ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಪವಿತ್ರಾತ್ಮವೂ ವಧುವೂ, ‘ಬಾ!’ ಎಂದು ಹೇಳುತ್ತಾ ಇರುತ್ತಾರೆ”

“ಪವಿತ್ರಾತ್ಮವೂ ವಧುವೂ, ‘ಬಾ!’ ಎಂದು ಹೇಳುತ್ತಾ ಇರುತ್ತಾರೆ”

“ಪವಿತ್ರಾತ್ಮವೂ ವಧುವೂ, ‘ಬಾ!’ ಎಂದು ಹೇಳುತ್ತಾ ಇರುತ್ತಾರೆ”

“ಪವಿತ್ರಾತ್ಮವೂ ವಧುವೂ, ‘ಬಾ!’ ಎಂದು ಹೇಳುತ್ತಾ ಇರುತ್ತಾರೆ. . . . ಬಾಯಾರುತ್ತಿರುವ ಪ್ರತಿಯೊಬ್ಬನು ಬರಲಿ! ಇಷ್ಟವುಳ್ಳ ಪ್ರತಿಯೊಬ್ಬನು ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ.”—ಪ್ರಕ. 22:17.

1, 2. ರಾಜ್ಯದ ಹಿತಾಸಕ್ತಿಗಳು ನಮ್ಮ ಜೀವನದಲ್ಲಿ ಯಾವ ಸ್ಥಾನವನ್ನು ವಹಿಸಬೇಕು, ಮತ್ತು ಏಕೆ?

ರಾಜ್ಯ ಹಿತಾಸಕ್ತಿಗಳು ನಮ್ಮ ಜೀವನದಲ್ಲಿ ಯಾವ ಸ್ಥಾನವನ್ನು ವಹಿಸಬೇಕು? ಯೇಸು ತನ್ನ ಹಿಂಬಾಲಕರನ್ನು ‘ಮೊದಲು ರಾಜ್ಯವನ್ನು ಹುಡುಕುತ್ತಾ ಇರಿ’ ಎಂದು ಉತ್ತೇಜಿಸಿದನು. ಅವರು ಹಾಗೆ ಮಾಡುವಲ್ಲಿ ದೇವರು ಅವರ ಅಗತ್ಯಗಳನ್ನು ಒದಗಿಸುವನು ಎಂಬ ಆಶ್ವಾಸನೆಯನ್ನೂ ಕೊಟ್ಟನು. (ಮತ್ತಾ. 6:25-33) ದೇವರ ರಾಜ್ಯವನ್ನು ಅವನು ಬಹು ಬೆಲೆಯುಳ್ಳ ಒಂದು ಮುತ್ತಿಗೆ ಹೋಲಿಸಿದನು. ಅದು ಎಷ್ಟು ಅಮೂಲ್ಯವಾಗಿತ್ತೆಂದರೆ ಒಬ್ಬ ಸಂಚಾರಿ ವ್ಯಾಪಾರಸ್ಥನು ಅದನ್ನು ಕಂಡುಕೊಂಡಾಗ “ತನ್ನ ಬಳಿಯಲ್ಲಿರುವುದನ್ನೆಲ್ಲ ಮಾರಿ ಅದನ್ನು ಕೊಂಡುಕೊಂಡನು.” (ಮತ್ತಾ. 13:45, 46) ರಾಜ್ಯ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸಕ್ಕೆ ಅತಿ ಹೆಚ್ಚಿನ ಮಹತ್ವವನ್ನು ನಾವೂ ಕೊಡಬೇಕಾಗಿದೆ ಅಲ್ಲವೆ?

2 ಹಿಂದಿನ ಎರಡು ಲೇಖನಗಳಲ್ಲಿ ನೋಡಿದಂತೆ, ನಾವು ಶುಶ್ರೂಷೆಯಲ್ಲಿ ಧೈರ್ಯದಿಂದ ಮಾತಾಡುವುದು ಮತ್ತು ದೇವರ ವಾಕ್ಯವನ್ನು ಕೌಶಲದಿಂದ ಉಪಯೋಗಿಸುವುದು ದೇವರಾತ್ಮದಿಂದ ಮಾರ್ಗದರ್ಶಿಸಲ್ಪಡುತ್ತಿದ್ದೇವೆ ಎಂಬುದನ್ನು ತೋರಿಸುತ್ತದೆ. ಅದೇ ಪವಿತ್ರಾತ್ಮವು ನಾವು ರಾಜ್ಯ ಸಾರುವ ಕೆಲಸದಲ್ಲಿ ಕ್ರಮವಾಗಿ ಭಾಗವಹಿಸುವುದರಲ್ಲೂ ಒಂದು ಪ್ರಾಮುಖ್ಯ ಪಾತ್ರವನ್ನು ವಹಿಸುತ್ತದೆ. ಅದು ಹೇಗೆಂದು ನೋಡೋಣ.

ಸರ್ವರಿಗೂ ಆಮಂತ್ರಣ!

3. ಯಾವ ರೀತಿಯ ನೀರನ್ನು ಕುಡಿಯಲು ಸರ್ವ ಮಾನವರು “ಬಾ” ಎಂದು ಆಮಂತ್ರಿಸಲ್ಪಟ್ಟಿದ್ದಾರೆ?

3 ಪವಿತ್ರಾತ್ಮದ ಮೂಲಕ ಸರ್ವ ಮಾನವರಿಗೂ ಒಂದು ಆಮಂತ್ರಣವನ್ನು ನೀಡಲಾಗುತ್ತಿದೆ. (ಪ್ರಕಟನೆ 22:17 ಓದಿ.) ಆ ಆಮಂತ್ರಣವು “ಬಾ” ಎಂದಾಗಿದೆ ಮತ್ತು ಬಂದವರು ಒಂದು ವಿಶೇಷ ರೀತಿಯ ನೀರಿನಿಂದ ತಮ್ಮ ಬಾಯಾರಿಕೆಯನ್ನು ತಣಿಸಿಕೊಳ್ಳಬಹುದು. ಅದು ಎರಡು ಪಾಲು ಜಲಜನಕ ಮತ್ತು ಒಂದು ಪಾಲು ಆಮ್ಲಜನಕ ಸಂಯುಕ್ತವಾಗಿರುವ ಸಾಮಾನ್ಯ ತರದ ನೀರಲ್ಲ. ಭೂಮಿಯಲ್ಲಿ ಜೀವ ಪೋಷಣೆಗೆ ಅಕ್ಷರಾರ್ಥ ನೀರು ಅವಶ್ಯವಾದರೂ ಯೇಸು ಬಾವಿ ಬಳಿ ಸಮಾರ್ಯದ ಸ್ತ್ರೀಯೊಂದಿಗೆ ಮಾತಾಡಿದಾಗ ಬೇರೊಂದು ರೀತಿಯ ನೀರಿನ ಕುರಿತು ತಿಳಿಸಿದನು. ಅವನಂದದ್ದು: “ನಾನು ಕೊಡುವ ನೀರನ್ನು ಕುಡಿಯುವ ಯಾವನಿಗೂ ಎಂದಿಗೂ ಬಾಯಾರಿಕೆಯಾಗುವುದಿಲ್ಲ; ನಾನು ಅವನಿಗೆ ಕೊಡುವ ನೀರು ಅವನಲ್ಲಿ ನಿತ್ಯಜೀವವನ್ನು ಕೊಡಲಿಕ್ಕಾಗಿ ಗುಳುಗುಳಿಸುವ ನೀರಿನ ಬುಗ್ಗೆಯಾಗುವುದು.” (ಯೋಹಾ. 4:14) ಮಾನವರು ಕುಡಿಯುವಂತೆ ಆಮಂತ್ರಿಸಲ್ಪಟ್ಟ ಈ ಅಸಾಮಾನ್ಯ ನೀರು ಅವರಿಗೆ ನಿತ್ಯಜೀವವನ್ನು ಕೊಡುತ್ತದೆ.

4. ಜೀವಜಲಕ್ಕಾಗಿ ಆವಶ್ಯಕತೆ ಉಂಟಾದದ್ದು ಹೇಗೆ, ಮತ್ತು ಆ ನೀರಿನಿಂದ ಏನು ಪ್ರತಿನಿಧಿಸಲ್ಪಟ್ಟಿದೆ?

4 ಮೊದಲನೆ ಮನುಷ್ಯನಾದ ಆದಾಮನು ಪತ್ನಿಯಾದ ಹವ್ವಳೊಂದಿಗೆ ಜೊತೆಗೂಡಿ ತಮ್ಮ ನಿರ್ಮಾಣಿಕನಾದ ಯೆಹೋವ ದೇವರಿಗೆ ಅವಿಧೇಯನಾದಾಗಲೇ ಅಂತಹ ಜೀವಜಲದ ಆವಶ್ಯಕತೆ ಉಂಟಾಯಿತು. (ಆದಿ. 2:16, 17; 3:1-6) ಆ ಮೊದಲನೆಯ ದಂಪತಿ ತಮ್ಮ ಸುಂದರ ಬೀಡಿನಿಂದ ಹೊರಗಟ್ಟಲ್ಪಟ್ಟದ್ದು, “[ಆದಾಮನು] ಕೈಚಾಚಿ ಜೀವವೃಕ್ಷದ ಫಲವನ್ನು ಸಹ ತೆಗೆದು ತಿಂದು ಶಾಶ್ವತವಾಗಿ ಬದುಕುವವನಾಗಬಾರದು” ಎಂಬ ಕಾರಣದಿಂದಲೇ. (ಆದಿ. 3:22) ಮಾನವಕುಲದ ಜನಕನೋಪಾದಿ ಆದಾಮನು ಈ ರೀತಿಯಲ್ಲಿ ಮನುಷ್ಯರೆಲ್ಲರ ಮೇಲೆ ಮರಣವನ್ನು ತಂದನು. (ರೋಮ. 5:12) ವಿಧೇಯ ಮಾನವರೆಲ್ಲರನ್ನು ಪಾಪ ಮತ್ತು ಮರಣದಿಂದ ಬಿಡಿಸಿ ಪರದೈಸ ಭೂಮಿಯಲ್ಲಿ ನಿರಂತರವಾದ ಪರಿಪೂರ್ಣ ಜೀವವನ್ನು ಕೊಡುವುದಕ್ಕಾಗಿ ದೇವರು ಮಾಡಿರುವ ಸಕಲ ಏರ್ಪಾಡುಗಳನ್ನು ಜೀವಜಲವು ಪ್ರತಿನಿಧಿಸುತ್ತದೆ. ಈ ಏರ್ಪಾಡುಗಳು ಯೇಸು ಕ್ರಿಸ್ತನ ವಿಮೋಚನಾ ಮೌಲ್ಯ ಯಜ್ಞದ ಮೂಲಕ ಸಾಧ್ಯಗೊಳಿಸಲ್ಪಟ್ಟಿವೆ.—ಮತ್ತಾ. 20:28; ಯೋಹಾ. 3:16; 1 ಯೋಹಾ. 4:9, 10.

5. ‘ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲು’ ಬಾ ಎಂಬ ಆಮಂತ್ರಣವನ್ನು ಕೊಡುವಾತನು ಯಾರು? ವಿವರಿಸಿ.

5 ‘ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲು’ ಬಾ ಎಂಬ ಆಮಂತ್ರಣವು ಮೂಲತಃ ಯಾರಿಂದ ಹೊರಡುತ್ತದೆ? ಕ್ರಿಸ್ತನ ಸಹಸ್ರ ವರ್ಷದ ಆಳ್ವಿಕೆಯಲ್ಲಿ ಮಾನವಕುಲಕ್ಕೆ ಯೇಸುವಿನ ಮೂಲಕವಾದ ಜೀವದ ಸಕಲ ಏರ್ಪಾಡುಗಳು ಪೂರ್ಣವಾಗಿ ಲಭ್ಯವಾಗುತ್ತವೆ. ಅವನ್ನೇ “ಸ್ಫಟಿಕದಂತೆ ಸ್ವಚ್ಛವಾಗಿರುವ ಜೀವಜಲದ ನದಿ” ಎಂಬುದಾಗಿ ಚಿತ್ರಿಸಲಾಗಿದೆ. ಅದನ್ನು ‘ದೇವರ ಮತ್ತು ಯಜ್ಞದ ಕುರಿಮರಿಯ ಸಿಂಹಾಸನದಿಂದ ಹೊರಡುವ’ ನದಿಯಾಗಿ ವೀಕ್ಷಿಸಲಾಗಿದೆ. (ಪ್ರಕ. 22:1) ಆದ್ದರಿಂದ ಜೀವದಾತನಾದ ಯೆಹೋವನೇ ಆ ಜೀವದಾಯಕ ಅಂಶಗಳಿರುವ ಜಲದ ಬುಗ್ಗೆ. (ಕೀರ್ತ. 36:9) ‘ಕುರಿಮರಿಯಾದ’ ಯೇಸು ಕ್ರಿಸ್ತನ ಮೂಲಕವಾಗಿ ಆ ಜಲವನ್ನು ಲಭ್ಯವಾಗುವಂತೆ ಮಾಡುವಾತನು ಆತನೇ. (ಯೋಹಾ. 1:29) ಆದಾಮನ ಅವಿಧೇಯತೆಯಿಂದಾಗಿ ಮಾನವಕುಲದ ಮೇಲೆ ತರಲ್ಪಟ್ಟ ಎಲ್ಲ ಹಾನಿಯನ್ನು ಅಳಿಸಿಬಿಡುವ ಯೆಹೋವನ ಸಾಧನವೇ ಈ ಸಾಂಕೇತಿಕ ನದಿ. ಹೌದು, “ಬಾ” ಎಂಬ ಆಮಂತ್ರಣದ ಮೂಲನು ಯೆಹೋವ ದೇವರೇ.

6. “ಜೀವಜಲದ ನದಿ” ಹರಿಯಲಾರಂಭಿಸುವುದು ಯಾವಾಗ?

6 ಕ್ರಿಸ್ತನ ಸಹಸ್ರ ವರ್ಷದ ಆಳ್ವಿಕೆಯಲ್ಲಿ “ಜೀವಜಲದ ನದಿ” ಪೂರ್ಣವಾದ ಅರ್ಥದಲ್ಲಿ ಹರಿಯುವುದಾದರೂ ಅದು ಪ್ರವಹಿಸಲು ಆರಂಭಿಸುವುದು ‘ಕರ್ತನ ದಿನದಲ್ಲಿಯೇ.’ ‘ಕುರಿಮರಿಯು’ ಸಿಂಹಾಸನಾರೂಢನಾದ 1914ನೇ ವರ್ಷದಲ್ಲಿ ಕರ್ತನ ದಿನವು ಆರಂಭಿಸಿತು. (ಪ್ರಕ. 1:10) ಆದಕಾರಣ, ಜೀವಕ್ಕಾಗಿ ಕೆಲವೊಂದು ಏರ್ಪಾಡುಗಳು ಲಭ್ಯವಾಗತೊಡಗಿದ್ದು ಅದರ ನಂತರವೇ. ಅವು ದೇವರ ವಾಕ್ಯವಾದ ಬೈಬಲನ್ನು ಒಳಗೂಡಿದೆ. ಏಕೆಂದರೆ ಅದರ ಸಂದೇಶವನ್ನು ‘ಜಲವೆಂದು’ ಕರೆಯಲಾಗಿದೆ. (ಎಫೆ. 5:26) ರಾಜ್ಯ ಸುವಾರ್ತೆಯನ್ನು ಕೇಳುವ ಮತ್ತು ಅದಕ್ಕೆ ಪ್ರತಿಕ್ರಿಯಿಸುವ ಮೂಲಕ ‘ಜೀವಜಲವನ್ನು ತೆಗೆದುಕೊಳ್ಳುವ’ ಆಮಂತ್ರಣವನ್ನು ಸರ್ವರಿಗೂ ನೀಡಲಾಗುತ್ತದೆ. ಆದರೆ ಕರ್ತನ ದಿನದಲ್ಲಿ ಆ ಆಮಂತ್ರಣವನ್ನು ನಿಜವಾಗಿಯೂ ನೀಡುವವರು ಯಾರು?

“ವಧುವೂ ‘ಬಾ!’” ಅನ್ನುತ್ತಾಳೆ

7. “ಕರ್ತನ ದಿನದಲ್ಲಿ” “ಬಾ” ಎಂಬ ಆಮಂತ್ರಣವನ್ನು ನೀಡಿದ ಮೊದಲಿಗರು ಯಾರು, ಮತ್ತು ಯಾರಿಗೆ ನೀಡಿದರು?

7 ವಧುವರ್ಗದ ಸದಸ್ಯರು ಅಂದರೆ ಆತ್ಮಾಭಿಷಿಕ್ತ ಕ್ರೈಸ್ತರು “ಬಾ” ಎಂಬ ಆಮಂತ್ರಣವನ್ನು ನೀಡುವವರಲ್ಲಿ ಮೊದಲಿಗರು. ಯಾರಿಗೆ? ಒಳ್ಳೇದು, ವಧುವು ತನ್ನನ್ನೇ “ಬಾ” ಎಂದು ಕರೆಯುವುದಿಲ್ಲ ನಿಜ. ಅವಳ ಮಾತುಗಳು ಭೂಮಿಯ ಮೇಲೆ ನಿತ್ಯಜೀವ ಪಡೆಯುವ ನಿರೀಕ್ಷೆಯಿರುವ ಜನರಿಗೆ ನಿರ್ದೇಶಿಸಲ್ಪಟ್ಟಿವೆ. ‘ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧದ’ ನಂತರ ಭೂಮಿಯ ಮೇಲೆ ಜೀವಿಸುವ ಜನರೇ ಅವರು.—ಪ್ರಕಟನೆ 16:14, 16 ಓದಿ.

8. 1918ರಷ್ಟು ಹಿಂದಿನಿಂದಲೂ ಅಭಿಷಿಕ್ತ ಕ್ರೈಸ್ತರು ಯೆಹೋವನ ಆಮಂತ್ರಣವನ್ನು ನೀಡುತ್ತಾ ಇದ್ದಾರೆ ಎಂಬುದನ್ನು ಯಾವುದು ತೋರಿಸುತ್ತದೆ?

8 ಕ್ರಿಸ್ತನ ಅಭಿಷಿಕ್ತ ಹಿಂಬಾಲಕರು ಆ ಆಮಂತ್ರಣವನ್ನು 1918ರಷ್ಟು ಹಿಂದಿನಿಂದ ನೀಡುತ್ತಾ ಬಂದಿದ್ದಾರೆ. ಆ ವರ್ಷದಲ್ಲಿ ನೀಡಲಾದ ಸಾರ್ವಜನಿಕ ಭಾಷಣ “ಈಗ ಜೀವಿಸುವ ಮಿಲ್ಯಾಂತರ ಜನರು ಎಂದೂ ಸಾಯರು” ಎಂಬುದು ಅರ್ಮಗೆದೋನ್‌ ಯುದ್ಧದ ನಂತರ ಅನೇಕರಿಗೆ ಪರದೈಸ ಭೂಮಿಯಲ್ಲಿ ಜೀವವು ಸಿಗುವುದು ಎಂಬ ನಿರೀಕ್ಷೆಯನ್ನು ನೀಡಿತು. ಅಮೆರಿಕದ ಸೀಡರ್‌ ಪಾಯಿಂಟ್‌, ಒಹಾಯೋದಲ್ಲಿ 1922ರಲ್ಲಾದ ಬೈಬಲ್‌ ವಿದ್ಯಾರ್ಥಿಗಳ ಅಧಿವೇಶನದ ಭಾಷಣವೊಂದರಲ್ಲಿ ‘ರಾಜನನ್ನೂ ಅವನ ರಾಜ್ಯವನ್ನೂ ಪ್ರಕಟಿಸಿರಿ’ ಎಂದು ಕೇಳುಗರನ್ನು ಪ್ರೇರಿಸಲಾಯಿತು. ಈ ಕೇಳಿಕೆಯು ವಧುವರ್ಗದ ಉಳಿಕೆಯವರಿಗೆ ಹೆಚ್ಚಿನ ಜನರನ್ನು ಆಮಂತ್ರಣದೊಂದಿಗೆ ತಲಪಲು ಸಹಾಯಮಾಡಿತು. 1929, ಮಾರ್ಚ್‌ 15ರ ಕಾವಲಿನಬುರುಜುವಿನಲ್ಲಿ (ಇಂಗ್ಲಿಷ್‌) “ಹಿತಕರವಾದ ಆಮಂತ್ರಣ” ಎಂಬ ಲೇಖನವಿತ್ತು. ಅದರ ಮುಖ್ಯವಚನವು ಪ್ರಕಟನೆ 22:17 ಆಗಿತ್ತು. ಆಂಶಿಕವಾಗಿ ಆ ಲೇಖನವು ಹೇಳಿದ್ದು: “ನಂಬಿಗಸ್ತ ಉಳಿಕೆಯವರ ವರ್ಗದವರು ಈ ಹಿತಕರವಾದ ಆಮಂತ್ರಣದಲ್ಲಿ [ಮಹೋನ್ನತನನ್ನು] ಸೇರಿಕೊಂಡು ‘ಬಾ!’ ಅನ್ನುತ್ತಾರೆ. ಸದ್ಧರ್ಮ ಮತ್ತು ಸತ್ಯವನ್ನು ಬಯಸುವವರೆಲ್ಲರಿಗೆ ಈ ಸಂದೇಶವು ಘೋಷಿಸಲ್ಪಡಬೇಕು. ಅದನ್ನು ಈಗಲೇ ಮಾಡಬೇಕು.” ಈ ದಿನದ ತನಕವೂ ವಧುವರ್ಗವು ಆ ಆಮಂತ್ರಣವನ್ನು ನೀಡುತ್ತಾ ಇದೆ.

ಕೇಳಿಸಿಕೊಳ್ಳುತ್ತಿರುವ ಪ್ರತಿಯೊಬ್ಬನು ‘ಬಾ!’ ಎನ್ನಲಿ”

9, 10. ಆಮಂತ್ರಣವನ್ನು ಕೇಳಿಸಿಕೊಂಡವರು ಪ್ರತಿಕ್ರಿಯೆಯಲ್ಲಿ “ಬಾ!” ಎಂದು ಹೇಳುವಂತೆ ಆಮಂತ್ರಿಸಲ್ಪಟ್ಟದ್ದು ಹೇಗೆ?

9 “ಬಾ” ಎಂಬ ಆಮಂತ್ರಣವನ್ನು ಕೇಳಿಸಿಕೊಳ್ಳುವವರ ಕುರಿತೇನು? ಅವರೂ ಪ್ರತಿಕ್ರಿಯಿಸುತ್ತಾ “ಬಾ!” ಎಂದು ಹೇಳುವಂತೆ ಆಮಂತ್ರಿಸಲ್ಪಟ್ಟಿದ್ದಾರೆ. ಉದಾಹರಣೆಗೆ, 1932, ಆಗಸ್ಟ್‌ 1ರ ಕಾವಲಿನಬುರುಜು (ಇಂಗ್ಲಿಷ್‌) ಸಂಚಿಕೆ ಪುಟ 232ರಲ್ಲಿ ಹೇಳಿದ್ದು: “ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಭಾಗವಹಿಸಬಯಸುವ ಎಲ್ಲರನ್ನು ಅಭಿಷಿಕ್ತರು ಪ್ರೋತ್ಸಾಹಿಸಲಿ. ಕರ್ತನ ಸಂದೇಶವನ್ನು ಸಾರುವುದಕ್ಕಾಗಿ ಅವರು ಕರ್ತನ ಅಭಿಷಿಕ್ತ ಜನರಾಗಿರಬೇಕಾಗಿಲ್ಲ. ಅರ್ಮಗೆದೋನಿನಿಂದ ಪ್ರಾಯಶಃ ಪಾರುಗೊಳಿಸಲ್ಪಟ್ಟು ಭೂಮಿಯ ಮೇಲೆ ನಿತ್ಯಜೀವವನ್ನು ನೀಡಲಾಗುವ ಒಂದು ವರ್ಗದ ಜನರಿಗೆ ಜೀವಜಲವನ್ನು ಒಯ್ಯಲು ಇದು ಅನುಮತಿ ನೀಡಿತು. ಇದನ್ನು ತಿಳಿಯುವುದು ಯೆಹೋವನ ಸಾಕ್ಷಿಗಳಿಗೆ ಮಹಾ ಸಾಂತ್ವನದ ಸಂಗತಿ.”

10 ಕೇಳಿಸಿಕೊಳ್ಳುವವರಿಗೆ ಇರುವ “ಬಾ!” ಎಂದನ್ನುವ ಜವಾಬ್ದಾರಿಕೆಗೆ ಕೈತೋರಿಸುತ್ತಾ 1934, ಆಗಸ್ಟ್‌ 15ರ ಕಾವಲಿನಬುರುಜು (ಇಂಗ್ಲಿಷ್‌) 249ನೇ ಪುಟದಲ್ಲಿ ಹೇಳಿದ್ದು: “ಯೋನಾದಾಬನ ವರ್ಗದವರು ಯೆಹೋವನ ಅಭಿಷಿಕ್ತ ಸಾಕ್ಷಿಗಳಾಗಿರದಿದ್ದರೂ ಕೂಡ ಯೇಹುವಿನ ಸೂಚಕರೂಪವಾಗಿರುವ ಅಭಿಷಿಕ್ತರೊಂದಿಗೆ ಜೊತೆಗೂಡಿ ರಾಜ್ಯದ ಸಂದೇಶವನ್ನು ಪ್ರಕಟಿಸಬೇಕು.” ಪ್ರಕಟನೆ 7:9-17ರಲ್ಲಿ ತಿಳಿಸಲಾದ ‘ಮಹಾ ಸಮೂಹದವರು’ ಯಾರೆಂಬ ಗುರುತನ್ನು 1935ರಲ್ಲಿ ಸ್ಪಷ್ಟಮಾಡಲಾಯಿತು. ಅದು ದೇವರ ಆಮಂತ್ರಣವನ್ನು ನೀಡುವ ಕೆಲಸಕ್ಕೆ ಪ್ರಚಂಡ ಪ್ರಚೋದನೆಯನ್ನು ನೀಡಿತು. ಅಂದಿನಿಂದ ಆ ಆಮಂತ್ರಣಕ್ಕೆ ಪ್ರತಿಕ್ರಿಯೆ ತೋರಿಸಿದ ಸತ್ಯಾರಾಧಕ ಮಹಾ ಸಮೂಹದ ಸಂಖ್ಯೆಯು ಬೆಳೆಯುತ್ತಾ ಈಗ 70 ಲಕ್ಷಕ್ಕೂ ಮೀರಿದೆ. ಅವರು ಗಣ್ಯತಾಪೂರ್ವಕವಾಗಿ ಸಂದೇಶವನ್ನು ಸ್ವೀಕರಿಸಿ ದೇವರಿಗೆ ಸಮರ್ಪಣೆಯನ್ನು ಮಾಡಿ, ನೀರಿನ ದೀಕ್ಷಾಸ್ನಾನವನ್ನು ಪಡೆದುಕೊಂಡು, ‘ಜೀವಜಲವನ್ನು ಉಚಿತವಾಗಿ ತೆಗೆದುಕೊಂಡು ಕುಡಿಯಲು ಬನ್ನಿರಿ’ ಎಂದು ಇತರರನ್ನು ಸಕ್ರಿಯವಾಗಿ ಆಮಂತ್ರಿಸುವುದರಲ್ಲಿ ವಧುವರ್ಗದೊಂದಿಗೆ ಜೊತೆಗೂಡಿದ್ದಾರೆ.

“ಪವಿತ್ರಾತ್ಮವೂ” “ಬಾ!” ಎನ್ನುತ್ತದೆ

11. ಕ್ರಿ.ಶ. ಪ್ರಥಮ ಶತಮಾನದಲ್ಲಿ ಪವಿತ್ರಾತ್ಮವು ಸಾರುವ ಕಾರ್ಯದಲ್ಲಿ ಹೇಗೆ ಒಳಗೂಡಿತ್ತು?

11 ಯೇಸು ನಜರೇತಿನ ಸಭಾಮಂದಿರದಲ್ಲಿ ಸಾರುತ್ತಿದ್ದಾಗ ಪ್ರವಾದಿಯಾದ ಯೆಶಾಯನ ಸುರುಳಿಯನ್ನು ತೆರೆದು ಓದಿದ್ದು: “ಯೆಹೋವನ ಆತ್ಮವು ನನ್ನ ಮೇಲೆ ಇದೆ. ಆತನು ನನ್ನನ್ನು ಬಡವರಿಗೆ ಸುವಾರ್ತೆಯನ್ನು ಪ್ರಕಟಿಸುವುದಕ್ಕಾಗಿ ಅಭಿಷೇಕಿಸಿದನು; ಬಂದಿಗಳಿಗೆ ಬಿಡುಗಡೆಯನ್ನು ಸಾರುವುದಕ್ಕೂ ಕುರುಡರಿಗೆ ದೃಷ್ಟಿಯನ್ನು ಕೊಡುವುದಕ್ಕೂ ಜಜ್ಜಲ್ಪಟ್ಟವರನ್ನು ಬಿಡುಗಡೆಮಾಡಿ ಕಳುಹಿಸುವುದಕ್ಕೂ ಯೆಹೋವನ ಸ್ವೀಕೃತ ವರ್ಷವನ್ನು ಸಾರುವುದಕ್ಕೂ ನನ್ನನ್ನು ಕಳುಹಿಸಿದ್ದಾನೆ.” ಅನಂತರ ಯೇಸು ಆ ಮಾತುಗಳನ್ನು ತನಗೇ ಅನ್ವಯಿಸಿಕೊಂಡು ಹೇಳಿದ್ದು: “ಈಗಷ್ಟೇ ನೀವು ಕೇಳಿಸಿಕೊಂಡ ಈ ಶಾಸ್ತ್ರವಚನವು ಇಂದು ನೆರವೇರಿತು.” (ಲೂಕ 4:17-21) ಸ್ವರ್ಗಕ್ಕೆ ಏರಿಹೋಗುವ ಮುಂಚೆ ಯೇಸು ತನ್ನ ಶಿಷ್ಯರಿಗೆ ಹೀಗಂದನು: “ಪವಿತ್ರಾತ್ಮವು ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ . . . ಭೂಮಿಯ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರುವಿರಿ.” (ಅ. ಕಾ. 1:8) ಪ್ರಥಮ ಶತಮಾನದಲ್ಲಿ ಸಾರುವ ಕಾರ್ಯದ ಸಂಬಂಧದಲ್ಲಿ ಪವಿತ್ರಾತ್ಮವು ಗಮನಾರ್ಹ ಪಾತ್ರವನ್ನು ವಹಿಸಿತು.

12. ನಮ್ಮ ದಿನದಲ್ಲಿ ಆಮಂತ್ರಣವನ್ನು ನೀಡುವುದರಲ್ಲಿ ದೇವರಾತ್ಮವು ಹೇಗೆ ಒಳಗೂಡಿದೆ?

12 ನಮ್ಮ ದಿನದ ಜನರಿಗೆ ಆ ಆಮಂತ್ರಣವನ್ನು ನೀಡುವುದರಲ್ಲಿ ದೇವರ ಪವಿತ್ರಾತ್ಮವು ಹೇಗೆ ಒಳಗೂಡಿದೆ? ಯೆಹೋವನೇ ಪವಿತ್ರಾತ್ಮದ ಮೂಲನು. ತನ್ನ ವಾಕ್ಯವಾದ ಬೈಬಲಿನ ತಿಳಿವಳಿಕೆಯನ್ನು ವಧುವರ್ಗದವರಿಗೆ ಕೊಡಲು ಆತನು ಪವಿತ್ರಾತ್ಮವನ್ನು ಉಪಯೋಗಿಸಿ ಅವರ ಹೃದಮನಗಳನ್ನು ತೆರೆಯುತ್ತಾನೆ. ಪರದೈಸ ಭೂಮಿಯಲ್ಲಿ ಸದಾ ಜೀವಿಸುವ ಪ್ರತೀಕ್ಷೆ ಇರುವವರಿಗೆ ಆ ಆಮಂತ್ರಣವನ್ನು ನೀಡಲು ಮತ್ತು ಶಾಸ್ತ್ರಾಧಾರಿತ ಸತ್ಯವನ್ನು ವಿವರಿಸಲು ಪವಿತ್ರಾತ್ಮವು ಅವರನ್ನು ಪ್ರಚೋದಿಸುತ್ತದೆ. ಹಾಗಾದರೆ ಆ ಆಮಂತ್ರಣವನ್ನು ಸ್ವೀಕರಿಸಿ ಯೇಸು ಕ್ರಿಸ್ತನ ಶಿಷ್ಯರಾಗಿ ಪರಿಣಮಿಸಿ ಇನ್ನಿತರರಿಗೆ ಆ ಆಮಂತ್ರಣವನ್ನು ನೀಡುವವರ ಕುರಿತೇನು? ಪವಿತ್ರಾತ್ಮವು ಅವರಿಗೂ ಅದೇ ಸಹಾಯವನ್ನು ನೀಡುತ್ತದೆ. ಅವರು “ಪವಿತ್ರಾತ್ಮದ ಹೆಸರಿನಲ್ಲಿ” ದೀಕ್ಷಾಸ್ನಾನ ಪಡೆದುಕೊಂಡದರಿಂದ ಅದರೊಂದಿಗೆ ಸಹಕರಿಸಿ ಸಹಾಯಕ್ಕಾಗಿ ಅದರ ಮೇಲೆ ಆತುಕೊಳ್ಳುತ್ತಾರೆ. (ಮತ್ತಾ. 28:19) ಅಭಿಷಿಕ್ತರಿಂದ ಮತ್ತು ಬೆಳೆಯುತ್ತಿರುವ ಮಹಾ ಸಮೂಹದವರಿಂದ ಸಾರಲ್ಪಡುವ ಸಂದೇಶದ ಕುರಿತಾಗಿಯೂ ಯೋಚಿಸಿರಿ. ಅದು ದೇವರ ಪವಿತ್ರಾತ್ಮದ ನೇರ ಪ್ರಭಾವದಿಂದ ಬರೆಯಲ್ಪಟ್ಟ ಗ್ರಂಥವಾದ ಬೈಬಲಿನ ಸಂದೇಶ. ಹೀಗೆ ಆಮಂತ್ರಣವು ನೀಡಲ್ಪಡುವುದು ಪವಿತ್ರಾತ್ಮದ ಮೂಲಕವಾಗಿಯೇ. ವಾಸ್ತವದಲ್ಲಿ ನಾವು ಆ ಆತ್ಮದಿಂದಲೇ ಮಾರ್ಗದರ್ಶಿಸಲ್ಪಡುತ್ತೇವೆ. ಇದು ಆಮಂತ್ರಣದ ಕೆಲಸದಲ್ಲಿ ನಾವು ಎಷ್ಟು ಹೆಚ್ಚು ಸಮಯ ಕಳೆಯುತ್ತೇವೆಂಬುದನ್ನು ಹೇಗೆ ಪ್ರಭಾವಿಸಬೇಕು?

ಅವರು “‘ಬಾ!’ ಎಂದು ಹೇಳುತ್ತಾ ಇರುತ್ತಾರೆ”

13. “ಪವಿತ್ರಾತ್ಮವೂ ವಧುವೂ, ‘ಬಾ!’ ಎಂದು ಹೇಳುತ್ತಾ ಇರುತ್ತಾರೆ” ಎಂಬ ಹೇಳಿಕೆಯಿಂದ ಏನು ಸೂಚಿಸಲ್ಪಟ್ಟಿದೆ?

13 ಪವಿತ್ರಾತ್ಮವೂ ವಧುವೂ ಬರೇ “ಬಾ!” ಎಂದು ಹೇಳುವುದಿಲ್ಲ. ಇಲ್ಲಿ ಬಳಸಿದ ಮೂಲಭಾಷಾ ಕ್ರಿಯಾಪದವು ಮುಂದುವರಿಯುವ ಕ್ರಿಯೆಯನ್ನು ಸೂಚಿಸುತ್ತದೆ. ಆ ಅಂಶವನ್ನು ಪರಿಗಣಿಸುತ್ತಾ ನೂತನ ಲೋಕ ಭಾಷಾಂತರವು ಹೀಗೆ ಹೇಳುತ್ತದೆ: “ಪವಿತ್ರಾತ್ಮವೂ ವಧುವೂ, ‘ಬಾ!’ ಎಂದು ಹೇಳುತ್ತಾ ಇರುತ್ತಾರೆ.” ಇದು ದೇವರ ಆಮಂತ್ರಣವನ್ನು ನೀಡುವುದರಲ್ಲಿ ಇರುವ ಕ್ರಮತೆಯನ್ನು ಸೂಚಿಸುತ್ತದೆ. ಆ ಆಮಂತ್ರಣವನ್ನು ಕೇಳಿಸಿಕೊಂಡು ಅದನ್ನು ಸ್ವೀಕರಿಸುವವರ ಕುರಿತೇನು? ಅವರೂ “ಬಾ!” ಅನ್ನುತ್ತಾರೆ. ಸತ್ಯಾರಾಧಾಕರ ಮಹಾ ಸಮೂಹವು ‘ಯೆಹೋವನ ಆಲಯದಲ್ಲಿ ಹಗಲೂರಾತ್ರಿ ಪವಿತ್ರ ಸೇವೆಯನ್ನು ಸಲ್ಲಿಸುತ್ತಿದ್ದಾರೆ’ ಎಂಬುದಾಗಿ ಹೇಳಲಾಗಿದೆ. (ಪ್ರಕ. 7:9, 15) ‘ಹಗಲೂರಾತ್ರಿ ಸೇವೆ’ ಯಾವ ರೀತಿಯಲ್ಲಿ? (ಲೂಕ 2:36, 37; ಅ. ಕಾರ್ಯಗಳು 20:31; 2 ಥೆಸಲೊನೀಕ 3:8 ಓದಿ.) ವೃದ್ಧೆ ಪ್ರವಾದಿನಿ ಅನ್ನಳ ಮತ್ತು ಅಪೊಸ್ತಲ ಪೌಲನ ಉದಾಹರಣೆಗಳು ತೋರಿಸುವುದೇನೆಂದರೆ ‘ಹಗಲೂರಾತ್ರಿ ಸೇವೆಯು’ ಶುಶ್ರೂಷೆಯಲ್ಲಿ ಎಡೆಬಿಡದೆ ಮಾಡುವ, ಶ್ರದ್ಧೆಯುಳ್ಳ ಪ್ರಯತ್ನವನ್ನು ಸೂಚಿಸುತ್ತದೆ.

14, 15. ಆರಾಧನೆಯಲ್ಲಿ ಕ್ರಮತೆಯ ಪ್ರಮುಖತೆಯನ್ನು ದಾನಿಯೇಲನು ಹೇಗೆ ತೋರಿಸಿದನು?

14 ಪ್ರವಾದಿ ದಾನಿಯೇಲನು ಸಹ ಆರಾಧನೆಯಲ್ಲಿ ಕ್ರಮತೆಯ ಪ್ರಮುಖತೆಯನ್ನು ತೋರಿಸಿದನು. (ದಾನಿಯೇಲ 6:4-10, 16 ಓದಿ.) ತನ್ನ ಆಧ್ಯಾತ್ಮಿಕ ರೂಢಿಯನ್ನು ಅಂದರೆ ದೇವರಿಗೆ “ಯಥಾಪ್ರಕಾರ ದಿನಕ್ಕೆ ಮೂರಾವರ್ತಿ” ಪ್ರಾರ್ಥಿಸುವ ತನ್ನ ಅಭ್ಯಾಸವನ್ನು ಅವನು ಒಂದು ತಿಂಗಳ ಅವಧಿಗಾದರೂ ಬದಲಾಯಿಸಲಿಲ್ಲ. ಅದಕ್ಕಾಗಿ ಸಿಂಹಗಳ ಗವಿಗೆ ಹಾಕಲ್ಪಡಲಿದ್ದರೂ ಕೂಡ. ಯೆಹೋವನ ಕ್ರಮದ ಆರಾಧನೆಗಿಂತ ಬೇರೆ ಯಾವುದೂ ಹೆಚ್ಚು ಪ್ರಾಮುಖ್ಯವಲ್ಲ ಎಂಬುದನ್ನು ಅವನ ಕ್ರಿಯೆಗಳು ಎಷ್ಟು ಸ್ಪಷ್ಟವಾಗಿ ಪ್ರೇಕ್ಷಕರಿಗೆ ತೋರಿಸಿಕೊಟ್ಟವು!—ಮತ್ತಾ. 5:16.

15 ಸಿಂಹಗಳ ಗವಿಯಲ್ಲಿ ದಾನಿಯೇಲನು ಒಂದು ರಾತ್ರಿಯನ್ನು ಕಳೆದ ಮೇಲೆ ಅರಸನು ತಾನೇ ಹೋಗಿ ಹೀಗೆಂದು ಕೂಗಿ ಹೇಳಿದನು: “ದಾನಿಯೇಲನೇ, ಜೀವಸ್ವರೂಪನಾದ ದೇವರ ಸೇವಕನೇ, ನೀನು ನಿತ್ಯವೂ ಭಜಿಸುವ ನಿನ್ನ ದೇವರು ನಿನ್ನನ್ನು ಸಿಂಹಗಳಿಂದ ಉದ್ಧರಿಸ ಶಕ್ತನಾದನೋ?” ದಾನಿಯೇಲನು ಕೂಡಲೇ ಉತ್ತರಿಸಿದ್ದು: “ಅರಸೇ, ಚಿರಂಜೀವಿಯಾಗಿರು! ನನ್ನ ದೇವರು ತನ್ನ ದೂತನನ್ನು ಕಳುಹಿಸಿ ಸಿಂಹಗಳ ಬಾಯಿಗಳನ್ನು ಬಂಧಿಸಿದನು; ಅವುಗಳಿಂದ ನನಗೆ ಯಾವ ಹಾನಿಯೂ ಆಗಲಿಲ್ಲ; ಏಕೆಂದರೆ ಆತನ ದೃಷ್ಟಿಗೆ ನಾನು ನಿರ್ಮಲನಾಗಿ ಕಂಡುಬಂದೆನು, ರಾಜನಾದ ನಿನಗೂ ಯಾವ ದ್ರೋಹವನ್ನೂ ಮಾಡಲಿಲ್ಲ.” “ನಿತ್ಯವೂ” ಯೆಹೋವನನ್ನು ಸೇವಿಸಿದ್ದಕ್ಕಾಗಿ ದೇವರು ದಾನಿಯೇಲನನ್ನು ಆಶೀರ್ವದಿಸಿದನು.—ದಾನಿ. 6:19-22.

16. ಶುಶ್ರೂಷೆಯಲ್ಲಿ ನಮ್ಮ ಭಾಗವಹಿಸುವಿಕೆಯ ಕುರಿತು ಯಾವ ಪ್ರಶ್ನೆಗಳನ್ನು ಕೇಳುವಂತೆ ದಾನಿಯೇಲನ ಉದಾಹರಣೆಯು ನಮ್ಮನ್ನು ಪ್ರಚೋದಿಸಬೇಕು?

16 ತನ್ನ ಆಧ್ಯಾತ್ಮಿಕ ರೂಢಿಯನ್ನು ಅಲಕ್ಷಿಸುವುದಕ್ಕಿಂತ ಸಾಯುವುದೇ ಲೇಸೆಂದು ದಾನಿಯೇಲನು ನೆನಸಿದನು. ನಮ್ಮ ಕುರಿತೇನು? ದೇವರ ರಾಜ್ಯದ ಸುವಾರ್ತೆಯನ್ನು ನಿತ್ಯವೂ ಸಾರುವುದಕ್ಕಾಗಿ ನಾವು ಯಾವ ತ್ಯಾಗಗಳನ್ನು ಮಾಡುತ್ತಿದ್ದೇವೆ ಅಥವಾ ಮಾಡಲು ಸಿದ್ಧರಾಗಿದ್ದೇವೆ? ಯೆಹೋವನ ಕುರಿತು ಇತರರೊಂದಿಗೆ ಮಾತಾಡದೆ ಒಂದೇ ಒಂದು ತಿಂಗಳಾದರೂ ದಾಟುವಂತೆ ನಾವು ಬಿಡಬಾರದು! ಸಾಧ್ಯವಿರುವಾಗೆಲ್ಲ ಪ್ರತಿವಾರವೂ ಶುಶ್ರೂಷೆಯಲ್ಲಿ ಭಾಗವಹಿಸಲು ನಾವು ಪ್ರಯತ್ನಿಸಬೇಕಲ್ಲವೆ? ನಾವು ದೈಹಿಕವಾಗಿ ತುಂಬ ಅಶಕ್ತ ಸ್ಥಿತಿಯಲ್ಲಿದ್ದು ಕೇವಲ 15 ನಿಮಿಷ ಮಾತ್ರ ಸಾಕ್ಷಿ ನೀಡಬಲ್ಲೆವಾದರೂ ನಾವದನ್ನು ವರದಿ ಮಾಡಲೇಬೇಕು. ಏಕೆ? ಏಕೆಂದರೆ ಪವಿತ್ರಾತ್ಮ ಮತ್ತು ವಧುವಿನೊಂದಿಗೆ ನಾವು ಸಹ “ಬಾ!” ಎಂದು ಹೇಳುತ್ತಾ ಇರಲು ಬಯಸುತ್ತೇವೆ. ಹೌದು, ಕ್ರಮದ ರಾಜ್ಯ ಪ್ರಚಾರಕರಾಗಿ ಇರಲು ನಾವು ನಮ್ಮಿಂದಾದುದೆಲ್ಲವನ್ನು ಮಾಡಲು ಬಯಸುತ್ತೇವೆ.

17. ಯೆಹೋವನ ಆಮಂತ್ರಣವನ್ನು ನೀಡಲು ಇರುವ ಯಾವ ಸಂದರ್ಭಗಳನ್ನು ನಾವು ಕಳಕೊಳ್ಳಬಾರದು?

17 ಸಾರ್ವಜನಿಕ ಶುಶ್ರೂಷೆಗಾಗಿ ನಾವು ಬದಿಗಿಟ್ಟ ಸಮಯದಲ್ಲಿ ಮಾತ್ರವೇ ಅಲ್ಲ, ಪ್ರತಿಯೊಂದು ಸಂದರ್ಭದಲ್ಲಿ ಯೆಹೋವನ ಆಮಂತ್ರಣವನ್ನು ನೀಡಲು ನಾವು ಪ್ರಯತ್ನಿಸಬೇಕು. ಶಾಪಿಂಗ್‌ನಲ್ಲಿ, ಪ್ರಯಾಣದಲ್ಲಿ, ರಜಾದಿನಗಳಲ್ಲಿ, ಉದ್ಯೋಗದಲ್ಲಿ, ಶಾಲೆಯಲ್ಲಿ ಮುಂತಾದ ಬೇರೆ ಬೇರೆ ಸಮಯಗಳಲ್ಲಿ ಕೂಡ ಬಾಯಾರಿದವರು ‘ಬಂದು ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳುವಂತೆ’ ಆಮಂತ್ರಿಸುವುದು ಒಂದು ದೊಡ್ಡ ಸುಯೋಗವೇ ಸರಿ! ಅಧಿಕಾರಿಗಳು ಸಾರುವ ಕೆಲಸವನ್ನು ನಿರ್ಬಂಧಿಸಿದರೂ ನಾವು ವಿವೇಚನೆಯಿಂದ ಅಂದರೆ ನೆರೆಹೊರೆಯ ಪ್ರತಿಯೊಂದು ಮನೆಗೂ ಹೋಗದೆ ಒಮ್ಮೆಗೆ ಕೆಲವು ಮನೆಗಳನ್ನು ಮಾಡಿ ನಂತರ ಬೇರೊಂದು ಕ್ಷೇತ್ರಕ್ಕೆ ಹೊರಟುಹೋಗುವುದು ಅಥವಾ ಅನೌಪಚಾರಿಕ ಸಾಕ್ಷಿಯನ್ನು ಹೆಚ್ಚಿಸುತ್ತಾ ಸಾರುವುದನ್ನು ಮುಂದುವರಿಸುತ್ತೇವೆ.

“ಬಾ!” ಎಂದು ಹೇಳುತ್ತಾ ಇರಿ

18, 19. ದೇವರ ಜೊತೆಕೆಲಸಗಾರರಾಗಿರುವ ಸುಯೋಗವನ್ನು ನೀವು ಅಮೂಲ್ಯವೆಂದೆಣಿಸುತ್ತೀರಿ ಎಂಬುದನ್ನು ಹೇಗೆ ತೋರಿಸುತ್ತೀರಿ?

18 ಸುಮಾರು ಒಂಬತ್ತು ದಶಕಗಳಿಗಿಂತ ಹೆಚ್ಚು ಸಮಯದಿಂದ ದೇವರ ಪವಿತ್ರಾತ್ಮವೂ ವಧುವೂ ಜೀವಜಲಕ್ಕಾಗಿ ಬಾಯಾರಿರುವ ಎಲ್ಲರನ್ನೂ “ಬಾ!” ಎಂದು ಕರೆಯುತ್ತಾ ಇದ್ದಾರೆ. ಅವರ ರೋಮಾಂಚಕರ ಆಮಂತ್ರಣವನ್ನು ನೀವು ಕೇಳಿಸಿಕೊಂಡಿದ್ದೀರೊ? ಹಾಗಿದ್ದರೆ ಈ ಆಮಂತ್ರಣವನ್ನು ಇತರರಿಗೆ ನೀಡಲು ನಿಮ್ಮನ್ನು ಪ್ರೇರೇಪಿಸಲಾಗಿದೆ.

19 ಯೆಹೋವನ ಪ್ರೀತಿಪರ ಆಮಂತ್ರಣವು ಇನ್ನೆಷ್ಟು ಕಾಲ ನೀಡಲ್ಪಡುತ್ತಾ ಇರುವುದು ಎಂದು ನಮಗೆ ಗೊತ್ತಿಲ್ಲ. ಆದರೂ “ಬಾ!” ಎಂದು ಹೇಳುವ ಮೂಲಕ ಅದಕ್ಕೆ ನಾವು ಪ್ರತಿಕ್ರಿಯಿಸುವುದು ನಮ್ಮನ್ನು ದೇವರ ಜೊತೆಕೆಲಸಗಾರರನ್ನಾಗಿ ಮಾಡುತ್ತದೆ. (1 ಕೊರಿಂ. 3:6, 9) ಎಂಥ ಸುಯೋಗ ಅದಾಗಿದೆ! ನಾವು ಆ ಸುಯೋಗವನ್ನು ಅಮೂಲ್ಯವೆಂದೆಣಿಸುತ್ತೇವೆಂದು ತೋರಿಸುವಂತಾಗಲಿ ಮತ್ತು ಕ್ರಮವಾಗಿ ಸಾರುವ ಮೂಲಕ ‘ದೇವರಿಗೆ ಯಾವಾಗಲೂ ಸ್ತೋತ್ರಯಜ್ಞವನ್ನು ಅರ್ಪಿಸುವಂತಾಗಲಿ.’ (ಇಬ್ರಿ. 13:15) ವಧುವರ್ಗದೊಂದಿಗೆ ಜೊತೆಗೂಡುತ್ತಾ ಭೂನಿರೀಕ್ಷೆಯುಳ್ಳ ನಾವೆಲ್ಲರೂ “ಬಾ!” ಎನ್ನುತ್ತಾ ಇರೋಣ. ಹೀಗೆ ಇನ್ನೂ ಅನೇಕರು ‘ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳುವಂತಾಗಲಿ’!

ನೀವೇನು ಕಲಿತಿರಿ?

• “ಬಾ” ಎಂಬ ಆಮಂತ್ರಣವನ್ನು ಯಾರಿಗೆ ನೀಡಲಾಗಿದೆ?

• “ಬಾ” ಎಂಬ ಆಮಂತ್ರಣವನ್ನು ಮೂಲತಃ ನೀಡಿದವನು ಯೆಹೋವನೆಂದು ಹೇಗೆ ಹೇಳಸಾಧ್ಯವಿದೆ?

• “ಬಾ” ಎಂಬ ಆಮಂತ್ರಣವನ್ನು ನೀಡುವುದರಲ್ಲಿ ಪವಿತ್ರಾತ್ಮವು ಯಾವ ಪಾತ್ರವನ್ನು ವಹಿಸುತ್ತದೆ?

• ಶುಶ್ರೂಷೆಯಲ್ಲಿ ನಾವು ಕ್ರಮವಾಗಿರಲು ಶ್ರಮಿಸಬೇಕು ಏಕೆ?

[ಅಧ್ಯಯನ ಪ್ರಶ್ನೆಗಳು]

[ಪುಟ 16ರಲ್ಲಿರುವ ಚಾರ್ಟು/ಚಿತ್ರಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

“ಬಾ!” ಎಂದು ಹೇಳುತ್ತಾ ಇರಿ

1914

5,100 ಪ್ರಚಾರಕರು

1918

ಭೂಪರದೈಸದಲ್ಲಿ ಅನೇಕರು ಜೀವವನ್ನು ಪಡೆಯುವರು

1922

“ರಾಜನನ್ನೂ ಅವನ ರಾಜ್ಯವನ್ನೂ ಪ್ರಕಟಿಸಿರಿ, ಪ್ರಕಟಿಸಿರಿ, ಪ್ರಕಟಿಸಿರಿ”

1929

ನಂಬಿಗಸ್ತ ಉಳಿಕೆಯವರು “ಬಾ!” ಅನ್ನುತ್ತಾರೆ

1932

“ಬಾ!” ಎಂದು ಹೇಳುವ ಆಮಂತ್ರಣವು ಅಭಿಷಿಕ್ತರಿಗಲ್ಲದೆ ಬೇರೆಯವರಿಗೂ ನೀಡಲಾಗಿದೆ

1934

ಯೋನಾದಾಬ ವರ್ಗದವರು ಸಾರಲು ಆಮಂತ್ರಿಸಲ್ಪಟ್ಟರು

1935

“ಮಹಾ ಸಮೂಹ” ಗುರುತಿಸಲ್ಪಟ್ಟಿತು

2009

73,13,173 ಪ್ರಚಾರಕರು