ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸ್ತ್ರೀಯರೇ, ನೀವು ತಲೆತನಕ್ಕೆ ಏಕೆ ಅಧೀನರಾಗಬೇಕು?

ಸ್ತ್ರೀಯರೇ, ನೀವು ತಲೆತನಕ್ಕೆ ಏಕೆ ಅಧೀನರಾಗಬೇಕು?

ಸ್ತ್ರೀಯರೇ, ನೀವು ತಲೆತನಕ್ಕೆ ಏಕೆ ಅಧೀನರಾಗಬೇಕು?

“ಸ್ತ್ರೀಗೆ ಪುರುಷನು ತಲೆ.” —1 ಕೊರಿಂ. 11:3.

1, 2. (ಎ) ತಲೆತನ ಮತ್ತು ಅಧೀನತೆಯ ಕುರಿತ ಯೆಹೋವನ ಏರ್ಪಾಡಿನ ವಿಷಯದಲ್ಲಿ ಅಪೊಸ್ತಲ ಪೌಲನು ಏನು ಬರೆದನು? (ಬಿ) ಈ ಲೇಖನದಲ್ಲಿ ಯಾವ ಪ್ರಶ್ನೆಗಳನ್ನು ಪರಿಗಣಿಸಲಾಗುವುದು?

ಅಧೀನತೆಯ ಕ್ರಮಬದ್ಧ ಸರಣಿಯನ್ನು ಸ್ಥಾಪಿಸಿದಾತನು ಯೆಹೋವನು ತಾನೆ. ಇದನ್ನು ತಿಳಿಸುತ್ತಾ “ಪ್ರತಿ ಪುರುಷನಿಗೆ ಕ್ರಿಸ್ತನು ತಲೆ” ಮತ್ತು “ಕ್ರಿಸ್ತನಿಗೆ ದೇವರು ತಲೆ” ಎಂದು ಅಪೊಸ್ತಲ ಪೌಲನು ಬರೆದನು. (1 ಕೊರಿಂ. 11:3) ಯೇಸು ತನ್ನ ತಲೆಯಾದ ಯೆಹೋವ ದೇವರಿಗೆ ಅಧೀನನಾಗಿರುವುದನ್ನು ಒಂದು ಗೌರವ ಮತ್ತು ಸಂತೋಷವಾಗಿ ಪರಿಗಣಿಸಿದ್ದನೆಂದೂ ಕ್ರೈಸ್ತ ಪುರುಷರಿಗೆ ಕ್ರಿಸ್ತನು ತಲೆಯಾಗಿದ್ದಾನೆಂದೂ ಹಿಂದಿನ ಲೇಖನದಲ್ಲಿ ನಾವು ಗಮನಿಸಿದೆವು. ಜನರೊಂದಿಗೆ ವ್ಯವಹರಿಸುವಾಗ ಕ್ರಿಸ್ತನು ದಯಾಪರನೂ ಸೌಮ್ಯನೂ ಕನಿಕರವುಳ್ಳವನೂ ನಿಸ್ವಾರ್ಥನೂ ಆಗಿದ್ದನು. ಸಭೆಯಲ್ಲಿರುವ ಪುರುಷರು ಇತರರೊಂದಿಗೆ, ವಿಶೇಷವಾಗಿ ತಮ್ಮ ಪತ್ನಿಯರೊಂದಿಗೆ ಅದೇ ರೀತಿಯಲ್ಲಿ ವ್ಯವಹರಿಸುವ ಅಗತ್ಯವಿದೆ.

2 ಆದರೆ ಸ್ತ್ರೀಯರ ಕುರಿತಾಗಿ ಏನು? ಅವರ ತಲೆ ಯಾರು? “ಸ್ತ್ರೀಗೆ ಪುರುಷನು ತಲೆ” ಎಂದು ಪೌಲನು ಬರೆದನು. ಈ ದೇವಪ್ರೇರಿತ ಹೇಳಿಕೆಯನ್ನು ಸ್ತ್ರೀಯರು ಹೇಗೆ ವೀಕ್ಷಿಸಬೇಕು? ಗಂಡನು ಅವಿಶ್ವಾಸಿಯಾದಾಗಲೂ ಇದೇ ಮೂಲತತ್ತ್ವವು ಅನ್ವಯಿಸುತ್ತದೊ? ಪುರುಷನ ತಲೆತನಕ್ಕೆ ಅಧೀನತೆಯು ಹೆಂಡತಿಯನ್ನು ಮೌನ ಜೊತೆಗಾರ್ತಿಯಾಗಿರುವಂತೆ ಅವಶ್ಯಪಡಿಸುತ್ತದೊ ಅಂದರೆ ನಿರ್ಣಯಗಳನ್ನು ಮಾಡುವಾಗ ಅವಳಿಗೆ ಯಾವ ಅಭಿಪ್ರಾಯವನ್ನೂ ಸೂಚಿಸಲಿರುವುದಿಲ್ಲವೊ? ಯಾವ ರೀತಿಯಲ್ಲಿ ಒಬ್ಬ ಸ್ತ್ರೀಯು ಸ್ತೋತ್ರಪಾತ್ರಳಾಗುತ್ತಾಳೆ?

‘ಅವನಿಗೆ ಸಹಕಾರಿಣಿಯನ್ನು ಉಂಟುಮಾಡುವೆನು’

3, 4. ವಿವಾಹದಲ್ಲಿ ತಲೆತನದ ಏರ್ಪಾಡು ಏಕೆ ಪ್ರಯೋಜನಕರ?

3 ತಲೆತನದ ಏರ್ಪಾಡು ದೈವಿಕ ಮೂಲದಿಂದ ಬಂದದ್ದಾಗಿದೆ. ಆದಾಮನ ಸೃಷ್ಟಿಯಾದ ಮೇಲೆ ಯೆಹೋವ ದೇವರು ಹೀಗಂದನು: ‘ಮನುಷ್ಯನು ಒಂಟಿಗನಾಗಿರುವದು ಒಳ್ಳೇದಲ್ಲ; ಅವನಿಗೆ ಸರಿಬೀಳುವ ಸಹಕಾರಿಣಿಯನ್ನು ಉಂಟುಮಾಡುವೆನು.’ ಹವ್ವಳನ್ನು ನಿರ್ಮಿಸಿದಾಗ ತನಗೊಬ್ಬ ಸಂಗಾತಿ ಮತ್ತು ಸಹಕಾರಿಣಿ ದೊರೆತದ್ದಕ್ಕಾಗಿ ಆದಾಮನು ಎಷ್ಟು ಸಂತೋಷಪಟ್ಟನೆಂದರೆ, “ಈಕೆಯು ನನ್ನ ಎಲುಬುಗಳಿಂದ ಬಂದ ಎಲುಬೂ ನನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ” ಎಂದು ಉದ್ಗಾರವೆತ್ತಿದನು. (ಆದಿ. 2:18-24) ಪರಿಪೂರ್ಣ ಜನರ ಒಂದು ಇಡೀ ಮಾನವಕುಲಕ್ಕೆ ತಂದೆತಾಯಿಗಳಾಗುವ ಒಂದು ವಿಸ್ಮಯಕರ ಪ್ರತೀಕ್ಷೆ ಆದಾಮಹವ್ವರಿಗಿತ್ತು. ಅವರೆಲ್ಲರಿಗೂ ಭೂವ್ಯಾಪಕ ಪರದೈಸಿನಲ್ಲಿ ಸಂತೋಷದಿಂದ ಸದಾ ಜೀವಿಸುವ ಅವಕಾಶವಿತ್ತು.

4 ನಮ್ಮ ಪ್ರಥಮ ಹೆತ್ತವರ ದಂಗೆಯಿಂದಾಗಿ ಏದೆನ್‌ ತೋಟದ ಪರಿಪೂರ್ಣ ಪರಿಸ್ಥಿತಿ ಕಳೆದುಹೋಯಿತು. (ರೋಮನ್ನರಿಗೆ 5:12 ಓದಿ.) ಆದರೂ ತಲೆತನದ ಏರ್ಪಾಡು ಜಾರಿಯಲ್ಲಿ ಉಳಿಯಿತು. ಅದನ್ನು ಯೋಗ್ಯವಾಗಿ ಅನುಸರಿಸುವಾಗ ವಿವಾಹದಲ್ಲಿ ಮಹಾ ಪ್ರಯೋಜನವೂ ಸಂತೋಷವೂ ಲಭಿಸುವುದು. ತನ್ನ ತಲೆಯಾದ ಯೆಹೋವನಿಗೆ ಅಧೀನನಾಗಿದ್ದಾಗ ಯೇಸುವಿಗೆ ಹೇಗನಿಸಿತೋ ತದ್ರೀತಿಯ ಫಲಿತಾಂಶವು ವಿವಾಹದಲ್ಲೂ ಸಿಗುತ್ತದೆ. ತನ್ನ ಮಾನವಪೂರ್ವ ಅಸ್ತಿತ್ವದಲ್ಲಿ ಯೇಸು ‘[ಯೆಹೋವನ] ಹತ್ತಿರ ಪ್ರತಿದಿನವೂ ಆನಂದಿಸುತ್ತಾ ಇದ್ದನು.’ (ಜ್ಞಾನೋ. 8:30) ಅಪರಿಪೂರ್ಣತೆಯಿಂದಾಗಿ ಪುರುಷರು ಪರಿಪೂರ್ಣ ತಲೆಗಳಾಗಿರಲು ಅಸಮರ್ಥರಾಗಿದ್ದಾರೆ. ಸ್ತ್ರೀಯರು ಸಹ ಪರಿಪೂರ್ಣ ಅಧೀನತೆಯನ್ನು ತೋರಿಸಲು ಶಕ್ತರಾಗಿಲ್ಲ. ಆದರೂ ಪತಿಪತ್ನಿಯರು ತಮ್ಮಿಂದಾದಷ್ಟು ಉತ್ತಮವಾಗಿ ಕಾರ್ಯನಡಿಸಿದ್ದಲ್ಲಿ ಆ ಏರ್ಪಾಡು ಈ ಸಮಯದಲ್ಲಿ ದೊರೆಯಸಾಧ್ಯವಿರುವ ಅತ್ಯಂತ ಹೆಚ್ಚಿನ ಸಂತೃಪ್ತಿಯನ್ನು ತರುವುದು.

5. ರೋಮನ್ನರಿಗೆ 12:10ರಲ್ಲಿರುವ ಸಲಹೆಯನ್ನು ವಿವಾಹ ಸಂಗಾತಿಗಳು ಏಕೆ ಮನಸ್ಸಿಗೆ ತೆಗೆದುಕೊಳ್ಳಬೇಕು?

5 ವಿವಾಹ ದಂಪತಿಗಳು ಕ್ರೈಸ್ತರೆಲ್ಲರಿಗಾಗಿರುವ ಈ ಶಾಸ್ತ್ರೀಯ ಸಲಹೆಯನ್ನು ಅನುಸರಿಸುವುದು ವಿವಾಹದ ಯಶಸ್ಸಿಗೆ ಬಹು ಪ್ರಾಮುಖ್ಯ: “ಸಹೋದರ ಪ್ರೀತಿಯಲ್ಲಿ ಒಬ್ಬರಿಗೊಬ್ಬರು ಕೋಮಲ ಮಮತೆಯುಳ್ಳವರಾಗಿರಿ. ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.” (ರೋಮ. 12:10) ಅಲ್ಲದೆ ಪತಿಪತ್ನಿಯರಿಬ್ಬರೂ “ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ ಕೋಮಲ ಸಹಾನುಭೂತಿಯುಳ್ಳವರಾಗಿಯೂ . . . ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿಯೂ” ಇರಲು ಶ್ರಮಿಸಬೇಕು.—ಎಫೆ. 4:32.

ಅವಿಶ್ವಾಸಿ ಸಂಗಾತಿ

6, 7. ಕ್ರೈಸ್ತ ಪತ್ನಿಯು ತನ್ನ ಅವಿಶ್ವಾಸಿ ಗಂಡನಿಗೆ ಅಧೀನತೆಯಲ್ಲಿ ಇರುವುದಾದರೆ ಯಾವ ಫಲಿತಾಂಶ ದೊರೆಯಬಲ್ಲದು?

6 ನಿಮ್ಮ ವಿವಾಹ ಸಂಗಾತಿಯು ಯೆಹೋವನ ಸೇವಕರಾಗಿರದಿದ್ದಲ್ಲಿ ಆಗೇನು? ಸಾಮಾನ್ಯವಾಗಿ ಅವಿಶ್ವಾಸಿಗಳಾಗಿರುವವರು ಗಂಡಂದಿರೇ. ಈ ಸಂದರ್ಭದಲ್ಲಿ ಹೆಂಡತಿಯರು ಅವರನ್ನು ಹೇಗೆ ಉಪಚರಿಸಬೇಕು? ಬೈಬಲ್‌ ಉತ್ತರಿಸುವುದು: “ಹೆಂಡತಿಯರೇ, ನೀವು ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರಿ; ಹೀಗೆ ಮಾಡುವಲ್ಲಿ, ಅವರಲ್ಲಿ ಯಾರಾದರೂ ವಾಕ್ಯಕ್ಕೆ ವಿಧೇಯರಾಗದಿರುವಲ್ಲಿ ಅವರು ತಮ್ಮ ಹೆಂಡತಿಯರ ನಡತೆ ಮತ್ತು ಆಳವಾದ ಗೌರವದ ಮೂಲಕ ವಾಕ್ಯೋಪದೇಶವಿಲ್ಲದೆ ಜಯಿಸಲ್ಪಟ್ಟಾರು.”—1 ಪೇತ್ರ 3:1, 2.

7 ಪತ್ನಿಯು ತನ್ನ ಅವಿಶ್ವಾಸಿ ಪತಿಯ ಕಡೆಗೆ ಅಧೀನಭಾವವನ್ನು ತೋರಿಸುವಂತೆ ದೇವರ ವಾಕ್ಯವು ತಿಳಿಸುತ್ತದೆ. ಅಷ್ಟು ಒಳ್ಳೇ ರೀತಿಯಲ್ಲಿ ವರ್ತಿಸಲು ಅವಳನ್ನು ಪ್ರಚೋದಿಸುವಂಥದ್ದು ಯಾವುದು ಎಂದು ಪರಿಗಣಿಸುವಂತೆ ಆಕೆಯ ಒಳ್ಳೇ ನಡತೆಯು ಅವನನ್ನು ಪ್ರಭಾವಿಸಬಲ್ಲದು. ಫಲಿತಾಂಶವಾಗಿ ಗಂಡನು ತನ್ನ ಕ್ರೈಸ್ತ ಹೆಂಡತಿಯ ನಂಬಿಕೆಗಳನ್ನು ಅವಲೋಕಿಸುತ್ತಾ ಕೊನೆಗೆ ಸ್ವತಃ ತಾನೇ ಸತ್ಯವನ್ನು ಸ್ವೀಕರಿಸಲು ಸಾಧ್ಯವಾದೀತು.

8, 9. ಕ್ರೈಸ್ತ ಪತ್ನಿಯ ಒಳ್ಳೇ ನಡತೆಗೆ ಅವಿಶ್ವಾಸಿ ಗಂಡನು ಒಳ್ಳೇದಾಗಿ ಪ್ರತಿಕ್ರಿಯಿಸದೇ ಇದ್ದಲ್ಲಿ ಅವಳು ಏನು ಮಾಡಬಲ್ಲಳು?

8 ಆದರೆ ಅವಿಶ್ವಾಸಿ ಗಂಡನು ಒಳ್ಳೇದಾಗಿ ಪ್ರತಿಕ್ರಿಯಿಸದೇ ಇದ್ದಲ್ಲಿ ಆಗೇನು? ಅದೆಷ್ಟೇ ಕಷ್ಟವಾಗಿರಲಿ ವಿಶ್ವಾಸಿ ಪತ್ನಿಯು ಕ್ರೈಸ್ತ ಗುಣಗಳನ್ನು ಯಾವಾಗಲೂ ತೋರಿಸುವಂತೆ ಶಾಸ್ತ್ರಗ್ರಂಥವು ಉತ್ತೇಜಿಸುತ್ತದೆ. ಉದಾಹರಣೆಗೆ, ‘ಪ್ರೀತಿಯು ದೀರ್ಘ ಸಹನೆಯುಳ್ಳದ್ದು’ ಎಂದು 1 ಕೊರಿಂಥ 13:4ರಲ್ಲಿ ನಾವು ಓದುತ್ತೇವೆ. ಆದುದರಿಂದ ಕ್ರೈಸ್ತ ಪತ್ನಿಯು “ಪೂರ್ಣ ದೀನಮನಸ್ಸಿನಿಂದಲೂ ಸೌಮ್ಯಭಾವದಿಂದಲೂ ದೀರ್ಘ ಸಹನೆಯಿಂದಲೂ” ವರ್ತಿಸುತ್ತಾ ಆ ಸನ್ನಿವೇಶವನ್ನು ಪ್ರೀತಿಯಿಂದ ಸಹಿಸಿಕೊಳ್ಳುವುದು ಒಳ್ಳೇದು. (ಎಫೆ. 4:2) ದೇವರ ಕಾರ್ಯಕಾರಿ ಶಕ್ತಿಯಾದ ಪವಿತ್ರಾತ್ಮದ ಸಹಾಯದಿಂದ ಕಷ್ಟದ ಸನ್ನಿವೇಶಗಳ ಕೆಳಗೂ ಕ್ರೈಸ್ತ ಗುಣಗಳನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ.

9 “ನನಗೆ ಶಕ್ತಿಯನ್ನು ಕೊಡುವಾತನ ಮೂಲಕ ನಾನು ಎಲ್ಲವನ್ನು ಮಾಡಲು ಶಕ್ತನಾಗಿದ್ದೇನೆ” ಎಂದು ಬರೆದನು ಪೌಲನು. (ಫಿಲಿ. 4:13) ಅನ್ಯಥಾ ಸಾಧ್ಯವಾಗದ ಅನೇಕ ವಿಷಯಗಳನ್ನು ಮಾಡುವಂತೆ ಕ್ರೈಸ್ತ ಸಂಗಾತಿಗೆ ದೇವರ ಪವಿತ್ರಾತ್ಮವು ಸಾಧ್ಯಗೊಳಿಸುತ್ತದೆ. ಉದಾಹರಣೆಗೆ, ಒಬ್ಬ ಸಂಗಾತಿಯು ನಿರ್ದಯೆಯಿಂದ ಉಪಚರಿಸುವಾಗ ಇನ್ನೊಬ್ಬರಲ್ಲಿ ಅದಕ್ಕೆ ಪ್ರತೀಕಾರವನ್ನು ನೀಡುವ ಪ್ರಚೋದನೆ ಹುಟ್ಟೀತು. ಆದರೂ ಬೈಬಲ್‌ ಕ್ರೈಸ್ತರೆಲ್ಲರಿಗೆ ಹೇಳುವುದು: “ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿ. . . . ‘ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಯೆಹೋವನು ಹೇಳುತ್ತಾನೆ’ ಎಂದು ಬರೆದಿದೆ.” (ರೋಮ. 12:17-19) ತದ್ರೀತಿಯಲ್ಲಿ 1 ಥೆಸಲೊನೀಕ 5:15 ನಮಗೆ ಸಲಹೆ ನೀಡುವುದು: “ಯಾರೂ ಬೇರೆ ಯಾರಿಗೂ ಹಾನಿಗೆ ಪ್ರತಿಯಾಗಿ ಹಾನಿಯನ್ನು ಮಾಡದಂತೆ ನೋಡಿಕೊಳ್ಳಿರಿ; ಯಾವಾಗಲೂ ಒಬ್ಬರು ಇನ್ನೊಬ್ಬರಿಗೆ ಮಾತ್ರವಲ್ಲದೆ ಇತರ ಎಲ್ಲರಿಗೆ ಒಳ್ಳೇದನ್ನೇ ಮಾಡುವವರಾಗಿರಿ.” ಯೆಹೋವನ ಪವಿತ್ರಾತ್ಮದ ಬೆಂಬಲದಿಂದ ನಮ್ಮ ಸ್ವಂತ ಬಲದಲ್ಲಿ ಯಾವುದು ಅಶಕ್ಯವೋ ಅದು ಶಕ್ಯವಾಗಿ ಪರಿಣಮಿಸುತ್ತದೆ. ನಮ್ಮಲ್ಲಿರುವ ಕೊರತೆಯನ್ನು ನೀಗಿಸುವಂತೆ ದೇವರ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸುವುದು ಅದೆಷ್ಟು ಸೂಕ್ತ!

10. ಇತರರ ನಿರ್ದಯೆಯ ಮಾತುಗಳನ್ನು ಮತ್ತು ಕ್ರಿಯೆಗಳನ್ನು ಯೇಸು ನಿರ್ವಹಿಸಿದ್ದು ಹೇಗೆ?

10 ತನಗೆ ಅನಿಷ್ಟಕರ ವಿಷಯಗಳನ್ನು ನುಡಿದ ಅಥವಾ ಮಾಡಿದ ಜನರೊಂದಿಗೆ ವ್ಯವಹರಿಸಿದ್ದರಲ್ಲಿ ಯೇಸು ಅತ್ಯುತ್ತಮ ಮಾದರಿಯನ್ನಿಟ್ಟಿದ್ದಾನೆ. 1 ಪೇತ್ರ 2:23 ಹೇಳುವುದು: “ಅವನನ್ನು ದೂಷಿಸುತ್ತಿದ್ದಾಗ ಅವನು ಪ್ರತಿಯಾಗಿ ದೂಷಿಸುತ್ತಿರಲಿಲ್ಲ. ಅವನು ಕಷ್ಟವನ್ನು ಅನುಭವಿಸುತ್ತಿದ್ದಾಗ ಯಾರನ್ನೂ ಬೆದರಿಸದೆ, ನೀತಿಯಿಂದ ತೀರ್ಪುಮಾಡುವಾತನಿಗೆ ತನ್ನನ್ನು ಒಪ್ಪಿಸಿಕೊಡುತ್ತಾ ಇದ್ದನು.” ಅವನ ಉತ್ತಮ ಮಾದರಿಯನ್ನು ಅನುಸರಿಸುವಂತೆ ನಾವು ಪ್ರಬೋಧಿಸಲ್ಪಟ್ಟಿದ್ದೇವೆ. ಇತರರ ದುರ್ವರ್ತನೆಯಿಂದಾಗಿ ಉದ್ರೇಕಗೊಳ್ಳಬೇಡಿ. ಕ್ರೈಸ್ತರೆಲ್ಲರಿಗೆ ಉಪದೇಶಿಸಲ್ಪಟ್ಟಂತೆ “ಕೋಮಲವಾದ ಕನಿಕರವುಳ್ಳವರೂ ದೀನಮನಸ್ಸುಳ್ಳವರೂ ಆಗಿರಿ. ಹಾನಿಗೆ ಪ್ರತಿಯಾಗಿ ಹಾನಿಯನ್ನು ಮಾಡದೆ ದೂಷಿಸುವವರನ್ನು ಪ್ರತಿಯಾಗಿ ದೂಷಿಸದೆ” ಇರಿ.—1 ಪೇತ್ರ 3:8, 9.

ಬರೇ ಮೌನ ಜೊತೆಗಾರ್ತಿಯರೊ?

11. ಕೆಲವು ಕ್ರೈಸ್ತ ಸ್ತ್ರೀಯರು ಯಾವ ಮಹಾ ಸುಯೋಗದಲ್ಲಿ ಪಾಲ್ಗೊಳ್ಳಲಿರುವರು?

11 ಗಂಡನಿಗೆ ಅಧೀನರಾಗಿರುವುದು ಎಂದರೆ ಸ್ತ್ರೀಯರು ದಾಂಪತ್ಯದಲ್ಲಿ ಮೌನ ಜೊತೆಗಾರ್ತಿಯರಾಗಿರುವುದೊ? ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅಥವಾ ಬೇರೆ ಸಂಗತಿಗಳಲ್ಲಿ ಅವರಿಗೆ ಯಾವ ಅಭಿಪ್ರಾಯವನ್ನೂ ವ್ಯಕ್ತಪಡಿಸಲಿಕ್ಕಿಲ್ಲವೊ? ಹಾಗಲ್ಲ. ಸ್ತ್ರೀಯರಿಗೆ ಹಾಗೂ ಪುರುಷರಿಗೆ ಯೆಹೋವನು ಅನೇಕ ಸುಯೋಗಗಳನ್ನು ಕೊಟ್ಟಿದ್ದಾನೆ. ಕ್ರಿಸ್ತನು ಈ ಭೂಮಿಯನ್ನು ಆಳುವಾಗ ಸ್ವರ್ಗದಲ್ಲಿ ಅವನ ಕೈಕೆಳಗೆ ರಾಜರೂ ಯಾಜಕರೂ ಆಗಿರುವ 1,44,000 ಮಂದಿಗೆ ಇರುವ ಮಹಾ ಗೌರವದ ಕುರಿತು ಯೋಚಿಸಿ! ಆ ಸಂಖ್ಯೆಯಲ್ಲಿ ಸ್ತ್ರೀಯರು ಸಹ ಸೇರಿರುತ್ತಾರೆ. (ಗಲಾ. 3:26-29) ಯೆಹೋವನು ತನ್ನ ವಿಷಯಗಳ ಏರ್ಪಾಡಿನಲ್ಲಿ ಸ್ತ್ರೀಯರಿಗೆ ಸಕ್ರಿಯ ಪಾತ್ರವನ್ನು ಕೊಟ್ಟಿರುತ್ತಾನೆ ಎಂಬುದು ಸುಸ್ಪಷ್ಟ.

12, 13. ಸ್ತ್ರೀಯರು ಪ್ರವಾದಿಸಿದ್ದರು ಎಂಬುದನ್ನು ತೋರಿಸಲು ಒಂದು ಉದಾಹರಣೆ ಕೊಡಿ.

12 ಉದಾಹರಣೆಗೆ, ಬೈಬಲ್‌ ಕಾಲದಲ್ಲಿ ಸ್ತ್ರೀಯರು ಪ್ರವಾದಿಸಿದ್ದರು. ಯೋವೇಲ 2:28, 29 ಮುಂತಿಳಿಸುವುದು: “ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ನಿಮ್ಮಲ್ಲಿರುವ ಗಂಡಸರೂ ಹೆಂಗಸರೂ ಪ್ರವಾದಿಸುವರು; . . . ಆ ದಿನಗಳಲ್ಲಿ ದಾಸದಾಸಿಯರ ಮೇಲೆಯೂ ನನ್ನ ಆತ್ಮವನ್ನು ಸುರಿಸುವೆನು.”

13 ಕ್ರಿ.ಶ. 33ರ ಪಂಚಾಶತ್ತಮ ದಿನದಲ್ಲಿ ಯೆರೂಸಲೇಮಿನ ಮೇಲಂತಸ್ತಿನ ಕೋಣೆಯಲ್ಲಿ ಕೂಡಿಬಂದ ಯೇಸುವಿನ ಸುಮಾರು 120 ಮಂದಿ ಶಿಷ್ಯರಲ್ಲಿ ಸ್ತ್ರೀಯರೂ ಹಾಗೂ ಪುರುಷರೂ ಕೂಡಿದ್ದರು. ಈ ಇಡೀ ಗುಂಪಿನ ಮೇಲೆ ದೇವರ ಪವಿತ್ರಾತ್ಮವು ಸುರಿಸಲ್ಪಟ್ಟಿತು. ಆದ್ದರಿಂದ ಪೇತ್ರನು ಯೋವೇಲನು ಮುಂತಿಳಿಸಿದ್ದ ಮಾತನ್ನು ಉಲ್ಲೇಖಿಸುತ್ತಾ ಅದನ್ನು ಪುರುಷರಿಗೂ ಹಾಗೂ ಸ್ತ್ರೀಯರಿಗೂ ಅನ್ವಯಿಸಶಕ್ತನಾಗಿದ್ದನು. ಪೇತ್ರನು ಹೇಳಿದ್ದು: “ಪ್ರವಾದಿಯಾದ ಯೋವೇಲನ ಮೂಲಕ ಹೀಗೆ ತಿಳಿಸಲಾಗಿತ್ತು, ‘ಕಡೇ ದಿವಸಗಳಲ್ಲಿ ನಾನು ಎಲ್ಲ ಮನುಷ್ಯರ ಮೇಲೆ ನನ್ನ ಪವಿತ್ರಾತ್ಮವನ್ನು ಸುರಿಸುವೆನು; ಆಗ ನಿಮ್ಮ ಪುತ್ರರೂ ಪುತ್ರಿಯರೂ ಪ್ರವಾದಿಸುವರು; . . . ಮಾತ್ರವಲ್ಲದೆ ಆ ದಿನಗಳಲ್ಲಿ ನನ್ನ ದಾಸದಾಸಿಯರ ಮೇಲೆಯೂ ನನ್ನ ಪವಿತ್ರಾತ್ಮವನ್ನು ಸುರಿಸುವೆನು ಮತ್ತು ಅವರು ಪ್ರವಾದಿಸುವರು.’”—ಅ. ಕಾ. 2:16-18.

14. ಆದಿ ಕ್ರೈಸ್ತತ್ವವನ್ನು ಹಬ್ಬಿಸುವುದರಲ್ಲಿ ಸ್ತ್ರೀಯರು ಯಾವ ಪಾತ್ರ ವಹಿಸಿದರು?

14 ಒಂದನೇ ಶತಮಾನದಲ್ಲಿ ಕ್ರೈಸ್ತತ್ವವನ್ನು ಹಬ್ಬಿಸುವುದರಲ್ಲಿ ಸ್ತ್ರೀಯರು ಒಂದು ಗಮನಾರ್ಹ ಪಾತ್ರವನ್ನು ವಹಿಸಿದರು. ಅವರು ದೇವರ ರಾಜ್ಯದ ಸುವಾರ್ತೆಯ ಕುರಿತು ಇತರರಿಗೆ ಸಾರಿದರು ಹಾಗೂ ಆ ಸಾರುವ ಕೆಲಸಕ್ಕೆ ಸಂಬಂಧಿಸಿದ ವಿಷಯಗಳನ್ನು ಮಾಡಿದರು. (ಲೂಕ 8:1-3) ಉದಾಹರಣೆಗೆ, ಅಪೊಸ್ತಲ ಪೌಲನು ಫೊಯಿಬೆಯನ್ನು “ಕೆಂಕ್ರೆಯಲ್ಲಿರುವ ಸಭೆಯ ಸೇವಕಿ” ಎಂದು ಕರೆದನು. ಅಲ್ಲದೆ ಜೊತೆಕೆಲಸಗಾರರಿಗೆ ವಂದನೆಗಳನ್ನು ಕಳುಹಿಸುವಲ್ಲಿ ಪೌಲನು ಹಲವಾರು ನಂಬಿಗಸ್ತ ಸ್ತ್ರೀಯರ ಕುರಿತು ತಿಳಿಸಿದನು. ಅವರಲ್ಲಿ ‘ಕರ್ತನ ಸೇವೆಯಲ್ಲಿ ಪ್ರಯಾಸಪಟ್ಟು ಕೆಲಸಮಾಡುತ್ತಿರುವ ತ್ರುಫೈನ ಮತ್ತು ತ್ರುಫೋಸರೂ’ ಸೇರಿದ್ದರು. ‘ಕರ್ತನ ಸೇವೆಯಲ್ಲಿ ಬಹಳವಾಗಿ ಪ್ರಯಾಸಪಟ್ಟಿರುವ ನಮ್ಮ ಪ್ರಿಯ ಪೆರ್ಸೀಸಳ’ ಕುರಿತೂ ಅವನು ತಿಳಿಸಿದ್ದನು.—ರೋಮ. 16:1, 12.

15. ನಮ್ಮ ಕಾಲದಲ್ಲಿ ಕ್ರೈಸ್ತತ್ವದ ಹಬ್ಬುವಿಕೆಯಲ್ಲಿ ಸ್ತ್ರೀಯರು ಯಾವ ಪಾತ್ರವನ್ನು ವಹಿಸುತ್ತಾರೆ?

15 ನಮ್ಮ ಕಾಲದಲ್ಲಿ ಸಹ ದೇವರ ರಾಜ್ಯವನ್ನು ಭೂಲೋಕದಲ್ಲೆಲ್ಲೂ ಸಾರುವ ಸುಮಾರು ಎಪ್ಪತ್ತು ಲಕ್ಷಕ್ಕಿಂತಲೂ ಹೆಚ್ಚು ಜನರಲ್ಲಿ ದೊಡ್ಡ ಪಾಲು ಎಲ್ಲ ವಯಸ್ಸಿನ ಸ್ತ್ರೀಯರದ್ದಾಗಿದೆ. (ಮತ್ತಾ. 24:14) ಇವರಲ್ಲಿ ಅನೇಕರು ಪೂರ್ಣ ಸಮಯದ ಶುಶ್ರೂಷಕರೂ ಮಿಷನೆರಿಗಳೂ ಬೆತೆಲ್‌ ಕುಟುಂಬಗಳ ಸದಸ್ಯರೂ ಆಗಿದ್ದಾರೆ. ಕೀರ್ತನೆಗಾರ ದಾವೀದನು ಹಾಡಿದ್ದು: “ಕರ್ತನು ನುಡಿದನು; ಶುಭವಾರ್ತೆಯನ್ನು ಪ್ರಸಿದ್ಧಪಡಿಸುವ ಸ್ತ್ರೀಸಮೂಹವು ಎಷ್ಟೋ ದೊಡ್ಡದು.” (ಕೀರ್ತ. 68:11) ಈ ಮಾತುಗಳು ಅದೆಷ್ಟು ಸತ್ಯವಾಗಿ ರುಜುವಾಗಿರುತ್ತವೆ! ಸುವಾರ್ತೆಯನ್ನು ಸಾರುವುದರಲ್ಲಿ ಹಾಗೂ ಆತನ ಉದ್ದೇಶಗಳನ್ನು ನೆರವೇರಿಸುವುದರಲ್ಲಿ ಸ್ತ್ರೀಯರು ವಹಿಸುವ ಪಾತ್ರವನ್ನು ಯೆಹೋವನು ಮಾನ್ಯಮಾಡುತ್ತಾನೆ. ಕ್ರೈಸ್ತ ಸ್ತ್ರೀಯರು ಅಧೀನತೆಯಲ್ಲಿರಬೇಕು ಎಂಬ ಆತನ ಅವಶ್ಯಕತೆಯು ಮೌನ ಅಧೀನತೆ ಎಂಬರ್ಥ ಕೊಡುವುದಿಲ್ಲ ನಿಶ್ಚಯ.

ಮೌನವಾಗಿರದೆ ಮಾತಾಡಿದ ಇಬ್ಬರು ಸ್ತ್ರೀಯರು

16, 17. ದಾಂಪತ್ಯದಲ್ಲಿ ಸ್ತ್ರೀಯರು ಮೌನ ಜೊತೆಗಾರ್ತಿಯರಾಗಿ ಇರಬೇಕಾಗಿಲ್ಲ ಎಂಬುದನ್ನು ಸಾರಳ ಉದಾಹರಣೆಯು ಹೇಗೆ ತೋರಿಸುತ್ತದೆ?

16 ಯೆಹೋವನು ತಾನೆ ಸ್ತ್ರೀಯರಿಗೆ ಅನೇಕ ಸುಯೋಗಗಳನ್ನು ದಯಪಾಲಿಸುತ್ತಾನೆಂದಾದರೆ, ಗಂಡಂದಿರು ಗಂಭೀರವಾದ ನಿರ್ಣಯಗಳನ್ನು ಮಾಡುವ ಮುಂಚೆ ತಮ್ಮ ಹೆಂಡತಿಯರನ್ನು ವಿಚಾರಿಸುವುದು ತಪ್ಪೊ? ಇಲ್ಲ. ಹಾಗೆ ಮಾಡುವುದು ಗಂಡಂದಿರಿಗೆ ವಿವೇಕಪ್ರದ. ತಮ್ಮ ಗಂಡಂದಿರು ಅವರ ಅಭಿಪ್ರಾಯವನ್ನು ಕೇಳದಾಗ ಸಹ ಬಾಯಿಬಿಟ್ಟು ಮಾತಾಡಿದ ಅಥವಾ ಕ್ರಿಯೆಗೈದ ಸ್ತ್ರೀಯರ ಹಲವಾರು ಉದಾಹರಣೆಗಳು ಶಾಸ್ತ್ರಗ್ರಂಥದಲ್ಲಿವೆ. ಎರಡು ವಿದ್ಯಮಾನಗಳನ್ನು ಪರಿಗಣಿಸಿ.

17 ಪೂರ್ವಜನಾದ ಅಬ್ರಹಾಮನ ಪತ್ನಿ ಸಾರಳನ್ನು ತೆಗೆದುಕೊಳ್ಳಿ. ಅಬ್ರಹಾಮನ ದ್ವಿತೀಯ ಪತ್ನಿ ಹಾಗೂ ಅವಳ ಮಗನು ಅವಮರ್ಯಾದೆ ತೋರಿಸಿದ ಕಾರಣದಿಂದಾಗಿ ಅವರನ್ನು ಹೊರಗೆ ಹಾಕುವಂತೆ ಸಾರಳು ಅವನಿಗೆ ಹೇಳುತ್ತಾ ಇದ್ದಳು. “ಈ ಮಾತು ಅಬ್ರಹಾಮನಿಗೆ ಬಹುದುಃಖವನ್ನು ಹುಟ್ಟಿಸಿತು.” ಆದರೆ ದೇವರಿಗೆ ಹಾಗೆ ಅನಿಸಲಿಲ್ಲ. ಯೆಹೋವನು ಅಬ್ರಹಾಮನಿಗೆ ಹೇಳಿದ್ದು: “ಮಗನ ಮತ್ತು ದಾಸಿಯ ದೆಸೆಯಿಂದ ನಿನಗೆ ಕರಕರೆಯಾಗಬಾರದು; ಸಾರಳು ಹೇಳಿದಂತೆಯೇ ಮಾಡು.” (ಆದಿ. 21:8-12) ಅಬ್ರಹಾಮನು ಯೆಹೋವನಿಗೆ ವಿಧೇಯನಾದನು, ಸಾರಳ ಮಾತಿಗೆ ಕಿವಿಗೊಟ್ಟನು, ಆಕೆ ಏನನ್ನು ವಿನಂತಿಸಿದಳೋ ಅದನ್ನು ಮಾಡಿದನು.

18. ಅಬೀಗೈಲಳು ಯಾವ ಮೊದಲ ಹೆಜ್ಜೆಯನ್ನು ತೆಗೆದುಕೊಂಡಳು?

18 ನಾಬಾಲನ ಪತ್ನಿಯಾದ ಅಬೀಗೈಲಳ ಕುರಿತೂ ಯೋಚಿಸಿರಿ. ಅಸೂಯೆಪರ ರಾಜ ಸೌಲನಿಂದ ಪಲಾಯನಗೈಯುತ್ತಿದ್ದಾಗ ದಾವೀದನು ನಾಬಾಲನ ಕುರಿಮಂದೆಗಳ ಸಮೀಪದಲ್ಲಿ ಪಾಳೆಯಹೂಡಿ ಸಮಯಕಳೆದನು. ಆ ಐಶ್ವರ್ಯವಂತ ನಾಬಾಲನಿಗಿದ್ದ ಅನೇಕ ಸ್ವತ್ತುಗಳಲ್ಲಿ ಯಾವುದನ್ನೂ ತಕ್ಕೊಳ್ಳುವ ಬದಲಿಗೆ ದಾವೀದ ಮತ್ತು ಅವನ ಜನರು ಅವನ ಆಸ್ತಿಪಾಸ್ತಿಯನ್ನು ಸಂರಕ್ಷಿಸಿದರು. ಆದರೂ ನಾಬಾಲನು “ನಿಷ್ಠುರನೂ ದುಷ್ಕರ್ಮಿಯೂ” ಆಗಿದ್ದು ದಾವೀದನ ಜನರನ್ನು “ಬೈದನು.” ಅವನು ‘ಮೂರ್ಖನಾಗಿದ್ದನು’ ಮತ್ತು ‘ಮೂರ್ಖತನವು’ ಅವನಲ್ಲಿ ಬೀಡುಮಾಡಿತ್ತು. ದಾವೀದನ ಜನರು ಸ್ವಲ್ಪ ಆಹಾರಪಾನಗಳನ್ನು ಒದಗಿಸಲು ಗೌರವಪೂರ್ವಕವಾಗಿ ಕೇಳಿಕೊಂಡಾಗ ನಾಬಾಲನು ನಿರಾಕರಿಸಿದನು. ನಡೆದ ಸಂಗತಿಗಳನ್ನು ಅಬೀಗೈಲಳು ಕೇಳಿದಾಗ ಹೇಗೆ ಪ್ರತಿಕ್ರಿಯಿಸಿದಳು? ನಾಬಾಲನಿಗೆ ಏನನ್ನೂ ತಿಳಿಸದೆ ಅವಳು “ಶೀಘ್ರವಾಗಿ ಇನ್ನೂರು ರೊಟ್ಟಿ, ಎರಡು ಬುದ್ದಲಿ ದ್ರಾಕ್ಷಾರಸ, ಸಿದ್ಧಮಾಡಿದ ಐದು ಕುರಿಗಳ ಮಾಂಸ, ಐವತ್ತು ಸೇರು ಹುರಿಗಾಳು, ಒಣಗಿದ ನೂರು ದ್ರಾಕ್ಷೇಗೊಂಚಲುಗಳು, ಅಂಜೂರಹಣ್ಣುಗಳ ಇನ್ನೂರು ಉಂಡೆಗಳು ಇವುಗಳನ್ನು” ತಂದು ದಾವೀದನಿಗೂ ಅವನ ಜನರಿಗೂ ಕೊಟ್ಟಳು. ಅಬೀಗೈಲಳು ಮಾಡಿದ್ದು ಉಚಿತವಾಗಿತ್ತೊ? ಹೌದು. ಏಕೆಂದರೆ ತದನಂತರ ಸಂಭವಿಸಿದ ಕೆಲವು ಘಟನೆಗಳು ಅವಳು ಮಾಡಿದ್ದು ಉಚಿತವಾಗಿತ್ತು ಎಂದು ತೋರಿಸುತ್ತವೆ. “ನಾಬಾಲನು ಯೆಹೋವನಿಂದ ಹತನಾಗಿ ಸತ್ತನು” ಮತ್ತು ನಂತರ ದಾವೀದನು ಅಬೀಗೈಲಳನ್ನು ಮದುವೆಯಾದನು ಎಂದು ಬೈಬಲ್‌ ಹೇಳುತ್ತದೆ.—1 ಸಮು. 25:3, 14-19, 23-25, 38-42.

‘ಸ್ತೋತ್ರಪಾತ್ರಳಾದ ಸ್ತ್ರೀ’

19, 20. ಒಬ್ಬಾಕೆ ಸ್ತ್ರೀಯನ್ನು ನಿಜವಾಗಿಯೂ ಸ್ತೋತ್ರಪಾತ್ರಳನ್ನಾಗಿ ಮಾಡುವಂಥದ್ದು ಯಾವುದು?

19 ಯೆಹೋವನಿಗೆ ಮೆಚ್ಚಿಕೆಯಾದ ರೀತಿಯಲ್ಲಿ ಕೆಲಸಮಾಡುವ ಪತ್ನಿಯನ್ನು ಶಾಸ್ತ್ರಗ್ರಂಥವು ಪ್ರಶಂಸಿಸುತ್ತದೆ. ಬೈಬಲ್‌ ಪುಸ್ತಕವಾದ ಜ್ಞಾನೋಕ್ತಿಯು ‘ಗುಣವತಿಯಾದ ಸತಿಯನ್ನು’ ಹೊಗಳುತ್ತಾ, “ಆಕೆಯು ಹವಳಕ್ಕಿಂತಲೂ ಬಹು ಅಮೂಲ್ಯಳು. ಪತಿಹೃದಯವು ಆಕೆಯಲ್ಲಿ ಭರವಸಪಡುವದು; ಅವನು ಕೊಳ್ಳೆಕೊಳ್ಳೆಯಾಗಿ ಸಂಪಾದಿಸುವನು. ಆಕೆಯು ಜೀವಮಾನದಲ್ಲೆಲ್ಲಾ ಅವನಿಗೆ ಅಹಿತವನ್ನು ಮಾಡದೆ ಹಿತವನ್ನೇ ಮಾಡುತ್ತಿರುವಳು” ಎನ್ನುತ್ತದೆ. ಅಷ್ಟಲ್ಲದೆ ಆಕೆಯು “ಬಾಯಿದೆರೆದು ಜ್ಞಾನವನ್ನು ತೋರ್ಪಡಿಸುವಳು. ಆಕೆಯ ನಾಲಿಗೆಯು ಬುದ್ಧಿಯನ್ನು ಪ್ರೀತಿಪೂರ್ವಕವಾಗಿ ಹೇಳುವದು. ಸೋಮಾರಿತನದ ಅನ್ನವನ್ನು ತಿನ್ನದೆ ಗೃಹಕೃತ್ಯಗಳನ್ನೆಲ್ಲಾ ನೋಡಿಕೊಳ್ಳುವಳು. ಮಕ್ಕಳು ಎದ್ದುನಿಂತು ಆಕೆಯನ್ನು ಧನ್ಯಳು ಎಂದು ಹೇಳುವರು; ಪತಿಯು ಸಹ . . . ಆಕೆಯನ್ನು ಕೊಂಡಾಡುವನು” ಎಂದೂ ಹೇಳುತ್ತದೆ.—ಜ್ಞಾನೋ. 31:10-12, 26-29.

20 ಒಬ್ಬಾಕೆ ಸ್ತ್ರೀಯನ್ನು ನಿಜವಾಗಿಯೂ ಸ್ತೋತ್ರಪಾತ್ರಳನ್ನಾಗಿ ಮಾಡುವಂಥದ್ದು ಯಾವುದು? ಜ್ಞಾನೋಕ್ತಿ 31:30 ಹೇಳುವುದು: “ಸೌಂದರ್ಯವು ನೆಚ್ಚತಕ್ಕದ್ದಲ್ಲ, ಲಾವಣ್ಯವು ನೆಲೆಯಲ್ಲ; ಯೆಹೋವನಲ್ಲಿ ಭಯಭಕ್ತಿಯುಳ್ಳವಳೇ ಸ್ತೋತ್ರಪಾತ್ರಳು.” ಯೆಹೋವನ ಭಯಭಕ್ತಿಯಲ್ಲಿ ದೈವಿಕ ಏರ್ಪಾಡಾದ ತಲೆತನಕ್ಕೆ ಅವಳು ಮನಃಪೂರ್ವಕವಾಗಿ ಅಧೀನಳಾಗುವ ಅಗತ್ಯವೂ ಸೇರಿರುತ್ತದೆ. “ಪ್ರತಿ ಪುರುಷನಿಗೆ ಕ್ರಿಸ್ತನು ತಲೆ” ಹಾಗೂ “ಕ್ರಿಸ್ತನಿಗೆ ದೇವರು ತಲೆ” ಆಗಿರುವಂತೆಯೇ “ಸ್ತ್ರೀಗೆ ಪುರುಷನು ತಲೆ” ಆಗಿರುತ್ತಾನೆ.—1 ಕೊರಿಂ. 11:3.

ದೇವರ ವರದಾನಕ್ಕಾಗಿ ಕೃತಜ್ಞರಾಗಿರಿ

21, 22. (ಎ) ದೇವರ ವರದಾನವಾದ ವಿವಾಹಕ್ಕೆ ಕೃತಜ್ಞರಾಗಿರಲು ವಿವಾಹಿತ ಕ್ರೈಸ್ತರಿಗೆ ಯಾವ ಕಾರಣಗಳಿವೆ? (ಬಿ) ಅಧಿಕಾರ ಮತ್ತು ತಲೆತನದ ವಿಷಯದಲ್ಲಿ ಯೆಹೋವನ ಏರ್ಪಾಡುಗಳಿಗೆ ನಾವು ಏಕೆ ಗೌರವವನ್ನು ತೋರಿಸಬೇಕು? (ಪುಟ 17ರಲ್ಲಿರುವ ಚೌಕ ನೋಡಿ.)

21 ವಿವಾಹಬಂಧದಲ್ಲಿ ಒಂದಾಗಿರುವ ಕ್ರೈಸ್ತರಿಗೆ ದೇವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಅನೇಕಾನೇಕ ಕಾರಣಗಳಿವೆ! ಸುಖೀ ವಿವಾಹದಂಪತಿಯಾಗಿ ಅವರು ಐಕ್ಯದಿಂದ ಮುಂದೆಸಾಗಬಲ್ಲರು. ವಿಶೇಷವಾಗಿ ದೇವರ ಆಶೀರ್ವದಿತ ‘ವರದಾನವಾದ’ ವಿವಾಹಕ್ಕಾಗಿ ಅವರು ಕೃತಜ್ಞರಾಗಿರಬಲ್ಲರು. ಏಕೆಂದರೆ ಅವರ ಬಾಳ್ವೆಯನ್ನು ಒಂದುಗೂಡಿಸಿ ಯೆಹೋವನೊಂದಿಗೆ ನಡೆದಾಡುವ ಸುಸಂದರ್ಭವನ್ನು ಅದು ಒದಗಿಸುತ್ತದೆ. (ರೂತ. 1:9, NW; ಮೀಕ 6:8) ವಿವಾಹದ ಮೂಲಕರ್ತನಾದ ಆತನು ದಾಂಪತ್ಯ ಸುಖಸೌಖ್ಯಕ್ಕೆ ಏನು ಅವಶ್ಯ ಎಂಬುದನ್ನು ನಿಖರವಾಗಿ ಬಲ್ಲವನಾಗಿದ್ದಾನೆ. ಆದ್ದರಿಂದ ಯಾವಾಗಲೂ ಆತನ ಮಾರ್ಗದಲ್ಲಿ ಕ್ರಿಯೆಗೈಯಿರಿ. ಆಗ ಇಂದಿನ ತೊಂದರೆಯುಕ್ತ ಲೋಕದಲ್ಲೂ ‘ಯೆಹೋವನ ಆನಂದವೇ ನಿಮ್ಮ ಆಶ್ರಯವಾಗಿರುವುದು.’—ನೆಹೆ. 8:10.

22 ತನ್ನ ಪತ್ನಿಯನ್ನು ತನ್ನಂತೆಯೇ ಪ್ರೀತಿಸುವ ಕ್ರೈಸ್ತ ಪತಿಯು ಕೋಮಲವಾದ ಪರಿಗಣನೆಯುಳ್ಳ ತಲೆತನವನ್ನು ತೋರಿಸುವನು. ಅವನ ದೇವಭೀರು ಪತ್ನಿಯು ನಿಜವಾಗಿಯೂ ಪ್ರೀತಿಪಾತ್ರಳಾಗಿರುವಳು. ಏಕೆಂದರೆ ಅವಳು ಯಾವಾಗಲೂ ಬೆಂಬಲವನ್ನು ನೀಡುತ್ತಾ ಅವನಿಗೆ ಆಳವಾದ ಗೌರವವನ್ನು ತೋರಿಸುವಳು. ಎಲ್ಲಾದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾಗಿ ಅವರ ಆದರ್ಶನೀಯ ವಿವಾಹವು ನಮ್ಮ ಸ್ತೋತ್ರಪಾತ್ರ ದೇವರಾದ ಯೆಹೋವನಿಗೆ ಗೌರವವನ್ನು ತರುವುದು.

ನಿಮಗೆ ಜ್ಞಾಪಕವಿದೆಯೊ?

• ತಲೆತನ ಮತ್ತು ಅಧೀನತೆಯ ವಿಷಯದಲ್ಲಿ ಯೆಹೋವನ ಏರ್ಪಾಡು ಏನಾಗಿದೆ?

• ವಿವಾಹ ಸಂಗಾತಿಗಳು ಒಬ್ಬರನ್ನೊಬ್ಬರು ಏಕೆ ಗೌರವಿಸಬೇಕು?

• ವಿಶ್ವಾಸದಲ್ಲಿರುವ ಪತ್ನಿಯು ಅವಿಶ್ವಾಸಿ ಸಂಗಾತಿಯನ್ನು ಹೇಗೆ ಉಪಚರಿಸಬೇಕು?

• ಗಂಭೀರ ನಿರ್ಣಯಗಳನ್ನು ಮಾಡುವ ಮುಂಚೆ ಗಂಡಂದಿರು ತಮ್ಮ ಹೆಂಡತಿಯರನ್ನು ಏಕೆ ವಿಚಾರಿಸಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 17ರಲ್ಲಿರುವ ಚಿತ್ರವಿವರಣೆ]

ಅಧಿಕಾರಕ್ಕೆ ಏಕೆ ಗೌರವ ತೋರಿಸಬೇಕು?

ಬುದ್ಧಿಜೀವಿಗಳಲ್ಲಿ ಅಧಿಕಾರ ಮತ್ತು ತಲೆತನದ ವಿಷಯದಲ್ಲಿ ಏರ್ಪಾಡುಗಳನ್ನು ಸ್ಥಾಪಿಸಿದವನು ಯೆಹೋವನು ತಾನೆ. ಇದನ್ನು ಆತ್ಮಜೀವಿಗಳ ಹಾಗೂ ಮಾನವರ ಹಿತಕ್ಕಾಗಿಯೇ ಮಾಡಲಾಗಿದೆ. ಅದು ಅವರ ಇಚ್ಛಾಸ್ವಾತಂತ್ರ್ಯವನ್ನು ನಿರ್ವಹಿಸಲಿಕ್ಕಾಗಿ ಹಾಗೂ ಐಕ್ಯತೆಯಿಂದ ಸುಸಂಗತವಾಗಿ ಸೇವಿಸುವ ಮೂಲಕ ದೇವರನ್ನು ಗೌರವಿಸುವುದಕ್ಕಾಗಿ ಸಂದರ್ಭಗಳನ್ನು ಒದಗಿಸುತ್ತದೆ.—ಕೀರ್ತ. 133:1.

ಅಭಿಷಿಕ್ತ ಕ್ರೈಸ್ತರ ಸಭೆಯು ಯೇಸು ಕ್ರಿಸ್ತನ ಅಧಿಕಾರ ಮತ್ತು ತಲೆತನವನ್ನು ಅಂಗೀಕರಿಸುತ್ತದೆ. (ಎಫೆ. 1:22, 23) ಯೆಹೋವನ ಅಧಿಕಾರವನ್ನು ಅಂಗೀಕರಿಸುವುದರಲ್ಲಿ ಕಟ್ಟಕಡೆಗೆ “ಮಗನು ಎಲ್ಲವನ್ನೂ ತನಗೆ ಅಧೀನಮಾಡಿಕೊಟ್ಟಾತನಿಗೆ ತಾನೇ ಅಧೀನನಾಗುವನು; ಹೀಗೆ ದೇವರು ಎಲ್ಲರಿಗೂ ಎಲ್ಲವೂ ಆಗುವನು.” (1 ಕೊರಿಂ. 15:27, 28) ಆದ್ದರಿಂದ ದೇವರಿಗೆ ಸಮರ್ಪಿತರಾಗಿರುವ ಮಾನವರು ಸಭೆಯಲ್ಲಿ ಹಾಗೂ ಕುಟುಂಬದಲ್ಲಿರುವ ಈ ತಲೆತನದ ಏರ್ಪಾಡಿನೊಂದಿಗೆ ಸಹಕರಿಸುವುದು ಅದೆಷ್ಟು ಸೂಕ್ತ! (1 ಕೊರಿಂ. 11:3; ಇಬ್ರಿ. 13:17) ಹೀಗೆ ಮಾಡುವ ಮೂಲಕ ನಾವು ಯೆಹೋವನ ಮೆಚ್ಚಿಕೆ ಹಾಗೂ ಆಶೀರ್ವಾದದ ಗ್ರಾಹಿಗಳೋಪಾದಿ ಪ್ರಯೋಜನವನ್ನು ಪಡೆದುಕೊಳ್ಳುವೆವು.—ಯೆಶಾ. 48:17.

[ಪುಟ 13ರಲ್ಲಿರುವ ಚಿತ್ರ]

ಪ್ರಾರ್ಥನೆಯು ದೈವಿಕ ಗುಣಗಳನ್ನು ತೋರಿಸಲು ಕ್ರೈಸ್ತ ಪತ್ನಿಗೆ ಸಹಾಯಮಾಡಬಲ್ಲದು

[ಪುಟ 15ರಲ್ಲಿರುವ ಚಿತ್ರಗಳು]

ರಾಜ್ಯದ ಹಿತಾಸಕ್ತಿಗಳನ್ನು ಪ್ರವರ್ಧಿಸಲು ಸ್ತ್ರೀಯರು ವಹಿಸುವ ಪಾತ್ರವನ್ನು ಯೆಹೋವನು ಮಾನ್ಯಮಾಡುತ್ತಾನೆ