ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವಜನರ ಮಧ್ಯೆ ಸುರಕ್ಷೆಯನ್ನು ಕಂಡುಕೊಳ್ಳಿ

ದೇವಜನರ ಮಧ್ಯೆ ಸುರಕ್ಷೆಯನ್ನು ಕಂಡುಕೊಳ್ಳಿ

ದೇವಜನರ ಮಧ್ಯೆ ಸುರಕ್ಷೆಯನ್ನು ಕಂಡುಕೊಳ್ಳಿ

“ನಾನು ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು.”—ಕೀರ್ತ. 35:18.

1-3. (ಎ) ಕೆಲವು ಕ್ರೈಸ್ತರನ್ನು ಯಾವುದು ಆಧ್ಯಾತ್ಮಿಕವಾಗಿ ಅಪಾಯಕರ ಸನ್ನಿವೇಶಕ್ಕೆ ನಡಿಸಬಹುದು? (ಬಿ) ದೇವಜನರು ಎಲ್ಲಿ ಸಂರಕ್ಷಣೆಯನ್ನು ಪಡೆಯಬಲ್ಲರು?

ಜೋ ಮತ್ತು ಅವನ ಪತ್ನಿ ರಜೆಯಲ್ಲಿ ಉಷ್ಣವಲಯದ ಪ್ರದೇಶವೊಂದಕ್ಕೆ ಹೋದಾಗ ಅಲ್ಲಿ ಕಡಲ ನಡುವಣ ಹವಳದ ದಿಬ್ಬವೊಂದರಲ್ಲಿ ಉಸಿರುಕೊಳವೆ ಕಟ್ಟಿಕೊಂಡು ಈಜತೊಡಗಿದರು. ಆ ದಿಬ್ಬದಲ್ಲಿ ಸಕಲ ವೈವಿಧ್ಯಭರಿತ ಬಣ್ಣ ಹಾಗೂ ಗಾತ್ರದಿಂದ ಕೂಡಿದ ವಿಧವಿಧವಾದ ಮೀನುಗಳು ತುಂಬಿದ್ದವು. ಕಡಲ ತಳದ ಮರಳದಿಬ್ಬದ ಸಾಲನ್ನು ವೀಕ್ಷಿಸಿ ಆನಂದಿಸಲು ಈಜುತ್ತಾ ಈಜುತ್ತಾ ಸ್ವಲ್ಪ ಆಳಕ್ಕೆ ಇಳಿದರು. ಆಗ ಕಡಲ ತಳವು ಫಕ್ಕನೆ ಆಚೆ ಸರಿದು ಆಳವಾದ ಪ್ರಪಾತವು ಗೋಚರಿಸಿತು. ಜೋ ಪತ್ನಿ “ಬಹಳ ಆಳಕ್ಕೆ ಇಳಿದುಬಿಟ್ಟೆವೆಂದು ಕಾಣುತ್ತದೆ” ಎಂದಳು ಗಾಬರಿಯಿಂದ. “ಶಾಂತಳಾಗು, ಭಯವೇನಿಲ್ಲ, ಏನು ಮಾಡುತ್ತಿದ್ದೇನೆಂದು ನನಗೆ ಗೊತ್ತಿದೆ” ಎಂದನು ಜೋ ಸಮಜಾಯಿಸುತ್ತಾ. ಆದರೆ ತದನಂತರ ಸ್ವಲ್ಪದರಲ್ಲಿಯೇ ಅವನು ಹೀಗೆ ನೆನಸ ತೊಡಗಿದನು: ‘ಮೀನುಗಳೆಲ್ಲ ಎಲ್ಲಿ ಹೋಗಿವೆ? ಕಾಣಿಸುತ್ತಿಲ್ಲವಲ್ಲಾ.’ ಅದರ ಕಾರಣವು ತಟ್ಟನೆ ಹೊಳೆದಾಗ ಅವನಿಗೆ ದಿಗಿಲುಹುಟ್ಟಿತು. ಆಗಲೆ ಆಳವಾದ ನೀಲಜಲದೊಳಗಿಂದ ಅವನಿಗೆದುರಾಗಿಯೇ ಬರುತ್ತಿತ್ತು ದೊಡ್ಡ ಷಾರ್ಕ್‌ ಮೀನು! ತನ್ನ ಕಥೆ ಮುಗಿಯಿತು, ಉಳಿಗಾಲವಿಲ್ಲ ಎಂದನಿಸಿತು ಅವನಿಗೆ. ಷಾರ್ಕಿನ ದಾಳಿಗೆ ಇನ್ನೇನು ಕೆಲವೇ ಅಡಿ ದೂರವಿದೆಯೆಂದು ನೆನಸುವಾಗ ಆ ಮೀನು ತಟ್ಟನೆ ಬದಿಗೆ ಸರಿದು ಕಣ್ಣಿಗೆ ಕಾಣಿಸದೆ ಹೋಯಿತು.

2 ಕ್ರೈಸ್ತನೊಬ್ಬನು ಸೈತಾನನ ವ್ಯವಸ್ಥೆಯ ಆಕರ್ಷಣೆಗಳಾದ ಮನೋರಂಜನೆ, ಕೆಲಸ ಹಾಗೂ ಸೊತ್ತುಗಳಿಂದ ಎಷ್ಟು ಮನಮರುಳಾಗಿ ಹೋಗಬಹುದೆಂದರೆ ತಾನು ಅಪಾಯಕರ ನೀರಿನಾಳಕ್ಕೆ, ಗಂಡಾಂತರ ಸನ್ನಿವೇಶಕ್ಕೆ ಇಳಿಯುತ್ತಿದ್ದೇನೆಂಬ ಅರಿವು ಕೂಡ ಅವನಿಗಾಗುವುದಿಲ್ಲ. “ನನಗಾದ ಅನುಭವವು ನಾವು ಯಾರೊಂದಿಗೆ ಸಹವಾಸ ಮಾಡುತ್ತಿದ್ದೇವೆಂಬುದರ ಕುರಿತು ಯೋಚಿಸುವಂತೆ ಮಾಡಿತು” ಎನ್ನುತ್ತಾನೆ ಆ ಕ್ರೈಸ್ತ ಹಿರಿಯ ಜೋ. “ಸುರಕ್ಷಿತವೂ ಆಹ್ಲಾದಕರವೂ ಆದ ಸ್ಥಳದಲ್ಲಿ ಈಜಾಡಿರಿ, ಅಂದರೆ ಸಭೆಯ ಸಹವಾಸದಲ್ಲಿ ಈಜಾಡಿ!” ನೀರು ಆಳವಾಗಿ ಹರಿಯುವ ಅಗಾಧ ಸ್ಥಳದಲ್ಲಿ ಈಜಾಡಲು ಹೋಗಬೇಡಿ, ಇದರರ್ಥ ಲೋಕದ ಆಕರ್ಷಣೆಗಳು ನಿಮ್ಮನ್ನು ಸಭೆಯಿಂದ ದೂರಸರಿಸುವಂತೆ ಬಿಡಬೇಡಿ. ನೀವೆಂದಾದರೂ ಆ ಸನ್ನಿವೇಶದಲ್ಲಿರುವುದು ಕಂಡುಬಂದಲ್ಲಿ ಒಡನೇ ‘ಸುರಕ್ಷಿತವಾದ ನೀರಿಗೆ’ ಹಿಂತಿರುಗಿ ಬನ್ನಿ, ಅಂದರೆ ಸಭೆಯೊಂದಿಗಿನ ಸಹವಾಸವನ್ನು ಒಡನೆಯೇ ಪುನಃಸ್ಥಾಪಿಸಿಕೊಳ್ಳಿ. ಇಲ್ಲವಾದರೆ ಆಧ್ಯಾತ್ಮಿಕವಾಗಿ ಕಬಳಿಸಲ್ಪಟ್ಟು ಯೆಹೋವನೊಂದಿಗಿನ ನಿಮ್ಮ ಸುಸಂಬಂಧವನ್ನು ಗಂಡಾಂತರಕ್ಕೆ ಹಾಕೀರಿ.

3 ಇಂದು ಲೋಕವು ಕ್ರೈಸ್ತರಿಗೆ ಒಂದು ಅಪಾಯಕರ ಸ್ಥಳವಾಗಿದೆ. (2 ತಿಮೊ. 3:1-5) ತನ್ನ ದಿನಗಳು ಮುಗಿಯುತ್ತಾ ಬರುತ್ತಿವೆ ಎಂದು ಸೈತಾನನಿಗೆ ಗೊತ್ತು. ಎಚ್ಚರಿಕೆಯಿಂದ ಇರದವರನ್ನು ಕಬಳಿಸಿಬಿಡಲು ಅವನು ಹೊಂಚುಹಾಕುತ್ತಾ ತಿರುಗುತ್ತಿದ್ದಾನೆ. (1 ಪೇತ್ರ 5:8; ಪ್ರಕ. 12:12, 17) ಆದರೂ ನಾವು ಸಂರಕ್ಷಣೆರಹಿತರಾಗಿಲ್ಲ. ಯೆಹೋವನು ತನ್ನ ಜನರಿಗಾಗಿ ಸುರಕ್ಷಿತವಾದ ಆಧ್ಯಾತ್ಮಿಕ ಆಶ್ರಯಸ್ಥಾನವೊಂದನ್ನು, ಕ್ರೈಸ್ತ ಸಭೆಯನ್ನು ಒದಗಿಸಿದ್ದಾನೆ.

4, 5. ಅನೇಕರಿಗೆ ತಮ್ಮ ಭವಿಷ್ಯತ್ತಿನ ಕುರಿತು ಯಾವ ಭಾವನೆಯಿದೆ, ಮತ್ತು ಏಕೆ?

4 ಐಹಿಕ ಸಂಸ್ಥೆಗಳು ಶಾರೀರಿಕ ಅಥವಾ ಭಾವನಾತ್ಮಕ ಸುರಕ್ಷೆ ನೀಡಬಹುದು. ಆದರೆ ಅದು ಕೇವಲ ಸೀಮಿತ. ತಮ್ಮ ಶಾರೀರಿಕ ಸುರಕ್ಷೆಯು ಪಾತಕ, ಹಿಂಸಾಚಾರ, ಜೀವನದ ದುಬಾರಿ ವೆಚ್ಚಗಳು ಮತ್ತು ಪರಿಸರೀಯ ದುಷ್ಪರಿಣಾಮಗಳಿಂದ ಸಹ ಭಯ-ಬೆದರಿಕೆಗೆ ಒಳಗಾಗಿದೆ ಎಂದು ಅನೇಕರು ಭಾವಿಸುತ್ತಾರೆ. ಮುದಿಪ್ರಾಯ ಮತ್ತು ಅನಾರೋಗ್ಯದ ಸಮಸ್ಯೆಗಳು ಎಲ್ಲರನ್ನೂ ಬಾಧಿಸುತ್ತವೆ. ಅಲ್ಲದೆ ಉದ್ಯೋಗ, ಮನೆಮಠ, ಸಾಕಷ್ಟು ಹಣಕಾಸು, ತಕ್ಕಮಟ್ಟಿನ ಕ್ಷೇಮಾರೋಗ್ಯ ಇರುವ ಬೇರೆಯವರು ಸಹ ಇವೆಲ್ಲ ಇನ್ನೆಷ್ಟು ಕಾಲ ಬಾಳುವವೊ ಎಂಬ ಯೋಚನೆಗೀಡಾಗಬಹುದು.

5 ಅಂತೆಯೆ ಭಾವನಾತ್ಮಕ ಸುರಕ್ಷೆಯು ಸಹ ಅನೇಕರ ನಿಲುಕಿಗೆ ಮೀರಿದ್ದಾಗಿ ಇದೆ. ವಿವಾಹದಲ್ಲಿ ಹಾಗೂ ಕುಟುಂಬ ವೃತ್ತದೊಳಗೆ ಸಮಾಧಾನ ಸಂತೃಪ್ತಿಯನ್ನು ಕಂಡುಕೊಳ್ಳಲು ನಿರೀಕ್ಷಿಸಿದ್ದ ಅನೇಕಾನೇಕರು ತಮ್ಮ ಆಶೆಆಕಾಂಕ್ಷೆಗಳು ಕೈಗೂಡದೆ ಹೋಗಿರುವುದನ್ನು ಕಂಡಿರುವುದೂ ವಿಷಾದಕರ. ಆಧ್ಯಾತ್ಮಿಕ ಸುರಕ್ಷೆಯನ್ನು ಕಂಡುಕೊಳ್ಳುವ ವಿಷಯದಲ್ಲಾದರೊ ಅನೇಕ ಚರ್ಚ್‌ನಿಷ್ಠರು ತಮಗೆ ನೀಡಲಾದ ಮಾರ್ಗದರ್ಶನೆಯ ಔಚಿತ್ಯವನ್ನು ಪ್ರಶ್ನಿಸುತ್ತಾ ಗೊಂದಲಕ್ಕೀಡಾಗಿದ್ದಾರೆ. ಚರ್ಚ್‌ನಿಷ್ಠರಿಗೆ ತಮ್ಮ ಧಾರ್ಮಿಕ ಮುಖಂಡರ ನಿಂದನೀಯ ನಡವಳಿಕೆ ಮತ್ತು ಅಶಾಸ್ತ್ರೀಯ ಬೋಧನೆಗಳನ್ನು ಪರಿಗಣಿಸುವಾಗ ವಿಶೇಷವಾಗಿ ಹಾಗೆನಿಸುತ್ತದೆ. ಹೀಗಿರಲಾಗಿ ತಮಗಿರುವ ಒಂದೇ ಒಂದು ಆಯ್ಕೆಯು ವಿಜ್ಞಾನದಲ್ಲಿ ಮತ್ತು ಜೊತೆಮಾನವರ ಸೌಹಾರ್ದತೆ ಹಾಗೂ ಸದ್ಭಾವನೆಗಳಲ್ಲಿ ನಿರೀಕ್ಷೆ ಇಡುವುದೇ ಎಂದು ಹೆಚ್ಚಿನ ಜನರ ಭಾವನೆ. ಆದುದರಿಂದ ನಮ್ಮ ಸುತ್ತಮುತ್ತಲಿನ ಜನರು ತೀರ ಅಸುರಕ್ಷಿತರಾಗಿದ್ದೇವೆಂದು ನೆನಸುವುದು ಅಥವಾ ತಮ್ಮ ಭವಿಷ್ಯತ್ತಿನ ಕುರಿತು ಅತಿಯಾಗಿ ಚಿಂತಿಸದೇ ಇರುವುದು ಆಶ್ಚರ್ಯವೇನಲ್ಲ.

6, 7. (ಎ) ದೇವರ ಸೇವಕರು ಮತ್ತು ಸೇವಕರಲ್ಲದವರ ದೃಷ್ಟಿಕೋನದ ಮಧ್ಯೆಯಿರುವ ವ್ಯತ್ಯಾಸಕ್ಕೆ ಕಾರಣವೇನು? (ಬಿ) ನಾವೇನನ್ನು ಪರಿಗಣಿಸಲಿರುವೆವು?

6 ಕ್ರೈಸ್ತ ಸಭೆಯ ಭಾಗವಾಗಿರುವವರ ಮತ್ತು ಭಾಗವಾಗಿರದವರ ದೃಷ್ಟಿಕೋನದಲ್ಲಿ ಅದೆಂಥ ವ್ಯತ್ಯಾಸ! ಯೆಹೋವನ ಜನರಾಗಿರುವ ನಾವು ನಮ್ಮ ನೆರೆಯವರಂತೆ ಒಂದೇ ತರದ ಅನೇಕ ಸಮಸ್ಯೆಗಳನ್ನು ಮತ್ತು ಅಡಚಣೆಗಳನ್ನು ಎದುರಿಸಬೇಕಾದರೂ ನಾವು ತೋರಿಸುವ ಪ್ರತಿಕ್ರಿಯೆಯಲ್ಲಿ ತಾರತಮ್ಯವಿದೆ. (ಯೆಶಾಯ 65:13, 14; ಮಲಾಕಿಯ 3:18 ಓದಿ.) ಏಕೆ? ಏಕೆಂದರೆ ಮಾನವಕುಲವು ಅನುಭವಿಸುತ್ತಿರುವ ಪರಿಸ್ಥಿತಿಗಳಿಗೆ ತೃಪ್ತಿಕರ ಉತ್ತರವು ಬೈಬಲಿನಲ್ಲಿ ನಮಗೆ ದೊರೆತಿದೆ ಮತ್ತು ನಾವು ಜೀವನದ ಪಂಥಾಹ್ವಾನಗಳು ಹಾಗೂ ಸಮಸ್ಯೆಗಳನ್ನು ನಿಭಾಯಿಸಲು ಸುಸಜ್ಜಿತರಾಗಿದ್ದೇವೆ. ಫಲಿತಾಂಶವಾಗಿ ಭವಿಷ್ಯತ್ತಿನ ಕುರಿತು ನಾವು ಅತಿಯಾಗಿ ಚಿಂತಿಸುವುದಿಲ್ಲ. ಯೆಹೋವನ ಆರಾಧಕರಾಗಿರುವುದು ನಮಗೆ ಅಭದ್ರ ಹಾಗೂ ಅಶಾಸ್ತ್ರೀಯ ವಿವೇಚನೆಯಿಂದ, ಅನೈತಿಕ ಆಚಾರವಿಚಾರಗಳಿಂದ ಹಾಗೂ ಅವುಗಳಿಂದ ಬರುವ ದುಷ್ಪರಿಣಾಮಗಳಿಂದ ಸುರಕ್ಷೆಯನ್ನು ಒದಗಿಸಿದೆ. ಹೀಗೆ ಕ್ರೈಸ್ತ ಸಭೆಯ ಸದಸ್ಯರು ಇತರರಿಗೆ ಅಪರಿಚಿತವಾದ ಒಂದು ಮನೋಶಾಂತಿಯನ್ನು ಅನುಭವಿಸುತ್ತಾರೆ.—ಯೆಶಾ. 48:17, 18; ಫಿಲಿ. 4:6, 7.

7 ಯೆಹೋವನ ಸೇವಕರಲ್ಲದವರಿಗೆ ವ್ಯತ್ಯಾಸದಲ್ಲಿ ಯೆಹೋವನ ಸೇವಕರು ಆನಂದಿಸುವ ಸುರಕ್ಷೆಯನ್ನು ಪರ್ಯಾಲೋಚಿಸಲು ಕೆಲವು ಉದಾಹರಣೆಗಳು ನಮಗೆ ನೆರವಾಗಬಹುದು. ಈ ಉದಾಹರಣೆಗಳು ನಮ್ಮ ಸ್ವಂತ ವಿವೇಚನೆ ಹಾಗೂ ವಿಚಾರಗಳನ್ನು ಪರೀಕ್ಷಿಸುವಂತೆ ಮಾಡಿ, ನಮ್ಮ ಸಂರಕ್ಷಣೆಗಾಗಿ ರಚಿಸಲಾದ ದೇವರ ಸಲಹೆ ಸೂಚನೆಗಳನ್ನು ಹೆಚ್ಚು ಪೂರ್ಣವಾಗಿ ಅನ್ವಯಿಸಬಹುದೊ ಎಂದು ಪರಿಗಣಿಸುವಂತೆ ಪ್ರಚೋದಿಸಬಹುದು.—ಯೆಶಾ. 30:21.

“ನನ್ನ ಕಾಲುಗಳು ಜಾರಿದವುಗಳೇ

8. ಯೆಹೋವನ ಸೇವಕರಿಗೆ ಯಾವಾಗಲೂ ಏನನ್ನು ಮಾಡಬೇಕಾಗಿತ್ತು?

8 ಮಾನವ ಇತಿಹಾಸದ ಆರಂಭದಿಂದಲೇ ಯೆಹೋವನನ್ನು ಸೇವಿಸಲು ಮತ್ತು ವಿಧೇಯರಾಗಲು ಆರಿಸಿಕೊಂಡವರು ಯೆಹೋವನ ಸೇವಕರಲ್ಲದವರೊಂದಿಗೆ ಆಪ್ತ ಸಹವಾಸವನ್ನು ವರ್ಜಿಸಲು ಪ್ರಯತ್ನಿಸಿದ್ದರು. ತನ್ನ ಆರಾಧಕರ ಮತ್ತು ಸೈತಾನನ ಹಿಂಬಾಲಕರ ಮಧ್ಯೆ ವೈರತ್ವ ಇರುವುದೆಂದು ಯೆಹೋವನು ತಾನೇ ಸೂಚಿಸಿದ್ದನು. (ಆದಿ. 3:15) ದೇವಪ್ರೇರಿತ ಮೂಲತತ್ತ್ವಗಳಿಗಾಗಿ ಅವರ ದೃಢ ನಿಲುವಿನ ಕಾರಣ ದೇವಜನರು ತಮ್ಮ ಸುತ್ತಮುತ್ತ ಜೀವಿಸಿದ್ದ ಜನರಿಗಿಂತ ಭಿನ್ನವಾಗಿ ಕ್ರಿಯೆಗೈದಿದ್ದರು. (ಯೋಹಾ. 17:15, 16; 1 ಯೋಹಾ. 2:15-17) ಅಂಥ ನಿಲುವನ್ನು ತೆಗೆದುಕೊಳ್ಳುವುದು ಯಾವಾಗಲೂ ಸುಲಭವಿರಲಿಲ್ಲ. ನಿಶ್ಚಯವಾಗಿ ಯೆಹೋವನ ಸೇವಕರಲ್ಲಿ ಕೆಲವರು ಸ್ವತ್ಯಾಗದ ಜೀವನ ಮಾರ್ಗದ ಯುಕ್ತತೆಯ ಕುರಿತು ಕೆಲವೊಮ್ಮೆ ಆಕ್ಷೇಪಕ ಪ್ರಶ್ನೆಯನ್ನೆತ್ತಿದ್ದಾರೆ.

9. ಕೀರ್ತನೆ 73ರ ಲೇಖಕನಿಂದ ಎದುರಿಸಲಾದ ಹೋರಾಟವನ್ನು ವರ್ಣಿಸಿರಿ.

9 ತಾನು ಮಾಡಿದ ನಿರ್ಣಯಗಳು ವಿವೇಕಯುತವೊ ಅಲ್ಲವೊ ಎಂದು ಸಂದೇಹಪಡ ತೊಡಗಿದ ದೇವರ ಸೇವಕರಲ್ಲಿ ಒಬ್ಬನು ಯಾರೆಂದರೆ 73ನೇ ಕೀರ್ತನೆಯನ್ನು ಬರೆದ ಲೇಖಕನೇ. ಅವನು ಪ್ರಾಯಶಃ ಆಸಾಫನ ಸಂತತಿಯವರಲ್ಲಿ ಒಬ್ಬನಾಗಿದ್ದಿರಬಹುದು. ಈ ಕೀರ್ತನೆಗಾರನು ಪ್ರಶ್ನಿಸಿದ್ದೇನೆಂದರೆ ದುಷ್ಟರು ಹೆಚ್ಚಾಗಿ ಯಶಸ್ಸು, ಸುಖ, ಸಮೃದ್ಧಿಯಲ್ಲಿರುವಂತೆ ಕಾಣುವಾಗ ದೇವರ ಸೇವಕರಾಗಿರಲು ಪ್ರಯಾಸಪಡುವ ಕೆಲವರು ಕಷ್ಟಕಾರ್ಪಣ್ಯಗಳನ್ನು ಅನುಭವಿಸುವುದೇಕೆ ಎಂಬದಾಗಿ.—ಕೀರ್ತನೆ 73:1-13 ಓದಿ.

10. ಕೀರ್ತನೆಗಾರನು ಎಬ್ಬಿಸಿದ ವಿವಾದಾಂಶಗಳು ನಿಮಗೆ ವೈಯಕ್ತಿಕವಾಗಿ ಏಕೆ ಮಹತ್ವ?

10 ನೀವೆಂದಾದರೂ ಆ ಕೀರ್ತನೆಗಾರನು ದಾಖಲಿಸಿದಂಥಾದ್ದೇ ಪ್ರಶ್ನೆಗಳನ್ನು ಕೇಳಲು ತೊಡಗಿದ್ದೀರೊ? ಹಾಗಿದ್ದಲ್ಲಿ ನೀವು ಅತಿ ದೋಷಿಗಳೆಂದು ಭಾವಿಸುವ ಇಲ್ಲವೆ ನಿಮ್ಮ ನಂಬಿಕೆಯು ಮುಗ್ಗರಿಸುತ್ತಾ ಇದೆಯೆಂದು ನೆನಸುವ ಅಗತ್ಯವಿಲ್ಲ. ನಿಜ ಸಂಗತಿಯೇನಂದರೆ ಯೆಹೋವನ ಸೇವಕರಲ್ಲಿ ಹಲವಾರು ಮಂದಿ, ಬೈಬಲನ್ನು ಬರೆಯಲು ಯೆಹೋವನು ಬಳಸಿದ ಕೆಲವರು ಸಹ ಅದೇ ರೀತಿಯಲ್ಲಿ ಆಲೋಚಿಸಿದ್ದರು. (ಯೋಬ 21:7-13; ಕೀರ್ತ. 37:1; ಯೆರೆ. 12:1; ಹಬ. 1:1-4, 13) ನಿಶ್ಚಯವಾಗಿಯೂ ಯೆಹೋವನನ್ನು ಸೇವಿಸ ಬಯಸುವವರೆಲ್ಲರು, ‘ದೇವರನ್ನು ಸೇವಿಸುತ್ತಾ ಆತನಿಗೆ ವಿಧೇಯರಾಗುವುದು ಪರಮೋಚ್ಛ ವಿಷಯವೊ?’ ಎಂಬ ಈ ಪ್ರಶ್ನೆಯ ಕುರಿತು ಗಂಭೀರವಾಗಿ ಯೋಚಿಸಲೇಬೇಕು ಮತ್ತು ಅದಕ್ಕಿರುವ ಉತ್ತರವನ್ನು ಸ್ವೀಕರಿಸಬೇಕು. ಏಕೆಂದರೆ ಸೈತಾನನು ಏದೆನ್‌ ತೋಟದಲ್ಲಿ ಎಬ್ಬಿಸಿದ ವಿವಾದಾಂಶಕ್ಕೆ ಇದು ಸಂಬಂಧಿಸಿದೆ. ದೇವರ ಪರಮಾಧಿಕಾರದ ವಿಶ್ವವ್ಯಾಪಿ ಪ್ರಶ್ನೆಗೆ ಇದು ಕೇಂದ್ರಬಿಂದು. (ಆದಿ. 3:4, 5) ಹೀಗಿರಲಾಗಿ ಕೀರ್ತನೆಗಾರನು ಎಬ್ಬಿಸಿದ ಆ ಪ್ರಶ್ನಾವಿಷಯವನ್ನು ಪರಿಗಣಿಸುವುದು ನಮಗೆಲ್ಲರಿಗೆ ಹಿತಕರ. ಸದಾ ಸುಖದಿಂದಿದ್ದು ಸಮಸ್ಯೆರಹಿತರಾಗಿ ತೋರುತ್ತಾ ಹೆಮ್ಮೆಕೊಚ್ಚುವ ದುಷ್ಟರನ್ನು ಕಂಡು ನಾವು ಉರಿಗೊಳ್ಳಬೇಕೊ? ಅವರ ಮಾರ್ಗವನ್ನು ಅನುಕರಿಸುತ್ತಾ ಯೆಹೋವನ ಸೇವೆಯಿಂದ ನಾವು “ಜಾರಿ”ಕೊಳ್ಳಬೇಕೊ? ಸೈತಾನನು ನಮ್ಮಿಂದ ಮಾಡಿಸಲು ಬಯಸುವುದು ಅದನ್ನೇ ಖಂಡಿತ.

11, 12. (ಎ) ಕೀರ್ತನೆಗಾರನು ತನ್ನ ಸಂದೇಹಗಳನ್ನು ನಿವಾರಿಸಿಕೊಂಡದ್ದು ಹೇಗೆ, ಮತ್ತು ಇದು ನಮಗೇನನ್ನು ಕಲಿಸುತ್ತದೆ? (ಬಿ) ಕೀರ್ತನೆಗಾರನು ಮಾಡಿದ ಅದೇ ತೀರ್ಮಾನಕ್ಕೆ ಬರಲು ನಿಮಗೆ ವೈಯಕ್ತಿಕವಾಗಿ ಯಾವುದು ಸಹಾಯಮಾಡಿದೆ?

11 ಕೀರ್ತನೆಗಾರನು ತನ್ನ ಸಂದೇಹಗಳನ್ನು ಪರಿಹರಿಸುವಂತೆ ಸಹಾಯಮಾಡಿದ್ದು ಯಾವುದು? ನೀತಿಯ ಕ್ರಿಯೆಗಳನ್ನು ನಡಿಸುವುದರಿಂದ ತಾನು ಬಹುತೇಕ ಜಾರಿಹೋದೆನು ಎಂದವನು ಒಪ್ಪಿಕೊಂಡರೂ ಅವನ ದೃಷ್ಟಿಕೋನವು ಬದಲಾದದ್ದು ಅವನು “ದೇವಾಲಯಕ್ಕೆ” ಹೋದಾಗಲೇ ಅಂದರೆ ದೇವರ ಗುಡಾರ ಅಥವಾ ಆಲಯದಲ್ಲಿ ಆಧ್ಯಾತ್ಮಿಕ ಜನರೊಂದಿಗೆ ಸಹವಾಸ ಮಾಡುತ್ತಾ ದೇವರ ಉದ್ದೇಶದ ಕುರಿತು ಪರ್ಯಾಲೋಚಿಸಿದಾಗಲೇ. ಆಗ ಕೀರ್ತನೆಗಾರನಿಗೆ, ದುಷ್ಟರಿಗೆ ಬರುವ ಅಂತ್ಯಾವಸ್ಥೆಯಲ್ಲಿ ತನಗೆ ಪಾಲು ಬೇಡ ಎಂಬದು ಮನದಟ್ಟಾಯಿತು. ಅವರ ಜೀವನ ಮಾರ್ಗ ಮತ್ತು ಆಯ್ಕೆಗಳು ಅವರನ್ನು “ಅಪಾಯಕರ ಸ್ಥಳದಲ್ಲಿ” ಹಾಕಿತ್ತು ಎಂದವನು ಕಾಣಶಕ್ತನಾದನು. ಯೆಹೋವನನ್ನು ಪಾಪತನದಿಂದ ಬಿಟ್ಟವರೆಲ್ಲರು ‘ನಿಮಿಷಮಾತ್ರದಲ್ಲಿ ಭಯಂಕರ ರೀತಿಯಲ್ಲಿ’ ಮುಗಿದುಹೋಗುವಾಗ ಯೆಹೋವನನ್ನು ಸೇವಿಸುವವರಾದರೊ ಆತನಿಂದ ಆಶ್ರಯಿಸಲ್ಪಡುವರು ಎಂಬದನ್ನು ಕೀರ್ತನೆಗಾರನು ಗ್ರಹಿಸಿಕೊಂಡನು. (ಕೀರ್ತನೆ 73:16-19, 27, 28 ಓದಿ.) ಆ ಹೇಳಿಕೆಯ ಸತ್ಯತೆಯನ್ನು ನೀವು ಕಂಡಿದ್ದೀರಿ ಎಂಬದಕ್ಕೆ ಸಂಶಯವಿಲ್ಲ. ದೈವಿಕ ನಿಯಮಕ್ಕಾಗಿ ಯಾವ ಪರಿಗಣನೆಯೂ ಇಲ್ಲದೆ ತಮ್ಮ ಸ್ವಾರ್ಥಕ್ಕಾಗಿಯೇ ಜೀವಿಸುವುದು ಅನೇಕರಿಗೆ ಆಕರ್ಷಣೀಯವಾಗಿ ಕಾಣಬಹುದು. ಆದರೆ ಅವರು ಅಂಥ ಮಾರ್ಗಕ್ರಮದ ದುಷ್ಫಲಗಳನ್ನು ಭೋಗಿಸಿಯೇ ತೀರಬೇಕು.—ಗಲಾ. 6:7-9.

12 ಕೀರ್ತನೆಗಾರನ ಅನುಭವದಿಂದ ನಾವು ಬೇರೇನನ್ನು ಕಲಿಯುತ್ತೇವೆ? ಅವನು ದೇವಜನರ ಮಧ್ಯದಲ್ಲಿ ಸುರಕ್ಷೆಯನ್ನೂ ವಿವೇಕವನ್ನೂ ಕಂಡುಕೊಂಡನು. ಯೆಹೋವನ ಆರಾಧನಾ ಸ್ಥಳಕ್ಕೆ ಹೋದಾಗ ಅವನು ಸ್ವಸ್ಥಚಿತ್ತದಿಂದ ಮತ್ತು ತರ್ಕಬದ್ಧವಾಗಿ ವಿವೇಚನೆ ಮಾಡತೊಡಗಿದನು. ತದ್ರೀತಿಯಲ್ಲಿ ನಾವು ಇಂದು ಸಭಾ ಕೂಟಗಳಲ್ಲಿ ವಿವೇಕಿಗಳಾದ ಸಲಹೆಗಾರರನ್ನು ಕಂಡುಕೊಂಡು ನೀಡಲ್ಪಡುವ ಪೌಷ್ಟಿಕ ಆಧ್ಯಾತ್ಮಿಕ ಆಹಾರದಲ್ಲಿ ಆನಂದಿಸಬಲ್ಲೆವು. ಆದುದರಿಂದ ಕ್ರೈಸ್ತ ಕೂಟಗಳಿಗೆ ಹಾಜರಾಗುವಂತೆ ಯೆಹೋವನು ಸಕಾರಣದಿಂದಲೇ ತನ್ನ ಸೇವಕರಿಗೆ ಹೇಳುತ್ತಾನೆ. ಅಲ್ಲಿ ಅವರು ಉತ್ತೇಜನವನ್ನು ಪಡಕೊಂಡವರಾಗಿ ವಿವೇಕದಿಂದ ಕ್ರಿಯೆಗೈಯುವಂತೆ ಪ್ರಚೋದಿಸಲ್ಪಡುವರು.—ಯೆಶಾ. 32:1, 2; ಇಬ್ರಿ. 10:24, 25.

ಸಂಗಡಿಗರನ್ನು ವಿವೇಕದಿಂದ ಆರಿಸಿಕೊಳ್ಳಿ

13-15. (ಎ) ದೀನಳಿಗೆ ಆದ ಅನುಭವವೇನು, ಅದೇನನ್ನು ಸ್ಪಷ್ಟಪಡಿಸಿತು? (ಬಿ) ಜೊತೆ ಕ್ರೈಸ್ತರೊಂದಿಗಿನ ಸಹವಾಸವು ಒಂದು ಸಂರಕ್ಷಣೆಯಾಗಿದೆ ಏಕೆ?

13 ಲೋಕದ ಸಂಗಡಿಗರೊಂದಿಗೆ ಸಹವಾಸಮಾಡಿದ ಕಾರಣ ಗಂಭೀರ ತೊಂದರೆಗೆ ಸಿಕ್ಕಿಬಿದ್ದವರಲ್ಲಿ ಯಾಕೋಬನ ಪುತ್ರಿ ದೀನಳ ಉದಾಹರಣೆ ಒಂದು. ಅವಳ ಕುಟುಂಬವು ವಾಸಿಸಿದ್ದ ಕ್ಷೇತ್ರದಲ್ಲಿ ಯುವ ಕಾನಾನ್ಯ ಸ್ತ್ರೀಯರ ಸಹವಾಸಮಾಡುವ ಹವ್ಯಾಸ ಅವಳಿಗಿತ್ತೆಂದು ಆದಿಕಾಂಡ ವೃತ್ತಾಂತವು ನಮಗೆ ತಿಳಿಸುತ್ತದೆ. ಕಾನಾನ್ಯರಿಗೆ ಯೆಹೋವನ ಆರಾಧಕರಿಗಿದ್ದ ಅದೇ ಉಚ್ಛ ನೈತಿಕ ನೀತಿನಿಯಮಗಳಿರಲಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ, ಕಾನಾನ್ಯರ ಮಾರ್ಗಕ್ರಮವು ಅವರ ದೇಶವನ್ನು ವಿಗ್ರಹಾರಾಧನೆ, ಅನೈತಿಕತೆ, ಭ್ರಷ್ಟ ಲಿಂಗಾರಾಧನೆ ಮತ್ತು ಹಿಂಸಾಚಾರದಿಂದ ತುಂಬಿಸಿತ್ತೆಂದು ಅಗೆತಶಾಸ್ತ್ರಜ್ಞರ ಕಂಡುಹಿಡಿತವು ಸೂಚಿಸುತ್ತದೆ. (ವಿಮೋ. 23:23; ಯಾಜ. 18:2-25; ಧರ್ಮೋ. 18:9-12) ಇಂಥ ಜನರೊಂದಿಗೆ ದೀನಳು ಮಾಡಿದ ಸಹವಾಸದ ಫಲಿತಾಂಶವನ್ನು ನೆನಪಿಗೆ ತನ್ನಿರಿ.

14 “ತನ್ನ ತಂದೆಯ ಮನೆಯವರೆಲ್ಲರಲ್ಲಿ ಘನವಂತ”ನೆಂದು ಹೇಳಲಾದ ಶೆಕೆಮನೆಂಬ ಸ್ಥಳೀಕ ಪುರುಷನು ದೀನಳನ್ನು ನೋಡಿ ಅವಳನ್ನು “ತೆಗೆದುಕೊಂಡು ಹೋಗಿ ಕೂಡಿ ಮಾನಭಂಗಪಡಿಸಿದನು.” (ಆದಿ. 34:1, 2, 19) ಎಂಥ ದುರಂತ! ತನಗೆ ಅಂಥ ಒಂದು ದುರವಸ್ಥೆ ಸಂಭವಿಸಬಹುದೆಂದು ದೀನಳು ಎಂದಾದರೂ ಊಹಿಸಿದ್ದಳೆಂದು ನೀವು ನೆನಸುತ್ತೀರೊ? ಪ್ರಾಯಶಃ ನಿರುಪದ್ರವಿಗಳೆಂದು ನೆನಸಿದ್ದ ಸ್ಥಳೀಕ ಯುವಜನರ ಸ್ನೇಹವನ್ನು ಅವಳು ಕೋರುತ್ತಿದ್ದಳು ಅಷ್ಟೇ. ಆದರೂ ದೀನಳು ತನ್ನನ್ನು ಪೂರಾ ರೀತಿಯಲ್ಲಿ ವಂಚಿಸಿಕೊಂಡಳು.

15 ಈ ವೃತ್ತಾಂತವು ನಮಗೆ ಏನನ್ನು ಕಲಿಸುತ್ತದೆ? ಏನೆಂದರೆ ನಾವು ಅವಿಶ್ವಾಸಿಗಳೊಂದಿಗೆ ಸಹವಾಸಮಾಡಿಯೂ ಅದರಿಂದಾಗುವ ದುಷ್ಪರಿಣಾಮಗಳಿಂದ ತಪ್ಪಿಸಿಕೊಂಡೇವೆಂದು ನಿರೀಕ್ಷಿಸಸಾಧ್ಯವಿಲ್ಲ. “ದುಸ್ಸಹವಾಸಗಳು ಸದಾಚಾರಗಳನ್ನು ಕೆಡಿಸುತ್ತವೆ” ಎಂದು ಶಾಸ್ತ್ರಗ್ರಂಥವು ತಿಳಿಸುತ್ತದೆ. (1 ಕೊರಿಂ. 15:33) ಇನ್ನೊಂದು ಕಡೆ ನಿಮ್ಮ ನಂಬಿಕೆಗಳಲ್ಲಿ, ಉಚ್ಛ ನೈತಿಕ ಮಟ್ಟದಲ್ಲಿ ಮತ್ತು ಯೆಹೋವನ ಮೇಲಿನ ಪ್ರೀತಿಯಲ್ಲಿ ಪಾಲಿಗರಾಗಿರುವ ಜನರ ಸಹವಾಸವಾದರೊ ಸುರಕ್ಷೆಯನ್ನು ನೀಡುವಂಥದ್ದು. ಅಂಥ ಸುಸಹವಾಸವು ವಿವೇಕದಿಂದ ಕ್ರಿಯೆಗೈಯುವಂತೆ ನಿಮ್ಮನ್ನು ಪ್ರೋತ್ಸಾಹಿಸುವವು.—ಜ್ಞಾನೋ. 13:20.

“ನೀವು ತೊಳೆದು ಶುದ್ಧೀಕರಿಸಲ್ಪಟ್ಟಿದ್ದೀರಿ”

16. ಕೊರಿಂಥ ಸಭೆಯ ಕೆಲವರ ಕುರಿತು ಅಪೊಸ್ತಲ ಪೌಲನು ಏನು ಹೇಳಿದನು?

16 ಅಶುದ್ಧ ಕೃತ್ಯಗಳಿಂದ ತಮ್ಮನ್ನು ಶುದ್ಧೀಕರಿಸಿಕೊಳ್ಳುವಂತೆ ಕ್ರೈಸ್ತ ಸಭೆಯು ಅನೇಕರಿಗೆ ಸಹಾಯ ಮಾಡಿದೆ. ಕೊರಿಂಥದ ಸಭೆಗೆ ತನ್ನ ಮೊದಲನೆ ಪತ್ರವನ್ನು ಬರೆದಾಗ, ದೇವರ ನೀತಿಯ ಮಟ್ಟಗಳಿಗೆ ಹೊಂದಿಕೆಯಲ್ಲಿ ಜೀವಿಸಲಿಕ್ಕಾಗಿ ಅಲ್ಲಿನ ಕ್ರೈಸ್ತರು ಮಾಡಿದ್ದ ಬದಲಾವಣೆಗಳ ಕುರಿತು ಅಪೊಸ್ತಲ ಪೌಲನು ತಿಳಿಸಿದನು. ಅವರಲ್ಲಿ ಕೆಲವರು ಜಾರರು, ವಿಗ್ರಹಾರಾಧಕರು, ವ್ಯಭಿಚಾರಿಗಳು, ಸಲಿಂಗಕಾಮಿಗಳು, ಕಳ್ಳರು, ಕುಡುಕರು ಆಗಿದ್ದರು. “ಆದರೆ ನೀವು ತೊಳೆದು ಶುದ್ಧೀಕರಿಸಲ್ಪಟ್ಟಿದ್ದೀರಿ” ಎಂದು ಹೇಳಿದನು ಪೌಲನು ಅವರಿಗೆ.—1 ಕೊರಿಂಥ 6:9-11 ಓದಿ.

17. ಬೈಬಲಿನ ನೀತಿಯ ಮಟ್ಟಗಳಿಗೆ ಹೊಂದಿಕೆಯಲ್ಲಿ ಜೀವಿಸುವುದು ಹೇಗೆ ಅನೇಕರ ಜೀವನಗಳನ್ನು ಬದಲಾಯಿಸಿದೆ?

17 ನಂಬಿಕೆಯಿಲ್ಲದ ಜನರಲ್ಲಿ ಸೂಕ್ತವಾದ ಮಾರ್ಗದರ್ಶಕ ಸೂತ್ರಗಳಿಲ್ಲ. ಅವರು ತಮ್ಮ ಸ್ವಂತ ಮಾರ್ಗಕ್ರಮವನ್ನು ಅನುಸರಿಸುತ್ತಾರೆ. ಇಲ್ಲವೆ ಅವರು ಪುರಾತನ ಕೊರಿಂಥದ ಜನರಲ್ಲಿ ಕೆಲವರು ವಿಶ್ವಾಸಿಗಳಾಗುವ ಮುಂಚೆ ಮಾಡಿದ್ದಂತೆ, ಲೋಕದ ಅನೈತಿಕ ಕೃತ್ಯಗಳ ಕಡಲಲ್ಲಿ ಹೊಯ್ದಾಡುತ್ತಿರಲೂಬಹುದು. (ಎಫೆ. 4:14) ಆದರೆ ದೇವರ ವಾಕ್ಯದ ಮತ್ತು ಉದ್ದೇಶಗಳ ನಿಷ್ಕೃಷ್ಟ ಜ್ಞಾನಕ್ಕಾದರೊ ಶಾಸ್ತ್ರಗ್ರಂಥದ ಮಾರ್ಗದರ್ಶನೆಯನ್ನು ಅನ್ವಯಿಸುವ ಎಲ್ಲರ ಜೀವಿತಗಳನ್ನು ಒಳ್ಳೇದಕ್ಕಾಗಿ ಬದಲಾಯಿಸುವ ಶಕ್ತಿಯಿದೆ. (ಕೊಲೊ. 3:5-10; ಇಬ್ರಿ. 4:12) ತಾವು ಯೆಹೋವನ ನೀತಿಯುಳ್ಳ ಮಟ್ಟಗಳ ಕುರಿತು ಕಲಿಯುವ ಹಾಗೂ ಅನ್ವಯಿಸುವ ಮುಂಚೆ ಸ್ವೇಚ್ಛಾಚಾರದ ಜೀವನವನ್ನು ನಡಿಸಿದ್ದರೆಂದು ಇಂದು ಕ್ರೈಸ್ತ ಸಭೆಯ ಸದಸ್ಯರಾಗಿರುವ ಅನೇಕರು ತಿಳಿಸಬಲ್ಲರು. ಮುಂಚೆ ಅಂಥ ಜೀವನ ನಡೆಸಿದ್ದರೂ ಅವರು ಅಸಂತೋಷಿತರೂ ಅಸಂತೃಪ್ತರೂ ಆಗಿದ್ದರು. ದೇವಜನರೊಂದಿಗೆ ಸಹವಾಸಿಸಲು ತೊಡಗಿದಾಗ ಮತ್ತು ಬೈಬಲ್‌ ಮೂಲತತ್ತ್ವಗಳಿಗನುಸಾರ ಜೀವಿಸಿದಾಗ ಮಾತ್ರವೇ ಅವರು ಶಾಂತಿ ಸಮಾಧಾನವನ್ನು ಕಂಡುಕೊಂಡರು.

18. ಒಬ್ಬಾಕೆ ಯುವತಿಗೆ ಯಾವ ಅನುಭವವಾಯಿತು, ಅದೇನನ್ನು ಸಾಬೀತುಪಡಿಸುತ್ತದೆ?

18 ಇದಕ್ಕೆ ವ್ಯತ್ಯಾಸದಲ್ಲಿ ಹಿಂದೆ ಕ್ರೈಸ್ತ ಸಭೆಯ ‘ಸುರಕ್ಷಿತ ನೀರನ್ನು’ ಬಿಟ್ಟುಹೋಗಲು ಆಯ್ಕೆಮಾಡಿದ ಕೆಲವರು ತಾವು ಮಾಡಿದ ಆ ನಿರ್ಣಯಕ್ಕಾಗಿ ಈಗ ಅತಿ ವಿಷಾದಪಡುತ್ತಾರೆ. ಟಾನ್ಯ ಎಂಬ ಹೆಸರಿನ ಒಬ್ಬಾಕೆ ಸಹೋದರಿ ತಾನು “ಸತ್ಯದಲ್ಲಿ ಬೆಳೆದು ದೊಡ್ಡವಳಾದೆ” ಎಂದು ಹೇಳುತ್ತಾಳೆ. * ಆದರೆ 16ನೆಯ ವಯಸ್ಸಿನಲ್ಲಿ “ಲೋಕದ ಆಕರ್ಷಣೆಗಳನ್ನು ಬೆನ್ನಟ್ಟಲು” ಸಭೆಯನ್ನು ಬಿಟ್ಟುಹೋದೆನೆಂದೂ ವಿವರಿಸುತ್ತಾಳೆ. ಅವಳು ಅನುಭವಿಸಿದ ದುಷ್ಪರಿಮಾಣಗಳಲ್ಲಿ ಅನಪೇಕ್ಷಿತ ಬಸಿರು ಮತ್ತು ಗರ್ಭಪಾತ ಸೇರಿತ್ತು. ಅವಳು ಈಗ ಹೇಳುವುದು: “ಸಭೆಯನ್ನು ಬಿಟ್ಟು ದೂರವಿದ್ದ ಮೂರು ವರ್ಷಗಳು ನನ್ನಲ್ಲಿ ಭಾವನಾತ್ಮಕವಾಗಿ ಅಳಿಸಲಾಗದ ವಿಕಾರ ಮಚ್ಚೆಗಳನ್ನು ಹಾಕಿವೆ. ನನ್ನನ್ನು ಬಿಡದೆ ಕಾಡುತ್ತಿರುವ ಒಂದು ವಿಷಯವು ನನ್ನ ಅಜಾತ ಶಿಶುವಿನ ಹತ್ಯೆಯನ್ನು ನಾನು ಮಾಡಿದ್ದೇ. . . . ಲೋಕ ನೀಡುವ ‘ಸವಿ’ಯನ್ನು ಒಂದು ಕ್ಷಣಕ್ಕಾದರೂ ಅನುಭವಿಸಲು ಬಯಸುತ್ತಿರುವ ಯುವ ಜನರೆಲ್ಲರಿಗೆ ನಾನು ಹೇಳಬಯಸುವುದು: ‘ಬೇಡವೇ ಬೇಡ!’ ಮೊದಮೊದಲು ಆ ‘ಸವಿ’ ರುಚಿಕರವಾಗಿ ಕಂಡೀತು. ಆದರೆ ಕೊನೆಗೆ ಅತ್ಯಂತ ಕಹಿಯಾದ ಅನುಭವದಲ್ಲಿ ಕೊನೆಗೊಳ್ಳುತ್ತದೆ. ಈ ಲೋಕವು ನಮಗೆ ದುರವಸ್ಥೆಯನ್ನಲ್ಲದೆ ಮತ್ತೇನನ್ನೂ ನೀಡಲಾರದು. ನನಗದು ಗೊತ್ತಿದೆ. ನಾನದನ್ನು ಸವಿದಿದ್ದೇನೆ. ಯೆಹೋವನ ಸಂಘಟನೆಯಲ್ಲಿ ನೆಲೆನಿಲ್ಲಿರಿ! ಸಂತೋಷವನ್ನು ತರುವ ಜೀವನ ಮಾರ್ಗವು ಅದೊಂದೇ.”

19, 20. ಕ್ರೈಸ್ತ ಸಭೆಯು ಯಾವ ಸಂರಕ್ಷಣೆಯನ್ನು ನೀಡುತ್ತದೆ, ಮತ್ತು ಹೇಗೆ?

19 ಕ್ರೈಸ್ತ ಸಭೆಯ ಸಂರಕ್ಷಕ ಪರಿಸರವನ್ನು ತೊರೆದುಬಿಟ್ಟಲ್ಲಿ ನಿಮ್ಮ ಸ್ಥಿತಿ ಏನಾಗಬಹುದೆಂದು ತುಸು ಯೋಚಿಸಿ. ಸತ್ಯವನ್ನು ಸ್ವೀಕರಿಸುವ ಮುಂಚೆ ತಾವು ನಡೆಸಿದ್ದ ವ್ಯರ್ಥ ಮಾರ್ಗಕ್ರಮವನ್ನು ನೆನಪಿಸಿಕೊಳ್ಳುವ ವಿಚಾರವೇ ಅನೇಕರಲ್ಲಿ ತೀವ್ರ ಜುಗುಪ್ಸೆಯನ್ನುಂಟು ಮಾಡುತ್ತದೆ. (ಯೋಹಾ. 6:68, 69) ನಿಮ್ಮ ಕ್ರೈಸ್ತ ಸಹೋದರ ಸಹೋದರಿಯರ ಆಪ್ತ ಸಹವಾಸದಲ್ಲಿ ಉಳಿಯುವ ಮೂಲಕ ಸೈತಾನನ ಲೋಕದಲ್ಲಿ ಸರ್ವ ಸಾಮಾನ್ಯವಾಗಿರುವ ಕೇಡು ದುರವಸ್ಥೆಗಳಿಂದ ಸುರಕ್ಷೆ ಮತ್ತು ಸಂರಕ್ಷಣೆಯನ್ನು ನೀವು ಪಡೆಯುತ್ತಾ ಇರಬಲ್ಲಿರಿ. ಅವರೊಂದಿಗೆ ಸಹವಾಸ ಮತ್ತು ಸಭಾ ಕೂಟಗಳ ಕ್ರಮದ ಹಾಜರಿಯು ಯೆಹೋವನ ನೀತಿಯ ಮಟ್ಟಗಳ ಸುಜ್ಞತೆಯನ್ನು ನಿಮಗೆ ಸದಾ ನೆನಪಿಸುತ್ತಾ ಅವುಗಳಿಗೆ ಹೊಂದಿಕೆಯಲ್ಲಿ ಜೀವಿಸುವಂತೆ ಉತ್ತೇಜನವನ್ನೀಯುವುದು. ಆಗ ಕೀರ್ತನೆಗಾರನು ಮಾಡಿದಂತೆ “ಮಹಾಸಭೆಯಲ್ಲಿ [ಯೆಹೋವನನ್ನು] ಕೊಂಡಾಡಲು” ನಿಮಗೆ ಸಕಾರಣವಿರುವದು.—ಕೀರ್ತ. 35:18.

20 ಬೇರೆ ಬೇರೆ ಕಾರಣಗಳಿಂದಾಗಿ ತಮ್ಮ ಕ್ರೈಸ್ತ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಕಷ್ಟಕರವಾಗಿ ತೋರುವ ಸಂದರ್ಭಗಳನ್ನು ಕ್ರೈಸ್ತರೆಲ್ಲರು ಎದುರಿಸುತ್ತಾರೆ. ಅವರಿಗೆ ಸರಿಯಾದ ಮಾರ್ಗವನ್ನು ತೋರಿಸಿಕೊಡುವುದಷ್ಟೆ ಸಾಕಾಗಬಹುದು. ಅಂಥ ಸಮಯದಲ್ಲಿ ನಿಮ್ಮ ಜೊತೆ ವಿಶ್ವಾಸಿಗಳಿಗೆ ಸಹಾಯ ಮಾಡಲು ನೀವು ಹಾಗೂ ನಿಶ್ಚಯವಾಗಿ ಸಭೆಯಲ್ಲಿರುವ ಇತರರು ಏನು ಮಾಡಸಾಧ್ಯವಿದೆ? ನಿಮ್ಮ ಸಹೋದರರನ್ನು ನೀವು ಹೇಗೆ ‘ಸಾಂತ್ವನಗೊಳಿಸುತ್ತಾ ಭಕ್ತಿವೃದ್ಧಿಮಾಡುತ್ತಾ’ ಇರಬಲ್ಲಿರಿ ಎಂಬುದನ್ನು ಮುಂದಿನ ಲೇಖನವು ಪರಿಶೀಲಿಸುವುದು.—1 ಥೆಸ. 5:11.

[ಪಾದಟಿಪ್ಪಣಿ]

^ ಪ್ಯಾರ. 18 ಹೆಸರನ್ನು ಬದಲಾಯಿಸಲಾಗಿದೆ.

ನಿಮ್ಮ ಉತ್ತರವೇನು?

• ಕೀರ್ತನೆ 73ರ ಲೇಖಕನ ಅನುಭವಗಳಿಂದ ನಾವೇನನ್ನು ಕಲಿಯುತ್ತೇವೆ?

• ದೀನಳ ಅನುಭವವು ನಮಗೇನನ್ನು ಕಲಿಸುತ್ತದೆ?

• ಕ್ರೈಸ್ತ ಸಭೆಯಲ್ಲಿ ಸುರಕ್ಷೆಯನ್ನು ನೀವೇಕೆ ಕಂಡುಕೊಳ್ಳಬಲ್ಲಿರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 7ರಲ್ಲಿರುವ ಚಿತ್ರಗಳು]

ಎಲ್ಲಿ ಸುರಕ್ಷಿತವೊ ಅಲ್ಲಿ ಈಜಾಡಿ; ಸಭೆಯೊಂದಿಗೆ ನೆಲೆನಿಲ್ಲಿ!