ಖಾರಾನ್ ಗಾಢ ಚಟುವಟಿಕೆಯ ಪುರಾತನ ಗೂಡು
ಖಾರಾನ್ ಗಾಢ ಚಟುವಟಿಕೆಯ ಪುರಾತನ ಗೂಡು
ಶಾಸ್ತ್ರಗ್ರಂಥದ ಪರಿಚಯವಿದ್ದವರಿಗೆ ಖಾರಾನ್ ಎಂಬ ಹೆಸರೆತ್ತಿದರೆ ಸಾಕು, ತಕ್ಷಣ ನಂಬಿಗಸ್ತ ಪೂರ್ವಜ ಅಬ್ರಹಾಮನು ಮನಸ್ಸಿಗೆ ಬರುತ್ತಾನೆ. ಊರ್‌ನಿಂದ ಕಾನಾನಿಗೆ ಹೋಗುವಾಗ ಅಬ್ರಹಾಮನೂ ಅವನ ಪತ್ನಿ ಸಾರಳೂ ಅವನ ತಂದೆ ತೆರಹನೂ ಸೋದರಳಿಯ ಲೋಟನೂ ಖಾರಾನಿನಲ್ಲಿ ತಂಗಿದ್ದರು. ಅಲ್ಲಿ ಅಬ್ರಹಾಮನು ಹೆಚ್ಚಿನ ಸಂಪತ್ತನ್ನು ಸಂಪಾದಿಸಿದನು. ತನ್ನ ತಂದೆಯ ಮರಣದ ನಂತರ ಅಬ್ರಹಾಮನು ಅಲ್ಲಿಂದ ಸತ್ಯ ದೇವರು ವಾಗ್ದಾನ ಮಾಡಿದ್ದ ದೇಶಕ್ಕೆ ತನ್ನ ಪ್ರಯಾಣವನ್ನು ಮುಂದುವರಿಸಿದನು. (ಆದಿ. 11:31, 32; 12:4, 5; ಅ. ಕಾ. 7:2-4) ತದನಂತರ ಮಗ ಇಸಾಕನಿಗೆ ಪತ್ನಿಯನ್ನು ಹುಡುಕಲಿಕ್ಕಾಗಿ ಅಬ್ರಹಾಮನು ತನ್ನ ಹಿರಿಯ ಸೇವಕನನ್ನು ಖಾರಾನಿಗೆ ಅಥವಾ ಸಮೀಪದ ಪ್ರದೇಶಕ್ಕೆ ಕಳುಹಿಸಿದನು. ಅಬ್ರಹಾಮನ ಮೊಮ್ಮಗ ಯಾಕೋಬನು ಸಹ ಅನೇಕ ವರ್ಷಗಳ ಕಾಲ ಖಾರಾನಿನಲ್ಲಿ ಜೀವಿಸಿದನು.—ಆದಿ. 24:1-4, 10; 27:42-45; 28:1, 2, 10.
ಅಶ್ಶೂರದ ರಾಜ ಸನ್ಹೇರೀಬನು ಯೆಹೂದದ ರಾಜ ಹಿಜ್ಕೀಯನಿಗೆ ನೀಡಿದ ಬೆದರಿಕೆಯಲ್ಲಿ, ಅಶ್ಶೂರದ ರಾಜರಿಂದ ಸೋಲಿಸಲ್ಪಟ್ಟ ‘ಜನಾಂಗಗಳಲ್ಲಿ’ [NIBV] ಖಾರಾನ್ ಸಹ ಸೇರಿತ್ತು ಎಂದು ಪಟ್ಟಿಮಾಡಲಾಗಿದೆ. “ಖಾರಾನ್” ಎಂದು ಇಲ್ಲಿ ಹೇಳಲಾಗಿರುವುದು ಆ ನಗರಕ್ಕೆ ಮಾತ್ರವಲ್ಲ, ಬದಲಾಗಿ ಸುತ್ತಲೂ ಇದ್ದ ಜಿಲ್ಲೆಗೂ ಸೂಚಿಸಿತ್ತು. (2 ಅರ. 19:11, 12) ಯೆಹೆಜ್ಕೇಲನ ಪ್ರವಾದನೆಯು ಖಾರಾನ [ಹಾರಾನ]ನ್ನು ತೂರಿನ ಮುಖ್ಯ ವ್ಯಾಪಾರೀ ಪಾಲುದಾರರಲ್ಲಿ ಒಂದು ಎಂದು ಹೇಳುತ್ತದೆ. ಹೀಗೆ ಅದು ಖಾರಾನನ್ನು ಒಂದು ಪ್ರಧಾನ ವಾಣಿಜ್ಯ ಕೇಂದ್ರವೆಂದು ದೃಢಪಡಿಸುತ್ತದೆ.—ಯೆಹೆ. 27:1, 2, 23.
ಈಗ ಖಾರಾನ್ ಪೂರ್ವ ಟರ್ಕಿಯ ಶಾನ್ಲಊರ್ಫಾದ ಸಮೀಪದಲ್ಲಿ ನೆಲೆಸಿರುವ ಒಂದು ಚಿಕ್ಕ ಪಟ್ಟಣವಾಗಿದೆಯಷ್ಟೆ. ಆದರೆ ಒಂದು ಸಮಯದಲ್ಲಿ ಈ ಪುರಾತನ ನಗರವು ನಿಜವಾಗಿಯೂ ಗಾಢ ಚಟುವಟಿಕೆಯ ಗೂಡಾಗಿತ್ತು. ಬೈಬಲ್‌ನಲ್ಲಿ ಹೇಳಲಾಗಿರುವ ಅದೇ ಹೆಸರನ್ನು ಇನ್ನೂ ಉಳಿಸಿಕೊಂಡಿರುವ ಕೆಲವೇ ಕೆಲವು ಪುರಾತನ ನೆಲಸುನಾಡುಗಳಲ್ಲಿ ಖಾರಾನ್ ಒಂದಾಗಿದೆ. ಇದರ ಅಶ್ಶೂರ ಪದರೂಪ ಕರಾನು. ಇದು “ರಸ್ತೆ” ಅಥವಾ “ಯಾತ್ರಿಕ ಮಾರ್ಗ” ಎಂಬ ಅರ್ಥವನ್ನು ಕೊಡಬಲ್ಲದು. ಇದರಿಂದ ಖಾರಾನ್ ದೊಡ್ಡ ನಗರಗಳ ಮಧ್ಯೆಯಿದ್ದ ಪ್ರಧಾನ ವ್ಯಾಪಾರ ಮಾರ್ಗಗಳಲ್ಲಿ ನೆಲೆಸಿತ್ತು ಎಂದು ತಿಳಿಯುತ್ತದೆ. ಖಾರಾನಿನಲ್ಲಿ ಅಗೆದು ತೆಗೆಯಲಾದ ಶಿಲಾಶಾಸನಗಳಿಗನುಸಾರ ಬಾಬೆಲಿನ ರಾಜ ನೆಬೊನೈಡಸನ ತಾಯಿಯು ಖಾರಾನಿನ ಚಂದ್ರ ದೇವ ಸಿನ್‌ನ ದೇವಾಲಯದಲ್ಲಿ ಮುಖ್ಯ ಪುರೋಹಿತೆಯಾಗಿದ್ದಳು. ಈ ದೇವಾಲಯವನ್ನು ನೆಬೊನೈಡಸನು ಜೀರ್ಣೋದ್ಧಾರ ಮಾಡಿದನೆಂದು ಹೇಳಲಾಗುತ್ತದೆ. ತದನಂತರ ಖಾರಾನ್ ಅನೇಕ ಸಾಮ್ರಾಜ್ಯಗಳ ಏಳು-ಬೀಳುಗಳನ್ನು ಕಂಡಿತು.
ಇಂದು ಖಾರಾನ್ ಹಿಂದೆ ಹೇಗಿತ್ತೋ ಅದಕ್ಕಿಂತ ಬಹಳ ಭಿನ್ನವಾಗಿದೆ. ಪುರಾತನ ಖಾರಾನ್, ಮುಖ್ಯವಾಗಿ ಕೆಲವು ಕಾಲಾವಧಿಗಳಲ್ಲಿ ಅಭಿವೃದ್ಧಿ ಹೊಂದಿದ್ದ ಪ್ರಧಾನ ನಗರವಾಗಿತ್ತು. ಆದರೆ ಇಂದು ಅದು ಗುಮ್ಮಟಾಕಾರದ ಛಾವಣಿಗಳುಳ್ಳ ಮನೆಗಳ ಗುಂಪಾಗಿದೆಯಷ್ಟೆ. ಅದರ ಸುತ್ತಲೂ ಪುರಾತನ ನಾಗರಿಕತೆಯ ಭಗ್ನಾವಶೇಷಗಳನ್ನು ಕಾಣಬಹುದು. ದೇವರು ತರಲಿರುವ ಹೊಸ ಲೋಕದಲ್ಲಿ ಖಾರಾನಿನಲ್ಲಿ ಒಂದೊಮ್ಮೆ ಜೀವಿಸಿದ್ದ ಅಬ್ರಹಾಮ, ಸಾರ ಹಾಗೂ ಲೋಟರು ಸೇರಿದಂತೆ ಅನೇಕರು ಪುನರುತ್ಥಾನಗೊಳಿಸಲ್ಪಡುವರು. ಅವರು ಗಾಢ ಚಟುವಟಿಕೆಗಳ ಪುರಾತನ ಗೂಡಾಗಿದ್ದ ಖಾರಾನಿನ ಕುರಿತು ಹೆಚ್ಚು ಮಾಹಿತಿಯನ್ನು ನಮಗೆ ತಿಳಿಸುವ ಹೆಚ್ಚಿನ ಸಂಭಾವ್ಯತೆಯಿದೆ.
[ಪುಟ 20ರಲ್ಲಿರುವ ಚಿತ್ರ]
ಖಾರಾನಿನ ಭಗ್ನಾವಶೇಷಗಳು
[ಪುಟ 20ರಲ್ಲಿರುವ ಚಿತ್ರ]
ಗುಮ್ಮಟಾಕಾರದ ಛಾವಣಿಗಳಿರುವ ಮನೆಗಳು
[ಪುಟ 20ರಲ್ಲಿರುವ ಚಿತ್ರ]
ಇಂದು ಖಾರಾನಿನ ಸುತ್ತುನೋಟ