ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಸ್ವಸ್ಥರಾದ ಆಪ್ತರ ಆರೈಕೆಮಾಡುವಾಗ ಆಧ್ಯಾತ್ಮಿಕವಾಗಿ ದೃಢರಾಗಿರ್ರಿ

ಅಸ್ವಸ್ಥರಾದ ಆಪ್ತರ ಆರೈಕೆಮಾಡುವಾಗ ಆಧ್ಯಾತ್ಮಿಕವಾಗಿ ದೃಢರಾಗಿರ್ರಿ

ಅಸ್ವಸ್ಥರಾದ ಆಪ್ತರ ಆರೈಕೆಮಾಡುವಾಗ ಆಧ್ಯಾತ್ಮಿಕವಾಗಿ ದೃಢರಾಗಿರ್ರಿ

ಕಿಮ್‌ ಎಂಬ ಸಾಕ್ಷಿ ಅಸ್ವಸ್ಥರಾದಾಗ ಅವರ ಬೆನ್ನುಮೂಳೆಯ ಹತ್ತಿರ ರೋಗದ ಗೆಡ್ಡೆಯಿರುವುದು ಕಂಡುಬಂತು. * ಅದು ಕ್ಯಾನ್ಸರ್‌ ಎಂದು ರೋಗನಿದಾನ ಮಾಡಲಾಯಿತು. ಅವರ ಗಂಡ ಸ್ಟೀವ್‌ ಹೇಳುವುದು: “ಆ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದ ಬಳಿಕ ಕಿಮ್‌ಗೆ ರೇಡಿಯೋ ಚಿಕಿತ್ಸೆ [ರೇಡಿಯೋತೆರಪಿ] ಮತ್ತು ರಾಸಾಯನಿಕ ಚಿಕಿತ್ಸೆ [ಕೆಮತೆರಪಿ] ನೀಡಲಾಯಿತು. ಈ ಚಿಕಿತ್ಸೆಯ ಉಪ ಪರಿಣಾಮವಾಗಿ ಅವಳು ತುಂಬ ಕ್ಷೀಣಿಸಿಹೋದಳು. ಅವಳು ಅತ್ತಿತ್ತ ಓಡಾಡುವುದು ತುಂಬ ಕುಂಠಿತಗೊಳಿಸಲ್ಪಟ್ಟಿತು.”

ತನ್ನ ಪ್ರೀತಿಯ ಸಂಗಾತಿ ಈ ಶಕ್ತಿಗುಂದಿಸುವ ರೋಗದಿಂದ ನರಳುತ್ತಿರುವುದನ್ನು ನೋಡುವಾಗ ಸ್ಟೀವ್‌ಗೆ ಎಂಥ ಸಂಕಟ ಉಂಟಾಗಿರಬೇಕು! ಪ್ರಾಯಶಃ ನಿಮ್ಮ ಆಪ್ತ ಕುಟುಂಬ ಸದಸ್ಯರೊಬ್ಬರು ಸಹ ಮೆಲ್ಲಮೆಲ್ಲನೆ ಕ್ಷೀಣಿಸಿಬಿಡುವ ಕಾಯಿಲೆಯಿಂದ ಅಥವಾ ವೃದ್ಧಾಪ್ಯದ ದುಷ್ಪರಿಣಾಮಗಳಿಂದ ನರಳುತ್ತಿರಬಹುದು. (ಪ್ರಸಂ. 12:1-7) ಹೀಗಿರುವಲ್ಲಿ ನಿಮ್ಮ ಪ್ರಿಯರ ಒಳ್ಳೇ ಆರೈಕೆ ಮಾಡಲಿಕ್ಕಾಗಿ ನೀವು ಮೊದಲು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನೀವು ಆಧ್ಯಾತ್ಮಿಕವಾಗಿ ದುರ್ಬಲರಾಗುವುದಾದರೆ ನಿಮ್ಮ ಭಾವನಾತ್ಮಕ ಮತ್ತು ಶಾರೀರಿಕ ಆರೋಗ್ಯ ಸಹ ಕುಂದಿಹೋಗಬಲ್ಲದು. ಆಗ ನಿಮ್ಮ ಕುಟುಂಬದ ಸದಸ್ಯನಿಗೆ ಬೇಕಾಗಿರುವ ಬೆಂಬಲವನ್ನು ನಿಮ್ಮಿಂದ ಕೊಡಲಾಗದು. ಆದುದರಿಂದ ಅಸ್ವಸ್ಥರಾಗಿರುವ ಅಥವಾ ವಯೋವೃದ್ಧರಾಗಿರುವ ಆಪ್ತರನ್ನು ನೋಡಿಕೊಳ್ಳುವಾಗ ನೀವು ನಿಮ್ಮ ಆಧ್ಯಾತ್ಮಿಕ ಸಮತೋಲನವನ್ನು ಹೇಗೆ ಕಾಪಾಡಿಕೊಳ್ಳಬಲ್ಲಿರಿ? ಕ್ರೈಸ್ತ ಸಭೆಯ ಇತರ ಸದಸ್ಯರು ಬೇರಾವುದೇ ಸಹಾಯವನ್ನು ಮಾಡಸಾಧ್ಯವಿರುವಲ್ಲಿ ಅವರು ಇಂಥ ರೋಗಗ್ರಸ್ತರಿಗೆ ಪರಿಗಣನೆ ತೋರಿಸುವ ಸಲುವಾಗಿ ಏನು ಮಾಡಬಲ್ಲರು?

ಸಮತೋಲನ ಕಾಪಾಡಿಕೊಳ್ಳಿರಿ—ಹೇಗೆ?

ಒಬ್ಬ ಅಸ್ವಸ್ಥ ಸಂಬಂಧಿಕನ ಆರೈಕೆಮಾಡುವಾಗ ನಿಮ್ಮ ಆಧ್ಯಾತ್ಮಿಕ ಸಮತೋಲನ ಮತ್ತು ಶಾರೀರಿಕ ಆರೋಗ್ಯವನ್ನು ಕಾಪಾಡಿಕೊಳ್ಳಲಿಕ್ಕಾಗಿ ನೀವು ಹೊಂದಿಸಿಕೊಳ್ಳುವವರೂ ನಿಮ್ಮ ಸಮಯ ಮತ್ತು ಶಕ್ತಿಯನ್ನು ಸಹಭಾಗಿಸಿ ಉಪಯೋಗಿಸುವವರೂ ಆಗಿರಬೇಕು. “ಮಿತವರ್ತಿಗಳಲ್ಲಿ ವಿವೇಕ” (NW) ಎಂದು ಜ್ಞಾನೋಕ್ತಿ 11:2 ಹೇಳುತ್ತದೆ. ಈ ಪೂರ್ವಾಪರದಲ್ಲಿ ‘ಮಿತವರ್ತನೆ’ ಎಂಬುದು ಸ್ವಂತ ಇತಿಮಿತಿಗಳ ಅರಿವುಳ್ಳವರಾಗಿರುವುದು ಎಂಬರ್ಥವನ್ನು ಕೊಡುತ್ತದೆ. ನೀವು ನಿಮ್ಮ ಶಕ್ತಿಮೀರಿ ಕಷ್ಟಪಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ನಿಮ್ಮ ಶೆಡ್ಯೂಲ್‌ ಮತ್ತು ಜವಾಬ್ದಾರಿಗಳನ್ನು ತೂಗಿನೋಡಬೇಕಾಗಬಹುದು.

ಸ್ಟೀವ್‌ ವಿವೇಕ ಮತ್ತು ಮಿತವರ್ತನೆ ತೋರಿಸಿದರು. ಅವರು ತಮ್ಮ ಕೆಲಸದ ಹೊರೆಯನ್ನು ತೂಗಿನೋಡಿದರು. ಅವರು ಐಹಿಕವಾಗಿ ಕೆಲಸಮಾಡುತ್ತಿದ್ದರು. ಅದರೊಂದಿಗೆ ಐರ್ಲೆಂಡ್‌ನ ಯೆಹೋವನ ಸಾಕ್ಷಿಗಳ ಸ್ಥಳೀಯ ಸಭೆಯೊಂದರಲ್ಲಿ ಹಿರಿಯರ ಮಂಡಲಿಯ ಸಂಯೋಜಕರಾಗಿ ಮತ್ತು ಸೇವಾ ಮೇಲ್ವಿಚಾರಕರಾಗಿ ಸೇವೆ ಮಾಡುತ್ತಿದ್ದರು. ತಮ್ಮ ಕ್ಷೇತ್ರದ ಹಾಸ್ಪಿಟಲ್‌ ಲಿಏಸಾನ್‌ ಕಮಿಟಿಯ ಸದಸ್ಯರೂ ಆಗಿದ್ದರು. “ಈ ಎಲ್ಲ ಜವಾಬ್ದಾರಿಗಳಿಗೆ ತುಂಬ ಗಮನಕೊಡುವ ಮೂಲಕ ನಾನು ಕಿಮ್‌ ಅನ್ನು ಅಲಕ್ಷಿಸುತ್ತಿದ್ದೇನೆ ಎಂದವಳು ಯಾವತ್ತೂ ದೂರಲಿಲ್ಲ. ಆದರೆ ನಾನು ಶಕ್ತಿಮೀರಿ ಕೆಲಸಮಾಡುತ್ತಿದ್ದೇನೆ ಎಂದು ನನಗೆ ತಿಳಿದಿತ್ತು” ಎನ್ನುತ್ತಾರೆ ಸ್ಟೀವ್‌. ಈ ಸನ್ನಿವೇಶವನ್ನು ಅವರು ಹೇಗೆ ನಿಭಾಯಿಸಿದರು? “ಈ ವಿಷಯವನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಿದ ಮೇಲೆ ಸಂಯೋಜಕನಾಗಿ ಸೇವೆ ಮಾಡುವುದನ್ನು ಬಿಟ್ಟುಕೊಡಲು ತೀರ್ಮಾನಿಸಿದೆ. ಹಿರಿಯನಾಗಿ ಸೇವೆ ಮಾಡುವುದನ್ನು ಮುಂದುವರಿಸಿದೆ. ಆದರೆ ಸಭೆಯ ನನ್ನ ಜವಾಬ್ದಾರಿಗಳಲ್ಲಿ ಕೆಲವನ್ನು ಬೇರೆಯವರಿಗೆ ಒಪ್ಪಿಸುವ ಮೂಲಕ ಕಿಮ್‌ಗೆ ಬೇಕಾದ ಸಮಯ ಮತ್ತು ಗಮನವನ್ನು ನಾನು ಕೊಡಶಕ್ತನಾದೆ” ಎಂದು ಸ್ಟೀವ್‌ ಹೇಳುತ್ತಾರೆ.

ಸಮಯಾನಂತರ ಕಿಮ್‌ರವರ ಆರೋಗ್ಯ ಸುಧಾರಿಸಿತು. ಸ್ಟೀವ್‌ ಮತ್ತು ಕಿಮ್‌ ಸೇರಿ ತಮ್ಮ ಸದ್ಯದ ಸನ್ನಿವೇಶವನ್ನು ತೂಗಿನೋಡಿದರು. ಸ್ಟೀವ್‌ಗೆ ತಮ್ಮ ಪತ್ನಿಯ ಸಹಕಾರದೊಂದಿಗೆ ಸಭೆಯಲ್ಲಿದ್ದ ತಮ್ಮ ಹಿಂದಿನ ಜವಾಬ್ದಾರಿಗಳನ್ನು ಪುನಃ ವಹಿಸಿಕೊಳ್ಳಲು ಸಾಧ್ಯವಾಯಿತು. ಸ್ಟೀವ್‌ ವಿವರಿಸುವುದು: “ಈ ಕಾಯಿಲೆಯಿಂದ ಉಂಟಾದ ಇತಿಮಿತಿಗಳೊಳಗೆ ಜೀವಿಸಲು ನಾವಿಬ್ಬರೂ ಕಲಿತಿದ್ದೇವೆ. ಯೆಹೋವನು ಕೊಟ್ಟ ಸಹಾಯಕ್ಕಾಗಿ ಮತ್ತು ತನ್ನ ಅಸ್ವಸ್ಥತೆಯ ಹೊರತಾಗಿಯೂ ನನ್ನ ಪತ್ನಿ ಗುಣುಗುಟ್ಟದೆ ಕೊಡುವ ಬೆಂಬಲಕ್ಕಾಗಿ ನಾನು ತುಂಬ ಆಭಾರಿ.”

ಸಂಚರಣ ಮೇಲ್ವಿಚಾರಕರಾಗಿರುವ ಜೆರೀ ಮತ್ತು ಅವರ ಪತ್ನಿ ಮರೀಯರ ಅನುಭವವನ್ನೂ ಪರಿಗಣಿಸಿ. ತಮ್ಮ ವೃದ್ಧ ಹೆತ್ತವರ ಪಾಲನೆ ಮಾಡಲಿಕ್ಕಾಗಿ ಅವರು ತಮ್ಮ ಗುರಿಗಳನ್ನು ಹೊಂದಿಸಿಕೊಳ್ಳಬೇಕಿತ್ತು. ಮರೀಯ ಹೇಳುವುದು: “ನಮ್ಮಿಬ್ಬರಿಗೂ ಪರದೇಶವೊಂದರಲ್ಲಿ ಮಿಷನೆರಿಗಳಾಗಿ ಸೇವೆಮಾಡುವ ಗುರಿಯಿತ್ತು. ಆದರೆ ಜೆರೀಯವರ ಹೆತ್ತವರಿಗೆ ಬೇರೆ ಮಕ್ಕಳಿರಲಿಲ್ಲ ಮತ್ತು ಅವರಿಗೆ ಆರೈಕೆಯ ಅಗತ್ಯವಿತ್ತು. ಆದುದರಿಂದ ಅವರನ್ನು ನೋಡಿಕೊಳ್ಳಲಿಕ್ಕಾಗಿ ನಾವು ಐರ್ಲೆಂಡ್‌ನಲ್ಲೇ ಉಳಿಯುವ ತೀರ್ಮಾನ ಮಾಡಿದೆವು. ಹೀಗೆ ಜೆರೀ ತಂದೆ ಸಾಯುವುದಕ್ಕೆ ಮುಂಚೆ ಆಸ್ಪತ್ರೆಯಲ್ಲಿದ್ದಾಗ ಅವರೊಂದಿಗಿರಲು ನಮ್ಮಿಂದ ಸಾಧ್ಯವಾಯಿತು. ಈಗ ನಾವು ಜೆರೀ ತಾಯಿಯನ್ನು ಪ್ರತಿದಿನ ಸಂಪರ್ಕಿಸುತ್ತೇವೆ. ಅವರಿಗೆ ಸಹಾಯ ಬೇಕಾದಲ್ಲಿ ಸುಲಭದಲ್ಲಿ ಅದನ್ನು ಮಾಡಲು ಸಾಧ್ಯವಿದೆ. ಜೆರೀ ತಾಯಿ ಇರುವ ಸಭೆ ತುಂಬ ಸಹಾಯ ಮತ್ತು ಬೆಂಬಲವನ್ನು ಕೊಟ್ಟಿದೆ. ಇದರಿಂದ ನಾವು ಸಂಚರಣ ಕೆಲಸದಲ್ಲಿ ಉಳಿಯಲು ಸಾಧ್ಯವಾಗಿದೆ.”

ಇತರರು ಸಹಾಯಮಾಡಬಲ್ಲ ವಿಧ

ಸಭೆಯಲ್ಲಿರುವ ವೃದ್ಧ ವಿಧವೆಯರಿಗೆ ಯಾವ ಭೌತಿಕ ಒದಗಿಸುವಿಕೆಗಳನ್ನು ಮಾಡಬೇಕೆನ್ನುವ ವಿಷಯದಲ್ಲಿ ಚರ್ಚಿಸುತ್ತಾ ಅಪೊಸ್ತಲ ಪೌಲನು ಬರೆದದ್ದು: “ಯಾವನಾದರೂ ತನ್ನ ಸ್ವಂತದವರಿಗೆ, ವಿಶೇಷವಾಗಿ ತನ್ನ ಮನೆವಾರ್ತೆಯ ಸದಸ್ಯರಿಗೆ ಅಗತ್ಯವಿರುವುದನ್ನು ಒದಗಿಸದಿದ್ದರೆ ಅವನು ನಂಬಿಕೆಯನ್ನು ನಿರಾಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.” ಅವರ ಮಾರ್ಗಕ್ರಮವು ‘ದೇವರ ದೃಷ್ಟಿಯಲ್ಲಿ ಸ್ವೀಕಾರಾರ್ಹವಾಗಿರಬೇಕಾದರೆ’ ತಮ್ಮ ವೃದ್ಧ ಹೆತ್ತವರಿಗೆ ಮತ್ತು ಅಜ್ಜಅಜ್ಜಿಯರಿಗೆ ಆರ್ಥಿಕ ನೆರವನ್ನು ನೀಡಲೇಬೇಕು ಎಂದು ಪೌಲನು ಜೊತೆ ಕ್ರೈಸ್ತರಿಗೆ ಜ್ಞಾಪಕ ಹುಟ್ಟಿಸಿದನು. (1 ತಿಮೊ. 5:4, 8) ಆದರೆ ಸಭೆಯಲ್ಲಿರುವ ಇತರರು ಸಹ ಪ್ರಾಯೋಗಿಕ ನೆರವನ್ನು ಕೊಡಶಕ್ತರು ಮತ್ತು ಅವರದನ್ನು ಕೊಡಬೇಕು.

ಹಾಕನ್‌ ಮತ್ತು ಇಂಗರ್‌ ಎಂಬವರ ಸನ್ನಿವೇಶವನ್ನೂ ಗಮನಿಸಿ. ಇವರು ಸ್ವೀಡನ್‌ನಲ್ಲಿರುವ ವೃದ್ಧ ದಂಪತಿ. ಹಾಕನ್‌ ಹೇಳುವುದು: “ನನ್ನ ಪತ್ನಿಗೆ ಕ್ಯಾನ್ಸರ್‌ ಇದೆಯೆಂದು ರೋಗಪತ್ತೆ ಮಾಡಲಾದಾಗ ನಮ್ಮಿಬ್ಬರಿಗೂ ಆಘಾತವಾಯಿತು. ಇಂಗರ್‌ ಯಾವಾಗಲೂ ಗಟ್ಟಿಮುಟ್ಟಾಗಿದ್ದಳು. ಆದರೆ ಈಗ ಚಿಕಿತ್ಸೆಯನ್ನು ಪಡೆಯಲಿಕ್ಕಾಗಿ ಪ್ರತಿ ದಿನ ಆಸ್ಪತ್ರೆಗೆ ಹೋಗಬೇಕಿತ್ತು. ಅವಳ ಚಿಕಿತ್ಸೆಯ ಉಪ ಪರಿಣಾಮಗಳು ಅವಳನ್ನು ತುಂಬ ದುರ್ಬಲಗೊಳಿಸುತ್ತಿದ್ದವು. ಇಂಥ ಸಮಯದಲ್ಲಿ ಇಂಗರ್‌ ಮನೆಯಲ್ಲೇ ಇರುತ್ತಿದ್ದಳು ಮತ್ತು ನಾನು ಅವಳ ಆರೈಕೆ ಮಾಡುವುದಕ್ಕಾಗಿ ಅವಳೊಂದಿಗಿರುವ ಅಗತ್ಯವಿತ್ತು.” ಸ್ಥಳೀಯ ಸಭೆಯವರು ಹಾಕನ್‌ ಮತ್ತು ಇಂಗರ್‌ಗೆ ಹೇಗೆ ಸಹಾಯಮಾಡಿದರು?

ಈ ದಂಪತಿ ಟೆಲಿಫೋನಿನ ಮೂಲಕ ಕ್ರೈಸ್ತ ಕೂಟಗಳನ್ನು ಕೇಳಿಸಿಕೊಳ್ಳುವಂತೆ ಸಭೆಯ ಹಿರಿಯರು ಅವರಿಗೆ ಏರ್ಪಾಡು ಮಾಡಿಕೊಟ್ಟರು. ಮಾತ್ರವಲ್ಲದೆ ಸಹೋದರ ಸಹೋದರಿಯರು ಸಹ ಬಂದುಹೋಗುವ ಮೂಲಕ ಮತ್ತು ಫೋನ್‌ ಮಾಡುವ ಮೂಲಕ ಸಂಪರ್ಕವನ್ನು ಇಟ್ಟುಕೊಂಡರು. ಪತ್ರಗಳು ಮತ್ತು ಕಾರ್ಡ್‌ಗಳನ್ನು ಸಹ ಕಳುಹಿಸಿದರು. “ನಮ್ಮೆಲ್ಲ ಸಹೋದರರ ಬೆಂಬಲ ನಮಗಿತ್ತು. ಯೆಹೋವನ ಸಹಾಯವೂ ಇತ್ತು. ನಾವು ಆಧ್ಯಾತ್ಮಿಕವಾಗಿ ದೃಢರಾಗಿರಲು ಇದು ಅವಶ್ಯವಾಗಿತ್ತು. ಸಂತೋಷಕರವಾಗಿ ಇಂಗರ್‌ ಸುಧಾರಿಸಿಕೊಂಡಿದ್ದಾಳೆ. ಈಗ ಪುನಃ ರಾಜ್ಯ ಸಭಾಗೃಹದಲ್ಲಿ ಕ್ರೈಸ್ತ ಕೂಟಗಳಿಗೆ ಹಾಜರಾಗಲು ನಮ್ಮಿಂದ ಸಾಧ್ಯವಾಗಿದೆ” ಎಂದು ಹಾಕನ್‌ ಹೇಳುತ್ತಾರೆ. ಸಭೆಯ ಸದಸ್ಯರು ತಮ್ಮ ಮಧ್ಯೆಯಿರುವ ಅಸ್ವಸ್ಥರಿಗೆ ಮತ್ತು ವೃದ್ಧರಿಗೆ ತಮ್ಮಿಂದಾದ ಸಹಾಯವನ್ನು ಮಾಡುವಾಗ, “ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ” ಎಂಬ ಮಾತುಗಳು ತಮ್ಮ ವಿಷಯದಲ್ಲಿ ಸತ್ಯವಾಗಿವೆ ಎಂದು ತೋರಿಸಿಕೊಡುತ್ತಾರೆ.—ಜ್ಞಾನೋ. 17:17.

ಯೆಹೋವನು ನಿಮ್ಮ ಪ್ರಯತ್ನಗಳನ್ನು ಗಣ್ಯಮಾಡುತ್ತಾನೆ

ಅಸ್ವಸ್ಥರಾಗಿರುವ ಆಪ್ತರ ಆರೈಕೆ ಮಾಡುವುದು ತುಂಬ ಪ್ರಯಾಸಕರ ನಿಜ. ಆದರೂ “ದಿಕ್ಕಿಲ್ಲದವನನ್ನು ಪರಾಂಬರಿಸುವವನು ಧನ್ಯನು” ಎಂದು ರಾಜ ದಾವೀದನು ಬರೆದನು. (ಕೀರ್ತ. 41:1) ಇಂಥ ದಿಕ್ಕಿಲ್ಲದವರಲ್ಲಿ ಅಸ್ವಸ್ಥತೆಯಿಂದಾಗಿ ಸಹಾಯದ ಅಗತ್ಯದಲ್ಲಿರುವ ವ್ಯಕ್ತಿಗಳೂ ಸೇರಿದ್ದಾರೆ.

ಕಾಯಿಲೆ ಬಿದ್ದಿರುವ ಅಥವಾ ನರಳುತ್ತಿರುವ ವ್ಯಕ್ತಿಗಳ ಆರೈಕೆ ಮಾಡುತ್ತಿರುವವರು ಏಕೆ ಸಂತೋಷಿತರಾಗಿರಬಲ್ಲರು? “[ದಿಕ್ಕಿಲ್ಲದವರಿಗೆ] ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು; ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರಮಾಡುವನು” ಎಂದು ಹೇಳುತ್ತದೆ ಜ್ಞಾನೋಕ್ತಿ 19:17. ಅಸ್ವಸ್ಥತೆಯಿಂದ ನರಳುತ್ತಿರುವ ತನ್ನ ನಿಷ್ಠಾವಂತ ಸೇವಕರಲ್ಲಿ ಸತ್ಯ ದೇವರು ವಿಶೇಷ ಆಸಕ್ತಿಯನ್ನು ವಹಿಸುತ್ತಾನೆ. ಅವರಿಗೆ ನೆರವಾಗುವವರನ್ನು ಸಹ ಆಶೀರ್ವದಿಸುತ್ತಾನೆ. ಕೀರ್ತನೆಗಾರ ದಾವೀದನು ಹಾಡಿದ್ದು: “[ಇಂಥ ವ್ಯಕ್ತಿ] ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗ ಯೆಹೋವನು ಅವನನ್ನು ಉದ್ಧರಿಸುವನು; ಅವನ ರೋಗವನ್ನೆಲ್ಲಾ ಪರಿಹರಿಸಿ ಆರೋಗ್ಯವನ್ನುಂಟುಮಾಡಿದಿಯಲ್ಲಾ, ಸ್ವಾಮೀ.” (ಕೀರ್ತ. 41:3) ಪ್ರೀತಿಯ ಆರೈಕೆಯನ್ನು ಮಾಡುವ ವ್ಯಕ್ತಿಗೇ ಒಂದುವೇಳೆ ಕಷ್ಟ ಅಥವಾ ಸಂಕಟ ಬರುವಲ್ಲಿ ಯೆಹೋವನು ಅವನಿಗೆ ಸಹಾಯಮಾಡುವನು ಎಂಬ ಖಾತ್ರಿ ನಮಗಿರಬಲ್ಲದು.

ಅಸ್ವಸ್ಥ ಸಂಬಂಧಿಕರ ಆರೈಕೆಯಲ್ಲಿ ನಾವು ಮಾಡುವ ಕೆಲಸವನ್ನು ಯೆಹೋವ ದೇವರು ಗಮನಿಸುತ್ತಾನೆ ಮತ್ತು ಮೆಚ್ಚುತ್ತಾನೆ ಎಂಬುದನ್ನು ತಿಳಿಯುವುದು ಎಷ್ಟು ಹಿತಕರ! ಇಂಥ ನೆರವನ್ನು ನೀಡಲು ನಾವು ಪ್ರಯಾಸಪಡಬೇಕಾಗಿದ್ದರೂ “ಇಂಥ [ತ್ಯಾಗಗಳಲ್ಲಿ] ದೇವರು ಸಂತೃಪ್ತನಾಗುತ್ತಾನೆ” ಎಂದು ಬೈಬಲ್‌ ಆಶ್ವಾಸನೆ ಕೊಡುತ್ತದೆ.—ಇಬ್ರಿ. 13:16.

[ಪಾದಟಿಪ್ಪಣಿ]

^ ಪ್ಯಾರ. 2 ಹೆಸರುಗಳನ್ನು ಬದಲಾಯಿಸಲಾಗಿದೆ.

[ಪುಟ 18ರಲ್ಲಿರುವ ಚಿತ್ರಗಳು]

ಆಧ್ಯಾತ್ಮಿಕ ಸಮತೋಲನವನ್ನು ಕಾಪಾಡಿಕೊಳ್ಳಿ ಮತ್ತು ಇತರರ ಸಹಾಯವನ್ನು ಪಡೆದುಕೊಳ್ಳಿ