ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಭೆಯ ಭಕ್ತಿವೃದ್ಧಿಮಾಡುತ್ತಾ ಇರಿ

ಸಭೆಯ ಭಕ್ತಿವೃದ್ಧಿಮಾಡುತ್ತಾ ಇರಿ

ಸಭೆಯ ಭಕ್ತಿವೃದ್ಧಿಮಾಡುತ್ತಾ ಇರಿ

“ಒಬ್ಬರನ್ನೊಬ್ಬರು ಸಾಂತ್ವನಗೊಳಿಸುತ್ತಾ ಪರಸ್ಪರ ಭಕ್ತಿವೃದ್ಧಿಮಾಡುತ್ತಾ ಇರಿ.”—1 ಥೆಸ. 5:11.

1. ಕ್ರೈಸ್ತ ಸಭೆಯಲ್ಲಿರುವುದರಿಂದ ಯಾವ ಆಶೀರ್ವಾದಗಳು ಸಿಗುತ್ತವೆ, ಆದರೆ ಯಾವ ಸಮಸ್ಯೆಗಳು ಇನ್ನೂ ಇರಬಹುದು?

ಕ್ರೈಸ್ತ ಸಭೆಯ ಸದಸ್ಯರಾಗಿರುವುದು ಒಂದು ಮಹಾ ಆಶೀರ್ವಾದವೇ ಸರಿ. ಯೆಹೋವನೊಂದಿಗೆ ಸುಸಂಬಂಧ ನಿಮಗಿದೆ. ಮಾರ್ಗದರ್ಶಕವಾಗಿರುವ ಆತನ ವಾಕ್ಯದ ಮೇಲೆ ನಿಮ್ಮ ಅವಲಂಬನೆಯು ಅಕ್ರೈಸ್ತ ಜೀವನಶೈಲಿಯ ದುಷ್ಪರಿಣಾಮಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ನಿಮ್ಮ ಸುತ್ತಮುತ್ತಲು ನಿಮ್ಮ ಒಳ್ಳಿತನ್ನು ಬಯಸುವ ನಿಜ ಮಿತ್ರರಿದ್ದಾರೆ. ಹೌದು, ಆಶೀರ್ವಾದಗಳು ಅನೇಕ. ಹೆಚ್ಚಿನ ಕ್ರೈಸ್ತರಾದರೋ ಒಂದಲ್ಲ ಒಂದು ತರದ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ. ಅವರಲ್ಲಿ ಕೆಲವರಿಗೆ ದೇವರ ವಾಕ್ಯದ ಗಹನ ವಿಷಯಗಳನ್ನು ತಿಳುಕೊಳ್ಳಲು ಸಹಾಯದ ಅಗತ್ಯವಿರಬಹುದು. ಇತರರಾದರೋ ಅಸ್ವಸ್ಥರೂ ಖಿನ್ನರೂ ಆಗಿದ್ದಾರೆ ಅಥವಾ ಅವಿವೇಕದ ನಿರ್ಣಯಗಳ ದುಷ್ಪರಿಣಾಮಗಳನ್ನು ಅನುಭವಿಸುತ್ತಿರಬಹುದು. ಅಷ್ಟೇ ಅಲ್ಲದೆ ಈ ಭಕ್ತಿಹೀನ ಲೋಕದಲ್ಲಿ ನಮಗೆಲ್ಲರಿಗೂ ಜೀವನ ನಡೆಸಲಿಕ್ಕಿದೆ.

2. ನಮ್ಮ ಸಹೋದರರ ಕಷ್ಟಾನುಭವಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು, ಮತ್ತು ಏಕೆ?

2 ಜೊತೆ ಕ್ರೈಸ್ತರು ಕಷ್ಟಾನುಭವ ಅಥವಾ ಹೋರಾಟ ನಡೆಸುವುದನ್ನು ಕಾಣಲು ನಾವ್ಯಾರೂ ಇಷ್ಟಪಡುವುದಿಲ್ಲ. ಅಪೊಸ್ತಲ ಪೌಲನು ಸಭೆಯನ್ನು ಒಂದು ದೇಹಕ್ಕೆ ಹೋಲಿಸುತ್ತಾ “ಒಂದು ಅಂಗವು ನೋವನ್ನು ಅನುಭವಿಸುವುದಾದರೆ ಬೇರೆಲ್ಲ ಅಂಗಗಳು ಅದರೊಂದಿಗೆ ನೋವನ್ನು ಅನುಭವಿಸುತ್ತವೆ” ಎಂದು ಹೇಳಿದ್ದಾನೆ. (1 ಕೊರಿಂ. 12:12, 26) ಅಂಥ ಸನ್ನಿವೇಶಗಳಲ್ಲಿ ನಾವು ನಮ್ಮ ಸಹೋದರ ಸಹೋದರಿಯರನ್ನು ಬೆಂಬಲಿಸಲು ಶ್ರಮಿಸಬೇಕು. ಸವಾಲುಗಳನ್ನು ಎದುರಿಸಲು ಮತ್ತು ನೀಗಿಸಲು ಸಭಾ ಸದಸ್ಯರು ಇತರರಿಗೆ ಸಹಾಯಮಾಡಿದ ಹಲವಾರು ಶಾಸ್ತ್ರೀಯ ವೃತ್ತಾಂತಗಳು ಬೈಬಲಿನಲ್ಲಿವೆ. ನಾವೀಗ ಆ ವೃತ್ತಾಂತಗಳನ್ನು ಪರಿಗಣಿಸುವಾಗ ಅಲ್ಲಿ ವಿವರಿಸಲಾದ ವ್ಯಕ್ತಿಗಳಿಗೆ ನೀಡಲಾದ ತದ್ರೀತಿಯ ಸಹಾಯವನ್ನು ನೀವು ಸಹ ಹೇಗೆ ನೀಡಬಲ್ಲಿರಿ ಎಂದು ಆಲೋಚಿಸಿ ನೋಡಿರಿ. ನಿಮ್ಮ ಸಹೋದರರಿಗೆ ಆಧ್ಯಾತ್ಮಿಕವಾಗಿ ಹೇಗೆ ನೆರವಾಗಬಲ್ಲಿರಿ ಮತ್ತು ಹೀಗೆ ಯೆಹೋವನ ಸಭೆಯ ಭಕ್ತಿವೃದ್ಧಿಯನ್ನು ಹೇಗೆ ಮಾಡಬಲ್ಲಿರಿ?

‘ಅವನನ್ನು ತಮ್ಮೊಂದಿಗೆ ಕರೆದುಕೊಂಡುಹೋದರು’

3, 4. ಯಾವ ವಿಧದಲ್ಲಿ ಅಕ್ವಿಲ ಮತ್ತು ಪ್ರಿಸ್ಕಿಲ್ಲ ಅಪೊಲ್ಲೋಸನಿಗೆ ಸಹಾಯಮಾಡಿದರು?

3 ಅಪೊಲ್ಲೋಸನು ಎಫೆಸದಲ್ಲಿ ವಾಸಿಸ ತೊಡಗಿದಾಗ ಅವನು ಆಗಲೇ ಒಬ್ಬ ಹುರುಪಿನ ಸೌವಾರ್ತಿಕನಾಗಿದ್ದನು. ಅವನು “ಪವಿತ್ರಾತ್ಮದಿಂದ ಪ್ರಜ್ವಲಿತನಾಗಿದ್ದುದರಿಂದ ಯೇಸುವಿನ ಕುರಿತಾದ ವಿಷಯಗಳನ್ನು ಸರಿಯಾಗಿ ತಿಳಿಸುತ್ತಾ ಬೋಧಿಸುತ್ತಾ ಇದ್ದನು; ಆದರೆ ಅವನಿಗೆ ಯೋಹಾನನು ಮಾಡಿಸುತ್ತಿದ್ದ ದೀಕ್ಷಾಸ್ನಾನದ ಪರಿಚಯ ಮಾತ್ರ ಇತ್ತು” ಎಂದು ಅಪೊಸ್ತಲರ ಕಾರ್ಯಗಳು ವೃತ್ತಾಂತ ಹೇಳುತ್ತದೆ. ಅಪೊಲ್ಲೋಸನಿಗೆ ‘ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಾಗುವ’ ದೀಕ್ಷಾಸ್ನಾನವು ಅಪರಿಚಿತವಾಗಿತ್ತು. ಇದರಿಂದ ವ್ಯಕ್ತವಾಗುವುದೇನೆಂದರೆ ಪ್ರಾಯಶಃ ಅವನಿಗೆ ಸಾಕ್ಷಿ ಸಿಕ್ಕಿದ್ದು ಒಂದೋ ಸ್ನಾನಿಕನಾದ ಯೋಹಾನನ ಶಿಷ್ಯರಿಂದ ಇಲ್ಲವೆ ಕ್ರಿ.ಶ. 33ರ ಪಂಚಾಶತ್ತಮಕ್ಕೆ ಮುಂಚಿನ ಯೇಸುವಿನ ಹಿಂಬಾಲಕರಿಂದ. ಅಪೊಲ್ಲೋಸನು ಹುರುಪಿನ ವ್ಯಕ್ತಿಯಾಗಿದ್ದರೂ ಅವನಿಗೆ ತಿಳಿಯದೇ ಇದ್ದ ಕೆಲವು ಪ್ರಾಮುಖ್ಯ ವಿಷಯಗಳಿದ್ದವು. ಜೊತೆ ಕ್ರೈಸ್ತರ ಸಹವಾಸವು ಈ ವಿಷಯದಲ್ಲಿ ಅವನಿಗೆ ಹೇಗೆ ಸಹಾಯ ಮಾಡಿತು?—ಅ. ಕಾ. 1:4, 5; 18:25; ಮತ್ತಾ. 28:19.

4 ಅಪೊಲ್ಲೋಸನು ಸಭಾಮಂದಿರದಲ್ಲಿ ಧೈರ್ಯದಿಂದ ಮಾತಾಡುವುದನ್ನು ಕೇಳಿಸಿಕೊಂಡಾಗ ಕ್ರೈಸ್ತ ದಂಪತಿಯಾದ ಅಕ್ವಿಲ ಮತ್ತು ಪ್ರಿಸ್ಕಿಲ್ಲರು ಅವನನ್ನು ತಮ್ಮೊಂದಿಗೆ ಕರೆದುಕೊಂಡುಹೋಗಿ ಹೆಚ್ಚಿನ ವಿಷಯಗಳನ್ನು ಕಲಿಸಿದರು. (ಅ. ಕಾರ್ಯಗಳು 18:24-26 ಓದಿ.) ಹೀಗೆ ಮಾಡುವುದು ಒಂದು ಪ್ರೀತಿಪರ ವಿಷಯವಾಗಿತ್ತು. ನಿಶ್ಚಯವಾಗಿಯೂ ಅಕ್ವಿಲ ಮತ್ತು ಪ್ರಿಸ್ಕಿಲ್ಲರು ಅಪೊಲ್ಲೋಸನನ್ನು ಜಾಣ್ಮೆಯಿಂದ ಹಾಗೂ ಸಹಾಯಮಾಡುವ ಉದ್ದೇಶದಿಂದ ಸಮೀಪಿಸಿದ್ದಿರಬೇಕು. ತಾನು ಟೀಕಿಸಲ್ಪಡುತ್ತಿದ್ದೇನೆ ಎಂಬ ಭಾವನೆಯು ಅವನಿಗೆ ಬಾರದಂತೆ ಅವರು ಜಾಗ್ರತೆವಹಿಸಿದ್ದಿರಬೇಕು. ಆದಿ ಕ್ರೈಸ್ತ ಸಭೆಯ ಇತಿಹಾಸದ ಬಗ್ಗೆ ಅವನಿಗೆ ಪರಿಚಯವಿಲ್ಲದ್ದೇ ಅದಕ್ಕೆ ಕಾರಣವಾಗಿತ್ತು. ಆದುದರಿಂದ ಈ ಪ್ರಾಮುಖ್ಯ ವಿವರಗಳನ್ನು ತನ್ನೊಂದಿಗೆ ಹಂಚಿದಕ್ಕಾಗಿ ಆ ಹೊಸ ಸಂಗಡಿಗರಿಗೆ ಅಪೊಲ್ಲೋಸನು ಕೃತಜ್ಞನಾಗಿದ್ದನೆಂಬುದರಲ್ಲಿ ಸಂದೇಹವಿಲ್ಲ. ಈ ಮಾಹಿತಿಯೊಂದಿಗೆ ಸುಸಜ್ಜಿತನಾಗಿ ಅಪೊಲ್ಲೋಸನು ಅಖಾಯದಲ್ಲಿದ್ದ ತನ್ನ ಸಹೋದರರಿಗೆ “ಬಹಳವಾಗಿ ಸಹಾಯಮಾಡಿದನು” ಮತ್ತು ಬಲವಾದ ಸಾಕ್ಷಿಯನ್ನಿತ್ತನು.—ಅ. ಕಾ. 18:27, 28.

5. ಸಾವಿರಾರು ರಾಜ್ಯ ಪ್ರಚಾರಕರು ಯಾವ ಪ್ರೀತಿಪೂರ್ವಕ ಸಹಾಯವನ್ನು ನೀಡುತ್ತಾರೆ, ಫಲಿತಾಂಶವೇನು?

5 ಇಂದು ಕ್ರೈಸ್ತ ಸಭೆಯಲ್ಲಿರುವ ಅನೇಕರು ಬೈಬಲಿನ ತಿಳಿವಳಿಕೆಯನ್ನು ಪಡೆಯಲು ತಮಗೆ ಸಹಾಯಮಾಡಿದವರಿಗೆ ಅತಿ ಕೃತಜ್ಞರು. ವಿದ್ಯಾರ್ಥಿಗಳು ಮತ್ತು ಅವರ ಬೋಧಕರ ಮಧ್ಯೆ ಅನೇಕಾನೇಕ ಬಾಳುವ ಸ್ನೇಹಗಳು ಬೆಸೆಯಲ್ಪಟ್ಟಿವೆ. ಹೆಚ್ಚಿನ ಸಂದರ್ಭಗಳಲ್ಲಿ ಸತ್ಯವನ್ನು ತಿಳಿಯುವಂತೆ ಜನರಿಗೆ ನೆರವಾಗಲು ಕ್ರಮದ ಮನೆ ಬೈಬಲ್‌ ಅಧ್ಯಯನ ಅವಶ್ಯ. ಇದನ್ನು ಹಲವಾರು ತಿಂಗಳುಗಳ ತನಕ ಮಾಡಬೇಕಾದೀತು. ಆದರೂ ರಾಜ್ಯ ಪ್ರಚಾರಕರು ಆ ತ್ಯಾಗಗಳನ್ನು ಮಾಡಲು ಸಿದ್ಧರಿದ್ದಾರೆ. ಏಕೆಂದರೆ ಅದು ಜೀವ-ಮರಣಗಳ ಒಂದು ಪ್ರಶ್ನೆ ಎಂದವರಿಗೆ ಗೊತ್ತಿದೆ. (ಯೋಹಾ. 17:3) ಅಲ್ಲದೆ ಜನರು ಸತ್ಯವನ್ನು ಗ್ರಹಿಸಿಕೊಂಡು ಅದಕ್ಕನುಸಾರವಾಗಿ ಜೀವಿಸುತ್ತಾ ತಮ್ಮ ಜೀವಿತವನ್ನು ಯೆಹೋವನ ಚಿತ್ತ ಮಾಡಲು ಬಳಸುವುದನ್ನು ಕಾಣುವುದು ಎಂಥ ಸಂತೋಷ!

“ಅವನ ಕುರಿತಾಗಿ ಒಳ್ಳೇ ಸಾಕ್ಷಿಹೇಳುತ್ತಿದ್ದರು”

6, 7. (ಎ) ಪೌಲನು ತಿಮೊಥೆಯನನ್ನು ಸಂಚರಣ ಸಂಗಡಿಗನಾಗಿ ಆರಿಸಿಕೊಂಡದ್ದೇಕೆ? (ಬಿ) ಯಾವ ಪ್ರಗತಿಯನ್ನು ಮಾಡಲು ತಿಮೊಥೆಯನಿಗೆ ಸಹಾಯ ಸಿಕ್ಕಿತು?

6 ಅಪೊಸ್ತಲರಾದ ಪೌಲ ಮತ್ತು ಸೀಲರು ತಮ್ಮ ಎರಡನೇ ಮಿಷನೆರಿ ಪ್ರಯಾಣದಲ್ಲಿ ಲುಸ್ತ್ರವನ್ನು ಸಂದರ್ಶಿಸಿದಾಗ ತಿಮೊಥೆಯನೆಂಬ ಒಬ್ಬ ಯೌವನಸ್ಥನನ್ನು ಅಲ್ಲಿ ಕಂಡರು. ಅವನಾಗ ಪ್ರಾಯಶಃ 18ರಿಂದ 22 ವರ್ಷ ವಯಸ್ಸಿನವನು. “ಲುಸ್ತ್ರ ಮತ್ತು ಇಕೋನ್ಯದಲ್ಲಿದ್ದ ಸಹೋದರರು ಅವನ ಕುರಿತಾಗಿ ಒಳ್ಳೇ ಸಾಕ್ಷಿಹೇಳುತ್ತಿದ್ದರು.” ತಿಮೊಥೆಯನ ತಾಯಿಯಾದ ಯೂನಿಕೆ ಮತ್ತು ಅವನ ಅಜ್ಜಿಯಾದ ಲೋವಿ ಸಮರ್ಪಿತ ಕ್ರೈಸ್ತರಾಗಿದ್ದರು, ಆದರೆ ಅವನ ತಂದೆ ಅವಿಶ್ವಾಸಿಯಾಗಿದ್ದನು. (2 ತಿಮೊ. 1:5) ಪೌಲನಿಗೆ ಈ ಕುಟುಂಬದ ಪರಿಚಯವಾದದ್ದು ಕೆಲವು ವರ್ಷಗಳ ಹಿಂದೆ ಅವನು ಆ ಪ್ರದೇಶವನ್ನು ಮೊದಲಾಗಿ ಸಂದರ್ಶಿಸಿದಾಗ ಇರಬಹುದು. ಆದರೆ ಈಗ ಅಪೊಸ್ತಲನು ತಿಮೊಥೆಯನಲ್ಲಿ ನಿರ್ದಿಷ್ಟ ಆಸಕ್ತಿಯನ್ನು ವ್ಯಕ್ತಪಡಿಸಿದನು. ಏಕೆಂದರೆ ಅವನೊಬ್ಬ ಅಸಾಧಾರಣ ಯೌವನಸ್ಥನಾಗಿ ಕಂಡುಬಂದನು. ಆದಕಾರಣ ಸ್ಥಳೀಯ ಹಿರಿಯ ಮಂಡಲಿಯ ಒಪ್ಪಿಗೆಯೊಂದಿಗೆ ತಿಮೊಥೆಯನು ಪೌಲನ ಮಿಷನೆರಿ ಚಟುವಟಿಕೆಯಲ್ಲಿ ಸಹಾಯಕನಾಗಿ ಪರಿಣಮಿಸಿದನು.—ಅ. ಕಾರ್ಯಗಳು 16:1-3 ಓದಿ.

7 ತಿಮೊಥೆಯನಿಗೆ ತನ್ನ ಹಿರಿಯ ಸಂಗಡಿಗನಿಂದ ಹೆಚ್ಚನ್ನು ಕಲಿಯಲಿಕ್ಕಿತ್ತು. ಆದರೂ ಅವನು ಕಲಿತನು ಖಂಡಿತ. ಎಷ್ಟರ ಮಟ್ಟಿಗೆಂದರೆ ಸಮಯಾನಂತರ ಪೌಲನು ಪೂರ್ಣ ಭರವಸೆಯಿಂದ ತಿಮೊಥೆಯನನ್ನು ಸಭೆಗಳನ್ನು ಸಂದರ್ಶಿಸಲು ಮತ್ತು ತನ್ನ ಪ್ರತಿನಿಧಿಯಾಗಿ ಕಾರ್ಯನಡಿಸಲು ಕಳುಹಿಸಶಕ್ತನಾದನು. ತಿಮೊಥೆಯನು ಪೌಲನ ಸಹವಾಸದಲ್ಲಿ ಆನಂದಿಸಿದ ಸುಮಾರು 15 ವರ್ಷಗಳೊಳಗೆ ಅನನುಭವಿಯೂ ಪ್ರಾಯಶಃ ನಾಚಿಕೆ ಸ್ವಭಾವದವನೂ ಆಗಿದ್ದ ಆ ಯುವಕನು ಅತ್ಯುತ್ತಮ ಮೇಲ್ವಿಚಾರಕನಾಗಿ ಪರಿಣಮಿಸುವ ಹಂತಕ್ಕೆ ಪ್ರಗತಿಮಾಡಿದನು.—ಫಿಲಿ. 2:19-22; 1 ತಿಮೊ. 1:3.

8, 9. ಸಭಾ ಸದಸ್ಯರು ಯುವ ಜನರಿಗೆ ಪ್ರೋತ್ಸಾಹನೆಯನ್ನೀಯಲು ಏನು ಮಾಡಸಾಧ್ಯವಿದೆ? ಒಂದು ಉದಾಹರಣೆ ಕೊಡಿ.

8 ಇಂದು ಕ್ರೈಸ್ತ ಸಭೆಯಲ್ಲಿರುವ ಅನೇಕ ಯುವ ಸ್ತ್ರೀಪುರುಷರಿಗೆ ಮುಂದಕ್ಕೆ ಕಾರ್ಯರೂಪಕ್ಕೆ ಬರುವ ಹೆಚ್ಚಿನ ಪ್ರತಿಭೆ ಸಾಮರ್ಥ್ಯಗಳಿವೆ. ಆಧ್ಯಾತ್ಮಿಕ ಮನಸ್ಸಿನ ಸಂಗಡಿಗರು ಉತ್ತೇಜನ ಮತ್ತು ಪ್ರೋತ್ಸಾಹ ನೀಡುವಲ್ಲಿ ಈ ಯುವ ಜನರು ಯೆಹೋವನ ಜನರ ಮಧ್ಯೆ ಹೆಚ್ಚಿನ ಜವಾಬ್ದಾರಿಗಳನ್ನು ಎಟಕಿಸಿಕೊಳ್ಳಬಲ್ಲರು ಮತ್ತು ಸ್ವೀಕರಿಸಬಲ್ಲರು. ಆದುದರಿಂದ ನಿಮ್ಮ ಸಭೆಯ ಸುತ್ತಲೂ ಕಣ್ಣುಹಾಯಿಸಿ ನೋಡಿ! ತಿಮೊಥೆಯನಂತೆ ತಮ್ಮನ್ನು ಉಪಯೋಗಾರ್ಹರಾಗಿ ನೀಡಿಕೊಳ್ಳ ಸಾಧ್ಯತೆಯುಳ್ಳ ಯಾವನೇ ಯುವ ವ್ಯಕ್ತಿಯನ್ನು ನೀವು ಕಾಣುತ್ತೀರೊ? ನಿಮ್ಮ ಸಹಾಯ ಮತ್ತು ಉತ್ತೇಜನದಿಂದ ಅವರು ಪಯನೀಯರರು, ಬೆತೆಲಿಗರು, ಮಿಷನೆರಿಗಳು ಅಥವಾ ಸಂಚರಣ ಮೇಲ್ವಿಚಾರಕರಾಗಬಲ್ಲರು. ಅಂಥ ಗುರಿಗಳನ್ನು ಮುಟ್ಟಲು ನೀವು ಅವರಿಗೆ ಹೇಗೆ ಸಹಾಯಮಾಡಬಲ್ಲಿರಿ?

9 ಇಪ್ಪತ್ತು ವರ್ಷಗಳಿಂದ ಬೆತೆಲ್‌ ಕುಟುಂಬದ ಸದಸ್ಯನಾಗಿರುವ ಮಾರ್ಟಿನ್‌ ಎಂಬ ಸಹೋದರನು 30 ವರ್ಷಗಳ ಹಿಂದೆ ಸರ್ಕಿಟ್‌ ಮೇಲ್ವಿಚಾರಕನೊಬ್ಬನು ತನ್ನಲ್ಲಿ ತೋರಿಸಿದ ಅಭಿರುಚಿಯನ್ನು ಕೃತಜ್ಞತೆಯಿಂದ ಮರುಕಳಿಸುತ್ತಾನೆ. ಅವರಿಬ್ಬರು ಕ್ಷೇತ್ರ ಸೇವೆಯಲ್ಲಿದ್ದಾಗ ಮೇಲ್ವಿಚಾರಕನು ತಾನು ಯೌವನದಲ್ಲಿ ಬೆತೆಲಿನಲ್ಲಿ ಸೇವೆಮಾಡಿದ್ದರ ಬಗ್ಗೆ ಉತ್ಸಾಹದಿಂದ ತಿಳಿಸಿದನು. ಅದೇ ರೀತಿಯಲ್ಲಿ ಮಾರ್ಟಿನ್‌ ಸಹ ಯೆಹೋವನ ಸಂಸ್ಥೆಯಲ್ಲಿ ತನ್ನನ್ನು ಉಪಯೋಗಾರ್ಹವಾಗಿ ನೀಡಿಕೊಳ್ಳುವ ಸಾಧ್ಯತೆಯನ್ನು ಪರಿಗಣಿಸುವಂತೆ ಉತ್ತೇಜನ ಕೊಟ್ಟನು. ಈ ಸ್ಮರಣೀಯ ಸಂಭಾಷಣೆಯು ತಾನು ನಂತರ ಮಾಡಿದ ಆಯ್ಕೆಗಳ ಮೇಲೆ ಬಲವಾದ ಪರಿಣಾಮ ಬೀರಿತು ಎಂದು ಮಾರ್ಟಿನ್‌ಗೆ ಅನಿಸುತ್ತದೆ. ನೀವು ಒಂದುವೇಳೆ ನೆನಸಲಿಕ್ಕಿಲ್ಲ, ಆದರೆ ಯುವ ಮಿತ್ರರೊಂದಿಗೆ ದೇವಪ್ರಭುತ್ವಾತ್ಮಕ ಗುರಿಗಳ ಬಗ್ಗೆ ಮಾತಾಡುವ ಮೂಲಕ ನೀವು ಎಷ್ಟೋ ಒಳ್ಳಿತನ್ನು ಮಾಡಸಾಧ್ಯವಿದೆ.

“ಮನಗುಂದಿದವರಿಗೆ ಸಾಂತ್ವನಗೊಳಿಸುವಂಥ ರೀತಿಯಲ್ಲಿ ಮಾತಾಡಿರಿ”

10. ಎಪಫ್ರೊದೀತನ ಭಾವನೆ ಏನಾಗಿತ್ತು, ಮತ್ತು ಏಕೆ?

10 ನಂಬಿಕೆಯ ಸಲುವಾಗಿ ಸೆರೆವಾಸದಲ್ಲಿದ್ದ ಅಪೊಸ್ತಲ ಪೌಲನನ್ನು ನೋಡಲು ಎಪಫ್ರೊದೀತನು ಫಿಲಿಪ್ಪಿಯದಿಂದ ರೋಮಿಗೆ ಸುದೀರ್ಘವಾದ ಹಾಗೂ ಪ್ರಯಾಸದ ಪ್ರಯಾಣವನ್ನು ಕೈಗೊಂಡನು. ಈ ಪ್ರಯಾಣಿಕನು ಫಿಲಿಪ್ಪಿಯದವರ ನಿಯೋಗಿಯಾಗಿ ಕಳುಹಿಸಲ್ಪಟ್ಟನು. ಅವರು ಅಪೊಸ್ತಲನಿಗೆ ಕಳುಹಿಸಿದ ಉಡುಗೊರೆಯನ್ನು ಅವನು ತಂದಿದ್ದನು ಮಾತ್ರವಲ್ಲ ಈ ಕಷ್ಟದ ಸನ್ನಿವೇಶದಲ್ಲಿ ಪೌಲನಿಗೆ ನೆರವಾಗಲು ತನ್ನಿಂದಾದ್ದೆಲ್ಲವನ್ನು ಮಾಡುವಂತೆ ಅವನೊಂದಿಗೆ ಉಳಿಯಲು ಸಹ ಯೋಜಿಸಿದ್ದನು. ಆದರೂ ರೋಮಿನಲ್ಲಿದ್ದಾಗ ಎಪಫ್ರೊದೀತನು ಅಸ್ವಸ್ಥನಾದನು ಮತ್ತು ‘ಸಾಯುವ ಹಂತಕ್ಕೆ ಬಂದನು.’ ತನ್ನ ನಿಯೋಗದಲ್ಲಿ ವಿಫಲನಾದೆನೆಂದು ಭಾವಿಸುತ್ತಾ ಎಪಫ್ರೊದೀತನು ಖಿನ್ನತೆಗೆ ಒಳಗಾದನು.—ಫಿಲಿ. 2:25-27.

11. (ಎ) ಸಭೆಯಲ್ಲಿನ ಕೆಲವರು ಖಿನ್ನತೆಯಿಂದ ಬಳಲುವುದನ್ನು ನೋಡುವಾಗ ನಾವೇಕೆ ಆಶ್ಚರ್ಯಪಡಬಾರದು? (ಬಿ) ಎಪಫ್ರೊದೀತನ ವಿಷಯದಲ್ಲಿ ಪೌಲನು ಏನನ್ನು ಶಿಫಾರಸ್ಸು ಮಾಡಿದನು?

11 ಇಂದು ವಿವಿಧ ರೀತಿಯ ಒತ್ತಡಗಳು ಜನರನ್ನು ಖಿನ್ನತೆಯಿಂದ ಬಳಲುವಂತೆ ಮಾಡುತ್ತವೆ. ಲೋಕಾರೋಗ್ಯ ಸಂಸ್ಥೆಯ ಅಂಕಿಅಂಶಗಳು ತಿಳಿಸುವ ಮೇರೆಗೆ ಒಟ್ಟು ಜನಸಂಖ್ಯೆಯಲ್ಲಿ ಐವರಲ್ಲಿ ಒಬ್ಬರು ತಮ್ಮ ಜೀವನದಲ್ಲಿ ಯಾವಾಗಲೊಮ್ಮೆ ಖಿನ್ನತೆಯ ಕಾಯಿಲೆಯಿಂದ ಬಳಲಬಹುದು. ಇದರಿಂದ ಯೆಹೋವನ ಸಾಕ್ಷಿಗಳೂ ಪ್ರತಿರಕ್ಷಿತರಲ್ಲ. ಕುಟುಂಬ ಪರಿಪಾಲನೆ, ಅನಾರೋಗ್ಯ, ವಿಫಲತೆಯಿಂದಾಗುವ ಆಶಾಭಂಗ ಮುಂತಾದ ಸಮಸ್ಯೆಗಳು ಮನಸ್ಸನ್ನು ಕುಗ್ಗಿಸಬಲ್ಲವು. ಎಪಫ್ರೊದೀತನಿಗೆ ನೆರವಾಗಲು ಫಿಲಿಪ್ಪಿಯದವರು ಏನು ಮಾಡಸಾಧ್ಯವಿತ್ತು? ಪೌಲನು ಬರೆದದ್ದು: “ಪೂರ್ಣ ಆನಂದದಿಂದ ಕರ್ತನಲ್ಲಿ ವಾಡಿಕೆಯ ಪ್ರಕಾರ ಅವನನ್ನು ಬರಮಾಡಿಕೊಳ್ಳಿರಿ; ಮತ್ತು ಇಂಥ ರೀತಿಯ ಪುರುಷರನ್ನು ಪ್ರಿಯರೆಂದು ಎಣಿಸಿರಿ. ಏಕೆಂದರೆ ನನಗೆ ಖಾಸಗಿಯಾದ ಸೇವೆಯನ್ನು ಮಾಡಲು ನೀವು ಇಲ್ಲಿ ಇಲ್ಲದಿರುವ ಕೊರತೆಯನ್ನು ಪೂರ್ಣರೀತಿಯಲ್ಲಿ ನೀಗಿಸಲಿಕ್ಕಾಗಿ ಅವನು ಕ್ರಿಸ್ತನ ಕೆಲಸದ ನಿಮಿತ್ತ ತನ್ನ ಪ್ರಾಣವನ್ನು ಅಪಾಯಕ್ಕೊಡ್ಡಿ ಮರಣದ ಅಂಚಿಗೆ ಬಂದಿದ್ದನು.”—ಫಿಲಿ. 2:29, 30.

12. ಖಿನ್ನತೆಯಿಂದ ಬಳಲುವವರಿಗೆ ಯಾವುದು ಸಾಂತ್ವನದ ಮೂಲವಾಗಿರಬಹುದು?

12 ನಿರಾಶೆಗೊಂಡ ಅಥವಾ ಖಿನ್ನತೆಯಿಂದ ಬಳಲುವ ಸಹೋದರರನ್ನು ನಾವು ಸಹ ಪ್ರೋತ್ಸಾಹಿಸಬೇಕು. ಯೆಹೋವನಿಗೆ ಅವರು ಮಾಡಿದ ಸೇವೆಯ ಕುರಿತು ನಾವು ಹೇಳಬಲ್ಲ ಧನಾತ್ಮಕ ವಿಷಯಗಳಿವೆ ಎಂಬುದರಲ್ಲಿ ಸಂದೇಹವಿಲ್ಲ. ಕ್ರೈಸ್ತರಾಗಲಿಕ್ಕಾಗಿ ಅಥವಾ ಪೂರ್ಣ ಸಮಯದ ಶುಶ್ರೂಷೆ ನಡೆಸಲಿಕ್ಕಾಗಿ ಅವರು ಪ್ರಾಯಶಃ ತಮ್ಮ ಜೀವಿತದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿರಬಹುದು. ಆ ಪ್ರಯತ್ನಗಳನ್ನು ನಾವು ಗಣ್ಯಮಾಡುತ್ತೇವೆ ಹಾಗೂ ಯೆಹೋವನು ಸಹ ಅದನ್ನು ಗಣ್ಯಮಾಡುತ್ತಾನೆಂದು ಅವರಿಗೆ ಆಶ್ವಾಸನೆ ನೀಡಬಲ್ಲೆವು. ಮುದಿಪ್ರಾಯ ಅಥವಾ ಅನಾರೋಗ್ಯವು ಕೆಲವು ನಂಬಿಗಸ್ತರನ್ನು ತಾವು ಮುಂಚೆ ಮಾಡಿದಷ್ಟನ್ನು ಮಾಡುವುದರಿಂದ ತಡೆಯುವುದಾದರೂ ಅನೇಕ ವರ್ಷಗಳ ಸೇವೆಗಾಗಿ ನಮ್ಮೆಲ್ಲ ಗೌರವಕ್ಕೆ ಅವರು ಅರ್ಹರಾಗಿದ್ದಾರೆ. ವಿಷಯವು ಹೇಗೇ ಇರಲಿ ತನ್ನ ನಂಬಿಗಸ್ತರೆಲ್ಲರಿಗೆ ಯೆಹೋವನು ನೀಡುವ ಸಲಹೆಯೇನೆಂದರೆ, “ಮನಗುಂದಿದವರಿಗೆ ಸಾಂತ್ವನಗೊಳಿಸುವಂಥ ರೀತಿಯಲ್ಲಿ ಮಾತಾಡಿರಿ, ಬಲಹೀನರಿಗೆ ಆಧಾರವಾಗಿರಿ, ಎಲ್ಲರ ಕಡೆಗೆ ದೀರ್ಘ ಸಹನೆಯನ್ನು ತೋರಿಸಿರಿ.”—1 ಥೆಸ. 5:14.

‘ಅವನನ್ನು ದಯಾಭಾವದಿಂದ ಕ್ಷಮಿಸಿ ಸಾಂತ್ವನಗೊಳಿಸಿರಿ’

13, 14. (ಎ) ಕೊರಿಂಥದ ಸಭೆಯು ಗಂಭೀರವಾದ ಯಾವ ಕ್ರಮವನ್ನು ಕೈಕೊಂಡಿತು, ಮತ್ತು ಏಕೆ? (ಬಿ) ಬಹಿಷ್ಕಾರದ ಕ್ರಿಯೆಯಿಂದಾಗಿ ಯಾವ ಪರಿಣಾಮ ಸಿಕ್ಕಿತು?

13 ಪಶ್ಚಾತ್ತಾಪಪಡದೆ ಜಾರತ್ವ ನಡಿಸಿದ ಒಬ್ಬನ ಸನ್ನಿವೇಶವನ್ನು ಒಂದನೇ ಶತಕದ ಕೊರಿಂಥ ಸಭೆಯು ಎದುರಿಸಿತು. ಅವನ ನಡವಳಿಕೆಯು ಸಭೆಯ ಶುದ್ಧತೆಯನ್ನು ಕೆಡಿಸುವ ಅಪಾಯವನ್ನು ತಂದಿತು ಮತ್ತು ಅವಿಶ್ವಾಸಿಗಳಿಗೂ ಆಘಾತವನ್ನು ಉಂಟುಮಾಡಿತು. ಆದಕಾರಣ ಪೌಲನು ಆ ಮನುಷ್ಯನನ್ನು ಸಭೆಯಿಂದ ಹೊರಗೆಹಾಕುವಂತೆ ಯೋಗ್ಯವಾಗಿ ಮಾರ್ಗದರ್ಶಿಸಿದನು.—1 ಕೊರಿಂ. 5:1, 7, 11-13.

14 ಆ ಶಿಕ್ಷಾಶಿಸ್ತು ಒಳ್ಳೇ ಪರಿಣಾಮ ಬೀರಿತು. ಸಭೆಯು ಭ್ರಷ್ಟ ಪ್ರಭಾವದಿಂದ ಸಂರಕ್ಷಿಸಲ್ಪಟ್ಟಿತು ಮತ್ತು ತಪ್ಪಿತಸ್ಥನು ತನ್ನ ತಪ್ಪನ್ನು ಮನಗಂಡು ನಿಜವಾಗಿ ಪಶ್ಚಾತ್ತಾಪಪಡುವಂತೆ ಸಾಧ್ಯವಾಯಿತು. ಆ ಮನುಷ್ಯನು ಪಶ್ಚಾತ್ತಾಪಕ್ಕೆ ತಕ್ಕದಾದ ಕ್ರಿಯೆಗಳನ್ನು ತೋರಿಸಿದ ಆಧಾರದಿಂದಾಗಿ ಅವನನ್ನು ಪುನಸ್ಸ್ಥಾಪಿಸಬೇಕೆಂದು ಪೌಲನು ಆ ಸಭೆಗೆ ಬರೆದ ಎರಡನೇ ಪತ್ರದಲ್ಲಿ ಸೂಚಿಸಿದನು. ಆದರೆ ಇದಕ್ಕಿಂತಲೂ ಹೆಚ್ಚಿನದ್ದು ಬೇಕಾಗಿತ್ತು. ಪೌಲನು ಸಭೆಗೆ ಹೀಗೂ ಮಾರ್ಗದರ್ಶಿಸಿದನು: “ನೀವು [ಪಶ್ಚಾತ್ತಾಪಪಟ್ಟ ಪಾಪಿಯನ್ನು] ದಯಾಭಾವದಿಂದ ಕ್ಷಮಿಸಬೇಕು ಮತ್ತು ಸಾಂತ್ವನಗೊಳಿಸಬೇಕು; ಇಲ್ಲವಾದರೆ ಅವನು ವಿಪರೀತವಾಗಿ ದುಃಖಿತನಾಗಿರುವ ಕಾರಣ ಹೇಗೋ ಕಬಳಿಸಲ್ಪಟ್ಟಾನು.”—2 ಕೊರಿಂಥ 2:5-8 ಓದಿ.

15. ಸಭೆಯಲ್ಲಿ ಪುನಸ್ಸ್ಥಾಪಿಸಲ್ಪಡುವ ಪಶ್ಚಾತ್ತಾಪಿ ಪಾಪಿಗಳನ್ನು ನಾವು ಹೇಗೆ ವೀಕ್ಷಿಸಬೇಕು?

15 ಈ ವೃತ್ತಾಂತದಿಂದ ನಾವೇನನ್ನು ಕಲಿಯುತ್ತೇವೆ? ವ್ಯಕ್ತಿಗಳನ್ನು ಬಹಿಷ್ಕಾರಗೊಳಿಸಬೇಕಾಗಿರುವುದು ದುಃಖಕರ ಸಂಗತಿ ನಿಜ. ಅವರು ದೇವರ ಹೆಸರಿಗೆ ಅಗೌರವವನ್ನೂ ಸಭೆಗೆ ಅಪಕೀರ್ತಿಯನ್ನೂ ತಂದಿದ್ದಿರಸಾಧ್ಯವಿದೆ. ವೈಯಕ್ತಿಕವಾಗಿ ನಮ್ಮ ವಿರುದ್ಧವೂ ಅವರು ಪಾಪಮಾಡಿದ್ದಿರಬಹುದು. ಆದರೂ ಈ ಪ್ರಕರಣವನ್ನು ಪರೀಕ್ಷಿಸಲು ನೇಮಿಸಲಾದ ಹಿರಿಯರು ಯೆಹೋವನ ಮಾರ್ಗದರ್ಶನೆಗನುಸಾರ, ಪಶ್ಚಾತ್ತಾಪಿ ಪಾಪಿಯನ್ನು ಸಭೆಯೊಳಗೆ ಪುನಃ ಸೇರಿಸಿಕೊಳ್ಳಲೇಬೇಕು ಎಂದು ನಿಷ್ಕರ್ಷಿಸುವಾಗ ಅವನು ಯೆಹೋವನಿಂದ ಕ್ಷಮಿಸಲ್ಪಟ್ಟನು ಎಂಬುದನ್ನು ಸೂಚಿಸುತ್ತದೆ. (ಮತ್ತಾ. 18:17-20) ನಾವೂ ಈ ವಿಷಯದಲ್ಲಿ ಯೆಹೋವನನ್ನು ಅನುಕರಿಸಬಾರದೊ? ಅನುಕರಿಸಬೇಕು. ನಾವು ನಿರ್ದಯರೂ ಅಕ್ಷಮ್ಯರೂ ಆಗಿರುವುದು ನಿಶ್ಚಯವಾಗಿಯೂ ಯೆಹೋವನನ್ನು ವಿರೋಧಿಸುವವರಾಗಿ ತೋರಿಸಿಕೊಡುವುದು. ದೇವರ ಸಭೆಯ ಶಾಂತಿ ಮತ್ತು ಐಕ್ಯತೆಗೆ ನೆರವಾಗಲು ಹಾಗೂ ಯೆಹೋವನ ಮೆಚ್ಚಿಕೆಯನ್ನು ಪಡೆಯಲು, ನಿಜವಾಗಿಯೂ ಪಶ್ಚಾತ್ತಾಪಪಟ್ಟು ಪುನಸ್ಸ್ಥಾಪಿಸಲ್ಪಡುವ ಪಾಪಿಗಳಿಗಾಗಿ ನಾವು ‘ನಮ್ಮ ಪ್ರೀತಿಯನ್ನು ಸ್ಥಿರೀಕರಿಸುವುದು’ ಹಿತಕರವಲ್ಲವೊ?—ಮತ್ತಾ. 6:14, 15; ಲೂಕ 15:7.

“ಅವನು ನನಗೆ ಉಪಯುಕ್ತನಾಗಿದ್ದಾನೆ”

16. ಪೌಲನು ಮಾರ್ಕನ ವಿಷಯದಲ್ಲಿ ನಿರಾಶೆಗೊಂಡದ್ದೇಕೆ?

16 ನಮ್ಮನ್ನು ನಿರಾಶೆಗೆ ಒಳಪಡಿಸಿದವರ ವಿರುದ್ಧ ನಕಾರಾತ್ಮಕ ಭಾವನೆಗಳನ್ನು ಇಟ್ಟುಕೊಳ್ಳಬಾರದು ಎಂಬುದನ್ನು ಇನ್ನೊಂದು ಶಾಸ್ತ್ರೀಯ ವೃತ್ತಾಂತವು ತೋರಿಸುತ್ತದೆ. ಉದಾಹರಣೆಗಾಗಿ, ಯೋಹಾನ ಮಾರ್ಕನು ಅಪೊಸ್ತಲ ಪೌಲನನ್ನು ಕಟುವಾದ ನಿರಾಶೆಗೆ ಒಳಪಡಿಸಿದನು. ಹೇಗೆ? ಪೌಲಬಾರ್ನಬರು ತಮ್ಮ ಮೊದಲನೇ ಮಿಷನೆರಿ ಸಂಚಾರವನ್ನು ಆರಂಭಿಸಿದಾಗ ಅವರಿಗೆ ನೆರವಾಗಲು ಮಾರ್ಕನು ಅವರೊಂದಿಗೆ ಹೋದನು. ಆದರೆ ಅವರ ಸಂಚಾರದ ನಿರ್ದಿಷ್ಟ ಹಂತದಲ್ಲಿ ಹಾಗೂ ಸ್ಪಷ್ಟವಾಗಿ ನಮೂದಿಸದ ಕಾರಣದಿಂದ ಯೋಹಾನ ಮಾರ್ಕನು ತನ್ನ ಸಂಗಡಿಗರನ್ನು ಬಿಟ್ಟು ಮನೆಗೆ ಹಿಂದಿರುಗಿ ಹೋದನು. ಪೌಲನು ಮಾರ್ಕನ ಈ ನಿರ್ಣಯದಿಂದಾಗಿ ಎಷ್ಟು ನಿರಾಶೆಗೊಂಡನೆಂದರೆ ತಮ್ಮ ಎರಡನೇ ಪ್ರಯಾಣದ ಸಿದ್ಧತೆಯಲ್ಲಿ ಮಾರ್ಕನನ್ನು ತಮ್ಮೊಂದಿಗೆ ಪುನಃ ಕರಕೊಂಡು ಹೋಗುವ ವಿಷಯದಲ್ಲಿ ಬಾರ್ನಬನೊಂದಿಗೆ ವಾಗ್ವಾದ ಮಾಡಿದನು. ಮೊದಲನೇ ಪ್ರಯಾಣದಲ್ಲಿ ಸಂಭವಿಸಿದ ಸಂಗತಿಯ ಕಾರಣ ಮಾರ್ಕನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವುದು ಪೌಲನಿಗೆ ಬೇಡವಾಗಿತ್ತು.—ಅ. ಕಾರ್ಯಗಳು 13:1-5, 13; 15:37, 38 ಓದಿ.

17, 18. ಪೌಲ ಮತ್ತು ಮಾರ್ಕರ ಮಧ್ಯೆಯಿದ್ದ ಮನಸ್ತಾಪವು ಪರಿಹರಿಸಲ್ಪಟ್ಟಿತ್ತೆಂಬುದು ನಮಗೆ ಹೇಗೆ ಗೊತ್ತು, ಮತ್ತು ನಾವು ಇದರಿಂದ ಏನನ್ನು ಕಲಿಯಬಲ್ಲೆವು?

17 ಆದರೆ ಮಾರ್ಕನು ಪೌಲನ ನಿರಾಕರಣೆಯಿಂದ ಅತಿಯಾಗಿ ನಿರಾಶೆಗೊಳ್ಳಲು ತನ್ನನ್ನು ಬಿಟ್ಟುಕೊಡಲಿಲ್ಲ. ಅವನು ಬೇರೊಂದು ಕ್ಷೇತ್ರದಲ್ಲಿ ಬಾರ್ನಬನೊಂದಿಗೆ ಮಿಷನೆರಿ ಚಟುವಟಿಕೆಯನ್ನು ಮುಂದುವರಿಸಿದನು. (ಅ. ಕಾ. 15:39) ಅವನು ನಂಬಿಗಸ್ತನೂ ಭರವಸಯೋಗ್ಯನೂ ಆಗಿದ್ದನು ಎಂಬುದು ಪೌಲನು ಕೆಲವು ವರ್ಷಗಳ ನಂತರ ಏನು ಬರೆದನೋ ಅದರಿಂದ ತೋರಿಸಲ್ಪಟ್ಟಿತು. ಆಗ ರೋಮಿನಲ್ಲಿ ಸೆರೆವಾಸಿಯಾಗಿದ್ದ ಪೌಲನು ಪತ್ರದ ಮೂಲಕ ತಿಮೊಥೆಯನನ್ನು ಕರೇಕಳುಹಿಸಿದನು. ಅದೇ ಪತ್ರದಲ್ಲಿ ಪೌಲನು ಬರೆದದ್ದು: “ಮಾರ್ಕನನ್ನು ನಿನ್ನೊಂದಿಗೆ ಕರೆದುಕೊಂಡು ಬಾ, ಏಕೆಂದರೆ ಶುಶ್ರೂಷೆಯ ಕೆಲಸದಲ್ಲಿ ಅವನು ನನಗೆ ಉಪಯುಕ್ತನಾಗಿದ್ದಾನೆ.” (2 ತಿಮೊ. 4:11) ಹೌದು, ಮಾರ್ಕನು ಈಗ ಒಳ್ಳೆಯ ಪ್ರಗತಿಯನ್ನು ಮಾಡಿದ್ದನೆಂದು ಪೌಲನು ನಂಬಿದನು.

18 ಇದರಿಂದ ನಮಗೊಂದು ಪಾಠ ಕಲಿಯಲಿಕ್ಕಿದೆ. ಮಾರ್ಕನು ಒಬ್ಬ ಒಳ್ಳೇ ಮಿಷನೆರಿಯ ಗುಣಗಳನ್ನು ಬೆಳೆಸಿಕೊಂಡನು. ಪೌಲನ ಆರಂಭದ ನಿರಾಕರಣೆಯಿಂದಾಗಿ ಅವನು ಎಡವಲಿಲ್ಲ. ಅವನು ಮತ್ತು ಪೌಲನು ಇಬ್ಬರೂ ಆಧ್ಯಾತ್ಮಿಕ ಪುರುಷರಾಗಿದ್ದರು. ಅವರ ಮಧ್ಯೆ ಯಾವ ಸುದೀರ್ಘ ಮನಸ್ತಾಪ, ಹಗೆತನ ಇರಲಿಲ್ಲ. ಅದಕ್ಕೆ ಬದಲಾಗಿ ತದನಂತರ ಪೌಲನು ಮಾರ್ಕನನ್ನು ಒಬ್ಬ ಅಮೂಲ್ಯ ಸಹಾಯಕನಾಗಿ ಮನಗಂಡನು. ಹೀಗೆ ಸಹೋದರರು ಕಷ್ಟಗಳನ್ನು ಪರಿಹರಿಸಿಕೊಂಡಾಗ ಮತ್ತು ಸಮಸ್ಯೆಗಳು ದಾಟಿಹೋದಾಗ ಮಾಡತಕ್ಕ ಯೋಗ್ಯವಾದ ವಿಷಯವೇನೆಂದರೆ ಮುಂದೆ ಸಾಗುತ್ತಾ ಇತರರು ಆಧ್ಯಾತ್ಮಿಕ ಪ್ರಗತಿಯನ್ನು ಮಾಡುವಂತೆ ಸಹಾಯಮಾಡುವುದನ್ನು ಮುಂದುವರಿಸುವುದೇ. ಇತರರಲ್ಲಿರುವ ಸುಗುಣಗಳನ್ನು ಅಂಗೀಕರಿಸುವ ಮೂಲಕ ಸಭೆಯ ಭಕ್ತಿವೃದ್ಧಿಯಾಗುತ್ತದೆ.

ಸಭೆ ಮತ್ತು ನೀವು

19. ಕ್ರೈಸ್ತ ಸಭೆಯ ಸದಸ್ಯರೆಲ್ಲರು ಒಬ್ಬರಿಗೊಬ್ಬರು ಯಾವ ಸಹಾಯವನ್ನು ನೀಡಬಲ್ಲರು?

19 ‘ನಿಭಾಯಿಸಲು ಕಷ್ಟಕರವಾದ ಈ ಕಠಿನಕಾಲಗಳಲ್ಲಿ’ ಸಭೆಯಲ್ಲಿರುವ ಸಹೋದರ ಸಹೋದರಿಯರ ಸಹಾಯವು ನಿಮಗೆ ಬೇಕು ಮತ್ತು ನಿಮ್ಮ ಸಹಾಯವು ಅವರಿಗೆ ಬೇಕು. (2 ತಿಮೊ. 3:1) ಕೆಲವು ಕ್ರೈಸ್ತರಿಗೆ ತಾವು ಎದುರಿಸುವ ಸನ್ನಿವೇಶಗಳನ್ನು ಯಶಸ್ವಿಕರವಾಗಿ ನಿರ್ವಹಿಸಲು ಯಾವ ಮಾರ್ಗವನ್ನು ತಕ್ಕೊಳ್ಳಬೇಕು ಎಂಬುದು ಯಾವಾಗಲೂ ತಿಳಿದಿರಲಿಕ್ಕಿಲ್ಲ, ಆದರೆ ಯೆಹೋವನಿಗೆ ತಿಳಿದಿದೆ. ಅಲ್ಲದೆ ಆತನು ಇತರರು ಯೋಗ್ಯ ಮಾರ್ಗವನ್ನು ತಕ್ಕೊಳ್ಳಲು ಸಹಾಯಮಾಡುವಂತೆ ನಿಮ್ಮನ್ನು ಹಾಗೂ ಸಭೆಯ ವಿವಿಧ ಸದಸ್ಯರನ್ನು ಉಪಯೋಗಿಸಬಲ್ಲನು. (ಯೆಶಾ. 30:20, 21; 32:1, 2) ಆದ್ದರಿಂದ ಅವಶ್ಯವಾಗಿ ಅಪೊಸ್ತಲ ಪೌಲನ ಬುದ್ಧಿವಾದವನ್ನು ಮನಃಪೂರ್ವಕವಾಗಿ ಸ್ವೀಕರಿಸಿರಿ! “ನೀವು ಈಗಾಗಲೇ ಮಾಡುತ್ತಿರುವಂತೆ ಒಬ್ಬರನ್ನೊಬ್ಬರು ಸಾಂತ್ವನಗೊಳಿಸುತ್ತಾ ಪರಸ್ಪರ ಭಕ್ತಿವೃದ್ಧಿಮಾಡುತ್ತಾ” ಮುಂದುವರಿಯಿರಿ.—1 ಥೆಸ. 5:11.

ನಿಮ್ಮ ಉತ್ತರವೇನು?

• ಕ್ರೈಸ್ತ ಸಭೆಯಲ್ಲಿ ಇತರರ ಭಕ್ತಿವೃದ್ಧಿಮಾಡುವ ಅಗತ್ಯವಿದೆ ಏಕೆ?

• ಯಾವ ವಿಧದ ಕಷ್ಟಗಳನ್ನು ಪರಿಹರಿಸುವಂತೆ ನೀವು ಇತರರಿಗೆ ಸಹಾಯಮಾಡಬಹುದು?

• ನಮ್ಮ ಸಭೆಯಲ್ಲಿರುವ ಇತರರ ಸಹಾಯವು ನಮಗೆ ಬೇಕು ಏಕೆ?

[ಅಧ್ಯಯನ ಪ್ರಶ್ನೆಗಳು]

[ಪುಟ 11ರಲ್ಲಿರುವ ಚಿತ್ರ]

ಜೊತೆ ಕ್ರೈಸ್ತನು ಒಂದು ಕಷ್ಟಕರ ಸನ್ನಿವೇಶದಲ್ಲಿ ಹೋರಾಡುತ್ತಿರುವಾಗ ನಾವು ಬೆಂಬಲ ನೀಡಬಲ್ಲೆವು

[ಪುಟ 12ರಲ್ಲಿರುವ ಚಿತ್ರ]

ಇಂದು ಕ್ರೈಸ್ತ ಸಭೆಯಲ್ಲಿರುವ ಅನೇಕ ಯುವ ಸ್ತ್ರೀಪುರುಷರಿಗೆ ಮುಂದಕ್ಕೆ ಕಾರ್ಯರೂಪಕ್ಕೆ ಬರುವ ಹೆಚ್ಚಿನ ಪ್ರತಿಭೆ ಸಾಮರ್ಥ್ಯಗಳಿವೆ