ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಷ್ಟಗಳನ್ನು ತಾಳಿಕೊಳ್ಳುವುದು ಯೆಹೋವನಲ್ಲಿ ನಮ್ಮ ಭರವಸೆಯನ್ನು ವರ್ಧಿಸಿತು

ಕಷ್ಟಗಳನ್ನು ತಾಳಿಕೊಳ್ಳುವುದು ಯೆಹೋವನಲ್ಲಿ ನಮ್ಮ ಭರವಸೆಯನ್ನು ವರ್ಧಿಸಿತು

ಕಷ್ಟಗಳನ್ನು ತಾಳಿಕೊಳ್ಳುವುದು ಯೆಹೋವನಲ್ಲಿ ನಮ್ಮ ಭರವಸೆಯನ್ನು ವರ್ಧಿಸಿತು

ಆ್ಯಡ ಡೆಲ್ಲೊ ಸ್ಟ್ರೀಟ್ಟೊರವರು ಹೇಳಿದಂತೆ

ನಾನು ಈಗಷ್ಟೇ ದಿನದ ವಚನವನ್ನು ನನ್ನ ನೋಟ್‌ಪುಸ್ತಕದಲ್ಲಿ ಬರೆದಿಟ್ಟೆ. ನನಗೀಗ 36 ವರ್ಷ ವಯಸ್ಸು, ಆದರೆ ಆ ಕೆಲವೇ ಸಾಲುಗಳನ್ನು ಬರೆಯಲು ನನಗೆ ಎರಡು ತಾಸು ಬೇಕಾಯಿತು. ಅಷ್ಟು ಹೊತ್ತೇಕೆ? ನನ್ನ ಅಮ್ಮ ಅದನ್ನು ವಿವರಿಸುವರು.—ಜೊಯೆಲ್‌

ನನ್ನ ಪತಿ ಮತ್ತು ನಾನು ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಗಳಾದದ್ದು 1968ರಲ್ಲಿ. ನಮಗೆ ಡೇವಿಡ್‌ ಮತ್ತು ಮಾರ್ಕ್‌ ಎಂಬ ಇಬ್ಬರು ಸುಸ್ವಸ್ಥ ಹುಡುಗರು ಜನಿಸಿದ ನಂತರ ಮೂರನೇ ಮಗ ಜೊಯೆಲ್‌ ಹುಟ್ಟಿದ. ಅವನ ಜನನ ಅಕಾಲಿಕವಾಗಿತ್ತು. ಅವನು 1973ರಲ್ಲಿ ಬೆಲ್ಜಿಯಮ್‌ನ ಬೆನ್ಶ್‌ ಪಟ್ಟಣದ ಆಸ್ಪತ್ರೆಯೊಂದರಲ್ಲಿ ಜನಿಸಿದನು. ಇದು ಬ್ರಸೆಲ್ಸ್‌ನ ಸುಮಾರು 60 ಕಿ.ಮೀ. ದಕ್ಷಿಣದಲ್ಲಿದೆ. ಹುಟ್ಟಿದಾಗ ಅವನ ತೂಕ ಕೇವಲ 1.7 ಕೆ.ಜಿ. ಆಗಿತ್ತು. ಹೆಚ್ಚು ತೂಕ ಗಳಿಸಲಿಕ್ಕಾಗಿ ಜೊಯೆಲ್‌ ಆಸ್ಪತ್ರೆಯಲ್ಲಿಯೇ ಉಳಿಯಬೇಕಾದ್ದರಿಂದ ನಾನೊಬ್ಬಳೇ ಮನೆಗೆ ಬಂದೆ.

ವಾರಗಳ ನಂತರವೂ ನಮ್ಮ ಮಗನಲ್ಲಿ ಸುಧಾರಿಸುವ ಯಾವುದೇ ಲಕ್ಷಣ ಕಾಣಲಿಲ್ಲ. ಆದುದರಿಂದ ನಾನು ಮತ್ತು ನನ್ನ ಪತಿ ಲ್ಯೂಜೀ ಅವನನ್ನು ಮಕ್ಕಳ ತಜ್ಞರ ಬಳಿಗೆ ಒಯ್ದೆವು. ಜೊಯೆಲ್‌ನನ್ನು ಪರೀಕ್ಷಿಸಿದ ನಂತರ ವೈದ್ಯರು, “ಜೊಯೆಲ್‌ನ ಅಣ್ಣಂದಿರಿಗೆ ಇರದಂಥ ಎಲ್ಲ ಸಮಸ್ಯೆಗಳು ಜೊಯೆಲ್‌ಗೆ ಇರುವಂತೆ ತೋರುತ್ತದೆ ಎಂದು ತಿಳಿಸಲು ವಿಷಾದಿಸುತ್ತೇನೆ” ಎಂದರು. ನಮಗೆ ಏನು ಮಾಡಬೇಕೆಂದೇ ತೋಚಲಿಲ್ಲ. ನಮ್ಮ ಪುಟ್ಟನಿಗೆ ಒಂದು ಗಂಭೀರ ಕಾಯಿಲೆಯಿದೆ ಎಂಬುದು ಆಗ ನನಗೆ ಅರ್ಥವಾಯಿತು. ಆಗ ವೈದ್ಯರು ನನ್ನ ಪತಿಯನ್ನು ಪಕ್ಕಕ್ಕೆ ಕರೆದು, “ನಿಮ್ಮ ಮಗು ‘ಟ್ರಿಸಮಿ 21’ ಎಂಬ ರೋಗದಿಂದ ಬಳಲುತ್ತಿದೆ” ಎಂದರು. ಈ ಕಾಯಿಲೆಯನ್ನು ಡೌನ್‌ ಸಿಂಡ್ರೋಮ್‌ ಎಂದು ಸಹ ಕರೆಯುತ್ತಾರೆ. *

ಮಕ್ಕಳ ತಜ್ಞರು ಕೊಟ್ಟ ರೋಗನಿದಾನದಿಂದ ನಾವು ಚಿಂತಾಕ್ರಾಂತರಾಗಿ ಇನ್ನೊಬ್ಬ ವೈದ್ಯಕೀಯ ವಿಶೇಷಜ್ಞರ ಬಳಿಗೆ ಹೋಗಲು ನಿರ್ಣಯಿಸಿದೆವು. ಅವರು ಒಂದೇ ಒಂದು ಮಾತನ್ನಾಡದೆ ಸುಮಾರು ಒಂದು ತಾಸು ನಮ್ಮ ಪುಟ್ಟ ಜೊಯೆಲ್‌ನನ್ನು ಪರೀಕ್ಷಿಸಿದರು. ಲ್ಯೂಜೀ ಮತ್ತು ನನಗೆ ಸಮಯವೇ ನಿಂತುಹೋದಂತೆ ಕಂಡಿತು. ಅಂತೂ ಕೊನೆಗೆ ವೈದ್ಯರು ತಲೆಯೆತ್ತಿ, “ನಿಮ್ಮ ಮಗುವಿಗೆ ನೀವೇ ತುಂಬ ಕಾಳಜಿ ತೋರಿಸಬೇಕು” ಎಂದು ಹೇಳಿದರು. ಬಳಿಕ ಅವರು ದಯಾಭಾವದಿಂದ, “ಆದರೂ ಚಿಂತೆ ಬೇಡ. ಹೆತ್ತವರಾದ ನೀವು ಜೊಯೆಲ್‌ನನ್ನು ಪ್ರೀತಿಸುವುದರಿಂದ ಅವನು ಖುಷಿಯಾಗಿರುವನು” ಎಂದರು. ನಾನು ಭಾವೋದ್ರೇಕದಿಂದ ಮುಳುಗಿ ಜೊಯೆಲ್‌ನನ್ನು ನನ್ನ ತೋಳುಗಳಲ್ಲಿ ಎತ್ತಿಕೊಂಡು ಮನೆಗೆ ಒಯ್ದೆ. ಆಗ ಅವನು ಎಂಟು ವಾರದ ಮಗು.

ಕ್ರೈಸ್ತ ಕೂಟ ಹಾಗೂ ಶುಶ್ರೂಷೆಯಿಂದ ಬಲ

ಜೊಯೆಲ್‌ಗೆ ಗಂಭೀರ ಹೃದಯ ವಿಕೃತಿ ಹಾಗೂ ಒಂದು ತೀವ್ರ ರೀತಿಯ ರಿಕೆಟ್ಸ್‌ (ಮೆತು ಮೂಳೆರೋಗ) ಸಹ ಇತ್ತೆಂದು ಹೆಚ್ಚಿನ ವೈದ್ಯಕೀಯ ಪರೀಕ್ಷೆಗಳಿಂದ ತಿಳಿದುಬಂತು. ಅವನ ಹೃದಯದ ಗಾತ್ರ ದೊಡ್ಡದಾಗಿದ್ದರಿಂದ ಅದು ಶ್ವಾಸಕೋಶವನ್ನು ಒತ್ತುತ್ತಾ ಅವನು ಸೋಂಕುರೋಗಕ್ಕೆ ಬೇಗ ಬಲಿಯಾಗುವಂತೆ ಮಾಡಿತ್ತು. ಅಲ್ಲದೆ ಜೊಯೆಲ್‌ಗೆ ನಾಲ್ಕು ತಿಂಗಳಾದಾಗ ಶ್ವಾಸಕೋಶದ ನ್ಯುಮೋನಿಯ ರೋಗವು ತಗುಲಿದ್ದರಿಂದ ಪುನಃ ಆಸ್ಪತ್ರೆಗೆ ಸೇರಿಸಬೇಕಾಯಿತು, ಅಲ್ಲಿ ಅವನನ್ನು ಯಾರ ಸಂಪರ್ಕವೂ ಇಲ್ಲದಂತೆ ದೂರ ಇಡಲಾಯಿತು. ಅವನು ನರಳುವುದನ್ನು ನೋಡುವಾಗ ನಮಗೆ ಕರುಳು ಕಿತ್ತುಬಂದಂತಾಗುತ್ತಿತ್ತು. ಅವನನ್ನು ಹಿಡಿದಪ್ಪಿ ಪ್ರೀತಿಯಿಂದ ಮುದ್ದಿಸಬೇಕು ಎಂದನಿಸುತ್ತಿತ್ತು. ಆದರೆ ಹತ್ತು ಚಿಂತಾಜನಕ ವಾರಗಳು ಕಳೆಯುವ ತನಕ ನಾವು ಅವನನ್ನು ಮುಟ್ಟಲೂ ಅನುಮತಿಯಿರಲಿಲ್ಲ. ಲ್ಯೂಜೀ ಮತ್ತು ನಾನು ಅವನನ್ನು ನೋಡುತ್ತಾ, ನಮ್ಮನ್ನೇ ಸಂತೈಸುತ್ತಾ, ಪ್ರಾರ್ಥಿಸುತ್ತಾ ನಿಂತೆವಲ್ಲದೆ ಬೇರೇನನ್ನೂ ಮಾಡಸಾಧ್ಯವಿರಲಿಲ್ಲ.

ಈ ಸಂಕಷ್ಟದ ಸಮಯದಲ್ಲಿ ನಾವು ಡೇವಿಡ್‌ ಮತ್ತು ಮಾರ್ಕ್‌ರೊಂದಿಗೆ ಸಭಾ ಕೂಟಗಳಿಗೆ ಹಾಜರಾಗುವುದನ್ನು ಮುಂದುವರಿಸಿದೆವು. ಅವರಿಗೆ ಆಗ 6 ಹಾಗೂ 3 ವರ್ಷ ಪ್ರಾಯ. ನಮಗಾದರೋ ರಾಜ್ಯ ಸಭಾಗೃಹದಲ್ಲಿರುವುದು ಯೆಹೋವನ ಪ್ರೀತಿಯ ಪರಾಮರಿಕೆಯ ಹಸ್ತದಲ್ಲಿ ಇದ್ದಂತಿತ್ತು. ಕ್ರೈಸ್ತ ಸಹೋದರ ಸಹೋದರಿಯರೊಂದಿಗೆ ನಾವಲ್ಲಿ ಇದ್ದ ಕೆಲವು ತಾಸುಗಳು ನಮ್ಮ ಚಿಂತೆಯನ್ನು ಯೆಹೋವನ ಮೇಲೆ ಹಾಕಬಲ್ಲೆವು ಎಂಬ ಅನಿಸಿಕೆಯನ್ನು ಕೊಟ್ಟವು ಹಾಗೂ ತಕ್ಕಮಟ್ಟಿಗಿನ ಆಂತರಿಕ ಶಾಂತಿಯನ್ನು ಅನುಭವಿಸಿದೆವು. (ಕೀರ್ತ. 55:22) ಜೊಯೆಲ್‌ನ ಆರೈಕೆ ಮಾಡುತ್ತಿದ್ದ ನರ್ಸ್‌ಗಳು ಸಹ ಕ್ರೈಸ್ತ ಕೂಟಗಳಿಗೆ ಹಾಜರಾಗುವುದು ನಮಗೆ ಸಮತೋಲನವನ್ನು ಕಾಪಾಡಿಕೊಳ್ಳಲು ಹೇಗೆ ಸಹಾಯಮಾಡಿತು ಎಂಬುದನ್ನು ಗಮನಿಸಿದ್ದರೆಂದು ಹೇಳಿದರು.

ಆ ಸಮಯದಲ್ಲಿ ನಾನು ಕ್ಷೇತ್ರ ಸೇವೆಗೆ ಹೋಗಲು ಬಲವನ್ನು ಕೊಡುವಂತೆಯೂ ಯೆಹೋವನಿಗೆ ಬೇಡಿಕೊಂಡೆ. ಮನೆಯಲ್ಲಿ ಕೂತು ಅಳುತ್ತಾ ಇರುವ ಬದಲು ನಾನು ಇತರರೊಂದಿಗೆ ಮಾತಾಡಲು ಬಯಸಿದೆ. ರೋಗರಹಿತ ಲೋಕವನ್ನು ತರುವನೆಂಬ ದೇವರ ವಾಗ್ದಾನದಲ್ಲಿ ನಂಬಿಕೆಯು ನನಗೆ ಏಕೆ ಬಲಕೊಟ್ಟಿತು ಎಂಬುದನ್ನು ಹೇಳಲಪೇಕ್ಷಿಸಿದೆ. ನಾನು ಶುಶ್ರೂಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾದಾಗಲೆಲ್ಲ ಯೆಹೋವನು ನನ್ನ ಪ್ರಾರ್ಥನೆಗಳನ್ನು ಉತ್ತರಿಸಿದನು ಎಂದು ನನಗನಿಸಿತು.

“ಇದು ಆಶ್ಚರ್ಯವೇ ಸರಿ!”

ಎಂಥ ಸಂತೋಷದ ದಿನ ಅದಾಗಿತ್ತು! ಕೊನೆಗೂ ನಾವು ಜೊಯೆಲ್‌ನನ್ನು ಮನೆಗೆ ಕರೆದುಕೊಂಡು ಬರಲು ಸಾಧ್ಯವಾಯಿತು! ಆದರೆ ಮರುದಿನವೇ ನಮ್ಮ ಸಂತೋಷವು ದುಃಖವಾಗಿ ಬದಲಾಯಿತು. ಹಠಾತ್ತನೆ ಜೊಯೆಲ್‌ನ ಆರೋಗ್ಯ ತುಂಬ ಕೆಟ್ಟಿತು, ಅವನನ್ನು ತುರ್ತಾಗಿ ಪುನಃ ಆಸ್ಪತ್ರೆಗೆ ಸೇರಿಸಬೇಕಾಯಿತು. ಪರೀಕ್ಷಿಸಿದ ಮೇಲೆ ವೈದ್ಯರು ಹೇಳಿದ್ದು: “ಜೊಯೆಲ್‌ ಇನ್ನು ಆರು ತಿಂಗಳಿಗಿಂತ ಹೆಚ್ಚು ಬದುಕಲಾರ.” ಇದಾಗಿ ಎರಡು ತಿಂಗಳುಗಳಲ್ಲಿ, ಜೊಯೆಲ್‌ ಸುಮಾರು ಎಂಟು ತಿಂಗಳಿನವನಿದ್ದಾಗ ವೈದ್ಯರು ಹೇಳಿದ್ದು ನಿಜವಾಗುವಂತೆ ತೋರಿತು. ಏಕೆಂದರೆ ಜೊಯೆಲ್‌ನ ಸ್ಥಿತಿ ಇನ್ನೂ ಹದಗೆಟ್ಟಿತು. ಒಬ್ಬ ವೈದ್ಯರು ನಮ್ಮ ಹತ್ತಿರ ಕುಳಿತು ಅಂದದ್ದು: “ತುಂಬ ಬೇಸರದ ಸಂಗತಿ, ಆದರೆ ಅವನಿಗಾಗಿ ನಾವು ಇನ್ನೇನೂ ಮಾಡಲಾರೆವು.” ಅವರು ಮತ್ತೂ ಹೇಳಿದ್ದು: “ಈ ಹಂತದಲ್ಲಿ ಯೆಹೋವನೊಬ್ಬನೇ ಅವನನ್ನು ಉಳಿಸಬೇಕು.”

ನಾನು ಜೊಯೆಲ್‌ನ ರೂಮಿಗೆ ಹೋದೆ. ಭಾವನಾತ್ಮಕವಾಗಿ ಕುಗ್ಗಿಹೋಗಿ ಶಾರೀರಿಕವಾಗಿ ಬಳಲಿಹೋಗಿದ್ದರೂ ಅವನ ಮಂಚದ ಬಳಿಯಿಂದ ಕದಲುವುದಿಲ್ಲ ಎಂದು ನಿಶ್ಚಯ ಮಾಡಿದ್ದೆ. ಲ್ಯೂಜೀಗೆ ಮನೆಯಲ್ಲಿ ದೊಡ್ಡ ಹುಡುಗರನ್ನು ನೋಡಿಕೊಳ್ಳಲಿತ್ತು. ಆದುದರಿಂದ ಹಲವಾರು ಸಹೋದರಿಯರು ಸರದಿಯಲ್ಲಿ ನನ್ನೊಂದಿಗೆ ಉಳಿಯುತ್ತಿದ್ದರು. ವಾರ ಕಳೆಯಿತು. ನಂತರ ಒಮ್ಮೆಲೆ ಜೊಯೆಲ್‌ಗೆ ಹೃದಯಾಘಾತವಾಯಿತು. ನರ್ಸ್‌ಗಳು ಓಡಿಬಂದರು, ಆದರೆ ಅವರೇನೂ ಮಾಡಸಾಧ್ಯವಿರಲಿಲ್ಲ. ನಿಮಿಷಗಳ ನಂತರ ಅವರಲ್ಲಿ ಒಬ್ಬಳು ನರ್ಸ್‌, “ಎಲ್ಲ ಮುಗಿಯಿತು . . .” ಎಂದು ಮೆಲ್ಲನೆ ಉಸುರಿದಳು. ಶಕ್ತಿ ಉಡುಗಿದ ನಾನು ಜೋರಾಗಿ ಅಳುತ್ತಾ ಕೋಣೆಯಿಂದ ಹೊರಟುಬಿಟ್ಟೆ. ಯೆಹೋವನಿಗೆ ಪ್ರಾರ್ಥಿಸಲು ಪ್ರಯತ್ನಿಸಿದೆ, ಆದರೆ ನನ್ನ ದುಃಖವನ್ನು ಹೇಳಲು ಶಬ್ದಗಳೇ ಹೊರಡಲಿಲ್ಲ. ಸುಮಾರು 15 ನಿಮಿಷಗಳು ಕಳೆದಿರಬೇಕು, ಆಗ ಒಬ್ಬಳು ನರ್ಸ್‌ ನನ್ನನ್ನು ಕರೆದು, “ಜೊಯೆಲ್‌ ಚೇತರಿಸುತ್ತಿದ್ದಾನೆ!” ಎಂದು ಕೂಗಿ ಹೇಳಿದಳು. ನನ್ನನ್ನು ಕೈಹಿಡಿದೆಳೆದು, “ಬನ್ನಿ, ಬನ್ನಿ, ಮಗುವನ್ನು ನೋಡಿ” ಎಂದಳು. ನಾನು ಜೊಯೆಲ್‌ನ ಹತ್ತಿರ ಹೋದಾಗ ಅವನ ಹೃದಯ ಪುನಃ ಬಡಿಯುತ್ತಿತ್ತು! ಈ ಸುದ್ದಿ ಬೇಗನೆ ಎಲ್ಲ ಕಡೆ ಹಬ್ಬಿತು. ನೋಡಲು ನರ್ಸ್‌ಗಳೂ ವೈದ್ಯರೂ ಓಡಿಬಂದರು; “ಇದು ಆಶ್ಚರ್ಯವೇ ಸರಿ!” ಎಂದು ಉದ್ಗಾರವೆತ್ತಿದರು ಅನೇಕರು.

ನಾಲ್ಕು ವರ್ಷ ಪ್ರಾಯದಲ್ಲಿ ಆಶ್ಚರ್ಯಕರ ಹೆಜ್ಜೆ

ಜೊಯೆಲ್‌ನ ಮೊದಲ ವರ್ಷಗಳಲ್ಲಿ ಮಕ್ಕಳ ವೈದ್ಯರು “ಜೊಯೆಲ್‌ಗೆ ಪ್ರೀತಿ-ಅಕ್ಕರೆಗಳ ಬಹು ಅಗತ್ಯವಿದೆ” ಎಂದು ಹೇಳುತ್ತಲೇ ಇದ್ದರು. ಲ್ಯೂಜೀ ಮತ್ತು ನಾನು ಜೊಯೆಲ್‌ ಹುಟ್ಟಿದ ನಂತರ ಯೆಹೋವನ ಪ್ರೀತಿಯ ಕಾಳಜಿಯನ್ನು ವಿಶೇಷವಾಗಿ ಅನುಭವಿಸಿದ್ದರಿಂದ ನಮ್ಮ ಮಗನಿಗೆ ಸಹ ಪ್ರೀತಿಯ ಪೂರವನ್ನೇ ಹರಿಸಲು ಬಯಸಿದೆವು. ಅವನಿಗೆ ಎಲ್ಲ ವಿಷಯಗಳಲ್ಲಿ ನಮ್ಮ ಸಹಾಯದ ಅಗತ್ಯವಿದ್ದದರಿಂದ ಪ್ರೀತಿ ತೋರಿಸಲು ನಮಗೆ ಬಹಳಷ್ಟು ಅವಕಾಶಗಳಿದ್ದವು.

ಜೊಯೆಲ್‌ ಏಳು ವರ್ಷದವನಾಗುವ ವರೆಗೆ ಪ್ರತಿವರ್ಷವೂ ವಿಷಯಗಳ ಸರಣಿ ಹೀಗೆಯೇ ಇತ್ತು. ಅಕ್ಟೋಬರ್‌-ಮಾರ್ಚ್‌ ತಿಂಗಳುಗಳ ಮಧ್ಯೆ ಅವನು ಒಂದರ ಹಿಂದೊಂದು ಕಾಯಿಲೆಗೆ ತುತ್ತಾಗುತ್ತಿದ್ದ. ಮನೆಯಿಂದ ಆಸ್ಪತ್ರೆಗೆ, ಆಸ್ಪತ್ರೆಯಿಂದ ಮನೆಗೆ ಅವನನ್ನು ಒಯ್ಯುತ್ತಾ ಇರಬೇಕಿತ್ತು. ಅದೇವೇಳೆ ಇನ್ನಿಬ್ಬರು ಮಕ್ಕಳಾದ ಡೇವಿಡ್‌ ಮತ್ತು ಮಾರ್ಕ್‌ರೊಂದಿಗೆ ಸಾಧ್ಯವಾದಷ್ಟು ಹೆಚ್ಚು ಸಮಯ ಕಳೆಯಲು ನಾನು ಪ್ರಯತ್ನಪಟ್ಟೆ. ಪರಿಣಾಮವಾಗಿ ಅವರು ಸಹ ಜೊಯೆಲ್‌ಗೆ ನೆರವಾಗುವುದರಲ್ಲಿ ಹೆಚ್ಚು ಭಾಗಿಗಳಾದರು. ಇದು ಆಶ್ಚರ್ಯಕರ ಫಲಿತಾಂಶಗಳನ್ನು ತಂದಿತು. ಉದಾಹರಣೆಗೆ, ಜೊಯೆಲ್‌ ಎಂದೂ ನಡೆಯಲಾರ ಎಂದು ಹಲವಾರು ವೈದ್ಯರು ಹೇಳಿದ್ದರು. ಆದರೆ ಜೊಯೆಲ್‌ ನಾಲ್ಕು ವರ್ಷದವನಿದ್ದಾಗ ಒಂದು ದಿನ ನಮ್ಮ ಮಗ ಮಾರ್ಕ್‌ ಅವನಿಗೆ, “ಜೊಯೆಲ್‌, ನಿನಗೆ ನಡೀಲಿಕ್ಕೆ ಆಗುತ್ತದಂತ ಅಮ್ಮಗೆ ತೋರಿಸು ನೋಡೋಣ” ಎಂದು ಹೇಳಿದ! ಜೊಯೆಲ್‌ ತನ್ನ ಮೊದಲ ಹೆಜ್ಜೆಯನ್ನಿಟ್ಟ. ಅದನ್ನು ನೋಡಿ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ! ಸಂತಸದಿಂದ ನಮ್ಮ ಹೃದಯ ತುಂಬಿಬಂತು. ನಾವು ಕುಟುಂಬವಾಗಿ ಪ್ರಾರ್ಥಿಸುತ್ತಾ ಯೆಹೋವನಿಗೆ ಹೃತ್ಪೂರ್ವಕವಾಗಿ ಧನ್ಯವಾದ ಹೇಳಿದೆವು. ಬೇರೆ ಸಂದರ್ಭಗಳಲ್ಲಿ ಜೊಯೆಲ್‌ ಅಲ್ಪಸ್ವಲ್ಪ ಪ್ರಗತಿ ಮಾಡಿದಾಗಲೂ ನಾವು ಮನದಾಳದಿಂದ ಅವನನ್ನು ಶ್ಲಾಘಿಸುತ್ತಿದ್ದೆವು.

ಶೈಶವದಿಂದ ಕೊಟ್ಟ ದೈವಿಕ ತರಬೇತಿಯ ಫಲಪ್ರಾಪ್ತಿ

ಎಷ್ಟು ಸಾಧ್ಯವೋ ಅಷ್ಟು ಬಾರಿ ನಾವು ಜೊಯೆಲ್‌ನನ್ನು ಕೂಟಗಳಿಗಾಗಿ ರಾಜ್ಯ ಸಭಾಗೃಹಕ್ಕೆ ಕೊಂಡೊಯ್ದೆವು. ಅವನ ಸ್ವಾಸ್ಥ್ಯವನ್ನು ಶೀಘ್ರವಾಗಿ ಕೆಡಿಸಬಲ್ಲ ರೋಗಾಣುಗಳಿಂದ ರಕ್ಷಿಸಲು ಪಾರದರ್ಶಕ ಪ್ಲ್ಯಾಸ್ಟಿಕ್‌ನಿಂದ ಮುಚ್ಚಲ್ಪಟ್ಟ ವಿಶೇಷ ತಳ್ಳು ಕುರ್ಚಿಯಲ್ಲಿ ಅವನನ್ನು ಇಡುತ್ತಿದ್ದೆವು. ಆ ಪ್ಲ್ಯಾಸ್ಟಿಕ್‌ನ ಒಳಗಿರಬೇಕಾದರೂ ಅವನು ಸಭೆಯೊಂದಿಗಿರುವುದನ್ನು ಆನಂದಿಸಿದನು.

ನಮ್ಮ ಕ್ರೈಸ್ತ ಸಹೋದರ ಸಹೋದರಿಯರು ನಮ್ಮ ಬಲದ ಮೂಲವಾಗಿದ್ದರು. ಅವರು ನಮ್ಮನ್ನು ಪ್ರೀತಿಯಿಂದ ಪರಿಗಣಿಸುತ್ತಾ ಪ್ರಾಯೋಗಿಕ ಬೆಂಬಲವನ್ನು ನೀಡಿದರು. “ಇಗೋ, ಯೆಹೋವನ ಹಸ್ತವು ರಕ್ಷಿಸಲಾರದಂತೆ ಮೋಟುಗೈಯಲ್ಲ; ಆತನ ಕಿವಿಯು ಕೇಳಲಾರದ ಹಾಗೆ ಕಿವುಡಲ್ಲ” ಎಂಬ ಯೆಶಾಯ 59:1ರ ಮಾತನ್ನು ಒಬ್ಬ ಸಹೋದರನು ನಮಗೆ ಪದೇ ಪದೇ ನೆನಪಿಸುತ್ತಿದ್ದನು. ಅಂಥ ಪುನರಾಶ್ವಾಸನೆಯ ಮಾತುಗಳು ಯೆಹೋವನಲ್ಲಿ ಭರವಸೆಯಿಡುವಂತೆ ನಮಗೆ ಸಹಾಯಮಾಡಿದವು.

ಜೊಯೆಲ್‌ ದೊಡ್ಡವನಾದಂತೆ ಯೆಹೋವನ ಸೇವೆಯನ್ನು ಅವನ ಜೀವನದ ಮುಖ್ಯ ಭಾಗವಾಗುವಂತೆ ಮಾಡಲು ನಾವು ಪರಿಶ್ರಮಿಸಿದೆವು. ತನ್ನ ಸ್ವರ್ಗೀಯ ತಂದೆಯೊಂದಿಗೆ ಪ್ರೀತಿಯ ಬಂಧವನ್ನು ಬೆಳೆಸಿಕೊಳ್ಳುವಂಥ ರೀತಿಯಲ್ಲಿ, ಪ್ರತಿಯೊಂದು ಸಂದರ್ಭದಲ್ಲೂ ನಾವು ಯೆಹೋವನ ಕುರಿತು ಅವನೊಂದಿಗೆ ಮಾತಾಡಿದೆವು. ದೈವಿಕ ತರಬೇತಿಯು ಸುಫಲವನ್ನು ಕೊಡುವಂತೆ ಯೆಹೋವನು ನಮ್ಮ ಪ್ರಯತ್ನಗಳನ್ನು ಆಶೀರ್ವದಿಸಬೇಕೆಂದು ಆತನನ್ನು ಬೇಡಿಕೊಂಡೆವು.

ಹದಿವಯಸ್ಸಿನ ಆರಂಭದಲ್ಲಿದ್ದ ಜೊಯೆಲ್‌ ತನಗೆ ಸಿಕ್ಕಿದ ಇತರರೊಂದಿಗೆ ಬೈಬಲ್‌ ಸತ್ಯಗಳನ್ನು ಹಂಚಿಕೊಳ್ಳಲು ಇಷ್ಟಪಡುವುದನ್ನು ನೋಡಿದಾಗ ನಮಗೆ ತುಂಬ ಸಂತೋಷವಾಗುತ್ತಿತ್ತು. ಒಂದು ದೊಡ್ಡ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದ 14 ವರ್ಷದ ಜೊಯೆಲ್‌ ನನ್ನ ಹತ್ತಿರ “ಅಮ್ಮ, ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ಸರ್ಜನ್‌ಗೆ ಕೊಡಲೊ?” ಎಂದು ಕೇಳಿದಾಗ ನಾನು ತುಂಬ ಸಂತೋಷಗೊಂಡೆ. ಕೆಲವು ವರ್ಷಗಳ ಬಳಿಕ ಜೊಯೆಲ್‌ಗೆ ಇನ್ನೊಂದು ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಯಿತು. ಆ ಬಳಿಕ ಅವನು ಬದುಕಿ ಉಳಿಯಲಿಕ್ಕಿಲ್ಲ ಎಂಬುದು ನಮಗೆ ಚೆನ್ನಾಗಿ ತಿಳಿದಿತ್ತು. ನಾವು ಅವನೊಂದಿಗೆ ಕೂಡಿ ಬರೆದ ಪತ್ರವೊಂದನ್ನು ಶಸ್ತ್ರಚಿಕಿತ್ಸೆಯ ಮೊದಲು ಜೊಯೆಲ್‌ ವೈದ್ಯರಿಗೆ ಕೊಟ್ಟನು. ಅದರಲ್ಲಿ ರಕ್ತದ ಉಪಯೋಗದ ಕುರಿತಾದ ಅವನ ನಿಲುವನ್ನು ವಿವರಿಸಲಾಗಿತ್ತು. “ನೀನು ಇದಕ್ಕೆ ಒಪ್ಪುತ್ತೀಯಾ?” ಎಂದು ಸರ್ಜನ್‌ ಜೊಯೆಲ್‌ಗೆ ಕೇಳಿದರು. ಅದಕ್ಕೆ ಅವನ ದೃಢವಾದ ಉತ್ತರ “ಹೌದು ಡಾಕ್ಟರ್‌.” ನಮ್ಮ ಮಗನಿಗೆ ಸೃಷ್ಟಿಕರ್ತನ ಮೇಲಿರುವ ಭರವಸೆ ಮತ್ತು ಆತನನ್ನು ಮೆಚ್ಚಿಸುವ ದೃಢನಿಶ್ಚಯವನ್ನು ನೋಡಿ ನಮಗೆ ಬಹಳ ಹೆಮ್ಮೆಯೆನಿಸಿತು. ಆಸ್ಪತ್ರೆಯ ಸಿಬ್ಬಂದಿವರ್ಗವು ನೀಡಿದ ಹೆಚ್ಚಿನ ಬೆಂಬಲಕ್ಕಾಗಿಯೂ ನಾವು ತುಂಬ ಕೃತಜ್ಞರು.

ಜೊಯೆಲ್‌ನ ಆಧ್ಯಾತ್ಮಿಕ ಪ್ರಗತಿ

ತನ್ನ 17ರ ಪ್ರಾಯದಲ್ಲಿ ಜೊಯೆಲ್‌ ದೇವರಿಗೆ ಮಾಡಿದ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನ ಪಡೆದುಕೊಂಡನು. ಎಂಥ ಅವಿಸ್ಮರಣೀಯ ದಿನ ಅದಾಗಿತ್ತು! ಅವನ ಆಧ್ಯಾತ್ಮಿಕ ಪ್ರಗತಿಯನ್ನು ನೋಡುವಾಗ ನಮ್ಮ ಹೃದಯ ಹರ್ಷದಿಂದ ಹಿಗ್ಗುತ್ತದೆ. ಆಗಿನಿಂದಲೂ ಅವನಿಗೆ ಯೆಹೋವನಲ್ಲಿರುವ ಪ್ರೀತಿ ಮತ್ತು ಸತ್ಯದ ಕಡೆಗಿನ ಹುರುಪು ಸ್ವಲ್ಪವೂ ಕುಂದಲಿಲ್ಲ. ವಾಸ್ತವದಲ್ಲಿ ತನಗೆ ಸಿಕ್ಕಿದವರಿಗೆಲ್ಲ, “ಸತ್ಯವೇ ನನ್ನ ಜೀವಾಳ” ಎಂದು ಹೇಳಲು ಜೊಯೆಲ್‌ ಸಂತೋಷಿಸುತ್ತಾನೆ!

ಹದಿವಯಸ್ಸಿನ ಕೊನೆಯಲ್ಲಿ ಜೊಯೆಲ್‌ ಓದಲು ಹಾಗೂ ಬರೆಯಲು ಕಲಿತನು. ಅದಕ್ಕಾಗಿ ಅವನು ಶತಪ್ರಯತ್ನ ಮಾಡಬೇಕಾಯಿತು. ಪ್ರತಿಯೊಂದು ಪದವನ್ನು ಕಷ್ಟದಿಂದ ಬರೆದು ಮುಗಿಸಿದಾಗ ಅವನಿಗೆ ಗೆದ್ದ ಗೆಲವು ಸಿಗುತ್ತಿತ್ತು. ಆಗಿನಿಂದ ಅವನು ಪ್ರತಿದಿನವನ್ನು ಪ್ರತಿನಿತ್ಯ ಶಾಸ್ತ್ರವಚನಗಳನ್ನು ಪರೀಕ್ಷಿಸುವುದು ಪುಸ್ತಿಕೆಯಿಂದ ದಿನದ ವಚನವನ್ನು ಪರಿಗಣಿಸುವ ಮೂಲಕ ಆರಂಭಿಸುತ್ತಾನೆ. ತದನಂತರ ಆ ವಚನವನ್ನು ತನ್ನ ನೋಟ್‌ಪುಸ್ತಕದಲ್ಲಿ ಜಾಗರೂಕತೆಯಿಂದ ಬರೆಯುತ್ತಾನೆ. ಈಗ ಅದೊಂದು ಹೃದಯಸ್ಪರ್ಶಿ ಸಂಗ್ರಹವೇ ಆಗಿದೆ!

ಕೂಟಗಳಿರುವ ದಿನಗಳಲ್ಲಿ ನಾವು ರಾಜ್ಯ ಸಭಾಗೃಹಕ್ಕೆ ಬೇಗ ಹೋಗುವುದನ್ನು ಜೊಯೆಲ್‌ ಖಚಿತಮಾಡಿಕೊಳ್ಳುತ್ತಾನೆ. ಏಕೆಂದರೆ ರಾಜ್ಯ ಸಭಾಗೃಹಕ್ಕೆ ಬರುವವರೆಲ್ಲರನ್ನು ಆದರದಿಂದ ಸ್ವಾಗತಿಸಲು ಅವನು ಮುಂಚಿತವಾಗಿ ಅಲ್ಲಿರಲು ಬಯಸುತ್ತಾನೆ. ಕೂಟಗಳಲ್ಲಿ ಉತ್ತರ ನೀಡುವುದು ಹಾಗೂ ಪ್ರತ್ಯಕ್ಷಾಭಿನಯಗಳನ್ನು ಮಾಡುವುದೆಂದರೆ ಅವನಿಗೆ ತುಂಬ ಇಷ್ಟ. ಮೈಕ್ರೋಫೋನಿನ ನಿರ್ವಹಣೆ ಹಾಗೂ ಇತರ ಕೆಲಸಗಳಲ್ಲಿ ಸಹ ಅವನು ಸಹಭಾಗಿ. ಆರೋಗ್ಯ ಅನುಮತಿಸುವಲ್ಲಿ ಪ್ರತಿವಾರ ಸಾರುವ ಕೆಲಸದಲ್ಲಿ ನಮ್ಮೊಂದಿಗೆ ಪಾಲ್ಗೊಳ್ಳುತ್ತಾನೆ. 2007ರಲ್ಲಿ ಜೊಯೆಲ್‌ನನ್ನು ಶುಶ್ರೂಷಾ ಸೇವಕನಾಗಿ ನೇಮಿಸಲಾಗಿದೆ ಎಂದು ಸಭೆಗೆ ಪ್ರಕಟಿಸಿದಾಗ ನಾವು ಆನಂದಬಾಷ್ಪ ಸುರಿಸಿದೆವು. ಯೆಹೋವನ ಎಂಥ ದಯಾಭರಿತ ಆಶೀರ್ವಾದ!

ಯೆಹೋವನ ಸಹಾಯದ ಹಸ್ತ

ಇಸವಿ 1999ರಲ್ಲಿ ನಮಗೆ ಇನ್ನೊಂದು ಸಂಕಷ್ಟ ಎದುರಾಯಿತು. ಅಜಾಗರೂಕ ಚಾಲಕನೊಬ್ಬನು ನಮ್ಮ ಕಾರಿಗೆ ಡಿಕ್ಕಿ ಹೊಡೆದಾಗ ಲ್ಯೂಜೀ ಗಂಭೀರವಾಗಿ ಗಾಯಗೊಂಡರು. ಅವರ ಒಂದು ಕಾಲನ್ನು ಕತ್ತರಿಸಿ ತೆಗೆಯಬೇಕಾಯಿತು. ಬೆನ್ನುಮೂಳೆಯ ಅನೇಕ ದೊಡ್ಡ ಶಸ್ತ್ರಚಿಕಿತ್ಸೆಗಳನ್ನೂ ಮಾಡಲಾಯಿತು. ಆಗಲೂ ಯೆಹೋವನಲ್ಲೇ ಭರವಸೆಯಿಡುವ ಮೂಲಕ ಕಷ್ಟಗಳಲ್ಲಿ ಆತನು ತನ್ನ ಸೇವಕರಿಗೆ ಕೊಡುವ ಬಲವನ್ನು ನಾವು ಅನುಭವಿಸಿದೆವು. (ಫಿಲಿ. 4:13) ಲ್ಯೂಜೀಗೆ ಈಗ ಅಂಗವೈಕಲ್ಯವಿರುವುದಾದರೂ ಅದನ್ನು ನಾವು ಸಕಾರಾತ್ಮಕವಾಗಿ ನೋಡಲು ಪ್ರಯತ್ನಿಸುತ್ತೇವೆ. ಐಹಿಕ ಕೆಲಸ ಮಾಡಲು ಆಗದ್ದರಿಂದ ಜೊಯೆಲ್‌ನನ್ನು ನೋಡಿಕೊಳ್ಳಲು ಅವರಿಗೆ ಹೆಚ್ಚು ಸಮಯ ಸಿಗುತ್ತದೆ. ನನಗೂ ಆಧ್ಯಾತ್ಮಿಕ ಚಟುವಟಿಕೆಗಳಿಗಾಗಿ ಹೆಚ್ಚು ಅವಕಾಶ ಸಿಗುತ್ತದೆ. ಮಾತ್ರವಲ್ಲ ಲ್ಯೂಜೀಗೆ ಕುಟುಂಬದ ಹಾಗೂ ನಮ್ಮ ಸಭೆಯಲ್ಲಿರುವವರ ಆಧ್ಯಾತ್ಮಿಕ ಅಗತ್ಯಗಳಿಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗಿದೆ. ಸಭೆಯಲ್ಲಿ ಲ್ಯೂಜೀ ಹಿರಿಯರ ಮಂಡಲಿಯ ಸಂಯೋಜಕರಾಗಿ ಸೇವೆ ಮಾಡುವುದನ್ನು ಮುಂದುವರಿಸಿದ್ದಾರೆ.

ನಮ್ಮ ಅಸಾಮಾನ್ಯ ಸನ್ನಿವೇಶಗಳಿಂದಾಗಿ ನಾವು ಹೆಚ್ಚಿನ ಸಮಯವನ್ನು ಕುಟುಂಬವಾಗಿ ಕೂಡಿ ಕಳೆಯುತ್ತೇವೆ. ಸಮಯ ಸಂದಂತೆ ನಾವು ವಿವೇಚನೆಯಿಂದ ಜೀವಿಸಲು ಹಾಗೂ ಸಾಧ್ಯವಾಗಿರುವುದಕ್ಕಿಂತ ಹೆಚ್ಚನ್ನು ಅಪೇಕ್ಷಿಸದಿರಲು ಕಲಿತಿದ್ದೇವೆ. ನಿರುತ್ತೇಜನಗೊಂಡಾಗಲೆಲ್ಲ ಯೆಹೋವನಲ್ಲಿ ನಮ್ಮ ಮನೋಭಾವನೆಗಳನ್ನು ಪ್ರಾರ್ಥನೆಯಲ್ಲಿ ತೋಡಿಕೊಳ್ಳುತ್ತೇವೆ. ವಿಷಾದಕರವಾಗಿ ನಮ್ಮ ಮಕ್ಕಳಾದ ಡೇವಿಡ್‌ ಹಾಗೂ ಮಾರ್ಕ್‌ ಪ್ರೌಢರಾದಾಗ ಮನೆಬಿಟ್ಟು ಬೇರೆಹೋದರು ಮತ್ತು ಕ್ರಮೇಣ ಯೆಹೋವನ ಸೇವೆಯನ್ನೂ ನಿಲ್ಲಿಸಿಬಿಟ್ಟರು. ಮುಂದೊಮ್ಮೆ ಅವರು ಯೆಹೋವನ ಬಳಿಗೆ ಹಿಂದಿರುಗಿ ಬರಬಹುದೆಂದು ನಾವು ನಿರೀಕ್ಷಿಸುತ್ತೇವೆ.—ಲೂಕ 15:17-24.

ಈ ಎಲ್ಲ ವರ್ಷಗಳಾದ್ಯಂತ ನಾವು ಯೆಹೋವನ ಬೆಂಬಲವನ್ನು ಅನುಭವಿಸಿದ್ದೇವೆ ಹಾಗೂ ಪ್ರತಿಯೊಂದು ಸವಾಲನ್ನು ಎದುರಿಸುವಾಗ ಆತನಲ್ಲಿ ಆತುಕೊಳ್ಳಲು ಕಲಿತಿದ್ದೇವೆ. “ಭಯಪಡಬೇಡ, ನಿನಗೆ ಸಹಾಯಮಾಡುತ್ತೇನೆ ಎಂದು ನಿನಗೆ ಹೇಳುವ ನಿನ್ನ ದೇವರಾದ ಯೆಹೋವನೆಂಬ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ” ಎಂದು ಹೇಳುವ ಯೆಶಾಯ 41:13ರ ಮಾತುಗಳು ನಮಗೆ ಬಹಳ ಪ್ರಿಯವು. ಯೆಹೋವನು ನಮ್ಮ ಕೈಯನ್ನು ಭದ್ರವಾಗಿ ಹಿಡಿದುಕೊಳ್ಳುತ್ತಾನೆ ಎಂದು ತಿಳಿಯುವುದು ನಮಗೆ ಸಾಂತ್ವನದ ಮೂಲ. ಕಷ್ಟಗಳನ್ನು ತಾಳಿಕೊಳ್ಳುವುದು ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನಲ್ಲಿ ನಮ್ಮ ಭರವಸೆಯನ್ನು ವರ್ಧಿಸಿದೆ ಎಂದು ನಾವು ನಿಜವಾಗಿಯೂ ಹೇಳಬಲ್ಲೆವು ಖಂಡಿತ.

[ಪಾದಟಿಪ್ಪಣಿ]

^ ಪ್ಯಾರ. 5 ‘ಟ್ರಿಸಮಿ 21’ ಎಂಬುದು ಹುಟ್ಟಿನಿಂದಲೇ ಇರುವ ರೋಗ. ಇದು ಬುದ್ಧಿಮಾಂದ್ಯತೆಯನ್ನು ಉಂಟುಮಾಡುತ್ತದೆ. ಕ್ರೋಮಸೋಮ್‌ ಅಥವಾ ವರ್ಣತಂತುಗಳು ಸಾಮಾನ್ಯವಾಗಿ ಜೋಡಿಯಾಗಿರುತ್ತವೆ. ಆದರೆ ಹುಟ್ಟಿನಿಂದ ಟ್ರಿಸಮಿ ರೋಗವಿರುವ ಮಗುವಿನಲ್ಲಿ ಒಂದು ಜೋಡಿಯಲ್ಲಿ ಒಂದು ಹೆಚ್ಚು ವರ್ಣತಂತು ಇರುತ್ತದೆ. ‘ಟ್ರಿಸಮಿ 21’, 21ನೇ ವರ್ಣತಂತನ್ನು ಬಾಧಿಸುತ್ತದೆ.

[ಪುಟ 16, 17ರಲ್ಲಿರುವ ಚಿತ್ರಗಳು]

ತಾಯಿ ಆ್ಯಡರೊಂದಿಗೆ ಜೊಯೆಲ್‌

[ಪುಟ 18ರಲ್ಲಿರುವ ಚಿತ್ರ]

ಆ್ಯಡ, ಜೊಯೆಲ್‌ ಮತ್ತು ಲ್ಯೂಜೀ

[ಪುಟ 19ರಲ್ಲಿರುವ ಚಿತ್ರ]

ಜೊಯೆಲ್‌ ರಾಜ್ಯ ಸಭಾಗೃಹದಲ್ಲಿ ಸಹೋದರ ಸಹೋದರಿಯರನ್ನು ಸ್ವಾಗತಿಸುವುದನ್ನು ಆನಂದಿಸುತ್ತಾನೆ