ನಿಮ್ಮ ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸುತ್ತಾ ಇರಿ
ನಿಮ್ಮ ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸುತ್ತಾ ಇರಿ
ಪ್ರವೀಣ ಅಂಗಸಾಧಕನೊಬ್ಬನು ಚಳಕದಿಂದ ಮಾಡುವ ಆಕರ್ಷಕ ಕಸರತ್ತುಗಳನ್ನು ನೋಡುವುದು ಅದೆಷ್ಟು ರೋಮಾಂಚಕ! ಅಂಗಸಾಧಕನು ತನ್ನನ್ನು ತರಬೇತುಗೊಳಿಸುವಂತೆಯೇ ಕ್ರೈಸ್ತರು ತಮ್ಮ ಆಲೋಚನಾ ಸಾಮರ್ಥ್ಯವನ್ನು ತರಬೇತುಗೊಳಿಸಬೇಕು ಎಂದು ಬೈಬಲ್ ಉತ್ತೇಜಿಸುತ್ತದೆ.
ಇಬ್ರಿಯರಿಗೆ ಬರೆದ ತನ್ನ ಪತ್ರದಲ್ಲಿ ಅಪೊಸ್ತಲ ಪೌಲನು, “ಗಟ್ಟಿಯಾದ ಆಹಾರವು ಪ್ರೌಢರಿಗೆ ಅಂದರೆ ಸರಿ ಮತ್ತು ತಪ್ಪಿನ ಭೇದವನ್ನು ತಿಳಿಯಲಿಕ್ಕಾಗಿ ಉಪಯೋಗದ ಮೂಲಕ ತಮ್ಮ ಗ್ರಹಣ ಶಕ್ತಿಗಳನ್ನು [ಅಕ್ಷರಾರ್ಥವಾಗಿ, “ಜ್ಞಾನೇಂದ್ರಿಯಗಳನ್ನು”] [ಅಂಗಸಾಧಕನಂತೆ] ತರಬೇತುಗೊಳಿಸಿಕೊಂಡವರಿಗೆ ಸೇರಿದ್ದಾಗಿದೆ” ಎಂದು ತಿಳಿಸಿದನು. (ಇಬ್ರಿ. 5:14) ನುರಿತ ಅಂಗಸಾಧಕನು ತನ್ನ ಸ್ನಾಯುಗಳನ್ನು ತರಬೇತುಗೊಳಿಸುತ್ತಾನೆ. ಅಂತೆಯೇ ಇಬ್ರಿಯ ಕ್ರೈಸ್ತರು ತಮ್ಮ ಆಲೋಚನಾ ಸಾಮರ್ಥ್ಯವನ್ನು ತರಬೇತುಗೊಳಿಸಬೇಕು ಎಂದು ಪೌಲನು ಬುದ್ಧಿಹೇಳಿದ್ದೇಕೆ? ನಮ್ಮ ಗ್ರಹಣ ಶಕ್ತಿಗಳನ್ನು ನಾವು ಹೇಗೆ ತರಬೇತುಗೊಳಿಸಬಲ್ಲೆವು?
“ನೀವು ಬೋಧಕರಾಗಿರಬೇಕಾಗಿತ್ತು”
“ಮೆಲ್ಕಿಜೆದೇಕನ ರೀತಿಗನುಸಾರವಾದ ಮಹಾ ಯಾಜಕನು” ಎಂದು ಯೇಸುವಿನ ಸ್ಥಾನದ ಕುರಿತು ವಿವರಿಸುವಾಗ ಪೌಲನು ಬರೆದದ್ದು: “ಅವನ [ಯೇಸುವಿನ] ವಿಷಯದಲ್ಲಿ ನಾವು ಹೇಳಬೇಕಾಗಿರುವುದು ಎಷ್ಟೋ ಇದೆ, ಆದರೆ ನಿಮ್ಮ ಕಿವಿಗಳು ಮಂದವಾಗಿರುವುದರಿಂದ ಅದನ್ನು ವಿವರಿಸುವುದು ಕಷ್ಟಕರ. ವಾಸ್ತವದಲ್ಲಿ ಕಾಲವನ್ನು ನೋಡಿದರೆ ನೀವು ಬೋಧಕರಾಗಿರಬೇಕಾಗಿತ್ತು, ಆದರೆ ನಿಮಗೆ ಪವಿತ್ರ ದೈವೋಕ್ತಿಗಳ ಪ್ರಾಥಮಿಕ ವಿಷಯಗಳನ್ನು ಪುನಃ ಆರಂಭದಿಂದ ಯಾರಾದರೂ ಕಲಿಸಿಕೊಡಬೇಕಾಗಿದೆ; ನೀವು ಹಾಲಿನ ಆವಶ್ಯಕತೆಯುಳ್ಳವರಂತೆ ಇದ್ದೀರೇ ಹೊರತು ಗಟ್ಟಿಯಾದ ಆಹಾರದ ಆವಶ್ಯಕತೆಯುಳ್ಳವರಂತೆ ಅಲ್ಲ.”—ಇಬ್ರಿ. 5:10-12.
ಪ್ರಥಮ ಶತಮಾನದಲ್ಲಿದ್ದ ಕೆಲವು ಯೆಹೂದಿ ಕ್ರೈಸ್ತರು ತಮ್ಮ ತಿಳಿವಳಿಕೆಯನ್ನು ಹೆಚ್ಚಿಸಿಕೊಂಡಿರಲಿಲ್ಲ ಎಂಬುದು ವ್ಯಕ್ತ. ಅವರು ಆಧ್ಯಾತ್ಮಿಕ ಪ್ರಗತಿಯನ್ನು ಮಾಡಲು ತಪ್ಪಿಹೋಗಿದ್ದರು. ಉದಾಹರಣೆಗೆ, ಧರ್ಮಶಾಸ್ತ್ರ ಮತ್ತು ಸುನ್ನತಿಯ ವಿಷಯದಲ್ಲಿ ಸಿಕ್ಕಿದ ಹೆಚ್ಚಿನ ಆಧ್ಯಾತ್ಮಿಕ ಬೆಳಕನ್ನು ಸ್ವೀಕರಿಸುವುದು ಅವರಿಗೆ ಕಷ್ಟಕರವಾಗಿತ್ತು. (ಅ. ಕಾ. 15:1, 2, 27-29; ಗಲಾ. 2:11-14; 6:12, 13) ಸಾಪ್ತಾಹಿಕ ಸಬ್ಬತ್ ಮತ್ತು ವಾರ್ಷಿಕ ದೋಷಪರಿಹಾರಕ ದಿನಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಆಚರಣೆಗಳನ್ನು ಬಿಟ್ಟುಬಿಡುವುದು ಕೆಲವರಿಗೆ ಕಷ್ಟವೆಂದು ಕಂಡಿತು. (ಕೊಲೊ. 2:16, 17; ಇಬ್ರಿ. 9:1-14) ಆದುದರಿಂದ ಪೌಲನು ಸರಿ ಮತ್ತು ತಪ್ಪಿನ ಭೇದವನ್ನು ತಿಳಿಯಲಿಕ್ಕಾಗಿ ತಮ್ಮ ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸಿಕೊಳ್ಳುವಂತೆ ಅವರನ್ನು ಪ್ರೋತ್ಸಾಹಿಸಿದನು. ಮಾತ್ರವಲ್ಲದೆ ‘ಪ್ರೌಢತೆಯ ಕಡೆಗೆ ಮುಂದೊತ್ತುವಂತೆ’ ಹೇಳಿದನು. (ಇಬ್ರಿ. 6:1, 2) ಅವನು ಕೊಟ್ಟ ಪ್ರೋತ್ಸಾಹದಿಂದ ಕೆಲವರು ತಮ್ಮ ಆಲೋಚನಾ ಸಾಮರ್ಥ್ಯವನ್ನು ಹೇಗೆ ಉಪಯೋಗಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಲು ಪ್ರಚೋದಿಸಲ್ಪಟ್ಟಿರಬೇಕು. ಅವರು ಆಧ್ಯಾತ್ಮಿಕ ಪ್ರಗತಿ ಮಾಡಲು ಸಹ ಸಹಾಯ ಸಿಕ್ಕಿರಬೇಕು. ನಮ್ಮ ಕುರಿತಾಗಿ ಏನು?
ನಿಮ್ಮ ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸಿ
ಆಧ್ಯಾತ್ಮಿಕವಾಗಿ ಪ್ರೌಢರಾಗಲು ನಾವು ನಮ್ಮ ಆಲೋಚನಾ ಸಾಮರ್ಥ್ಯವನ್ನು ಹೇಗೆ ತರಬೇತುಗೊಳಿಸಬಲ್ಲೆವು? “ಉಪಯೋಗದ ಮೂಲಕ” ಎಂದನು ಪೌಲ. ಅಂಗಸಾಧಕರು ವ್ಯಾಯಾಮದ ಮೂಲಕ ತಮ್ಮ ಸ್ನಾಯುಗಳನ್ನು ಮತ್ತು ದೇಹವನ್ನು ತರಬೇತುಗೊಳಿಸಿ ಸುಂದರವೂ ಕ್ಲಿಷ್ಟಕರವೂ ಆದ ಕಸರತ್ತುಗಳನ್ನು ಮಾಡುತ್ತಾರೆ. ಅಂತೆಯೇ ನಾವು ಸರಿ ಮತ್ತು ತಪ್ಪಿನ ಭೇದವನ್ನು ತಿಳಿಯಲಿಕ್ಕಾಗಿ ನಮ್ಮ ಆಲೋಚನಾ ಸಾಮರ್ಥ್ಯವನ್ನು ತರಬೇತುಗೊಳಿಸಬೇಕು.
“ನಿಮ್ಮ ಮಿದುಳಿಗೆ ನೀವು ಮಾಡಬಲ್ಲ ಏಕಮಾತ್ರ ಅತ್ಯುತ್ತಮ ವಿಷಯವು ವ್ಯಾಯಾಮವೇ ಆಗಿದೆ” ಎನ್ನುತ್ತಾರೆ ಜಾನ್ ರೇಟೀ. ಇವರು ಹಾರ್ವಡ್ ಮೆಡಿಕಲ್ ಸ್ಕೂಲ್‌ನಲ್ಲಿ ಮನೋರೋಗ ಚಿಕಿತ್ಸೆಯ ವೈದ್ಯಕೀಯ ಸಹಾಯಕ ಪ್ರೊಫೆಸರ್ ಆಗಿದ್ದಾರೆ. ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿರುವ ‘ವೃದ್ಧಾಪ್ಯ, ಆರೋಗ್ಯ ಮತ್ತು ಮಾನವಿಕಗಳ ಕೇಂದ್ರ’ದ ನಿರ್ದೇಶಕರಾದ ಜೀನ್ ಕೊಹನ್‌ಗನುಸಾರ, “ನಾವು ನಮ್ಮ ಮಿದುಳಿಗೆ ಕ್ಲಿಷ್ಟಕರ ಕೆಲಸವನ್ನು ಕೊಡುವಾಗ ಮಿದುಳಿನ ಜೀವಕೋಶಗಳು ಹೊಸ ಕವಲುಚಾಚಿಕೆ [ಡೆಂಡ್ರೈಟು]ಗಳನ್ನು ಉತ್ಪಾದಿಸುತ್ತವೆ. ಇದರಿಂದ ಹೆಚ್ಚಿನ ನರಕೋಶ ಸಂಗಮಗಳು ಅಥವಾ ಸಂಪರ್ಕ ಬಿಂದುಗಳು ಉಂಟಾಗುತ್ತವೆ.”
ಆದುದರಿಂದ ನಮ್ಮ ಆಲೋಚನಾ ಸಾಮರ್ಥ್ಯವನ್ನು ತರಬೇತುಮಾಡಿ ದೇವರ ವಾಕ್ಯದ ಜ್ಞಾನವನ್ನು ಹೆಚ್ಚಿಸುವುದು ವಿವೇಕಯುತ. ಹೀಗೆ ಮಾಡುವ ಮೂಲಕ ನಾವು ‘ದೇವರ ಪರಿಪೂರ್ಣ ರೋಮ. 12:1, 2.
ಚಿತ್ತವನ್ನು’ ಮಾಡಲು ಸುಸಜ್ಜಿತರಾಗಿರುವೆವು.—‘ಗಟ್ಟಿಯಾದ ಆಹಾರಕ್ಕಾಗಿ’ ರುಚಿ ಬೆಳೆಸಿಕೊಳ್ಳಿ
ನಾವು ‘ಪ್ರೌಢತೆಯ ಕಡೆಗೆ ಮುಂದೊತ್ತಲು’ ಬಯಸುವಲ್ಲಿ ನಮ್ಮನ್ನು ಹೀಗೆ ಕೇಳಿಕೊಳ್ಳಬೇಕು: ‘ಬೈಬಲ್ ಸತ್ಯದ ತಿಳಿವಳಿಕೆಯನ್ನು ನಾನು ಹೆಚ್ಚಿಸಿಕೊಳ್ಳುತ್ತಿದ್ದೇನೊ? ಇತರರು ನನ್ನನ್ನು ಆಧ್ಯಾತ್ಮಿಕ ಪ್ರೌಢ ವ್ಯಕ್ತಿಯಾಗಿ ವೀಕ್ಷಿಸುತ್ತಾರೊ?’ ಒಬ್ಬಾಕೆ ತಾಯಿ ತನ್ನ ಮಗು ಶಿಶುವಾಗಿರುವಾಗ ಅದಕ್ಕೆ ಹಾಲು ಮತ್ತು ಶಿಶು ಆಹಾರವನ್ನು ಕೊಡಲು ಇಷ್ಟಪಡುತ್ತಾಳೆ. ಆದರೆ ವರ್ಷಗಳು ಗತಿಸಿದ ಮೇಲೂ ಅವಳ ಮಗು ಗಟ್ಟಿಯಾದ ಆಹಾರವನ್ನು ತಿನ್ನದೆ ಹೋದಲ್ಲಿ ಅವಳಿಗೆಷ್ಟು ಚಿಂತೆಯಾಗಬೇಕು! ತದ್ರೀತಿಯಲ್ಲಿ ನಾವು ಯಾರೊಂದಿಗೆ ಬೈಬಲ್ ಅಧ್ಯಯನ ಮಾಡುತ್ತೇವೋ ಆ ವ್ಯಕ್ತಿ ಸಮರ್ಪಣೆ ಮತ್ತು ದೀಕ್ಷಾಸ್ನಾನದ ಹಂತದ ವರೆಗೆ ಪ್ರಗತಿ ಮಾಡುವುದಾದರೆ ನಮಗೆ ಖುಷಿ. ಆದರೆ ಆ ವ್ಯಕ್ತಿ ಅದರ ತರುವಾಯ ಆಧ್ಯಾತ್ಮಿಕ ಪ್ರಗತಿ ಮಾಡದೇ ಹೋಗುವಲ್ಲಿ ಆಗೇನು? ಅದು ನಮ್ಮ ಮನಗುಂದಿಸುವುದಿಲ್ಲವೇ? (1 ಕೊರಿಂ. 3:1-4) ಸಕಾಲದಲ್ಲಿ ಹೊಸ ಶಿಷ್ಯನು ಸಹ ಬೋಧಕನಾಗಬೇಕೆಂದು ಅವನಿಗೆ ಕಲಿಸಿದ ಬೋಧಕನು ನಿರೀಕ್ಷಿಸುತ್ತಾನೆ.
ವಿಷಯಗಳ ಕುರಿತು ತರ್ಕಬದ್ಧವಾಗಿ ಯೋಚಿಸಲು ನಮ್ಮ ಗ್ರಹಣ ಶಕ್ತಿಗಳನ್ನು ಉಪಯೋಗಿಸುವುದು ಮನನವನ್ನು ಅಗತ್ಯಪಡಿಸುತ್ತದೆ. ಅದಕ್ಕೆ ಪ್ರಯತ್ನ ಬೇಕು. (ಕೀರ್ತ. 1:1-3) ಹೆಚ್ಚಿನ ಮಾನಸಿಕ ಪ್ರಯಾಸವನ್ನು ಅಗತ್ಯಪಡಿಸದ ಟಿವಿ ವೀಕ್ಷಣೆ ಅಥವಾ ಹವ್ಯಾಸಗಳಂಥ ಅಪಕರ್ಷಣೆಗಳು ಅರ್ಥಭರಿತ ಚಿಂತನೆಯನ್ನು ಮಾಡುವುದಕ್ಕೆ ಅಡ್ಡಗಾಲು ಹಾಕುವಂತೆ ನಾವು ಬಿಡಬಾರದು. ನಮ್ಮ ಆಲೋಚನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲಿಕ್ಕಾಗಿ ನಾವು ಬೈಬಲ್ ಮತ್ತು “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ಒದಗಿಸುವ ಪ್ರಕಾಶನಗಳ ಅಧ್ಯಯನಕ್ಕಾಗಿ ರುಚಿಯನ್ನು ಬೆಳೆಸಿಕೊಂಡು ಅದನ್ನು ತೃಪ್ತಿಗೊಳಿಸುವುದು ಪ್ರಾಮುಖ್ಯ. (ಮತ್ತಾ. 24:45-47) ವೈಯಕ್ತಿಕ ಬೈಬಲ್ ವಾಚನದ ಕ್ರಮವಾದ ಕಾರ್ಯಕ್ರಮವಲ್ಲದೆ ಕುಟುಂಬ ಆರಾಧನೆ ಮತ್ತು ಬೈಬಲ್ ವಿಷಯವಸ್ತುಗಳ ಗಾಢ ಅಧ್ಯಯನಕ್ಕೆ ಸಮಯವನ್ನು ಬದಿಗಿರಿಸುವುದು ಅವಶ್ಯ.
ಮೆಕ್ಸಿಕೊದ ಕೇರೊನೀಮೊ ಎಂಬ ಸಂಚರಣ ಮೇಲ್ವಿಚಾರಕರು, ಕಾವಲಿನಬುರುಜುವಿನ ಪ್ರತಿ ಸಂಚಿಕೆ ಸಿಕ್ಕಿದ ಕೂಡಲೆ ಅದನ್ನು ಅಧ್ಯಯನ ಮಾಡುತ್ತೇನೆಂದು ಹೇಳುತ್ತಾರೆ. ತನ್ನ ಹೆಂಡತಿಯೊಟ್ಟಿಗೂ ಅಧ್ಯಯನ ಮಾಡಲು ಅವರು ಸಮಯವನ್ನು ಬದಿಗಿರಿಸುತ್ತಾರೆ. “ನಾವು ದಿನಾಲೂ ಬೈಬಲನ್ನು ಒಟ್ಟಿಗೆ ಓದುವ ರೂಢಿಮಾಡಿಕೊಂಡಿದ್ದೇವೆ. ‘ಒಳ್ಳೆಯ ದೇಶ’ ಬ್ರೋಷರ್‌ನಂಥ ಸಹಾಯಕಗಳನ್ನು ಸಹ ಉಪಯೋಗಿಸುತ್ತೇವೆ” ಎಂದು ಕೇರೊನೀಮೊ ಹೇಳುತ್ತಾರೆ. ರಾನಲ್ಡ್ ಎಂಬ ಕ್ರೈಸ್ತನು ಸಭಾ ಬೈಬಲ್ ವಾಚನವನ್ನು ಅಪ್-ಟು-ಡೇಟ್ ಇಡುತ್ತೇನೆ ಎಂದು ಹೇಳುತ್ತಾನೆ. ಅವನಿಗೆ ಒಂದೆರಡು ದೂರವ್ಯಾಪ್ತಿಯ ವೈಯಕ್ತಿಕ ಅಧ್ಯಯನ ಯೋಜನೆಗಳು ಕೂಡ ಇವೆ. “ಈ ಯೋಜನೆಗಳು ನನ್ನ ಮುಂದಿನ ಅಧ್ಯಯನ ಅವಧಿಯನ್ನು ಎದುರುನೋಡುವಂತೆ ಮಾಡುತ್ತವೆ” ಎನ್ನುತ್ತಾನೆ ರಾನಲ್ಡ್.
ನಮ್ಮ ಕುರಿತಾಗಿ ಏನು? ಬೈಬಲ್ ಅಧ್ಯಯನ ಮಾಡಲು ಮತ್ತು ದೇವರ ವಾಕ್ಯದ ಕುರಿತು ಮನನ ಮಾಡಲು ನಾವು ಸಾಕಷ್ಟು ಸಮಯವನ್ನು ಕೊಡುತ್ತೇವೊ? ನಾವು ನಮ್ಮ ಆಲೋಚನಾ ಸಾಮರ್ಥ್ಯವನ್ನು ತರಬೇತುಗೊಳಿಸುತ್ತಾ ಶಾಸ್ತ್ರಾಧಾರಿತ ಮೂಲತತ್ತ್ವಗಳಿಗನುಸಾರ ತೀರ್ಮಾನಗಳನ್ನು ಮಾಡುವುದರಲ್ಲಿ ಅನುಭವ ಪಡೆಯುತ್ತಿದ್ದೇವೊ? (ಜ್ಞಾನೋ. 2:1-7) ಆಧ್ಯಾತ್ಮಿಕ ಪ್ರೌಢ ವ್ಯಕ್ತಿಗಳಾಗಿರುವುದು ನಮ್ಮ ಗುರಿಯಾಗಿರಲಿ. ಆಗ ಸರಿ ಮತ್ತು ತಪ್ಪಿನ ಭೇದವನ್ನು ತಿಳಿಯಲಿಕ್ಕಾಗಿ ತಮ್ಮ ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸಿಕೊಂಡಿರುವ ವ್ಯಕ್ತಿಗಳಿಗೆ ಅನುಗ್ರಹಿತವಾದ ಜ್ಞಾನ ವಿವೇಕಗಳು ನಮ್ಮಲ್ಲೂ ಇರುವವು!
[ಪುಟ 23ರಲ್ಲಿರುವ ಚಿತ್ರ]
ನಾವು “ಉಪಯೋಗದ ಮೂಲಕ” ನಮ್ಮ ಆಲೋಚನಾ ಸಾಮರ್ಥ್ಯವನ್ನು ತರಬೇತುಗೊಳಿಸುತ್ತೇವೆ