ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೋಪವನ್ನು ಅಂಕೆಯಲ್ಲಿಡುವ ಮೂಲಕ ‘ಕೆಟ್ಟದ್ದನ್ನು ಜಯಿಸುತ್ತಾ ಇರಿ’

ಕೋಪವನ್ನು ಅಂಕೆಯಲ್ಲಿಡುವ ಮೂಲಕ ‘ಕೆಟ್ಟದ್ದನ್ನು ಜಯಿಸುತ್ತಾ ಇರಿ’

ಕೋಪವನ್ನು ಅಂಕೆಯಲ್ಲಿಡುವ ಮೂಲಕ ‘ಕೆಟ್ಟದ್ದನ್ನು ಜಯಿಸುತ್ತಾ ಇರಿ’

‘ಪ್ರಿಯರೇ ನೀವು ಮುಯ್ಯಿಗೆ ಮುಯ್ಯಿ ತೀರಿಸದೆ ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸುತ್ತಾ ಇರಿ.’ —ರೋಮ. 12:19, 21.

1, 2. ಕೆಲವು ಸಾಕ್ಷಿಗಳು ಪ್ರಯಾಣಿಸುತ್ತಿದ್ದಾಗ ಯಾವ ಒಳ್ಳೇ ಮಾದರಿಯನ್ನು ತೋರಿಸಿದರು?

ಮೂವತ್ತನಾಲ್ಕು ಮಂದಿ ಯೆಹೋವನ ಸಾಕ್ಷಿಗಳ ಗುಂಪೊಂದು ಬ್ರಾಂಚ್‌ ಆಫೀಸೊಂದರ ಸಮರ್ಪಣಾ ಸಮಾರಂಭಕ್ಕಾಗಿ ವಿಮಾನದಲ್ಲಿ ಪ್ರಯಾಣಿಸುತ್ತಿತ್ತು. ಪ್ರಯಾಣಮಧ್ಯದಲ್ಲಿ ಯಾಂತ್ರಿಕ ಸಮಸ್ಯೆಯಿಂದಾಗಿ ಅವರ ಯಾತ್ರೆಯು ವಿಳಂಬಿಸಿತು. ಇಂಧನ ಹಾಕಲೆಂದು ತಂಗಿದ ಒಂದು ತಾಸಿನ ನಿಲುಗಡೆಯು 44 ತಾಸುಗಳ ಕಾಯುವಿಕೆಯ ಪೇಚಾಟವಾಗಿ ಪರಿಣಮಿಸಿತು. ಅದೂ ಸಾಕಷ್ಟು ಆಹಾರ, ನೀರು, ಶುಚಿ-ಶೌಚದ ಸೌಕರ್ಯವಿಲ್ಲದ ದೂರ ಪ್ರದೇಶದ ವಿಮಾನ ನಿಲ್ದಾಣದಲ್ಲಿ. ಪ್ರಯಾಣಿಕರಲ್ಲಿ ಅನೇಕರು ಕೋಪೋದ್ರೇಕಗೊಂಡು ನಿಲ್ದಾಣದ ಸಿಬ್ಬಂದಿಗೆ ಬೆದರಿಕೆ ಹಾಕಿದರು. ಆದರೆ ನಮ್ಮ ಸಹೋದರ ಸಹೋದರಿಯರು ಸುಶಾಂತರಾಗಿ ಕಾದು ಕುಳಿತರು.

2 ಕಟ್ಟಕಡೆಗೆ ಆ ಸಾಕ್ಷಿಗಳು ಸಮರ್ಪಣೆಯ ಸಮಾರಂಭಕ್ಕೆ ತಲಪಿದ್ದು ಕಾರ್ಯಕ್ರಮದ ಅಂತಿಮ ಭಾಗದಲ್ಲೇ. ತುಂಬ ದಣಿದಿದ್ದರೂ ಕಾರ್ಯಕ್ರಮದ ನಂತರ ಅವರು ಸ್ವಲ್ಪ ಸಮಯ ಅಲ್ಲೇ ಉಳಿದು ಸ್ಥಳೀಕ ಸಹೋದರರ ಸಹವಾಸದಲ್ಲಿ ಆನಂದಿಸಿದರು. ಅವರು ತೋರಿಸಿದ ತಾಳ್ಮೆ ಮತ್ತು ಸ್ವಸಂಯಮವು ಜನರ ಗಮನಕ್ಕೆ ಬಾರದಿರಲಿಲ್ಲ ಎಂದು ತದನಂತರ ಅವರಿಗೆ ತಿಳಿದುಬಂತು. ಹೇಗಂದರೆ ಪ್ರಯಾಣಿಕರಲ್ಲೊಬ್ಬನು ವಿಮಾನ ಸಂಸ್ಥೆಗೆ ಈ ಹೇಳಿಕೆ ನೀಡಿದನು: “ವಿಮಾನದಲ್ಲಿ ಆ 34 ಮಂದಿ ಕ್ರೈಸ್ತರು ಇರದೇ ಹೋಗಿದ್ದಲ್ಲಿ ವಿಮಾನ ನಿಲ್ದಾಣದಲ್ಲಿ ದೊಡ್ಡ ದೊಂಬಿಯೇ ಏಳುತ್ತಿತ್ತು ಖಂಡಿತ.”

ಕೋಪಿಷ್ಠ ಲೋಕದಲ್ಲಿ ಜೀವನ

3, 4. (ಎ) ಹಿಂಸಾತ್ಮಕ ಕೋಪವು ಮಾನವರನ್ನು ಹೇಗೆ ಮತ್ತು ಎಂದಿನಿಂದ ಬಾಧಿಸಿದೆ? (ಬಿ) ಕಾಯಿನನು ತನ್ನ ಕೋಪವನ್ನು ಅಂಕೆಯಲ್ಲಿಡಸಾಧ್ಯವಿತ್ತೊ? ವಿವರಿಸಿರಿ.

3 ಈಗಿನ ದುಷ್ಟ ವ್ಯವಸ್ಥೆಯಲ್ಲಿನ ಜೀವನದ ಒತ್ತಡಗಳು ಜನರನ್ನು ಕೋಪ-ಕ್ರೋಧಕ್ಕೆ ನಡಿಸಬಲ್ಲವು. (ಪ್ರಸಂ. 7:7) ಹೆಚ್ಚಾಗಿ ಈ ಕೋಪವು ದ್ವೇಷ ಹಾಗೂ ತೀವ್ರ ಹಿಂಸಾಚಾರಕ್ಕೂ ನಡಿಸುತ್ತದೆ. ದೇಶ ದೇಶಗಳ ನಡುವೆ ಮತ್ತು ದೇಶಗಳೊಳಗೆ ಕೋಪವಿಕೋಪದಿಂದಾಗಿ ಸಮರಗಳಾಗುವಾಗ ಕುಟುಂಬದ ಒತ್ತಡಗಳಾದರೋ ಹೆಚ್ಚಿನ ಮನೆಯೊಳಗೇ ಕಾದಾಟವನ್ನು ತರುತ್ತವೆ. ಅಂಥ ಕೋಪ ಮತ್ತು ಹಿಂಸಾಚಾರಗಳಿಗೆ ಸುದೀರ್ಘ ಇತಿಹಾಸವೊಂದಿದೆ. ಆದಾಮಹವ್ವರ ಜೇಷ್ಠಪುತ್ರ ಕಾಯಿನನು ತನ್ನ ತಮ್ಮನಾದ ಹೇಬೆಲನನ್ನು ಕೊಂದದ್ದು ಅಸೂಯಾಪರ ಕೋಪದಿಂದಾಗಿಯೇ. ತನ್ನ ಕೋಪೋದ್ರೇಕಗಳನ್ನು ಅಂಕೆಯಲ್ಲಿಡುವಂತೆ ಯೆಹೋವನು ಅವನಿಗೆ ಬುದ್ಧಿಹೇಳಿದ ನಂತರವೂ ಕಾಯಿನನು ಆ ಕೆಟ್ಟ ಕೃತ್ಯವನ್ನು ನಡಿಸಿದನು. ಅವನು ಕೋಪೋದ್ವೇಗವನ್ನು ಅಂಕೆಯಲ್ಲಿಟ್ಟಲ್ಲಿ ತಾನು ಅವನನ್ನು ಆಶೀರ್ವದಿಸುವನೆಂದೂ ಯೆಹೋವನು ವಚನವಿತ್ತಿದ್ದನು.—ಆದಿಕಾಂಡ 4:6-8 ಓದಿ.

4 ಬಾಧ್ಯತೆಯಾಗಿ ಪಡೆದ ಅಪರಿಪೂರ್ಣತೆ ಇದ್ದಾಗ್ಯೂ ಕಾಯಿನನಿಗೆ ಆ ವಿಷಯದಲ್ಲಿ ಒಂದು ಆಯ್ಕೆಯಿತ್ತು. ಅವನು ತನ್ನ ಕೋಪವನ್ನು ಅಂಕೆಯಲ್ಲಿಡಸಾಧ್ಯವಿತ್ತು. ಆದ್ದರಿಂದಲೇ ಅವನು ತನ್ನ ಹಿಂಸಾತ್ಮಕ ಕೃತ್ಯಕ್ಕಾಗಿ ಪೂರಾ ರೀತಿಯಲ್ಲಿ ಹೊಣೆಗಾರನಾಗಿದ್ದನು. ತದ್ರೀತಿಯಲ್ಲಿ ನಮ್ಮ ಅಪರಿಪೂರ್ಣ ಸ್ಥಿತಿಯು ಕೋಪವನ್ನೂ ಕೋಪದ ಕೃತ್ಯಗಳನ್ನೂ ವರ್ಜಿಸಲು ಕಷ್ಟಕರವನ್ನಾಗಿ ಮಾಡುತ್ತದೆ. ಅಲ್ಲದೆ ಇತರ ಗಂಭೀರ ಸಮಸ್ಯೆಗಳು ಈ ‘ಕಠಿನಕಾಲದ’ ಒತ್ತಡಗಳಿಗೆ ಇನ್ನಷ್ಟನ್ನು ಕೂಡಿಸುತ್ತವೆ. (2 ತಿಮೊ. 3:1) ಉದಾಹರಣೆಗೆ, ಆರ್ಥಿಕ ಬಿಕ್ಕಟ್ಟುಗಳು ನಮ್ಮ ಭಾವೋದ್ವೇಗಗಳ ಮೇಲೆ ಒತ್ತಡವನ್ನು ಹಾಕಬಲ್ಲವು. ಕೋಪೋದ್ರೇಕದ ವಿಸ್ಫೋಟ ಮತ್ತು ಗೃಹ ಹಿಂಸಾಚಾರಗಳ ವೃದ್ಧಿಗೆ ಆರ್ಥಿಕ ವ್ಯವಸ್ಥೆಯಲ್ಲಾಗುವ ಮುಗ್ಗಟ್ಟುಗಳು ಕಾರಣವೆಂದು ಪೊಲೀಸ್‌ ಮತ್ತು ಕುಟುಂಬ ಕಲ್ಯಾಣ ನಿಗಮಗಳು ಹೇಳುತ್ತವೆ.

5, 6. ಕೋಪದ ವಿಷಯದಲ್ಲಿ ಲೋಕದ ಯಾವ ಮನೋಭಾವವು ನಮ್ಮ ಮೇಲೆ ಪರಿಣಾಮ ಬೀರಬಹುದು?

5 ಅದಲ್ಲದೆ ನಮ್ಮ ಸಂಪರ್ಕಕ್ಕೆ ಬರುವ ಅನೇಕ ಜನರು ‘ಸ್ವಪ್ರೇಮಿಗಳು,’ ‘ಅಹಂಕಾರಿಗಳು’ ಹಾಗೂ “ಉಗ್ರರೂ” ಆಗಿದ್ದಾರೆ. ಇಂಥ ಕೆಟ್ಟ ಜನರು ನಮ್ಮ ಸಂಪರ್ಕಕ್ಕೆ ಬರುವಾಗ ನಾವು ರೇಗುವುದೂ ಕೆರಳುವುದೂ ಅತಿ ಸುಲಭ. (2 ತಿಮೊ. 3:2-5) ವಾಸ್ತವದಲ್ಲಿ ಚಲನಚಿತ್ರ ಮತ್ತು ಟಿವಿ ಕಾರ್ಯಕ್ರಮಗಳು ಹೆಚ್ಚಾಗಿ ಪ್ರತೀಕಾರವನ್ನು ಉದಾತ್ತ ಕ್ರಿಯೆಯಾಗಿಯೂ ಹಿಂಸಾಚಾರವನ್ನು ಸಹಜವಾದುದ್ದಾಗಿ ಹಾಗೂ ಸಮಸ್ಯೆಗಳ ನ್ಯಾಯಸಮ್ಮತ ಪರಿಹಾರವನ್ನಾಗಿ ಚಿತ್ರಿಸುತ್ತವೆ. ಕಥಾವಸ್ತುಗಳ ವಿಶಿಷ್ಟ ಮಾದರಿಗಳು ವೀಕ್ಷಕರನ್ನು ಖಳನಾಯಕನಿಗೆ “ತಕ್ಕ ಶಾಸ್ತಿ” ದೊರೆಯುವ ಕ್ಷಣವನ್ನು ಆತುರದಿಂದ ಮುನ್ನೋಡುವಂತೆ ನಡೆಸುತ್ತವೆ. ಸಾಮಾನ್ಯವಾಗಿ ಕಥಾನಾಯಕನಿಂದ ಖಳನಾಯಕನು ಕ್ರೂರವಾಗಿ ಕೊಲ್ಲಲ್ಪಡುವ ಅಂತಿಮ ದೃಶ್ಯ ಅದೇ.

6 ಅಂಥ ಅಪಪ್ರಚಾರವು ‘ಲೋಕದ ಮನೋಭಾವವನ್ನೂ’ ಅದರ ಕ್ರೋಧಾವಿಷ್ಠ ಅಧಿಪತಿ ಸೈತಾನನ ಮನೋಭಾವವನ್ನೂ ಪ್ರವರ್ಧಿಸುತ್ತದೆ ಹೊರತು ದೇವರ ಮಾರ್ಗಗಳನ್ನಲ್ಲ. (1 ಕೊರಿಂ. 2:12; ಎಫೆ. 2:2; ಪ್ರಕ. 12:12) ಆ ಮನೋಭಾವವು ಅಪರಿಪೂರ್ಣ ಶರೀರದ ಆಶೆಗಳನ್ನು ಉತ್ತೇಜಿಸುತ್ತದೆ ಮತ್ತು ಅದು ದೇವರ ಪವಿತ್ರಾತ್ಮಕ್ಕೂ ಅದರ ಫಲಕ್ಕೂ ಪೂರ್ಣ ವಿರುದ್ಧವಾಗಿದೆ. ನಮ್ಮ ಕೋಪ ಕೆರಳಿಸಲ್ಪಟ್ಟಾಗಲೂ ಪ್ರತೀಕಾರ ತೋರಿಸಬಾರದು ಎಂಬದು ನಿಶ್ಚಯವಾಗಿ ಕ್ರೈಸ್ತತ್ವದ ಮೂಲಭೂತ ಬೋಧನೆಗಳಲ್ಲೊಂದು. (ಮತ್ತಾಯ 5:39, 44, 45 ಓದಿ.) ಹೀಗಿರಲಾಗಿ ನಾವು ಯೇಸುವಿನ ಬೋಧನೆಗಳನ್ನು ಹೇಗೆ ಹೆಚ್ಚು ಪೂರ್ಣವಾಗಿ ಅನ್ವಯಿಸಬಲ್ಲೆವು?

ಒಳ್ಳೆಯ ಮತ್ತು ಕೆಟ್ಟ ಮಾದರಿಗಳು

7. ಸಿಮೆಯೋನ್‌ ಮತ್ತು ಲೇವಿಯರು ತಮ್ಮ ಕೋಪವನ್ನು ಅಂಕೆಯಲ್ಲಿಡದ ಕಾರಣ ಏನು ಸಂಭವಿಸಿತು?

7 ಕೋಪವನ್ನು ಅಂಕೆಯಲ್ಲಿಡುವ ಕುರಿತು ಅನೇಕಾನೇಕ ಸಲಹೆಗಳು ಬೈಬಲಿನಲ್ಲಿವೆ ಮತ್ತು ನಾವು ಕೋಪವನ್ನು ಅಂಕೆಯಲ್ಲಿಡುವಾಗ ಹಾಗೂ ಇಡದಾಗ ಏನು ಸಂಭವಿಸಬಹುದು ಎಂಬ ವ್ಯಾವಹಾರಿಕ ಉದಾಹರಣೆಗಳೂ ಅದರಲ್ಲಿವೆ. ಶೆಕೆಮನೆಂಬ ಯುವಕನು ತಮ್ಮ ತಂಗಿ ದೀನಳ ಮಾನಭಂಗಗೊಳಿಸಿದ್ದಕ್ಕಾಗಿ ಯಾಕೋಬನ ಮಕ್ಕಳಾದ ಸಿಮೆಯೋನ್‌ ಮತ್ತು ಲೇವಿ “ವ್ಯಥೆಪಟ್ಟು ಬಹಳ ಕೋಪಗೊಂಡರು.” (ಆದಿ. 34:7) ಅವರು ಅವನಿಗೆ ಪ್ರತೀಕಾರ ನೀಡಿದಾಗ ಏನು ಸಂಭವಿಸಿತೆಂದು ಗಮನಿಸಿ. ಯಾಕೋಬನ ಮಕ್ಕಳು ಶೆಕೆಮನ ಪಟ್ಟಣವನ್ನು ಆಕ್ರಮಣ ಮಾಡಿ ಅದನ್ನು ಸೂರೆಮಾಡಿ ಅವರ ಹೆಂಡತಿ-ಮಕ್ಕಳನ್ನೂ ಸೆರೆಹಿಡಿದು ಒಯ್ದರು. ಇದೆಲ್ಲವನ್ನು ಅವರು ಮಾಡಿದ್ದು ದೀನಳ ಕಾರಣದಿಂದಾಗಿ ಮಾತ್ರವಲ್ಲ, ಅದು ಅವರ ಸ್ವಾಭಿಮಾನಕ್ಕೆ ಕುಂದು, ಮುಖಭಂಗದ ಪ್ರಶ್ನೆಯಾಗಿದ್ದರಿಂದಲೂ ಎಂದು ವ್ಯಕ್ತ. ಶೆಕೆಮನು ತಮ್ಮನ್ನು ಹಾಗೂ ತಮ್ಮ ತಂದೆಯಾದ ಯಾಕೋಬನನ್ನು ಕೋಪಕ್ಕೀಡು ಮಾಡಿದನೆಂದು ಅವರು ಭಾವಿಸಿದರು. ಆದರೆ ಯಾಕೋಬನು ಅವರ ನಡವಳಿಕೆಯನ್ನು ಹೇಗೆ ವೀಕ್ಷಿಸಿದನು?

8. ಪ್ರತೀಕಾರ ಸಲ್ಲಿಸುವ ವಿಷಯದಲ್ಲಿ ಸಿಮೆಯೋನ್‌ ಮತ್ತು ಲೇವಿಯರ ವೃತ್ತಾಂತವು ಏನನ್ನು ತೋರಿಸುತ್ತದೆ?

8 ದೀನಳ ದುರಂತಮಯ ಅನುಭವವು ಯಾಕೋಬನನ್ನು ತೀವ್ರ ವ್ಯಥೆಗೆ ಈಡುಮಾಡಿದ್ದಿರಬೇಕು. ಆದರೂ ಅವನು ತನ್ನ ಗಂಡುಮಕ್ಕಳ ಪ್ರತೀಕಾರ ಪ್ರವೃತ್ತಿಯನ್ನು ಖಂಡಿಸಿದನು. ಆಗಲೂ ಸಿಮೆಯೋನ್‌ ಮತ್ತು ಲೇವಿಯರು ತಮ್ಮ ಕೆಟ್ಟ ಕ್ರಿಯೆಯನ್ನು ಸಮರ್ಥಿಸಲು ಪ್ರಯತ್ನಿಸಿದರು. “ನಮ್ಮ ತಂಗಿಯನ್ನು ಸೂಳೆಯಂತೆ ನಡಿಸಬಹುದೋ” ಎಂದು ಪ್ರಶ್ನಿಸಿದರು. (ಆದಿ. 34:31) ಆದರೆ ವಿಷಯಗಳು ಅಲ್ಲಿಗೇ ಅಂತ್ಯಗೊಳ್ಳಲಿಲ್ಲ. ಏಕೆಂದರೆ ಯೆಹೋವನು ಅದನ್ನು ಮೆಚ್ಚಲಿಲ್ಲ. ಅನೇಕ ವರ್ಷಗಳ ನಂತರ ಯಾಕೋಬನು, ಸಿಮೆಯೋನ್‌ ಮತ್ತು ಲೇವಿಯರು ತೋರಿಸಿದ ಹಿಂಸಾಚಾರ ಕೋಪೋದ್ರೇಕಗಳ ಕಾರಣ ಅವರ ಸಂತತಿಯು ಇಸ್ರಾಯೇಲಿನ ಕುಲಗಳಲ್ಲಿ ಚದರಿಹೋಗುವುದು ಎಂದು ಮುಂತಿಳಿಸಿದನು. (ಆದಿಕಾಂಡ 49:5-7 ಓದಿ.) ಹೌದು, ಅವರ ಅಂಕೆತಪ್ಪಿದ ಕೋಪವು ದೇವರ ಹಾಗೂ ಅವರ ತಂದೆಯ ಅನಾದರವನ್ನು ತಂದಿತು.

9. ದಾವೀದನು ಕೋಪಾವೇಶಕ್ಕೆ ಎಡೆಕೊಡಲು ಸ್ವಲ್ಪದರಲ್ಲಿ ತಪ್ಪಿಸಿಕೊಂಡದ್ದು ಯಾವಾಗ?

9 ಆದರೆ ಅರಸ ದಾವೀದನ ವಿಷಯವು ತೀರ ಬೇರೆಯಾಗಿತ್ತು. ಪ್ರತೀಕಾರ ಸಲ್ಲಿಸುವ ಅನೇಕ ಸಂದರ್ಭಗಳು ಅವನಿಗಿದ್ದವು, ಆದರೆ ಅವನು ಪ್ರತೀಕಾರ ಸಲ್ಲಿಸಲಿಲ್ಲ. (1 ಸಮು. 24:3-7) ಆದರೂ ಒಂದು ಸಂದರ್ಭದಲ್ಲಿ ಅವನು ಕೋಪಾವೇಶಕ್ಕೆ ಬಹುಮಟ್ಟಿಗೆ ಎಡೆಗೊಟ್ಟನು. ದಾವೀದನ ಜನರು ನಾಬಾಲನೆಂಬ ಧನವಂತ ಪುರುಷನ ಕುರಿಮಂದೆ ಹಾಗೂ ಕುರುಬರನ್ನು ಕಾಪಾಡಿದ್ದರಾದರೂ ಅವನು ದಾವೀದನ ಜನರನ್ನು ಬೈದು ದೂಷಿಸಿದನು. ಪ್ರಾಯಶಃ ತನ್ನ ಜನರನ್ನು ಬೈದು ದೂಷಿಸಿದ ಕಾರಣ ದಾವೀದನು ಕೋಪಗೊಂಡು ಉಗ್ರ ಪ್ರತೀಕಾರವನ್ನು ಸಲ್ಲಿಸಲು ಸಿದ್ಧನಾದನು. ದಾವೀದನೂ ಅವನ ಜನರೂ ನಾಬಾಲ ಹಾಗೂ ಅವನ ಮನೆವಾರ್ತೆಗೆ ದಾಳಿಯಿಡಲು ಮುಂದೊತ್ತಿದಾಗ ಯುವ ಸೇವಕನೊಬ್ಬನು ನಾಬಾಲನ ಬುದ್ಧಿವಂತೆ ಪತ್ನಿ ಅಬೀಗೈಲಳಿಗೆ ಅದನ್ನು ತಿಳಿಸಿ ಆಕೆಯು ಏನಾದರೂ ಮಾಡುವಂತೆ ಒತ್ತಾಯಿಸಿದನು. ಆ ಕೂಡಲೆ ಆಕೆಯು ಒಂದು ದೊಡ್ಡ ಉಡುಗೊರೆಯನ್ನು ಸಿದ್ಧಪಡಿಸಿ ದಾವೀದನನ್ನು ಸಂಧಿಸಲು ಹೊರಟಳು. ನಾಬಾಲನ ಮೂರ್ಖತನಕ್ಕಾಗಿ ದೀನತೆಯಿಂದ ಕ್ಷಮೆಕೇಳುತ್ತಾ ದಾವೀದನಲ್ಲಿದ್ದ ಯೆಹೋವನ ಭಯಭಕ್ತಿಗೆ ಮನವಿಮಾಡಿದಳು. ಆಗ ದಾವೀದನು ತನ್ನ ಮನೋಸ್ವಾಸ್ಥ್ಯಕ್ಕೆ ಬಂದು ಹೇಳಿದ್ದು: ‘ಸ್ವಹಸ್ತದಿಂದ ಮುಯ್ಯಿತೀರಿಸಿ ರಕ್ತಾಪರಾಧಕ್ಕೆ ಗುರಿಯಾಗದಂತೆ ನನ್ನನ್ನು ತಡೆದ ನೀನು ಸ್ತೋತ್ರಾರ್ಹಳೇ ಸರಿ.’—1 ಸಮು. 25:2-35.

ಕ್ರೈಸ್ತ ಮನೋಭಾವ

10. ಪ್ರತೀಕಾರವನ್ನು ಸಲ್ಲಿಸುವ ವಿಷಯದಲ್ಲಿ ಕ್ರೈಸ್ತರು ಯಾವ ಮನೋಭಾವವನ್ನು ತೋರಿಸಬೇಕು?

10 ಸಿಮೆಯೋನ್‌ ಮತ್ತು ಲೇವಿ ಹಾಗೂ ದಾವೀದ ಮತ್ತು ಅಬೀಗೈಲರ ನಡುವೆ ಸಂಭವಿಸಿದ ವಿಷಯವು ಸುಸ್ಪಷ್ಟವಾಗಿ ಏನನ್ನು ತೋರಿಸುತ್ತದೆ? ಏನೆಂದರೆ ಯೆಹೋವನು ಅಂಕೆತಪ್ಪಿದ ಕೋಪ ಮತ್ತು ಹಿಂಸಾಚಾರವನ್ನು ವಿರೋಧಿಸುತ್ತಾನೆ ಹಾಗೂ ಶಾಂತಿಶೀಲರ ಪ್ರಯತ್ನಗಳನ್ನು ಆಶೀರ್ವದಿಸುತ್ತಾನೆ ಎಂಬದನ್ನೇ. “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರೊಂದಿಗೆ ಶಾಂತಿಶೀಲರಾಗಿರಿ” ಎಂದು ಅಪೊಸ್ತಲ ಪೌಲನು ಬರೆದನು. ಅವನು ಮತ್ತೂ ಹೇಳಿದ್ದು: “ಪ್ರಿಯರೇ ನೀವು ಮುಯ್ಯಿಗೆ ಮುಯ್ಯಿ ತೀರಿಸದೆ ದೇವರ ಕ್ರೋಧಕ್ಕೆ ಎಡೆಮಾಡಿಕೊಡಿರಿ; ‘ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಯೆಹೋವನು ಹೇಳುತ್ತಾನೆ’ ಎಂದು ಬರೆದಿದೆ. ಆದರೆ ‘ನಿನ್ನ ವೈರಿಯು ಹಸಿದಿರುವುದಾದರೆ ಅವನಿಗೆ ಊಟಕ್ಕೆ ಕೊಡು; ಅವನು ಬಾಯಾರಿದ್ದರೆ ಅವನಿಗೆ ಏನನ್ನಾದರೂ ಕುಡಿಯಲು ಕೊಡು; ಹೀಗೆ ಮಾಡುವ ಮೂಲಕ ನೀನು ಅವನ ತಲೆಯ ಮೇಲೆ ಕೆಂಡವನ್ನು ಹೇರಿದಂತಾಗುವುದು.’ ಕೆಟ್ಟದ್ದು ನಿನ್ನನ್ನು ಜಯಿಸುವಂತೆ ಬಿಡಬೇಡ, ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸುತ್ತಾ ಇರು.”—ರೋಮ. 12:18-21. *

11. ಸಹೋದರಿಯೊಬ್ಬಳು ಕೋಪದೊಂದಿಗೆ ವ್ಯವಹರಿಸಲು ಹೇಗೆ ಕಲಿತಳು?

11 ನಾವು ಆ ಸಲಹೆಯನ್ನು ಅನ್ವಯಿಸಿಕೊಳ್ಳಸಾಧ್ಯವಿದೆ. ಉದಾಹರಣೆಗೆ, ಒಬ್ಬಾಕೆ ಸಹೋದರಿ ತನ್ನ ಕೆಲಸದ ಸ್ಥಳದ ಹೊಸ ಮ್ಯಾನೇಜರಳ ಕುರಿತು ಹಿರಿಯನೊಂದಿಗೆ ದೂರುಹೇಳಿದಳು. ಆ ಹೆಂಗಸು ಪಕ್ಷಪಾತಿಯೂ ನಿರ್ದಯಳೂ ಆಗಿದ್ದರಿಂದ ತಾನು ತುಂಬ ಕೋಪಗೊಂಡಿದ್ದು ಕೆಲಸವನ್ನು ಬಿಡಲು ಬಯಸುತ್ತೇನೆಂದು ತಿಳಿಸಿದಳು. ದುಡುಕಿ ಏನಾದರೂ ಮಾಡದಿರುವಂತೆ ಹಿರಿಯನು ಅವಳಿಗೆ ಬುದ್ಧಿಹೇಳಿದನು. ಮ್ಯಾನೇಜರಳ ದುರುಪಚಾರಕ್ಕೆ ಸಹೋದರಿ ತೋರಿಸಿದ ಕುಪಿತ ಪ್ರತಿಕ್ರಿಯೆಯು ಸನ್ನಿವೇಶವನ್ನು ಇನ್ನಷ್ಟು ಕೆರಳಿಸಿತ್ತೆಂದು ಹಿರಿಯನು ವಿವೇಚಿಸಿದನು. (ತೀತ 3:1-3) ಅವಳಿಗೆ ಕೊನೆಗೆ ಇನ್ನೊಂದು ಕೆಲಸ ಸಿಕ್ಕುವುದಾದರೂ ಕೂಡ ನಿರ್ದಯತ್ವಕ್ಕೆ ಅವಳು ತೋರಿಸುವ ಪ್ರತಿಕ್ರಿಯೆಯನ್ನು ಬದಲಾಯಿಸುವ ಅಗತ್ಯ ಇನ್ನೂ ಇದೆ ಎಂಬುದನ್ನು ಹಿರಿಯನು ಎತ್ತಿಹೇಳಿದನು. ನಾವು ಮಾಡುವಂತೆ ಯೇಸು ಕಲಿಸಿದ ಪ್ರಕಾರ, ಇತರರು ತನ್ನನ್ನು ಹೇಗೆ ಉಪಚರಿಸಬೇಕೆಂದು ಅವಳು ಬಯಸುತ್ತಾಳೋ ಹಾಗೆಯೇ ಮ್ಯಾನೇಜರಳನ್ನು ಉಪಚರಿಸುವಂತೆ ಅವನು ಸಲಹೆ ನೀಡಿದನು. (ಲೂಕ 6:31 ಓದಿ.) ಅದನ್ನು ಕಾರ್ಯರೂಪಕ್ಕೆ ಹಾಕಲು ಸಹೋದರಿ ಒಪ್ಪಿದಳು. ಫಲಿತಾಂಶ? ಸ್ವಲ್ಪ ಸಮಯದ ನಂತರ ಮ್ಯಾನೇಜರಳ ಮನೋಭಾವವು ಮೃದುವಾಯಿತು, ಅಲ್ಲದೆ ಸಹೋದರಿಯ ಕೆಲಸಕ್ಕೆ ಅವಳು ಕೃತಜ್ಞತೆಯನ್ನೂ ಹೇಳಿದಳು.

12. ಕ್ರೈಸ್ತರ ನಡುವಣ ಭಿನ್ನಾಭಿಪ್ರಾಯಗಳು ತೀವ್ರ ನೋವನ್ನುಂಟುಮಾಡಬಲ್ಲವು ಏಕೆ?

12 ಇಂಥ ಸಮಸ್ಯೆಗಳು ಕ್ರೈಸ್ತ ಸಭೆಯ ಹೊರಗಿನ ಯಾವನೇ ವ್ಯಕ್ತಿಯೊಂದಿಗೆ ಉಂಟಾಗುವಾಗ ಅದು ನಮ್ಮನ್ನು ಆಶ್ಚರ್ಯಪಡಿಸಲಿಕ್ಕಿಲ್ಲ. ಸೈತಾನನ ವ್ಯವಸ್ಥೆಯಲ್ಲಿನ ಜೀವನವು ಹೆಚ್ಚಾಗಿ ಅನುಚಿತವಾಗಿದೆ ಮತ್ತು ದುಷ್ಕರ್ಮಿಗಳು ನಮ್ಮನ್ನು ಕೋಪೋದ್ರೇಕಕ್ಕೆ ಪ್ರೇರಿಸದಂತೆ ಹೋರಾಡುವ ಅಗತ್ಯವಿದೆಯೆಂದೂ ನಮಗೆ ಗೊತ್ತಿದೆ. (ಕೀರ್ತ. 37:1-11; ಪ್ರಸಂ. 8:12, 13; 12:13, 14) ಆದರೂ ಆಧ್ಯಾತ್ಮಿಕ ಸಹೋದರ ಅಥವಾ ಸಹೋದರಿಯೊಂದಿಗೆ ಸಮಸ್ಯೆಗಳೆದ್ದಾಗ ನಮ್ಮ ನೋವು ಹೆಚ್ಚು ತೀವ್ರವಾಗಿರಬಲ್ಲದು. ಒಬ್ಬಾಕೆ ಸಾಕ್ಷಿಯು ಮರುಕಳಿಸಿದ್ದು: “ಸತ್ಯಕ್ಕೆ ಬರುವ ಸಮಯದಲ್ಲಿ ನನಗಿದ್ದ ಅತಿ ದೊಡ್ಡ ಅಡಚಣೆಯು ಯೆಹೋವನ ಸಾಕ್ಷಿಗಳು ಪರಿಪೂರ್ಣರಲ್ಲ ಎಂಬ ವಾಸ್ತವಿಕತೆಯನ್ನು ಸ್ವೀಕರಿಸುವುದೇ ಆಗಿತ್ತು.” ನಾವು ಸಭೆಯಲ್ಲಿರುವ ಎಲ್ಲರೂ ಒಬ್ಬರನ್ನೊಬ್ಬರು ಕ್ರಿಸ್ತೀಯ ದಯೆಯಿಂದ ಉಪಚರಿಸುವರು ಎಂದು ನಿರೀಕ್ಷಿಸುತ್ತಾ ನಿರ್ದಯವೂ ಪರಿಗಣನೆಯಿಲ್ಲದ್ದೂ ಆದ ಲೋಕದಿಂದ ಹೊರಬಂದಿದ್ದೇವೆ. ಹೀಗೆ ಒಬ್ಬ ಜೊತೆ ಕ್ರೈಸ್ತನು, ವಿಶೇಷವಾಗಿ ಸಭೆಯಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವವನು ವಿಚಾರಹೀನತೆಯಿಂದ ಅಥವಾ ಅಕ್ರೈಸ್ತ ರೀತಿಯಲ್ಲಿ ಕ್ರಿಯೆಗೈದರೆ ಅದು ನಮ್ಮನ್ನು ನೋಯಿಸಬಲ್ಲದು ಮತ್ತು ಕೋಪಗೊಳಿಸಲೂಬಹುದು. ‘ಯೆಹೋವನ ಜನರ ಮಧ್ಯೆ ಅಂಥ ವಿಷಯಗಳು ನಡೆಯಲು ಹೇಗೆ ಸಾಧ್ಯ?’ ಎಂದು ನಾವು ಕೇಳಬಹುದು. ನಿಜ ಸಂಗತಿಯೇನೆಂದರೆ ಅಂಥ ವಿಷಯಗಳು ಅಪೊಸ್ತಲರ ದಿನಗಳಲ್ಲಿನ ಅಭಿಷಿಕ್ತ ಕ್ರೈಸ್ತರ ಮಧ್ಯೆ ಸಹ ನಡೆದಿದ್ದವು. (ಗಲಾ. 2:11-14; 5:15; ಯಾಕೋ. 3:14, 15) ಅಂಥ ವಿಷಯಗಳಿಂದ ಬಾಧಿಸಲ್ಪಡುವಾಗ ನಮ್ಮ ಪ್ರತಿಕ್ರಿಯೆಯು ಹೇಗಿರಬೇಕು?

13. ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ನಾವು ಕಾರ್ಯನಡಿಸಬೇಕು ಏಕೆ ಮತ್ತು ಹೇಗೆ?

13 “ನನ್ನನ್ನು ನೋಯಿಸಿದ ಯಾವನೇ ವ್ಯಕ್ತಿಗಾಗಿ ನಾನು ಪ್ರಾರ್ಥನೆಮಾಡಲು ಕಲಿತೆ. ಅದು ಯಾವಾಗಲೂ ಸಹಾಯಕಾರಿ” ಎಂದಳು ಮೇಲೆ ತಿಳಿಸಿದ ಸಹೋದರಿ. ನಾವು ಈ ಮೊದಲೇ ಓದಿದಂತೆ ನಮ್ಮನ್ನು ಹಿಂಸಿಸುವವರಿಗೋಸ್ಕರ ಪ್ರಾರ್ಥಿಸುವಂತೆ ಯೇಸು ನಮಗೆ ಕಲಿಸಿದನು. (ಮತ್ತಾ. 5:44) ನಮ್ಮ ಆಧ್ಯಾತ್ಮಿಕ ಸಹೋದರ ಸಹೋದರಿಯರಿಗಾಗಿ ನಾವು ಇನ್ನಷ್ಟು ಹೆಚ್ಚು ಪ್ರಾರ್ಥಿಸಬೇಕಲ್ಲವೇ? ಒಬ್ಬ ತಂದೆಯು ತನ್ನ ಮಕ್ಕಳು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂದು ಬಯಸುವಂತೆಯೇ ಯೆಹೋವನು ತನ್ನ ಭೂಸೇವಕರು ಒಬ್ಬರೊಂದಿಗೊಬ್ಬರು ಪ್ರೀತಿಯಿಂದಿರುವಂತೆ ಬಯಸುತ್ತಾನೆ. ನಾವು ಸದಾ ಶಾಂತಿಯಿಂದ ಮತ್ತು ಸಂತೋಷದಿಂದ ಒಂದುಗೂಡಿ ಜೀವಿಸಲು ಮುನ್ನೋಡುತ್ತೇವೆ ಮತ್ತು ಈಗಲೇ ನಾವದನ್ನು ಮಾಡುವಂತೆ ಯೆಹೋವನು ಕಲಿಸುತ್ತಿದ್ದಾನೆ. ತನ್ನ ಮಹಾ ಕಾರ್ಯವನ್ನು ಮಾಡುವುದರಲ್ಲಿ ನಾವು ಸಹಕರಿಸುವಂತೆ ಆತನು ಬಯಸುತ್ತಾನೆ. ಆದ್ದರಿಂದ ನಾವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳೋಣ ಅಥವಾ ದೋಷಗಳನ್ನು ‘ಲಕ್ಷಿಸದೇ’ ಒಟ್ಟಾಗಿ ಮುಂದೆಸಾಗೋಣ. (ಜ್ಞಾನೋಕ್ತಿ 19:11 ಓದಿ.) ಸಮಸ್ಯೆಗಳೆದ್ದಾಗ ನಮ್ಮ ಸಹೋದರರಿಂದ ದೂರಸರಿಯುವ ಬದಲಾಗಿ ದೇವಜನರೊಂದಿಗೆ ಉಳಿಯಲು ಒಬ್ಬರಿಗೊಬ್ಬರು ಸಹಾಯಮಾಡಬೇಕು. ಆಗ ನಾವು ಯೆಹೋವನ ‘ನಿತ್ಯವಾದ ತೋಳ’ ತೆಕ್ಕೆಯೊಳಗೆ ಸುರಕ್ಷಿತರಾಗಿ ಇರುವೆವು.—ಧರ್ಮೋ. 33:27, NIBV.

ಎಲ್ಲರೊಂದಿಗೆ ಕೋಮಲಭಾವದಿಂದ ಇರುವುದರ ಸುಫಲಗಳು

14. ಸೈತಾನನ ವಿಭಾಜಕ ಪ್ರಭಾವಗಳ ವಿರುದ್ಧ ನಾವು ಹೇಗೆ ಹೋರಾಡಬಲ್ಲೆವು?

14 ಸುವಾರ್ತೆಯನ್ನು ಹಬ್ಬಿಸುವುದರಿಂದ ನಮ್ಮನ್ನು ತಡೆಯಲಿಕ್ಕಾಗಿ ಸೈತಾನನೂ ದೆವ್ವಗಳೂ ಸುಖಿಪರಿವಾರಗಳನ್ನು ಹಾಗೂ ಸಭೆಗಳನ್ನು ಭಗ್ನಪಡಿಸಲು ಚುರುಕಿನಿಂದ ಪ್ರಯತ್ನಿಸುತ್ತಾ ಇವೆ. ಆಂತರಿಕ ವಿಭಜನೆಗಳು ನಾಶಕಾರಕವೆಂದು ತಿಳಿಯುತ್ತಾ ಅವುಗಳೊಳಗೆ ಜಗಳಗಳನ್ನು ಉಂಟುಮಾಡಲು ಅವು ಪ್ರಯತ್ನಿಸುತ್ತವೆ. (ಮತ್ತಾ. 12:25) ಆದುದರಿಂದ ಪೈಶಾಚಿಕ ದುಷ್ಪ್ರಭಾವಗಳನ್ನು ಎದುರಿಸುವುದರಲ್ಲಿ ಪೌಲನ ಸಲಹೆಯನ್ನು ಅನುಸರಿಸುವುದು ನಮಗೆ ಹಿತಕರ. “ಕರ್ತನ ದಾಸನು ಜಗಳವಾಡದೆ ಎಲ್ಲರೊಂದಿಗೆ ಕೋಮಲಭಾವದಿಂದಿರಬೇಕು” ಎಂದನವನು. (2 ತಿಮೊ. 2:24) ನಮ್ಮ ಹೋರಾಟವು “ರಕ್ತಮಾಂಸಗಳ ವಿರುದ್ಧವಾಗಿ ಅಲ್ಲ . . . ದುಷ್ಟಾತ್ಮ ಸೇನೆಗಳ ವಿರುದ್ಧವಾಗಿ” ಎಂಬುದನ್ನು ನೆನಪಿಡಿರಿ. ಈ ಹೋರಾಟದಲ್ಲಿ ಜಯಶಾಲಿಗಳಾಗಲು ಆಧ್ಯಾತ್ಮಿಕ ರಕ್ಷಾಕವಚವನ್ನು ಬಳಸುವ ಅಗತ್ಯ ನಮಗಿದೆ. ಅದರಲ್ಲಿ “ಶಾಂತಿಯ ಸುವಾರ್ತೆಯ ಸಲಕರಣೆ” ಸೇರಿದೆ.—ಎಫೆ. 6:12-18.

15. ಸಭೆಯ ಹೊರಗಿನಿಂದ ಬರುವ ದಾಳಿಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು?

15 ಸಭೆಯ ಹೊರಗಿನಿಂದ ಯೆಹೋವನ ಶತ್ರುಗಳು ಆತನ ಶಾಂತಿಪ್ರಿಯ ಜನರ ಮೇಲೆ ಉಗ್ರ ದಾಳಿಗಳನ್ನು ನಡಿಸುತ್ತಾರೆ. ಈ ಶತ್ರುಗಳಲ್ಲಿ ಕೆಲವರು ಯೆಹೋವನ ಸಾಕ್ಷಿಗಳ ಮೇಲೆ ಶಾರೀರಿಕ ಆಕ್ರಮಣವನ್ನೂ ಎಸಗುತ್ತಾರೆ. ಇತರರು ವಾರ್ತಾಮಾಧ್ಯಮ ಅಥವಾ ಕೋರ್ಟ್‌ಗಳಲ್ಲಿ ನಮ್ಮ ಕುರಿತು ಸುಳ್ಳು ಸುದ್ದಿ ಹರಡಿಸುತ್ತಾರೆ. ಇದನ್ನು ನಿರೀಕ್ಷಿಸುವಂತೆ ಯೇಸು ತನ್ನ ಹಿಂಬಾಲಕರಿಗೆ ಹೇಳಿದ್ದಾನೆ. (ಮತ್ತಾ. 5:11, 12) ನಾವು ಹೇಗೆ ಪ್ರತಿಕ್ರಿಯಿಸಬೇಕು? ನಾವು ನಡೆಯಲ್ಲಾಗಲಿ ನುಡಿಯಲ್ಲಾಗಲಿ ಎಂದೂ ‘ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬಾರದು.’—ರೋಮ. 12:17; 1 ಪೇತ್ರ 3:16 ಓದಿ.

16, 17. ಒಂದು ಸಭೆಯು ಯಾವ ಕಷ್ಟಕರ ಸನ್ನಿವೇಶವನ್ನು ಎದುರಿಸಿತು?

16 ಪಿಶಾಚನು ನಮ್ಮ ಮೇಲೆ ಏನನ್ನೇ ತರಲಿ ‘ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸುವ’ ಮೂಲಕ ನಾವು ಒಳ್ಳೇ ಸಾಕ್ಷಿಯನ್ನು ಕೊಡಬಲ್ಲೆವು. ಉದಾಹರಣೆಗೆ, ಪೆಸಿಫಿಕ್‌ ದ್ವೀಪದ ಸಭೆಯೊಂದು ಜ್ಞಾಪಕಾಚರಣೆಗಾಗಿ ಒಂದು ಹಾಲ್‌ ಅನ್ನು ಬಾಡಿಗೆಗೆ ತಕ್ಕೊಂಡಿತು. ಇದು ಸ್ಥಳೀಕ ಚರ್ಚ್‌ ಅಧಿಕಾರಿಗಳಿಗೆ ತಿಳಿದಾಗ, ನಮ್ಮ ಜ್ಞಾಪಕಾಚರಣೆಯ ಸಮಯದಲ್ಲೇ ತಮ್ಮ ಸಭಿಕರು ಕೂಡ ಅದೇ ಹಾಲ್‌ನಲ್ಲಿ ತಮ್ಮ ಆರಾಧನಾವಿಧಿಗಾಗಿ ಕೂಡಿಬರುವಂತೆ ಆದೇಶವಿತ್ತರು. ಆದರೂ ಪೊಲೀಸ್‌ ಮುಖ್ಯಾಧಿಕಾರಿ ಸಾಕ್ಷಿಗಳಿಗೆ ಅವರ ನೇಮಿತ ಸಮಯದಲ್ಲಿ ಹಾಲ್‌ ಅನ್ನು ಬಿಟ್ಟುಕೊಡಬೇಕೆಂದು ಚರ್ಚ್‌ ಅಧಿಕಾರಿಗಳಿಗೆ ಅಪ್ಪಣೆಕೊಟ್ಟರು. ಆದಾಗ್ಯೂ ಜ್ಞಾಪಕಾಚರಣೆಯ ಸಮಯ ಬಂದಾಗ ಹಾಲ್‌ ಚರ್ಚ್‌ ಸದಸ್ಯರಿಂದ ತುಂಬಿಹೋಗಿ ಅವರ ಆರಾಧನಾವಿಧಿ ಆರಂಭಿಸಿತು.

17 ಪೊಲೀಸರು ಹಾಲ್‌ ಅನ್ನು ಬಲವಂತದಿಂದ ಖಾಲಿಮಾಡಲು ತಯಾರು ಮಾಡುತ್ತಿದ್ದಾಗ ಚರ್ಚ್‌ ಅಧ್ಯಕ್ಷನು ನಮ್ಮ ಹಿರಿಯರೊಬ್ಬರ ಬಳಿಗೆ ಬಂದು, “ಈ ಸಂಜೆ ನಿಮಗೇನಾದರೂ ವಿಶೇಷ ಸಮಾರಂಭವಿದೆಯೊ?” ಎಂದು ಕೇಳಿದನು. ಸಹೋದರನು ಜ್ಞಾಪಕಾಚರಣೆಯ ಕುರಿತು ಹೇಳಿದಾಗ ಆ ಮನುಷ್ಯನು ಉತ್ತರಿಸಿದ್ದು: “ಹಾಗೋ? ನನಗೆ ಗೊತ್ತಿರಲಿಲ್ಲ!” ಒಡನೆಯೆ ಒಬ್ಬ ಪೊಲೀಸನು, “ನಾವು ಈ ಬೆಳಗ್ಗೆಯೇ ನಿಮಗೆ ತಿಳಿಸಿದ್ದೆವಲ್ಲಾ!” ಎಂದು ಗುಡುಗಿದನು. ಆ ಚರ್ಚಿಗನು ಹಿರಿಯನ ಕಡೆಗೆ ನೋಡಿ ವ್ಯಂಗ್ಯವಾಗಿ ನಗುತ್ತಾ ಹೇಳಿದ್ದು: “ಈಗ ನೀವೇನು ಮಾಡುವಿರಿ? ಹಾಲ್‌ನಲ್ಲಿ ನಮ್ಮ ಜನರೇ ತುಂಬಿದ್ದಾರೆ. ಪೊಲೀಸರು ನಮ್ಮನ್ನು ಹೊರಗೋಡಿಸಿ ಬಿಡುವಂತೆ ಮಾಡುತ್ತೀರೊ?” ಸಾಕ್ಷಿಗಳು ಹಿಂಸಕರೆಂದು ತೋರಿಬರುವಂತೆ ಮಾಡುವುದೇ ಅವನ ಕುತಂತ್ರದ ಉಪಾಯವಾಗಿತ್ತು! ನಮ್ಮ ಸಹೋದರರು ಹೇಗೆ ಪ್ರತಿಕ್ರಿಯಿಸಲಿದ್ದರು?

18. ಕೋಪಪ್ರಚೋದಕ ಸನ್ನಿವೇಶಕ್ಕೆ ಸಹೋದರರು ಹೇಗೆ ಪ್ರತಿಕ್ರಿಯಿಸಿದರು, ಮತ್ತು ಫಲಿತಾಂಶವೇನು?

18 ಚರ್ಚ್‌ನವರು ಅರ್ಧ ಗಂಟೆಯ ತನಕ ಆರಾಧನಾವಿಧಿಯನ್ನು ನಡೆಸುವಂತೆ ತಾವು ಬಿಟ್ಟುಕೊಡುತ್ತೇವೆಂದೂ ಅನಂತರ ತಮ್ಮ ಜ್ಞಾಪಕಾಚರಣೆಯನ್ನು ನಡಿಸುವೆವೆಂದೂ ಸಾಕ್ಷಿಗಳು ಹೇಳಿದರು. ಚರ್ಚ್‌ ಆರಾಧನಾವಿಧಿಯು ವೇಳೆಮೀರಿ ನಡೆಯಿತಾದರೂ ಚರ್ಚ್‌ ಸದಸ್ಯರು ಹೊರಗೆಬಂದ ಮೇಲೆಯೆ ಜ್ಞಾಪಕಾಚರಣೆಯನ್ನು ನಡೆಸಲಾಯಿತು. ಮರುದಿನ ಆ ಕುರಿತು ಅಧಿಕೃತ ತನಿಖೆಯನ್ನು ನಡಿಸಲು ಸರ್ಕಾರವು ಸಮಿತಿಯನ್ನು ಕರೆಯಿತು. ನಿಜ ಸಂಗತಿಗಳನ್ನು ಪರಿಗಣಿಸಿದ ಬಳಿಕ, ಸಮಸ್ಯೆಗೆ ಕಾರಣ ಚರ್ಚಿನ ಅಧ್ಯಕ್ಷನೇ ಹೊರತು ಸಾಕ್ಷಿಗಳಲ್ಲ ಎಂದು ಚರ್ಚ್‌ ಪ್ರಕಟಿಸುವಂತೆ ಸಮಿತಿಯು ಒತ್ತಾಯಪಡಿಸಿತು. ಒಂದು ಕಷ್ಟಕರ ಸನ್ನಿವೇಶವನ್ನು ತಾಳ್ಮೆಯಿಂದ ನಿರ್ವಹಿಸಿದ್ದಕ್ಕಾಗಿ ಯೆಹೋವನ ಸಾಕ್ಷಿಗಳಿಗೆ ಸಮಿತಿಯು ಧನ್ಯವಾದವನ್ನೂ ಹೇಳಿತು. ‘ಎಲ್ಲರೊಂದಿಗೆ ಶಾಂತಿಶೀಲರಾಗಿರಲು’ ಸಾಕ್ಷಿಗಳು ಮಾಡಿದ ಪ್ರಯತ್ನವು ಸುಫಲವನ್ನು ಕೊಟ್ಟಿತು.

19. ಶಾಂತಿಶೀಲ ಸಂಬಂಧಗಳನ್ನು ಬೇರೆ ಯಾವುದು ಪ್ರವರ್ಧಿಸಬಲ್ಲದು?

19 ಇತರರೊಂದಿಗೆ ಶಾಂತಿಶೀಲ ಸಂಬಂಧಗಳನ್ನು ಕಾಪಾಡುವುದಕ್ಕೆ ಇನ್ನೊಂದು ಕೀಲಿಕೈ ಸೌಜನ್ಯಭರಿತ ಮಾತನ್ನು ಬಳಸುವುದೇ. ಸೌಜನ್ಯವುಳ್ಳ ಮಾತು ಎಂದರೇನು ಮತ್ತು ನಾವದನ್ನು ಬೆಳೆಸಿಕೊಳ್ಳುವುದು ಹಾಗೂ ಬಳಸುವುದು ಹೇಗೆ ಎಂಬುದನ್ನು ಮುಂದಿನ ಲೇಖನವು ಚರ್ಚಿಸುವುದು.

[ಪಾದಟಿಪ್ಪಣಿ]

^ ಪ್ಯಾರ. 10 ಇಲ್ಲಿ ‘ಕೆಂಡವು,’ ಅದಿರನ್ನು ಕರಗಿಸುವ ಒಂದು ಪುರಾತನ ವಿಧಾನಕ್ಕೆ ಸೂಚಿಸುತ್ತದೆ. ಲೋಹಗಳನ್ನು ಹೊರತೆಗೆಯಲಿಕ್ಕಾಗಿ ಅದಿರಿನ ಮೇಲೆ ಮತ್ತು ಕೆಳಗೆ ಕೆಂಡಗಳನ್ನು ಹಾಕಲಾಗುತ್ತಿತ್ತು. ಅಂತೆಯೇ ನಿರ್ದಯಿಗಳಿಗೆ ನಾವು ದಯೆತೋರಿಸುವಾಗ ಅವರ ಕಠಿನ ಮನೋಭಾವ ಕರಗಿ ಉತ್ತಮ ಗುಣಗಳು ಹೊರಬರಬಹುದು.

ನೀವು ವಿವರಿಸಬಲ್ಲಿರೊ?

• ಇಂದು ಲೋಕದ ಜನರು ಅಷ್ಟು ಕೋಪಿಷ್ಠರಾಗಿರುವುದು ಏಕೆ?

• ಕೋಪವನ್ನು ಅಂಕೆಯಲ್ಲಿಡುವ ಅಥವಾ ಅಂಕೆಯಲ್ಲಿಡದಿರುವುದರಿಂದ ಸಿಗುವ ಫಲಿತಾಂಶಗಳನ್ನು ಬೈಬಲಿನ ಯಾವ ಉದಾಹರಣೆಗಳು ತೋರಿಸುತ್ತವೆ?

• ಜೊತೆ ಕ್ರೈಸ್ತನೊಬ್ಬನು ನಮ್ಮನ್ನು ನೋಯಿಸುವಲ್ಲಿ ನಾವು ಹೇಗೆ ಪ್ರತಿಕ್ರಿಯಿಸಬೇಕು?

• ಸಭೆಯ ಹೊರಗಿನಿಂದ ಬರುವ ದಾಳಿಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 16ರಲ್ಲಿರುವ ಚಿತ್ರ]

ಸಿಮೆಯೋನ್‌ ಮತ್ತು ಲೇವಿಯರು ಹಿಂದಿರುಗಿದರು, ಆದರೆ ಕೋಪೋದ್ರೇಕಕ್ಕೆ ಎಡೆಗೊಟ್ಟ ಮೇಲೆಯೇ

[ಪುಟ 18ರಲ್ಲಿರುವ ಚಿತ್ರಗಳು]

ದಯೆಯನ್ನು ತೋರಿಸುವುದರಿಂದ ಇತರರ ಕಠಿನ ಮನೋಭಾವವು ಮೃದುವಾಗಬಲ್ಲದು