ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪವಿತ್ರಾತ್ಮವನ್ನು ಅನುಸರಿಸಿ ನಡೆದು ನಿಮ್ಮ ಸಮರ್ಪಣೆಗನುಸಾರ ಜೀವಿಸಿರಿ

ಪವಿತ್ರಾತ್ಮವನ್ನು ಅನುಸರಿಸಿ ನಡೆದು ನಿಮ್ಮ ಸಮರ್ಪಣೆಗನುಸಾರ ಜೀವಿಸಿರಿ

ಪವಿತ್ರಾತ್ಮವನ್ನು ಅನುಸರಿಸಿ ನಡೆದು ನಿಮ್ಮ ಸಮರ್ಪಣೆಗನುಸಾರ ಜೀವಿಸಿರಿ

“ಪವಿತ್ರಾತ್ಮವನ್ನು ಅನುಸರಿಸಿ ನಡೆಯುತ್ತಾ ಇರಿ, ಆಗ ನೀವು ಶಾರೀರಿಕ ಬಯಕೆಗಳನ್ನು ಎಂದಿಗೂ ನಡೆಸುವವರಾಗಿರುವುದಿಲ್ಲ.”—ಗಲಾ. 5:16.

1. ಪಂಚಾಶತ್ತಮ ದಿನದಂದು ಯಾವ ದೀಕ್ಷಾಸ್ನಾನಗಳು ಕೊಡಲ್ಪಟ್ಟವು?

ಕ್ರಿಸ್ತ ಶಕ 33ರ ಪಂಚಾಶತ್ತಮದಂದು ಯೇಸುವಿನ ಹಿಂಬಾಲಕರು ಬೇರೆ ಬೇರೆ ಭಾಷೆಗಳಲ್ಲಿ ಮಾತಾಡಿದ್ದು ಪವಿತ್ರಾತ್ಮದಿಂದ ದೀಕ್ಷಾಸ್ನಾನ ಪಡೆದ ನಂತರವೇ. ಅವರು ಹೀಗೆ ಪವಿತ್ರಾತ್ಮದ ಒಂದು ಅದ್ಭುತಕರ ವರವನ್ನು ಪ್ರದರ್ಶಿಸಿದರು. (1 ಕೊರಿಂ. 12:4-10) ಈ ವರದಿಂದಾಗಿ ಮತ್ತು ಅಪೊಸ್ತಲ ಪೇತ್ರನು ಕೊಟ್ಟ ಭಾಷಣದಿಂದಾಗಿ ಯಾವ ಪರಿಣಾಮ ಉಂಟಾಯಿತು? ಅನೇಕರು ‘ಹೃದಯದಲ್ಲಿ ಇರಿಯಲ್ಪಟ್ಟರು.’ ಪೇತ್ರನ ಪ್ರಚೋದನೆಯಿಂದಾಗಿ ಅವರು ಪಶ್ಚಾತ್ತಾಪಪಟ್ಟು ದೀಕ್ಷಾಸ್ನಾನ ಪಡೆದುಕೊಂಡರು. ಆ ಐತಿಹಾಸಿಕ ವರದಿ ಹೀಗೆ ತಿಳಿಸುತ್ತದೆ: “ಅವನ ಮಾತನ್ನು ಹೃದಯದಾಳದಿಂದ ಸ್ವೀಕರಿಸಿದವರು ದೀಕ್ಷಾಸ್ನಾನ ಪಡೆದರು ಮತ್ತು ಆ ದಿನದಲ್ಲಿ ಸುಮಾರು ಮೂರು ಸಾವಿರ ಜನರು ಕೂಡಿಸಲ್ಪಟ್ಟರು.” (ಅ. ಕಾ. 2:22, 36-41) ಯೇಸು ನಿರ್ದೇಶಿಸಿದ್ದಂತೆ ಅವರಿಗೆ ತಂದೆ, ಮಗ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ನೀರಿನ ದೀಕ್ಷಾಸ್ನಾನವಾಗಿದ್ದಿರಬೇಕು.—ಮತ್ತಾ. 28:19.

2, 3. (ಎ) ಪವಿತ್ರಾತ್ಮದಿಂದ ದೀಕ್ಷಾಸ್ನಾನವಾಗುವುದು ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನವಾಗುವುದರ ಮಧ್ಯೆ ಇರುವ ವ್ಯತ್ಯಾಸವನ್ನು ವಿವರಿಸಿ. (ಬಿ) ಇಂದು ಸತ್ಯ ಕ್ರೈಸ್ತರಾಗುವವರೆಲ್ಲರೂ ಏಕೆ ನೀರಿನ ದೀಕ್ಷಾಸ್ನಾನವನ್ನು ಮಾಡಿಸಿಕೊಳ್ಳುವಂತೆ ಅಪೇಕ್ಷಿಸಲಾಗುತ್ತದೆ?

2 ಆದರೆ ಪವಿತ್ರಾತ್ಮದಿಂದ ದೀಕ್ಷಾಸ್ನಾನವಾಗುವುದು ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನವಾಗುವುದರ ಮಧ್ಯೆ ಏನಾದರೂ ವ್ಯತ್ಯಾಸವಿದೆಯೊ? ಹೌದು. ಪವಿತ್ರಾತ್ಮದಿಂದ ದೀಕ್ಷಾಸ್ನಾನವಾಗುವವರು ದೇವರ ಆತ್ಮಜನಿತ ಪುತ್ರರಾಗಿ ಪುನಃ ಹುಟ್ಟುತ್ತಾರೆ. (ಯೋಹಾ. 3:3) ಅವರು ದೇವರ ಸ್ವರ್ಗೀಯ ರಾಜ್ಯದಲ್ಲಿ ಭಾವೀ ಜೊತೆ ಅರಸರಾಗಿಯೂ ಉಪಯಾಜಕರಾಗಿಯೂ ಅಭಿಷೇಕಿಸಲ್ಪಡುತ್ತಾರೆ. ಮಾತ್ರವಲ್ಲದೆ ಅವರು ಕ್ರಿಸ್ತನ ಆಧ್ಯಾತ್ಮಿಕ ದೇಹದ ಭಾಗವಾಗಿದ್ದಾರೆ. (1 ಕೊರಿಂ. 12:13; ಗಲಾ. 3:27; ಪ್ರಕ. 20:6) ಆದುದರಿಂದ ಪಂಚಾಶತ್ತಮದ ದಿನದಂದು ಮತ್ತು ಅನಂತರ, ಕ್ರಿಸ್ತನೊಂದಿಗೆ ಜೊತೆ ಬಾಧ್ಯರಾಗಲು ವ್ಯಕ್ತಿಗಳನ್ನು ಆರಿಸಿಕೊಂಡಾಗ ಯೆಹೋವನು ಈ ದೀಕ್ಷಾಸ್ನಾನವನ್ನೇ ಅಂದರೆ ಪವಿತ್ರಾತ್ಮದಿಂದಾದ ದೀಕ್ಷಾಸ್ನಾನವನ್ನು ನಡಿಸಿದನು. (ರೋಮ. 8:15-17) ಆದರೆ ನಮ್ಮ ದಿನದಲ್ಲಿ ಯೆಹೋವನ ಜನರ ಸಮ್ಮೇಳನಗಳಲ್ಲಿ ಮತ್ತು ಅಧಿವೇಶನಗಳಲ್ಲಿ ಸಾಮಾನ್ಯವಾಗಿ ಕೊಡಲ್ಪಡುವ ಪವಿತ್ರಾತ್ಮದ ಹೆಸರಿನಲ್ಲಾಗುವ ನೀರಿನ ದೀಕ್ಷಾಸ್ನಾನದ ಕುರಿತೇನು?

3 ನೀರಿನ ದೀಕ್ಷಾಸ್ನಾನವು ಸತ್ಯ ಕ್ರೈಸ್ತರು ಯೆಹೋವ ದೇವರಿಗೆ ಮಾಡಿರುವ ಮನಃಪೂರ್ವಕ ಸಮರ್ಪಣೆಯ ಸಂಕೇತವಾಗಿ ತೆಗೆದುಕೊಳ್ಳುವ ಹೆಜ್ಜೆ. ಸ್ವರ್ಗೀಯ ಕರೆಯನ್ನು ಪಡೆದವರ ವಿಷಯದಲ್ಲಿ ಇದು ಸತ್ಯವಾಗಿದೆ. ಆದರೆ ಈಗ ನೀರಿನ ದೀಕ್ಷಾಸ್ನಾನವು ಭೂಮಿಯ ಮೇಲೆ ಸದಾ ಜೀವಿಸುವ ನಿರೀಕ್ಷೆಯಿರುವ ಲಕ್ಷಾಂತರ ಮಂದಿ ಸ್ತ್ರೀಪುರುಷರಿಗೆ ಸಹ ಅವಶ್ಯಕ ಹೆಜ್ಜೆ. ಒಬ್ಬನಿಗೆ ಯಾವುದೇ ನಿರೀಕ್ಷೆಯಿರಲಿ, ದೇವರಿಗೆ ಸ್ವೀಕೃತನಾಗಿರಬೇಕಾದರೆ ಅವನು ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದು ಅವಶ್ಯಕ. ಈ ರೀತಿಯಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವ ಕ್ರೈಸ್ತರೆಲ್ಲರು ‘ಪವಿತ್ರಾತ್ಮವನ್ನು ಅನುಸರಿಸಿ ನಡೆಯುತ್ತಾ ಇರುವಂತೆ’ ಅಪೇಕ್ಷಿಸಲಾಗುತ್ತದೆ. (ಗಲಾತ್ಯ 5:16 ಓದಿ.) ನೀವು ಪವಿತ್ರಾತ್ಮವನ್ನು ಅನುಸರಿಸಿ ನಡೆಯುವ ಮೂಲಕ ನಿಮ್ಮ ಸಮರ್ಪಣೆಗನುಸಾರ ಜೀವಿಸುತ್ತಿದ್ದೀರೊ?

‘ಪವಿತ್ರಾತ್ಮವನ್ನು ಅನುಸರಿಸಿ ನಡೆಯುವುದರ’ ಅರ್ಥ

4. ‘ಪವಿತ್ರಾತ್ಮವನ್ನು ಅನುಸರಿಸಿ ನಡೆಯುವುದರ’ ಮೂಲಾರ್ಥವೇನು?

4 ‘ಪವಿತ್ರಾತ್ಮವನ್ನು ಅನುಸರಿಸಿ ನಡೆಯುವುದೆಂದರೆ’ ಪವಿತ್ರಾತ್ಮ ನಿಮ್ಮ ಮೇಲೆ ಕ್ರಿಯೆಗೈಯುವಂತೆ ಬಿಡುವುದು, ಅದು ನಿಮ್ಮ ಮೇಲೆ ಪ್ರಭಾವ ಬೀರುವಂತೆ ಬಿಟ್ಟುಕೊಡುವುದಾಗಿದೆ. ಬೇರೆ ಮಾತಿನಲ್ಲಿ ಅದರ ಅರ್ಥ, ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಪವಿತ್ರಾತ್ಮದಿಂದ ನಡೆಸಲ್ಪಡುವುದಾಗಿದೆ. ಗಲಾತ್ಯ 5ನೇ ಅಧ್ಯಾಯವು ಪವಿತ್ರಾತ್ಮದ ಪ್ರಭಾವಕ್ಕೆ ಮತ್ತು ಶರೀರಭಾವದ ಪ್ರಭಾವಕ್ಕೆ ಒಳಗಾಗಿರುವುದರ ನಡುವಣ ವ್ಯತ್ಯಾಸವನ್ನು ಎತ್ತಿತೋರಿಸುತ್ತದೆ.—ಗಲಾತ್ಯ 5:17, 18 ಓದಿ.

5. ಪವಿತ್ರಾತ್ಮದ ಪ್ರಭಾವಕ್ಕೊಳಗಾಗಿರುವುದರಲ್ಲಿ ಯಾವ ಕಾರ್ಯಗಳಿಂದ ದೂರವಿರುವುದು ಒಳಗೂಡಿದೆ?

5 ನೀವು ಪವಿತ್ರಾತ್ಮದ ಪ್ರಭಾವಕ್ಕೊಳಗಾಗಿರುವಲ್ಲಿ, ಶರೀರಭಾವದ ಕಾರ್ಯಗಳಿಂದ ದೂರವಿರಲು ಪ್ರಯತ್ನಿಸುತ್ತೀರಿ. ಆ ಕಾರ್ಯಗಳಲ್ಲಿ “ಜಾರತ್ವ, ಅಶುದ್ಧತೆ, ಸಡಿಲು ನಡತೆ, ವಿಗ್ರಹಾರಾಧನೆ, ಪ್ರೇತವ್ಯವಹಾರ, ಹಗೆತನ, ಜಗಳ, ಹೊಟ್ಟೆಕಿಚ್ಚು, ಕೋಪದ ಕೆರಳುವಿಕೆಗಳು, ಕಲಹ, ಬೇಧಗಳು, ಪಂಥಗಳು, ಮತ್ಸರ, ಕುಡಿದು ಮತ್ತೇರಿದ ಸರದಿಗಳು, ಭಾರೀ ಮೋಜು” ಎಂಬಂಥ ವಿಷಯಗಳು ಒಳಗೂಡಿವೆ. (ಗಲಾ. 5:19-21) ಒಂದರ್ಥದಲ್ಲಿ ನೀವು ‘ಪವಿತ್ರಾತ್ಮದ ಮೂಲಕ ದೇಹದ ದುರಭ್ಯಾಸಗಳನ್ನು ಸಾಯಿಸುತ್ತೀರಿ.’ (ರೋಮ. 8:5, 13) ಇದು ಪವಿತ್ರಾತ್ಮದ ವಿಷಯಗಳ ಮೇಲೆ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿ ಅದರ ಮಾರ್ಗದರ್ಶನದೊಂದಿಗೆ ಸಹಕರಿಸಲು ಸಹಾಯಮಾಡುವುದು. ಆಗ ನೀವು ಶಾರೀರಿಕ ಇಚ್ಛೆಗಳಿಂದ ನಿಯಂತ್ರಿಸಲ್ಪಡುವುದಿಲ್ಲ.

6. ಪವಿತ್ರಾತ್ಮದಿಂದ ಉಂಟಾಗುವ ಫಲವನ್ನು ತೋರಿಸಲು ಏನು ಅಗತ್ಯ ಎಂಬುದನ್ನು ದೃಷ್ಟಾಂತಿಸಿ.

6 ಪವಿತ್ರಾತ್ಮ ನಿಮ್ಮ ಮೇಲೆ ಕ್ರಿಯೆಗೈಯುವಾಗ ನೀವು ದೈವಿಕ ಗುಣಗಳನ್ನು, ‘ಪವಿತ್ರಾತ್ಮದಿಂದ ಉಂಟಾಗುವ ಫಲವನ್ನು’ ತೋರಿಸುತ್ತೀರಿ. (ಗಲಾ. 5:22, 23) ಆದರೆ ಇದರಲ್ಲಿ ನಿಮ್ಮ ಪ್ರಯತ್ನವೂ ಇರಬೇಕು ಎಂಬುದು ನಿಮಗೆ ತಿಳಿದಿದೆ. ಇದನ್ನು ದೃಷ್ಟಾಂತಿಸಲು ಒಬ್ಬ ರೈತನನ್ನು ತೆಗೆದುಕೊಳ್ಳಿ. ಅವನು ತನ್ನ ನೆಲವನ್ನು ಸಿದ್ಧಪಡಿಸಿ ಬೆಳೆ ಬೆಳೆಸುತ್ತಾನೆ. ಇದಕ್ಕೆ ಸೂರ್ಯನ ಬೆಳಕು ಮತ್ತು ನೀರು ಅಗತ್ಯ ನಿಜ. ಇವುಗಳಿಲ್ಲದೆ ಅವನಿಗೆ ಯಾವ ಕೊಯ್ಲೂ ಸಿಗಲಿಕ್ಕಿಲ್ಲ. ನಾವು ಪವಿತ್ರಾತ್ಮವನ್ನು ಸೂರ್ಯನ ಬೆಳಕಿಗೆ ಹೋಲಿಸಬಹುದು. ಪವಿತ್ರಾತ್ಮದಿಂದ ಉಂಟಾಗುವ ಫಲವನ್ನು ತೋರಿಸಲು ನಮಗೆ ಪವಿತ್ರಾತ್ಮದ ಅಗತ್ಯವಿದೆ. ಆದರೂ ರೈತನು ಕಷ್ಟಪಡದಿದ್ದರೆ ಫಸಲು ಸಿಕ್ಕೀತೆ? (ಜ್ಞಾನೋ. 10:4) ನೀವು ನಿಮ್ಮ ಹೃದಯವೆಂಬ ನೆಲವನ್ನು ಹೇಗೆ ಸಿದ್ಧಪಡಿಸುತ್ತೀರಿ ಎಂಬುದು ಪವಿತ್ರಾತ್ಮದಿಂದ ಉಂಟಾಗುವ ಫಲದ ಗುಣಮಟ್ಟ ಮತ್ತು ಪ್ರಮಾಣ ನಿಮ್ಮಲ್ಲಿ ಎಷ್ಟಿದೆ ಎಂಬುದನ್ನು ತೋರಿಸಿಕೊಡುತ್ತದೆ. ಆದುದರಿಂದ, ‘ನಾನು ಪವಿತ್ರಾತ್ಮದೊಂದಿಗೆ ಕೆಲಸಮಾಡುವ ಮೂಲಕ ಅದು ನನ್ನಲ್ಲಿ ಫಲ ಉಂಟುಮಾಡುವಂತೆ ಅನುಮತಿಸುತ್ತಿದ್ದೇನೊ?’ ಎಂದು ನಿಮ್ಮನ್ನು ಕೇಳಿಕೊಳ್ಳಿ.

7. ನೀವು ಪವಿತ್ರಾತ್ಮದಿಂದ ಉಂಟಾಗುವ ಫಲವನ್ನು ಬೆಳೆಸಿಕೊಳ್ಳಬೇಕಾದರೆ ಅಧ್ಯಯನ ಮತ್ತು ಮನನ ಏಕೆ ಅಷ್ಟು ಪ್ರಾಮುಖ್ಯ?

7 ಒಳ್ಳೇ ಕೊಯ್ಲು ಸಿಗಬೇಕಾದರೆ ರೈತರು ತಮ್ಮ ಬೆಳೆಗೆ ನೀರು ಹಾಯಿಸಬೇಕು ಕೂಡ. ಪವಿತ್ರಾತ್ಮದಿಂದ ಉಂಟಾಗುವ ಫಲವನ್ನು ಬೆಳೆಸಿಕೊಳ್ಳಲು ಬೈಬಲಿನಲ್ಲಿ ಕಂಡುಬರುವ ಮತ್ತು ಇಂದು ಕ್ರೈಸ್ತ ಸಭೆಯ ಮೂಲಕ ಲಭ್ಯಗೊಳಿಸಲ್ಪಡುವ ಸತ್ಯದ ನೀರು ನಿಮಗೆ ಬೇಕು. (ಯೆಶಾ. 55:1) ಪವಿತ್ರ ಶಾಸ್ತ್ರಗ್ರಂಥವು ಪವಿತ್ರಾತ್ಮದ ಉತ್ಪನ್ನವಾಗಿದೆ ಎಂದು ನೀವು ಈಗಾಗಲೇ ಅನೇಕರಿಗೆ ಸೂಚಿಸಿರಬಹುದು. (2 ತಿಮೊ. 3:16) ಮಾತ್ರವಲ್ಲದೆ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ವರ್ಗ ಬೈಬಲ್‌ ಸತ್ಯದ ಶುದ್ಧ ನೀರಿನ ಅತ್ಯಗತ್ಯ ತಿಳಿವಳಿಕೆಯನ್ನು ಒದಗಿಸುತ್ತದೆ. (ಮತ್ತಾ. 24:45-47) ಇದರ ಅನ್ವಯ ಸ್ಪಷ್ಟ. ಪವಿತ್ರಾತ್ಮದ ಪ್ರಭಾವಕ್ಕೊಳಗಾಗಲು ನಾವು ದೇವರ ವಾಕ್ಯವನ್ನು ಓದಿ ಮನನಮಾಡಬೇಕು. ನೀವಿದನ್ನು ಮಾಡುತ್ತಿರುವಲ್ಲಿ ಪ್ರವಾದಿಗಳ ಉತ್ತಮ ಮಾದರಿಯನ್ನು ಅನುಕರಿಸುತ್ತಿದ್ದೀರಿ. ಒದಗಿಸಲ್ಪಟ್ಟ ಮಾಹಿತಿಯನ್ನು ಅವರು “ಶ್ರದ್ಧಾಪೂರ್ವಕವಾಗಿ ವಿಚಾರಿಸಿ ಜಾಗರೂಕತೆಯಿಂದ ಪರಿಶೋಧನೆಮಾಡಿದರು.” ದೇವದೂತರು ಕೂಡ ವಾಗ್ದತ್ತ ಸಂತಾನ ಮತ್ತು ಅಭಿಷಿಕ್ತ ಕ್ರೈಸ್ತ ಸಭೆಯ ಆಧ್ಯಾತ್ಮಿಕ ಸತ್ಯಗಳಲ್ಲಿ ಆಳವಾದ ಆಸಕ್ತಿಯನ್ನು ತೋರಿಸಿರುವುದು ಗಮನಾರ್ಹ.—1 ಪೇತ್ರ 1:10-12 ಓದಿ.

ಪವಿತ್ರಾತ್ಮದಿಂದ ಪ್ರಭಾವಿತರಾಗುವುದು ಹೇಗೆ?

8. ನೀವು ಯೆಹೋವನ ಆತ್ಮಕ್ಕಾಗಿ ಕೇಳುವುದು ಏಕೆ ಪ್ರಾಮುಖ್ಯ?

8 ಶಾಸ್ತ್ರಗ್ರಂಥವನ್ನು ಬರೇ ಅಧ್ಯಯನಮಾಡಿ ಮನನಮಾಡಿದರೆ ಸಾಲದು. ಯೆಹೋವನ ಸಹಾಯಕ್ಕಾಗಿ ಮತ್ತು ಮಾರ್ಗದರ್ಶನಕ್ಕಾಗಿ ನೀವು ಕೇಳುತ್ತಾ ಇರಬೇಕು. “ನಾವು ಬೇಡುವುದಕ್ಕಿಂತಲೂ ಗ್ರಹಿಸುವುದಕ್ಕಿಂತಲೂ ಎಷ್ಟೋ ಮಿಗಿಲಾದದ್ದನ್ನು ಅತ್ಯಧಿಕವಾಗಿ” ಆತನು ಮಾಡಶಕ್ತನಾಗಿದ್ದಾನೆ. (ಎಫೆ. 3:20; ಲೂಕ 11:13) ಆದರೆ ಯಾರಾದರೂ ನಿಮ್ಮನ್ನು, “‘ನಾನು ಕೇಳುವ ಮುಂಚೆಯೇ ನನಗೆ ಯಾವುದರ ಆವಶ್ಯಕತೆ ಇದೆಯೆಂಬುದು’ ದೇವರಿಗೆ ಈಗಾಗಲೇ ತಿಳಿದಿರುವಲ್ಲಿ ನಾನೇಕೆ ಕೇಳುತ್ತಾ ಇರಬೇಕು?” ಎಂದು ಕೇಳಿದರೆ ನೀವೇನು ಉತ್ತರ ಕೊಡುವಿರಿ? (ಮತ್ತಾ. 6:8) ಒಂದು ವಿಷಯವೇನೆಂದರೆ, ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸುವ ಮೂಲಕ ನೀವು ಯೆಹೋವನ ಮೇಲೆ ಅವಲಂಬಿಸಿದ್ದೀರಿ ಎಂಬುದನ್ನು ತೋರಿಸಿಕೊಡುತ್ತೀರಿ. ಉದಾಹರಣೆಗೆ, ಯಾರಾದರೂ ನಿಮ್ಮ ಸಹಾಯ ಕೇಳಿ ಬರುತ್ತಾರೆಂದು ನೆನಸಿ. ನಿಮ್ಮಿಂದ ಸಾಧ್ಯವಿರುವ ಸಹಾಯವನ್ನು ನೀವು ಅವನಿಗೆ ಖಂಡಿತ ಮಾಡುವಿರಿ. ಇದಕ್ಕೆ ಒಂದು ಕಾರಣ, ಅವನು ನಿಮ್ಮಲ್ಲಿ ಸಹಾಯಕ್ಕಾಗಿ ಕೇಳಿದ್ದಾನೆ ಮಾತ್ರವಲ್ಲ ನಿಮ್ಮಲ್ಲಿ ಭರವಸೆಯನ್ನು ತೋರಿಸಿದ್ದಾನೆ. (ಜ್ಞಾನೋಕ್ತಿ 3:27 ಹೋಲಿಸಿ.) ತದ್ರೀತಿಯಲ್ಲಿ ನೀವು ಯೆಹೋವನ ಆತ್ಮಕ್ಕಾಗಿ ಕೇಳುವಾಗ ಆತನು ಮೆಚ್ಚಿ ನಿಮಗೆ ತನ್ನ ಆತ್ಮವನ್ನು ಕೊಡುವನು.—ಜ್ಞಾನೋ. 15:8.

9. ಕ್ರೈಸ್ತ ಕೂಟಗಳಿಗೆ ಹಾಜರಾಗುವುದು ದೇವರಾತ್ಮದಿಂದ ಪ್ರಭಾವಿಸಲ್ಪಡಲು ನಿಮಗೆ ಹೇಗೆ ಸಹಾಯಮಾಡಬಲ್ಲದು?

9 ದೇವರಾತ್ಮದಿಂದ ಪ್ರಭಾವಿಸಲ್ಪಡುವ ಮತ್ತೊಂದು ವಿಧ ನಮ್ಮ ಕೂಟಗಳು, ಸಮ್ಮೇಳನಗಳು ಮತ್ತು ಅಧಿವೇಶನಗಳಾಗಿವೆ ಎಂಬುದನ್ನು ನೀವು ಖಂಡಿತ ಗಣ್ಯಮಾಡಬಲ್ಲಿರಿ. ಕೂಟಗಳಿಗೆ ಹಾಜರಾಗಲು ಶ್ರಮಪಡುವುದು ಮತ್ತು ಕಾರ್ಯಕ್ರಮಕ್ಕೆ ಕಿವಿಗೊಡುವುದು ತುಂಬ ಪ್ರಾಮುಖ್ಯ. ಹೀಗೆ ಮಾಡುವುದು ‘ದೇವರ ಅಗಾಧವಾದ ವಿಷಯಗಳನ್ನು’ ಅರ್ಥಮಾಡಿಕೊಳ್ಳಲು ನಿಮಗೆ ಸಹಾಯಮಾಡುತ್ತದೆ. (1 ಕೊರಿಂ. 2:10) ಕೂಟಗಳಲ್ಲಿ ಕ್ರಮವಾಗಿ ಉತ್ತರ ಕೊಡುವುದರಿಂದಲೂ ಪ್ರಯೋಜನಗಳಿವೆ. ಕಳೆದ ನಾಲ್ಕು ವಾರಗಳಲ್ಲಿ ನೀವು ಹಾಜರಾದ ಕೂಟಗಳ ಬಗ್ಗೆ ಯೋಚಿಸಿ. ನೀವು ಉತ್ತರವನ್ನು ಕೊಡಲು, ನಿಮ್ಮ ನಂಬಿಕೆಯ ಅಭಿವ್ಯಕ್ತಿಯನ್ನು ತಿಳಿಸಲು ಎಷ್ಟು ಬಾರಿ ಕೈ ಎತ್ತಿದಿರಿ? ಈ ಕ್ಷೇತ್ರದಲ್ಲಿ ನಿಮಗಿನ್ನೂ ಪ್ರಗತಿಯನ್ನು ಮಾಡಲಿಕ್ಕಿದೆ ಎಂದು ಅನಿಸುತ್ತದೊ? ಹಾಗನಿಸುವಲ್ಲಿ ಮುಂದಿನ ವಾರಗಳಲ್ಲಿ ಏನು ಮಾಡಲಿಕ್ಕಿದ್ದೀರಿ ಎಂಬ ದೃಢತೀರ್ಮಾನ ಮಾಡಿ. ಭಾಗವಹಿಸಲು ನಿಮಗಿರುವ ಸಿದ್ಧಮನಸ್ಸನ್ನು ಯೆಹೋವನು ನೋಡಿ ತನ್ನ ಪವಿತ್ರಾತ್ಮವನ್ನು ದಯಪಾಲಿಸುವನು. ಇದು ನೀವು ಹಾಜರಾಗುವ ಕೂಟಗಳಿಂದ ಇನ್ನೂ ಹೆಚ್ಚು ಪ್ರಯೋಜನ ಪಡೆಯುವಂತೆ ನಿಮಗೆ ಸಹಾಯಮಾಡುವುದು.

10. ಪವಿತ್ರಾತ್ಮವನ್ನು ಅನುಸರಿಸಿ ನಡೆಯುವುದರಲ್ಲಿ ಇತರರಿಗೆ ಯಾವ ಆಮಂತ್ರಣವನ್ನು ಕೊಡುವುದು ಒಳಗೂಡಿದೆ?

10 ಪವಿತ್ರಾತ್ಮವನ್ನು ಅನುಸರಿಸಿ ನಡೆಯುವುದರಲ್ಲಿ ಪ್ರಕಟನೆ 22:17ರಲ್ಲಿ ನಾವು ಓದುವ ಆಮಂತ್ರಣಕ್ಕೆ ಪ್ರತಿಕ್ರಿಯಿಸುವುದೂ ಒಳಗೂಡಿದೆ. ಅದು ಹೇಳುವುದು: “ಪವಿತ್ರಾತ್ಮವೂ ವಧುವೂ, ‘ಬಾ!’ ಎಂದು ಹೇಳುತ್ತಾ ಇರುತ್ತಾರೆ. ಕೇಳಿಸಿಕೊಳ್ಳುತ್ತಿರುವ ಪ್ರತಿಯೊಬ್ಬನು ‘ಬಾ!’ ಎನ್ನಲಿ. ಬಾಯಾರುತ್ತಿರುವ ಪ್ರತಿಯೊಬ್ಬನು ಬರಲಿ! ಇಷ್ಟವುಳ್ಳ ಪ್ರತಿಯೊಬ್ಬನು ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ.” ಪವಿತ್ರಾತ್ಮವು ಅಭಿಷಿಕ್ತ ವಧುವರ್ಗದ ಮೂಲಕ ಕಾರ್ಯನಡೆಸುತ್ತಾ ಜೀವಜಲದ ಕುರಿತಾದ ಈ ಆಮಂತ್ರಣವನ್ನು ಕೊಡುತ್ತಾ ಇದೆ. ನೀವು “ಬಾ!” ಎಂಬ ಆಮಂತ್ರಣವನ್ನು ಸ್ವೀಕರಿಸಿರುವಲ್ಲಿ ಬೇರೆಯವರಿಗೆ “ಬಾ!” ಎಂದು ಹೇಳಲು ದೃಢಸಂಕಲ್ಪ ಮಾಡಿದ್ದೀರೊ? ಈ ಜೀವರಕ್ಷಕ ಕೆಲಸದಲ್ಲಿ ಭಾಗವಹಿಸಸಾಧ್ಯವಿರುವುದು ಎಂಥ ಸುಯೋಗ!

11, 12. ಸಾರುವ ಕಾರ್ಯದಲ್ಲಿ ಪವಿತ್ರಾತ್ಮವು ಹೇಗೆ ಒಳಗೂಡಿದೆ?

11 ಈ ಪ್ರಾಮುಖ್ಯ ಕೆಲಸವು ಈಗ ಪವಿತ್ರಾತ್ಮದ ಮಾರ್ಗದರ್ಶನದ ಕೆಳಗೆ ಪೂರೈಸಲ್ಪಡುತ್ತಿದೆ. ಒಂದನೆ ಶತಮಾನದಲ್ಲಿ ಮಿಷನೆರಿಗಳಿಗಾಗಿ ಹೊಸ ಟೆರಿಟೊರಿಗಳನ್ನು ತೆರೆಯುವುದರಲ್ಲಿ ಪವಿತ್ರಾತ್ಮವು ಹೇಗೆ ಒಳಗೂಡಿತ್ತು ಎಂಬುದನ್ನು ನಾವು ಬೈಬಲಿನಲ್ಲಿ ಓದುತ್ತೇವೆ. ಅಪೊಸ್ತಲ ಪೌಲನು ಮತ್ತು ಅವನ ಸಂಗಡಿಗರು ‘ಏಷ್ಯಾ ಪ್ರಾಂತದಲ್ಲಿ ವಾಕ್ಯವನ್ನು ಸಾರುವುದನ್ನು ಪವಿತ್ರಾತ್ಮವು ನಿಷೇಧಿಸಿತು’; ಅವರಿಗೆ ಬಿಥೂನ್ಯಕ್ಕೆ ಹೋಗಲು ಸಹ ಪವಿತ್ರಾತ್ಮ ಅನುಮತಿಸಲಿಲ್ಲ. ಆ ಸ್ಥಳಗಳಿಗೆ ಹೋಗಲು ಅವರನ್ನು ಪವಿತ್ರಾತ್ಮವು ಹೇಗೆ ತಡೆಯಿತು ಎಂಬುದು ನಮಗೆ ಸರಿಯಾಗಿ ತಿಳಿದಿಲ್ಲ. ಆದರೂ ಪವಿತ್ರಾತ್ಮ ಪೌಲನನ್ನು ಯೂರೋಪಿನ ವಿಸ್ತಾರವಾದ ಕ್ಷೇತ್ರಕ್ಕೆ ನಡೆಸಿತ್ತು ಎಂಬುದು ಸ್ಪಷ್ಟ. ಮಕೆದೋನ್ಯದವನಾದ ಒಬ್ಬ ಮನುಷ್ಯನು ಸಹಾಯಕ್ಕಾಗಿ ಬೇಡಿಕೊಳ್ಳುತ್ತಿದ್ದ ದರ್ಶನವು ಅವನಿಗೆ ಸಿಕ್ಕಿತು.—ಅ. ಕಾ. 16:6-10.

12 ತದ್ರೀತಿಯಲ್ಲಿ ಇಂದು ಯೆಹೋವನ ಆತ್ಮವು ಲೋಕವ್ಯಾಪಕ ಸಾರುವ ಕಾರ್ಯವನ್ನು ಮಾರ್ಗದರ್ಶಿಸುತ್ತಿದೆ. ಮಾರ್ಗದರ್ಶಿಸಲಿಕ್ಕಾಗಿ ಅದ್ಭುತಕರವಾದ ದರ್ಶನಗಳು ಬಳಸಲ್ಪಡುವುದಿಲ್ಲ. ಆದರೂ ಯೆಹೋವನು ಅಭಿಷಿಕ್ತರನ್ನು ತನ್ನ ಪವಿತ್ರಾತ್ಮದ ಮೂಲಕ ನಡೆಸುತ್ತಿದ್ದಾನೆ. ಅಲ್ಲದೆ ಸಾರುವುದರಲ್ಲಿ ಮತ್ತು ಬೋಧಿಸುವುದರಲ್ಲಿ ತಮ್ಮಿಂದಾದ ಎಲ್ಲವನ್ನು ಮಾಡುವಂತೆ ಪವಿತ್ರಾತ್ಮವು ಸಹೋದರ ಸಹೋದರಿಯರನ್ನು ಪ್ರಚೋದಿಸುತ್ತದೆ. ಈ ಪ್ರಾಮುಖ್ಯ ಕೆಲಸದಲ್ಲಿ ನೀವು ಭಾಗವಹಿಸುತ್ತಿದ್ದೀರಿ ಎಂಬುದಕ್ಕೆ ಸಂಶಯವೇ ಇಲ್ಲ. ಈ ರೋಮಾಂಚಕ ಚಟುವಟಿಕೆಯಲ್ಲಿ ನಿಮ್ಮ ಸಂತೋಷವನ್ನು ನೀವು ಹೆಚ್ಚಿಸಬಲ್ಲಿರೊ?

13. ಪವಿತ್ರಾತ್ಮದ ಮಾರ್ಗದರ್ಶನೆಗೆ ನಿಮ್ಮನ್ನು ಹೇಗೆ ಅಧೀನಪಡಿಸಿಕೊಳ್ಳಬಲ್ಲಿರಿ? ದೃಷ್ಟಾಂತಿಸಿ.

13 ದೇವಜನರಿಗಾಗಿ ಒದಗಿಸಲ್ಪಟ್ಟ ಮಾಹಿತಿಯನ್ನು ಅನ್ವಯಿಸಿಕೊಳ್ಳುವ ಮೂಲಕ ನೀವು ಪವಿತ್ರಾತ್ಮದ ಮಾರ್ಗದರ್ಶನೆಗೆ ಅಧೀನಪಡಿಸಿಕೊಳ್ಳಬಲ್ಲಿರಿ. ಜಪಾನಿನ ಯುವತಿ ಮೀಹೊಕೊಳನ್ನು ಪರಿಗಣಿಸಿರಿ. ಹೊಸದಾಗಿ ಪಯನೀಯರಳಾದ ಅವಳು ಪುನರ್ಭೇಟಿಗಳನ್ನು ಮಾಡಲು ಶಕ್ತಳಲ್ಲ ಎಂದು ನೆನಸಿದಳು; ಮನೆಯವರ ಆಸಕ್ತಿಯನ್ನು ಸೆರೆಹಿಡಿಯುವುದು ಹೇಗೆ ಎಂಬುದು ತನಗೆ ಗೊತ್ತಿಲ್ಲ ಎಂದವಳ ಎಣಿಕೆಯಾಗಿತ್ತು. ಆ ಸಮಯದ ಸುಮಾರಿಗೆ ನಮ್ಮ ರಾಜ್ಯ ಸೇವೆಯಲ್ಲಿ ಸಂಕ್ಷಿಪ್ತ ಪುನರ್ಭೇಟಿಗಳನ್ನು ಮಾಡುವುದು ಹೇಗೆ ಎಂಬುದರ ಬಗ್ಗೆ ವ್ಯಾವಹಾರಿಕ ಸಲಹೆಗಳು ಒದಗಿಸಲ್ಪಟ್ಟವು. ಅನಂತರ ಸಂತೃಪ್ತಿಕರವಾದ ಜೀವನ—ಲಭ್ಯವಾಗುವ ವಿಧ ಎಂಬ ಬ್ರೋಷರ್‌ ಪ್ರಕಾಶಿಸಲ್ಪಟ್ಟಿತು. ಅದು ವಿಶೇಷವಾಗಿ ಜಪಾನಿನ ಕ್ಷೇತ್ರದಲ್ಲಿ ಬಹು ಉಪಯುಕ್ತವಾಗಿತ್ತು. ಬ್ರೋಷರನ್ನು ಹೇಗೆ ಉಪಯೋಗಿಸುವುದು, ವಿಶೇಷವಾಗಿ ಅದನ್ನು ಉಪಯೋಗಿಸುತ್ತಾ ಚುಟುಕಾದ ಪುನರ್ಭೇಟಿಗಳನ್ನು ಮಾಡುವುದು ಹೇಗೆ ಎಂಬುದರ ಬಗ್ಗೆ ಕೊಡಲ್ಪಟ್ಟ ಸಲಹೆಗಳನ್ನು ಮೀಹೊಕೊ ಅನ್ವಯಿಸಿಕೊಂಡಳು. ಸ್ವಲ್ಪದರಲ್ಲೇ ಹಿಂದೆ ಅಧ್ಯಯನ ಬೇಡವೆಂದು ಹೇಳಿರಬಹುದಾದ ವ್ಯಕ್ತಿಗಳೊಂದಿಗೂ ಅವಳು ಬೈಬಲ್‌ ಅಧ್ಯಯನಗಳನ್ನು ಮಾಡಲು ಶಕ್ತಳಾದಳು. ಅವಳನ್ನುವುದು: “ನನಗೆ ತುಂಬ ಅಧ್ಯಯನಗಳು ಸಿಕ್ಕಿದವು, ಎಷ್ಟೆಂದರೆ ಒಮ್ಮೆ 12 ಅಧ್ಯಯನಗಳು ಸಿಕ್ಕಿದಾಗ ಕೆಲವನ್ನು ವೇಟಿಂಗ್‌ ಲಿಸ್ಟಲ್ಲಿ ಇಡಬೇಕಾಯಿತು!” ನಿಶ್ಚಯವಾಗಿಯೂ ದೇವರ ಸೇವಕರಿಗೆ ಒದಗಿಸಲ್ಪಡುವ ಮಾರ್ಗದರ್ಶನವನ್ನು ಅನ್ವಯಿಸುವ ಮೂಲಕ ನೀವು ಪವಿತ್ರಾತ್ಮವನ್ನು ಅನುಸರಿಸಿ ನಡೆಯುವುದಾದರೆ ಸಮೃದ್ಧ ಫಲವನ್ನು ಕೊಯ್ಯಬಲ್ಲಿರಿ.

ದೇವರಾತ್ಮದ ಮೇಲೆ ಆತುಕೊಳ್ಳಿರಿ

14, 15. (ಎ) ಅಪರಿಪೂರ್ಣ ಮನುಷ್ಯರಿಗೆ ತಮ್ಮ ಸಮರ್ಪಣೆಗನುಸಾರ ಜೀವಿಸಲು ಸಾಧ್ಯವಾಗುವುದು ಹೇಗೆ? (ಬಿ) ಅತ್ಯುತ್ತಮ ಸ್ನೇಹಿತರನ್ನು ನೀವು ಹೇಗೆ ಕಂಡುಕೊಳ್ಳಬಲ್ಲಿರಿ?

14 ಒಬ್ಬ ಸ್ನಾತ ಶುಶ್ರೂಷಕರೋಪಾದಿ ನಿಮಗೆ ಒಂದು ಶುಶ್ರೂಷೆಯನ್ನು ನಡೆಸಲಿಕ್ಕಿದೆ. (ರೋಮ. 10:14) ಅಂಥ ಜವಾಬ್ದಾರಿಯನ್ನು ನಿರ್ವಹಿಸಲು ನೀವು ಪೂರ್ಣ ಅರ್ಹತೆಯನ್ನು ಪಡೆದಿಲ್ಲ ಎಂದು ನಿಮಗನಿಸಬಹುದು. ಆದರೆ ಅಭಿಷಿಕ್ತರ ವಿಷಯದಲ್ಲಿ ಹೇಗೋ ಹಾಗೆಯೇ ನಿಮಗೆ ಅರ್ಹತೆಯನ್ನು ಕೊಡುವಾತನು ದೇವರು ತಾನೆ. (2 ಕೊರಿಂಥ 3:5 ಓದಿ.) ನಿಮ್ಮ ಕೈಲಾದಷ್ಟು ಪ್ರಯತ್ನಿಸುವ ಮೂಲಕ ಹಾಗೂ ದೇವರಾತ್ಮದಲ್ಲಿ ಆತುಕೊಳ್ಳುವ ಮೂಲಕ ನಿಮ್ಮ ಸಮರ್ಪಣೆಗನುಸಾರ ನೀವು ಜೀವಿಸಬಲ್ಲಿರಿ.

15 ನಮ್ಮ ಪರಿಪೂರ್ಣ ದೇವರಾದ ಯೆಹೋವನಿಗೆ ಮಾಡುವ ನಮ್ಮ ಸಮರ್ಪಣೆಗೆ ಅನುಸಾರ ಜೀವಿಸುವುದು ಅಪರಿಪೂರ್ಣ ಮನುಷ್ಯರಾದ ನಮಗೆ ಸುಲಭವಲ್ಲ ನಿಜ. ಒಂದು ಸಮಸ್ಯೆಯೇನೆಂದರೆ ನೀವು ಹಿಂದೊಮ್ಮೆ ಸಹವಾಸಮಾಡುತ್ತಿದ್ದ ಕೆಲವರು ನಿಮ್ಮ ಹೊಸ ಜೀವನಶೈಲಿಯನ್ನು ಕಂಡು ತಬ್ಬಿಬ್ಬಾಗಿ ನಿಮ್ಮ ವಿರುದ್ಧ ‘ದೂಷಣಾತ್ಮಕ ಮಾತುಗಳನ್ನಾಡಬಹುದು.’ (1 ಪೇತ್ರ 4:4) ಆದರೂ ಅಂದಿನಿಂದ ನೀವು ಹೊಸ ಹೊಸ ಸ್ನೇಹಿತರನ್ನು ಗಳಿಸಿಕೊಂಡಿದ್ದೀರಿ ಎಂಬ ನಿಜತ್ವವನ್ನು ಮರೆಯದಿರಿ. ಅವರಲ್ಲಿ ಅತಿ ಪ್ರಾಮುಖ್ಯ ಸ್ನೇಹಿತರು ಯೆಹೋವ ಮತ್ತು ಯೇಸು ಕ್ರಿಸ್ತರೇ. (ಯಾಕೋಬ 2:21-23 ಓದಿ.) ಲೋಕದಲ್ಲೆಲ್ಲೂ ಇರುವ ‘ಸಹೋದರರ ಇಡೀ ಬಳಗದ’ ಭಾಗವಾಗಿರುವ ನಿಮ್ಮ ಸ್ಥಳಿಕ ಸಭೆಯ ಸಹೋದರ ಸಹೋದರಿಯರನ್ನು ಪರಿಚಯಿಸಿಕೊಳ್ಳುವುದು ಸಹ ಪ್ರಾಮುಖ್ಯ. (1 ಪೇತ್ರ 2:17; ಜ್ಞಾನೋ. 17:17) ನಿಮ್ಮ ಮೇಲೆ ಒಳ್ಳೇ ಪ್ರಭಾವವನ್ನು ಬೀರುತ್ತಾ ಇರುವ ಸ್ನೇಹಿತರನ್ನು ಪಡೆಯುವಂತೆ ಯೆಹೋವನು ತನ್ನ ಆತ್ಮದ ಮೂಲಕ ನಿಮಗೆ ಸಹಾಯಮಾಡುವನು.

16. ಪೌಲನಂತೆ ನೀವು ‘ಬಲಹೀನತೆಗಳಲ್ಲಿಯೂ ಸಂತೋಷಪಡಬಲ್ಲಿರಿ’ ಏಕೆ?

16 ಸಭೆಯಲ್ಲಿ ನಿಮಗೆ ಸಹಾಯಕೊಡುವ ಸ್ನೇಹಿತರು ಸುತ್ತಮುತ್ತ ಇರುವಾಗಲೂ ದಿನನಿತ್ಯದ ಸವಾಲುಗಳನ್ನು ನಿಭಾಯಿಸಲು ನಿಮಗೆ ಇನ್ನೂ ಕಷ್ಟವಾಗುತ್ತಿರಬಹುದು. ನೀವು ಎದುರಿಸಬೇಕಾದ ಸಮಸ್ಯೆಗಳು ಕೆಲವೊಮ್ಮೆ ನಿಮ್ಮನ್ನು ದಿಕ್ಕುತೋಚದಂತೆ ಮಾಡಬಹುದು. ಆಗ ಕೊನೆಮೊದಲಿಲ್ಲದ ಸಮಸ್ಯೆಗಳನ್ನು ಎದುರಿಸುತ್ತೀರೋ ಎಂಬಂತೆ ನಿಮಗೆ ಭಾಸವಾದೀತು. ಅಂಥ ಸಮಯವು ವಿಶೇಷವಾಗಿ ನೀವು ಯೆಹೋವನ ಕಡೆಗೆ ತಿರುಗಿ ಆತನ ಪವಿತ್ರಾತ್ಮಕ್ಕಾಗಿ ಕೇಳಬೇಕಾದ ಸಮಯ. “ನಾನು ಬಲಹೀನನಾಗಿರುವಾಗಲೇ ಬಲವುಳ್ಳವನಾಗಿದ್ದೇನೆ” ಎಂದು ಅಪೊಸ್ತಲ ಪೌಲನು ಬರೆದನು. (2 ಕೊರಿಂಥ 4:7-10; 12:10 ಓದಿ.) ಮಾನವ ಬಲಹೀನತೆಗಳು ಯಾವ ರೀತಿಯದ್ದೇ ಆಗಿರಲಿ ದೇವರಾತ್ಮವು ಅವನ್ನು ನೀಗಿಸಬಲ್ಲದೆಂದು ಪೌಲನಿಗೆ ತಿಳಿದಿತ್ತು. ಹೀಗೆ ನಿಮಗೆ ಬಲಹೀನತೆಯ ಅನಿಸಿಕೆಯಾಗಿ ಸಹಾಯದ ಅಗತ್ಯ ಉಂಟಾದಾಗಲೆಲ್ಲ ದೇವರ ಕಾರ್ಯಕಾರಿ ಶಕ್ತಿಯು ನಿಮ್ಮನ್ನು ಬಲಪಡಿಸಬಲ್ಲದು. ತಾನು ‘ಬಲಹೀನತೆಗಳಲ್ಲಿಯೂ ಸಂತೋಷಪಡಶಕ್ತನು’ ಎಂದು ಪೌಲನು ಬರೆದನು. ಪವಿತ್ರಾತ್ಮವು ತನ್ನ ಮೇಲೆ ಕಾರ್ಯನಡಿಸುತ್ತಿದೆ ಎಂಬ ಅನಿಸಿಕೆ ಅವನಿಗಾದದ್ದು ಅವನು ಬಲಹೀನನಾಗಿದ್ದಾಗಲೇ. ನೀವು ಸಹ ಅದೇ ಅನಿಸಿಕೆಯನ್ನು ಅನುಭವಿಸಬಲ್ಲಿರಿ!—ರೋಮ. 15:13.

17. ನೀವು ನಿಮ್ಮ ಗುರಿಮುಟ್ಟಲು ಮುಂದುವರಿಯುವಾಗ ಪವಿತ್ರಾತ್ಮವು ನಿಮಗೆ ಹೇಗೆ ಸಹಾಯಮಾಡಬಲ್ಲದು?

17 ದೇವರಿಗೆ ಸಮರ್ಪಿತವಾದ ಜೀವನವನ್ನು ನಡಿಸಶಕ್ತರಾಗುವಂತೆ ನಮಗೆ ಆತನ ಆತ್ಮದ ಅಗತ್ಯವಿದೆ. ಒಂದು ಹಾಯಿಹಡಗಿನ ಕ್ಯಾಪ್ಟನ್‌ ನೀವಾಗಿದ್ದೀರಿ ಎಂದು ನೆನಸಿ. ನಿಮ್ಮ ಗಮ್ಯಸ್ಥಾನವನ್ನು ಅಥವಾ ಗುರಿಯನ್ನು ಸುಭದ್ರವಾಗಿ ಸೇರಲು ಸರಿದಿಕ್ಕಿಗೆ ಬೀಸುವ ಗಾಳಿಯ ಅಗತ್ಯವಿದೆ. ನೀವು ಪಡೆಯಬಯಸುವ ಆ ಗಾಳಿಯೇ ಪವಿತ್ರಾತ್ಮ. ಯೆಹೋವನನ್ನು ಸದಾಕಾಲ ಸೇವಿಸುವುದೇ ನಿಮ್ಮ ಗುರಿ. ಸೈತಾನನ ಲೋಕದ ಮನೋಭಾವದಿಂದ ನೂಕಲ್ಪಟ್ಟು ದಿಕ್ಕುಪಾಲಾಗಿ ಓಲಾಡಿಹೋಗಲು ನೀವು ಬಯಸುವುದಿಲ್ಲ. (1 ಕೊರಿಂ. 2:12) ಸಾಂಕೇತಿಕವಾಗಿ ನೀವು ಸರಿಯಾದ ಗಾಳಿಯನ್ನು ಗುರುತಿಸಿ ಅದನ್ನು ಭದ್ರವಾಗಿ ಹಿಡಿದುಕೊಳ್ಳಬೇಕು. ಆ ಗಾಳಿಯೇ ಪವಿತ್ರಾತ್ಮ. ದೇವರ ವಾಕ್ಯ ಮತ್ತು ಆತನ ಆತ್ಮ-ನಿರ್ದೇಶಿತ ಸಂಘಟನೆಯ ಮೂಲಕ ಪವಿತ್ರಾತ್ಮವು ನಿಮ್ಮನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವುದು.

18. ಈಗ ನಿಮ್ಮ ದೃಢನಿಶ್ಚಯವೇನು, ಮತ್ತು ಏಕೆ?

18 ನೀವು ಯೆಹೋವನ ಸಾಕ್ಷಿಗಳೊಂದಿಗೆ ಅಧ್ಯಯನ ಮಾಡುತ್ತಾ ಅವರೊಂದಿಗೆ ಆಧ್ಯಾತ್ಮಿಕ ಸಹವಾಸವನ್ನು ಆನಂದಿಸುತ್ತಿರಬಹುದು. ಆದರೆ ನೀವಿನ್ನೂ ಸಮರ್ಪಣೆ ಮತ್ತು ದೀಕ್ಷಾಸ್ನಾನದ ಪ್ರಾಮುಖ್ಯ ಹೆಜ್ಜೆಗಳನ್ನು ತಕ್ಕೊಂಡಿಲ್ಲವಾದರೆ, ‘ಆ ಹೆಜ್ಜೆಯನ್ನು ತಕ್ಕೊಳ್ಳಲು ನಾನೇಕೆ ಹಿಂಜರಿಯಬೇಕು?’ ಎಂದು ಕೇಳಿಕೊಳ್ಳಿ. ಇಂದು ಯೆಹೋವನ ಚಿತ್ತವನ್ನು ಪೂರೈಸುವುದರಲ್ಲಿ ಪವಿತ್ರಾತ್ಮದ ಪಾತ್ರವನ್ನು ನೀವು ಅಂಗೀಕರಿಸಿ ಅದರ ಕಾರ್ಯವನ್ನು ಗಣ್ಯಮಾಡುತ್ತಿರುವಲ್ಲಿ ಸರಿಯಾದದ್ದೆಂದು ನೀವು ತಿಳಿದಿರುವ ಆ ಹೆಜ್ಜೆಗಳನ್ನು ತೆಗೆದುಕೊಳ್ಳಿ. ಆಗ ಯೆಹೋವನು ನಿಮ್ಮನ್ನು ಹೇರಳವಾಗಿ ಆಶೀರ್ವದಿಸುವನು. ತನ್ನ ಪವಿತ್ರಾತ್ಮವನ್ನು ನಿಮಗೆ ಧಾರಾಳವಾಗಿ ಒದಗಿಸುವನು. ನೀವು ವರ್ಷಗಳ ಅಥವಾ ದಶಕಗಳ ಹಿಂದೆ ದೀಕ್ಷಾಸ್ನಾನ ಹೊಂದಿದ್ದೀರಾದರೆ ಪವಿತ್ರಾತ್ಮದ ಪ್ರಭಾವವನ್ನು ನಿಶ್ಚಯವಾಗಿಯೂ ಅನುಭವಿಸಿದ್ದೀರಿ. ದೇವರು ತನ್ನ ಆತ್ಮದಿಂದ ನಿಮ್ಮನ್ನು ಹೇಗೆ ಬಲಪಡಿಸಬಲ್ಲನು ಎಂಬುದನ್ನು ನೀವು ಸ್ವತಃ ಅನುಭವಿಸಿದ್ದೀರಿ, ಕಂಡಿದ್ದೀರಿ. ದೇವರಾತ್ಮದ ಅದೇ ಸಹಾಯವು ಮುಂದೆ ನಿರಂತರ ಭವಿಷ್ಯತ್ತಿನಲ್ಲೂ ಮುಂದುವರಿಯಬಲ್ಲದು. ಆದ್ದರಿಂದ ಪವಿತ್ರಾತ್ಮವನ್ನು ಅನುಸರಿಸಿ ನಡೆಯುತ್ತಾ ಇರಲು ದೃಢನಿಶ್ಚಯ ಮಾಡಿರಿ.

ನಿಮಗೆ ಜ್ಞಾಪಕವಿದೆಯೊ?

• ‘ಪವಿತ್ರಾತ್ಮವನ್ನು ಅನುಸರಿಸಿ ನಡೆಯುವುದು’ ಅಂದರೇನು?

• ‘ಪವಿತ್ರಾತ್ಮವನ್ನು ಅನುಸರಿಸಿ ನಡೆಯುತ್ತಾ ಇರಲು’ ನಿಮಗೆ ಯಾವುದು ಸಹಾಯಮಾಡಬಲ್ಲದು?

• ನಿಮ್ಮ ಸಮರ್ಪಣೆಗೆ ಅನುಸಾರವಾಗಿ ನೀವು ಹೇಗೆ ಜೀವಿಸಬಲ್ಲಿರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರ]

ನಿಮ್ಮ ಹೃದಯದ ನೆಲವನ್ನು ಸಿದ್ಧಗೊಳಿಸಲು ಪ್ರಯತ್ನ ಬೇಕು

[ಪುಟ 16, 17ರಲ್ಲಿರುವ ಚಿತ್ರಗಳು]

ದೇವರಾತ್ಮದಿಂದ ನೀವು ಪ್ರಭಾವಿಸಲ್ಪಟ್ಟಿದ್ದೀರೊ?