ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೌಜನ್ಯಭರಿತ ಮಾತು ಸುಸಂಬಂಧಗಳನ್ನು ಪ್ರವರ್ಧಿಸುತ್ತದೆ

ಸೌಜನ್ಯಭರಿತ ಮಾತು ಸುಸಂಬಂಧಗಳನ್ನು ಪ್ರವರ್ಧಿಸುತ್ತದೆ

ಸೌಜನ್ಯಭರಿತ ಮಾತು ಸುಸಂಬಂಧಗಳನ್ನು ಪ್ರವರ್ಧಿಸುತ್ತದೆ

‘ನಿಮ್ಮ ಮಾತು ಯಾವಾಗಲೂ ಸೌಜನ್ಯವುಳ್ಳದ್ದಾಗಿ ಇರಲಿ.’—ಕೊಲೊ. 4:6.

1, 2. ಒಬ್ಬ ಸಹೋದರನ ಸೌಜನ್ಯಭರಿತ ಮಾತಿನಿಂದ ಯಾವ ಒಳ್ಳಿತು ಸಾಧಿಸಲ್ಪಟ್ಟಿತು?

“ಮನೆಮನೆಗೆ ಹೋಗಿ ಸಾರುತ್ತಿರುವಾಗ ನಾನು ಒಬ್ಬ ವ್ಯಕ್ತಿಯನ್ನು ಭೇಟಿಯಾದೆ. ಅವನೆಷ್ಟು ಕೋಪಗೊಂಡನೆಂದರೆ ಅವನ ತುಟಿಗಳು ಕಂಪಿಸತೊಡಗಿದವು ಮತ್ತು ಅವನ ಇಡೀ ದೇಹ ನಡುಗುತ್ತಿತ್ತು. ನಾನು ಶಾಂತವಾಗಿ ಬೈಬಲನ್ನು ಉಪಯೋಗಿಸಿ ಅವನೊಂದಿಗೆ ತರ್ಕಿಸಲು ಪ್ರಯತ್ನಿಸಿದೆ, ಆದರೆ ಅವನ ಕೋಪ ಹೆಚ್ಚಾಯಿತೆ ವಿನಾ ಕಡಿಮೆಯಾಗಲಿಲ್ಲ. ಇದು ಸಾಲದೆಂದು ಅವನ ಹೆಂಡತಿ-ಮಕ್ಕಳು ಸಹ ನನ್ನನ್ನು ಬೈಯಲಾರಂಭಿಸಿದರು. ನಾನೀಗ ಹೊರಡಲೇಬೇಕು ಎಂದು ನನಗೆ ತಿಳಿಯಿತು. ನಾನು ಶಾಂತಿಯಿಂದ ಬಂದೆ, ಶಾಂತಿಯಿಂದ ಹೋಗಲು ಬಯಸುತ್ತೇನೆ ಎಂದು ಆ ಕುಟುಂಬಕ್ಕೆ ಹೇಳಿದೆ. ಅವರಿಗೆ ಪ್ರೀತಿ, ಸೌಮ್ಯಭಾವ, ಸ್ವನಿಯಂತ್ರಣ ಮತ್ತು ಶಾಂತಿಯ ಕುರಿತು ತಿಳಿಸಲಾಗಿರುವ ಗಲಾತ್ಯ 5:22 ಮತ್ತು 23ನ್ನು ತೋರಿಸಿದೆ. ಆಮೇಲೆ ಅಲ್ಲಿಂದ ಹೊರಟೆ” ಎಂದು ಒಬ್ಬ ಸಹೋದರನು ವರದಿಸುತ್ತಾನೆ.

2 ಅವನು ಮುಂದುವರಿಸುತ್ತಾ ಹೇಳುವುದು: “ನಂತರ ನಾನು ಬೀದಿಯ ಆಚೆಬದಿಯಿರುವ ಮನೆಗಳನ್ನು ಸಂದರ್ಶಿಸುತ್ತಿದ್ದಾಗ ಈ ಕುಟುಂಬ ತಮ್ಮ ಮನೆ ಮುಂಭಾಗದ ಮೆಟ್ಟಿಲಿನ ಮೇಲೆ ಕುಳಿತಿರುವುದನ್ನು ನೋಡಿದೆ. ಅವರು ನನ್ನನ್ನು ಕರೆದರು. ‘ಈಗ ಏನು ಕಾದಿದೆಯೊ’ ಎಂದು ನನಗನಿಸಿತು. ಆ ವ್ಯಕ್ತಿಯು ಕೈಯಲ್ಲಿದ್ದ ಪಾತ್ರೆಯಿಂದ ನನಗೆ ಕುಡಿಯಲು ತಣ್ಣೀರನ್ನು ಕೊಟ್ಟನು. ಒರಟಾಗಿ ವರ್ತಿಸಿದಕ್ಕಾಗಿ ಕ್ಷಮೆ ಕೇಳಿ ನನ್ನ ಬಲವಾದ ನಂಬಿಕೆಯನ್ನು ಶ್ಲಾಘಿಸಿದನು. ನಾವು ಸಮಾಧಾನದಿಂದ ಅಗಲಿದೆವು.”

3. ಇತರರು ನಮ್ಮ ಕೋಪವನ್ನೆಬ್ಬಿಸುವಾಗ ನಾವು ನಮ್ಮನ್ನು ತಡೆದುಹಿಡಿಯಬೇಕು ಏಕೆ?

3 ಇಂದಿನ ಒತ್ತಡಭರಿತ ಲೋಕದಲ್ಲಿ ಮತ್ತು ಶುಶ್ರೂಷೆಯಲ್ಲಿ ಸಹ ಕೋಪೋದ್ರಿಕ್ತ ಜನರನ್ನು ಭೇಟಿಯಾಗುವುದನ್ನು ಹೆಚ್ಚಾಗಿ ತಪ್ಪಿಸಸಾಧ್ಯವಿಲ್ಲ. ಇಂಥ ಸಮಯದಲ್ಲಿ ನಾವು “ಸೌಮ್ಯಭಾವದಿಂದಲೂ ಆಳವಾದ ಗೌರವದಿಂದಲೂ” ವರ್ತಿಸುವುದು ಪ್ರಾಮುಖ್ಯ. (1 ಪೇತ್ರ 3:15) ಮೇಲೆ ತಿಳಿಸಲಾದ ಸಹೋದರನು ಮನೆಯವನ ಕ್ರೋಧ ಮತ್ತು ನಿರ್ದಯತೆಯಿಂದ ಕೋಪಗೊಂಡಿದ್ದನು ಎಂದು ನೆನಸೋಣ. ಆಗ ಏನಾಗುತ್ತಿತ್ತು? ಆ ವ್ಯಕ್ತಿಯ ಮನೋಭಾವ ಬದಲಾಗುತ್ತಿರಲಿಲ್ಲ. ಅವನು ಇನ್ನಷ್ಟು ಹೆಚ್ಚು ಕೋಪಗೊಳ್ಳುತ್ತಿದ್ದನಷ್ಟೆ. ಸಹೋದರನು ಹತೋಟಿಯನ್ನು ಕಳಕೊಳ್ಳದೆ ಸೌಜನ್ಯದಿಂದ ಮಾತಾಡಿದ ಕಾರಣ ಫಲಿತಾಂಶ ಒಳ್ಳೇದಾಯಿತು.

ಮಾತನ್ನು ಸೌಜನ್ಯವುಳ್ಳದ್ದಾಗಿ ಮಾಡುವುದು ಯಾವುದು?

4. ಸೌಜನ್ಯಭರಿತ ಮಾತನ್ನು ಉಪಯೋಗಿಸುವುದು ಏಕೆ ಪ್ರಾಮುಖ್ಯ?

4 ನಾವು ವ್ಯವಹರಿಸುತ್ತಿರುವುದು ಸಭೆಯ ಹೊರಗಿನವರೊಂದಿಗೆ ಅಥವಾ ಒಳಗಿನವರೊಂದಿಗೆ ಇಲ್ಲವೆ ಸ್ವಂತ ಕುಟುಂಬದೊಂದಿಗೇ ಇರಲಿ, ಅಪೊಸ್ತಲ ಪೌಲನು ಕೊಟ್ಟ ಈ ಸಲಹೆಯನ್ನು ಪಾಲಿಸುವುದು ಅವಶ್ಯ: “ನಿಮ್ಮ ಮಾತು ಯಾವಾಗಲೂ ಸೌಜನ್ಯವುಳ್ಳದ್ದಾಗಿಯೂ ಉಪ್ಪಿನಿಂದ ಹದಗೊಳಿಸಲ್ಪಟ್ಟದ್ದಾಗಿಯೂ ಇರಲಿ.” (ಕೊಲೊ. 4:6) ಇಂಥ ಸಾರವತ್ತಾದ ಯೋಗ್ಯ ಮಾತು ಒಳ್ಳೇ ಸಂವಾದಕ್ಕೆ ಮತ್ತು ಶಾಂತಿಗೆ ಅತ್ಯಾವಶ್ಯಕ.

5. ಒಳ್ಳೇ ಸಂವಾದ ಅಂದರೆ ಏನಲ್ಲ? ದೃಷ್ಟಾಂತಿಸಿ.

5 ಒಳ್ಳೇ ಸಂವಾದವೆಂದರೆ ನೀವು ನೆನಸುವ ಅಥವಾ ಭಾವಿಸುವ ಎಲ್ಲ ವಿಷಯಗಳನ್ನು ಒಂದೇ ಸಮನೆ ತಟ್ಟನೆ ಹೇಳಿಬಿಡುವುದಲ್ಲ. ನೀವು ಕೋಪಗೊಂಡಿರುವಾಗ ಮುಖ್ಯವಾಗಿ ಹೆಚ್ಚಿನ ಜಾಗ್ರತೆ ವಹಿಸಬೇಕು. ಅಂಕೆತಪ್ಪಿದ ಕೋಪವನ್ನು ವ್ಯಕ್ತಪಡಿಸುವುದು ಬಲಹೀನತೆಯ ಸೂಚನೆಯಾಗಿದೆಯೆ ಹೊರತು ಮನೋಬಲದ್ದಲ್ಲ ಎಂದು ಶಾಸ್ತ್ರಗ್ರಂಥ ತೋರಿಸುತ್ತದೆ. (ಜ್ಞಾನೋಕ್ತಿ 25:28; 29:11 ಓದಿ.) ತನ್ನ ಸಮಕಾಲೀನರಲ್ಲಿ ‘ಬಹುಸಾತ್ವಿಕನಾಗಿದ್ದ’ ಮೋಶೆ ಸಹ ಒಮ್ಮೆ ತಾಳ್ಮೆಯನ್ನು ಕಳಕೊಂಡನು. ಇಸ್ರಾಯೇಲ್‌ ಜನಾಂಗದ ದಂಗೆಕೋರ ಪ್ರವೃತ್ತಿಯಿಂದಾಗಿ ಅವನು ದೇವರಿಗೆ ಗೌರವ ಕೊಡಲು ತಪ್ಪಿದನು. ಮೋಶೆ ತಾನು ತಾಳ್ಮೆಗೆಟ್ಟನೆಂದು ಸ್ಪಷ್ಟವಾಗಿ ತೋರಿಸಿದನು, ಆದರೆ ಯೆಹೋವನು ಅದನ್ನು ಮೆಚ್ಚಲಿಲ್ಲ. ಆದುದರಿಂದ ನಲವತ್ತು ವರ್ಷ ಇಸ್ರಾಯೇಲ್ಯರನ್ನು ಮುನ್ನಡಿಸಿದ ಮೇಲೆ ಅವರನ್ನು ವಾಗ್ದತ್ತ ದೇಶದೊಳಗೆ ಕೊಂಡೊಯ್ಯುವ ಸುಯೋಗ ಮೋಶೆಗೆ ಸಿಗಲಿಲ್ಲ.—ಅರ. 12:3; 20:10, 12; ಕೀರ್ತ. 106:32.

6. ನಾವು ವಿವೇಚನೆಯಿಂದ ಮಾತಾಡಬೇಕು ಎಂಬುದರ ಅರ್ಥವೇನು?

6 ನಾವು ಮಾತಾಡುವಾಗ ನಾಲಗೆಯನ್ನು ಸ್ವಾಧೀನದಲ್ಲಿಡುವುದನ್ನು, ವಿವೇಚನೆ ಮತ್ತು ಒಳ್ಳೇ ತೀರ್ಮಾನಶಕ್ತಿಯನ್ನು ಬಳಸುವುದನ್ನು ಶಾಸ್ತ್ರಗ್ರಂಥ ಶ್ಲಾಘಿಸುತ್ತದೆ. “ಮಾತಾಳಿಗೆ ಪಾಪ ತಪ್ಪದು; ಮೌನಿಯು ಮತಿವಂತ” ಎಂದದು ಹೇಳುತ್ತದೆ. (ಜ್ಞಾನೋ. 10:19; 17:27) ಆದರೂ ವಿವೇಚನೆಯನ್ನು ಉಪಯೋಗಿಸುವುದೆಂದರೆ ನಿಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಲೇ ಬಾರದು ಎಂದಲ್ಲ. ಅದರರ್ಥ ‘ಸೌಜನ್ಯದಿಂದ’ ಮಾತಾಡುವುದಾಗಿದೆ. ನಾಲಗೆಯನ್ನು ಗುಣಕಾರಕ ಮದ್ದಿನಂತೆ ಉಪಯೋಗಿಸುವುದಕ್ಕೆ ಅದು ಸೂಚಿಸುತ್ತದೆ, ಗಾಯಗೊಳಿಸಲಿಕ್ಕಲ್ಲ.—ಜ್ಞಾನೋಕ್ತಿ 12:18; 18:21 ಓದಿ.

“ಸುಮ್ಮನಿರುವ ಸಮಯ, ಮಾತಾಡುವ ಸಮಯ”

7. ಯಾವ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಬಾರದು, ಮತ್ತು ಏಕೆ?

7 ನಮ್ಮ ಜೊತೆಕಾರ್ಮಿಕರೊಂದಿಗೆ ಅಥವಾ ಶುಶ್ರೂಷೆಯಲ್ಲಿ ಸಿಗುವ ಅಪರಿಚಿತರೊಂದಿಗೆ ಮಾತಾಡುವಾಗ ನಾಲಗೆಯನ್ನು ಸ್ವಾಧೀನದಲ್ಲಿಟ್ಟು ಸೌಜನ್ಯವನ್ನು ತೋರಿಸುವುದು ಮಾತ್ರವಲ್ಲ ಸಭೆಯಲ್ಲಿ ಮತ್ತು ಮನೆಯಲ್ಲೂ ನಾವು ಇದನ್ನೇ ಮಾಡಬೇಕು. ದುಷ್ಪರಿಣಾಮಗಳ ಕುರಿತು ಯೋಚಿಸದೆ ಕೆಂಡಕಾರುವುದು ನಮ್ಮ ಮತ್ತು ಇತರರ ಆಧ್ಯಾತ್ಮಿಕ, ಭಾವನಾತ್ಮಕ ಮತ್ತು ಶಾರೀರಿಕ ಸುಕ್ಷೇಮಕ್ಕೆ ಗಂಭೀರ ಹಾನಿಯನ್ನು ತರಬಲ್ಲದು. (ಜ್ಞಾನೋ. 18:6, 7) ನಮ್ಮ ಅಪರಿಪೂರ್ಣ ಸ್ವಭಾವದ ವ್ಯಕ್ತಪಡಿಸುವಿಕೆಗಳಾಗಿರುವ ಕೆಟ್ಟ ಭಾವನೆಗಳನ್ನು ಹತೋಟಿಯಲ್ಲಿಡಬೇಕು. ನಿಂದಾತ್ಮಕ ಮಾತು, ಅಪಹಾಸ್ಯ, ತಿರಸ್ಕಾರ ಮತ್ತು ದ್ವೇಷಭರಿತ ಕ್ರೋಧ ತಪ್ಪಾದವುಗಳೇ. (ಕೊಲೊ. 3:8; ಯಾಕೋ. 1:20) ಅವು ಇತರರೊಂದಿಗಿನ ಮತ್ತು ಯೆಹೋವನೊಂದಿಗಿನ ಅಮೂಲ್ಯ ಸಂಬಂಧವನ್ನು ಹಾಳುಮಾಡಬಲ್ಲವು. ಯೇಸು ಕಲಿಸಿದ್ದು: “ತನ್ನ ಸಹೋದರನ ವಿರುದ್ಧ ಕ್ರೋಧ ತೋರಿಸುತ್ತಾ ಮುಂದುವರಿಯುವ ಪ್ರತಿಯೊಬ್ಬನೂ ನ್ಯಾಯಸ್ಥಾನಕ್ಕೆ ಉತ್ತರವಾದಿಯಾಗಿರುವನು; ತನ್ನ ಸಹೋದರನನ್ನು ಹೇಳಲಾಗದಷ್ಟು ಹೊಲಸಾದ ಮಾತುಗಳಿಂದ ಸಂಬೋಧಿಸುವವನು ಸರ್ವೋಚ್ಚ ನ್ಯಾಯಾಲಯಕ್ಕೆ ಉತ್ತರವಾದಿಯಾಗಿರುವನು; ಮತ್ತು ‘ತುಚ್ಛ ಮೂರ್ಖನೇ!’ ಎನ್ನುವವನು ಬೆಂಕಿ ಉರಿಯುತ್ತಿರುವ ಗೆಹೆನ್ನಕ್ಕೆ ಗುರಿಯಾಗುವನು.”—ಮತ್ತಾ. 5:22.

8. ನಾವು ಯಾವಾಗ ನಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಬೇಕು, ಆದರೆ ಯಾವ ವಿಧದಲ್ಲಿ?

8 ಆದರೆ ಕೆಲವು ವಿಷಯಗಳ ಕುರಿತು ಮಾತಾಡಿಬಿಡುವುದು ಒಳ್ಳೇದು ಎಂದು ನಮಗನಿಸಬಹುದು. ಸಹೋದರನೊಬ್ಬನು ಹೇಳಿದ ಅಥವಾ ಮಾಡಿದ ಯಾವುದೋ ವಿಷಯವು ನಿಮ್ಮನ್ನು ತುಂಬ ಬಾಧಿಸುತ್ತಿದ್ದಲ್ಲಿ ಅದನ್ನು ಲಕ್ಷಿಸದೆ ಬಿಟ್ಟುಬಿಡಲು ನಿಮ್ಮಿಂದ ಸಾಧ್ಯವಾಗದಿರಬಹುದು. ಆಗ ದ್ವೇಷಭರಿತ ಅನಿಸಿಕೆಗಳು ನಿಮ್ಮ ಹೃದಯದಲ್ಲಿ ಬೆಳೆಯುವಂತೆ ಬಿಡಬೇಡಿ. (ಜ್ಞಾನೋ. 19:11) ಯಾರಾದರೂ ನಿಮ್ಮನ್ನು ಕೋಪಗೊಳಿಸುವಲ್ಲಿ ಮೊದಲು ನಿಮ್ಮ ಭಾವನೆಗಳನ್ನು ಹತೋಟಿಗೆ ತಂದು ಆಮೇಲೆ ಸಮಸ್ಯೆಯನ್ನು ಪರಿಹರಿಸಲು ಬೇಕಾದ ಹೆಜ್ಜೆಗಳನ್ನು ತೆಗೆದುಕೊಳ್ಳಿರಿ. “ಸೂರ್ಯನು ಮುಳುಗುವುದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ” ಎಂದು ಪೌಲನು ಬರೆದನು. ಸಮಸ್ಯೆ ನಿಮ್ಮನ್ನು ಕಾಡಿಸುತ್ತಾ ಇರುವುದರಿಂದ ಸೂಕ್ತ ಸಮಯ ನೋಡಿಕೊಂಡು ದಯಾಭಾವದಿಂದ ಅದರ ಕುರಿತು ಮಾತಾಡಿ. (ಎಫೆಸ 4:26, 27, 31, 32 ಓದಿ.) ನಿಮ್ಮ ಸಹೋದರನೊಂದಿಗೆ ಆ ವಿಚಾರದ ಕುರಿತು ಮುಚ್ಚುಮರೆಯಿಲ್ಲದೆ ಮಾತಾಡಿರಿ, ಆದರೆ ಇದನ್ನು ಸೌಜನ್ಯದಿಂದಲೂ ಸುಸಂಬಂಧವನ್ನು ಪುನಸ್ಸ್ಥಾಪಿಸುವ ದೃಷ್ಟಿಯಿಂದಲೂ ಮಾಡಿ.—ಯಾಜ. 19:17; ಮತ್ತಾ. 18:15.

9. ಸಮಸ್ಯೆಗಳ ಕುರಿತು ಮಾತಾಡಲು ಹೋಗುವ ಮುನ್ನ ನಮ್ಮ ಸ್ವಂತ ಭಾವನೆಗಳನ್ನು ಏಕೆ ಹತೋಟಿಗೆ ತರಬೇಕು?

9 ಆದರೆ ಸೂಕ್ತ ಸಮಯವನ್ನು ಆರಿಸಿಕೊಳ್ಳಲು ಜಾಗ್ರತೆವಹಿಸಬೇಕು ನಿಶ್ಚಯ. ಯಾಕೆಂದರೆ “ಸುಮ್ಮನಿರುವ ಸಮಯ, ಮಾತಾಡುವ ಸಮಯ” ಇದೆ. (ಪ್ರಸಂ. 3:1, 7) ಮಾತ್ರವಲ್ಲದೆ “ಶಿಷ್ಟನ ಹೃದಯ ವಿವೇಚಿಸಿ ಉತ್ತರಕೊಡುತ್ತದೆ.” (ಜ್ಞಾನೋ. 15:28) ಇದರಲ್ಲಿ ಸಮಸ್ಯೆಗಳನ್ನು ಪರಿಹರಿಸಲಿಕ್ಕಾಗಿ ಅವುಗಳ ಕುರಿತು ಮಾತಾಡಲು ಕಾಯುವುದು ಸಹ ಒಳಗೂಡಿರಬಹುದು. ಒಬ್ಬನು ಇನ್ನೂ ತುಂಬ ಕುಪಿತನಾಗಿರುವ ಸಮಯದಲ್ಲೇ ಮಾತಾಡಲಿಕ್ಕೆ ಹೋದರೆ ವಿಷಯಗಳು ಇನ್ನೂ ಹದಗೆಡಬಹುದು. ಹಾಗೆಂದು ತುಂಬ ದೀರ್ಘ ಸಮಯ ಕಾಯುವುದೂ ಸಹ ಒಳ್ಳೇದಲ್ಲ.

ಸೌಜನ್ಯಭರಿತ ಕ್ರಿಯೆಗಳು ಸುಸಂಬಂಧಗಳನ್ನು ಪ್ರವರ್ಧಿಸುತ್ತವೆ

10. ಸೌಜನ್ಯಭರಿತ ಕ್ರಿಯೆಗಳನ್ನು ನಡಿಸುವುದು ಸಂಬಂಧಗಳನ್ನು ಹೇಗೆ ಉತ್ತಮಗೊಳಿಸಬಲ್ಲದು?

10 ಸೌಜನ್ಯಭರಿತ ಮಾತು ಮತ್ತು ಒಳ್ಳೇ ಸಂವಾದವು ಶಾಂತಿದಾಯಕ ಸಂಬಂಧಗಳನ್ನು ಸ್ಥಾಪಿಸಿ ಬಲಪಡಿಸಲು ನೆರವಾಗುತ್ತವೆ. ವಾಸ್ತವದಲ್ಲಿ ಇತರರೊಂದಿಗಿನ ನಮ್ಮ ಸಂಬಂಧವನ್ನು ಉತ್ತಮಗೊಳಿಸಲು ನಮ್ಮಿಂದಾದದ್ದನ್ನು ಮಾಡುವುದು ಅವರೊಂದಿಗಿನ ನಮ್ಮ ಸಂವಾದವನ್ನೂ ಉತ್ತಮಗೊಳಿಸಬಲ್ಲದು. ಇತರರಿಗಾಗಿ ಮಾಡಲ್ಪಡುವ ಯಥಾರ್ಥ ಮನಸ್ಸಿನ ದಯಾಭರಿತ ಕ್ರಿಯೆಗಳು ಮುಕ್ತ ಸಂವಾದಕ್ಕೆ ಇಂಬುಕೊಡುತ್ತವೆ. ಸಹಾಯಹಸ್ತ ನೀಡಲು ಅವಕಾಶಗಳಿಗಾಗಿ ಹುಡುಕುವುದು, ಹೃತ್ಪೂರ್ವಕವಾಗಿ ಒಂದು ಉಡುಗೊರೆಯನ್ನು ಕೊಡುವುದು ಮತ್ತು ಅತಿಥಿಸತ್ಕಾರ ತೋರಿಸುವುದು ಇದರಲ್ಲಿ ಸೇರಿರಬಹುದು. ಇದು ಒಬ್ಬ ವ್ಯಕ್ತಿಯ ತಲೆಯ ಮೇಲೆ “ಕೆಂಡವನ್ನು” ಹೇರಿದಂತೆ ಮಾಡಿ ಅವನಲ್ಲಿರುವ ಸುಗುಣಗಳನ್ನು ಹೊರತರಬಲ್ಲದು. ಇದರಿಂದ ವಿಷಯಗಳನ್ನು ಮುಕ್ತವಾಗಿ ಮಾತಾಡಿ ಮನಸ್ತಾಪವನ್ನು ಪರಿಹರಿಸಲು ಹೆಚ್ಚು ಸುಲಭವಾಗುವುದು.—ರೋಮ. 12:20, 21.

11. ಯಾಕೋಬನು ಏಸಾವನೊಂದಿಗಿನ ಮನಸ್ತಾಪವನ್ನು ಪರಿಹರಿಸಲು ಯಾವ ಕ್ರಮ ತಕ್ಕೊಂಡನು, ಇದರಿಂದ ಯಾವ ಫಲಿತಾಂಶ ಸಿಕ್ಕಿತು?

11 ಮೂಲಪಿತನಾದ ಯಾಕೋಬನು ಇದನ್ನು ಅರ್ಥಮಾಡಿಕೊಂಡನು. ಅವನ ಅವಳಿ ಸೋದರನಾದ ಏಸಾವನು ಯಾಕೋಬನ ಮೇಲೆ ಬಹಳ ಕೋಪಗೊಂಡಿದ್ದನು. ಅವನು ತನ್ನನ್ನು ಕೊಂದೇ ಹಾಕಬಹುದೆಂಬ ಭಯದಿಂದ ಯಾಕೋಬನು ಊರು ಬಿಟ್ಟು ಓಡಿಹೋದನು. ಅನೇಕ ವರ್ಷಗಳ ನಂತರ ಯಾಕೋಬನು ಹಿಂದಿರುಗಿ ಬಂದಾಗ ಏಸಾವನು 400 ಪುರುಷರೊಂದಿಗೆ ಅವನನ್ನು ಸಂಧಿಸಲು ಬಂದನು. ಯಾಕೋಬನು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಟ್ಟನು. ಬಳಿಕ ಅವನು ಏಸಾವನಿಗೆ ಜಾನುವಾರುಗಳ ದೊಡ್ಡ ಉಡುಗೊರೆಯನ್ನು ಮುಂದಾಗಿ ಕಳುಹಿಸಿಕೊಟ್ಟನು. ಈ ಉಡುಗೊರೆ ಉದ್ದೇಶಿಸಿದ್ದನ್ನು ಸಾಧಿಸಿತು. ಅವರಿಬ್ಬರೂ ಸಂಧಿಸಿದಾಗ ಏಸಾವನ ಮನಸ್ಸು ಕರಗಿತ್ತು. ಅವನು ಓಡಿಹೋಗಿ ಯಾಕೋಬನನ್ನು ಅಪ್ಪಿಕೊಂಡನು.—ಆದಿ. 27:41-44; 32:6, 11, 13-15; 33:4, 10.

ಸೌಜನ್ಯಭರಿತ ಮಾತಿನಿಂದ ಇತರರನ್ನು ಪ್ರೋತ್ಸಾಹಿಸಿರಿ

12. ನಾವು ನಮ್ಮ ಸಹೋದರರೊಂದಿಗೆ ಸೌಜನ್ಯಭರಿತ ಮಾತುಗಳನ್ನಾಡಬೇಕು ಏಕೆ?

12 ಕ್ರೈಸ್ತರು ದೇವರ ಸೇವೆ ಮಾಡುತ್ತಾರೆಯೇ ಹೊರತು ಮಾನವರ ಸೇವೆಯನ್ನಲ್ಲ. ಆದರೂ ನಾವು ಸಹಜವಾಗಿಯೇ ಇತರರ ಮೆಚ್ಚಿಕೆಯನ್ನು ಬಯಸುತ್ತೇವೆ. ನಮ್ಮ ಸೌಜನ್ಯಭರಿತ ಮಾತುಗಳು ನಮ್ಮ ಸಹೋದರ ಸಹೋದರಿಯರ ಮನೋಭಾರವನ್ನು ಹಗುರಗೊಳಿಸಬಲ್ಲವು. ಕಟುವಾದ ಟೀಕೆಯಾದರೋ ಆ ಭಾರಗಳನ್ನು ಹೆಚ್ಚಿಸಬಹುದು. ಒಂದುವೇಳೆ ತಾವು ಯೆಹೋವನ ಮೆಚ್ಚಿಕೆಯನ್ನು ಕಳೆದುಕೊಂಡಿದ್ದೇವೋ ಎಂದು ಕೆಲವರು ಯೋಚಿಸುವಂತೆ ಕೂಡ ಅದು ಮಾಡಬಹುದು. ಆದುದರಿಂದ ನಾವು ಯಥಾರ್ಥ ಮನಸ್ಸಿನಿಂದ ಇತರರನ್ನು ಪ್ರೋತ್ಸಾಹಿಸುವ ವಿಷಯಗಳನ್ನು ಮಾತಾಡೋಣ. “ಅಗತ್ಯಕ್ಕನುಸಾರ ಭಕ್ತಿವೃದ್ಧಿಮಾಡಲು ಯೋಗ್ಯವಾಗಿರುವ ಮಾತನ್ನು ಆಡಿರಿ; ಇದು ಕೇಳುವವರಿಗೆ ಪ್ರಯೋಜನವನ್ನು ಉಂಟುಮಾಡಬಹುದು” ಎಂಬ ಸಲಹೆಯನ್ನು ಪಾಲಿಸೋಣ.—ಎಫೆ. 4:29.

13. ಸಲಹೆ ಕೊಡುವಾಗ ಮತ್ತು ಪತ್ರವ್ಯವಹಾರ ನಡೆಸುವಾಗ ಹಿರಿಯರು ಯಾವುದನ್ನು ಮನಸ್ಸಿನಲ್ಲಿಡಬೇಕು?

13 ವಿಶೇಷವಾಗಿ ಹಿರಿಯರು “ವಾತ್ಸಲ್ಯದಿಂದ” ನಡೆದುಕೊಳ್ಳಬೇಕು ಮತ್ತು ಮಂದೆಯನ್ನು ಕೋಮಲವಾಗಿ ಉಪಚರಿಸಬೇಕು. (1 ಥೆಸ. 2:7, 8) ಹಿರಿಯರು ಸಲಹೆ ಕೊಡಬೇಕಾಗಿರುವಾಗ ಅವರ ಗುರಿ “ಸೌಮ್ಯಭಾವದಿಂದ” ಮಾತಾಡುವುದಾಗಿದೆ. ‘ಎದುರಿಸುವವರೊಂದಿಗೆ’ ಮಾತಾಡುವಾಗಲೂ ಅವರಿದನ್ನು ಮಾಡುತ್ತಾರೆ. (2 ತಿಮೊ. 2:24, 25) ಹಿರಿಯರು ಇತರ ಹಿರಿಯರ ಮಂಡಲಿಯೊಂದಿಗೆ ಅಥವಾ ಬ್ರಾಂಚ್‌ ಆಫೀಸಿನೊಂದಿಗೆ ಪತ್ರವ್ಯವಹಾರ ಮಾಡಬೇಕಾಗಿರುವಾಗಲೂ ತಮ್ಮ ವಿಚಾರವನ್ನು ತಿಳಿಸಲು ಸೌಜನ್ಯಭರಿತ ಮಾತುಗಳನ್ನು ಬಳಸಬೇಕು. ಮತ್ತಾಯ 7:12ರಲ್ಲಿ ನಾವು ಓದುವುದಕ್ಕೆ ಅನುಸಾರವಾಗಿ ಅವರು ದಯಾಭರಿತರೂ ಜಾಣ್ಮೆಯುಳ್ಳವರೂ ಆಗಿರಬೇಕು.

ಕುಟುಂಬದೊಳಗೆ ಸೌಜನ್ಯಭರಿತ ಮಾತನ್ನು ಉಪಯೋಗಿಸುವುದು

14. ಪೌಲನು ಗಂಡಂದಿರಿಗೆ ಯಾವ ಸಲಹೆ ಕೊಡುತ್ತಾನೆ, ಮತ್ತು ಏಕೆ?

14 ನಮ್ಮ ಮಾತು, ಮುಖಭಾವ, ದೇಹಭಂಗಿ ಎಲ್ಲವೂ ಇತರರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಕಡಿಮೆ ಅಂದಾಜು ಮಾಡುವುದು ಸುಲಭ. ಉದಾಹರಣೆಗೆ, ತಮ್ಮ ಮಾತುಗಳು ಸ್ತ್ರೀಯರ ಮೇಲೆ ಎಷ್ಟು ಆಳವಾದ ಪ್ರಭಾವ ಬೀರುತ್ತವೆ ಎಂದು ಕೆಲವು ಪುರುಷರು ಪೂರ್ತಿಯಾಗಿ ಅರಿತಿರಲಿಕ್ಕಿಲ್ಲ. ಒಬ್ಬ ಸಹೋದರಿ ಹೇಳಿದ್ದು: “ನನ್ನ ಗಂಡನು ನನ್ನೊಂದಿಗೆ ಕೋಪದಿಂದ ಜೋರಾಗಿ ಮಾತಾಡುವಾಗ ನನಗೆ ತುಂಬಾ ಗಾಬರಿಯಾಗುತ್ತದೆ.” ಕಟುವಾದ ಬಿರುಸು ಮಾತುಗಳು ಒಬ್ಬ ಪುರುಷನಿಗಿಂತ ಒಬ್ಬಾಕೆ ಸ್ತ್ರೀಯ ಮೇಲೆ ಬೀರುವ ಪ್ರಭಾವ ಹೆಚ್ಚು. ಅದನ್ನು ಮರೆಯಲು ಅವಳಿಗೆ ತುಂಬ ಸಮಯ ಸಹ ಹಿಡಿಯಬಹುದು. (ಲೂಕ 2:19) ವಿಶೇಷವಾಗಿ ತಾನು ಪ್ರೀತಿಸುವ ಹಾಗೂ ಗೌರವಿಸಲು ಬಯಸುವ ವ್ಯಕ್ತಿಯಿಂದ ಇಂಥ ಮಾತುಗಳು ಬರುವಾಗ ಸ್ತ್ರೀಯು ತುಂಬ ಬಾಧಿಸಲ್ಪಡುತ್ತಾಳೆ. ಆದುದರಿಂದ ಪೌಲನು, “ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸುತ್ತಾ ಇರಿ; ಅವರ ಮೇಲೆ ಕಟುವಾಗಿ ಕೋಪಿಸಿಕೊಳ್ಳಬೇಡಿರಿ” ಎಂದು ಗಂಡಂದಿರಿಗೆ ಸಲಹೆಯಿತ್ತನು.—ಕೊಲೊ. 3:19.

15. ಗಂಡನೊಬ್ಬನು ತನ್ನ ಹೆಂಡತಿಯನ್ನು ಏಕೆ ಕೋಮಲವಾಗಿ ನಡೆಸಿಕೊಳ್ಳಬೇಕು ಎಂಬುದನ್ನು ದೃಷ್ಟಾಂತಿಸಿ.

15 ಈ ಸಂಬಂಧದಲ್ಲಿ ಒಬ್ಬ ಅನುಭವಸ್ಥ ವಿವಾಹಿತ ಸಹೋದರನು ಒಂದು ದೃಷ್ಟಾಂತವನ್ನು ಕೊಟ್ಟನು. ಒಬ್ಬ ಗಂಡನು ತನ್ನ ಹೆಂಡತಿಯನ್ನು ‘ದುರ್ಬಲ ಪಾತ್ರೆಯೋ’ ಎಂಬಂತೆ ಕೋಮಲವಾಗಿ ಏಕೆ ಉಪಚರಿಸಬೇಕೆಂದು ಹೇಳುತ್ತಾ ಅವನಂದದ್ದು: “ನೀವೊಂದು ಅಮೂಲ್ಯ ಹಾಗೂ ನಾಜೂಕಾದ ಹೂದಾನಿಯನ್ನು ಕೈಗೆತ್ತಿಕೊಳ್ಳುವಾಗ, ಅದನ್ನು ತೀರ ಬಲವಾಗಿ ಅದುಮಿ ಹಿಡಿಯಬಾರದು. ಹಾಗೆ ಹಿಡಿದರೆ ಅದು ಬಿರಿದು ಹೋದೀತು. ಅದನ್ನು ಸರಿಪಡಿಸಿದರೂ ಆ ಬಿರುಕು ಕಾಣಿಸುತ್ತಲೇ ಇರಬಹುದು. ತದ್ರೀತಿಯಲ್ಲಿ ಗಂಡನೊಬ್ಬನು ತನ್ನ ಹೆಂಡತಿಯೊಂದಿಗೆ ಮಾತಾಡುವಾಗ ತೀರ ಬಿರುಸಾದ ನುಡಿಗಳನ್ನು ಬಳಸಿದಲ್ಲಿ ಅವಳಿಗೆ ನೋವಾಗಬಹುದು. ಇದು ಅವರ ಸಂಬಂಧದಲ್ಲಿ ಶಾಶ್ವತ ಒಡಕನ್ನು ಉಂಟುಮಾಡಬಹುದು.”—1 ಪೇತ್ರ 3:7 ಓದಿ.

16. ಪತ್ನಿಯು ತನ್ನ ಕುಟುಂಬವನ್ನು ಹೇಗೆ ಕಟ್ಟಿಕೊಳ್ಳಸಾಧ್ಯವಿದೆ?

16 ಪುರುಷರು ಸಹ ಇನ್ನೊಬ್ಬರ ಮಾತುಗಳಿಂದ ಪ್ರೋತ್ಸಾಹಿಸಲ್ಪಡಬಲ್ಲರು ಇಲ್ಲವೆ ನಿರುತ್ತೇಜಿಸಲ್ಪಡಬಲ್ಲರು. ಅವರ ಪತ್ನಿಯಂದಿರ ಮಾತುಗಳಿಂದ ಸಹ. ಗಂಡನ ಭರವಸೆಗೆ ಪಾತ್ರಳಾಗುವ “ವಿವೇಕಿನಿಯಾದ ಹೆಂಡತಿಯು” ಅವನ ಭಾವನೆಗಳನ್ನು ಪರಿಗಣಿಸುತ್ತಾಳೆ. ಅವಳ ಭಾವನೆಗಳನ್ನು ಅವನು ಹೇಗೆ ಪರಿಗಣಿಸಬೇಕೆಂದು ಆಕೆ ಬಯಸುತ್ತಾಳೋ ಹಾಗೆಯೇ. (ಜ್ಞಾನೋ. 19:14; 31:11) ನಿಶ್ಚಯವಾಗಿಯೂ ಪತ್ನಿಯೊಬ್ಬಳು ತನ್ನ ಕುಟುಂಬದ ಮೇಲೆ ಒಳ್ಳೇದಕ್ಕಾಗಿ ಇಲ್ಲವೆ ಕೆಟ್ಟದ್ದಕ್ಕಾಗಿ ಬಹಳವಾಗಿ ಪ್ರಭಾವಬೀರಬಲ್ಲಳು. “ಜ್ಞಾನವಂತೆಯು ತನ್ನ ಮನೆಯನ್ನು ಕಟ್ಟಿಕೊಳ್ಳುವಳು; ಜ್ಞಾನಹೀನಳು ಅದನ್ನು ಸ್ವಂತ ಕೈಯಿಂದ ಮುರಿದುಬಿಡುವಳು” ಎನ್ನುತ್ತದೆ ಬೈಬಲ್‌.—ಜ್ಞಾನೋ. 14:1.

17. (ಎ) ಎಳೆಯರು ತಮ್ಮ ಹೆತ್ತವರನ್ನು ಹೇಗೆ ಮಾತಾಡಿಸಬೇಕು? (ಬಿ) ದೊಡ್ಡವರು ಎಳೆಯರನ್ನು ಹೇಗೆ ಮಾತಾಡಿಸಬೇಕು, ಮತ್ತು ಏಕೆ?

17 ಅಂತೆಯೇ ಹೆತ್ತವರು ಮತ್ತು ಮಕ್ಕಳು ಒಬ್ಬರೊಂದಿಗೊಬ್ಬರು ಸೌಜನ್ಯದಿಂದ ಮಾತಾಡಬೇಕು. (ಮತ್ತಾ. 15:4) ಎಳೆಯರೊಂದಿಗೆ ವಿಚಾರಪರತೆಯಿಂದ ಮಾತಾಡುವ ಮೂಲಕ ಅವರನ್ನು ‘ಕೆಣಕುತ್ತಾ ಇರದಂತೆ’ ಅಥವಾ ‘ಕಿರಿಕಿರಿ ಮಾಡುತ್ತಾ’ ಇರದಂತೆ ನಮಗೆ ಸಹಾಯವಾಗುವುದು. (ಕೊಲೊ. 3:21; ಎಫೆ. 6:4) ಮಕ್ಕಳನ್ನು ಶಿಸ್ತುಗೊಳಿಸಬೇಕಾದರೂ ಕೂಡ ಹೆತ್ತವರು ಮತ್ತು ಹಿರಿಯರು ಅವರೊಂದಿಗೆ ಗೌರವಪೂರ್ವಕವಾಗಿ ಮಾತಾಡಬೇಕು. ಈ ರೀತಿಯಲ್ಲಿ ಯುವಕರಿಗೆ ತಮ್ಮ ಮಾರ್ಗಕ್ರಮವನ್ನು ತಿದ್ದಿಕೊಳ್ಳಲು ಮತ್ತು ದೇವರೊಂದಿಗಿನ ಸಂಬಂಧವನ್ನು ಉಳಿಸಲು ದೊಡ್ಡವರು ಸುಲಭವನ್ನಾಗಿ ಮಾಡುತ್ತಾರೆ. ಅವರನ್ನು ತಿದ್ದಸಾಧ್ಯವೇ ಇಲ್ಲ ಎಂದು ಕೈಬಿಟ್ಟು ಸೋಲನ್ನು ಒಪ್ಪಿಕೊಂಡಿದ್ದೇವೆ ಎಂದನಿಸುವಂತೆ ಮಾಡುವುದಕ್ಕಿಂತ ಇದೆಷ್ಟೋ ಉತ್ತಮ. ಇಲ್ಲವಾದರೆ ಅವರೂ ಸ್ವತಃ ಸೋಲನ್ನಪ್ಪಿ ಬಿಟ್ಟುಕೊಟ್ಟಾರು. ಯುವ ಜನರು ತಮಗೆ ದೊರೆತ ಎಲ್ಲ ಸಲಹೆಯನ್ನು ನೆನಪಿಡಲಿಕ್ಕಿಲ್ಲ ನಿಜ. ಆದರೂ ಇತರರು ತಮ್ಮೊಂದಿಗೆ ಹೇಗೆ ಮಾತಾಡಿದರೆಂಬುದನ್ನು ಅವರು ನೆನಪಿಡುವರು ಖಂಡಿತ.

ಸುವಿಚಾರಗಳನ್ನು ಹೃತ್ಪೂರ್ವಕವಾಗಿ ಮಾತಾಡುವುದು

18. ನೋವುಭರಿತ ವಿಚಾರ ಮತ್ತು ಭಾವನೆಗಳನ್ನು ನಮ್ಮ ಹೃದಯದಿಂದ ಹೇಗೆ ತೆಗೆದುಹಾಕಬಲ್ಲೆವು?

18 ಕೋಪವನ್ನು ಶಾಂತಭಾವದಿಂದ ನಿರ್ವಹಿಸುವುದೆಂದರೆ ಹೊರಗೆ ಶಾಂತ ಮುಖಮುದ್ರೆಯನ್ನು ಬರೇ ಹಾಕಿಕೊಳ್ಳುವುದಲ್ಲ. ನಮ್ಮ ಗುರಿಯು ಬಲವಾದ ಭಾವೋದ್ರೇಕವನ್ನು ಕೇವಲ ಅದುಮಿಹಿಡಿಯುವುದಕ್ಕಿಂತ ಹೆಚ್ಚಿನದ್ದಾಗಿರಬೇಕು. ಒಳಗೆ ಕೋಪದಿಂದ ಕುದಿಯುತ್ತಿರುವಾಗ ಹೊರಗೆ ಶಾಂತಪ್ರವೃತ್ತಿಯನ್ನು ತೋರಿಸಲು ಪ್ರಯತ್ನಿಸುವುದು ನಮ್ಮ ಮೇಲೆ ಒತ್ತಡ ಹಾಕುತ್ತದೆ. ಅದು ಒಂದು ಕಾರಿನ ಬ್ರೇಕ್‌ ಮತ್ತು ಆ್ಯಕ್ಸೆಲರೇಟರನ್ನು ಏಕಕಾಲದಲ್ಲಿ ಒತ್ತಿದರೆ ಹೇಗೋ ಹಾಗಿರುವುದು. ಅದು ಕಾರನ್ನು ಅತಿಹೆಚ್ಚಿನ ಒತ್ತಡಕ್ಕೆ ಗುರಿಪಡಿಸಿ ಹಾಳುಗೆಡವಬಲ್ಲದು. ಆದ್ದರಿಂದ ಕೋಪವನ್ನು ಮನಸ್ಸಿನೊಳಗೆ ಅಡಗಿಸಿಟ್ಟುಕೊಳ್ಳಬೇಡಿ ಹಾಗೂ ನಂತರ ಅದು ಸ್ಫೋಟಗೊಂಡು ಸಿಡಿಯುವಂತೆ ಮಾಡಬೇಡಿ. ನೋವುಭರಿತ ಭಾವನೆಗಳನ್ನು ನಿಮ್ಮ ಹೃದಯದಿಂದ ತೆಗೆದುಹಾಕುವಂತೆ ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸಿರಿ. ಯೆಹೋವನ ಆತ್ಮವು ನಿಮ್ಮ ಹೃದಮನಗಳನ್ನು ಆತನ ಚಿತ್ತಕ್ಕೆ ಹೊಂದಿಕೆಯಲ್ಲಿ ರೂಪಿಸುವಂತೆ ಬಿಟ್ಟುಕೊಡಿರಿ.—ರೋಮನ್ನರಿಗೆ 12:2; ಎಫೆಸ 4:23, 24 ಓದಿ.

19. ಕೋಪೋದ್ರೇಕದ ಎದುರಾಟಗಳನ್ನು ವರ್ಜಿಸಲು ಯಾವ ಹೆಜ್ಜೆಗಳು ನಮಗೆ ನೆರವಾಗಬಲ್ಲವು?

19 ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿಡಲು ವ್ಯಾವಹಾರಿಕ ಹೆಜ್ಜೆಗಳನ್ನು ತೆಗೆದುಕೊಳ್ಳಿರಿ. ನೀವೊಂದು ಭಾವೋದ್ವೇಗದ ಸನ್ನಿವೇಶದಲ್ಲಿದ್ದೀರಿ ಹಾಗೂ ನಿಮ್ಮ ಕೋಪವು ಒಳಗಿಂದೊಳಗೆ ಕುದಿಯುತ್ತಾ ಬರುತ್ತಿದೆ ಎಂದು ನೆನಸಿ. ಆಗೇನು ಮಾಡುವಿರಿ? ಕೂಡಲೇ ಆ ಸ್ಥಳದಿಂದ ಹೊರಟುಹೋಗಿ. ಹೀಗೆ ನಿಮ್ಮ ಭಾವೋದ್ವೇಗಗಳು ಕಡಿಮೆಯಾಗುವಂತೆ ಸಮಯಕೊಡಿ. (ಜ್ಞಾನೋ. 17:14) ನೀವು ಮಾತಾಡುತ್ತಿರುವ ವ್ಯಕ್ತಿಯ ಕೋಪವು ಏರುತ್ತಾ ಬಂದಲ್ಲಿ ಅವನೊಂದಿಗೆ ಸೌಜನ್ಯದಿಂದ ಮಾತಾಡಲು ಹೆಚ್ಚಿನ ಪ್ರಯತ್ನಮಾಡಿರಿ. ನೆನಪಿಡಿ: “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು; ಬಿರುನುಡಿಯು ಸಿಟ್ಟನ್ನೇರಿಸುವದು.” (ಜ್ಞಾನೋ. 15:1) ಮನನೋಯಿಸುವ ಬಿರುನುಡಿಯು ಉರಿಯುವ ಬೆಂಕಿಗೆ ಎಣ್ಣೆ ಸುರಿದಂತೆ! ಅದನ್ನು ಎಷ್ಟೇ ಮೆತ್ತಗಾಗಿ ನುಡಿದರೂ ಕೂಡ. (ಜ್ಞಾನೋ. 26:21) ಹೀಗೆ ಒಂದು ಸನ್ನಿವೇಶವು ನಿಮ್ಮ ಸಂಯಮವನ್ನು ಪರೀಕ್ಷೆಗೆ ಒಳಪಡಿಸುವಲ್ಲಿ “ಮಾತಾಡುವುದರಲ್ಲಿ ದುಡುಕದವನೂ ಕೋಪಿಸುವುದರಲ್ಲಿ ನಿಧಾನಿಯೂ” ಆಗಿರಿ. ಕೆಟ್ಟ ವಿಷಯಗಳನ್ನಲ್ಲ, ಒಳ್ಳೇ ವಿಷಯಗಳನ್ನೇ ನುಡಿಯುವಂತೆ ನೆರವಾಗಲು ಯೆಹೋವನ ಆತ್ಮಕ್ಕಾಗಿ ಪ್ರಾರ್ಥಿಸಿರಿ.—ಯಾಕೋ. 1:19.

ಹೃತ್ಪೂರ್ವಕವಾಗಿ ಕ್ಷಮಿಸಿರಿ

20, 21. ಇತರರನ್ನು ಕ್ಷಮಿಸಲು ನಮಗೆ ಯಾವುದು ಸಹಾಯಮಾಡಬಲ್ಲದು, ಮತ್ತು ನಾವು ಹಾಗೆ ಮಾಡಬೇಕು ಏಕೆ?

20 ನಮ್ಮಲ್ಲಿ ಯಾರಿಗೂ ನಾಲಗೆಗೆ ಪೂರ್ಣವಾಗಿ ಕಡಿವಾಣ ಹಾಕಲು ಸಾಧ್ಯವಾಗದಿರುವುದು ವಿಷಾದನೀಯ. (ಯಾಕೋ. 3:2) ಎಷ್ಟೇ ಪ್ರಯತ್ನಿಸಿದರೂ ಕುಟುಂಬದ ಸದಸ್ಯರು ಹಾಗೂ ನಮ್ಮ ಪ್ರಿಯ ಆಧ್ಯಾತ್ಮಿಕ ಸಹೋದರ ಸಹೋದರಿಯರು ಸಹ ಕೆಲವೊಮ್ಮೆ ತಟ್ಟನೆ ನಮ್ಮ ಮನನೋಯುವ ಮಾತುಗಳನ್ನಾಡಿಬಿಡಬಹುದು. ಕೂಡಲೇ ಕೋಪಕ್ಕೆ ಆತುರಪಡುವ ಬದಲಾಗಿ ಅವರು ಹಾಗೆ ಏಕೆ ಹೇಳಿದ್ದಿರಬಹುದು ಎಂಬುದನ್ನು ತಾಳ್ಮೆಯಿಂದ ಪರಿಶೀಲಿಸಿ ನೋಡಿ. (ಪ್ರಸಂಗಿ 7:8, 9 ಓದಿ.) ಅವರು ಹಾಗೆ ಹೇಳಿದ ಸಮಯದಲ್ಲಿ ಒತ್ತಡ, ಭಯ, ಅನಾರೋಗ್ಯದಿಂದ ಬಾಧಿಸಲ್ಪಟ್ಟಿದ್ದರೊ ಇಲ್ಲವೆ ಯಾವುದೇ ಬಾಹ್ಯ ಅಥವಾ ಆಂತರಿಕ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದರೊ?

21 ಅಂಥ ಕಾರಣಗಳು ಕೋಪದಿಂದ ಕಿರಿಚಾಡುವುದನ್ನು ಮನ್ನಿಸುವುದಿಲ್ಲ ನಿಜ. ಆದರೂ ಆ ಕಾರಣಗಳನ್ನು ಮನಸ್ಸಿಗೆ ತರುವ ಮೂಲಕ ಜನರು ಕೆಲವೊಮ್ಮೆ ಹೇಳಬಾರದ ಮತ್ತು ಮಾಡಬಾರದ ವಿಷಯಗಳನ್ನು ಹೇಳುವುದೂ ಮಾಡುವುದೂ ಏಕೆ ಎಂಬುದನ್ನು ತಿಳಿದುಕೊಳ್ಳಲು ನಮಗೆ ಸಹಾಯವಾದೀತು. ಮಾತ್ರವಲ್ಲ ನಾವು ಕ್ಷಮಿಸುವವರಾಗುವಂತೆಯೂ ಪ್ರೇರೇಪಿಸೀತು. ಇತರರನ್ನು ನೋಯಿಸುವ ವಿಷಯಗಳನ್ನು ನಾವೆಲ್ಲರೂ ಹೇಳಿದ್ದೇವೆ ಮತ್ತು ಮಾಡಿದ್ದೇವೆ. ಅವರು ನಮ್ಮನ್ನು ಸೌಜನ್ಯದಿಂದ ಕ್ಷಮಿಸುವಂತೆ ನಾವು ನಿರೀಕ್ಷಿಸುತ್ತೇವೆ. (ಪ್ರಸಂ. 7:21, 22) ದೇವರ ಕ್ಷಮಾಪಣೆಯನ್ನು ನಾವು ಪಡೆಯಬೇಕಾದರೆ ನಾವೂ ಇತರರನ್ನು ಕ್ಷಮಿಸಲೇಬೇಕು ಎಂದು ಯೇಸು ಹೇಳಿದನಲ್ಲಾ. (ಮತ್ತಾ. 6:14, 15; 18:21, 22, 35) ಆದುದರಿಂದ ನಾವು ತ್ವರೆಯಾಗಿ ತಪ್ಪೊಪ್ಪಿಕೊಂಡು ತ್ವರೆಯಾಗಿ ಕ್ಷಮಿಸಲು ಸಿದ್ಧರಿರಬೇಕು. ಹೀಗೆ ನಮ್ಮ ಕುಟುಂಬವೃತ್ತದೊಳಗೆ ಹಾಗೂ ಸಭೆಯೊಳಗೆ ‘ಪರಿಪೂರ್ಣ ಬಂಧವಾದ’ ಪ್ರೀತಿಯನ್ನು ಉಳಿಸಿಕೊಳ್ಳುತ್ತೇವೆ.—ಕೊಲೊ. 3:14.

22. ಸೌಜನ್ಯಭರಿತ ಮಾತುಗಳನ್ನು ಉಪಯೋಗಿಸಲು ನಾವು ಮಾಡುವ ಪ್ರಯತ್ನವು ಏಕೆ ಸಾರ್ಥಕ?

22 ಇಂದಿನ ಕೋಪಿಷ್ಠ ವಿಷಯಗಳ ವ್ಯವಸ್ಥೆಯು ತನ್ನ ಅಂತ್ಯವನ್ನು ಸಮೀಪಿಸುತ್ತಾ ಇರುವಾಗ ನಮ್ಮ ಆನಂದ ಮತ್ತು ಐಕ್ಯತೆಯನ್ನು ಎದುರಿಸುವ ಸವಾಲುಗಳು ಹೆಚ್ಚಾಗುತ್ತಾ ಬರುವುದು ಸಂಭಾವ್ಯ. ನಮ್ಮ ನಾಲಗೆಯನ್ನು ಕೆಟ್ಟದಕ್ಕಲ್ಲ, ಒಳ್ಳೇದಕ್ಕಾಗಿ ಉಪಯೋಗಿಸಲು ದೇವರ ವಾಕ್ಯದ ವ್ಯಾವಹಾರಿಕ ಮೂಲತತ್ತ್ವಗಳನ್ನು ಅನ್ವಯಿಸುವುದು ನಮಗೆ ಸಹಾಯಕಾರಿ. ಆಗ ನಾವು ಸಭೆಯೊಳಗೆ ಮತ್ತು ಕುಟುಂಬದೊಳಗೆ ಹೆಚ್ಚು ಶಾಂತಿಭರಿತ ಸಂಬಂಧಗಳಲ್ಲಿ ಆನಂದಿಸುವೆವು. ಅಲ್ಲದೆ ನಮ್ಮ ಮಾದರಿಯು ನಮ್ಮ ‘ಸಂತೋಷದ ದೇವರಾದ’ ಯೆಹೋವನ ಕುರಿತು ಇತರರಿಗೆ ಅತ್ಯುತ್ತಮ ಸಾಕ್ಷಿಯನ್ನು ಕೊಡಶಕ್ತವಾಗುವುದು.—1 ತಿಮೊ. 1:11.

ನೀವು ವಿವರಿಸಬಲ್ಲಿರೊ?

• ಸಮಸ್ಯೆಗಳನ್ನು ಚರ್ಚಿಸಲು ಸೂಕ್ತ ಸಮಯವನ್ನು ಆಯ್ಕೆಮಾಡುವುದು ಏಕೆ ಪ್ರಾಮುಖ್ಯ?

• ಕುಟುಂಬ ಸದಸ್ಯರು ಯಾವಾಗಲೂ ಒಬ್ಬರೊಂದಿಗೊಬ್ಬರು “ಸೌಜನ್ಯವುಳ್ಳ” ಮಾತನ್ನಾಡಬೇಕು ಏಕೆ?

• ಮನನೋಯಿಸುವ ಮಾತುಗಳನ್ನಾಡುವುದನ್ನು ನಾವು ಹೇಗೆ ವರ್ಜಿಸಬಲ್ಲೆವು?

• ಕ್ಷಮಿಸುವವರಾಗಿರುವಂತೆ ನಮಗೆ ಯಾವುದು ಸಹಾಯಕಾರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 21ರಲ್ಲಿರುವ ಚಿತ್ರಗಳು]

ನಿಮ್ಮ ಸ್ವಂತ ಭಾವೋದ್ವೇಗಗಳು ಕಡಿಮೆಯಾಗಲಿ, ಅನಂತರ ಸೂಕ್ತ ಸಮಯದಲ್ಲಿ ಮಾತಾಡಿರಿ

[ಪುಟ 23ರಲ್ಲಿರುವ ಚಿತ್ರ]

ಗಂಡನು ಯಾವಾಗಲೂ ತನ್ನ ಹೆಂಡತಿಯೊಂದಿಗೆ ಕೋಮಲವಾಗಿ ಮಾತಾಡಬೇಕು