ಎಚ್ಚರದಿಂದಿರುವುದರ ಸುಫಲಗಳು
ಎಚ್ಚರದಿಂದಿರುವುದರ ಸುಫಲಗಳು
ನಿಮ್ಮ ಸಭೆಯ ಟೆರಿಟೊರಿಯಲ್ಲಿ ಸಾರುವ ಅನಿರೀಕ್ಷಿತ ಅವಕಾಶಗಳಿಗೆ ನೀವು ಎಚ್ಚರದಿಂದಿದ್ದೀರೊ? ಫಿನ್ಲೆಂಡಿನ ಟುರ್ಕು ಎಂಬ ಐತಿಹಾಸಿಕ ರೇವುಪಟ್ಟಣದ ನಮ್ಮ ಕ್ರೈಸ್ತ ಸಹೋದರರು ಎಚ್ಚರವಿದ್ದರು. ಇದು ಸುಫಲಗಳನ್ನು ತಂದಿತು.
ಸ್ವಲ್ಪ ಸಮಯದ ಹಿಂದೆ ಏಷ್ಯಾದ ಕಾರ್ಮಿಕ ಗುಂಪೊಂದು ತಮ್ಮ ಪಟ್ಟಣಕ್ಕೆ ಬಂದದ್ದು ಟುರ್ಕುವಿನ ಸಹೋದರರಿಗೆ ತಿಳಿದುಬಂತು. ಆ ಕಾರ್ಮಿಕರು ಸ್ಥಳಿಕ ನೌಕಾಂಗಣದಲ್ಲಿ ನಿರ್ಮಿಸಲಾಗುತ್ತಿದ್ದ ದೊಡ್ಡ ವಿಹಾರನೌಕೆಯೊಂದರ ಕೆಲಸವನ್ನು ಮಾಡಿಮುಗಿಸಲು ಬಂದಿದ್ದರು. ಈ ವಿದೇಶಿ ಕಾರ್ಮಿಕರು ಯಾವ ಹೋಟೆಲಿನಲ್ಲಿ ತಂಗಿದ್ದಾರೆಂಬುದನ್ನು ಸಹೋದರನೊಬ್ಬನು ಗೊತ್ತುಮಾಡಿದನು. ಅಲ್ಲದೆ ಈ ಕಾರ್ಮಿಕರನ್ನು ಮುಂಜಾನೆ ಆ ನಗರಮಧ್ಯದ ಹೋಟೇಲಿನಿಂದ ಬಸ್ಸುಗಳ ಮೂಲಕ ಬಂದರಿಗೆ ಒಯ್ಯಲಾಗುತ್ತಿತ್ತು ಎಂಬುದನ್ನೂ ಅವನು ತಿಳುಕೊಂಡನು. ಸಹೋದರನು ಆ ಕೂಡಲೇ ಟರ್ಕುವಿನ ಇಂಗ್ಲಿಷ್ ಭಾಷೆಯ ಸಭೆಗೆ ಈ ಸುದ್ದಿ ಮುಟ್ಟಿಸಿದನು.
ಅಷ್ಟೊಂದು ವಿದೇಶಿಯರು ಬಂದಿರುವುದು ರಾಜ್ಯದ ಸಂದೇಶವನ್ನು ಸಾರಲು ತಮಗೊಂದು ಅನಿರೀಕ್ಷಿತ ಅವಕಾಶವನ್ನು ಮಾಡಿಕೊಟ್ಟಿದೆ ಎಂಬುದನ್ನು ಆ ಸಭೆಯ ಹಿರಿಯರು ಅರಿತುಕೊಂಡರು. ಆದುದರಿಂದ ಕೂಡಲೆ ಅವರು ಒಂದು ವಿಶೇಷ ಕಾರ್ಯಾಚರಣೆಯನ್ನು ಯೋಜಿಸಿದರು. ಆ ವಾರದ ಭಾನುವಾರ ಬೆಳಗ್ಗೆ 7 ಗಂಟೆಗೆ ಕಾರ್ಮಿಕರು ಬರುವ ಆ ಬಸ್ ನಿಲ್ದಾಣದ ಸಮೀಪ 10 ಮಂದಿ ಪ್ರಚಾರಕರು ಕೂಡಿಬಂದರು. ಆದರೆ ಅಲ್ಲಿ ಒಬ್ಬ ಕಾರ್ಮಿಕನೂ ಇರಲಿಲ್ಲ. ‘ನಾವು ತಡವಾಗಿ ಬಂದೆವೋ ಏನೋ?’ ಅಥವಾ ‘ಅವರು ತಮ್ಮ ದೇಶಕ್ಕೆ ವಾಪಸ್ಸು ಹೋದರೊ?’ ಎಂದು ಸಹೋದರರು ಯೋಚಿಸತೊಡಗಿದರು. ಆದರೆ ಅಷ್ಟರಲ್ಲೇ ಕೆಲಸದ ಬಟ್ಟೆ ಧರಿಸಿದ ಒಬ್ಬ ಕಾರ್ಮಿಕನು ಬರತೊಡಗಿದನು. ಅವನ ಹಿಂದೆ ಇನ್ನೊಬ್ಬನು ಬಂದನು. ನಂತರ ಅನೇಕ ಮಂದಿ ಬಂದುಬಿಟ್ಟರು. ಸ್ವಲ್ಪದರೊಳಗೆ ಕಾರ್ಮಿಕರ ಒಂದು ಗುಂಪೇ ಆ ಬಸ್ ನಿಲ್ದಾಣದ ಹತ್ತಿರ ಬಂತು. ಈಗ ಪ್ರಚಾರಕರು ಚುರುಕಾದರು. ಇಂಗ್ಲಿಷ್ ಭಾಷೆಯ ಪ್ರಕಾಶನಗಳೊಂದಿಗೆ ಕಾರ್ಮಿಕರನ್ನು ಸಮೀಪಿಸಿದರು. ಎಲ್ಲ ಕಾರ್ಮಿಕರು ಬಸ್ಸಿನಲ್ಲಿ ಕುಳಿತುಕೊಳ್ಳುವಷ್ಟಕ್ಕೆ ಒಂದು ತಾಸೇ ದಾಟಿದ್ದು ಒಳ್ಳೇದಾಯಿತು. ಇದರಿಂದಾಗಿ ಹೆಚ್ಚಿನವರೊಂದಿಗೆ ಮಾತನಾಡಲು ಸಹೋದರರಿಗೆ ಸಾಕಷ್ಟು ಸಮಯ ಸಿಕ್ಕಿತು. ಕೊನೆಗೆ ಬಸ್ ಅಲ್ಲಿಂದ ಹೊರಡುವಾಗ ಕಾರ್ಮಿಕರು ಒಟ್ಟು 126 ಪುಸ್ತಿಕೆಗಳು ಹಾಗೂ 329 ಪತ್ರಿಕೆಗಳನ್ನು ಸ್ವೀಕರಿಸಿದ್ದರು!
ಒಳ್ಳೇ ಫಲಿತಾಂಶವು ಸಹೋದರರ ಉತ್ಸಾಹವನ್ನು ಇನ್ನೂ ಹೆಚ್ಚಿಸಿತು. ಆದುದರಿಂದ ಅವರು ಮುಂದಿನ ವಾರ ಸರ್ಕಿಟ್ ಮೇಲ್ವಿಚಾರಕರ ಭೇಟಿಯ ಸಮಯದಲ್ಲಿ ಆ ಕಾರ್ಯಾಚರಣೆಯನ್ನು ಇನ್ನೊಮ್ಮೆ ಮಾಡಿದರು. ಬೆಳಗ್ಗೆ 6:30ಕ್ಕೆ ಹೊರಗೆ ಮಳೆ ಸುರಿಯುತ್ತಿದ್ದರೂ ಸರ್ಕಿಟ್ ಮೇಲ್ವಿಚಾರಕರು ಕ್ಷೇತ್ರ ಸೇವಾ ಕೂಟವನ್ನು ನಿರ್ವಹಿಸಿದರು. ತದನಂತರ 24 ಮಂದಿ ಪ್ರಚಾರಕರು ಬಸ್ ತಂಗುದಾಣದ ಕಡೆಗೆ ನಡೆದರು. ಈ ಬಾರಿ ಅವರು ಟಗಾಲಗ್ ಭಾಷೆಯ ಸಾಹಿತ್ಯವನ್ನೂ ತಮ್ಮೊಂದಿಗೆ ಒಯ್ದರು. ಏಕೆಂದರೆ ಆ ಕಾರ್ಮಿಕರಲ್ಲಿ ಅನೇಕರು ಫಿಲಿಪ್ಪೀನ್ಸ್ ದೇಶದವರೆಂದು ಕಂಡುಬಂತು. ಆ ದಿನ ಬೆಳಗ್ಗೆ ಬಂದರಿಗೆ ಹೋಗಲು ಬಸ್ಸುಗಳು ಹೊರಟಾಗ ಕಾರ್ಮಿಕರು 7 ಪುಸ್ತಕಗಳು, 69 ಪುಸ್ತಿಕೆಗಳು ಹಾಗೂ 479 ಪತ್ರಿಕೆಗಳನ್ನು ಸ್ವೀಕರಿಸಿದ್ದರು. ಆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಹೋದರ ಸಹೋದರಿಯರ ಆನಂದ ಮತ್ತು ರೋಮಾಂಚನವನ್ನು ಊಹಿಸಿಕೊಳ್ಳಿರಿ!
ಕಾರ್ಮಿಕರು ತಮ್ಮ ತಮ್ಮ ದೇಶಗಳಿಗೆ ಹಿಂತೆರಳುವ ಮೊದಲು ಸಹೋದರರು ಅನೇಕರನ್ನು ಅವರು ತಂಗಿದ್ದ ಹೋಟೆಲುಗಳಲ್ಲಿ ಪುನಃ ಭೇಟಿಯಾಗಿ ರಾಜ್ಯ ಸಂದೇಶವನ್ನು ಹೆಚ್ಚು ವಿವರಿಸಿದರು. ಯೆಹೋವನ ಸಾಕ್ಷಿಗಳು ತಮ್ಮನ್ನು ಈ ಮೊದಲೇ ಬೇರೆ ದೇಶಗಳಲ್ಲಿ ಸಂಪರ್ಕಿಸಿದ್ದರೆಂದು ಕೆಲವು ಕಾರ್ಮಿಕರು ತಿಳಿಸಿದರು. ತಾವು ಈ ದೇಶದಲ್ಲಿದ್ದಾಗ ತಮ್ಮನ್ನು ಮಾತನಾಡಿಸಲು ಮೊದಲ ಹೆಜ್ಜೆ ತೆಗೆದುಕೊಂಡದ್ದಕ್ಕಾಗಿ ಕಾರ್ಮಿಕರು ಗಣ್ಯತೆ ಸೂಚಿಸಿದರು.
ನಿಮ್ಮ ಸಭೆಯ ಟೆರಿಟೊರಿಯಲ್ಲಿ ಇಂಥ ಅನಿರೀಕ್ಷಿತ ಸಂದರ್ಭಗಳಿಗಾಗಿ ನೀವು ಎಚ್ಚರದಿಂದಿದ್ದೀರೊ? ಭಿನ್ನ ಭಿನ್ನ ಹಿನ್ನೆಲೆಗಳ ಜನರನ್ನು ಮಾತನಾಡಿಸಲು ನೀವು ಮೊದಲ ಹೆಜ್ಜೆ ತೆಗೆದುಕೊಳ್ಳುತ್ತೀರೋ? ಹಾಗೆ ನೀವು ಮಾಡುತ್ತಿರುವಲ್ಲಿ ಟುರ್ಕುವಿನ ಸಹೋದರಿಗಾದ ಅನುಭವ ನಿಮ್ಮ ವಿಷಯದಲ್ಲೂ ಸತ್ಯವಾಗಿರಬಹುದು.
[ಪುಟ 32ರಲ್ಲಿರುವ ಭೂಪಟ/ಚಿತ್ರ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಫಿನ್ಲೆಂಡ್
ಹೆಲ್ಸಿಂಕಿ
ಟುರ್ಕು