ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರೀತಿಯಲ್ಲಿ ಐಕ್ಯರು ವಾರ್ಷಿಕ ಕೂಟದ ವರದಿ

ಪ್ರೀತಿಯಲ್ಲಿ ಐಕ್ಯರು ವಾರ್ಷಿಕ ಕೂಟದ ವರದಿ

ಪ್ರೀತಿಯಲ್ಲಿ ಐಕ್ಯರು ವಾರ್ಷಿಕ ಕೂಟದ ವರದಿ

ಅಮೆರಿಕದ ನ್ಯೂ ಜೆರ್ಸಿಯ ಜೆರ್ಸಿ ಸಿಟಿಯಲ್ಲಿರುವ ಯೆಹೋವನ ಸಾಕ್ಷಿಗಳ ಅಸೆಂಬ್ಲಿ ಹಾಲ್‌ನಲ್ಲಿ ಸಂಭ್ರಮ ತುಂಬಿತ್ತು. ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಪೆನ್ಸಿಲ್‌ವೇನಿಯದ 125ನೇ ವಾರ್ಷಿಕ ಕೂಟಕ್ಕಾಗಿ 2009ರ ಅಕ್ಟೋಬರ್‌ 3ರಂದು 5,000ಕ್ಕಿಂತಲೂ ಹೆಚ್ಚು ಜನರು ಕೂಡಿಬಂದಿದ್ದರು. ಇತರ ಸಾವಿರಾರು ಮಂದಿ ಅಮೆರಿಕದ ಮೂರು ಬೆತೆಲ್‌ ಭಾಗಗಳಲ್ಲಿ ಹಾಗೂ ಕೆನಡದ ಬೆತೆಲ್‌ನಲ್ಲಿ ಆಡಿಯೊ/ವಿಡಿಯೊ ಸಂಪರ್ಕದ ಮೂಲಕ ಕಾರ್ಯಕ್ರಮವನ್ನು ಆಲಿಸಿದರು/ವೀಕ್ಷಿಸಿದರು. ಹೀಗೆ ಯೆಹೋವನ ಪ್ರೀತಿಯಲ್ಲಿ ಐಕ್ಯರಾದ 13,235 ಮಂದಿ ಮೂರು ತಾಸುಗಳ ಕಾರ್ಯಕ್ರಮವನ್ನು ಆನಂದಿಸಿದರು.

ಆಡಳಿತ ಮಂಡಲಿಯ ಸದಸ್ಯರಾದ ಸಹೋದರ ಜೆಫ್ರಿ ಜಾಕ್ಸನ್‌ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅವರು ಬೆತೆಲಿಗರಿಂದ ಕೂಡಿದ ಒಂದು ಗಾನಮೇಳವನ್ನು ಪರಿಚಯಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು. ಈ ಗುಂಪು ನಮ್ಮ ಹೊಸ ಗೀತೆ ಪುಸ್ತಕದಿಂದ ಹಾಡುಗಳನ್ನು ಹಾಡಿತು. ಆಡಳಿತ ಮಂಡಲಿಯ ಇನ್ನೊಬ್ಬ ಸದಸ್ಯರಾದ ಸಹೋದರ ಡೇವಿಡ್‌ ಸ್ಪ್ಲೇನ್‌ರವರು ಗಾನಮೇಳವನ್ನು ನಿರ್ದೇಶಿಸಿದರು ಮತ್ತು ಸಂಗೀತಕ್ಕೆ ಶುದ್ಧಾರಾಧನೆಯಲ್ಲಿ ಇರುವ ಪ್ರಾಮುಖ್ಯತೆಯನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಕೂಟದಲ್ಲಿ ಮೂರು ಹೊಸ ಗೀತೆಗಳನ್ನು ಹಾಡುವಂತೆ ಸಭಿಕರನ್ನು ಆಮಂತ್ರಿಸಲಾಯಿತು. ಮೊದಲು ಆ ಗೀತೆಗಳನ್ನು ಗಾನಮೇಳವು ಹಾಡಿತು, ತದನಂತರ ಗಾನಮೇಳ ಹಾಗೂ ಸಭಿಕರು ಒಟ್ಟಾಗಿ ಸ್ವರಮೇಳಿಸಿ ಹಾಡಿದರು. ಗಾನಮೇಳದ ಉಪಯೋಗವು ಕೇವಲ ಈ ವಿಶೇಷ ಕೂಟಕ್ಕಾಗಿ ಮಾತ್ರವಿತ್ತು. ಇದನ್ನು ಕ್ರೈಸ್ತ ಕೂಟಗಳಲ್ಲಿ, ಸಮ್ಮೇಳನಗಳಲ್ಲಿ ಹಾಗೂ ಅಧಿವೇಶನಗಳಲ್ಲಿ ನಮೂನೆಯಾಗಿ ಪರಿಗಣಿಸಿ ಅನುಸರಿಸಬಾರದು.

ಬ್ರಾಂಚ್‌ಗಳ ವರದಿ

ಸಂದರ್ಶಕ ಬ್ರಾಂಚ್‌ ಕಮಿಟಿ ಸದಸ್ಯರು ಐದು ಬ್ರಾಂಚ್‌ಗಳ ವರದಿಯನ್ನು ಕೊಟ್ಟರು. ಬೇಗನೆ ಕೆನಡದ ಬ್ರಾಂಚ್‌ ಅಮೆರಿಕ ಹಾಗೂ ಕೆನಡಕ್ಕೆ ಬೇಕಾಗುವ ಹೆಚ್ಚಿನ ಪತ್ರಿಕೆಗಳನ್ನು ಮುದ್ರಿಸಲು ತೊಡಗುವುದು ಎಂದು ಸಹೋದರ ಕೆನತ್‌ ಲಿಟಲ್‌ರವರು ಹೇಳಿದರು. ಇದು ಆ ಬ್ರಾಂಚ್‌ನ ಉತ್ಪಾದನೆಯನ್ನು ಹತ್ತುಪಟ್ಟು ಹೆಚ್ಚಿಸುವುದು. ಇದನ್ನು ಸಾಧಿಸಲು ಹೊಸದಾಗಿ ಪಡೆದುಕೊಂಡ ಮುದ್ರಣ ಯಂತ್ರವು 16 ತಾಸುಗಳ ಅಂದರೆ ದಿನಕ್ಕೆ ಎರಡು ಶಿಫ್ಟ್‌ ಕೆಲಸ ನಡೆಸಲಿದೆ ಎಂದರವರು.

ಸಹೋದರ ರೇನರ್‌ ಥಾಮ್‌ಸನ್‌ರವರು ಡೊಮಿನಿಕನ್‌ ರಿಪಬ್ಲಿಕ್‌ನಲ್ಲಿನ ರಾಜ್ಯದ ಕೆಲಸದ ಕುರಿತು ತಿಳಿಸಿದರು ಹಾಗೂ ಸಹೋದರ ಆಲ್ಬರ್ಟ್‌ ಓಲೀರವರು ನೈಜೀರಿಯದಲ್ಲಿನ ಚಟುವಟಿಕೆಯನ್ನು ವರದಿಮಾಡಿದರು. ಮೊಸಾಂಬೀಕ್‌ನ ಸಹೋದರ ಎಮೀಲ್‌ ಕ್ರಿಟ್‌ಸಿಂಗರ್‌ರವರು ದಶಕಗಳ ಹಿಂಸೆಯ ನಂತರ 1992ರಲ್ಲಿ ಯೆಹೋವನ ಸಾಕ್ಷಿಗಳು ಅಲ್ಲಿ ಅಧಿಕೃತ ಧರ್ಮವಾಗಿ ನೋಂದಾಯಿಸಲ್ಪಟ್ಟರು ಎಂದು ವಿವರಿಸಿದರು. ಈ ಮೂರೂ ದೇಶಗಳಲ್ಲಿ ಇತ್ತೀಚೆಗೆ ಪ್ರಚಾರಕರ ಸಂಖ್ಯೆಯಲ್ಲಿ ದೊಡ್ಡ ಅಭಿವೃದ್ಧಿ ಆಗಿತ್ತು. ಆಸ್ಟ್ರೇಲಿಯ ಬ್ರಾಂಚ್‌ನ ಸಹೋದರ ವಿವ್‌ ಮೋರಿಸ್‌ರವರು ಆಸ್ಟ್ರೇಲಿಯದ ಸಹೋದರರ ಉಸ್ತುವಾರಿಯ ಕೆಳಗಿರುವ ಈಸ್ಟ್‌ ಟಿಮೋರ್‌ನಲ್ಲಿ ಆದ ಬೆಳವಣಿಗೆಯ ಕುರಿತು ತಿಳಿಸಿದರು.

ಆಡಳಿತ ಮಂಡಲಿಯ ಕಮಿಟಿಗಳು

ಇಸವಿ 1976ರಲ್ಲಿ ಯೆಹೋವನ ಸಾಕ್ಷಿಗಳ ಚಟುವಟಿಕೆಗಳೆಲ್ಲವನ್ನು ಆಡಳಿತ ಮಂಡಲಿಯ ಆರು ಕಮಿಟಿಗಳ ಮೇಲ್ವಿಚಾರಣೆ ಕೆಳಗೆ ತರಲಾಯಿತು. ತದನಂತರ ಬೇರೆ ಕುರಿಗಳ ಇತರ ಸದಸ್ಯರು ಸಹಾಯಕರಾಗಿ ನೇಮಿಸಲ್ಪಟ್ಟರು. ಈಗ 23 ಸದಸ್ಯರು ಅದರಲ್ಲಿ ಮಾಡಲ್ಪಡುತ್ತಿರುವ ಕೆಲಸಕ್ಕೆ ಸಹಾಯ ನೀಡುತ್ತಿದ್ದಾರೆ. ಅವರಲ್ಲಿ 6 ಮಂದಿಯನ್ನು ಇಂಟರ್‌ವ್ಯೂ ಮಾಡಲಾಯಿತು. ಇವರಲ್ಲಿ ಪ್ರತಿಯೊಬ್ಬರು ಸರಾಸರಿ 57 ವರ್ಷಗಳಂತೆ ಒಟ್ಟು 341 ವರ್ಷಗಳನ್ನು ಪೂರ್ಣ ಸಮಯದ ಸೇವೆಯಲ್ಲಿ ಕಳೆದಿದ್ದಾರೆ.

ಇಸವಿ 1943ರಲ್ಲಿ ಬೆತೆಲ್‌ ಸೇವೆ ಆರಂಭಿಸಿದ ಸಹೋದರ ಡಾನ್‌ ಆ್ಯಡಮ್ಸ್‌ರವರು ಕೋಆರ್ಡಿನೇಟರ್ಸ್‌ ಕಮಿಟಿಯ ಕುರಿತು ತಿಳಿಸಿದರು. ಇದು ಐದು ಬೇರೆ ಕಮಿಟಿಗಳ ಕೋಆರ್ಡಿನೇಟರ್‌ರಿಂದ ಕೂಡಿದ್ದು ಎಲ್ಲ ಐದು ಕಮಿಟಿಗಳು ಸುಗಮವಾಗಿ ಕೆಲಸ ನಡಿಸುವುದನ್ನು ಸಾಧ್ಯಗೊಳಿಸುತ್ತದೆ. ಈ ಕಮಿಟಿಯು ಲೋಕವ್ಯಾಪಕ ಯೆಹೋವನ ಸಾಕ್ಷಿಗಳನ್ನು ಬಾಧಿಸುವ ತೀವ್ರ ತುರ್ತು ಪರಿಸ್ಥಿತಿಗಳು, ಹಿಂಸೆ, ಕೋರ್ಟ್‌ ಕೇಸ್‌ಗಳು, ವಿಪತ್ತುಗಳು ಹಾಗೂ ಇನ್ನಿತರ ತುರ್ತುಗಳಲ್ಲಿ ನೆರವನ್ನು ನೀಡುತ್ತದೆ.

ಸಹೋದರ ಡ್ಯಾನ್‌ ಮೊಲ್‌ಚನ್‌ರವರು ಪರ್ಸನೆಲ್‌ ಕಮಿಟಿಯು ಮಾಡುವ ಕೆಲಸದ ಕುರಿತು ವಿವರಿಸಿದರು. ಈ ಕಮಿಟಿಯು ಲೋಕವ್ಯಾಪಕವಾಗಿರುವ 19,851 ಬೆತೆಲಿಗರ ಆಧ್ಯಾತ್ಮಿಕ ಹಾಗೂ ಶಾರೀರಿಕ ಸುಕ್ಷೇಮವನ್ನು ನೋಡಿಕೊಳ್ಳುತ್ತದೆ. ಅನಂತರ ಸಹೋದರ ಡೇವಿಡ್‌ ಸಿಂಕ್ಲರ್‌ರವರು ಮಾತಾಡುತ್ತಾ ಪಬ್ಲಿಷಿಂಗ್‌ ಕಮಿಟಿಯು ಹೇಗೆ ಬ್ರಾಂಚ್‌ಗಳಿಗೆ ಬೇಕಾಗುವ ಸಲಕರಣೆ ಸರಬರಾಜುಗಳ ಖರೀದಿಯ ಮೇಲ್ವಿಚಾರಣೆ ನಡೆಸುತ್ತದೆ ಎಂದು ತಿಳಿಸಿದರು. ಇದನ್ನು ಹಿಂಬಾಲಿಸಿ, ಸುಮಾರು 60 ವರ್ಷ ಬೆತೆಲ್‌ನಲ್ಲಿ ಸೇವೆಮಾಡಿದ ಸಹೋದರ ರಾಬರ್ಟ್‌ ವಾಲನ್‌ರವರು ಮಾತಾಡುತ್ತಾ ಸರ್ವಿಸ್‌ ಕಮಿಟಿ ಹೇಗೆ ಕ್ಷೇತ್ರದಲ್ಲಿ ಹಾಗೂ ಸಭೆಗಳಲ್ಲಿ ಯೆಹೋವನ ಜನರ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತದೆಂದು ತಿಳಿಸಿದರು. ಸಹೋದರ ವಿಲ್ಯಮ್‌ ಮಾಲನ್ಫೊಂಟ್‌ರವರು ಟೀಚಿಂಗ್‌ ಕಮಿಟಿಯು ಅಧಿವೇಶನದ ಕಾರ್ಯಕ್ರಮವನ್ನು ತಯಾರಿಸಲು ಮಾಡುವ ಶ್ರಮವನ್ನು ಸಾರಾಂಶಿಸಿದರು. ಅಂತಿಮವಾಗಿ ಸಹೋದರ ಜಾನ್‌ ವಿಸ್ಚಕ್‌ರವರು, ರೈಟಿಂಗ್‌ ಕಮಿಟಿ ನಮ್ಮ ಸಾಹಿತ್ಯಗಳಿಗಾಗಿ ವಿಷಯವನ್ನು ಜಾಗರೂಕತೆಯಿಂದ ತಯಾರಿಸಿ ಸಿದ್ಧಗೊಳಿಸುವ ಕೆಲಸವನ್ನು ಹೇಗೆ ನೋಡಿಕೊಳ್ಳುತ್ತದೆ ಎಂಬುದನ್ನು ವಿವರಿಸಿದರು. *

2010ರ ವರ್ಷವಚನವು ಪ್ರೀತಿಯ ಮೇಲೆ ಕೇಂದ್ರಿತ

ಮುಂದಿನ ಮೂರು ಭಾಷಣಗಳನ್ನು ಆಡಳಿತ ಮಂಡಲಿಯ ಸದಸ್ಯರು ಸಾದರಪಡಿಸಿದರು. ಸಹೋದರ ಗೆರಿಟ್‌ ಲಾಶ್‌ರವರು “ಇತರರು ನಿಮ್ಮನ್ನು ಪ್ರೀತಿಸಬೇಕೆಂದು ನೀವು ಬಯಸುತ್ತೀರೊ?” ಎಂಬ ಪ್ರಶ್ನೆಯೊಂದಿಗೆ ಭಾಷಣವನ್ನು ಆರಂಭಿಸಿದರು. ಅವರು ವಿವರಿಸಿದ್ದೇನೆಂದರೆ, ಪ್ರೀತಿಯು ಮಾನವನ ಮೂಲಭೂತ ಅಗತ್ಯ, ನಾವೆಲ್ಲರೂ ಅದರಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತೇವೆ. ಪ್ರೀತಿಯಿಂದಾಗಿಯೇ ನಾವು ಅಸ್ತಿತ್ವದಲ್ಲಿದ್ದೇವೆ. ಏಕೆಂದರೆ ನಿಸ್ವಾರ್ಥ ಪ್ರೀತಿಯಿಂದಲೇ ಯೆಹೋವನು ನಮ್ಮನ್ನು ಸೃಷ್ಟಿಸಿದ್ದಾನೆ. ಸಾರುವ ಮತ್ತು ಬೋಧಿಸುವ ನಮ್ಮ ಕೆಲಸದ ಮುಖ್ಯ ಪ್ರಚೋದನೆಯು ಯೆಹೋವನ ಮೇಲಣ ಪ್ರೀತಿಯೇ.

ತತ್ತ್ವಾಧಾರಿತ ಪ್ರೀತಿಯನ್ನು ನಮ್ಮ ನೆರೆಯವರಿಗೆ ಮಾತ್ರವಲ್ಲ ವೈರಿಗಳಿಗೆ ಸಹ ತೋರಿಸುತ್ತೇವೆ. (ಮತ್ತಾ. 5:43-45) ಯೇಸು ನಮಗಾಗಿ ಏನನ್ನೆಲ್ಲ ತಾಳಿಕೊಂಡನು ಎಂಬುದನ್ನು ಯೋಚಿಸುವಂತೆ ಅವರು ಸಭಿಕರನ್ನು ಉತ್ತೇಜಿಸಿದರು. ಅವನಿಗೆ ಹೊಡೆಯಲಾಯಿತು, ಅಪಹಾಸ್ಯ ಮಾಡಲಾಯಿತು, ಉಗುಳಲಾಯಿತು, ತಿವಿಯಲಾಯಿತು. ಇಷ್ಟೆಲ್ಲ ಅನುಭವಿಸಿದರೂ ಕೂಡ ತನ್ನನ್ನು ಶೂಲಕ್ಕೇರಿಸಿದ ಸೈನಿಕರಿಗಾಗಿ ಅವನು ಪ್ರಾರ್ಥಿಸಿದನು. ಇದು ನಾವು ಅವನನ್ನು ಇನ್ನೂ ಹೆಚ್ಚು ಪ್ರೀತಿಸುವಂತೆ ಪ್ರಚೋದಿಸುವುದಿಲ್ಲವೆ? ತದನಂತರ ಸಹೋದರ ಲಾಶ್‌ರವರು 2010ರ ವರ್ಷವಚನವನ್ನು ಪ್ರಕಟಿಸಿದರು. ಅದು, 1 ಕೊರಿಂಥ 13:7, 8: ‘ಪ್ರೀತಿಯು ಎಲ್ಲವನ್ನೂ ತಾಳಿಕೊಳ್ಳುತ್ತದೆ. ಪ್ರೀತಿಯು ಎಂದಿಗೂ ವಿಫಲವಾಗುವುದಿಲ್ಲ.’ ನಮಗೆ ನಿರಂತರ ಜೀವಿಸುವ ಪ್ರತೀಕ್ಷೆ ಇದೆ ಮಾತ್ರವಲ್ಲ ನಿರಂತರವಾಗಿ ಪ್ರೀತಿಸುವ ಹಾಗೂ ಪ್ರೀತಿಸಲ್ಪಡುವ ಪ್ರತೀಕ್ಷೆ ಸಹ ಇದೆ.

ನಿಮ್ಮ ಕಾರಿನ ಇಂಧನ ಖಾಲಿಯೊ?

ಸಹೋದರ ಸ್ಯಾಮ್‌ಯೆಲ್‌ ಹರ್ಡ್‌ರವರು ಭಾಷಣವನ್ನು ಒಂದು ದೃಷ್ಟಾಂತದೊಂದಿಗೆ ಪ್ರಾರಂಭಿಸಿದರು. ನಿಮ್ಮ ಸ್ನೇಹಿತನೊಬ್ಬನು 50 ಕಿ.ಮೀ. ದೂರದ ಪ್ರಯಾಣಕ್ಕಾಗಿ ನಿಮ್ಮನ್ನು ಜೊತೆಯಲ್ಲಿ ಕರೆದೊಯ್ಯುತ್ತಾನೆ ಎಂದು ನೆನಸಿ. ಪ್ರಯಾಣದಲ್ಲಿ ಕಾರಿನ ಇಂಧನ ಮಾಪನವು ಖಾಲಿ ರೇಖೆಯನ್ನು ಸೂಚಿಸುವುದನ್ನು ನೀವು ಕಾಣುತ್ತೀರಿ. ಇಂಧನ ಇನ್ನೇನು ಖಾಲಿಯಾಗಲಿದೆ ಎಂದು ನೀವು ನಿಮ್ಮ ಸ್ನೇಹಿತನಿಗೆ ಹೇಳುತ್ತೀರಿ. ಆದರೆ ಅವನು, ಚಿಂತಿಸಬೇಡ, ಇನ್ನೂ ಸುಮಾರು 4 ಲೀಟರ್‌ಗಳಷ್ಟು ಇಂಧನ ಇದೆ ಎಂದನ್ನುತ್ತಾನೆ. ಆದರೂ ಬೇಗನೆ ಆ ಸ್ವಲ್ಪ ಇಂಧನವೂ ಖಾಲಿಯಾಗಿ ಹೋಗಲಿದೆ. ನಡುದಾರಿಯಲ್ಲಿ ಇಂಧನ ಖಾಲಿಯಾಗುವುದೆಂದು ತಿಳಿದೂ ಪ್ರಯಾಣವನ್ನು ಮುಂದುವರಿಸುವುದು ಬುದ್ಧಿವಂತಿಕೆಯೊ? ಬದಲಾಗಿ ಟ್ಯಾಂಕ್‌ ತುಂಬ ಇಂಧನವಿರುವುದು ಎಷ್ಟು ಉತ್ತಮ! ಸಾಂಕೇತಿಕವಾಗಿ ನಾವು ಸಹ ಟ್ಯಾಂಕ್‌ ತುಂಬ ಇಂಧನವನ್ನು ತುಂಬಿಸಿಟ್ಟುಕೊಳ್ಳಬೇಕು. ಆ ಇಂಧನವು ಯೆಹೋವನ ಜ್ಞಾನವೇ ಆಗಿದೆ.

ಅದಕ್ಕಾಗಿ ನಾವು ಸಾಕಷ್ಟು ಇಂಧನವನ್ನು ಕ್ರಮವಾಗಿ ತುಂಬಿಸಿಕೊಳ್ಳಬೇಕು. ಇದನ್ನು ನಾಲ್ಕು ವಿಧಗಳಲ್ಲಿ ಮಾಡಬಹುದು. ಮೊದಲನೆಯದು ವೈಯಕ್ತಿಕ ಅಧ್ಯಯನ, ಅಂದರೆ ಬೈಬಲನ್ನು ಪ್ರತಿದಿನ ಓದುವ ಮೂಲಕ ಅದರೊಂದಿಗೆ ಪರಿಚಿತರಾಗುವುದು. ಕೇವಲ ಓದುತ್ತಾ ಹೋಗುವುದಕ್ಕಿಂತ ಓದಿದ ವಿಷಯದ ಅರ್ಥವನ್ನು ನಾವು ಗ್ರಹಿಸಿಕೊಳ್ಳಬೇಕು. ಎರಡನೆಯದು ಕುಟುಂಬ ಆರಾಧನೆಯ ಸಂಜೆಯನ್ನು ಸದುಪಯೋಗಿಸಿಕೊಳ್ಳುವುದು ಆಗಿದೆ. ಪ್ರತಿವಾರವೂ ನಾವು ಸಮಯ ತೆಗೆದುಕೊಂಡು ಬೇಕಾದಷ್ಟು ಇಂಧನವನ್ನು ತುಂಬಿಸುತ್ತೇವೊ ಅಥವಾ ಸ್ವಲ್ಪವೇ ತುಂಬಿಸುತ್ತೇವೊ? ಮೂರನೇ ವಿಧವು ಸಭೆಯಲ್ಲಿ ಬೈಬಲಾಧಾರಿತ ಅಧ್ಯಯನ ಹಾಗೂ ಕೂಟದ ಹಾಜರಿ. ನಾಲ್ಕನೆಯದು ಶಾಂತವಾಗಿಯೂ ಅಡಚಣೆಯಿಲ್ಲದ್ದಾಗಿಯೂ ಮನನ ಮಾಡುವುದು ಅಂದರೆ ಯೆಹೋವನ ಮಾರ್ಗಗಳ ವಿಷಯದಲ್ಲಿ ಆಲೋಚಿಸುವುದಾಗಿದೆ. ಕೀರ್ತನೆ 143:5 ಹೇಳುತ್ತದೆ: “ಹಳೇ ದಿನಗಳನ್ನು ನೆನಸಿಕೊಳ್ಳುತ್ತೇನೆ; ನಿನ್ನ ಎಲ್ಲಾ ಕಾರ್ಯಗಳನ್ನು ಧ್ಯಾನಿಸುತ್ತೇನೆ.”

‘ನೀತಿವಂತರು ಹೊಳೆಯುವರು’

ಸಹೋದರ ಜಾನ್‌ ಬಾರ್‌ರವರು ಮೂರನೆಯ ಅಂದರೆ ಅಂತಿಮ ಭಾಷಣದಲ್ಲಿ ಗೋದಿ ಹಾಗೂ ಕಳೆಗಳ ಕುರಿತಾದ ಯೇಸುವಿನ ದೃಷ್ಟಾಂತವನ್ನು ವಿವರಿಸಿದರು. (ಮತ್ತಾ. 13:24-30, 38, 43) ಈ ದೃಷ್ಟಾಂತವು ಒಂದು ‘ಕೊಯ್ಲಿಗೆ’ ಸೂಚಿಸುತ್ತದೆ. ಆ ಸಮಯದಲ್ಲಿ “ರಾಜ್ಯದ ಪುತ್ರರು” ಒಟ್ಟುಗೂಡಿಸಲ್ಪಡುವರು ಹಾಗೂ ಕಳೆಗಳು ಸುಡಲ್ಪಡಲಿಕ್ಕಾಗಿ ಬೇರ್ಪಡಿಸಲ್ಪಡುವವು.

ಈ ಒಟ್ಟುಗೂಡಿಸುವಿಕೆಯು ನಿರಂತರವಾಗಿ ಮುಂದುವರಿಯುವುದಿಲ್ಲ ಎಂಬುದನ್ನು ಸಹೋದರ ಬಾರ್‌ರವರು ಸ್ಪಷ್ಟಪಡಿಸಿದರು. ಅವರು ಮತ್ತಾಯ 24:34ನ್ನು ಉಲ್ಲೇಖಿಸಿದರು. ಅಲ್ಲಿ ಹೀಗೆ ಹೇಳಲಾಗಿದೆ: “ಈ ಎಲ್ಲ ಸಂಗತಿಗಳು ಸಂಭವಿಸುವ ತನಕ ಈ ಸಂತತಿಯು ಅಳಿದು ಹೋಗುವುದೇ ಇಲ್ಲ.” ಅವರು ಈ ಮುಂದಿನ ಹೇಳಿಕೆಯನ್ನು ಎರಡು ಬಾರಿ ಓದಿದರು: “ಯೇಸು ಅದನ್ನು ಈ ಅರ್ಥದಲ್ಲಿ ಹೇಳಿರಬೇಕು: 1914ರಲ್ಲಿ ಸೂಚನೆಯು ತೋರಿಬರಲಾರಂಭಿಸಿದಾಗ ಜೀವಂತರಾಗಿದ್ದ ಅಭಿಷಿಕ್ತರ ಜೀವನವು ಅಂತ್ಯಗೊಳ್ಳುವ ಮೊದಲು ಮಹಾ ಸಂಕಟದ ಆರಂಭವನ್ನು ಕಾಣಲಿದ್ದ ಬೇರೆ ಅಭಿಷಿಕ್ತರ ಜೀವನವು ಆರಂಭಿಸುವುದು.” “ಈ ಸಂತತಿ” ಎಷ್ಟು ಉದ್ದವಾಗಿರುವುದು ಎಂಬುದು ನಮಗೆ ನಿಖರವಾಗಿ ತಿಳಿದಿಲ್ಲ. ಆದರೆ ಒಬ್ಬರನ್ನೊಬ್ಬರು ಮೇಲುಸೇರುವೆ ಮಾಡುವ ಎರಡು ಗುಂಪುಗಳನ್ನು ಇದು ಒಳಗೂಡುತ್ತದೆ. ಅಭಿಷಿಕ್ತರು ಬೇರೆ ಬೇರೆ ವಯಸ್ಸಿನವರಾಗಿರುವುದಾದರೂ ಸಂತತಿಯ ಭಾಗವಾಗಿರುವ ಈ ಎರಡು ಗುಂಪುಗಳಲ್ಲಿರುವವವರು ಕಡೇ ದಿವಸಗಳಲ್ಲಿ ಸಮಕಾಲೀನರಾಗಿರುವರು. 1914ರಲ್ಲಿ ಸೂಚನೆಯ ನೆರವೇರಿಕೆಯನ್ನು ಕಂಡ ಹಿರೀ ಅಭಿಷಿಕ್ತರನ್ನು ಮೇಲುಸೇರುವೆ ಮಾಡುವ ಅವರ ಸಮಕಾಲೀನ ಕಿರೀ ಅಭಿಷಿಕ್ತರಲ್ಲಿ ಎಲ್ಲರೂ ಮಹಾ ಸಂಕಟ ಬರುವುದರೊಳಗೆ ಸಾಯುವುದಿಲ್ಲ, ಬದುಕಿರುವವರು ಇರುವರು ಎಂದು ತಿಳಿಯುವುದು ಎಷ್ಟು ಸಾಂತ್ವನದಾಯಕ!

“ರಾಜ್ಯದ ಪುತ್ರರು” ತಮ್ಮ ಸ್ವರ್ಗೀಯ ಬಹುಮಾನಕ್ಕಾಗಿ ಕಾತುರದಿಂದ ಮುನ್ನೋಡುತ್ತಾರಾದರೂ ನಾವೆಲ್ಲರು ಸಹ ಕೊನೆಯ ವರೆಗೂ ನಂಬಿಗಸ್ತರಾಗಿ ಪ್ರಕಾಶಮಾನವಾಗಿ ಹೊಳೆಯಬೇಕು. ನಮ್ಮ ದಿನಗಳಲ್ಲಿ ‘ಗೋದಿಯು’ ಒಟ್ಟುಗೂಡಿಸಲ್ಪಡುವುದನ್ನು ನೋಡುವ ಎಂಥ ಸುಯೋಗ ನಮಗಿದೆ!

ಕೊನೆಯ ಗೀತೆಯನ್ನು ಹಾಡಿದ ನಂತರ ಆಡಳಿತ ಮಂಡಲಿಯ ಸದಸ್ಯರಾದ ಸಹೋದರ ಥಿಯೊಡರ್‌ ಜಾರಸ್‌ರವರು ಮುಕ್ತಾಯದ ಪ್ರಾರ್ಥನೆ ಸಲ್ಲಿಸಿದರು. ವಾರ್ಷಿಕ ಕೂಟದ ಈ ಕಾರ್ಯಕ್ರಮವು ಎಷ್ಟೊಂದು ಭಕ್ತಿವರ್ಧಕವಾಗಿತ್ತು!

[ಪಾದಟಿಪ್ಪಣಿ]

^ ಪ್ಯಾರ. 10 ಆಡಳಿತ ಮಂಡಲಿಯ ಆರು ಕಮಿಟಿಗಳ ಕೆಲಸದ ಕುರಿತಾದ ವಿವರಣೆಗಾಗಿ 2008, ಮೇ 15ರ ಕಾವಲಿನಬುರುಜುವಿನ ಪುಟ 29ನ್ನು ನೋಡಿ.

[ಪುಟ 5ರಲ್ಲಿರುವ ಚೌಕ]

ಹಿರಿಯರಿಗಾಗಿ ಶಾಲೆ

ಆಡಳಿತ ಮಂಡಲಿಯ ಸದಸ್ಯರಾದ ಸಹೋದರ ಆ್ಯಂಥನಿ ಮಾರಿಸ್‌ರವರು, ಸಭಾ ಹಿರಿಯರಿಗಾಗಿ ಹೆಚ್ಚಿನ ತರಬೇತಿ ಕೊಡಲ್ಪಡಲಿರುವುದು ಎಂದು ವಾರ್ಷಿಕ ಕೂಟದಲ್ಲಿ ಪ್ರಕಟಿಸಿದರು. ನ್ಯೂ ಯಾರ್ಕ್‌ನ ಪ್ಯಾಟರ್‌ಸನ್‌ನ ಶೈಕ್ಷಣಿಕ ಕೇಂದ್ರದಲ್ಲಿ 2008ರ ಆರಂಭದಲ್ಲೇ ಅಮೆರಿಕದ ಹಿರಿಯರಿಗಾಗಿ ಒಂದು ಶಾಲೆಯು ಪ್ರಾರಂಭವಾಗಿದೆ. 72ನೇ ಕ್ಲಾಸ್‌ ಈಗಷ್ಟೇ ಮುಗಿದು, ಇಷ್ಟರ ವರೆಗೆ 6,720 ಮಂದಿ ಹಿರಿಯರು ತರಬೇತಿ ಪಡೆದಿದ್ದಾರೆ. ಇನ್ನೂ ಹೆಚ್ಚನ್ನು ಮಾಡಲಿಕ್ಕಿದೆ. ಅಮೆರಿಕವೊಂದರಲ್ಲೇ 86,000ಕ್ಕಿಂತ ಹೆಚ್ಚು ಹಿರಿಯರಿದ್ದಾರೆ. ಆದುದರಿಂದ 2009ರ ಡಿಸೆಂಬರ್‌ 7ರಿಂದ ನ್ಯೂ ಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ ಇನ್ನೊಂದು ಶಾಲೆಯನ್ನು ಆರಂಭಿಸಲು ಆಡಳಿತ ಮಂಡಲಿಯು ಸಮ್ಮತಿಸಿದೆ.

ಈ ಶಾಲೆಗೆ ಉಪದೇಶಕರಾಗಿ ನಾಲ್ವರು ಸಂಚರಣ ಮೇಲ್ವಿಚಾರಕರು ಪ್ಯಾಟರ್‌ಸನ್‌ನಲ್ಲಿ ಎರಡು ತಿಂಗಳುಗಳ ತನಕ ತರಬೇತಿ ಪಡೆಯಲಿಕ್ಕಿದ್ದರು. ಇವರನ್ನು ಆಮೇಲೆ ಬ್ರೂಕ್ಲಿನ್‌ನಲ್ಲಿ ಕಲಿಸಲಿಕ್ಕಾಗಿ ಕಳುಹಿಸಲಾಗುವುದು. ನಂತರ ಇನ್ನೂ ನಾಲ್ವರನ್ನು ತರಬೇತುಗೊಳಿಸಲಾಗುವುದು. ಅವರು ಆಮೇಲೆ ಬ್ರೂಕ್ಲಿನ್‌ನಲ್ಲಿ ಶಾಲೆ ನಡೆಸುವರು. ಮುಂಚಿನ ನಾಲ್ಕು ಮಂದಿ ಅಸೆಂಬ್ಲಿ ಹಾಲ್‌ಗಳಲ್ಲಿ ಹಾಗೂ ರಾಜ್ಯ ಸಭಾಗೃಹಗಳಲ್ಲಿ ಶಾಲೆಯನ್ನು ನಡಿಸುವರು. ಅಮೆರಿಕದಲ್ಲಿ ಪ್ರತಿವಾರ ಇಂಗ್ಲಿಷ್‌ ಭಾಷೆಯ ಆರು ಶಾಲೆಗಳಲ್ಲಿ ಕಲಿಸಲು 12 ಉಪದೇಶಕರು ಲಭ್ಯವಾಗಿರುವ ವರೆಗೆ ಈ ಏರ್ಪಾಡು ಮುಂದುವರಿಯುವುದು. ಆಮೇಲೆ ನಾಲ್ವರು ಉಪದೇಶಕರನ್ನು ಸ್ಪ್ಯಾನಿಷ್‌ ಭಾಷೆಯ ಶಾಲೆಯಲ್ಲಿ ಕಲಿಸಲು ತರಬೇತುಗೊಳಿಸಲಾಗುವುದು. ಈ ಶಾಲೆಯು ಈಗ ಇರುವ ರಾಜ್ಯ ಶುಶ್ರೂಷಾ ಶಾಲೆಗೆ ಬದಲಿಯಲ್ಲ. ಹಿರಿಯರ ಆಧ್ಯಾತ್ಮಿಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಶಾಲೆಯನ್ನು ನಡೆಸಲಾಗುತ್ತದೆ. ಲೋಕವ್ಯಾಪಕವಾಗಿರುವ ಬ್ರಾಂಚ್‌ಗಳು 2011ರ ಸೇವಾ ವರ್ಷದಲ್ಲಿ ಅಸೆಂಬ್ಲಿ ಹಾಲ್‌ಗಳಲ್ಲಿ ಹಾಗೂ ರಾಜ್ಯ ಸಭಾಗೃಹಗಳಲ್ಲಿ ಹಿರಿಯರ ಶಾಲೆಗಳನ್ನು ನಡೆಸಲು ಆರಂಭಿಸುವವು.

[ಪುಟ 4ರಲ್ಲಿರುವ ಚಿತ್ರಗಳು]

ವಾರ್ಷಿಕ ಕೂಟವನ್ನು “ಯೆಹೋವನಿಗೆ ಹಾಡಿರಿ” ಎಂಬ ನಮ್ಮ ಹೊಸ ಗೀತೆ ಪುಸ್ತಕದಿಂದ ಹಾಡುವ ಮೂಲಕ ಪ್ರಾರಂಭಿಸಲಾಯಿತು