ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಹೋದರರೇ, ಪವಿತ್ರಾತ್ಮಕ್ಕನುಸಾರ ಬಿತ್ತುವವರಾಗಿ ಎಟಕಿಸಿಕೊಳ್ಳಿರಿ!

ಸಹೋದರರೇ, ಪವಿತ್ರಾತ್ಮಕ್ಕನುಸಾರ ಬಿತ್ತುವವರಾಗಿ ಎಟಕಿಸಿಕೊಳ್ಳಿರಿ!

ಸಹೋದರರೇ, ಪವಿತ್ರಾತ್ಮಕ್ಕನುಸಾರ ಬಿತ್ತುವವರಾಗಿ ಎಟಕಿಸಿಕೊಳ್ಳಿರಿ!

“ಪವಿತ್ರಾತ್ಮಕ್ಕೆ ಅನುಸಾರವಾಗಿ ಬಿತ್ತುತ್ತಿರುವವನು ಪವಿತ್ರಾತ್ಮದಿಂದ ನಿತ್ಯಜೀವವನ್ನು ಕೊಯ್ಯುವನು.”—ಗಲಾ. 6:8.

1, 2. ಮತ್ತಾಯ 9:37, 38 ಹೇಗೆ ನೆರವೇರಿಕೆಯನ್ನು ಪಡೆಯುತ್ತಾ ಇದೆ? ಅದರಿಂದಾಗಿ ಸಭೆಗಳಲ್ಲಿ ಯಾವ ಅಗತ್ಯವು ಉಂಟಾಗಿದೆ?

ಸದಾ ಸರ್ವಕಾಲಕ್ಕೂ ನೆನಪಿಸಲಾಗುವ ಘಟನಾವಳಿಯನ್ನು ನೀವೀಗ ವೀಕ್ಷಿಸುತ್ತಿದ್ದೀರಿ. ಯೇಸು ಕ್ರಿಸ್ತನಿಂದ ತಿಳಿಸಲಾದ ಒಂದು ಕೆಲಸವು ಈಗ ತೀವ್ರಭರದಿಂದ ಮುಂದೆಸಾಗುತ್ತಾ ಇದೆ. “ಕೊಯ್ಲು ಬಹಳವಿದೆ; ಆದರೆ ಕೆಲಸಗಾರರು ಕೊಂಚ. ಆದುದರಿಂದ ತನ್ನ ಕೊಯ್ಲಿಗೆ ಕೆಲಸದವರನ್ನು ಕಳುಹಿಸಿಕೊಡುವಂತೆ ಕೊಯ್ಲಿನ ಯಜಮಾನನನ್ನು ಬೇಡಿಕೊಳ್ಳಿರಿ” ಎಂದನು ಯೇಸು. (ಮತ್ತಾ. 9:37, 38) ಅಂಥ ಪ್ರಾರ್ಥನೆಗಳನ್ನು ಯೆಹೋವ ದೇವರು ಅಭೂತಪೂರ್ವ ರೀತಿಯಲ್ಲಿ ಉತ್ತರಿಸುತ್ತಾ ಇದ್ದಾನೆ. 2009ರ ಸೇವಾ ವರ್ಷದಲ್ಲಿ ಯೆಹೋವನ ಸಾಕ್ಷಿಗಳ ಸಭೆಗಳ ಸಂಖ್ಯೆಯು ಲೋಕವ್ಯಾಪಕವಾಗಿ 2,031 ವೃದ್ಧಿಯಾಗಿ 1,05,298ಕ್ಕೆ ಮುಟ್ಟಿದೆ. ಪ್ರತಿದಿನ ಸರಾಸರಿ 757 ಮಂದಿ ದೀಕ್ಷಾಸ್ನಾನ ಪಡೆದುಕೊಂಡರು!

2 ಅಂಥ ಅಭಿವೃದ್ಧಿಯು ಸಭೆಯಲ್ಲಿ ಬೋಧನೆ ಮತ್ತು ಕುರಿಪಾಲನೆಯಲ್ಲಿ ನೇತೃತ್ವ ವಹಿಸಲು ಅರ್ಹತೆಯುಳ್ಳ ಸಹೋದರರ ಅಗತ್ಯವನ್ನು ಉಂಟುಮಾಡುತ್ತದೆ. (ಎಫೆ. 4:11) ಯೆಹೋವನು ತನ್ನ ಕುರಿಗಳ ಅಗತ್ಯಗಳನ್ನು ನೋಡಿಕೊಳ್ಳಲು ದಶಕಗಳಿಂದ ಅರ್ಹತೆಯುಳ್ಳ ಪುರುಷರನ್ನು ಮುಂದೆ ತಂದಿದ್ದಾನೆ. ಆತನು ಹಾಗೆ ಮಾಡುವುದನ್ನು ಮುಂದುವರಿಸುತ್ತಾ ಇರುವನೆಂಬ ದೃಢಭರವಸೆ ನಮಗಿದೆ. ಕಡೇ ದಿವಸಗಳಲ್ಲಿ ಯೆಹೋವನ ಜನರಲ್ಲಿ ‘ಏಳು ಮಂದಿ ಪಾಲಕರೂ’ ‘ಎಂಟು ಮಂದಿ ಪುರುಷಶ್ರೇಷ್ಠರೂ’ ಇರುವರೆಂದು ಮೀಕ 5:5ರ ಪ್ರವಾದನೆಯು ಆಶ್ವಾಸನೆಯನ್ನೀಯುತ್ತದೆ. ಅಂದರೆ ಅವರಲ್ಲಿ ಮುಂದಾಳತ್ವ ವಹಿಸಲು ಅರ್ಹರಾದ ಪುರುಷರ ಗಮನಾರ್ಹ ಸಂಖ್ಯೆಯು ಇರುವುದೆಂದು ಸಾಂಕೇತಿಕವಾಗಿ ಆ ಪ್ರವಾದನೆ ಹೇಳುತ್ತದೆ.

3. ‘ಪವಿತ್ರಾತ್ಮಕ್ಕೆ ಅನುಸಾರವಾಗಿ ಬಿತ್ತುವುದು’ ಎಂಬುದರ ಅರ್ಥವನ್ನು ವಿವರಿಸಿರಿ.

3 ಯೆಹೋವನ ಸಾಕ್ಷಿಗಳಲ್ಲಿ ನೀವೊಬ್ಬ ಸ್ನಾತ ಪುರುಷರಾಗಿದ್ದಲ್ಲಿ ಸೇವಾ ಸುಯೋಗಗಳಿಗೆ ಎಟಕಿಸಿಕೊಳ್ಳ ಬಯಸಲು ನಿಮಗೆ ಯಾವುದು ಸಹಾಯಕಾರಿ? ಪ್ರಾಮುಖ್ಯ ಸಹಾಯವು ನೀವು ‘ಪವಿತ್ರಾತ್ಮಕ್ಕೆ ಅನುಸಾರವಾಗಿ ಬಿತ್ತುವುದೇ’ ಆಗಿದೆ. (ಗಲಾ. 6:8) ಹಾಗೆ ಮಾಡುವುದರಲ್ಲಿ ದೇವರ ಪವಿತ್ರಾತ್ಮವು ನಿಮ್ಮ ಜೀವನದಲ್ಲಿ ಮುಕ್ತವಾಗಿ ಕಾರ್ಯನಡಿಸುವಂಥ ರೀತಿಯಲ್ಲಿ ಜೀವಿಸುವುದು ಒಳಗೂಡಿದೆ. ‘ಶರೀರಭಾವಕ್ಕೆ ಅನುಸಾರವಾಗಿ ಬಿತ್ತದಂತೆ’ ದೃಢಸಂಕಲ್ಪಮಾಡಿರಿ. ದೇವರ ಸೇವೆಯನ್ನು ಮಾಡುವ ನಿಮ್ಮ ಅಪೇಕ್ಷೆಯನ್ನು ಕುಂದಿಸುವ ಸುಖಭೋಗ, ಆರಾಮವಿರಾಮ, ಮನೋರಂಜನೆ ಮೊದಲಾದವುಗಳಿಗೆ ಎಡೆಗೊಡುವುದನ್ನು ವರ್ಜಿಸಿರಿ. ಕ್ರೈಸ್ತರೆಲ್ಲರೂ ‘ಪವಿತ್ರಾತ್ಮಕ್ಕೆ ಅನುಸಾರವಾಗಿ ಬಿತ್ತಬೇಕು.’ ಹೀಗೆ ಮಾಡುವ ಪುರುಷರು ಸಮಯಾನಂತರ ಸಭೆಯಲ್ಲಿ ಸುಯೋಗಗಳಿಗೆ ಅರ್ಹತೆಯನ್ನು ಪಡೆಯಸಾಧ್ಯವಿದೆ. ಇಂದು ಶುಶ್ರೂಷಾ ಸೇವಕರ ಮತ್ತು ಹಿರಿಯರ ಮಹಾ ಅಗತ್ಯವು ಇರುವ ಕಾರಣ ಈ ಲೇಖನವು ವಿಶೇಷವಾಗಿ ಕ್ರೈಸ್ತ ಪುರುಷರಿಗೆ ಬರೆಯಲ್ಪಟ್ಟಿದೆ. ಆದುದರಿಂದ ಸಹೋದರರೇ, ನೀವಿದಕ್ಕೆ ಪ್ರಾರ್ಥನಾಪೂರ್ವಕವಾಗಿ ಗಮನಕೊಡುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.

ಒಳ್ಳೇ ಕಾರ್ಯಕ್ಕಾಗಿ ಎಟಕಿಸಿಕೊಳ್ಳಿ

4, 5. (ಎ) ಸ್ನಾತ ಪುರುಷರು ಸಭೆಯಲ್ಲಿ ಯಾವ ಸುಯೋಗಗಳಿಗಾಗಿ ಎಟಕಿಸಿಕೊಳ್ಳುವಂತೆ ಪ್ರೋತ್ಸಾಹಿಸಲ್ಪಡುತ್ತಾರೆ? (ಬಿ) ಅದಕ್ಕಾಗಿ ಒಬ್ಬನು ಎಟಕಿಸಿಕೊಳ್ಳುವುದು ಹೇಗೆ?

4 ಕ್ರೈಸ್ತ ಪುರುಷನೊಬ್ಬನು ಪ್ರಯತ್ನರಹಿತವಾಗಿಯೇ ಮೇಲ್ವಿಚಾರಕನಾಗಿ ಪರಿಣಮಿಸುವುದಿಲ್ಲ. ಅವನು ಈ “ಒಳ್ಳೇ ಕಾರ್ಯವನ್ನು” ಎಟಕಿಸಿಕೊಳ್ಳಬೇಕು. (1 ತಿಮೊ. 3:1) ಜೊತೆಕ್ರೈಸ್ತರ ಅಗತ್ಯಗಳ ಕಡೆಗೆ ನಿಜ ಕಾಳಜಿಯನ್ನು ತೋರಿಸುವ ಮೂಲಕ ಅವರ ಸೇವೆಮಾಡುವುದು ಇದರಲ್ಲಿ ಸೇರಿದೆ. (ಯೆಶಾಯ 32:1, 2 ಓದಿ.) ಯೋಗ್ಯ ಹೇತುವಿನಿಂದ ಎಟಕಿಸಿಕೊಳ್ಳುವ ಪುರುಷನಲ್ಲಿ ಹೆಬ್ಬಯಕೆ ಇರುವುದಿಲ್ಲ. ಬದಲಾಗಿ ಅವನು ಇತರರ ಪ್ರಯೋಜನಕ್ಕಾಗಿ ನಿಸ್ವಾರ್ಥ ಅಪೇಕ್ಷೆಯಿಂದ ತುಂಬಿದವನಾಗಿರುತ್ತಾನೆ.

5 ಒಬ್ಬನು ಶುಶ್ರೂಷಾ ಸೇವಕನಾಗಿ ಅರ್ಹತೆ ಪಡೆಯುವುದೂ ಮೇಲ್ವಿಚಾರಕ ಸೇವೆಯನ್ನು ಎಟಕಿಸಿಕೊಳ್ಳುವುದೂ ಶಾಸ್ತ್ರಗ್ರಂಥದಲ್ಲಿ ಕೊಡಲಾದ ಅರ್ಹತೆಗಳನ್ನು ಮುಟ್ಟಲು ಶ್ರಮಿಸುವ ಮೂಲಕವೇ. (1 ತಿಮೊ. 3:1-10, 12, 13; ತೀತ 1:5-9) ನೀವು ಸಮರ್ಪಿತ ಪುರುಷರಾಗಿರುವಲ್ಲಿ ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ‘ಸಾರುವ ಕೆಲಸದಲ್ಲಿ ನಾನು ಪೂರ್ಣವಾಗಿ ಭಾಗವಹಿಸುತ್ತೇನೊ ಮತ್ತು ಹಾಗೆ ಮಾಡುವಂತೆ ಇತರರಿಗೆ ಸಹಾಯಮಾಡುತ್ತಿದ್ದೇನೊ? ನನ್ನ ಜೊತೆ ಆರಾಧಕರ ಹಿತಚಿಂತನೆಯಲ್ಲಿ ಪ್ರಾಮಾಣಿಕ ಆಸಕ್ತಿಯನ್ನು ತೋರಿಸುವ ಮೂಲಕ ಅವರ ಭಕ್ತಿವೃದ್ದಿಯನ್ನು ಮಾಡುತ್ತಿದ್ದೇನೊ? ದೇವರ ವಾಕ್ಯದ ಒಳ್ಳೆಯ ವಿದ್ಯಾರ್ಥಿ ಎಂಬ ಸತ್ಕೀರ್ತಿಯು ನನಗಿದೆಯೊ? ನಾನು ಕೊಡುವ ಉತ್ತರಗಳ ಗುಣಮಟ್ಟದಲ್ಲಿ ಪ್ರಗತಿ ಮಾಡುತ್ತಿದ್ದೇನೊ? ಹಿರಿಯರಿಂದ ನನಗೆ ವಹಿಸಲಾದ ನೇಮಕಗಳನ್ನು ನಾನು ಶ್ರದ್ಧೆಯಿಂದ ಪೂರೈಸುತ್ತಿದ್ದೇನೊ?’ (2 ತಿಮೊ. 4:5) ಇಂಥ ಪ್ರಶ್ನೆಗಳು ಗಂಭೀರ ಗಮನಕ್ಕೆ ಅರ್ಹವಾಗಿವೆ.

6. ಸಭಾ ಜವಾಬ್ದಾರಿಗಳಿಗಾಗಿ ಅರ್ಹರಾಗುವುದಕ್ಕೆ ಬೇಕಾದ ಒಂದು ಮುಖ್ಯ ಅಂಶವು ಯಾವುದು?

6 ಸಭಾ ಜವಾಬ್ದಾರಿಗಳಿಗಾಗಿ ಅರ್ಹತೆ ಪಡೆದುಕೊಳ್ಳುವ ಇನ್ನೊಂದು ವಿಧವು ‘ದೇವರ ಪವಿತ್ರಾತ್ಮದ ಶಕ್ತಿಯಿಂದಾಗಿ ನಿಮ್ಮ ಆಂತರ್ಯದಲ್ಲಿ ನಿಮ್ಮನ್ನು ಬಲಪಡಿಸಿಕೊಳ್ಳುವ’ ಮೂಲಕವೇ. (ಎಫೆ. 3:16) ಕ್ರೈಸ್ತ ಸಭೆಯಲ್ಲಿ ಒಬ್ಬ ಶುಶ್ರೂಷಾ ಸೇವಕ ಅಥವಾ ಹಿರಿಯನಾಗುವುದೆಂದರೆ ಒಂದು ಅಧಿಕಾರ ಸ್ಥಾನಕ್ಕೆ ಚುನಾಯಿಸಲ್ಪಡುವುದಲ್ಲ. ಆಧ್ಯಾತ್ಮಿಕ ಬೆಳವಣಿಗೆಯ ಮೂಲಕ ಮಾತ್ರವೇ ಈ ಸುಯೋಗವನ್ನು ಒಬ್ಬನು ಪಡಕೊಳ್ಳಬಲ್ಲನು. ಈ ಆಧ್ಯಾತ್ಮಿಕ ಬೆಳವಣಿಗೆಯನ್ನು ಹೊಂದುವುದು ಹೇಗೆ? ಒಂದು ವಿಧವು “ಪವಿತ್ರಾತ್ಮವನ್ನು ಅನುಸರಿಸಿ ನಡೆಯುತ್ತಾ” ಅದರಿಂದ ಉಂಟಾಗುವ ಫಲವನ್ನು ಬೆಳೆಸಿಕೊಳ್ಳುವ ಮೂಲಕವೇ. (ಗಲಾ. 5:16, 22, 23) ಹೆಚ್ಚಿನ ಸುಯೋಗಗಳನ್ನು ನಿರ್ವಹಿಸಲಿಕ್ಕೆ ಬೇಕಾದ ಆಧ್ಯಾತ್ಮಿಕ ಗುಣಗಳು ನಿಮ್ಮಲ್ಲಿವೆ ಎಂಬದಕ್ಕೆ ನೀವು ಪುರಾವೆಯನ್ನು ಕೊಡುವಾಗ ಹಾಗೂ ಪ್ರಗತಿಗಾಗಿ ನಿಮಗೆ ಕೊಡಲಾದ ಸೂಚನೆಗಳನ್ನು ಅನ್ವಯಿಸಿಕೊಳ್ಳುವಾಗ ನಿಮ್ಮ “ಅಭಿವೃದ್ಧಿಯು ಎಲ್ಲರಿಗೆ ಪ್ರಕಟವಾಗುವುದು.”—1 ತಿಮೊ. 4:15.

ಸ್ವತ್ಯಾಗದ ಮನೋಭಾವ ಅಗತ್ಯ

7. ಇತರರ ಸೇವೆ ಮಾಡುವುದರಲ್ಲಿ ಏನು ಒಳಗೂಡಿದೆ?

7 ಇತರರ ಸೇವೆ ಮಾಡುವುದರಲ್ಲಿ ಶ್ರಮದ ಕೆಲಸ ಹಾಗೂ ಸ್ವತ್ಯಾಗದ ಮನೋಭಾವ ಒಳಗೂಡಿದೆ. ಕ್ರೈಸ್ತ ಮೇಲ್ವಿಚಾರಕರು ಆಧ್ಯಾತ್ಮಿಕ ಕುರುಬರು ಆಗಿರುವುದರಿಂದ ಮಂದೆಯ ಸಮಸ್ಯೆಗಳ ಕುರಿತು ಅವರು ಗಾಢವಾಗಿ ಚಿಂತಿಸುತ್ತಾರೆ. ಅಪೊಸ್ತಲ ಪೌಲನ ಕುರಿಪಾಲನಾ ಕೆಲಸದ ಜವಾಬ್ದಾರಿಗಳು ಅವನನ್ನು ಹೇಗೆ ಬಾಧಿಸಿದ್ದವೆಂದು ಗಮನಿಸಿ. ಕೊರಿಂಥದ ಜೊತೆವಿಶ್ವಾಸಿಗಳಿಗೆ ಅವನಂದದ್ದು: “ನಿಮಗೆ ದುಃಖವನ್ನು ಉಂಟುಮಾಡಬೇಕೆಂದಲ್ಲ, ನಿಮ್ಮ ಮೇಲೆ ನನಗಿರುವ ಹೆಚ್ಚು ವಿಶೇಷವಾದ ಪ್ರೀತಿಯನ್ನು ನೀವು ತಿಳಿದುಕೊಳ್ಳಬೇಕೆಂದೇ ನಾನು ಬಹಳ ಕಣ್ಣೀರಿನೊಂದಿಗೆ ಬಹು ಸಂಕಟದಿಂದಲೂ ಹೃದಯದ ವೇದನೆಯಿಂದಲೂ ನಿಮಗೆ ಬರೆದೆನು.” (2 ಕೊರಿಂ. 2:4) ಪೌಲನು ತನ್ನ ಕೆಲಸದಲ್ಲಿ ಹೃತ್ಪೂರ್ವಕವಾಗಿ ಶ್ರಮಿಸಿದನೆಂಬುದು ಸ್ಪಷ್ಟ.

8, 9. ಇತರರ ಅಗತ್ಯಗಳನ್ನು ನೋಡಿಕೊಳ್ಳಲು ಪುರುಷರು ಹೇಗೆ ಶ್ರಮಿಸಿದ್ದರೆಂದು ತೋರಿಸುವ ಬೈಬಲ್‌ ಉದಾಹರಣೆಗಳನ್ನು ತಿಳಿಸಿರಿ.

8 ಸ್ವತ್ಯಾಗದ ಮನೋಭಾವವು ಯಾವಾಗಲೂ ಯೆಹೋವನ ಸೇವಕರ ಪರವಾಗಿ ಶ್ರಮಪಟ್ಟು ದುಡಿದ ಪುರುಷರ ಚೊಕ್ಕಮುದ್ರೆಯಾಗಿತ್ತು. ಉದಾಹರಣೆಗೆ ನೋಹನನ್ನು ತೆಗೆದುಕೊಳ್ಳಿ. ಅವನು ತನ್ನ ಮನೆವಾರ್ತೆಯ ಇತರರಿಗೆ, ‘ನೀವು ಮೊದಲು ನಾವೆ ಕಟ್ಟಿ ಮುಗಿಸಿರಿ. ಆಮೇಲೆ ನಾನು ಬಂದು ಸೇರುತ್ತೇನೆ’ ಎಂದು ಹೇಳುವುದನ್ನು ನಾವು ಊಹಿಸಲೂ ಸಾಧ್ಯವಿಲ್ಲ. ಈಜಿಪ್ಟಿನಲ್ಲಿದ್ದ ಇಸ್ರಾಯೇಲ್ಯರಿಗೆ ಮೋಶೆ, ‘ಕೆಂಪು ಸಮುದ್ರದ ಬಳಿಯಲ್ಲಿ ನಿಮಗೆ ಸಿಕ್ಕುತ್ತೇನೆ. ಆದಷ್ಟು ಒಳ್ಳೇ ದಾರಿ ಹಿಡಿದು ಅಲ್ಲಿಗೆ ಹೋಗಿ’ ಎಂದು ಹೇಳಲಿಲ್ಲ. ಯೆಹೋಶುವನು ‘ಯೆರಿಕೋವಿನ ಗೋಡೆಗಳು ಬಿದ್ದಾಗ ನನಗೆ ಸುದ್ದಿ ತಿಳಿಸಿ, ನಾನು ಬರುತ್ತೇನೆ’ ಎಂದು ಯಾವತ್ತೂ ಹೇಳಲಿಲ್ಲ. ಯೆಶಾಯನು ಬೇರೊಬ್ಬನ ಕಡೆಗೆ ಕೈತೋರಿಸಿ, ‘ಅಗೋ ಅಲ್ಲಿದ್ದಾನಲ್ಲ, ಅವನನ್ನು ಕಳುಹಿಸು’ ಎನ್ನಲಿಲ್ಲ.—ಯೆಶಾ. 6:8.

9 ದೇವರ ಪವಿತ್ರಾತ್ಮವು ತನ್ನನ್ನು ಪ್ರಚೋದಿಸುವಂತೆ ಬಿಟ್ಟುಕೊಟ್ಟ ಪುರುಷರಲ್ಲಿ ನಮ್ಮ ಪ್ರಮುಖ ಮಾದರಿಯು ಯೇಸು ಕ್ರಿಸ್ತನು ತಾನೆ. ಮಾನವ ಸಂಕುಲದ ವಿಮೋಚಕನೋಪಾದಿ ಸೇವೆಮಾಡುವ ತನ್ನ ನೇಮಕವನ್ನು ಅವನು ಸಿದ್ಧಮನಸ್ಸಿನಿಂದ ಸ್ವೀಕರಿಸಿದನು. (ಯೋಹಾ. 3:16) ಯೇಸುವಿನ ಸ್ವತ್ಯಾಗದ ಪ್ರೀತಿಯು ನಮ್ಮಲ್ಲಿಯೂ ಸ್ವತ್ಯಾಗಿಗಳಾಗಿರುವ ಭಾವವನ್ನು ಪ್ರೇರಿಸುವುದಿಲ್ಲವೇ? ಪ್ರೇರಿಸಬೇಕು. ಹೆಚ್ಚು ಸಮಯದಿಂದ ಹಿರಿಯರಾಗಿದ್ದ ಒಬ್ಬರು ಮಂದೆಗಾಗಿ ತನ್ನ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಹೇಳಿದ್ದು: “ನನ್ನ ಚಿಕ್ಕ ಕುರಿಗಳನ್ನು ಪಾಲಿಸು ಎಂದು ಯೇಸು ಪೇತ್ರನಿಗೆ ಹೇಳಿದ ಮಾತುಗಳು ನನ್ನನ್ನು ಆಳವಾಗಿ ಪ್ರಚೋದಿಸುತ್ತವೆ. ಪ್ರೀತಿಪೂರ್ಣವಾದ ಕೆಲವೇ ಮಾತುಗಳು ಅಥವಾ ಒಂದು ಚಿಕ್ಕ ಉಪಕಾರವು ಸಹ ಇನ್ನೊಬ್ಬ ವ್ಯಕ್ತಿಯನ್ನು ಹೇಗೆ ಉತ್ತೇಜಿಸಬಹುದೆಂಬುದನ್ನು ನಾನು ಈ ಎಲ್ಲ ವರ್ಷಗಳಲ್ಲಿ ಗಣ್ಯಮಾಡಿದ್ದೇನೆ. ಕುರಿಪಾಲನೆಯ ಕೆಲಸವು ನನಗೆ ತುಂಬಾ ಪ್ರಿಯ.”—ಯೋಹಾ. 21:16.

10. ಇತರರ ಸೇವೆಮಾಡುವುದರಲ್ಲಿ ಯೇಸುವಿನ ಮಾದರಿಯನ್ನು ಅನುಕರಿಸಲು ಕ್ರೈಸ್ತ ಪುರುಷರನ್ನು ಯಾವುದು ಪ್ರೇರಿಸಬಲ್ಲದು?

10 ದೇವರ ಮಂದೆಯನ್ನು ಪರಿಪಾಲಿಸುವ ವಿಷಯದಲ್ಲಾದರೊ ಸಭೆಯ ಸಮರ್ಪಿತ ಪುರುಷರು ಯೇಸುವಿನ ಮನೋಭಾವವನ್ನು ಪ್ರತಿಬಿಂಬಿಸಲು ನಿಶ್ಚಯವಾಗಿ ಬಯಸುತ್ತಾರೆ. “ನಾನು ನಿಮಗೆ ಚೈತನ್ಯ ನೀಡುವೆನು” ಎಂದನು ಯೇಸು. (ಮತ್ತಾ. 11:28) ಅದು ತೀರ ಹೆಚ್ಚಿನ ತ್ಯಾಗದ ಕೆಲಸ ಅಥವಾ ಹೆಚ್ಚಿನ ಶ್ರಮವನ್ನು ಕೇಳಿಕೊಳ್ಳುತ್ತದೆಂದು ಕ್ರೈಸ್ತ ಪುರುಷರು ನೆನಸುವುದಿಲ್ಲ. ಬದಲಿಗೆ ದೇವರಲ್ಲಿ ನಂಬಿಕೆ ಮತ್ತು ಸಭೆಯ ಮೇಲಣ ಪ್ರೀತಿಯು ಅವರನ್ನು ಈ ಒಳ್ಳೇ ಕಾರ್ಯಕ್ಕಾಗಿ ಎಟಕಿಸಿಕೊಳ್ಳುವಂತೆ ಪ್ರೇರಿಸುತ್ತದೆ. ಹೀಗಿರಲಾಗಿ, ಎಟಕಿಸಿಕೊಳ್ಳುವ ನಿರ್ದಿಷ್ಟ ಪ್ರವೃತ್ತಿ ಒಂದುವೇಳೆ ಒಬ್ಬನಲ್ಲಿ ಇಲ್ಲದಿದ್ದರೆ ಆಗೇನು? ಸಭೆಯ ಸೇವೆಯನ್ನು ಮಾಡುವ ಅಪೇಕ್ಷೆಯನ್ನು ಸಹೋದರನೊಬ್ಬನು ಬೆಳೆಸಿಕೊಳ್ಳಲು ಸಾಧ್ಯವಿದೆಯೊ?

ಸೇವೆಮಾಡುವ ಅಪೇಕ್ಷೆಯನ್ನು ಬೆಳೆಸಿಕೊಳ್ಳಿ

11. ಇತರರ ಸೇವೆಮಾಡುವ ಅಪೇಕ್ಷೆಯನ್ನು ಒಬ್ಬನು ಹೇಗೆ ಬೆಳೆಸಿಕೊಳ್ಳಬಲ್ಲನು?

11 ಎಟಕಿಸಿಕೊಳ್ಳಲು ಬೇಕಾದ ಸಾಕಷ್ಟು ಸಾಮರ್ಥ್ಯಗಳೂ ಅರ್ಹತೆಗಳೂ ನಿಮ್ಮಲ್ಲಿಲ್ಲ ಎಂಬ ಭಾವನೆ ನಿಮ್ಮನ್ನು ತಡೆಯುವುದಾದರೆ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸುವುದು ಯಥಾಯೋಗ್ಯವಾಗಿದೆ. (ಲೂಕ 11:13) ಈ ವಿಷಯದಲ್ಲಿ ನಿಮಗಿರುವ ಯಾವುದೇ ಚಿಂತೆಯನ್ನು ನಿಭಾಯಿಸಲಿಕ್ಕೆ ಯೆಹೋವನ ಪವಿತ್ರಾತ್ಮವು ನಿಮಗೆ ಸಹಾಯಮಾಡುವುದು. ಸೇವೆಮಾಡುವ ಅಪೇಕ್ಷೆಯೇ ದೇವದತ್ತ ಅಪೇಕ್ಷೆ, ಏಕೆಂದರೆ ಸಹೋದರನೊಬ್ಬನು ಎಟಕಿಸಿಕೊಳ್ಳುವಂತೆ ಪ್ರಚೋದಿಸುವಂಥದ್ದು ಹಾಗೂ ತದನಂತರ ಪವಿತ್ರ ಸೇವೆಯನ್ನು ಸಲ್ಲಿಸಲು ಬೇಕಾದ ಶಕ್ತಿಯನ್ನು ಒದಗಿಸುವಂಥದ್ದು ಯೆಹೋವನ ಪವಿತ್ರಾತ್ಮವೇ. (ಫಿಲಿ. 2:13; 4:13) ಆದುದರಿಂದ ಸೇವಾ ಸುಯೋಗಗಳನ್ನು ಸ್ವೀಕರಿಸುವ ಅಪೇಕ್ಷೆಯನ್ನು ಬೆಳೆಸಿಕೊಳ್ಳಲು ನಿಮಗೆ ಸಹಾಯಮಾಡುವಂತೆ ಯೆಹೋವನನ್ನು ಬೇಡಿಕೊಳ್ಳುವುದು ಸೂಕ್ತ.—ಕೀರ್ತನೆ 25:4, 5 ಓದಿ.

12. ತನಗೆ ವಹಿಸಲಾದ ಜವಾಬ್ದಾರಿಗಳನ್ನು ನಿರ್ವಹಿಸಲು ವ್ಯಕ್ತಿಯೊಬ್ಬನು ಸಾಕಷ್ಟು ವಿವೇಕವನ್ನು ಹೇಗೆ ಗಳಿಸಬಲ್ಲನು?

12 ಮಂದೆಗಿರುವ ಅಗತ್ಯತೆಗಳು ತುಂಬಾ ಜಟಿಲವೆಂದು ಕಾಣುವುದರಿಂದ ಅವನ್ನೆಲ್ಲಾ ನೋಡಿಕೊಳ್ಳಲು ತನ್ನಿಂದ ಬಹಳ ಶ್ರಮದ ಕೆಲಸ ಅಪೇಕ್ಷಿಸಲ್ಪಡುತ್ತದೆ ಎಂದು ನೆನಸಿ ಕ್ರೈಸ್ತನೊಬ್ಬನು ಸೇವಾ ಸುಯೋಗಕ್ಕೆ ಎಟಕಿಸಿಕೊಳ್ಳದಿರಲು ನಿರ್ಣಯಿಸ್ಯಾನು. ಇಲ್ಲವೆ ಜವಾಬ್ದಾರಿಗಳನ್ನು ನಿರ್ವಹಿಸಲು ಸಾಕಷ್ಟು ವಿವೇಕವು ತನ್ನಲ್ಲಿಲ್ಲ ಎಂದವನು ಭಾವಿಸಾನು. ವಿಷಯವು ಹೀಗಿದ್ದಲ್ಲಿ, ದೇವರ ವಾಕ್ಯದ ಹಾಗೂ ಬೈಬಲಾಧಾರಿತ ಪ್ರಕಾಶನಗಳ ಹೆಚ್ಚು ಶ್ರದ್ಧೆಯುಳ್ಳ ವಿದ್ಯಾರ್ಥಿಯಾಗಿರುವ ಮೂಲಕ ಅವನು ವಿವೇಕವನ್ನು ಪಡಕೊಳ್ಳಬಲ್ಲನು. ಅವನು ತನ್ನನ್ನು ಹೀಗೆ ಕೇಳಿಕೊಳ್ಳಬಹುದು: ‘ದೇವರ ವಾಕ್ಯದ ಅಧ್ಯಯನಕ್ಕಾಗಿ ನಾನು ಸಮಯವನ್ನು ಬದಿಗಿಡುತ್ತಿದ್ದೇನೊ ಮತ್ತು ವಿವೇಕಕ್ಕಾಗಿ ಪ್ರಾರ್ಥಿಸುತ್ತಿದ್ದೇನೊ?’ ಶಿಷ್ಯ ಯಾಕೋಬನು ಬರೆದದ್ದು: “ನಿಮ್ಮಲ್ಲಿ ಯಾವನಿಗಾದರೂ ವಿವೇಕದ ಕೊರತೆಯಿರುವಲ್ಲಿ ಅವನು ದೇವರನ್ನು ಕೇಳಿಕೊಳ್ಳುತ್ತಾ ಇರಲಿ, ಆಗ ಅದು ಅವನಿಗೆ ಕೊಡಲ್ಪಡುವುದು. ಏಕೆಂದರೆ ದೇವರು ಎಲ್ಲರಿಗೆ ಉದಾರವಾಗಿಯೂ ಹಂಗಿಸದೆಯೂ ಕೊಡುವವನಾಗಿದ್ದಾನೆ.” (ಯಾಕೋ. 1:5) ಈ ದೇವಪ್ರೇರಿತ ಹೇಳಿಕೆಯನ್ನು ನೀವು ನಂಬುತ್ತೀರೊ? ಸೊಲೊಮೋನನ ಪ್ರಾರ್ಥನೆಗೆ ಉತ್ತರವಾಗಿ ದೇವರು ಅವನಿಗೆ “ಜ್ಞಾನವನ್ನೂ ವಿವೇಕವನ್ನೂ” ಕೊಟ್ಟನು. ಅದು ಅವನನ್ನು ನ್ಯಾಯನಿರ್ಣಯಗಳನ್ನು ವಿಧಿಸುವಾಗ ನ್ಯಾಯ ಅನ್ಯಾಯಗಳನ್ನು ಕಂಡುಹಿಡಿಯುವಂತೆ ಸಾಧ್ಯಮಾಡಿತು. (1 ಅರ. 3:7-14) ಸೊಲೊಮೋನನ ಸನ್ನಿವೇಶ ವಿಶಿಷ್ಟವಾಗಿತ್ತು ನಿಜ. ಆದರೂ ಸಭಾ ಜವಾಬ್ದಾರಿಗಳು ಯಾರಿಗೆ ವಹಿಸಲಾಗಿವೆಯೊ ಆ ಪುರುಷರು ದೇವರ ಕುರಿಗಳನ್ನು ಯೋಗ್ಯವಾಗಿ ಪರಿಪಾಲಿಸಲು ಶಕ್ತರಾಗುವಂತೆ ಆತನು ವಿವೇಕವನ್ನು ದಯಪಾಲಿಸುವನೆಂಬ ದೃಢಭರವಸೆ ನಮಗಿರಬಲ್ಲದು.—ಜ್ಞಾನೋ. 2:6.

13, 14. (ಎ) “ಕ್ರಿಸ್ತನಿಗಿರುವ ಪ್ರೀತಿ”ಯಿಂದ ಪೌಲನು ಹೇಗೆ ಪ್ರಭಾವಿತನಾಗಿದ್ದನೆಂದು ವಿವರಿಸಿರಿ. (ಬಿ) “ಕ್ರಿಸ್ತನಿಗಿರುವ ಪ್ರೀತಿಯು” ನಮ್ಮನ್ನು ಹೇಗೆ ಪ್ರಭಾವಿಸಬೇಕು?

13 ಇತರರ ಸೇವೆಮಾಡಲಿಕ್ಕಾಗಿ ಅಪೇಕ್ಷೆಯನ್ನು ಬೆಳೆಸಿಕೊಳ್ಳುವ ಇನ್ನೊಂದು ಸಹಾಯಕವು ಯೆಹೋವನೂ ಆತನ ಪುತ್ರನೂ ನಮಗಾಗಿ ಮಾಡಿರುವ ಎಲ್ಲವುಗಳ ಬಗ್ಗೆ ಆಳವಾಗಿ ಯೋಚಿಸುವುದೇ. ಉದಾಹರಣೆಗಾಗಿ 2 ಕೊರಿಂಥ 5:14, 15ನ್ನು ಪರಿಗಣಿಸಿರಿ. (ಓದಿ.) “ಕ್ರಿಸ್ತನಿಗಿರುವ ಪ್ರೀತಿಯು ನಮ್ಮನ್ನು ಒತ್ತಾಯಮಾಡುತ್ತದೆ.” ಅದು ಹೇಗೆ? ದೇವರ ಚಿತ್ತದಂತೆ ಕ್ರಿಸ್ತನು ತನ್ನ ಜೀವವನ್ನು ನಮ್ಮ ಪರವಾಗಿ ಕೊಟ್ಟದರಲ್ಲಿ ತೋರಿಸಿದ ಪ್ರೀತಿಯು ಎಷ್ಟು ಮಹತ್ತಾಗಿದೆಯೆಂದರೆ ಅದಕ್ಕಾಗಿ ನಮ್ಮ ಗಣ್ಯತೆಯು ಹೆಚ್ಚಾದಷ್ಟಕ್ಕೆ ನಮ್ಮ ಹೃದಯವು ಗಾಢವಾಗಿ ಪ್ರಚೋದಿಸಲ್ಪಡುತ್ತದೆ. ಕ್ರಿಸ್ತನ ಪ್ರೀತಿಯು ಪೌಲನನ್ನು ಆಳವಾಗಿ ಪ್ರಭಾವಿಸಿತು. ಅದು ಅವನನ್ನು ಸ್ವಾರ್ಥದಿಂದಾಗಿ ಕ್ರಿಯೆಗೈಯುವುದರಿಂದ ನಿಯಂತ್ರಿಸಿತು. ದೇವರ ಸೇವೆ ಹಾಗೂ ಸಭೆಯ ಒಳಗೆ ಮತ್ತು ಹೊರಗಿರುವ ಜೊತೆಮಾನವರ ಸೇವೆಮಾಡುವುದನ್ನು ತನ್ನ ಮುಖ್ಯ ಧ್ಯೇಯಗಳಾಗಿ ಮಾಡುವಂತೆ ನೆರವಾಯಿತು.

14 ಜನರಿಗಾಗಿ ಕ್ರಿಸ್ತನ ಪ್ರೀತಿಯನ್ನು ಮನನ ಮಾಡುವುದು ನಮ್ಮಲ್ಲಿ ಕೃತಜ್ಞತೆಯನ್ನು ಹೊಡೆದೆಬ್ಬಿಸುತ್ತದೆ. ಆದುದರಿಂದ ಸ್ವಾರ್ಥಪರ ಗುರಿಗಳನ್ನು ಬೆನ್ನಟ್ಟುವ ಮೂಲಕ ಹಾಗೂ ಬರೇ ನಮ್ಮ ಸ್ವಂತ ಆಶೆಗಳ ತೃಪ್ತಿಗಾಗಿ ಜೀವಿಸುವ ಮೂಲಕ ‘ಶರೀರಭಾವಕ್ಕೆ ಅನುಸಾರವಾಗಿ ಬಿತ್ತುತ್ತಾ’ ಇರುವುದು ಅತಿ ಅನುಚಿತವಾಗಿರುವುದೆಂದು ನಾವು ಮನಗಾಣುತ್ತೇವೆ. ಬದಲಾಗಿ ದೇವರು ನಮಗೆ ಮಾಡಲು ಕೊಟ್ಟಿರುವ ಕೆಲಸಕ್ಕೆ ಪ್ರಥಮಸ್ಥಾನ ಕೊಡಲು ನಾವು ನಮ್ಮ ಜೀವನದಲ್ಲಿ ಹೊಂದಾಣಿಕೆಗಳನ್ನು ಮಾಡುತ್ತೇವೆ. ಪ್ರೀತಿಯಿಂದ ನಮ್ಮ ಸಹೋದರರ “ಸೇವೆ” ಮಾಡಲು ನಾವು ಪ್ರೇರಿಸಲ್ಪಡುತ್ತೇವೆ. (ಗಲಾತ್ಯ 5:13 ಓದಿ.) ನಮ್ಮನ್ನು ಯೆಹೋವನ ಸಮರ್ಪಿತ ಸೇವಕರ ಪರವಾಗಿ ದುಡಿಯುವ ದೀನ ದಾಸರಾಗಿ ವೀಕ್ಷಿಸುವುದಾದರೆ ನಾವು ಅವರನ್ನು ಘನತೆಯಿಂದಲೂ ಗೌರವದಿಂದಲೂ ಉಪಚರಿಸುವೆವು. ನಿಶ್ಚಯವಾಗಿ ಸೈತಾನನಿಂದ ಪ್ರವರ್ಧಿಸಲಾಗುವ ಟೀಕಾತ್ಮಕ ಹಾಗೂ ತೀರ್ಪುಮಾಡುವ ಮನೋಭಾವವನ್ನು ನಾವು ಅನುಕರಿಸದೆ ಇರುವೆವು.—ಪ್ರಕ. 12:10.

ಕೌಟುಂಬಿಕ ಪ್ರಯತ್ನ

15, 16. ಪುರುಷನೊಬ್ಬನು ಶುಶ್ರೂಷಾ ಸೇವಕ ಅಥವಾ ಹಿರಿಯನಾಗಿ ಸೇವೆಮಾಡಲು ಅರ್ಹತೆ ಪಡೆಯಬೇಕಾದರೆ ಕುಟುಂಬ ಸದಸ್ಯರಿಗಿರುವ ಪಾತ್ರವೇನು?

15 ಸಹೋದರನೊಬ್ಬನು ವಿವಾಹಿತನೂ ಮಕ್ಕಳಿರುವ ತಂದೆಯೂ ಆಗಿರುತ್ತಾನೆಂದು ನೆನಸಿ. ಅವನು ಶುಶ್ರೂಷಾ ಸೇವಕನಾಗಲು ಅಥವಾ ಹಿರಿಯನಾಗಲು ಅರ್ಹನೋ ಎಂದು ನಿರ್ಣಯಿಸುವಾಗ ಅವನ ಕುಟುಂಬದಲ್ಲಿರುವ ಸನ್ನಿವೇಶವನ್ನು ಸಹ ಪರಿಗಣನೆಗೆ ತರಲಾಗುತ್ತದೆ. ನಿಶ್ಚಯವಾಗಿಯೂ ಅವನ ಕುಟುಂಬದ ಆಧ್ಯಾತ್ಮಿಕತೆ ಮತ್ತು ಸತ್ಕೀರ್ತಿಯು ಅವನ ನೇಮಕದ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಗಂಡನು ಅಥವಾ ತಂದೆಯು ಶುಶ್ರೂಷಾ ಸೇವಕನಾಗಿ ಇಲ್ಲವೆ ಹಿರಿಯನಾಗಿ ಸಭಾ ಅಭಿರುಚಿಗಳನ್ನು ನೋಡಿಕೊಳ್ಳಲು ಪ್ರಯತ್ನಿಸುವಾಗ ಅವನನ್ನು ಬೆಂಬಲಿಸುವುದರಲ್ಲಿ ಕುಟುಂಬಕ್ಕಿರುವ ಪಾತ್ರದ ಮಹತ್ವವನ್ನು ಇದು ಒತ್ತಿಹೇಳುತ್ತದೆ.—1 ತಿಮೊಥೆಯ 3:4, 5, 12 ಓದಿ.

16 ಕ್ರೈಸ್ತ ಕುಟುಂಬಗಳ ಸದಸ್ಯರು ಪರಸ್ಪರ ಸಹಕರಿಸುವಾಗ ಯೆಹೋವನಿಗೆ ಸಂತೋಷವಾಗುತ್ತದೆ. (ಎಫೆ. 3:14, 15) ಕುಟುಂಬ ತಲೆಗೆ ಸಭಾ ಜವಾಬ್ದಾರಿಗಳನ್ನು ನಿರ್ವಹಿಸಲು ಹಾಗೂ ತನ್ನ ಮನೆವಾರ್ತೆಯನ್ನು “ಉತ್ತಮವಾದ ರೀತಿಯಲ್ಲಿ” ಮೇಲ್ವಿಚಾರಣೆಮಾಡಲು ಸಮತೋಲನೆಯು ಆವಶ್ಯಕ. ಆದಕಾರಣ ಪ್ರತಿವಾರ ತಮ್ಮ ಕುಟುಂಬ ಆರಾಧನೆಯ ಸಂಜೆಯಲ್ಲಿ ಹಿರಿಯನು ಅಥವಾ ಶುಶ್ರೂಷಾ ಸೇವಕನು ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಬೈಬಲನ್ನು ಅಧ್ಯಯನ ಮಾಡುವುದು ಬಹು ಪ್ರಾಮುಖ್ಯ. ಈ ಮೂಲಕ ಎಲ್ಲರೂ ಪ್ರಯೋಜನ ಹೊಂದಲು ಸಾಧ್ಯವಿದೆ. ಅವನು ಅವರೊಂದಿಗೆ ಕ್ಷೇತ್ರ ಸೇವೆಯಲ್ಲಿಯೂ ಕ್ರಮವಾಗಿ ಭಾಗವಹಿಸಬೇಕು. ಇದೇ ಕಾರಣಕ್ಕಾಗಿ ಮನೆಮಂದಿಯು ಮನೆವಾರ್ತೆಯ ತಲೆಯ ಪ್ರಯತ್ನಗಳೊಂದಿಗೆ ಸಹಕರಿಸುವುದು ಆವಶ್ಯಕ.

ಇನ್ನೊಮ್ಮೆ ಸೇವೆ ಮಾಡುವಿರೊ?

17, 18. (ಎ) ಸಹೋದರನೊಬ್ಬನು ಇನ್ನು ಮುಂದೆ ಸೇವಾನೇಮಕಕ್ಕೆ ಅರ್ಹನಲ್ಲದಿದ್ದಲ್ಲಿ ಅವನಿಗೆ ಯಾವುದರ ಅಗತ್ಯ ಇರಬಹುದು? (ಬಿ) ಹಿಂದೊಮ್ಮೆ ಹಿರಿಯ ಅಥವಾ ಶುಶ್ರೂಷಾ ಸೇವಕನಾಗಿದ್ದ ಸಹೋದರನೊಬ್ಬನು ಯಾವ ನೋಟವನ್ನಿಡುವುದು ಒಳ್ಳೆಯದು?

17 ಪ್ರಾಯಶಃ ನೀವು ಹಿಂದೊಮ್ಮೆ ಹಿರಿಯರು ಅಥವಾ ಶುಶ್ರೂಷಾ ಸೇವಕರು ಆಗಿದ್ದಿರಬಹುದು. ಆದರೆ ಈಗ ನೀವು ಆ ಸೇವಾ ಸ್ಥಾನದಲ್ಲಿಲ್ಲ. ನೀವು ಯೆಹೋವನನ್ನು ಪ್ರೀತಿಸುತ್ತೀರಿ ಮತ್ತು ಆತನು ಇನ್ನೂ ನಿಮ್ಮ ಕುರಿತು ಚಿಂತಿಸುತ್ತಾನೆಂಬ ಖಾತ್ರಿ ನಿಮಗಿರಬಲ್ಲದು. (1 ಪೇತ್ರ 5:6, 7) ಕೆಲವು ಹೊಂದಾಣಿಕೆಗಳನ್ನು ನೀವು ಮಾಡುವ ಅಗತ್ಯವಿದೆ ಎಂದು ನಿಮಗೆ ಹೇಳಲಾಗಿತ್ತೊ? ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧಮನಸ್ಕರಾಗಿರಿ ಮತ್ತು ದೇವರ ಸಹಾಯದಿಂದ ಅದನ್ನು ತಿದ್ದಿಕೊಳ್ಳಲು ಕ್ರಿಯೆಗೈಯಿರಿ. ಕಹಿಭಾವನೆಯನ್ನು ತಾಳದಂತೆ ಜಾಗ್ರತೆವಹಿಸಿರಿ. ವಿವೇಕಿಗಳಾಗಿ ಧನಾತ್ಮಕ ಮನೋಭಾವವನ್ನು ತೋರಿಸಿರಿ. ಹಲವಾರು ವರ್ಷ ಸೇವೆಮಾಡಿದ್ದ ಆದರೆ ನಂತರ ತನ್ನ ಸೇವಾ ಸುಯೋಗಗಳನ್ನು ಕಳಕೊಂಡ ಒಬ್ಬ ಹಿರಿಯನು ಹೇಳಿದ್ದು: “ಹಿರಿಯನಾಗಿದ್ದಾಗ ಹೇಗಿದ್ದೆನೊ ಅದೇ ಸಮನಾಗಿ ಕೂಟದ ಹಾಜರಿ, ಕ್ಷೇತ್ರ ಸೇವೆ, ಬೈಬಲ್‌ ವಾಚನ ಮುಂತಾದವನ್ನು ಮಾಡುತ್ತಾ ಇರಲು ನಾನು ದೃಢಸಂಕಲ್ಪಮಾಡಿ, ಆ ಗುರಿಯನ್ನು ಸಾಧಿಸಶಕ್ತನಾದೆ. ನಾನು ತಾಳ್ಮೆಯನ್ನು ಕಲಿತುಕೊಂಡೆ, ಏಕೆಂದರೆ ಒಂದೆರಡು ವರ್ಷಗಳಲ್ಲಿ ನನ್ನ ಸುಯೋಗಗಳನ್ನು ಪುನಃ ಪಡಕೊಳ್ಳುವೆ ಎಂದು ನೆನಸಿದ್ದೆ. ಆದರೆ ಪುನಃ ಹಿರಿಯನಾಗಿ ಸೇವೆಮಾಡಲು ನನಗೆ ಸಾಧ್ಯವಾದದ್ದು ಏಳು ದೀರ್ಘ ವರ್ಷಗಳು ದಾಟಿದ ನಂತರವೇ. ಆ ಸಮಯದಲ್ಲೆಲ್ಲಾ ದಣಿದು ಸೋತುಹೋಗದೆ ಎಟಕಿಸಿಕೊಳ್ಳುವುದನ್ನು ಮುಂದರಿಸುತ್ತಾ ಇರಲು ನೀಡಲಾದ ಪ್ರೋತ್ಸಾಹನೆಯು ನನಗೆ ಬಹಳವಾಗಿ ಸಹಾಯಮಾಡಿತು.”

18 ಸಹೋದರರಾದ ನೀವು ಸಹ ಈ ಮೇಲೆ ತಿಳಿಸಲಾದಂಥ ಸನ್ನಿವೇಶದಲ್ಲಿ ಇರುವುದಾದರೆ ನಿರಾಶೆ ಪಡಬೇಡಿರಿ. ಯೆಹೋವನು ನಿಮ್ಮ ಶುಶ್ರೂಷೆಯನ್ನು ಮತ್ತು ನಿಮ್ಮ ಮನೆವಾರ್ತೆಯನ್ನು ಹೇಗೆ ಆಶೀರ್ವದಿಸುತ್ತಿದ್ದಾನೆಂಬುದನ್ನು ಪರ್ಯಾಲೋಚಿಸಿರಿ. ನಿಮ್ಮ ಕುಟುಂಬದ ಆಧ್ಯಾತ್ಮಿಕ ಭಕ್ತಿವೃದ್ಧಿಯನ್ನು ಮಾಡಿರಿ, ಅಸೌಖ್ಯದಲ್ಲಿರುವವರನ್ನು ಭೇಟಿಮಾಡಿರಿ, ಬಲಹೀನರಿಗೆ ಉತ್ತೇಜನವನ್ನು ಕೊಡಿರಿ. ಎಲ್ಲಾದಕ್ಕಿಂತ ಹೆಚ್ಚಾಗಿ, ಯೆಹೋವನ ಸಾಕ್ಷಿಯೋಪಾದಿ ದೇವರನ್ನು ಸ್ತುತಿಸುತ್ತಾ, ರಾಜ್ಯದ ಸುವಾರ್ತೆಯನ್ನು ಘೋಷಿಸುತ್ತಾ ಇರುವ ನಿಮ್ಮ ಸುಯೋಗವನ್ನು ಅತಿಮಹತ್ವದ್ದೆಂದು ಎಣಿಸಿರಿ. *ಕೀರ್ತ. 145:1, 2; ಯೆಶಾ. 43:10-12.

ಪುನಃ ಪರಿಶೀಲಿಸಿರಿ

19, 20. (ಎ) ಎಲ್ಲ ಸ್ನಾತ ಪುರುಷರು ಏನು ಮಾಡುವಂತೆ ಪ್ರೋತ್ಸಾಹಿಸಲ್ಪಡುತ್ತಾರೆ? (ಬಿ) ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?

19 ಮೇಲ್ವಿಚಾರಕರ ಮತ್ತು ಶುಶ್ರೂಷಾ ಸೇವಕರ ಅಗತ್ಯವು ಹಿಂದೆಂದಿಗಿಂತಲೂ ಇಂದು ಅತಿ ಹೆಚ್ಚಾಗಿದೆ. ಆದುದರಿಂದ ಸ್ನಾತ ಪುರುಷರೆಲ್ಲರೂ ತಮ್ಮ ಪರಿಸ್ಥಿತಿಗಳನ್ನು ಪುನಃ ಪರಿಶೀಲಿಸಿಕೊಂಡು ತಮ್ಮನ್ನು ಹೀಗೆ ಕೇಳಿಕೊಳ್ಳುವಂತೆ ನಾವು ಪ್ರೋತ್ಸಾಹಿಸುತ್ತೇವೆ: ‘ನಾನೊಬ್ಬ ಶುಶ್ರೂಷಾ ಸೇವಕನು ಅಥವಾ ಹಿರಿಯನು ಆಗಿಲ್ಲದಿದ್ದಲ್ಲಿ ಹಾಗೆ ಯಾಕೆ ಆಗಿಲ್ಲವೆಂಬದಕ್ಕಿರುವ ಕಾರಣಗಳನ್ನು ವಿಶ್ಲೇಷಿಸಿಕೊಳ್ಳಬೇಕೊ?’ ಈ ಪ್ರಾಮುಖ್ಯ ವಿಷಯದ ಮೇಲೆ ಯೋಗ್ಯ ನೋಟವನ್ನು ಪಡೆದುಕೊಳ್ಳುವಂತೆ ದೇವರ ಪವಿತ್ರಾತ್ಮವು ನಿಮಗೆ ಸಹಾಯವನ್ನು ಮಾಡಲಿ.

20 ಜೊತೆವಿಶ್ವಾಸಿಗಳ ಈ ದೇವಭಕ್ತಿಯುತ ಸ್ವತ್ಯಾಗದ ಪ್ರಯತ್ನಗಳಿಂದ ಸಭೆಯ ಸದಸ್ಯರೆಲ್ಲರೂ ಪ್ರಯೋಜನವನ್ನು ಹೊಂದುವರು. ನಾವು ದಯಾಪೂರಿತ ನಿಸ್ವಾರ್ಥ ಕೆಲಸಗಳಲ್ಲಿ ಭಾಗವಹಿಸುವಾಗ, ಇತರರ ಸೇವೆಮಾಡುವುದರಿಂದ ಹಾಗೂ ಪವಿತ್ರಾತ್ಮಕ್ಕೆ ಅನುಸಾರವಾಗಿ ಬಿತ್ತುವುದರಿಂದ ಬರುವ ಸಂತೋಷವನ್ನು ಕೊಯ್ಯುತ್ತೇವೆ. ಆದರೂ ಮುಂದಿನ ಲೇಖನವು ತೋರಿಸುವ ಪ್ರಕಾರ, ನಾವು ದೇವರ ಪವಿತ್ರಾತ್ಮವನ್ನು ದುಃಖಪಡಿಸಲೇಬಾರದು. ಅದನ್ನು ನಾವು ಹೇಗೆ ವರ್ಜಿಸಬಲ್ಲೆವು?

[ಪಾದಟಿಪ್ಪಣಿ]

^ ಪ್ಯಾರ. 18 2009, ಆಗಸ್ಟ್‌ 15ರ ಕಾವಲಿನಬುರುಜುವಿನ ಪುಟ 30-32ನ್ನು ನೋಡಿ.

ನಿಮ್ಮ ಉತ್ತರವೇನು?

ಮೀಕ 5:5ರಲ್ಲಿ ದಾಖಲೆಯಾದ ಪ್ರವಾದನೆಯು ನಮಗೆ ಯಾವುದರ ಆಶ್ವಾಸನೆಯನ್ನು ಕೊಡುತ್ತದೆ?

• ಸ್ವತ್ಯಾಗದ ಮನೋಭಾವದಲ್ಲಿ ಏನು ಒಳಗೂಡಿದೆ ಎಂಬುದನ್ನು ವಿವರಿಸಿರಿ.

• ಇತರರ ಸೇವೆಮಾಡುವ ಅಪೇಕ್ಷೆಯನ್ನು ಒಬ್ಬನು ಬೆಳೆಸಿಕೊಳ್ಳುವುದು ಹೇಗೆ?

• ಪುರುಷನೊಬ್ಬನು ಶುಶ್ರೂಷಾ ಸೇವಕನಾಗಿ ಅಥವಾ ಹಿರಿಯನಾಗಿ ಸೇವೆಮಾಡಲು ಅರ್ಹನಾಗಬೇಕಾದರೆ ಕುಟುಂಬದ ಸಹಕಾರವು ಎಷ್ಟು ಪ್ರಾಮುಖ್ಯ?

[ಅಧ್ಯಯನ ಪ್ರಶ್ನೆಗಳು]

[ಪುಟ 25ರಲ್ಲಿರುವ ಚಿತ್ರಗಳು]

ಎಟಕಿಸಿಕೊಳ್ಳಲು ನೀವೇನನ್ನು ಮಾಡಸಾಧ್ಯವಿದೆ?