ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ನಿಮ್ಮನ್ನು ಪ್ರಶ್ನಿಸುವಂತೆ ಬಿಡುತ್ತೀರೊ?

ಯೆಹೋವನು ನಿಮ್ಮನ್ನು ಪ್ರಶ್ನಿಸುವಂತೆ ಬಿಡುತ್ತೀರೊ?

ಯೆಹೋವನು ನಿಮ್ಮನ್ನು ಪ್ರಶ್ನಿಸುವಂತೆ ಬಿಡುತ್ತೀರೊ?

ಬೈಬಲಿನಲ್ಲಿ ಹೃದಯದಾಳವನ್ನು ಹೊಕ್ಕಿನೋಡಬಲ್ಲ ನೂರಾರು ಪ್ರಶ್ನೆಗಳು ಅಡಕವಾಗಿವೆ. ನಿಜವೇನೆಂದರೆ ಯೆಹೋವನು ತಾನೇ ಪ್ರಾಮುಖ್ಯ ಸತ್ಯಗಳನ್ನು ಕಲಿಸಲಿಕ್ಕಾಗಿ ಪ್ರಶ್ನೆಗಳನ್ನು ಉಪಯೋಗಿಸುತ್ತಾನೆ. ಉದಾಹರಣೆಗೆ, ಕಾಯಿನನ ವಿನಾಶಕರ ಮಾರ್ಗವನ್ನು ತಿದ್ದಲು ಎಚ್ಚರಿಸುವಾಗ ಯೆಹೋವನು ಅವನಿಗೆ ಅನೇಕ ಪ್ರಶ್ನೆಗಳನ್ನು ಕೇಳಿದನು. (ಆದಿ. 4:6, 7) ಬೇರೆ ಕೆಲವು ಸಂದರ್ಭಗಳಲ್ಲಿ ಯೆಹೋವನು ಕೇಳಿದ ಒಂದೇ ಒಂದು ಪ್ರಶ್ನೆಯು ವ್ಯಕ್ತಿಯೊಬ್ಬನು ಕ್ರಿಯೆಗೈಯುವಂತೆ ಪ್ರಚೋದಿಸಲು ಸಾಕಾಗಿತ್ತು. ‘ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು?’ ಎಂಬ ಯೆಹೋವನ ಒಂದೇ ಪ್ರಶ್ನೆಗೆ, ಪ್ರವಾದಿ ಯೆಶಾಯನು “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದು ಉತ್ತರಿಸಿದನು.—ಯೆಶಾ. 6:8.

ಮಹಾ ಬೋಧಕನಾದ ಯೇಸು ಸಹ ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿದನು. ಯೇಸು ಕೇಳಿದ 280ಕ್ಕಿಂತಲೂ ಹೆಚ್ಚು ಪ್ರಶ್ನೆಗಳನ್ನು ಸುವಾರ್ತಾ ವೃತ್ತಾಂತಗಳು ದಾಖಲಿಸುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ತನ್ನನ್ನು ಟೀಕಿಸುವವರ ಬಾಯಿಮುಚ್ಚಿಸಲು ಅವನು ಪ್ರಶ್ನೆಗಳನ್ನು ಉಪಯೋಗಿಸಿದನಾದರೂ ಅವನು ಹೆಚ್ಚಾಗಿ ಪ್ರಶ್ನೆಗಳನ್ನು ಕೇಳಿದ್ದು ಕೇಳುಗರ ಹೃದಯವನ್ನು ತಲಪಲಿಕ್ಕಾಗಿ ಮತ್ತು ಆ ಮೂಲಕ ಅವರು ತಮ್ಮ ಆಧ್ಯಾತ್ಮಿಕ ಸ್ಥಿತಿಯ ಬಗ್ಗೆ ಆಲೋಚಿಸುವಂತೆ ಮಾಡುವ ಉದ್ದೇಶದಿಂದಲೇ. (ಮತ್ತಾ. 22:41-46; ಯೋಹಾ. 14:9, 10) ತದ್ರೀತಿಯಲ್ಲಿ ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ 14 ಪುಸ್ತಕಗಳನ್ನು ಬರೆದ ಅಪೊಸ್ತಲ ಪೌಲನು ಪ್ರಶ್ನೆಗಳನ್ನು ಒಡಂಬಡಿಸುವಂಥ ರೀತಿಯಲ್ಲಿ ಉಪಯೋಗಿಸಿದನು. (ರೋಮ. 10:13-15) ಉದಾಹರಣೆಗೆ, ರೋಮನ್ನರಿಗೆ ಅವನು ಬರೆದ ಪತ್ರದಲ್ಲಿ ಎಷ್ಟೋ ಪ್ರಶ್ನೆಗಳಿವೆ. ಪೌಲನ ಪ್ರಶ್ನೆಗಳು ಅವನ ಓದುಗರನ್ನು ‘ದೇವರ ಐಶ್ವರ್ಯ, ವಿವೇಕ ಮತ್ತು ಜ್ಞಾನದ ಅಗಾಧತೆಯನ್ನು’ ಗಣ್ಯಮಾಡುವಂತೆ ಪ್ರಚೋದಿಸುತ್ತವೆ.—ರೋಮ. 11:33.

ಕೆಲವು ಪ್ರಶ್ನೆಗಳು ಬಾಯಿಮಾತಿನ ಉತ್ತರವನ್ನು ಪ್ರೇರಿಸುತ್ತವೆಯಾದರೂ ಇನ್ನಿತರ ಪ್ರಶ್ನೆಗಳು ಗಾಢವಾಗಿ ಆಲೋಚಿಸುವಂತೆ ಪ್ರಚೋದಿಸಲಿಕ್ಕಾಗಿ ಇವೆ. ಆಲೋಚಿಸುವಂತೆ ಮಾಡುವಂಥ ಪ್ರಶ್ನೆಗಳನ್ನು ಯೇಸು ಹೆಚ್ಚಾಗಿ ಉಪಯೋಗಿಸಿದ್ದನ್ನು ಸುವಾರ್ತೆಗಳು ದಾಖಲಿಸಿವೆ. ಒಂದು ಸಂದರ್ಭದಲ್ಲಿ ಯೇಸು ತನ್ನ ಶಿಷ್ಯರಿಗೆ, “ಫರಿಸಾಯರ ಹುಳಿಹಿಟ್ಟಿನ ವಿಷಯದಲ್ಲಿಯೂ ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿಯೂ” ಅಂದರೆ ಅವರ ಕಪಟತನ ಮತ್ತು ಸುಳ್ಳು ಬೋಧನೆಗಳ ವಿಷಯದಲ್ಲಿ “ಜಾಗ್ರತೆಯಿಂದಿರಿ” ಎಂದು ಎಚ್ಚರಿಸಿದನು. (ಮಾರ್ಕ 8:15; ಮತ್ತಾ. 16:12) ಆದರೆ ಯೇಸುವಿನ ಶಿಷ್ಯರಿಗೆ ವಿಷಯ ಅರ್ಥವಾಗಲಿಲ್ಲ. ಯೇಸು ರೊಟ್ಟಿಯ ಕುರಿತು ಮಾತಾಡುತ್ತಾನೆಂದು ನೆನಸಿ ತಾವು ರೊಟ್ಟಿ ತರಲು ಮರೆತ ಬಗ್ಗೆ ಅವರು ತಮ್ಮೊಳಗೆ ಚರ್ಚಿಸಲಾರಂಭಿಸಿದರು. ಅದನ್ನು ಹಿಂಬಾಲಿಸಿದ ಚುಟುಕಾದ ಸಂಭಾಷಣೆಯಲ್ಲಿ ಯೇಸು ಪ್ರಶ್ನೆಗಳನ್ನು ಉಪಯೋಗಿಸಿದ್ದನ್ನು ಗಮನಿಸಿ. “ಅವನು ಅವರಿಗೆ, ‘ನೀವು ರೊಟ್ಟಿಯಿಲ್ಲವಲ್ಲಾ ಎಂದು ಚರ್ಚಿಸುತ್ತಿರುವುದೇಕೆ? ನೀವು ಇನ್ನೂ ಗ್ರಹಿಸದೆಯೂ ತಿಳಿದುಕೊಳ್ಳದೆಯೂ ಇದ್ದೀರೊ? ನಿಮ್ಮ ಹೃದಯಗಳು ವಿಷಯಗಳನ್ನು ಅರ್ಥಮಾಡಿಕೊಳ್ಳಲಾರದಷ್ಟು ಮಂದವಾಗಿವೆಯೊ? “ನಿಮಗೆ ಕಣ್ಣಿದ್ದರೂ ಕಾಣುವುದಿಲ್ಲವೊ? ಕಿವಿಯಿದ್ದರೂ ಕೇಳುವುದಿಲ್ಲವೊ?” . . . ನೀವು ಇನ್ನೂ ಅರ್ಥವನ್ನು ಗ್ರಹಿಸಲಿಲ್ಲವೊ?’” ಯೇಸುವಿನ ಪ್ರಶ್ನೆಗಳು ಮಾನಸಿಕ ಪ್ರತಿಕ್ರಿಯೆಯನ್ನು ಕೇಳಿಕೊಂಡವು, ಅವನ ಮಾತುಗಳ ಸರಿಯಾದ ಅರ್ಥದ ಕುರಿತು ಶಿಷ್ಯರು ಯೋಚಿಸುವಂತೆ ಪ್ರಚೋದಿಸಲಿಕ್ಕಾಗಿ ಇದ್ದವು.—ಮಾರ್ಕ 8:16-21.

“ನಾನು ಪ್ರಶ್ನೆಮಾಡುವೆನು”

ಯೆಹೋವನು ತನ್ನ ಸೇವಕ ಯೋಬನ ಯೋಚನಾಧಾಟಿಯನ್ನು ಸರಿಪಡಿಸಲು ಪ್ರಶ್ನೆಗಳನ್ನು ಉಪಯೋಗಿಸಿದನು. ಯೆಹೋವನು ಅನೇಕ ಪ್ರಶ್ನೆಗಳನ್ನು ಕೇಳುವ ಮೂಲಕ ಯೋಬನು ತನ್ನ ನಿರ್ಮಾಣಿಕನ ಮುಂದೆ ಎಷ್ಟು ಅಲ್ಪನು ಎಂಬುದನ್ನು ಅವನಿಗೆ ಕಲಿಸಿದನು. (ಯೋಬ, ಅಧ್ಯಾ. 38-41) ತಾನು ಕೇಳಿದ ಪ್ರತಿಯೊಂದು ಪ್ರಶ್ನೆಗೆ ಯೋಬನಿಂದ ಬಾಯಿಮಾತಿನ ಉತ್ತರವನ್ನು ಯೆಹೋವನು ಅಪೇಕ್ಷಿಸಿದನೊ? ಹಾಗಿರಲಿಲ್ಲವೆಂದು ತೋರುತ್ತದೆ. “ನಾನು ಲೋಕಕ್ಕೆ ಅಸ್ತಿವಾರಹಾಕಿದಾಗ ನೀನು ಎಲ್ಲಿದ್ದಿ?” ಎಂಬಂಥ ಪ್ರಶ್ನೆಗಳು ಯೋಬನ ಯೋಚನೆಗಳನ್ನು ಮತ್ತು ಭಾವನೆಗಳನ್ನು ಬಡಿದೆಬ್ಬಿಸುವ ಉದ್ದೇಶದಿಂದ ಕೇಳಲ್ಪಟ್ಟಿದ್ದವು ಸ್ಪಷ್ಟ. ಆ ಕೆಲವು ಗಾಢ ಪ್ರಶ್ನೆಗಳನ್ನು ಕೇಳಿದಾಗ ಯೋಬನ ಬಾಯಿಂದ ಶಬ್ದಗಳೇ ಹೊರಡಲಿಲ್ಲ. ಅವನು ಬರೇ ಹೇಳಿದ್ದು: “ನಿನಗೆ ಪ್ರತ್ಯುತ್ತರವಾಗಿ ಏನು ಹೇಳಲಿ? ಬಾಯ ಮೇಲೆ ಕೈಯಿಟ್ಟುಕೊಳ್ಳುವೆನು.” (ಯೋಬ 38:4; 40:4) ಯೋಬನಿಗೆ ವಿಷಯವು ಅರ್ಥವಾಯಿತು ಮತ್ತು ಅವನು ತನ್ನನ್ನು ತಗ್ಗಿಸಿಕೊಂಡನು. ಆದರೆ ಯೋಬನು ದೀನನಾಗಿರುವಂತೆ ಮಾತ್ರ ಯೆಹೋವನು ಕಲಿಸುತ್ತಿರಲಿಲ್ಲ, ಅವನ ಯೋಚನಾಧಾಟಿಯನ್ನು ಸಹ ಸರಿಪಡಿಸಿದನು. ಹೇಗೆ?

ಯೋಬನು “ನಿರ್ದೋಷಿಯೂ ಯಥಾರ್ಥಚಿತ್ತನೂ” ಆಗಿದ್ದರೂ ಕೆಲವೊಮ್ಮೆ ಅವನ ಮಾತುಗಳು ಅವನಲ್ಲಿದ್ದ ತಪ್ಪು ದೃಷ್ಟಿಕೋನವನ್ನು ಬಿಂಬಿಸಿದವು. ಅದನ್ನು ಎಲೀಹು ಗಮನಿಸುತ್ತಾ, ಯೋಬನು ‘ದೇವರಿಗಿಂತಲೂ ತಾನೇ ನ್ಯಾಯವಂತನೆಂದು ಎಣಿಸಿಕೊಂಡನೆಂದು’ ಅವನನ್ನು ಗದರಿಸಿದನು. (ಯೋಬ 1:8; 32:2; 33:8-12) ಹೀಗೆ ಯೆಹೋವನು ಕೇಳಿದ ಪ್ರಶ್ನೆಗಳು ಯೋಬನ ತಿಳಿವಳಿಕೆಯನ್ನು ಸಹ ಸರಿಪಡಿಸಿದವು. ಬಿರುಗಾಳಿಯೊಳಗಿಂದ ಯೋಬನೊಂದಿಗೆ ಮಾತಾಡುತ್ತಾ ದೇವರು ಹೇಳಿದ್ದು: “ಅಜ್ಞಾನದ ಮಾತುಗಳಿಂದ ಸತ್ಯಾಲೋಚನೆಯನ್ನು ಮಂಕುಮಾಡುವ ಇವನು ಯಾರು? ಶೂರನಂತೆ ನಡುಕಟ್ಟಿಕೋ; ನಾನು ಪ್ರಶ್ನೆಮಾಡುವೆನು, ನೀನೇ ನನಗೆ ಉಪದೇಶಿಸು.” (ಯೋಬ 38:1-3) ಆಮೇಲೆ ಯೆಹೋವನು ಪ್ರಶ್ನೆಗಳ ಮೂಲಕ ಅದ್ಭುತಕರ ಸೃಷ್ಟಿಕಾರ್ಯಗಳಲ್ಲಿ ತೋರಿಬಂದಿರುವ ತನ್ನ ಅಪರಿಮಿತ ವಿವೇಕ ಹಾಗೂ ಶಕ್ತಿಯ ಕಡೆಗೆ ಯೋಬನ ಗಮನ ಸೆಳೆದನು. ಈ ಪ್ರಬೋಧನೆಯು, ಯೆಹೋವನ ನಿರ್ಣಯದಲ್ಲಿ ಹಾಗೂ ಆತನ ಕಾರ್ಯನಿರ್ವಹಣೆಯ ರೀತಿಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿ ಭರವಸೆಯಿಡುವಂತೆ ಯೋಬನಿಗೆ ಸಹಾಯಮಾಡಿತು. ಸರ್ವಶಕ್ತ ದೇವರಿಂದಲೇ ಪ್ರಶ್ನಿಸಲ್ಪಡುವ ಎಂಥ ಭಯಪ್ರೇರಕ ಅನುಭವ ಯೋಬನದ್ದಾಗಿತ್ತು!

ಯೆಹೋವನು ನಮ್ಮನ್ನು ಪ್ರಶ್ನಿಸುವಂತೆ ಬಿಡಬಲ್ಲ ವಿಧ

ನಮ್ಮ ಕುರಿತೇನು? ಬೈಬಲಿನಲ್ಲಿ ದಾಖಲಿಸಲಾಗಿರುವ ಪ್ರಶ್ನೆಗಳಿಂದ ನಾವೂ ಪ್ರಯೋಜನ ಪಡಕೊಳ್ಳಬಲ್ಲೆವೊ? ಖಂಡಿತವಾಗಿಯೂ! ಆ ಪ್ರಶ್ನೆಗಳು ನಮ್ಮನ್ನು ಯೋಚಿಸುವಂತೆ ಮಾಡಲು ನಾವು ಬಿಡುವುದಾದರೆ ಅದು ನಮಗೆ ಹೇರಳವಾದ ಆಧ್ಯಾತ್ಮಿಕ ಪ್ರಯೋಜನಗಳನ್ನು ತರಬಲ್ಲದು. ದೇವರ ವಾಕ್ಯದಲ್ಲಿರುವ ಪ್ರಭಾವಶಾಲಿ ಪ್ರಶ್ನೆಗಳು ಅದರ ಪರಿಣಾಮಕಾರಿತ್ವಕ್ಕೆ ಹೆಚ್ಚು ಸಹಾಯಕಾರಿ. ಏಕೆಂದರೆ “ದೇವರ ವಾಕ್ಯವು . . . ಪ್ರಬಲವಾದದ್ದೂ . . . ಹೃದಯದ ಆಲೋಚನೆಗಳನ್ನೂ ಸಂಕಲ್ಪಗಳನ್ನೂ ವಿವೇಚಿಸಲು ಶಕ್ತವಾಗಿರುವಂಥದ್ದೂ ಆಗಿದೆ.” (ಇಬ್ರಿ. 4:12) ಆದರೆ ಈ ಪ್ರಶ್ನೆಗಳಿಂದ ನಾವು ಹೆಚ್ಚು ಪ್ರಯೋಜನ ಪಡಕೊಳ್ಳಬೇಕಾದರೆ ಯೆಹೋವನು ನಮ್ಮನ್ನೇ ವೈಯಕ್ತಿಕವಾಗಿ ಪ್ರಶ್ನಿಸುತ್ತಿದ್ದಾನೋ ಎಂಬಂತೆ ಅವುಗಳನ್ನು ನೇರವಾಗಿ ನಮಗೇ ಕೇಳಿಕೊಳ್ಳುವ ಅಗತ್ಯವಿದೆ. (ರೋಮ. 15:4) ಕೆಲವೊಂದು ಉದಾಹರಣೆಗಳನ್ನು ನೋಡೋಣ.

“ಸರ್ವಲೋಕಕ್ಕೆ ನ್ಯಾಯತೀರಿಸುವವನು ನ್ಯಾಯವನ್ನೇ ನಡಿಸುವನಲ್ಲವೇ”? (ಆದಿ. 18:25) ಸೊದೋಮ್‌ ಮತ್ತು ಗೊಮೋರ ಪಟ್ಟಣಗಳ ಮೇಲೆ ದೇವರು ನ್ಯಾಯತೀರ್ಪು ವಿಧಿಸಲಿಕ್ಕಿದ್ದಾಗ ಅಬ್ರಹಾಮನು ಈ ಭಾವೋತ್ತೇಜಕ ಪ್ರಶ್ನೆಯನ್ನು ಯೆಹೋವನಿಗೆ ಕೇಳಿದನು. ಯೆಹೋವನು ಎಂದಾದರೂ ಅನ್ಯಾಯದಿಂದ ಕ್ರಿಯೆಗೈದು ದುಷ್ಟರೊಂದಿಗೆ ಶಿಷ್ಟರನ್ನೂ ನಾಶಮಾಡುತ್ತಾನೆಂಬುದು ಅಬ್ರಹಾಮನಿಗೆ ಯೋಚಿಸಲಸಾಧ್ಯವಾದ ಸಂಗತಿಯಾಗಿತ್ತು. ಅಬ್ರಹಾಮನ ಪ್ರಶ್ನೆಯು ಯೆಹೋವನ ನೀತಿಯಲ್ಲಿ ಅವನಿಗಿದ್ದ ಆಳವಾದ ನಂಬಿಕೆಯನ್ನು ತೋರಿಸಿಕೊಡುತ್ತದೆ.

ಇಂದು ಕೆಲವರು ಯೆಹೋವನ ಭಾವೀ ನ್ಯಾಯತೀರ್ಪಿನ ಕುರಿತಾಗಿ ಊಹಾಪೋಹಗಳನ್ನು ಮಾಡುವ ಪ್ರವೃತ್ತಿಯುಳ್ಳವರಾಗಿರಬಹುದು. ನಿಜವಾಗಿ ಯಾರು ಅರ್ಮಗೆದೋನನ್ನು ಪಾರಾಗುವರು ಅಥವಾ ಯಾರಿಗೆಲ್ಲ ಪುನರುತ್ಥಾನವಾಗುವುದು ಎಂಬುದರ ಬಗ್ಗೆ ಅವರು ಯೋಚಿಸಬಹುದು. ಆದರೆ ಅಂಥ ಯೋಚನೆಗಳು ನಮ್ಮನ್ನು ಚಿಂತೆಗೀಡುಮಾಡುವಂತೆ ಬಿಡುವ ಬದಲು ಅಬ್ರಹಾಮನ ಪ್ರಶ್ನೆಯನ್ನು ನಾವು ನೆನಪಿಸಿಕೊಳ್ಳಸಾಧ್ಯವಿದೆ. ಅಬ್ರಹಾಮನಂತೆ, ಯೆಹೋವನು ದಯಾಳುವಾದ ಸ್ವರ್ಗೀಯ ಪಿತ ಎಂದು ತಿಳಿದು ಆತನ ನ್ಯಾಯ ಮತ್ತು ಕರುಣೆಯಲ್ಲಿ ಪೂರ್ಣ ಭರವಸೆಯಿಡುವುದು ಅನಾವಶ್ಯಕ ಚಿಂತೆ, ಬಲಗುಂದಿಸುವ ಸಂದೇಹ ಹಾಗೂ ನಿಷ್ಪ್ರಯೋಜಕ ಚರ್ಚೆಯಲ್ಲಿ ಸಮಯ ವ್ಯರ್ಥಮಾಡುವುದರಿಂದ ನಮ್ಮನ್ನು ತಡೆಯುತ್ತದೆ.

“ಚಿಂತೆಮಾಡುವ ಮೂಲಕ ನಿಮ್ಮಲ್ಲಿ ಯಾರು ತನ್ನ ಆಯುಷ್ಯವನ್ನು ಸ್ವಲ್ಪವಾದರೂ ಹೆಚ್ಚಿಸಿಕೊಳ್ಳಬಲ್ಲನು?” (ಮತ್ತಾ. 6:27) ತಮ್ಮನ್ನು ಯೆಹೋವನ ಪ್ರೀತಿಯ ಹಸ್ತಗಳಲ್ಲಿ ಬಿಟ್ಟುಕೊಡುವ ಅಗತ್ಯವನ್ನು ಒತ್ತಿಹೇಳಲು ಯೇಸು ತನ್ನ ಶಿಷ್ಯರನ್ನೊಳಗೊಂಡ ಜನರ ಒಂದು ದೊಡ್ಡ ಗುಂಪಿಗೆ ಈ ಪ್ರಶ್ನೆಯನ್ನು ಕೇಳಿದನು. ಈ ದುಷ್ಟ ವಿಷಯಗಳ ವ್ಯವಸ್ಥೆಯ ಕಡೇ ದಿವಸಗಳು ಅನೇಕ ಚಿಂತೆಗಳನ್ನು ಬರಮಾಡುತ್ತವೆ. ಆದರೆ ಆ ಚಿಂತೆಗಳಲ್ಲೇ ಮುಳುಗಿಹೋಗುವುದು ನಮ್ಮ ಆಯುಷ್ಯವನ್ನೂ ಹೆಚ್ಚಿಸುವುದಿಲ್ಲ, ಜೀವನದ ಗುಣಮಟ್ಟವನ್ನೂ ಉತ್ತಮಗೊಳಿಸುವುದಿಲ್ಲ.

ನಮ್ಮ ಕುರಿತಾಗಲಿ ನಮ್ಮ ಪ್ರಿಯರ ಕುರಿತಾಗಲಿ ಚಿಂತೆಯಲ್ಲಿ ಮುಳುಗುವಾಗೆಲ್ಲ ನಾವು ಯೇಸುವಿನ ಪ್ರಶ್ನೆಯನ್ನು ನೆನಪಿಸಿಕೊಳ್ಳುವುದು ಚಿಂತೆಗಳನ್ನು ಯಥಾದೃಷ್ಟಿಯಲ್ಲಿ ನೋಡಲು ನೆರವಾಗುವುದು. ಇದು ಮಾನಸಿಕ, ಭಾವನಾತ್ಮಕ ಹಾಗೂ ಶಾರೀರಿಕ ಶಕ್ತಿಯನ್ನು ಬಸಿದುಬಿಡುವ ಚಿಂತೆಗಳನ್ನು ಹಾಗೂ ನಕಾರಾತ್ಮಕ ಯೋಚನೆಗಳನ್ನು ಮಾಡದಂತೆ ನಮಗೆ ಸಹಾಯಮಾಡುವುದು. ಯೇಸು ಆಶ್ವಾಸನೆಯಿತ್ತಂತೆ, ಆಕಾಶದ ಪಕ್ಷಿಗಳನ್ನು ಪೋಷಿಸುವ, ಹೊಲದ ಸಸ್ಯಗಳಿಗೆ ಉಡಿಸುವ ನಮ್ಮ ಸ್ವರ್ಗೀಯ ತಂದೆಗೆ ನಮಗೆ ಏನು ಅಗತ್ಯವೆಂಬುದು ಪೂರ್ಣವಾಗಿ ತಿಳಿದಿದೆ.—ಮತ್ತಾ. 6:26-34.

“ಮಡಲಲ್ಲಿ ಬೆಂಕಿಯನ್ನಿಟ್ಟುಕೊಂಡರೆ ಬಟ್ಟೆ ಸುಡುವದಿಲ್ಲವೇ?” (ಜ್ಞಾನೋ. 6:27) ಜ್ಞಾನೋಕ್ತಿ ಪುಸ್ತಕದ ಮೊದಲ ಒಂಭತ್ತು ಅಧ್ಯಾಯಗಳಲ್ಲಿ ಒಬ್ಬ ತಂದೆಯು ತನ್ನ ಮಗನಿಗೆ ಪ್ರಾಯೋಗಿಕ ವಿವೇಕವನ್ನು ನೀಡುವ ಚಿಕ್ಕ ಉಪದೇಶಗಳು ಒಳಗೂಡಿವೆ. ಮೇಲೆ ಉಲ್ಲೇಖಿಸಿದ ಪ್ರಶ್ನೆಯು ವ್ಯಭಿಚಾರದಿಂದ ಉಂಟಾಗುವ ದುಷ್ಪರಿಣಾಮಗಳಿಗೆ ಸೂಚಿಸುತ್ತದೆ. (ಜ್ಞಾನೋ. 6:29) ಒಂದುವೇಳೆ ನಾವು ಪ್ರಣಯ ಚೆಲ್ಲಾಟದ ನಡತೆ ಅಥವಾ ಯಾವುದೇ ತಪ್ಪಾದ ಲೈಂಗಿಕ ಅಭಿಲಾಷೆಗಳಲ್ಲಿ ತೊಡಗಿದ್ದೇವೆಂದು ಕಂಡರೆ ಈ ಪ್ರಶ್ನೆಯು ನಮ್ಮ ಮನಸ್ಸಿಗೆ ಎಚ್ಚರಿಕೆಯ ಕರೆಗಂಟೆಯಂತಿರಬೇಕು. ತತ್ತ್ವಾರ್ಥದಲ್ಲಿ ಈ ಪ್ರಶ್ನೆಯನ್ನು ವ್ಯಕ್ತಿಯೊಬ್ಬನು ಯಾವುದೇ ಅವಿವೇಕದ ಮಾರ್ಗಕ್ರಮದಲ್ಲಿ ತೊಡಗಲು ಪ್ರಲೋಭಿಸಲ್ಪಡುವಾಗೆಲ್ಲ ಕೇಳಿಕೊಳ್ಳಸಾಧ್ಯವಿದೆ. ‘ಏನು ಬಿತ್ತುತ್ತೇವೊ ಅದನ್ನೇ ಕೊಯ್ಯುವೆವು’ ಎಂಬ ಬೈಬಲಿನ ಪ್ರಾಯೋಗಿಕ ಮೂಲತತ್ತ್ವವನ್ನು ಈ ಪ್ರಶ್ನೆಯು ಎಷ್ಟು ಸ್ಪಷ್ಟವಾಗಿ ಒತ್ತಿಹೇಳುತ್ತದೆ!—ಗಲಾ. 6:7.

“ಇನ್ನೊಬ್ಬನ ಮನೆಯ ಸೇವಕನ ವಿಷಯವಾಗಿ ತೀರ್ಪುಮಾಡುವುದಕ್ಕೆ ನೀನು ಯಾರು?” (ರೋಮ. 14:4) ರೋಮನ್ನರಿಗೆ ಬರೆದ ತನ್ನ ಪತ್ರದಲ್ಲಿ ಪೌಲನು ಪ್ರಥಮ ಶತಮಾನದ ಸಭೆಯಲ್ಲಿ ಎದ್ದ ಸಮಸ್ಯೆಗಳ ಕುರಿತು ಚರ್ಚಿಸುತ್ತಾನೆ. ಬೇರೆ ಬೇರೆ ಸಾಂಸ್ಕೃತಿಕ ಹಿನ್ನೆಲೆಗಳಿಂದ ಬಂದಿದ್ದ ಕೆಲವು ಕ್ರೈಸ್ತರು ತಮ್ಮ ಜೊತೆವಿಶ್ವಾಸಿಗಳ ನಿರ್ಣಯಗಳ ಮತ್ತು ಕ್ರಿಯೆಗಳ ಕುರಿತು ತೀರ್ಪುಮಾಡುವ ಪ್ರವೃತ್ತಿಯುಳ್ಳವರಾಗಿದ್ದರು. ಪೌಲನು ಕೇಳಿದ ಪ್ರಶ್ನೆಯು ಅವರು ಒಬ್ಬರನ್ನೊಬ್ಬರು ಸಂತೋಷದಿಂದ ಸ್ವೀಕರಿಸುವಂತೆ ಹಾಗೂ ತೀರ್ಪುಮಾಡುವುದನ್ನು ಯೆಹೋವನ ಕೈಯಲ್ಲಿ ಬಿಟ್ಟುಬಿಡುವಂತೆ ಮರುಜ್ಞಾಪನ ಕೊಟ್ಟಿತು.

ತದ್ರೀತಿಯಲ್ಲಿ, ಇಂದು ಯೆಹೋವನ ಜನರು ಸಹ ಬೇರೆ ಬೇರೆ ಹಿನ್ನೆಲೆಗಳಿಂದ ಬಂದಿರುತ್ತಾರೆ. ಆದರೂ ಯೆಹೋವನು ನಮ್ಮನ್ನು ಒಂದು ಅಮೂಲ್ಯ ಐಕ್ಯತೆಯಲ್ಲಿ ಒಟ್ಟುಗೂಡಿಸಿದ್ದಾನೆ. ನಾವು ಆ ಐಕ್ಯತೆಯನ್ನು ಹೆಚ್ಚಿಸಲು ನೆರವಾಗುತ್ತೇವೊ? ಒಂದುವೇಳೆ ಇನ್ನೊಬ್ಬ ಸಹೋದರನು ಮನಃಪೂರ್ವಕವಾಗಿ ಮಾಡಿದ ಕೆಲಸಕ್ಕೆ ತಟ್ಟನೆ ಅಸಮ್ಮತಿ ಸೂಚಿಸುವ ಪ್ರವೃತ್ತಿ ನಮ್ಮಲ್ಲಿರುವುದಾದರೆ ಪೌಲನು ಕೇಳಿದ ಮೇಲಿನ ಪ್ರಶ್ನೆಯನ್ನು ನಮಗೆ ಕೇಳಿಕೊಳ್ಳುವುದು ಎಷ್ಟು ವಿವೇಕಯುತ!

ಪ್ರಶ್ನೆಗಳು ನಮ್ಮನ್ನು ಯೆಹೋವನ ಸಮೀಪಕ್ಕೆ ಬರುವಂತೆ ಮಾಡುತ್ತವೆ

ಈ ಕೆಲವು ಉದಾಹರಣೆಗಳು ದೇವರ ವಾಕ್ಯದಲ್ಲಿ ಅಡಕವಾಗಿರುವ ಪ್ರಶ್ನೆಗಳಿಗಿರುವ ಶಕ್ತಿಯನ್ನು ತೋರಿಸುತ್ತವೆ. ಪ್ರತಿಯೊಂದು ಪ್ರಶ್ನೆಯ ಪೂರ್ವಾಪರವನ್ನು ಪರಿಗಣಿಸುವುದು ನಮ್ಮ ಸ್ವಂತ ಸನ್ನಿವೇಶಗಳಿಗೆ ಅದನ್ನು ಪ್ರಾಯೋಗಿಕವಾಗಿ ಅನ್ವಯಿಸಲು ಸಹಾಯಮಾಡಬಲ್ಲದು. ಅಲ್ಲದೆ ಬೈಬಲನ್ನು ಓದುತ್ತಾ ಹೋದಂತೆ ಇನ್ನೂ ಅನೇಕ ಸಹಾಯಕಾರಿ ಪ್ರಶ್ನೆಗಳನ್ನು ನಾವು ಕಂಡುಕೊಳ್ಳುವೆವು.—ಪುಟ 14ರಲ್ಲಿರುವ ಚೌಕ ನೋಡಿ.

ದೇವರ ವಾಕ್ಯದಲ್ಲಿ ಕಂಡುಬರುವ ಮನೋಭೇದಕ ಪ್ರಶ್ನೆಗಳು ನಮ್ಮನ್ನು ಆಳವಾಗಿ ಪ್ರಭಾವಿಸುವಂತೆ ಬಿಡುವ ಮೂಲಕ ನಮ್ಮ ಹೃದಮನಗಳನ್ನು ಯೆಹೋವನ ನೀತಿಯುತ ಮಾರ್ಗಗಳಿಗೆ ಹೊಂದಿಕೆಯಲ್ಲಿ ತರಲು ಸಹಾಯವಾಗುವುದು. ಯೆಹೋವನು ಪ್ರಶ್ನಿಸಿದ ನಂತರ ಯೋಬನು ದೃಢವಾಗಿ ಹೇಳಿದ್ದು: “ಕಿವಿಯಿಂದ ನಿನ್ನ ವಿಷಯವನ್ನು ಕೇಳಿದ್ದೆನು, ಈಗಲಾದರೋ ನಿನ್ನನ್ನೇ ಕಣ್ಣಾರೆ ಕಂಡೆನು.” (ಯೋಬ 42:5) ಹೌದು, ಯೋಬನಿಗೆ ಯೆಹೋವನು ಅವನ ಕಣ್ಣ ಮುಂದೆಯೇ ಇದ್ದನೋ ಎಂಬಷ್ಟು ನೈಜನಾಗಿದ್ದನು. ಇದನ್ನು ತದನಂತರ ಶಿಷ್ಯ ಯಾಕೋಬನು ಹೀಗೆ ವ್ಯಕ್ತಪಡಿಸಿದನು: “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” (ಯಾಕೋ. 4:8) ಆದ್ದರಿಂದ ಪ್ರಶ್ನೆಗಳೂ ಸೇರಿದಂತೆ ದೇವರ ವಾಕ್ಯದ ಪ್ರತಿಯೊಂದು ಭಾಗವು ನಾವು ಆಧ್ಯಾತ್ಮಿಕವಾಗಿ ಬೆಳೆಯುವಂತೆ ಹಾಗೂ ಯೆಹೋವನನ್ನು ಇನ್ನೂ ಸ್ಪಷ್ಟವಾಗಿ ‘ಕಾಣಲು’ ಸಹಾಯಮಾಡುವಂತೆ ಬಿಡೋಣ.

[ಪುಟ 14ರಲ್ಲಿರುವ ಚೌಕ]

ಯೆಹೋವನ ದೃಷ್ಟಿಕೋನವನ್ನು ಸ್ವೀಕರಿಸುವಂತೆ ನೆರವಾಗಲು ನೀವು ಈ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಹೇಗೆ ಸಹಾಯಕರ?

▪ “ಯೆಹೋವನು ವಿಧೇಯತ್ವಕ್ಕೆ ಮೆಚ್ಚುವಷ್ಟು ಯಜ್ಞಹೋಮಗಳಿಗೆ ಮೆಚ್ಚುತ್ತಾನೋ?”—1 ಸಮು. 15:22.

▪ “ಕಣ್ಣುಕೊಟ್ಟವನು ನೋಡನೋ?”—ಕೀರ್ತ. 94:9.

▪ “ಸೋಮಾರಿಯೇ, ಎಷ್ಟು ಹೊತ್ತು ನಿದ್ರೆ? ನಿದ್ರೆಯಿಂದ ಯಾವಾಗ ಎಚ್ಚರಗೊಳ್ಳುವಿ?”—ಜ್ಞಾನೋ. 6:9.

▪ “ನೀನು ಸಿಟ್ಟುಗೊಳ್ಳುವದು ಸರಿಯೋ”? —ಯೋನ 4:4.

▪ “ಒಬ್ಬ ಮನುಷ್ಯನು ಇಡೀ ಲೋಕವನ್ನೇ ಸಂಪಾದಿಸಿಕೊಂಡರೂ ಪ್ರಾಣನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು?”—ಮತ್ತಾ. 16:26.

▪ “ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಅಗಲಿಸುವವರು ಯಾರು?”—ರೋಮ. 8:35.

▪ “ಹೊಂದದೇ ಇರುವಂಥದ್ದು ನಿನ್ನಲ್ಲಿ ಯಾವುದಿದೆ?”—1 ಕೊರಿಂ. 4:7.

▪ “ಬೆಳಕಿಗೂ ಕತ್ತಲೆಗೂ ಐಕ್ಯವೇನು?”—2 ಕೊರಿಂ. 6:14.

[ಪುಟ 15ರಲ್ಲಿರುವ ಚಿತ್ರ]

ಯೆಹೋವನ ಪ್ರಶ್ನೆಗಳಿಂದ ಯೋಬನು ಏನು ಕಲಿತನು?