ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಷ್ಪ್ರಯೋಜಕ ವಿಷಯಗಳ ಮೇಲೆ ಕಣ್ಣಿಡಬೇಡಿ!

ನಿಷ್ಪ್ರಯೋಜಕ ವಿಷಯಗಳ ಮೇಲೆ ಕಣ್ಣಿಡಬೇಡಿ!

ನಿಷ್ಪ್ರಯೋಜಕ ವಿಷಯಗಳ ಮೇಲೆ ಕಣ್ಣಿಡಬೇಡಿ!

“ನಿಷ್ಪ್ರಯೋಜಕ ವಿಷಯಗಳ ಮೇಲೆ ಕಣ್ಣಿಡದಂತೆ ಮಾಡು; ನಿನ್ನ ಸ್ವಂತ ಮಾರ್ಗದಲ್ಲಿ ನನ್ನನ್ನು ಜೀವಂತವಾಗಿ ಉಳಿಸು.”—ಕೀರ್ತ. 119:37, NW.

1. ದೃಷ್ಟಿಯ ವರದಾನವು ಎಷ್ಟು ಪ್ರಾಮುಖ್ಯ?

ದೃಷ್ಟಿಯು ನಮಗೆಲ್ಲರಿಗೂ ಅದೆಷ್ಟು ಅಮೂಲ್ಯ! ಆ ಮೂಲಕ ನಾವು ಒಂದೇ ಕ್ಷಣದಲ್ಲಿ ಅತಿ ವ್ಯಾಪಕವಾದ ಹಾಗೂ ವರ್ಣರಂಜಿತ ಪರಿಸರವನ್ನು ವೀಕ್ಷಿಸಬಲ್ಲೆವು. ನಮ್ಮ ದೃಷ್ಟಿಯು ಇಷ್ಟ ಮಿತ್ರರನ್ನು ಅಥವಾ ಅನಿಷ್ಟ ಅಪಾಯಗಳನ್ನು ಕಾಣಲು ಸಾಧ್ಯಮಾಡುತ್ತದೆ. ಅದರ ಮೂಲಕ ನಾವು ಸೌಂದರ್ಯವನ್ನು ಸವಿಯುತ್ತೇವೆ, ಸೃಷ್ಟಿಯ ಸೋಜಿಗಗಳನ್ನು ಗ್ರಹಿಸುತ್ತೇವೆ ಮತ್ತು ದೇವರ ಅಸ್ತಿತ್ವ ಹಾಗೂ ಪ್ರಭಾವಗಳ ಪುರಾವೆಯನ್ನು ಪಡೆಯುತ್ತೇವೆ. (ಕೀರ್ತ. 8:3, 4; 19:1, 2; 104:24; ರೋಮ. 1:20) ಮನಸ್ಸಿನ ಅತಿ ಪ್ರಮುಖ ಸಂಪರ್ಕ ಮಾಧ್ಯಮವಾದ ದೃಷ್ಟಿಯು ಯೆಹೋವನ ಕುರಿತ ಜ್ಞಾನವನ್ನು ಗಳಿಸುವುದರಲ್ಲಿ ಹಾಗೂ ಆತನಲ್ಲಿ ನಂಬಿಕೆಯನ್ನು ಕಟ್ಟುವುದರಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ.—ಯೆಹೋ. 1:8; ಕೀರ್ತ. 1:2, 3.

2. ನಾವು ನೋಡುವ ವಿಷಯಗಳ ಕುರಿತು ಏಕೆ ಜಾಗ್ರತೆ ವಹಿಸಬೇಕು, ಮತ್ತು ಕೀರ್ತನೆಗಾರನ ಮನಃಪೂರ್ವಕ ವಿನಂತಿಯಿಂದ ನಾವೇನನ್ನು ಕಲಿಯಬಲ್ಲೆವು?

2 ಆದರೂ ನಾವೇನನ್ನು ನೋಡುತ್ತೇವೋ ಅದು ನಮಗೆ ಹಾನಿಕರವೂ ಆಗಿರಬಲ್ಲದು. ನಮ್ಮ ದೃಷ್ಟಿ ಮತ್ತು ಮನಸ್ಸಿನ ನಡುವಣ ಸಂಬಂಧವು ಎಷ್ಟು ಬಲವಾಗಿದೆಯೆಂದರೆ ನಮ್ಮ ಕಣ್ಣಿನ ಮೂಲಕ ನಮ್ಮ ಮನಸ್ಸನ್ನು ಪ್ರವೇಶಿಸುವ ವಿಷಯಗಳು ನಮ್ಮಲ್ಲಿ ಹೆಬ್ಬಯಕೆ ಅಥವಾ ದುರಿಚ್ಛೆಗಳನ್ನು ಹುಟ್ಟಿಸಬಹುದು ಅಥವಾ ಅವನ್ನು ಹೆಚ್ಚಿಸಲೂ ಬಹುದು. ಅದಲ್ಲದೆ ಪಿಶಾಚನಾದ ಸೈತಾನನಿಂದ ಆಳಲ್ಪಡುವ ನೀತಿಭ್ರಷ್ಟ ಮತ್ತು ಸ್ವಾರ್ಥಪರ ಲೋಕದಲ್ಲಿ ಜೀವಿಸುವುದರಿಂದ ನಮ್ಮನ್ನು ಸುಲಭವಾಗಿ ಅಡ್ಡದಾರಿಗೆ ಎಳೆಯಬಲ್ಲ ಚಿತ್ರವಿಚಿತ್ರ ದೃಶ್ಯ ಮತ್ತು ಪ್ರಚಾರಗಳಿಂದ ನಾವು ಸತತ ದಾಳಿಗೆ ಗುರಿಯಾಗುತ್ತೇವೆ. ಒಂದು ಕ್ಷಣನೋಟವನ್ನು ಆ ಕಡೆ ಹಾಯಿಸಿದರೂ ಕೂಡ ನಾವು ದಾರಿತಪ್ಪಬಲ್ಲೆವು. (1 ಯೋಹಾ. 5:19) ಆದುದರಿಂದ ಕೀರ್ತನೆಗಾರನು ದೇವರಿಗೆ ಹೀಗೆ ಮೊರೆಯಿಟ್ಟದ್ದರಲ್ಲಿ ಆಶ್ಚರ್ಯವೇನಿಲ್ಲ: “ನಿಷ್ಪ್ರಯೋಜಕ ವಿಷಯಗಳ ಮೇಲೆ ಕಣ್ಣಿಡದಂತೆ ಮಾಡು; ನಿನ್ನ ಸ್ವಂತ ಮಾರ್ಗದಲ್ಲಿ ನನ್ನನ್ನು ಜೀವಂತವಾಗಿ ಉಳಿಸು.”—ಕೀರ್ತ. 119:37, NW.

ನಮ್ಮ ಕಣ್ಣು ನಮ್ಮನ್ನು ದಾರಿತಪ್ಪಿಸಬಲ್ಲ ವಿಧ

3-5. ನಮ್ಮ ಕಣ್ಣುಗಳು ನಮ್ಮನ್ನು ವಂಚಿಸುವಂತೆ ಬಿಡುವ ಅಪಾಯವನ್ನು ಬೈಬಲಿನ ಯಾವ ವೃತ್ತಾಂತಗಳು ದೃಷ್ಟಾಂತಿಸುತ್ತವೆ?

3 ಮೊದಲನೇ ಸ್ತ್ರೀಯಾದ ಹವ್ವಳಿಗೆ ಏನು ಸಂಭವಿಸಿತೆಂಬುದನ್ನು ಪರಿಗಣಿಸಿ. “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ” ಹಣ್ಣನ್ನು ಅವಳು ತಿಂದಲ್ಲಿ ಅವಳ ಕಣ್ಣುಗಳು “ತೆರೆಯುವವು” ಎಂದು ಸೈತಾನನು ಸೂಚಿಸಿದನು. ಅವಳ ಕಣ್ಣುಗಳು ‘ತೆರೆಯಲ್ಪಡುವ’ ವಿಚಾರವು ತಾನೇ ಹವ್ವಳ ಕುತೂಹಲವನ್ನು ಕೆರಳಿಸಿದ್ದಿರಬೇಕು. ಅಲ್ಲದೆ “ಆ ಮರದ ಹಣ್ಣು ತಿನ್ನುವದಕ್ಕೆ ಉತ್ತಮವಾಗಿಯೂ ನೋಡುವದಕ್ಕೆ ರಮ್ಯವಾಗಿಯೂ ಜ್ಞಾನೋದಯಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಇದೆ” ಎಂದು ಕಂಡಾಗಲಂತೂ ಆ ನಿಷೇಧಿತ ಹಣ್ಣನ್ನು ತಿನ್ನುವ ಅವಳ ಅಪೇಕ್ಷೆಯು ಇನ್ನೂ ಹೆಚ್ಚಾಯಿತು. ಆ ಮರದ ಕಡೆಗೆ ಹಂಬಲಿಕೆಯಿಂದ ನೋಡುವ ಮೂಲಕ ಹವ್ವಳು ದೇವರ ಆಜ್ಞೆಗೆ ಅವಿಧೇಯಳಾದಳು. ಅವಳ ಗಂಡನಾದ ಆದಾಮನು ಸಹ ಅವಿಧೇಯನಾದನು. ಹೀಗೆ ಇಡೀ ಮಾನವಕುಲದ ಮೇಲೆ ವಿಪತ್ಕಾರಕ ದುಷ್ಪರಿಣಾಮವು ಉಂಟಾಯಿತು.—ಆದಿ. 2:17; 3:2-6; ರೋಮ. 5:12; ಯಾಕೋ. 1:14, 15.

4 ನೋಹನ ದಿನಗಳಲ್ಲಿ ಕೆಲವು ದೇವದೂತರು ಸಹ ತಾವು ಕಂಡ ವಿಷಯಗಳಿಂದ ಪ್ರಭಾವಿತರಾದರು. ಅವರಿಗೆ ಸೂಚಿಸುತ್ತಾ ಆದಿಕಾಂಡ 6:2 ಹೇಳುವುದು: “ದೇವಪುತ್ರರು ಮನುಷ್ಯಪುತ್ರಿಯರ ಸೌಂದರ್ಯವನ್ನು ನೋಡಿ ತಮಗೆ ಇಷ್ಟರಾದವರನ್ನು ಹೆಂಡರನ್ನಾಗಿ ಮಾಡಿಕೊಂಡರು.” ಮನುಷ್ಯಪುತ್ರಿಯರನ್ನು ಕಾಮಾಸಕ್ತಿಯಿಂದ ನೋಡಿದ್ದು ಮಾನವರೊಂದಿಗೆ ಅಸ್ವಾಭಾವಿಕ ಲೈಂಗಿಕ ಸಂಬಂಧಗಳನ್ನು ಇಡುವಂತೆ ಆ ದಂಗೆಕೋರ ದೇವದೂತರನ್ನು ಪ್ರೇರಿಸಿತು. ಇದರಿಂದ ಆ ದೇವದೂತರು ಹಿಂಸಾಚಾರಿಗಳಾದ ಮಕ್ಕಳನ್ನು ಹುಟ್ಟಿಸಿದರು. ಆ ಕಾಲದಲ್ಲಿ ಮನುಷ್ಯರ ಕೆಟ್ಟತನವು ಮಾನವಕುಲವೆಲ್ಲದರ ನಾಶನಕ್ಕೆ ನಡಿಸಿತು. ಕೇವಲ ನೋಹ ಮತ್ತವನ ಕುಟುಂಬವು ಬದುಕಿ ಉಳಿಯಿತು.—ಆದಿ. 6:4-7, 11, 12.

5 ಶತಮಾನಗಳ ನಂತರ ಇಸ್ರಾಯೇಲ್ಯನಾದ ಆಕಾನನ ಕಣ್ಣುಗಳು ಅವನನ್ನು ವಂಚಿಸಿ ಸೆರೆಹಿಡಿದ ಪಟ್ಟಣವಾದ ಯೆರಿಕೋವಿನ ವಸ್ತುಗಳನ್ನು ಕದ್ದುಕೊಳ್ಳುವಂತೆ ಪ್ರೇರಿಸಿದವು. ಯೆಹೋವನ ಭಂಡಾರಕ್ಕೆ ನೀಡಬೇಕಾಗಿದ್ದ ವಿಷಯಗಳ ಹೊರತು ಆ ಪಟ್ಟಣದಲ್ಲಿದ್ದ ಬೇರೆಲ್ಲಾ ವಸ್ತುಗಳನ್ನು ನಾಶಪಡಿಸಬೇಕೆಂದು ದೇವರು ಆಜ್ಞಾಪಿಸಿದ್ದನು. ‘ಶಾಪಕ್ಕೆ ಈಡಾದ [ಕೆಲವು ವಸ್ತುಗಳನ್ನು ಪಟ್ಟಣದಿಂದ] ತೆಗೆದುಕೊಳ್ಳದಂತೆ ಬಹು ಎಚ್ಚರಿಕೆಯಾಗಿರಿ’ (NIBV) ಎಂದು ಇಸ್ರಾಯೇಲ್ಯರಿಗೆ ಹೇಳಲಾಗಿತ್ತು. ಆಕಾನನು ಅವಿಧೇಯನಾದಾಗ ಇಸ್ರಾಯೇಲ್ಯ ಜನರು ಆಯಿ ಪಟ್ಟಣದಲ್ಲಿ ಸೋಲನ್ನಪ್ಪಿದರು. ಅವರಲ್ಲಿ ಹಲವಾರು ಮಂದಿ ಕೊಲ್ಲಲ್ಪಟ್ಟರು ಸಹ. ಆಕಾನನು ತನ್ನ ತಪ್ಪು ಬಯಲಾಗುವ ತನಕ ಕಳ್ಳತನವನ್ನು ಒಪ್ಪಿಕೊಳ್ಳಲಿಲ್ಲ. ಕೊನೆಗೆ ಅವನಂದದ್ದು: ‘ಅವನ್ನು ಕಂಡು ಆಶೆಯಿಂದ ತೆಗೆದುಕೊಂಡೆನು.’ ಕಣ್ಣಿನಾಶೆಯು ಆಕಾನನನ್ನು ನಾಶನಕ್ಕೆ ನಡಿಸಿತು. ಅವನೊಂದಿಗೆ ‘ಅವನಿಗಿದ್ದದ್ದೆಲ್ಲವೂ’ ನಾಶವಾಯಿತು. (ಯೆಹೋ. 6:18, 19; 7:1-26) ಆಕಾನನು ತನಗೆ ನಿಷೇಧಿತವಾದ ವಸ್ತುಗಳ ಮೇಲೆ ಮನಸ್ಸಿಟ್ಟನು.

ನಮಗೆ ಸ್ವಶಿಸ್ತು ಬೇಕು

6, 7. ನಮ್ಮನ್ನು ಪಾಶದಲ್ಲಿ ಸಿಕ್ಕಿಸಲು ಸೈತಾನನಿಂದ ಹೆಚ್ಚಾಗಿ ಉಪಯೋಗಿಸಲ್ಪಡುವ ‘ಕುತಂತ್ರಗಳಲ್ಲೊಂದು’ ಯಾವುದು, ಮತ್ತು ವ್ಯಾಪಾರೀ ಜಾಹೀರಾತುಗಾರರು ಅದನ್ನು ಹೇಗೆ ಉಪಯೋಗಿಸುತ್ತಾರೆ?

6 ಹವ್ವಳು, ಅವಿಧೇಯ ದೇವದೂತರು ಮತ್ತು ಆಕಾನನ ವಿಷಯದಲ್ಲಿ ಹೇಗೋ ಹಾಗೆಯೇ ಇಂದು ಮಾನವರು ತದ್ರೀತಿಯ ವಿಧಾನದಲ್ಲಿ ಪ್ರಲೋಭನೆಗೆ ಗುರಿಯಾಗುತ್ತಾರೆ. ಮಾನವರನ್ನು ದಾರಿತಪ್ಪಿಸುವ ಸೈತಾನನ ಎಲ್ಲ ‘ಕುತಂತ್ರಗಳಲ್ಲಿ’ “ಕಣ್ಣಿನಾಶೆ” ಅತಿ ಶಕ್ತಿಶಾಲಿ. (2 ಕೊರಿಂ. 2:11; 1 ಯೋಹಾ. 2:16) ಜನರು ಯಾವಾಗಲೂ ಕಣ್ಣಿನಾಶೆಯಿಂದ ಪ್ರಭಾವಿಸಲ್ಪಡುತ್ತಾರೆಂದು ಆಧುನಿಕ ವ್ಯಾಪಾರೀ ಜಾಹೀರಾತುಗಾರರಿಗೆ ಚೆನ್ನಾಗಿ ತಿಳಿದಿದೆ. “ಇಂದ್ರಿಯಗಳೆಲ್ಲಾದರಲ್ಲಿ ದೃಷ್ಟಿಯು ಅತಿ ವಂಚಕ. ಅದು ಹೆಚ್ಚಾಗಿ ಬೇರೆ ಜ್ಞಾನೇಂದ್ರಿಯಗಳನ್ನು ಬಲದಿಂದ ತಳ್ಳಿಹಾಕುತ್ತದೆ ಮತ್ತು ತರ್ಕಬದ್ಧವಾದ ಎಲ್ಲ ವಿಷಯಗಳ ವಿರುದ್ಧ ಕ್ರಿಯೆಗೈಯುವಂತೆ ಪ್ರೇರೇಪಿಸಬಲ್ಲದು” ಎಂದು ಪ್ರಮುಖ ಯೂರೋಪಿಯನ್‌ ವ್ಯಾಪಾರಿ ತಜ್ಞರೊಬ್ಬರು ಹೇಳುತ್ತಾರೆ.

7 ಹೀಗಿರಲಾಗಿ ಜಾಹೀರಾತುಗಾರರು ದೃಷ್ಟಿಗೋಚರವಾದ ಅಧಿಕ ಪ್ರಭಾವವನ್ನು ಹಾಕಿ ತಮ್ಮ ವ್ಯಾಪಾರ ವಸ್ತು ಮತ್ತು ಸೇವೆಗಳನ್ನು ಖರೀದಿಸುವಂತೆ ಮಾಡುತ್ತಾರೆ. ಚಾತುರ್ಯದಿಂದ ರಚಿಸಲಾದ ಚಿತ್ರಗಳಿಂದ ಅವರು ನಮ್ಮನ್ನು ಸದೆಬಡಿಯುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ! ಜಾಹೀರಾತು ಜನರನ್ನು ಹೇಗೆ ಪ್ರಭಾವಿಸುತ್ತದೆ ಎಂಬ ಅಧ್ಯಯನವನ್ನು ಮಾಡಿದ ಅಮೆರಿಕದ ಸಂಶೋಧಕನೊಬ್ಬನು ಹೇಳಿದ್ದು: ಅದು “ಕೇವಲ ಜ್ಞಾನಗ್ರಹಣದ ಮಾಹಿತಿಯನ್ನು ಪ್ರಸ್ತುತಪಡಿಸಲು ರಚಿಸಲ್ಪಟ್ಟಿಲ್ಲ, ಅದಕ್ಕಿಂತಲೂ ಮುಖ್ಯವಾಗಿ ನಿರ್ದಿಷ್ಟ ಭಾವನಾತ್ಮಕ ಮತ್ತು ಕಾರ್ಯಸಾಧಕ ಪ್ರತಿಕ್ರಿಯೆಗಳನ್ನು ಉತ್ಪಾದಿಸಲು ರಚಿಸಲ್ಪಟ್ಟಿವೆ.” ಇದು ಹೆಚ್ಚಾಗಿ ಬಳಸಲ್ಪಡುವ ಒಂದು ವಿಧ ಭಾವಪ್ರಚೋದಕ ಲೈಂಗಿಕ ಚಿತ್ರಗಳ ಮೂಲಕ. “ಸೆಕ್ಸ್‌ ಮಾರಾಟಕ್ಕೆ ಸಾಧಕ” ಎಂಬ ಪ್ರಸಿದ್ಧ ನುಡಿಯಿದೆ. ಆದುದರಿಂದ ನಾವು ಏನನ್ನು ನೋಡುತ್ತೇವೋ ಮತ್ತು ಹೃದಮನವನ್ನು ಯಾವುದು ಪ್ರವೇಶಿಸುವಂತೆ ಅನುಮತಿಸುತ್ತೇವೋ ಅದನ್ನು ಅಂಕೆಯಲ್ಲಿಡುವುದು ಎಷ್ಟು ಪ್ರಾಮುಖ್ಯ!

8. ನಮ್ಮ ಕಣ್ಣುಗಳನ್ನು ಕಾದುಕೊಳ್ಳುವ ಅಗತ್ಯವನ್ನು ಬೈಬಲ್‌ ಹೇಗೆ ಒತ್ತಿಹೇಳಿದೆ?

8 ನಿಜ ಕ್ರೈಸ್ತರು ಕಣ್ಣಿನಾಶೆ ಮತ್ತು ಶರೀರದಾಶೆಯಿಂದ ವಿಮುಕ್ತರಲ್ಲ. ಆದುದರಿಂದ ನಾವೇನನ್ನು ನೋಡುತ್ತೇವೋ ಮತ್ತು ಯಾವುದನ್ನು ಬಯಸುತ್ತೇವೋ ಆ ಸಂಬಂಧದಲ್ಲಿ ಸ್ವಶಿಸ್ತನ್ನು ಅಭ್ಯಾಸಿಸುವಂತೆ ದೇವರ ವಾಕ್ಯವು ನಮ್ಮನ್ನು ಉತ್ತೇಜಿಸುತ್ತದೆ. (1 ಕೊರಿಂ. 9:25, 27; 1 ಯೋಹಾನ 2:15-17 ಓದಿ.) ನೀತಿವಂತನಾದ ಯೋಬನು ನೋಡುವುದು ಮತ್ತು ಆಶಿಸುವುದರ ನಡುವಣ ಬಲವಾದ ಕೊಂಡಿಯನ್ನು ಗ್ರಹಿಸಿಕೊಂಡವರಲ್ಲಿ ಒಬ್ಬನು. ಅವನು ಹೇಳಿದ್ದು: “ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ, ಯುವತಿಯ ಮೇಲೆ ಹೇಗೆ ಕಣ್ಣಿಟ್ಟೇನು?” (ಯೋಬ 31:1) ಯೋಬನು ಪರಸ್ತ್ರೀಯನ್ನು ಅನೈತಿಕ ರೀತಿಯಲ್ಲಿ ಸ್ಪರ್ಶಿಸಲು ನಿರಾಕರಿಸಿದ್ದು ಮಾತ್ರವಲ್ಲ ಅಂಥ ಒಂದು ವಿಚಾರವನ್ನು ಮನಸ್ಸಿಗೆ ತಂದುಕೊಳ್ಳಲು ಸಹ ಅನುಮತಿಸಿರಲಿಲ್ಲ. ನಮ್ಮ ಮನಸ್ಸು ಅನೈತಿಕ ಯೋಚನೆಗಳಿಂದ ಕೂಡಿರದೆ ಶುದ್ಧವಾಗಿರಬೇಕು ಎಂಬುದನ್ನು ಒತ್ತಿಹೇಳಲು ಯೇಸು ಅಂದದ್ದು: “ಒಬ್ಬ ಸ್ತ್ರೀಯನ್ನು ಕಾಮೋದ್ರೇಕಭಾವದಿಂದ ನೋಡುತ್ತಾ ಇರುವ ಪ್ರತಿಯೊಬ್ಬನು ಈಗಾಗಲೇ ತನ್ನ ಹೃದಯದಲ್ಲಿ ಅವಳೊಂದಿಗೆ ವ್ಯಭಿಚಾರ ಮಾಡಿದವನಾಗಿದ್ದಾನೆ.”—ಮತ್ತಾ. 5:28.

ವರ್ಜಿಸಬೇಕಾದ ನಿಷ್ಪ್ರಯೋಜಕ ವಿಷಯಗಳು

9. (ಎ) ನಾವು ವಿಶೇಷವಾಗಿ ಇಂಟರ್‌ನೆಟ್‌ ಅನ್ನು ಉಪಯೋಗಿಸುವಾಗ ಜಾಗ್ರತೆಯಿಂದಿರಬೇಕು ಏಕೆ? (ಬಿ) ಕಾಮಪ್ರಚೋದಕ ಸಾಹಿತ್ಯದ ಕಿರುನೋಟದಿಂದ ಸಹ ಏನು ಪರಿಣಮಿಸಬಹುದು?

9 ಇಂದಿನ ಲೋಕದಲ್ಲಿ ಕಾಮಪ್ರಚೋದಕ ಸಾಹಿತ್ಯವನ್ನು, ವಿಶೇಷವಾಗಿ ಇಂಟರ್‌ನೆಟ್‌ನಲ್ಲಿ ‘ನೋಡುತ್ತಾ ಇರುವುದು’ ಸರ್ವಸಾಮಾನ್ಯ. ಇಂಥ ಸೈಟ್‌ಗಳಿಗಾಗಿ ನಾವು ಹುಡುಕಬೇಕೆಂದಿಲ್ಲ, ಅವೇ ನಮ್ಮನ್ನು ಹುಡುಕಿಕೊಂಡು ಬರುತ್ತವೆ! ಹೇಗೆ? ಮನಸ್ಸನ್ನು ಸೆಳೆಯುವ ಚಿತ್ರದೊಂದಿಗೆ ಒಂದು ಜಾಹೀರಾತು ಒಮ್ಮೆಲೆ ನಮ್ಮ ಕಂಪ್ಯೂಟರ್‌ ಸ್ಕ್ರೀನಲ್ಲಿ ತೋರಿಬರಬಹುದು. ಅಥವಾ ನಿರಪಾಯವೆಂದು ತೋರುವ ಒಂದು ಇ-ಮೇಲ್‌ ಬರುತ್ತದೆ. ಆದರೆ ತೆರೆದಾಗಲಂತೂ ಒಂದು ಕಾಮಪ್ರಚೋದಕ ಚಿತ್ರ ಕಣ್ಣ ಮುಂದೆ ಒಮ್ಮೆಲೆ ಕಾಣಿಸಬಹುದು. ಅದನ್ನು ಮುಚ್ಚಿಬಿಡಲು ಅಸಾಧ್ಯವಾದ ರೀತಿಯಲ್ಲಿ ಅದನ್ನು ರಚಿಸಿರಬಹುದು. ಅದನ್ನು ಡಿಲೀಟ್‌ ಮಾಡುವ ಮುಂಚೆ ಒಬ್ಬ ವ್ಯಕ್ತಿಗೆ ಅದರ ಕ್ಷಣನೋಟ ಸಿಕ್ಕಿದರೂ ಅದವನ ಮನಸ್ಸಿನಲ್ಲಿ ಅಚ್ಚೊತ್ತಿಸಲ್ಪಡುತ್ತದೆ. ಕಾಮಪ್ರಚೋದಕ ಸಾಹಿತ್ಯದ ಕಿರುನೋಟವು ಸಹ ಕೆಟ್ಟ ಪರಿಣಾಮಗಳನ್ನು ತರಬಲ್ಲದು. ಅದು ಅವನಲ್ಲಿ ದೋಷಿ ಮನಸ್ಸಾಕ್ಷಿಯನ್ನು ಉಂಟುಮಾಡಿ, ಮನಸ್ಸಿನಿಂದ ಅನೈತಿಕ ದೃಶ್ಯಗಳನ್ನು ಅಳಿಸಲು ಕಷ್ಟಕರವಾಗಿ ಮಾಡಬಲ್ಲದು. ಇನ್ನೂ ಕೆಟ್ಟದಾಗಿ, ಅದನ್ನು ಬುದ್ಧಿಪೂರ್ವಕವಾಗಿ “ನೋಡುತ್ತಾ ಇರುವ” ವ್ಯಕ್ತಿ ತನ್ನ ಹೃದಯದಲ್ಲಿರುವ ಅಸಂಬದ್ಧ ಇಚ್ಛೆಗಳನ್ನು ಸಾಯಿಸಿಲ್ಲ ಎಂದು ತೋರಿಸುತ್ತಾನೆ.—ಎಫೆಸ 5:3, 4, 12 ಓದಿ; ಕೊಲೊ. 3:5, 6.

10. ಮಕ್ಕಳು ವಿಶೇಷವಾಗಿ ಕಾಮಪ್ರಚೋದಕ ಸಾಹಿತ್ಯಕ್ಕೆ ಏಕೆ ಬಲಿಬೀಳುತ್ತಾರೆ, ಮತ್ತು ಅದನ್ನು ನೋಡುವುದರಿಂದ ಅವರ ಮೇಲಾಗಬಹುದಾದ ಪರಿಣಾಮಗಳೇನು?

10 ಮಕ್ಕಳು ತಮ್ಮ ಸ್ವಾಭಾವಿಕ ಕುತೂಹಲದಿಂದಾಗಿ ಕಾಮಪ್ರಚೋದಕ ಸಾಹಿತ್ಯಕ್ಕೆ ಸೆಳೆಯಲ್ಪಡಬಲ್ಲರು. ಇದು ಸಂಭವಿಸಿದರೆ ಲೈಂಗಿಕತೆಯ ಅವರ ದೃಷ್ಟಿಕೋನದ ಮೇಲೆ ಅಳಿಯದ ಕೆಟ್ಟ ಪ್ರಭಾವವು ಉಂಟಾಗಬಹುದು. ಒಂದು ವರದಿಗನುಸಾರ, ಈ ಪ್ರಭಾವಗಳು ಸಹಜವಾದ ಲೈಂಗಿಕತೆಯ ಬಗ್ಗೆ ವಿಕೃತ ಭಾವವನ್ನು ತಾಳುವಂತೆ ಮಾಡುತ್ತವೆ. ಮಾತ್ರವಲ್ಲದೆ “ಹಿತಕರವೂ ಪ್ರೀತಿಪರವೂ ಆದ ಸಂಬಂಧದಲ್ಲಿ ಉಳಿಯಲು ಕಷ್ಟವಾಗುತ್ತದೆ. ಸ್ತ್ರೀಯರ ಬಗ್ಗೆ ಅಸಹಜ ನೋಟವನ್ನು ಕೊಡುತ್ತದೆ. ಕಡೆಗೆ ಕಾಮಪ್ರಚೋದಕ ಸಾಹಿತ್ಯದ ಚಟ ಹಿಡಿಯಸಾಧ್ಯವಿದೆ. ಈ ಚಟ ಅವರ ಶಾಲಾಗೆಲಸ, ಸ್ನೇಹಸಂಬಂಧಗಳು ಮತ್ತು ಕುಟುಂಬ ಸಂಬಂಧಗಳನ್ನು ಕೆಡಿಸಬಲ್ಲದು.” ಇದಕ್ಕಿಂತಲೂ ಹೆಚ್ಚು ಹಾನಿಕರ ಪರಿಣಾಮಗಳು ಅವರು ವಿವಾಹ ಸಂಬಂಧವನ್ನು ಪ್ರವೇಶಿಸುವಾಗ ತಲೆದೋರಬಹುದು.

11. ಕಾಮಪ್ರಚೋದಕ ಸಾಹಿತ್ಯವನ್ನು ನೋಡುವುದರಲ್ಲಿರುವ ಅಪಾಯವನ್ನು ತೋರಿಸಲು ಒಂದು ಉದಾಹರಣೆ ಕೊಡಿ.

11 ಒಬ್ಬ ಕ್ರೈಸ್ತ ಸಹೋದರನು ಬರೆದದ್ದು: “ಸಾಕ್ಷಿಯಾಗುವುದಕ್ಕೆ ಮುಂಚೆ ನನ್ನಲ್ಲಿದ್ದ ಎಲ್ಲ ದುಶ್ಚಟಗಳಲ್ಲಿ ಬಿಡಿಸಿಕೊಳ್ಳಲು ಅತಿ ಕಷ್ಟಕರವಾಗಿದ್ದದ್ದು ಕಾಮಪ್ರಚೋದಕ ಸಾಹಿತ್ಯವನ್ನು ನೋಡುವುದೇ. ಆ ಚಿತ್ರಗಳು ಈಗಲೂ ಅತಿ ಅನುಚಿತ ಸಮಯಗಳಲ್ಲಿ ಒಂದು ವಾಸನೆಯಿಂದಲೋ, ಯಾವುದೇ ಸಂಗೀತದಿಂದಲೋ, ನಾನು ನೋಡುವಂಥ ವಿಷಯದಿಂದಲೋ ಅಥವಾ ಅಲೆದಾಡುವ ಒಂದು ಯೋಚನೆಯಿಂದಲೋ ನನ್ನ ಮನೋಗೋಚರಕ್ಕೆ ಬರುತ್ತವೆ. ಇದು ನನ್ನ ದಿನನಿತ್ಯದ ಸತತ ಹೋರಾಟವಾಗಿದೆ.” ಇನ್ನೊಬ್ಬ ಸಹೋದರನು ಚಿಕ್ಕವನಾಗಿದ್ದಾಗ ತನ್ನ ಸಾಕ್ಷಿಯಲ್ಲದ ತಂದೆಯ ಕಾಮಪ್ರಚೋದಕ ಪತ್ರಿಕೆಗಳನ್ನು ಹೆತ್ತವರು ಮನೆಯಲ್ಲಿಲ್ಲದಾಗ ನೋಡಿದ್ದನು. ಅವನು ಬರೆದದ್ದು: “ಆ ಚಿತ್ರಗಳು ನನ್ನ ಎಳೆಯ ಮನಸ್ಸಿನ ಮೇಲೆ ಎಂಥ ಭಯಂಕರ ಪರಿಣಾಮ ಬೀರಿದವು! ಈಗ 25 ವರ್ಷಗಳ ನಂತರವೂ ಆ ಕೆಲವು ಚಿತ್ರಗಳನ್ನು ನನ್ನಿಂದ ಮರೆಯಲಾಗುತ್ತಿಲ್ಲ. ನಾನೆಷ್ಟೇ ಕಷ್ಟಪಟ್ಟು ಹೋರಾಡಿದರೂ ಅವು ಅಚ್ಚಳಿಯದೆ ಉಳಿದಿವೆ. ನಾನು ಅದರ ಕುರಿತು ಆಲೋಚಿಸದಿದ್ದರೂ ಅದು ನನ್ನಲ್ಲಿ ದೋಷಿಭಾವನೆಯನ್ನು ಹುಟ್ಟಿಸುತ್ತದೆ.” ನಿಷ್ಪ್ರಯೋಜಕ ವಿಷಯಗಳ ಮೇಲೆ ಕಣ್ಣಿಡದಿರುವ ಮೂಲಕ ಇಂಥ ಭಾರವಾದ ಭಾವನೆಗಳನ್ನು ತಡೆಯುವುದು ಅದೆಷ್ಟು ವಿವೇಕಪ್ರದ! ಒಬ್ಬ ವ್ಯಕ್ತಿ ಇದನ್ನು ಹೇಗೆ ಮಾಡಬಲ್ಲನು? ಅವನು ತನ್ನ “ಪ್ರತಿಯೊಂದು ಯೋಚನೆಯನ್ನು ಸೆರೆಹಿಡಿದು ಅದನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ” ಮಾಡಲು ಶ್ರಮಿಸಬೇಕು.—2 ಕೊರಿಂ. 10:5.

12, 13. ಕ್ರೈಸ್ತರು ಯಾವ ನಿಷ್ಪ್ರಯೋಜಕ ವಿಷಯಗಳನ್ನು ನೋಡುವುದನ್ನು ವರ್ಜಿಸಬೇಕು, ಮತ್ತು ಏಕೆ?

12 ನಾವು ವರ್ಜಿಸಬೇಕಾದ ಇನ್ನೊಂದು “ನೀಚವಾದ” ಅಥವಾ ನಿಷ್ಪ್ರಯೋಜಕ ವಿಷಯ ಯಾವುದೆಂದರೆ ಪ್ರಾಪಂಚಿಕತೆಯನ್ನು ಅಥವಾ ಮಾಟಮಂತ್ರವನ್ನು ಪ್ರವರ್ಧಿಸುವ ಇಲ್ಲವೆ ಹಿಂಸಾಚಾರ, ರಕ್ತಪಾತ ಮತ್ತು ಹತ್ಯೆಯನ್ನು ಎತ್ತಿತೋರಿಸುವ ಮನೋರಂಜನೆಯಾಗಿದೆ. (ಕೀರ್ತನೆ 101:3 ಓದಿ.) ತಮ್ಮ ಮನೆಯಲ್ಲಿ ಯಾವುದನ್ನು ವೀಕ್ಷಿಸಲು ಬಿಡುತ್ತಾರೆಂಬ ವಿಷಯದಲ್ಲಿ ಕ್ರೈಸ್ತ ಹೆತ್ತವರಿಗೆ ಯೆಹೋವನ ಮುಂದೆ ಒಂದು ಜವಾಬ್ದಾರಿಕೆಯಿದೆ. ನಿಶ್ಚಯವಾಗಿ ನಿಜ ಕ್ರೈಸ್ತನಾದ ಯಾವನೊಬ್ಬನೂ ಪ್ರೇತವಾದದಲ್ಲಿ ಬುದ್ಧಿಪೂರ್ವಕವಾಗಿ ಒಳಗೂಡನು. ಆದರೂ ಪ್ರೇತಾತ್ಮವಾದಕ್ಕೆ ಸಂಬಂಧಪಟ್ಟ ಆಚರಣೆಗಳನ್ನು ಎತ್ತಿತೋರಿಸುವ ಚಲನಚಿತ್ರಗಳು, ಟಿ.ವಿ. ಧಾರಾವಾಹಿಗಳು, ವಿಡಿಯೋ ಗೇಮ್‌ಗಳು ಮತ್ತು ಕಾಮಿಕ್‌ ಹಾಗೂ ಮಕ್ಕಳ ಪುಸ್ತಕಗಳ ಕಡೆಗೆ ಸಹ ಹೆತ್ತವರು ಗಮನಕೊಡುವ ಅಗತ್ಯವಿದೆ.—ಜ್ಞಾನೋ. 22:5.

13 ನಾವು ಎಳೆಯರಾಗಿರಲಿ ಪ್ರಾಯಸ್ಥರಾಗಿರಲಿ, ಹಿಂಸಾಚಾರವನ್ನು ಎತ್ತಿತೋರಿಸುವ ಮತ್ತು ಕಗ್ಗೊಲೆಯನ್ನು ರಕ್ತಸಿಕ್ತ ವಾಸ್ತವಿಕತೆಯೊಂದಿಗೆ ಚಿತ್ರಿಸುವ ವಿಡಿಯೋ ಗೇಮ್‌ಗಳು ಮತ್ತು ಚಲನಚಿತ್ರಗಳನ್ನು ನೋಡುವುದರಲ್ಲಿ ಸ್ವಲ್ಪವೂ ಸಂತೋಷಿಸಬಾರದು. (ಕೀರ್ತನೆ 11:5 ಓದಿ.) ಯೆಹೋವನು ಖಂಡಿಸುವ ಯಾವುದೇ ಚಟುವಟಿಕೆಯ ಮೇಲೆ ನಮ್ಮ ಮನಸ್ಸು ಕೇಂದ್ರೀಕರಿಸುವಂತೆ ನಾವು ಬಿಡಬಾರದು. ಸೈತಾನನು ನಮ್ಮ ಆಲೋಚನೆಗಳ ಕಡೆಗೆ ಗುರಿಯಿಟ್ಟಿದ್ದಾನೆಂಬುದನ್ನು ನೆನಪಿನಲ್ಲಿಡಿ. (2 ಕೊರಿಂ. 11:3) ಸ್ವೀಕರಣೀಯವೆಂದು ತೋರುವ ಮನೋರಂಜನೆಯನ್ನು ನೋಡಲು ತುಂಬ ಸಮಯವನ್ನು ಕಳೆಯುವುದು ಕೂಡ ನಮ್ಮ ಕುಟುಂಬ ಆರಾಧನೆ, ದೈನಂದಿನ ಬೈಬಲ್‌ ವಾಚನ ಮತ್ತು ಕೂಟಗಳ ತಯಾರಿಯಿಂದ ನಮ್ಮ ಸಮಯವನ್ನು ಕಬಳಿಸಬಹುದು.—ಫಿಲಿ. 1:9, 10.

ಯೇಸುವಿನ ಮಾದರಿಯನ್ನು ಅನುಸರಿಸಿ

14, 15. ಕ್ರಿಸ್ತನ ಮೇಲೆ ಸೈತಾನನು ತಂದ ಮೂರನೇ ಪ್ರಲೋಭನೆಯ ವಿಷಯದಲ್ಲಿ ಯಾವುದು ಗಮನಾರ್ಹವಾಗಿತ್ತು, ಮತ್ತು ಯೇಸು ಅದನ್ನು ಎದುರಿಸಿನಿಲ್ಲಲು ಹೇಗೆ ಶಕ್ತನಾದನು?

14 ಈ ದುಷ್ಟ ಲೋಕದಲ್ಲಿ ಕೆಲವು ನಿಷ್ಪ್ರಯೋಜಕ ವಿಷಯಗಳನ್ನು ನಮಗೆ ಕಾಣದಿರಸಾಧ್ಯವಿಲ್ಲ ಎಂಬುದು ವಿಷಾದನೀಯ. ಯೇಸುವಿನ ಮೇಲೆಯೂ ಅಂಥ ವಿಷಯಗಳು ದಬ್ಬಲ್ಪಟ್ಟವು. ದೇವರ ಚಿತ್ತವನ್ನು ಮಾಡುವುದರಿಂದ ಯೇಸುವನ್ನು ದೂರಸರಿಸಲು ಸೈತಾನನು ಮಾಡಿದ ಮೂರನೇ ಪ್ರಯತ್ನದಲ್ಲಿ ‘ಪಿಶಾಚನು ಅವನನ್ನು ಅಸಾಮಾನ್ಯವಾಗಿ ಎತ್ತರವಾಗಿದ್ದ ಒಂದು ಬೆಟ್ಟಕ್ಕೆ ಕರೆದುಕೊಂಡು ಹೋಗಿ ಲೋಕದ ಎಲ್ಲ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಅವನಿಗೆ ತೋರಿಸಿದನು.’ (ಮತ್ತಾ. 4:8) ಸೈತಾನನು ಹೀಗೆ ಮಾಡಿದ್ದೇಕೆ? ದೃಷ್ಟಿಯ ಬಲಶಾಲಿ ಪ್ರಭಾವವನ್ನು ಅವನು ದುರುಪಯೋಗಿಸಲು ಬಯಸಿದ್ದರಿಂದಲೇ ಎಂಬುದರಲ್ಲಿ ಸಂದೇಹವಿಲ್ಲ. ಲೋಕದ ರಾಜ್ಯಗಳ ವೈಭವವನ್ನು ನೋಡಿದಾಗ ಲೌಕಿಕ ಪ್ರಖ್ಯಾತಿಯನ್ನು ಪಡೆಯುವ ಆಶೆಗೆ ಯೇಸು ಬಲಿಯಾಗಲು ಪ್ರೇರಿಸಲ್ಪಟ್ಟಾನು ಎಂದವನು ನೆನಸಿರಬೇಕು. ಆದರೆ ಯೇಸು ಹೇಗೆ ಪ್ರತಿಕ್ರಿಯಿಸಿದನು?

15 ಯೇಸು ಈ ಆಕರ್ಷಕ ನೀಡಿಕೆಯ ಮೇಲೆ ಮನಸ್ಸಿಡಲಿಲ್ಲ. ದುರಾಶೆಗಳು ತನ್ನ ಹೃದಯವನ್ನು ರಂಜಿಸುವಂತೆ ಅವನು ಬಿಟ್ಟುಕೊಡಲಿಲ್ಲ. ಅಲ್ಲದೆ ಪಿಶಾಚನ ನೀಡಿಕೆಯನ್ನು ತಿರಸ್ಕರಿಸುವುದಕ್ಕಾಗಿ ಅವನಿಗೆ ಯೋಚನೆ ಮಾಡಬೇಕೆಂದಿರಲಿಲ್ಲ. ತಕ್ಷಣವೇ ಯೇಸು ಪ್ರತಿಕ್ರಿಯಿಸುತ್ತಾ “ಸೈತಾನನೇ ತೊಲಗಿಹೋಗು!” ಎಂದು ಆಜ್ಞೆಯಿತ್ತನು. (ಮತ್ತಾ. 4:10) ಯೆಹೋವನೊಂದಿಗಿನ ತನ್ನ ಸುಸಂಬಂಧದ ಮೇಲೆ ಯೇಸು ತನ್ನ ಮನಸ್ಸನ್ನು ಕೇಂದ್ರೀಕರಿಸಿದನು ಮತ್ತು ದೇವರ ಚಿತ್ತವನ್ನು ಮಾಡುವ ತನ್ನ ಜೀವಿತೋದ್ದೇಶಕ್ಕೆ ಹೊಂದಿಕೆಯಲ್ಲಿ ಪ್ರತ್ಯುತ್ತರವನ್ನು ಕೊಟ್ಟನು. (ಇಬ್ರಿ. 10:7) ಫಲಿತಾಂಶವಾಗಿ ಸೈತಾನನು ಮಾಡಿದ ಕುತಂತ್ರಭರಿತ ಒಳಸಂಚನ್ನು ಯೇಸು ಯಶಸ್ವಿಕರವಾಗಿ ಭಂಗಗೊಳಿಸಿದನು.

16. ಸೈತಾನನ ಪ್ರಲೋಭನೆಗಳನ್ನು ಎದುರಿಸುವುದರಲ್ಲಿ ನಾವು ಯೇಸುವಿನ ಮಾದರಿಯಿಂದ ಯಾವ ಪಾಠಗಳನ್ನು ಕಲಿಯಬಲ್ಲೆವು?

16 ಯೇಸುವಿನ ಮಾದರಿಯಿಂದ ನಾವು ಹೆಚ್ಚನ್ನು ಕಲಿಯಬಲ್ಲೆವು. ಒಂದನೇದಾಗಿ, ಸೈತಾನನ ತಂತ್ರೋಪಾಯಗಳಿಂದ ಯಾರೂ ವಿಮುಕ್ತರಲ್ಲ. (ಮತ್ತಾ. 24:24) ಎರಡನೇದಾಗಿ, ನಾವು ನಮ್ಮ ದೃಷ್ಟಿಯನ್ನು ಯಾವುದರ ಮೇಲೆ ಇಡುತ್ತೇವೋ ಅದು ನಮ್ಮ ಹೃದಯದ ಅಪೇಕ್ಷೆಗಳನ್ನು ಒಳ್ಳೇದಕ್ಕಾಗಿ ಅಥವಾ ಕೆಟ್ಟದ್ದಕ್ಕಾಗಿ ತೀವ್ರಗೊಳಿಸಬಹುದು. ಮೂರನೇದಾಗಿ, ನಮ್ಮನ್ನು ದಾರಿತಪ್ಪಿಸುವ ತನ್ನ ಪ್ರಯತ್ನದಲ್ಲಿ ಸೈತಾನನು ನಮ್ಮ ‘ಕಣ್ಣಿನಾಶೆಯನ್ನು’ ಸಾಧ್ಯವಾದಷ್ಟು ಮಟ್ಟಿಗೆ ದುರುಪಯೋಗಿಸುವನು ನಿಶ್ಚಯ. (1 ಪೇತ್ರ 5:8) ನಾಲ್ಕನೇದಾಗಿ, ಸೈತಾನನನ್ನು ನಾವೂ ಎದುರಿಸಬಲ್ಲೆವು. ವಿಶೇಷವಾಗಿ ತಡವಿಲ್ಲದೆ ಕ್ರಿಯೆಗೈದಾಗ ನಮಗೆ ಜಯ ಸಿಗಸಾಧ್ಯ.—ಯಾಕೋ. 4:7; 1 ಪೇತ್ರ 2:21.

ನಿಮ್ಮ ಕಣ್ಣನ್ನು ‘ಸರಳವಾಗಿಡಿ’

17. ಒಂದು ಪ್ರಲೋಭನೆಯನ್ನು ಎದುರಿಸುವ ಮುಂಚೆಯೇ ಅದಕ್ಕೆ ಹೇಗೆ ಪ್ರತಿಕ್ರಿಯಿಸುವೆವು ಎಂಬುದನ್ನು ಪರಿಗಣಿಸುವುದು ಏಕೆ ವಿವೇಕಯುತ?

17 ಯೆಹೋವನಿಗೆ ನಾವು ಮಾಡಿರುವ ಸಮರ್ಪಣೆಯಲ್ಲಿ ನಿಷ್ಪ್ರಯೋಜಕವಾದ ವಿಷಯಗಳಿಂದ ದೂರಸರಿಯುವ ಗಂಭೀರ ಪ್ರತಿಜ್ಞೆಯೂ ಸೇರಿರುತ್ತದೆ. ದೇವರ ಚಿತ್ತವನ್ನು ಮಾಡಲು ಮಾತುಕೊಡುವುದರಲ್ಲಿ, “ನಿನ್ನ ವಾಕ್ಯವನ್ನೇ ಅನುಸರಿಸಬೇಕೆಂದು ನನ್ನ ಕಾಲುಗಳನ್ನು ಯಾವ ಕೆಟ್ಟ ದಾರಿಗೂ ಹೋಗದಂತೆ ಕಾದಿದ್ದೇನೆ” ಎಂಬ ಕೀರ್ತನೆಗಾರನ ಮಾತುಗಳೊಂದಿಗೆ ನಾವು ಜೊತೆಗೂಡುತ್ತೇವೆ. (ಕೀರ್ತ. 119:101) ಒಂದು ಪ್ರಲೋಭನೆಯನ್ನು ಎದುರಿಸುವ ಮುಂಚೆಯೇ ಅದಕ್ಕೆ ಹೇಗೆ ಪ್ರತಿಕ್ರಿಯಿಸುವೆವು ಎಂಬುದನ್ನು ನಾವು ಪರಿಗಣಿಸುವುದು ವಿವೇಕಯುತ. ಶಾಸ್ತ್ರಗ್ರಂಥವು ಖಂಡಿಸುವ ವಿಷಯಗಳನ್ನು ನಮಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಸೈತಾನನ ತಂತ್ರಗಳನ್ನು ನಾವು ತಿಳಿಯದವರೇನಲ್ಲ. ಯೇಸು ಕಲ್ಲನ್ನು ರೊಟ್ಟಿಯನ್ನಾಗಿ ಮಾಡುವ ಶೋಧನೆಗೆ ಒಳಗಾದದ್ದು ಯಾವಾಗ? 40 ದಿವಸ ಹಗಲಿರುಳು ಉಪವಾಸಮಾಡಿ ಅವನಿಗೆ ‘ಹಸಿವಾದ’ ನಂತರವೇ. (ಮತ್ತಾ. 4:1-4) ನಾವು ಯಾವಾಗ ಬಲಹೀನರಾಗಿದ್ದೇವೆ ಮತ್ತು ಪ್ರಲೋಭನೆಗೆ ಸುಲಭವಾಗಿ ಬಲಿಬೀಳಬಲ್ಲೆವು ಎಂಬುದನ್ನು ಸೈತಾನನು ಗ್ರಹಿಸಶಕ್ತನು. ಆದುದರಿಂದ ಈ ವಿಷಯಗಳನ್ನು ನಾವು ಜಾಗ್ರತೆಯಿಂದ ಪರಿಗಣಿಸುವ ಸಮಯವು ಇದೇ ಆಗಿದೆ. ಹಾಗಾಗಿ ವಿಳಂಬಿಸಬೇಡಿರಿ! ಯೆಹೋವನಿಗೆ ನಾವು ಮಾಡಿದ ಸಮರ್ಪಣೆಯ ಪ್ರತಿಜ್ಞೆಯನ್ನು ದಿನನಿತ್ಯವೂ ಮನಸ್ಸಿನಲ್ಲಿಡುವುದಾದರೆ ನಾವು ನಿಷ್ಪ್ರಯೋಜಕ ವಿಷಯಗಳ ಮೇಲೆ ದೃಷ್ಟಿಯಿಡದಿರುವ ದೃಢಸಂಕಲ್ಪವುಳ್ಳವರಾಗಿರುವೆವು.—ಜ್ಞಾನೋ. 1:5; 19:20.

18, 19. (ಎ) ‘ಸರಳವಾದ’ ಕಣ್ಣು ಮತ್ತು “ಕೆಟ್ಟ” ಕಣ್ಣಿನ ನಡುವಣ ವ್ಯತ್ಯಾಸವನ್ನು ತಿಳಿಸಿ. (ಬಿ) ಬೆಲೆಯುಳ್ಳ ವಿಷಯಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳುತ್ತಾ ಇರುವುದು ಏಕೆ ಪ್ರಾಮುಖ್ಯ, ಮತ್ತು ಫಿಲಿಪ್ಪಿ 4:8 ಈ ವಿಷಯದಲ್ಲಿ ಯಾವ ಸಲಹೆ ಕೊಡುತ್ತದೆ?

18 ದಿನಂಪ್ರತಿ ನಾವು ಕಣ್ಸೆಳೆಯುವ ಅಪಕರ್ಷಣೆಗಳ ಒಂದು ಸಮೂಹವನ್ನೇ ಎದುರಿಸುತ್ತಿದ್ದೇವೆ ಮತ್ತು ಅವುಗಳ ಸಂಖ್ಯೆ ಹೆಚ್ಚುತ್ತಾ ಬರುತ್ತಿದೆ. ಆದುದರಿಂದ ನಿಮ್ಮ ಕಣ್ಣುಗಳನ್ನು ‘ಸರಳವಾಗಿಡಿ’ ಎಂಬ ಯೇಸುವಿನ ಬುದ್ಧಿವಾದವನ್ನು ನಾವು ಇನ್ನೂ ಹೆಚ್ಚಾಗಿ ಗಣ್ಯಮಾಡಬಲ್ಲೆವು. (ಮತ್ತಾ. 6:22, 23) ‘ಸರಳವಾದ’ ಕಣ್ಣು ಪೂರ್ಣವಾಗಿ ಒಂದು ಉದ್ದೇಶದ ಮೇಲೆ ಅಂದರೆ ದೇವರ ಚಿತ್ತವನ್ನು ಮಾಡುವುದರ ಮೇಲೆ ಕೇಂದ್ರಿತವಾಗಿದೆ. ಇದಕ್ಕೆ ವೈದೃಶ್ಯವಾಗಿ “ಕೆಟ್ಟ” ಕಣ್ಣಾದರೋ ಕುಟಿಲವೂ ದುರಾಶೆಯುಳ್ಳದ್ದೂ ನಿಷ್ಪ್ರಯೋಜಕ ವಿಷಯಗಳ ಕಡೆಗೆ ಸೆಳೆಯುವಂಥದ್ದೂ ಆಗಿದೆ.

19 ನಮ್ಮ ಕಣ್ಣುಗಳು ನಮ್ಮ ಮನಸ್ಸನ್ನು ಪ್ರಭಾವಿಸುತ್ತವೆ ಮತ್ತು ನಮ್ಮ ಮನಸ್ಸು ನಮ್ಮ ಹೃದಯವನ್ನು ಪ್ರಭಾವಿಸುತ್ತದೆ ಎಂಬುದನ್ನು ನೆನಪಿಡಿ. ಆದುದರಿಂದ ಯಾವುದು ಬೆಲೆಯುಳ್ಳದ್ದೆಂದು ಲಕ್ಷ್ಯಕ್ಕೆ ತಂದುಕೊಳ್ಳುತ್ತಾ ಇರುವುದು ಎಷ್ಟೊಂದು ಪ್ರಾಮುಖ್ಯ! (ಫಿಲಿಪ್ಪಿ 4:8 ಓದಿ.) ನಿಶ್ಚಯವಾಗಿ, “ನಿಷ್ಪ್ರಯೋಜಕ ವಿಷಯಗಳ ಮೇಲೆ ಕಣ್ಣಿಡದಂತೆ ಮಾಡು” ಎಂದು ಕೀರ್ತನೆಗಾರನು ಮಾಡಿದ ಪ್ರಾರ್ಥನೆಯನ್ನು ನಾವು ಪ್ರತಿಧ್ವನಿಸುತ್ತಾ ಇರೋಣ. ಅನಂತರ ಆ ಪ್ರಾರ್ಥನೆಗೆ ಹೊಂದಿಕೆಯಲ್ಲಿ ಕ್ರಿಯೆಗೈಯಲು ಶ್ರಮಿಸುವಾಗ ಯೆಹೋವನು ‘ತನ್ನ ಸ್ವಂತ ಮಾರ್ಗದಲ್ಲಿ ನಮ್ಮನ್ನು ಜೀವಂತವಾಗಿ ಉಳಿಸುವನು.’—ಕೀರ್ತ. 119:37; ಇಬ್ರಿ. 10:36.

ಜ್ಞಾಪಕವಿದೆಯೊ?

• ನಮ್ಮ ಕಣ್ಣು, ಮನಸ್ಸು ಮತ್ತು ಹೃದಯದ ನಡುವಣ ಸಂಬಂಧವೇನು?

• ಕಾಮಪ್ರಚೋದಕ ಸಾಹಿತ್ಯವನ್ನು ನೋಡುವುದರಿಂದ ಬರುವ ಅಪಾಯಗಳಾವುವು?

• ನಮ್ಮ ಕಣ್ಣನ್ನು ‘ಸರಳವಾಗಿಡುವುದು’ ಪ್ರಾಮುಖ್ಯವೇಕೆ?

[ಅಧ್ಯಯನ ಪ್ರಶ್ನೆಗಳು]

[ಪುಟ 23ರಲ್ಲಿರುವ ಚಿತ್ರಗಳು]

ಕ್ರೈಸ್ತರು ಯಾವ ನಿಷ್ಪ್ರಯೋಜಕ ವಿಷಯಗಳನ್ನು ನೋಡುವುದನ್ನು ವರ್ಜಿಸಬೇಕು?