ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಯಾವ ಸನ್ನಿವೇಶಗಳಲ್ಲಿ ಪುನರ್ದೀಕ್ಷಾಸ್ನಾನವನ್ನು ಪರಿಗಣಿಸಬಹುದು?

ಒಬ್ಬ ಸ್ನಾತ ವ್ಯಕ್ತಿ ಕೆಲವೊಂದು ಸನ್ನಿವೇಶಗಳಲ್ಲಿ ತನ್ನ ದೀಕ್ಷಾಸ್ನಾನವು ಅಂಗೀಕಾರಾರ್ಹವೋ ಅಲ್ಲವೋ ಎಂದು ಯೋಚಿಸುತ್ತಾ ಪುನರ್ದೀಕ್ಷಾಸ್ನಾನವನ್ನು ಪರಿಗಣಿಸಬಹುದು. ಉದಾಹರಣೆಗೆ, ಒಬ್ಬ ವ್ಯಕ್ತಿ ದೀಕ್ಷಾಸ್ನಾನವಾಗಲಿರುವಾಗ ಯಾರಿಗೂ ಅರಿವಿಲ್ಲದ ಒಂದು ಪರಿಸ್ಥಿತಿಯಲ್ಲಿ ಜೀವಿಸುತ್ತಿದ್ದಿರಬಹುದು ಅಥವಾ ಒಂದು ತಪ್ಪಾದ ವಿಷಯವನ್ನು ರೂಢಿಯಾಗಿ ಮಾಡುತ್ತಿದ್ದಿರಬಹುದು. ಒಂದುವೇಳೆ ಅವನಿಗೆ ಈಗಾಗಲೇ ಅಂಗೀಕಾರಾರ್ಹ ದೀಕ್ಷಾಸ್ನಾನವಾಗಿದ್ದಲ್ಲಿ ಅವನಿಗೆ ಇಂಥ ನಡವಳಿಕೆಗಾಗಿ ಬಹಿಷ್ಕಾರವಾಗಬಹುದಿತ್ತು. ಇಂಥ ಸಂದರ್ಭದಲ್ಲಿ ಅವನು ತನ್ನನ್ನು ದೇವರಿಗೆ ಸಮರ್ಪಿಸಿಕೊಳ್ಳಸಾಧ್ಯವಿತ್ತೊ? ಆ ವ್ಯಕ್ತಿ ದೇವರ ವಾಕ್ಯಕ್ಕೆ ವಿರುದ್ಧವಾದ ಅಂಥ ನಡತೆಯನ್ನು ಬಿಟ್ಟುಬಿಟ್ಟಿದ್ದಲ್ಲಿ ಮಾತ್ರ ಅವನು ಯೆಹೋವನಿಗೆ ಅಂಗೀಕಾರಾರ್ಹ ಸಮರ್ಪಣೆಯನ್ನು ಮಾಡಸಾಧ್ಯವಿತ್ತು. ಆದ್ದರಿಂದ ಅಂಥ ಗಂಭೀರ ಅಡ್ಡಿಗಳಿದ್ದ ಸಮಯದಲ್ಲಿ ದೀಕ್ಷಾಸ್ನಾನ ಪಡೆದಿದ್ದ ವ್ಯಕ್ತಿಯು ಪುನರ್ದೀಕ್ಷಾಸ್ನಾನ ಪಡೆಯುವ ಅವಶ್ಯಕತೆಯ ಕುರಿತು ಯೋಚಿಸುವುದು ಸೂಕ್ತವಾಗಿರಬಹುದು.

ಆದರೆ ಒಬ್ಬ ವ್ಯಕ್ತಿ ದೀಕ್ಷಾಸ್ನಾನ ತೆಗೆದುಕೊಳ್ಳಲಿಕ್ಕಿದ್ದ ಸಮಯದಲ್ಲಿ ಯಾವುದೇ ಪಾಪದಲ್ಲಿ ಒಳಗೂಡದೇ ಇದ್ದು ತದನಂತರ ತಪ್ಪು ಮಾಡಿದ್ದಲ್ಲಿ ಆಗೇನು? ಅದಕ್ಕಾಗಿ ನ್ಯಾಯ ನಿರ್ಣಾಯಕ ಕಮಿಟಿಯನ್ನು ಏರ್ಪಡಿಸುವ ಅವಶ್ಯಕತೆ ಬಂದಿರಬಹುದು. ತನ್ನ ದೀಕ್ಷಾಸ್ನಾನದ ಸಮಯದಲ್ಲಿ ತಾನೇನನ್ನು ಮಾಡುತ್ತಿದ್ದೆನೆಂಬುದು ತನಗೆ ಸರಿಯಾಗಿ ಅರ್ಥವಾಗಿರದ್ದರಿಂದ ತನ್ನ ದೀಕ್ಷಾಸ್ನಾನವು ಅಂಗೀಕಾರಾರ್ಹವಾದದ್ದಲ್ಲ ಎಂದು ಅವನು ಹೇಳಬಹುದು. ಅಂಥ ತಪ್ಪಿತಸ್ಥನೊಂದಿಗೆ ಮಾತನಾಡುವಾಗ ಹಿರಿಯರು ಅವನ ದೀಕ್ಷಾಸ್ನಾನದ ಕುರಿತು ಪ್ರಶ್ನೆಗಳನ್ನು ಹಾಕುತ್ತಾ ಅವನ ಸಮರ್ಪಣೆ ಮತ್ತು ದೀಕ್ಷಾಸ್ನಾನ ಅಂಗೀಕಾರಾರ್ಹವಾಗಿತ್ತೆಂದು ಅವನಿಗನಿಸುತ್ತದೋ ಎಂದು ಕೇಳಬಾರದು. ಏಕೆಂದರೆ ದೀಕ್ಷಾಸ್ನಾನದ ಮಹತ್ವವನ್ನು ವಿವರಿಸುವ ದೀಕ್ಷಾಸ್ನಾನದ ಭಾಷಣವನ್ನು ಅವನು ಕೇಳಿರುತ್ತಾನೆ. ಸಮರ್ಪಣೆ ಮತ್ತು ದೀಕ್ಷಾಸ್ನಾನದ ಕುರಿತಾಗಿ ಕೇಳಿದ ಪ್ರಶ್ನೆಗಳಿಗೆ ಅವನು ಹೌದೆಂದು ಉತ್ತರವನ್ನೂ ಕೊಟ್ಟಿರುತ್ತಾನೆ. ತದನಂತರ ಅವನು ತನ್ನ ಬಟ್ಟೆ ಬದಲಾಯಿಸಿಕೊಂಡು ನೀರಿನ ನಿಮಜ್ಜನವನ್ನು ಪಡೆದನು. ಆದುದರಿಂದ ಅವನೇನನ್ನು ಮಾಡುತ್ತಿದ್ದನೋ ಅದರ ಗಂಭೀರತೆಯನ್ನು ಅವನು ಪೂರ್ಣವಾಗಿ ಅರ್ಥಮಾಡಿಕೊಂಡಿದ್ದನು ಎಂದು ನಂಬುವುದು ತರ್ಕಸಮ್ಮತ. ಈ ಕಾರಣದಿಂದ ಹಿರಿಯರು ಅವನನ್ನು ಸ್ನಾತ ವ್ಯಕ್ತಿಯಾಗಿ ಪರಿಗಣಿಸುತ್ತಾರೆ.

ಆದರೆ ಆ ವ್ಯಕ್ತಿಯೇ ತನ್ನ ದೀಕ್ಷಾಸ್ನಾನದ ಅಂಗೀಕಾರಾರ್ಹತೆಯ ಕುರಿತು ಪ್ರಸ್ತಾಪವೆತ್ತುವಲ್ಲಿ ಪುನರ್ದೀಕ್ಷಾಸ್ನಾನದ ಕುರಿತು ಸವಿವರವಾಗಿ ಚರ್ಚಿಸಲಾಗಿರುವ 1960, ಮಾರ್ಚ್‌ 1ರ ಕಾವಲಿನಬುರುಜುವಿನ (ಇಂಗ್ಲಿಷ್‌) ಪುಟ 159 ಮತ್ತು 160 ಹಾಗೂ 1964, ಫೆಬ್ರವರಿ 15ರ ಕಾವಲಿನಬುರುಜುವಿನ (ಇಂಗ್ಲಿಷ್‌) ಪುಟ 123ರಿಂದ 126ರಲ್ಲಿರುವ ಮಾಹಿತಿಯನ್ನು ಪರಿಗಣಿಸುವಂತೆ ಹಿರಿಯರು ಅವನಿಗೆ ಹೇಳಬಹುದು. (ದೀಕ್ಷಾಸ್ನಾನದ ಸಮಯ ಬೈಬಲಿನ ಸಾಕಷ್ಟು ತಿಳಿವಳಿಕೆ ಇಲ್ಲದಿರುವುದೇ ಮುಂತಾದ ಕಾರಣಗಳಿಗಾಗಿ) ಕೊನೆಗೆ ಪುನರ್ದೀಕ್ಷಾಸ್ನಾನ ಪಡೆದುಕೊಳ್ಳಬೇಕೋ ಬೇಡವೋ ಎಂದು ನಿರ್ಣಯಿಸುವುದು ಆ ವ್ಯಕ್ತಿಗೆ ಸಂಬಂಧಪಟ್ಟ ವೈಯಕ್ತಿಕ ವಿಷಯ.

ಒಂದೇ ಮನೆ ಅಥವಾ ವಸತಿಗೃಹದಲ್ಲಿ ಬೇರೆ ಬೇರೆಯವರು ಒಟ್ಟಿಗೆ ವಾಸಮಾಡುವ ವಿಷಯದಲ್ಲಿ ಕ್ರೈಸ್ತರಾದ ನಾವು ಯಾವ ಅಂಶಗಳನ್ನು ಪರಿಗಣಿಸಬೇಕು?

ಪ್ರತಿಯೊಬ್ಬರಿಗೂ ವಾಸಿಸಲು ಒಂದು ಸ್ಥಳ ಬೇಕು. ಆದರೆ ಇಂದು ಅನೇಕರಿಗೆ ಸ್ವಂತ ಮನೆಯಿಲ್ಲ. ಒಬ್ಬ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ, ಆರೋಗ್ಯಕ್ಕೆ ಸಂಬಂಧಪಟ್ಟ ವಿಷಯಗಳು ಮತ್ತು ಇತರ ಅಂಶಗಳಿಂದಾಗಿ ಅನೇಕ ಸಂಬಂಧಿಕರು ಒಟ್ಟಿಗೆ ಕೂಡುಕುಟುಂಬದಂತೆ ವಾಸಿಸುವ ಅಗತ್ಯ ಬರಬಹುದು. ಕೆಲವೊಂದು ದೇಶಗಳಲ್ಲಿ ತುಂಬ ಸಂಬಂಧಿಕರು ಒಂದೇ ಕೋಣೆಯಲ್ಲಿ ಹೆಚ್ಚಿನಾಂಶ ಯಾವುದೇ ಏಕಾಂತತೆ ಇಲ್ಲದೆ ಒಟ್ಟಿಗೆ ಜೀವಿಸುವ ಪರಿಸ್ಥಿತಿಯಿರಬಹುದು.

ಲೋಕವ್ಯಾಪಕ ಸಭೆಯಲ್ಲಿರುವವರು ಯಾವ ರೀತಿಯ ಮನೆಗಳಲ್ಲಿ ವಾಸಿಸಬೇಕೆಂಬುದರ ಕುರಿತು ನಿಯಮಗಳ ದೊಡ್ಡ ಪಟ್ಟಿಯನ್ನು ಕೊಡುವುದು ಯೆಹೋವನ ಸಂಘಟನೆಯ ಕೆಲಸವಲ್ಲ. ಅವರ ವಸತಿ ಏರ್ಪಾಡುಗಳು ದೇವರಿಗೆ ಸ್ವೀಕಾರಾರ್ಹವಾಗಿವೆಯೋ ಇಲ್ಲವೋ ಎಂಬುದನ್ನು ನಿರ್ಧರಿಸಲು ಬೈಬಲ್‌ ಮೂಲತತ್ತ್ವಗಳನ್ನು ಪರಿಗಣಿಸುವಂತೆ ಕ್ರೈಸ್ತರಿಗೆ ಉತ್ತೇಜಿಸಲಾಗುತ್ತದೆ. ಆ ಮೂಲತತ್ತ್ವಗಳಲ್ಲಿ ಕೆಲವು ಯಾವುವು?

ಇತರರೊಂದಿಗೆ ವಾಸಿಸುವುದು ನಮ್ಮ ಮೇಲೆ ಹಾಗೂ ನಮ್ಮ ಆಧ್ಯಾತ್ಮಿಕತೆಯ ಮೇಲೆ ಯಾವ ಪರಿಣಾಮ ಬೀರುವುದು ಎಂಬುದು ಪರಿಗಣಿಸಬೇಕಾದ ಮುಖ್ಯ ವಿಷಯ. ನಮ್ಮೊಂದಿಗೆ ವಾಸಿಸುವವರು ಎಂಥ ರೀತಿಯ ಜನರಾಗಿದ್ದಾರೆ? ಅವರು ಯೆಹೋವನ ಆರಾಧಕರೊ? ಅವರು ಬೈಬಲ್‌ ಮೂಲತತ್ತ್ವಗಳಿಗೆ ಅನುಗುಣವಾಗಿ ಜೀವಿಸುತ್ತಾರೊ? ಪೌಲನು ಹೇಳಿದ್ದು: “ಮೋಸಹೋಗಬೇಡಿರಿ. ದುಸ್ಸಹವಾಸಗಳು ಸದಾಚಾರಗಳನ್ನು ಕೆಡಿಸುತ್ತವೆ.”—1 ಕೊರಿಂ. 15:33.

ಜಾರತ್ವ ಮತ್ತು ವ್ಯಭಿಚಾರವು ಯೆಹೋವನ ದೃಷ್ಟಿಯಲ್ಲಿ ಕೆಟ್ಟವುಗಳಾಗಿವೆ ಎಂದು ಶಾಸ್ತ್ರಗ್ರಂಥವು ವಿವರಿಸುತ್ತದೆ. (ಇಬ್ರಿ. 13:4) ಆದ್ದರಿಂದ ಯಾವುದೇ ವಸತಿಸೌಕರ್ಯಗಳಲ್ಲಿ ಮಲಗಲು ಮಾಡಲಾಗಿರುವ ಏರ್ಪಾಡುಗಳಲ್ಲಿ, ವಿರುದ್ಧ ಲಿಂಗದ ಅವಿವಾಹಿತ ವ್ಯಕ್ತಿಗಳು ಪತಿಪತ್ನಿಯರೋ ಎಂಬಂತೆ ಒಟ್ಟಿಗಿರಲು ಅವಕಾಶವಿರುವುದಾದರೆ ಅದು ದೇವರಿಗೆ ಸ್ವೀಕಾರಾರ್ಹವಲ್ಲ ಎಂಬುದು ಸ್ಪಷ್ಟ. ಅನೈತಿಕತೆಯು ಸಹಿಸಲ್ಪಡುವ ಸ್ಥಳದಲ್ಲಿ ಕ್ರೈಸ್ತನೊಬ್ಬನು ಇರಲು ಬಯಸುವುದಿಲ್ಲ.

ಅಷ್ಟುಮಾತ್ರವಲ್ಲದೆ, ದೇವರ ಅನುಗ್ರಹ ಪಡೆಯಲು ಬಯಸುವವರೆಲ್ಲರೂ ‘ಜಾರತ್ವಕ್ಕೆ ದೂರವಾಗಿ ಓಡಿಹೋಗುವಂತೆ’ ಬೈಬಲ್‌ ಉತ್ತೇಜಿಸುತ್ತದೆ. (1 ಕೊರಿಂ. 6:18) ಆದ್ದರಿಂದ ಅನೈತಿಕ ನಡತೆಯಲ್ಲಿ ಒಳಗೂಡುವ ಪ್ರಲೋಭನೆಯನ್ನು ತಂದೊಡ್ಡುವ ಯಾವುದೇ ವಸತಿ ಏರ್ಪಾಡುಗಳನ್ನು ಕ್ರೈಸ್ತರು ಸ್ವೀಕರಿಸದೇ ಇರುವುದು ವಿವೇಕಯುತ. ಉದಾಹರಣೆಗೆ, ಒಂದೇ ಮನೆಯಲ್ಲಿ ಅನೇಕ ಕ್ರೈಸ್ತರು ಮಲಗುವ ವ್ಯವಸ್ಥೆ ಇದೆಯೆಂದು ನೆನಸಿ. ಅನಿರೀಕ್ಷಿತ ಸನ್ನಿವೇಶಗಳಿಂದಾಗಿ ಅದು ಪ್ರಲೋಭನೆಗಳಿಗೆ ದಾರಿಮಾಡಿಕೊಡುತ್ತದೊ? ಸಾಮಾನ್ಯವಾಗಿ ಮನೆಯಲ್ಲಿರುವ ಇತರ ವ್ಯಕ್ತಿಗಳು ಹೊರಗೆ ಹೋಗಿದ್ದಾರೆ ಮತ್ತು ಪರಸ್ಪರ ವಿವಾಹವಾಗದೇ ಇರುವ ಇಬ್ಬರು ವ್ಯಕ್ತಿಗಳು ಮಾತ್ರ ಮನೆಯಲ್ಲಿದ್ದಾರೆ ಎಂದು ನೆನಸಿ. ಆಗೇನು? ತದ್ರೀತಿಯಲ್ಲಿ ಪರಸ್ಪರ ಪ್ರಣಯಾಸಕ್ತಿಯುಳ್ಳ ಇಬ್ಬರು ಅವಿವಾಹಿತರು ಒಂದೇ ಮನೆಯಲ್ಲಿ ವಾಸಿಸುವುದೂ ನೈತಿಕವಾಗಿ ಅಪಾಯಕಾರಿಯಾಗಿರಬಲ್ಲದು. ಇಂಥ ಸನ್ನಿವೇಶಗಳನ್ನು ತಪ್ಪಿಸುವುದು ವಿವೇಕಯುತ.

ಅಂತೆಯೇ, ಪರಸ್ಪರ ವಿವಾಹ ವಿಚ್ಛೇದನ ಪಡೆದವರು ಒಂದೇ ಮನೆಯಲ್ಲಿ ವಾಸಿಸುವುದನ್ನು ಮುಂದುವರಿಸುವುದು ಸಹ ಯೋಗ್ಯವಲ್ಲ. ಏಕೆಂದರೆ ಅವರು ಈ ಮುಂಚೆ ಪರಸ್ಪರ ಆಪ್ತ ಸಂಬಂಧಗಳಿಗೆ ಒಗ್ಗಿಹೋಗಿರುವುದರಿಂದ ಅನೈತಿಕ ನಡತೆಯಲ್ಲಿ ತೊಡಗುವ ಹೆಚ್ಚು ಸಂಭವನೀಯತೆ ಇದೆ.—ಜ್ಞಾನೋ. 22:3.

ಪರಿಗಣಿಸಬೇಕಾದ ಕೊನೆಯ ಆದರೂ ಪ್ರಾಮುಖ್ಯ ಅಂಶವು ಯಾವುದೆಂದರೆ, ಒಬ್ಬನು ಮಾಡಿರುವ ಆಯ್ಕೆಗಳನ್ನು ಸಮಾಜ ಹೇಗೆ ವೀಕ್ಷಿಸುತ್ತದೆ ಎಂಬುದೇ. ಒಬ್ಬ ಕ್ರೈಸ್ತನು ಸ್ವೀಕಾರಾರ್ಹ ಎಂದು ನೆನಸಿ ಮಾಡಿರುವ ವಸತಿ ಏರ್ಪಾಡು, ಸಮಾಜದಲ್ಲಿ ಜನರು ಕೆಟ್ಟದಾಗಿ ಆಡಿಕೊಳ್ಳುವಂತೆ ಎಡೆಮಾಡುವುದಾದರೆ ಅದು ಚಿಂತಿಸತಕ್ಕ ವಿಷಯ. ನಮ್ಮ ನಡವಳಿಕೆಯು ಯೆಹೋವನ ಹೆಸರಿಗೆ ಅಪಕೀರ್ತಿ ತರುವಂತೆ ನಾವೆಂದೂ ಬಯಸೆವು. ಪೌಲನು ಅದನ್ನು ಹೀಗೆ ತಿಳಿಸಿದ್ದಾನೆ: “ಯೆಹೂದ್ಯರಿಗಾಗಲಿ ಗ್ರೀಕರಿಗಾಗಲಿ ದೇವರ ಸಭೆಗಾಗಲಿ ಎಡವಲು ಕಾರಣವಾಗಬೇಡಿರಿ. ನಾನಂತೂ ಎಲ್ಲ ವಿಷಯಗಳಲ್ಲಿ ಎಲ್ಲ ಜನರನ್ನು ಮೆಚ್ಚಿಸುವವನಾಗಿದ್ದೇನೆ; ನಾನು ಸ್ವಪ್ರಯೋಜನವನ್ನು ಚಿಂತಿಸದೆ ಅನೇಕರಿಗೆ ರಕ್ಷಣೆಯಾಗಬೇಕೆಂದು ಅವರ ಪ್ರಯೋಜನವನ್ನು ಚಿಂತಿಸುವವನಾಗಿದ್ದೇನೆ.”—1 ಕೊರಿಂ. 10:32, 33.

ತಕ್ಕದಾದ ವಸತಿಸೌಕರ್ಯ ಮತ್ತು ಏರ್ಪಾಡುಗಳನ್ನು ಕಂಡುಕೊಳ್ಳುವುದು ಯೆಹೋವನ ನೀತಿಯ ಮಟ್ಟಗಳನ್ನು ಎತ್ತಿಹಿಡಿಯಲು ಬಯಸುವವರಿಗೆ ದೊಡ್ಡ ಸವಾಲಾಗಿರಬಹುದು. ಆದರೂ, ಕ್ರೈಸ್ತರು ‘ಕರ್ತನಿಗೆ ಯಾವುದು ಅಂಗೀಕಾರಾರ್ಹವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾ ಇರಬೇಕು.’ ತಮ್ಮ ಮನೆಗಳಲ್ಲಿ ಯಾವುದೇ ಅಸಭ್ಯ ವಿಷಯ ನಡೆಯುತ್ತಿಲ್ಲ ಎಂಬುದನ್ನು ಅವರು ಖಚಿತಪಡಿಸಿಕೊಳ್ಳಬೇಕು. (ಎಫೆ. 5:5, 10) ಆದ್ದರಿಂದ ಕ್ರೈಸ್ತರು ದೈವಿಕ ಮಾರ್ಗದರ್ಶನೆಗಾಗಿ ಪ್ರಾರ್ಥಿಸುವುದು ಮತ್ತು ತಮ್ಮ ಹಾಗೂ ಇತರರ ಶಾರೀರಿಕ, ನೈತಿಕ ಹಿತಕ್ಕಾಗಿ ಮತ್ತು ಯೆಹೋವನಿಗೆ ಒಳ್ಳೇ ಹೆಸರು ತರಲಿಕ್ಕಾಗಿ ತಮ್ಮಿಂದಾದುದೆಲ್ಲವನ್ನು ಮಾಡುವುದು ಅವಶ್ಯ.