ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆದಿ ಕ್ರೈಸ್ತತ್ವ ಮತ್ತು ರೋಮಿನ ದೇವರುಗಳು

ಆದಿ ಕ್ರೈಸ್ತತ್ವ ಮತ್ತು ರೋಮಿನ ದೇವರುಗಳು

ಆದಿ ಕ್ರೈಸ್ತತ್ವ ಮತ್ತು ರೋಮಿನ ದೇವರುಗಳು

ರೋಮಿನ ಸಮ್ರಾಟನಾದ ಟ್ರೇಜನ್‌ಗೆ ಬಿಥೂನ್ಯದ ರಾಜ್ಯಪಾಲ ಪ್ಲಿನಿ ದ ಯಂಗರ್‌ ಎಂಬವನು ಬರೆದ ಪತ್ರವೊಂದರಲ್ಲಿ ಹೇಳಿದ್ದು: “ಕ್ರೈಸ್ತರು ಎಂಬ ಆಪಾದನೆಗೆ ಗುರಿಯಾಗಿ ನನ್ನೆದುರಿಗೆ ತರಲ್ಪಟ್ಟವರ ಸಂಗಡ ನಾನು ಈ ರೀತಿ ವ್ಯವಹರಿಸಿದೆ. ನೀವು ಕ್ರೈಸ್ತರೊ ಎಂದು ನಾನು ಅವರನ್ನು ಕೇಳಿದೆ. ಅವರು ಹೌದೆಂದು ಅರಿಕೆಮಾಡಿದಲ್ಲಿ ದಂಡನೆಯ ಬೆದರಿಕೆಹಾಕುತ್ತಾ ಎರಡುಸಲ, ಮೂರುಸಲ ಪುನಃ ಅದನ್ನೇ ಕೇಳಿದೆ. ತಾವು ಕ್ರೈಸ್ತರೆಂದು ಹೇಳುವುದನ್ನು ಮತ್ತೂ ಮುಂದುವರಿಸಿದಲ್ಲಿ ಅವರಿಗೆ ಮರಣದಂಡನೆ ವಿಧಿಸಿದೆ.” ಆದರೆ ಕ್ರಿಸ್ತನನ್ನು ಶಪಿಸುವ ಮೂಲಕ ಕ್ರೈಸ್ತತ್ವವನ್ನು ಅಲ್ಲಗಳೆದು ಸಮ್ರಾಟನ ಮೂರ್ತಿಯನ್ನು ಹಾಗೂ ಪ್ಲಿನಿಯು ಆಸ್ಥಾನಕ್ಕೆ ತಂದಿದ್ದ ದೇವರುಗಳ ವಿಗ್ರಹಗಳನ್ನು ಆರಾಧಿಸಿದವರ ಬಗ್ಗೆ ಅವನು ಬರೆದದ್ದು: “ಅವರನ್ನು ಸ್ವತಂತ್ರರಾಗಿ ಹೋಗಲು ಬಿಡುವುದು ನನಗೆ ಉಚಿತವೆಂದು ತೋರಿತು.”

ಆದಿ ಕ್ರೈಸ್ತರು ಸಮ್ರಾಟನಿಗೆ ಹಾಗೂ ವಿವಿಧ ದೇವರುಗಳ ವಿಗ್ರಹಗಳಿಗೆ ಆರಾಧನೆ ಸಲ್ಲಿಸಲು ನಿರಾಕರಿಸಿದ್ದರಿಂದಲೇ ಹಿಂಸೆಗೆ ಗುರಿಯಾದರು. ರೋಮನ್‌ ಸಾಮ್ರಾಜ್ಯದಲ್ಲೆಲ್ಲೂ ಇದ್ದ ಬೇರೆ ಧರ್ಮಗಳ ಕುರಿತಾಗಿ ಏನು? ಯಾವ ದೇವರುಗಳನ್ನು ಆರಾಧಿಸಲಾಗುತ್ತಿತ್ತು ಮತ್ತು ರೋಮನ್ನರು ಅವನ್ನು ಹೇಗೆ ವೀಕ್ಷಿಸಿದರು? ರೋಮಿನ ದೇವರುಗಳಿಗೆ ಯಜ್ಞಾರ್ಪಿಸಲು ನಿರಾಕರಿಸಿದ್ದಕ್ಕಾಗಿ ಕ್ರೈಸ್ತರು ಹಿಂಸಿಸಲ್ಪಟ್ಟದ್ದೇಕೆ? ಈ ಪ್ರಶ್ನೆಗಳಿಗೆ ಉತ್ತರಗಳು ಯೆಹೋವನಿಗೆ ನಿಷ್ಠೆಯು ಒಳಗೂಡಿರುವ ಇಂದಿನ ತದ್ರೀತಿಯ ವಾದಾಂಶಗಳೊಂದಿಗೆ ವ್ಯವಹರಿಸಲು ನಮಗೆ ಸಹಾಯಕಾರಿಯಾಗುವವು.

ಸಾಮ್ರಾಜ್ಯದ ಧರ್ಮಗಳು

ರೋಮ್‌ ಸಾಮ್ರಾಜ್ಯದಲ್ಲೆಲ್ಲೂ ಆರಾಧಿಸಲಾಗಿದ್ದ ವಿವಿಧ ದೇವತೆಗಳ ವೈವಿಧ್ಯತೆಗಳು ಅದರ ಭಾಷೆ ಮತ್ತು ಸಂಸ್ಕೃತಿಗಳಲ್ಲಿದ್ದ ಭಿನ್ನತೆಗಳಷ್ಟೆ ವಿಪುಲವಾಗಿದ್ದವು. ಯೆಹೂದಿ ಮತವು ರೋಮನ್ನರಿಗೆ ಎಷ್ಟೇ ವಿಚಿತ್ರವಾಗಿ ಕಂಡಿದ್ದಿರಲಿ ಅವರು ಅದನ್ನು ರೆಲಿಜ್‌ಯೊ ಲಿಕಿಟಾ ಅಥವಾ ಅಂಗೀಕೃತ ಧರ್ಮವಾಗಿ ಪರಿಗಣಿಸಿ ಅದಕ್ಕೆ ಸಂರಕ್ಷಣೆಯಿತ್ತರು. ಯೆರೂಸಲೇಮ್‌ ದೇವಾಲಯದಲ್ಲಿ ದಿನಕ್ಕೆ ಎರಡಾವರ್ತಿ ಎರಡು ಕುರಿಮರಿ ಮತ್ತು ಒಂದು ಹೋರಿಯನ್ನು ಕೈಸರನಿಗಾಗಿ ಮತ್ತು ರೋಮ್‌ ರಾಷ್ಟ್ರದ ಪರವಾಗಿ ಅರ್ಪಿಸಲಾಗುತ್ತಿತ್ತು. ಈ ಯಜ್ಞಾರ್ಪಣೆಗಳು ದೇವರುಗಳಲ್ಲಿ ಒಬ್ಬನನ್ನೊ ಅನೇಕರನ್ನೊ ಯಾರನ್ನೇ ಶಾಂತಪಡಿಸಲಿ ಅದು ರೋಮನ್ನರಿಗೆ ಅಸಂಬದ್ಧ. ಅವರಿಗೆ ಮುಖ್ಯವಾಗಿದ್ದದ್ದು ರೋಮ್‌ನ ಮೇಲೆ ಯೆಹೂದ್ಯರಿಗೆ ನಿಷ್ಠೆಯಿದೆ ಎಂಬದಕ್ಕೆ ಸಾಕಷ್ಟು ಪುರಾವೆಯನ್ನಿತ್ತ ಆ ಅರ್ಪಣೆಗಳೇ.

ಸ್ಥಳೀಯ ಪಂಗಡಗಳಲ್ಲಿ ವಿಧರ್ಮಿ ಆಚಾರವಿಚಾರಗಳ ವಿವಿಧ ರೂಪಗಳು ವ್ಯಾಪಕವಾಗಿದ್ದವು. ಗ್ರೀಕ್‌ ಪೌರಾಣಿಕ ನಂಬಿಕೆಯು ವ್ಯಾಪಕ ಅನುಮೋದನೆ ಪಡೆದಿತ್ತು. ಕಣಿಹೇಳುವುದು ಸಾಮಾನ್ಯ ವಾಡಿಕೆ. ಪೂರ್ವದೇಶಗಳ ರಹಸ್ಯ ಧರ್ಮಗಳು ಉಪಾಸಕರಿಗೆ ಅಮರತ್ವ, ನೇರ ಜ್ಞಾನಪ್ರಕಾಶ, ಗೂಢಸಂಸ್ಕಾರಗಳ ಮೂಲಕ ದಿವ್ಯದರ್ಶನಗಳನ್ನು ವಾಗ್ದಾನಿಸಿದ್ದವು. ಈ ಧರ್ಮಗಳು ಇಡೀ ಸಾಮ್ರಾಜ್ಯದಲ್ಲೆಲ್ಲೂ ಹಬ್ಬಿಹರಡಿದ್ದವು. ಕ್ರಿಸ್ತಶಕದ ಆರಂಭದ ಶತಮಾನಗಳಲ್ಲಿ ಈಜಿಪ್ಟಿನ ದೇವದೇವತೆ ಸೆರಪಿಸ್‌ ಮತ್ತು ಐಸಿಸ್‌, ಸಿರಿಯನ್‌ ಮತ್ಸ್ಯ ದೇವತೆ ಆಟಾರ್ಗಾಟಿಸ್‌, ಪರ್ಷಿಯದ ಸೂರ್ಯದೇವನಾದ ಮಿತ್ರ ಮುಂತಾದ ದೇವರುಗಳನ್ನು ಪೂಜಿಸುವ ಧರ್ಮಪಂಗಡಗಳು ಜನಪ್ರಿಯವಾಗಿದ್ದವು.

ಆದಿ ಕ್ರೈಸ್ತತ್ವದ ಸುತ್ತಮುತ್ತಲಿದ್ದ ವಿಧರ್ಮಿ ವಾತಾವರಣವನ್ನು ಅಪೊಸ್ತಲರ ಕಾರ್ಯಗಳು ಪುಸ್ತಕವು ಸ್ಪಷ್ಟವಾಗಿ ಚಿತ್ರಿಸುತ್ತದೆ. ಉದಾಹರಣೆಗೆ, ಸೈಪ್ರಸ್‌ನ ರೋಮನ್‌ ಪ್ರಾಂತಾಧಿಪತಿಯು ಯೆಹೂದಿ ಮಂತ್ರವಾದಿಯೊಬ್ಬನ ಸಹವಾಸ ಮಾಡಿದ್ದನು. (ಅ. ಕಾ. 13:6, 7) ಲುಸ್ತ್ರದ ಸ್ಥಳೀಯ ಜನರು ಪೌಲ ಮತ್ತು ಬಾರ್ನಬರನ್ನು ಗ್ರೀಕ್‌ ದೇವರುಗಳಾದ ಹರ್ಮೀಸ್‌ ಮತ್ತು ಸ್ಯೂಸ್‌ ಎಂದು ತಪ್ಪು ತಿಳುಕೊಂಡರು. (ಅ. ಕಾ. 14:11-13) ಪೌಲನು ಫಿಲಿಪ್ಪಿಯದಲ್ಲಿದ್ದಾಗ ಕಣಿಹೇಳುತ್ತಿದ್ದ ಒಬ್ಬಾಕೆ ಸೇವಕಿಯನ್ನು ಸಂಧಿಸಿದ್ದನು. (ಅ. ಕಾ. 16:16-18) ಅಪೊಸ್ತಲನು ಅಥೆನ್ಸ್‌ನಲ್ಲಿದ್ದಾಗ ಅದರ ನಿವಾಸಿಗಳು ‘ದೇವದೇವತೆಗಳಿಗೆ ಹೆಚ್ಚಾಗಿ ಭಯಪಡುವವರಾಗಿದ್ದಂತೆ’ ಕಂಡರೆಂದು ಹೇಳಿದನು. “ಅಜ್ಞಾತ ದೇವರಿಗೆ” ಎಂದು ಬರೆದಿದ್ದ ಬಲಿಪೀಠವೊಂದನ್ನು ಸಹ ಅವನು ಆ ಪಟ್ಟಣದಲ್ಲಿ ಕಂಡಿದ್ದನು. (ಅ. ಕಾ. 17:22, 23) ಎಫೆಸದ ಜನರು ಅರ್ತೆಮೀದೇವಿಯ ಪೂಜೆಯನ್ನು ಮಾಡುತ್ತಿದ್ದರು. (ಅ. ಕಾ. 19:1, 23, 24, 34) ಮಾಲ್ಟ ದ್ವೀಪದಲ್ಲಿ ಪೌಲನಿಗೆ ಹಾವುಕಡಿತದಿಂದಾಗಿ ಕೇಡೇನೂ ಸಂಭವಿಸದ್ದನ್ನು ಕಂಡು ಅವನೊಬ್ಬ ದೇವನು ಎಂದು ಜನರು ಹೇಳತೊಡಗಿದ್ದರು. (ಅ. ಕಾ. 28:3-6) ಅಂಥ ಸನ್ನಿವೇಶಗಳಲ್ಲಿ ಕ್ರೈಸ್ತರು ತಮ್ಮ ಶುದ್ಧ ಆರಾಧನೆಯನ್ನು ಕೆಡಿಸಶಕ್ತವಾಗಿದ್ದ ಪ್ರಭಾವಗಳ ವಿರುದ್ಧ ಎಚ್ಚರಿಕೆಯಿಂದಿರುವ ಅಗತ್ಯವಿತ್ತು.

ರೋಮನ್ನರ ಧರ್ಮ

ತಮ್ಮ ಸಾಮ್ರಾಜ್ಯವು ವಿಸ್ತಾರಗೊಂಡಂತೆ ರೋಮನ್ನರು ತಮ್ಮ ಸಂಪರ್ಕಕ್ಕೆ ಬಂದ ಹೊಸ ಹೊಸ ದೇವದೇವತೆಗಳನ್ನು ಸ್ವೀಕರಿಸಿದರು. ತಾವು ಈ ಮುಂಚೆ ತಿಳಿದಿರುವ ದೇವರುಗಳೇ ಅವು, ಆದರೆ ಭಿನ್ನ ರೂಪವುಳ್ಳವುಗಳು ಎಂದವರು ನಂಬಿದರು. ಈ ಪರದೇಶಸ್ಥ ಪಂಗಡಗಳನ್ನು ತೊಡೆದುಹಾಕುವ ಬದಲು ರೋಮನ್‌ ವಿಜೇತರು ಅವನ್ನು ಸ್ವೀಕರಿಸಿ, ಅವಲಂಬಿಸಿದರು. ಹೀಗೆ ರೋಮಿನ ಧರ್ಮವು ಅದರ ಬಹುಸಾಂಸ್ಕೃತಿಕ ಜನತೆಯು ಹೇಗೊ ಹಾಗೆ ಭಿನ್ನಭಿನ್ನ ಪಂಗಡಗಳಿಂದ ಕೂಡಿತು. ರೋಮನ್‌ ಧಾರ್ಮಿಕ ಸಂವೇದನೆಗಳಲ್ಲಿ ಅನನ್ಯ ಭಕ್ತಿಯ ಅವಶ್ಯಕತೆ ಇರಲಿಲ್ಲ. ಜನರು ಏಕಕಾಲದಲ್ಲಿ ಹಲವಾರು ತರದ ವಿವಿಧ ದೇವದೇವತೆಗಳನ್ನು ಆರಾಧಿಸಸಾಧ್ಯವಿತ್ತು.

ರೋಮಿನ ನಾಡ ದೇವತೆಗಳಲ್ಲಿ ಜೂಪಿಟರ್‌ ಸರ್ವಶ್ರೇಷ್ಠನು. ಅವನನ್ನು ‘ಆಪ್ಟಿಮಸ್‌ ಮ್ಯಾಕ್ಸಿಮಸ್‌’ ಅಂದರೆ ಅತ್ಯುತ್ತಮನೂ ಸರ್ವಶ್ರೇಷ್ಠನೂ ಎಂದು ಕರೆಯಲಾಗುತ್ತಿತ್ತು. ಅವನು ಗಾಳಿ, ಮಳೆ, ಮಿಂಚು, ಗುಡುಗಿನಲ್ಲಿ ತನ್ನನ್ನು ತೋರ್ಪಡಿಸಿಕೊಳ್ಳುತ್ತಿದ್ದನಂತೆ. ಜೂಪಿಟರ್‌ನ ಸೋದರಿಯೂ ಪತ್ನಿಯೂ ಆಗಿದ್ದ ಜೂನೊ ಚಂದ್ರನಿಗೆ ಸಂಬಂಧಿತಳಾಗಿದ್ದು ಸ್ತ್ರೀಯರ ಜೀವನದ ಸಕಲ ವಿಷಯಾಂಶಗಳ ಮೇಲೆ ಕಣ್ಣಿಟ್ಟು ಕಾಯುತ್ತಿದ್ದಳೆಂದು ಹೇಳಲಾಗುತ್ತಿತ್ತು. ಅವನ ಕುವರಿಯಾದ ಮಿನರ್ವ ಕೈಕಸಬು, ವೃತ್ತಿಗಾರಿಕೆ, ಲಲಿತಕಲೆ ಮತ್ತು ಯುದ್ಧದ ದೇವತೆಯಾಗಿದ್ದಳು.

ರೋಮನ್‌ ದೇವತಾಗಣದ ಸಂಖ್ಯೆಗೆ ಕೊನೆಮೊದಲಿರಲಿಲ್ಲ. ಲೇರೀಸ್‌ ಮತ್ತು ಪೆನಾಟೀಸ್‌ ಪರಿವಾರದ ದೇವತೆಗಳು. ವೆಸ್ತಳು ಕುಲುಮೆಯ ದೇವತೆ. ದ್ವಿಮುಖದ ಜೇನಸ್‌ ಸರ್ವ ಆದಿ ಆರಂಭಗಳ ದೇವರು. ಪ್ರತಿಯೊಂದು ಕುಶಲ ಕಸಬಿಗೆ ಅದರ ಪೋಷಕ ದೇವನಿದ್ದ. ಭಾವನೆ, ಕಲ್ಪನೆ, ಗುಣಗಳಂಥ ಅಮೂರ್ತರೂಪಗಳನ್ನು ಸಹ ರೋಮನ್ನರು ದೈವೀಕರಿಸುತ್ತಿದ್ದರು. ಪ್ಯಾಕ್ಸ್‌ ಎಂಬವಳು ಶಾಂತಿ ರಕ್ಷಣಾ ದೇವತೆ, ಸ್ಯಾಲಸ್‌ ದೇವಿ ಆರೋಗ್ಯ ಸಂರಕ್ಷಕಿ, ಪುಡೀಕಿಟ್ಯಾ ಎಂಬಾಕೆ ಸಚ್ಚಾರಿತ್ರ್ಯ ಮತ್ತು ಪರಿಶುದ್ಧತೆಯ ದೇವತೆ, ಫಿಡೆಸ್‌ ನಿಷ್ಠೆಯ ದೇವತೆ, ವರ್ಟಸ್‌ ಎಂಬವ ಧೈರ್ಯಕ್ಕೆ ದೇವರಾಗಿದ್ದ ಮತ್ತು ಸುಖಭೋಗದ ದೇವರು ವಾಲಪ್ಟಾಸ್‌. ರೋಮನ್ನರ ಸಾರ್ವಜನಿಕ ಹಾಗೂ ಖಾಸಗಿ ಜೀವನದ ಪ್ರತಿಯೊಂದು ಕ್ರಿಯೆಯು ದೇವೇಚ್ಛೆಗನುಸಾರ ನಡೆಯುತ್ತಿತ್ತೆಂದು ನೆನಸಲಾಗುತ್ತಿತ್ತು. ಆದ್ದರಿಂದ ಯಾವುದೇ ಕೆಲಸದಲ್ಲಿ ಒಳ್ಳೇ ಪ್ರತಿಫಲ ಸಿಗಬೇಕಾದಲ್ಲಿ ವಿಧಿಬದ್ಧ ಪ್ರಾರ್ಥನೆ, ಯಜ್ಞಾರ್ಪಣೆ ಹಾಗೂ ಹಬ್ಬಗಳ ಮೂಲಕ ಆಯಾ ದೇವರುಗಳನ್ನು ಶಾಂತಪಡಿಸಬೇಕಿತ್ತು.

ದೇವರುಗಳ ಇಚ್ಛೆಯೇನೆಂದು ತಿಳಿದುಕೊಳ್ಳುವ ಒಂದು ವಿಧಾನವು ಶಕುನನೋಡುವುದಾಗಿತ್ತು. ಶಕುನನೋಡುವ ಮುಖ್ಯವಿಧಾನವು ಯಜ್ಞಮಾಡಲ್ಪಟ್ಟ ಪ್ರಾಣಿಗಳ ಒಳ ಅಂಗಗಳನ್ನು ಪರೀಕ್ಷಿಸಿ ನೋಡುವುದೇ. ಆ ಅಂಗಗಳು ತೋರಿಬರುವ ಸ್ಥಿತಿಗತಿಯ ಮೇರೆಗೆ ತಾವು ಅಷ್ಟರಲ್ಲೇ ಮಾಡಲಿಕ್ಕಿರುವ ಒಂದು ಕಾರ್ಯಕ್ಕೆ ದೇವರುಗಳ ಸಮ್ಮತಿಯಿದೆ ಅಥವಾ ಸಮ್ಮತಿಯಿಲ್ಲ ಎಂದು ನೆನಸಲಾಗುತ್ತಿತ್ತು.

ಕ್ರಿಸ್ತ ಪೂರ್ವ ಎರಡನೆಯ ಶತಮಾನದ ಅಂತ್ಯದ ಅವಧಿಯೊಳಗೆ ರೋಮನ್ನರು ತಮ್ಮ ಮುಖ್ಯ ದೇವರುಗಳೂ ಗ್ರೀಕರ ನಿರ್ದಿಷ್ಟ ದೇವತಾಗಣಗಳೂ ಎಲ್ಲಾ ಒಂದೇ ಎಂಬ ನಂಬಿಕೆಯನ್ನು ತಾಳತೊಡಗಿದ್ದರು. ಅಂದರೆ ಜೂಪಿಟರನೇ ಸ್ಯೂಸ್‌, ಜೂನೊಳೇ ಹೀರಳೆಂದು ನಂಬುತ್ತಿದ್ದರು. ಗ್ರೀಕ್‌ ದೇವತೆಗಳಿಗೆ ಸಂಬಂಧಿಸಿದ್ದ ಪುರಾಣಕಥೆಗಳನ್ನು ಸಹ ರೋಮನ್ನರು ಅವಲಂಬಿಸಿದರು. ಮನುಷ್ಯರಂತೆ ಲೋಪದೋಷಗಳೂ ಇತಿಮಿತಿಗಳೂ ಇದ್ದ ಆ ದೇವತೆಗಳಿಗೆ ಈ ಪೌರಾಣಿಕ ದಂತಕಥೆಗಳು ಯಾವ ರೀತಿಯಲ್ಲೂ ಮುಖಸ್ತುತಿ ಕೊಟ್ಟಿರಲಿಲ್ಲ. ಉದಾಹರಣೆಗೆ, ಸ್ಯೂಸ್‌ ದೇವನನ್ನು, ಮರ್ತರು ಹಾಗೂ ಅಮರ್ತರೆನಿಸಿಕೊಂಡವರೊಂದಿಗೆ ಲೈಂಗಿಕ ಸಂಬಂಧವಿಟ್ಟಿದ್ದ ಅತ್ಯಾಚಾರಿಯೂ ಶಿಶುಕಾಮಿಯೂ ಆಗಿ ಚಿತ್ರಿಸಲಾಗಿದೆ. ಪುರಾತನ ನಾಟಕಶಾಲೆಗಳಲ್ಲಿ ಹೆಚ್ಚಾಗಿ ಗಟ್ಟಿಯಾದ ಕರತಾಡನಗಳಿಂದ ಅನುಮೋದಿಸಲಾದ ದೇವರುಗಳ ಈ ನಿರ್ಲಜ್ಜಾ ಕೃತ್ಯಗಳು, ಅಂಥ ಹೇಯಕೃತ್ಯಗಳನ್ನು ಮಾಡುವುದಕ್ಕೆ ಏನೂ ಅಡ್ಡಿಯಿಲ್ಲವೆಂದು ಭಕ್ತರು ಕೂಡ ನೆನಸುವಂತೆ ಮಾಡಿತ್ತು.

ಆ ದಂತಕಥೆಗಳನ್ನು ಅಕ್ಷರಾರ್ಥದಲ್ಲಿ ಸ್ವೀಕರಿಸಿದ್ದಿರಬಹುದಾದ ಸುಶಿಕ್ಷಿತ ಜನರು ಕೆಲವರು ಮಾತ್ರ. ಇತರರು ಅದನ್ನು ಸಾಂಕೇತಿಕವಾಗಿ ಅರ್ಥಮಾಡಿಕೊಂಡಿದ್ದರು. ಇದರಿಂದಾಗಿಯೇ ಪೊಂತ್ಯ ಪಿಲಾತನು ತನ್ನ ಪ್ರಖ್ಯಾತ ಪ್ರಶ್ನೆಯಾದ “ಸತ್ಯ ಎಂದರೇನು?” ಎಂದು ಕೇಳಿದ್ದಿರಬೇಕು. (ಯೋಹಾ. 18:38) “ಯಾವುದೊ ಒಂದು ವಿಷಯವು ಸತ್ಯವೆಂದು ಖಡಾಖಂಡಿತವಾಗಿ ಹೇಳಲು ಪ್ರಯತ್ನಿಸುವುದು ವ್ಯರ್ಥವೆಂಬ ಸಾಮಾನ್ಯ ಭಾವನೆಯು ಆ ಸಮಯದ ಸುಶಿಕ್ಷಿತ ಜನರಲ್ಲಿತ್ತೆಂಬುದನ್ನು” ಆ ಪ್ರಶ್ನೆ ವ್ಯಕ್ತಪಡಿಸಿತ್ತು.

ಸಮ್ರಾಟನ ಆರಾಧನೆ

ಚಕ್ರವರ್ತಿ ಅಗಸ್ಟಸನ ಆಳಿಕೆಯ (ಕ್ರಿ.ಪೂ. 27ರಿಂದ ಕ್ರಿ.ಶ. 14) ಸಮಯದಲ್ಲಿ ಸಮ್ರಾಟನ ಆರಾಧನಾ ಪದ್ಧತಿಯು ಆರಂಭಿಸಿತು. ವಿಶೇಷವಾಗಿ ಗ್ರೀಕ್‌ ಭಾಷೆಯನ್ನಾಡುವ ಪೂರ್ವ ಪ್ರಾಂತಗಳಲ್ಲಿ ಅನೇಕರು ಅಗಸ್ಟಸನಿಗೆ ನಿಜ ಆಭಾರಿಗಳಾಗಿದ್ದರು. ಏಕೆಂದರೆ ದೀರ್ಘಾವಧಿಯ ಯುದ್ಧದ ನಂತರ ಅವನು ಶಾಂತಿ, ಸಮೃದ್ಧಿಯನ್ನು ಸ್ಥಾಪಿಸಿದ್ದನು. ತಾವು ಕಾಣಸಾಧ್ಯವಿದ್ದ ಒಬ್ಬ ವ್ಯಕ್ತಿ ಅಧಿಕಾರಪದದಲ್ಲಿದ್ದುಕೊಂಡು ತಮ್ಮನ್ನು ಸದಾ ಸಂರಕ್ಷಿಸುವಂತೆ ಜನರು ಬಯಸಿದರು. ಧಾರ್ಮಿಕ ಭಿನ್ನತೆಗಳನ್ನು ಪರಿಹರಿಸಿ, ದೇಶಭಕ್ತಿಯನ್ನು ಪ್ರವರ್ಧಿಸುವ ಹಾಗೂ ಲೋಕವನ್ನು ಅದರ “ಸಂರಕ್ಷಕನ” ಕೈಕೆಳಗೆ ಒಂದುಗೂಡಿಸುವ ಒಂದು ಸಂಘಟನೆಯನ್ನು ಅವರು ಅಪೇಕ್ಷಿಸಿದರು. ಫಲಿತಾಂಶವಾಗಿ ಸಮ್ರಾಟರನ್ನು ದೇವರಾಗಿ ವೀಕ್ಷಿಸುವುದು ಆರಂಭಿಸಿತು.

ಅಗಸ್ಟಸನು ಜೀವದಿಂದಿದ್ದಾಗ ಇತರರಿಂದ ದೇವರೆಂದು ಕರೆಸಿಕೊಳ್ಳಲು ಸಮ್ಮತಿಸಲಿಲ್ಲವಾದರೂ ರೋಮನ್ನು “ರೋಮಾ ಡಿಯಾ” ಎಂಬ ದೇವತೆಯಾಗಿ ವ್ಯಕ್ತೀಕರಿಸಿ ಅದರ ಪೂಜೆ ಮಾಡುವಂತೆ ಅವನು ಒತ್ತಾಯಿಸಿದನು. ಮರಣಾನಂತರ ಅಗಸ್ಟಸನನ್ನು ಒಬ್ಬ ದೇವರಾಗಿ ಘೋಷಿಸಲಾಯಿತು. ಹೀಗೆ ಪ್ರಾಂತಗಳ ಸ್ಥಳೀಯ ಧಾರ್ಮಿಕ ಸಂವೇದನೆ ಹಾಗೂ ದೇಶಭಕ್ತಿಯ ಭಾವನೆಗಳು ಸಾಮ್ರಾಜ್ಯದ ಕೇಂದ್ರದತ್ತ ಮತ್ತು ಅದರ ಅರಸರತ್ತ ನಿರ್ದೇಶಿಸಲ್ಪಟ್ಟವು. ಸಮ್ರಾಟನ ಈ ಹೊಸ ಆರಾಧನಾ ಪದ್ಧತಿ ಬೇಗನೆ ಎಲ್ಲಾ ಪ್ರಾಂತಗಳಿಗೆ ಹಬ್ಬಿ ರಾಜ್ಯಕ್ಕೆ ಗೌರವ ಮತ್ತು ನಿಷ್ಠೆಯನ್ನು ವ್ಯಕ್ತಪಡಿಸುವ ಮಾರ್ಗವಾಗಿ ಪರಿಣಮಿಸಿತು.

ತನ್ನನ್ನು ದೇವರಾಗಿ ಆರಾಧಿಸಬೇಕೆಂದು ಹಕ್ಕೊತ್ತಾಯ ಮಾಡಿದ ಮೊದಲನೆ ರೋಮನ್‌ ಅರಸನು ಕ್ರಿ.ಶ. 81ರಿಂದ 96ರ ತನಕ ಸಮ್ರಾಟನಾಗಿದ್ದ ಡೊಮಿಶನ್‌. ಆ ಸಮಯದೊಳಗೆ ರೋಮನ್ನರು ಯೆಹೂದ್ಯರ ಮತ್ತು ಕ್ರೈಸ್ತರ ನಡುವಣ ವ್ಯತ್ಯಾಸವನ್ನು ಕಂಡುಕೊಂಡಿದ್ದರು. ಅಲ್ಲದೆ ಹೊಸ ಪಂಗಡವೆಂದು ವೀಕ್ಷಿಸಲಾಗಿದ್ದ ಆ ಕ್ರೈಸ್ತರನ್ನು ವಿರೋಧಿಸ ತೊಡಗಿದ್ದರು. ಅಪೊಸ್ತಲ ಯೋಹಾನನು “ಯೇಸುವಿನ ಕುರಿತು ಸಾಕ್ಷಿನೀಡಿದ್ದಕ್ಕಾಗಿ” ಪತ್ಮೋಸ್‌ ದ್ವೀಪಕ್ಕೆ ಗಡೀಪಾರು ಆದದ್ದು ಡೊಮಿಶನ್‌ನ ಆಳ್ವಿಕೆಯ ಸಮಯದಲ್ಲೇ ಎಂಬುದು ಸಂಭಾವ್ಯ.—ಪ್ರಕ. 1:9.

ಪ್ರಕಟನೆ ಪುಸ್ತಕವು ಬರೆಯಲ್ಪಟ್ಟದ್ದು ಯೋಹಾನನು ಬಂದಿವಾಸದಲ್ಲಿದ್ದ ಸಮಯದಲ್ಲೇ. ಸಮ್ರಾಟನ ಆರಾಧನೆಗೆ ಪ್ರಸಿದ್ಧ ಕೇಂದ್ರವಾಗಿದ್ದ ಪೆರ್ಗಮದಲ್ಲಿ ಅಂತಿಪನೆಂಬ ಕ್ರೈಸ್ತನು ಕೊಲ್ಲಲ್ಪಟ್ಟದ್ದರ ಕುರಿತು ಯೋಹಾನನು ಅದರಲ್ಲಿ ತಿಳಿಸುತ್ತಾನೆ. (ಪ್ರಕ. 2:12, 13) ಅಷ್ಟರೊಳಗೆ, ರಾಜ್ಯ ಧರ್ಮದ ಆರಾಧನಾ ಸಂಸ್ಕಾರಗಳನ್ನು ಕ್ರೈಸ್ತರು ನಡಿಸಲೇಬೇಕೆಂಬ ಒತ್ತಾಯವನ್ನು ಸಮ್ರಾಟನ ಸರಕಾರವು ಹಾಕಲಾರಂಭಿಸಿದ್ದಿರಬಹುದು. ವಿಷಯವು ಹಾಗಿತ್ತೊ ಇಲ್ಲವೊ, ಈ ಲೇಖನದ ಆರಂಭದಲ್ಲಿ ತಿಳಿಸಲಾದ ಟ್ರೇಜನ್‌ಗೆ ಬರೆದ ಪತ್ರದಲ್ಲಿ ಸೂಚಿಸಲ್ಪಟ್ಟ ಪ್ರಕಾರ ಕ್ರಿ.ಶ. 112ರೊಳಗೆ ಅಂಥ ಸಂಸ್ಕಾರಗಳನ್ನು ಬಿಥೂನ್ಯದ ಕ್ರೈಸ್ತರು ನಡಿಸುವಂತೆ ಪ್ಲಿನಿಯು ಒತ್ತಾಯಪಡಿಸುತ್ತಿದ್ದನು ಎಂಬದು ವ್ಯಕ್ತ.

ತನ್ನ ಮುಂದೆ ತರಲ್ಪಟ್ಟ ಪ್ರಕರಣಗಳನ್ನು ಪ್ಲಿನಿಯು ನಿರ್ವಹಿಸುತ್ತಿದ್ದ ರೀತಿಗಾಗಿ ಟ್ರೇಜನ್‌ ಅವನನ್ನು ಹೊಗಳುತ್ತಾ ರೋಮನ್‌ ದೇವರುಗಳನ್ನು ಆರಾಧಿಸಲು ನಿರಾಕರಿಸಿದ್ದ ಕ್ರೈಸ್ತರನ್ನು ಹತ್ಯೆಮಾಡುವಂತೆ ನಿರ್ದೇಶಿಸಿದನು. “ಆದರೂ ಯಾರು ತಾನು ಕ್ರೈಸ್ತನು ಎಂಬುದನ್ನು ಅಲ್ಲಗಳೆದು ನಮ್ಮ ದೇವರುಗಳಿಗೆ ಮೊರೆಯಿಡುವ ಮೂಲಕ ತನ್ನ ಪಶ್ಚಾತ್ತಾಪದ ಪುರಾವೆ ಕೊಡುತ್ತಾನೊ (ಹಿಂದೆ ಇದ್ದ ಯಾವುದೇ ಸಂಶಯದ ಹೊರತಾಗಿಯೂ) ಅವನಿಗೆ ಕ್ಷಮೆದೋರು” ಎಂದು ಬರೆದನು ಟ್ರೇಜನ್‌.

ತನ್ನ ಅನುಯಾಯಿಗಳಿಂದ ಅನನ್ಯ ಭಕ್ತಿಯನ್ನು ಕೇಳಿಕೊಳ್ಳುವ ಧರ್ಮವೊಂದು ಇದೆ ಎಂಬುದು ರೋಮನ್‌ ಪರ್ಯಾಲೋಚನಾ ಗ್ರಹಿಕೆಗೆ ನಿಲುಕದ ವಿಷಯ. ರೋಮನ್ನರ ದೇವರುಗಳೇ ಅದನ್ನು ಅವಶ್ಯಪಡಿಸದೆ ಇದ್ದಾಗ ಕ್ರೈಸ್ತರ ದೇವರೇಕೆ ಅದನ್ನು ಅವಶ್ಯಪಡಿಸಬೇಕು ಎಂದವರ ಮತ. ದೇಶವನ್ನು ದೇವರಾಗಿ ಆರಾಧಿಸುವುದು ರಾಜಕೀಯ ವ್ಯವಸ್ಥೆಗೆ ಬರೇ ಅಂಗೀಕಾರವನ್ನು ಸೂಚಿಸುತ್ತದೆ ವಿನಹಾ ಬೇರೇನೂ ಅಲ್ಲ ಎಂದವರು ಭಾವಿಸುತ್ತಿದ್ದರು. ಆದುದರಿಂದ ಅವುಗಳ ಆರಾಧನೆಯನ್ನು ನಿರಾಕರಿಸುವುದು ಅವರ ಲೆಕ್ಕಕ್ಕೆ ದೇಶದ್ರೋಹ. ಪ್ಲಿನಿಯು ಕಂಡುಕೊಂಡಂತೆ, ದೇಶಭಕ್ತಿ ಮಾಡುವಂತೆ ಹೆಚ್ಚಿನ ಕ್ರೈಸ್ತರನ್ನು ಒತ್ತಾಯಿಸುವುದು ಅಸಾಧ್ಯವಾಗಿತ್ತು. ಯಾಕೆಂದರೆ ಅಂಥ ಒಂದು ಕ್ರಿಯೆಯು ಯೆಹೋವನಿಗೆ ತಮ್ಮ ಅಪನಂಬಿಗಸ್ತಿಕೆಯ ಸೂಚನೆ ಎಂದವರಿಗೆ ತಿಳಿದಿತ್ತು. ಆದಿ ಕ್ರೈಸ್ತರಲ್ಲಿ ಅನೇಕರು ಸಮ್ರಾಟನ ಆರಾಧನೆಯನ್ನು ಮಾಡುವುದಕ್ಕಿಂತ ಸಾಯುವುದನ್ನು ಇಷ್ಟಪಟ್ಟರು. ಯಾಕೆಂದರೆ ಅದು ವಿಗ್ರಹಾರಾಧನೆಗೆ ಸಮಾನವಾಗಿದೆ.

ಇದು ಇಂದು ನಮಗೆ ಆಸಕ್ತಿಯದ್ದಾಗಿರುವುದೇಕೆ? ಕೆಲವು ದೇಶಗಳಲ್ಲಿ ರಾಷ್ಟ್ರೀಯ ಚಿಹ್ನೆಗಳಿಗೆ ಗೌರವ ತೋರಿಸುವಂತೆ ಪ್ರಜೆಗಳಿಂದ ಅಪೇಕ್ಷಿಸಲ್ಪಡುತ್ತದೆ. ಕ್ರೈಸ್ತರಾದ ನಾವು ಐಹಿಕ ಸರಕಾರಗಳ ಅಧಿಕಾರವನ್ನು ಗೌರವಿಸುತ್ತೇವೆ ನಿಶ್ಚಯ. (ರೋಮ. 13:1) ಆದರೆ ರಾಷ್ಟ್ರ ಧ್ವಜಗಳನ್ನು ಒಳಗೂಡಿದ ಸಮಾರಂಭಗಳ ವಿಷಯದಲ್ಲಿ ನಮ್ಮ ನಿಲುವು ಬೇರೆ. ಅನನ್ಯ ಭಕ್ತಿಯನ್ನು ಕೇಳಿಕೊಳ್ಳುವ ಯೆಹೋವ ದೇವರ ಅವಶ್ಯಕತೆ ಹಾಗೂ “ವಿಗ್ರಹಾರಾಧನೆಯನ್ನು ಬಿಟ್ಟು ಓಡಿಹೋಗಿರಿ” ಮತ್ತು “ವಿಗ್ರಹಗಳಿಂದ ನಿಮ್ಮನ್ನು ಕಾಪಾಡಿಕೊಳ್ಳಿರಿ” ಎಂಬ ಬೈಬಲಿನ ಸಲಹೆಯಿಂದ ನಾವು ಪ್ರಚೋದಿತರಾಗಿದ್ದೇವೆ. (1 ಕೊರಿಂ. 10:14; 1 ಯೋಹಾ. 5:21; ನಹೂ. 1:2) ಯೇಸು ಅಂದದ್ದು: “ನಿನ್ನ ದೇವರಾದ ಯೆಹೋವನನ್ನೇ ನೀನು ಆರಾಧಿಸಬೇಕು ಮತ್ತು ಆತನೊಬ್ಬನಿಗೇ ನೀನು ಪವಿತ್ರ ಸೇವೆಯನ್ನು ಸಲ್ಲಿಸಬೇಕು.” (ಲೂಕ 4:8) ಆದುದರಿಂದ ನಮ್ಮ ನಿಷ್ಠೆಯನ್ನು ನಾವು ಆರಾಧಿಸುತ್ತಿರುವ ದೇವರಿಗೆ ಸದಾ ತೋರಿಸುತ್ತಿರೋಣ.

[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]

ನಿಜ ಕ್ರೈಸ್ತರು ಯೆಹೋವನಿಗೆ ತಮ್ಮ ಅನನ್ಯ ಭಕ್ತಿಯನ್ನು ಕೊಡುತ್ತಾರೆ

[ಪುಟ 3ರಲ್ಲಿರುವ ಚಿತ್ರಗಳು]

ಆದಿ ಕ್ರೈಸ್ತರು ಸಮ್ರಾಟನನ್ನಾಗಲಿ ದೇವರುಗಳ ವಿಗ್ರಹಗಳನ್ನಾಗಲಿ ಆರಾಧಿಸಲು ನಿರಾಕರಿಸಿದರು

ಸಮ್ರಾಟ ಡೊಮಿಶನ್‌

ಸ್ಯೂಸ್‌

[ಕೃಪೆ]

Emperor Domitian: Todd Bolen/Bible Places.com; Zeus: Photograph by Todd Bolen/Bible Places.com, taken at Archaeological Museum of Istanbul

[ಪುಟ 4ರಲ್ಲಿರುವ ಚಿತ್ರ]

ಎಫೆಸದ ಕ್ರೈಸ್ತರು ಜನಪ್ರಿಯ ಅರ್ತೆಮೀದೇವಿಯನ್ನು ಪೂಜಿಸಲು ನಿರಾಕರಿಸಿದರು.— ಅ. ಕಾ. 19:23-41