ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪೈಶಾಚಿಕ ಅಪಪ್ರಚಾರವನ್ನು ಪ್ರತಿರೋಧಿಸಿರಿ

ಪೈಶಾಚಿಕ ಅಪಪ್ರಚಾರವನ್ನು ಪ್ರತಿರೋಧಿಸಿರಿ

ಪೈಶಾಚಿಕ ಅಪಪ್ರಚಾರವನ್ನು ಪ್ರತಿರೋಧಿಸಿರಿ

‘ಮೋಸಹೋಗಬೇಡಿರಿ. ನಿಮ್ಮ ದೇವರು ನಿಮಗೆ ಸಹಾಯಮಾಡಲಾರ. ಒಡಂಬಡಿಕೆಮಾಡಿಕೊಳ್ಳಿ, ಇಲ್ಲವಾದರೆ ನಿಮಗಾಗುವ ದುರ್ಗತಿಯನ್ನು ನೋಡಿ!’ ಯೆರೂಸಲೇಮಿನ ನಿವಾಸಿಗಳಿಗೆ ಅಶ್ಶೂರದ ರಾಜ ಸನ್ಹೇರೀಬನ ಪ್ರತಿನಿಧಿ ರಬ್ಷಾಕೆ ಕೊಟ್ಟ ಸಂದೇಶದ ಸಾರಾಂಶವದು. ರಾಜನ ಸೈನ್ಯಗಳು ಯೆಹೂದದೇಶದ ಮೇಲೆ ಆಕ್ರಮಣಮಾಡಿ ಒಳನುಗ್ಗಿದ್ದವು. ಈ ಪ್ರತಿನಿಧಿಯ ಮಾತುಗಳು ಯೆರೂಸಲೇಮಿನ ಜನರ ಸ್ಥೈರ್ಯವನ್ನು ಉಡುಗಿಸಿ ಭಯದಿಂದ ಶರಣಾಗತರಾಗುವಂತೆ ಮಾಡಲು ಯೋಜಿಸಲ್ಪಟ್ಟಿದ್ದವು.—2 ಅರ. 18:28-35.

ಅಶ್ಶೂರ್ಯರು ನಿರ್ದಯ ಕ್ರೂರ ಕೃತ್ಯಗಳಿಗೆ ಕುಖ್ಯಾತರಾಗಿದ್ದರು. ತಮಗೆ ಸೆರೆಸಿಕ್ಕ ವ್ಯಕ್ತಿಗಳನ್ನು ತಾವೆಷ್ಟು ಕ್ರೂರವಾಗಿ ಉಪಚರಿಸುತ್ತೇವೆ ಎಂಬುದನ್ನು ಭೀಬತ್ಸವಾಗಿ ವಿವರಿಸುವ ಮೂಲಕ ಅವರು ತಮ್ಮ ಎದುರಾಳಿಗಳಲ್ಲಿ ಭೀತಿಯನ್ನು ಹುಟ್ಟಿಸುತ್ತಿದ್ದರು. ಫಿಲಿಪ್‌ ಟೇಲರ್‌ ಎಂಬ ಇತಿಹಾಸಕಾರರಿಗನುಸಾರ, ಅಶ್ಶೂರ್ಯರು “ಸೆರೆಹಿಡಿದ ವ್ಯಕ್ತಿಗಳನ್ನು ಅಂಕೆಯಲ್ಲಿಡಲಿಕ್ಕಾಗಿ ಅವರಲ್ಲಿ ದಿಗಿಲುಹುಟ್ಟಿಸುವ ಮಾಹಿತಿಯನ್ನು ಹರಡಿಸುತ್ತಿದ್ದರು. ಇತರರೊಂದಿಗೆ ತಾವೆಷ್ಟು ಕ್ರೂರವಾಗಿ ವರ್ತಿಸಿದ್ದೇವೆ ಎಂಬ ವದಂತಿಯಿಂದ ತಮ್ಮ ವೈರಿಗಳಲ್ಲಿ ಮನೋನಡುಕವನ್ನು ಉಂಟುಮಾಡುವುದು ಅವರ ಪದ್ಧತಿ.” ಅಪಪ್ರಚಾರ ಒಂದು ಪ್ರಬಲ ಅಸ್ತ್ರ. ಅದು “ಮನಸ್ಸಿನ ಮೇಲೆ ದಾಳಿಮಾಡುತ್ತದೆ” ಎಂದು ಟೇಲರ್‌ ಹೇಳುತ್ತಾರೆ.

ಸತ್ಯ ಕ್ರೈಸ್ತರು ‘ರಕ್ತಮಾಂಸಗಳ ವಿರುದ್ಧವಾಗಿ ಅಲ್ಲ ದುಷ್ಟಾತ್ಮ ಸೇನೆಗಳ ವಿರುದ್ಧವಾಗಿ’ ಅಂದರೆ ದೇವರ ವಿರುದ್ಧ ದಂಗೆಯೆದ್ದ ಆತ್ಮಜೀವಿಗಳ ವಿರುದ್ಧವಾಗಿ ಹೋರಾಡಬೇಕಾಗಿದೆ. (ಎಫೆ. 6:12) ಅವರಲ್ಲಿ ಪ್ರಮುಖನು ಪಿಶಾಚನಾದ ಸೈತಾನನು. ಅವನು ಸಹ ಭಯೋತ್ಪಾದನೆಯೊಂದಿಗೆ ಕೂಡಿದ ಅಪಪ್ರಚಾರವನ್ನು ಬಳಸುತ್ತಾನೆ.

ನಮ್ಮಲ್ಲಿ ಪ್ರತಿಯೊಬ್ಬರ ಸಮಗ್ರತೆಯನ್ನು ತಾನು ಮುರಿಯಬಲ್ಲೆ ಎಂದು ಸೈತಾನನು ಕೊಚ್ಚಿಕೊಳ್ಳುತ್ತಾನೆ. ಮೂಲಪಿತ ಯೋಬನ ದಿನಗಳಲ್ಲಿ ಅವನು ಯೆಹೋವ ದೇವರಿಗೆ ಹೇಳಿದ್ದು: “ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು.” ಬೇರೆ ಮಾತುಗಳಲ್ಲಿ ಹೇಳುವುದಾದರೆ, ಸಾಕಷ್ಟು ಒತ್ತಡವನ್ನು ಹಾಕುವಲ್ಲಿ ಒಬ್ಬ ಮನುಷ್ಯನು ದೇವರಿಗೆ ತೋರಿಸುವ ಸಮಗ್ರತೆಯನ್ನು ಇಂದೋ ಮುಂದೋ ಬಿಟ್ಟೇಬಿಡುವನು ಎಂಬುದು ಸೈತಾನನ ವಾದ. (ಯೋಬ 2:4) ಸೈತಾನನ ಈ ವಾದ ಸರಿಯೊ? ನಮಗೆ ಇಂತಿಷ್ಟು ಕಷ್ಟವನ್ನು ಮಾತ್ರ ತಾಳಲು ಸಾಧ್ಯವಿದ್ದು ಅದಕ್ಕಿಂತ ಹೆಚ್ಚು ಕಷ್ಟ ಬಂದರೆ ಜೀವವನ್ನು ಉಳಿಸಿಕೊಳ್ಳಲು ನಾವು ಪಾಲಿಸತಕ್ಕ ಮೂಲತತ್ತ್ವಗಳನ್ನು ತೊರೆದುಬಿಡುವೆವೊ? ತೊರೆದುಬಿಡಬಹುದು ಎಂದು ನೆನಸುವಂತೆ ಮಾಡಲು ಸೈತಾನನು ಪ್ರಯತ್ನಿಸುತ್ತಾನೆ. ಆದುದರಿಂದ ಈ ವಿಚಾರವನ್ನು ನಮ್ಮ ಮನಸ್ಸಿನಲ್ಲಿ ತುರುಕಿಸಲು ಅವನು ವಂಚನಾತ್ಮಕ ಪ್ರಚಾರವನ್ನು ಬಳಸುತ್ತಾನೆ. ಅದನ್ನು ಮಾಡಲು ಅವನು ಬಳಸುವ ಕೆಲವು ವಿಧಾನಗಳನ್ನು ಪರಿಗಣಿಸೋಣ ಮತ್ತು ಅವನನ್ನು ಹೇಗೆ ಪ್ರತಿರೋಧಿಸಬಲ್ಲೆವು ಎಂಬುದನ್ನು ನೋಡೋಣ.

ಅವರ ‘ಅಸ್ತಿವಾರ ಧೂಳಿನಲ್ಲಿ’

ಯೋಬನ ಮೂವರು ಸಂದರ್ಶಕ ಸಂಗಡಿಗರಲ್ಲಿ ಒಬ್ಬನಾದ ಎಲೀಫಜನನ್ನು ಸೈತಾನನು ಉಪಯೋಗಿಸುತ್ತಾ ಮನುಷ್ಯರು ಸೈತಾನನ ಆಕ್ರಮಣಗಳನ್ನು ಎದುರಿಸಲು ತೀರಾ ದುರ್ಬಲರು ಎಂದು ವಾದಿಸಿದನು. ಮಾನವರನ್ನು ‘ಮಣ್ಣಿನಿಂದಾದ ಮನೆಗಳೊಳಗೆ ವಾಸಿಸುವವರಾಗಿ’ ಸೂಚಿಸುತ್ತಾ ಅವನು ಯೋಬನಿಗೆ ಹೇಳಿದ್ದು: ‘ಅವರ ಅಸ್ತಿವಾರ ಧೂಳಿನಲ್ಲಿದೆ. ಅವರು ದೀಪದ ಹುಳದಂತೆ ಅಳಿದುಹೋಗುತ್ತಾರೆ. ಉದಯಾಸ್ತಮಾನಗಳ ಮಧ್ಯದಲ್ಲಿ ಜೀವಿಸಿ ಜಜ್ಜಲ್ಪಡುತ್ತಾರೆ, ಹೀಗೆ ನಿತ್ಯನಾಶನಹೊಂದುವದನ್ನು ಯಾರೂ ಲಕ್ಷಿಸುವದಿಲ್ಲ.’—ಯೋಬ 4:19, 20.

ಶಾಸ್ತ್ರಗ್ರಂಥದಲ್ಲಿ ಬೇರೆಕಡೆ ನಾವು ‘ಮಣ್ಣಿನ ಪಾತ್ರೆಗಳಿಗೆ’ ಅಂದರೆ ಜೇಡಿಮಣ್ಣಿನ ಭಿದುರ ಮಡಕೆಗಳಿಗೆ ಹೋಲಿಸಲ್ಪಟ್ಟಿದ್ದೇವೆ. (2 ಕೊರಿಂ. 4:7) ಬಾಧ್ಯತೆಯಾಗಿ ಪಡೆದ ಪಾಪ ಮತ್ತು ಅಪರಿಪೂರ್ಣತೆಯಿಂದಾಗಿ ನಾವು ದುರ್ಬಲರು. (ರೋಮ. 5:12) ಸ್ವಂತ ಶಕ್ತಿಯಲ್ಲಿ ನಾವು ಸೈತಾನನ ಆಕ್ರಮಣಗಳನ್ನು ಎದುರಿಸಿ ನಿಲ್ಲಲಾರೆವು. ಆದರೆ ಕ್ರೈಸ್ತರೋಪಾದಿ ನಾವು ಸಹಾಯಶೂನ್ಯರಲ್ಲ. ನಮ್ಮ ಬಲಹೀನತೆಗಳ ಹೊರತೂ ದೇವರ ದೃಷ್ಟಿಯಲ್ಲಿ ಅಮೂಲ್ಯರು. (ಯೆಶಾ. 43:4) ಅದಲ್ಲದೆ ಯೆಹೋವನು ಪವಿತ್ರಾತ್ಮಕ್ಕಾಗಿ ಬೇಡಿಕೊಳ್ಳುವವರಿಗೆ ಅದನ್ನು ದಯಪಾಲಿಸುತ್ತಾನೆ. (ಲೂಕ 11:13) ಆತನ ಆತ್ಮವು ನಮಗೆ “ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿ” ಕೊಟ್ಟು ಸೈತಾನನು ನಮ್ಮ ಮೇಲೆ ತರುವ ಯಾವುದೇ ಸಂಕಷ್ಟವನ್ನು ನಿಭಾಯಿಸಲು ಶಕ್ತಗೊಳಿಸುತ್ತದೆ. (2 ಕೊರಿಂ. 4:7; ಫಿಲಿ. 4:13) “ನಂಬಿಕೆಯಲ್ಲಿ ಸ್ಥಿರರಾಗಿದ್ದು” ಪಿಶಾಚನ ವಿರುದ್ಧವಾಗಿ ನಾವು ನಮ್ಮ ನಿಲುವನ್ನು ತಕ್ಕೊಂಡಲ್ಲಿ ದೇವರು ನಮ್ಮನ್ನು ದೃಢರಾಗಿಯೂ ಬಲವುಳ್ಳವರನ್ನಾಗಿಯೂ ಮಾಡುವನು. (1 ಪೇತ್ರ 5:8-10) ಆದಕಾರಣ ಪಿಶಾಚನಾದ ಸೈತಾನನಿಗೆ ನಾವು ಭಯಪಡುವ ಅಗತ್ಯವಿಲ್ಲ.

ನರನು ‘ಅಧರ್ಮವನ್ನು ನೀರಿನಂತೆ ಕುಡಿಯುತ್ತಾನೆ’

“ನರನು ಎಷ್ಟರವನು! ಅವನು ಪರಿಶುದ್ಧನಾಗಿರುವದು ಸಾಧ್ಯವೋ? ಸ್ತ್ರೀಯಲ್ಲಿ ಹುಟ್ಟಿದವನು ನೀತಿವಂತನಾಗಿರಬಹುದೇ?” ಎಂದು ಕೇಳಿದನು ಎಲೀಫಜ. ಅನಂತರ ತಾನೇ ಉತ್ತರಿಸುತ್ತಾ ಹೇಳಿದ್ದು: “ಆಹಾ, ತನ್ನ ದೂತರಲ್ಲಿಯೂ [ದೇವರು] ನಂಬಿಕೆಯಿಡುವದಿಲ್ಲ, ಆಕಾಶವೂ ಆತನ ದೃಷ್ಟಿಯಲ್ಲಿ ನಿರ್ಮಲವಾಗಿರದು. ಹೀಗಿರಲು ಅಧರ್ಮವನ್ನು ನೀರಿನಂತೆ ಕುಡಿಯುತ್ತಾ ಅಸಹ್ಯನೂ ಕೆಟ್ಟವನೂ ಆದ ನರಜನ್ಮದವನು ಮತ್ತೂ ಅಶುದ್ಧನಲ್ಲವೇ!” (ಯೋಬ 15:14-16) ಯೆಹೋವನು ಯಾವ ಮಾನವನನ್ನೂ ನೀತಿವಂತನೆಂದು ಪರಿಗಣಿಸುವುದಿಲ್ಲ ಎಂದು ಎಲೀಫಜನು ಯೋಬನಿಗೆ ಹೇಳುತ್ತಿದ್ದನು. ಪಿಶಾಚನು ಸಹ ನಕಾರಾತ್ಮಕ ಭಾವನೆಯನ್ನೇ ಎತ್ತಿಕಟ್ಟುತ್ತಾನೆ. ಹಿಂದೆ ಮಾಡಿದ ತಪ್ಪುಗಳಿಗಾಗಿ ನಾವು ಚಿಂತಿಸುತ್ತಾ ಇರುವಂತೆ ಅವನು ಬಯಸುತ್ತಾನೆ. ಅತಿಯಾಗಿ ಸ್ವಖಂಡನೆಯನ್ನು ಮಾಡುತ್ತಾ ನಾವು ನಮ್ಮನ್ನು ದುರವಸ್ಥೆಯಿಂದ ಬಿಡಿಸಿಕೊಳ್ಳಲಾರೆವು ಎಂದು ನೆನಸಬೇಕೆಂದೇ ಅವನ ಅಪೇಕ್ಷೆ. ಯೆಹೋವನು ನಮ್ಮಿಂದ ಅಪೇಕ್ಷಿಸುವಂಥದ್ದು ನಮ್ಮ ಶಕ್ತಿಗೆ ಮೀರಿದ್ದು ಎಂದು ಅತಿ ಅಂದಾಜು ಮಾಡಬೇಕೆಂದು ಹಾಗೂ ಯೆಹೋವನ ಕನಿಕರ, ಕ್ಷಮೆ ಮತ್ತು ಬೆಂಬಲವನ್ನು ನಾವು ಕೀಳಂದಾಜು ಮಾಡಬೇಕೆಂದು ಅವನು ಬಯಸುತ್ತಾನೆ.

ನಿಶ್ಚಯವಾಗಿ, ನಾವೆಲ್ಲರೂ ‘ಪಾಪಮಾಡಿದ್ದೇವೆ ಮತ್ತು ದೇವರ ಮಹಿಮೆಯನ್ನು ಹೊಂದಲು ತಪ್ಪಿಹೋಗಿದ್ದೇವೆ.’ ಯೆಹೋವನ ಪರಿಪೂರ್ಣ ನೀತಿಯ ಮಟ್ಟಗಳನ್ನು ಯಾವ ಅಪರಿಪೂರ್ಣ ಮನುಷ್ಯನೂ ಮುಟ್ಟಲಾರನು ನಿಜ. (ರೋಮ. 3:23; 7:21-23) ಆದರೂ ನಾವಾತನಿಗೆ ನಿಷ್ಪ್ರಯೋಜಕರು ಎಂದಿದರ ಅರ್ಥವಲ್ಲ. ನಮ್ಮ ಪಾಪಪೂರ್ಣ ಸ್ಥಿತಿಯ ದುರುಪಯೋಗ ಮಾಡುತ್ತಿರುವವನು ‘ಪಿಶಾಚನೆಂದೂ ಸೈತಾನನೆಂದೂ ಕರೆಯಲ್ಪಡುವ ಪುರಾತನ ಸರ್ಪವೇ’ ಎಂದು ಯೆಹೋವನಿಗೆ ತಿಳಿದದೆ. (ಪ್ರಕ. 12:9, 10) ನಾವು “ಧೂಳಿಯಾಗಿದ್ದೇವೆ” ಎಂಬುದನ್ನು ತಿಳಿದಿರುವ ದೇವರು ನಮ್ಮ ಕಡೆಗೆ ಪರಿಗಣನೆಯನ್ನು ತೋರಿಸುತ್ತಾನೆ, ನಮ್ಮಲ್ಲಿ ‘ತಪ್ಪುಹುಡುಕುತ್ತಾ ಇರುವುದಿಲ್ಲ.’—ಕೀರ್ತ. 103:8, 9, 14.

ನಾವು ದುಷ್ಟ ಮಾರ್ಗವನ್ನು ತೊರೆದು ಪಾಪಪ್ರಜ್ಞೆಯಿಂದ ಕುಗ್ಗಿದ ಹೃದಯದಿಂದಲೂ ಪಶ್ಚಾತ್ತಾಪ ಭಾವದಿಂದಲೂ ಯೆಹೋವನನ್ನು ಸಮೀಪಿಸುವುದಾದರೆ “ಆತನು ಮಹಾಕೃಪೆಯಿಂದ ಕ್ಷಮಿಸುವನು.” (ಯೆಶಾ. 55:7; ಕೀರ್ತ. 51:17) ನಮ್ಮ ಪಾಪಗಳು “ಕಡು ಕೆಂಪಾಗಿದ್ದರೂ ಹಿಮದ ಹಾಗೆ ಬಿಳುಪಾಗುವವು” ಎಂದು ಬೈಬಲ್‌ ಹೇಳುತ್ತದೆ. (ಯೆಶಾ. 1:18) ಆದ್ದರಿಂದ ನಾವು ದೇವರ ಚಿತ್ತವನ್ನು ಮಾಡಲು ಪ್ರಯತ್ನಿಸುವುದನ್ನು ಎಂದಿಗೂ ಬಿಟ್ಟುಬಿಡದಂತೆ ದೃಢಸಂಕಲ್ಪ ಮಾಡೋಣ.

ನಮ್ಮ ಪಾಪಪೂರ್ಣ ಸ್ಥಿತಿಯಲ್ಲಿ ದೇವರ ಮುಂದೆ ಒಂದು ನೀತಿಯುಳ್ಳ ನಿಲುವನ್ನು ನಾವೆಂದೂ ಗಳಿಸಲಾರೆವು. ಆದಾಮಹವ್ವರು ಪರಿಪೂರ್ಣತೆಯನ್ನು ಕಳೆದುಕೊಂಡರು. ಈ ಮೂಲಕ ತಾವು ಮಾತ್ರವಲ್ಲ ನಾವೆಲ್ಲರೂ ನಿತ್ಯಜೀವದ ಪ್ರತೀಕ್ಷೆಯನ್ನು ಕಳಕೊಳ್ಳುವಂತೆ ಮಾಡಿದರು. (ರೋಮ. 6:23) ಆದರೂ ಮಾನವರಿಗಾಗಿರುವ ತನ್ನ ಮಹಾ ಪ್ರೀತಿಯಿಂದಾಗಿ ಯೆಹೋವನು ಒಂದು ಏರ್ಪಾಡನ್ನು ಮಾಡಿದನು. ಅದೇನಂದರೆ ತನ್ನ ಕುಮಾರನಾದ ಯೇಸು ಕ್ರಿಸ್ತನ ವಿಮೋಚನಾ ಮೌಲ್ಯ ಯಜ್ಞದಲ್ಲಿ ನಂಬಿಕೆಯಿಡುವುದಾದರೆ ಆತನು ನಮ್ಮ ಪಾಪಗಳನ್ನು ಕ್ಷಮಿಸಿಬಿಡುವನು. (ಮತ್ತಾ. 20:28; ಯೋಹಾ. 3:16) ಇದು ದೇವರ ‘ಅಪಾತ್ರ ದಯೆಯ’ ಎಂಥ ಆಶ್ಚರ್ಯಕರ ಅಭಿವ್ಯಕ್ತಿ! (ತೀತ 2:11) ಹೌದು, ನಾವು ಪಾಪವಿಮುಕ್ತರಾಗಬಲ್ಲೆವು! ಹೀಗಿರಲಾಗಿ, ಸೈತಾನನು ನಮ್ಮನ್ನು ನಮಗೆ ಬಿಡುಗಡೆಯೇ ಇಲ್ಲ ಎಂದು ಯೋಚಿಸುವಂತೆ ಮಾಡಲು ನಾವು ಬಿಡುವುದೇಕೆ?

ಕೈಚಾಚಿ ಅವನ ಅಸ್ತಿಮಾಂಸಗಳನ್ನು ಹೊಡೆ

ಯೋಬನು ತನ್ನ ಆರೋಗ್ಯವನ್ನು ಕಳಕೊಂಡಲ್ಲಿ ನಂಬಿಕೆಯನ್ನೂ ಕಳಕೊಳ್ಳುವನು ಎಂದು ಸೈತಾನನು ವಾದಿಸಿದನು. ಯೆಹೋವನಿಗೆ ಸವಾಲೊಡ್ಡುತ್ತಾ ಪಿಶಾಚನಂದದ್ದು: “ನಿನ್ನ ಕೈಚಾಚಿ ಅವನ ಅಸ್ತಿಮಾಂಸಗಳನ್ನು ಹೊಡೆ; ಅವನು ನಿನ್ನ ಮುಖದೆದುರಿಗೆ ನಿನ್ನನ್ನು ದೂಷಿಸಲೇ ದೂಷಿಸುವನು.” (ಯೋಬ 2:5) ನಮ್ಮ ದೇಹದೌರ್ಬಲ್ಯಗಳ ಕಾರಣ ನಾವು ನಿಷ್ಪ್ರಯೋಜಕರೆಂದು ಎಣಿಸುವಂತೆ ಮಾಡಲು ಶಕ್ತನಾದರೆ ದೇವರ ವಿರೋಧಿಯು ನಿಶ್ಚಯವಾಗಿಯೂ ಸಂತೋಷಪಡುವನು.

ಆದರೂ ನಾವು ಹಿಂದೆ ಆತನ ಸೇವೆಯಲ್ಲಿ ಮಾಡಿದಷ್ಟನ್ನು ಈಗ ಮಾಡಲಾರದೇ ಇರುವಾಗ ಯೆಹೋವನು ನಮ್ಮನ್ನು ತ್ಯಜಿಸುವುದಿಲ್ಲ. ಒಂದುವೇಳೆ ನಮ್ಮ ಪ್ರಿಯ ಮಿತ್ರನೊಬ್ಬನು ಆಕ್ರಮಣಕ್ಕೊಳಗಾಗಿ ಗಾಯಗೊಂಡಾಗ ನಾವೇನು ಮಾಡುವೆವು? ನಮಗೆ ಅವನು ಹಿಂದೊಮ್ಮೆ ಮಾಡಿದಷ್ಟು ಈಗ ಮಾಡಲಾರನು ಎಂಬ ಕಾರಣಮಾತ್ರದಿಂದ ನಾವವನನ್ನು ಕಡಿಮೆಯಾಗಿ ವೀಕ್ಷಿಸುವೆವೊ? ಖಂಡಿತವಾಗಿಯೂ ಇಲ್ಲ! ವಿಶೇಷವಾಗಿ ನಮ್ಮ ಹಿತಕ್ಕಾಗಿ ಪ್ರಯತ್ನಿಸುವಾಗ ಅವನು ಗಾಯಗೊಂಡಿದ್ದಲ್ಲಿ ನಾವವನನ್ನು ಇನ್ನೂ ಹೆಚ್ಚಾಗಿ ಪ್ರೀತಿಸುವೆವು ಮತ್ತು ಪರಿಗಣಿಸುವೆವು. ಯೆಹೋವನು ಕೂಡ ಇದಕ್ಕಿಂತ ಹೆಚ್ಚನ್ನು ಮಾಡುವನಲ್ಲವೆ? ಬೈಬಲನ್ನುವುದು: “ನಿಮ್ಮ ಈ ಕೆಲಸವನ್ನೂ ದೇವರ ಹೆಸರಿಗಾಗಿ ನೀವು ತೋರಿಸಿದ ಪ್ರೀತಿಯನ್ನೂ ಮರೆಯುವುದಕ್ಕೆ ಆತನು ಅನೀತಿವಂತನಲ್ಲ.”—ಇಬ್ರಿ. 6:10.

ಅನೇಕ ವರ್ಷಗಳಿಂದ ದೇವರ ಆರಾಧನೆಯನ್ನು ಬೆಂಬಲಿಸಿದ್ದಿರಬಹುದಾದ “ಒಬ್ಬ ಬಡ ವಿಧವೆ” ಕುರಿತು ಶಾಸ್ತ್ರಗ್ರಂಥವು ಮಾತಾಡುತ್ತದೆ. ಅವಳು “ತೀರ ಕಡಮೆ ಬೆಲೆಯ ಎರಡು ಚಿಕ್ಕ ನಾಣ್ಯಗಳನ್ನು” ದೇವಾಲಯದ ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಿದ್ದನ್ನು ಯೇಸು ಕಂಡನು. ಅವಳನ್ನು ಮತ್ತು ಅವಳ ಕಾಣಿಕೆಯನ್ನು ಯೇಸು ಬೆಲೆಯಿಲ್ಲದ್ದಾಗಿ ಪರಿಗಣಿಸಿದನೊ? ಇಲ್ಲ. ಬದಲಾಗಿ ಅವಳನ್ನು ಹೊಗಳಿದನು. ಯಾಕೆಂದರೆ ಅವಳು ಸತ್ಯಾರಾಧನೆಯ ಬೆಂಬಲಕ್ಕಾಗಿ ತನ್ನ ಪರಿಸ್ಥಿತಿಯು ಅನುಮತಿಸಿದ ಎಲ್ಲವನ್ನೂ ಮಾಡಿದಳು.—ಲೂಕ 21:1-4.

ನಾವು ನಮ್ಮ ಸಮಗ್ರತೆಯನ್ನು ಕಾಪಾಡಿಕೊಂಡಲ್ಲಿ ಯೆಹೋವನೊಂದಿಗಿನ ನಮ್ಮ ಸಂಬಂಧವು ದೃಢವಾಗಿ ಉಳಿಯುವುದೆಂಬ ಖಾತ್ರಿ ನಮಗಿರಬಲ್ಲದು. ವೃದ್ಧಾಪ್ಯ, ಕಾಯಿಲೆಗಳ ರೂಪದಲ್ಲಿ ಅಪರಿಪೂರ್ಣತೆಯು ನಮ್ಮನ್ನೆಷ್ಟೇ ಬಾಧಿಸಲಿ ನಾವು ದೃಢರಾಗಿರುವೆವು. ನಂಬಿಗಸ್ತರ ಸೇವೆಯನ್ನು ಸಂಕಷ್ಟಗಳು ಸೀಮಿತಗೊಳಿಸುವವು ಎಂಬ ಕಾರಣಮಾತ್ರದಿಂದ ಯೆಹೋವನು ತನ್ನ ಸೇವಕರನ್ನು ಎಂದೂ ಕೈಬಿಡನು.—ಕೀರ್ತ. 71:9, 17, 18.

“ರಕ್ಷಣೆಯ ಶಿರಸ್ತ್ರಾಣವನ್ನು” ಸ್ವೀಕರಿಸಿರಿ

ನಾವು ಸೈತಾನನ ಅಪಪ್ರಚಾರದಿಂದ ನಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಲ್ಲೆವು? ಅಪೊಸ್ತಲ ಪೌಲನು ಬರೆದದ್ದು: “ಕರ್ತನಲ್ಲಿಯೂ ಆತನ ಪರಾಕ್ರಮಭರಿತ ಶಕ್ತಿಯಲ್ಲಿಯೂ ನೀವು ಬಲವನ್ನು ಪಡೆದುಕೊಳ್ಳುತ್ತಾ ಇರಿ. ಪಿಶಾಚನ ತಂತ್ರೋಪಾಯಗಳ ವಿರುದ್ಧ ದೃಢರಾಗಿ ನಿಲ್ಲಲು ಶಕ್ತರಾಗುವಂತೆ ದೇವರು ದಯಪಾಲಿಸುವ ಸಂಪೂರ್ಣ ರಕ್ಷಾಕವಚವನ್ನು ಧರಿಸಿಕೊಳ್ಳಿರಿ.” ಆ ಆಧ್ಯಾತ್ಮಿಕ ರಕ್ಷಾಕವಚದ ಒಂದು ಭಾಗ “ರಕ್ಷಣೆಯ ಶಿರಸ್ತ್ರಾಣ.” (ಎಫೆ. 6:10, 11, 17) ಪೈಶಾಚಿಕ ಅಪಪ್ರಚಾರದ ವಿಷಯದಲ್ಲಿ ನಾವು ಆ ಶಿರಸ್ತ್ರಾಣವನ್ನು ಸ್ವೀಕರಿಸಿ ಅದನ್ನು ಹಾಕಿಕೊಂಡೇ ಇದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಒಬ್ಬ ಸೈನಿಕನ ಶಿರಸ್ತ್ರಾಣ ಅವನ ತಲೆಯನ್ನು ಸಂರಕ್ಷಿಸುತ್ತದೆ. ನಮ್ಮ “ರಕ್ಷಣೆಯ ನಿರೀಕ್ಷೆ” ಅಂದರೆ ತನ್ನ ಮಹಿಮಾನ್ವಿತ ನೂತನ ಲೋಕದ ವಾಗ್ದಾನಗಳನ್ನು ದೇವರು ನೆರವೇರಿಸುವನೆಂಬ ದೃಢವಿಶ್ವಾಸವು ಸೈತಾನನ ಸುಳ್ಳುಗಳಿಂದ ನಮ್ಮ ಯೋಚನಾಶಕ್ತಿಯನ್ನು ಕಾಪಾಡುವುದು. (1 ಥೆಸ. 5:8) ಶಾಸ್ತ್ರಗ್ರಂಥದ ಶ್ರದ್ಧಾಪೂರ್ವಕ ವೈಯಕ್ತಿಕ ಅಧ್ಯಯನದ ಮೂಲಕ ನಾವು ಆ ನಿರೀಕ್ಷೆಯನ್ನು ಉಜ್ವಲವಾಗಿಯೂ ಬಲವಾಗಿಯೂ ಇಟ್ಟುಕೊಳ್ಳಬೇಕು.

ಯೋಬನು ಸೈತಾನನಿಂದ ಬಂದ ಕ್ರೂರವಾದ ದ್ವೇಷಭರಿತ ಆಕ್ರಮಣಗಳನ್ನು ತಾಳಿಕೊಂಡನು. ಪುನರುತ್ಥಾನದಲ್ಲಿ ಯೋಬನಿಗೆ ಎಷ್ಟು ಬಲವಾದ ನಂಬಿಕೆಯಿತ್ತೆಂದರೆ, ಮರಣಭಯವು ಕೂಡ ಅವನನ್ನು ತಲ್ಲಣಗೊಳಿಸಲಿಲ್ಲ. ಬದಲಿಗೆ ಅವನು ಯೆಹೋವನಿಗೆ ಹೇಳಿದ್ದು: “ನೀನು ಕರೆದರೆ ಉತ್ತರಕೊಡುವೆನು, ನೀನು ಸೃಷ್ಟಿಸಿದ ನನ್ನ ಮೇಲೆ ನಿನಗೆ ಹಂಬಲಿಕೆ ಹುಟ್ಟೀತು.” (ಯೋಬ 14:15) ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳಲಿಕ್ಕಾಗಿ ಯೋಬನು ಸಾಯಬೇಕಾಗಿದ್ದರೂ ತನ್ನ ನಂಬಿಗಸ್ತ ಸೇವಕರ ಮೇಲೆ ದೇವರು ಇಟ್ಟಿರುವ ಪ್ರೀತಿಯು ಅವರನ್ನು ಮೃತ್ಯುವಿನಿಂದ ಜೀವಕ್ಕೆ ಕರೆಯಲು ಪ್ರಚೋದಿಸುವುದು ಎಂಬ ಭರವಸೆ ಅವನಿಗಿತ್ತು.

ಸತ್ಯ ದೇವರಲ್ಲಿ ನಮಗೆ ಕೂಡ ಅದೇ ರೀತಿಯ ಭರವಸೆ ಇರಲಿ. ಸೈತಾನನು ಮತ್ತು ಅವನ ಕಾರ್ಯಕರ್ತರು ನಮ್ಮ ವಿರುದ್ಧ ತರುವ ಯಾವುದೇ ವಿಷಯಕ್ಕೆ ಯೆಹೋವನು ಸರಿಯಾದ ಎದುರೇಟು ನೀಡಬಲ್ಲನು. ಪೌಲನು ಕೊಡುವ ಆಶ್ವಾಸನೆಯನ್ನೂ ಮನಸ್ಸಿನಲ್ಲಿಡಿ: “ದೇವರು ನಂಬಿಗಸ್ತನು; ನೀವು ಸಹಿಸಿಕೊಳ್ಳಲು ಅಸಾಧ್ಯವಾಗುವಷ್ಟರ ಮಟ್ಟಿಗೆ ನೀವು ಪ್ರಲೋಭಿಸಲ್ಪಡುವಂತೆ ಆತನು ಅನುಮತಿಸುವುದಿಲ್ಲ; ನೀವು ತಾಳಿಕೊಳ್ಳಲು ಶಕ್ತರಾಗುವಂತೆ ಪ್ರಲೋಭನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನೂ ಆತನು ಸಿದ್ಧಪಡಿಸುವನು.”—1 ಕೊರಿಂ. 10:13.

[ಪುಟ 20ರಲ್ಲಿರುವ ಚಿತ್ರ]

ಯೆಹೋವನು ನಿಮ್ಮ ನಂಬಿಗಸ್ತ ಸೇವೆಯನ್ನು ಮಾನ್ಯಮಾಡುತ್ತಾನೆ

[ಪುಟ 21ರಲ್ಲಿರುವ ಚಿತ್ರ]

ರಕ್ಷಣೆಯ ಶಿರಸ್ತ್ರಾಣವನ್ನು ಸ್ವೀಕರಿಸಿ, ಅದನ್ನು ಹಾಕಿಕೊಂಡೇ ಇರಿ