮಾರನ ಮೂಲಕ ಯೆಹೋವನೊಂದಿಗೆ ಆಪ್ತ ಸಂಬಂಧ ಹೊಂದುವುದನ್ನು ಸಾಧ್ಯಗೊಳಿಸುತ್ತದೆ. (ರೋಮ. 5:12; 1 ಯೋಹಾ. 4:9, 10) ಮಾತ್ರವಲ್ಲದೆ ನಮ್ಮ ಸ್ವರ್ಗೀಯ ತಂದೆಯು ವಾಗ್ದಾನಗಳನ್ನು ನೆರವೇರಿಸುವ ದೇವರಾಗಿದ್ದಾನೆ. ಆದ್ದರಿಂದ ಆತನನ್ನು ಪ್ರೀತಿಸಿ ಆತನಿಗೆ ವಿಧೇಯರಾಗುವವರೆಲ್ಲರು ಕಾಲಕ್ರಮೇಣ ‘ದೇವರ ಮಕ್ಕಳ ಮಹಿಮಾಭರಿತ ಸ್ವಾತಂತ್ರ್ಯದಲ್ಲಿ’ ಆನಂದಿಸುವರು ಎಂಬ ಭರವಸೆಯು ನಮಗಿರಸಾಧ್ಯವಿದೆ.—ರೋಮ. 8:21.
ನಮ್ಮ ಸ್ವರ್ಗೀಯ ತಂದೆ ಪ್ರತಿದಿನ ನಮ್ಮ ಮೇಲೆ ‘ತನ್ನ ಸೂರ್ಯನು ಉದಯಿಸುವಂತೆಯೂ ಮಾಡುತ್ತಾನೆ.’ (ಮತ್ತಾ. 5:45) ಸೂರ್ಯನು ಉದಯಿಸುವುದಕ್ಕಾಗಿ ನಾವೇನು ಪ್ರಾರ್ಥಿಸಬೇಕೆಂದಿಲ್ಲ. ಆದರೂ ಸೂರ್ಯನ ಸುಖೋಷ್ಣ ಕಿರಣಗಳನ್ನು ನಾವೆಷ್ಟು ಆನಂದಿಸುತ್ತೇವೆ ಮತ್ತು ಅವು ನಮಗೆಷ್ಟು ಅವಶ್ಯಕ! ಅಷ್ಟುಮಾತ್ರವಲ್ಲದೆ ನಮ್ಮ ತಂದೆಯು ಅಪ್ರತಿಮ ದಾತನು. ನಮ್ಮ ಭೌತಿಕ ಅಗತ್ಯಗಳನ್ನು ನಾವು ಕೇಳುವುದಕ್ಕೆ ಮುಂಚೆಯೇ ಅರಿತಿರುತ್ತಾನೆ. ಆದ್ದರಿಂದ ನಮ್ಮ ಸ್ವರ್ಗೀಯ ತಂದೆಯು ತನ್ನ ಸೃಷ್ಟಿಜೀವಿಗಳನ್ನು ಹೇಗೆ ಸಾಕಿ ಸಲಹುತ್ತಾನೆಂಬುದಕ್ಕೆ ಗಮನಕೊಡುತ್ತಾ ಅದರ ಕುರಿತು ಗಣ್ಯತಾಭಾವದಿಂದ ಪರ್ಯಾಲೋಚಿಸಬೇಕಲ್ಲವೆ?—ಮತ್ತಾ. 6:8, 26.
‘ಕೋಮಲ ಸಂರಕ್ಷಕನಾದ’ ನಮ್ಮ ತಂದೆ
ಯೆಶಾಯನ ಪ್ರವಾದನೆಯು ಪ್ರಾಚೀನಕಾಲದ ದೇವಜನರಿಗೆ, “ಬೆಟ್ಟಗಳು ಸ್ಥಳವನ್ನು ಬಿಟ್ಟುಹೋದಾವು, ಗುಡ್ಡಗಳು ಯೆಶಾ. 54:10, ದ ಬೈಬಲ್ ಇನ್ ಲಿವಿಂಗ್ ಇಂಗ್ಲಿಷ್) ತನ್ನ ಭೂಜೀವನದ ಕೊನೆಯ ರಾತ್ರಿಯಂದು ಯೇಸು ಮಾಡಿದ ಪ್ರಾರ್ಥನೆಯು ಯೆಹೋವನು ನಿಜಕ್ಕೂ ‘ಕೋಮಲ ಸಂರಕ್ಷಕನಾಗಿದ್ದಾನೆ’ ಎಂಬ ಅಂಶವನ್ನು ದೃಢೀಕರಿಸಿತು. ಆಗ ತನ್ನ ಶಿಷ್ಯರ ಕುರಿತು ಯೇಸು ಬೇಡಿದ್ದು: “ಇವರು ಲೋಕದಲ್ಲಿ ಇರುತ್ತಾರೆ; ನಾನು ನಿನ್ನ ಬಳಿಗೆ ಬರುತ್ತಿದ್ದೇನೆ. ಪವಿತ್ರನಾದ ತಂದೆಯೇ, . . . ನಿನ್ನ ಸ್ವಂತ ಹೆಸರಿನ ನಿಮಿತ್ತವಾಗಿ ಇವರನ್ನು ಕಾಯಿ.” (ಯೋಹಾ. 17:11, 14) ಯೆಹೋವನು ಯೇಸುವಿನ ಹಿಂಬಾಲಕರನ್ನು ನಿಜವಾಗಿಯೂ ಕಾದು ಸಂರಕ್ಷಿಸಿದ್ದಾನೆ.
ಕದಲಿಯಾವು; ಆದರೆ ನನ್ನ ಸ್ನೇಹವು ನಿನ್ನನ್ನು ಎಂದಿಗೂ ಬಿಟ್ಟುಹೋಗದು, ಸಮಾಧಾನದ ನನ್ನ ಒಪ್ಪಂದವು ಕದಲದು ಎಂದು ನಿನ್ನ ಕೋಮಲ ಸಂರಕ್ಷಕನಾದ ಯೆಹೋವನು ಅನ್ನುತ್ತಾನೆ” ಎಂಬ ಆಶ್ವಾಸನೆಯನ್ನು ಕೊಟ್ಟಿತು. (ಇಂದು ದೇವರು ನಮ್ಮನ್ನು ಸೈತಾನನ ತಂತ್ರಗಳಿಂದ ಸಂರಕ್ಷಿಸುವ ಒಂದು ವಿಧವು ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ’ ಮುಖಾಂತರ ಸಮಯೋಚಿತ ಆಧ್ಯಾತ್ಮಿಕ ಆಹಾರವನ್ನು ಒದಗಿಸುವ ಮೂಲಕವೇ. (ಮತ್ತಾ. 24:45) ‘ದೇವರು ದಯಪಾಲಿಸುವ ಸಂಪೂರ್ಣ ರಕ್ಷಾಕವಚವನ್ನು ನಾವು ಧರಿಸಿಕೊಳ್ಳಬೇಕಾದರೆ’ ಆ ಬಲವರ್ಧಕ ಆಹಾರವನ್ನು ತೆಗೆದುಕೊಳ್ಳುವುದು ಅವಶ್ಯ. ಉದಾಹರಣೆಗೆ, “ನಂಬಿಕೆಯೆಂಬ ದೊಡ್ಡ ಗುರಾಣಿಯನ್ನು” ಪರಿಗಣಿಸಿರಿ. ಇದರ ಸಹಾಯದಿಂದ ನಾವು ‘ಕೆಡುಕನ ಅಗ್ನಿಬಾಣಗಳನ್ನೆಲ್ಲಾ ಆರಿಸಲು ಶಕ್ತರಾಗುವೆವು.’ (ಎಫೆ. 6:11, 16) ನಾವು ತೋರಿಸುವ ನಂಬಿಕೆಯು ನಮ್ಮನ್ನು ಆಧ್ಯಾತ್ಮಿಕ ಹಾನಿಯಿಂದ ಕಾಪಾಡುತ್ತದೆ ಮತ್ತು ನಮ್ಮ ತಂದೆಯ ಸಂರಕ್ಷಣಾತ್ಮಕ ಶಕ್ತಿಯನ್ನು ಮಾನ್ಯಮಾಡುತ್ತೇವೆ ಎಂಬುದನ್ನು ತೋರಿಸುತ್ತದೆ.
ದೇವರ ಮಗನು ಭೂಮಿಯಲ್ಲಿದ್ದಾಗ ನಡೆದುಕೊಂಡ ರೀತಿಯನ್ನು ನಿಕಟವಾಗಿ ಪರಿಗಣಿಸುವ ಮೂಲಕ ನಮ್ಮ ಸ್ವರ್ಗೀಯ ತಂದೆಯ ಕೋಮಲತೆಯ ಕುರಿತು ನಾವು ಇನ್ನೂ ಹೆಚ್ಚಿನ ಒಳನೋಟ ಪಡೆಯಬಲ್ಲೆವು. ಮಾರ್ಕ 10:13-16ರಲ್ಲಿರುವ ವೃತ್ತಾಂತವನ್ನು ಗಮನಿಸಿ. ಅಲ್ಲಿ ಯೇಸು, “ಚಿಕ್ಕ ಮಕ್ಕಳನ್ನು ನನ್ನ ಬಳಿಗೆ ಬರಗೊಡಿಸಿರಿ” ಎಂದು ತನ್ನ ಶಿಷ್ಯರಿಗೆ ಹೇಳುವುದನ್ನು ಉಲ್ಲೇಖಿಸಲಾಗಿದೆ. ಆ ಪುಟ್ಟ ಮಕ್ಕಳು ಬಂದು ಯೇಸುವಿನ ಸುತ್ತಲೂ ನಿಂತಾಗ ಅವನು ಅವರನ್ನು ಅಕ್ಕರೆಯಿಂದ ಅಪ್ಪಿಹಿಡಿದು ಆಶೀರ್ವದಿಸಿದನು. ಆಗ ಆ ಮಕ್ಕಳ ಮುದ್ದು ಮುಖಗಳು ಎಷ್ಟು ಸಂತೋಷದಿಂದ ಅರಳಿದ್ದಿರಬೇಕು! ಯೇಸುವು “ನನ್ನನ್ನು ನೋಡಿದವನು ನನ್ನ ತಂದೆಯನ್ನೂ ನೋಡಿದ್ದಾನೆ” ಎಂದು ಹೇಳಿರುವುದರಿಂದ, ಜನರು ತನ್ನ ಬಳಿಗೆ ಬರಬೇಕೆಂದು ಯೇಸು ಬಯಸಿದಂತೆಯೇ ನಾವು ಆತನ ಹತ್ತಿರಕ್ಕೆ ಬರಬೇಕೆಂದು ಸತ್ಯ ದೇವರು ಬಯಸುತ್ತಾನೆಂಬುದು ನಮಗೆ ತಿಳಿದಿದೆ.—ಯೋಹಾ. 14:9.
ಯೆಹೋವ ದೇವರು ಅನಂತ ಪ್ರೀತಿಯ ಚಿಲುಮೆಯಾಗಿದ್ದಾನೆ. ಆತನು ಅಪ್ರತಿಮ ದಾತನೂ ನಾವಾತನ ಸಮೀಪಕ್ಕೆ ಬರಬೇಕೆಂದು ಬಯಸುವ ಅಸದೃಶ ಸಂರಕ್ಷಕನೂ ಆಗಿದ್ದಾನೆ. (ಯಾಕೋ. 4:8) ಆದ್ದರಿಂದ ಊಹಿಸಸಾಧ್ಯವಿರುವ ಅತ್ಯುತ್ತಮ ತಂದೆ ಯೆಹೋವನೆಂಬುದರಲ್ಲಿ ಯಾವ ಸಂಶಯವೂ ಇಲ್ಲ!
ಪ್ರಯೋಜನ ಹೊಂದುವ ವಿಧ
ನಮ್ಮ ಪ್ರೀತಿಯ ಹಾಗೂ ಕೋಮಲ ಸ್ವರ್ಗೀಯ ತಂದೆಯಾದ ಆತನಲ್ಲಿ ಭರವಸೆಯಿಡುವುದರಿಂದ ನಾವು ಬಹಳ ಪ್ರಯೋಜನ ಹೊಂದುತ್ತೇವೆ. (ಜ್ಞಾನೋ. 3:5, 6) ತನ್ನ ತಂದೆಯಲ್ಲಿ ಪೂರ್ಣ ಭರವಸೆಯಿಡುವ ಮೂಲಕ ಯೇಸು ಪ್ರಯೋಜನ ಹೊಂದಿದನು. “ನಾನು ಒಂಟಿಯಾಗಿಲ್ಲ, ನನ್ನನ್ನು ಕಳುಹಿಸಿದ ತಂದೆಯು ನನ್ನೊಂದಿಗಿದ್ದಾನೆ” ಎಂದು ಕ್ರಿಸ್ತನು ತನ್ನ ಶಿಷ್ಯರಿಗೆ ಹೇಳಿದನು. (ಯೋಹಾ. 8:16) ಯೆಹೋವನು ತನಗೆ ಯಾವಾಗಲೂ ಬೆಂಬಲ ನೀಡುತ್ತಾನೆಂಬ ನಿಶ್ಚಯತೆ ಯೇಸುವಿನಲ್ಲಿತ್ತು. ಉದಾಹರಣೆಗೆ, ಅವನ ದೀಕ್ಷಾಸ್ನಾನದ ಸಮಯದಲ್ಲಿ ಅವನ ತಂದೆಯು ಪ್ರೀತಿಪರ ಆಶ್ವಾಸನೆಯನ್ನು ಕೊಡುತ್ತಾ ಘೋಷಿಸಿದ್ದು: “ಇವನು ಪ್ರಿಯನಾಗಿರುವ ನನ್ನ ಮಗನು; ಇವನನ್ನು ನಾನು ಮೆಚ್ಚಿದ್ದೇನೆ.” (ಮತ್ತಾ. 3:15-17) ತಾನು ಸಾಯುವ ಕೆಲವೇ ಕ್ಷಣಗಳ ಮೊದಲು ಯೇಸು, “ತಂದೆಯೇ, ನಿನ್ನ ಕೈಗಳಿಗೆ ನನ್ನ ಜೀವಶಕ್ತಿಯನ್ನು ಒಪ್ಪಿಸುತ್ತೇನೆ” ಎಂದು ಕೂಗಿಹೇಳಿದನು. (ಲೂಕ 23:46) ಆ ಸಮಯದಲ್ಲೂ ಯೇಸುವಿಗೆ ತನ್ನ ತಂದೆಯ ಮೇಲೆ ಎಂದಿನಂತೆ ದೃಢವಾದ ಭರವಸೆಯಿತ್ತು.
ಇದು ನಮ್ಮ ವಿಷಯದಲ್ಲೂ ನಿಜವಾಗಿರಸಾಧ್ಯವಿದೆ. ಯೆಹೋವನು ನಮಗಿರುವಾಗ ನಾವೇಕೆ ಭಯಪಡಬೇಕು? (ಕೀರ್ತ. 118:6) ಈ ಮೊದಲು ತಿಳಿಸಿದ ಅನಿತಾಗೆ ಸಮಸ್ಯೆಗಳು ಬಂದಾಗ ತನ್ನ ಸ್ವಂತ ಶಕ್ತಿಯ ಮೇಲೆ ಆತುಕೊಳ್ಳುವುದು ರೂಢಿಯಾಗಿ ಹೋಗಿತ್ತು. ಆದರೆ ನಂತರ ಅವಳು ಯೇಸುವಿನ ಜೀವನ ಮತ್ತು ಶುಶ್ರೂಷೆಯ ಕುರಿತು ಅಧ್ಯಯನ ಮಾಡಲು ಪ್ರಾರಂಭಿಸಿದಳು. ಮುಖ್ಯವಾಗಿ ಯೇಸುವಿಗೆ ತನ್ನ ಸ್ವರ್ಗೀಯ ತಂದೆಯೊಂದಿಗಿದ್ದ ಆಪ್ತ ಸಂಬಂಧದ ಮೇಲೆ ಅವಳು ಗಮನ ಕೇಂದ್ರೀಕರಿಸಿದಳು. ಫಲಿತಾಂಶ? “ನಾವು ಆತುಕೊಳ್ಳಸಾಧ್ಯವಿರುವ ತಂದೆಯೊಬ್ಬನು ನಮಗಿರುವುದು ಅದೆಷ್ಟು ಒಳ್ಳೆಯದು ಎಂದು ನಾನು ಕಲಿತುಕೊಂಡೆ” ಎನ್ನುತ್ತಾಳೆ ಅನಿತಾ. ಅವಳು ಮತ್ತೂ ಹೇಳುವುದು: “ನಿಜವಾದ ನೆಮ್ಮದಿ ಮತ್ತು ಸಂತೋಷವನ್ನು ನಾನು ಅನುಭವಿಸಿದೆ. ನಿಜಕ್ಕೂ ನಾವು ಯಾವ ವಿಷಯದ ಕುರಿತೂ ಚಿಂತೆಪಡುವ ಅವಶ್ಯಕತೆಯೇ ಇಲ್ಲ.”
ಯೆಹೋವನನ್ನು ನಮ್ಮ ತಂದೆಯಾಗಿ ವೀಕ್ಷಿಸುವುದರಿಂದ ನಾವು ಹೇಗೆ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತೇವೆ? ಮಕ್ಕಳು ಸಹಜವಾಗಿ ತಮ್ಮ ಹೆತ್ತವರನ್ನು ಪ್ರೀತಿಸುತ್ತಾರೆ, ಅವರನ್ನು ಮೆಚ್ಚಿಸಲು ಬಯಸುತ್ತಾರೆ. ತನ್ನ ತಂದೆಯ ಮೇಲಣ ಪ್ರೀತಿಯಿಂದಾಗಿ ದೇವರ ಮಗನು ‘ಯಾವಾಗಲೂ ಆತನಿಗೆ ಮೆಚ್ಚಿಕೆಯಾಗಿರುವುದನ್ನೇ ಮಾಡಿದನು.’ (ಯೋಹಾ. 8:29) ಅದೇ ರೀತಿಯಾಗಿ, ನಮ್ಮ ಸ್ವರ್ಗೀಯ ತಂದೆಯ ಮೇಲೆ ನಮಗಿರುವ ಪ್ರೀತಿಯು ನಾವು ವಿವೇಕದಿಂದ ಕ್ರಿಯೆಗೈಯುವಂತೆ ಹಾಗೂ ಆತನನ್ನು ‘ಬಹಿರಂಗವಾಗಿ ಕೊಂಡಾಡುವಂತೆ’ ನಮ್ಮನ್ನು ಪ್ರಚೋದಿಸಬಲ್ಲದು.—ಮತ್ತಾ. 11:25; ಯೋಹಾ. 5:19.
‘ಕೈಹಿಡಿದು’ ನಡೆಸುವ ತಂದೆ
ನಮ್ಮ ಸ್ವರ್ಗೀಯ ತಂದೆಯು “ಸಹಾಯಕನನ್ನು” ಅಂದರೆ ತನ್ನ ಪವಿತ್ರಾತ್ಮವನ್ನೂ ನಮಗೆ ಕೊಟ್ಟಿದ್ದಾನೆ. ಅದು ‘ನಿಮ್ಮನ್ನು ಮಾರ್ಗದರ್ಶಿಸಿ ನೀವು ಸತ್ಯವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವಂತೆ ನಿಮಗೆ ಸಹಾಯಮಾಡುವುದು’ ಎಂದು ಯೇಸು ಹೇಳಿದನು. (ಯೋಹಾ. 14:15-17; 16:12, 13) ನಮ್ಮ ತಂದೆಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳುವಂತೆ ದೇವರ ಪವಿತ್ರಾತ್ಮವು ನಮ್ಮನ್ನು ನಡೆಸಬಲ್ಲದು. ಅದು “ಬಲವಾಗಿ ಬೇರೂರಿರುವ ವಿಷಯಗಳನ್ನು” ಅಂದರೆ ಪೂರ್ವಕಲ್ಪಿತ ಅಭಿಪ್ರಾಯಗಳು, ತಪ್ಪು ವಿಚಾರಗಳು ಅಥವಾ ವಕ್ರ ದೃಷ್ಟಿಕೋನಗಳನ್ನು ಕೆಡವಿಹಾಕಲು ಸಹಾಯಮಾಡಬಲ್ಲದು. ಆ ಮೂಲಕ ಅದು ‘ಪ್ರತಿಯೊಂದು ಯೋಚನೆಯನ್ನು ಸೆರೆಹಿಡಿದು ಅದನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಮಾಡುವುದು.’ (2 ಕೊರಿಂ. 10:4, 5) ಆದ್ದರಿಂದ ‘ಸ್ವರ್ಗದಲ್ಲಿರುವ ತಂದೆಯು ತನ್ನನ್ನು ಕೇಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವನ್ನು ಕೊಡುವನೆಂಬ’ ಭರವಸೆಯೊಂದಿಗೆ ನಾವು ಆ ವಾಗ್ದತ್ತ ‘ಸಹಾಯಕನಿಗಾಗಿ’ ಬೇಡಿಕೊಳ್ಳೋಣ. (ಲೂಕ 11:13) ಯೆಹೋವನಿಗೆ ಸದಾ ಹತ್ತಿರವಾಗಲು ಪವಿತ್ರಾತ್ಮ ನಮಗೆ ಸಹಾಯಮಾಡುವಂತೆ ನಾವು ದೇವರಿಗೆ ಪ್ರಾರ್ಥಿಸುವುದು ಸಹ ಸೂಕ್ತ.
ಪುಟ್ಟ ಮಗುವು ತನ್ನ ತಂದೆಯ ಕೈಹಿಡಿದು ನಡೆಯುವಾಗ ಕಿಂಚಿತ್ತೂ ಭಯಪಡುವುದಿಲ್ಲ. ಅದಕ್ಕೆ ಸುರಕ್ಷೆ ಮತ್ತು ಭದ್ರತೆಯ ಅನಿಸಿಕೆಯಾಗುತ್ತದೆ. ನೀವು ನಿಜವಾಗಿ ಯೆಹೋವನನ್ನು ತಂದೆಯಾಗಿ ವೀಕ್ಷಿಸುವುದಾದರೆ ಈ ಸಾಂತ್ವನದಾಯಕ ಮಾತುಗಳಲ್ಲಿ ಭರವಸೆಯಿಡಬಲ್ಲಿರಿ: “ಭಯಪಡಬೇಡ, ನಿನಗೆ ಸಹಾಯಮಾಡುತ್ತೇನೆ ಎಂದು ನಿನಗೆ ಹೇಳುವ ನಿನ್ನ ದೇವರಾದ ಯೆಹೋವನೆಂಬ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ.” (ಯೆಶಾ. 41:13) ದೇವರೊಂದಿಗೆ ಎಂದೆಂದಿಗೂ ‘ನಡೆಯುವ’ ಅದ್ಭುತಕರ ಸುಯೋಗವು ನಿಮ್ಮದಾಗಬಲ್ಲದು. (ಮೀಕ 6:8) ಆದ್ದರಿಂದ ಆತನ ಚಿತ್ತವನ್ನು ಮಾಡುತ್ತಾ ಇರಿ. ಆಗ ಯೆಹೋವನನ್ನು ನಿಮ್ಮ ತಂದೆಯಾಗಿ ವೀಕ್ಷಿಸುವುದರಿಂದ ದೊರೆಯುವ ಪ್ರೀತಿ, ಆನಂದ ಹಾಗೂ ಸುಭದ್ರತೆಯನ್ನು ಅನುಭವಿಸುವಿರಿ.
[ಪಾದಟಿಪ್ಪಣಿ]
^ ಪ್ಯಾರ. 3 ಹೆಸರನ್ನು ಬದಲಾಯಿಸಲಾಗಿದೆ.