ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯುವ ಜನರೇ—ಯೆಹೋವನನ್ನು ಸೇವಿಸುವ ಅಪೇಕ್ಷೆಯನ್ನು ಬಲಪಡಿಸಿಕೊಳ್ಳಿ

ಯುವ ಜನರೇ—ಯೆಹೋವನನ್ನು ಸೇವಿಸುವ ಅಪೇಕ್ಷೆಯನ್ನು ಬಲಪಡಿಸಿಕೊಳ್ಳಿ

ಯುವ ಜನರೇ—ಯೆಹೋವನನ್ನು ಸೇವಿಸುವ ಅಪೇಕ್ಷೆಯನ್ನು ಬಲಪಡಿಸಿಕೊಳ್ಳಿ

“ಯೌವನದಲ್ಲಿಯೇ ನಿನ್ನ [ಮಹಾನ್‌] ಸೃಷ್ಟಿಕರ್ತನನ್ನು ಸ್ಮರಿಸು.” —ಪ್ರಸಂ. 12:1.

1. ಇಸ್ರಾಯೇಲಿನಲ್ಲಿದ್ದ ಮಕ್ಕಳಿಗೆ ಯಾವ ಆಮಂತ್ರಣ ಕೊಡಲಾಯಿತು?

ಸುಮಾರು 3,500 ವರ್ಷಗಳ ಹಿಂದೆ ಯೆಹೋವನ ಪ್ರವಾದಿ ಮೋಶೆ ಇಸ್ರಾಯೇಲಿನ ಯಾಜಕರಿಗೆ ಮತ್ತು ಹಿರೀಪುರುಷರಿಗೆ ಈ ಆಜ್ಞೆ ಕೊಟ್ಟನು: “ಜನರೆಲ್ಲರೂ ಈ ಧರ್ಮಶಾಸ್ತ್ರವನ್ನು ಕೇಳಿ ತಿಳಿದುಕೊಳ್ಳುವಂತೆ ಸ್ತ್ರೀಪುರುಷರನ್ನೂ ಮಕ್ಕಳನ್ನೂ . . . ಕೂಡಿಸಬೇಕು. ಆಗ ಅವರು ತಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ಈ ಧರ್ಮಶಾಸ್ತ್ರದ ನಿಯಮಗಳನ್ನು ಅನುಸರಿಸಿ ನಡೆಯುವರು.” (ಧರ್ಮೋ. 31:12) ಆರಾಧನಾ ಕೂಟಗಳಿಗೆ ಯಾರ್ಯಾರು ಹಾಜರಾಗಬೇಕೆಂದು ತಿಳಿಸಲಾಯಿತು ಎಂಬುದನ್ನು ಗಮನಿಸಿದಿರೊ? ಪುರುಷರು, ಸ್ತ್ರೀಯರು ಮತ್ತು ಮಕ್ಕಳು ಹಾಜರಾಗಬೇಕಿತ್ತು. ಹೌದು ಧರ್ಮಶಾಸ್ತ್ರವನ್ನು ಕೇಳಿ, ತಿಳಿದುಕೊಂಡು, ಯೆಹೋವನ ಮಾರ್ಗದರ್ಶನವನ್ನು ಅನುಸರಿಸುವಂತೆ ಹೇಳಲ್ಪಟ್ಟವರಲ್ಲಿ ಚಿಕ್ಕವರು ಸಹ ಒಳಗೂಡಿದ್ದರು.

2. ಆದಿ ಕ್ರೈಸ್ತ ಸಭೆಯಲ್ಲಿದ್ದ ಯುವ ಜನರಿಗೆ ಯೆಹೋವನು ತನ್ನ ಕಾಳಜಿಯನ್ನು ಹೇಗೆ ವ್ಯಕ್ತಪಡಿಸಿದನು?

2 ಪ್ರಥಮ ಶತಮಾನದಲ್ಲೂ ಯೆಹೋವನು ದೇವಭಕ್ತಿಯುಳ್ಳ ಯುವ ಜನರಿಗೆ ಕಾಳಜಿ ತೋರಿಸುವುದನ್ನು ಮುಂದುವರಿಸಿದನು. ಉದಾಹರಣೆಗೆ, ಆತನು ಅಪೊಸ್ತಲ ಪೌಲನನ್ನು ಪ್ರೇರಿಸಿ, ಸಭೆಗಳಿಗೆ ಅವನು ಕಳುಹಿಸಿದ ಕೆಲವು ಪತ್ರಗಳಲ್ಲಿ ನಿರ್ದಿಷ್ಟವಾಗಿ ಯುವ ಜನರಿಗೆ ನಿರ್ದೇಶಿಸಲ್ಪಟ್ಟ ಸಲಹೆಸೂಚನೆಗಳನ್ನು ಸೇರಿಸುವಂತೆ ಮಾಡಿದನು. (ಎಫೆಸ 6:1; ಕೊಲೊಸ್ಸೆ 3:20 ಓದಿ.) ಇಂಥ ಸಲಹೆಯನ್ನು ಅನ್ವಯಿಸಿಕೊಂಡ ಯುವ ಕ್ರೈಸ್ತರಿಗೆ ತಮ್ಮ ಸ್ವರ್ಗೀಯ ತಂದೆಯ ಮೇಲಣ ಗಣ್ಯತೆ ಹೆಚ್ಚಿತು ಮತ್ತು ಅವರು ಆತನ ಆಶೀರ್ವಾದವನ್ನು ಪಡೆದುಕೊಂಡರು.

3. ಇಂದು ಯುವ ಜನರು ದೇವರನ್ನು ಸೇವಿಸುವ ಅಪೇಕ್ಷೆಯನ್ನು ಹೇಗೆ ತೋರಿಸಿಕೊಡುತ್ತಾರೆ?

3 ಇಂದು ಯೆಹೋವನನ್ನು ಆರಾಧಿಸಲು ಕೂಡಿಬರುವಂತೆ ಯುವ ಜನರು ಆಮಂತ್ರಿಸಲ್ಪಟ್ಟಿದ್ದಾರೊ? ಹೌದು! ಆದುದರಿಂದ ಲೋಕದಾದ್ಯಂತವಿರುವ ದೇವರ ಎಷ್ಟೋ ಮಂದಿ ಯುವ ಸೇವಕರು ಪೌಲನ ಈ ಪ್ರೋತ್ಸಾಹನೆಯನ್ನು ಮನಸಾರೆ ಪರಿಪಾಲಿಸುವುದನ್ನು ನೋಡುವುದು ದೇವಜನರೆಲ್ಲರಿಗೆ ಸಂತೋಷವನ್ನು ತರುತ್ತದೆ: “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುವಂತೆಯೂ ಸತ್ಕಾರ್ಯಗಳನ್ನು ಮಾಡುವಂತೆಯೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ; ಸಭೆಯಾಗಿ ಕೂಡಿಬರುವುದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಇರೋಣ. ಆ ದಿನವು ಸಮೀಪಿಸುತ್ತಾ ಇದೆ ಎಂಬುದನ್ನು ನೀವು ನೋಡುವಾಗ ಇದನ್ನು ಇನ್ನಷ್ಟು ಹೆಚ್ಚು ಮಾಡಿರಿ.” (ಇಬ್ರಿ. 10:24, 25) ಇದಲ್ಲದೆ ಅನೇಕ ಮಕ್ಕಳು ತಮ್ಮ ಹೆತ್ತವರೊಂದಿಗೆ ಸೇರಿ ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾರೆ. (ಮತ್ತಾ. 24:14) ಮಾತ್ರವಲ್ಲದೆ ಯೆಹೋವನ ಮೇಲಣ ಹೃತ್ಪೂರ್ವಕ ಪ್ರೀತಿಯ ಅಭಿವ್ಯಕ್ತಿಯಾಗಿ ಪ್ರತಿ ವರ್ಷ ಸಾವಿರಾರು ಮಂದಿ ಯುವ ಜನರು ದೀಕ್ಷಾಸ್ನಾನ ಪಡೆದುಕೊಳ್ಳಲು ಮುಂದೆ ಬರುತ್ತಾರೆ ಮತ್ತು ಕ್ರಿಸ್ತನ ಶಿಷ್ಯರಾಗಿರುವುದರಿಂದ ಸಿಗುವ ಆಶೀರ್ವಾದಗಳಲ್ಲಿ ಆನಂದಿಸುತ್ತಾರೆ.—ಮತ್ತಾ. 16:24; ಮಾರ್ಕ 10:29, 30.

ಆಮಂತ್ರಣವನ್ನು ಈಗಲೇ ಸ್ವೀಕರಿಸಿ

4. ದೇವರ ಸೇವೆಯನ್ನು ಮಾಡುವ ಆಮಂತ್ರಣವನ್ನು ಯುವ ಜನರು ಯಾವಾಗ ಸ್ವೀಕರಿಸಬಲ್ಲರು?

4 “ಯೌವನದಲ್ಲಿಯೇ ನಿನ್ನ [ಮಹಾನ್‌] ಸೃಷ್ಟಿಕರ್ತನನ್ನು ಸ್ಮರಿಸು” ಎಂದು ಪ್ರಸಂಗಿ 12:1 ತಿಳಿಸುತ್ತದೆ. ಯೆಹೋವನನ್ನು ಆರಾಧಿಸಲು ಮತ್ತು ಸೇವಿಸಲು ಕೊಡಲ್ಪಡುವ ಈ ಹಾರ್ದಿಕ ಆಮಂತ್ರಣವನ್ನು ಸ್ವೀಕರಿಸಲು ಯುವ ಜನರಾದ ನೀವು ಎಷ್ಟು ಪ್ರಾಯದವರಾಗಿರಬೇಕು? ಶಾಸ್ತ್ರಗ್ರಂಥದಲ್ಲಿ ಯಾವುದೇ ವಯೋಮಿತಿ ಕೊಡಲ್ಪಟ್ಟಿಲ್ಲ. ಆದುದರಿಂದ ಯೆಹೋವನ ಉಪದೇಶವನ್ನು ಕೇಳಿ ಆತನ ಸೇವೆಮಾಡುವಷ್ಟು ನೀವು ದೊಡ್ಡವರಾಗಿಲ್ಲ ಎಂದು ನೆನಸಿ ಹಿಂದೇಟು ಹಾಕಬೇಡಿ. ನಿಮ್ಮ ಪ್ರಾಯ ಎಷ್ಟೇ ಆಗಿರಲಿ, ಆಮಂತ್ರಣವನ್ನು ತಡಮಾಡದೆ ಸ್ವೀಕರಿಸುವಂತೆ ನಿಮ್ಮನ್ನು ಪ್ರೋತ್ಸಾಹಿಸಲಾಗಿದೆ.

5. ಆಧ್ಯಾತ್ಮಿಕ ಅಭಿವೃದ್ಧಿಯನ್ನು ಮಾಡುವಂತೆ ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ಸಹಾಯಮಾಡಬಲ್ಲರು?

5 ನಿಮ್ಮಲ್ಲಿರುವ ಅನೇಕರು ಆಧ್ಯಾತ್ಮಿಕ ಅಭಿವೃದ್ಧಿಯನ್ನು ಮಾಡುವಂತೆ ನಿಮ್ಮ ಹೆತ್ತವರಲ್ಲಿ ಒಬ್ಬರು ಅಥವಾ ಇಬ್ಬರೂ ನಿಮಗೆ ಸಹಾಯ ಮಾಡುತ್ತಿದ್ದಾರೆ. ಹೀಗೆ ನೀವು ಬೈಬಲ್‌ ಕಾಲದಲ್ಲಿದ್ದ ತಿಮೊಥೆಯನಂತಿದ್ದೀರಿ. ಅವನು ಶಿಶುವಾಗಿದ್ದಾಗಲೇ ಅವನ ತಾಯಿ ಯೂನಿಕೆ ಮತ್ತು ಅಜ್ಜಿ ಲೋವಿ ಅವನಿಗೆ ಪವಿತ್ರ ಬರಹಗಳಿಂದ ಬೋಧಿಸಿದರು. (2 ತಿಮೊ. 3:14, 15) ಪ್ರಾಯಶಃ ನಿಮ್ಮ ಹೆತ್ತವರು ನಿಮ್ಮೊಂದಿಗೆ ಬೈಬಲನ್ನು ಅಧ್ಯಯನ ಮಾಡುವ ಮೂಲಕ, ನಿಮ್ಮೊಂದಿಗೆ ಪ್ರಾರ್ಥಿಸುವ ಮೂಲಕ, ನಿಮ್ಮನ್ನು ದೇವಜನರ ಸಭಾ ಕೂಟಗಳಿಗೆ ಮತ್ತು ದೊಡ್ಡ ಸಮ್ಮೇಳನಗಳಿಗೆ ಕೊಂಡೊಯ್ಯುವ ಮೂಲಕ ಹಾಗೂ ನಿಮ್ಮೊಂದಿಗೆ ಕ್ಷೇತ್ರ ಶುಶ್ರೂಷೆಯನ್ನು ಮಾಡುವ ಮೂಲಕ ನಿಮಗೂ ತದ್ರೀತಿಯ ತರಬೇತಿಯನ್ನು ಕೊಡುತ್ತಿರಬಹುದು. ವಾಸ್ತವದಲ್ಲಿ ನಿಮಗೆ ದೇವರ ಮಾರ್ಗಗಳನ್ನು ಬೋಧಿಸುವುದು ನಿಮ್ಮ ಹೆತ್ತವರ ಅತಿ ಪ್ರಾಮುಖ್ಯ ಜವಾಬ್ದಾರಿ. ಈ ಜವಾಬ್ದಾರಿಯನ್ನು ಅವರು ಸ್ವತಃ ಯೆಹೋವನಿಂದಲೇ ಪಡೆದಿದ್ದಾರೆ. ಅವರು ನಿಮಗೆ ತೋರಿಸುವ ಪ್ರೀತಿ ಮತ್ತು ಕಾಳಜಿಯನ್ನು ನೀವು ಗಣ್ಯಮಾಡುತ್ತೀರೊ?—ಜ್ಞಾನೋ. 23:22.

6. (ಎ) ಕೀರ್ತನೆ 110:3ಕ್ಕನುಸಾರ ಯಾವ ರೀತಿಯ ಆರಾಧನೆಯಿಂದ ಯೆಹೋವನು ಪ್ರಸನ್ನನಾಗುತ್ತಾನೆ? (ಬಿ) ನಾವೀಗ ಏನನ್ನು ಪರಿಗಣಿಸುವೆವು?

6 ಆದರೂ ಯುವ ಜನರಾದ ನೀವು ದೊಡ್ಡವರಾಗುತ್ತಾ ಹೋದಂತೆ ತಿಮೊಥೆಯನ ಹಾಗೆ “ದೇವರ ಉತ್ತಮವಾದ, ಸ್ವೀಕೃತವಾದ ಮತ್ತು ಪರಿಪೂರ್ಣವಾದ ಚಿತ್ತವು ಯಾವುದೆಂದು ಪರಿಶೋಧಿಸಿ ತಿಳಿದುಕೊಳ್ಳುವಂತೆ” ಯೆಹೋವನು ಬಯಸುತ್ತಾನೆ. (ರೋಮ. 12:2) ನೀವಿದನ್ನು ಮಾಡುವಲ್ಲಿ ನಿಮ್ಮ ಹೆತ್ತವರ ಬಯಕೆಯಿಂದಲ್ಲ, ಸ್ವತಃ ನೀವು ದೇವರ ಚಿತ್ತವನ್ನು ಮಾಡಲು ಬಯಸುವುದರಿಂದಲೇ ಸಭಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ನೀವಾಗಿಯೇ ಮುಂದೆ ಬಂದು ಯೆಹೋವನನ್ನು ಸೇವಿಸುವಲ್ಲಿ ಯೆಹೋವನು ಪ್ರಸನ್ನನಾಗುವನು. (ಕೀರ್ತ. 110:3) ಹಾಗಾದರೆ ನೀವು ಯೆಹೋವನ ಉಪದೇಶವನ್ನು ಕೇಳಿ ಆತನ ಮಾರ್ಗದರ್ಶನವನ್ನು ಅನುಸರಿಸುವ ನಿಮ್ಮ ಅಪೇಕ್ಷೆಯನ್ನು ಬಲಪಡಿಸಲು ಬಯಸುತ್ತೀರಿ ಎಂಬುದನ್ನು ಹೇಗೆ ತೋರಿಸಬಲ್ಲಿರಿ? ನೀವಿದನ್ನು ಮಾಡಬಹುದಾದ ಮೂರು ಮುಖ್ಯ ವಿಧಾನಗಳನ್ನು ನಾವು ಪರಿಗಣಿಸೋಣ. ಅವು ಅಧ್ಯಯನ, ಪ್ರಾರ್ಥನೆ ಮತ್ತು ನಡತೆಯ ಮೇಲೆ ಕೇಂದ್ರೀಕರಿಸಿವೆ. ಅವನ್ನು ಒಂದೊಂದಾಗಿ ಪರೀಕ್ಷಿಸುವ.

ಯೆಹೋವನನ್ನು ಒಬ್ಬ ವ್ಯಕ್ತಿಯಾಗಿ ತಿಳಿಯಿರಿ

7. ಶಾಸ್ತ್ರಗ್ರಂಥದ ವಿದ್ಯಾರ್ಥಿಯಾಗಿ ಯೇಸು ಹೇಗೆ ಮಾದರಿಯನ್ನಿಟ್ಟನು, ಮತ್ತು ಈ ವಿಷಯದಲ್ಲಿ ಅವನಿಗೆ ಯಾವುದು ಸಹಾಯಮಾಡಿತು?

7 ಯೆಹೋವನನ್ನು ಸೇವಿಸುವ ಅಪೇಕ್ಷೆಯನ್ನು ನೀವು ಬಲಪಡಿಸಲು ಬಯಸುತ್ತೀರೆಂದು ತೋರಿಸಬಲ್ಲ ಮೊದಲನೇ ವಿಧಾನ ದೈನಂದಿನ ಬೈಬಲ್‌ ವಾಚನವೇ ಆಗಿದೆ. ಕ್ರಮವಾಗಿ ದೇವರ ವಾಕ್ಯವನ್ನು ಓದುವ ಮೂಲಕ ನೀವು ನಿಮ್ಮ ಆಧ್ಯಾತ್ಮಿಕ ಅಗತ್ಯವನ್ನು ಪೂರೈಸಬಲ್ಲಿರಿ ಮತ್ತು ಅಮೂಲ್ಯ ಬೈಬಲ್‌ ಜ್ಞಾನವನ್ನು ಪಡೆಯಬಲ್ಲಿರಿ. (ಮತ್ತಾ. 5:3) ಇದರಲ್ಲಿ ಯೇಸು ಮಾದರಿಯನ್ನಿಟ್ಟನು. ಅವನು 12 ವರ್ಷದವನಾಗಿದ್ದಾಗ ದೇವಾಲಯದಲ್ಲಿ “ಬೋಧಕರ ಮಧ್ಯೆ ಕುಳಿತುಕೊಂಡು ಅವರಿಗೆ ಕಿವಿಗೊಡುತ್ತಾ ಪ್ರಶ್ನೆಯನ್ನು ಕೇಳುತ್ತಾ” ಇರುವುದನ್ನು ಅವನ ಹೆತ್ತವರು ಕಂಡರು. (ಲೂಕ 2:44-46) ಯೇಸು ಚಿಕ್ಕವನಿದ್ದಾಗಲೇ ಶಾಸ್ತ್ರಗ್ರಂಥಕ್ಕಾಗಿ ಹಂಬಲಿಕೆಯನ್ನು ಬೆಳೆಸಿಕೊಂಡಿದ್ದನು ಮತ್ತು ಅದರ ತಿಳಿವಳಿಕೆಯನ್ನು ಪಡೆದಿದ್ದನು. ಈ ವಿಷಯದಲ್ಲಿ ಅವನಿಗೆ ಯಾವುದು ಸಹಾಯಮಾಡಿತು? ಅವನ ತಾಯಿ ಮರಿಯಳು ಮತ್ತು ಸಾಕುತಂದೆ ಯೋಸೇಫ ಮುಖ್ಯ ಪಾತ್ರ ವಹಿಸಿದರು ನಿಸ್ಸಂಶಯ. ದೇವರ ಸೇವಕರಾಗಿದ್ದ ಅವರು ಯೇಸು ಶಿಶುವಾಗಿದ್ದ ಸಮಯದಿಂದಲೇ ಅವನಿಗೆ ದೈವಿಕ ಉಪದೇಶವನ್ನು ಒದಗಿಸಿದ್ದರು.—ಮತ್ತಾ. 1:18-20; ಲೂಕ 2:41, 51.

8. (ಎ) ಹೆತ್ತವರು ತಮ್ಮ ಮಕ್ಕಳಲ್ಲಿ ದೇವರ ವಾಕ್ಯದ ಮೇಲಣ ಪ್ರೀತಿಯನ್ನು ಯಾವಾಗ ನಾಟಿಸಲು ಆರಂಭಿಸಬೇಕು? (ಬಿ) ಮಕ್ಕಳನ್ನು ಶೈಶವದಿಂದಲೇ ತರಬೇತುಗೊಳಿಸುವ ಪ್ರಮುಖತೆಯನ್ನು ದೃಢೀಕರಿಸುವ ಒಂದು ಅನುಭವವನ್ನು ತಿಳಿಸಿ.

8 ತದ್ರೀತಿಯಲ್ಲಿ ಆರಂಭದಿಂದಲೇ ತಮ್ಮ ಮಕ್ಕಳ ಹೃದಯಗಳಲ್ಲಿ ಬೈಬಲ್‌ ಸತ್ಯಕ್ಕಾಗಿ ಹಂಬಲಿಕೆಯನ್ನು ನಾಟಿಸುವುದು ಎಷ್ಟು ಪ್ರಾಮುಖ್ಯ ಎಂಬುದನ್ನು ದೇವಭೀರು ಹೆತ್ತವರು ಇಂದು ಮನಗಾಣುತ್ತಾರೆ. (ಧರ್ಮೋ. 6:6-9) ರೂಬೀ ಎಂಬ ಕ್ರೈಸ್ತ ಸಹೋದರಿ ಇದನ್ನೇ ಮಾಡಿದರು. ಅವರ ಮೊದಲ ಮಗ ಜೋಸೆಫ್‌ ಹುಟ್ಟಿದ ಸ್ವಲ್ಪ ಸಮಯದಲ್ಲೇ ಅವನಿಗೆ ಬೈಬಲ್‌ ಕಥೆಗಳ ನನ್ನ ಪುಸ್ತಕದಿಂದ ಪ್ರತಿ ದಿನ ಓದಿಹೇಳುತ್ತಿದ್ದರು. ಅವನು ದೊಡ್ಡವನಾದಂತೆ ಬೇರೆ ಬೇರೆ ಶಾಸ್ತ್ರವಚನಗಳನ್ನು ಕಂಠಪಾಠ ಮಾಡುವಂತೆ ಸಹಾಯಮಾಡಿದರು. ಜೋಸೆಫ್‌ ಇಂಥ ತರಬೇತಿಯಿಂದ ಪ್ರಯೋಜನ ಪಡೆದನೊ? ಮಾತಾಡಲು ಕಲಿತ ಕೂಡಲೆ ಅವನು ಸ್ವಂತ ಮಾತಿನಲ್ಲಿ ಅನೇಕ ಬೈಬಲ್‌ ಕಥೆಗಳನ್ನು ಹೇಳಶಕ್ತನಾದನು. ಮಾತ್ರವಲ್ಲದೆ, ಐದು ವರ್ಷ ಪ್ರಾಯದಲ್ಲೇ ಅವನು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ತನ್ನ ಮೊದಲ ಭಾಷಣವನ್ನು ಕೊಟ್ಟನು.

9. ಬೈಬಲನ್ನು ಓದುವುದು ಮತ್ತು ಓದಿದ ವಿಷಯದ ಕುರಿತು ಮನನಮಾಡುವುದು ಏಕೆ ಪ್ರಾಮುಖ್ಯ?

9 ನಿಮ್ಮ ಆಧ್ಯಾತ್ಮಿಕ ಅಭಿವೃದ್ಧಿಯನ್ನು ಹೆಚ್ಚಿಸಲು ಯುವ ಜನರಾದ ನೀವು ದೈನಂದಿನ ಬೈಬಲ್‌ ವಾಚನವನ್ನು ನಿಮ್ಮ ವಾಡಿಕೆಯಾಗಿ ಮಾಡಿಕೊಳ್ಳಬೇಕು. ಇದನ್ನು ನಿಮ್ಮ ಹದಿಪ್ರಾಯ ಮತ್ತು ಪ್ರೌಢಾವಸ್ಥೆಯಾದ್ಯಂತ ಕಾಪಾಡಿಕೊಳ್ಳಿ. (ಕೀರ್ತ. 71:17) ನೀವು ಪ್ರಗತಿ ಮಾಡುವಂತೆ ಬೈಬಲ್‌ ವಾಚನ ಏಕೆ ಸಹಾಯಕಾರಿ? ತನ್ನ ತಂದೆಗೆ ಮಾಡಿದ ಪ್ರಾರ್ಥನೆಯಲ್ಲಿ ಯೇಸು ಏನು ಹೇಳಿದನೆಂದು ಗಮನಿಸಿ: “ಒಬ್ಬನೇ ಸತ್ಯ ದೇವರಾಗಿರುವ ನಿನ್ನ . . . ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದೇ ನಿತ್ಯಜೀವವಾಗಿದೆ.” (ಯೋಹಾ. 17:3) ವಾಸ್ತವದಲ್ಲಿ ನೀವು ಯೆಹೋವನ ಕುರಿತು ಹೆಚ್ಚೆಚ್ಚು ಜ್ಞಾನವನ್ನು ಪಡೆದುಕೊಳ್ಳುತ್ತಾ ಹೋದಂತೆ ಆತನನ್ನು ಒಬ್ಬ ನೈಜ ವ್ಯಕ್ತಿಯಾಗಿ ಇನ್ನೂ ಸ್ಪಷ್ಟವಾಗಿ ನೋಡುವಿರಿ. ಆತನ ಮೇಲಣ ನಿಮ್ಮ ಪ್ರೀತಿ ಸಹ ಹೆಚ್ಚುವುದು. (ಇಬ್ರಿ. 11:27) ಆದುದರಿಂದ ನೀವು ಪ್ರತಿ ಸಾರಿ ಬೈಬಲಿನ ಭಾಗವೊಂದನ್ನು ಓದುವಾಗ ಯೆಹೋವನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ಆ ಅವಕಾಶವನ್ನು ಉಪಯೋಗಿಸಿರಿ. ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ‘ಈ ವೃತ್ತಾಂತ ವ್ಯಕ್ತಿಯೋಪಾದಿ ಯೆಹೋವನ ಕುರಿತು ನನಗೇನನ್ನು ಕಲಿಸುತ್ತದೆ? ಬೈಬಲಿನ ಈ ಭಾಗವು ದೇವರು ನನ್ನ ಮೇಲೆ ಇಟ್ಟಿರುವ ಪ್ರೀತಿ ಮತ್ತು ಕಾಳಜಿಯನ್ನು ಹೇಗೆ ಎತ್ತಿಹೇಳುತ್ತದೆ?’ ಇಂಥ ಪ್ರಶ್ನೆಗಳ ಕುರಿತು ಮನನಮಾಡುವುದು ಯೆಹೋವನ ಯೋಚನಾಧಾಟಿಯೇನು, ಆತನ ಅನಿಸಿಕೆಗಳೇನು ಮತ್ತು ಆತನು ನಿಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳಲು ನಿಮಗೆ ಸಹಾಯಮಾಡುವುದು. (ಜ್ಞಾನೋಕ್ತಿ 2:1-5 ಓದಿ.) ಯುವ ತಿಮೊಥೆಯನಂತೆ, ಶಾಸ್ತ್ರಗ್ರಂಥದಿಂದ ನೀವೇನನ್ನು ಕಲಿಯುತ್ತೀರೋ ಅದನ್ನು ‘ನಂಬುವಂತೆ ಒಡಂಬಡಿಸಲ್ಪಡುವಿರಿ’ ಮತ್ತು ಯೆಹೋವನನ್ನು ಸಿದ್ಧಮನಸ್ಸಿನಿಂದ ಆರಾಧಿಸಲು ಪ್ರಚೋದಿಸಲ್ಪಡುವಿರಿ.—2 ತಿಮೊ. 3:14.

ಯೆಹೋವನ ಮೇಲಣ ಪ್ರೀತಿಯನ್ನು ಪ್ರಾರ್ಥನೆ ಗಾಢಗೊಳಿಸುವ ವಿಧ

10, 11. ದೇವರನ್ನು ಸೇವಿಸುವ ನಿಮ್ಮ ಅಪೇಕ್ಷೆಯನ್ನು ಬಲಪಡಿಸಲು ಪ್ರಾರ್ಥನೆ ಹೇಗೆ ಸಹಾಯಮಾಡುತ್ತದೆ?

10 ಯೆಹೋವನನ್ನು ಪೂರ್ಣ ಹೃದಯದಿಂದ ಸೇವಿಸುವ ನಿಮ್ಮ ಅಪೇಕ್ಷೆಯನ್ನು ಬಲಪಡಿಸುವ ಎರಡನೇ ವಿಧ ನಿಮ್ಮ ಪ್ರಾರ್ಥನೆಗಳ ಮೂಲಕವೇ ಆಗಿದೆ. ಕೀರ್ತನೆ 65:2ರಲ್ಲಿ ನಾವು ಹೀಗೆ ಓದುತ್ತೇವೆ: “ಪ್ರಾರ್ಥನೆಯನ್ನು ಕೇಳುವವನೇ, ನರರೆಲ್ಲರು ನಿನ್ನ ಬಳಿಗೆ ಬರುವರು.” ಇಸ್ರಾಯೇಲು ದೇವರ ಒಡಂಬಡಿಕೆಯ ಒಳಗಿದ್ದ ಜನರಾಗಿದ್ದ ಸಮಯದಲ್ಲೂ ಯೆಹೋವನ ಆಲಯಕ್ಕೆ ಬಂದ ಪರದೇಶಿಯರು ಪ್ರಾರ್ಥನೆಯಲ್ಲಿ ಆತನನ್ನು ಸಮೀಪಿಸಸಾಧ್ಯವಿತ್ತು. (1 ಅರ. 8:41, 42) ದೇವರು ಪಕ್ಷಪಾತಿಯಲ್ಲ. ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವವರಿಗೆ ಆತನು ಕಿವಿಗೊಡುತ್ತಾನೆ ಎಂಬ ಭರವಸೆಯಿದೆ. (ಜ್ಞಾನೋ. 15:8) ‘ನರರೆಲ್ಲರಲ್ಲಿ’ ಯುವ ಜನರಾದ ನೀವು ಸಹ ಸೇರಿದ್ದೀರಿ ನಿಶ್ಚಯ.

11 ಯಾವುದೇ ನಿಜ ಸ್ನೇಹಕ್ಕೆ ಒಳ್ಳೇ ಮಾತುಸಂಪರ್ಕ ಬುನಾದಿ ಎಂಬುದು ನಿಮಗೆ ತಿಳಿದಿದೆ. ನೀವು ಪ್ರಾಯಶಃ ನಿಮ್ಮ ಆಪ್ತ ಸ್ನೇಹಿತನೊಂದಿಗೆ ನಿಮ್ಮ ಅನಿಸಿಕೆಗಳು, ಚಿಂತೆಗಳು ಮತ್ತು ಭಾವನೆಗಳನ್ನು ಹಂಚಿಕೊಳ್ಳುವುದನ್ನು ಇಷ್ಟಪಡುತ್ತೀರಿ. ತದ್ರೀತಿಯಲ್ಲಿ ಹೃತ್ಪೂರ್ವಕ ಪ್ರಾರ್ಥನೆಗಳನ್ನು ಮಾಡುವ ಮೂಲಕ ನೀವು ನಿಮ್ಮ ಮಹಾನ್‌ ಸೃಷ್ಟಿಕರ್ತನೊಂದಿಗೆ ಮಾತಾಡುತ್ತೀರಿ. (ಫಿಲಿ. 4:6, 7) ಪ್ರೀತಿಯುಳ್ಳ ಹೆತ್ತವರೊಂದಿಗೆ ಅಥವಾ ಆಪ್ತ ಸ್ನೇಹಿತನೊಂದಿಗೆ ನಿಮ್ಮ ಮನಬಿಚ್ಚಿ ಮಾತಾಡುತ್ತಿದ್ದೀರೋ ಎಂಬಂತೆ ಯೆಹೋವನೊಂದಿಗೆ ಮಾತಾಡಿರಿ. ವಾಸ್ತವದಲ್ಲಿ ನೀವು ಪ್ರಾರ್ಥಿಸುವ ವಿಧ ಮತ್ತು ಯೆಹೋವನ ಬಗ್ಗೆ ನಿಮ್ಮ ಅನಿಸಿಕೆಯ ಮಧ್ಯೆ ಬಲವಾದ ಸಂಬಂಧವಿದೆ. ಯೆಹೋವನೊಂದಿಗಿನ ನಿಮ್ಮ ಸ್ನೇಹ ಬಲವಾದಂತೆ ನಿಮ್ಮ ಪ್ರಾರ್ಥನೆಗಳೂ ಹೆಚ್ಚು ಅರ್ಥಭರಿತವಾಗುವವು ಎಂಬುದನ್ನು ನೀವು ಗಮನಿಸುವಿರಿ.

12. (ಎ) ಅರ್ಥಭರಿತ ಪ್ರಾರ್ಥನೆಗಳಲ್ಲಿ ಮಾತುಗಳಿಗಿಂತ ಹೆಚ್ಚಿನದ್ದು ಒಳಗೂಡಿರುತ್ತದೆ ಏಕೆ? (ಬಿ) ಯೆಹೋವನು ನಿಮಗೆ ಹತ್ತಿರವಾಗಿದ್ದಾನೆ ಎಂದು ಅರಿತುಕೊಳ್ಳಲು ನಿಮಗೆ ಯಾವುದು ಸಹಾಯಮಾಡುವುದು?

12 ಆದರೆ ಅರ್ಥಭರಿತ ಪ್ರಾರ್ಥನೆಯಲ್ಲಿ ಮಾತುಗಳಿಗಿಂತ ಹೆಚ್ಚು ಒಳಗೂಡಿರುತ್ತದೆ ಎಂಬುದನ್ನು ಮನಸ್ಸಿನಲ್ಲಿಡಿ. ಅದರಲ್ಲಿ ನಿಮ್ಮ ಅಂತರಂಗದ ಅನಿಸಿಕೆಗಳು ಒಳಗೂಡಿರುತ್ತವೆ. ನಿಮ್ಮ ಪ್ರಾರ್ಥನೆಗಳಲ್ಲಿ ಯೆಹೋವನ ಮೇಲಣ ನಿಮ್ಮ ಹಾರ್ದಿಕ ಪ್ರೀತಿ, ಆಳವಾದ ಗೌರವ ಮತ್ತು ಸಂಪೂರ್ಣ ಅವಲಂಬನೆಯನ್ನು ವ್ಯಕ್ತಪಡಿಸಿ. ಯೆಹೋವನು ನಿಮ್ಮ ಪ್ರಾರ್ಥನೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ಗ್ರಹಿಸುವಾಗ ‘ಯೆಹೋವನಿಗೆ ಮೊರೆಯಿಡುವವರಿಗೆ ಆತನು ಹತ್ತಿರವಾಗಿಯೇ ಇದ್ದಾನೆ’ ಎಂಬುದನ್ನು ಹಿಂದೆಂದೂ ಗ್ರಹಿಸಿಲ್ಲದ ರೀತಿಯಲ್ಲಿ ವೈಯಕ್ತಿಕವಾಗಿ ಅರಿತುಕೊಳ್ಳುವಿರಿ. (ಕೀರ್ತ. 145:18) ಹೌದು, ಪಿಶಾಚನನ್ನು ಎದುರಿಸಲು ಮತ್ತು ಜೀವನದಲ್ಲಿ ಸರಿಯಾದ ಆಯ್ಕೆಗಳನ್ನು ಮಾಡಲು ನಿಮ್ಮನ್ನು ಬಲಪಡಿಸುವ ಮೂಲಕ ಯೆಹೋವನು ನಿಮ್ಮ ಸಮೀಪಕ್ಕೆ ಬರುವನು.—ಯಾಕೋಬ 4:7, 8 ಓದಿ.

13. (ಎ) ದೇವರೊಂದಿಗಿನ ಸ್ನೇಹವು ಒಬ್ಬಾಕೆ ಸಹೋದರಿಗೆ ಹೇಗೆ ಸಹಾಯಮಾಡಿತು? (ಬಿ) ದೇವರೊಂದಿಗಿನ ಸ್ನೇಹವು ಹದಿವಯಸ್ಕರ ಒತ್ತಡವನ್ನು ನಿಭಾಯಿಸಲು ಹೇಗೆ ಸಹಾಯಮಾಡುತ್ತದೆ?

13 ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಹೊಂದಿರುವುದರಿಂದ ಶೆರೀ ಎಂಬ ಕ್ರೈಸ್ತ ಹುಡುಗಿ ಹೇಗೆ ಬಲವನ್ನು ಪಡೆದುಕೊಂಡಳು ಎಂಬುದನ್ನು ಪರಿಗಣಿಸಿ. ಪ್ರೌಢ ಶಾಲೆಯಲ್ಲಿ ಅವಳು ಆಟ-ಪಾಠ ಎರಡರಲ್ಲಿಯೂ ಮಿಂಚಿದ ಕಾರಣ ಪಾರಿತೋಷಕಗಳನ್ನು ಗೆದ್ದಳು. ಪ್ರೌಢ ಶಾಲೆಯನ್ನು ಮುಗಿಸಿದಾಗ ಅವಳಿಗೆ ಸ್ಕಾಲರ್‌ಷಿಪ್‌ ಕೊಡಲಾಯಿತು. ಇದರಿಂದ ಅವಳು ಉನ್ನತ ಶಿಕ್ಷಣ ಪಡೆಯಸಾಧ್ಯವಿತ್ತು. ಶೆರೀ ಹೇಳುವುದು: “ಆ ನೀಡಿಕೆ ತುಂಬ ಆಕರ್ಷಕವಾಗಿತ್ತು. ಕೋಚ್‌ಗಳು ಮತ್ತು ಸಹಪಾಠಿಗಳು ಅದನ್ನು ಸ್ವೀಕರಿಸುವಂತೆ ತುಂಬ ಒತ್ತಡ ಹಾಕಿದರು.” ಆದರೆ ಹೆಚ್ಚಿನ ವಿದ್ಯಾಭ್ಯಾಸವನ್ನು ಬೆನ್ನಟ್ಟುವುದರಿಂದ ಓದುವುದರಲ್ಲೇ ಮತ್ತು ಆಟೋಟಗಳ ಸ್ಪರ್ಧೆಗಾಗಿ ತಯಾರಿಸುವುದರಲ್ಲೇ ಹೆಚ್ಚಿನ ಸಮಯ ಹೋಗಿಬಿಡುವುದು ಎಂದವಳು ಗ್ರಹಿಸಿದಳು. ಇದರಿಂದ ಯೆಹೋವನ ಸೇವೆ ಮಾಡಲು ಸಮಯ ಸಿಗಲಿಕ್ಕಿಲ್ಲ ಎಂದು ಅರಿತುಕೊಂಡಳು. ಶೆರೀ ಏನು ಮಾಡಿದಳು? ಅವಳು ಹೇಳುವುದು: “ಯೆಹೋವನಿಗೆ ಪ್ರಾರ್ಥಿಸಿದ ಬಳಿಕ ನಾನು ಆ ಸ್ಕಾಲರ್‌ಷಿಪ್‌ ಅನ್ನು ನಿರಾಕರಿಸಿದೆ ಮತ್ತು ರೆಗ್ಯುಲರ್‌ ಪಯನೀಯರಳಾಗಿ ಸೇವೆಮಾಡಲಾರಂಭಿಸಿದೆ.” ಈತನ್ಮಧ್ಯೆ ಅವಳು ಐದು ವರ್ಷಗಳಿಂದ ಪಯನೀಯರ್‌ ಸೇವೆ ಮಾಡುತ್ತಿದ್ದಾಳೆ. “ನನಗೆ ಯಾವುದೇ ವಿಷಾದಗಳಿಲ್ಲ. ಯೆಹೋವನನ್ನು ಸಂತೋಷಪಡಿಸುವ ತೀರ್ಮಾನವನ್ನು ಮಾಡಿದ್ದೇನೆ ಎಂಬುದನ್ನು ತಿಳಿದಿರುವುದೇ ನನಗೆ ಸಂತೋಷ. ನಿಜವಾಗಿ, ನೀವು ದೇವರ ರಾಜ್ಯವನ್ನು ಮೊದಲು ಇಡುವುದಾದರೆ ಬೇರೆಲ್ಲ ವಿಷಯಗಳು ನಿಮಗೆ ಕೂಡಿಸಲ್ಪಡುವವು” ಎಂದವಳು ಹೇಳುತ್ತಾಳೆ.—ಮತ್ತಾ. 6:33.

ಒಳ್ಳೇ ನಡತೆಯು ನೀವು ‘ನಿರ್ಮಲಹೃದಯವುಳ್ಳವರೆಂದು’ ತೋರಿಸುತ್ತದೆ

14. ನಿಮ್ಮ ಒಳ್ಳೇ ನಡತೆ ಯೆಹೋವನ ದೃಷ್ಟಿಯಲ್ಲಿ ಪ್ರಾಮುಖ್ಯವೇಕೆ?

14 ನೀವು ಸಿದ್ಧಮನಸ್ಸಿನಿಂದ ಯೆಹೋವನ ಸೇವೆ ಮಾಡುತ್ತಿದ್ದೀರಿ ಎಂಬುದನ್ನು ತೋರಿಸಿಕೊಡುವ ಮೂರನೇ ವಿಧ ನಿಮ್ಮ ನಡತೆಯ ಮೂಲಕವೇ. ನೈತಿಕವಾಗಿ ಶುದ್ಧರಾಗಿ ಉಳಿಯುವ ಯುವ ಜನರನ್ನು ಯೆಹೋವನು ಆಶೀರ್ವದಿಸುತ್ತಾನೆ. (ಕೀರ್ತನೆ 24:3-5 ಓದಿ.) ಯುವ ಸಮುವೇಲನು ಮಹಾ ಯಾಜಕ ಏಲಿಯ ಪುತ್ರರ ಅನೈತಿಕ ನಡತೆಯನ್ನು ಅನುಕರಿಸಲು ನಿರಾಕರಿಸಿದನು. ಸಮುವೇಲನ ಸುನಡತೆ ಗಮನಕ್ಕೆ ಬಾರದೆ ಹೋಗಲಿಲ್ಲ. ಬೈಬಲ್‌ ದಾಖಲೆ ತಿಳಿಸುವುದು: “ಬಾಲಕನಾದ ಸಮುವೇಲನು ಬೆಳೆಯುತ್ತಾ ಬಂದನು. ಅವನು ಯೆಹೋವನ ಮುಂದೆಯೂ ಮನುಷ್ಯರ ಮುಂದೆಯೂ ಒಳ್ಳೆಯವನಾಗಿದ್ದನು.”—1 ಸಮು. 2:26 NIBV.

15. ನೀವು ಒಳ್ಳೇ ನಡತೆಯನ್ನು ಕಾಪಾಡಿಕೊಳ್ಳಲಿಕ್ಕಾಗಿ ಇರುವ ಕೆಲವು ಕಾರಣಗಳಾವುವು?

15 ಜನರು ಸ್ವಪ್ರೇಮಿಗಳೂ ಅಹಂಕಾರಿಗಳೂ ಹೆತ್ತವರಿಗೆ ಅವಿಧೇಯರೂ ಕೃತಜ್ಞತೆಯಿಲ್ಲದವರೂ ನಿಷ್ಠೆಯಿಲ್ಲದವರೂ ಉಗ್ರರೂ ಹೆಮ್ಮೆಯಿಂದ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸುವ ಬದಲು ಭೋಗವನ್ನು ಪ್ರೀತಿಸುವವರೂ ಆಗಿರುವ ಲೋಕದಲ್ಲಿ ನಾವು ಜೀವಿಸುತ್ತಿದ್ದೇವೆ. ಪೌಲನು ಪಟ್ಟಿಮಾಡಿದ ಗುಣಲಕ್ಷಣಗಳಲ್ಲಿ ಇವು ಕೆಲವು ಮಾತ್ರ. (2 ತಿಮೊ. 3:1-5) ಆದುದರಿಂದ ಈ ದುಷ್ಟ ವಾತಾವರಣದ ಮಧ್ಯೆಯೂ ಆದರ್ಶಪ್ರಾಯ ನಡತೆಯನ್ನು ಕಾಪಾಡಿಕೊಳ್ಳುವುದು ನಿಮಗೆ ದೊಡ್ಡ ಸವಾಲಾಗಿರಬಹುದು. ಆದರೂ ಪ್ರತಿ ಸಾರಿ ನೀವು ಸರಿಯಾದುದನ್ನು ಮಾಡುತ್ತಾ ಕೆಟ್ಟ ನಡತೆಯನ್ನು ತ್ಯಜಿಸುವಾಗ ವಿಶ್ವ ಪರಮಾಧಿಕಾರದ ವಿವಾದಾಂಶದಲ್ಲಿ ನೀವು ಯೆಹೋವನ ಪಕ್ಷದಲ್ಲಿದ್ದೀರಿ ಎಂದು ರುಜುಪಡಿಸುತ್ತೀರಿ. (ಯೋಬ 2:3, 4) “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರಕೊಡಲಾಗುವದು” ಎಂಬ ಯೆಹೋವನ ಸೌಹಾರ್ದಯುತ ಮನವಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದೀರಿ ಎಂಬ ತೃಪ್ತಿ ಕೂಡ ನಿಮಗಿರುವುದು. (ಜ್ಞಾನೋ. 27:11) ಮಾತ್ರವಲ್ಲದೆ ನಿಮಗೆ ಯೆಹೋವನ ಅನುಗ್ರಹವಿದೆ ಎಂಬುದನ್ನು ತಿಳಿದಿರುವುದು ಆತನನ್ನು ಸೇವಿಸಬೇಕೆಂಬ ನಿಮ್ಮ ಅಪೇಕ್ಷೆಯನ್ನು ಬಲಪಡಿಸುವುದು.

16. ಒಬ್ಬಾಕೆ ಸಹೋದರಿ ಯೆಹೋವನ ಹೃದಯವನ್ನು ಹೇಗೆ ಸಂತೋಷಪಡಿಸಿದಳು?

16 ಕ್ಯಾರಲ್‌ ಎಂಬ ಕ್ರೈಸ್ತ ಸಹೋದರಿ ಹದಿಪ್ರಾಯದಲ್ಲಿ ಶಾಲೆಗೆ ಹೋಗುತ್ತಿದ್ದಾಗ ಬೈಬಲ್‌ ಮೂಲತತ್ತ್ವಗಳಿಗೆ ಸ್ಥಿರನಿಂತರು. ಅವರ ಒಳ್ಳೇ ನಡತೆ ಗಮನಕ್ಕೆ ಬಾರದೆ ಹೋಗಲಿಲ್ಲ. ಆದದ್ದೇನು? ಕ್ಯಾರಲ್‌ರ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿ ಹಬ್ಬದ ಆಚರಣೆಗಳಲ್ಲಿ ಮತ್ತು ದೇಶಭಕ್ತಿಯ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದನ್ನು ಅನುಮತಿಸಲಿಲ್ಲವಾದ್ದರಿಂದ ಅವರ ಸಹಪಾಠಿಗಳು ಅವರನ್ನು ಗೇಲಿಮಾಡಿದರು. ಅಂಥ ಸಂದರ್ಭಗಳಲ್ಲಿ, ಕೆಲವೊಮ್ಮೆ ತಮ್ಮ ನಂಬಿಕೆಗಳ ಕುರಿತು ಇತರರಿಗೆ ವಿವರಿಸುವ ಸದವಕಾಶ ಅವರಿಗೆ ಸಿಕ್ಕಿತು. ಅನೇಕ ವರ್ಷಗಳ ನಂತರ ಕ್ಯಾರಲ್‌ಗೆ ಹಿಂದಿನ ಸಹಪಾಠಿಯು ಒಂದು ಕಾರ್ಡ್‌ ಕಳುಹಿಸಿದರು. ಸಹಪಾಠಿ ಬರೆದದ್ದು: “ನಿನ್ನನ್ನು ಸಂಪರ್ಕಿಸಿ ಧನ್ಯವಾದ ಹೇಳಬೇಕೆಂಬ ಆಶೆ ನನಗೆ ಯಾವಾಗಲೂ ಇತ್ತು. ನಿನ್ನ ಒಳ್ಳೇ ನಡತೆ, ಕ್ರೈಸ್ತ ಯುವತಿಯಾಗಿ ನೀನಿಟ್ಟ ಮಾದರಿ ಮತ್ತು ಹಬ್ಬಗಳ ವಿಷಯದಲ್ಲಿ ನೀನು ತೆಗೆದುಕೊಂಡ ಧೀರ ನಿಲುವು ಗಮನಕ್ಕೆ ಬಾರದೆ ಹೋಗಲಿಲ್ಲ. ನಾನು ಭೇಟಿಯಾದ ಯೆಹೋವನ ಸಾಕ್ಷಿಗಳಲ್ಲಿ ನೀನೇ ಮೊದಲಿಗಳು.” ಕ್ಯಾರಲ್‌ರ ಮಾದರಿ ಅವರ ಸಹಪಾಠಿಯ ಮೇಲೆ ಎಷ್ಟು ಗಾಢ ಪರಿಣಾಮ ಬೀರಿತ್ತೆಂದರೆ ಅವರು ತದನಂತರ ಬೈಬಲನ್ನು ಅಧ್ಯಯನ ಮಾಡಲಾರಂಭಿಸಿದ್ದರು. ಕ್ಯಾರಲ್‌ರಿಗೆ ಬರೆದ ಕಾರ್ಡಿನಲ್ಲಿ, ತಾನೊಬ್ಬ ಸ್ನಾತ ಸಾಕ್ಷಿಯಾಗಿ ಈಗಾಗಲೇ 40 ವರ್ಷಗಳು ಕಳೆದಿವೆ ಎಂದು ಅವರು ತಿಳಿಸಿದ್ದರು! ಕ್ಯಾರಲ್‌ರಂತೆ ಇಂದು ಬೈಬಲಿನ ಮೂಲತತ್ತ್ವಗಳಿಗೆ ಧೈರ್ಯದಿಂದ ಸ್ಥಿರನಿಲ್ಲುವ ಯುವ ಜನರಾದ ನೀವು, ಸಹೃದಯದ ವ್ಯಕ್ತಿಗಳು ಯೆಹೋವನ ಕುರಿತು ತಿಳಿದುಕೊಳ್ಳುವಂತೆ ಪ್ರಚೋದಿಸಬಲ್ಲಿರಿ.

ಯೆಹೋವನನ್ನು ಘನಪಡಿಸುವ ಯುವ ಜನರು

17, 18. (ಎ) ನಿಮ್ಮ ಸಭೆಯಲ್ಲಿರುವ ಯುವ ಜನರ ಬಗ್ಗೆ ನಿಮಗೆ ಹೇಗನಿಸುತ್ತದೆ? (ಬಿ) ದೇವಭಯವುಳ್ಳ ಯುವ ಜನರಿಗೆ ಎಂಥ ಭವಿಷ್ಯತ್ತು ಕಾದಿದೆ?

17 ಸತ್ಯಾರಾಧನೆಯಲ್ಲಿ ಪಾಲ್ಗೊಳ್ಳುತ್ತಿರುವ ಸಾವಿರಾರು ಮಂದಿ ಹುರುಪುಳ್ಳ ಯುವ ಜನರನ್ನು ನೋಡುವುದು ಯೆಹೋವನ ಲೋಕವ್ಯಾಪಕ ಸಂಘಟನೆಯಲ್ಲಿರುವ ನಮಗೆಲ್ಲರಿಗೂ ರೋಮಾಂಚಕ ಅನುಭವ! ಈ ಯುವ ಜನರು ಯೆಹೋವನನ್ನು ಆರಾಧಿಸುವ ತಮ್ಮ ಅಪೇಕ್ಷೆಯನ್ನು ದೈನಂದಿನ ಬೈಬಲ್‌ ವಾಚನದ ಮೂಲಕ, ಪ್ರಾರ್ಥಿಸುವ ಮೂಲಕ ಮತ್ತು ದೇವರ ಚಿತ್ತಕ್ಕನುಗುಣವಾಗಿ ಕ್ರಿಯೆಗೈಯುವ ಮೂಲಕ ಬಲಪಡಿಸುತ್ತಾರೆ. ಇಂಥ ಆದರ್ಶಪ್ರಾಯ ಯುವ ಜನರು ತಮ್ಮ ಹೆತ್ತವರಿಗೆ ಮತ್ತು ಯೆಹೋವನ ಜನರೆಲ್ಲರಿಗೆ ಚೈತನ್ಯದ ಚಿಲುಮೆಯಾಗಿದ್ದಾರೆ.—ಜ್ಞಾನೋ. 23:24, 25.

18 ಭವಿಷ್ಯತ್ತಿನಲ್ಲಿ ದೇವರ ವಾಗ್ದತ್ತ ನೂತನ ಲೋಕಕ್ಕೆ ಪಾರಾಗಿ ಹೋಗುವವರಲ್ಲಿ ನಂಬಿಗಸ್ತ ಯುವ ಜನರು ಸಹ ಸೇರಿರುವರು. (ಪ್ರಕ. 7:9, 14) ಅಲ್ಲಿ ಅವರು ಯೆಹೋವನ ಮೇಲಣ ಗಣ್ಯತೆಯನ್ನು ಹೆಚ್ಚಿಸುತ್ತಾ ಹೋಗುವಾಗ ಅನೇಕಾನೇಕ ಆಶೀರ್ವಾದಗಳನ್ನು ಪಡೆದುಕೊಳ್ಳುವರು ಮಾತ್ರವಲ್ಲ ಯೆಹೋವನನ್ನು ನಿತ್ಯನಿರಂತರಕ್ಕೂ ಘನಪಡಿಸಲು ಸಾಧ್ಯವಿರುವುದು.—ಕೀರ್ತ. 148:12, 13.

ನೀವು ವಿವರಿಸಬಲ್ಲಿರೊ?

• ಇಂದು ಯುವ ಜನರು ಸತ್ಯಾರಾಧನೆಯಲ್ಲಿ ಹೇಗೆ ಪಾಲ್ಗೊಳ್ಳಬಲ್ಲರು?

• ಬೈಬಲ್‌ ವಾಚನದಿಂದ ನೀವು ಪ್ರಯೋಜನ ಪಡೆಯಬೇಕಾದರೆ ಮನನ ಮಾಡುವುದು ಏಕೆ ಅವಶ್ಯ?

• ಯೆಹೋವನ ಸಮೀಪಕ್ಕೆ ಬರಲು ಪ್ರಾರ್ಥನೆ ನಿಮಗೆ ಹೇಗೆ ಸಹಾಯಮಾಡುತ್ತದೆ?

• ಒಬ್ಬ ಕ್ರೈಸ್ತನ ಒಳ್ಳೇ ನಡತೆಯಿಂದ ಏನು ಸಾಧಿಸಲ್ಪಡುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 5ರಲ್ಲಿರುವ ಚಿತ್ರ]

ದೈನಂದಿನ ಬೈಬಲ್‌ ವಾಚನ ನಿಮ್ಮ ವಾಡಿಕೆಯೊ?