ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೃಷ್ಟಿಕರ್ತನನ್ನು ಸ್ಮರಿಸಲು ಯುವ ಜನರಿಗೆ ಸಹಾಯ ಸಾಧನ

ಸೃಷ್ಟಿಕರ್ತನನ್ನು ಸ್ಮರಿಸಲು ಯುವ ಜನರಿಗೆ ಸಹಾಯ ಸಾಧನ

ಸೃಷ್ಟಿಕರ್ತನನ್ನು ಸ್ಮರಿಸಲು ಯುವ ಜನರಿಗೆ ಸಹಾಯ ಸಾಧನ

“ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು” ಎಂದು ಸುಮಾರು 3,000 ವರ್ಷಗಳ ಹಿಂದೆ ವಿವೇಕಿ ಸೊಲೊಮೋನನು ಬರೆದನು. (ಪ್ರಸಂ. 12:1) ಅದನ್ನು ಮಾಡಲು ಕ್ರೈಸ್ತ ಯುವ ಜನರಿಗೆ ನೆರವಾಗಲಿಕ್ಕಾಗಿ ಈಗ ಇನ್ನೊಂದು ಸಾಧನವು ಲಭ್ಯವಿದೆ. ಅದೇ ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು, ಸಂಪುಟ 2 * ಎಂಬ ಪುಸ್ತಕ. ಇದು ಮೇ 2008ರಿಂದ ಜನವರಿ 2009ರ ತನಕ ಭೂವ್ಯಾಪಕವಾಗಿ ನಡೆದ “ಪವಿತ್ರಾತ್ಮದ ಮಾರ್ಗದರ್ಶನ” ಎಂಬ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನಗಳಲ್ಲಿ ಬಿಡುಗಡೆಯಾಯಿತು.

ಪುಸ್ತಕದ ಮುಖಪುಟದ ಒಳಗೆ ಆಡಳಿತ ಮಂಡಲಿಯು ಯುವ ಜನರಿಗಾಗಿ ಬರೆದ ಒಂದು ಪತ್ರವಿದೆ. ಅಂಶಿಕವಾಗಿ ಅದನ್ನುವುದು: “ಇಂದು ಯುವ ಜನರ ಮುಂದೆ ಇರುವ ಒತ್ತಡಗಳನ್ನು ಮತ್ತು ಪ್ರಲೋಭನೆಗಳನ್ನು ಎದುರಿಸಿನಿಲ್ಲಲು ನಿಮಗೆ ಈ ಪ್ರಕಾಶನದಲ್ಲಿರುವ ಮಾಹಿತಿಯು ಸಹಾಯಮಾಡುವುದೆಂಬುದು ನಮ್ಮ ಯಥಾರ್ಥ ಪ್ರಾರ್ಥನೆ. ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ನಿರ್ಣಯಗಳನ್ನು ಮಾಡುವುದು ಹೇಗೆ ಎಂಬುದನ್ನೂ ಅದು ನಿಮಗೆ ತೋರಿಸುವುದು.”

ಹೆತ್ತವರು ತಮ್ಮ ಮಕ್ಕಳನ್ನು “ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ” ಸಾಕಿಸಲಹಲು ಬಯಸುವುದು ಸಹಜವೇ. (ಎಫೆ. 6:4) ಅನೇಕ ಮಕ್ಕಳು ತಮ್ಮ ಹರೆಯಕ್ಕೆ ಕಾಲಿಡುವಾಗಲಾದರೊ ಆತ್ಮವಿಶ್ವಾಸವನ್ನು ಕಳಕೊಂಡವರಾಗಿ ಮಾರ್ಗದರ್ಶನೆಗಾಗಿ ಹಾತೊರೆಯುತ್ತಾರೆ. ತಾರುಣ್ಯಕ್ಕೆ ಕಾಲಿಡುವ ಮಕ್ಕಳ ಹೆತ್ತವರು ನೀವಾಗಿದ್ದಲ್ಲಿ, ಈ ಪ್ರಕಾಶನದಿಂದ ಅವರು ಅತಿ ಹೆಚ್ಚಿನ ಪ್ರಯೋಜನ ಹೊಂದುವಂತೆ ಹೇಗೆ ಸಹಾಯಮಾಡಬಲ್ಲಿರಿ? ಈ ಕೆಳಗೆ ಕೆಲವು ಸಲಹೆಗಳನ್ನು ನೀಡಲಾಗಿದೆ.

ಈ ಪುಸ್ತಕದ ನಿಮ್ಮ ಸ್ವಂತ ಪ್ರತಿಯನ್ನು ಪಡಕೊಂಡು ಅದರ ಕೂಲಂಕಷ ಪರಿಚಯವನ್ನು ಮಾಡಿಕೊಳ್ಳಿರಿ. ಇದರಲ್ಲಿ ಬರೇ ಓದುವುದಕ್ಕಿಂತ ಹೆಚ್ಚು ಒಳಗೂಡಿದೆ. ಪುಸ್ತಕದಲ್ಲಿ ವಿಚಾರಧಾಟಿಗಳನ್ನು ಹೇಗೆ ವ್ಯಕ್ತಪಡಿಸಲಾಗಿದೆ ಎಂಬುದನ್ನೂ ಗಮನಿಸಿರಿ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಯುವ ಜನರಿಗೆ ಬರೇ ತಿಳಿಸುವ ಬದಲಾಗಿ ಅದು ಅವರ “ಗ್ರಹಣಶಕ್ತಿಗಳನ್ನು” ತರಬೇತುಗೊಳಿಸಲು ಶ್ರಮಿಸುತ್ತದೆ. (ಇಬ್ರಿ. 5:14) ಯಾವುದು ಸರಿಯೊ ಅದಕ್ಕಾಗಿ ಸ್ಥಿರನಿಲ್ಲುವುದು ಹೇಗೆ ಎಂಬ ವ್ಯಾವಹಾರಿಕ ಸಲಹೆಗಳನ್ನು ಸಹ ಅದು ಕೊಡುತ್ತದೆ. ಉದಾಹರಣೆಗೆ, 15ನೇ ಅಧ್ಯಾಯವು (“ಸಮವಯಸ್ಸಿನವರ ಒತ್ತಡವನ್ನು ನಾನು ಹೇಗೆ ಎದುರಿಸಿನಿಲ್ಲಲಿ?”) ಬರೇ ‘ಇಲ್ಲ, ಬೇಡ, ಮಾಡುವುದಿಲ್ಲ’ ಎಂದು ಹೇಳಿ ಮುಗಿಸುವುದಕ್ಕಿಂತ ಹೆಚ್ಚನ್ನು ಮಾಡುವಂತೆ ಯುವ ಜನರಿಗೆ ಕಲಿಸುತ್ತದೆ. ಸಮಸ್ಯೆಗಳನ್ನು ನಿಭಾಯಿಸಲು ಬೈಬಲ್‌ ಮೂಲತತ್ತ್ವಗಳನ್ನು ಉಪಯೋಗಿಸುವುದು ಹೇಗೆ ಮತ್ತು ನಿಜ-ಜೀವನದ ಸನ್ನಿವೇಶಗಳಲ್ಲಿ ಪ್ರತ್ಯುತ್ತರ ಕೊಡುವುದು ಹೇಗೆಂದು ಅದು ವಿವರಿಸುತ್ತದೆ. ಈ ಮೂಲಕ ಯುವ ಜನರು “ಪ್ರತಿಯೊಬ್ಬರಿಗೆ ಹೇಗೆ ಉತ್ತರಕೊಡಬೇಕು ಎಂಬುದನ್ನು” ತಿಳುಕೊಳ್ಳಬಲ್ಲರು.—ಕೊಲೊ. 4:6.

ಪುಸ್ತಕದಲ್ಲಿರುವ ಪರಸ್ಪರ ಪ್ರತಿಕ್ರಿಯಾತ್ಮಕ ವೈಶಿಷ್ಟ್ಯಗಳನ್ನು ಬಳಸಿರಿ. ಈ ಭಾಗಗಳು ಯುವ ಜನರಿಗಾಗಿ ರಚಿಸಲ್ಪಟ್ಟಿವೆಯಾದರೂ, ಎಲ್ಲಿ ಸೂಕ್ತವೊ ಅಲ್ಲಿ ನಿಮ್ಮ ಪ್ರತಿಕ್ರಿಯೆಯನ್ನು ಪುಸ್ತಕದ ನಿಮ್ಮ ಸ್ವಂತ ಪ್ರತಿಯಲ್ಲಿ ಬರೆಯಬಾರದೇಕೆ? * ಉದಾಹರಣೆಗೆ, 16ನೇ ಪುಟದಲ್ಲಿರುವ ‘ಡೇಟಿಂಗ್‌’ ಕುರಿತು ಪರಸ್ಪರ ಪ್ರತಿಕ್ರಿಯಿಸುವ ಎರಡು ಪ್ರಶ್ನೆಗಳನ್ನು ಚರ್ಚಿಸುವಾಗ, ನೀವು ನಿಮ್ಮ ಮಗ/ಮಗಳ ವಯಸ್ಸಿನಷ್ಟೆ ಚಿಕ್ಕವರಿರುವಾಗ ನಿಮಗೆ ಹೇಗನಿಸುತ್ತಿತ್ತು ಎಂಬುದನ್ನು ನೆನಪಿಗೆ ತರಲು ಪ್ರಯತ್ನಿಸಿ. ಆ ಸಮಯದಲ್ಲಿ ಆ ಪ್ರಶ್ನೆಗಳಿಗೆ ನೀವು ಹೇಗೆ ಉತ್ತರಿಸುತ್ತಿದ್ದಿರಿ ಎಂಬುದನ್ನು ಅಲ್ಲಿ ಕೊಡಲಾದ ಖಾಲಿ ಸ್ಥಳದಲ್ಲಿ ಬರೆಯಲು ಪ್ರಾಯಶಃ ನೀವು ಬಯಸುವಿರಿ. ಆಮೇಲೆ ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ‘ಈ ವಿಷಯದ ಬಗ್ಗೆ ನನ್ನ ಭಾವನೆಗಳು ವರ್ಷಗಳು ಸಂದಂತೆ ಹೇಗೆ ಬದಲಾಗಿವೆ? ನನ್ನ ತಾರುಣ್ಯದ ಸಮಯಕ್ಕಿಂತ ಈಗ ನಾನು ಯಾವ ಹೆಚ್ಚಿನ ಒಳನೋಟವನ್ನು ಪಡೆದಿದ್ದೇನೆ ಮತ್ತು ಇದನ್ನು ನಾನು ನನ್ನ ಮಗ/ಮಗಳಿಗೆ ಹೇಗೆ ಪರಿಣಾಮಕಾರಿಯಾಗಿ ದಾಟಿಸಬಲ್ಲೆ?’

ನಿಮ್ಮ ಹದಿವಯಸ್ಕರ ಏಕಾಂತತೆಯ ಹಕ್ಕನ್ನು ಮಾನ್ಯಮಾಡಿ. ಪುಸ್ತಕದಲ್ಲಿರುವ ಪರಸ್ಪರ ಪ್ರತಿಕ್ರಿಯಾತ್ಮಕ ಭಾಗಗಳು ನಿಮ್ಮ ಮಕ್ಕಳು ತಮ್ಮ ಮನಸ್ಸಿನಲ್ಲಿರುವುದನ್ನು ಹೊರಪಡಿಸುವಂತೆ ಮತ್ತು ಮಾನಸಿಕ ಪ್ರತಿಕ್ರಿಯೆಯನ್ನು ಪುಸ್ತಕದಲ್ಲಿ ಬರೆಯುವಂತೆ ಅಥವಾ ವಿಷಯದ ಕುರಿತು ಯೋಚಿಸುವಂತೆ ಮಾಡಲು ರಚಿಸಲಾಗಿವೆ. ನಿಮ್ಮ ಗುರಿಯು ಅವರ ಹೃದಯದಲ್ಲೇನಿದೆ, ಅವರ ಅನಿಸಿಕೆಯೇನು ಎಂದು ತಿಳಿಯುವುದೇ ಹೊರತು ಪುಸ್ತಕದಲ್ಲಿ ಏನು ಬರೆದಿದ್ದಾರೆಂದು ನೋಡಿ ಅವರ ವೈಯಕ್ತಿಕ ವಿಷಯವನ್ನು ಅನಾವಶ್ಯಕವಾಗಿ ಹೊರಪಡಿಸುವುದಲ್ಲ. ಪುಟ 3ರಲ್ಲಿರುವ “ಹೆತ್ತವರಿಗೆ ಕಿವಿಮಾತು” ಎಂಬ ಶೀರ್ಷಿಕೆಯ ವಿಭಾಗದಲ್ಲಿ ಪುಸ್ತಕವು ಸೂಚಿಸುವುದು: “ನಿಮ್ಮ ಮಕ್ಕಳು ಯಥಾರ್ಥ ಭಾವದಿಂದ ತಮ್ಮ ಪುಸ್ತಕದಲ್ಲಿ ಬರೆಯುವಂತೆ ಉತ್ತೇಜಿಸಲಿಕ್ಕಾಗಿ ಅವರಿಗೆ ಸ್ವಲ್ಪ ಏಕಾಂತತೆಯನ್ನು ಕೊಡಿ. ಒಂದುವೇಳೆ ಆಮೇಲೆ ಅವರು ತಾವು ಬರೆದಿರುವ ವಿಷಯಗಳೆಲ್ಲವನ್ನು ಬಾಯಿಬಿಟ್ಟು ನಿಮಗೆ ತಿಳಿಸಲೂಬಹುದು.”

ಕುಟುಂಬ ಬೈಬಲ್‌ ಅಧ್ಯಯನಕ್ಕಾಗಿ ಸಹಾಯಕ

ಯುವ ಜನರ ಪ್ರಶ್ನೆಗಳು, ಸಂಪುಟ 2 ನಿಮ್ಮ ಕುಟುಂಬ ಆರಾಧನಾ ಸಮಯದಲ್ಲಿ ಉಪಯೋಗಿಸಲು ಅತ್ಯುತ್ತಮ ಸಹಾಯಕ. ಪುಸ್ತಕದಲ್ಲಿ ಪ್ಯಾರ-ಪ್ಯಾರಕ್ಕೆ ಅಧ್ಯಯನ ಪ್ರಶ್ನೆಗಳು ಇಲ್ಲವಾದ್ದರಿಂದ ನೀವದನ್ನು ಹೇಗೆ ಉಪಯೋಗಿಸಬಲ್ಲಿರಿ? ನಿಮ್ಮ ಮಕ್ಕಳಿಗೆ ಇಷ್ಟವೆನಿಸುವ ಹೆಚ್ಚು ಪರಿಣಾಮಕಾರಿ ಅಧ್ಯಯನ ವಿಧಾನವನ್ನು ಯಾಕೆ ತಯಾರಿಸಬಾರದು?

ಉದಾಹರಣೆಗೆ, 132 ಮತ್ತು 133ನೇ ಪುಟಗಳಲ್ಲಿರುವ “ಸಮವಯಸ್ಕರ ಒತ್ತಡ-ನಿರ್ವಹಣೆ” ಎಂಬ ವಿಷಯವನ್ನು ಚರ್ಚಿಸುವಾಗ ಕೆಲವು ಕುಟುಂಬಗಳು ಪ್ರ್ಯಾಕ್ಟಿಸ್‌ ಸೆಷನ್‌ಗಳನ್ನು ಉಪಯೋಗಿಸಬಹುದು. ಅಲ್ಲಿರುವ ಮೊದಲನೆಯ ಪ್ರಶ್ನೆಯು ನಿಮ್ಮ ಮಗ/ಮಗಳಿಗೆ ಅತ್ಯಂತ ಕಷ್ಟಕರವೆಂದು ಕಾಣುವ ಸವಾಲನ್ನು ಗುರುತಿಸಲು ಸಹಾಯಮಾಡಬಹುದು. ಆ ಒತ್ತಡವು ಏಳಸಾಧ್ಯವಿರುವ ಸನ್ನಿವೇಶವನ್ನು ಎರಡನೆಯ ಪ್ರಶ್ನೆಯು ಗುರುತಿಸುತ್ತದೆ. ಸಮವಯಸ್ಕರ ಒತ್ತಡಕ್ಕೆ ಮಣಿಯುವ ಇಲ್ಲವೆ ಅದನ್ನು ಎದುರಿಸಿ ನಿಲ್ಲುವುದರಿಂದ ಆಗುವ ಫಲಿತಾಂಶಗಳನ್ನು ಚರ್ಚಿಸಿಯಾದ ಬಳಿಕ, ಒತ್ತಡವನ್ನು ಅರಗಿಸಿಕೊಳ್ಳುವ, ತಪ್ಪಿಸಿಕೊಳ್ಳುವ ಅಥವಾ ಹಿಂದಿರಿಗಿಸುವ ಕೆಲವು ಪ್ರತಿಕ್ರಿಯೆಗಳನ್ನು ಯೋಜಿಸುವಂತೆ ಮಗ/ಮಗಳಿಗೆ ಹೇಳಲಾಗಿದೆ. ನಿಮ್ಮ ಮಗ/ಮಗಳು ಕಲ್ಪನಾಶಕ್ತಿಯನ್ನು ಉಪಯೋಗಿಸಲು ಮತ್ತು ತಾವು ಸಲೀಸಾಗಿ ನೀಡಬಲ್ಲ ಹಾಗೂ ಸ್ಥೈರ್ಯ ಮತ್ತು ನಿಶ್ಚಿತಾಭಿಪ್ರಾಯದಿಂದ ಉಪಯೋಗಿಸಬಲ್ಲ ಪ್ರತ್ಯುತ್ತರಗಳನ್ನು ತಯಾರಿಸಲು ಸಹಾಯಮಾಡಿ.—ಕೀರ್ತ. 119:46.

ಸಂಭಾಷಣಾ ಸಾಧನ

ಯುವ ಜನರ ಪ್ರಶ್ನೆಗಳು, ಸಂಪುಟ 2 ಯುವ ಜನರಿಗೆ ತಮ್ಮ ಹೆತ್ತವರೊಂದಿಗೆ ಸಂಭಾಷಣೆ ಮಾಡಲು ಉತ್ತೇಜನ ಕೊಡುತ್ತದೆ. ಉದಾಹರಣೆಗೆ, “ಸೆಕ್ಸ್‌ ಬಗ್ಗೆ ನಾನು ನನ್ನ ಅಪ್ಪ-ಅಮ್ಮ ಸಂಗಡ ಮಾತನಾಡುವುದು ಹೇಗೆ?” (ಪುಟ 63-64) ಮತ್ತು “ಹೆತ್ತವರೊಂದಿಗೆ ಮಾತನಾಡಿ!” (ಪುಟ 189) ಎಂಬ ಚೌಕಗಳು ತೀರ ನಾಜೂಕಾದ ವಿಷಯಗಳ ಬಗ್ಗೆ ಸಂಭಾಷಿಸುವುದು ಹೇಗೆಂಬ ವ್ಯಾವಹಾರ್ಯ ಸಲಹೆಗಳನ್ನು ನೀಡುತ್ತವೆ. 13 ವಯಸ್ಸಿನ ಹುಡುಗಿ ಒಬ್ಬಳು ಬರೆದದ್ದು: “ನನ್ನ ಮನಸ್ಸಿನಲ್ಲಿ ಹುದುಗಿದ್ದ ವಿಷಯಗಳನ್ನು, ನಾನು ಹಿಂದೆ ಮಾಡಿದ್ದ ವಿಷಯಗಳನ್ನೂ ಹೆತ್ತವರಿಗೆ ಹೇಳುವ ಧೈರ್ಯವನ್ನು ಈ ಪುಸ್ತಕ ನನಗೆ ಕೊಟ್ಟಿತು.”

ಈ ಪುಸ್ತಕವು ಬೇರೆ ವಿಧಗಳಲ್ಲೂ ಸಂಭಾಷಣೆಯನ್ನು ಪ್ರವರ್ಧಿಸುತ್ತದೆ. ಪ್ರತಿಯೊಂದು ಅಧ್ಯಾಯದ ಕೊನೆಯಲ್ಲಿ “ನಿಮ್ಮ ಅಭಿಪ್ರಾಯವೇನು?” ಎಂಬ ಮೇಲ್ಬರಹದ ಚೌಕವಿದೆ. ಅದನ್ನು ಬರೇ ಪುನರ್ವಿಮರ್ಶೆಗಿಂತ ಹೆಚ್ಚಾಗಿ ಕುಟುಂಬ ಚರ್ಚೆಯ ಹೊರಮೇರೆಯಾಗಿ ಬಳಸಸಾಧ್ಯವಿದೆ. ಪ್ರತಿ ಅಧ್ಯಾಯವು ಕೊನೆಗೊಳ್ಳುವ ಮುಂಚೆ “ಪರಿಹಾರಕ್ರಮ!” ಎಂಬ ಹೆಸರಿನ ಚೌಕವೂ ಇದೆ. ಈ ಚೌಕವು, ಆ ಅಧ್ಯಾಯದಲ್ಲಿ ಕಲಿತ ವಿಷಯಗಳನ್ನು ಅನ್ವಯಿಸಬಲ್ಲ ವಿಶಿಷ್ಟ ವಿಧಾನಗಳನ್ನು ಬರೆಯುವ ಅವಕಾಶವನ್ನು ಯುವ ಜನರಿಗೆ ಕೊಡುತ್ತದೆ. ಪ್ರತಿ “ಪರಿಹಾರಕ್ರಮ!” ಚೌಕದ ಕೊನೆಯ ಭಾಗವು ಹೇಳುವುದು: “ಈ ವಿಷಯದ ಬಗ್ಗೆ ನನ್ನ ಹೆತ್ತವರನ್ನು ನಾನು ಕೇಳಬಯಸುವುದು ಏನೆಂದರೆ . . .” ಇದು ಉಪಯುಕ್ತ ಸಲಹೆಗಾಗಿ ಹೆತ್ತವರನ್ನು ವಿಚಾರಿಸುವಂತೆ ಯುವ ಜನರಿಗೆ ನೆರವಾಗಬಲ್ಲದು.

ಹೃದಯ ತಲಪಿರಿ!

ಹೆತ್ತವರಾದ ನಿಮ್ಮ ಗುರಿಯು ನಿಮ್ಮ ಮಗುವಿನ ಹೃದಯವನ್ನು ತಲಪುವುದೇ. ಇದನ್ನು ಮಾಡಲು ಯುವ ಜನರ ಪ್ರಶ್ನೆಗಳು, ಸಂಪುಟ 2 ನೆರವಾಗಬಲ್ಲದು. ತಂದೆಯೊಬ್ಬನು ತನ್ನ ಮಗಳೊಂದಿಗೆ ಹೃತ್ಪೂರ್ವಕ ಸಂಭಾಷಣೆಯನ್ನು ಪ್ರವರ್ಧಿಸಲು ಈ ಪುಸ್ತಕವನ್ನು ಹೇಗೆ ಉಪಯೋಗಿಸಿದನೆಂದು ಗಮನಿಸಿರಿ.

“ರೆಬೆಕ್ಕ ಮತ್ತು ನಾನು ನಡೆದೋ ಸೈಕಲಲ್ಲೋ ಕಾರಲ್ಲೋ ಹೋಗಿ ಕೆಲವು ಸೊಗಸಾದ ಸ್ಥಳಗಳನ್ನು ಸಂದರ್ಶಿಸುತ್ತೇವೆ. ಈ ಬಯಲುಪ್ರದೇಶದ ವಾತಾವರಣವು ಮನಬಿಚ್ಚಿ ಮಾತಾಡುವಂತೆ ಅವಳಿಗೆ ಅವಕಾಶ ಕೊಡುವುದನ್ನು ನಾನು ಕಾಣುತ್ತೇನೆ.

“ಈ ಪುಸ್ತಕದಲ್ಲಿ ನಾವು ಪರಿಗಣಿಸಿದ ಮೊದಲ ವಿಷಯವು ಆಡಳಿತ ಮಂಡಲಿಯ ಪತ್ರ ಮತ್ತು ‘ಹೆತ್ತವರಿಗೆ ಕಿವಿಮಾತು.’ ಮೂರನೇ ಪುಟದಲ್ಲಿ ತಿಳಿಸಿದ ಪ್ರಕಾರ, ನನ್ನ ಮಗಳು ತನ್ನ ಪುಸ್ತಕದಲ್ಲಿ ಯಾವ ಹಿಂಜರಿಕೆಯೂ ಇಲ್ಲದೆ ನಿಸ್ಸಂಕೋಚವಾಗಿ ಬರೆಯಬಹುದೆಂಬುದನ್ನು ಅವಳು ತಿಳಿದುಕೊಳ್ಳಬೇಕೆಂದು ನಾನು ಬಯಸಿದೆ. ಅವಳು ಏನು ಬರೆದಿದ್ದಾಳೆಂದು ನಾನು ಇಣಿಕಿ ನೋಡುತ್ತಿರಲಿಲ್ಲ.

“ಅವಳು ಚರ್ಚಿಸಬಯಸುವ ಕ್ರಮದಲ್ಲಿಯೇ ಅಧ್ಯಾಯಗಳನ್ನು ಆರಿಸುವಂತೆ ನಾನು ರೆಬೆಕ್ಕಳಿಗೆ ಅನುಮತಿಸಿದೆ. ಅವಳು ಆರಿಸಿದ ಅಧ್ಯಾಯಗಳಲ್ಲಿ ಮೊದಲನೆಯದ್ದು ‘ಎಲೆಕ್ಟ್ರಾನಿಕ್‌ ಗೇಮ್ಸ್‌ ಆಡುವುದು ಸೂಕ್ತವೊ?’ ಎಂಬದು. ಅವಳು ಆ ಅಧ್ಯಾಯ ಆರಿಸುವಳೆಂದು ನಾನು ಕಲ್ಪಿಸಿರಲೇ ಇಲ್ಲ! ಆದರೂ ಅವಳಿಗೊಂದು ಕಾರಣವಿತ್ತು. ಅವಳ ಮಿತ್ರರಲ್ಲಿ ಅನೇಕರು ಒಂದು ಭೀಕರ ಆಟವನ್ನು ಆಡುತ್ತಿದ್ದರು. ಅದರಲ್ಲಿ ಭೀಬತ್ಸ ಹಿಂಸಾಚಾರ, ಹೊಲಸುಭಾಷೆ ಇತ್ತೆಂದು ನನಗೆ ತಿಳಿದಿರಲಿಲ್ಲ! ಆದರೆ 251ನೇ ಪುಟದ ‘ಪರಿಹಾರಕ್ರಮ!’ ಚೌಕವನ್ನು ನಾವು ಚರ್ಚಿಸಿದಾಗ ಅದೆಲ್ಲಾ ಹೊರಗೆಬಂತು. ಆ ಆಟವನ್ನಾಡಲು ಯಾರಾದರೂ ಒತ್ತಾಯಿಸಿದಲ್ಲಿ ಪ್ರತ್ಯುತ್ತರ ಕೊಡಲು ತಯಾರಿಸುವಂತೆ ಆ ಚೌಕವು ರೆಬೆಕ್ಕಳಿಗೆ ಸಹಾಯಮಾಡಿತು.

“ಈಗ ರೆಬೆಕ್ಕ ತಾನು ಪುಸ್ತಕದಲ್ಲಿ ಬರೆದ ವಿಷಯಗಳನ್ನು ನನ್ನಿಂದ ಬಚ್ಚಿಡುವುದಿಲ್ಲ. ನಮ್ಮ ಅಧ್ಯಯನವು ಒಂದು ತಡೆರಹಿತ ಸಂಭಾಷಣೆ. ನಾವು ಸರತಿಯಲ್ಲಿ ಓದುತ್ತೇವೆ. ಆಮೇಲೆ ಚಿತ್ರಗಳು, ಚೌಕಗಳೂ ಸೇರಿದಂತೆ ಎಲ್ಲಾ ವಿಷಯಗಳ ಕುರಿತು ಅವಳು ಮಾತಾಡಬಯಸುತ್ತಾಳೆ. ನಾನು ಅವಳಷ್ಟೇ ಚಿಕ್ಕವನಾಗಿದ್ದಾಗ ನನ್ನ ಸನ್ನಿವೇಶ ಹೇಗಿತ್ತೆಂದು ತಿಳಿಸುವ ಅವಕಾಶವನ್ನು ಇದು ನನಗೆ ಕೊಡುತ್ತದೆ ಮತ್ತು ಇಂದು ವಿಷಯಗಳು ಹೇಗಿವೆಯೆಂಬುದನ್ನು ಅವಳು ನನಗೆ ತಿಳಿಸುತ್ತಾಳೆ. ಎಲ್ಲವನ್ನು ನನಗೆ ತಿಳಿಸಿಬಿಡುವ ಅಪೇಕ್ಷೆ ಅವಳದ್ದಾಗಿದೆ.”

ನೀವು ಹೆತ್ತವರಾಗಿದ್ದಲ್ಲಿ ಈ ಪುಸ್ತಕವು ಬಿಡುಗಡೆಯಾದಾಗ ಸಂತಸಗೊಂಡಿರಿ ಎಂಬದಕ್ಕೆ ಸಂದೇಹವಿಲ್ಲ. ಈಗ ಅದನ್ನು ಸದುಪಯೋಗಕ್ಕೆ ಹಾಕುವ ಅವಕಾಶ ನಿಮಗಿದೆ. ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು, ಸಂಪುಟ 2 ನಿಮ್ಮ ಕುಟುಂಬಕ್ಕೆ ಆಶೀರ್ವಾದಪ್ರದವಾಗಿ ಇರುವುದೆಂದು ಆಡಳಿತ ಮಂಡಲಿಯ ನಿರೀಕ್ಷೆ. ಇದು ನಮ್ಮೆಲ್ಲರಿಗೆ, ಅದರಲ್ಲಿ ವಿಶೇಷವಾಗಿ ನಮ್ಮ ಪ್ರಿಯ ಯುವ ಜನರಿಗೆ ‘ಪವಿತ್ರಾತ್ಮವನ್ನು ಅನುಸರಿಸಿ ನಡೆಯುತ್ತಾ ಇರಲು’ ಸಹಾಯಮಾಡುವಂತಾಗಲಿ.—ಗಲಾ. 5:16.

[ಪಾದಟಿಪ್ಪಣಿಗಳು]

^ ಪ್ಯಾರ. 2 ಈ ಪುಸ್ತಕ ಇಂಗ್ಲಿಷ್‌ ಮತ್ತಿತರ ಭಾಷೆಗಳಲ್ಲಿ ಲಭ್ಯವಿದೆ. ಕನ್ನಡದಲ್ಲಿ ಯುವ ಜನರ ಪ್ರಶ್ನೆಗಳು, ಸಂಪುಟ 1 ಲಭ್ಯವಿದೆ.

^ ಪ್ಯಾರ. 6 ಪುಸ್ತಕದಲ್ಲಿರುವ ಕೆಲವು ಪರಸ್ಪರ ಪ್ರತಿಕ್ರಿಯಾತ್ಮಕ ವರ್ಕ್‌ ಶೀಟುಗಳು ಎಲ್ಲಾ ವಯಸ್ಸಿನವರಿಗೆ ಅನ್ವಯಿಸುತ್ತವೆ. ಉದಾಹರಣೆಗೆ, “ನಿಮ್ಮ ಸಿಟ್ಟನ್ನು ಅಂಕೆಯಲ್ಲಿಡಿ” (ಪುಟ 221) ಎಂಬ ಚೌಕವು ನಿಮ್ಮ ಮಗ/ಮಗಳಿಗೆ ನೆರವಾಗುವಷ್ಟೆ ನಿಮಗೂ ಸಹಾಯಕಾರಿ. ಅದೇ ರೀತಿ “ಸಮವಯಸ್ಕರ ಒತ್ತಡ-ನಿರ್ವಹಣೆ” (ಪುಟ 132-133), “ನನ್ನ ತಿಂಗಳ ಬಜೆಟ್‌” (ಪುಟ 163) ಮತ್ತು “ನನ್ನ ಗುರಿಗಳು” (ಪುಟ 314) ಎಂಬ ವಿಷಯಗಳೂ ನೆರವಾಗಬಲ್ಲವು.

[ಪುಟ 30ರಲ್ಲಿರುವ ಚೌಕ]

ಕೆಲವು ಯುವ ಜನರ ಹೇಳಿಕೆಗಳು

“ಪೆನ್ಸಿಲನ್ನು ಕೈಗೆತ್ತಿ ಕೂತು ಧ್ಯಾನಪೂರ್ವಕವಾಗಿ ಓದುವಂಥ ಪುಸ್ತಕ ಇದಾಗಿದೆ. ವೈಯಕ್ತಿಕ ಡೈರಿಯಾಗಿ ಬಳಸುವಂತೆ ಇದನ್ನು ರಚಿಸಲಾಗಿದೆ. ಆದ್ದರಿಂದ ನಿಮಗಾಗಿ ಒಂದು ಅತ್ಯುತ್ತಮ ಜೀವನಕ್ರಮವನ್ನು ರಚಿಸಿಕೊಳ್ಳುವ ಗುರಿಯ ಕುರಿತು ಖಾಸಗಿಯಾಗಿ ಯೋಚಿಸಲು ಅದು ಅನುಮತಿಸುತ್ತದೆ.”—ನಿಕೊಲ.

“ಡೇಟಿಂಗ್‌ ಮಾಡಲು ತುಂಬ ಒತ್ತಡ ನನ್ನ ಮೇಲಿದೆ, ಹಿತಾಭಿಲಾಷಿಗಳಾದ ಜನರಿಂದ ಸಹ. ಯಾರು ಏನೇ ಹೇಳಲಿ ಡೇಟಿಂಗ್‌ ಮಾಡಲು ನಾನು ಸಿದ್ಧಳಿಲ್ಲ ಎಂಬ ಖಾತ್ರಿಯನ್ನು ಈ ಪುಸ್ತಕದ ಪ್ರಥಮ ಭಾಗವು ನನಗೆ ಕೊಟ್ಟಿದೆ.”—ಕತ್ರೀನ.

“‘ದೀಕ್ಷಾಸ್ನಾನವಾಗಲು ಯೋಚಿಸುತ್ತಿದ್ದೀರೊ?’ ಎಂಬ ಚೌಕವು ನನ್ನ ದೀಕ್ಷಾಸ್ನಾನವನ್ನು ಇನ್ನೂ ಹೆಚ್ಚು ಗಂಭೀರವಾಗಿ ತಕ್ಕೊಳ್ಳುವಂತೆ ಸಹಾಯಮಾಡಿದೆ. ನನ್ನ ಅಧ್ಯಯನ ಮತ್ತು ಪ್ರಾರ್ಥನಾ ಹವ್ಯಾಸಗಳನ್ನು ಪುನಃ ತೂಗಿನೋಡಲು ಅದು ನನ್ನನ್ನು ಪ್ರಚೋದಿಸಿದೆ.”—ಆ್ಯಶ್ಲಿ.

“ಕ್ರೈಸ್ತ ಹೆತ್ತವರು ನನಗೆ ಚಿಕ್ಕಂದಿನಿಂದಲೇ ಕಲಿಸಿದ್ದಾರಾದರೂ ನನ್ನ ಜೀವಿತದಲ್ಲಿ ತಕ್ಕೊಳ್ಳಬೇಕಾದ ಹೆಜ್ಜೆಗಳ ಕುರಿತು ನಾನಾಗಿಯೇ ವಿವೇಚಿಸುವಂತೆ ಈ ಪುಸ್ತಕ ಸಾಧ್ಯಮಾಡಿದೆ. ನನ್ನ ಹೆತ್ತವರೊಂದಿಗೆ ಮನಬಿಚ್ಚಿ ಮಾತಾಡುವಂತೆಯೂ ಇದು ಸಹಾಯಮಾಡಿದೆ.”—ಜಮೀರ.

[ಪುಟ 31ರಲ್ಲಿರುವ ಚಿತ್ರ]

ಹೆತ್ತವರೇ, ಈ ಪುಸ್ತಕದ ಕೂಲಂಕಷ ಪರಿಚಯವನ್ನು ಮಾಡಿಕೊಳ್ಳಿರಿ

[ಪುಟ 32ರಲ್ಲಿರುವ ಚಿತ್ರ]

ನಿಮ್ಮ ಮಗ/ಮಗಳ ಹೃದಯವನ್ನು ತಲಪುವುದು ನಿಮ್ಮ ಗುರಿಯಾಗಿರಲಿ