ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದಾಂಪತ್ಯ ದ್ರೋಹವನ್ನು ಜಯಿಸುವುದು

ದಾಂಪತ್ಯ ದ್ರೋಹವನ್ನು ಜಯಿಸುವುದು

ದಾಂಪತ್ಯ ದ್ರೋಹವನ್ನು ಜಯಿಸುವುದು

ಮಹಿಮ ಮತ್ತು ಅವಳ ಗಂಡ ರಾಹುಲ್‌ ಹಲವಾರು ವರ್ಷ ಪೂರ್ಣ ಸಮಯದ ಶುಶ್ರೂಷಕರಾಗಿ ಒಟ್ಟಿಗೆ ಯೆಹೋವನ ಸೇವೆಮಾಡಿದ್ದರು. * ಆದರೆ ಅವರ ಮೊದಲ ಮಗು ಹುಟ್ಟಿದ ಸ್ವಲ್ಪದರಲ್ಲಿ ರಾಹುಲ್‌ ಯೆಹೋವನಿಂದ ದೂರಸರಿಯಲು ಆರಂಭಿಸಿದ. ಕ್ರಮೇಣ ರಾಹುಲ್‌ ಅನೈತಿಕ ಜೀವನವನ್ನು ನಡೆಸಲಾರಂಭಿಸಿದ. ಇದರಿಂದ ಅವನನ್ನು ಕ್ರೈಸ್ತ ಸಭೆಯಿಂದ ಬಹಿಷ್ಕರಿಸಲಾಯಿತು. “ಇದೆಲ್ಲಾ ನಡೆದಾಗ ನಾನು ಸತ್ತುಹೋಗುತ್ತಿದ್ದೇನೆ ಎಂದನಿಸಿತು. ದುಃಖದಿಂದ ಮನಮುರಿದುಹೋಯಿತು. ಏನು ಮಾಡುವುದೆಂದೇ ತೋಚಲಿಲ್ಲ” ಎಂದು ಮಹಿಮ ಹೇಳುತ್ತಾಳೆ.

ಜ್ಯೋತಿ ಎಂಬವಳು ಮದುವೆಯಾದ ಸ್ವಲ್ಪ ಸಮಯದಲ್ಲೇ ಅವಳ ಗಂಡ ಅವಳ ನಂಬಿಕೆ ಮತ್ತು ಪ್ರೀತಿಗೆ ಇನ್ನೊಂದು ರೀತಿಯಲ್ಲಿ ದ್ರೋಹಬಗೆದ. ಅವಳ ಮೇಲೆ ಶಾರೀರಿಕ ದೌರ್ಜನ್ಯ ನಡೆಸಲಾರಂಭಿಸಿದ. ಜ್ಯೋತಿ ಹೇಳುವುದು: “ಅವರು ಮೊದಲ ಬಾರಿ ನನ್ನನ್ನು ಗುದ್ದಿದಾಗ ನಾನು ಸ್ತಬ್ಧಗೊಂಡೆ. ನನಗೆ ತುಂಬ ಮುಜುಗರವೂ ಅವಮಾನವೂ ಆಯಿತು. ಬರಬರುತ್ತಾ ಇದು ರೂಢಿಯಾಗಿಯೇ ಹೋಯಿತು. ಪ್ರತಿ ಸಲ ನನ್ನನ್ನು ಹೊಡೆದ ನಂತರ ಅವರು ಬಂದು ಕ್ಷಮೆ ಕೇಳುತ್ತಿದ್ದರು. ಯಾವಾಗಲೂ ಮನ್ನಿಸಿ ಮರೆತುಬಿಡುವುದು ನನ್ನ ಕ್ರೈಸ್ತ ಕರ್ತವ್ಯ ಎಂದು ನಾನು ನೆನಸಿದೆ. ನಮ್ಮ ಸಮಸ್ಯೆ ಕುರಿತು ಯಾರಿಗೂ, ಸಭೆಯ ಹಿರಿಯರಿಗೆ ಸಹ ತಿಳಿಸುವುದು ನಂಬಿಕೆ ದ್ರೋಹದ ಕೃತ್ಯ ಎಂದು ಸಹ ನಾನು ನೆನಸಿದ್ದೆ. ಈ ದುರುಪಚಾರದ ರೂಢಿ ಮತ್ತು ಕ್ಷಮಾಪಣೆ ಹಲವಾರು ವರ್ಷಗಳ ವರೆಗೆ ಮುಂದುವರಿಯಿತು. ಈ ಎಲ್ಲ ಸಮಯದಲ್ಲಿ ನನ್ನ ಗಂಡನ ಪ್ರೀತಿಯನ್ನು ಗಳಿಸಲು ನನ್ನಿಂದ ಏನಾದರೂ ಮಾಡಸಾಧ್ಯವಿತ್ತು ಎಂದು ನಾನು ನೆನಸಿದೆ. ಅವರು ಕೊನೆಗೆ ನನ್ನನ್ನೂ ನಮ್ಮ ಮಗಳನ್ನೂ ತೊರೆದುಬಿಟ್ಟಾಗ ಏನನ್ನಾದರೂ ಹೇಳಿಯೋ ಮಾಡಿಯೋ ನನ್ನ ವಿವಾಹವನ್ನು ಉಳಿಸೇನೆಂಬ ವಿಷಯದಲ್ಲಿ ನಾನು ಪೂರಾ ಸೋಲನ್ನಪ್ಪಿದೆ ಎಂದನಿಸಿತು.”

ಮಹಿಮ ಮತ್ತು ಜ್ಯೋತಿಯಂತೆ ನಿಮ್ಮ ಗಂಡನು ನಿಮಗೆ ದಾಂಪತ್ಯ ದ್ರೋಹ ಮಾಡಿರುವುದರಿಂದ ನೀವು ಭಾವನಾತ್ಮಕ, ಆರ್ಥಿಕ ಮತ್ತು ಆಧ್ಯಾತ್ಮಿಕ ಸಂಕಷ್ಟವನ್ನು ಅನುಭವಿಸುತ್ತಿರಬಹುದು. ಅಥವಾ ನೀವು ಒಬ್ಬ ಗಂಡನಾಗಿದ್ದು ನಿಮ್ಮ ಹೆಂಡತಿ ಅಪನಂಬಿಗಸ್ತಳಾಗಿದ್ದ ಕಾರಣ ಮನೋವೇದನೆ ಮತ್ತು ಕಷ್ಟವನ್ನು ಅನುಭವಿಸುತ್ತಿರಬಹುದು. ಬೈಬಲ್‌ ಮುಂತಿಳಿಸಿರುವಂತೆ ನಾವು ‘ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳಲ್ಲಿ’ ಜೀವಿಸುತ್ತಿದ್ದೇವೆ ಎಂಬುದು ಅಲ್ಲಗಳೆಯಲಾಗದ ಮಾತು. ಈ ಪ್ರವಾದನೆ ಸೂಚಿಸುವ ಮೇರೆಗೆ “ಕಡೇ ದಿವಸಗಳಲ್ಲಿ” ಅನೇಕ ಕುಟುಂಬಗಳ ಸದಸ್ಯರ ಮಧ್ಯೆ ಸ್ವಾಭಾವಿಕ ಮಮತೆ ಸಂಪೂರ್ಣವಾಗಿ ಇಲ್ಲದೆ ಹೋಗುವುದರಿಂದ ಕುಟುಂಬವು ದಾಳಿಗೆ ಒಳಗಾಗುವುದು. ಕೆಲವರು ದೇವರನ್ನು ಸೇವಿಸುತ್ತೇವೆ ಎಂದು ಹೇಳಿಕೊಂಡರೂ ಅದಕ್ಕೆ ವಿರುದ್ಧವಾಗಿ ನಡೆಯುವರು. (2 ತಿಮೊ. 3:1-5) ಸತ್ಯ ಕ್ರೈಸ್ತರು ಇಂಥ ಸಮಸ್ಯೆಗಳಿಂದ ವಿಮುಕ್ತರೇನಲ್ಲ. ಆದುದರಿಂದ ಒಂದುವೇಳೆ ನೀವು ದಾಂಪತ್ಯ ದ್ರೋಹವನ್ನು ಎದುರಿಸಿರುವಲ್ಲಿ ಅದನ್ನು ಜಯಿಸಲು ನಿಮಗೆ ಯಾವುದು ಸಹಾಯಮಾಡಬಲ್ಲದು?

ನಿಮ್ಮನ್ನು ಯೆಹೋವನ ದೃಷ್ಟಿಕೋನದಲ್ಲಿ ವೀಕ್ಷಿಸಿ

ಮೊದಲಾಗಿ ನೀವು ಪ್ರೀತಿಸುವ ಒಬ್ಬ ವ್ಯಕ್ತಿ ನಿಮಗೆ ಇಷ್ಟು ನೋವನ್ನು ಕೊಡಸಾಧ್ಯವಿತ್ತು ಎಂಬುದು ನಿಮಗೆ ನುಂಗಲಾರದ ತುತ್ತಿನಂತಿರಬಹುದು. ಅವನ ಅಥವಾ ಅವಳ ಪಾಪಕೃತ್ಯಕ್ಕಾಗಿ ನೀವು ನಿಮ್ಮನ್ನೇ ದೋಷಿಯೆಂದು ನೆನಸಲೂ ತೊಡಗಬಹುದು.

ಆದರೆ ಪರಿಪೂರ್ಣ ಮನುಷ್ಯನಾಗಿದ್ದ ಯೇಸು ಸಹ ತಾನು ನಂಬಿದ್ದ ಮತ್ತು ಪ್ರೀತಿಸಿದ್ದ ವ್ಯಕ್ತಿಯಿಂದ ನಂಬಿಕೆ ದ್ರೋಹವನ್ನು ಅನುಭವಿಸಿದನು. ಯೇಸು ತನ್ನ ಅತ್ಯಾಪ್ತ ಸಂಗಡಿಗರಾದ ಅಪೊಸ್ತಲರನ್ನು ಆರಿಸಿದ್ದು ತುಂಬ ಪ್ರಾರ್ಥನೆಮಾಡಿ ಪರ್ಯಾಲೋಚಿಸಿದ ಮೇಲೆಯೇ. ಆಗ ಆ 12 ಮಂದಿಯೂ ಯೆಹೋವನ ಭರವಸಾರ್ಹ ಸೇವಕರಾಗಿದ್ದರು. ಆದಕಾರಣ ಯೂದನು ‘ದ್ರೋಹಿಯಾಗಿ ಪರಿಣಮಿಸಿದಾಗ’ ಯೇಸುವಿಗೆ ತುಂಬ ನೋವಾಗಿರಬೇಕು ಖಂಡಿತ. (ಲೂಕ 6:12-16) ಆದರೂ ಯೂದನ ಕೃತ್ಯಗಳಿಗೆ ಯೆಹೋವನು ಯೇಸುವನ್ನು ಹೊಣೆಗಾರನಾಗಿ ಮಾಡಲಿಲ್ಲ.

ಸದ್ಯ ಯಾವ ವಿವಾಹ ಸಂಗಾತಿಯೂ ಪರಿಪೂರ್ಣರಲ್ಲ ಎಂಬುದು ಒಪ್ಪಿಕೊಳ್ಳತಕ್ಕ ಮಾತು. ಇಬ್ಬರೂ ಸಂಗಾತಿಗಳು ತಪ್ಪುಗಳನ್ನು ಮಾಡುತ್ತಾರೆ ನಿಜ. ಪ್ರೇರಿತ ಕೀರ್ತನೆಗಾರನೊಬ್ಬನು ವಾಸ್ತವಿಕ ದೃಷ್ಟಿಯಿಂದ ಬರೆದದ್ದು: “ಕರ್ತನೇ, ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು?” (ಕೀರ್ತ. 130:3) ಯೆಹೋವನನ್ನು ಅನುಕರಿಸುತ್ತಾ ಸಂಗಾತಿಗಳಿಬ್ಬರೂ ಪರಸ್ಪರರ ಅಪರಿಪೂರ್ಣತೆಗಳನ್ನು ಕ್ಷಮಿಸಲು ಸಿದ್ಧರಾಗಿರಬೇಕು.—1 ಪೇತ್ರ 4:8.

ಆದರೂ “ನಮ್ಮಲ್ಲಿ ಪ್ರತಿಯೊಬ್ಬನು ತನ್ನ ವಿಷಯದಲ್ಲಿ ದೇವರಿಗೆ ಲೆಕ್ಕ ಒಪ್ಪಿಸುವನು.” (ರೋಮ. 14:12) ಒಬ್ಬ ವಿವಾಹ ಸಂಗಾತಿ ರೂಢಿಯಾಗಿ ನಿಂದಾತ್ಮಕ ಮಾತು ಹಾಗೂ ಕೃತ್ಯಗಳಲ್ಲಿ ತೊಡಗುವುದಾದರೆ ತಪ್ಪಿತಸ್ಥನೇ ಯೆಹೋವನಿಗೆ ಲೆಕ್ಕ ಒಪ್ಪಿಸಬೇಕು. ಯೆಹೋವನು ಹಿಂಸಾಕೃತ್ಯ ಮತ್ತು ನಿಂದಾತ್ಮಕ ಮಾತನ್ನು ಖಂಡಿಸುತ್ತಾನೆ. ಆದುದರಿಂದ ಸಂಗಾತಿಯನ್ನು ಅಷ್ಟು ಘೋರ ಪ್ರೀತಿಹೀನತೆ ಮತ್ತು ಅಗೌರವದಿಂದ ಉಪಚರಿಸುವುದಕ್ಕೆ ಯಾವುದೇ ನ್ಯಾಯಸಮ್ಮತ ಕಾರಣವು ಎಂದೂ ಇರುವುದಿಲ್ಲ. (ಕೀರ್ತ. 11:5; ಎಫೆ. 5:33; ಕೊಲೊ. 3:6-8) ವಾಸ್ತವದಲ್ಲಿ ಕ್ರೈಸ್ತನೊಬ್ಬನು ಪದೇ ಪದೇ ಕೋಪೋದ್ರೇಕಗೊಂಡಲ್ಲಿ ಹಾಗೂ ತಪ್ಪನ್ನು ತಿದ್ದಿಕೊಳ್ಳದಿದ್ದಲ್ಲಿ ಅವನನ್ನು ಅಥವಾ ಅವಳನ್ನು ಕ್ರೈಸ್ತ ಸಭೆಯಿಂದ ಬಹಿಷ್ಕರಿಸಲೇಬೇಕು. (ಗಲಾ. 5:19-21; 2 ಯೋಹಾ. 9, 10) ಇಂಥ ಅಕ್ರೈಸ್ತ ನಡತೆಯ ಬಗ್ಗೆ ಹಿರಿಯರಿಗೆ ತಿಳಿಸಿದ್ದಕ್ಕಾಗಿ ಒಬ್ಬ ವಿವಾಹ ಸಂಗಾತಿ ದೋಷಿ ಭಾವನೆಯನ್ನು ತಾಳಬೇಕಾಗಿಲ್ಲ. ವಾಸ್ತವದಲ್ಲಿ ಇಂಥ ದುರುಪಚಾರಕ್ಕೆ ಬಲಿಯಾದವರ ಮೇಲೆ ಯೆಹೋವನಿಗೆ ಕನಿಕರವಿರುತ್ತದೆ.

ಒಬ್ಬ ವಿವಾಹ ಸಂಗಾತಿ ವ್ಯಭಿಚಾರಗೈಯುವಾಗ ಅವನೋ ಅವಳೋ ತನ್ನ ನಿರ್ದೋಷಿ ಸಂಗಾತಿಯ ವಿರುದ್ಧ ಮಾತ್ರವಲ್ಲದೆ ಯೆಹೋವನ ವಿರುದ್ಧವಾಗಿಯೂ ಪಾಪಮಾಡುತ್ತಾರೆ. (ಮತ್ತಾ. 19:4-9; ಇಬ್ರಿ. 13:4) ನಿರ್ದೋಷಿ ಸಂಗಾತಿಯು ಬೈಬಲ್‌ ಮೂಲತತ್ತ್ವಗಳಿಗನುಸಾರ ಜೀವಿಸಲು ಪ್ರಯತ್ನಿಸುತ್ತಿದ್ದಲ್ಲಿ ವ್ಯಭಿಚಾರಿ ಸಂಗಾತಿಯು ಮಾಡಿದ ಪಾಪಭರಿತ ದಾಂಪತ್ಯ ದ್ರೋಹಕ್ಕಾಗಿ ತಾನು ದೋಷಿಯೆಂದು ನೆನಸುವ ಅಗತ್ಯವಿಲ್ಲ.

ನಿಮಗೆ ಹೇಗನಿಸುತ್ತದೆ ಎಂಬುದು ಯೆಹೋವನಿಗೆ ತಿಳಿದಿದೆ ಎಂಬುದನ್ನು ಮನಸ್ಸಿನಲ್ಲಿಡಿ. ಆತನು ತನ್ನನ್ನೇ ಇಸ್ರಾಯೇಲ್‌ ಜನಾಂಗದ ಪತಿಸದೃಶ ಒಡೆಯನಾಗಿ ವರ್ಣಿಸುತ್ತಾನೆ. ಆ ಜನಾಂಗವು ಆಧ್ಯಾತ್ಮಿಕಾರ್ಥದಲ್ಲಿ ಮಾಡಿದ ವ್ಯಭಿಚಾರೀ ಕೃತ್ಯಗಳಿಂದಾಗಿ ಆತನು ಅನುಭವಿಸಿದ ವೇದನೆಯನ್ನು ಆತನ ವಾಕ್ಯವು ಹಲವಾರು ಹೃದಯಸ್ಪರ್ಶಿಸುವ ವಚನಭಾಗಗಳಲ್ಲಿ ದಾಖಲಿಸಿದೆ. (ಯೆಶಾ. 54:5, 6; ಯೆರೆ. 3:1, 6-10) ನೀವು ವಿವಾಹ ಸಂಗಾತಿಯಿಂದ ಯಾವುದೇ ವಿಧದಲ್ಲಿ ದಾಂಪತ್ಯ ದ್ರೋಹಕ್ಕೆ ಒಳಗಾಗಿರುವಲ್ಲಿ ನೀವು ಸುರಿಸುವ ಕಣ್ಣೀರನ್ನು ಯೆಹೋವನು ಕಣ್ಣಿಟ್ಟು ನೋಡುತ್ತಾನೆ ಎಂಬ ಆಶ್ವಾಸನೆ ನಿಮಗಿರಲಿ. (ಮಲಾ. 2:13, 14) ನಿಮಗೆ ಸಾಂತ್ವನ ಮತ್ತು ಉತ್ತೇಜನದ ಅಗತ್ಯವಿದೆ ಎಂಬುದು ಆತನಿಗೆ ತಿಳಿದಿದೆ.

ಯೆಹೋವನು ಸಂತೈಸುವ ವಿಧ

ಯೆಹೋವನು ಸಾಂತ್ವನವನ್ನು ಕೊಡುವ ಒಂದು ವಿಧ ಕ್ರೈಸ್ತ ಸಭೆಯ ಮೂಲಕ. ಜ್ಯೋತಿಗೆ ಇಂಥ ನೆರವು ಸಿಕ್ಕಿತು. ಅವಳು ನೆನಪಿಸಿಕೊಳ್ಳುತ್ತಾ ಹೇಳುವುದು: “ನಾನು ಭಾವನಾತ್ಮಕವಾಗಿ ತುಂಬ ಕುಗ್ಗಿಹೋಗಿದ್ದ ಸಮಯದಲ್ಲೇ ಸರ್ಕಿಟ್‌ ಮೇಲ್ವಿಚಾರಕರ ಭೇಟಿ ಇತ್ತು. ನನ್ನ ಗಂಡ ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿರುವುದರಿಂದ ನಾನೆಷ್ಟು ಮನಗುಂದಿಹೋಗಿದ್ದೇನೆ ಎಂಬುದು ಅವರಿಗೆ ತಿಳಿದಿತ್ತು. ಅವರು ನನಗೆ ಸಹಾಯಮಾಡಲಿಕ್ಕಾಗಿ ಸಮಯ ತಕ್ಕೊಂಡು 1 ಕೊರಿಂಥ 7:15ರಂಥ ವಚನಗಳ ಮೇಲೆ ತರ್ಕಿಸಿದರು. ಬೈಬಲ್‌ ವಚನಗಳು ಮತ್ತು ಅವರ ದಯಾಭರಿತ ಮಾತುಗಳು ನನ್ನ ದೋಷಿಭಾವನೆಗಳನ್ನು ನೀಗಿಸಲು ಸಹಾಯವಾದವು ಹಾಗೂ ನನಗೆ ಸ್ವಲ್ಪ ಮನಶ್ಶಾಂತಿ ಕೊಟ್ಟವು.” *

ಈ ಮುಂಚೆ ತಿಳಿಸಿದ ಮಹಿಮಳು ಸಹ ಯೆಹೋವನು ಕ್ರೈಸ್ತ ಸಭೆಯ ಮೂಲಕ ವ್ಯಾವಹಾರಿಕ ಸಹಾಯವನ್ನು ಕೊಡುತ್ತಾನೆ ಎಂಬುದನ್ನು ಕಲಿತುಕೊಂಡಳು. ಅವಳು ಹೇಳುವುದು: “ನನ್ನ ಗಂಡ ಪಶ್ಚಾತ್ತಾಪಪಡುತ್ತಿಲ್ಲ ಎಂಬುದು ಸ್ಪಷ್ಟವಾದಾಗ ನಾನು ಮಕ್ಕಳನ್ನು ತಕ್ಕೊಂಡು ಬೇರೊಂದು ಪಟ್ಟಣಕ್ಕೆ ಸ್ಥಳಾಂತರಿಸಿದೆ. ಅಲ್ಲಿಗೆ ಹೋದಾಗ ನನಗೆ ಎರಡು ಕೋಣೆಗಳು ಬಾಡಿಗೆಗೆ ಸಿಕ್ಕಿದವು. ಮಾರಣೆಯ ದಿನ ದುಃಖಾಕ್ರಾಂತಳಾಗಿ ನಮ್ಮ ಸಾಮಾನುಗಳನ್ನು ಹೊರಕ್ಕೆ ತೆಗೆಯುತ್ತಿದ್ದಾಗ ಬಾಗಿಲನ್ನು ಯಾರೋ ಬಡಿದ ಸದ್ದಾಯಿತು. ಪಕ್ಕದಲ್ಲೇ ವಾಸಿಸುತ್ತಿದ್ದ ನನ್ನ ಮನೆ ಒಡತಿ ಬಂದರೆಂದು ನೆನಸಿದೆ. ಆದರೆ ಅವರು ನನ್ನ ತಾಯಿಯೊಂದಿಗೆ ಬೈಬಲ್‌ ಅಧ್ಯಯನ ನಡೆಸಿದ ಸಹೋದರಿ ಎಂದು ತಿಳಿದಾಗ ನನಗೆ ಅಚ್ಚರಿ! ಅವರೇ ನಮ್ಮ ಕುಟುಂಬಕ್ಕೆ ಸತ್ಯ ಕಲಿಯಲು ಸಹಾಯಮಾಡಿದ್ದರು. ನನ್ನನ್ನು ಅಲ್ಲಿ ಕಾಣಲು ಅವರು ನಿರೀಕ್ಷಿಸಿರಲಿಲ್ಲ. ಅವರು ಬಂದದ್ದು ಮನೆಯ ಒಡತಿಯೊಂದಿಗೆ ಬೈಬಲ್‌ ಅಧ್ಯಯನವನ್ನು ಮಾಡುತ್ತಿದ್ದ ಕಾರಣದಿಂದಲೇ. ನನಗಾದ ಉಪಶಮನವನ್ನು ಹೇಳತೀರದು. ನನ್ನ ಭಾವನೆಗಳನ್ನು ತಡೆದುಹಿಡಿಯಲಾಗಲಿಲ್ಲ. ಸನ್ನಿವೇಶವನ್ನು ವಿವರಿಸುತ್ತಾ ನಾವಿಬ್ಬರೂ ಅತ್ತೆವು. ಆ ದಿನದ ಕೂಟಗಳಿಗೆ ಹಾಜರಾಗಲು ಆಕೆ ಕೂಡಲೇ ಏರ್ಪಾಡು ಮಾಡಿದಳು. ಸಭೆಯು ನಮ್ಮನ್ನು ಸ್ವಾಗತಿಸಿತು. ಹಿರಿಯರು ವ್ಯಾವಹಾರಿಕ ಏರ್ಪಾಡುಗಳನ್ನು ಮಾಡಿ ನನ್ನ ಕುಟುಂಬದ ಆಧ್ಯಾತ್ಮಿಕ ಅಗತ್ಯಗಳನ್ನು ನೋಡಿಕೊಳ್ಳಲು ನನಗೆ ನೆರವಾದರು.”

ಇತರರು ನೆರವಾಗಬಲ್ಲ ವಿಧ

ಕ್ರೈಸ್ತ ಸಭೆಯ ಸದಸ್ಯರು ಸಹ ಅನೇಕ ರೀತಿಗಳಲ್ಲಿ ವ್ಯಾವಹಾರಿಕ ಬೆಂಬಲವನ್ನು ಒದಗಿಸಬಲ್ಲರು ನಿಶ್ಚಯ. ಉದಾಹರಣೆಗಾಗಿ, ಮಹಿಮಳು ಈಗ ಕೆಲಸ ಹುಡುಕಬೇಕಾಗಿತ್ತು. ಸಭೆಯಲ್ಲಿನ ಕುಟುಂಬವೊಂದು ಮಕ್ಕಳನ್ನು ಶಾಲಾನಂತರ ನೋಡಿಕೊಳ್ಳಲು ಬೇಕಾದರೆ ಸಹಾಯಕೊಡುವೆವು ಎಂದಿತು.

“ನಾನು ನಿಜವಾಗಿಯೂ ಗಣ್ಯಮಾಡುವುದು ಏನೆಂದರೆ ನನ್ನನ್ನು ಮತ್ತು ನನ್ನ ಮಕ್ಕಳನ್ನು ಕ್ಷೇತ್ರ ಸೇವೆಗಾಗಿ ಒಯ್ಯಲು ಸಹೋದರ ಸಹೋದರಿಯರು ತಮ್ಮನ್ನು ನೀಡಿಕೊಳ್ಳುವುದೇ” ಎನ್ನುತ್ತಾಳೆ ಮಹಿಮ. ಅಂಥ ವ್ಯಾವಹಾರಿಕ ಸಹಾಯದಿಂದ ಸಭೆಯ ಸದಸ್ಯರು ‘ಒಬ್ಬರು ಇನ್ನೊಬ್ಬರ ಭಾರಗಳನ್ನು ಹೊತ್ತುಕೊಳ್ಳಲು’ ನೆರವಾಗುತ್ತಾರೆ. ಹೀಗೆ “ಕ್ರಿಸ್ತನ ನಿಯಮವನ್ನು” ನೆರವೇರಿಸುತ್ತಿದ್ದಾರೆ.—ಗಲಾ. 6:2.

ಇತರರ ಪಾಪಗಳಿಂದಾಗಿ ಕಷ್ಟಗಳನ್ನು ಅನುಭವಿಸುತ್ತಿರುವವರು ಈ ರೀತಿಯ ವ್ಯಾವಹಾರಿಕ ಸಹಾಯವನ್ನು ನಿಜವಾಗಿಯೂ ಗಣ್ಯಮಾಡುತ್ತಾರೆ. ಮೋನಿಕ ಎಂಬವಳ ಗಂಡನು 7,00,000 ರೂಪಾಯಿಗಳ ತನ್ನ ಕ್ರೆಡಿಟ್‌ ಕಾರ್ಡ್‌ ಸಾಲವನ್ನು ಹಾಗೂ ನಾಲ್ಕು ಮಕ್ಕಳನ್ನು ಸಾಕುವ ಜವಾಬ್ದಾರಿಯನ್ನು ಅವಳ ತಲೆಯ ಮೇಲೆ ಹಾಕಿ ಅವಳನ್ನು ಬಿಟ್ಟುಹೋದನು. ಅವಳನ್ನುವುದು: “ನನ್ನ ಆಧ್ಯಾತ್ಮಿಕ ಸಹೋದರ ಸಹೋದರಿಯರು ಬಹಳ ಪ್ರೀತಿಯನ್ನು ತೋರಿಸಿದರು. ಅವರ ಬೆಂಬಲವಿಲ್ಲದಿದ್ದರೆ ನಾನು ಬದುಕುತ್ತಲೇ ಇರಲಿಲ್ಲ. ನನ್ನ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಂಡ ಈ ಅತ್ಯುತ್ತಮ ಸಹೋದರರನ್ನು ಯೆಹೋವನೇ ನನಗೆ ಕೊಟ್ಟನು ಎನ್ನಲೇಬೇಕು. ಅಂಥ ಸಹಾಯದಿಂದ ನನ್ನ ಮಕ್ಕಳು ಆಧ್ಯಾತ್ಮಿಕವಾಗಿ ಪ್ರೌಢರಾಗಿ ಬೆಳೆಯುವುದನ್ನು ನೋಡುವ ಸಂತೋಷವು ನನ್ನದಾಗಿತ್ತು. ನನಗೆ ಸಲಹೆ ಬೇಕಾಗಿದ್ದಲ್ಲಿ ಹಿರಿಯರು ಸಹಾಯಮಾಡಿದರು. ನಾನು ಮಾತಾಡಬಯಸಿದಾಗ ಅವರು ದಯೆಯಿಂದ ಕಿವಿಗೊಟ್ಟರು.”—ಮಾರ್ಕ 10:29, 30.

ಇತರರ ದುರವಸ್ಥೆಯ ಕುರಿತು ಯಾವಾಗ ಪ್ರಸ್ತಾಪವೆತ್ತಬಾರದು ಎಂಬುದನ್ನು ಪ್ರಿಯ ಮಿತ್ರರು ಯಾವಾಗಲೂ ಗ್ರಹಿಸಿಕೊಳ್ಳುವರು ನಿಶ್ಚಯ. (ಪ್ರಸಂ. 3:7) ಮಹಿಮ ಹೇಳುವುದು: “ಹೆಚ್ಚಿನ ಸಮಯ ನಾನು ನನ್ನ ಹೊಸ ಸಭೆಯ ಸಹೋದರಿಯರೊಂದಿಗೆ ಸಾರುವ ಕೆಲಸವೋ ಬೈಬಲ್‌ ಅಧ್ಯಯನವೋ ಅಥವಾ ನನ್ನ ಮಕ್ಕಳ ಕುರಿತೋ ಮಾತಾಡುವುದರಲ್ಲಿ ಆನಂದಿಸಿದೆನೇ ಹೊರತು ನನ್ನ ಸಮಸ್ಯೆಗಳ ಕುರಿತಾಗಿ ಅಲ್ಲ. ನನ್ನ ಹಿಂದಣ ದುರವಸ್ಥೆಯನ್ನು ನೆನಪಿಸದೆ ಹೊಸ ಜೀವನವನ್ನು ಆರಂಭಿಸಲು ಅವರು ಸಹಾಯಮಾಡಿದ್ದನ್ನು ನಾನು ಗಣ್ಯಮಾಡಿದೆ.”

ಪ್ರತೀಕಾರ ಸಲ್ಲಿಸುವ ತವಕವನ್ನು ವರ್ಜಿಸಿ

ನಿಮ್ಮ ಸಂಗಾತಿಯ ಪಾಪಗಳಿಗೆ ನೀವೇ ಹೇಗೋ ಜವಾಬ್ದಾರರು ಎಂದು ಕೆಲವೊಮ್ಮೆ ನೀವು ನೆನಸಲಿಕ್ಕಿಲ್ಲ. ಆದರೆ ನಿಮ್ಮ ಸಂಗಾತಿಯ ತಪ್ಪುಗಳಿಂದಲೇ ನೀವಿಷ್ಟು ಕಷ್ಟಪಡುತ್ತಿದ್ದೀರಿ ಎಂದು ನೀವು ಸಿಟ್ಟುಗೊಳ್ಳಬಹುದು. ಈ ಸಿಟ್ಟು ಬೆಳೆಯುವಂತೆ ಬಿಟ್ಟಲ್ಲಿ ಯೆಹೋವನಿಗೆ ನಂಬಿಗಸ್ತರಾಗಿ ಉಳಿಯುವ ನಿಮ್ಮ ದೃಢನಿರ್ಧಾರವನ್ನು ಅದು ಕುಂದಿಸಬಲ್ಲದು. ಉದಾಹರಣೆಗೆ, ನಿಮ್ಮ ಅಪನಂಬಿಗಸ್ತ ಸಂಗಾತಿಗೆ ಹೇಗಾದರೂ ಪ್ರತೀಕಾರ ಸಲ್ಲಿಸಲೇಬೇಕೆಂಬ ಪ್ರಲೋಭನೆಗೆ ನೀವು ಒಳಗಾಗಬಹುದು.

ಇಂಥ ಭಾವನೆಗಳು ನಿಮ್ಮಲ್ಲಿ ಹೆಚ್ಚೆಚ್ಚಾಗುತ್ತಾ ಇವೆ ಎಂದು ನೀವು ಗ್ರಹಿಸುವುದಾದರೆ ಯೆಹೋಶುವ ಮತ್ತು ಕಾಲೇಬರ ಉದಾಹರಣೆಯ ಕುರಿತು ಯೋಚಿಸುವುದು ಒಳ್ಳೇದು. ಈ ನಂಬಿಗಸ್ತ ಪುರುಷರು ವಾಗ್ದತ್ತ ದೇಶದ ಗೂಢಚರ್ಯೆ ನಡೆಸಲು ತಮ್ಮ ಪ್ರಾಣವನ್ನು ಅಪಾಯಕ್ಕೊಡ್ಡಿದರು. ಇತರ ಗೂಢಚಾರರಿಗೆ ನಂಬಿಕೆಯ ಕೊರತೆಯಿತ್ತು. ಜನರು ಯೆಹೋವನಿಗೆ ವಿಧೇಯರಾಗುವುದರಿಂದ ಅವರು ತಡೆದರು. ಯೆಹೋಶುವ ಮತ್ತು ಕಾಲೇಬರು ನಂಬಿಗಸ್ತರಾಗಿರುವಂತೆ ಜನಾಂಗವನ್ನು ಪ್ರೋತ್ಸಾಹಿಸಲು ಪ್ರಯತ್ನಿಸಿದಾಗ ಅವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಸಹ ಕೆಲವು ಇಸ್ರಾಯೇಲ್ಯರು ಬಯಸಿದರು. (ಅರ. 13:25–14:10) ಇಸ್ರಾಯೇಲಿನ ಕೃತ್ಯಗಳ ನಿಮಿತ್ತ ಯೆಹೋಶುವ ಮತ್ತು ಕಾಲೇಬರು 40 ವರ್ಷಕಾಲ ಅರಣ್ಯದಲ್ಲಿ ಅಲೆಯಲೇಬೇಕಾಯಿತು. ತಮ್ಮ ತಪ್ಪಿಗಾಗಿ ಅಲ್ಲ, ಇತರರ ತಪ್ಪಿಗಾಗಿ.

ಯೆಹೋಶುವ ಮತ್ತು ಕಾಲೇಬರಿಗೆ ನಿರಾಶೆಯಾಗಿದ್ದಿರಬಹುದಾದರೂ ಅವರ ಸಹೋದರರ ಪಾಪಗಳು ತಮ್ಮನ್ನು ಸಿಟ್ಟಿಗೇರಿಸುವಂತೆ ಅವರು ಬಿಡಲಿಲ್ಲ. ತಮ್ಮ ಸ್ವಂತ ಆಧ್ಯಾತ್ಮಿಕ ಸಮತೋಲನವನ್ನು ಕಾಪಾಡಿಕೊಳ್ಳುವುದರ ಮೇಲೆ ಅವರು ಗಮನ ಕೇಂದ್ರೀಕರಿಸಿದರು. ನಲವತ್ತು ವರ್ಷಗಳ ಅರಣ್ಯವಾಸ ಕೊನೆಗೊಂಡಾಗ, ಅವರು ಮತ್ತು ಲೇವಿಯರು ಮಾತ್ರ ಆ ಸಂತತಿಯವರಲ್ಲಿ ಪಾರಾಗಿ ಉಳಿದು ವಾಗ್ದತ್ತ ದೇಶವನ್ನು ಪ್ರವೇಶಿಸುವ ಪ್ರತಿಫಲವನ್ನು ಪಡೆದರು.—ಅರ. 14:28-30; ಯೆಹೋ. 14:6-12.

ನಿಮ್ಮ ಅಪನಂಬಿಗಸ್ತ ಸಂಗಾತಿಯ ಕೃತ್ಯಗಳು ನೀವು ಬಹುಕಾಲ ಕಷ್ಟವನ್ನು ಅನುಭವಿಸುವಂತೆ ಮಾಡೀತು. ವಿವಾಹಬಂಧವು ಮುರಿದುಹೋದೀತಾದರೂ ತದನಂತರ ನೀವು ಭಾವನಾತ್ಮಕ ಹಾಗೂ ಆರ್ಥಿಕ ಸಂಕಷ್ಟವನ್ನು ಎದುರಿಸಬಹುದು. ಆದರೆ ಕರಾಳ ಚಿತ್ರಣಗಳು ನಿಮ್ಮ ಮನಸ್ಸನ್ನು ಮೊಬ್ಬುಗೊಳಿಸಿ ಕಂಗೆಡಿಸುವಂತೆ ಬಿಡುವ ಬದಲು ತನ್ನ ಮಟ್ಟಗಳನ್ನು ಬೇಕುಬೇಕೆಂದೇ ಅಲಕ್ಷಿಸುವವರೊಂದಿಗೆ ಹೇಗೆ ವ್ಯವಹರಿಸಬೇಕು ಎಂದು ಯೆಹೋವನಿಗೆ ಚೆನ್ನಾಗಿ ತಿಳಿದಿದೆ ಎಂಬುದನ್ನು ನೆನಪಿಡಿರಿ. ಅಪನಂಬಿಗಸ್ತ ಇಸ್ರಾಯೇಲ್ಯರು ಸಹ ಇದನ್ನು ಅರಣ್ಯದಲ್ಲಿದ್ದಾಗ ಅರಿತುಕೊಂಡರು.—ಇಬ್ರಿ. 10:30, 31; 13:4.

ನೀವು ಜಯಿಸಬಲ್ಲಿರಿ!

ನಕಾರಾತ್ಮಕ ಯೋಚನೆಗಳು ನಿಮ್ಮನ್ನು ಕುಗ್ಗಿಸುವಂತೆ ಬಿಡುವ ಬದಲು ನಿಮ್ಮ ಮನಸ್ಸಿನಲ್ಲಿ ಯೆಹೋವನ ಆಲೋಚನೆಗಳನ್ನು ತುಂಬಿಸಿರಿ. ಜ್ಯೋತಿ ಹೇಳುವುದು: “ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಧ್ವನಿಮುದ್ರಣಗಳನ್ನು ಕೇಳಿಸಿಕೊಳ್ಳುವುದು ನನಗೆ ಸಹಾಯಮಾಡಿತು. ಕೂಟಗಳು ಸಹ ನನಗೆ ತುಂಬ ಶಕ್ತಿಯನ್ನು ಕೊಟ್ಟವು. ಕೂಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ನನ್ನ ಸಮಸ್ಯೆಗಳ ಕುರಿತು ಯೋಚಿಸದೇ ಇರಲು ಸಹಾಯಮಾಡಿತು. ಸಾರುವ ಕೆಲಸ ಸಹ ಇದೇ ರೀತಿಯಲ್ಲಿ ನನಗೆ ನೆರವಾಯಿತು. ಯೆಹೋವನಲ್ಲಿ ನಂಬಿಕೆಯನ್ನು ಬೆಳೆಸಿಕೊಳ್ಳುವಂತೆ ಇತರರಿಗೆ ಸಹಾಯಮಾಡುವ ಮೂಲಕ ನಾನು ನನ್ನ ಸ್ವಂತ ನಂಬಿಕೆಯನ್ನು ಬಲಪಡಿಸಿಕೊಂಡೆ. ಬೈಬಲ್‌ ವಿದ್ಯಾರ್ಥಿಗಳ ವಿಷಯದಲ್ಲಿ ಕಾಳಜಿ ವಹಿಸುವುದರಿಂದ ಹೆಚ್ಚು ಪ್ರಾಮುಖ್ಯವಾದ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸಲು ಸಹಾಯ ಸಿಕ್ಕಿತು.”

ಮುಂಚೆ ತಿಳಿಸಿದ ಮೋನಿಕ ಹೇಳುವುದು: “ಕೂಟಗಳಿಗೆ ಕ್ರಮವಾಗಿ ಹಾಜರಾಗುವುದರಿಂದ ಮತ್ತು ಸಾಧ್ಯವಾದಾಗೆಲ್ಲ ಕ್ಷೇತ್ರ ಸೇವೆಯಲ್ಲಿ ಪಾಲ್ಗೊಳ್ಳುವುದರಿಂದ ನನ್ನಿಂದ ತಾಳಿಕೊಳ್ಳಲು ಸಾಧ್ಯವಾಗಿದೆ. ನಾವು ಕುಟುಂಬವಾಗಿ ಪರಸ್ಪರ ಒಬ್ಬರೊಂದಿಗೊಬ್ಬರು ಮತ್ತು ಸಭೆಯೊಂದಿಗೆ ಹೆಚ್ಚು ಆಪ್ತ ಸಂಬಂಧಕ್ಕೆ ಬಂದಿದ್ದೇವೆ. ಈ ದುಃಸ್ಥಿತಿಯು ನನ್ನ ಸ್ವಂತ ಬಲಹೀನತೆಗಳನ್ನು ಗ್ರಹಿಸಿಕೊಳ್ಳಲು ಸಹಾಯಮಾಡಿದೆ. ನಾನು ಪರೀಕ್ಷಿಸಲ್ಪಟ್ಟಿದ್ದೆನಾದರೂ ಯೆಹೋವನ ಸಹಾಯದಿಂದ ಜಯಶಾಲಿಯಾಗಿದ್ದೇನೆ.”

ನೀವು ಸಹ ಇಂಥ ಪರೀಕ್ಷೆಗಳನ್ನು ಜಯಿಸಬಲ್ಲಿರಿ. ದಾಂಪತ್ಯ ದ್ರೋಹದಿಂದ ಉಂಟಾಗುವ ನೋವನ್ನು ತಾಳಿಕೊಳ್ಳುವುದು ಕಷ್ಟವಾದರೂ ಪೌಲನ ಈ ಪ್ರೇರಿತ ಸಲಹೆಯನ್ನು ಅನುಸರಿಸಲು ಪ್ರಯತ್ನಿಸಿ: “ಒಳ್ಳೇದನ್ನು ಮಾಡುವುದನ್ನು ನಿಲ್ಲಿಸದಿರೋಣ; ನಾವು ದಣಿಯದಿದ್ದರೆ ತಕ್ಕ ಸಮಯದಲ್ಲಿ ಫಲವನ್ನು ಕೊಯ್ಯುವೆವು.”—ಗಲಾ. 6:9.

[ಪಾದಟಿಪ್ಪಣಿಗಳು]

^ ಪ್ಯಾರ. 2 ಹೆಸರುಗಳನ್ನು ಬದಲಾಯಿಸಲಾಗಿದೆ.

^ ಪ್ಯಾರ. 13 ಪ್ರತ್ಯೇಕವಾಸ ಮತ್ತು ವಿವಾಹ ವಿಚ್ಛೇದನದ ಬಗ್ಗೆ ಬೈಬಲಿನ ದೃಷ್ಟಿಕೋನದ ಕುರಿತು ಸವಿವರವಾದ ಚರ್ಚೆಗಾಗಿ “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಪುಸ್ತಕದ ಪುಟ 143-148, 251-253 ನೋಡಿ.

[ಪುಟ 31ರಲ್ಲಿರುವ ಚಿತ್ರ]

ತೊರೆಯಲ್ಪಟ್ಟ ಸಂಗಾತಿಗಳು ತಮಗೆ ಕ್ಷೇತ್ರ ಶುಶ್ರೂಷೆಯಲ್ಲಿ ನೆರವು ನೀಡುವವರನ್ನು ಗಣ್ಯಮಾಡುತ್ತಾರೆ