ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಉದ್ದೇಶದ ನೆರವೇರಿಕೆಯಲ್ಲಿ ಪವಿತ್ರಾತ್ಮದ ಪಾತ್ರ

ಯೆಹೋವನ ಉದ್ದೇಶದ ನೆರವೇರಿಕೆಯಲ್ಲಿ ಪವಿತ್ರಾತ್ಮದ ಪಾತ್ರ

ಯೆಹೋವನ ಉದ್ದೇಶದ ನೆರವೇರಿಕೆಯಲ್ಲಿ ಪವಿತ್ರಾತ್ಮದ ಪಾತ್ರ

‘ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸುವುದು.’—ಯೆಶಾ. 55:11.

1. ಯೋಜನೆ ಮತ್ತು ಉದ್ದೇಶದ ನಡುವಣ ವ್ಯತ್ಯಾಸವನ್ನು ದೃಷ್ಟಾಂತಿಸಿ.

ಇಬ್ಬರು ಮನುಷ್ಯರು ಕಾರಿನ ಮೂಲಕ ತಮ್ಮ ತಮ್ಮ ಪ್ರಯಾಣಕ್ಕೆ ಸಿದ್ಧಗೊಳಿಸುತ್ತಿದ್ದಾರೆಂದು ನೆನಸಿ. ಒಬ್ಬನು ತಾನು ಮುಟ್ಟತಕ್ಕ ಸ್ಥಳವನ್ನು ಸೇರಲು ನಿರ್ದಿಷ್ಟವಾದ ಸವಿವರ ಪ್ರಯಾಣಮಾರ್ಗವನ್ನು ಯೋಜಿಸುತ್ತಾನೆ. ಇನ್ನೊಬ್ಬನು ಮುಟ್ಟತಕ್ಕ ಸ್ಥಳವನ್ನು ಮನಸ್ಸಿನಲ್ಲಿ ಸ್ಪಷ್ಟವಾಗಿಡುತ್ತಾನೆ, ಆದರೆ ಬೇರೆ ಅನೇಕ ದಾರಿಗಳು ಕೂಡ ಅವನಿಗೆ ಗೊತ್ತಿವೆ. ಯಾವುದೇ ಅನಿಶ್ಚಿತ ಪರಿಸ್ಥಿತಿಯಲ್ಲಿ ತನ್ನ ಪ್ರಯಾಣವನ್ನು ಅವಶ್ಯಕತೆಗೆ ಅನುಗುಣವಾಗಿ ಬದಲಾಯಿಸಿಕೊಳ್ಳಲು ಅವನು ಸಿದ್ಧನು. ಕೆಲವು ಅಂಶಗಳಲ್ಲಿ ಈ ಇಬ್ಬರು ಮನುಷ್ಯರು ಉಪಯೋಗಿಸುವ ಭಿನ್ನ ಭಿನ್ನ ವಿಧಾನಗಳು ಯೋಜನೆ ಮತ್ತು ಉದ್ದೇಶದ ನಡುವಣ ವ್ಯತ್ಯಾಸವನ್ನು ಚಿತ್ರಿಸುತ್ತವೆ. ಯೋಜನೆಯನ್ನು ಪ್ರಯಾಣಮಾರ್ಗದ ಸವಿವರ ಮಾಹಿತಿಯನ್ನು ಒಟ್ಟುಮಾಡುವುದಕ್ಕೆ ಹೋಲಿಸಬಹುದು. ಉದ್ದೇಶದಲ್ಲಿಯಾದರೋ ಮುಟ್ಟಲಿರುವ ಗುರಿಯು ಮನಸ್ಸಿನಲ್ಲಿದೆ, ಆದರೆ ಅದನ್ನು ಒಂದು ನಿರ್ದಿಷ್ಟ ವಿಧದಲ್ಲೇ ಮುಟ್ಟಬೇಕೆಂಬ ಅವಶ್ಯಕತೆಯಿಲ್ಲ, ಬೇರೆ ಬೇರೆ ವಿಧಾನಗಳನ್ನು ಉಪಯೋಗಿಸಬಹುದು.

2, 3. (ಎ) ಯೆಹೋವನ ಉದ್ದೇಶದಲ್ಲಿ ಏನು ಒಳಗೂಡಿದೆ, ಮತ್ತು ಆದಾಮಹವ್ವರು ಪಾಪಮಾಡಿದಾಗ ಎದ್ದ ಸನ್ನಿವೇಶವನ್ನು ಆತನು ಹೇಗೆ ನಿಭಾಯಿಸಿದನು? (ಬಿ) ಯೆಹೋವನು ತನ್ನ ಉದ್ದೇಶವನ್ನು ಹಂತಹಂತವಾಗಿ ನೆರವೇರಿಸುವ ವಿಧಕ್ಕೆ ನಾವು ನಮ್ಮ ಮನಸ್ಸನ್ನು ಏಕೆ ಅನುಗೊಳಿಸಬೇಕು?

2 ತನ್ನ ಚಿತ್ತವನ್ನು ನೆರವೇರಿಸುವ ವಿಷಯದಲ್ಲಾದರೋ ಯೆಹೋವನಿಗೆ ಒಂದು ಬದಲಾಯಿಸಲಾಗದ ಯೋಜನೆಯಿಲ್ಲ. ಬದಲಾಗಿ ಹಂತಹಂತವಾಗಿ ನೆರವೇರುವ ಒಂದು ಉದ್ದೇಶವಿದೆ. (ಎಫೆ. 3:11) ಈ ಉದ್ದೇಶದಲ್ಲಿ ಆತನು ಮಾನವರು ಮತ್ತು ಭೂಮಿಗಾಗಿ ಆರಂಭದಲ್ಲಿ ಬಯಸಿದ ಅಂದರೆ ಈ ಭೂಮಿಯನ್ನು ಪರದೈಸ ಭೂಮಿಯಾಗಿ ಮಾರ್ಪಡಿಸುವ ವಿಷಯವು ಒಳಗೂಡಿದೆ. ಅಲ್ಲಿ ಪರಿಪೂರ್ಣ ಮಾನವರು ಶಾಂತಿ ಮತ್ತು ಸಂತೋಷದಿಂದ ಸದಾ ಜೀವಿಸಬಲ್ಲರು. (ಆದಿ. 1:28) ಆದಾಮಹವ್ವರು ಪಾಪಮಾಡಿದಾಗ ಯೆಹೋವನು ಆ ಕೂಡಲೆ ಪ್ರತಿಕ್ರಿಯಿಸಿ ಆತನ ಉದ್ದೇಶವು ನೆರವೇರುವುದನ್ನು ಖಚಿತಪಡಿಸಿಕೊಳ್ಳುವ ಏರ್ಪಾಡುಗಳನ್ನು ಮಾಡಿದನು. (ಆದಿಕಾಂಡ 3:15 ಓದಿ.) ಆತನ ಸಾಂಕೇತಿಕ ಸ್ತ್ರೀ ಒಂದು ‘ಸಂತಾನವನ್ನು’ ಅಥವಾ ಮಗನನ್ನು ಹುಟ್ಟಿಸುವಂತೆ ಯೆಹೋವನು ನಿರ್ಧರಿಸಿದನು. ಈ ಮಗನು ಕಟ್ಟಕಡೆಗೆ ಚಿತಾವಣೆಗಾರ ಸೈತಾನನನ್ನು ನಾಶಗೊಳಿಸಿ ಅವನು ಮಾಡಿದ ಹಾನಿಯನ್ನೆಲ್ಲ ತೆಗೆದುಹಾಕಲಿರುವನು.—ಇಬ್ರಿ. 2:14; 1 ಯೋಹಾ. 3:8.

3 ದೇವರು ಪ್ರಕಟಿಸಿರುವ ಉದ್ದೇಶದ ನೆರವೇರಿಕೆಯನ್ನು ಸ್ವರ್ಗದಲ್ಲಿರುವ ಮತ್ತು ಭೂಮಿಯಲ್ಲಿರುವ ಯಾವ ಶಕ್ತಿಯೂ ತಡೆಯಲಾರದು. (ಯೆಶಾ. 46:9-11) ನಾವಿದನ್ನು ಏಕೆ ಹೇಳಬಲ್ಲೆವು? ಏಕೆಂದರೆ ಯೆಹೋವನ ಪವಿತ್ರಾತ್ಮವು ಅದರಲ್ಲಿ ಒಳಗೂಡಿದೆ. ಆ ಅಪ್ರತಿರೋಧ್ಯ ಶಕ್ತಿಯು ದೇವರು ‘ಉದ್ದೇಶಿಸಿದ್ದನ್ನು ಕೈಗೂಡಿಸುವ’ ಗ್ಯಾರಂಟಿಯನ್ನು ಕೊಡುತ್ತದೆ. (ಯೆಶಾ. 55:10, 11) ದೇವರು ತನ್ನ ಉದ್ದೇಶವನ್ನು ಹಂತಹಂತವಾಗಿ ನೆರವೇರಿಸುವ ವಿಧಕ್ಕೆ ನಾವು ನಮ್ಮ ಮನಸ್ಸನ್ನು ಪೂರ್ಣವಾಗಿ ಅನುಗೊಳಿಸುವುದು ಒಳ್ಳೇದು. ಏಕೆಂದರೆ ನಮ್ಮ ಭಾವೀ ಜೀವನದ ಪ್ರತೀಕ್ಷೆಗಳು ಆ ಉದ್ದೇಶದ ನೆರವೇರಿಕೆಯ ಮೇಲೆ ಹೊಂದಿಕೊಂಡಿವೆ. ಅದಲ್ಲದೆ ಯೆಹೋವನು ಪವಿತ್ರಾತ್ಮವನ್ನು ಹೇಗೆ ಉಪಯೋಗಿಸುತ್ತಾನೆ ಎಂಬುದನ್ನು ನೋಡುವುದು ನಿಜವಾಗಿಯೂ ನಂಬಿಕೆಯನ್ನು ಬಲಗೊಳಿಸುತ್ತದೆ. ಆದುದರಿಂದ ಪವಿತ್ರಾತ್ಮವು ಹಿಂದೆ, ಈಗ ಮತ್ತು ಭವಿಷ್ಯತ್ತಿನಲ್ಲಿ ಯೆಹೋವನ ಉದ್ದೇಶದ ನೆರವೇರಿಕೆಯಲ್ಲಿ ಯಾವ ಪಾತ್ರವಹಿಸುತ್ತದೆ ಎಂಬುದನ್ನು ನಾವೀಗ ಪರಿಗಣಿಸೋಣ.

ಹಿಂದೆ ಪವಿತ್ರಾತ್ಮದ ಪಾತ್ರ

4. ಯೆಹೋವನು ತನ್ನ ಉದ್ದೇಶವನ್ನು ಕ್ರಮಕ್ರಮವಾಗಿ ಪ್ರಕಟಿಸಿದ್ದು ಹೇಗೆ?

4 ಬೈಬಲ್‌ ಕಾಲದಲ್ಲಿ ಯೆಹೋವನು ತನ್ನ ಉದ್ದೇಶವನ್ನು ಕ್ರಮಕ್ರಮವಾಗಿ ಪ್ರಕಟಪಡಿಸಿದನು. ಆರಂಭದಲ್ಲಿ ವಾಗ್ದತ್ತ ಸಂತಾನದ ಗುರುತು “ಪವಿತ್ರ ರಹಸ್ಯ”ವಾಗಿತ್ತು. (1 ಕೊರಿಂ. 2:7) ಯೆಹೋವನು ಆ ಸಂತಾನಕ್ಕೆ ಪುನಃ ಒಮ್ಮೆ ನಿರ್ದೇಶಿಸಿದ್ದು ಸುಮಾರು 2,000 ವರ್ಷಗಳ ನಂತರವೇ. (ಆದಿಕಾಂಡ 12:7; 22:15-18 ಓದಿ.) ಯೆಹೋವನು ಅಬ್ರಹಾಮನಿಗೆ ಒಂದು ವಿಸ್ತಾರವಾದ ನೆರವೇರಿಕೆಯ ವಾಗ್ದಾನವನ್ನಿತ್ತನು. “ನಿನ್ನ [ಸಂತಾನದ] ಮೂಲಕ” ಎಂಬ ಮಾತುಗಳು ಆ ಸಂತಾನವು ಒಬ್ಬ ಮನುಷ್ಯನಾಗಿ, ಅಬ್ರಹಾಮನ ವಂಶಜನಾಗಿ ಬರುವನು ಎಂಬುದರ ಸ್ಪಷ್ಟ ಸೂಚನೆಯಾಗಿತ್ತು. ಈ ವಿವರಣೆಯು ಪ್ರಕಟಗೊಂಡಾಗ ಸೈತಾನನು ಕುಟಿಲಾಸಕ್ತಿಯಿಂದ ನೋಡುತ್ತಿದ್ದನು ಎಂಬ ಖಾತ್ರಿ ನಮಗಿರಬಲ್ಲದು. ಅಬ್ರಹಾಮನ ವಂಶಾವಳಿಯನ್ನು ನಾಶ ಯಾ ಭ್ರಷ್ಟಗೊಳಿಸಿ ದೇವರ ಉದ್ದೇಶವನ್ನು ಭಗ್ನಗೊಳಿಸುವುದನ್ನೇ ಹೊರತು ಬೇರೇನನ್ನೂ ಆ ವಿರೋಧಕನು ಬಯಸಿರಲಿಕ್ಕಿಲ್ಲ ಎಂಬುದು ನಿಶ್ಚಯ. ಆದರೆ ಹಾಗಾಗುವುದು ಅಸಂಭವವೇ ಸರಿ. ಏಕೆಂದರೆ ದೇವರ ಅದೃಶ್ಯ ಆತ್ಮವು ಕಾರ್ಯನಡಿಸುತ್ತಿತ್ತು. ಯಾವ ವಿಧಗಳಲ್ಲಿ?

5, 6. ಸಂತಾನಕ್ಕೆ ನಡಿಸುವ ವಂಶಾವಳಿಯ ವ್ಯಕ್ತಿಗಳನ್ನು ಸಂರಕ್ಷಿಸಲು ಯೆಹೋವನು ತನ್ನಾತ್ಮವನ್ನು ಹೇಗೆ ಉಪಯೋಗಿಸಿದನು?

5ಸಂತಾನಕ್ಕೆ ನಡಿಸುವ ವಂಶಾವಳಿಯ ವ್ಯಕ್ತಿಗಳನ್ನು ಸಂರಕ್ಷಿಸಲು ಯೆಹೋವನು ತನ್ನಾತ್ಮವನ್ನು ಉಪಯೋಗಿಸಿದನು. ಅಬ್ರಾಮ (ಅಬ್ರಹಾಮ)ನಿಗೆ ಯೆಹೋವನಂದದ್ದು: “ನಾನು ನಿನಗೆ ಗುರಾಣಿಯಾಗಿದ್ದೇನೆ.” (ಆದಿ. 15:1) ಅವೇನೂ ಪೊಳ್ಳು ಮಾತುಗಳಾಗಿರಲಿಲ್ಲ. ಉದಾಹರಣೆಗೆ, ಕ್ರಿ.ಪೂ. 1919ರ ಸುಮಾರಿಗೆ ಏನು ಸಂಭವಿಸಿತೆಂಬುದನ್ನು ಪರಿಗಣಿಸಿ. ಅಬ್ರಹಾಮ ಮತ್ತು ಸಾರ ಆಗ ಗೆರಾರಿನಲ್ಲಿ ಕೆಲಕಾಲ ವಾಸಿಸುತ್ತಿದ್ದರು. ಗೆರಾರಿನ ಅರಸನಾದ ಅಬೀಮೆಲೆಕನಿಗೆ ಸಾರಳು ಅಬ್ರಹಾಮನ ಪತ್ನಿಯೆಂದು ತಿಳಿದಿರಲಿಲ್ಲ. ಅವನು ಸಾರಳನ್ನು ತನ್ನ ಪತ್ನಿಯಾಗಿ ಮಾಡುವ ಉದ್ದೇಶದಿಂದ ಸೇರಿಸಿಕೊಂಡನು. ಸಾರಳು ಅಬ್ರಹಾಮನ ಸಂತಾನವನ್ನು ಪಡೆಯದಂತೆ ಮಾಡಲು ಪ್ರಯತ್ನಿಸುತ್ತಾ ಇಲ್ಲಿ ಸೈತಾನನು ತೆರೆಮರೆಯಲ್ಲಿ ಕುತಂತ್ರ ನಡಿಸುತ್ತಿದ್ದನೊ? ಬೈಬಲ್‌ ಅದನ್ನು ತಿಳಿಸುವುದಿಲ್ಲ. ಆದರೆ ಯೆಹೋವನು ಅಡ್ಡಬಂದು ಅದನ್ನು ತಡೆದನೆಂದು ತಿಳಿಸುತ್ತದೆ. ಆತನು ಅಬೀಮೆಲೆಕನ ಕನಸಿನಲ್ಲಿ ಬಂದು ಸಾರಳನ್ನು ಮುಟ್ಟಬಾರದೆಂಬ ಎಚ್ಚರಿಕೆಯನ್ನು ನೀಡಿದನು.—ಆದಿ. 20:1-18.

6 ಯೆಹೋವನು ಅವರನ್ನು ಸಂರಕ್ಷಿಸಿದ್ದು ಇದೊಂದೇ ಬಾರಿ ಅಲ್ಲ. ಹಲವಾರು ಸಂದರ್ಭಗಳಲ್ಲಿ ಯೆಹೋವನು ಅಬ್ರಹಾಮನನ್ನೂ ಅವನ ಮನೆಮಂದಿಯನ್ನೂ ಕಾಪಾಡಿ ಉಳಿಸಿದನು. (ಆದಿ. 12:14-20; 14:13-20; 26:26-29) ಆದುದರಿಂದಲೇ ಅಬ್ರಹಾಮ ಮತ್ತು ಅವನ ವಂಶಜರ ಕುರಿತಾಗಿ ಕೀರ್ತನೆಗಾರನು ಹೀಗೆ ಹೇಳಸಾಧ್ಯವಿತ್ತು: “ಅವರಿಗೆ ಯಾರಿಂದಲೂ ಅನ್ಯಾಯವಾಗಗೊಡಿಸಲಿಲ್ಲ. ಆತನು [ಯೆಹೋವನು] ಅವರ ವಿಷಯದಲ್ಲಿ ಅರಸರನ್ನೂ ಗದರಿಸಿ—ನಾನು ಅಭಿಷೇಕಿಸಿದವರನ್ನು ಮುಟ್ಟಬಾರದು, ನನ್ನ ಪ್ರವಾದಿಗಳಿಗೆ ಯಾವ ಕೇಡನ್ನೂ ಮಾಡಬಾರದು ಎಂದು ಹೇಳಿದನು.”—ಕೀರ್ತ. 105:14, 15.

7. ಇಸ್ರಾಯೇಲ್‌ ಜನಾಂಗವನ್ನು ಯೆಹೋವನು ಯಾವ ವಿಧಗಳಲ್ಲಿ ಸಂರಕ್ಷಿಸಿದನು?

7 ಯೆಹೋವನು, ವಾಗ್ದತ್ತ ಸಂತಾನವು ಹುಟ್ಟಲಿದ್ದ ಪುರಾತನ ಇಸ್ರಾಯೇಲ್‌ ಜನಾಂಗವನ್ನು ಸಂರಕ್ಷಿಸಿದ್ದು ತನ್ನಾತ್ಮದಿಂದಲೇ. ತನ್ನಾತ್ಮದ ಮೂಲಕ ಯೆಹೋವನು ಇಸ್ರಾಯೇಲಿಗೆ ತನ್ನ ಧರ್ಮಶಾಸ್ತ್ರವನ್ನು ಕೊಟ್ಟನು. ಇದು ಸತ್ಯಾರಾಧನೆಯನ್ನು ಕಾಪಾಡಿ ಯೆಹೂದ್ಯರನ್ನು ಆಧ್ಯಾತ್ಮಿಕ, ನೈತಿಕ ಹಾಗೂ ಶಾರೀರಿಕ ಮಾಲಿನ್ಯದಿಂದ ಸಂರಕ್ಷಿಸಿತು. (ವಿಮೋ. 31:18; 2 ಕೊರಿಂ. 3:3) ನ್ಯಾಯಸ್ಥಾಪಕರ ಕಾಲದಲ್ಲಿ ಇಸ್ರಾಯೇಲ್ಯರನ್ನು ಅವರ ಶತ್ರುಗಳಿಂದ ಬಿಡಿಸಲು ಯೆಹೋವನ ಆತ್ಮವು ನಿರ್ದಿಷ್ಟ ಪುರುಷರನ್ನು ಬಲಪಡಿಸಿತು. (ನ್ಯಾಯ. 3:9, 10) ಅಬ್ರಹಾಮನ ಸಂತಾನದ ಪ್ರಧಾನ ಭಾಗವಾದ ಯೇಸುವಿನ ಜನನಕ್ಕೆ ನಡಿಸುವ ಶತಮಾನಗಳಲ್ಲಿ ಪವಿತ್ರಾತ್ಮವು ಯೆರೂಸಲೇಮನ್ನೂ ಬೇತ್ಲೆಹೇಮನ್ನೂ ಅದರ ಆಲಯವನ್ನೂ ಕಾಪಾಡಿ ಉಳಿಸುವುದರಲ್ಲಿ ಒಳಗೂಡಿದ್ದಿರಲೇಬೇಕು. ಇವೆಲ್ಲವು ಯೇಸುವಿನ ಕುರಿತಾದ ಪ್ರವಾದನೆಗಳ ನೆರವೇರಿಕೆಯಲ್ಲಿ ಪಾತ್ರವಹಿಸಲಿಕ್ಕಿದ್ದವು.

8. ದೇವರ ಮಗನ ಜೀವನ ಮತ್ತು ಶುಶ್ರೂಷೆಯಲ್ಲಿ ಪವಿತ್ರಾತ್ಮವು ನೇರವಾಗಿ ಒಳಗೂಡಿತ್ತೆಂದು ಯಾವುದು ತೋರಿಸುತ್ತದೆ?

8 ಪವಿತ್ರಾತ್ಮವು ಯೇಸುವಿನ ಜೀವನ ಮತ್ತು ಶುಶ್ರೂಷೆಯಲ್ಲಿ ನೇರವಾಗಿ ಒಳಗೂಡಿತ್ತು. ಕನ್ನಿಕೆ ಮರಿಯಳ ಗರ್ಭವನ್ನು ಪ್ರಭಾವಿಸುತ್ತ ಪವಿತ್ರಾತ್ಮವು ಹಿಂದೆಂದೂ ಆಗಿರದ ಅಥವಾ ಆ ಬಳಿಕ ಆಗಿಲ್ಲದ ಒಂದು ವಿಷಯವನ್ನು ಪೂರೈಸಿತು. ಅದೇನೆಂದರೆ ಒಬ್ಬಾಕೆ ಅಪರಿಪೂರ್ಣ ಸ್ತ್ರೀಯು ಗರ್ಭಿಣಿಯಾಗಿ ಪಾಪಶಿಕ್ಷೆಗೆ ಪಾತ್ರನಾಗಿರದ ಒಬ್ಬ ಪರಿಪೂರ್ಣ ಮಗನನ್ನು ಹಡೆಯುವಂತೆ ಅದು ಮಾಡಿತು. (ಲೂಕ 1:26-31, 34, 35) ಅನಂತರ ಅದೇ ಆತ್ಮವು ಶಿಶುವಾಗಿದ್ದ ಯೇಸುವನ್ನು ಅಕಾಲಿಕ ಮರಣದಿಂದ ಸಂರಕ್ಷಿಸಿತು. (ಮತ್ತಾ. 2:7, 8, 12, 13) ಯೇಸು ಸುಮಾರು 30 ವರ್ಷದವನಾದಾಗ ದೇವರು ಅವನನ್ನು ಪವಿತ್ರಾತ್ಮದಿಂದ ಅಭಿಷೇಕಿಸಿದನು. ಈ ಮೂಲಕ ಅವನಿಗೆ ದಾವೀದನ ಸಿಂಹಾಸನದ ವಾರಸುದಾರನಾಗಿರಲು ನೇಮಿಸಲಾಯಿತು ಮತ್ತು ಸಾರುವ ಆದೇಶವನ್ನೀಯಲಾಯಿತು. (ಲೂಕ 1:32, 33; 4:16-21) ಯೇಸು ಮಹತ್ಕಾರ್ಯಗಳನ್ನು ಮಾಡುವಂತೆಯೂ ಪವಿತ್ರಾತ್ಮ ಶಕ್ತಿಯನ್ನಿತ್ತಿತು. ಅವನು ರೋಗಿಗಳನ್ನು ವಾಸಿಮಾಡಿದನು, ಜನಸಮೂಹಕ್ಕೆ ಉಣಿಸಿದನು, ಸತ್ತವರನ್ನೂ ಎಬ್ಬಿಸಿದನು. ಅಂಥ ಮಹತ್ಕಾರ್ಯಗಳು ಯೇಸುವಿನ ರಾಜ್ಯಾಡಳಿತೆಯ ಕೆಳಗೆ ನಾವು ನಿರೀಕ್ಷಿಸಬಲ್ಲ ಆಶೀರ್ವಾದಗಳ ಮುನ್ನೋಟಗಳಾಗಿದ್ದವು.

9, 10. (ಎ) ಮೊದಲನೇ ಶತಮಾನದ ಯೇಸುವಿನ ಶಿಷ್ಯರ ಮೇಲೆ ಪವಿತ್ರಾತ್ಮವಿದ್ದದ್ದು ಹೇಗೆ? (ಬಿ) ಕ್ರಿ.ಶ. ಮೊದಲನೇ ಶತಮಾನದಲ್ಲಿ ಯೆಹೋವನ ಉದ್ದೇಶದ ನೆರವೇರಿಕೆಯಲ್ಲಿ ಯಾವ ವಿಕಸನವು ತೋರಿಬಂತು?

9 ಕ್ರಿ.ಶ. 33ರ ಪಂಚಾಶತ್ತಮದಿಂದ ಆರಂಭಿಸುತ್ತಾ ಯೆಹೋವನು ಅಬ್ರಹಾಮನ ಸಂತಾನದ ದ್ವಿತೀಯ ಭಾಗವನ್ನು ಅಭಿಷೇಕಿಸಲು ತನ್ನಾತ್ಮವನ್ನು ಉಪಯೋಗಿಸಿದನು. ಅವರಲ್ಲಿ ಹೆಚ್ಚಿನವರು ಅಬ್ರಹಾಮನ ವಂಶಜರಾಗಿರಲಿಲ್ಲ. (ರೋಮ. 8:15-17; ಗಲಾ. 3:29) ಮೊದಲನೇ ಶತಮಾನದ ಯೇಸುವಿನ ಶಿಷ್ಯರ ಮೇಲೂ ಪವಿತ್ರಾತ್ಮವಿತ್ತು ಎಂಬುದು ವ್ಯಕ್ತ. ಇದು ಅವರನ್ನು ಹುರುಪಿನಿಂದ ಸಾರಲು ಸಾಧ್ಯಗೊಳಿಸಿತು ಮತ್ತು ಮಹತ್ಕಾರ್ಯಗಳನ್ನು ನಡಿಸಲು ಶಕ್ತಗೊಳಿಸಿತು. (ಅ. ಕಾ. 1:8; 2:1-4; 1 ಕೊರಿಂ. 12:7-11) ಆ ಅದ್ಭುತಕರವಾದ ವರಗಳ ಮೂಲಕ ಪವಿತ್ರಾತ್ಮವು ಯೆಹೋವನ ಉದ್ದೇಶದ ನೆರವೇರಿಕೆಯಲ್ಲಿ ಒಂದು ಗಮನಾರ್ಹ ವಿಕಸನವನ್ನು ಪ್ರಕಟಪಡಿಸಿತು. ಆ ನಂತರ ಯೆಹೋವನು ಯೆರೂಸಲೇಮಿನ ಆಲಯದಲ್ಲಿ ಕೇಂದ್ರಿತವಾಗಿದ್ದ ಶತಮಾನಗಳಿಂದ ಬಂದಿದ್ದ ಆರಾಧನಾ ಏರ್ಪಾಡನ್ನು ಉಪಯೋಗಿಸಲಿಲ್ಲ. ಆತನ ಮೆಚ್ಚಿಕೆಯು ಈಗ ಹೊಸದಾಗಿ ಸ್ಥಾಪಿತವಾದ ಕ್ರೈಸ್ತ ಸಭೆಯ ಮೇಲೆ ಸರಿಯಿತು. ಅಂದಿನಿಂದ ಯೆಹೋವನು ಆ ಅಭಿಷಿಕ್ತ ಸಭೆಯನ್ನು ತನ್ನ ಉದ್ದೇಶದ ಕಾರ್ಯಕ್ಕಾಗಿ ಉಪಯೋಗಿಸುತ್ತಿದ್ದಾನೆ.

10 ಸಂರಕ್ಷಿಸುವುದು, ಶಕ್ತಿಕೊಡುವುದು, ಅಭಿಷೇಕಿಸುವುದು—ಇವು ಬೈಬಲ್‌ ಕಾಲದಲ್ಲಿ ಯೆಹೋವನು ಪವಿತ್ರಾತ್ಮವನ್ನು ಉಪಯೋಗಿಸಿದ ಕೇವಲ ಕೆಲವು ವಿಧಾನಗಳಾಗಿವೆ. ತನ್ನ ಉದ್ದೇಶವು ನೆರವೇರಿಕೆಯ ಕಡೆಗೆ ಸದಾ ಮುಂದುವರಿಯುವಂತೆ ಆತನು ಇದನ್ನು ಮಾಡಿದನು. ನಮ್ಮ ದಿನಗಳ ಕುರಿತಾಗಿ ಏನು? ತನ್ನ ಉದ್ದೇಶದ ಬೆಂಬಲದಲ್ಲಿ ಯೆಹೋವನು ತನ್ನಾತ್ಮವನ್ನು ಹೇಗೆ ಉಪಯೋಗಿಸುತ್ತಿದ್ದಾನೆ? ಇದನ್ನು ನಾವು ತಿಳಿಯುವ ಅಗತ್ಯವಿದೆ. ಏಕೆಂದರೆ ಆ ಆತ್ಮಕ್ಕೆ ಹೊಂದಿಕೆಯಲ್ಲಿ ನಾವು ಕ್ರಿಯೆಗೈಯಲು ಬಯಸುತ್ತೇವೆ. ಆದುದರಿಂದ ಈ ಪ್ರಸ್ತುತ ಸಮಯದಲ್ಲಿ ಯೆಹೋವನು ತನ್ನ ಆತ್ಮವನ್ನು ಉಪಯೋಗಿಸುತ್ತಿರುವ ನಾಲ್ಕು ವಿಧಾನಗಳನ್ನು ನಾವೀಗ ಪರಿಗಣಿಸೋಣ.

ಈಗ ಪವಿತ್ರಾತ್ಮದ ಪಾತ್ರ

11. ದೇವಜನರ ನಡುವೆ ಶುದ್ಧತೆಯನ್ನು ಕಾಪಾಡಲು ಪವಿತ್ರಾತ್ಮ ಸಹಾಯಮಾಡುತ್ತದೆಂದು ಯಾವುದು ತೋರಿಸುತ್ತದೆ, ಮತ್ತು ಆ ಆತ್ಮದೊಂದಿಗೆ ನೀವು ಸಹಕರಿಸುತ್ತೀರಿ ಎಂಬುದನ್ನು ಹೇಗೆ ತೋರಿಸಬಲ್ಲಿರಿ?

11 ಮೊದಲನೇದಾಗಿ, ಪವಿತ್ರಾತ್ಮವು ದೇವಜನರ ನಡುವೆ ಶುದ್ಧತೆಯನ್ನು ಕಾಪಾಡಲು ಸಹಾಯಮಾಡುತ್ತದೆ. ಯೆಹೋವನ ಉದ್ದೇಶದಲ್ಲಿ ಪಾತ್ರವಹಿಸುವವರು ನೈತಿಕವಾಗಿ ಶುದ್ಧವಾಗಿ ಇರಲೇಬೇಕು. (1 ಕೊರಿಂಥ 6:9-11 ಓದಿ.) ನಿಜ ಕ್ರೈಸ್ತರಾಗಿ ಪರಿಣಮಿಸಿದ ಕೆಲವರು ಹಿಂದೆ ಹಾದರ, ವ್ಯಭಿಚಾರ, ಸಲಿಂಗಕಾಮ ಮುಂತಾದ ಅನೈತಿಕ ಆಚಾರಗಳಲ್ಲಿ ತೊಡಗಿದ್ದರು. ಪಾಪಕೃತ್ಯಗಳನ್ನು ಹೆರುವ ಆಶೆಗಳು ಆಳವಾಗಿ ತಳವೂರಿರಬಲ್ಲವು. (ಯಾಕೋ. 1:14, 15) ಆದರೂ ಅಂಥ ಜನರು ‘ತೊಳೆದು ಶುದ್ಧೀಕರಿಸಲ್ಪಟ್ಟಿರುವುದು’ ಅವರು ತಮ್ಮ ಜೀವನದಲ್ಲಿ ದೇವರನ್ನು ಮೆಚ್ಚಿಸಲು ಬೇಕಾದ ಬದಲಾವಣೆಗಳನ್ನು ಮಾಡಿದ್ದರೆಂಬುದನ್ನು ಸೂಚಿಸುತ್ತದೆ. ದುರಾಶೆಯಿಂದ ಕೆಟ್ಟ ಕೃತ್ಯಗಳನ್ನು ನಡಿಸುವ ಪ್ರವೃತ್ತಿಯನ್ನು ಯಶಸ್ವಿಕರವಾಗಿ ಎದುರಿಸಲು ದೇವಪ್ರಿಯ ವ್ಯಕ್ತಿಯೊಬ್ಬನಿಗೆ ಯಾವುದು ಸಹಾಯಮಾಡುತ್ತದೆ? ‘ನಮ್ಮ ದೇವರ ಆತ್ಮವೇ’ ಎಂದು 1 ಕೊರಿಂಥ 6:11 ಹೇಳುತ್ತದೆ. ನೈತಿಕವಾಗಿ ಶುದ್ಧರಾಗಿರುವ ಮೂಲಕ ಆ ಆತ್ಮವು ನಿಮ್ಮ ಜೀವನದಲ್ಲಿ ಪ್ರಭಾವಶಾಲಿ ಶಕ್ತಿಯಾಗಿರಲು ನೀವು ಬಿಡುತ್ತೀರಿ ಎಂದು ತೋರಿಸುತ್ತೀರಿ.

12. (ಎ) ಯೆಹೆಜ್ಕೇಲನ ದರ್ಶನಕ್ಕನುಸಾರ, ಯೆಹೋವನು ತನ್ನ ಸಂಘಟನೆಯನ್ನು ಹೇಗೆ ನಡೆಸುತ್ತಾನೆ? (ಬಿ) ನೀವು ಪವಿತ್ರಾತ್ಮಕ್ಕೆ ಹೊಂದಿಕೆಯಲ್ಲಿ ಕಾರ್ಯನಡಿಸುತ್ತಾ ಇದ್ದೀರೆಂದು ಹೇಗೆ ತೋರಿಸಬಲ್ಲಿರಿ?

12 ಎರಡನೇದಾಗಿ, ಯೆಹೋವನು ತನ್ನ ಸಂಘಟನೆಯನ್ನು ಯಾವ ಕಡೆಗೆ ಸಾಗಿಸಲು ಬಯಸುತ್ತಾನೋ ಆ ಕಡೆಗೆ ಸಾಗಿಸಲು ತನ್ನಾತ್ಮವನ್ನು ಉಪಯೋಗಿಸುತ್ತಾನೆ. ಯೆಹೆಜ್ಕೇಲನ ದರ್ಶನದಲ್ಲಿ ಯೆಹೋವನ ಸಂಘಟನೆಯ ಸ್ವರ್ಗೀಯ ಭಾಗವು ಸ್ವರ್ಗೀಯ ರಥವಾಗಿ ಚಿತ್ರಿಸಲ್ಪಟ್ಟಿದೆ. ಅದು ಯೆಹೋವನ ಉದ್ದೇಶದ ನೆರವೇರಿಕೆಯಲ್ಲಿ ಅವಿರೋಧ್ಯವಾಗಿ ಮುಂದುವರಿಯುತ್ತದೆ. ಒಂದು ನಿರ್ದಿಷ್ಟ ಕಡೆಗೆ ಸಾಗುವಂತೆ ಆ ರಥವನ್ನು ಪ್ರಚೋದಿಸುವುದು ಯಾವುದು? ಪವಿತ್ರಾತ್ಮವೇ. (ಯೆಹೆ. 1:20, 21) ಯೆಹೋವನ ಸಂಘಟನೆಯು ಎರಡು ಭಾಗಗಳಿಂದ ಕೂಡಿರುತ್ತದೆ ಎಂಬುದನ್ನು ನಾವು ಮನಸ್ಸಿನಲ್ಲಿಡೋಣ. ಒಂದು ಸ್ವರ್ಗೀಯ ಭಾಗ, ಮತ್ತೊಂದು ಭೂಮಿಯ ಭಾಗ. ಸ್ವರ್ಗೀಯ ಭಾಗವು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟಲ್ಲಿ ಭೂಮಿಯ ಭಾಗವೂ ಅದರಿಂದಲೇ ಮಾರ್ಗದರ್ಶಿಸಲ್ಪಡಬೇಕು. ದೇವರ ಸಂಘಟನೆಯ ಭೂಭಾಗದಿಂದ ಪಡೆಯುವ ಮಾರ್ಗದರ್ಶನೆಗೆ ವಿಧೇಯರೂ ನಿಷ್ಠಾವಂತರೂ ಆಗಿರುವ ಮೂಲಕ ನೀವು ಯೆಹೋವನ ಸ್ವರ್ಗೀಯ ರಥದೊಂದಿಗೆ ಹೆಜ್ಜೆಹಾಕುತ್ತಾ ಇದ್ದೀರಿ ಮತ್ತು ಆತನ ಪವಿತ್ರಾತ್ಮಕ್ಕೆ ಹೊಂದಿಕೆಯಲ್ಲಿ ಕಾರ್ಯನಡಿಸುತ್ತಾ ಇದ್ದೀರಿ ಎಂದು ತೋರಿಸುತ್ತೀರಿ.—ಇಬ್ರಿ. 13:17.

13, 14. (ಎ) ಯೇಸುವಿನಿಂದ ತಿಳಿಸಲ್ಪಟ್ಟ ‘ಈ ಸಂತತಿಯಲ್ಲಿ’ ಕೂಡಿರುವವರು ಯಾರು? (ಬಿ) ಬೈಬಲ್‌ ಸತ್ಯವನ್ನು ಬೆಳಕಿಗೆ ತರುವುದರಲ್ಲಿ ಪವಿತ್ರಾತ್ಮ ಕಾರ್ಯನಡೆಸುತ್ತಿದೆ ಎಂದು ತೋರಿಸುವ ಒಂದು ಉದಾಹರಣೆ ಕೊಡಿ. (“ಹೆಚ್ಚುತ್ತಾ ಬರುವ ಬೆಳಕಿನೊಂದಿಗೆ ಸರಿಸಮವಾಗಿ ಹೆಜ್ಜೆಹಾಕುತ್ತೀರೊ?” ಎಂಬ ಚೌಕ ನೋಡಿ.)

13 ಮೂರನೇದಾಗಿ, ಪವಿತ್ರಾತ್ಮವು ಬೈಬಲ್‌ ಸತ್ಯದ ತಿಳಿವಳಿಕೆಯನ್ನು ಬೆಳಕಿಗೆ ತರುವುದರಲ್ಲಿ ಕಾರ್ಯನಡಿಸುತ್ತಿದೆ. (ಜ್ಞಾನೋ. 4:18) “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ವರ್ಗ ಈ ಪತ್ರಿಕೆಯನ್ನು ಬಹಳ ಕಾಲದಿಂದಲೂ ಬೈಬಲಿನ ಹೆಚ್ಚಿನ ತಿಳಿವಳಿಕೆಯನ್ನು ಕೊಡಲಿಕ್ಕಾಗಿ ಪ್ರಧಾನ ಮಾಧ್ಯಮವಾಗಿ ಉಪಯೋಗಿಸುತ್ತಾ ಇದೆ. (ಮತ್ತಾ. 24:45) ಉದಾಹರಣೆಗೆ, ಯೇಸುವಿನಿಂದ ಸೂಚಿಸಲ್ಪಟ್ಟ “ಈ ಸಂತತಿ” ಯಾರು ಎಂಬ ವಿಷಯದಲ್ಲಿ ನಮ್ಮ ತಿಳಿವಳಿಕೆಯನ್ನು ಪರಿಗಣಿಸಿರಿ. (ಮತ್ತಾಯ 24:32-34 ಓದಿ.) ಯೇಸು ಇಲ್ಲಿ ಯಾವ ಸಂತತಿಗೆ ಸೂಚಿಸಿದನು? “ಕ್ರಿಸ್ತನ ಸಾನ್ನಿಧ್ಯ—ನೀವು ಹೇಗೆ ಅರ್ಥಮಾಡಿಕೊಂಡಿದ್ದೀರಿ?” ಎಂಬ ಲೇಖನವು, ಯೇಸು ಅಲ್ಲಿ ದುಷ್ಟಜನರನ್ನು ಸಂಬೋಧಿಸಿ ಹೇಳಲಿಲ್ಲ ಬದಲಿಗೆ ಪವಿತ್ರಾತ್ಮದಿಂದ ಬೇಗನೆ ಅಭಿಷೇಕಿಸಲ್ಪಡಲಿದ್ದ ತನ್ನ ಶಿಷ್ಯರನ್ನು ಸೂಚಿಸಿ ಹೇಳಿದ್ದನೆಂದು ವಿವರಿಸಿತು. * ಮೊದಲನೇ ಶತಮಾನದ ಮತ್ತು ನಮ್ಮ ದಿನದ ಯೇಸುವಿನ ಅಭಿಷಿಕ್ತ ಹಿಂಬಾಲಕರು ಆ ಸೂಚನೆಯನ್ನು ಕಾಣುವ ಜನರಾಗಿರುವರು ಮಾತ್ರವಲ್ಲ ಅದರ ಅರ್ಥವನ್ನು ಗ್ರಹಿಸುವವರೂ ಅಂದರೆ ಯೇಸು “ಬಾಗಿಲ ಹತ್ತಿರದಲ್ಲೇ ಇದ್ದಾನೆ” ಎಂಬುದನ್ನು ತಿಳುಕೊಳ್ಳುವವರೂ ಆಗಿರುವರು.

14 ಈ ಅರ್ಥವಿವರಣೆಯು ನಮಗೇನನ್ನು ಸೂಚಿಸುತ್ತದೆ? ‘ಈ ಸಂತತಿಯ’ ಸರಿಯಾದ ಕಾಲಾವಧಿಯನ್ನು ನಾವು ಲೆಕ್ಕಿಸಸಾಧ್ಯವಿಲ್ಲದಿದ್ದರೂ “ಸಂತತಿ” ಎಂಬ ಶಬ್ದದ ಕುರಿತ ಹಲವಾರು ವಿಷಯಗಳನ್ನು ಮನಸ್ಸಿನಲ್ಲಿಡುವುದು ಒಳ್ಳೇದು. ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಯಾರ ಜೀವಿತಗಳು ಪರಸ್ಪರ ಒಂದರ ಮೇಲೊಂದು ಮೇಲುಸೇರುವೆಯಾಗಿ ಮುಂದುವರಿಯುತ್ತವೋ ಅಂಥ ವಿವಿಧ ವಯಸ್ಸಿನ ಜನರನ್ನು ಅದು ಸಾಮಾನ್ಯವಾಗಿ ಸೂಚಿಸುತ್ತದೆ. ಅದು ಅತಿ ಉದ್ದವಾದ ಒಂದು ಸಂತತಿಯಲ್ಲ. ಅದಕ್ಕೆ ಒಂದು ಕೊನೆಯಿದೆ. (ವಿಮೋ. 1:6) ಹಾಗಾದರೆ ‘ಈ ಸಂತತಿಯ’ ಕುರಿತ ಯೇಸುವಿನ ಮಾತುಗಳನ್ನು ನಾವು ಅರ್ಥಮಾಡುವುದು ಹೇಗೆ? ಯೇಸು ಅದನ್ನು ಈ ಅರ್ಥದಲ್ಲಿ ಹೇಳಿರಬೇಕು: 1914ರಲ್ಲಿ ಸೂಚನೆಯು ತೋರಿಬರಲಾರಂಭಿಸಿದಾಗ ಜೀವಂತರಾಗಿದ್ದ ಅಭಿಷಿಕ್ತರ ಜೀವನವು ಅಂತ್ಯಗೊಳ್ಳುವ ಮೊದಲು ಮಹಾಸಂಕಟದ ಆರಂಭವನ್ನು ಕಾಣಲಿದ್ದ ಬೇರೆ ಅಭಿಷಿಕ್ತರ ಜೀವನವು ಆರಂಭಿಸುವುದು ಎಂಬರ್ಥದಲ್ಲಿದೆ. ಆ ಸಂತತಿಗೆ ಒಂದು ಆರಂಭವಿತ್ತು ಮತ್ತು ನಿಶ್ಚಯವಾಗಿ ಅದಕ್ಕೊಂದು ಕೊನೆಯೂ ಇರುವುದು. ಆ ಸೂಚನೆಯ ವಿವಿಧ ವೈಶಿಷ್ಟ್ಯಗಳ ನೆರವೇರಿಕೆಯು ಮಹಾ ಸಂಕಟವು ಹತ್ತಿರದಲ್ಲೇ ಇರಬೇಕು ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ನಿಮ್ಮ ತುರ್ತುಪ್ರಜ್ಞೆಯನ್ನು ಕಾಪಾಡಿಕೊಳ್ಳುವ ಮೂಲಕ ಮತ್ತು ಎಚ್ಚರವಾಗಿರುವ ಮೂಲಕ ನೀವು ಬೈಬಲ್‌ ಸತ್ಯದ ಪ್ರಗತಿಪರ ಬೆಳಕಿನೊಂದಿಗೆ ಹೆಜ್ಜೆಹಾಕುತ್ತಿದ್ದೀರಿ ಮತ್ತು ಪವಿತ್ರಾತ್ಮದ ಮಾರ್ಗದರ್ಶನೆಯನ್ನು ಪಾಲಿಸುತ್ತಿದ್ದೀರಿ ಎಂದು ತೋರಿಸುತ್ತೀರಿ.—ಮಾರ್ಕ 13:37.

15. ಸುವಾರ್ತೆಯನ್ನು ಸಾರುವುದರಲ್ಲಿ ನಮಗೆ ಶಕ್ತಿಯನ್ನು ಕೊಡುವಂಥದ್ದು ಪವಿತ್ರಾತ್ಮವೇ ಎಂಬುದನ್ನು ಯಾವುದು ತೋರಿಸುತ್ತದೆ?

15 ನಾಲ್ಕನೇದಾಗಿ, ಪವಿತ್ರಾತ್ಮವು ಸುವಾರ್ತೆಯನ್ನು ಸಾರಲು ನಮಗೆ ಶಕ್ತಿಯನ್ನು ಕೊಡುತ್ತದೆ. (ಅ. ಕಾ. 1:8) ಸುವಾರ್ತೆಯು ಭೂಮಿಯಾದ್ಯಂತ ಸಾರಲ್ಪಡುತ್ತಿರುವ ನಿಜತ್ವವನ್ನು ಬೇರೆ ಹೇಗೆ ನಾವು ವಿವರಿಸೇವು? ಇದರ ಕುರಿತು ಯೋಚಿಸಿರಿ. ‘ಮನೆಮನೆಯ ಸೇವೆಯನ್ನು ನಾನೆಂದೂ ಮಾಡಲಾರೆ’ ಎಂದು ಹಿಂದೊಮ್ಮೆ ನೆನಸಿದವರಲ್ಲಿ ನೀವೊಬ್ಬರಾಗಿರಬಹುದು. ಪ್ರಾಯಶಃ ವಿಪರೀತ ಸಂಕೋಚ ಅಥವಾ ಅಳುಕಿನಿಂದ ನೀವು ಹಾಗೆ ನೆನಸಿರಬಹುದು. ಆದರೂ ಈಗ ಆ ಕಾರ್ಯದಲ್ಲಿ ನೀವು ಹುರುಪಿನಿಂದ ಭಾಗವಹಿಸುತ್ತಿದ್ದೀರಿ. * ಯೆಹೋವನ ಅನೇಕ ನಂಬಿಗಸ್ತ ಸಾಕ್ಷಿಗಳು ವಿರೋಧ ಮತ್ತು ಹಿಂಸೆಯ ಎದುರಲ್ಲೂ ಸಾರುವುದನ್ನು ಮುಂದುವರಿಸಿದ್ದಾರೆ. ಧೈರ್ಯಗೆಡಿಸುವ ಅಡ್ಡಿತಡೆಗಳನ್ನು ಪರಿಹರಿಸಲು ಮತ್ತು ನಮ್ಮ ಸ್ವಂತ ಶಕ್ತಿಯಿಂದ ಅಸಾಧ್ಯವಾಗಿರುವ ವಿಷಯಗಳನ್ನು ಮಾಡಲು ದೇವರ ಪವಿತ್ರಾತ್ಮವೇ ನಮಗೆ ಶಕ್ತಿಯನ್ನು ಕೊಡಬಲ್ಲದು. (ಮೀಕ 3:8; ಮತ್ತಾ. 17:20) ಸಾರುವ ಕೆಲಸದಲ್ಲಿ ಪೂರ್ಣವಾಗಿ ಭಾಗವಹಿಸುವ ಮೂಲಕ ನೀವು ಆ ಆತ್ಮದೊಂದಿಗೆ ಸಹಕರಿಸುತ್ತಿದ್ದೀರಿ ಎಂದು ತೋರಿಸಿಕೊಡುತ್ತೀರಿ.

ಭವಿಷ್ಯತ್ತಿನಲ್ಲಿ ಪವಿತ್ರಾತ್ಮದ ಪಾತ್ರ

16. ಮಹಾ ಸಂಕಟದ ಸಮಯದಲ್ಲಿ ಯೆಹೋವನು ತನ್ನ ಜನರನ್ನು ಸಂರಕ್ಷಿಸುವನು ಎಂಬ ಭರವಸೆ ನಮಗಿರಬಲ್ಲದು ಏಕೆ?

16 ಭವಿಷ್ಯತ್ತಿನಲ್ಲಿ ತನ್ನ ಉದ್ದೇಶವನ್ನು ನೆರವೇರಿಸಲು ಯೆಹೋವನು ತನ್ನ ಪವಿತ್ರಾತ್ಮವನ್ನು ಗಮನಾರ್ಹ ವಿಧಗಳಲ್ಲಿ ಉಪಯೋಗಿಸುವನು. ಮೊದಲಾಗಿ ಸಂರಕ್ಷಣೆಯ ವಿಷಯವನ್ನು ಪರಿಗಣಿಸಿ. ನಾವು ನೋಡಿದ ಪ್ರಕಾರ, ಹಿಂದಣ ಕಾಲದಲ್ಲಿ ಯೆಹೋವನು ಜನರನ್ನು ಹಾಗೂ ಇಡೀ ಇಸ್ರಾಯೇಲ್‌ ಜನಾಂಗವನ್ನು ಸಂರಕ್ಷಿಸಲು ತನ್ನಾತ್ಮವನ್ನು ಉಪಯೋಗಿಸಿದನು. ಆದಕಾರಣ ಬರಲಿರುವ ಮಹಾ ಸಂಕಟದಲ್ಲೂ ತನ್ನ ಜನರ ಸಂರಕ್ಷಣೆಗಾಗಿ ಆತನು ಅದೇ ಶಕ್ತಿಶಾಲಿ ಆತ್ಮವನ್ನು ಉಪಯೋಗಿಸುವನು ಎಂದು ನಂಬಲು ನಮಗೆ ಸಕಾರಣವಿದೆ. ಆಗ ಯೆಹೋವನು ನಮ್ಮನ್ನು ಸುರಕ್ಷಿತವಾಗಿ ಕಾಯುವ ನಿರ್ದಿಷ್ಟ ಬಗೆ ಹೇಗೆಂದು ನಾವು ಊಹಿಸುವ ಅಗತ್ಯವಿಲ್ಲ. ಬದಲಾಗಿ ಯೆಹೋವನನ್ನು ಪ್ರೀತಿಸುವವರು ಆತನ ದೃಷ್ಟಿಯಿಂದ ಎಂದೂ ಮರೆಯಾಗರು ಅಥವಾ ಆತನ ಪವಿತ್ರಾತ್ಮದ ನಿಲುಕಿಗೆ ದೂರವಾಗರು ಎಂಬುದನ್ನು ತಿಳಿದವರಾಗಿ ನಾವು ಭವಿಷ್ಯತ್ತನ್ನು ಭರವಸೆಯಿಂದ ಎದುರುನೋಡಬಲ್ಲೆವು.—2 ಪೂರ್ವ. 16:9; ಕೀರ್ತ. 139:7-12.

17. ಹೊಸ ಲೋಕದಲ್ಲಿ ಯೆಹೋವನು ತನ್ನ ಪವಿತ್ರಾತ್ಮವನ್ನು ಹೇಗೆ ಉಪಯೋಗಿಸುವನು?

17 ಬರಲಿರುವ ಹೊಸ ಲೋಕದಲ್ಲಿ ಯೆಹೋವನು ತನ್ನ ಪವಿತ್ರಾತ್ಮವನ್ನು ಹೇಗೆ ಉಪಯೋಗಿಸುವನು? ಆ ಸಮಯದಲ್ಲಿ ತೆರೆಯಲಾಗುವ ಹೊಸ ಸುರುಳಿಗಳ ಹಿಂದಿರುವ ಚಾಲಕಶಕ್ತಿಯು ಪವಿತ್ರಾತ್ಮವಾಗಿರುವುದು. (ಪ್ರಕ. 20:12) ಆ ಸುರುಳಿಗಳಲ್ಲಿ ಏನಿರುವುದು? ಸಾವಿರ ವರ್ಷಗಳ ಸಮಯದಲ್ಲಿ ನಮಗಾಗಿರುವ ಯೆಹೋವನ ಸವಿವರವಾದ ಆವಶ್ಯಕತೆಗಳೇ ಎಂಬುದು ಸ್ಪುಟ. ಆ ಸುರುಳಿಗಳಲ್ಲಿ ಅಡಕವಾಗಿರುವ ವಿಷಯಗಳನ್ನು ಪರೀಕ್ಷಿಸಿ ನೋಡಲು ನೀವು ಮುನ್ನೋಡುತ್ತೀರೊ? ಆ ಹೊಸ ಲೋಕವನ್ನು ಆಶೋತ್ತರದಿಂದ ನಾವು ಕಾಯುತ್ತಿದ್ದೇವೆ. ಭೂಮಿ ಮತ್ತು ಅದರಲ್ಲಿರುವ ಮಾನವಕುಲದ ಕಡೆಗೆ ತನ್ನ ಉದ್ದೇಶದ ನೆರವೇರಿಕೆಗಾಗಿ ಯೆಹೋವನು ತನ್ನ ಪವಿತ್ರಾತ್ಮವನ್ನು ಉಪಯೋಗಿಸುವಾಗ ಆ ಆಶೀರ್ವದಿತ ಸಮಯದಲ್ಲಿ ಜೀವನವು ಹೇಗಿರುವುದು ಎಂಬುದು ನಮ್ಮ ಊಹೆಗೂ ನಿಲುಕದ್ದು!

18. ನಿಮ್ಮ ದೃಢನಿರ್ಧಾರವು ಏನಾಗಿದೆ?

18 ಯೆಹೋವನ ಹಂತಹಂತವಾಗಿ ಪ್ರಕಟಗೊಳ್ಳುವ ಉದ್ದೇಶವು ಖಂಡಿತವಾಗಿಯೂ ಕೈಗೂಡುವುದು ಎಂಬ ವಿಷಯವನ್ನು ನಾವೆಂದೂ ಮರೆಯದಿರೋಣ. ಯಾಕೆಂದರೆ ಅದನ್ನು ನೆರವೇರಿಸಲು ವಿಶ್ವದಲ್ಲೇ ಅತಿ ಬಲಾಢ್ಯ ಶಕ್ತಿಯಾದ ಪವಿತ್ರಾತ್ಮವನ್ನು ಆತನು ಉಪಯೋಗಿಸುತ್ತಾನೆ. ಆ ಉದ್ದೇಶದಲ್ಲಿ ನೀವೂ ಒಳಗೂಡಿದ್ದೀರಿ. ಆದುದರಿಂದ ಆತನ ಆತ್ಮಕ್ಕಾಗಿ ಯೆಹೋವನಿಗೆ ಪ್ರಾರ್ಥಿಸುತ್ತಾ ಅದರ ಮಾರ್ಗದರ್ಶನೆಗೆ ಹೊಂದಿಕೆಯಾಗಿ ಕೆಲಸಮಾಡುವುದು ನಿಮ್ಮ ದೃಢನಿರ್ಧಾರವಾಗಿರಲಿ. (ಲೂಕ 11:13) ಹೀಗೆ ಯೆಹೋವನು ಮಾನವರಿಗಾಗಿ ಉದ್ದೇಶಿಸಿದ ಪ್ರಕಾರವೇ ಪರದೈಸ ಭೂಮಿಯಲ್ಲಿ ಸದಾ ಸರ್ವಕಾಲ ಜೀವಿಸುವ ಪ್ರತೀಕ್ಷೆಯು ನಿಮ್ಮದಾಗಬಹುದು.

[ಪಾದಟಿಪ್ಪಣಿಗಳು]

^ ಪ್ಯಾರ. 13 ಇಸವಿ 2008, ಫೆಬ್ರವರಿ 15ರ ಕಾವಲಿನಬುರುಜುವಿನ ಪುಟ 21-25 ನೋಡಿ.

^ ಪ್ಯಾರ. 15 ವಿಪರೀತ ಸಂಕೋಚವನ್ನು ಪರಿಹರಿಸಿ ಶುಶ್ರೂಷೆಯಲ್ಲಿ ಹುರುಪಿನಿಂದ ಭಾಗವಹಿಸಿದ ಒಬ್ಬರ ಉದಾಹರಣೆಗಾಗಿ 1993, ಸೆಪ್ಟೆಂಬರ್‌ 15ರ ಕಾವಲಿನಬುರುಜುವಿನ ಪುಟ 19 ನೋಡಿ.

ನಿಮಗೆ ಜ್ಞಾಪಕವಿದೆಯೊ?

• ತನ್ನ ಉದ್ದೇಶವು ಮುಂದೆ ಸಾಗುತ್ತಾ ಹೋಗುವಂತೆ ಬೈಬಲ್‌ ಕಾಲದಲ್ಲಿ ಯೆಹೋವನು ತನ್ನ ಆತ್ಮವನ್ನು ಯಾವ ವಿಧಗಳಲ್ಲಿ ಉಪಯೋಗಿಸಿದನು?

• ಈಗ ಯೆಹೋವನು ತನ್ನ ಆತ್ಮವನ್ನು ಹೇಗೆ ಉಪಯೋಗಿಸುತ್ತಿದ್ದಾನೆ?

• ತನ್ನ ಉದ್ದೇಶದ ನೆರವೇರಿಕೆಗಾಗಿ ಯೆಹೋವನು ಭವಿಷ್ಯತ್ತಿನಲ್ಲಿ ತನ್ನ ಆತ್ಮವನ್ನು ಹೇಗೆ ಉಪಯೋಗಿಸುವನು?

[ಅಧ್ಯಯನ ಪ್ರಶ್ನೆಗಳು]

[ಪುಟ 10ರಲ್ಲಿರುವ ಚೌಕ]

ಹೆಚ್ಚುತ್ತಾ ಬರುವ ಬೆಳಕಿನೊಂದಿಗೆ ಸರಿಸಮವಾಗಿ ಹೆಜ್ಜೆಹಾಕುತ್ತೀರೊ?

ಯೆಹೋವನು ತನ್ನ ಜನರಿಗೆ ಬೈಬಲ್‌ ಸತ್ಯದ ಬೆಳಕನ್ನು ಕೊಡುತ್ತಾ ಇದ್ದಾನೆ. ಕಾವಲಿನಬುರುಜುವಿನಲ್ಲಿ ಪ್ರಕಟಿತವಾದ ಕೆಲವು ಪರಿಷ್ಕೃತ ಸ್ಪಷ್ಟೀಕರಣಗಳು ಯಾವುವು?

▪ ಹುಳಿಹಿಟ್ಟಿನ ಕುರಿತಾದ ಯೇಸುವಿನ ದೃಷ್ಟಾಂತವು ಆಧ್ಯಾತ್ಮಿಕ ಬೆಳವಣಿಗೆಯ ಕುರಿತ ಯಾವ ಸಕಾರಾತ್ಮಕ ಪಾಠವನ್ನು ಎತ್ತಿಹೇಳುತ್ತದೆ? (ಮತ್ತಾ. 13:33)—ಜುಲೈ 15, 2008, ಪುಟ 19-20.

▪ ಕ್ರೈಸ್ತರನ್ನು ಸ್ವರ್ಗೀಯ ನಿರೀಕ್ಷೆಗಾಗಿ ಕರೆಯುವುದು ಯಾವಾಗ ಕೊನೆಗೊಳ್ಳುತ್ತದೆ?—ಮೇ 1, 2007, ಪುಟ 30-31 (ಇಂಗ್ಲಿಷ್‌).

▪ ಯೆಹೋವನನ್ನು “ಪವಿತ್ರಾತ್ಮದಿಂದ” ಆರಾಧಿಸುವುದು ಅಂದರೇನು? (ಯೋಹಾ. 4:24)—ಜುಲೈ 15, 2002, ಪುಟ 15.

▪ ಮಹಾ ಸಮೂಹದವರು ಯಾವ ಅಂಗಣದಲ್ಲಿ ಸೇವೆ ಮಾಡುತ್ತಾರೆ? (ಪ್ರಕ. 7:15)—ಮೇ 1, 2002, ಪುಟ 30-31.

▪ ಕುರಿ ಮತ್ತು ಆಡುಗಳ ಪ್ರತ್ಯೇಕಿಸುವಿಕೆಯು ಯಾವಾಗ ನಡೆಯುತ್ತದೆ? (ಮತ್ತಾ. 25:31-33)—ಅಕ್ಟೋಬರ್‌ 15, 1995, ಪುಟ 18-28.